Tuesday, August 25, 2009

ಸೋಲನ್ನು ಒಪ್ಪದ ಮುಖ್ಯಮಂತ್ರಿ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರಲ್ಲಿ ಒಬ್ಬರು ವಿ. ಸೋಮಣ್ಣ. ಇವರು ಬಿಜೆಪಿಯನ್ನು ಸೇರುವುದಕ್ಕೆ ಮೊದಲೇ ಮುಖ್ಯಮಂತ್ರಿಗಳ ಜೊತೆ ಹನಿಮೂನ್ ಪ್ರಾರಂಭಿಸಿದ್ದರು. ಇದಕ್ಕೆ ಕೆಲವು ಲಿಂಗಾಯಿತ ಮಠಾಧೀಶರ ಅಶೀರ್ವಾದವೂ ಇತ್ತು. ಸೋಮಣ್ಣ ಬಿಜೆಪಿ ಸೇರಿದ್ದು, ಮಂತ್ರಿಯಾದದ್ದು ಮುಂದಿನ ಘಟನೆಗಳು. ಆದರೆ ಸೋಮಣ್ಣ ಉಪ ಚುನಾವಣೆಯಲ್ಲಿ ಸೋಲುತ್ತಾರೆ ಎಂಬುದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ದೇವರ ಹೆಸರು ಹೇಳಿ ರಾಜಕಾರಣ ಮಾಡುವ ಮಠಾಧಿಪತಿಗಳು ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ ಸೋಮಣ್ನ ಸೋತರು.
ಸೋಮಣ್ಣ ಯಾಕೆ ಸೋತರು ಎಂಬುದು ಬೇರೆ ವಿಚಾರ. ಈ ಬಗ್ಗೆ ಮಾತನಾಡುವಾಗ ಇಂದಿನ ಚುನಾವಣೆ ಪದ್ಧತಿಯ ಬಗ್ಗೆ ಮಾತನಾಡಬೇಕು. ಈ ಸೋಲಿನ ನಂತರದ ಬೆಳವಣಿಗೆಗಳನ್ನು ಗಮನಿಸಿ. ಸೋಮಣ್ನ ಸೋತ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಧಾವಿಸುತ್ತಾರೆ. ಅವರಿಗೆ ಸಮಾಧಾನ ಹೇಳುತ್ತಾರೆ. ನೀವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿಲ್ಲ ನಾನಿದ್ದೇನೆ ಎಂದು ಭರವಸೆ niiದಿ ಬರುತ್ತಾರೆ. ಸಂಸದೀಯ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿ ಸಚಿವನಾಗುವುದಿದ್ದರೆ ಆತ ಮೇಲ್ಮನೆ ಅಥವಾ ಕೆಳಮನೆ ಸದಸ್ಯನಾಗಿರಬೇಕು. ಆಗಿರದಿದ್ದರೆ ಸಚಿವರಾಗಿ ಆರು ತಿಂಗಳೊಳಗೆ ಯಾವುದೇ ಮನೆಯ ಸದಸ್ಯರಾಗಬೇಕು. ಈಗ ಸೋಮಣ್ನ ವಿಧಾನ ಪರಿಷತ್ ಅಥವಾ ವಿಧಾನ ಸಭೆಯ ಸದಸ್ಯರಲ್ಲ. ಆರು ತಿಂಗಳೊಳಗೆ ಸದಸ್ಯರಾಗುವ ಅವರ ಕನಸಿಗೆ ಗೋವಿಂದರಾಜ ನಗರದ ಮತದಾರರು ತಣ್ಣೀರು ಎರೆಚಿದ್ದಾರೆ. ಆದರೂ ಅವರನ್ನು ಸಚಿವರನ್ನಾಗಿ ಉಳಿಸಲು ಮುಖ್ಯಮಂತ್ರಿಗಳು ಅಡ್ಡದಾರಿಗಳನ್ನು ಹುಡುಕುತ್ತಿದ್ದಾರೆ.
ಆದರೆ ಈ ಚುನಾವಣೆಯ ಫಲಿತಾಂಶ ಹಲವು ಸೂಕ್ಷ್ನಗಳನ್ನು ಒಳಗೊಂಡಿದೆ. ಇದು ಕೇವಲ ಐದು ಕ್ಷೇತ್ರಗಳಿಗೆ ಮಾತ್ರ ನಡೆದ ಉಪ ಚುನಾವಣೆ ಆಗಿದ್ದರೂ ಇಲ್ಲಿ ರಾಜ್ಯದ ಮತದಾರರ ಮನಸ್ಸಿನ ಒಂದು ಝಲಕ್ ಕಾಣಬಹುದಾಗಿದೆ. ಈಗ್ ನೋಡಿ, ಆಪರೇಷನ್ ಮೂಲಕ ಕಮಲದ ಬಿಜೆಪಿ ತೆಕ್ಕೆಗೆ ಬಂದ ಸೋಮಣ್ಣ ಹಾಗೂ ಚೆನ್ನಪಟ್ಟಣ ಸಿನೆಮಾ ನಟ ಸೋತಿದ್ದಾರೆ.. ಖರ್ಗೆ ಮಗ ನೆಲ ಕಚ್ಚಿದ್ದಾರೆ. ಅನಾಮಧೇಯರನ್ನು ಪಕ್ಷ ಬೇಧ ಮರೆತು ಜನ ಆರಿಸಿಕಳುಹಿಸಿದ್ದಾರೆ. ಅಂದರೆ, ಅಧಿಕಾರಕ್ಕಾಗಿ ನಡೆಸಿದ ಪಕ್ಷಾಂತರ ಜನರಿಂದ ತಿರಸ್ಕೃತವಾಗಿದೆ.
ಇಂತಹ ಸನ್ನಿವೇಶದಲ್ಲಿ ನಿಜವಾದ ನಾಯಕನಾದವನು ಜನರ ತೀರ್ಪನ್ನು ಒಪ್ಪಿಕೊಂಡು ಮನೆಯಲ್ಲಿ ಇರಬೇಕು. ನಿಜವಾದ ಮುಖ್ಯಮಂತ್ರಿ ಹಿಂಬಾಗಿಲ ಮೂಲಕ ಜನ ತಿರಸ್ಕರಿಸಿದವರನ್ನು ತರಲು ಯತ್ನ ನಡೆಸಬಾರದು. ಆದರೆ ತಮಾಷೆ ಎಂದರೆ, ಜನರಿಂದ ಬಡಿಸಿಕೊಂಡವರಿಗೆ ಹೇಗಾದರೂ ಮಾಡಿ ಅಧಿಕಾರ ಪಡೆಯುವ ಉಳಿಸಿಕೊಳ್ಳುವ ತವಕ. ಇವರ ಬೆಂಬಲಕ್ಕೆ ನಿಂತ ಮಠಾಧಿಪತಿಗಳಿಗೆ ತಮ್ಮ ಪರಮ ಶಿಷ್ಯರನ್ನು ಸಿಂಹಾಸನ ಮೇಲೆ ಪ್ರತಿಷ್ಠಾಪಿಸುವ ಹಪಹಪಿಕೆ. ಮುಖ್ಯಮಂತ್ರಿಗಳಿಗೆ ತಮ್ಮ ಛೇಲಾಗಳನ್ನು ಉಳಿಸಿಕೊಳ್ಳುವ ಆಕಾಂಕ್ಷೆ. ಇದರಿಂದಾಗಿಯೇ ಸೋಮಣ್ಣನವರನ್ನು ಸಚಿವರನ್ನಾಗು ಮುಂದುವರಿಸಲು ವಿಧಾನ ಪರಿಷತ್ ಸದಸ್ಯರೊಬ್ಬರಿಂದ ರಾಜೀನಾಮೆ ಪಡೆಯುವ ಯತ್ನ ನಡೆಯುತ್ತಿದೆ. ಈ ಸ್ಥಾನಕ್ಕೆ ಸೋಮಣ್ಣನವರನ್ನು ತಂದು ಅವರ ಸಚಿವ ಸ್ಥಾನ ನಿರಾತಂಕವಾಗಿ ಉಳಿಯುವಂತೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಅವರ ಆಪ್ತ ವರ್ಗ ಚಿಂತಿಸುತ್ತಿದೆ.
ಜನ ತಿರಸ್ಕರಿಸಿದ ಮೇಲೆ ಅಲ್ಲಿರಬಾರದು ಎಂಬ ಸಾಮಾನ್ಯ ನೈತಿಕತೆ ಕೂಡ ಇವರಿಗಿಲ್ಲ. ಸಾಧಾರಣವಾಗಿ ಅಧಿಕಾರಕ್ಕೆ ಹೋದ ತಕ್ಷಣ ಅದು ಶಾಶ್ವತವಾಗಿರಬೇಕು ಎಂಬ ಒತ್ತಡ ಪ್ರಾರಂಭವಾಗುತ್ತದೆ. ಇಂತಹ ಒತ್ತಡದಿಂದ ಹೊರ ಬರುವವನು ಮಾತ್ರ ನಿಜವಾದ ಜನ ನಾಯಕನಾಗುವುದು ಸಾಧ್ಯ. ಜೊತೆಗೆ ಮುಖ್ಯಮಂತ್ರಿಯಾದವನು ಸೋಲನ್ನು ಒಪ್ಪಿಕೊಳ್ಳುವ ಮನಸ್ಸು ಹೊಂದಿರಬೇಕು. ಸೋಲನ್ನು ಯಾರು ಒಪ್ಪಿಕೊಳ್ಳುವುದಿಲ್ಲವೋ ಅವರ ಜಯಕ್ಕೆ ಯಾವ ಅರ್ಥವೂ ಇರುವುದಿಲ್ಲ. ಸೋಮಣ್ಣನನ್ನು ಸೋಲಿಸಿದ್ದು ಅವರ ಕ್ಷೇತ್ರದ ಜನ. ಜನರ ತೀರ್ಪಿಗೆ ತಲೆ ಬಾಗಬೇಕಾದ್ದು ಮುಖ್ಯಮಂತ್ರಿಗಳ ಕರ್ತವ್ಯ. ಜನ ತಿರಸ್ಕರಿಸಿದ ಮೇಲೂ ಅವರನು ಬೇರೆ ಮಾರ್ಗಗಳ ಮೂಲಕ ತರುವುದು ಅಧಿಕಾರ ಅಹಂಕಾರದ ಪರಮಾವಧಿ.
ಮುಖ್ಯಮಂತ್ರಿ ಯಡೀಯೂರಪ್ಪ ಈಗ ಇಂತಹ ಅಹಂಕಾರದ ಮನಸ್ಥಿತಿಯಲ್ಲಿ ಇದ್ದಾರೆ. ಅವರಿಗೆ ಒಂದೆಡೆ ಅಧಿಕಾರವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಆಸೆ. ಮತ್ತೊಂದೆಡೆ ಕಳೆದುಕೊಳ್ಳುವ ಭಯ. ಆಸೆ ಮತ್ತು ಭಯ ಅವರಲ್ಲಿ ನೈತಿಕ ರಾಜಕಾರಣ ಮರೆಯಾಗುವಂತೆ ಮಾಡಿದೆ. ತಾವು ಕರ್ನಾಟಕದ ಮುಖ್ಯಮಂತ್ರಿ ಎಂಬುದನ್ನು ಬಹುತೇಕ ಸಂದರ್ಭದಲ್ಲಿ ಮರೆಯುವ ಅವರು ಒಂದು ಜಾತಿ ಮತ್ತು ಒಂದು ಪಕ್ಷದ ಮುಖ್ಯಮಂತ್ರಿಯಾಗಿ ಮಾತ್ರ ಕಾಣುತ್ತಾರೆ.
ಅವಕಾಶ ಎಲ್ಲ ಸಂದರ್ಭಗಳಲ್ಲೂ ಬರುವುದಿಲ್ಲ. ಯಡೀಯೂರಪ್ಪ ಜನರ ಮುಖ್ಯಮಂತ್ರಿಯಾಗಬೇಕು. ಆದರೆ ಆ ಲಕ್ಷಣ ಸದ್ಯಕ್ಕಂತೂ ಗೋಚರಿಸುವುದಿಲ್ಲ. ಅವರು ದಿನದಿಂದ ದಿನಕ್ಕೆ ಅಧಃಪತನದತ್ತ ಸಾಗುತ್ತಿದ್ದಾರೆ.
ಒಂದು ಜಯ ನಮ್ಮಲ್ಲಿ ವಿನೀತ ಭಾವವನ್ನು ಮೂಡಿಸಬೇಕು. ಒಂದು ಸೋಲು ಆತ್ಮ ನಿರೀಕ್ಷೆಗೆ ಕಾರಣವಾಗಬೇಕು, ಸೋಲನ್ನು ಸೋಲಾಗಿ ಸ್ವೀಕರಿಸುವವನು ಮಾತ್ರ ಮತ್ತೆ ಜಯದತ್ತ ಹೆಜ್ಜೆ ಇಡಬಲ್ಲ.

2 comments:

srivatsa nadig said...

ಬಹಳ ದಿನಗಳ ನಂತರ ಒಂದು ಉತ್ತಮ ರಾಜಕೀಯ ಕಾಮೆಂಟ್ ಓದಿದೆ. ಸೋಮಣ್ಣ ಸೋತ ನಂತರ ನಾನು ಗಮನಿಸದ ಪತ್ರಿಕೆಗಳಲ್ಲಿ ಇಂಥ ಕಾಮೆಂಟ್ ನನಗೆ ಸಿಕ್ಕಿರಲಿಲ್ಲ.. ಮೂಲತಃ ನೀವು ಒಳ್ಳೆಯ ರಾಜಕೀಯ ವರದಿಗಾರರು.. ನೀವು ದೃಶ್ಯ ಮಾಧ್ಯಮಕ್ಕೆ ಹೋದ ಮೇಲೆ ಇಂತ ಲೇಖನ ಓದುವ ಅವಕಾಶ ಸಿಕ್ಕಿರಲಿಲ್ಲ... ಅಥವಾ ನಾನು ಗಮನಿಸರಲಿಲ್. ನಮ್ಮಂಥ ಓದುಗರಿಗಾಗಿ ಬರೆಯುತ್ತಿರಿ

deepak said...

ಸರ್ ಬ್ಲಾಗ್ ತುಂಬಾ ಚನ್ನಾಗಿದೆ
ನಮ್ಮಂಥ ಓದುಗರಿಗಾಗಿ ಉತ್ತಮ ರಾಜಕೀಯ ಬ್ಲಾಗ್ ಬರೆಯುತ್ತಿರಿ