Monday, February 25, 2008

ಬಾಗಿಲು ಮತ್ತು ಕಿಡಕಿ

ನನಗೆ ಮೊದಲಿನಿಂದಲೂ ಬಾಗಿಲು ಮತ್ತು ಕಿಡಕಿ ಎಂದರೆ ತುಂಬಾ ಇಷ್ಟ। ನನ್ನೂರಿನ ಮನೆಯಲ್ಲಿ ಇದ್ದ ಪ್ರಧಾನ ಬಾಗಿಲು ನನಗಿನ್ನೂ ನೆನಪಿದೆ। ಅದು ಯಾವ ಕಾಲದ್ದು ಎಂಬುದು, ನನ್ನ ಅಪ್ಪ ಅಜ್ಜ ಯಾರಿಗೂ ನೆನಪಿರಲಿಲ್ಲ। ಯಾವಾಗಲೂ ತೆರೆದುಕೊಂದು ಇರುತ್ತಿದ್ದ ಈ ಪ್ರಧಾನ ಬಾಗಿಲನ್ನು ಹಾಕುತ್ತಿದ್ದುದು ರಾತ್ರಿ ಎಲ್ಲರೂ ಮಲಗಿದ ಮೇಲೆ। ಈ ಬಾಗಿಲು ಯಾವುದೋ ಪುರಾತನ ಕೋಟೆಯ ಬಾಗಿಲನನ್ನು ನೆನಪಿಸಿವಂತೆ ಇತ್ತು। ಅದನ್ನು ತೆಗೆದಾಗ ಅದು ಕಿರ್ ಎಂದು ಶಬ್ದ ಮಾಡುತ್ತಿತ್ತು। ಹಾಗೆ ಹಾಕುವಾಗಲೂ ಅದೇ ಶಬ್ದ। ಈ ಬಾಗಿಲಿನ ತಿರುಗುಣಿಗೆ ಎಣ್ಣೆ ಹಾಕಬೇಕು ಎಂದು ನನ್ನ ಅಮ್ಮ ಆವಾಗಾವಾಗ ಹೇಳ್ತಾ ಇದ್ದಳು। ಆದರೆ ಅಮ್ಮ ಎಣ್ಣೆ ಹಚ್ಚಿದಳೋ ಬಿಟ್ಟಳೋ ಆ ಬಾಗಿಲು ಮಾತ್ರ ಶಬ್ದ ಮಾಡುವುದನ್ನು ನಿಲ್ಲಿಸಲಿಲ್ಲ। ರಾತ್ರಿ ೧೦ ಗಂಟೆ ಆಯಿತು ಎಂಬುದನ್ನು ನಾವು ತಿಳಿಯುತ್ತಿದ್ದುದು, ಭಾಗಿಲು ಕಿರಕ್ ಎಂದಾಗ। ಹಾಗೆ ಬೆಳಿಗ್ಗೆ ಐದು ಗಂಟೆ ಆಯಿತು ಎಂಬುದು ಕೂಡ ಬಾಗಿಲ ಕಿರಕ್ ಶಬ್ದದಿಂದಲೇ ನಾವು ತಿಳಿದುಕೊಳ್ಳುತ್ತಿದ್ದೆವು।

ಈ ಬಾಗಿಲ ಪಕ್ಕದಲ್ಲಿ ಸಣ್ಣ ಕಿಡಕಿಯೊಂದಿತ್ತು। ಆ ಕಿಡಕಿಯ ಮೂಲಕ ನೋಡಿದರೆ, ಮನೆಯ ಎದುರಿನ ಅಂಗಳ, ಅಡಿಕೆತೋಟ ಕಾಣುತ್ತಿತ್ತು ಈ ಕಿಡಕಿಯ ಪಕ್ಕದಲ್ಲಿ ಮೆತ್ತಿನ ಮೇಲೆ ಹೋಗಲು ಮರದ ಮೆಟ್ಟಿಲುಗಳಿದ್ದವು। ಒಮ್ಮೆ ನಾನು ಮಹಡಿಯಿಂದ ಕೆಳಕ್ಕೆ ಇಳಿಯುವಾಗ ಬಿದ್ದು ಬಿಟ್ಟೆ। ಕಿಡಕಿಯು ಹಣೆಗೆ ಬಡಿದು ಗಾಯವಾಗಿ ರಕ್ತ ಸುರಿಯಿತು। ಆದರೆ, ಕಿಡಕಿಯ ಮೇಲೆ ನನಗೆ ಸಿಟ್ಟು ಬರಲಿಲ್ಲ। ಹೊರಗಿನ ಬೆಳಕನ್ನು ನೋಡುವ ಕಿಡಕಿಯ ಮೇಲಿನ ಮೋಹ ಮರೆಯಾಗಲಿಲ್ಲ। ಅಪ್ಪ ಹೊಡೆದಾಗ, ಅಜ್ಜ ಬೈದಾಗ ನಾನು ಬಂದು ನಿಲ್ತಾ ಇದ್ದುದು ಇದೇ ಕಿಡಕಿಯ ಪಕ್ಕ। ಹಾಗೆ ಈ ಪ್ರಧಾನ ಬಾಗಿಲ ಕಥೆ। ನಮ್ಮ ಮನೆಯ ಈ ಪ್ರಧಾನ ಬಾಗಿಲಿನ ಬಗ್ಗೆ ನನಗೆ ಎಂತಹ ಮೋಹ ಬೆಳೆದಿತ್ತೆಂದರೆ, ಇಂಥಹ ಪ್ರಧಾನ ಬಾಗಿಲು ಬೇರೆ ಯಾರ ಮನೆಯಲ್ಲೂ ಇಲ್ಲ ಎಂದು ನಾನು ಬಹಳ ಕಾಲ ನಂಬಿದ್ದೆ। ಹಾಗೆ ಬೇರೆಯವರ ಮನೆಗಳಿಗೆ ಹೋದಾಗಲೆಲ್ಲ, ಅವರ ಮನೆಯ ಪ್ರಧಾನ ಬಾಗಿಲನ್ನು ನಮ್ಮ ಮನೆಯ ಪ್ರಧಾನ ಬಾಗಿಲ ಜೊತೆ ಹೋಲಿಸಿ ನಮ್ಮ ಮನೆಯ ಪ್ರಧಾನ ಬಾಗಿಲೇ ಅತ್ಯುತ್ತಮ ಎಂದು ಸಂತೋಷ ಪಡುತ್ತಿದ್ದೆ।

ನಮ್ಮ ಮನೆಯ ಪ್ರಧಾನ ಬಾಗಿಲನ್ನು ತೆರೆದಿಟ್ಟರೆ, ಅದು ಮನೆಯ ಹೊರಗಿನ ಜಗತ್ತನ್ನು ತೆರೆದಿಡುತ್ತಿದ್ದುದು ಮಾತ್ರವಲ್ಲ, ಮನೆಯ ಒಳಗಿನ ಗುಟ್ಟುಗಳನ್ನು ಬಟ್ಟಾ ಬಯಲು ಮಾಡುತ್ತಿತ್ತು. ಪ್ರಧಾನ ಬಾಗಿಲ ಪಕ್ಕದಲ್ಲಿ ನಿಂತರೆ, ಹೊರಗಿನ ಅಂಗಳ, ಅಡಿಕೆ ತೋಟ, ರಸ್ತೆ ಕಾಣುತ್ತಿದ್ದಂತೆ, ತಿರುಗಿದರೆ, ಮನೆಯ ಒಳಗೆ ಅಡಿಗೆ ಮನೆಯ ವರೆಗೆ ನೋಡಬಹುದಾಗಿತ್ತು. ಪ್ರಧಾನ ಬಾಗಿಲ ಹತ್ತಿರ ನಿಂತು ಮನೆಯ ಒಳಗೆ ಹೊರಗೆ ನೋಡುವುದೆಂದರೆ ನನಗೆ ಎಲ್ಲಿಲ್ಲದ ಸಂತೋಷ।

ಊರು ಬಿಟ್ಟು ಬೆಂಗಳೂರಿಗೆ ಬಂದ ಮೇಲೆ ನನಗೆ ಕಾಣತೊಡಗಿದ್ದು ಮುಚ್ಚಿದ ಕಿಡಕಿ, ಬಾಗಿಲುಗಳು। ಯಾರ ಮನೆಗೆ ಹೋದರು ಮೊದಲು ಸ್ವಾಗತಿಸುವುದು ಮುಚ್ಚಿದ ಬಾಗಿಲುಗಳೇ। ಕಾಲಿಂಗ್ ಬೆಲ್ ಒತ್ತಿದರೆ ಹಾಗೆ ತೆರೆದುಕೊಂಡು। ಬಂದವರು ಯೋಗ್ಯರು ಅನ್ನಿಸಿದರೆ, ಅವರನ್ನು ಮತ್ತೆ ಒಳಗೆ ಎಳೆದುಕೊಂಡು ಮತ್ತೆ ಹಾಗೆ ಮುಚ್ಚಿಕೊಳ್ಳುವ ಬಾಗಿಲುಗಳು। ಹೀಗೆ ಮುಚ್ಚಿಕೊಂಡ ಬಾಗಿಲುಗಳನ್ನು ನೋಡಿದ ತಕ್ಷಣ ನನಗೆ ಅಸಹನೆ। ಅದು ಇವತ್ತು ಕೂಡ ಹಾಗೆ ಮುಂದಿವರಿದಿದೆ।

ಬಾಗಿಲು ಮತ್ತು ಕಿಡಕಿಗಳೆಂದರೆ ಅವು ಕೇವಲ ಮರದ ವಸ್ತುಗಳಲ್ಲ। ಅವು ನಮ್ಮ ಹೊರ ಮನಸ್ಸು ಮತ್ತು ಒಳ ಮನಸ್ಸನ್ನು ಪ್ರತಿನಿಧಿಸುತ್ತವೆ। ನಮ್ಮ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುತ್ತವೆ। ತೆರೆದ ಬಾಗಿಲು ನಮಗೆ ಹೊರ ಜಗತ್ತು ಕಾಣುವಂತೆ ಮಾಡುತ್ತದೆ। ಹಾಗೆ ನಮ್ಮ ಒಳ ಜಗತ್ತನ್ನು ತೆರೆದಿಡುತ್ತದೆ। ಹೊರಗಿನ ಗಾಳಿ ಮತ್ತು ಬಿಸಿಲು ಒಳಗೆ ಬರುವುದು ಇದೇ ಕಿಡಕಿ ಮತ್ತು ಬಾಗಿಲುಗಳ ಮೂಲಕ। ನಾವು ಮನೆಯ ಒಳಗೆ ನಾಲ್ಕುಗೋಡೆಗಳ ನಡುವೆ ಕಟ್ಟಿಕೊಂಡ ನಮ್ಮ ಪ್ರಪಂಚವನ್ನು ಹೊರಜಗತ್ತಿಗೆ ಪರಿಚಯ ಮಾಡಿಕೊಡುತ್ತವೆ।

ಆದರೆ ಆಧುನಿಕ ಬದುಕು ನಮಗೆ ಕಿಡಕಿ ಮತ್ತು ಬಾಗಿಲುಗಳನ್ನು ಮುಚ್ಚಿಕೊಳ್ಳುವುದನ್ನು ಕಲಿಸಿದೆ। ನಾವು ಬೆಳಗಿನ ಎಳೆ ಬಿಸಲನ್ನು ನೋಡಲಾರೆವು। ನಮ್ಮೊಳಗಿನದನ್ನು ತೆರೆದಿಡಲಾರೆವು। ನಮಗೆ ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದು ಹೆಚ್ಚು ಮುಖ್ಯ। ಯಾಕೆಂದರೆ ನಮಗೆ ನಮ್ಮೊಳಗಿನದನ್ನು ಬಿಚ್ಚಿಡಲು ಭಯ। ಹೊರಗಿನದನ್ನು ನೋಡುವ ಕನಿಷ್ಠ ಆಸಕ್ತಿಯೂ ನಮಗಿಲ್ಲ। ನಾವು ನಮ್ಮ ನಡುವೆ ಗೋಡೆಯನ್ನು ಕಟ್ಟಿಕೊಳ್ಳಲು ಬಯಸುತ್ತೇವೆ। ಹಾಗೆ ಕಿಡಕಿ ಮತ್ತು ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತೇವೆ। ಈಗಲೂ ನನ್ನ ಬೆಂಗಳೂರಿನ ನನ್ನ ಮನೆಯಲ್ಲಿ ಕಿಡಕಿ ಬಾಗಿಲು ಮುಚ್ಚಿದ್ದನ್ನು ನೋಡಿದ ತಕ್ಷಣ ನನಗೆ ಅಸಹನೆ ಪ್ರಾರಂಭವಾಗುತ್ತದೆ। ಅದರೆ ಬೆಂಗಳೂರಿನಂತ ನಗರದಲ್ಲಿ ಮನೆಯ ಬಾಗಿಲನ್ನು ತೆರೆದಿಡುವುದು ಕಷ್ಟ। ಜೊತೆಗೆ ಭಯ। ಇದೇ ನಮ್ಮ ಅಧುನಿಕ ಬದುಕು ಎಂದು ನನಗೆ ಅನ್ನಿಸುತ್ತದೆ। ಇಲ್ಲಿ ನಾವು ಕಿಡಕಿ ಬಾಗಿಲನ್ನು ತೆರೆಯಲಾರೆವು। ಬೆಳಕನ್ನು ನೋಡಲಾರೆವು। ನಾಲ್ಕು ಗೋಡೆಗಳ ನಡುವೆ, ಕುಳಿತುಕೊಳ್ಳುವ ಕರ್ಮ ನಮ್ಮದು.

Friday, February 22, 2008

ಮುಖ, ಕಣ್ಣು ಮತ್ತು ಬುರ್ಖಾ

ನಾನು ಮೂಲಭೂತವಾಗಿ ಮುಜುಗರದ ಮನುಷ್ಯ। ಜನರ ನಡುವೆ ಇರುವುದೆಂದರೆ ನನಗೆ ಸಮಸ್ಯೆಯೇ। ಆದರೆ ಕೆಲವೊಮ್ಮೆ ಅನಿವಾರ್ಯವಾಗಿ ಜನರ ನಡುವೆ ಇರಬೇಕಾಗುತ್ತದೆ। ಮೊನ್ನೆ ಆಗಿದ್ದು ಹಾಗೆ। ಮಂಗಳೂರಿನ ಮುಸ್ಲಿಮ್ ಲೇಖಕರು ಮತ್ತು ಪತ್ರಕರ್ತರ ಸಂಘ ನನ್ನನ್ನು ಅವರ ರಾಜ್ಯ ಮಟ್ಟದ ವಿಚಾರಗೋಷ್ಟಿಗೆ ಅಹ್ವಾನಿಸಿದಾಗ ನಾನು ಮಂಗಳೂರಿಗೆ ಹೊರಟು ನಿಂತೆ। ಈ ತೀರ್ಮಾನಕ್ಕೆ ಬಹುಮುಖ್ಯ ಕಾರಣ ಮುಸ್ಲಿಮ್ ಒಳ ಜಗತ್ತನ್ನು ತಿಳಿದುಕೊಳ್ಳಬೇಕು ಎಂಬ ನನ್ನ ಹಂಬಲ। ಮುಸ್ಲಿಮ್ ಜಗತ್ತನ್ನು ಸಾಹಿತ್ಯದ ಮೂಲಕ ತಿಳಿದುಕೊಂಡಿದ್ದರು ಅದರ ನೇರ ಸಂಪರ್ಕ ಇಲ್ಲದ ನನಗೆ ಅವರನ್ನು ನಾವು ನೆನಪು ಮಾಡಿಕೊಳ್ಳುವುದು ಬುರ್ಖಾದ ಮೂಲಕ। ಬುರ್ಖಾದ ಒಳಗಿನ ಮುಖಗಳು ನಮಗೆ ಕಾಣುವುದಿಲ್ಲ। ನಾವು ಒಳಗಿರುವ ಮುಖ, ಆ ಮುಖದಲ್ಲಿ ಇರುವ ಭಾವ ಎಂತಹದಿರಬಹುದು ? ಅಲ್ಲಿ ದುಃಖ ಇರಬಹುದೆ ? ನೋವು ಇರಬಹುದೆ ? ಅಸಹಾಯಕತೆ ಇರಬಹುದೆ ? ಅಥವಾ ನಮ್ಮಲ್ಲ ಕಲ್ಪನೆಗಳು ಅಲ್ಲಿ ಹುಸಿಯಾಗಿರಬಹುದೆ ? ಈ ಪ್ರಶ್ನೆಗಳು ನನ್ನನ್ನು ಕಾಡಿದರೂ ಇದ್ಯಾವವೂ ನನ್ನ ಕುತೂಹಲವನ್ನು ತಣಿಸುವದಾಗಿರಲಿಲ್ಲ॥

ಈ ಕಾರ್ಯಕ್ರಮದ ಅಹ್ವಾನ ಪತ್ರಿಕೆ ಬಂದಾಗ ನನಗೆ ಎಲ್ಲಿಲ್ಲದ ಮುಜುಗರದ ಭಾವ। ಯಾಕೆಂದರೆ ಅಲ್ಲಿ ಅಹ್ವಾನಿತರಾದ ಇಬ್ಬರು ಮುಸ್ಲೀಮೇತರರು ಎಂದರೆ, ನಾನು ಮತ್ತು ಪತ್ರಕರ್ತ ರವೀಂದ್ರ ರೇಷ್ಮೆ ಮಾತ್ರ। ಮುಸ್ಲಿಮ್ ಜನಾಂಗದ ಸಮಸ್ಯೆ, ಅವರು ಎದುರಿಸುತ್ತಿರುವ ದ್ವಂದ್ವಗಳು, ಮುಸ್ಲಿಮ್ ಪತ್ರಕರ್ತರ ಸವಾಲುಗಳ ಬಗ್ಗೆ ಚರ್ಚೆ ನಡೆಯುವ ಸಮಾವೇಶದಲ್ಲಿ ಹೊರಗಿನವರಾದ ನಮಗೇನು ಕೆಲಸ ? ಸಂಘಟಕರು ನಮಗೆ ಮಾತನಾಡಲು ವಿಷಯವೊಂದನ್ನು ನೀಡಿದ್ದರು। ಅದೆಂದರೆ, ಪ್ರಸಕ್ತ ರಾಜಕೀಯ ಪರಿಸ್ಥಿತಿ ಮತ್ತು ಸಾರ್ವಜನಿಕರ ಜವಾಬ್ದಾರಿ।

ಕಾರ್ಯಕ್ರಮ ನಡೆಯುತ್ತಿದ್ದ ಮಂಗಳೂರಿನ ಪುರಭವನಕ್ಕೆ ಹೋದಾಗ ನನಗೆ ಅಲ್ಲಿ ಕಂಡಿದ್ದು ಕನ್ನಡ ವಾತಾವರಣ। ಆ ಕಾರ್ಯಕ್ರಮ ನಡೆದಿದ್ದು, ಸಂಪೂರ್ಣವಾಗಿ ಕನ್ನಡಲ್ಲಿ। ಭಾಷೆ ಎನ್ನುವುದರ ಬಗ್ಗೆ ಉಗ್ರ ಹೋರಾಟಗಾರರಂತೆ ಅತಿ ಭಾವುಕತೆಯಿಂದ ನೋಡುವ ಅಗತ್ಯ ನನಗಿಲ್ಲ। ಆದರೆ ಭಾಷೆ, ನಮ್ಮನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತದೆ, ಅದೇ ಸಮಯದಲ್ಲಿ ಬೇರ್ಪಡಿಸುವ ಕೆಲಸವನ್ನೂ ಮಾಡುತ್ತದೆ। ಉರ್ದುವಿನಂತಹ ಒಂದು ಶ್ರೀಮಂತ ಭಾಷೆ ಮುಸ್ಲಿಮ್ ರ ಭಾಷೆ ಎಂಬಂತಾಗಿದೆ। ಇದರಿಂದಾಗಿ ಉರ್ದು ಕೂಡ ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ। ಜೊತೆಗೆ ಕನ್ನಡ ನಾಡಿನಲ್ಲಿ ಇರುವ ಮುಸ್ಲಿಮ್ ರು ಇಲ್ಲಿನ ಭಾಷೆಯನ್ನು ಮಾತನಾಡದೇ ಬೇರೆ ಭಾಷೆ ಮಾತನಾಡುವುದೂ ಕೂಡ ಅವರನ್ನು ಪ್ರತ್ಯೇಕವಾಗಿ ನೋಡುವುದಕ್ಕೆ ಒಂದು ಕಾರಣ। ಅದೇ ಮುಸ್ಲಿಮರು ಕನ್ನಡ ಮಾತನಾಡಿದರೆ ಪ್ರತ್ಯೇಕತೆಯ ಒಂದು ಕಂದಕ ಮುಚ್ಚಿದಂತೆಯೇ।

ಭಾಷೆ ಮತ್ತು ಧರ್ಮ ಒಂದೇ ನೆಲೆಯಲ್ಲಿ ಕೆಲಸ ಮಾಡುತ್ತವೆ। ಭಾಷೆ ಇವ ನಮ್ಮವ ಇವ ನಮ್ಮವ ಎಂಬ ಭಾವವನ್ನು ಮೂಡಿಸಿದಂತೆಯೇ ಧರ್ಮ ಕೂಡ ಇದೆ ಕೆಲಸ ಮಾಡುತ್ತದೆ। ಆದರೆ ಭಾಷೆ ಸಮುದಾಯದ ಜೊತೆಗಿನ ಸಂವಹನ ಕ್ರಿಯೆಯಾಗಿರುವುದರಿಂದ ಅದಕ್ಕೆ ಸಾಮುದಾಯಿಕವಾದ ಆಯಾಮ ಇದೆ। ಧರ್ಮ ಎನ್ನುವುದು ಹಾಗಲ್ಲ। ಅದು ವೈಯಕ್ತಿಕ ನೆಲೆಗಟ್ಟಿನಲ್ಲಿಯೇ ನಡೆಯಬೇಕಾದದ್ದು। ಧರ್ಮ ಎನ್ನುವುದು ಸಾಮುದಾಯಿಕ ಮತ್ತು ಬಹಿರಂಗ ರೂಪ ಪಡೆದಾಗ ಅದು ಇನ್ನೊಂದು ರೀತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ। ಅಲ್ಲಿ ನಂಬಿಕೆ ಮತ್ತು ಶ್ರೇಷ್ಠತೆಯ ಪ್ರಶ್ನೆ ಉದ್ಭವವಾಗುತ್ತದೆ। ಹಾಗೆ ಭಿನ್ನಾಭಿಪ್ರಾಯ ಮತ್ತು ಹಿಂಸೆ ಕೂಡ ತಲೆ ಎತ್ತಬಹುದು।

ಮಂಗಳೂರಿನ ಮುಸ್ಲಿಂರು ಕನ್ನಡವನ್ನು ತಮ್ಮ ಮಾತೃ ಭಾಷೆಯಂದೇ ಒಪ್ಪಿಕೊಂಡಿರುವುದು, ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಕನ್ನಡದಲ್ಲೇ ನಡೆಸಿದ್ದು, ನನಗೆ ಸಂತೋಷವನ್ನು ಉಂಟು ಮಾಡಿದ್ದಕ್ಕೆ ಕಾರಣವಿದೆ। ಕನ್ನಡ ಭಾಷೆಯೇ ಇಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ಕರೆತರುವ ಕೆಲಸ ಮಾಡುತ್ತಿದೆ ಎಂಬುದೇ ಈ ಕಾರಣ।

ಈ ಕಾರ್ಯಕ್ರಮದಲ್ಲಿ ಭಾರಿ ಸಂಖ್ಯಯಲ್ಲಿ ಮುಸ್ಲಿಮ್ ಹೆಂಗಸರು ಯುವತಿಯರು ಪಾಲ್ಗೊಂಡಿದ್ದರು। ಬುರ್ಖಾ ಧರಿಸಿದ್ದ ಅವರ ಮುಖಗಳು ಕಾಣುತ್ತಿರಲಿಲ್ಲ। ಮನುಷ್ಯನ ಮುಖ ನೋಡದೇ ಇರುವುದು ನನಗಂತೂ ಅಸಹನೀಯ। ನಾನು ಮುಖವನ್ನು ನೋಡಲು ಬಯಸುವುದು ಕಣ್ಣುಗಳನ್ನು ನೋಡುವುದಕ್ಕಾಗಿ। ಕಣ್ಣು, ಮನುಷ್ಯನ ಅಂಗಗಳಲ್ಲೇ ಹೆಚ್ಚು ಪ್ರಾಮಾಣಿಕವಾದ ಅಂಗ। ಅದು ಸುಳ್ಳು ಹೇಳುವುದಿಲ್ಲ। ಸುಳ್ಳನ್ನು ಬಚ್ಚಿಟ್ಟುಕೊಂಡು ನಾಟಕ ಮಾಡಲು ಕಣ್ನಿಗೆ ಬಾರದು। ಹೀಗಾಗಿ ಕಣ್ಣುಗಳನ್ನು ನೋಡುವುದು ನನಗೆ ಇಷ್ಠ। ಕಣ್ಣುಗಳ ಮೂಲಕ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ಕುತೂಹಲವನ್ನು ಮುಚ್ಚಿಟ್ಟುಕೊಳ್ಳುವುದು ನನಗೆ ಸಾಧ್ಯವಾಗುವುದಿಲ್ಲ।

ಮಂಗಳೂರಿನ ಮುಸ್ಲಿಮ್ ಸಮಾವೇಶದಲ್ಲಿ ಸುಮಾರು ಅರ್ಧ ಗಂಟೆಯ ಕಾಲ ನಾನು ಮಾತನಾಡಿದೆ। ಭಾರತದ ರಾಜಕಾರಣದ ವೈರುಧ್ಯಗಳನ್ನು ತೆರೆದಿಡಲು ಯತ್ನಿಸಿದೆ। ಭಾರತದಲ್ಲಿ ನಿಜವಾದ ಅರ್ಥದಲ್ಲಿ ರಾಜಕೀಯ ಪಕ್ಷಗಳೇ ಇಲ್ಲ। ಕಾಂಗ್ರೆಸ್ ಪಕ್ಷ ಮೂಲಭೂತವಾಗಿ ಒಂದು ಸಂಘಟನೆ। ಅದಕ್ಕೆ ಪಕ್ಷದ ರೂಪ ಬಂದಿದ್ದು, ಸ್ವಾತಂತ್ರ್ಯ ಬಂದ ಮೇಲೆ। ಹೀಗೆ ಪಕ್ಷದ ರೂಪ ಬರುವ ಕಾಲಕ್ಕೆ, ಕಾಂಗ್ರೆಸ್ ಮಹಾತ್ಮಾ ಗಾಂಧಿಯನ್ನು ಹೊರಹಾಕಿ, ನೆಹರೂ ಅವರ ತೆಕ್ಕೆಗೆ ಬಿದ್ದಾಗಿತ್ತು। ನೆಹರೂ ಮತ್ತು ಅವರ ಸುತ್ತಮುತ್ತ ಇದ್ದ ನಾಯಕರು ಸ್ವಾತಂತ್ರ್ಯ ಹೋರಾಟದ ವಿಜಯದ ಗುಂಗಿನಲ್ಲಿ ಕಾಲ ಕಳೆದರು। ಅದರ ನಂತರ ಹಲವಾರು ಗಾಂಧಿಗಳು ಬಂದು ಹೋದರು। ಕಾಂಗ್ರೆಸ್ ಪಕ್ಷ ಆಂತರಿಕವಾಗಿ ಕುಸಿಯುತ್ತಲೇ ಹೋಯಿತು। ಸಮುದಾಯದ ಸಂಘಟನೆಯ ಮೂಲಕ ಒಂದು ಚಳವಳಿಯ ಮೂಲಕ ಹುಟ್ಟಿದ ಕಾಂಗ್ರೆಸ್ ಒಂದು ಕುಟುಂಬದ ಪದತಲದಲ್ಲಿ ಬಿದ್ದು ಒದ್ದಾಡತೊಡಗಿತು। ಅದಕ್ಕೆ ಸಂಘಟನೆಯ ಶಕ್ತಿಯೂ ಉಳಿಯಲಿಲ್ಲ, ಪಕ್ಷ ರಾಜಕಾರಣದ ಬದ್ಧತೆಯೂ ಬರಲಿಲ್ಲ॥ ಹಾಗೆ ಬಿಜೆಪಿ ಎಂಬ ಸಂಘ ಪರಿವಾರದ ಪಕ್ಷ ಮತ್ತು ದೇವೇಗೌಡರ ಕುಟುಂಬ ಪಕ್ಷದ ಬಗ್ಗೆಯೂ ನಾನು ಮಾತನಾಡಿದೆ।

ಜನಸಾಮಾನ್ಯರ ಹೊಣೆಗಾರಿಕೆಯ ಬಗ್ಗೆ ಮಾತನಾಡುವಕ್ಕಿಂತ ನಮ್ಮ ನಮ್ಮ ಹೊಣೆಗಾರಿಕೆಯ ಬಗ್ಗೆ ಮಾತನಾಡುವುದು ಸೂಕ್ತ ಎಂದು ನಂಬಿದವ ನಾನು। ಯಾವುದೇ ಬದಲಾವಣೆ, ಒಬ್ಬ ವ್ಯಕ್ತಿಯಿಂದ ಪ್ರಾರಂಭವಾಗಬೇಕು। ಹೀಗೆ ಒಬ್ಬೊಬ್ಬರಲ್ಲಿ ಆಗುವ ಬದಲಾವಣೆ ಒಟ್ಟಾರೆ ಬದಲಾವಣೆಗೆ ಕಾರಣವಾಗುತ್ತದೆ। ಇಂಥಹ ಸ್ಥಿತಿಯಲ್ಲಿ ನಾವು ಹತಾಶರಾಗಬೇಕಿಲ್ಲ ಎಂದೆ।

ನಾನು ಮಾತನಾಡುವಾಗ ಕೇಳುತ್ತಿದ್ದವರ ಮನಸ್ಸಿನಲ್ಲಿ ಏನಿತ್ತು ಎಂಬುದು ನನಗೆ ತಿಳಿಯಲಿಲ್ಲ। ಅವರ ಬುರ್ಖಾದ ಹಿಂದಿರುವ ಕಣ್ಣುಗಳಲ್ಲಿ ಯಾವ ಭಾವವಿರಬಹುದು ಎಂಬುದು ನನಗೆ ತಿಳಿಯಲಿಲ್ಲ। ಕಣ್ಣುಗಳು ಮತ್ತು ಮುಖಗಳೇ ಮರೆಯಾಗಿರುವುದು ನನ್ನನ್ನು ಕಾಡತೊಡಗಿತು। ಇವತ್ತು ನಾವು ಬುರ್ಖಾಗಳ ಅಡಿಯಲ್ಲಿ ಅಡಗಿಕೊಳ್ಳುತ್ತಿದ್ದೇವೆ ಎಂದು ಅನ್ನಿಸಿತು। ಮುಖ ಮತ್ತು ಕಣ್ಣುಗಳನ್ನು ಮುಚ್ಚಿಕೊಳ್ಳುವುದು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗಿರದೇ ಅದು ಸರ್ವವ್ಯಾಪಿ ಎಂದು ಅನ್ನಿಸಿತು। ನಾನು ಮತ್ತೆ ಅಸಮಾಧಾನದ ನಿಟ್ಟುಸಿರು ಬಿಟ್ಟೆ.

Wednesday, February 20, 2008

ಪ್ರೀತಿಯನ್ನು ಪಡೆಯುವುದು ಕಷ್ಟ, ನೀಡುವುದು ಇಷ್ಟ

ಐ ಲವ್ ಯು ಎಂದು ಮೊದಲ ಬಾರಿ ಕೇಳಿದಾಗ ನನಗಾದ ರೋಮಾಂಚನ ನನಗಿನ್ನು ನೆನಪಿನಲ್ಲಿದೆ। ಇಂಥಹ ಒಂದು ಮಾತಿಗಾಗಿ ನಾನು ಕಾದಿದ್ದು, ಕನಸು ಕಂಡಿದ್ದು, ತಪಸ್ಸು ಮಾಡಿದ್ದು ಎಲ್ಲವೂ ನಿಜ। ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂಬ ಮಾತನ್ನು ಕೇಳುವ ತವಕದಲ್ಲಿ ಕಾತುರದಲ್ಲಿ ಬದುಕುತ್ತಿದ್ದಾಗಲೇ, ಈ ಮಾತನ್ನು ಹೇಳಲು ಒದ್ದಾಡಿದ್ದು ಒಂದೆರಡು ಬಾರಿಯಲ್ಲ। ಹಳ್ಳಿಯ ಮೂಲೆಯೊಂದರಲ್ಲಿ, ಅಡಕೆ ತೋಟ, ಗುಡ್ಡ ಬೆಟ್ಟಗಳ ನಡುವೆ ಓಡಾಡಿಕೊಂಡಿದ್ದ ನನಗೆ ಪ್ರೀತಿ ಒಂದು ಅನೂಹ್ಯವೇ। ಪ್ರೀತಿಯ ಬೆನ್ನು ಹತ್ತಿ ಹೋಗುವುದು ಒಂದು ಚಟ। ಪ್ರಾಯಶಃ ನನ್ನನ್ನು ಯಾರಾದರೂ ಪ್ರೀತಿಸಬೇಕು ಎಂದು ನಾನು ಆಸೆ ಪಟ್ಟಿದ್ದೆನೆ ಹೊರತೂ ಈ ಪ್ರೀತಿಯಲ್ಲಿ ನನ್ನದೇ ಆಯ್ಕೆ ಇರಲಿಲ್ಲವೇನೋ। ಯಾಕೆಂದರೆ ಬಾಲ್ಯದಲ್ಲಿ ವಿಚಿತ್ರ ಒಂಟಿತನದಿಂದ ಕಳೆದ ನನಗೆ ಒಂದು ಪುಟ್ಟ ಸಾಂತ್ವನ ಬೇಕಾಗಿತ್ತು। ಯಾರಾದರೂ ತಮ್ಮ ಸೀರೆಯ ಸೆರಗಿನಡಿಯಲ್ಲಿ ನನ್ನನ್ನು ಬಚ್ಚಿಟ್ಟುಕೊಳ್ಳಬೇಕಾಗಿತ್ತು। ಹಾಗೆ ನನ್ನನ್ನು ಒರಗಿಸಿಕೊಂಡು ನೀನು ಸಣ್ಣವಲ್ಲ, ದೊಡ್ಡವನು ಎಂದು ಹೇಳಬೇಕಾಗಿತ್ತು। ಹೀಗೆ ಹೇಳುವ, ನನ್ನ ಮನಸ್ಸಿನ ಜೊತೆ ಮಾತನಾಡುವ ಹೃದಯ ಸಾನ್ನಿಧ್ಯ ನನಗೆ ಬೇಕಾಗಿತ್ತು।
ನಾನು ಮಹಾಭಾರತ ಮತ್ತು ರಾಮಾಯಣವನ್ನು ಓದುತ್ತ ಬೆಳೆದವನು। ಯಕ್ಷಗಾನ , ನಾಟಕಗಳಲ್ಲಿ ಈ ಮಹಾ ಕಾವ್ಯದ ಪಾತ್ರಗಳನ್ನು ನೋಡಿ, ನನ್ನೊಳಗೆ ಅಹ್ವಾನಿಸಿಕೊಂಡು ಸಂತಸಪಟ್ಟವನು। ಈಗಲೂ ಸಹ ಮಹಾಭಾರತದ ಯಾವುದೋ ಒಂದು ಪಾತ್ರ ನಾನೇ ಎಂದು ನನಗೆ ಹಲವು ಭಾರಿ ಅನ್ನಿಸುವುದುಂಟು। ನನಗೆ ಹೆಚ್ಚು ಹತ್ತಿರವಾಗುವ ಮಹಾಭಾರತದ ಪಾತ್ರ ಎಂದರೆ ಕರ್ಣನದು। ಅರ್ಜುನನನ್ನು ಕಂಡರೆ ನನಗಾಗುವುದಿಲ್ಲ। ಸೂತಪುತ್ರನಾದ ಕರ್ಣನನ್ನು ಜರಿದಾಗ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ। ಅರ್ಜುನನ್ನು ಹೀಗಳಿದರೆ ಆತ ಮತ್ತಷ್ಟು ಶಕ್ತಿಯುತನಾಗಿ ಹೊರಹೊಮ್ಮುತ್ತಾನೆ। ನನಗೂ ಹಾಗೆ। ನನ್ನನ್ನು ಹೀಗಳಿದರೆ ನನ್ನ ಶಕ್ತಿ ಅಳಿದು ಹೋಗುತ್ತದೆ। ನಾನು ನಿಶಕ್ತನಾಗುತ್ತೇನೆ। ನನಗೆ ನೀನು ದೊಡ್ದವನು ಎಂದು ಹೇಳುವವರು ಬೇಕು। ಹಾಗೆ ಹಲವರನ್ನು ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರೂ ನನಗೆ ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುವವರಿಗಾಗಿ ಕಾದಿದ್ದು, ಅದೆಷ್ಟು ಕಾಲ ?
ಆದರೆ ಈ ಪ್ರೀತಿಯ ಜಗತ್ತು, ಇಲ್ಲಿ ನಮ್ಮ ಸಮಸ್ಯೆ ಎಂದರೆ, ನಾವು ಪ್ರೀತಿಯನ್ನು ಅಪೇಕ್ಷಿಸುತ್ತೇವೆಯೇ ಹೊರತೂ ಪ್ರೀತಿಯನ್ನು ನೀಡುವುದಿಲ್ಲ ಎಂಬುದು ನನಗೆ ಅರ್ಥವಾಗಿದ್ದು ಇತ್ತೀಚೆಗೆ॥ ನಮ್ಮನ್ನು ಪ್ರೀತಿಸುವರಿಗಾಗಿ ನಾವು ಕಾಯುತ್ತೇವೆ, ಹಪಹಪಿಸುತ್ತೇವೆ, ಆದರೆ ನಾವು ಯಾರನ್ನೂ ಪ್ರೀತಿಸುವುದಿಲ್ಲ। ನಮಗೆ ನಮ್ಮನ್ನು ಪ್ರೀತಿಸಿಕೊಳ್ಳುವುದು ಇಷ್ಟವೇ ಹೊರತೂ ಬೇರೆಯವರನ್ನು ಪ್ರೀತಿಸುವುದಲ್ಲ। ಪ್ರೀತಿ ಎಂದರೆ ಅದು ಪಡೆಯುವುದಲ್ಲ, ಅದನ್ನು ನೀಡುವುದು ಎಂಬ ಮಾತು ನಿಜ। ಪ್ರೀತಿಯನ್ನು ನೀಡುವುದರಲ್ಲಿ ಸಂತೋಷವಿದೆ। ಪಡೆಯುವುದರಲ್ಲಿ ಅಲ್ಲ। ಯಾಕೆಂದರೆ ಪಡೆದಿದ್ದನ್ನು ಸಂಭಾಳಿಸುವುದು ಕಷ್ಟ।ಪ್ರೀತಿ ನಮ್ಮಿಂದ ಎಲ್ಲವನ್ನೂ ಅಪೇಕ್ಷಿಸುತ್ತದೆ। ಪ್ರೀತಿ ಅಪೇಕ್ಷಿಸಿದ್ದನ್ನು ನೀಡುತ್ತ ಅದನ್ನು ಮಗುವಿನ ಹಾಗೆ ಸಂಬಾಳಿಸಬೇಕು। ಅದಿಲ್ಲದಿದ್ದರೆ, ಪ್ರೀತಿ ಆ ಕ್ಷಣವೇ ಕಾಲು ಕಿತ್ತು ಬಿಡುತ್ತದೆ। ಇಲ್ಲವೆ ಹಠ ಮಾಡುತ್ತದೆ। ಬೀದಿ ರಂಪ ಮಾಡಿ, ರಚ್ಚೆ ಹಿಡಿದು ಕುಳಿತು ಬಿಡುತ್ತದೆ। ಪಡೆದ ತಕ್ಷಣ ಅದನ್ನು ಉಳಿಸಿಕೊಳ್ಳುವ ಸಮಸ್ಯೆ ಪ್ರಾರಂಭವಾಗುತ್ತದೆ। ಹಾಗೆ ಕಳೆದುಕೊಳ್ಳುವ ಭಯದಲ್ಲೇ ನಾವು ಬದುಕುತ್ತಿರುತ್ತೇವೆ। ಯಾವಾಗಲೂ ಕಳೆದುಕೊಳ್ಳುವ ನೋವಿಗಿಂತ ಪಡೆಯದಿರುವ ಬೇಸರವೇ ಹೆಚ್ಚು ಒಳ್ಳೆಯದು ಎಂದು ನನಗೆ ಅನೇಕ ಸಲ ಅನ್ನಿಸುವುದುಂಟು। ಈ ಕಾರಣಕ್ಕಾಗಿಯೇ ಪ್ರೀತಿಯನ್ನು ಬಯಸುವುದಕ್ಕಿಂತ ನೀಡುವುದು ಒಳ್ಳೆಯದು ಎಂಬ ತೀರ್ಮಾನಕ್ಕೆ ನಾನು ಬಂದಿದ್ದು। ಯಾಕೆಂದರೆ ನೀಡುವವನಲ್ಲಿ ಸಣ್ಣ ಅಹಮಿಕೆ ಇರುತ್ತದೆ। ನೀಡುವವನ ಕೈ ಮೇಲಿರುವ ಹಾಗೆ। ನೀಡುವವನಿಗೆ ಕಳೆದುಕೊಳ್ಳುವ ಭಯ ಇರುವುದಿಲ್ಲ। ಹಾಗೆ ಕಳೆದುಕೊಂಡ ನೋವು ಅವನನ್ನು ಬಾಧಿಸಲಾರದು। ಈ ಕಾರಣಗಳಿಂದಾಗಿಯೇ ಪ್ರೀತಿಯನ್ನು ಪಡೆಯುವದರಲ್ಲಿ ನನಗೆ ಆಸಕ್ತಿ ಇಲ್ಲ। ಪ್ರೀತಿಯನ್ನು ನೀಡುವುದರಲ್ಲಿ ಮಾತ್ರ ನನಗೆ ಆಸಕ್ತಿ। ಹೀಗೆ ಪ್ರೀತಿ ನೀಡುವಲ್ಲಿ ನಾನೇ ಸಾರ್ವಬೌಮ। ನನನ್ನು ಯಾರೂ ಪ್ರಶ್ನಿಸಲಾರು। ಹಾಗೇ ಪ್ರೀತಿ ಪಡೆಯುವಲ್ಲಿ ಇರುವ ಪೈಪೋಟಿ, ಪ್ರೀತಿ ನೀಡುವಲ್ಲಿ ಇಲ್ಲ। ಹೀಗಾಗಿ ನಾನು ಯಾರಿಂದಲೂ ಪ್ರೀತಿಯನ್ನು ನಾನು ಅಪೇಕ್ಷಿಸಲಾರೆ। ಪ್ರೀತಿಯನ್ನು ಎಲ್ಲರಿಗೂ ನೀಡುವುದು ಮಾತ್ರ ನನಗೆ ಇಷ್ಟ.

Tuesday, February 19, 2008

ತಮ್ಮ ಬಗ್ಗೆಯೇ ಸಂತಾಪ ಪಡುವವರು !

ನನಗೆ ಇದೆಲ್ಲ ಬೇಕಾಗಿರಲಿಲ್ಲ। ಇದು ಯಾವುದೋ ಒಂದು ಘಟನೆ ನಡೆದ ಮೇಲೆ ನಾನು ಅಂದುಕೊಳ್ಳೋದು। ನನಗೆ ಇದೆಲ್ಲ ಬೇಕಾಗಿರಲಿಲ್ಲ ಅಂತ ಇದುವರೆಗೆ ಸಾವಿರ ಬಾರಿ ನಾನು ಅಂದುಕೊಂಡಿರಬಹುದು। ಆದರೆ ಮತ್ತೆ ಅದೇ, ನನಗೆ ಬೇಕಾಗಿಲ್ಲದಿರುವುದನ್ನೇ ಮತ್ತೆ ಮಾಡುವುದು। ಇದು ಒಂದು ರೀತಿಯಲ್ಲಿ ಖುಷಿ ನೀಡುವ ವಿಚಾರವೇ। ಯಾವುದು ಬೇಕಾಗಿರುವುದು ಮತ್ತು ಯಾವುದು ಬೇಕಿಲ್ಲದುರುವುದು ? ಒಂದು ಸಂದರ್ಭದಲ್ಲಿ ಬೇಕು ಅನ್ನಿಸಿದ್ದು ಇನ್ನೊಂದು ಸಂದರ್ಭದಲ್ಲಿ ಬೇಕಿಲ್ಲದ್ದು ಆಗಬಹುದು। ಅಂದರೆ, ಬೇಕು ಮತ್ತು ಬೇಕಿಲ್ಲದಿರುವುದಕ್ಕೆ ಸ್ಥಾಯಿ ರೂಪ ಇಲ್ಲ। ಅದು ಕಾಯಂ ಆಗಿ ಇರುವಂತಹುದಲ್ಲ।

ಯಾಕೆ ನಮಗೆ ಇದೆಲ್ಲ ಬೇಕಿರಲಿಲ್ಲ ಎಂದು ಅನ್ನಿಸುತ್ತದೆ ? ನಾವು ಒಂದು ತೀರ್ಮಾನ ಕೈಗೊಂಡು ಮುಂದುವರಿಯುದು ಫಲಿತಾಂಶದ ನಿರೀಕ್ಷೆಯ ಮೇಲೆ। ನಮ್ಮ ನಿರೀಕ್ಷೆಯ ಫಲಿತಾಂಶ ಬರದಿದ್ದಾಗ ನಾವು ಅಂದುಕೊಳ್ಳುವುದು ಇದೆಲ್ಲ ನಮಗೆ ಬೇಕಿರಲಿಲ್ಲ ಅಂತ। ಅಂದರೆ, ನಮಗೆ ಇದು ಬೇಕಿರಲಿಲ್ಲ ಅಂದರೆ ಈ ಫಲಿತಾಂಶ ನನಗೆ ಬೇಕಿರಲಿಲ್ಲ ಎಂದು ಮಾತ್ರ। ಈ ಯತ್ನ ಬೇಕಿರಲಿಲ್ಲ ಎಂದು ಅಲ್ಲವೇ ಅಲ್ಲ। ನಾವು ಯತ್ನದ ಮೇಲೆ ಬದುಕುವುದಿಲ್ಲ, ಫಲಿತಾಂಶದ ಮೇಲೆ ಬದುಕುತ್ತೇವೆ।

ಆದರೆ ನಿಜವಾದ ಬದುಕು ಎಂದರೆ ನಿರೀಕ್ಷೆ ಅಲ್ಲ। ಅದು ಕನಸೂ ಅಲ್ಲ। ಭೂತ ಕಾಲವೂ ಅಲ್ಲ। ನಿಜವಾದ ಬದುಕು ಎಂದರೆ ವಾಸ್ತವ। ವಾಸ್ತವಕ್ಕೆ ಭೂತಕಾಲವೂ ಇಲ್ಲ, ಭವಿಷ್ಯತ್ ಕಾಲವೂ ಇಲ್ಲ। ಅದು ವರ್ತಮಾನ। ತಮಾಷೆ ಎಂದರೆ ನಮಗೆ ವರ್ತಮಾನ ಎಂದರೆ ಆಗದು। ನಾವು ಎಂದೂ ವರ್ತಮಾನದಲ್ಲಿ ಬದುಕಲಾರೆವು। ನಮಗೆ ಭೂತಕಾಲ ಭೂತದಂತೆ ಕಾಡುತ್ತಿರುತ್ತದೆ। ಇಲ್ಲವೇ ಭವಿಷ್ಯ ತಲೆ ತಿನ್ನುತ್ತಿರುತ್ತದೆ। ಇದನ್ನು ಇನ್ನೊಂದು ರೀತಿಯಲ್ಲೂ ಹೇಳಬಹುದು। ವರ್ತಮಾನ ಎಂದರೆ ವಾಸ್ತವ। ಅದು ಸತ್ಯ। ನಮಗೆ ಸತ್ಯವನ್ನು ಎದುರಿಸುವುದು ಯಾವಾಗಲೂ ಕಷ್ಟ। ಅಂದರೆ ವರ್ತಮಾನ ಅಥವಾ ವಾಸ್ತವವನ್ನು ನಾವು ಎದುರಿಸಲಾರೆವು।

ವರ್ತಮಾನವನ್ನು ಎದುರಿಸಲಾರದವರು, ತಮ್ಮ ಈ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಬೇರೆ ಬೇರೆ ರೀತಿಯ ಮಾರ್ಗವನ್ನು ಅನುಸರಿಸುತ್ತಾರೆ। ಅವರು ಬಹುಮಟ್ಟಿಗೆ ಭೂತಕಾಲದಲ್ಲಿ ಬದುಕುತ್ತಾರೆ। ನಾನು ಏನು ಮಾಡಿದ್ದೆ ಗೊತ್ತಾ ? ಎಂದು ಮಾತನ್ನು ಪ್ರಾರಂಭಿಸುತ್ತಾರೆ। ಇಲ್ಲದಿದ್ದರೆ, ಈ ಸಮಾಜಕ್ಕೆ ನನ್ನ ಯೋಗ್ಯತೆಯನ್ನು ಉಪಯೋಗಿಸುವುದು ಗೊತ್ತಿಲ್ಲ ಎಂದು ಸಮಾಜವನ್ನು ದೂಷಿಸಿ ಸಮಾಧಾನ ಪಟ್ಟುಕೊಳ್ಳುತ್ತಾರೆ। ನೀವು ಯಾವುದೇ ಕಚೇರಿಯನ್ನು ನೋಡಿ, ಅಲ್ಲಿ ಒಬ್ಬರಲ್ಲ ಒಬ್ಬರು ಇಂತಹ ವ್ಯಕ್ತಿ ಸಿಗುತ್ತಾರೆ। ನನ್ನ ಯೋಗ್ಯತೆಯನ್ನು ಗುರಿತುಸುವ ಶಕ್ತಿ ಈ ಬಾಸ್ ಗೆ ಇಲ್ಲ ಕಣ್ರಿ ಅಂತ ಬಾಯಿ ಚಪಲ ತೀರಿಸಿಕೊಳ್ಳುತ್ತಾರೆ। ನಾನು ಬಾಸ್ ಆಗಿದ್ದರೆ ತೋರಿಸುತ್ತಿದ್ದೆ ಎಂದು ತಮ್ಮ ಪೌರುಷವನ್ನು ಕೊಚ್ಚಿಕೊಳ್ಳುತ್ತಾರೆ। ಆದರೆ ಇಂತಹ ಸೆಲ್ಪ್ ಪಿಟಿ ಅಥವಾ ತಮ್ಮ ಬಗ್ಗೆಯೇ ದುಃಖ ಪಡುವ ಜನ ಏನನ್ನೂ ಮಾಡಲಾರರು। ಅವರು ತಮಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಲಾರರು।

ನಮ್ಮ ಬಗ್ಗೆಯೇ ನಾವು ಸಂತಾಪ ಭಾವವನ್ನು ವ್ಯಕ್ತಪಡಿಸುವುದು ಒಂದು ಚಟ। ಅದು ನಮ್ಮ ಸುಪ್ತ ಮನಸ್ಸಿಗೆ ಸಂತೋಷವನ್ನು ಕೊಡುವ ಚಟ। ನನಗೆ ಇದೆಲ್ಲ ಬೇಕಾಗಿರಲಿಲ್ಲ ಎಂದು ಸಂತಾಪ ವ್ಯಕ್ತಪಡಿಸುವುದು ಚಟವೇ.