Thursday, August 14, 2008

ಸ್ವಾತಂತ್ರೋತ್ಸವ, ಟೋಪಿ ಮತ್ತು ಪೆಪ್ಪರಮೆಂಟ್ ......

ಸ್ವಾತಂತ್ರೋತ್ಸವ ಎಂದ ತಕ್ಷಣ ನನ್ನ ಮನಸ್ಸು ಹಲವು ವರ್ಷಗಳಷ್ಟು ಹಿಂದಕ್ಕೆ ಓಡುತ್ತದೆ. ಮಲೆನಾಡಿನ ಅ ಮಳೆ. ಅದು ಅಕಾಶವೇ ಕಳಚಿ ಬೀಳುತ್ತದೆಯೇನೊ ಏನ್ನುವ ಹಾಗೆ. ಆ ಮಳೆಯಲ್ಲಿ ಹೊಸ ಬಟ್ಟೆಯನ್ನು ತೊಟ್ಟು ಶಾಲೆಗೆ ಓಡುತ್ತಿದ್ದ ನಾವು. ನಮಗೆ ಆ ಮಳೆಯಲ್ಲಿ ಹೆಜ್ಜೆ ಹಾಕುವುದೇ ಒಂದು ಚಂದ. ರಸ್ತೆಯಲ್ಲಿ ಹರಿಯುತ್ತಿದ್ದ ನೀರನ್ನು ಕಾಲಿನಲ್ಲಿ ಒದ್ದು ಎದೆಯತ್ತರಕ್ಕೆ ಹಾರಿಸಿ ಖುಷಿ ಪಡುತ್ತ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದೆವು. ಶಾಲೆ ತಲುಪಿದ ತಕ್ಷಣ ಮೊದಲು ನಡೆಯುತ್ತಿದ್ದುದು ಪ್ರಭಾತ್ ಪೇರಿ. ಮಳೆಯಲ್ಲಿ ಕೊಡೆ ಹಿಡಿದ ಶಾಲಾ ಮಕ್ಕಳ ಮೆರವಣಿಗೆಯನ್ನು ತಮ್ಮ ತಮ್ಮ ಮನೆಗಳ ಹೆಬ್ಬಾಗಿಲಿನಲ್ಲಿ,. ಅಂಗಡಿಗಳ ಮುಂಭಾಗದಲ್ಲಿ ನಿಂತು ನೋಡುವ ಊರಿನ ಜನ. ಅಂದಿನ ಮಟ್ಟಿಗೆ ನಾವೇ ಹಿರೋಗಳು. ಎಲ್ಲರ ದೃಷ್ಟಿಯೂ ನಮ್ಮ ಮೇಲೆ. ಎಲ್ಲರೂ ನಮ್ಮನ್ನು ನೋಡುತ್ತಿದ್ದಾರೆ ಎಂಬುದೇ ನಮಗೆ ಹಮ್ಮು ಬಿಮ್ಮು ಬರುವಂತೆ ಮಾಡುತ್ತಿತ್ತು.

ಪ್ರಭಾತ್ ಪೇರಿ ಮುಗಿದ ಮೇಲೆ ಸಭಾ ಕಾರ್ಯಕ್ರಮ. ಊರಿನ ಪ್ರಮುಖರು ಬಂದು ಮಾಡುತ್ತಿದ್ದ ಈ ಭಾಷಣ ನಮಗೆ ಅಂತಹ ಸಂತೋಷವನ್ನು ನೀಡುವ ವಿಚಾರ ಆಗಿರಲಿಲ್ಲ. ಆದರೆ ನಾವೆಲ್ಲ ಕಾಯುತ್ತಿದ್ದುದು ಸಭೆ ಮುಗಿದ ಮೇಲೆ ನಮಗೆ ಹಂಚುತ್ತಿದ್ದ ಕೆಂಪನೆಯ ಪೆಪ್ಪರಮೆಂಟಿಗಾಗಿ. ಲಿಂಬು ಎಂದು ಕರೆಯುತ್ತಿದ್ದ ಈ ಪೆಪ್ಪರಮೆಂಟು ಕೈಗೆ ಬಂದ ಮೇಲೆ ನಾವೆಲ್ಲ ಕೂಗುತ್ತ, ಜಿಗಿಯುತ್ತ ಮನೆಗೆ ಹಿಂತಿರುಗುತ್ತಿದ್ದೆವು.

ಬಹಳ ವರ್ಷಗಳ ಕಾಲ ನನಗೆ ಸ್ವಾತಂತ್ರೋತ್ಸವ ಎಂದರೆ ಹುಳಿ ಮತ್ತು ಸಿಹಿಯ ಸೇರಿದ ಪೆಪ್ಪರಮೆಂಟ್ ನೆನಪಾಗುತ್ತಿತ್ತು. ಹಳ್ಳಿಯ ಹೈದರಾದ ನಮಗೆ ಪೆಪ್ಪರಮೆಂಟು ಸಿಗುತ್ತಿದ್ದುದು ಅಪರೂಪವಾದ್ದರಿಂದ, ನಾವೆಲ್ಲ ಇಂತಹ ರಾಷ್ತ್ರೀಯ ಹಬ್ಬಗಳಿಗಾಗಿ ಕಾಯುತ್ತಿದ್ದೆವು. ನಂತರವೂ ಕೂಡ ಈ ಪೆಪ್ಪರಮೆಂಟು ಸ್ವಾತಂತ್ರ್ಯ ಉತ್ಸವದ ಜೊತೆ ತಳಕು ಹಾಕಿಕೊಂಡು ನನ್ನ ಮನಸ್ಸಿನಲ್ಲಿ ಸ್ಥಾಯಿ ಭಾವವಾಗಿ ಉಳಿದುಬಿಟ್ಟಿತು. ಹಾಗೆ ಪೆಪ್ಪರಮೆಂಟನ್ನು ಬಿಟ್ಟು ಸ್ವಾತಂತ್ರೋತ್ಸವನ್ನು ಕಲ್ಪಿಸಿಕೊಳ್ಳುವುದು ನನಗೆ ಸಾಧ್ಯವಾಗದ ಸ್ಥಿತಿಯನ್ನು ನಾನು ತಲುಪಿಬಿಟ್ಟಿದ್ದೆ.

ಈಗಲೂ ನನಗೆ ಸ್ವಾತಂತ್ರ್ಯ ಎಂದ ತಕ್ಷಣ ಪೆಪ್ಪರಮೆಂಟ್ ನೆನಪಾಗುತ್ತದೆ. ಸ್ವಾತಂತ್ರ್ಯದ ಪೆಪ್ಪರಮೆಂಟನ್ನು ಚಪ್ಪರಿಸುವ ಕೆಲವೇ ಕೆಲವು ಜನ ನೆನಪಾಗುತ್ತಾರೆ. ಅವರಲ್ಲಿ ನಮ್ಮ ಜನಪ್ರತಿನಿಧಿಗಳು ಕಣ್ಣ ಮುಂದೆ ಬರುತ್ತಾರೆ. ಹಾಗೆ ಗಾಂಧಿ ಟೋಪಿ ನೆನಪಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ಆಸ್ತಿ ಮನೆಯನ್ನು ಕಳೆದುಕೊಂಡ ನನ್ನ ಅಜ್ಜ ಎಂದೂ ತನ್ನ ತಲೆಯ ಮೇಲಿನ ಗಾಂಧಿ ಟೋಪಿಯನ್ನು ತೆಗೆಯುತ್ತಿರಲಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ದಿನ ನನ್ನ ತಲೆಯ ಮೇಲೂ ಟೋಪಿ ಶಾಲೆಗೆ ಕಳುಹಿಸುತ್ತಿದ್ದ ಅಜ್ಜ. ನಂತರದ ದಿನಗಳಲ್ಲಿ ಕೆಲವು ರಾಜಕಾರಣಿಗಳ ತಲೆಯ ಮೇಲೆ ನಾನು ಈ ಟೋಪಿಯನ್ನು ನೋಡುತ್ತಿದ್ದೆ. ಕೊನೆಗೆ ಗಾಂಧಿ ಎಲ್ಲರ ಮನಸ್ಸಿನಲ್ಲಿ ಮರೆಯಾದ ಹಾಗೆ, ಟೋಪಿ, ಕಾಂಗ್ರೆಸ್ಸಿಗರ ತಲೆಯಿಂದ ಹಾರಿ ಅದೃಶ್ಯವಾಯಿತು. ಅದೃಶ್ಯ ರೂಪದಲ್ಲೆ ಜನರ ತಲೆಯ ಮೇಲೆ ಬಂದು ಕುಳಿತಿತು. ರಾಜಕಾರಣಿಗಳು ಈ ಟೋಪಿಯನ್ನು ಗೊತ್ತಾಗದ ಹಾಗೆ ಜನರ ತಲೆಯ ಮೇಲೆ ಇಟ್ಟು ಬಿಟ್ಟರು. ಈಗ ಕಾಂಗ್ರೆಸ್ಸಿಗರು ಸ್ವಾತಂತ್ರೋತ್ಸ್ವದ ದಿನ ಟೋಪಿಯನ್ನು ಹೊರಕ್ಕೆ ತೆಗೆದು ತಲೆಯ ಮೇಲಿಟ್ಟುಕೊಂಡು ಪಕ್ಷದ ಕಚೇರಿಗೆ ಬಂದು ಧ್ವಜ ವಂದನೆಯಲ್ಲಿ ಪಾಲ್ಗೊಳ್ಳುತ್ತಾರೆ.

ಸ್ವಾತಂತ್ರೋತ್ಸವ ಎಂದ ತಕ್ಷಣ ಟೋಪಿ ಮತ್ತು ಪೆಪ್ಪರಮೆಂಟು ಹಲವು ಅರ್ಥಗಳನ್ನು ಮನಸ್ಸಿನಲ್ಲಿ ಮೂಡಿಸುತ್ತದೆ. ಸ್ವಾತಂತ್ರ್ಯಾ ನಂತರದ ಸ್ಥಿತಿಯನ್ನು ಟೋಪಿ ಮತ್ತು ಪೆಪ್ಪರಮೆಂಟು ಅದ್ಭುತವಾಗಿ ವಿವರಿಸುತ್ತದೆ ಎಂದು ಅನ್ನಿಸುತ್ತದೆ. ತಲೆಯ ಮೇಲೆ ಟೋಪಿ ಹಾಕಿ ಬಾಯಲ್ಲಿ ಪೆಪ್ಪರಮೆಂಟು ಇಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ನಮ್ಮ ತಲೆಯ ಮೇಲೆ ಇಟ್ಟ ಟೋಪಿಯನ್ನು ಮುಟ್ಟಿ ನೋಡಿಕೊಂಡು, ಈ ಟೋಪಿ ಎಷ್ಟು ಚೆನ್ನಾಗಿದೆ ಎಂದು ನಾವೆಲ್ಲ ಉದ್ಘಾರ ತೆಗೆಯುತ್ತಿದ್ದೇವೆ..

ಕಳೆದ ವರ್ಷ ಸ್ವಾತಂತ್ರೋತ್ವದ ಸಂದರ್ಭದಲ್ಲಿ "ನಿಮಗೆ ಗಾಂಧಿ ಗೊತ್ತಾ ?" ಎಂಬ ಪ್ರಶ್ನೆಯನ್ನು ಸಾರ್ವಜನಿಕರಿಗೆ ಕೇಳುವಂತೆ ನಮ್ಮ ಹುಡುಗರಿಗೆ ಹೇಳಿದ್ದೆ. ಅವರಿಂದ ಬಂದ ಉತ್ತರವನ್ನು ನಮ್ಮ ವಾಹಿನಿಯಲ್ಲಿ ಪ್ರಸಾರ ಮಾಡಿದ್ದೆವು. ಬಹಳಷ್ಟು ಜನರಿಗೆ ಗೊತ್ತಿದ್ದ ಗಾಂಧಿಯೇ ಬೇರೆ. ಈ ವರ್ಷ ನಿಮಗೆ ರಾಷ್ಟ್ರ ಗೀತೆ ಗೊತ್ತಾ, ಗೊತ್ತಿದ್ದರೆ ಹಾಡಿ ಎಂದು ಕೇಳಿದ್ದೆವು. ಬಹಳಷ್ಟು ಜನರಿಗೆ ಕರ್ನಾಟಕದ ನಾಡ ಗೀತೆ ಮತ್ತು ರಾಷ್ಟ್ರಗೀತೆಯ ನಡುವಿನ ವ್ಯತ್ಯಾಸವೂ ಗೊತ್ತಿರಲಿಲ್ಲ. ಯಾರೊಬ್ಬರೂ ಸರಿಯಾಗಿ ರಾಷ್ಟ್ರ ಗೀತೆಯನ್ನು ಹಾಡಲೇ ಇಲ್ಲ !

ನಾವು ಗಾಂಧಿ ಎಂದ ತಕ್ಷಣ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಪೂಜಾ ಗಾಂಧಿಯ ಬಗ್ಗೆ ಮಾತನಾಡುವ ಸ್ಥಿತಿಯಲ್ಲಿದ್ದೇವೆ. ಯಾರಾದರೂ ಕುಡಿಯದಿದ್ದರೆ, ಪರಸ್ರ್ತ್ರಿ ಸಂಗ ಮಾಡದಿದ್ದರೆ, ಅವನೋ, ಗಾಂಧಿ ನನಮಗ ಏನಕ್ಕೂ ಪ್ರಯೋಜನ ಇಲ್ಲ ಎಂದು ಮಾತನಾಡುವುದನ್ನು ಕೇಳುತ್ತೇವೆ. ಇವತ್ತಿನ ಯಾವುದೇ ಒಬ್ಬ ಹುಡುಗಿಯ ಮುಂದೆ ಒಂದು ಪ್ರಸ್ತಾವನೆಯನ್ನು ಇಡಿ. ಈ ಹುಡುಗ ತುಂಬಾ ಒಳ್ಳೆಯವ, ಯಾವುದೇ ಚಟವಿಲ್ಲ, ನೀನು ಮದುವೆಯಾಗಬಹುದು ಎಂದರೆ ಆಕೆ ಉತ್ತರ ನೀಡುತ್ತಾಳೆ: ಗಾಂಧಿನಾ ನನಗೆ ಬೇಡ !

ಇದು ಸ್ವಾತಂತ್ರ್ಯ ಬಂದ ಮೇಲೆ ನಾವು ಹಾಕಿಸಿಕೊಂಡ ಟೋಪಿ. ಹಾಗೂ ನಮ್ಮ ಬಾಯಲ್ಲಿ ಚಪ್ಪರಿಸುತ್ತಿರುವ ಪೆಪ್ಪರಮೆಂಟು. ನಾನು ನನ್ನ ಮನಸ್ಸಿನಲ್ಲಿ ಬಂದ ಈ ಮಾತುಗಳನ್ನು ಹೇಳುವಾಗ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕೆಂಪು ಕೋಟೆಯ ಮೇಲಿನಿಂದ ಭಾಷಣ ಮಾಡಿ ಮುಗಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಮಾಣೇಕ್ ಷಾ ಮೈದಾನದಲ್ಲಿ ಭಾಷಣ ಕುಟ್ಟುತ್ತಿದ್ದರು. ಬೆಂಗಳೂರಿನ ರಸ್ತೆ ನಿರ್ಜನವಾಗಿದ್ದು ಜನ ಸ್ವಾತಂತ್ರ್ಯದ ರಜೆಯ ಸವಿಯನ್ನು ಅನುಭವಿಸುತ್ತಿದ್ದರು.ಆಗಲೂ ನಾನು ಹುಡುಕಿತ್ತಿದ್ದುದು ಅದೇ ಟೋಪಿ ಮತ್ತು ಪೆಪ್ಪರಮೆಂಟ್ ಗಾಗಿ. ಹಾಗೆ ನನ್ನ ಅರ್ಧ ಬೋಳಾದ ತಲೆಯನ್ನು ಮುಟ್ಟಿಕೊಂಡೆ. ಅಲ್ಲಿ ಟೋಪಿ ಬಂದು ಕುಳಿತು ನಗುತ್ತಿತ್ತು. ನನ್ನ ಬಾಯಲ್ಲಿ ಅದೇ ಪೆಪ್ಪರಮೆಂಟು, ಇದನ್ನು ಇಟ್ಟವರು ಯಾರು ಎಂಬುದನ್ನು ಯೋಚಿಸದೇ ನಾನು ಪೆಪ್ಪರಮೇಂಟಿನ ಸವಿಯನ್ನು ಸವಿಯತೊಡಗಿದೆ.

2 comments:

Chamaraj Savadi said...

ನಿಜ ಸರ್‌, ಟೋಪಿ ಮತ್ತು ಪೆಪ್ಪರ್‌ಮಿಂಟ್‌ ನಮ್ಮ ಬಾಲ್ಯದ ನೆನಪೂ ಹೌದು. ಈಗ ನೆನಪಿಸಿಕೊಂಡರೆ ಅದು ವ್ಯಥೆಯೂ ಹೌದು.

ಈಗ ತಾನೆ ಅಂಕಲ್‌ಗಳಾಗುತ್ತಿರುವ ವಯಸ್ಸಿನ ನಮಗೆ ಕೂಡ ಟೋಪಿ ಎಷ್ಟು ಪುರಾತನವಾಗಿಬಿಟ್ಟಿತು ಎಂದು ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ. ರಾಜಕೀಯ ತುಂಬ ಬದಲಾಗಿದೆ. ಏಕೆಂದರೆ, ನಮ್ಮ ಜನ ಕೂಡ ತುಂಬ ತುಂಬ ಬದಲಾಗಿದ್ದಾರೆ. ಎಷ್ಟೆಂದರೂ ರಾಜಕಾರಣಿಗಳು ನಮ್ಮ ಪ್ರತಿನಿಧಿಗಳು ತಾನೆ? ಅವರು ನೂರಕ್ಕೆ ನೂರು ನಮ್ಮನ್ನೇ ಪ್ರತಿನಿಧಿಸುತ್ತಿದ್ದಾರೆ.

ನಮ್ಮ ಕಿವಿಗೆ ನಿತ್ಯ ಏನು ಬೀಳುತ್ತದೋ, ನಿತ್ಯ ನಮ್ಮ ಕಣ್ಣುಗಳು ಏನನ್ನು ನೋಡುತ್ತೇವೆಯೋ ಅದೇ ತಾನೆ ನಮಗೆ ತಕ್ಷಣ ನೆನಪಾಗುವುದು. ಇವತ್ತು ನಮ್ಮ ಕಿವಿಗೆ ಬೀಳುವುದು ಸಿನಿಮಾ ಹಾಡುಗಳು, ಕಾಣುತ್ತಿರುವುದೂ ಅವರನ್ನೇ. ರಾಜಕಾರಣ ಎಂದರೆ ಇಂದಿರಾ ಗಾಂಧಿ ಸಂತಾನ. ಹೀಗಿರುವಾಗ, ಜನಸಾಮಾನ್ಯ ತನ್ನ ನಿತ್ಯ ಜೀವನದಲ್ಲಿ ಕಾಣದ, ಕೇಳದ ಆದರ್ಶವನ್ನು ಹೇಗೆ ವ್ಯಕ್ತಪಡಿಸಿಯಾನು?

ಭಾರತ ಗೆದ್ದಾಗ ಮಾತ್ರ ಬಾವುಟ ಹೊರಬರುತ್ತದೆ. ರಾಷ್ಟ್ರೀಯ ದಿನಗಳಂದು ಮಾತ್ರ ನಮಗೆ ದೇಶಪ್ರೇಮದ ನೆನಪಾಗುತ್ತದೆ. ಕ್ರಮೇಣ ಇದೂ ಒಂಥರಾ ಶುಷ್ಕ ಆಚರಣೆಯಾಗಿ, ರಾಷ್ಟ್ರಗೀತೆಗೂ ಪ್ರಾಯೋಜಕರು ಹುಟ್ಟಿಕೊಂಡರೆ ಅಚ್ಚರಿಯಲ್ಲ.

ಸಮಯೋಚಿತ ಬರಹ. ಓದಿದರೆ ಖುಷಿಗಿಂತ ವಿಷಾದ ಹೆಚ್ಚಾಗುತ್ತದೆ.

- ಚಾಮರಾಜ ಸವಡಿ

gosuba said...

ಸರ್‍, ನಿಮ್ಮ ಲೇಖನ ಸಾಂದರ್ಭಿಕ ಹಾಗೂ ಔಚಿತ್ಯ ಪೂರ್ಣ.
ಹತ್ತಾರು ಗಾಂಧಿಗಳ ನಡುವೆ ಮೋಹನ ದಾಸ್ ಕರಮ್ ಚಂದ್ ಗಾಂಧಿ ನೆನಪಾಗುವುದು ಅಪರೂಪವಾಗುತ್ತಿದೆ.ಸಿನಿಮಾ ಚಿತ್ರ ಮಂದಿರದೊಳಗಿನ ಗಾಂಧಿ ಕ್ಲಸ್ ನಿಂದ ನೀವು ಹೇಳುವಂತೆ ಇಂದಿನ ಸಭ್ಯ ವ್ಯಕ್ತಿಯ ಗಾಂಧಿ ಬಿರುದಿನವರೆಗೆ ಗಾಂಧಿ ಹೆಸರು ಯಾವುದೋ ಅವಗಣನೆಗೊಳಗಾದ ಪದವಾಗುತ್ತಿರುವುದು ವಿಷಾದನೀಯ. ಮುಂದೊಂದು ದಿನ ಗಾಂಧೀಜಿ ನೆನಪು ಸ್ವಾತಂತ್ರ ಹೋರಾಟದ ಜೊತೆಗುಳಿಯದೇ ಮಕ್ಕಳ ಮೆಚ್ಚಿನ ಕಾರ್ಟೂನ್ ಚಿತ್ರವಾಗಿಬಿಡಬಹುದೇ ಎಂಬ ಆತಂಕವೂ ನನ್ನ ಕಾಡುತ್ತದೆ.ಪ್ರಸ್ತುತ ಅಧಿಕಾರ,ಹಣದ ವ್ಯಾಮೋಹಕ್ಕೆ ಬಲಿಯಾಗಿರುವ ಬಹುತೇಕ ರಾಜಕಾರಣಿಗಳಿಗೆ ಸ್ವಾತಂತ್ರ ಹೋರಾಟದಲ್ಲಿ ಮಡಿದವರ ಬೆಲೆ ಗೊತ್ತಿಲ್ಲ. ಹಾಗಾಗಿ ಕೆಲವೊಮ್ಮೆ ಇಂದು ನಾವು ಪರಕೀಯರ ದೌರ್ಜನ್ಯಕ್ಕಿಂತ ಭಿನ್ನವಾದ ಸ್ಥಿತಿಯಲ್ಲಿದ್ದೇವೆ ಎಂದು ಅನ್ನಿಸುವುದೂ ಇಲ್ಲ. ಸ್ವಾತಂತ್ರ ದಿನಾಚರಣೆ ದಿನ ಗಾಂಧಿ ಟೋಪಿ ಎಷ್ಟು ಸುಂದರ..
ನನ್ನ ಬಾಲ್ಯದಲ್ಲಿ ನಾನು ನಮ್ಮ ತಂದೆಯವರನ್ನು ಕೇಳುತ್ತಿದ್ದೆ , ಅಪ್ಪ.. ಗಾಂಧಿ ಟೋಪಿ ಗಾಂಧಿ ತಲೆಯ ಮೇಲಿರದೇ ನೆಹರು ತಲೆ ಮೇಲೆ ಯಾಕಿರುತ್ತೇ ಅಂತಾ... ಬಹುಶಃ ಅದು ಅಧಿಕಾರದ ಅಂಕುಶ ಹಿಡಿದವರಿಗೆ ಒಪ್ಪುತದೆನೋ ಅಂತಾ ಈಗ ಅನ್ನಿಸುತ್ತಿದೆ. ಹಾಗೆಯೇ ಜನಸಾಮಾನ್ಯರಿಗೆ ಗಾಂಧಿ ಟೋಪಿ ಹಾಕಿ (ಪರೋಕ್ಷವಾಗಿ) ಜನಪ್ರತಿನಿಧಿಗಳು ಅಧಿಕಾರದ ಉಪ್ಪರಿಗೆ ಮೇಲೆ ರಾಜ ವೈಭೋಗ ಅನುಭವಿಸುತ್ತಿದ್ದಾರೆ.ಇವೆಲ್ಲದರ ಮಧ್ಯೆ ಜನಸಾಮಾನ್ಯನಿಗೆ ಸ್ವಾತಂತ್ರವೆಂಬ ಆ ಪೆಪ್ಪರಿಮೆಂಟಿನ ಸ್ವಲ್ಪ ಸಿಹಿ ಹಾಗೆ ಉಳಿಯಲಿ ಅಲ್ಲವೇ...
ಹೀಗೆ ಬರೆಯುತ್ತಿರಿ.
ಮನಸ್ಸುಗಳ ನೇರ ಸಂವಾದಕ್ಕೆ ಇದುವೇ ಒಳ್ಳೇ ಮಾರ್ಗ ಅಲ್ಲವೇ..

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...