Wednesday, September 23, 2009

ಅಂತರ- ಅತ್ಮ- ಕರಕರೆ............!

ನಾನು ಅವರ ಎದುರು ಕುಳಿತಿದ್ದೆ. ಅವರು ಮಾತನಾಡುತ್ತಲೇ ಇದ್ದರು.
"ನನ್ನ ಹೆಂಡತಿಯ ಆರೋಗ್ಯ ಸರಿಯಿಲ್ಲ. ಅವಳು ಮನೆಯಲ್ಲಿ ಒಬ್ಬಳೇ. ನಾವು ಫ್ಲಾಟ್ ಒಂದರಲ್ಲಿ ವಾಸಿಸುತ್ತಿದ್ದೇವೆ. ಇದನ್ನು ಬಿಟ್ಟರೆ ನನಗೆ ಬೇರೆ ಆಸ್ತಿಯಿಲ್ಲ."
ಅವರು ಮಧ್ಯೆ ಮಧ್ಯೆ ತಮಗೆ ಬರುತ್ತಿದ್ದ ದೂರವಾಣಿ ಕರೆಗಳಿಗೆ ಉತ್ತರಿಸುತ್ತಿದ್ದರು. ಹಾಗೆ ಬಾಗಿಲ ಹತ್ತಿರ ನಿಂತಿದ್ದ ಕೆಲವು ಅಧಿಕಾರಿಗಳು ಆಗಾಗ ಬಗ್ಗಿ ನೋಡಿ ಹೋಗುತ್ತಿದ್ದರು.
"ನನಗೆ ಸಕ್ಕರೆ ಕಾಯಿಲೆ ಬಂದು ನಲವತ್ತು ವರ್ಷ ಆಯ್ತು. ಆಗಿನಿಂದ ಈ ರೋಗದ ಜೊತೆ ಬದುಕುತ್ತಿದ್ದೇನೆ. ಉಳಿದಂತೆ ಆರೋಗ್ಯದ ಸಮಸ್ಯೆ ಇಲ್ಲ. ನನ್ನ ದಿನಚರಿಯನ್ನು ನಾನು ಹಾಗೆ ರೂಪಿಸಿಕೊಂಡಿದ್ದೇನೆ. ರಾತ್ರಿ ೧೦ ಗಂಟೆಗೆ ಮಲಗಿ ಬಿಡುತ್ತೇನೆ. ಟೀವಿಯನ್ನು ಹೆಚ್ಚಾಗಿ ನೋಡುವುದಿಲ್ಲ."
ಅವರು ತಮ್ಮ ಮಾತನ್ನು ಹೀಗೆ ಮುಂದುವರಿಸಿದ್ದರು.ತಮ್ಮ ವೈಯಕ್ತಿಕ ಬದುಕಿನಿಂದ ತಮ್ಮ ವೃತ್ತಿಯವರೆಗೆ ಅವರ ಮಾತಿನ ಹರಿವು ಇತ್ತು.
"ನನಗೆ ಮಕ್ಕಳಿಲ್ಲ. ನಾವು ಇಬ್ಬರೇ " ಎಂದರು ಅವರು.
ಇವರು ಸಂತೋಷ ಹೆಗ್ಡೆ. ಕರ್ನಾಟಕದ ಲೋಕಾಯುಕ್ತರು. ನಾನು ಅವರಿಗೆ ಹೇಳಿದೆ.
"ನೀವು ರಾಜ್ಯಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ಯಾರೂ ನೀವು ಹೀಗೆ ಕೆಲಸ ಮಾಡುತ್ತೀರಿ ಎಂದುಕೊಂಡಿರಲಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ನಿಮಗಿಂತ ಮೊದಲು ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ವೆಂಕಟಾಚಲ. ಅವರು ಲೋಕಾಯುಕ್ತರ ಹುದ್ದೆ ಎಂತಹುದು ಎಂಬುದನ್ನು ತೋರಿಸಿಕೊಟ್ಟಿದ್ದರು. ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನರಾಗಿದ್ದ ಅವರು ತಾವೇ ಧಾಳಿಯ ನೇತೃತ್ವ ಒಹಿಸುತ್ತಿದ್ದರು. ಹಲವು ಸಂದರ್ಭಗಳಲ್ಲಿ ಪತ್ರಕರ್ತರನ್ನು ಮಾಧ್ಯಮದವರನ್ನು ಕರೆದೊಯ್ಯುತ್ತಿದ್ದರು. ಹೀಗೆ ತಮ್ಮದೇ ಆದ ಛಾಪು ಮೂಡಿಸಿದ್ದವರು ಅವರು. ಹೀಗಾಗಿ ಅವರ ಸ್ಥಾನಕ್ಕೆ ಬರುವುದು ದೊಡ್ಡ ಸವಾಲೇ ಆಗಿತ್ತು ಅಲ್ಲವಾ ?"
ಅವರು ಸುಮ್ಮನೆ ನಕ್ಕರು. ನನಗೆ ನಾನೇ ಧಾಳಿಯ ನೇತೃತ್ವ ಒಹಿಸಿಕೊಳ್ಳುವುದರಲ್ಲಿ ಅಂತಹ ನಂಬಿಕೆ ಇಲ್ಲ. ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡುವುದು ನಮ್ಮ ಕೆಲಸ ಎಂದರೆ ಹೆಗ್ಡೆ.
"ನಾನು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ನನಗೆ ಅನುಕೂಲವಾದ ಹಲವು ಅಂಶಗಳಿದ್ದವು. ಬಹಳ ವರ್ಷ ಕರ್ನಾಟಕದ ಹೊರಗೆ ಇದ್ದುದರಿಂದ ನನಗೆ ಇಲ್ಲಿ ಪರಿಚಯದವರು ಹೆಚ್ಚಾಗಿ ಇರಲಿಲ್ಲ. ಇದು ನನಗೆ ಕೆಲಸ ಮಾಡುವುದಕ್ಕೆ ಅನುಕೂಲವಾಯಿತು. "
ಸಂತೋಷ ಹೆಗ್ಡೆ ಅವರು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದಾಗ ಅವರು ಅಧಿಕಾರಶಾಹಿಗಳಿಂದ, ರಾಜಕಾರಣಿಗಳಿಂದ ತೊಂದರೆ ಅನುಭವಿಸಬೇಕಾಯಿತು. ಅವರು ಬಯಸಿದ ಅಧಿಕಾರಿಗಳನ್ನು ನೀಡಲು ಸರ್ಕಾರ ಹಿಂದೇಟು ಹಾಕಿತು. ತಾವು ಕೊಟ್ಟ ಅಧಿಕಾರಿಗಳನ್ನೇ ತೆಗೆದುಕೊಳ್ಳುವಂತೆ ಅವರ ಮನವೊಲಿಸಲು ಯತ್ನ ನಡೆಸಿತು. ಆದರೆ ಅವರು ಇದ್ಯಾವುದಕ್ಕೂ ಬಗ್ಗಲಿಲ್ಲ. ತಾವು ಬಯಸಿದ ಅಧಿಕಾರಿಗಳನ್ನೇ ಪಡೆದರು. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಅವರಿಂದ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದರು. ಹಲವರ ಬಣ್ಣ ಬಯಲಾಯಿತು. ಆದರೆ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವ ಸರ್ಕಾರದ ಭರವಸೆ ಮಾತ್ರ ಈಡೇರಲಿಲ್ಲ. ಅಧಿಕಾರಕ್ಕೆ ಬರುವುದಕ್ಕೆ ಮೊದಲು ಲೋಕಾಯುಕ್ತರಿಗೆ ಪರಮಾಧಿಕಾರ ಇರಬೇಕು ಎಂದು ಭಾಷಣ ಮಾಡಿದ್ದ ಬಿಜೆಪಿ ನಾಯಕರು ತಮ್ಮ ನಿಲುವು ಬದಲಿಸಿದರು. ಟೊಪ್ಪಿ ತಿರುಗಿ ಹಾಕಿದರು. ಗಣಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿದ ವರದಿಯನ್ನು ತಲೆ ದಿಂಬಾಗಿ ಮಾತ್ರ ಉಪಯೋಗಿಸತೊಡಗಿದರು.
ಹಾಗೆ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದ ಅಧಿಕಾರಿಗಳನ್ನು ಉಳಿಸಲು ಅಧಿಕಾರಶಾಹಿ ಯತ್ನ ನಡೆಸಿದಾಗಲೆಲ್ಲ ಈ ಅಧಿಕಾರಸ್ಥ ರಾಜಕಾರಣಿಗಳು ಜಾಣ ಮೌನ ಪ್ರದರ್ಶಿಸಿದರು.
ಈಗ ನನಗೆ ಲೋಕಾಯುಕ್ತರು ಅಸಹಾಯಕರಾಗಿ ಕಾಣುತ್ತಾರೆ. ಭ್ರಷ್ಟಚಾರದ ವಿರುದ್ಧ ಅವರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರದಿಂದ ಬೆಂಬಲ ದೊರಕುತ್ತಿಲ್ಲ. ಕೋಟ್ಯಾಂತರ ರೂಪಾಯಿ ಹಣ ಹೊಡೆದ ಭಾರಿ ಮನೆ ಆಸ್ತಿ ಮಾಡಿದ ಅಧಿಕಾರಿಗಳ ಭಾವಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾದಾಗ ರಾಜಕಾರಣಿಗಳು ಮತ್ತು ಇತರೇ ಅಧಿಕಾರಿಗಳು ಚೆನ್ನಾಗಿ ಹಣ ಮಾಡಿದ್ದಾನೆ ಎಂದು ಮನಸ್ಸಿನಲ್ಲೇ ಸಂಭ್ರಮಿಸುವ ವಾತಾವರಣ ಈಗ ನಿರ್ಮಾಣವಾಗಿದೆ. ಲೋಕಾಯುಕ್ತರ ಬಲೆಗೆ ಬೀಳುವುದು ಸಂಭ್ರಮ ಪಡುವ ವಿಚಾರವಾಗಿದೆ.
ಒಬ್ಬ ರಾಜಕಾರಣಿಗೆ, ಅಧಿಕಾರಿಗೆ ಸಣ್ಣ ಲಜ್ಜೆ ಎನ್ನುವುದು ಇರಬೇಕಾಗುತ್ತದೆ. ಮಾನ ಮರ್ಯಾದೆಗೆ ಅಂಜುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಆದರೆ ಇಂದು ಲಜ್ಜೆ ಎನ್ನುವುದು ಎಲ್ಲರ ಮನಸ್ಸಿನಿಂದ ಹೊರಟು ಹೋಗಿದೆ. ಜನ ಕೂಡ ಇಂತಹ ಸ್ಥಿತಿಯನ್ನು ತಲುಪಿಬಿಟ್ಟಿದ್ದಾರೆ. ಲಂಚ ತೆಗೆದುಕೊಳ್ಳಲಿ. ನಮ್ಮ ಕೆಲಸ ಮಾಡಿಕೊಡಲಿ ಎಂಬ ಮನಸ್ಥಿತಿ ಸಾರ್ವಜನಿಕರದು. ಒಬ್ಬ ವ್ಯಕ್ತಿಗೆ ಹಾಗೆ ಸಮಾಜಕ್ಕೆ ಅಂತರಾತ್ಮ ಎನ್ನುವುದು ಇರಬೇಕು. ಅದು ಆಗಾಗ ನಮ್ಮನ್ನು ಎಚ್ಚರಿಸುತ್ತಿರಬೇಕು.ತಪ್ಪು ಮಾಡಲು ಹೊರಟಾಗಲೇ ಅಂತರಾತ್ಮ ಕೈ ಹಿಡಿದು ಹಿಂದಕ್ಕೆ ಎಳೆಯಬೇಕು. ಹಾಗೆ ಬದುಕುವುದಕ್ಕೆ ಕನಿಷ್ಟ ನೈತಿಕ ಪ್ರಜ್ನೆಯಾದರೂ ಇರಬೇಕು.
ಈಗ ನಿಮ್ಮ ಮುಂದೆ ನಮ್ಮ ಅಧಿಕಾರಸ್ಥರ ಮುಖ ಬರಲಿ. ಒಂದೊಂದೇ ಮುಖವನ್ನು ನೋಡಿ. ಇವರಿಗೆ ಅತ್ಮ ಎನ್ನುವುದು ಇದೇ ಎಂದು ಅನ್ನಿಸುತ್ತಾ ? ಇವರೆಲ್ಲ ಅಂತರಾತ್ಮದ ಮಾತು ಕೇಳುತ್ತಾರೆ ಎಂದು ಅನ್ನಿಸುತ್ತಾ ?ಇಲ್ಲ, ಇವರಿಗೆ ಅಂತರಾತ್ಮನ ಕರೆ ಬರೀ ಕರಕರೆ. ಇವರೆಲ್ಲ ಕಮೀಷನ್ ಏಜೆಂಟರಂತೆ ಕಾಣುತ್ತಾರೆ. ಕಮೀಷನ್ ಗಾಗಿ ರಾಜಕಾರಣ ಮಾಡುವವರು. ಕಮೀಷನ್ನಿಗಾಗಿ ಬದುಕುವವರು. ಇಂತವರ ನಡುವೆ ಸಂತೋಷ ಹೆಗ್ಡೆ ಅಪರೂಪದವರಾಗಿ ಕಾಣುತ್ತಾರೆ.

Tuesday, September 22, 2009

ಉರುಳಿಬಿದ್ದ ಮುಕುಟ............

ಭಾರತೀಯ ಜನತಾ ಪಾರ್ಟಿಯ ಲೋಹ ಪುರುಷ್ ಎಂದು ಕರೆಸಿಕೊಂಡವರು ಎಲ್. ಕೆ. ಅಡ್ವಾಣಿ. ಕೇಸರಿ ಪಕ್ಷದಲ್ಲಿ ವಾಜಪೇಯಿ ಅವರಿಗಿಂತ ಹೆಚ್ಚಿನ ಅನುಯಾಯಿಗಳನ್ನು ಪಡೆದವರು ಅವರು. ಸಂಘ ಪರಿವಾರದ ಅಚ್ಚು ಮೆಚ್ಚಿನ ನಾಯಕರಾಗಿ ಇದ್ದವರು. ಬಿಜೆಪಿ ಸಿದ್ಧಾಂತದ ಮುಖ ಎಂದೇ ಖ್ಯಾತಿ ಪಡೆದವರು. ಬಿಜೆಪಿ ಎಂದರೆ ಅಡ್ವಾಣಿ ಎಂದು ಹೇಳುವಂತೆ ಪಕ್ಷದ ಜೊತೆ ತಾದ್ಯಾತ್ಮವನ್ನು ಹೊಂದಿದ್ದ ನಾಯಕ.
ಇದು ಹಳೆಯ ಕಥೆ. ಇಂದು ಆಡ್ವಾಣಿ ಬಿಜೆಪಿಗೆ ಬೇಕಾಗಿಲ್ಲ. ಸಣ್ಣ ಪುಟ್ಟ ನಾಯಕರು ಅಡ್ವಾಣಿಯ ವಿರುದ್ಧ ಮಾತನಾಡುವ ಸ್ಥಿತಿ ಈಗ ನಿರ್ಮಾಣವಾಗಿದೆ. ಕಳೆದ ಲೋಕಸಭಾ ಚುನಾವಣೆ ಸೋಲಿನ ನಂತರ ಪಕ್ಷದಲ್ಲೇ ಅವರು ಅಸ್ಪ್ರಶ್ಯರಾಗಿದ್ದಾರೆ. ಬಿಜೆಪಿ ಎಂಬ ಹಿಂದೂ ದೇವಾಲಯದ ಕಳಶ ಉರುಳಿ ಬಿದ್ದಿದೆ. ಯಾಕೆ ಅಡ್ವಾಣಿ ಇಂತಹ ಸ್ಥಿತಿಯನ್ನು ತಲುಪಿದ್ದಾರೆ ? ತಮ್ಮ ಸುದೀರ್ಘ ರಾಜಕೀಯ ಬದುಕಿನ ಕೊನೆಯಲ್ಲಿ ಅವರು ಯಾಕೆ ಈ ಸ್ಥಿತಿಯನ್ನು ತಲುಪಿದ್ದಾರೆ ? ಇದಕ್ಕೆ ಏನು ಕಾರಣ ?
ಅಡ್ವಾಣಿ ಅವರ ರಾಜಕೀಯ ಬದುಕನ್ನು ಒಮ್ಮೆ ಮೆಲಕು ಹಾಕಿ. ನಿಜವಾದ ಅರ್ಥದಲ್ಲಿ ಅವರು ನಾಯಕರಾಗಿದ್ದರೆ ? ನಾಯಕತ್ವದ ಗುಣ ಧರ್ಮ ಅವರಿಗಿತ್ತೆ ? ಯೋಚಿಸಿ ನೋಡಿ.
ಅಡ್ವಾಣಿ ಅವರನ್ನು ಅರ್ಥ ಮಾಡಿಕೊಳ್ಳಲು ಅವರನ್ನು ವಾಜಪೇಯಿ ಅವರ ಜೊತೆ ಹೋಲಿಸಬೇಕು. ಆಗ ಅವರ ವ್ಯಕ್ತಿತ್ವ ಬಿಚ್ಚಿಕೊಳ್ಳುತ್ತದೆ. ವಾಜಪೇಯಿ ಅವರ ವ್ಯಕ್ತಿತ್ವದಲ್ಲಿ ತಾತ್ವಿಕ ಬದ್ಧತೆ ಇತ್ತು. ಆದರೆ ತಾತ್ವಿಕತೆಯನ್ನು ಮೀರಿ ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇತ್ತು. ಅವರು ಎಲ್ಲಕ್ಕಿಂತ ಬದುಕು ಮುಖ್ಯ ಎಂದು ಅರ್ಥ ಮಾಡಿಕೊಳ್ಳುವವರಾಗಿದ್ದರು. ಜೊತೆಗೆ ಅವರಿಗೆ ಕವಿ ಮನಸ್ಸು ಇತ್ತು. ವಾಜಪೇಯಿ ಕವಿಯಾಗಿ ಸಿದ್ಧಾಂತವನ್ನು ಮರೆಯ ಬಲ್ಲವರಾಗಿದ್ದರು. ಪಕ್ಷದ ತತ್ವ ಸಿದ್ಧಾಂತದ ಬೇಲಿಯನ್ನು ದಾಟ ಬಲ್ಲವರಾಗಿದ್ದರು. ಹಾಗೆ ವಾಜಪೇಯಿ ಎಲ್ಲವನ್ನು ಮರೆತು ನಗಬಲ್ಲವರಾಗಿದ್ದರು. ಆ ನಗು ಮಗುವಿನ ಮುಗ್ದ ನಗುವಿನ ಹಾಗೆ. ಬದುಕನ್ನು ಇಡೀಯಾಗಿ ಅನುಭವಿಸುವ ವ್ಯಕ್ತಿ ವಾಜಪೇಯಿ. ಅವರು ಮದುವೆಯಾಗದಿದ್ದರೂ ತಾವು ಬ್ರಹ್ಮಚಾರಿ ಎಂದು ಕೊಚ್ಚಿಕೊಂಡವರಲ್ಲ. ಬಿಜೆಪಿಯಂತಹ ಪಕ್ಷದಲ್ಲಿದ್ದೂ ಮದ್ಯಪಾನ ವಿರೋಧಿಯಾಗಿರಲ್ಲಿಲ್ಲ. ಬದುಕಿನಲ್ಲಿ ಸಿಕ್ಕಿದ್ದನ್ನು ಮೊಗೆದು ಅನುಭವಿಸುವವರಾಗಿದ್ದರು. ವಾಜಪೇಯಿ.
ಆದರೆ ಆಡ್ವಾಣಿ ಹಾಗಲ್ಲ. ಅವರು ತಮ್ಮ ರಾಜಕೀಯ ಬದುಕಿನ ಮೊದಲ ಘಟ್ಟದಲ್ಲಿ ಪಕ್ಷದ ಸಿದ್ಧಾಂತವನ್ನು ಎಷ್ಟು ಬಲವಾಗಿ ನಂಬಿದ್ದರೆಂದರೆ, ಬಾಬ್ರಿ ಮಸೀದಿ ಉರುಳಿದಾಗ ಅದನ್ನು ಎಂಜಾಯ್ ಮಾಡುವಂತಹುದು. ಅವರು ಆಗ ಕಟ್ಟರ್ ಪಂಥೀಯ ಹಿಂದುತ್ವವಾದಿ. ಆದರೆ ಅವರು ಈ ಸಿದ್ಧಾಂತವನ್ನು ಕೊನೆಯವರೆಗೆ ನಂಬಿದ್ದರೆ ಕನಿಷ್ಟ ಸಂಘ ಪರಿವಾರವಾದರೂ ಅವರನ್ನು ಪ್ರೀತಿಸುತ್ತಿತ್ತು. ಗೌರವಿಸುತ್ತಿತ್ತು. ಆದರೆ ಎಲ್ಲರೂ ನಂಬಿಕೊಂಡಂತೆ ಅವರ ಸೈದ್ಧಾಂತಿಕ ನಂಬಿಕೆಯ ಗೋಡೆಯಲ್ಲೂ ಬಿರುಕುಗಳಿದ್ದವು. ಅಲ್ಲಿ ರಾಜಕೀಯ ಮಹತ್ವಾಕಾಂಕ್ಷೆಯ ಹುಲ್ಲು ಬೆಳೆಯತೊಡಗಿತ್ತು. ಇದು ಕಟ್ಟಡವನ್ನೇ ಶಿಥಿಲಗೊಳಿಸುತ್ತಿರುವುದು ಆಡ್ವಾಣಿಯವರಿಗೆ ಅರ್ಥವಾಗಲಿಲ್ಲ.
ಅಡ್ವಾಣಿ ಒಂದು ಅರ್ಥದಲ್ಲಿ ನಮ್ಮ ದೇವೇಗೌಡರ ಹಾಗೆ. ಅವರಿಗೆ ರಾಜಕೀಯವನ್ನು ಬಿಟ್ಟು ಬದುಕುವುದು ಗೊತ್ತಿರಲಿಲ್ಲ. ಎಲ್ಲವನ್ನೂ ಮರೆತು ನಗುವುದು ಗೊತ್ತಿರಲಿಲ್ಲ. ನಮ್ಮ ಜೆ. ಎಚ್. ಪಟೇಲರ ಹಾಗೆ ತಮ್ಮನ್ನೇ ಹಾಸ್ಯಕ್ಕೆ ಒಳಪಡಿಸಿಕೊಂಡು ನೀನು ಇದೆಯಲ್ಲ ಎಂದು ನಕ್ಕು ಬಿಡುವುದು ಗೊತ್ತಿರಲಿಲ್ಲ. ಜೊತೆಗೆ ಆಡ್ವಾಣಿಯವರ ದೌರ್ಬಲ್ಯವನ್ನು ವಿಶ್ಲೇಷಿಸುವ ಕೆಲಸವನ್ನು ಮಾಧ್ಯಮಗಳು ಮಾಡಲಿಲ್ಲ. ಕೆಲವರು ಅವರನ್ನು ಹೊಗಳಿ ಅಟ್ಟಕ್ಕೇರಿಸುವ ಕೆಲಸ ಮಾಡುತ್ತ ಬಂದರು. ಕೆಲವರು ಟೀಕಿಸುವುದಕ್ಕೆ ಸೀಮೀತವಾದರು. ಇದರ ನಡುವೆ ರಥಯಾತ್ರೆ ಮಾಡಿದ ಅಡ್ವಾಣಿ ತಾವು ರಾಮ ಎಂದು ತಮ್ಮನ್ನೇ ತಾವು ನಂಬಿಸಿಕೊಂಡರು. ಅಲ್ಲಿಯೇ ಅವರ ಪಥನದ ಮೊದಲ ಹೆಜ್ಜೆ ಗುರುತುಗಳು ಮೂಡತೊಡಗಿದ್ದವು. ಜೊತೆಗೆ ತಮ್ಮ ಜೊತೆ ಕೆಲವು ಭಟ್ಟಂಗಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡತೊಡಗಿದರು. ಕೊನೆಗೆ ಅವರು ಹಿಂದುತ್ವವಾದಿಯಾಗಿಯೂ ಉಳಿಯಲಿಲ್ಲ. ಧರ್ಮನಿರಪೇಕ್ಷವಾದಿ ಎಂದ್ ಜನ ನಂಬುವುದೂ ಸಾಧ್ಯವಿರಲಿಲ್ಲ. ಇಂಥಹ ಸ್ಥಿತಿಯಲ್ಲಿ ಯಶಸ್ಸು ಮಾತ್ರ ಉಳಿಸಬಹುದಾಗಿತ್ತು. ಆದರೆ ಎಂದು ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ವಿಫಲರಾದರೋ ಎಲ್ಲರೂ ಅವರ ವಿರುದ್ಧ ಎದ್ದು ನಿಂತರು. ಸಿಕ್ಕ ಸಿಕ್ಕವರು ತಲೆಗೊಂದರಂತೆ ಕಲ್ಲು ಹೊಡೆಯತೊಡಗಿದರು.
ಈ ವರ್ಷಾಂತ್ಯಕ್ಕೆ ಅಡ್ವಾಣಿ ರಾಜಕೀಯ ನಿವೃತ್ತಿ ಪಡೆಯುವುದು ಬಹುತೇಕ ಖಚಿತ. ಆದರೆ ನಮ್ಮ ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕಾದ ಹಲವಾರು ಅಂಶಗಳು ಇಲ್ಲಿವೆ. ಒಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ ಒಬ್ಬ ರಾಜನೀತಿಜ್ನನಾಗಿರಬೇಕಾಗುತ್ತದೆ. ಎಲ್ಲ ಕ್ರಿಯೆಗಳಲ್ಲಿ ಒಳಗೊಂಡು ಅದರಿಂದ ಹೊರಕ್ಕೆ ಬರುವ ಮನಸ್ಥಿತಿಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ರಾಜಕೀಯ ಛಲದ ಜೊತೆಗೆ ಎಲ್ಲವನ್ನೂ ಕ್ಷಮಿಸಿ ಬಿಡುವ ಗುಣವನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ತತ್ವ ಸಿದ್ದಾಂತಗಳಿಗಿಂತ ಬದುಕು ದೊಡ್ದದು ಎಂಬ ಸಾಮಾನ್ಯ ಜ್ನಾನ ಇರಬೇಕಾಗುತ್ತದೆ.
ಅಡ್ವಾಣಿ ಇಂತಹ ನಾಯಕರಾಗಿರಲಿಲ್ಲ. ಅವರು ಒಂದು ಹಂತದ ವರೆಗೆ ಸಂಘಪರಿವಾರದ ಕಟ್ಟಾ ಕಾರ್ಯಕರ್ತನಂತೆ ಬದುಕಿದರು. ನಂತರ ಜಿನ್ನಾ ವಿವಾದದಲ್ಲಿ ಅಧಿಕಾರಕ್ಕಾಗಿ ಎಲ್ಲ ನಂಬಿಕೆಗಳನ್ನು ಗಾಳಿಗೆ ತೂರುವ ಮೂರನೆ ದರ್ಜೆಯ ರಾಜಕಾರಣಿಯಂತೆ ವರ್ತಿಸಿದರು. ಈ ದ್ವಂದವೇ ಅವರನ್ನು ಪಥನದ ಅಂಚಿಗೆ ತಂದು ನಿಲ್ಲಿಸಿತು.