Tuesday, August 25, 2009

ಸೋಲನ್ನು ಒಪ್ಪದ ಮುಖ್ಯಮಂತ್ರಿ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರಲ್ಲಿ ಒಬ್ಬರು ವಿ. ಸೋಮಣ್ಣ. ಇವರು ಬಿಜೆಪಿಯನ್ನು ಸೇರುವುದಕ್ಕೆ ಮೊದಲೇ ಮುಖ್ಯಮಂತ್ರಿಗಳ ಜೊತೆ ಹನಿಮೂನ್ ಪ್ರಾರಂಭಿಸಿದ್ದರು. ಇದಕ್ಕೆ ಕೆಲವು ಲಿಂಗಾಯಿತ ಮಠಾಧೀಶರ ಅಶೀರ್ವಾದವೂ ಇತ್ತು. ಸೋಮಣ್ಣ ಬಿಜೆಪಿ ಸೇರಿದ್ದು, ಮಂತ್ರಿಯಾದದ್ದು ಮುಂದಿನ ಘಟನೆಗಳು. ಆದರೆ ಸೋಮಣ್ಣ ಉಪ ಚುನಾವಣೆಯಲ್ಲಿ ಸೋಲುತ್ತಾರೆ ಎಂಬುದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ದೇವರ ಹೆಸರು ಹೇಳಿ ರಾಜಕಾರಣ ಮಾಡುವ ಮಠಾಧಿಪತಿಗಳು ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ ಸೋಮಣ್ನ ಸೋತರು.
ಸೋಮಣ್ಣ ಯಾಕೆ ಸೋತರು ಎಂಬುದು ಬೇರೆ ವಿಚಾರ. ಈ ಬಗ್ಗೆ ಮಾತನಾಡುವಾಗ ಇಂದಿನ ಚುನಾವಣೆ ಪದ್ಧತಿಯ ಬಗ್ಗೆ ಮಾತನಾಡಬೇಕು. ಈ ಸೋಲಿನ ನಂತರದ ಬೆಳವಣಿಗೆಗಳನ್ನು ಗಮನಿಸಿ. ಸೋಮಣ್ನ ಸೋತ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಧಾವಿಸುತ್ತಾರೆ. ಅವರಿಗೆ ಸಮಾಧಾನ ಹೇಳುತ್ತಾರೆ. ನೀವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿಲ್ಲ ನಾನಿದ್ದೇನೆ ಎಂದು ಭರವಸೆ niiದಿ ಬರುತ್ತಾರೆ. ಸಂಸದೀಯ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ ಸಚಿವನಾಗುವುದಿದ್ದರೆ ಆತ ಮೇಲ್ಮನೆ ಅಥವಾ ಕೆಳಮನೆ ಸದಸ್ಯನಾಗಿರಬೇಕು. ಆಗಿರದಿದ್ದರೆ ಸಚಿವರಾಗಿ ಆರು ತಿಂಗಳೊಳಗೆ ಯಾವುದೇ ಮನೆಯ ಸದಸ್ಯರಾಗಬೇಕು. ಈಗ ಸೋಮಣ್ನ ವಿಧಾನ ಪರಿಷತ್ ಅಥವಾ ವಿಧಾನ ಸಭೆಯ ಸದಸ್ಯರಲ್ಲ. ಆರು ತಿಂಗಳೊಳಗೆ ಸದಸ್ಯರಾಗುವ ಅವರ ಕನಸಿಗೆ ಗೋವಿಂದರಾಜ ನಗರದ ಮತದಾರರು ತಣ್ಣೀರು ಎರೆಚಿದ್ದಾರೆ. ಆದರೂ ಅವರನ್ನು ಸಚಿವರನ್ನಾಗಿ ಉಳಿಸಲು ಮುಖ್ಯಮಂತ್ರಿಗಳು ಅಡ್ಡದಾರಿಗಳನ್ನು ಹುಡುಕುತ್ತಿದ್ದಾರೆ.
ಆದರೆ ಈ ಚುನಾವಣೆಯ ಫಲಿತಾಂಶ ಹಲವು ಸೂಕ್ಷ್ನಗಳನ್ನು ಒಳಗೊಂಡಿದೆ. ಇದು ಕೇವಲ ಐದು ಕ್ಷೇತ್ರಗಳಿಗೆ ಮಾತ್ರ ನಡೆದ ಉಪ ಚುನಾವಣೆ ಆಗಿದ್ದರೂ ಇಲ್ಲಿ ರಾಜ್ಯದ ಮತದಾರರ ಮನಸ್ಸಿನ ಒಂದು ಝಲಕ್ ಕಾಣಬಹುದಾಗಿದೆ. ಈಗ್ ನೋಡಿ, ಆಪರೇಷನ್ ಮೂಲಕ ಕಮಲದ ಬಿಜೆಪಿ ತೆಕ್ಕೆಗೆ ಬಂದ ಸೋಮಣ್ಣ ಹಾಗೂ ಚೆನ್ನಪಟ್ಟಣ ಸಿನೆಮಾ ನಟ ಸೋತಿದ್ದಾರೆ.. ಖರ್ಗೆ ಮಗ ನೆಲ ಕಚ್ಚಿದ್ದಾರೆ. ಅನಾಮಧೇಯರನ್ನು ಪಕ್ಷ ಬೇಧ ಮರೆತು ಜನ ಆರಿಸಿಕಳುಹಿಸಿದ್ದಾರೆ. ಅಂದರೆ, ಅಧಿಕಾರಕ್ಕಾಗಿ ನಡೆಸಿದ ಪಕ್ಷಾಂತರ ಜನರಿಂದ ತಿರಸ್ಕೃತವಾಗಿದೆ.
ಇಂತಹ ಸನ್ನಿವೇಶದಲ್ಲಿ ನಿಜವಾದ ನಾಯಕನಾದವನು ಜನರ ತೀರ್ಪನ್ನು ಒಪ್ಪಿಕೊಂಡು ಮನೆಯಲ್ಲಿ ಇರಬೇಕು. ನಿಜವಾದ ಮುಖ್ಯಮಂತ್ರಿ ಹಿಂಬಾಗಿಲ ಮೂಲಕ ಜನ ತಿರಸ್ಕರಿಸಿದವರನ್ನು ತರಲು ಯತ್ನ ನಡೆಸಬಾರದು. ಆದರೆ ತಮಾಷೆ ಎಂದರೆ, ಜನರಿಂದ ಬಡಿಸಿಕೊಂಡವರಿಗೆ ಹೇಗಾದರೂ ಮಾಡಿ ಅಧಿಕಾರ ಪಡೆಯುವ ಉಳಿಸಿಕೊಳ್ಳುವ ತವಕ. ಇವರ ಬೆಂಬಲಕ್ಕೆ ನಿಂತ ಮಠಾಧಿಪತಿಗಳಿಗೆ ತಮ್ಮ ಪರಮ ಶಿಷ್ಯರನ್ನು ಸಿಂಹಾಸನ ಮೇಲೆ ಪ್ರತಿಷ್ಠಾಪಿಸುವ ಹಪಹಪಿಕೆ. ಮುಖ್ಯಮಂತ್ರಿಗಳಿಗೆ ತಮ್ಮ ಛೇಲಾಗಳನ್ನು ಉಳಿಸಿಕೊಳ್ಳುವ ಆಕಾಂಕ್ಷೆ. ಇದರಿಂದಾಗಿಯೇ ಸೋಮಣ್ಣನವರನ್ನು ಸಚಿವರನ್ನಾಗು ಮುಂದುವರಿಸಲು ವಿಧಾನ ಪರಿಷತ್ ಸದಸ್ಯರೊಬ್ಬರಿಂದ ರಾಜೀನಾಮೆ ಪಡೆಯುವ ಯತ್ನ ನಡೆಯುತ್ತಿದೆ. ಈ ಸ್ಥಾನಕ್ಕೆ ಸೋಮಣ್ಣನವರನ್ನು ತಂದು ಅವರ ಸಚಿವ ಸ್ಥಾನ ನಿರಾತಂಕವಾಗಿ ಉಳಿಯುವಂತೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಅವರ ಆಪ್ತ ವರ್ಗ ಚಿಂತಿಸುತ್ತಿದೆ.
ಜನ ತಿರಸ್ಕರಿಸಿದ ಮೇಲೆ ಅಲ್ಲಿರಬಾರದು ಎಂಬ ಸಾಮಾನ್ಯ ನೈತಿಕತೆ ಕೂಡ ಇವರಿಗಿಲ್ಲ. ಸಾಧಾರಣವಾಗಿ ಅಧಿಕಾರಕ್ಕೆ ಹೋದ ತಕ್ಷಣ ಅದು ಶಾಶ್ವತವಾಗಿರಬೇಕು ಎಂಬ ಒತ್ತಡ ಪ್ರಾರಂಭವಾಗುತ್ತದೆ. ಇಂತಹ ಒತ್ತಡದಿಂದ ಹೊರ ಬರುವವನು ಮಾತ್ರ ನಿಜವಾದ ಜನ ನಾಯಕನಾಗುವುದು ಸಾಧ್ಯ. ಜೊತೆಗೆ ಮುಖ್ಯಮಂತ್ರಿಯಾದವನು ಸೋಲನ್ನು ಒಪ್ಪಿಕೊಳ್ಳುವ ಮನಸ್ಸು ಹೊಂದಿರಬೇಕು. ಸೋಲನ್ನು ಯಾರು ಒಪ್ಪಿಕೊಳ್ಳುವುದಿಲ್ಲವೋ ಅವರ ಜಯಕ್ಕೆ ಯಾವ ಅರ್ಥವೂ ಇರುವುದಿಲ್ಲ. ಸೋಮಣ್ಣನನ್ನು ಸೋಲಿಸಿದ್ದು ಅವರ ಕ್ಷೇತ್ರದ ಜನ. ಜನರ ತೀರ್ಪಿಗೆ ತಲೆ ಬಾಗಬೇಕಾದ್ದು ಮುಖ್ಯಮಂತ್ರಿಗಳ ಕರ್ತವ್ಯ. ಜನ ತಿರಸ್ಕರಿಸಿದ ಮೇಲೂ ಅವರನು ಬೇರೆ ಮಾರ್ಗಗಳ ಮೂಲಕ ತರುವುದು ಅಧಿಕಾರ ಅಹಂಕಾರದ ಪರಮಾವಧಿ.
ಮುಖ್ಯಮಂತ್ರಿ ಯಡೀಯೂರಪ್ಪ ಈಗ ಇಂತಹ ಅಹಂಕಾರದ ಮನಸ್ಥಿತಿಯಲ್ಲಿ ಇದ್ದಾರೆ. ಅವರಿಗೆ ಒಂದೆಡೆ ಅಧಿಕಾರವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಆಸೆ. ಮತ್ತೊಂದೆಡೆ ಕಳೆದುಕೊಳ್ಳುವ ಭಯ. ಆಸೆ ಮತ್ತು ಭಯ ಅವರಲ್ಲಿ ನೈತಿಕ ರಾಜಕಾರಣ ಮರೆಯಾಗುವಂತೆ ಮಾಡಿದೆ. ತಾವು ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಬಹುತೇಕ ಸಂದರ್ಭದಲ್ಲಿ ಮರೆಯುವ ಅವರು ಒಂದು ಜಾತಿ ಮತ್ತು ಒಂದು ಪಕ್ಷದ ಮುಖ್ಯಮಂತ್ರಿಯಾಗಿ ಮಾತ್ರ ಕಾಣುತ್ತಾರೆ.
ಅವಕಾಶ ಎಲ್ಲ ಸಂದರ್ಭಗಳಲ್ಲೂ ಬರುವುದಿಲ್ಲ. ಯಡೀಯೂರಪ್ಪ ಜನರ ಮುಖ್ಯಮಂತ್ರಿಯಾಗಬೇಕು. ಆದರೆ ಆ ಲಕ್ಷಣ ಸದ್ಯಕ್ಕಂತೂ ಗೋಚರಿಸುವುದಿಲ್ಲ. ಅವರು ದಿನದಿಂದ ದಿನಕ್ಕೆ ಅಧಃಪತನದತ್ತ ಸಾಗುತ್ತಿದ್ದಾರೆ.
ಒಂದು ಜಯ ನಮ್ಮಲ್ಲಿ ವಿನೀತ ಭಾವವನ್ನು ಮೂಡಿಸಬೇಕು. ಒಂದು ಸೋಲು ಆತ್ಮ ನಿರೀಕ್ಷೆಗೆ ಕಾರಣವಾಗಬೇಕು, ಸೋಲನ್ನು ಸೋಲಾಗಿ ಸ್ವೀಕರಿಸುವವನು ಮಾತ್ರ ಮತ್ತೆ ಜಯದತ್ತ ಹೆಜ್ಜೆ ಇಡಬಲ್ಲ.

Thursday, August 20, 2009

ಗಾಂಧಿ, ಜಿನ್ನಾ ಮತ್ತು ಇತಿಹಾಸ

ಭಾರತೀಯ ಜನತಾ ಪಕ್ಷದ ಹನುಮಂತ ಎಂದೇ ಖ್ಯಾತರಾಗಿದ್ದ ಜಸ್ವಂತ್ ಸಿಂಗ್ ಈಗ ರಾವಣರಾಗಿದ್ದಾರೆ. ದಿನ ಬೆಳಗಾಗುವುದರ ಒಳಗೆ ರಾವಣರಾಗಿ ಅವರ ಹತ್ಯೆಯೂ ನಡೆದು ಹೋಗಿದೆ. ರಾಮ ನಾಮ ಜಪದ ಮೂಲಕವೇ ಅಧಿಕಾರ ರಾಜಕಾರಣ ಮಾಡುತ್ತ ಬಂದ ಬಿಜೆಪಿಯ ಸ್ಥಿತ್ಯಂತರದ ಇನ್ನೊಂದು ಘಟ್ಟವನ್ನು ನಾವು ಈ ಬೆಳವಣಿಗೆಗಳಿಂದ ಗುರುತಿಸಬಹುದಾಗಿದೆ. ಆದರೆ ಈ ಬೆಳವಣಿಗೆ ಇಷ್ಟಕ್ಕೆ ಸೀಮಿತವಾಗಿಲ್ಲ. ದೇಶದ ರಾಜಕೀಯ ಪಕ್ಷಗಳ ಬದಲಾಗುವ ಸೈದ್ಧಾಂತಿಕ ನಿಲುವುಗಳು ಇಲ್ಲಿ ಬಟ್ಟಾಬಯಲಾಗಿದೆ. ಜೊತೆಗೆ ರಾಜಕೀಯ ನಾಯಕರ ಅಧಿಕಾರದ ರಾಜಕಾರಣದ ಇನ್ನೊಂದು ಉದಾಹರಣೆ ಕೂಡ ಇದಾಗಿದೆ.
ಜಿನ್ನಾ ಅವರ ವೈಕ್ತಿತ್ವ ಎಂತಹುದಾಗಿತ್ತು ಎಂಬುದು ಐತಿಹಾಸಿಕವಾಗಿ ಬಹಳ ಮುಖ್ಯವಾದುದು. ಗಾಂಧಿ ಅವರನ್ನು ಆರಾಧಿಸುತ್ತಲೇ ಬಂದ ಈ ದೇಶ ಬೇರೆ ನಾಯಕರನ್ನು ಅರ್ಥ ಮಾಡಿಕೊಂಡ ಬಗೆಯಾವುದು ಎಂಬುದು ಕೂಡ ಕಾಲದ ಪರೀಕ್ಷೇಗೆ ಒಳಗಾಗಬೇಕಾದ್ದು ಅತ್ಯಗತ್ಯ. ಗಾಂಧಿ ಹಲವು ಕಾರಣಗಳಿಂದ ನಮಗೆ ಮುಖ್ಯರಾಗಿದ್ದವರು. ಸತ್ಯ ಮತ್ತು ಅಹಿಂಸೆ ಎಂಬ ಅಸ್ತ್ರಗಳನ್ನು ಅವರು ಬಳಸಿದ ರೀತಿ ಕೂಡ ಅನನ್ಯ. ಹಾಗೆ ಅವರಿಗೆ ಭಾರತ ಎಂಬ ಈ ದೇಶ ಅರ್ಥವಾದಂತೆ ಆ ಕಾಲದ ಬೇರೆ ಯಾವ ನಾಯಕರಿಗೂ ಅರ್ಥವಾಗಿರಲಿಲ್ಲ. ಜೊತೆಗೆ ಹಿಂದೂ ಮತ್ತು ಮುಸ್ಲೀಮರು ಜೊತೆಯಾಗಿ ಬದುಕಬೇಕು ಎಂಬ ಆಸೆಯನ್ನು ಯಾರೂ ಸಂಶಯದಿಂದ ನೋಡುವುದು ಸಾಧ್ಯವಿಲ್ಲ. ಆದರೆ ಈ ವಿಚಾರಗಳಿಂದ ಮಾತ್ರ ಅವರನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಈ ಕಾರಣಕ್ಕೆ ಅವರು ಆರಾಧನೆಯ ಮೂರ್ತಿಯಾಗಬೇಕಾಗಿಲ್ಲ. ಅವರನ್ನು ಅರ್ಥ ಮಾಡಿಕೊಳ್ಳುವಾಗ ನಮಗೆ ಜಿನ್ನಾ ಕೂಡ ಮುಖ್ಯ.
ಆದರೆ ಗಾಂಧಿ ಬದುಕಿದ್ದಾಗಲೇ ಅವರ ಮೂರ್ತಿಯನ್ನು ನಿಲ್ಲಿಸಿ ಪೂಜೆ ಮಾಡಲು ಕೆಲವರು ಪ್ರಾರಂಭಿಸಿದ್ದರು. ನೆಹರೂ ಪಟೇಲ್ ಮೊದಲಾದ ಕಾಂಗ್ರೆಸ್ ನಾಯಕರಿಗೆ ನಿಜವಾದ ಗಾಂಧಿಗಿಂತ ಅವರ ಪ್ರತಿಮೆ ಹೆಚ್ಚು ಮುಖ್ಯವಾಗಿತ್ತು. ಯಾಕೆಂದರೆ ಕಾಂಗ್ರೆಸ್ ನಾಯಕರಿಗೆ ಪೂಜೆ ಮತ್ತು ಆರಾಧನೆಯ ಪರಂಪರೆಯಲ್ಲಿ ಬೆಳೆದ ಈ ದೇಶದಲ್ಲಿ ಪ್ರತಿಮೆಗಳ ಮಹತ್ವ ಏನೆಂದು ಗೊತ್ತಿತ್ತು. ಗಾಂಧಿಜಿಯರಿಗೂ ಸತ್ಯ, ಅಹಿಂಸೆ, ಹಿಂದೂ ಮುಸ್ಲಿಮ್ ಬಾಂಧವ್ಯ, ಹರಿಜನೋದ್ಧಾರ, ಶಕ್ತಿಯನ್ನು ಕೊಡುತ್ತಿತ್ತು. ಹೀಗಾಗಿ ಅವರ ಇದನ್ನೆಲ್ಲ ಅಮಲು ಪದಾರ್ಥದ ರೀತಿಯಲ್ಲಿ ಬಳಸಲು ಪ್ರಾರಂಭಿಸಿದರು. ಆಗ ಗಾಂಧಿಯವರನ್ನು ಕಾಡಲು ಪ್ರಾರಂಭಿಸಿದ್ದು ನಂಬಿಕೆಯೆ ಸಮಸ್ಯೆಯೇ. ಅವರು ಈ ಎಲ್ಲ ವಿಚಾರಗಳನ್ನು ಎಷ್ಟು ಪ್ರಬಲವಾಗಿ ನಂಬಿಕೊಂಡಿದ್ದರೆಂದರೆ ಅವರಿಗೆ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯಗಳನ್ನು ಮುಕ್ತವಾಗಿ ನೋಡುವ ಮನಸ್ಸೇ ಉಳಿಯಲಿಲ್ಲ. ನಂಬಿಕೆ ಗಾಂಧಿಯವರನ್ನು ಬಂಧಿಯಾಗಿ ಮಾಡಿತ್ತು. ಹೀಗಾಗಿ ಸುಭಾಷಚಂದ್ರ ಬೋಸ್, ಡಾ. ಅಂಬೇಡ್ಕರ್ ಮೊದಲಾದವರನ್ನು ಅರ್ಥ ಮಾಡಿಕೊಳ್ಳಲು ಗಾಂಧೀಜಿಗೆ ಸಾಧ್ಯವಾಗಲೇ ಇಲ್ಲ. ತುಂಡು ಬಟ್ಟೆಯ ಫಕೀರರಾದ ಗಾಂಧಿಜಿಗೆ ನೆಹರೂ ತುಂಬಾ ಇಷ್ಟವಾಗುತ್ರಿದ್ದರು. ಖಾದಿ ಬಟ್ಟೆ ಧರಿಸುತ್ತಿದ್ದ ನೆಹರೂ ವಿದೇಶಿ ಮನಸ್ಸನ್ನು ಬಚ್ಚಿಟ್ಟುಕೊಂಡಿದ್ದು ಗಾಂಧೀಜಿಯವರಿಗೆ ಕಾಣಲೇ ಇಲ್ಲ. ಆದರೆ ಸೂಟ್ ಧರಿಸಿ, ಸಿಗಾರ್ ಸೇದುತ್ತಿದ್ದ ಜಿನ್ನಾ ಅವರನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಗಾಂಧಿಜಿಯವರ ಸುತ್ತ ಮುತ್ತ ಇದ್ದು ಕೊಡೆ ಹಿಡಿಯುತ್ತಿದ್ದ ನಾಯಕ ಗಣ ಜಿನ್ನಾ ಅವರನ್ನು ಖಳನಾಯಕ ಎಂದೇ ಬಿಂಬಿಸುವ ಕೆಲಸ ಮಾಡುತ್ತಿತ್ತು.
ಜಿನ್ನಾ ಅವರು ಎರಡು ದೇಶಗಳ ಥಿಯರಿಗೆ ಪರವಾಗಿದ್ದರೆ ವಿರೋಧವಾಗಿದ್ದರೆ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಎಡ ಪಂಥೀಯ ಇತಿಹಾಸ ತಜ್ನರು ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ಬಲ ಪಂಥೀಯ ಇತಿಹಾಸ ತಜ್ನರು ಇನ್ನೊಂದು ರೀತಿಯ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಆದ್ದರಿಂದ ಈ ಬಗ್ಗೆ ಹೀಗೆ ಎಂದು ಹೇಳುವುದು ಕಷ್ಟ,
ಈಗ ಜಿನ್ನಾ ವಿಚಾರಕ್ಕೆ ಬರುತ್ತೇನೆ. ಲಾಲಕೃಷ ಆಡ್ವಾಣಿ ಪಾಕಿಸ್ಥಾನಕ್ಕೆ ಹೋಗಿ ಜಿನ್ನಾ ಅವರ ಬಗ್ಗೆ ನೀಡಿದ ಹೇಳಿಕೆ ಆರ್ ಎಸ್ ಎಸ್ ನಾಯಕರಿಗೆ ಪಥ್ಯವಾಗಲಿಲ್ಲ. ಹೀಗಾಗಿ ಅವರು ಒಮ್ಮೆಲೆ ಖಳನಾಯಕರಾದರು. ಪ್ರಾಯಶ: ಅಡ್ವಾಣಿ ಇದನ್ನು ನಿರೀಕ್ಷಿಸಿರಲಿಲ್ಲ. ನಿರೀಕ್ಷಿಸಿದ್ದರೆ ಅವರು ಈ ಮಾತುಗಳನ್ನು ಹೇಳುತ್ತಿದ್ದರೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಹಾಗೆ ಜಿನ್ನಾ ಬಗ್ಗೆ ಅವರ ಆಡಿದ್ದ ಮಾತುಗಳು ಅವರದೇ ನಂಬಿಕೆಯ ಮಾತುಗಳೇ ಅಥವಾ ಸುಧೀಂದ್ರ ಕುಲಕರ್ಣಿ ಅವರ ಮಾತುಗಳೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಈ ನಡುವೆ ಕಳೆದ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಮತ್ತೆ ತನ್ನ ಸೈದ್ಧಾಂತಿಕ ನೆಲಗಟ್ಟಿನ ಹುಡುಕಾಟದಲ್ಲಿ ತೊಡಗಿದೆ. ಹಾಗೆ ಬಿಜೆಪಿ ಹಿರಿಯ ನಾಯಕರು ಸೈದ್ಧಾಂತಿಕ ಗಲಿಬಿಲಿಯನ್ನು ಅನಿಭವಿಸುತ್ತಿದ್ದಾರೆ. ಅವರಿಗೆ ಯಾವ ಸಿದ್ಧಾಂತ ತಮಗೆ ಮತಗಳನ್ನು ತಂದುಕೊಡಬಹುದು ಎಂಬುದೇ ಅರ್ಥವಾಗುತ್ತಿಲ್ಲ. ಈ ವಿಚಾರದಲ್ಲಿ ಪಕ್ಷದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ತಮ್ಮ ಬದುಕಿನಲ್ಲಿ ಒಮ್ಮೆ ಪ್ರಧಾನಿ ಪಟ್ಟವನ್ನು ಏರಲೇಬೇಕು ಎಂದುಕೊಂಡಿರುವ ಆಡ್ವಾಣಿ ಮತ್ತೆ ಆರ್ ಎಸ್ ಎಸ್ ನ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಹಾಗೆ ಆರ್ ಎಸ್ ಎಸ್ ಕೂಡ ಬಿಜೆಪಿ ಪಕ್ಷವನ್ನು ಸರಿಪಡಿಸುವ ತನ್ನ ಇಂಗಿತವನ್ನು ಈಗಾಗಲೇ ವ್ಯಕ್ತಪಡಿಸಿದೆ. ಆದರೆ ಇನ್ನೂ ವಾಜಪೇಯಿ ರಾಜಕಾರಣದ ಮೋಹ ಮತ್ತು ನೆನಪಿನಲ್ಲೇ ಇರುವ ಕೆಲವು ನಾಯಕರು ಈ ವಿಚಾರದಲ್ಲಿ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ. ಇವರಲ್ಲಿ ಜಸ್ವಂತ್ ಸಿಂಗ ಕೂಡ ಒಬ್ಬರು.
ಜಸ್ವಂತ್ ಸಿಂಗ್ ಜಿನ್ನಾ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಎಷ್ಟರ ಮಟ್ಟಿಗೆ ಸರಿ ಎಂಬುದು ಬೇರೆ ವಿಚಾರ. ಆದರೆ ಅವರು ಬಿಜೆಪಿ ಆಂತರಿಕ ಬೇಗುದಿಯಲ್ಲಿ ಬೇಯುತ್ತಿರುವಾಗಲೇ ಯಾಕೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು, ಪುಸ್ತಕ ಬರೆದರು ಎಂಬುದು ಮುಖ್ಯ. ಇದು ಸಹ ಬಿಜೆಪಿ ನಾಯಕತ್ವಕ್ಕೆ ಸೆಡ್ದು ಹೊಡೆಯುವ ಒಂದು ಯತ್ನವಾಗಿರಬಹುದು. ಜಿನ್ನಾ ಎಂಥವರಾಗಿದ್ದರು ಎಂಬುದಕ್ಕಿಂತ ರಾಜನಾಥ್ ಸಿಂಗ್ ಅವರಿಗೆ ಸೆಡ್ದು ಹೊಡೆಯುವುದು ಅವರಿಗೆ ಮುಖ್ಯವಾಗಿತ್ತು. ಆರ್ ಎಸ್ ಎಸ್ ಹಿಡಿತವನ್ನು ಪರೀಕ್ಷಿಸುವುದು ಪ್ರಮುಖವಾಗಿತ್ತು.
ಈಗ ಜಸ್ವಂತ್ ಸಿಂಗ್ ಅವರ ಹೇಳಿಕೆಯಿಂದ ಒಂದು ಅಂಶ ಸ್ಪಷ್ಟವಾಗಿದೆ. ಆರ್ ಎಸ್ ಎಸ್ ಬಿಜೆಪಿಯ ಮೇಲಿನ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ. ಆಡ್ವಾಣಿ ತಮ್ಮ ಸ್ವಘೋಷಿತ ಮುಖವಾಡವನ್ನು ಕಳಚಿದ್ದಾರೆ. ಹಾಗೆ ತಾವು ವಾಜಪೇಯಿ ಅವರಂತ ನಾಯಕರಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದರ ಜೊತೆಗೆ ಇನ್ನೊಂದು ಮಾತು. ಜಿನ್ನಾ ಧರ್ಮ ನಿರಪೇಕ್ಷ ವ್ಯಕ್ತಿಯಾಗಿದ್ದರೆ ನಾವು ಬೇಸರ ಪಡುವ ಅಗತ್ಯವಿಲ್ಲ. ನಮ್ಮ ದೇಶದ ಕೆಲವು ನಾಯಕರೇ ದೇಶದ ವಿಭಜನೆಗೆ ಕಾರಣವಾಗಿದ್ದರೆ ಅದನ್ನು ಸ್ವೀಕರಿಸಲು ಹಿಂಜರಿಯಬೇಕಿಲ್ಲ. ಯಾಕೆಂದರೆ ಇತಿಹಾಸ ಎನ್ನುವುದು ಕಾಲಕೋಶದೊಳಗೆ ಸೇರಿಹೋಗಿರುವಂಥಹುದು. ಅದನ್ನು ಈಗ ಬದಲಿಸಲು ಸಾಧ್ಯವಿಲ್ಲ. ಆದರೆ ಇತಿಹಾಸವನ್ನು ಅರ್ಥಮಾಡಿಕೊಂಡರೆ ವರ್ತಮಾನವನ್ನು ಅರ್ಥಮಾಡಿಕೊಳ್ಳಬಹುದು. ಭವಿಷ್ಯದ ಕನಸು ಕಾಣಬಹುದು.

Saturday, August 15, 2009

ಮುಖವಾಡದ ಹಿಂದಿನ ಮುಖಗಳು........

ನಾನು ಸುವರ್ಣ ಮತ್ತು ನನ್ನ ಸಂಬಂಧದ ಬಗ್ಗೆ ಬರೆದ ಕೆಲವು ಮಾತುಗಳಿಗೆ ಹಲವು ಪ್ರತಿಕ್ರಿಯೆಗಳು ಬಂದಿವೆ. ಕೆಲವು ಪ್ರತಿಕ್ರಿಯೆಗಳಲ್ಲಿ ನನ್ನ ಬಗ್ಗೆ ಪ್ರೀತಿ ಮತ್ತು ಗೌರವಗಳಿವೆ. ಅವರಿಗೆ ನಾನು ಕೃತಜ್ನನಾಗಿದ್ದೇನೆ. ಇನ್ನೂ ಕೆಲವು ಪ್ರತಿಕ್ರಿಯೆಗಳನ್ನು ಅನಾಮಿಕರು ಬರೆದಿರುವುದರಿಂದ ಅವರ ಮುಖಗಳು ಕಾಣುವುದಿಲ್ಲ. ಅಂದರೆ ಇದೆಲ್ಲ ಮುಖವಾಡಗಳಿಂದ ಬಂದ ಮಾತುಗಳು. ಆದರೂ ಇಂತಹ ಮುಖಗಳು ನಮ್ಮ ನಡುವಿನ ಮುಖಗಳೇ ಆಗಿರುವುದರಿಂದ ನಾನು ಇದನ್ನು ನಿರ್ಲಕ್ಷಿಸಲಾರೆ. ನಾನು ಸುವರ್ಣದಲ್ಲಿ ಏನು ಮಾಡಿದೆ ಏನು ಮಾಡಿಲ್ಲ ಎಂಬದು ನನಗೆ ಗೊತ್ತಿದೆ. ಆದ್ದರಿಂದ ಈ ಬಗ್ಗೆ ಬೇರೆಯವರ ಹೊಗಳಿಕೆ ನನಗೆ ಬೇಕಿಲ್ಲ. ಇನ್ನು ನಾನು ಮಾಡಿದ ಕಾರ್ಯಕ್ರಮಗಳು ಮಹಾನ್ ಗ್ರೇಟ್ ಎಂದು ನಾನು ಹೇಳಿಕೊಳ್ಳಲಿಲ್ಲ. ನಾನು ಮಾಡುತ್ತಿದ್ದ ಕಾರ್ಯಕ್ರಮಗಳನ್ನು ಇನ್ನು ನಾನು ಮಾಡುತ್ತೇನೆಯೋ ಅಥವಾ ಇಲ್ಲವೋ ಎಂದು ನನಗೆ ನಾನು ಹೇಳಿಕೊಂಡ ಅಂತರಂಗದ ಮಾತುಗಳು ಅವು ಅಷ್ಟೇ. ನಾನು ಮಹಾನ್ ಪತ್ರಕರ್ತ ನಾನು ಮಾಧ್ಯಮದಲ್ಲಿ ಮಹಾನ್ ಸಾಧನೆ ಮಾಡಿದ್ದೇನೆ ಎಂದು ಹೇಳಿಕೊಳ್ಳುವ ವ್ಯಕ್ತಿ ಕೂಡ ನಾನಲ್ಲ. ಇನ್ನು ವಾಹಿನಿಯಲ್ಲಿ ಕೆಲಸ ಮಾಡಿದ ಮಾಡುತ್ತಿರುವ ನನ್ನ ಸಹೋದ್ಯೋಗಿಗಳನ್ನು ಟೀಕೆಯನ್ನು ನಾನು ಮಾಡಿಲ್ಲ. ನಾನು ಪ್ರತಿ ಹಂತದಲ್ಲಿ ನನ್ನ ಹುಡುಗರು ಎಂದು ಹೇಳಿದ್ದೇನೆ. ಹಾಗೆ ಕೆಲವೊಬ್ಬರ ವರ್ತನೆಯ ಬಗ್ಗೆ ವಿಷಾಧದ ಮಾತುಗಳನ್ನು ಆಡಿದ್ದೇನೆ. ಒಂದು ಸಂಸ್ಥೆ ಯಶಸ್ವಿಯಾಗಬೇಕಾದರೆ ಅಲ್ಲಿ ಗುಂಪುಗಾರಿಕೆ ಇರಬಾರದು ಎಂಬ ಕಳಕಳಿಯಿಂದ ಆಡಿದ ಮಾತುಗಳು ಅವು.
ಇದೆಲ್ಲ ನಮ್ಮ ಅನಾಮಿಕ ಅಥವಾ ಮುಖವಾಡದ ಮೂಲಕ ಮಾತನಾಡುವವರಿಗೆ ಅರ್ಥವಾಗುತ್ತದೆ ಎಂದು ನಾನು ನಂಬಿದ್ದೇನೆ. ನನಗೆ ಕುಮ್ರಿಯೇ ಗತಿ ಎಂದು ಒಬ್ಬ ಅನಾಮಿಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮಾತಿನಲ್ಲಿನ ವಿಷ ನನಗೆ ಅರ್ಥವಾಗುತ್ತದೆ. ಆದರೆ ನನಗೆ ಬೇರೆ ಹೊಣೆಗಾರಿಕೆಯನ್ನು ನೀಡಲಾಗಿದೆ ಮತ್ತು ಆ ಹೊಣೆಗಾರಿಕೆಯನ್ನು ನಾನು ನಿರ್ವಹಿಸಲಿದ್ದೇನೆ ಎಂದು ವಿನಯವಾಗಿ ಈ ಮುಖವಾಡ ವ್ಯಕ್ತಿಗೆ ತಿಳಿಸಲು ಬಯಸುತ್ತೇನೆ.
ಮಾಧ್ಯಮದಲ್ಲಿ ಕೆಲಸ ಮಾಡುವಾಗ ನಮ್ಮನ್ನು ವಿರೋಧಿಸುವವರು ಇದ್ದಾರೆ ಎಂದರೆ, ನಮ್ಮನ್ನು ಒಪ್ಪಿಕೊಳ್ಳುವವರೂ ಇದ್ದಾರೆ ಎಂದು ಅರ್ಥ. ಆದರೆ ಮಾತನಾಡುವವರು ತಾವು ಯಾರು ಎಂಬುದನ್ನು ಬಹಿರಂಗಪಡಿಸಿ ಮಾತನಾಡಿದರೆ ಅದಕ್ಕೆ ತೂಕ ಬರುತ್ತದೆ. ಅರ್ಥಪೂರ್ಣವಾಗಿ ಚರ್ಚೆ ಮಾಡಲು ಅವಕಾಶವಾಗುತ್ತದೆ. ಇಂಥಹ ಚರ್ಚೆಗಳಿಗೆ ನಾನು ಸದಾ ಸಿದ್ಧ. ಆದರೆ ಮುಖವಾಡದ ಹಿಂದಿರುವ ಕುರೂಪ ಮುಖಗಳ ಬಗ್ಗೆ ನಾನು ಮಾತನಾಡಲಾರೆ. ಎಲ್ಲಿಯೋ ನಿಂತು ಮನಸ್ಸಿಗೆ ಬಂದ ಹಾಗೆ ಕಿರಿಚುವವರಿಗೆ ಪ್ರತಿಕ್ರಿಯೆ ನೀಡಲಾರೆ.

Tuesday, August 11, 2009

ನಾನು ಹೋಗಿ ಬರಲಾ.........

ಕಳೆದ ಫೆಬ್ರವರಿ ತಿಂಗಳಿನ ನಂತರ ನಾನು ಬ್ಲಾಗ್ ನಲ್ಲಿ ಏನನ್ನೂ ಬರೆದಿಲ್ಲ. ಚಾನಲ್ ನ ಕೆಲಸದ ನಡುವೆ ಬ್ಲಾಗ್ ಬರೆಯುವುದಿರಲಿ ನೋಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ವಾಹಿನಿಯನ್ನು ಕಟ್ಿ ಬೆಳೆಸುವ ಕೆಲಸ ಇದೆಯಲ್ಲ ಅದೇ ಹಾಗೆ. ಈ ಕೆಲಸದ ನಡುವೆ ನನ್ನ ಓದು ಕುಂಠಿತವಾಯಿತು. ಒಂದು ನಿಮಿಷ ಎಲ್ಲವನ್ನೂ ಬಿಟ್ಟು ನಿರಾಳವಾಗಿ ಇರದಂತಾಯಿತು. ನಾನು ವಾಹಿನಿಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದೆ. ಎಲ್ಲದಕ್ಕೂ ಒಂದು ಬಿಡುಗಡೆಯ ಕಾಲ ಅಂತ ಇರುತ್ತೆ. ಬಿಡುಗಡೆ ಅನ್ನುವುದೇ ನಮ್ಮ ಮನಸ್ಸನ್ನು ಪ್ರಫುಲ್ಲಿತವನ್ನಾಗಿ ಮಾಡುತ್ತದೆ. ಬಹುತೇಕ ಸಂದರ್ಭದಲ್ಲಿ ನಾವು ಬಿಡುಗಡೆಗಾಗಿ ಯತ್ನ ನಡೆಸುತ್ತ ಮತ್ತಷ್ಟು ಬಂಧನಕ್ಕೆ ಒಳಗಾಗಿರುತ್ತೇವೆ.
ಈಗ ನನಗೆ ಬಿಡುಗಡೆಯ ಸಮಯ ಬಂದಿದೆ. ನನ್ನ ವಾಹಿನಿಯನ್ನು ಇದ್ದಲ್ಲಿ ಇದ್ದ ಹಾಗೆ ಬಿಟ್ಟು ಮುಂದಕ್ಕೆ ನಡೆದು ಬಿಡುವ ಸಮಯ. ಈ ಸಮಯ ಮುಂದಕ್ಕೆ ಹೋಗುವಾಗ ಹಿಂದಕ್ಕೆ ನೋಡುವ ಸಮಯ ಕೂಡ. ಈ ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದಾಗ,ಕೆಲಸಕ್ಕೆ ಬರಲು ಯಾರೂ ಸಿದ್ಧರಿರಲಿಲ್ಲ. ಎಲ್ಲರಿಗೂ ಈ ವಾಹಿನಿ ಉಳಿಯಬಹುದೇ ಎಂಬ ಆತಂಕ. ಇಂಥಹ ಸ್ಥಿತಿಯಲ್ಲಿ ಬಂದ ಹುಡುಗರನ್ನು ಕಟ್ಟಿಕೊಂಡು ವಾಹಿನಿಯನ್ನು ಪ್ರಾರಂಭಿಸಿದೆವು. ಕ್ರೆಡಿಬಿಲಿಟಿಗೆ ಹೆಚ್ಚಿನ ಮಹತ್ವ ಕೊಡಬೇಕು ಎಂದುಕೊಂಡೆವು. ಹಾಗೆ ತುಂಬಾ ವಿಭಿನ್ನವಾಗಿ ಸುದ್ದಿಯನ್ನು ನೀಡುವುದಕ್ಕೆ ಯತ್ನ ನಡೆಸಿದೆವು. ಜಿ ಇ ಸಿ ಚಾನಲ್ಲಿನಲ್ಲಿ ಸುದ್ದಿ ಬರುವಾಗ ಒಳ್ಳೆ ರೇಟಿಂಗ್ ಕೂಡ ಇತ್ತು. ಇದನ್ನು ಗಮನಿಸಿ ನಾವು ಸುದ್ದಿ ವಾಹಿನಿಯನ್ನು ಪ್ರಾರಂಭಿಸಿದೆವು. ಸಣ್ಣದಾಗಿದ್ದ ನಮ್ಮ ಕುಟುಂಬ ದೊಡ್ದದಾಯಿತು. ಮನೆಗೆ ಬಂದವರು ಮನೆಯವರಾಗಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಒಂದು ಕುಟುಂಬದ ಯಜಮಾನನಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು ಎಂದು ನಾನು ಅಂದುಕೊಂಡೆ. ಅದರಂತೆ ಕೆಲಸ ನಿರ್ವಹಿಸಲು ಯತ್ನ ನಡೆಸಿದೆ. ಆದರೆ ಎಲ್ಲೋ ತಪ್ಪಾಗಿತ್ತು. ನನಗೆ ಆ ತಪ್ಪು ತಿಳಿದಿರಲಿಲ್ಲ. ನನಗೆ ಸುದ್ದಿ ಮತ್ತು ವಾಹಿನಿಯ ಬದ್ಧತೆ ಬಿಟ್ಟು ಬೇರೆ ಇರಲಿಲ್ಲ. ಈ ಕಾರಣದಿಂದಾಗಿ ಸಹೋದ್ಯೋಗಿಗಳಿಗೆ ಕೆಲವೊಮ್ಮೆ ರೇಗಿದ್ದು ಉಂಟು ಬೈದಿದ್ದು ಉಂಟು.
ನಮ್ಮ ಬದುಕಿನಲ್ಲಿ ಎಲ್ಲ ಕನಸುಗಳೂ ನನಸಾಗುವುದಿಲ್ಲ. ಅದಕ್ಕಾಗಿಯೇ ಬದುಕಿಗೆ ಒಂದು ಆಕರ್ಷಣೆ ಇದೆ. ನಾನೆಂದುಕೊಂಡಿದ್ದನ್ನು ನಾನು ಮಾಡಲು ಸಾಧ್ಯವಾಗಲಿಲ್ಲ. ನನ್ನ ಸ್ನೇಹ ಶೀಲ ಪ್ರವೃತ್ತಿ ದೌರ್ಬಲ್ಯ ಎಂಬಂತೆ ಪ್ರತಿಬಿಂಬಿತವಾಯಿತು. ಮನುಷ್ಯನ ಬದಲಾವಣೆಯಲ್ಲಿ ನಂಬಿಕೆ ಇಟ್ಟ ನಾನು ಎಲ್ಲರೂ ಬದಲಾಗುತ್ತಾರೆ ಎಂದು ನಂಬಿಕೊಂಡಿದ್ದೆ. ಆದರೆ ಬದಲಾಗಬೇಕಾದ ನಮ್ಮ ಸಹೋದ್ಯೋಗಿಗಳು ಬದಲಾಗಲಿಲ್ಲ. ಬದಲಾಗಿ ಈ ಮೇಲ್ ಗಳಲ್ಲಿ ದೂರುಗಳಲ್ಲಿ ನೀಡುವುದರಲ್ಲಿ ಸಮಯವನ್ನು ವ್ಯಯಿಸತೊಡಗಿದರು. ಇದೆಲ್ಲ ನನ್ನ ಮನಸ್ಸಿಗೆ ತುಂಬಾ ನೋವನ್ನು ಕೊಡುತ್ತಿತ್ತು. ನನ್ನ ಹುಡುಗರು ಹೀಗೆ ಮಾಡುತ್ತಾರಲ್ಲ ಎಂದು ಬೇಸರವಾಗುತ್ತಿತ್ತು. ಆದರೆ ಎಷ್ಟೆಂದರೂ ನನ್ನ ಹುಡುಗರು ತಾನೆ ಎಂದು ನಾನು ಸುಮ್ಮನಾಗುತ್ತಿದ್ದ್ವೆ. ಎಂದೂ ಯಾರ ವಿರುದ್ಧವೂ ನಾನು ದೂರಲಿಲ್ಲ. ದೂರು ನೀಡಲಿಲ್ಲ.
ಈಗ ನಾನು ಹೊಸ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೊರಟು ನಿಂತಿದ್ದೇನೆ. ಹೊಸ ಸವಾಲು ನನ್ನ ಮುಂದಿದೆ. ಕಳೆದ ಎರಡು ಮೂರು ವರ್ಷಗಳಿಂದ ನನ್ನ ಜೊತೆ ಕೆಲಸ ಮಾಡಿದ ನನ್ನ ಹುಡುಗರಿಗೆ ಬೈಯಲು ನಾನಿರುವುದಿಲ್ಲ .ತಪ್ಪು ಎಂದು ಅನ್ನಿಸಿದ್ದನ್ನು ಹೇಳಲು ನಾನು ಇರುವುದಿಲ್ಲ. ನಾನು ಕಟ್ಟಿದ ವಾಹಿನಿಯ ಮೆಟ್ಟಿಲುಗಳನ್ನು ಇಳಿದು ಹೊರಟು ಬಿಡುತ್ತೇನೆ. ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಬೇರೆಯವರು ಬರುತ್ತಾರೆ.
ನಾನು ನಮ್ಮ ಹಿರಿಯ ಸಹೋದ್ಯೋಗಿಗಳ ಜೊತೆ ಮಾತನಾಡುತ್ತ ಒಂದು ಮಾತು ಹೇಳಿದೆ. "ನೀವೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ್ದರೆ ಇಂದು ನಮ್ಮ ವಾಹಿನಿ ನಂಬರ್ ಒನ್ ವಾಹಿನಿಯಾಗುತ್ತಿತ್ತು. ಆದರೆ ಅದು ಆಗಲಿಲ್ಲ. ನಿಮಗೆಲ್ಲ ನನ್ನ ಬಗ್ಗೆ ಭಯವಿತ್ತು. ನನ್ನ ಸಲಹೆಗಳನ್ನು ಸ್ವೀಕರಿಸುವ ಮುಕ್ತ ಮನಸ್ಸು ಇರಲಿಲ್ಲ. ಇಗೋ ನಿಮ್ಮನ್ನು ಬಂಧಿಸಿತ್ತು. ಇದಕ್ಕಾಗಿ ಗುಂಪುಗಾರಿಕೆ ಮಾಡುವವರು ನನ್ನನ್ನೂ ಗುಂಪುಗಾರಿಕೆ ಮಾಡುವವ ಎಂದು ಪ್ರತಿಬಿಂಬಿಸಲು ಯತ್ನ ನಡೆಸಿದಿರಿ. ಆದರೆ ನನಗೆ ಅಂಟಿಕೊಂದು ಇರುವುದು ಗೊತ್ತಿದೆ. ಹಾಗೆ ಎಲ್ಲವನ್ನು ಬಿಟ್ಟು ತಿರುಗಿ ನೋಡದೇ ಹೋಗುವುದಕ್ಕೂ ಗೊತ್ತಿದೆ. "
ಹಾಗೆ ತಿರುಗಿ ನೋಡದೇ ಹೋಗಿ ಬಿಡುವುದು ಯಾವಾಗಲೂ ಸಂತೋಷವನ್ನು ನೀಡುತ್ತದೆ. ನಾನು ಹಲವಾರು ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಕೆಲಸ ಮಾಡಿ ಹಾಗೆ ಹೊರಟು ಬಂದಿದ್ದೇನೆ. ಬರುವಾಗ ನಾನೆಲ್ಲಿ ತಪ್ಪು ಮಾಡಿದೆ ಎಂದು ಧ್ಯಾನಿಸುತ್ತ ಕುಳಿತುಕೊಳ್ಳುತ್ತೇನೆ. ಕೆಲವೊಮ್ಮೆ ನನ್ನ ತಪ್ಪುಗಳು ನನಗೆ ಅರಿವಾಗುತ್ತದೆ. ಕೆಲವೊಮ್ಮೆ ತಪ್ಪುಗಳು ಎದುರಿಗೆ ಬರುವುದೇ ಇಲ್ಲ. ಈ ಎಲ್ಲ ಅನುಭವಗಳ ನಡುವೆಯೂ ನಾನು ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿಲ್ಲ. ಕಳೆದುಕೊಳ್ಳುವುದಿಲ್ಲ. ಯಾಕೆಂದರೆ ಮನುಷ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡ ದಿನ ಬದುಕಿನ ಹಾದಿಗೆ ತೆರೆ ಬೀಳುತ್ತದೆ, ಹೀಗೆ ಮನುಷ್ಯರನ್ನು ನಂಬುತ್ತಲೇ ನಮ್ಮಲ್ಲೆರ ಸಣ್ಣತನ, ಗುಂಪುಗಾರಿಕೆಯ ಬಗ್ಗೆ ಸಣ್ನಕ್ಕೆ ನಕ್ಕು ಬಿಡುತ್ತೇನೆ. ಶಶಿಧರ್ ಭಟ್ಟಾ ಇದು ನಿನಗೆ ಇನ್ನೊಂದು ಅನುಭವ ಎಂದು ನನಗೆ ನಾನೇ ಹೇಳಿಕೊಳ್ಳುತ್ತೇನೆ.
ಈಗ ಇನ್ನೊಂದು ಜವಾಬ್ದಾರಿಯನ್ನು ನಾನು ಒಹಿಸಿಕೊಳ್ಳಲು ಹೊರಟಿದ್ದೇನೆ. ಮತ್ತೆ ದ್ರುಶ್ಯ ಮಾಧ್ಯಮಕ್ಕೆ ನಾನು ಬರುತ್ತೇನೆಯೋ ಇಲ್ಲವೋ ನನಗೆ ತಿಳಿಯದು. ಮಹಾಯುದ್ಧ, ನ್ಯೂಸ್ ಅಂಡ್ ಯೂಸ್, ನಿಗೂಢ ಜಗತ್ತಿನಂತಹ ಕಾರ್ಯಕ್ರಮಗಳನ್ನು ಮತ್ತೆ ಮಾಡುತ್ತೇನೆಯೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಒಂದು ಮಾತನ್ನು ನಾನು ನಿಮಗೆ ಹೇಳಲೇ ಬೇಕು. ಸುವರ್ಣ ನ್ಯೂಸ್ ನನ್ನ ಮಗು. ಯಾರು ಒಪ್ಪಲಿ ಬಿಡಲಿ ಈ ಮಗುವಿನ ಹೆರಿಗೆ ನೋವನ್ನು ನಾನು ಅನುಭವಿಸಿದ್ದೇನೆ. ಇದು ರಚ್ಚೆ ಹಿಡಿದಾಗ ಸಮಾದಾನ ಮಾಡಿದ್ದೇನೆ. ಮುದ್ದು ಮಾಡಿದ್ದೇನೆ. ಹಾಗೆ ಮಗು ನನಗೆ ಒದ್ದಾಗ ಪ್ರೀತಿಯಿಂದ ತಲೆ ನೇವರಿಸಿದ್ದೇನೆ. ಈ ಮಗುವನ್ನು ಬಿಟ್ಟು ಹೋಗುವ ಘಳಿಗೆಯಲ್ಲಿ ಸ್ವಲ್ಪ ಬೇಸರವಾಗುವುದು ಸಹಜ. ಆದರೆ ಈ ಮಗುವಿನ ಬಗ್ಗೆ ನಿಮಗೆ ಪ್ರೀತಿ ಇರಲಿ. ನಿಮ್ಮ ಮಡಿಲಲ್ಲಿ ಹಾಕಿರುವ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳಿ.