Tuesday, March 18, 2008

ಕಣ್ಣು ಕತ್ತಿಯ ಅಂಚು !

ಕಳೆದ ಎರಡು ವಾರಗಳ ಹಿಂದೆ ಎಲ್ ಆರ್ ಈಶ್ವರಿ ಬೆಂಗಳೂರಿಗೆ ಬಂದಿದ್ದರು। ನಮ್ಮ ಹುಡುಗರ ಬಳಿ ಅವಳ ಬಗ್ಗೆ ವರದಿ ಮಾಡುವಂತೆ ಹೇಳಿ ಸುಮ್ಮನೆ ನನ್ನ ಕೊಠಡಿಯಲ್ಲಿ ಕುಳಿತೆ। ಮನಸ್ಸು ಹಲವು ವರ್ಷಗಳ ಹಿಂದಕ್ಕೆ ಓಡಿತು। ನಾನಾಗ ಹೈಸ್ಕೂಲಿನಲ್ಲಿ ಓದುತ್ತಿದ್ದ ದಿನಗಳು। ಸಿನೆಮಾ ಆಗ ನನ್ನ ಹುಚ್ಚು। ಹೈಸ್ಕೂಲಿಗೆ ಕಳ್ಳ ಬಿದ್ದು ಸಿನೆಮಾ ನೋಡುವ ಖಯಾಲಿ। ಆಗ ಎಲ್ಲ ಕ್ಯಾಬರೆ ಡ್ಯಾನ್ಸರುಗಳಿಗೆ ಧ್ವನಿ ನೀಡುತ್ತಿದ್ದವರು ಎಲ್ ಆರ್ ಈಶ್ವರಿ। ಈಶ್ವರಿ ಧ್ವನಿ ಕೇಳಿದ ತಕ್ಷಣ ಮನಸ್ಸಿನಲ್ಲಿ ಹುಟ್ಟುತ್ತಿದ್ದ ರಾಗ ತರಂಗಗಳು। ಅದೊಂದು ಅಮಲು। ಹಲವು ಸಂದರ್ಭದಲ್ಲಿ ನಾನು ಹೇಳುತ್ತಿದ್ದು, ನನಗೆ ಯೌವನ ಬಂದಿದೆ ಎಂದು ಗೊತ್ತಾದದ್ದೇ ಎಲ್ ಆರ್ ಈಶ್ವರಿಯ ಮಾದಕ ಧ್ವನಿಯನ್ನು ಕೇಳಿದಾಗ ಅಂತ। ಈಶ್ವರಿಯ ಧ್ವನಿಯೇ ಹಾಗೆ। ಅಲ್ಲಿ ಇದ್ದುದು ಮಾದಕತೆ, ಅದು ಆಹ್ವಾನ ನೀಡುವ ಧ್ವನಿ।

ಅವಳ ಬಾಯಲ್ಲಿ, ಕಣ್ಣು ಕತ್ತಿಯ ಅಂಚು ಎಂಬ ಹಾಡು ಬಂದಾಗ, ಕತ್ತಿಯಿಂದ ಹೃದಯವನ್ನು ಇರಿದಂತೆ। ಹಾಡು ಕೇಳುತ್ತಿದ್ದವರು ತಮ್ಮ ಕೈಯನ್ನು ಎತ್ತಿ ಎದೆಯ ಮೇಲೆ ಇಟ್ಟುಕೊಳ್ಳಬೇಕಾದ ಸ್ಥಿತಿ। ಎಲ್ ಆರ್ ಈಶ್ವರಿಯ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ಜ್ಯೋತಿಲಕ್ಷ್ಮಿಯೂ ಹಾಗೆ। ಆಕೆ ಹೆಜ್ಜೆ ಎತ್ತಿ ಇಡುವ ವೇಗ, ಅದಕ್ಕೆ ತಕ್ಕಂತೆ ಮೈಬಳಕಿಸುತ್ತಿದ್ದ ರೀತಿ ಎಲ್ಲವೂ ಅನನ್ಯ। ಜ್ಯೋತಿ ಲಕ್ಷ್ಮಿಯ ಜೊತೆಗೆ ಅಂದು ಖ್ಯಾತರಾಗಿದ್ದ ಇನ್ನೊಬ್ಬ ಕ್ಯಾಬರೆ ನಟಿ ಹಲಂ। ಹಲಂ ದಕ್ಷಿಣ ಭಾರತದಲ್ಲೆ ಖ್ಯಾತಿಯನ್ನು ಪಡೆದವಳು। ಆದರೆ ಜ್ಯೋತಿಲಕ್ಶ್ಮಿಯ ಹೆಜ್ಜೆ ಮತ್ತು ಎಲ್ ಅರ್ ಈಶ್ವರಿಯ ಧ್ವನಿಯ ಸಂಗಮ ಮಾತ್ರ ಬೇರೆ ರೀತಿಯದು। ಅಲ್ಲಿ ಒಂದು ರೀತಿಯ ತಾದ್ಯಾತ್ಮ। ಶರೀರ ಮತ್ತು ಶಾರೀರ ಬೇರೆ ಅಂತಾ ಅನ್ನಿಸದಷ್ಟು ಹೊಂದಾಣಿಕೆ।
ಜನ ಬದಲಾದ ಹಾಗೆ ಸಿನೆಮಾ ಬದಲಾಯಿತು। ಚಿತ್ರಗಳಲ್ಲಿ ಕ್ಯಾಬರೆ ನರ್ತಕಿಯರ ಕೆಲಸವನ್ನು ನಾಯಕಿಯರೇ ಮಾಡತೊಡಗಿದರು। ಹೀಗಾಗಿ ಕ್ಯಾಬರೆ ನರ್ತಕಿಯರು ಚಿತ್ರರಂಗದಿಂದ ಮರೆಯಾಗತೊಡಗಿದರು। ಕ್ಯಾಬರೆ ನರ್ತಕಿಯರು ಹೋದ ಮೇಲೆ, ಎಲ್ ಆರ್ ಈಶ್ವರಿಯ ಬೇಡಿಕೆಯೂ ಕಡಿಮೆಯಾಯಿತು। ಆಕೆ ಸಾವಕಾಶವಾಗಿ ನೇಪಥ್ಯಕ್ಕೆ ಸರಿಯತೊಡಗಿದಳು। ಮೊನ್ನೆ ಬೆಂಗಳೂರಿಗೆ ಬಂದಿದ್ದ ಆಕೆ ಕಾರ್ಯಕ್ರಮವೊಂದರಲ್ಲಿ ಹಾಡಿದಳು। ಆ ಕಾರ್ಯಕ್ರಮದ ಕ್ಯಾಸೆಟ್ ಕೇಳುತ್ತ ಕುಳಿತೆ। ಅವಳ ಧ್ವನಿ ವಯಸ್ಸಿಗೆ ತಕ್ಕಂತೆ ಸ್ವಲ್ಪ ನಡುಗುತ್ತಿದೆ। ಮೊದಲಿನ ಮಾದಕತೆ ಕಡಿಮೆಯಾಗಿದೆ। ಕಣ್ಣು ಕತ್ತಿಯ ಅಂಚು ಎಂದು ಹೇಳಿದಾಗ ಕತ್ತಿಯ ಮೊನಚು ಮೊದಲಿನಂತಿಲ್ಲ ಎಂದು ಅನ್ನಿಸುತ್ತದೆ।
ಇದನ್ನೆಲ್ಲ ಕುಳಿತು ಯೋಚಿಸುವಾಗ ಮತ್ತೆ ನಾನು ಹಲವಾರು ವರ್ಷಗಳಷ್ಟು ಹಿಂದಕ್ಕೆ ಓಡುತ್ತೇನೆ। ಮೊದಲ ಬಾರಿ ಅವಳ ಹಾಡು ಕೇಳಿದ್ದು ನೆನಪಾಗುತ್ತದೆ। ಆಗಿನ ಹಾಡು ಮತ್ತು ಈಗಿನ ಸಂದರ್ಭವನ್ನು ಹೋಲಿಸಲು ಯತ್ನಿಸುತ್ತೇನೆ। ಆದರೆ ಯಾಕೋ ಹೋಲಿಸುವುದಕ್ಕೂ ಸಾಧ್ಯವಾಗುವುದಿಲ್ಲ। ಆಗ ಸುಮ್ಮನೆ ಮನಸ್ಸಿನಲ್ಲೇ ಹೇಳಿಕೊಂಡೆ। ಈಕೆ ಈಶ್ವರಿಯಲ್ಲ, ಆಗಿನ ಈಶ್ವರಿಯೇ ಬೇರೆ, ಈ ಈಶ್ವರಿಯೇ ಬೇರೆ !
ಮತ್ತೆ ನನ್ನ ಕಚೇರಿಯ ಕಪಾಟಿನಲ್ಲಿ ಈಶ್ವರಿಯ ಹಳೆಯ ಹಾಡಿನ ಕ್ಯಾಸೆಟ್ ಗಾಗಿ ಹುಡುಕಿದೆ। ಸಿಕ್ಕಿದ ಆ ಕ್ಯಾಸೆಟ್ ಅನ್ನು ಹಾಗೆ ಪ್ರೀತಿಯಿಂದ ಮುಟ್ಟಿದೆ। ಏನೋ ಕಳೆದುಕೊಂಡಿದ್ದು ಸಿಕ್ಕಿದ ಹಾಗೆ ಸಮಾಧಾನವಾಯಿತು.

1 comment:

Chamaraj Savadi said...

ಸರ್,
ನಮ್ಮ ಯೌವನದ ಪ್ರಾರಂಭವನ್ನು ಸೂಚಿಸುವ ಮಾನದಂಡಗಳು ಕಾಲಕಾಲಕ್ಕೆ ಬದಲಾಗುತ್ತ ಹೋಗುತ್ತವೇನೋ. ನಿಮ್ಮ ಕಾಲಕ್ಕೆ ಎಲ್.ಆರ್. ಈಶ್ವರಿ, ನಮ್ಮ ಕಾಲಕ್ಕೆ ಕ್ಯಾಬರೇ ಡ್ಯಾನ್ಸರ್ ಅನುರಾಧಾ. ಬಹುಶಃ ಈಗಿನ ಕಾಲದ ಯುವಕರಿಗೆ ಎಲ್ಲ ನಟಿಯರೂ ಯೌವನ ಆಗಮನದ ಸಂಕೇತಗಳೇನೋ!

ದೇಹಕ್ಕಾದಂತೆ, ಧ್ವನಿಗೂ ವಯಸ್ಸಾಗುತ್ತದೆ. ಅದು ಮನಸ್ಸಿಗೆ ಆಗದಂತೆ ನೋಡಿಕೊಳ್ಳುವುದು ಮಾತ್ರ ನಿಜಕ್ಕೂ ಸವಾಲಿನ ಸಂಗತಿಯೇ!

- ಚಾಮರಾಜ ಸವಡಿ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...