Tuesday, December 16, 2008

ನಾವು ಮಾತನಾಡುವವರು, ಮಾತನಾಡುತ್ತಲೇ ಇರುತ್ತೇವೆ ....

ಇಂದು ನಾನು ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತೇನೆ. ಹಾಗೆ ಮುಖ್ಯವಾಗಿ ದೃಶ್ಯ ಮಾಧ್ಯಮದ ಬಗ್ಗೆ.
ಮುಂಬೈನ ಉಗ್ರಗಾಮಿಗಳ ಅಟ್ಟಹಾಸದ ನಂತರ ಎಲ್ಲರೂ ಮಾಧ್ಯಮದ ಹೊಣೆಗಾರಿಕೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಆರೋಗ್ಯಪೂರ್ಣ ಬೆಳವಣಿಗೆ. ಆದರೆ ಇಲ್ಲಿ ನಾವು ಗಮನಿಸಬೇಕಾದ ಕೆಲವು ವಿಷಯಗಳಿವೆ. ಯಾಕೆ ಮಾಧ್ಯಮಗಳು ಹೊಣೆ ಅರಿತು ವರ್ತಿಸುತ್ತಿಲ್ಲ ? ಈ ಪ್ರಶ್ನೆಯನ್ನು ಗಮನಿಸಿ. ಮೊದಲನೆಯದಾಗಿ ಮಾಧ್ಯಮ ಇಂದು ಹೊಣೆಗೇಡಿಯಾಗಿದೆ ಎಂಬುದು ಈ ಪ್ರಶ್ನೆಯಲ್ಲೇ ಇರುವ ಹೇಳಿಕೆ. ಈ ಬಗ್ಗೆ ಯಾರ ವಿರೋಧವೂ ಇರಲಾರದು. ಆದರೆ ಯಾಕೆ ಹೀಗಾಗಿದೆ ?
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಇವತ್ತಿನ ಪತ್ರಿಕೋದ್ಯಮಿಗಳಿಗೆ ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ಅವ್ರಿಗೆ ಪೂರ್ವ ಸಿದ್ಧತೆ ಇಲ್ಲ. ಪತ್ರಿಕೆಯಲ್ಲಿ ಕೆಲಸ ಮಾಡುವುದೆಂದೆಂದರೆ, ಐಟಿ ಬಿಟಿ ಕಂಪೆನಿಯಲ್ಲಿ ಕೆಲಸ ಮಾಡಿದಂತೆ ಅಲ್ಲ. ಇಲ್ಲಿ ಎಲ್ಲವನ್ನೂ ಕಂಪೂಟರುಗಳ ಮೂಲಕ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಪತ್ರಿಕೋದ್ಯಮ ಮನಸ್ಸಿನ ಕೆಲಸ. ಅಲ್ಲಿ ತುಂಬಾ ವಿಭಿನ್ನವಾದ ಕ್ರಿಯಾಶೀಲತೆ ಬೇಕು. ಒಂದು ಘಟನೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ನೋಡುವ ಚಾಕಚಕ್ಯತೆ ಬೇಕು. ಇದು ಅಷ್ಟು ಸುಲಭವಾಗಿ ಧಕ್ಕುವುದಿಲ್ಲ. ನಿರಂತರ ಓದು ಚಿಂತನೆ ಇದ್ದರೆ ಮಾತ್ರ ಇಂಥಹ ಮನಸ್ಥಿತಿ ರೂಪಗೊಳ್ಳುತ್ತದೆ. ಆದರೆ ಇಂದು ಮಾಧ್ಯಮದಲ್ಲಿ ಕೆಲಸ ಮಾಡುವವರಲ್ಲಿ ಇಂತಹ ಮನೋಧರ್ಮವೇ ಇಲ್ಲ..
ನಾನು ನಮ್ಮ ವಾಹಿನಿ ಪ್ರಾರಂಭವಾದ ದಿನದಿಂದ ಕ್ರೆಡಿಬಿಲಿಟಿಯ ಬಗ್ಗೆ ನಮ್ಮ ಹುಡುಗರ ಜೊತೆ ಮಾತನಾಡುತ್ತಲೇ ಇದ್ದೇನೆ. ವಿಶ್ವಾರ್ಹತೆ ಎಷ್ತು ಮುಖ್ಯ ಎಂದು ಹೇಳುತ್ತಲೇ ಇದ್ದೇನೆ. ಆದರೆ ನನ್ನ ಮಾತು ಯಾರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ನನಗೆ ಅನ್ನಿಸುವುದೆಂದರೆ, ಇಂದು ಮಾಧ್ಯಮ ಉಳಿದೆಲ್ಲ ಮಾಧ್ಯಮದಂತೆ ಬದಲಾಗಿದೆ, ಇಲ್ಲಿ ಕೆಲಸ ಮಾಡುವವರಿಗೂ ಯಾವುದೋ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುವವರಿಗೂ ಯಾವುದೇ ವ್ಯತ್ಯಾಸ ಉಳಿದಿಲ್ಲ ಎಂದು !
ಜೊತೆಗೆ ಇಂದಿನ ಪತ್ರಿಕೋದ್ಯಮಿಗಳಿಗೆ ಓದುವ ಅಭಿರುಚಿ ಕಡಿಮೆ. ಒಬ್ಬ ಪತ್ರಿಕೋದ್ಯಮಿ ಇಪ್ಪತ್ನಾಲ್ಕು ಗಂಟೆ ಪತ್ರಿಕೋದ್ಯಮಿಯೇ. ಆತ ಕನಿಷ್ಟ ದಿನಕ್ಕೆ ಎರಡು ಮೂರು ಗಂಟೆ ಓದಬೇಕು. ಕರ್ನಾಟಕದಲ್ಲಿ ಪತ್ರಿಕೋದ್ಯಮ ಮಾಡುವವರಿಗೆ ಇಲ್ಲಿನ ಬದುಕು, ಸಾಹಿತ್ಯ ಸಂಸ್ಕೃತಿ, ರಾಜಕೀಯ ಇತಿಹಾಸ, ಸಾಮಾಜಿಕ ಸಮಸ್ಯೆ, ಜನಪರ ಚಳವಳಿಗಳ ಬಗ್ಗೆ ಗೊತ್ತಿರಬೇಕು. ಆದರೆ ದೃಶ್ಯ ಮಾಧ್ಯಮದಲ್ಲಿ ಇರುವವರಂತೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಬಾಹ್ಯ ಸೌಂದರ್ಯವೇ ಮುಖ್ಯ ಎಂದುಕೊಂಡಿರುತ್ತಾರೆ. ಸೌಂದರ್ಯದ ಅಹಂಕಾರ ಅವರ ಕ್ರಿಯಾಶೀಲತೆಯನ್ನು ಕೊಂದು ಬಿಡುತ್ತದೆ ಎಂಬ ಸಾಮಾನ್ಯ ಜ್ನಾನವೂ ಅವರಿಗೆ ಇರುವುದಿಲ್ಲ.
ಜೊತೆಗೆ ನಮಗೆ ಮಾತನಾಡುವುದು ಗೊತ್ತಿದೆ. ಕೇಳಿಸಿಕೊಳ್ಳುವುದು ಗೊತ್ತಿಲ್ಲ. ದೃಶ್ಯ ಮಾದ್ಯಮದಲ್ಲಿ ಇರುವವರು ಮಾತನಾಡುವುದೇ ತಮ್ಮ ಕಾಯಕ ಎಂದುಕೊಂಡಿರುತ್ತಾರೆ. ಮೌನ ನಮಗೆ ನೀಡುವ ಕ್ರಿಯಾಶೀಲತೆ ಅರಿವು ಅವರಿಗೆ ಇರುವುದಿಲ್ಲ. ಇದನ್ನು ಯಾರನ್ನೂ ಉದ್ದೇಶಿಸಿ ನಾನು ಹೇಳುತ್ತಿಲ್ಲ. ನನ್ನನ್ನು ಸೇರಿದಂತೆ ಎಲ್ಲರೂ ಈ ಬಗ್ಗೆ ಯೋಚಿಸಬೇಕಾಗಿದೆ.


10 comments:

SHREE (ಶ್ರೀ) said...

ನಿಮ್ಮ ಪರಿಸ್ಥಿತಿಯ ಬಗ್ಗೆ ನನಗೆ ಬೇಸರವಾಗುತ್ತಿದೆ ಸರ್. ಮಾತ್ರವಲ್ಲ, ಇಡಿಯ ವ್ಯವಸ್ಥೆ ಸಾಗುತ್ತಿರುವ ದಿಕ್ಕಿನ ಬಗ್ಗೆ ಕೂಡ ಬೇಸರವಿದೆ. ಉನ್ನತ ಸ್ಥಾನದಲ್ಲಿದ್ದುಕೊಂಡು ಸರಿಯಾದ ನಿರ್ಧಾರಗಳನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳದಿದ್ದರೆ ಮುಂದಿನ ಪರಿಣಾಮವೇ ಇಂತಹ ಬೆಳವಣಿಗೆಗಳು.

ಸಂದೀಪ್ ಕಾಮತ್ said...

ಭಟ್ರೆ ನೀವು ಬಲಗಡೆ ಹಾಕಿರೊ my blog list ನಲ್ಲಿ 'ಅವಧಿ’ಯ ಅಡ್ರೆಸ್ಸ್ www.avadhi.blogspot.com ಅಂತ ಇದೆ.ಅದು http://avadhi.wordpress.com/ ಆಗ್ಬೇಕು.

ವಿಕಾಸ್ ಹೆಗಡೆ said...

ಕರ್ನಾಟಕದಲ್ಲಿ ಪತ್ರಿಕೋದ್ಯಮ ಮಾಡುವವರಿಗೆ ಇಲ್ಲಿನ ಬದುಕು, ಸಾಹಿತ್ಯ ಸಂಸ್ಕೃತಿ, ರಾಜಕೀಯ ಇತಿಹಾಸ, ಸಾಮಾಜಿಕ ಸಮಸ್ಯೆ, ಜನಪರ ಚಳವಳಿಗಳ ಬಗ್ಗೆ ಗೊತ್ತಿರಬೇಕು. ಆದರೆ ದೃಶ್ಯ ಮಾಧ್ಯಮದಲ್ಲಿ ಇರುವವರಂತೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಬೇರೆ ಯಾರಾದರೂ ಹೇಳಿದ್ದರೆ ಆ ಮಾತನ್ನು ಹತ್ತರಲ್ಲಿ ಹನ್ನೊಂದು ಅಂತ ಬಿಟ್ಟು ಬಿಡಬಹುದಿತ್ತು. ಆದರೆ ಇದನ್ನು ಅವರಿಗೆ ತಮ್ಮಲ್ಲಿಯೇ implement ಮಾಡಲು ಯಾಕೆ ಆಗುತ್ತಾ ಇಲ್ಲ ಎಂಬುದು ಕೇಳಲೇಬೇಕಾದ ಪ್ರಶ್ನೆ. ಪತ್ರಿಕೆಯಲ್ಲಿ ಕೆಲಸ ಮಾಡುವುದು ಐಟಿ ಬಿಟಿಯಂತೆ ಅಲ್ಲ ನಿಜ. ಅದಕ್ಕೇ ಹಾಗಾಗಿರುವುದು ಪತ್ರಿಕೆಗಳು. ಐಟಿ ಬಿಟಿಯಂತೆ ಕೆಲಸ ಮಾಡಿದರೆ ಖಂಡಿತ ಸರಿ ಇರುತ್ತಿತ್ತೇನೋ! ಖಂಡಿತ ಒಂದು ಆಯಕಟ್ಟಿನ ಸ್ಥಾನದಲ್ಲಿರುವ ತಮ್ಮಂತವರು ’ಬದಲಾವಣೆ’ಗಳನ್ನು ತರಬಹುದೇನೋ ಅನ್ನಿಸುತ್ತದೆ ಮತ್ತು ಅದನ್ನು ಅಪೇಕ್ಷಿಸುತ್ತೇವೆ ಕೂಡ. ಕೊನೇಪಕ್ಷ ತಮ್ಮ ವಾಹಿನಿಯ ಅತಿಯಾದ ಇಂಗ್ಲೀಷ್ ಬಳಕೆ ಕಮ್ಮಿ ಮಾಡಿದರೂ ಸಾಕು, ಅದೇ ಒಂದು ಹೆಜ್ಜೆಯಾಗುತ್ತದೆ.!

s. dhar said...

ನಾನು ನನ್ನ ಹೊಣೆಗಾರಿಕೆಯಿಂದ ನುಣಿಚಿಕೊಳ್ಳಲಾರೆ. ಆದರೆ ಬದಲಾವಣೆ ಒಂದೇ ಕ್ಷಣದಲ್ಲಿ ನಡೆದು ಬಿಡುವಂತಹುದಲ್ಲ. ಯಾಕೆಂದರೆ ಚಾನಲ್ ನಲ್ಲಿ ಸದಾ ಇರುವುದು ಯಶಸ್ಸಿನ ಹಪಹಪಿಕೆ. ಆದರೆ ಬಹಳಷ್ಟು ಜನರಿಗೆ ಯಶಸ್ಸು ಅನುಕರಣೆಯಿಂದ ಬರುವುದಿಲ್ಲ ಎಂದು ತಿಳಿದಿರುವುದಿಲ್ಲ. ಅವರು ಯಶಸ್ಸಿಗಾಗಿ ಸೂತ್ರವೊಂದನ್ನು ಹುಡುಕುತ್ತಿರುತ್ತಾರೆ.ಅದೂ ಸಹ ಎಲ್ಲರಿಗೂ ಸಿದ್ಧ ಸೂತ್ರಗಳು ಬೇಕು. ಹೀಗಾಗಿ ಗೊತ್ತಿಲ್ಲದಂತೆ ಇನ್ನೊಂದು ಯಶಸ್ಸನ್ನು ಮಾದರಿಯನ್ನಾಗಿ ಇಟ್ಟುಕೊಂಡು ಬಿಡುತ್ತಾರೆ. ಇಂತವರನ್ನು ತಿದ್ದಬೇಕು.ಆದರೆ ಬಹಳಷ್ಟು ಜನರಿಗೆ ಬದಲಾಗಲು ಯಾರೂ ಸಿದ್ಧರಿರುವುದಿಲ್ಲ. ಹಾಗೆ, ವಾಹಿನಿಗಾಗಿ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿದವರೂ ಯಶಸ್ಸಿಗಾಗಿಯೇ ಕಾಯುತ್ತಿರುತ್ತಾರೆ. ಅವರ ಮುಂದಿರುವುದೂ ಸಿದ್ಧ ಸೂತ್ರಗಳೇ.
ಈ ನಡುವೆ ನಮ್ಮ ಮಿತಿಯಲ್ಲಿ ಬದಲಾವಣೆಗೆ ನಾವು ಯತ್ನಿಸಬೇಕು. ಇಲ್ಲದಿದ್ದರೆ ವ್ಯವಸ್ಥೆ ನಮ್ಮನ್ನು ಹೊರದಬ್ಬುತ್ತದೆ. ವ್ಯವಸ್ಥೆಯ ಭಾಗವಾಗಿದ್ದೂ ಬದಲಾವಣೆಗೆ ನಮ್ಮ ಮಿತಿಯಲ್ಲಿ ಯತ್ನ ನಡೆಸುವುದು ನಮ್ಮಂಥವರ ಕೆಲಸ, ಅದನ್ನು ನಾನು ಮಾಡುತ್ತಿದ್ದೇನೆ.

ಶಶಿಧರ್ ಭಟ್

ಪುಚ್ಚಪ್ಪಾಡಿ said...

ಸರ್, ಬಹುಶ: ಇಂದು ಪತ್ರಿಕೋದ್ಯಮದ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ನಿಮ್ಮ ಚಿಂತನೆ ದಾರಿಯಾಗಬಹುದು ಅಂತ ಅಂದುಕೊಂಡಿದ್ದೇನೆ. ಅನೇಕರು ಕೇಳುತ್ತಿರುವುದು ಒಂದೇ ಪ್ರಶ್ನೆ ದೃಶ್ಯ ಮಾಧ್ಯಮಗಳೇ ಇಂದು ಸಮಾಜವನ್ನು ಹಾಳುಮಾಡುತ್ತಿವೆ ಎನ್ನುವಷ್ಟರ ಮಟ್ಟಿಗೆ ಪ್ರಶ್ನೆಯನ್ನು ಎತ್ತುತ್ತಾರೆ. ಆದರೆ ಅದರಾಚೆಗಿನ ಮುಖದ ಬಗ್ಗೆ ಸೊಲ್ಲೆತ್ತುವುದಿಲ್ಲ. ನಿಮ್ಮ ಅನುಭವದ ಆ ಬರಹ ನಮ್ಮಂತಹವರನ್ನು ಎಚ್ಚರಿಸಲಿ.

ಸಂದೀಪ್ ಕಾಮತ್ said...

ವಿಕಾಸ್ ಹೇಳಿದ್ದು ಸರಿ.ಐಟಿ-ಬಿಟಿಗಳಲ್ಲಿರೋ ಪ್ರೊಫೆಶನಲಿಸಂ ನ ಪತ್ರಿಕೋದ್ಯಮಕ್ಕೂ ಅನ್ವಯಿಸಿದ್ರೆ ಸ್ವಲ್ಪ ಉದ್ಧಾರವಾಗುತ್ತೆ.
ನಿಮ್ಮಂಥ ಹಿರಿಯರಿಗೆ ಕಿರಿಯರು ಸದಾ ತಮ್ಮ ಮಾರ್ಹದರ್ಶನದಲ್ಲೇ ಕಲೀಬೇಕು ಅನ್ನೋ ಈಗೊ ಇರೋದು ಸಹಜವೇ(ನಿಮಗೆ ಬೇಸರ ಆದ್ರೆ ಕ್ಷಮಿಸಿ).
ನೀವು ಪತ್ರಿಕೋದ್ಯಮ-ಹಾಗೊ ದೃಶ್ಯ ಮಾಧ್ಯಮದವ್ರೂ ಒಬ್ಬರನ್ನೊಬ್ಬರು ಕಿಚಾಯಿಸೋದು ಬಿಟ್ಟಿಲ್ಲ.
ವಿ.ಕ ದಲ್ಲಿ ಟಿವಿ ಮೀಡಿಯಾದ ಹೊಣೆಗೇಡಿತನದ ಬಗ್ಗೆ ಲೇಖನ ಬಂದಿತ್ತು.ಟೀವಿಯವರು ನೇರಪ್ರಸಾರ ಮಾಡಿದ್ರಿಂದ ತನಿಖೆ ಗೆ ತೊಂದ್ರೆ ಆಗುತ್ತೆ ಅಂತ.ಆದ್ರೆ ಅದೇ ಪತ್ರಿಕೆಯವರು ತನಿಖೆ ಬಗ್ಗೆ ತಾಜಾ ವರದಿ ಸಿಕ್ಕಿದ್ರೆ ಪ್ರಕಟಿಸಲ್ವ??

ಐಟಿ-ಬಿಟಿಯಲ್ಲೂ ಎಲ್ಲವನ್ನು ಕಂಪ್ಯೂಟರ್ ಮಾಡಲ್ಲ ಸರ್!ಇಲ್ಲೂ ಕ್ರಿಯಾಶೀಲತೆ ಬೇಕು.infact ಪತ್ರಿಕೋದ್ಯಮಕ್ಕಿಂತಲೂ ಜಾಸ್ತಿ ಬೇಕು.ಪತ್ರಿಕೋದ್ಯಮದವರು ಉಪಯೋಸೋ ಒಂದೊಂದು ಉಪಕರಣದ ಹಿಂದೂ ಐಟಿಯವರ ಕ್ರಿಯಾಶೀಲತೆ ಇದೆ .ನೀವು ಫ್ಲಾಶ್ ನ್ಯೂಸ್ ಹಾಕಲು ಬಳಸ್ತೀರಲ್ಲ ಸಾಫ್ಟ್ವೇರ್ ಅದನ್ನು ಯಾವ ಪತ್ರಿಕೋದ್ಯಮಿಯೂ ಡೆವಲಪ್ ಮಾಡಿದ್ದಲ್ಲ .ಅದನ್ನು ಐಟಿಯವರು ಮಾಡಿದ್ದು,.
ನಾವು ಇಷ್ಟು ಚೆನ್ನಾಗಿ ಬ್ಲಾಗ್ ಬರೀತೀವಿ ಅಂತ ನಮ್ಮ ಈಗೋ ತಣಿಸೋದು ಐಟಿ .ಗೂಗಲ್ ನವರು ನೋಡಿ ನಿಮ್ಮ ಪತ್ರಿಕೋದ್ಯಮಕ್ಕೆ ಸವಾಲೊಡ್ಡಿರುವ ಬ್ಲಾಗ್ಸ್ಪಾಟ್ ತಂದಿಲ್ವ?? ಅವರು ಕ್ರಿಯೇಟಿವ್ ಅಲ್ವ??

ಖಂಡಿತ ನೀವಿ ಐಟಿಯವರನ್ನು ಮನನೋಯಿಸುವ ಉದ್ದೇಶದಿಂದ ಬರೆದದ್ದಲ್ಲ.ನಿಮ್ಮದೇ ಜೂನಿಯರ್ ಗಳಿಗೆ ಕಿವಿಮಾತು ಹೇಳೊದಕ್ಕೆ ಬರೆದದ್ದು .ಆದ್ರೆ ಆ ಉದ್ದೇಶದಲ್ಲಿ ಐಟಿ ಯವರನ್ನು ಹೋಲಿಸುವ ಮುಂಚೆ ಥಿಂಕ್ ಮಾಡ್ಬೇಕಿತ್ತು!
ಬಹಳಶ್ಟು ಜನ ಮಾತು ಮಾತಿಗೆ ನಾವು ಐಟಿಯವರನ್ನು ಎಳೆದು ತರ್ತಾರೆ ಅದು ನಿಲ್ಬೇಕು.

chanakya said...

ಸರ್ ಒಂದು ರೀತೀಲಿ ನೀವೂ ಡೆಸ್ಪರೇಟ್ ಆಗಿದೀರಿ ಅನ್ನೋದು ಈ ಲೇಖನದಿಂದ ವ್ಯಕ್ತವಾಗುತ್ತೆ ಅನ್ನೋದು ನನ್ನ ಪ್ರಾಮಾಣಿಕ ಅನಿಸಿಕೆ.ನಿಮ್ಮ ಸಹೋದ್ಯೋಗಿಗಳನ್ನ ಸರಿದಾರಿಗೆ ತರುವದಲ್ಲಿ ನೀವು ವಿಫಲರಾಗೊಲ್ಲ.ಆದ್ರೆ ನಿಮ್ಮಲ್ಲಿ ಎಲ್ಲರನ್ನೂ ಸಮಾದಾನ ಪಡಿಸುವ ಹಾಗೂ ಯಾರಿಗೂ ಬೇಜಾರು ಮಾಡ್ಬಾರ್ದು ಅನ್ನುವ ನಿಮ್ಮ ಮನೋಭಾವನೆ ವ್ಯವಸ್ಟೆಯನ್ನ ಹಾಳು ಮಾಡ್ತಿದೆ ಅನ್ನೋದು ನಿಮಗೂ ಗೊತ್ತಿರೋ ಸಂಗತೀನೇ..ದಯವಿಟ್ಟೂ ಒಮ್ಮೆ ಚಳಿಬಿಟ್ಟು ನಿಶ್ಟುರ ಕ್ರಮಕ್ಕೆ ಮುಂದಾದ್ರೆ ಯಶಸ್ಸು ಖಂಡಿತ..ಆ ದಿನಗಳು ಬೇಗ ಬರ್ಲಿ...

santasajoy said...

sir,
nimma maatu nija. pratiyobba patrakarta dinada ippatnaalku ganteyu patrakarta aagirale beku.suddiyannu koduva sanbhramadalli avru kelavu baari illaddu,salladdannu hechchagi janate mele hera bayasuttare.adarallu kelavu baari drushya maadhyamada atirekagalu elle miiri saamaanya pragnaavanta viikshakanalli ondu teranaada bhaya untu maaduttade,nimma barahavu indina maadhayamada vastu stiti tilisuvalli safala aagide.haagenda maatrakke mudrana maadhyama daari tappilla anta artha alla.aadare drushya maadhyamadalli viikshakanige aksharada-oduva arivu ira bekilla.swalpa tiluvalike saaku.antaha tiluvalike aneka anaahutagalige kaarana aaguttide.anyway nimma manadaalada maatu nanna mana tattitu.ashte nannida heloke saadhya aagirodu sir......!

ಕುಮಾರ ರೈತ said...

"ಇಂದು ಮಾಧ್ಯಮ ಉಳಿದೆಲ್ಲ ಮಾಧ್ಯಮದಂತೆ ಬದಲಾಗಿದೆ, ಇಲ್ಲಿ ಕೆಲಸ ಮಾಡುವವರಿಗೂ ಯಾವುದೋ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುವವರಿಗೂ ಯಾವುದೇ ವ್ಯತ್ಯಾಸ ಉಳಿದಿಲ್ಲ ಎಂದು "
ಇಂಥ ಮೊನಚಾದ ಮಾತನ್ನು ಆಡುವುದಕ್ಕೆ ಪ್ರಸ್ತುತ ನಿಮಗಷ್ಟೇ ಸಾಧ್ಯ.ಇಂಥ ಮಾತನ್ನು ಆಡುವ ಛಾತಿ -ಎದೆಗಾರಿಕೆ ಇದ್ದಿದ್ದು ಲಂಕೇಶರಿಗೆ.ಅವರಂಥ ನಿಷ್ಠುರ ವ್ಯಕ್ತಿ ನಮ್ಮ ನಡುವೆ ಇಲ್ಲ ಎನ್ನುವ ಕೊರಗು ಬೇಕಿಲ್ಲ.ಅನಿಸಿದ್ದನ್ನು ಮುಲಾಜಿಲ್ಲದೇ ಇರುವ ನೀವು ನಮ್ಮ ನಡುವೆ ಇರುವುದು ಮಹತ್ವದ ಸಂಗತಿ.ಇದು ನನಗನಿಸಿದ ಸತ್ಯ.ಇದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ.
ನೀವು ಹೇಳಿರುವುದಕ್ಕೆ ಇನ್ನೊಂದು ಕಾರಣವೂ ಇದೆ.ಅದು ಪತ್ರಿಕೋದ್ಯಮದ ನಿಜ ತುಡಿತವಿಲ್ಲದ ಉದ್ಯಮಿಗಳ ಹಿತಾಸಕ್ತಿ.
ಇವರು ಪ್ರಿಂಟ್ ಮೀಡಿಯಾ ಮತ್ತು ಎಲೆಕ್ಟ್ರಾನಿಕ್ ಮೀಡಿಯಾವನ್ನು
ಲಾಭಕೋರ ಆಯಾಮಗಳಿಂದಷ್ಟೇ (ರಾಜಕೀಯ-ಆರ್ಥಿಕ-ಶೈಕ್ಷಣಿಕ-ಸಾಮಾಜಿಕ)ನೋಡುತ್ತಿರುವುದು.
ಇನ್ನೊಂದು ಇದು ಒಂದು ಮಾಮೂಲಿ ಉದ್ಯೋಗ ಎಂದು ಭಾವಿಸಿಕೊಂಡು ಬರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವದು.ಇವೆಲ್ಲ ಸೇರಿಕೊಂಡಿವೆ.

'ಕ್ರೆಡಿಬಿಲಿಟಿ'ಕುರಿತು ಇಲ್ಲಿ ನೀವು ಪ್ರಸ್ತಾಪಿಸಿರುವುದು;ವೈಯಕ್ತಿಕವಾಗಿ
ನನ್ನನು ನಾನು ಸದಾ ಎಚ್ಚರದ ಒಳಗಣ್ಣಿನಿಂದ ನೋಡಿಕೊಳ್ಳುವಂತೆ ಮಾಡಿದೆ.
ಪತ್ರಿಕೋದ್ಯಮದ ಕುರಿತು ನೀವು ಪುಸ್ತಕ ಬರೆಯಲೇಬೇಕೆಂದು
ಕಾತರಿಸುತ್ತಿರುವ-ಕುಮಾರ ರೈತ

Sandesh The Tiger said...

nimma e report annu yeshtu jana artha madikondru antha gottilla.but obba vyakthi nimma e report bagge it-bt antha vadakke ilididdane.yako moorkhara matioge aata ilidange ide.media bagge matadidre tannadeno hosthu yemba retiyalli comment kottiddane.nana knowledge kammi irabahudu.pthrikodyamada siddatha gottillada vyakthi e matannu helodu sahajave.e report at present bahala nija annisutte.adanna nammalli andre pthrikodyamigalalu alabvadisikollalu yenu madabeku yembudannu kadu nodabekagide.nimma nere ditta nirantara matugalu sada hage irali.