Tuesday, July 22, 2008

ಗಾಂಧಿ ಮತ್ತು ................

ನಿನ್ನೆ ಲೋಕಸಭೆಯಲ್ಲಿ ನಡೆದ ಘಟನೆ ಜನತಂತ್ರಪ್ರೇಮಿಗಳಿಗೆಲ್ಲ ಆಘಾತವನ್ನು ಉಂಟುಮಾಡಿದ್ದರೆ ಅದು ತುಂಬಾ ಸಹಜ. ನಮ್ಮ ಪ್ರತಿನಿಧಿಗಳು, ಎಲ್ಲರ ಎದುರಿಗೆ ಹಣ ಥೈಲಿಯನ್ನು ಪ್ರದರ್ಶಿಸಿದ್ದು ಭಾರತದ ಪ್ರಜಾಪ್ರಭುತ್ವದ ಇತಿಹಾಸಲ್ಲಿ ಒಂದು ಕಪ್ಪು ಚುಕ್ಕೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇದು ಏಕಾಏಕಿ ನಡೆದ ಘಟನೆಯಲ್ಲ. ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಡೆದ ಜೆ ಎಮ್ ಎಮ್ ಹಗರಣ ಎಲ್ಲರಿಗೂ ನೆನಪಿದೆ. ಹಾಗೆ ಕರ್ನಾಟಕದಲ್ಲಿ ಇತ್ತೀಚಿಗೆ ನಡೆದ ರಾಜಕೀಯ ವಿದ್ಯಮಾನಗಳು. ಅಂದರೆ ಭಾರತದ ರಾಜಕಾರಣ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಇಂತಹ ಸ್ಥಿತಿಗೆ ಏನು ಕಾರಣ ಯೋಚಿಸಿ ನೋಡಿ. ಸ್ವಾತಂತ್ರ್ಯಾನಂತರದ ಮೊದಲ ಹತ್ತು ವರ್ಷಗಳು ದೇಶ ಸ್ವಾತಂತ್ರ್ಯದ ಖುಶಿಇಯಲ್ಲೇ ಸಂಭ್ರಮದಲ್ಲೇ ಕಳೆದು ಹೋಯಿತು. ಹಾಗೆ ಆಗಿನ ರಾಜಕಾರಣಿಗಳು ಮಹಾತ್ಮಾ ಗಾಂಧಿಯವರ ನೆರಳಿನಲ್ಲಿ ಬೆಳೆದವರೂ ಅವರ ಹೆಸರು ಹೇಳಿ ಮತಪಡೆಯುವವರೂ ಆಗಿದ್ದರಿಂದ ಈಗಿನಷ್ಠು ಕೆಟ್ಟಿರಲಿಲ್ಲ. ೭೦ ರ ದಶಕದಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಯುಗ ಪ್ರಾರಂಭವಾಯಿತು. ಮಹಾತ್ಮಾ ಗಾಂಧಿಯವರ ಹೆಸರು ಇಂದಿರಾಗಾಂಧಿಯವರ ಹೆಸರಿನಡಿಯಲ್ಲಿ ಮರೆಯಾಯಿತು. ವ್ಯಕ್ತಿ ಪೂಜೆಯನ್ನು ಇಷ್ಟಪಡುತ್ತಿದ್ದ ಇಂದಿರಾ ಭಟ್ಟಂಗಿಗಳ ಬಹುಫರಾಕ್ ಅನ್ನು ತುಂಬಾ ಇಷ್ಟಪಡುತ್ತಿದ್ದರು. ಹಾಗೆ ಭಾರತದ ರಾಜಕಾರಣದಿಂದ ಗಾಂಧಿ ಟೋಪಿ ರಾಜಕಾರಣವನ್ನು ಹೊರದಬ್ಬಿದ್ದರು. ಇಂದಿರಾ ಈಸ್ ಇಂಡಿಯಾ ಎಂಬ ಸ್ಥಿತಿಯನ್ನು ನಿರ್ಮಿಸಿಬಿಟ್ಟರು. ಆಗಲೆ ರಾಜಕೀಯ ಮಧ್ಯವರ್ತಿಗಳು, ಧಗಾಕೋರರು, ಬೇರೆ ಬೇರೆ ಹಿತಾಸಕ್ತಿಗಳನ್ನು ರಕ್ಷಿಸುವ ಲಾಬಿಗಳ ಏಜೇಂಟರು ರಾಜಕೀಯದಲ್ಲಿ ಪ್ರಾಧಾನ್ಯತೆ ಪಡೆಯತೊಡಗಿದರು. ಮಾಜಿ ಡಕಾಯಿತರು. ಕಳ್ಳರು ಸುಳ್ಳರು ಶಾಸಕರಾಗಿ ವಿಜೃಂಭಿಸತೊಡಗಿದರು. ತಾತ್ವಿಕತೆ ಇಲ್ಲದ ರಾಜಕಾರಣ ಪ್ರಾಧಾನ್ಯತೆ ಪಡೆಯತೊಡಗಿದ ಮೇಲೆ ಕಾಂಚಾಣ ರಾಜಕೀಯದಲ್ಲಿ ಅತಿ ಮುಖ್ಯವಾಗತೊಡಗಿತು.
ಕರ್ನಾಟಕದಲ್ಲಿ ಕಳೆದ ಚುನಾವಣೆಯ ನಂತರದ ಸ್ಥಿತಿಯನ್ನೇ ನೋಡಿ. ಗಣಿ ದೊರೆಗಳು ಯಡೀಯೂರಪ್ಪ ಸರ್ಕಾರದಲ್ಲಿ ಯಾರು ಯಾರು ಸಚಿವರಾಗಬೇಕು ಎಂದು ನಿರ್ಧರಿಸುವ ಸ್ಥಿತಿ ಬಂತು. ಸ್ವತಃ ಯಡಿಯೂರಪ್ಪನವರೆ, ಮುಖ್ಯಮಂತ್ರಿಯಾದರೂ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ಅಣತಿಯಂತೆ ನಡೆಯುವಂತಾಯಿತು. ಪಕ್ಷೇತರ ಶಾಸಕರು, ಸರ್ಕಾರಕ್ಕೆ ಬೆಂಬಲ ನೀಡಿದ್ದು, ಜೆಡಿಎಸ್ ಕಾಂಗ್ರೆಸ್ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದು ಗಣಿ ದೊರೆಗಳ ಹಣದ ಥೈಲಿಯ ಪ್ರಭಾವದಿಂದ ಎಂದು ಹೇಳುವ ಅಗತ್ಯವಿಲ್ಲ. ರಾಜ್ಯಕ್ಕೆ ಸುಭದ್ರ ಸರ್ಕಾರ ಬರಲಿ ಎಂಬ ಕಾರಣಕ್ಕೆ ಈ ಶಾಸಕರು ಪಕ್ಷಾಂತರ ಮಾಡಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ನಂಬಿದ್ದರೆ ಅವರಂತಹ ಮೂರ್ಖರು ಇನ್ನೊಬ್ಬರು ಇರಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಹುಮತ ಸಾಧಿಸಲು ಕಾರಣವಾದ ಹಣ, ದೆಹಲಿಯಲ್ಲಿ ಡಾ. ಮನಮೋಹನ್ ಸಿಂಗ್ ಸರ್ಕಾರ ಬಹುಮತ ಸಅಬೀತುಪಡಿಸಲು ಕಾರಣವಾಯಿತು. ಕರ್ನಾಟಕದಲ್ಲಿ ಬಿಜೆಪಿ ಹಣದ ಪ್ರಭಾವ ಬೀರಿ ಶಾಸಕರನ್ನು ಸೆಳೆಯುತ್ತಿದೆ ಎಂದು ಆರೋಪ ಮಾಡಿದ್ದು ಕಾಂಗ್ರೆಸ್. ದೆಹಲಿಯಲ್ಲಿ ಡಾ. ಮನಮೋಹನ್ ಸಿಂಗ್ ಸರ್ಕಾರ ಹಣದ ಪ್ರಭಾವ ಬೀರಿ ವಿಶ್ವಾಸ ಮತ ಗೆದ್ದಿದೆ ಎಂದು ಆರೋಪ ಮಾಡಿದ್ದು ಬಿಜೆಪಿ. ಅಂದರೆ ಹಣದ ಪ್ರಭಾವದಿಂದ ರಾಜಕಾರಣವನ್ನು ರಾಢಿಯನ್ನಾಗಿ ಮಾಡಿದ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ವಿಭಿನ್ನ ಸಂದರ್ಭದಲ್ಲಿ ವಿಭಿನ್ನ ರೂಪದ ನಿಲುಮೆಯನ್ನು ಪ್ರಕಟಿಸಿವೆ. ಕರ್ನಾಟಕದಲ್ಲಿ ಹಣದ ಪ್ರಭಾವದ ಮೂಲಕ ಯಡೀಯೂರಪ್ಪ ಸರ್ಕಾರ ಉಳಿದುಕೊಂಡಿದ್ದು ಕಾಂಗ್ರೆಸ್ ಗೆ ಪಥ್ಯವಲ್ಲ. ದೆಹಲಿಯಲ್ಲಿ ಹಣದ ಪ್ರಭಾವದ ಮೂಲಕ ಡಾ. ಮನಮೋಹನ್ ಸಿಂಗ ಸರ್ಕಾರ ಉಳಿದುಕೊಂಡಿದ್ದು ಬಿಜೆಪಿಗೆ ಪಥ್ಯವಾಗುತ್ತಿಲ್ಲ. ಇದು ನಮ್ಮ ರಾಜಕೀಯ ,ರಾಜಕಾರಣಿಗಳು ಯಾವ ಹಂತ ತಲುಪಿದ್ದಾರೆ ಎಂಬುದನ್ನು ತೋರಿಸುತ್ತದೆ. ಯಾವುದೇ ನೈತಿಕತೆ ಇಲ್ಲದ, ಅಧಿಕಾರವೇ ಪರಮ ಎಂದು ನಂಬಿರುವ ಚಾಂಡಾಲ ರಾಜಕಾರಣಿಗಳು ಇಂದು ದೇಶವನ್ನು ಆಳುತ್ತಿದ್ದಾರೆ. ಅವರಿಗೆಲ್ಲ ರಾಜಕಾರಣ ಎಂದರೆ ವ್ಯಾಪಾರ, ದಂಧೆ. ಇಂಥವರು ನಮ್ಮ ನಾಯಕರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಇವರನ್ನೆಲ್ಲ ಹೊರದಬ್ಬಿ ಹೊಸ ರಾಜಕಾರಣದ ಕನಸು ಕಾಣುವುದೊಂದೇ ನಾವು ಈಗ ಮಾಡಬಹುದಾದ ಕೆಲಸ,

2 comments:

dinesh said...

baraha tumba chennagide....

ಶ್ರೀದೇವಿ ಕಳಸದ said...

ಸರ್‌, http://kendasampige.com/article.php?id=450 ಈ ಲಿಂಕ್‌ ಗೆ ಹೋಗಿ. ನಿಮ್ಮ ಬ್ಲಾಗ್ ದಾಖಲಾಗಿದೆ