Friday, August 22, 2008

ಶಬ್ದಗಳು ಮತ್ತು ಪಾವಿತ್ರ್ಯತೆ

ಮಂತ್ರಗಳು ಪವಿತ್ರವಾ ? ಅಪವಿತ್ರವಾ ? ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಇದನ್ನೆಲ್ಲ ನಾನು ನೋಡುವ ರೀತಿಯೇ ಬೇರೆ. ಪವಿತ್ರ ಅಪವಿತ್ರ ಎಂಬುದು ಅವರವರ ಭಾವಕ್ಕೆ ಭಕುತಿಗೆ ಸಂಬಂಧಿಸಿದ್ದು. ಹೀಗಾಗಿ ಪವಿತ್ರವೋ ಅಲ್ಲವೋ ಅನ್ನುವುದು ನನಗೆ ಅಷ್ಠು ಮುಖ್ಯವಲ್ಲ. ಆದರೆ ನಾನು ಶಬ್ದಗಳನ್ನು ಕೇವಲ ಅಕ್ಷರಗಳ ಸಮೂಹ ಎಂದು ನಾನು ಭಾವಿಸಿಲ್ಲ. ಶಬ್ದಗಳು ಬಳಕೆಯಿಂದ ಅರ್ಥವನ್ನು ಪಡೆಯುತ್ತವೆ. ಹಾಗೆ ಶಬ್ದಕ್ಕೆ ಭಾವ ತುಂಬುವುದು ಎಂದರೆ, ಅದಕ್ಕೆ ಜೀವವನ್ನು ತುಂಬುವುದು. ಜೀವ ಪಡೆದ ಶಬ್ದಗಳು ವಿಭಿನ್ನ ಶಕ್ತಿಯನ್ನು ಹೊಂದುತ್ತವೆ.


ನನಗೆ ಈ ವಿಚಾರದಲ್ಲಿ ಕುತೂಹಲವಿದೆ. ಒಂದು ಶಬ್ದ ಎಂದರೆ ನಾದವೂ ಸಹ. ಹಾಗೆ ಸ್ವರ. ಶಬ್ದದ ಸತತವಾದ ಉಚ್ಚಾರ ಆಶಬ್ದವನ್ನು ಸಬಲಗೊಳಿಸುತ್ತದೆಯಾ ? ಆ ಶಬ್ದಕ್ಕೆ ಉಚ್ಚಾರಣೆ ನೀಡುವಕೊದುಗೆಯಾವರೀತಿಯದು ? ನಾವು ಯಾವುದೇ ಶಬ್ದವನ್ನು ಉಚ್ಚರಿಸಲಿ, ಹೀಗೆ ಉಚ್ಚಾರಣೆ ಮಾಡುವಾಗ ನಾವು ಕೆಲವೊಮ್ಮೆ ಗಾಳಿಯನ್ನು ಒಳಗೆ ಎಳೆದುಕೊಂಡರೆ, ಕೆಲವೊಮ್ಮೆ ಹೊರಕ್ಕೆ ಬಿಡುತ್ತೇವೆ. ಅಂದರೆ ಪ್ರತಿ ಶಬ್ದದ ಉಚ್ಚಾರಣೆ ಕೂಡ ಬೇರೆ ಬೇರೆ ರೀತಿಯ ಉಚ್ವಾಸ ಮತ್ತು ನಿಶ್ವಾಸಕ್ಕೆ ಕಾರಣವಾಗಿರುತ್ತದೆ, ಒಂದು ಶಬ್ದವನ್ನು ಉಚ್ಚರಿಸುವಾಗ ನಾವು ತೆಗೆದುಕೊಳ್ಳುವ ಮತ್ತು ಬಿಡುವ ಶ್ವಾಸದಲ್ಲಿ ವ್ಯತ್ಯಾಸವಿರುತ್ತದೆ. ಒಂದು ಶಬ್ದದ ಉಚ್ಚಾರಣೆ ಮತ್ತು ಸ್ವೀಕಾರದ ಅನುಭವ ಇನ್ನೊಂದು ಶಬ್ದಕ್ಕೆ ಬೇರೆಯಾಗಿರುತ್ತದೆ. ಅಂದರೆ ಪ್ರತಿ ಶಬ್ದಕ್ಕೂ ಪ್ರತ್ಯೇಕವಾದ ಅರ್ಥವಿರುವಂತೆ ಪ್ರತ್ಯೇಕವಾದ ಭಾವ ಶಕ್ತಿಯೂ ಇರುತ್ತದೆ.


ಹೀಗೆ ಪ್ರತ್ಯೇಕ ಅಸ್ಥಿತ್ವವನ್ನು ಹೊಂದಿರುವ ಶಬ್ದಗಳು ಉಂಟು ಮಾಡುವ ಪರಿಣಾಮ ಕೂಡ ಬೇರೆ. ಒಬ್ಬನಿಗೆ ಸೂ.. ಮಗ ಎಂದು ಬೈದರೆ ಆತನಿಗೆ ಸಿಟ್ಟು ಬರುತ್ತದೆ. ಐ ಲವ್ ಯೂ ಎಂದರೆ ಸಂತೋಷವಾಗುತ್ತದೆ. ಯಾಕೆ ? ಈ ಶಬ್ದಗಳು ಬಳಕೆಯಿಂದ ಪಡೆದುಕೊಂಡ ಅರ್ಥ ಇದೆಯಲ್ಲ ಅದು ನಮ್ಮ ಮನಸ್ಸಿನಲ್ಲಿ ಮೂಡಿಸುವ ಪರಿಣಾಮವೇ ಇದಕ್ಕೆ ಕಾರಣ ಅಲ್ಲವೆ ? ಹಾಗಿದ್ದರೆ ಬೇರೆ ಬೇರೆ ಶಬ್ದಗಳು ನಮ್ಮ ಮನಸ್ಸಿನಲ್ಲಿ ಮೂಡಿಸುವ ಭಾವ ತರಂಗಗಳು ಬೇರೆ ಬೇರೆಯಾಗಿರುತ್ತದೆ ಎಂದಂತಾಯಿತು. ಆದರೆ ಈ ವಿಚಾರದಲ್ಲಿಯೂ ಏಕರೂಪತೆ ಅನ್ನುವುದಿಲ್ಲ. ಒಂದು ಶಬ್ದ ಒಬ್ಬನಲ್ಲಿ ಮೂಡಿಸುವ ಭಾವ ಪ್ರತಿಕ್ರಿಯೆ ಇನ್ನೊಬ್ಬನಲ್ಲಿ ಮೂಡಿಸುವ ಪ್ರತಿಕ್ರಿಯೆಗಿಂತ ಬೇರೆ. ಅಂದರೆ ಒಂದು ಶಬ್ದವನ್ನು ಬಳಸುವವ ಒಂದು ಅರ್ಥದಲ್ಲಿ ಬಳಸಿದರೆ ಅದನ್ನು ಕೇಳಿಸಿಕೊಂಡವ ಬೇರೆ ಅರ್ಥದಲ್ಲಿ ಅದನ್ನು ಸ್ವೀಕರಿಸಬಹುದು. ಅಂದರೆ ಒಂದು ಶಬ್ದಕ್ಕೆ ನಿಶ್ಚಿತವಾದ ಅರ್ಥ ಇದೆ ಎಂದುಕೊಂಡರೂ ಅದು ಶಬ್ದವನ್ನು ಕೇಳಿಸಿಕೊಳ್ಳುವವರು ಮತ್ತು ಬಳಸುವವರು ಹೊಸ ಹೊಸ ಅರ್ಥಗಳನ್ನು ನೀಡುತ್ತ ಆ ಶಬ್ದವನ್ನು ಇನ್ನೊಂದು ಸ್ಥರಕ್ಕೆ ಕೊಂಡೊಯ್ಯುತ್ತಲೇ ಇರುತ್ತಾರೆ. ಹೀಗಾಗಿ ಶಬ್ದವನ್ನು ಬಳಸುವವನೆಗೆ ಒಂದು ಶಬ್ದ ನೀಡುವ ಅನುಭವ ಒಂದಾದರೆ, ಅದನ್ನು ಕೇಳಿಸಿಕೊಂಡವನಿಗೆ ನೀಡುವ ಅನುಭವವೇ ಬೇರೆ. ಪ್ರತಿ ಶಬ್ದವನ್ನು ನಾವು ಬಳಸುವುದು ಮತ್ತು ಅರ್ಥೈಸುವುದು ನಮ್ಮ ಅನುಭವದದ ಆಧಾರದ ಮೇಲೆ. ಬೇರೊಬ್ಬರ ಅನುಭವದ ಆಧಾರದ ಮೇಲೆ ಬಳಸಲ್ಪಡುವ ಶಬ್ದ ನಮಗೆ ಅದೇ ಅರ್ಥವನ್ನು ನೀಡಲಾರದು. ಯಾಕೆಂದರೆ ಇನ್ನೊಬ್ಬರ ಅನುಭವ ಎಂದೂ ನಮ್ಮ ಅನುಭವವಾಗಲಾರದು.

ಇದನ್ನೆಲ್ಲ ನೋಡಿದರೆ ಒಂದಂತೂ ಸ್ಪಷ್ಟ. ಶಬ್ದಗಳು ಎಂದರೆ ಅದು ಕೇವಲ ಅಕ್ಷರಗಳ ಜೋಡಣೆ ಮಾತ್ರವಲ್ಲ. ಹಾಗೆ ಶಬ್ದಗಳನ್ನು ಪೊಣಿಸಿ ಸಿದ್ದಪಡಿಸುವ ವಾಕ್ಯಗಳು ಕೂಡ. ಇಂತಹ ಶಬ್ದ ಮತ್ತು ವಾಕ್ಯಗಳು ಮನಸ್ಸಿನಲ್ಲಿ ರೂಪಗೊಂಡ ಹೊರಬರುತ್ತವೆ. ಹಾಗಿದ್ದರೆ, ಶಬ್ದ ಮತ್ತು ವಾಕ್ಯವನ್ನು ಜೋಡಿಸುವ ಮನಸ್ಸು ತನ್ನೆಲ್ಲ ಶಕ್ತಿಯನ್ನು ಈ ಕ್ರಿಯೆಯಲ್ಲಿ ತೊಡಗಿಸುವುದಿಲ್ಲವೆ ? ಹಾಗೆ ತೊಡಗಿಸಿದರೆ ಆ ಮನಸ್ಸಿನಲ್ಲಿ ಶಕ್ತಿ, ಶಬ್ದ ಮತ್ತು ವಾಕ್ಯದಲ್ಲಿ ಪ್ರತಿಬಿಂಬಿತವಾಗಬಲ್ಲದೆ ?

ಹೀಗೆ ಮನಸ್ಸಿನಲ್ಲಿ ಆಕಾರ ಪಡೆದು ಮನಸ್ಸಿನ ಎಲ್ಲ ಶಕ್ತಿಯನ್ನು ತುಂಬಿಸಿಕೊಂಡ ಎಲ್ಲ ಶಬ್ದಗಳೂ ಪವಿತ್ರವೇ ಅಲ್ಲವೆ ?

2 comments:

Chamaraj Savadi said...

ಪ್ರೀತಿಯ ಸರ್‌,

ಭಾಷೆಗೆ ಭಾವನೆಯೇ ಮೂಲಾಧಾರ. ತನ್ನ ಮನಸ್ಸಿನ ಭಾವನೆಯನ್ನು ವ್ಯಕ್ತಪಡಿಸಲು ಮನುಷ್ಯ ಕಂಡುಕೊಂಡ ಅದ್ಭುತ ಅಭಿವ್ಯಕ್ತಿ ಭಾಷೆ. ಹೀಗಾಗಿ ಪ್ರತಿಯೊಂದು ಶಬ್ದವೂ ವಿಶಿಷ್ಟ. ಆ ಕಾರಣಕ್ಕಾಗಿ ಪ್ರತಿಯೊಂದು ಭಾಷೆಯೂ ವಿಶಿಷ್ಟವೇ. ಎಲ್ಲಿಯವರೆಗೆ ಭಾವನೆಗಳು ಇರುತ್ತವೆಯೋ, ಅಲ್ಲಿಯವರೆಗೆ ಆ ಭಾಷೆ ಸಾಯುವುದಿಲ್ಲ. ಅದು ಸಂಸ್ಕೃತವೇ ಇರಲಿ, ಲ್ಯಾಟಿನ್ನೇ ಇರಲಿ, ತನ್ನ ಪಾಡಿಗೆ ತಾನು ಬದುಕುತ್ತ ಹೋಗುತ್ತದೆ. ಅದನ್ನು ಬಳಸುವವರು ಹೆಚ್ಚಿದ್ದರೆ, ಅದರಲ್ಲಿ ತಮ್ಮ ಭಾವನೆಗಳನ್ನು, ನಂಬಿಕೆಗಳನ್ನು, ಪ್ರಯೋಗಗಳನ್ನು ವ್ಯಕ್ತಪಡಿಸುವವರು ಇರುವವರೆಗೆ ಅದು ಬೆಳೆಯುತ್ತಲೇ ಹೋಗುತ್ತದೆ.

ಈ ಅರ್ಥದಲ್ಲಿ ಯಾವ ಭಾಷೆಗೂ ಸಾವಿಲ್ಲ. ಕನ್ನಡ ಸಾಯುತ್ತಿದೆ ಎಂದು ಯಾರಾದರೂ ಕೂಗಾಡಿದರೆ ನನಗೆ ನಗು ಬರುವುದು ಈ ಕಾರಣಕ್ಕೆ. ಕೊನೆಗೆ ಕೂಗಾಡಲಿಕ್ಕಾದರೂ ಕನ್ನಡ ಉಳಿಯುತ್ತದೆ.

ಆದರೆ, ಕೇವಲ ಸಾಹಿತ್ಯದಿಂದ ಮಾತ್ರ ಭಾಷೆಯೊಂದು ಉಳಿಯಲು ಆಗದು. ಜೀವನದ ಪ್ರತಿಯೊಂದು ರಂಗದ ಕೊಡುಗೆಯೂ ಅದರೊಂದಿಗೆ ಗುರುತಿಸಿಕೊಳ್ಳಬೇಕಾಗುತ್ತದೆ. ತಕ್ಷಣಕ್ಕೆ ಶಬ್ದವೊಂದು ಇಲ್ಲದಿದ್ದಾಗ, ಬಳಕೆಯಲ್ಲಿ ಇದ್ದ ಶಬ್ದವನ್ನೇ ರೂಪಾಂತರಗೊಳಿಸಿ (ಅಪಭ್ರಂಶ) ಬಳಸಿಕೊಳ್ಳುತ್ತದೆ. ಕನ್ನಡ ಮಾತಾಡುತ್ತಲೇ ನಾವು ಮೊಬೈಲ್‌, ಎಸ್ಸೆಮ್ಮೆಸ್‌, ಇತ್ಯಾದಿ ಶಬ್ದಗಳನ್ನು ಬಳಸಿದಂತೆ. ಜೀವಂತ ಭಾಷೆಯ ಲಕ್ಷಣವೇ ಸ್ವೀಕರಿಸುವುದರ ಮೂಲಕ ಸಮೃದ್ಧವಾಗುವುದು.

ಹೀಗಾಗಿ, ಭಾಷೆಗೆ ಮೂಲಾಧಾರವಾದ ಶಬ್ದಗಳು ನಮ್ಮ ಬಳಕೆ ಹಾಗೂ ಅದರ ಹಿಂದಿರುವ ಭಾವನೆಯಿಂದಾಗಿ ಜೀವ ಪಡೆದುಕೊಳ್ಳುತ್ತ ಹೋಗುತ್ತವೆ. ಅದೇ ರೀತಿ, ಕೆಲ ಶಬ್ದಗಳು ಮೌಲಿಕತೆ ಕಳೆದುಕೊಂಡು ಸವಕಲಾಗಿ ಅಥವಾ ಮುಪ್ಪಾಗಿ ಹೋಗುತ್ತವೆ. ಶುದ್ಧ ಭಾಷೆ ಎಂಬ ವಾದ ವ್ಯರ್ಥವಾಗುವುದು ಹೀಗೆ.

ಹೊಸ ವಿಚಾರಧಾರೆಗೆ ಪ್ರೇರೇಪಿಸಿತು ನಿಮ್ಮ ಲೇಖನ.

- ಚಾಮರಾಜ ಸವಡಿ

Vimala said...

Howdalla,nanu eediseyalli yochane madillavalla yennisitu.kannadavantoo nimmantavarinda ulide uliyutte.
dhanyavadagalu.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...