Thursday, August 20, 2009

ಗಾಂಧಿ, ಜಿನ್ನಾ ಮತ್ತು ಇತಿಹಾಸ

ಭಾರತೀಯ ಜನತಾ ಪಕ್ಷದ ಹನುಮಂತ ಎಂದೇ ಖ್ಯಾತರಾಗಿದ್ದ ಜಸ್ವಂತ್ ಸಿಂಗ್ ಈಗ ರಾವಣರಾಗಿದ್ದಾರೆ. ದಿನ ಬೆಳಗಾಗುವುದರ ಒಳಗೆ ರಾವಣರಾಗಿ ಅವರ ಹತ್ಯೆಯೂ ನಡೆದು ಹೋಗಿದೆ. ರಾಮ ನಾಮ ಜಪದ ಮೂಲಕವೇ ಅಧಿಕಾರ ರಾಜಕಾರಣ ಮಾಡುತ್ತ ಬಂದ ಬಿಜೆಪಿಯ ಸ್ಥಿತ್ಯಂತರದ ಇನ್ನೊಂದು ಘಟ್ಟವನ್ನು ನಾವು ಈ ಬೆಳವಣಿಗೆಗಳಿಂದ ಗುರುತಿಸಬಹುದಾಗಿದೆ. ಆದರೆ ಈ ಬೆಳವಣಿಗೆ ಇಷ್ಟಕ್ಕೆ ಸೀಮಿತವಾಗಿಲ್ಲ. ದೇಶದ ರಾಜಕೀಯ ಪಕ್ಷಗಳ ಬದಲಾಗುವ ಸೈದ್ಧಾಂತಿಕ ನಿಲುವುಗಳು ಇಲ್ಲಿ ಬಟ್ಟಾಬಯಲಾಗಿದೆ. ಜೊತೆಗೆ ರಾಜಕೀಯ ನಾಯಕರ ಅಧಿಕಾರದ ರಾಜಕಾರಣದ ಇನ್ನೊಂದು ಉದಾಹರಣೆ ಕೂಡ ಇದಾಗಿದೆ.
ಜಿನ್ನಾ ಅವರ ವೈಕ್ತಿತ್ವ ಎಂತಹುದಾಗಿತ್ತು ಎಂಬುದು ಐತಿಹಾಸಿಕವಾಗಿ ಬಹಳ ಮುಖ್ಯವಾದುದು. ಗಾಂಧಿ ಅವರನ್ನು ಆರಾಧಿಸುತ್ತಲೇ ಬಂದ ಈ ದೇಶ ಬೇರೆ ನಾಯಕರನ್ನು ಅರ್ಥ ಮಾಡಿಕೊಂಡ ಬಗೆಯಾವುದು ಎಂಬುದು ಕೂಡ ಕಾಲದ ಪರೀಕ್ಷೇಗೆ ಒಳಗಾಗಬೇಕಾದ್ದು ಅತ್ಯಗತ್ಯ. ಗಾಂಧಿ ಹಲವು ಕಾರಣಗಳಿಂದ ನಮಗೆ ಮುಖ್ಯರಾಗಿದ್ದವರು. ಸತ್ಯ ಮತ್ತು ಅಹಿಂಸೆ ಎಂಬ ಅಸ್ತ್ರಗಳನ್ನು ಅವರು ಬಳಸಿದ ರೀತಿ ಕೂಡ ಅನನ್ಯ. ಹಾಗೆ ಅವರಿಗೆ ಭಾರತ ಎಂಬ ಈ ದೇಶ ಅರ್ಥವಾದಂತೆ ಆ ಕಾಲದ ಬೇರೆ ಯಾವ ನಾಯಕರಿಗೂ ಅರ್ಥವಾಗಿರಲಿಲ್ಲ. ಜೊತೆಗೆ ಹಿಂದೂ ಮತ್ತು ಮುಸ್ಲೀಮರು ಜೊತೆಯಾಗಿ ಬದುಕಬೇಕು ಎಂಬ ಆಸೆಯನ್ನು ಯಾರೂ ಸಂಶಯದಿಂದ ನೋಡುವುದು ಸಾಧ್ಯವಿಲ್ಲ. ಆದರೆ ಈ ವಿಚಾರಗಳಿಂದ ಮಾತ್ರ ಅವರನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲ. ಈ ಕಾರಣಕ್ಕೆ ಅವರು ಆರಾಧನೆಯ ಮೂರ್ತಿಯಾಗಬೇಕಾಗಿಲ್ಲ. ಅವರನ್ನು ಅರ್ಥ ಮಾಡಿಕೊಳ್ಳುವಾಗ ನಮಗೆ ಜಿನ್ನಾ ಕೂಡ ಮುಖ್ಯ.
ಆದರೆ ಗಾಂಧಿ ಬದುಕಿದ್ದಾಗಲೇ ಅವರ ಮೂರ್ತಿಯನ್ನು ನಿಲ್ಲಿಸಿ ಪೂಜೆ ಮಾಡಲು ಕೆಲವರು ಪ್ರಾರಂಭಿಸಿದ್ದರು. ನೆಹರೂ ಪಟೇಲ್ ಮೊದಲಾದ ಕಾಂಗ್ರೆಸ್ ನಾಯಕರಿಗೆ ನಿಜವಾದ ಗಾಂಧಿಗಿಂತ ಅವರ ಪ್ರತಿಮೆ ಹೆಚ್ಚು ಮುಖ್ಯವಾಗಿತ್ತು. ಯಾಕೆಂದರೆ ಕಾಂಗ್ರೆಸ್ ನಾಯಕರಿಗೆ ಪೂಜೆ ಮತ್ತು ಆರಾಧನೆಯ ಪರಂಪರೆಯಲ್ಲಿ ಬೆಳೆದ ಈ ದೇಶದಲ್ಲಿ ಪ್ರತಿಮೆಗಳ ಮಹತ್ವ ಏನೆಂದು ಗೊತ್ತಿತ್ತು. ಗಾಂಧಿಜಿಯರಿಗೂ ಸತ್ಯ, ಅಹಿಂಸೆ, ಹಿಂದೂ ಮುಸ್ಲಿಮ್ ಬಾಂಧವ್ಯ, ಹರಿಜನೋದ್ಧಾರ, ಶಕ್ತಿಯನ್ನು ಕೊಡುತ್ತಿತ್ತು. ಹೀಗಾಗಿ ಅವರ ಇದನ್ನೆಲ್ಲ ಅಮಲು ಪದಾರ್ಥದ ರೀತಿಯಲ್ಲಿ ಬಳಸಲು ಪ್ರಾರಂಭಿಸಿದರು. ಆಗ ಗಾಂಧಿಯವರನ್ನು ಕಾಡಲು ಪ್ರಾರಂಭಿಸಿದ್ದು ನಂಬಿಕೆಯೆ ಸಮಸ್ಯೆಯೇ. ಅವರು ಈ ಎಲ್ಲ ವಿಚಾರಗಳನ್ನು ಎಷ್ಟು ಪ್ರಬಲವಾಗಿ ನಂಬಿಕೊಂಡಿದ್ದರೆಂದರೆ ಅವರಿಗೆ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯಗಳನ್ನು ಮುಕ್ತವಾಗಿ ನೋಡುವ ಮನಸ್ಸೇ ಉಳಿಯಲಿಲ್ಲ. ನಂಬಿಕೆ ಗಾಂಧಿಯವರನ್ನು ಬಂಧಿಯಾಗಿ ಮಾಡಿತ್ತು. ಹೀಗಾಗಿ ಸುಭಾಷಚಂದ್ರ ಬೋಸ್, ಡಾ. ಅಂಬೇಡ್ಕರ್ ಮೊದಲಾದವರನ್ನು ಅರ್ಥ ಮಾಡಿಕೊಳ್ಳಲು ಗಾಂಧೀಜಿಗೆ ಸಾಧ್ಯವಾಗಲೇ ಇಲ್ಲ. ತುಂಡು ಬಟ್ಟೆಯ ಫಕೀರರಾದ ಗಾಂಧಿಜಿಗೆ ನೆಹರೂ ತುಂಬಾ ಇಷ್ಟವಾಗುತ್ರಿದ್ದರು. ಖಾದಿ ಬಟ್ಟೆ ಧರಿಸುತ್ತಿದ್ದ ನೆಹರೂ ವಿದೇಶಿ ಮನಸ್ಸನ್ನು ಬಚ್ಚಿಟ್ಟುಕೊಂಡಿದ್ದು ಗಾಂಧೀಜಿಯವರಿಗೆ ಕಾಣಲೇ ಇಲ್ಲ. ಆದರೆ ಸೂಟ್ ಧರಿಸಿ, ಸಿಗಾರ್ ಸೇದುತ್ತಿದ್ದ ಜಿನ್ನಾ ಅವರನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಗಾಂಧಿಜಿಯವರ ಸುತ್ತ ಮುತ್ತ ಇದ್ದು ಕೊಡೆ ಹಿಡಿಯುತ್ತಿದ್ದ ನಾಯಕ ಗಣ ಜಿನ್ನಾ ಅವರನ್ನು ಖಳನಾಯಕ ಎಂದೇ ಬಿಂಬಿಸುವ ಕೆಲಸ ಮಾಡುತ್ತಿತ್ತು.
ಜಿನ್ನಾ ಅವರು ಎರಡು ದೇಶಗಳ ಥಿಯರಿಗೆ ಪರವಾಗಿದ್ದರೆ ವಿರೋಧವಾಗಿದ್ದರೆ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಎಡ ಪಂಥೀಯ ಇತಿಹಾಸ ತಜ್ನರು ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ಬಲ ಪಂಥೀಯ ಇತಿಹಾಸ ತಜ್ನರು ಇನ್ನೊಂದು ರೀತಿಯ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಆದ್ದರಿಂದ ಈ ಬಗ್ಗೆ ಹೀಗೆ ಎಂದು ಹೇಳುವುದು ಕಷ್ಟ,
ಈಗ ಜಿನ್ನಾ ವಿಚಾರಕ್ಕೆ ಬರುತ್ತೇನೆ. ಲಾಲಕೃಷ ಆಡ್ವಾಣಿ ಪಾಕಿಸ್ಥಾನಕ್ಕೆ ಹೋಗಿ ಜಿನ್ನಾ ಅವರ ಬಗ್ಗೆ ನೀಡಿದ ಹೇಳಿಕೆ ಆರ್ ಎಸ್ ಎಸ್ ನಾಯಕರಿಗೆ ಪಥ್ಯವಾಗಲಿಲ್ಲ. ಹೀಗಾಗಿ ಅವರು ಒಮ್ಮೆಲೆ ಖಳನಾಯಕರಾದರು. ಪ್ರಾಯಶ: ಅಡ್ವಾಣಿ ಇದನ್ನು ನಿರೀಕ್ಷಿಸಿರಲಿಲ್ಲ. ನಿರೀಕ್ಷಿಸಿದ್ದರೆ ಅವರು ಈ ಮಾತುಗಳನ್ನು ಹೇಳುತ್ತಿದ್ದರೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಹಾಗೆ ಜಿನ್ನಾ ಬಗ್ಗೆ ಅವರ ಆಡಿದ್ದ ಮಾತುಗಳು ಅವರದೇ ನಂಬಿಕೆಯ ಮಾತುಗಳೇ ಅಥವಾ ಸುಧೀಂದ್ರ ಕುಲಕರ್ಣಿ ಅವರ ಮಾತುಗಳೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಈ ನಡುವೆ ಕಳೆದ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಮತ್ತೆ ತನ್ನ ಸೈದ್ಧಾಂತಿಕ ನೆಲಗಟ್ಟಿನ ಹುಡುಕಾಟದಲ್ಲಿ ತೊಡಗಿದೆ. ಹಾಗೆ ಬಿಜೆಪಿ ಹಿರಿಯ ನಾಯಕರು ಸೈದ್ಧಾಂತಿಕ ಗಲಿಬಿಲಿಯನ್ನು ಅನಿಭವಿಸುತ್ತಿದ್ದಾರೆ. ಅವರಿಗೆ ಯಾವ ಸಿದ್ಧಾಂತ ತಮಗೆ ಮತಗಳನ್ನು ತಂದುಕೊಡಬಹುದು ಎಂಬುದೇ ಅರ್ಥವಾಗುತ್ತಿಲ್ಲ. ಈ ವಿಚಾರದಲ್ಲಿ ಪಕ್ಷದಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ತಮ್ಮ ಬದುಕಿನಲ್ಲಿ ಒಮ್ಮೆ ಪ್ರಧಾನಿ ಪಟ್ಟವನ್ನು ಏರಲೇಬೇಕು ಎಂದುಕೊಂಡಿರುವ ಆಡ್ವಾಣಿ ಮತ್ತೆ ಆರ್ ಎಸ್ ಎಸ್ ನ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಹಾಗೆ ಆರ್ ಎಸ್ ಎಸ್ ಕೂಡ ಬಿಜೆಪಿ ಪಕ್ಷವನ್ನು ಸರಿಪಡಿಸುವ ತನ್ನ ಇಂಗಿತವನ್ನು ಈಗಾಗಲೇ ವ್ಯಕ್ತಪಡಿಸಿದೆ. ಆದರೆ ಇನ್ನೂ ವಾಜಪೇಯಿ ರಾಜಕಾರಣದ ಮೋಹ ಮತ್ತು ನೆನಪಿನಲ್ಲೇ ಇರುವ ಕೆಲವು ನಾಯಕರು ಈ ವಿಚಾರದಲ್ಲಿ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ. ಇವರಲ್ಲಿ ಜಸ್ವಂತ್ ಸಿಂಗ ಕೂಡ ಒಬ್ಬರು.
ಜಸ್ವಂತ್ ಸಿಂಗ್ ಜಿನ್ನಾ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಎಷ್ಟರ ಮಟ್ಟಿಗೆ ಸರಿ ಎಂಬುದು ಬೇರೆ ವಿಚಾರ. ಆದರೆ ಅವರು ಬಿಜೆಪಿ ಆಂತರಿಕ ಬೇಗುದಿಯಲ್ಲಿ ಬೇಯುತ್ತಿರುವಾಗಲೇ ಯಾಕೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು, ಪುಸ್ತಕ ಬರೆದರು ಎಂಬುದು ಮುಖ್ಯ. ಇದು ಸಹ ಬಿಜೆಪಿ ನಾಯಕತ್ವಕ್ಕೆ ಸೆಡ್ದು ಹೊಡೆಯುವ ಒಂದು ಯತ್ನವಾಗಿರಬಹುದು. ಜಿನ್ನಾ ಎಂಥವರಾಗಿದ್ದರು ಎಂಬುದಕ್ಕಿಂತ ರಾಜನಾಥ್ ಸಿಂಗ್ ಅವರಿಗೆ ಸೆಡ್ದು ಹೊಡೆಯುವುದು ಅವರಿಗೆ ಮುಖ್ಯವಾಗಿತ್ತು. ಆರ್ ಎಸ್ ಎಸ್ ಹಿಡಿತವನ್ನು ಪರೀಕ್ಷಿಸುವುದು ಪ್ರಮುಖವಾಗಿತ್ತು.
ಈಗ ಜಸ್ವಂತ್ ಸಿಂಗ್ ಅವರ ಹೇಳಿಕೆಯಿಂದ ಒಂದು ಅಂಶ ಸ್ಪಷ್ಟವಾಗಿದೆ. ಆರ್ ಎಸ್ ಎಸ್ ಬಿಜೆಪಿಯ ಮೇಲಿನ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ. ಆಡ್ವಾಣಿ ತಮ್ಮ ಸ್ವಘೋಷಿತ ಮುಖವಾಡವನ್ನು ಕಳಚಿದ್ದಾರೆ. ಹಾಗೆ ತಾವು ವಾಜಪೇಯಿ ಅವರಂತ ನಾಯಕರಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದರ ಜೊತೆಗೆ ಇನ್ನೊಂದು ಮಾತು. ಜಿನ್ನಾ ಧರ್ಮ ನಿರಪೇಕ್ಷ ವ್ಯಕ್ತಿಯಾಗಿದ್ದರೆ ನಾವು ಬೇಸರ ಪಡುವ ಅಗತ್ಯವಿಲ್ಲ. ನಮ್ಮ ದೇಶದ ಕೆಲವು ನಾಯಕರೇ ದೇಶದ ವಿಭಜನೆಗೆ ಕಾರಣವಾಗಿದ್ದರೆ ಅದನ್ನು ಸ್ವೀಕರಿಸಲು ಹಿಂಜರಿಯಬೇಕಿಲ್ಲ. ಯಾಕೆಂದರೆ ಇತಿಹಾಸ ಎನ್ನುವುದು ಕಾಲಕೋಶದೊಳಗೆ ಸೇರಿಹೋಗಿರುವಂಥಹುದು. ಅದನ್ನು ಈಗ ಬದಲಿಸಲು ಸಾಧ್ಯವಿಲ್ಲ. ಆದರೆ ಇತಿಹಾಸವನ್ನು ಅರ್ಥಮಾಡಿಕೊಂಡರೆ ವರ್ತಮಾನವನ್ನು ಅರ್ಥಮಾಡಿಕೊಳ್ಳಬಹುದು. ಭವಿಷ್ಯದ ಕನಸು ಕಾಣಬಹುದು.

1 comment:

ಕೈ. ವೆ. ಆದಿತ್ಯ ಭಾರದ್ವಾಜ said...

a good discussion, rightly pointed out that this is of a churning in the BJP for the succession of the gen next, and also its ideological dillemma

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...