Monday, February 25, 2008

ಬಾಗಿಲು ಮತ್ತು ಕಿಡಕಿ

ನನಗೆ ಮೊದಲಿನಿಂದಲೂ ಬಾಗಿಲು ಮತ್ತು ಕಿಡಕಿ ಎಂದರೆ ತುಂಬಾ ಇಷ್ಟ। ನನ್ನೂರಿನ ಮನೆಯಲ್ಲಿ ಇದ್ದ ಪ್ರಧಾನ ಬಾಗಿಲು ನನಗಿನ್ನೂ ನೆನಪಿದೆ। ಅದು ಯಾವ ಕಾಲದ್ದು ಎಂಬುದು, ನನ್ನ ಅಪ್ಪ ಅಜ್ಜ ಯಾರಿಗೂ ನೆನಪಿರಲಿಲ್ಲ। ಯಾವಾಗಲೂ ತೆರೆದುಕೊಂದು ಇರುತ್ತಿದ್ದ ಈ ಪ್ರಧಾನ ಬಾಗಿಲನ್ನು ಹಾಕುತ್ತಿದ್ದುದು ರಾತ್ರಿ ಎಲ್ಲರೂ ಮಲಗಿದ ಮೇಲೆ। ಈ ಬಾಗಿಲು ಯಾವುದೋ ಪುರಾತನ ಕೋಟೆಯ ಬಾಗಿಲನನ್ನು ನೆನಪಿಸಿವಂತೆ ಇತ್ತು। ಅದನ್ನು ತೆಗೆದಾಗ ಅದು ಕಿರ್ ಎಂದು ಶಬ್ದ ಮಾಡುತ್ತಿತ್ತು। ಹಾಗೆ ಹಾಕುವಾಗಲೂ ಅದೇ ಶಬ್ದ। ಈ ಬಾಗಿಲಿನ ತಿರುಗುಣಿಗೆ ಎಣ್ಣೆ ಹಾಕಬೇಕು ಎಂದು ನನ್ನ ಅಮ್ಮ ಆವಾಗಾವಾಗ ಹೇಳ್ತಾ ಇದ್ದಳು। ಆದರೆ ಅಮ್ಮ ಎಣ್ಣೆ ಹಚ್ಚಿದಳೋ ಬಿಟ್ಟಳೋ ಆ ಬಾಗಿಲು ಮಾತ್ರ ಶಬ್ದ ಮಾಡುವುದನ್ನು ನಿಲ್ಲಿಸಲಿಲ್ಲ। ರಾತ್ರಿ ೧೦ ಗಂಟೆ ಆಯಿತು ಎಂಬುದನ್ನು ನಾವು ತಿಳಿಯುತ್ತಿದ್ದುದು, ಭಾಗಿಲು ಕಿರಕ್ ಎಂದಾಗ। ಹಾಗೆ ಬೆಳಿಗ್ಗೆ ಐದು ಗಂಟೆ ಆಯಿತು ಎಂಬುದು ಕೂಡ ಬಾಗಿಲ ಕಿರಕ್ ಶಬ್ದದಿಂದಲೇ ನಾವು ತಿಳಿದುಕೊಳ್ಳುತ್ತಿದ್ದೆವು।

ಈ ಬಾಗಿಲ ಪಕ್ಕದಲ್ಲಿ ಸಣ್ಣ ಕಿಡಕಿಯೊಂದಿತ್ತು। ಆ ಕಿಡಕಿಯ ಮೂಲಕ ನೋಡಿದರೆ, ಮನೆಯ ಎದುರಿನ ಅಂಗಳ, ಅಡಿಕೆತೋಟ ಕಾಣುತ್ತಿತ್ತು ಈ ಕಿಡಕಿಯ ಪಕ್ಕದಲ್ಲಿ ಮೆತ್ತಿನ ಮೇಲೆ ಹೋಗಲು ಮರದ ಮೆಟ್ಟಿಲುಗಳಿದ್ದವು। ಒಮ್ಮೆ ನಾನು ಮಹಡಿಯಿಂದ ಕೆಳಕ್ಕೆ ಇಳಿಯುವಾಗ ಬಿದ್ದು ಬಿಟ್ಟೆ। ಕಿಡಕಿಯು ಹಣೆಗೆ ಬಡಿದು ಗಾಯವಾಗಿ ರಕ್ತ ಸುರಿಯಿತು। ಆದರೆ, ಕಿಡಕಿಯ ಮೇಲೆ ನನಗೆ ಸಿಟ್ಟು ಬರಲಿಲ್ಲ। ಹೊರಗಿನ ಬೆಳಕನ್ನು ನೋಡುವ ಕಿಡಕಿಯ ಮೇಲಿನ ಮೋಹ ಮರೆಯಾಗಲಿಲ್ಲ। ಅಪ್ಪ ಹೊಡೆದಾಗ, ಅಜ್ಜ ಬೈದಾಗ ನಾನು ಬಂದು ನಿಲ್ತಾ ಇದ್ದುದು ಇದೇ ಕಿಡಕಿಯ ಪಕ್ಕ। ಹಾಗೆ ಈ ಪ್ರಧಾನ ಬಾಗಿಲ ಕಥೆ। ನಮ್ಮ ಮನೆಯ ಈ ಪ್ರಧಾನ ಬಾಗಿಲಿನ ಬಗ್ಗೆ ನನಗೆ ಎಂತಹ ಮೋಹ ಬೆಳೆದಿತ್ತೆಂದರೆ, ಇಂಥಹ ಪ್ರಧಾನ ಬಾಗಿಲು ಬೇರೆ ಯಾರ ಮನೆಯಲ್ಲೂ ಇಲ್ಲ ಎಂದು ನಾನು ಬಹಳ ಕಾಲ ನಂಬಿದ್ದೆ। ಹಾಗೆ ಬೇರೆಯವರ ಮನೆಗಳಿಗೆ ಹೋದಾಗಲೆಲ್ಲ, ಅವರ ಮನೆಯ ಪ್ರಧಾನ ಬಾಗಿಲನ್ನು ನಮ್ಮ ಮನೆಯ ಪ್ರಧಾನ ಬಾಗಿಲ ಜೊತೆ ಹೋಲಿಸಿ ನಮ್ಮ ಮನೆಯ ಪ್ರಧಾನ ಬಾಗಿಲೇ ಅತ್ಯುತ್ತಮ ಎಂದು ಸಂತೋಷ ಪಡುತ್ತಿದ್ದೆ।

ನಮ್ಮ ಮನೆಯ ಪ್ರಧಾನ ಬಾಗಿಲನ್ನು ತೆರೆದಿಟ್ಟರೆ, ಅದು ಮನೆಯ ಹೊರಗಿನ ಜಗತ್ತನ್ನು ತೆರೆದಿಡುತ್ತಿದ್ದುದು ಮಾತ್ರವಲ್ಲ, ಮನೆಯ ಒಳಗಿನ ಗುಟ್ಟುಗಳನ್ನು ಬಟ್ಟಾ ಬಯಲು ಮಾಡುತ್ತಿತ್ತು. ಪ್ರಧಾನ ಬಾಗಿಲ ಪಕ್ಕದಲ್ಲಿ ನಿಂತರೆ, ಹೊರಗಿನ ಅಂಗಳ, ಅಡಿಕೆ ತೋಟ, ರಸ್ತೆ ಕಾಣುತ್ತಿದ್ದಂತೆ, ತಿರುಗಿದರೆ, ಮನೆಯ ಒಳಗೆ ಅಡಿಗೆ ಮನೆಯ ವರೆಗೆ ನೋಡಬಹುದಾಗಿತ್ತು. ಪ್ರಧಾನ ಬಾಗಿಲ ಹತ್ತಿರ ನಿಂತು ಮನೆಯ ಒಳಗೆ ಹೊರಗೆ ನೋಡುವುದೆಂದರೆ ನನಗೆ ಎಲ್ಲಿಲ್ಲದ ಸಂತೋಷ।

ಊರು ಬಿಟ್ಟು ಬೆಂಗಳೂರಿಗೆ ಬಂದ ಮೇಲೆ ನನಗೆ ಕಾಣತೊಡಗಿದ್ದು ಮುಚ್ಚಿದ ಕಿಡಕಿ, ಬಾಗಿಲುಗಳು। ಯಾರ ಮನೆಗೆ ಹೋದರು ಮೊದಲು ಸ್ವಾಗತಿಸುವುದು ಮುಚ್ಚಿದ ಬಾಗಿಲುಗಳೇ। ಕಾಲಿಂಗ್ ಬೆಲ್ ಒತ್ತಿದರೆ ಹಾಗೆ ತೆರೆದುಕೊಂಡು। ಬಂದವರು ಯೋಗ್ಯರು ಅನ್ನಿಸಿದರೆ, ಅವರನ್ನು ಮತ್ತೆ ಒಳಗೆ ಎಳೆದುಕೊಂಡು ಮತ್ತೆ ಹಾಗೆ ಮುಚ್ಚಿಕೊಳ್ಳುವ ಬಾಗಿಲುಗಳು। ಹೀಗೆ ಮುಚ್ಚಿಕೊಂಡ ಬಾಗಿಲುಗಳನ್ನು ನೋಡಿದ ತಕ್ಷಣ ನನಗೆ ಅಸಹನೆ। ಅದು ಇವತ್ತು ಕೂಡ ಹಾಗೆ ಮುಂದಿವರಿದಿದೆ।

ಬಾಗಿಲು ಮತ್ತು ಕಿಡಕಿಗಳೆಂದರೆ ಅವು ಕೇವಲ ಮರದ ವಸ್ತುಗಳಲ್ಲ। ಅವು ನಮ್ಮ ಹೊರ ಮನಸ್ಸು ಮತ್ತು ಒಳ ಮನಸ್ಸನ್ನು ಪ್ರತಿನಿಧಿಸುತ್ತವೆ। ನಮ್ಮ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುತ್ತವೆ। ತೆರೆದ ಬಾಗಿಲು ನಮಗೆ ಹೊರ ಜಗತ್ತು ಕಾಣುವಂತೆ ಮಾಡುತ್ತದೆ। ಹಾಗೆ ನಮ್ಮ ಒಳ ಜಗತ್ತನ್ನು ತೆರೆದಿಡುತ್ತದೆ। ಹೊರಗಿನ ಗಾಳಿ ಮತ್ತು ಬಿಸಿಲು ಒಳಗೆ ಬರುವುದು ಇದೇ ಕಿಡಕಿ ಮತ್ತು ಬಾಗಿಲುಗಳ ಮೂಲಕ। ನಾವು ಮನೆಯ ಒಳಗೆ ನಾಲ್ಕುಗೋಡೆಗಳ ನಡುವೆ ಕಟ್ಟಿಕೊಂಡ ನಮ್ಮ ಪ್ರಪಂಚವನ್ನು ಹೊರಜಗತ್ತಿಗೆ ಪರಿಚಯ ಮಾಡಿಕೊಡುತ್ತವೆ।

ಆದರೆ ಆಧುನಿಕ ಬದುಕು ನಮಗೆ ಕಿಡಕಿ ಮತ್ತು ಬಾಗಿಲುಗಳನ್ನು ಮುಚ್ಚಿಕೊಳ್ಳುವುದನ್ನು ಕಲಿಸಿದೆ। ನಾವು ಬೆಳಗಿನ ಎಳೆ ಬಿಸಲನ್ನು ನೋಡಲಾರೆವು। ನಮ್ಮೊಳಗಿನದನ್ನು ತೆರೆದಿಡಲಾರೆವು। ನಮಗೆ ಬಿಚ್ಚಿಡುವುದಕ್ಕಿಂತ ಮುಚ್ಚಿಡುವುದು ಹೆಚ್ಚು ಮುಖ್ಯ। ಯಾಕೆಂದರೆ ನಮಗೆ ನಮ್ಮೊಳಗಿನದನ್ನು ಬಿಚ್ಚಿಡಲು ಭಯ। ಹೊರಗಿನದನ್ನು ನೋಡುವ ಕನಿಷ್ಠ ಆಸಕ್ತಿಯೂ ನಮಗಿಲ್ಲ। ನಾವು ನಮ್ಮ ನಡುವೆ ಗೋಡೆಯನ್ನು ಕಟ್ಟಿಕೊಳ್ಳಲು ಬಯಸುತ್ತೇವೆ। ಹಾಗೆ ಕಿಡಕಿ ಮತ್ತು ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತೇವೆ। ಈಗಲೂ ನನ್ನ ಬೆಂಗಳೂರಿನ ನನ್ನ ಮನೆಯಲ್ಲಿ ಕಿಡಕಿ ಬಾಗಿಲು ಮುಚ್ಚಿದ್ದನ್ನು ನೋಡಿದ ತಕ್ಷಣ ನನಗೆ ಅಸಹನೆ ಪ್ರಾರಂಭವಾಗುತ್ತದೆ। ಅದರೆ ಬೆಂಗಳೂರಿನಂತ ನಗರದಲ್ಲಿ ಮನೆಯ ಬಾಗಿಲನ್ನು ತೆರೆದಿಡುವುದು ಕಷ್ಟ। ಜೊತೆಗೆ ಭಯ। ಇದೇ ನಮ್ಮ ಅಧುನಿಕ ಬದುಕು ಎಂದು ನನಗೆ ಅನ್ನಿಸುತ್ತದೆ। ಇಲ್ಲಿ ನಾವು ಕಿಡಕಿ ಬಾಗಿಲನ್ನು ತೆರೆಯಲಾರೆವು। ಬೆಳಕನ್ನು ನೋಡಲಾರೆವು। ನಾಲ್ಕು ಗೋಡೆಗಳ ನಡುವೆ, ಕುಳಿತುಕೊಳ್ಳುವ ಕರ್ಮ ನಮ್ಮದು.

1 comment:

thamboori said...

vasthu maththu vaasthavavannu katti koduva aksharayaanadhalli kaledukonda nenapugalella kaana siguththave