Tuesday, October 7, 2008

ಯುವ ಪತ್ರಿಕೋದ್ಯಮಿಗಳಿಗೆ..........

ಬಹಳ ದಿನಗಳಿಂದ ಏನನ್ನೂ ಬರೆದಿಲ್ಲ. ಬರೆಯಬೇಕು ಎನ್ನುವ ಒತ್ತಡ ಇರಲಿಲ್ಲ ಎಂದೇನೂ ಅಲ್ಲ. ಕೆಲಸದ ಗಡಿಬಿಡಿಯಲ್ಲಿ ಬರೆಯಬೇಕು ಎಂದರು ಬರೆಯಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ನಾನು ವಿಸಿಟ್ ಮಾಡಿದ ಹಲವು ಬ್ಲಾಗ್ ಗಳಲ್ಲಿ ನಾನು ಕೆಲಸ ಮಾಡುವ ಮಾಧ್ಯಮದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುವುದನ್ನು ಗಮನಿಸಿದೆ. ಖುಷಿ ಅನ್ನಿಸಿತು.
ಯಾವುದೋ ಒಂದು ಬ್ಲಾಗ್ ನಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಿದ್ದನ್ನು ನನ್ನ ಹುಡುಗರು ಗಮನಕ್ಕೆ ತಂದರು. ಅದರಲ್ಲಿ ಒಂದು ಬ್ಲಾಗ್ ನಲ್ಲಿ, ಅದು ಒಬ್ಬ ಪತ್ರಕರ್ತರು ಬರೆದಿದ್ದು, ನನ್ನ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ನನ್ನನ್ನು ಏಕವಚನದಲ್ಲಿ ಸಂಬೋಧಿಸಿ ನಾನು ಸಹೋದ್ಯೋಗಿಗಳಿಗೆ ಕಿರುಕುಳ ನೀಡುತ್ತಿದ್ದೇನೆ ಎಂದು ಆರೋಪಿಸಲಾಗಿತ್ತು. ಇದನ್ನು ನೋಡಿ ನಕ್ಕು ಸುಮ್ಮನಾಗಬೇಕು ಎಂದುಕೊಂಡೆ. ಆದರೆ ಇವತ್ತಿನ ಪತ್ರಿಕೋದ್ಯಮಿಗಳ ಬಗ್ಗೆ ನನಗಿರುವ ಪ್ರೀತಿ ಮತ್ತು ಕನಿಕರ ನಾಲ್ಕು ಸಾಲು ಬರೆಯುವಂತೆ ಮಾಡಿತು.
ನಾವೆಲ್ಲ ತುರ್ತು ಪರಿಸ್ಥಿತಿಯ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಪತ್ರಿಕೋದ್ಯಮವನ್ನು ಅತಿಯಾಗಿ ಪ್ರೀತಿಸಿ ಅದನ್ನು ಅಪ್ಪಿಕೊಂಡವರು. ಜೊತೆಗೆ ನಾವು ಅಂದರೆ ನನ್ನ ತಲೆಮಾರಿನವರು ಪತ್ರಿಕೋದ್ಯಮಕ್ಕೆ ಬರುವಾಗ ಕರ್ನಾಟಕದಲ್ಲಿ ಮೂರು ಜನಪರ ಚಳವಳಿಗಳಿದ್ದವು. ಆ ಚಳವಳಿಯ ಜೊತೆಗೆ ನಾವು ಬೆಳೆದೆವು, ಬೆಳೆಯುವುದಕ್ಕೆ ಯತ್ನ ಮಾಡಿದೆವು. ಜೊತೆಗೆ ನನ್ನಂತವರನ್ನು ಬೆಳೆಸಲು ಬುದ್ದಿ ಹೇಳಲು ಖಾದ್ರಿ ಶಾಮಣ್ಣ, ವೈ ಎನ್ ಕೆ ಲಂಕೇಶ್ ಅವರಂತಹ ಸಂಪಾದಕರಿದ್ದರು. ಅವರು ಬೈದು ಬುದ್ದಿ ಹೇಳಿ ಬೆಳೆಸುತ್ತಿದ್ದರು. ಇಂತಹ ಸಂಪಾದಕರ ಜೊತೆ ಕೆಲಸ ಮಾಡಿ, ಬೈಸಿಕೊಂಡು ಪತ್ರಿಕೋದ್ಯಮದ ಆಳ ಆಗಲವನ್ನು ತಿಳಿದುಕೊಳ್ಳಲು ನಾವು ಯತ್ನ ಮಾಡಿದೆವು. ಈ ಯತ್ನ ಈಗಲೂ ಮುಂದುವರಿದಿದೆ. ಇಂತವರ ಸಹವಾಸ ನನ್ನಂತವರಿಗೆ ನಿಷ್ಠುರ ಮನಸ್ಥಿತಿಯನ್ನು ಬೆಳೆಸಿತು. ಸತ್ಯವನ್ನು ಸತ್ಯ ಎಂದು ಹೇಳುವ ಎದೆಗಾರಿಕೆ ಬರುವಂತೆ ಮಾಡಿತು. ಯಾವುದೇ ಸಂದರ್ಭದಲ್ಲಿ ಭ್ರಷ್ಠರಾಗದಂತೆ ಕಾದಿದ್ದು ಇಂತವರ ಜೊತೆ ಕೆಲಸ ಮಾಡಿದ ಅನುಭವ,
ಇಂದಿನ ಪತ್ರಿಕೋದ್ಯಮಿಗಳಿಗೆ ಇಂತಹ ಅನುಭವ ಇರುವುದು ಸಾಧ್ಯವಿಲ್ಲ. ಇವರೆಲ್ಲ ಜಾಗತೀಕರಣದ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಪತ್ರಿಕೋದ್ಯಮ ಉಳಿದೆಲ್ಲ ಉದ್ಯಮದಂತೆ ಉದ್ಯಮವಾಗಿ ಪರಿವರ್ತನೆಗೊಂಡಿದ್ದು ನಮಗೆ ಆಫಾತವನ್ನು ಉಂಟು ಮಾಡಿದರೆ, ಹೊಸ ತಲೆ ಮಾರಿನ ಪತ್ರಿಕೋದ್ಯಮಿಗಳಿಗೆ ಇದು ಒಂದು ಸಾಮಾನ್ಯವಾದ ಘಟನೆ. ಜೊತೆಗೆ ಅವರಿಗೆ ಮಾರ್ಗದರ್ಶನ ಮಾಡುವ ಸಂಪಾದಕರೂ ಇಲ್ಲ. ಇರುವ ಬಹುತೇಕ ಸಂಪಾದಕರು, ಪಾರ್ಟ್ ಟೈಮ್ ರಾಜಕಾರಣಿಗಳು. ಜೊತೆಗೆ ಆಡಳಿತ ವರ್ಗ, ರಾಜಕಾರಣಿಗಳು ಮತ್ತು ಉದ್ಯೋಗಿಗಳ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡುವವರು. ಇವರ ಗರಡಿಯಲ್ಲಿ ಬೆಳೆಯುತ್ತಿರುವವರು ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮಿಗಳಾಗುವುದಿಲ್ಲ. ಕೇವಲ ಏಜೆಂಟರುಗಳಾಗುತ್ತಾರೆ. ಇಂತಹ ಏಜೆಂಟರುಗಳಿಗೆ ಪತ್ರಿಕೋದ್ಯಮದ ಇತಿಹಾಸ ಬದ್ಧತೆ ಇರುವುದಿಲ್ಲ. ತಾವು ಬಳಸುವ ಭಾಷೆಯ ಬಗ್ಗೆ ಜ್ನಾನ ಇರುವುದಿಲ್ಲ.
ಇಂದು ಮಾಧ್ಯಮದಲ್ಲಿ ಇರುವವರಲ್ಲಿ ಬಹಳಷ್ಟು ಜನ ಮಾಧ್ಯಮದ ಗ್ಲಾಮರಿನಿಂದ ಬಂದವರು. ಇವರಿಗ್ಎ ಹೇಳುವುದು ಇಷ್ಟೇ. ಸ್ವಲ್ಪ ಓದಿ, ಆಲೋಚನೆ ಮಾಡಿ. ಆರೋಗ್ಯ ಪೂರ್ಣವಾದ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಯತ್ನ ನಡೆಸಿ. ನಿಮ್ಮ ಮನಸ್ಸು ಆರೋಗ್ಯಪೂರ್ಣವಾಗಿರದಿದ್ದರೆ, ಬರವಣಿಗೆ ಆರೋಗ್ಯಪೂರ್ಣವಾಗಿರುವುದಿಲ್ಲ. ಬರವಣಿಗೆ ಆರೋಗ್ಯಪೂರ್ಣವಾಗಿರದಿದ್ದರೆ ಅದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿಬಿಡುತ್ತದೆ. ಜೊತೆಗೆ ಕನಿಷ್ಠ ಮನುಷ್ಯರಿಗೆ ಮನುಷ್ಯ ನೀಡುವ ಕನಿಷ್ಠ ಗೌರವ ನೀಡುವುದನ್ನು ಕಲಿತುಕೊಳ್ಳಿ.

6 comments:

Shree said...

ಸರ್, ನಿಮಗಿರುವಷ್ಟು ಅನುಭವ ನನಗಿಲ್ಲದಿದ್ದರೂ, ನಾವು ಇನ್ನೂ ಪುಟ್ಟ ಮಕ್ಕಳು, ಕಲಿಯುತ್ತಿದ್ದಾರೆ ಅಂದುಕೊಂಡವರೇ ತಾವೆಲ್ಲಾ ತಿಳಿದುಕೊಂಡಿದ್ದೇವೆಂಬ ಭ್ರಮೆಯಲ್ಲಿ ತಾಳ್ಮೆ ತಪ್ಪಿ ವರ್ತಿಸಿದ ಹಲವಾರು ಪ್ರಸಂಗಗಳು ನನಗೂ ಅನುಭವವಾಗಿವೆ, ಮನುಷ್ಯರಾಗಿ ಮನುಷ್ಯರನ್ನು ಗೌರವಿಸಲು ಕಲಿಯಿರೆಂಬ ನಿಮ್ಮ ಸಲಹೆಗೆ ನನ್ನ್ನದು ನೂರಕ್ಕೆ ನೂರು ಸಹಮತವಿದೆ... ಹಿರಿಯರ ಅನುಭವಕ್ಕೆ, ಹಿರಿತನಕ್ಕೆ ಬೆಲೆ ನೀಡಿದರೆ ಕಿರಿಯರಿಗೆ ಅದು ದಾರಿದೀಪವಾಗಬಹುದು...
ಹಾಗೆಯೇ ಹಿರಿಯರು ಕಿರಿಯರ ಜತೆ ವರ್ತಿಸುವಾಗ demoralise ಮಾಡುವಂತಹ ಮಾತುಗಳಾಡದೆ ಮಾರ್ಗದರ್ಶನ ನೀಡುತ್ತ ಮುನ್ನಡೆಯುವುದು, ಅವರ ಬಗ್ಗೆ ಮಹತ್ವದ ನಿರ್ಧಾರಗಳು ತೆಗೆದುಕೊಳ್ಳುವಾಗ ಪೂರ್ವಾಗ್ರಹಗಳಿಲ್ಲದೆ, ಅಥವಾ ಹಿತ್ತಾಳೆಕಿವಿಯವರಾಗದೆ, ಯಾರೋ ಏನೋ ಹೇಳಿದ್ದನ್ನು ಅವರಲ್ಲಿ ಕಂಡುಕೊಳ್ಳುವ ಯತ್ನ ಮಾಡದೆ, professional ಆಗಿ, ಮತ್ತು ಸ್ವಂತವಾಗಿ ಅವರ ಕೆಲಸವನ್ನು JUDGE ಮಾಡುವ ಅವಶ್ಯಕತೆ ಕೂಡ ಇಂದಿನ ಮಾಧ್ಯಮ ಜಗತ್ತಿಗಿದೆ ಅಂತ ನನ್ನ ಅನಿಸಿಕೆ...

gosuba said...

ನಿಜಕ್ಕೂ ಅಂದು ಈ ವಿಷಯ ಹೇಳಿದ ಕೂಡಲೇ ನನಗೆ ತುಂಬಾ ಬೇಸರವಾಯ್ತು ಸಾರ್‍. ಹಾಗೆ ನಿಮ್ಮ ಬಗ್ಗೆ ಬರೆದ ಆ ವ್ಯಕ್ತಿ ಯಾವ ಮಟ್ಟದಲ್ಲಿ ಯೋಚಿಸುತ್ತಾನೆ ಎಂಬುದಕ್ಕೆ ಅದು ನಿದರ್ಶನ. ಒಂದು ವೇಳೆ ಆತ ಸುವರ್ಣದಲ್ಲಿ ಕೆಲಸ ಮಾಡುವ ಅವಕಾಶ ವಂಚಿತನೇ ಆಗಿದ್ದರೆ, ಅದು ನಮ್ಮ ಅದೃಷ್ಠ. ಯಾಕೆಂದರೆ ಅಂತಹ ವಿಕೃತ ಮನಸ್ಸಿನ ವ್ಯಕ್ತಿ ನಮ್ಮ ಸಹದ್ಯೋಗಿಯಾಗಿದ್ದಾರೆ ಎಂದು ಹೇಳಿಕೊಳ್ಳುವ ಸಂದರ್ಭ ತಪ್ಪಿದೆ. ಪ್ರತಿಭೆ ಮತ್ತು ಪರಿಶ್ರಮದ ಬಗ್ಗೆ ನಂಬಿಕೆ, ವಿದ್ಯೆ ಮತ್ತು ಗುರುವಿನ ಬಗ್ಗೆ ಗೌರವ ಇರುವವನೇ ಆಗಿದ್ದರೆ ಆತ ಬಹುಶಃ ಹಾಗೆ ಬರೆಯುತ್ತಿರಲಿಲ್ಲವೇನೋ... ಒಂದಂತೂ ನಿಜ ಪ್ರಸ್ತುತ ಪತ್ರಿಕೋದ್ಯಮದಲ್ಲಿ ಪಾವಿತ್ರತೆ ಕಡಿಮೆಯಾಗುತ್ತಿದೆ.
ಇದಕ್ಕೆ ಕಾರಣ ಹಿರಿಯರ ಮಾರ್ಗದರ್ಶನ ಕೊರತೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿನ ಗುಣಮಟ್ಟ ಹಾಗೂ ಅಲ್ಲಿನ ಪರಿಸರ ಪ್ರಭಾವವೂ ಇರಬಹುದು.ಒಟ್ಟಿನಲ್ಲಿ ಇಂತಹ ಪ್ರವೃತಿಗಳು ಇನ್ನಾದರೂ ನಮ್ಮೊಳಗೆ ನಿಲ್ಲಬೇಕು. ಒಬ್ಬ ಉತ್ತಮ ಮನುಷ್ಯ ಪತ್ರಕರ್ತನಾಗಬೇಕು.ಹಾಗೆಯೇ ಒಬ್ಬ ಒಳ್ಳೆಯ ಪತ್ರಕರ್ತ ಒಬ್ಬ ಒಳ್ಲೆಯ ಮನುಷ್ಯನಾಗಬೇಕು.ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ.

ಸಂದೀಪ್ ಕಾಮತ್ said...

ಶಶಿಧರ ಭಟ್ರೆ,
ನಿಮ್ಮ ಬಗ್ಗೆ ಏಕವಚನದಲ್ಲಿ ಬರೆದ ಬಗ್ಗೆ ನನಗೂ ಅಸಮಾಧಾನವಿದೆ.ಬಹುಶ ನಿಮ್ಮ ಮೇಲಿನ ಅಸಮಾಧಾನದಿಂದ ಹಾಗೆ ಬರೆದಿರಬಹುದು ಅವರು ,ಆದ್ರೂ ತಪ್ಪು ತಪ್ಪೇ!.ರವಿ ಬೆಳಗೆರೆಯ ಐವತ್ತರ ಸಂಭ್ರಮದ ಕಾರ್ಯಕ್ರಮಕ್ಕೂ ಕೆಲವರು ರವಿಯ ಬಗ್ಗೆ ಆಕ್ಷೇಪಿಸಿ ಬರೆದಿದ್ದಾರೆ.ರವಿಯ ಮೇಲೆ ಸಿಟ್ಟಿದ್ರೆ ಈ ರೀತಿ ವಿರೋಧಿಸೋದಾ?
ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಮೆಚ್ಚಿಸೋದು ಅಸಾಧ್ಯ! ಗಾಂಧೀಜಿಗೂ ಶತ್ರುಗಳಿದ್ರು,’ಅಜಾತ ಶತ್ರು’ ವಾಜಪೇಯಿಯವರಿಗೂ ಶತ್ರುಗಳಿದ್ದಾರೆ.
ಪತ್ರಿಕೋದ್ಯಮದ ತಲೆ ಬುಡ ನನಗೆ ಗೊತ್ತಿಲ್ಲ ,ಆದ್ರೆ ಜನರೇಶನ್ ಗ್ಯಾಪ್ ನಿಂದಾಗಿಯೇ ಈ ಎಲ್ಲಾ ಅವಾಂತರಗಳು ಆಗ್ತಾ ಇರೋದು .ನಿಮ್ಮ ತಲೆಮಾರಿನ ಹಲವಾರು ಪತ್ರಕರ್ತರು ಕಷ್ಟಪಟ್ಟು ಯಾರ್ಯಾರಿಂದಲೋ ಬಯ್ಯಿಸಿಕೊಂಡು ಪತ್ರಕರ್ತರಾದವರು .ಆದ್ರೆ ಈಗ ’ಒಳ್ಳೆಯ(?) ’ ಜರ್ನಲಿಸಂ ಕಾಲೇಜಿನಲ್ಲಿ ಕಲಿತು ಹೊರಬಂದ ತಕ್ಷಣ ಪತ್ರಕರ್ತ ಅನ್ನೋ ಪಟ್ಟ ತಾನೇ ತಾನಾಗಿ ಬಂದು ಬಿಡುತ್ತೆ(ಇಸ್ರೋದಲ್ಲಿ ಒಬ್ಬ ಹೊಸಬ ಇಂಜಿನಿಯರ್ ಸೇರಿಕೊಂಡ್ರೂ ’ವಿಜ್ಞಾನಿ ’ ಅಂತ ಆಟೋಮ್ಯಾಟಿಕ್ ಆಗಿ designation ಸಿಕ್ಕಿದ ಹಾಗೆ!).ಬ್ಯಾಂಕ್ ಗಳಲ್ಲೂ ಹಾಗೇ ಮುಂಚೆ ಹತ್ತಾರು ವರ್ಷ ಕ್ಲರ್ಕ್ ಆದವರು ನಿವೃತ್ತರಾಗೋ ಸಮಯದಲ್ಲದ್ರೂ ಮ್ಯಾನೇಜರ್ ಆಗ್ತೀವಿ ಅಂತ ಹೋಪ್ಸ್ ಇತ್ತು .ಆದ್ರೆ ಈಗ IIM ಗೆ ಹೋಗಿ MBA ಆಗಿರೋ ಹೈಕಳನ್ನು ತಂದು ಸೀದಾ ಮ್ಯಾನೇಜರ್ ಖುರ್ಚಿಯಲ್ಲಿ ಕೂರಿಸಿಬಿಡ್ತಾರೆ .ವಯಸ್ಸಾದ ಕ್ಲರ್ಕ್ ಗಳು ಅಲ್ಲೇ ನೋಟು ಎಣಿಸುತ್ತಾ ಕೂರ್ಬೇಕು!!
ಈಗಿಗ ಚ್ಯಾನೆಲ್ ಗಳು/ಪತ್ರಿಕೆಗಳು ಒಳ್ಳೆ MNCಗಳ ಥರ ಕೆಲಸ ಮಾಡ್ತಾ ಇವೆ .ಒಂದು ರೀತಿಯಲ್ಲಿ ಒಳ್ಳೆಯದು ಇನ್ನೊಂದು ರೀತಿಯಲ್ಲಿ ಕೆಟ್ಟದು !
ಈಗ ನೀವು ಸುವರ್ಣ ನ್ಯೂಸ್ ನಲ್ಲಿ ಯಾರಿಗಾದ್ರೂ ಬಯ್ದ್ರೆ ಅವ್ನು ಕಸ್ತೂರಿ ಸೇರ್ಕೊಂಡು ಬಿಡ್ತಾನೆ !ಕಸ್ತೂರಿಯಲ್ಲಿ ಬಯ್ದ್ರೆ ಆಜ್ ತಕ್ ಸೇರ್ಕೊಂಡು ಬಿಡ್ತಾನೆ.ಥೇಟ್ ನಮ್ಮ MNC styleನಲ್ಲಿ !!!
ರವಿ ಬೆಳಗೆರೆ ಯಾವಾಗ ನೋಡಿದ್ರೂ ಶ್ಯಾಮರಾಯರು ಬಯ್ದ,ಡಿಸ್ಮಿಸ್ ಮಾಡಿದ ಕಥೇನೇ ಹೇಳ್ತಾ ಇರ್ತಾರೆ .ಆದ್ರೆ ಶ್ಯಾಮರಾಯರ strategy ಈಗ ನಡೆಯೋದಿಲ್ವಲ್ಲ!!! ಈಗ ನೀವು ಡಿಸ್ಮಿಸ್ ಮಾಡೋದು ಬಿಡಿ ನಿಮ್ಮ ಚ್ಯಾಲೆನ್ ನಲ್ಲಿ ಕೆಲಸ ಮಾಡ್ತಾ ಇರೋ ಪ್ರತಿಭಾವಂತರನ್ನು ಕೆಲಸದಲ್ಲಿ ಉಳಿಸಿಕೊಳ್ಳೋದೇ ಒಂದು ದೊಡ್ಡ ಚ್ಯಾಲೆಂಜ್ ಆಗುತ್ತೆ ಹೋಗ್ತಾ ಹೋಗ್ತಾ!
ನಂಗೆ ನಿಮ್ಮ ನ್ಯೂಸ್ ಅಂಡ್ ವ್ಯೂಸ್ ತುಂಬಾ ಇಷ್ಟ .
ಕೆಲವೊಂದು ಸಲ ನೀವು ವಾದ ಮಾಡ್ಬೇಕಾದ್ರೆ ಕೇವಲ ಒಬ್ಬರ ಪರ ವಹಿಸಿ ಇನ್ನೊಬ್ಬರನ್ನು ’ಅನಾಥ’ರನ್ನಾಗಿ ಮಾಡ್ತೀರಿ .ಅದೊಂದು ಬಿಟ್ರೆ ನಂಗೆ ನೀವು ತುಂಬಾ ಇಷ್ಟ:)

ಆಲಾಪಿನಿ said...

ಸರ್‍, ನಿಜ. ನಮ್ ಬರೆವಣಿಗೆ ನಮ್ ವ್ಯಕ್ತಿತ್ವ ಬಿಂಬಿಸುತ್ತದೆ. ಅಂದ ಹಾಗೆ shree (ಶ್ರೀ) ಅವರು ಹೇಳಿದ್ದಕ್ಕೆ ನನ್ನದೂ ಸಹಮತವಿದೆ.

prashant natu said...

yellavu vyaktiya mele avalambita....adre obba hiriya patrkartanannu bayoodu sariyalla...if we have different view point everyone is free to air there views...adre ekvachandalli nindisodu ashane ashte....i feel madhyam bidi samajdalle asahne hechta ide.....sariyad lakshan galntru alla khandita....

Kumara Raitha said...

೯೪ರಿಂದ ನಿಮ್ಮನ್ನು ನೋಡುತ್ತಿದ್ದೇನೆ.ನೀವು ಆಗ ಕನ್ನಡಪ್ರಭದಲ್ಲಿದಿರಿ.ಆಗಾಗ ಗೆಳಯರನ್ನು ಕಾಣಲು ಬರುತ್ತಿದ್ದ
ನಾನು ನಿಮ್ಮನ್ನು ನೋಡುತ್ತಿದೆ.ಭಾರಿ ಸಿಟ್ಟಿನ ವ್ಯಕ್ತಿ ಅನಿಸುತ್ತಿತ್ತು.ವ್ಯವಸ್ಥೆ ವಿರುದ್ದ ಕುದಿಯುತ್ತಿರುವ ಪತ್ರಕರ್ತನ
ಮನಸ್ಥಿತಿ ಅನಿಸಿತ್ತು.ನನ್ನ ಈ ಗ್ರಹಿಕೆ ಸುಳ್ಳಾಗಿರಲಿಲ್ಲ.ಪತ್ರಿಕೆಯಲ್ಲಿ ನಿಮ್ಮ ಬರಹ ಹರಿತವಾಗಿರುತ್ತಿತ್ತು(ಈಗ ಕೂಡ ಅದೇ ರೀತಿ).ಯಾರಿಗೆ ಆಗಲಿ ಹೇಳಬೇಕಾದ್ದನ್ನು
ನೇರವಾಗಿ ಹೇಳುವ ನಿಮ್ಮ ಗುಣ ಕೆಲವರಿಗೆ ಇಷ್ಟವಾಗದೇ ಇರಬಹುದು.ಸೈಕಾಲಜಿ ವಿದ್ಯಾರ್ಥಿಯಾದ ನನಗೆ ನಿಮ್ಮಲ್ಲಿ ತಾಯಿ ಹೃದಯದ ಪಸೆಯಿದೆ ಅನಿಸಿದೆ.ಅವಶ್ಯವೆನಿಸಿದಾಗ ನಿಷ್ಟುರವಾಗುವ ಶಕ್ತಿ ಕೂಡ ಇದೆ-ಕುಮಾರ ರೈತ

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...