Tuesday, March 30, 2010

ಮೂಗುತಿ ಸುಂದರಿ ಪಾಕ್ ಸೊಸೆ; ಶೊಯೇಬ್ ಭಾರತದ ಅಳಿಯ !


ಸಾನಿಯಾ ಎಂಬ ಈ ಮೂಗುತಿ ಸುಂದರಿ ಈಗ ಮದುವೆಯಾಗುತ್ತಿದ್ದಾಳೆ. ಅತಿ ಚಿಕ್ಕ ವಯಸ್ಸಿನಲ್ಲಿ ಜನಪ್ರಿಯತೆ ಹಣ ಎಲ್ಲವನ್ನೂ ಗಳಿಸಿದ ಈಕೆಗೆ ಮದುವೆಯ ಬಗ್ಗೆ ಎಂತಹ ಕಲ್ಪನೆ ಇದೆ ಎಂದು ಹೇಳುವುದು ಕಷ್ಟ. ಇವಳು ಆಟದಲ್ಲಿ ಅಂತಹ ಎಗ್ರೆಸ್ಸಿವ್ ಅಲ್ಲ. ಆದರೆ ವೈಯಕ್ತಿಕ ಬದುಕಿನಲ್ಲಿ ಮಾತ್ರ ತುಂಬಾ ಎಗ್ರೆಸ್ಸಿವ್. ಈಕೆ ತುಂಡು ಲಂಗದ ಬಗ್ಗೆ ಸಂಪ್ರದಾಯಸ್ಥ ಮುಸ್ಲಿಮ್ ರಿಂದ ವಿರೋಧ ಬಂದಾಗ ಈಕೆ ಕ್ಯಾರೇ ಅಲ್ಲಲಿಲ್ಲ. ತುಂಡು ಲಂಗ ಧರಿಸಿ ಮೈದಾನದಲ್ಲಿ ಕುಣಿದು ಕುಪ್ಪಳಿಸಿದಳು. ಗೆಲುವಿನತ್ತ ನಾಗಾಲೋಟದಲ್ಲಿ ಸಾಗಲು ಯತ್ನಿಸಿದಳು. ಆದರೆ ಅವಳು ಬಯಸಿದಷ್ಟು ಯಶಸ್ಸು ಅವಳಿಗೆ ದೊರಕಲಿಲ್ಲ.
ವಿಶ್ವದ ಖ್ಯಾತ ಟೆನಿಸ್ ಆಟಗಾರ್ತಿಯರಿಗೆ ಹೋಲಿಸಿದರೆ ಈಕೆ ಸ್ವಲ್ಪ. ಮೃದು. ವಿಲಿಯಮ್ಸ್ ಸಹೋದರಿಯರಿಗೆ ಇರುವ ಆಕ್ರಮಣಕಾರಿ ಪ್ರವೃತ್ತಿ ಇವಳ ಆಟದಲ್ಲಿ ಕಾಣಲಾರದು. ಸರ್ವ್ ನಲ್ಲಿ ಇರಬೇಕಾದ ಕರಾರುವಾಕ್ಕಾದ ಧಾಳಿ, ಪರಫೆಕ್ಷನ್ ಇವಳಲ್ಲಿ ಇಲ್ಲ. ಈಕೆ ಟೆನಿಸ್ ಅಂಗಳದಲ್ಲಿ ಅತ್ತಿತ್ತ ಓಡಾಡುವಾಗ ನಮ್ಮ ಮನೆಯ ಪುಟ್ಟ ಮಗುವೊಂದು ರಚ್ಚೆ ಹಿಡಿದು ಹಠ ಮಾಡುತ್ತಿರುವಂತೆ ಕಾಣುತ್ತದೆ. ಹಾಗೆ ಮುಖವನ್ನು, ಮೂಗನ್ನು ಕೆಂಪಗೆ ಮಾಡಿಕೊಂಡು ಒಂದೋ ಎರಡನೆ ಸುತ್ತಿನಲ್ಲೇ ನಿರ್ಗಮಿಸುವಾಗ ಪಾಪ ಎಂದು ಅನ್ನಿಸುತ್ತದೆ. ಎದುರಾಳಿಗೆ ಸರಿ ಸಾಟಿಯಾದ ಆಟಗಾರ್ತಿ ಎಂದು ಯಾವಾಗಲೂ ಅನ್ನುಸುವುದಿಲ್ಲ. ಏನೆ ಇರಲಿ ಈಕೆ ನಮ್ಮ ಮನೆಯ ಹುಡುಗಿ.
ಟೆನಿಸ್ ನಂತಹ ಕ್ರೀಡೆಯಲ್ಲಿ ಜಯ ಗಳಿಸಲು ಈಕೆ ನಮ್ಮ ಮನೆಯ ಹುಡುಗಿ ಎಂಬುದು ಮಾತ್ರ ಸಾಕಾಗುವುದಿಲ್ಲ. ಅಲ್ಲಿ ಅತಿಯಾದ ಪರಿಶ್ರಮ ಬೇಕು.ಅದಕ್ಕೆ ಪೂರಕವಾದ ದೈಹಿಕ ಬಲ ಬೇಕು. ಚಿಗುರೆಯ ಹಾಗೆ ಮಿಂಚಿನ ಓಟ ಬೇಕು. ಸಿಂಹ ಗರ್ಜನೆ ಬೇಕು. ಆಕ್ರಮಣಶೀಲ ಪ್ರವೃತ್ತಿ ಬೇಕು. ಗೆಲ್ಲವ ಛಲ ಬೇಕು. ಮೈದಾನಕ್ಕೆ ಇಳಿಯುವಾಗ ಒಂದು ರೀತಿಯ ಸಮರ್ಪಣಾ ಭಾವ ಬೇಕು. ಇದಕ್ಕೆಲ್ಲ ಮುಖ್ಯವಾಗಿ ನಾನು ಕ್ರೀಡೆಗಿಂತ ದೊಡ್ಡವಳಲ್ಲ ಎಂಬ ವಿನೀತ ಭಾವ ಬೇಕು. ಆದರೆ ಸಾನಿಯಾಳ ದೈಹಿಕ ಚಲನೆಯನ್ನು, ಅಂದರೆ ಬಾಡಿ ಲ್ಯಾಂಗ್ವೇಜ್ ಅನ್ನು ಗಮನಿಸಿದರೆ ಅಂತಹ ಸಮರ್ಪಣಾ ಭಾವ ಅಲ್ಲಿ ಕಾಣುವುದಿಲ್ಲ. ವಿನೀತ ಮನೋಭಾವ ಕಾಣುವುದಿಲ್ಲ. ಚಿಕ್ಕ ವಯಸ್ಸಿನಲ್ಲಿ ಬಂದ ಕೀರ್ತಿ ಮತ್ತು ಹಣ ಆಕೆಯಲ್ಲಿ ಅಹಂಭಾವವನ್ನು ಮೂಡಿಸಿದಂತೆ ಕಾಣುತ್ತದೆ.
ಈಕೆ ಬಾಲ್ಯದ ಸ್ನೇಹಿತನನ್ನು ಮದುವೆಯಾಗಲು ಮುಂದಾಗಿದ್ದಳು. ನಿಶ್ಚಿತಾರ್ಥವೂ ಆಗಿತ್ತು. ಈಗ ಅದು ಮುರಿದು ಬಿದ್ದು ಪಾಕಿಸ್ಥಾನದ ಕ್ಯಾತ ಕ್ರಿಕೆಟ್ ಆಟಗಾರ ಶೋಯಿಬ್ ಮಲ್ಲಿಕ್ ನನ್ನು ಮದುವೆಯಾಗುತ್ತಿದ್ದಾಳೆ. ಶೋಯಿಬ್ ಪಾಕಿಸ್ಥಾನದ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲಿ ಒಬ್ಬ. ಅದಕ್ಕಿಂತ ಮುಖ್ಯವಾಗಿ ಸಹೃದಯಿ, ಸ್ವಲ್ಪ ತುಂಟ. ಆತ ಎಲ್ಲಿಯೋ ಅಹಂಕಾರದಿಂದ ವರ್ತಿಸಿದ ಉದಾಹರಣೆ ಇಲ್ಲ. ಒಂದೆರಡು ಏಪೇರ್ ಗಳಲ್ಲಿ ಸಿಕ್ಕಿಕೊಂಡು ಈಗ ಅವುಗಳಿಂದ ಹೊರಕ್ಕೆ ಬಂದಿದ್ದಾನೆ. ಸಾನಿಯಾಳನ್ನು ಎರಡು ಮೂರು ತಿಂಗಳುಗಳ ಹಿಂದೆ ನೋಡಿದಾಗ ಪ್ರೇಮ ಅಂಕುರಿಸಿದೆ. ಮಾರೋ ಗೋಲಿ ಎಂದು ಆಕೆಯ ಹಿಂದೆ ಬಿದ್ದಿದ್ದಾನೆ. ಸಾನಿಯಾ ಕೂಡ ಈತನನ್ನು ಮೆಚ್ಚಿದ್ದಾಳೆ. ಆಕೆಯ ನಿಶ್ಚಿತಾರ್ಥ ವಾಗಿದ್ದ ಸಂಬಂಧ ಮುರಿದು ಬೀಳಲು ಈ ಹೊಸ ಪ್ರೇಮವೇ ಕಾರಣ ಎಂಬ ಮಾತೂ ಕೇಳಿ ಬರುತ್ತಿದೆ. ಏನೇ ಇರಲಿ, ಭಾರತದ ಹೆಮ್ಮೆಯ ಮೂಗುತಿ ಸುಂದರಿ ಪಾಕಿಸ್ಥಾನ ಆಲ್ ರೌಂಡರ್ ನನ್ನು ಮದುವೆಯಾಗುತ್ತಿದ್ದಾಳೆ. ಇಬ್ಬರೂ ಹಳೆಯ ನೆನಪುಗಳನ್ನು ಮರೆಯಲಿ. ಹೊಸ ಪ್ರೇಮದ ಬೆನ್ನು ಬೀಳದೇ ದುಬೈನಲ್ಲಿ ಸಂತೋಷವಾಗಿ ಬದುಕಲಿ.

Sunday, March 28, 2010

ಡಾ. ರಾಜ್ ಮತ್ತು ಬಂಗಾರದ ಮನುಷ್ಯ
ಇಂದು ಭಾನುವಾರ. ನಾನು ಡಾ. ರಾಜಕುಮಾರ್ ಅವರ ಯಶಸ್ವಿ ಸಿನೆಮಾಗಳಲ್ಲಿ ಒಂದಾದ ಬಂಗಾರದ ಮನುಷ್ಯ ಚಿತ್ರವನ್ನು ನೋಡಿದೆ. ನಾನು ವಿದ್ಯಾರ್ಥಿಯಾಗಿದ್ದಾಗ ನೋಡಿದ ಸಿನೆಮಾ ಇದು. ಆಗ ಒಂದಕ್ಕಿಂತ ಹೆಚ್ಚು ಬಾರಿ ಈ ಚಿತ್ರವನ್ನು ನೋಡಿದ್ದೆ. ಆಗ ನನಗೆ ತುಂಬಾ ಇಷ್ಟವಾದ ಈ ಸಿನೆಮಾ ಇಂದು ನನ್ನ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಕುತೂಹಲ ನನಗೇ ಇತ್ತು.


ಜೊತೆಗೆ ಡಾ. ರಾಜ್ ಜೊತೆ ನಾನು ಒಂದೆರಡು ಬಾರಿ ನಡೆಸಿದ ಸಂದರ್ಶನ ಕೂಡ ನೆನಪಿಗೆ ಬಂತು. ನಾನು ಸಿನೆಮಾ ಪತ್ರಿಕೋದ್ಯಮವನ್ನು ಮಾಡುತ್ತಿದ್ದ ಕಾಲವದು. ನಾನು ಆಗ ಕೆಲಸ ಮಾಡುತ್ತಿದ್ದುದು ಸುದ್ದಿ ಸಂಗಾತಿ ಎಂಬ ವಾರ ಪತ್ರಿಕೆಯಲ್ಲಿ. ಸಂಪಾದಕರಾಗಿದ್ದ ಇಂದೂಧರ ಹೊನ್ನಾಪುರ,ಎನ್. ಎಸ್. ಶಂಕರ್ ಮತ್ತು ಕೆ. ರಾಮಯ್ಯ, ವಿಶೇಷ ಸಂಚಿಕೆಗೆ ಡಾ. ರಾಜಕುಮಾರ್ ಅವರ ಸಂದರ್ಶನ ಮಾಡುವ ಹೊಣೆಗಾರಿಕೆಯನ್ನು ನನಗೆ ಒಪ್ಪಿಸಿದರು. ಡಾ. ರಾಜ್ ಅವರ ಸಿನೆಮಾಗಳನ್ನು ನೋಡುತ್ತಲೇ ಸಿನಿಮಾ ಹುಚ್ಚು ಬೆಳಸಿಕೊಂಡ ನನಗೆ ಇದೊಂದು ಅಪೂರ್ವ ಅವಕಾಶ.
ಸದಾಶಿವನಗರದ ಅವರ ಮನೆಯಲ್ಲಿ ನಡೆದ ಸಂದರ್ಶನ ಅದು.
"ನಿಮಗೆ ಗೊತ್ತಾ ? ನಾನು ಶಾಲೆಗೆ ಹೋಗುವಾಗ ಕೋಟ್ ಹಾಕಿಕೊಂಡು ಹೋಗುತ್ತಿದ್ದೆ. ಕೋಟಿನ ಒಳಗೆ ಅಂಗಿಯೇ ಇರುತ್ತಿರಲಿಲ್ಲ. ಯಾಕೆಂದರೆ ನನ್ನ ಬಳಿ ಅಂಗಿ ಇರಲಿಲ್ಲ. "
ಡಾ. ರಾಜಕುಮಾರ್ ಅವರ ನೆನಪಿನ ಬುತ್ತಿ ಹೀಗೆ ಬಿಚ್ಚಿಕೊಳ್ಳತೊಡಗಿತ್ತು.
ನೀವು ಮೊದಲಿನಿಂದ ಯೋಗ, ವ್ಯಾಯಾಮ ಮಾಡುತ್ತಿದ್ದಿರಾ ?
"ಎಲ್ಲಿಯ ಯೋಗ ? ಎಲ್ಲಿಯ ವ್ಯಾಯಾಮ ? ನನಗೆ ತಿನ್ನುವುದಕ್ಕೆ ಸರಿಯಾಗಿ ಇಲ್ಲದ ಕಾಲ ಅದು. ನಾನು ಯೋಗವನ್ನು ಪ್ರಾರಂಭಿಸಿದ್ದು ೫೦ ವರ್ಷ ಆದ ಮೇಲೆ."
ಕೀರ್ತಿ ಹಣ ಯಾವುದೂ ಅವರನ್ನು ಬದಲಿಸಿರಲಿಲ್ಲ. ಅವರು ಹೇಳಿದ ಇನ್ನೊಂದು ಮಾತು;
ನನಗೆ ಒಬ್ಬನೇ ರಸ್ತೆಗಳಲ್ಲಿ ಸುತ್ತಬೇಕು ಅನ್ನಿಸುತ್ತದೆ. ಆದರೆ ಅದು ಸಾಧ್ಯವಿಲ್ಲ. ಹಾಗೆ ನನ್ನ ಕಿಸೆಯಲ್ಲಿ ಹಣವೇ ಇರುವುದಿಲ್ಲ. ಯಾಕೆಂದರೆ ನನಗೆ ಹಣದ ಅವಶ್ಯಕತೆ ಇಲ್ಲ
ಅವರ ಮಾತು ಹೀಗೆ ಸಾಗಿತ್ತು. ನನಗೆ ಡಾ. ರಾಜಕುಮಾರ್ ಅವರ ಸಂಪರ್ಕ್ ಬಂದಿದ್ದು ನಾನು ಮುಂಜಾನೆ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ. ಈ ಪತ್ರಿಕೆ ನಿಂತ ಮೇಲೆ, ಇಂದೂಧರ್ ಹೊನ್ನಾಪುರ ಸಂಪಾದಕತ್ವದಲ್ಲಿ ಪ್ರಾರಂಭವಾದ ಸುದ್ದಿ ಸಂಗಾತಿಯನ್ನು ನಾನು ಸೇರಿದ್ದೆ. ಅಲ್ಲಿ ಸಿನೆಮಾ, ರಾಜಕೀಯ ಮತ್ತು ವಿಶೇಷ ವರದಿಗಳನ್ನು ಬರೆಯುತ್ತಿದ್ದೆ. ನಾನು ಬಹಳ ಕಾಲದ ನಂತರ, ಸಂದರ್ಶನಕ್ಕೆ ಡಾ. ರಾಜ್ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಅದೇ ಮಾತು.
"ನಿಮ್ಮ ಮುಂಜಾನೆ ಪತ್ರಿಕೆ ತುಂಬಾ ಚೆನ್ನಾಗಿ ಬರುತ್ತಿದೆ."
ನಾನು ಆ ಪತ್ರಿಕೆ ನಿಂತು ಎರಡು ವರ್ಷವಾಗಿದೆ ಎಂಬುದನ್ನು ಅವರ ಗಮನಕ್ಕೆ ತಂದೆ. ಅವರಿಗೆ ಮುಂಜಾನೆ ನಿಂತಿದ್ದು ಗೊತ್ತಿರಲೇ ಇಲ್ಲ ! ಅಂತಹ ಮುಗ್ದತೆ.
ನಾನು ಡಾ. ರಾಜ್ ಅವರನ್ನು ಇನ್ನೊಮ್ಮೆ ನೋಡಿದ್ದು ಅವರ ಪುತ್ರ ಶಿವರಾಜ್ ಕುಮಾರ್ ಅವರ ಮೊದಲ ಚಿತ್ರ ಆನಂದ ಬಿಡುಗಡೆಯ ಔತಣಕೂಟದಲ್ಲಿ. ಆನಂದ್ ಸಿನೆಮಾ ಹೇಗಿದೆ ಎಂದು ಅವರು ನನ್ನನ್ನು ಪ್ರಶ್ನಿಸಿದರು. ಆಗ ನಾನು ಹೇಳಿದ್ದು;ನಿಮ್ಮ ಅತಿ ದೊಡ್ದ ಶಕ್ತಿ ಎಂದರೆ ಡೈಲಾಗ್ ಪ್ರಸೆಂಟೇಷನ್. ಅಂತಹ ಸ್ಪಷ್ಟತೆ ಕನ್ನಡದಲ್ಲಿ ಇನ್ಯಾರಿಗೂ ಇಲ್ಲ. ಆದರೆ ಶಿವರಾಜಕುಮಾರ್ ಅವರು ಸಂಭಾಷಣೆಯನ್ನು ಹೇಳುವ ರೀತಿಯಲ್ಲಿ ಶಕ್ತಿಯೇ ಇಲ್ಲ. ಯಾವುದೋ ಭಾಷೆಯನ್ನು ಕೇಳಿದಂತೆ ಆಗುತ್ತದೆ.
ಡಾ. ರಾಜ್ ನಾನು ಹೇಳಿದ ಮಾತಿಗೆ ಸಹಮತ ವ್ಯಕ್ತಪಡಿಸಿದರು. ನಾಟಕ ಕಂಪೆನಿಗಳಲ್ಲಿ ತಮಗೆ ದೊರಕಿದ ಅನುಭವವೇ ಇದಕ್ಕೆ ಕಾರಣ ಎಂದರು. ಹಾಗೆ ಶಿವರಾಜಕುಮಾರ್ ವಿದ್ಯಾರ್ಥಿ ಜೀವನವನ್ನು ಮದ್ರಾಸಿನಲ್ಲಿ ಕಳೆದಿದ್ದು ಇದಕ್ಕೆ ಕಾರಣ ಎಂದರು.ಇದೆಲ್ಲ ಬಂಗಾರದ ಮನುಷ್ಯ ನೋಡಿದಾಗ ನೆನಪಾಯಿತು.

ಬಂಗಾರದ ಮನುಷ್ಯ ಸಿನೆಮಾ ಒಂದು ನೀಟ್ ಆದ ಸಿನೆಮಾ. ಜೊತೆಗೆ ಅಲ್ಲಿ ತ್ಯಾಗವಿದೆ. ಒಕ್ಕಲುತನದ ವೈಭವೀಕರಣವಿದೆ. ಭಾರತೀಯ ಕೌಟುಂಬಿಕ ವ್ಯವಸ್ಥೆಯ ಪರವಾದ ಧ್ವನಿಯಿದೆ. ಅಂದಿನ ಕಾಲಘಟ್ಟದಲ್ಲಿ ಎಲ್ಲರೂ ಒಪ್ಪಿ, ಅಪ್ಪಿಕೊಳ್ಳುವ ಸಿನೆಮಾ ಅದು. ಆದರೆ ಇಂದು ನಿಂತು ನೋಡಿದರೆ ಈ ಸಿನೆಮಾ ನಮ್ಮ ಮೇಲೆ ಬೀರುವ ಪರಿಣಾಮವೇ ಬೇರೆ. ಅಂದು ನಮಗೆ ಈ ಸಿನೆಮಾ ಇಷ್ಟವಾದಷ್ಟು ಇಂದು ಇಷ್ಟವಾಗುವುದಿಲ್ಲ. ಯಾಕೆಂದರೆ ಈ ಸಿನೆಮಾ ಹೇಳಲು ಹೊರಟಿರುವ ವಸ್ತು, ಇಂದು ವಸ್ತು ಅಲ್ಲ. ಇಂದು ನಮ್ಮ ಮುಂದಿರುವ ಸವಾಲುಗಳೇ ಬೇರೆ. ನಮ್ಮನ್ನು ಕಾಡುವ ವಿಚಾರಗಳೇ ಬೇರೆ. ನಗರ ಮತ್ತು ಗ್ರಾಮೀಣ ಬದುಕಿನ ಆಯ್ಕೆಯ ನಡುವಿನ ಸಂಘರ್ಷ ಇಂದು ಬೇರೆ ರೂಪವನ್ನು ಪಡೆದಿದೆ. ಅದು ಬಂಗಾರದ ಮನುಷ್ಯ ಸಿನೆಮಾ ಹೇಳುವಷ್ಟು ಸರಳವಾಗಿಲ್ಲ. ಜೊತೆಗೆ ತ್ಯಾಗ, ಇಂದು ಬದುಕಿನ ಮೌಲ್ಯವಾಗಿ ಉಳಿದಿಲ್ಲ.

ಒಂದು ಸಾರ್ವಕಾಲಿಕ ಉತ್ತಮ ಸಿನೆಮಾ ಮತ್ತು ಒಂದು ಕಾಲಘಟ್ಟದ ಉತ್ತಮ ಸಿನೆಮಾದ ನಡುವಿನ ವ್ಯತ್ಯಾಸ ಇದೇ. ಒಂದು ಸಿನೆಮಾ ಯಾವಾಗ ಸಾರ್ವಕಾಲಿಕ ಸಿನೆಮಾ ಆಗುತ್ತದೆ ಎಂದರೆ, ಅದು ಕಾಲವನ್ನು ಮೀರಿ ಮನುಷ್ಯನ ಅನುಭವಗಳ ಮೇಲಿನ ಭಾಷ್ಯವಾಗಬೇಕು. ಕಾಲವನ್ನು ಮೀರಿ ನಿಲ್ಲುವ ಸಿನೆಮಾವೇ ಅತ್ಯುತ್ತಮ ಸಿನೆಮಾ ಎಂದು ನಾನು ನಂಬಿದ್ದೇನೆ.

ಬಂಗಾರದ ಮನುಷ್ಯ ಕಾಲವನ್ನು ಮೀರಿದ ಅತ್ಯುತ್ತಮ ಸಿನೆಮಾ ಆಗದಿದ್ದರೂ ಅದು ನಮ್ಮನ್ನು ಭೂತಕಾಲಕ್ಕೆ ಕರೆದೊಯ್ಯುತ್ತದೆ. ಅಂದಿನ ಸಿನೆಮಾಗಳ ವ್ಯಾಕರಣ, ಬದುಕಿನ ದೃಷ್ಟಿ ಎಲ್ಲವನ್ನೂ ನೆನಪು ಮಾಡಿಕೊಡುತ್ತದೆ. ಇದಕ್ಕಾದರೂ ಈ ಸಿನೆಮಾವನ್ನು ಇನ್ನೊಮ್ಮೆ ನೋಡಬೇಕು.

Saturday, March 27, 2010

ಖಾಸಗಿ ಮಾತುಗಳು; ನಾನು ಯಾರನ್ನೂ ಧ್ವೇಷಿಸಲಾರೆ.....!

ಬಹಳಷ್ಟು ಜನ ನನ್ನನ್ನು ಕೇಳುತ್ತಾರೆ.

"ನಿಮಗೆ ಇಂತವರ ಬಗ್ಗೆ ತುಂಬಾ ಸಿಟ್ಟಿ ಇರಬೇಕಲ್ಲ ? ನೀವು ಈಗ ಸುಮ್ಮನಿರಬಾರದು." ನಾನು ಈ ಮಾತುಗಳನ್ನು ಕೇಳಿ ನಕ್ಕು ಬಿಡುತ್ತೇನೆ. ಧ್ವೇಷ ನನ್ನ ಜಾಯಮಾನವಲ್ಲ. ರಾಜಕಾರಣಿಗಳ ಜೊತೆ ಒಡನಾಡಿದರೂ ನಾನು ರಾಜಕೀಯ ಮಾಡಲಾರೆ. ಪತ್ರಿಕೋದ್ಯಮದಲ್ಲಿ ಇದ್ದರೆ, ನಾನು ಪತ್ರಿಕೋದ್ಯಮವನ್ನು ಮಾತ್ರ ನಂಬಿ ಬದುಕುತ್ತೇನೆ. ಬೇರೆ ವ್ಯವಹಾರ ಮಾಡಲಾರೆ. ಮಾಧ್ಯಮದ ವಿಸಿಟಿಂಗ್ ಕಾರ್ಡ್ ಬಳಸಿ ಬೇರೆ ವ್ಯವಹಾರ ಮಾಡಲು ನನಗೆ ಬರುವುದಿಲ್ಲ. ಆದ್ದರಿಂದ ಇಂತಹ ಮಾತುಗಳನ್ನು ಕೇಳಿದಾಗ ನನಗೆ ಬರುವುದು ಸಣ್ಣ ನಗು ಮಾತ್ರ. ಇದು ನನ್ನ ದೌರ್ಬಲ್ಯ ಎಂದು ಸ್ನೇಹಿತರು ಹೇಳುವುದಿದೆ. ನನ್ನ ಹೆಂಡತಿ ಮಕ್ಕಳು ಸ್ನೇಹಿತರು ಮೂದಲಿಸುವುದಿದೆ. ಆಗಲೂ ನಾನು ನಗುವುದು ಬಿಟ್ಟು ಬೇರೆ ಮಾಡಲಾರೆ. ಯಾಕೆಂದರೆ ಇದು ದೌರ್ಬಲ್ಯವಲ್ಲ. ಇದೇ ನನ್ನ ಶಕ್ತಿ ಎಂಬುದು ನನಗೆ ಗೊತ್ತಿದೆ.

ನಾನು ದೃಶ್ಯ ಮಾಧ್ಯಮಕ್ಕೆ ಬಂದಿದ್ದು ಅಚಾನಕ್ ಆಗಿ. ಅದು ೨೦೦೦ ಇಸ್ವಿ ಜನವರಿ ತಿಂಗಳು. ಏಷ್ಯಾನೆಟ್ ಮತ್ತು ಜೀ ಚಾನಲ್ ಗಳು ಸೇರಿ ಕನ್ನಡಲ್ಲಿ ಚಾನಲ್ ಪ್ರಾರಂಭಿಸಲು ನಿರ್ಧರಿಸಿದ್ದವು. ಅವರಿಗೆ ಸುದ್ದಿ ವಿಭಾಗದ ಮುಖ್ಯಸ್ಥರು ಬೇಕಾಗಿತ್ತು. ಹೀಗಾಗಿ ಅನುಭವಿ ಪತ್ರಕರ್ತರಿಗಾಗಿ ಹುಡುಕುತ್ತಿದ್ದರು. ಆಗ ಸ್ನೇಹಿತರೊಬ್ಬರು ಬೆಂಗಳೂರಿಗೆ ಬಂದಿದ್ದ ಏಷ್ನಾನಟ್ ಚಾನಲ್ ನ ಮಾಲಿಕರಾಗಿದ್ದ ರಾಜೂ ಮೆನನ್ ಅವರನ್ನು ನೋಡುವಂತೆ ಸೂಚಿಸಿದರು. ನಾನಾಗ ಕನ್ನಡ ಪ್ರಭ ಪತ್ರಿಕೆಯ ಮುಖ್ಯವರದಿಗಾರನಾಗಿದ್ದೆ. ನನ್ನ ಜೊತೆ ಎಚ್. ಆರ್. ರಂಗನಾಥ್, ಶಿವಸುಬ್ರಹ್ಮಣ್ಯ. ರವಿ ಪ್ರಕಾಶ, ಶ್ರೀಕಾಂತ್ ನಾಡಿಗೇರ್ ಮೊದಲಾದವರಿದ್ದರು. ಡಿ. ಉಮಾಪತಿ ಆಗಲೇ ದೆಹಲಿಗೆ ವರ್ಗವಾಗಿ ಹೋಗಿದ್ದರು.

ನನಗೆ ಯಾಕೋ ಗೊತ್ತಿಲ್ಲ, ಕನ್ನಡ ಪ್ರಭ ಬಿಡುವುದು ಒಳ್ಳೆಯದು ಎಂದು ಅನ್ನಿಸತೊಡಗಿತ್ತು. ಹಾಗೆ ನೋಡಿದರೆ, ನನ್ನ ಜೊತೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳೆಲ್ಲ ನನ್ನ ಸ್ನೇಹಿತರೇ. ರಂಗನಾಥ್ ಬೆಂಗಳೂರಿಗೆ ಬಂದ ಮೇಲೆ ನನ್ನ ಜೊತೆಗೆ ಇದ್ದವರು. ವಿ. ಎನ್ ,ಸುಬ್ಬರಾಯರ ನಾವು ನೀವು ಪತ್ರಿಕೆಯಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೆವು. ಜೊತೆಗೆ ರಂಗನಾಥ್ ನನ್ನ ರೂಮಿನಲ್ಲೇ ಇದ್ದರು. ಆಗ ಅವರ ಬಳಿ ಒಂದು ಮೊಪೆಡ್ ಇತ್ತು. ರಾತ್ರಿ ಅವರ ಮೊಪೆಡ್ ನಲ್ಲಿ ಹಿಂದೆ ಕುಳಿತು ಮನೆಗೆ ಬರುತ್ತಿದ್ದೆ. ಇಬ್ಬರೂ ಕನಸು ಕಾಣುತ್ತಿದ್ದ ದಿನಗಳು ಅವು.

ನಂತರದ ದಿನಗಳಲ್ಲಿ ರಂಗನಾಥ್ ಬೇರೆ ಮನೆ ಮಾಡಿದರು. ಆದರೆ ಅಷ್ಟರಲ್ಲಿ ನಮ್ಮ ಪತ್ರಿಕೆ ಸೇರಿದ ಶಿವಸುಬ್ರಹ್ಮಣ್ಯ ವಿಜಯನಗರದಲ್ಲಿ ಮನೆ ಮಾಡಿದ್ದರಿಂದ ಅವರು ನನ್ನನ್ನು ಮನೆಗೆ ಡ್ರಾಫ್ ಮಾಡುತ್ತಿದ್ದರು. ನಾನು ಮುಖ್ಯ ವರದಿಗಾರನಾಗುವ ವರೆಗೆ ಎಲ್ಲವೂ ಹೀಗೆ ಇತ್ತು. ಎಲ್ಲರೂ ಸ್ನೇಹಿತರೇ. ಆದರೆ ನಾನು ಮುಖ್ಯ ವರದಿಗಾರನಾದ ಮೇಲೆ ಪರಿಸ್ಥಿತಿ ಬದಲಾಯಿತು. ನನಗೆ ನನ್ನ ಬಗ್ಗೆ ಅನುಮಾನ ಪಡುವ ಸ್ಥಿತಿ.

ನಾನು ನನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದೆ. ರಾಜಕೀಯ ವರದಿಗಾರಿಕೆಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲು ಯತ್ನಿಸಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೂ ದೊರಕಿತು. ಈಗಲೂ ಹಲವಾರು ಹಿರಿಯ ರಾಜಕಾರಣಿಗಳು ಅಂದಿನ ನನ್ನ ವರದಿಗಳನ್ನ ನೆನಪು ಮಾಡಿಕೊಳ್ಳುತ್ತಾರೆ. ಇರಲಿ, ಆದರೆ ನನ್ನ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದ ನಾನು ಎಂದೂ ಮೆನೇಜ್ಮೆಂಟ್ ಜೊತೆ ಸತತ ಸಂಪರ್ಕ ಇಟ್ಟುಕೊಳ್ಳಬೇಕು ಎಂಬುದನ್ನು ತಿಳಿದಿರಲಿಲ್ಲ. ಅಷ್ಟರ ಮಟ್ಟಿಗೆ ನಾನು ದಡ್ದನಾಗಿದ್ದೆ. ಆದರೆ ನನ್ನ ಸ್ನೇಹಿತ ಸಹೋದ್ಯೋಗಿಗಳು ಆಗಲೇ ಮೆನೇಜ್ಮೆಂಟ್ ಜೊತೆ ಸಂಪರ್ಕವನ್ನು ಸಾಧಿಸಿಬಿಟ್ಟಿದ್ದರು. ಇಂಥಹ ಸ್ಥಿತಿಯಲ್ಲಿ ನನಗೆ ಅನ್ನಿಸಿದ್ದು ನಾನು ಕೆಲಸ ಬಿಡುವುದು ಒಳ್ಳೆಯದು ಅಂತ.

ನನ್ನ ಇನ್ನೊಂದು ಗುಣವಿದೆ. ನಾನು ಬೇರೆಯವರು ನನ್ನ ಸ್ಥಾನಕ್ಕೆ ಬರುತ್ತಾರೆ ಎಂಬುದು ಗೊತ್ತಾದರೆ, ನಾನೇ ಸ್ಥಾನವನ್ನು ಬಿಟ್ಟು ಹೊರಟು ಬಿಡುತ್ತೇನೆ. ಇಂತಹ ಹಲವು ಉದಾಹರಣೆಗಳು ಇವೆ. ಕೆಲವೊಮ್ಮೆ ನನಗೆ ಗೊತ್ತಾಗದೇ ಬೆಳವಣಿಗೆ ಆದಾಗ ಮಾತ್ರ, ನಾನು ಹೇಳಿದ ಮೇಲೆ ಹೊರಹೋಗಿದ್ದು ಇದೆ.

ನಾನು ಕನ್ನಡ ಪ್ರಭ ಬಿಡಬೇಕು ಎಂದುಕೊಂಡಾಗಲೇ ಏಶ್ಯಾನೆಟ್ ನನ್ನನ್ನು ಆಯ್ಕೆ ಮಾಡಿತು. ಜೊತೆಗೆ ಅವರು ನೀಡಿದ ಸಂಬಳವೂ ಆಕರ್ಷಕವಾಗಿತ್ತು. ಕನ್ನಡ ಪ್ರಭದಲ್ಲಿ ನಾನು ೧೭ ಸಾವಿರ ರೂಪಾಯಿ ಸಂಬಳ ತೆಗೆದುಕೊಳ್ಳುತ್ತಿದ್ದೆ. ಏಷ್ಯಾನೆಟ್ ನನಗೆ ನೀಡಿದ ಸಂಬಳ ೩೫ ಸಾವಿರ ರೂಪಾಯಿ ಜೊತೆಗೆ ಇತರ ಸೌಲಭ್ಯಗಳು.

ನಾನು ಭಾರವಾದ ಹೃದಯದಿಂದ ಕನ್ನಡ ಪ್ರಭ ತ್ಯಜಿಸಿದೆ. ಏಷ್ಯಾನೆಟ್ ಸಮೂಹ ಸೇರಿದೆ. ಅದು ೨೦೦೦ ಇಸ್ವಿ ಜೂನ್ ತಿಂಗಳು. ಹೀಗೆ ಪ್ರಾರಂಭವಾಯಿತು ನನ್ನ ದೃಶ್ಯ ಮಾಧ್ಯಮದ ಉದ್ಯೋಗ. ಏಷ್ಯಾನೆಟ್ ಮತ್ತು ಜೀ, ಕಾವೇರಿ ಎಂಬ ಕನ್ನಡ ಚಾನಲ್ ಅನ್ನು ಆಗಲೇ ಪ್ರಾರಂಭಿಸಿದ್ದರು. ಆದರೆ ಸುದ್ದಿ ಪ್ರಾರಂಭವಾಗಿರಲಿಲ್ಲ. ನಾನು ಸುದ್ದಿ ವಿಭಾಗಕ್ಕೆ ಬೇಕಾದವರನ್ನು ತೆಗೆದುಕೊಳ್ಳಲು ಪ್ರಕ್ರಿಯೆ ಪ್ರಾರಂಭಿಸಿದೆ. ಆದರೆ ಆಗಲೇ ನಡೆದಿದ್ದು ಕನ್ನಡದ ವರನಟ ಡಾ. ರಾಜಕುಮಾರ್ ಅಪಹರಣ. ಇದರಿಂದಾಗಿ ನನಗೆ ತಕ್ಷಣ ಮದ್ರಾಸಿಗೆ ಹೋಗಿ ಸುದ್ದಿಯನ್ನು ಪ್ರಾರಂಭಿಸುವಂತೆ ಸೂಚನೆ ಬಂತು. ಆಗ ಏಷ್ಯಾನೆಟ್ ಅಪ್ ಲಿಂಕಿಂಗ್ ಇದ್ದುದು ಚೆನ್ನೈನಲ್ಲಿ. ನಾನು ಮರು ಮಾತನಾಡದೇ ಮಧ್ಯಾನ್ಹದ ಫ್ಲೈಟ್ ನಲ್ಲಿ ಮದ್ರಾಸಿಗೆ ನಡೆದೆ. ಅಷ್ಟರಲ್ಲಿ ಕಾವೇರಿ ನ್ಯೂಸ್ ವಿಶೇಷ ಸುದ್ದಿ ಪ್ರಸಾರ ಸಂಜೆ ೫. ೩೦ ಕ್ಕೆ ಎಂಬ ಪ್ರಕಟನೆ ಚಾನಲ್ ನಲ್ಲಿ ಪ್ರಸಾರವಾಗುತ್ತಿತ್ತು.

ನಾನು ಮದ್ರಾಸಿಗೆ ಬಂದವನು ಅಲ್ಲಿಂದ ೫೦ ಕಿಮೀ ದೂರದಲ್ಲಿರುವ ಸ್ಟುಡಿಯೋಕ್ಕೆ ನಡೆದ. ಆಗಲೇ ೩. ೩೦ ಆಗಿತ್ತು. ೫.೩೦ ಕ್ಕೆ ಲೈವ್ ಸುದ್ದಿ ಪ್ರಸಾರ ಆಗಬೇಕು. ಸ್ಟುಡಿಯೊಕ್ಕೆ ಹೋದವನಿಗೆ ಶಾಕ್. ಅಲ್ಲಿದ್ದ ಬಹುತೇಕರಿಗೆ ಮಲೆಯಾಳಿ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಹೀಗಾಗಿ ಅವರ ಜೊತೆ ನನಗೆ ಸಂವಾದವೇ ಸಾಧ್ಯವಾಗಲಿಲ್ಲ. ನಾನು ಅಲ್ಲಿದ್ದ ವಿಸ್ಯುವಲ್ಸ್ ಗಳನ್ನು ನೋಡಿದೆ. ನನಗೆ ಗೊತ್ತಿದ್ದ ಮಾಹಿತಿಯನ್ನು ಆಧರಿಸಿ, ಸುದ್ದಿಯನ್ನು ಬರೆದು ಎಡಿಟ್ ಮಾಡಿಸಿದೆ. ಕೊನೆಗೆ ಸ್ಟುಡೀಯೋದ ಒಳಗೂ ಪ್ರವೇಶಿಸಿದೆ. ಸುದ್ದಿ ವಾಚಕನಾಗಿ. ಅಲ್ಲಿ ನಾನು ಮಾಡಲು ಹೊರಟಿದ್ದು ಒನ್ ಮ್ಯಾನ್ ಶೋ. ಅಂತೂ ಯಾವುದೇ ತೊಂದರೆ ಇಲ್ಲದೇ ಲೈವ್ ನ್ಯೂಸ್ ಪ್ರಸಾರ ಆಯಿತು. ಮರುದಿನ ಚೈನೈನಲ್ಲಿರುವ ಕೆಲವರನ್ನು ಸಂಪರ್ಕಿಸಿದೆ. ಕೆಲವರು ಉದಯ ಟೀವಿಯಲ್ಲಿ ಕೆಲಸ ಮಾಡಿದವರೂ ಅಲ್ಲಿದ್ದರು. ಇಂತಹ ಮೂವರನ್ನು ತೆಗೆದುಕೊಂಡು ಪ್ರತಿ ದಿನ ಸುದ್ದಿ ಬರುವಂತೆ ಮಾಡಿದೆ. ಸುಮಾರು ೧೫ ದಿನಗಳ ಕಾಲ ಅಲ್ಲಿ ನನ್ನ ಈ ಶೋ ನಡೆಯಿತು. ಇದರಿಂದ ಏಷ್ಯಾನೆಟ್ ನವರಿಗೆ ನನ್ನ ಬಗ್ಗೆ ಪ್ರೀತಿ ಗೌರವ ಮೂಡಿತು. ಈಗಲೂ ಅದೇ ಪ್ರೀತಿ ಗೌರವ ಅವರಿಗೆ ನನ್ನ ಮೇಲಿದೆ.

ನನ್ನ ಕೆಲವು ಸ್ಣೇಹಿತರು ನೀವು ಈಗ ಸುಮ್ಮನಿರಬಾರದು ಎಂದು ಹೇಳಿದಾಗ ಇದೆಲ್ಲ ನನಗೆ ನೆನಪಾಗುತ್ತಿದ್ದೆ. ಬದುಕಿನಲ್ಲಿ ನಮ್ಮನ್ನು ಇಷ್ಟಪಡುವರೂ ಇರುತ್ತಾರೆ. ಇಷ್ಟಪಡುವವರು ಇರುವುದರಿಂದ ಧ್ವೇಷಿಸುವವರೂ ಇರುತ್ತಾರೆ. ನಾನು ನೋಡಿದ ಹಾಗೆ ಒಬ್ಬ ವ್ಯಕ್ತಿ ಪರಿಸ್ಥಿತಿಗೆ ತಕ್ಕಂತೆ ವರ್ತಿಸುತ್ತಾನೆ. ತನ್ನ ಎಜೇಂಡಾಕ್ಕೆ ತಕ್ಕಂತೆ ಕೆಲಸ ಮಾಡುತ್ತಿರುತ್ತಾನೆ. ಆದ್ದರಿಂದ ಮನುಷ್ಯರನ್ನು ಒಳ್ಳೆಯವರು ಕೆಟ್ಟವರು ಎಂದು ವಿಭಾಗ ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ.

ನನ್ನ ಜೊತೆ ಕೆಲಸ ಮಾಡಿದ ಎಲ್ಲ ಸ್ನೇಹಿತರೂ ಒಳ್ಳೆಯವರೇ. ಎಲ್ಲರೂ ಜೆಂಟಲ್ ಮ್ಯಾನ್ ಗಳೇ. ಆದ್ದರಿಂದ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಲು ಸಿದ್ಧನಿಲ್ಲ. ಹಾಗೆ ನಾನು ಕೆಲಸ ಮಾಡಿದ ಪತ್ರಿಕೆಗಳು. ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಮೊದಲಾದ ಪತ್ರಿಕೆಗಳು ನನಗೆ ಬದುಕು ನೀಡಿದ ಪತ್ರಿಕೆಗಳು. ನನಗೆ ಬರೆಯುವುದನ್ನು ಕಲಿಸಿದ ಪತ್ರಿಕೆಗಳು. ಇಂದಿಗೂ ಬೆಳಿಗ್ಗೆ ನಾನು ಎದ್ದ ತಕ್ಷಣ ನೋಡುವುದು ಈ ಪತ್ರಿಕೆಗಳನ್ನು. ನಾನು ಎಂದೂ ಈ ಪತ್ರಿಕೆಗಳ ಬಗ್ಗೆ ಕೆಟ್ಟದಾಗಿ ಮಾತನಾಡಲಾರೆ. ಅವುಗಳ ಬಗ್ಗೆ ನನ್ನ ಹೃದಯದಲ್ಲಿ ಇರುವುದು ಕೃತಜ್ನತೆಯ ಭಾವ. ಆದರೆ ಎಲ್ಲರೂ ಹೀಗೆ ಇರಬೇಕು ಎಂದು ಹೇಳುವ ಹಕ್ಕು ನನಗಿಲ್ಲ. ಕೆಲವರಿಗೆ ಇಂತಹ ಭಾವ ಇರದಿರಬಹುದು. ಇದೆಲ್ಲ ವ್ಯಕ್ತಿಗತವಾದ ನಡವಳಿಕೆಗಳು.

ಕೆಲವೊಂದು ನೆನಪುಗಳೇ ಹಾಗೆ. ಮರೆಯಬೇಕು ಎಂದುಕೊಂಡರೂ ಮರೆಯಲು ಸಾಧ್ಯವಾಗುವುದಿಲ್ಲ. ಅವು ಸದಾ ನನ್ನನ್ನು ಕಾಡುತ್ತಿರುತ್ತವೆ. ನಾವು ಕಳೆದ ಸುಂದರ ಕ್ಷಣಗಳು ನಮ್ಮನ್ನು ಕಾಡುತ್ತಿರಬೇಕು. ಕಹಿ ಅನುಭವಗಳಲ್ಲ. ಹಾಗಿದ್ದರೆ ಮಾತ್ರ ನಾವು ಆರೋಗ್ಯಪೂರ್ಣವಾಗಿ ಇರಲು ಸಾಧ್ಯ.

ಹೀಗಿರುವ ನಾನು ಯಾರನ್ನಾದರೂ ಧ್ವೇಷಿಸುವುದು ಸಾಧ್ಯವಾ ? ಖಂಡಿತ ಇಲ್ಲ. ಸ್ನೇಹಿತರ ದುಷ್ಟತನವನ್ನು ಮರೆತರೆ ನಾವು ಆರೋಗ್ಯಪೂರ್ಣವಾಗಿರುತ್ತೇವೆ. ಅವರು ಹಪಹಪಿಸುತ್ತಾರೆ. ಇದು ನಾನು ಕಂಡುಕೊಂಡ ಸತ್ಯ.
ಇರಲಿ, ಇನ್ನು ಮೇಲೆ ಬಿಡುವಾದಾಗಲೆಲ್ಲ, ಪತ್ರಿಕೋದ್ಯಮದ ನನ್ನ ನೆನಪುಗಳಿಗೆ ಅಕ್ಷರದ ರೂಪ ಕೊಡುತ್ತೇನೆ. ಇದು ಇಂದು ನಾನು ತೆಗೆದುಕೊಂಡ ತೀರ್ಮಾನ.

Friday, March 26, 2010

ಇಲ್ಲಿ ಎಲ್ಲವೂ ಈಗ ಪೇಡ್, ಪೇಡ್ : ಈ ಬಗ್ಗೆ ಆತ್ಮ ವಿಮರ್ಶೆ ನಡೆಯಲಿ.


ನಮ್ಮ ಬಗ್ಗೆ ನಾವು ಬರೆದುಕೊಳ್ಳುವುದು ಕಷ್ಟದ ಕೆಲಸ. ನಾವು ಪ್ರೀತಿಸುವ, ನಮ್ಮ ಬದುಕಿನ ಭಾಗವೇ ಆಗಿರುವ, ನಮ್ಮ ವೃತ್ತಿಯ ಬಗ್ಗೆ ಮಾತನಾಡುವುದು ಇನ್ನೂ ಕಷ್ಟ. ಆದರೆ ನಾವು ಮಾತನಾಡಲೇ ಬೇಕು. ಹೇಳುವುದನ್ನು ಹೇಳಲೇ ಬೇಕು. ಯಾಕೆಂದರೆ ನಾವೆಲ್ಲ ಪತ್ರಿಕೋದ್ಯಮಿಗಳು.
ಮಹಾನಗರ ಪಾಲಿಕೆಯ ಚುನಾವಣೆಯ ಕಾವು ಏರುತ್ತಿದ್ದ ಹಾಗೆ ನಾನು ಪತ್ರಿಕೆಗಳನ್ನು ಅಭ್ಯಸಿಸುವನಂತೆ ಓದತೊಡಗಿದೆ. ಚುನಾವಣಾ ಸಮೀಕ್ಷೆಗಳನ್ನು ಓದುವ ಮೂಲಕ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಯತ್ನಿಸಿದೆ.
ಪ್ರಾಯಶ: ನೀವೆಲ್ಲ ಗಮನಿಸಿರಬಹುದು. ಒಂದು ಪತ್ರಿಕೆಯಲ್ಲಿ ಒಂದೇ ದಿನ ಒಂದು ವಾರ್ಡಿನ ಬಗ್ಗೆ ಎರಡು ರೀತಿಯ ವರದಿಗಳು ಇದ್ದವು. ಒಂದರಲ್ಲಿ ಒಂದು ಪಕ್ಷದ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ ಎಂದಿದ್ದರೆ ಇನ್ನೊಂದು ವರದಿಯಲ್ಲಿ ಇನ್ನೊಬ್ಬ ಅಭ್ಯರ್ಥಿ ಗೆಲ್ಲುತ್ತಾನೆ ಎಂದಿತ್ತು ! ಆ ವರದಿಗಳ ಪಕ್ಕದಲ್ಲಿ ಅವರು ಪ್ರತಿನಿಧಿಸುವ ಪಕ್ಷದ ಜಾಹೀರಾತುಗಳಿದ್ದವು. ಅಂದರೆ ಅದು ಸಮೀಕ್ಷೆಯಲ್ಲ. ಪೇಡ್ ಸಮೀಕ್ಷೆ ! ಹೀಗಾಗಿ ಒಂದೇ ಪತ್ರಿಕೆ ಒಂದು ವಾರ್ಡಿನ ಬಗ್ಗೆ ಎರಡು ರೀತಿಯ ಸಮೀಕ್ಷೆಗಳನ್ನು ಪ್ರಕಟಿಸಿತ್ತು.
ಹಾಗೆ, ಟಿವಿ ವಾಹಿನಿಗಳಲ್ಲೂ ಪೇಡ್ ವರದಿಗಳು ಬರುತ್ತಿವೆ ಎಂದು ಯಾರೋ ಸ್ನೇಹಿತರು ಹೇಳಿದರು. ಆದರೆ ನಾನು ಹೆಚ್ಚಿನ ಸುದ್ದಿಗಳನ್ನು ಗಮನವಿಟ್ಟು ನೋಡಿಲ್ಲದಿರುವುದರಿಂದ ಈ ಹೇಳಿಕೆಯನ್ನು ಒಪ್ಪುವುದಾಗಲೀ ನಿರಾಕರಿಸುವುದಾಗಲಿ ಮಾಡುವುದಿಲ್ಲ. ಆದರೆ ಇಂದು ಪತ್ರಿಕೋದ್ಯಮ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಅಂದರೆ ನಾವು ಎತ್ತ ಸಾಗುತ್ತಿದ್ದೇವೆ ಅಂತ.
ನಿಜ, ಇಂದು ಮಾಧ್ಯಮ ಕೇವಲ ಪತ್ರಿಕೆಗಳ ಮಾರಾಟದ ಮೇಲೆ ಆಗಲೀ, ಕಾರ್ಯಕ್ರಮಗಳ ಬದ್ಧತೆಯಿಂದಾಗಲಿ ಉಳಿಯಲಾರದು. ಹಾಗೆ ಜಾಹೀರಾತುಗಳು ಸಹ ಮಾಧ್ಯಮವನ್ನು ಉಳಿಸುವುದು ಕಷ್ಟ. ಆದರೆ, ಈಗ ಅನುಸರಿಸುತ್ತಿರುವ ಮಾರ್ಗ ಎಷ್ಟು ಸರಿ ?
ಈಗ ಕೆಲವು ದಿನಗಳ ಹಿಂದೆ ಟೀವಿಯ ದಿಗ್ಗಜರೆಲ್ಲ ದೆಹಲಿಯಲ್ಲಿ ಒಂದು ವಿಚಾರ ಸಂಕಿರಣವನ್ನು ನಡೆಸಿದರು. ಈ ವಿಚಾರ ಸಂಕಿರಣದಲ್ಲಿ ರಾಜದೀಪ್ ಸರ್ದೇಸಾಯಿ ಸೇರಿದಂತೆ ಎಲ್ಲ ದಿಗ್ಗಜರೆಲ್ಲ ಪಾಲ್ಗೊಂಡಿದ್ದರು. ಅಲ್ಲಿ ಅವರು ಈ ಪೇಡ್ ನ್ಯೂಸ್ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದು ಸ್ವಾಗತಾರ್ಹ. ಆದರೆ ಎಷ್ಟು ರಾಷ್ಟೀಯ ವಾಹಿನಿಗಳು ಪೇಡ್ ನ್ಯೂಸ್ ನಿಂದ ಹೊರತಾಗಿವೆ ಎಂದು ಕೇಳಿದರೆ ಉತ್ತರ ನೀದುವುದು ಸುಲಭವಲ್ಲ.
ಪತ್ರಿಕೋದ್ಯಮ ಬದಲಾಗುತ್ತಿದೆ. ಪತ್ರಿಕೋದ್ಯಮಿಗಳು ಬದಲಾಗುತ್ತಿದ್ದಾರೆ. ಎಲ್ಲೆಡೆ ಕುರುಡು ಕಾಂಚಾಣದ ಭೂತ ನರ್ತನ ನಡೆಯುತ್ತಿದೆ. ಪತ್ರಿಕೋದ್ಯಮಿಗಳು ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದರೂ ( ಹೊಟ್ಟೆಪಾಡಿಗಾಗಿ ! ) ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ರಿಯಲ್ ಎಸ್ಟೇಟ್ ಎಜೆಂಟರಿದ್ದಾರೆ. ರಾಜಕೀಯ ಪಕ್ಷಗಳ ಕಾರ್ಯಕರ್ತರಿದ್ದಾರೆ. ತಮ್ಮ ತಮ್ಮ ಜಾತಿಯ ರಾಜಕಾರಣಿಗಳ ಹಿತ ಕಾಯಲು ಸಂಕಲ್ಪ ಮಾಡಿದ ಗುಂಪುಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪತ್ರಿಕೋದ್ಯಮದ ಆತ್ಮ ಸತ್ತರೆ ಆ ಸಮಾಜದ ಆತ್ಮವೇ ಸತ್ತು ಹೋಗುತ್ತದೆ.
ಮೊದಲು ಎಲ್ಲ ಮಾಧ್ಯಮಗಳ ಮುಖ್ಯಸ್ಥರು ಸೇರಿ ಈ ಬಗ್ಗೆ ಚಿಂತನೆ ನಡೆಸಬೇಕು. ನಾವು ಯಾಕೆ ಪತ್ರಿಕೆಗಳನ್ನು ಮಾಡುತ್ತಿದ್ದೇವೆ, ಯಾಕೆ ಟೀವಿ ಚಾನಲ್ ಗಳನ್ನು ನಡೆಸುತ್ತಿದ್ದೇವೆ ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳಬೇಕು. ಒಂದೊಮ್ಮೆ ಇದು ಹಣ ಮಾಡುವುದಕ್ಕಾಗಿ ಎಂದಾದರೆ ಸಮಾಜದ ಹಿತದೃಷ್ಟಿಯಿಂದ ಅದನ್ನು ಮಾಡದಿರುವುದೇ ಒಳ್ಳೆಯದು. ಲಾಭ ಮಾಡಲು ಬೇರೆ ಬೇರೆ ಉದ್ಯಮಗಳಿವೆ. ಆದರೆ ಪತ್ರಿಕೋದ್ಯಮ ಹಾಗಲ್ಲ. ಅದು ಉಳಿಯಲು ಹಣ ಬೇಕು ಎಂಬುದು ನಿಜವಾದರೂ ಹೇಗಾದರೂ ಹಣ ಮಾಡುವುದೇ ಅದರ ಕೆಲಸವಲ್ಲ. ಈ ಬಗ್ಗೆ ಪತ್ರಿಕಾ ಮಾಧ್ಯಮದ ದಿಗ್ಗಜರು ಯೋಚಿಸಲಿ.

Thursday, March 25, 2010

ಲಿವಿಂಗ್ ಟುಗೇದರ್ ಎಂದರೆ ಜೊತೆಯಾಗಿ ಬದುಕುವುದೇ ಅಲ್ಲವೆ ?

ಲಿವಿಂಗ್ ಟುಗೆದರ್. ಹಾಗೆಂದರೆ ಜೊತೆಯಾಗಿ ಬದುಕುವುದು ಎಂದು ಭಾಷಾಂತರಿಸಬಹುದು. ಆದರೆ ಲಿವಿಂಗ್ ಟುಗೆದರ್ ಎಂಬುದು ಕೇವಲ ಜೊತೆಯಾಗಿ ಬದುಕುವುದಲ್ಲ. ಒಂದು ಗಂಡು ಮತ್ತು ಹೆಣ್ಣು ಸಾಂಪ್ರದಾಯಿಕ ಅರ್ಥದಲ್ಲಿ ಮದುವೆಯಾಗದೇ ಸಂಸಾರ ಮಾಡುವುದು ಎಂದು ಹೇಳಬಹುದು.

ನಮ್ಮ ದೇಶಕ್ಕೆ ಈ ಲಿವಿಂಗ್ ಟುಗೆದರ್ ಹೊಸತಲ್ಲ. ಸಾಂಪ್ರದಾಯಿಕವಾಗಿ ಮದುವೆಯಾಗದೇ ಜೊತೆಯಾಗಿ ಬದುಕುವವರು, ಅಂದರೆ ಸಂಸಾರ ನಡೆಸುವವರು ಈ ದೇಶದಲ್ಲಿ ಸಾಕಷ್ಟು ಜನರಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಂತವರ ಸಂಖ್ಯೆ ಹೆಚ್ಚುತ್ತಿದೆ ಈ ರೀತಿ ಸಂಸಾರ ನಡೆಸುವುದು ನೈತಿಕವೇ ಅನೈತಿಕವೇ ಎಂಬ ಪ್ರಶ್ನೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ ತಮಿಳು ಚಿತ್ರ ನಟಿಯೊಬ್ಬಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ತೀರ್ಪು ಈ ಬಗ್ಗೆ ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ, ನ್ಯಾಯಾಲಯದ ಅಭಿಪ್ರಾಯದ ಪ್ರಕಾರ ಜೊತೆಯಾಗಿ ಬದುಕುವುದು ಅನೈತಿಕ ಎಂದೂ ಯಾವ ಕಾನೂನು ಹೇಳಿಲ್ಲ. ಆದ್ದರಿಂದ ಲಿವಿಂಗ್ ಟುಗೇದರ್ ಕಾನೂನು ವಿರೋಧಿಯಲ್ಲ. ಲಿವಿಂಗ್ ಟುಗೆದರ್ ಕಾನೂನಿಗೆ ವಿರುದ್ಧವಾದುದಲ್ಲ ಎಂಬುದು ನಿಜ. ಯಾಕೆಂದರೆ ಕಾನೂನಿನಲ್ಲಿ ಈ ವಿಚಾರದ ಪ್ರಸ್ತಾಪ ಇಲ್ಲ.

ಆದರೆ ಇಲ್ಲಿ ಹಲವಾರು ಸೂಕ್ಷ್ಮ ಪ್ರಶ್ನೆಗಳಿವೆ. ಮೊದಲನೆಯದಾಗಿ ಲಿವಿಂಗ್ ಟುಗೆಡರ್ ಈಗಿನ ಕೌಟುಂಬಿಕ ವ್ಯವಸ್ಥೆಯ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದು. ಇದರಿಂದಾಗಿ ಸಾಮಾಜಿಕ ವ್ಯವಸ್ಥೆಯ ಮೇಲೆ ಉಂಟಾಗುವ ಪರಿಣಾಮ ಯಾವುದು ಎಂಬುದು ಮುಂದಿನ ಪ್ರಶ್ನೆ.

ಇಲ್ಲಿ ಕುಟುಂಬ, ಹಲವು ಕುಟುಂಬಗಳಿಂದ ನಿರ್ಮಾಣವಾದ ಸಮಾಜ, ಈ ಸಮಾಜದಲ್ಲಿ ಇರಬೇಕಾದ ನೀತಿ ನಿಯಮಗಳು, ಈ ನೀತಿ ನಿಯಮಗಳನ್ನು ರೂಪಿಸಲು ವೇದಿಕೆಯಾದ ಧರ್ಮ ಮತ್ತು ಇದೆಲ್ಲ ಸರಿಯಾಗಿ ನಡೆಯಲು ರೂಪಿತವಾದ ಕಾನೂನು ಇವುಗಳ ನಡುವಿನ ಸಂಬಂಧವನ್ನು ತಿಳಿದುಕೊಳ್ಳಬೇಕಾಗಿದೆ. ಅಂದರೆ ಒಂದು ಸಮಾಜದ ಭಾಗವಾಗಿರುವವರು ಹೇಗೆ ಬದುಕಬೇಕು ಎಂಬುದೇ ನೀತಿ. ಈ ನೀತಿಯಂತೆ ಬದುಕಿದರೆ ಅದು ನೈತಿಕ. ಹಾಗೆ ಬದುಕದಿದ್ದರೆ ಅದು ಅನೈತಿಕ. ಬದುಕು ಅನೈತಿಕವಾದರೆ ಅದನ್ನು ತಡೆಯಲು ಇರುವುದೇ ಕಾನೂನು. ಈಗ ನಮ್ಮ ಕಾನೂನಿನಲ್ಲಿ ಲಿವಿಂಗ್ ಟುಗೆದರ್ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದರಿಂದ ಅದು ಅನೈತಿಕ ಅಲ್ಲ. ಅನೈತಿಕ ಅಲ್ಲವಾದ್ದರಿಂದ ಅದು ನೈತಿಕ.

ವಯಸ್ಸಿಗೆ ಬಂದಿರುವ ಒಂದು ಗಂಡು ಮತ್ತು ಹೆಣ್ಣು, ಜೊತೆಯಾಗಿ ಬದುಕುವುದಿದ್ದರೆ, ಅದಕ್ಕೆ ಅಗ್ನಿ ಸಾಕ್ಷಿಯಾಗಬೇಕು, ಸಮಾಜ ಸಾಕ್ಷಿಯಾಗಬೇಕು, ಇಲ್ಲವೇ ಅದು ನೊಂದಣಿಯಾಗಬೇಕು. ಯಾಕೆಂದರೆ ಒಂದು ಗಂಡು ಹೆಣ್ಣಿನ ಸಂಬಂಧದಿಂದ ಇನ್ನೊಂದು ಜೀವೆ ಹುಟ್ಟಿ ಬರುತ್ತದೆ. ಹೀಗೆ ಹುಟ್ಟಿ ಬಂದ ಜೀವದ ಪಾಲನೆ ಪೋಷಣೆ ಮಾಡುವ ಹೊಣೆಗಾರಿಕೆಯ ನಿರ್ಧಾರ ಕೂಡ ಆಗಬೇಕು. ಇದು ಮದುವೆಯ ಬಗ್ಗೆ ಈ ಸಮಾಜ ಮತ್ತು ಇದಕ್ಕೆ ಪೂರಕವಾಗಿ ರಚಿತವಾಗಿರುವ ಕಾನೂನುಗಳು ಸ್ಪಷ್ಟವಾಗಿ ಹೇಳುವ ಮಾತು.

ನಾವು ಅನುಸರಿಸಿಕೊಂಡು ಬಂದ ಧರ್ಮ ನಮ್ಮ ಮದುವೆಯ ಬಗ್ಗೆ ಮಾತನಾಡುತ್ತದೆ. ಇದನ್ನೇ ಕಾನೂನನ್ನಾಗಿ ರೂಪಿಸಲಾಗಿದೆ. ಅಂದರೆ, ಹಿಂದೂ ಲಾ, ಮೊಹಮ್ಮಡಿಯನ್ ಲಾ ಇಲ್ಲಿ ಜಾರಿಯಲ್ಲಿವೆ. ಇವು ಮದುವೆಯ ಬಗ್ಗೆ ಕೆಲವೊಂದು ನೀತಿಯನ್ನು ನಿರೂಪಿಸಿವೆ. ಇದಕ್ಕೆ ಆಯಾ ಧರ್ಮವೇ ಆಧಾರ. ಅಂದರೆ ನಮ್ಮ ಸಾಮಾಜಿಕ ನಡವಳಿಕೆ ಮತ್ತು ಕೌಂಟುಂಬಿಕ ಹೊಣೆಗಾರಿಕೆಯ ಬಗ್ಗೆ ಕಾನೂನು ಸ್ಪಷ್ಟವಾಗಿ ಹೇಳುತ್ತದೆ.

ಒಂದು ನಿಮಿಷ ಯೋಚಿಸಿ. ಇಂಥಹ ಕಾನೂನುಗಳ ಮೂಲ ಉದ್ದೇಶ ಈಗಿರುವ ಕೌಂಟುಂಬಿಕ ವ್ಯವಸ್ಥೆ ತೊಂದರೆ ಇಲ್ಲದೇ ನಡೆಯಲಿ ಎಂಬುದು. ಆ ಮೂಲಕ ಸಮಾಜದಲ್ಲಿ ಅರ್ಥಪೂರ್ಣವಾದ ಮನುಷ್ಯ ಸಂಬಂಧ ಇರಲಿ ಎಂಬ ಆಶಯ ಕೂಡ ಇಲ್ಲಿದೆ. ಆದರೆ, ಈ ಧರ್ಮಾಧಾರಿತ ಕಾನೂನು ರಚಿತವಾದ ಕಾಲ ಘಟ್ಟ ಯಾವುದು ? ಆ ಕಾಲ ಘಟ್ಟದಲ್ಲಿನ ಬದುಕಿನ ನೀತಿ ಈಗಲೂ ನೀತಿಯಾಗಿ ಉಳಿದಿದೆಯೆ ? ಅಥವಾ ಬದಲಾಗಿದೆಯೆ ? ನೋಡಿ, ಬದುಕುವ ನೀತಿ ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ. ಒಂದು ಕುಟುಂಬ ಮತ್ತು ಕುಟುಂಬದ ಸದಸ್ಯರ ನಡುವಿನ ಸಂಬಂಧ ಕಾಲದ ನಿಕಷಕ್ಕೆ ಒಳಗಾಗಿ ಬದಲಾಗುತ್ತಲೇ ಇದೆ. ಉದಾಹರಣೆಗೆ ಮಹಾ ಭಾರತದ ಕಾಲದಲ್ಲಿ ಪಾಂಡವರು ಒಬ್ಬಳನ್ನೇ ಮದುವೆಯಾಗಿದ್ದು ಅನೈತಿಕವಾಗಿರಲಿಲ್ಲ. ಆದರೆ ಇಂದು ಈ ಬಗ್ಗೆ ಯೋಚಿಸುವುದಕ್ಕೂ ಸಾಧ್ಯವಿಲ್ಲ ಅಲ್ಲವೆ ?
ಅಂದರೆ ನಾವು ಕಾಲ ಕಾಲಕ್ಕೆ ಸಂವಿಧಾನಕ್ಕೆ ತಿದ್ದುಪಡಿ ಮಾಡುವಂತೆ ಬದುಕಿನ ಸಂವಿಧಾನಕ್ಕೂ ತಿದ್ದುಪಡಿಯಾಗುತ್ತದೆ. ನಾವು ಬದುಕು ಮತ್ತು ಮಾನವೀಯ ಸಂಬಂಧಗಳನ್ನು ನೋಡುವಂತೆ ನಮ್ಮ ಮುಂದಿನ ಪೀಳೀಗೆಯವರು ನೋಡುವುದಿಲ್ಲ. ಮದುವೆಯ ಮುಂಚಿನ ಲೈಂಗಿಕತೆ ಇಂದು ಅನೈತಿಕ ಎಂದು ಹೇಳಿದವರೇ, ನಗೆಪಾಟಲಿಗೆ ಈಡಾಗುವ ಕಾಲದಲ್ಲಿ ನಾವು ಬದುಕಿದ್ದೇವೆ. ಬದುಕು ಮಾತ್ತು ಗಂಡು ಹೆಣ್ಣಿನ ಸಂಬಂಧದ ವ್ಯಾಖ್ಯೆಯೇ ಈಗ ಬದಲಾಗಿದೆ.
ಈ ವಿಚಾರವನ್ನು ನಾನು ಸಿನಿಕನಾಗಿ ಸಂಪ್ರದಾಯವಾದಿಯಾಗಿ ಹೇಳುತ್ತಿಲ್ಲ. ವಸ್ತುಸ್ಥಿತಿಯನ್ನು ನಿರೂಪಿಸುತ್ತಿದ್ದೇನೆ ಅಷ್ಟೇ.
ಈಗ ಲಿವಿಂಗ್ ಟುಗೆದರ್ ನತ್ತ ಬರೋಣ. ಇದು ಕೌಟುಂಬಿಕ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಸಾಧ್ಯತೆ ಹೆಚ್ಚು. ಅಂದರೆ ಗಂಡ, ಹೆಂಡತಿ, ಮಕ್ಕಳು ಎಂಬ ಸಂಬಂಧ ಏನಿದೆ ಅದು ಬೇರೆಯದಾದ ಅರ್ಥವನ್ನು ಪಡೆಯುತ್ತದೆ. ಜೊತೆಗೆ ಹೊಣೆಗಾರಿಕೆಯ ಪ್ರಶ್ನೆ ಕೂಡ ಪೆಡಂಭೂತವಾಗಿ ಕಾಡಬಹುದು. ಇಂಥಹ ಸ್ಥಿತಿಯಲ್ಲಿ ಹೊಸ ಕಾನೂನಿನ ರಚನೆಯ ಅಗತ್ಯವಿದೆ. ಆಂದರೆ ಒಂದು ಗಂಡು ಮತ್ತು ಹೆಣ್ಣು ಜೊತೆಯಾಗಿ ಸಂಸಾರ ಮಾಡಲಿ. ಆದರೆ ಅವರಿಗೆ ಮಗುವಾದರೆ, ಅದರ ಹೊಣೆಗಾರಿಕೆ ಯಾರದ್ದು ? ಕೇವಲ ಹೆಣ್ಣು ಮಾತ್ರ ಈ ಹೋಣೆಗಾರಿಕೆಯನ್ನು ಹೊರಬೇಕೆ ? ಜೊತೆಯಾಗಿ ಬದುಕುವ ಜೊತೆಗಾರ ಕೈಕೊಟ್ಟರೆ ?
ಈ ಪ್ರಶ್ನೆಗಳಿಗೆ ಕಾನೂನು ಉತ್ತರ ಕೊಡುವಂತಾಗಬೇಕು. ಮದುವೆಯಾಗದೇ ಜೊತೆಯಾಗಿ ಬದುಕುವುದು ಅನೈತಿಕವಲ್ಲ ಎಂದು ನ್ಯಾಯಾಲಯ ಹೇಳಿದ ಮೇಲೆ, ಈ ಅನೈತಿಕವಲ್ಲದ ಚಟುವಟಿಕೆ ಮತ್ತು ಇದರಿಂದ ಉಂಟಾಗಿವ ಪರಿಣಾಮದ ಮೇಲೆ ನಿಗಾ ಇಡುವ ಮತ್ತು ನೀತಿ ರೂಪಿಸುವ ಕಾನೂನು ಬರಬೇಕು. ಇದು ಆಗ ಬೇಕಾದ ಕೆಲಸ.
ಯಾಕೆಂದರೆ ಬದುಕು ಎನ್ನುವುದು ಎಲ್ಲದಕ್ಕಿಂತ ಮುಖ್ಯ. ಹೀಗಿರುವಾಗ ಕೌಟುಂಬಿಕ ವ್ಯವಸ್ಥೆಯಲ್ಲ ಬದಲಾವಣೆ ಆಗುವುದು ಸಹಜ. ಆದರೆ ಒಂದು ವ್ಯವಸ್ಥೆ ಬದಲಾವಣೆಯಾಗಿ ಇನ್ನೊಂದು ವ್ಯವಸ್ಥೆ ಬಂದಾಗ ಅದರ ರಕ್ಷಣೆಗೂ ಕಾನೂನು ಬೇಕು.
ಈಗ ನನಗೆ ಅನ್ನಿಸುವುದೆಂದರೆ ಲಿವಿಂಗ್ ಟುಗೆದರ್ ಸಂಸ್ಕೃತಿಯನ್ನು ವಿರೋಧಿಸಿ ಅರ್ಥವಿಲ್ಲ. ಈ ವ್ಯವಸ್ಥೆ ಸರಿಯಾಗಿ ನಡೆಯಲು ಅದಕ್ಕೆ ಪೂರಕವಾದ ಕಾನೂನು ಬೇಕು. ಅಂತಹ ಕಾನೂನು ರಚನೆಯ ಬಗ್ಗೆ ವಿಸ್ತ್ರುತ ಚರ್ಚೆ ನಡೆಯಬೇಕು.


Tuesday, March 23, 2010

ನಮ್ಮ ಕಿರಿಯ ಮಗಳು ಚುಕ್ಕಿ...!


ಇವಳು ನಮ್ಮ ಮನೆಯ ಚುಕ್ಕಿ. ನಮ್ಮ ಕಿರಿಯ ಮಗಳು. ಪ್ರೀತಿಗೆ ಇನ್ನೊಂದು ಹೆಸರೇ ಇವಳು. ಇವಳಿಗೆ ಕೆಲವೊಮ್ಮೆ ನಿದ್ರೆ. ಕೆಲವೊಮ್ಮೆ ಈಕೆ ಧ್ಯಾನಸ್ಥೆ. ಈಕೆಗೆ ಈಗ ಕನ್ನಡವೂ ಬರುತ್ತೆ. ಬಿಸ್ಕೀಟು, ಸ್ನಾನ, ವಾಕಿಂಗ್ ಎಲ್ಲವೂ ಗೊತ್ತಾಗುತ್ತೆ. ಈಕೆ ಪತ್ರಕರ್ತರ ಮನೆಯ ಮಗಳಾಗಿರುವುದರಿಂದ ದಿನಾ ಬೆಳಿಗ್ಗೆ ಪತ್ರಿಕೆ ಓದುತ್ತಾಳೆ. ಈ ಜಗತ್ತು ಯಾಕೆ ಹೀಗಿದೆ ಎಂಬ ಚಿಂತೆ ಅವಳದು. ಇಲ್ಲಿ ಆಕೆ ಸುದ್ದಿಗಳನ್ನು ಓದಿ ಬೇಸರದಿಂದ ಎಲ್ಲಿಯೋ ನೋಡುತ್ತಿದ್ದಾಳೆ.

Saturday, March 13, 2010

ಮಹಿಳಾ ಮೀಸಲಾತಿ: ಮೊದಲು ಮಹಿಳೆಯರು ಸದನದಲ್ಲಿ ಕಾಣುವಂತಾಗಲಿ......

ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಪ್ರತಿಶತ ೩೩ ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ವಿಧೇಯಕಕ್ಕೆ ರಾಜ್ಯ ಸಭೆ ಅನುಮೋದನೆ ನೀಡಿದೆ. ಇದೊಂದು ಐತಿಹಾಸಿಕ ವಿಧೇಯಕ ಎನ್ನುವದರಲ್ಲಿ ಎರಡು ಮಾತಿಲ್ಲ. ಎರಡನೆ ಧರ್ಜೆ ಪ್ರಜೆಯಾಗಿರುವ ಮಹಿಳೆಯರಿಗೆ ಈ ವಿಧೇಯಕ ರಾಜಕೀಯ ಪ್ರಾತಿನಿಧ್ಯವನ್ನು ನೀಡುವುದರಲ್ಲಿ ಅನುಮಾನವಿಲ್ಲ. ಆದರೆ ಈ ವಿಧೇಯಕದ ಬಗ್ಗೆ ಯಾದವ ತೃಯರು ಎತ್ತಿದ್ದ ಆಕ್ಷೇಪಗಳ ಬಗ್ಗೆ ಸದನದಲ್ಲಾಗಲೀ, ಸಾರ್ವಜನಿಕವಾಗಿ ಆಗಲೀ ಚರ್ಚೆ ನಡೆದಿಲ್ಲ. ನಮ್ಮ ಮಾಧ್ಯಮಗಳೂ ಸಹ ಯಾದವ ತ್ರಯರನ್ನು ಜೋಕರರನ್ನಾಗಿ ನೋಡಿ ಕೈತೊಳೆದುಕೊಂಡಿವೆ. ಆದರೆ ಅವರು ಎತ್ತಿರುವ ಕೆಲವು ತಾತ್ವಿಕ, ವಾಸ್ತವಿಕ ಸತ್ಯಗಳು ಚರ್ಚೆಗೆ ಗ್ರಾಸವನ್ನು ಒದಗಿಸಿದ್ದು ಮಾತ್ರ ನಿಜ.
ಮಹಿಳೆಯ ಮೀಸಲಾತಿಯಲ್ಲಿ ಒಳಮೀಸಲಾತಿ ಬೇಕೇ ಬೇಡವೆ ಎಂಬುದು ಈ ವಿವಾದದ ಕೇಂದ್ರ ಬಿಂದು. ಈಗಿನ ಮೀಸಲಾತಿಯಲ್ಲಿ ಮಹಿಳೆಯರಲ್ಲಿ ಲಾಭ ಪಡೆಯುವವರು, ಮೇಲ್ವರ್ಗದವರು ಮತ್ತು ಈಗಿನ ಖ್ಯಾತ ರಾಜಕಾರಣಿಗಳ ಕುಟುಂಬದ ಜನ ಎನ್ನುವುದು ಪ್ರಮುಖ ಆರೋಪ. ಇದು ಸ್ವಲ್ಪ ಮಟ್ಟಿಗೆ ನಿಜ. ನಮ್ಮ ಬಹುತೇಕ ರಾಜಕಾರಣಿಗಳು ನಂಬಿದರೆ ತಮ್ಮ ಕುಟುಂಬದವರನ್ನು ಮಾತ್ರ. ದೇವೇಗೌಡರಿಗೆ ತಮ್ಮ ಮಕ್ಕಳನ್ನು ಯಶಸ್ವಿ ರಾಜಕಾರಣಿಗಳನ್ನಾಗಿ ಮಾಡುವುದು ಮೊದಲ ಆದ್ಯತೆ. ಸೋನಿಯಾ ಗಾಂಧಿ ಅವರಿಗೆ ರಾಹುಲ್ ಗಾಂಧಿಯನ್ನು ಪಟ್ಟಕ್ಕೇರಿಸುವದೇ ಬದುಕಿನ ಧ್ಯೇಯ. ಯಡಿಯೂರಪ್ಪ ಅವರಿಗೆ ರಾಘವೇಂದ್ರನನ್ನು ಎಮ್. ಪಿ. ಮಾಡಿದ ಮೇಲೆ ವಿಜಯೇಂದ್ರನಿಗೆ ಹೇಗೆ ರಾಜಕೀಯ ಆಶ್ರಯ ನೀಡಬೇಕು ಎಂಬ ಚಿಂತೆ. ಇನ್ನು ನಮ್ಮ ಯಾದವ ನಾಯಕರು. ಲಾಲೂ ಪ್ರಸಾದ್ ಯಾದವ್ ಅವರಿಗೆ ಬಿಹಾರದಲ್ಲಿ ಮಹಿಳಾ ಮುಖ್ಯಮಂತ್ರಿ ಮಾಡಿದ ಕೀರ್ತಿಯ ಕಿರೀಟ. ಆದರೆ ಯಾರನ್ನೂ ನಂಬದ ಈ ಯಾದವ ನಾಯಕ, ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಿದ್ದು ಮಾತ್ರ ತಮ್ಮ ಧರ್ಮ ಪತ್ನಿಯನ್ನು. ಅದನ್ನು ಬಿಟ್ಟರೆ ಬೇರೆ ಮಹಿಳೆಯರಿಗೆ ಅವರು ಅಧಿಕಾರ ನೀಡಿ ಬೆಳೆಸಿದ ಉದಾಹರಣೆ ನೆನಪಿಗೆ ಬರುತ್ತಿಲ್ಲ. ಇನ್ನು ಮುಲಾಯಮ್ ಸಿಂಗ ಯಾದವ್. ಇವರಿಗೆ ಹಿಂದಿ ಚಿತ್ರ ರಂಗದ ನಟಿಯರೆಂದರೆ ಪ್ರೀತಿ. ಅವರು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದು ಜಯಾ ಬಚ್ಚನ್ ಎಂಬ ಮಾಜಿ ನಟಿಯನ್ನು !
ಇವರಿಬ್ಬರ ವರ್ತನೆಯಲ್ಲಿ ಮಹಿಳೆಯರ ಬಗ್ಗೆ ಕಾಳಜಿ ಕಾಣುತ್ತಿಲ್ಲ. ಹೀಗಾಗಿ ಅವರು ಪ್ರಸ್ತಾಪ ಮಾಡಿದ ಗಂಭೀರವಾದ ವಿಚಾರ ಹೆಚ್ಚಿನ ಮಹತ್ವವನ್ನು ಪಡೆಯಲೇ ಇಲ್ಲ. ಭೂತದ ಬಾಯಿಯಲ್ಲಿ ಭಗವದ್ಘೀತೆ ಬಂದಂತೆ ಎಂದು ಎಲ್ಲರೂ ನಿರ್ಧರಿಸಿಬಿಟ್ಟರು.
ಎರಡು ದಿನಗಳ ಹಿಂದೆ ನಾನು ನನ್ನ ಕೆಲವು ಸಮಾಜವಾದಿ ಗೆಳಯರ ಜೊತೆ ಮಾತನಾಡುತ್ತಿದ್ದೆ. ಅವರು ಎತ್ತಿದ ಪ್ರಶ್ನೆಗಳು ತುಂಬಾ ಗಂಭೀರವಾಗಿದ್ದವು. ಯಾದವ ತ್ರಯರು ಎತ್ತಿದ ಪ್ರಶ್ನೆ ಎನಿದೆ ಅದು ಮುಖ್ಯ ಅಲ್ಲವಾ ಎಂದು ಅವರು ಪ್ರಶ್ನಿಸಿದಾಗ ನಾನು ಆ ಬಗ್ಗೆ ಯೋಚಿಸತೊಡಗಿದೆ. ಮುಲಾಯಂ ಮತ್ತು ಲಾಲೂ ಈ ವಿಚಾರದಲ್ಲಿ ಮಾಡುತ್ತಿರುವ ಒಳ ಮೀಸಲಾತಿಯ ಪ್ರಶ್ನೆ ತುಂಬಾ ಪ್ರಸ್ತುತ. ಈ ಮೀಸಲಾತಿಯಿಂದ ಮೇಲ್ವರ್ಗದ ಮಹಿಳೆಯರಿಗೆ ಮತ್ತು ರಾಜಕಾರಣಿಗಳ ಕುಟುಂಬದ ಮಹಿಳೆಯರಿಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದರಲ್ಲಿ ನನಗಂತೂ ಅನುಮಾನ ಇಲ್ಲ. ಎಲ್ಲ ಖ್ಯಾತ ರಾಜಕಾರಣಿಗಳು ತುಮ್ಮ ಕುಟುಂಬದ ಮಹಿಳೆಯರನ್ನು ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಯ ಸದಸ್ಯರನ್ನಾಗಿ ಮಾಡುತ್ತಾರೆ ಎಂಬುದೂ ನಿಜ. ಆದರೆ ಈಗ ಒಳ ಮೀಸಲಾತಿಯ ಬಗ್ಗೆ ಮಾತನಾಡುವವರ ಪ್ರಾಮಾಣಿಕತೆ ಮತ್ತು ಬದ್ಧತೆಯೇ ಪ್ರಶ್ನಾರ್ಹವಾಗಿದೆ. ಇಂಥಹ ಸ್ಥಿತಿಯಲ್ಲಿ ಅವರ ವಾದಕ್ಕೆ ಸಮರ್ಥನೆಯೇ ದೊರಕುತ್ತಿಲ್ಲ.
ಕ್ರಾಂತಿ ಅಥವಾ ಬದಲಾವಣೆ ಪವಾಡದಂತೆ ನಡೆಯುವುದಿಲ್ಲ. ಈ ದೇಶದಲ್ಲಿ ಮಹಿಳೆಯರೆಲ್ಲ ಶೋಷಿತರೇ. ಮೇಲ್ವರ್ಗದ ಮಹಿಳೆಯರು ಇದಕ್ಕೆ ಹೊರತಲ್ಲ. ಆದ್ದರಿಂದ ಮಹಿಳೆ ಮೀಸಲಾತಿಯನ್ನು ಮೊದಲು ಸ್ವಾಗತಿಸೋಣ. ನಂತರ ಒಳ ಮೀಸಲಾತಿಯ ಬಗ್ಗೆ ಹೋರಾಟ ನಡೆಸೋಣ ಎಂದು ಯಾದವ ತ್ರಯರು ಯೋಚಿಸಬಹುದಿತ್ತು. ಆದರೆ ಅವರು ಹಾಗೆ ಯೋಚನೆ ಮಾಡಲಿಲ್ಲ. ಬದಲಾಗಿ ಸರ್ಕಾರಕ್ಕೆ ನೀಡದ ಬೆಂಬಲವನ್ನು ಹಿಂದಕ್ಕೆ ತೆಗೆದುಕೊಳ್ಳುವ ಬೆದರಿಕೆಯನ್ನು ಅವರು ಒಡ್ಡಿದರು. ಇಲ್ಲಿಯೂ ರಾಜಕೀಯ ಮಾಡಿದರು.
ಈ ಮೀಸಲಾತಿಯಿಂದ ಸದನಗಳಲ್ಲಿ ಹೆಚ್ಚಿನ ಮಹಿಳೆಯರು ಕಾಣುತ್ತಾರೆ. ಜೊತೆಗೆ ರಾಜಕಾರಣಿಗಳ ಕುಟುಂಬದ ಮಹಿಳೆಯರು ಅ ಮನೆಯ ಪುರುಷ ರಾಜಕಾರಣಿಗಳಿಗಿಂತೆ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ ಎಂದು ನಾನು ನಂಬಿದ್ದೇನೆ. ದೇವೇಗೌಡರ ಜಾಗದಲ್ಲಿ ಚೆನ್ನಮ್ಮ ಲೋಕಸಭೆ ಸದಸ್ಯರಾದರೆ ? ಬಂಗಾರಪ್ಪ ಬದಲಿಗೆ ಅವರ ಹೆಂಡತಿ ಸದನದಲ್ಲಿ ಕಾಣುವಂತಾದರೆ ? ಯಡಿಯೂರಪ್ಪ ಅವರ ಮಕ್ಕಳಿಗಿಂತ ಅವರ ಹೆಣ್ಣು ಮಕ್ಕಳು ಸದನಕ್ಕೆ ಬಂದರೆ, ಹೆಚ್ಚು ಪ್ರಾಮಾಣಿಕರಾಗಿರಲಾರರೆ ?
ಇದನ್ನೆಲ್ಲ ಗಮನಿಸಿದರೆ, ಈ ಮಹಿಳಾ ಮೀಸಲಾತಿ ಮಸೂದೆ ಮೊದಲು ಬರಲಿ. ನಂತರ ಒಳ ಮೀಸಲಾತಿಯ ಬಗ್ಗೆ ಹೋರಾಟ ನಡೆಸಬಹುದು. ಎಲ್ಲ ಕೆಳ ವರ್ಗದ ಮಹಿಳೆಯರು ಸದನದಲ್ಲಿ ಕಾಣುವಂತಾದರೆ, ನಮ್ಮ ರಾಜಕಾರಣದ ಅನೈತಿಕತೆಯ ಪಯಣಕ್ಕೆ ಒಂದಿಷ್ಟು ತಡೆಯಾದರೂ ಬಿದ್ದೀತು. ಇದನ್ನು ಯಾದವ ತ್ರಯರು ಅರ್ಥ ಮಾಡಿಕೊಳ್ಳಲಿ.

Saturday, March 6, 2010

ನಿತ್ಯಾನಂದ ಸ್ವಾಮಿ ಪ್ರಕರಣ; ಕೆಲವೊಂದು ಸಂಶಯಗಳು...!

ಬೆಂಗಳೂರು ಹೊರವಲಯದಲ್ಲಿ ಬಿಡಾರ ಹೂಡಿದ್ದ ನಿತ್ಯಾನಂದ ಸ್ವಾಮಿಯ ಮಾನ ಹರಾಜಾಗಿದೆ. ಆತ ಮಹಿಳೆಯೊಬ್ಬಳ ಜತೆ ಬೆಡ್ ರೂಂನಲ್ಲಿ ನಡೆಸಿದ ಎನ್ನಲಾದ ದೃಶ್ಯಗಳು ಟೀವಿ ಸುದ್ದಿ ವಾಹಿನಿಗಳಲ್ಲಿ ದಿನವಿಡಿ ಪ್ರಸಾರವಾಗಿವೆ. ಅವರ ಆಶ್ರಮ ಸಮೀಪ ಇರುವ ಜನ ರೊಚ್ಚಿಗೆದ್ದು ಆಶ್ರಮವನ್ನು ನಾಶಪಡಿಸಿದ್ದಾರೆ.
ಈ ದೃಶ್ಯವನ್ನು ಮೊದಲು ಪ್ರಸಾರ ಮಾಡಿದ್ದು ತಮಿಳುನಾಡಿನ ಸನ್ ಸುದ್ದಿ ವಾಹಿನಿ. ಇದು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಕುಟುಂಬಕ್ಕೆ ಸೇರಿದ್ದು. ನನಗೆ ನೆನಪಿರುವ ಹಾಗೆ ಸನ್ ಎಂದೂ ಸಹ ಈ ರೀತಿ ಸ್ಟಿಂಗ್ ಆಪರೇಶನ್ ನಡೆಸಿಲ್ಲ. ಅಂದರೆ ನಿತ್ಯಾನಂದ ಸ್ವಾಮಿಯ ಅನಾಚಾರವನ್ನು ಬಯಲಿಗೆಳೆಯಲು ಸನ್ ನೆಟ್ ವರ್ಕ್ ವಿಶೇಷ ಕಾಳಜಿಯನ್ನು ಒಹಿಸಿತು. ಇದೂ ಸಹ ಸನ್ ನೆಟ್ ವರ್ಕ್ ನ ಅಘೋಷಿತ ನೀತಿಗೆ ವಿರುದ್ಧವಾಗಿ. ಇದನ್ನೆಲ್ಲ ಗಮನಿಸಿದರೆ, ಸಣ್ ನೆಟ್ ವರ್ಕ್ ನಿತ್ಯಾನಂದ ಸ್ವಾಮಿಯ ಅನಾಚಾರವನ್ನು ಬಯಲಿಗೆಳೆಯಲು ಬೇರೆಯದೇ ಆದ ವಿಶೇಷ ಕಾರಣಗಳು ಇದ್ದಿರಬೇಕು.
ಸನ್ ನೆಟ್ ವರ್ಕ್ ಇದನ್ನು ಪ್ರಸಾರ ಮಾಡಿದ ಮರುದಿನ ಕನ್ನಡದ ಸುದ್ದಿ ವಾಹಿನಿಗಳು ಸನ್ ನೆಟ್ ವರ್ಕ್ ನ ದೃಶ್ಯಗಳನ್ನು ಎರವಲು ಪಡೆದು ಚಚ್ಚಿ ಬಿಸಾಕಿದವು. ಈ ವಿಚಾರ ವಿಧಾನಸಭೆಯಲ್ಲೂ ಪ್ರಸ್ತಾಪವಾಗಿ ಕ್ರಮ ಕೈಗೊಳ್ಳುವ ಭರವಸೆಯನ್ನು ಸರ್ಕಾರ ನೀಡಿತು. ನಿತ್ಯಾನಂದ ಸ್ವಾಮಿ ಸಂಪೂರ್ಣವಾಗಿ ಬೆತ್ತಲಾಗಿ ತಲೆ ಮರೆಸಿಕೊಂಡರು.
ಈಗ ಈ ದೃಶ್ಯಗಳತ್ತ ಗಮನ ಹರಿಸಿ.
ಪ್ರಸಾರವಾದ ದೃಶ್ಯಗಳಲ್ಲಿ ನಿತ್ಯಾನಂದ ಸ್ವಾಮಿ ಮಂಚದ ಮೇಲೆ ಮಲಗಿದ್ದಾನೆ. ಅದೂ ಸಹ ಆತನಲ್ಲಿ ಉದ್ವೇಗವಾಗಲೀ ಸೆಳೆತವಾಗಲಿ ಕಾಣುತ್ತಿಲ್ಲ. ಯಾವುದೋ ಅಮಲು ಪದಾರ್ಥವನ್ನು ಆತ ಸೇವಿಸಿದಂತೆ, ನಿತ್ರಾಣನಾದಂತೆ ಕಾಣುತ್ತದೆ. ಅಲ್ಲಿ ಒಬ್ಬ ಚೂಡಿದಾರ್ ಧರಿಸಿದ ಹುಡುಗಿ ಅತ್ತಿತ್ತ ಓಡಾಡುತ್ತಾಳೆ. ಆತನಿಗೆ ಕುಡಿಯುವುದಕ್ಕೆ ಏನನ್ನೋ ಕೊಡುತ್ತಾಳೆ. ನಿತ್ಯಾನಂದ ಅದನ್ನು ಕುಡಿಯುತ್ತಾಳೆ. ನಂತರ ಯಾವುದೋ ಮಾತ್ರೆಯೊಂದನ್ನು ಅವನಿಗೆ ಕೊಡುತ್ತಾಳೆ. ಆತ ಮಾತ್ರೆಯನ್ನು ಬಾಯಿಗೆ ಹಾಕಿಕೊಳ್ಳುತ್ತಾನೆ. ನಂತರ ಆಕೆಯೇ ಮಂಚವೇರುತ್ತಾಳೆ. ಆತನಪಕ್ಕದಿಂದ ಮೈಮೇಲಿ ಏರಿ ಹೋಗುತ್ತಾಳೆ. ಆತನ ಒಂದು ಕೈ ಅವಳ ಬೆನ್ನಮೇಲೆ ಬರುತ್ತದೆ. ನಂತರ ತನ್ನ ಎಡ ಗಾಲನ್ನು ಎತ್ತಿ ಆಕೆಯ ದೇಹದ ಮೇಲೆ ಹಾಕುತ್ತಾನೆ.
ಇನ್ನೊಬ್ಬಳು ಸೀರೆ ಒಟ್ಟವಳು. ಅವಳು ಚೂಡಿದಾರ್ ಧರಿಸಿದವಳೇ ಅಥವಾ ಬೇರೆಯವಳೇ ಎಂಬುದು ಗೊತ್ತಾಗುವುದಿಲ್ಲ. ಅವಳೂ ಸಹ ತಾನಾಗಿಯೇ ಸ್ವಾಮಿಒಯ ಮೇಲೆ ಏರಿ ಹೋಗುತ್ತಾಳೆ.
ಈ ದೃಶ್ಯಾವಳಿಗಳನ್ನು ನೋಡಿದಾಗ ಕೆಲವೊಂದು ಸಂಶಯಗಳು ಬರುತ್ತವೆ. ನಲವತ್ತರ ಹರೆಯದ ಸ್ವಾಮಿ ತಾನಾಗಿಯೇ ಆ ಯುವತಿಯನ್ನು ಕರೆಸಿಕೊಂಡಿದ್ದರೆ, ನಿರಾಸಕ್ತಿಯಿಂದ ಹೀಗೆ ಮಂಚದ ಮೇಲೆ ಮಲಗಿರುತ್ತಿದ್ದನೆ ? ತಾನಾಗಿಯೇ ಮೂವ್ ಮಾಡುತ್ತಿರಲಿಲ್ಲವೆ ?
ಯಾಕೆ ಆತ ಯಾವುದೋ ಅಮಲು ಪದಾರ್ಥವನ್ನು ಸೇವಿಸಿದಂತೆ ಏಕಿದ್ದ ? ಆತ ಗುಂಡು ಹಾಕಿದ್ದರೆ ಇನ್ನೂ ಉಮೇದಿಯಿಂದ ರತಿ ಕ್ರೀಡೆಯಲ್ಲಿ ತೊಡಗಬಹುದಿತ್ತು. ಆದರೆ, ಆತ ತೆಗೆದುಕೊಂಡ ಅಮಲು ಪದಾರ್ಥ ಡ್ರಗ್ಸ್ ಆಗಿದ್ದರೆ ಮಾತ್ರ ಹೀಗೆ ನಿತ್ರಾಣವಾಗಿ ಬಿಳಲು ಸಾಧ್ಯ ಅಲ್ಲವೆ ?
ಆತನಿಗೆ ಕುಡಿಯಲು ಯುವತಿ ಕೊಟ್ಟಿರುವುದು ಏನಿರಬಹುದು ? ಆತನಿಗೆ ಆಕೆ ಯಾಕೆ, ಯಾವ ಮಾತ್ರೆಯನ್ನು ಕೊಟ್ಟಿರಬಹುದು ?
ಈ ಪ್ರಶ್ನೆಗಳ ಬಗ್ಗೆ ಮಾಧ್ಯಮದಲ್ಲಿ ಚರ್ಚೆ ನಡೆಯಬೇಕಿತ್ತು. ಯಾಕೆಂದರೆ ಇಲ್ಲಿ ಸಂಶಯಪಡುವುದಕ್ಕೆ ಹಲವು ಕಾರಣಗಳಿವೆ. ಇಂಥಹ ಸಂಶಯಗಳು ಸತ್ಯವನ್ನು ಅನಾವರಣಗೊಳಿಸಲು ಸಹಾಯ ಮಾಡುತ್ತವೆ. ಮಾಧ್ಯಮಗಳು ಮಾಡಬೇಕಾದ್ದು ಇದೇ.
ಈ ನಡುವೆ ತಮಿಳುನಾಡಿನಲ್ಲಿ ಹಬ್ಬಿರುವ ಸುದ್ದಿಗಳ ಪ್ರಕಾರ (ಗಾಳಿ ಸುದ್ದಿ ಇದ್ದರೂ ಇರಬಹುದು) ತಮಿಳುನಾಡಿನ ಅಧಿಕಾರಸ್ಥರಿಗೂ ಈ ಸ್ವಾಮಿಗೂ ಜಗಳ ಇದೆಯಂತೆ. ಅದು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕೆ ನಿತ್ಯಾನಂದನನ್ನು ಟ್ರಾಫ್ ಮಾಡಲಾಯಿತು ಎಂದೂ ಹೇಳಲಾಗುತ್ತಿದೆ.
ಮಾಧ್ಯಮವನ್ನು ಸೆಕ್ರೇಡ್ ಕೌ ಎಂದು ಪರಿಗಣಿಸಲಾಗಿರುವ ಈ ದೇಶದಲ್ಲಿ ಅದು ಪವಿತ್ರ ಹಸುವಾಗಿಯೇ ಇರಬೇಕು ಎಂದು ಬಯಸುವವನು ನಾನು. ಬದಲಾಗಿ ಪಕ್ಕದ ಮನೆ ಬೇಲಿ ಹಾರುವ ಊರಿಗೆ ಬಿಟ್ಟ ಹೋರಿ ಅದಾಗದಿರಲಿ ಎಂದು ನಾನು ಆಶಿಸುತ್ತೇನೆ.
ಇಲ್ಲಿ ನಾನು ನಿತ್ಯಾನಂದ ಸ್ವಾಮಿಯನ್ನಾಗಲೀ ಬೇರೆ ಯಾವುದೇ ಸ್ವಾಮಿಯನ್ನಾಗಲೀ ಸಮರ್ಥಿಸುತ್ತಿಲ್ಲ. ಬಹುತೇಕ ಕಾವಿಧಾರಿಗಳು ತಮ್ಮ ಆಶ್ರಮಗಳನ್ನು ಲೈಂಗಿಕೆ ಚಟುವಟಿಕೆಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಇದರ ನಡುವೆಯೂ ಸಂತರೂ, ನಿಜವಾದ ಸನ್ಯಾಸಿಗಳು ನಮ್ಮ ನಡುವೆ ಇದ್ದಾರೆ. ಇದನ್ನು ನಾವು ಮರೆಯಬಾರದು.
ನಿತ್ಯಾನಂದ ಸ್ವಾಮಿ ಪ್ರಕರಣದಲ್ಲಿ ಹೀಗೆ ಸಂಶಯಕ್ಕೆ ಕಾರಣವಾದ ಕೆಲವೊಂದು ಅಂಶಗಳಿವೆ. ಇದು ಆತ ಟ್ರಾಪ್ ಆಗಿದ್ದರೂ ಆಗಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ. ಆದರೆ ಈಗಾಗಲೇ ಆತ ಅಪರಾಧಿ ಎಂದು ಜನ ನಂಬಿಯಾಗಿದೆ. ಆತನ ಮೇಲೆ ಪ್ರಹಾರ ಮಾಡಿಯಾಗಿದೆ. ಆತ ಈಗ ಜನರ ಮುಂದೆ ಬಂದು ನಿಲ್ಲುವ ಸ್ಥಿತಿಯಲ್ಲೂ ಇಲ್ಲ. ಒಂದೊಮ್ಮೆ ಆತ ಟ್ರಾಪ್ ಆಗಿದ್ದರೆ ? ನಿಜವಾಗಿ ಈ ಕೃತ್ಯವನ್ನು ಯಾರದೂ ಷಡ್ಯಂತ್ರದ ಭಾಗವಾಗಿ, ಮಾದಕ ವಸ್ತುವಿನ ಪ್ರಭಾವದಲ್ಲಿ ಮಾಡಿದ್ದರೆ ?
ಏನೂ ಪ್ರಯೋಜನ ಇಲ್ಲ. ಮಾಧ್ಯಮಗಳು ಅವನ ಬಗ್ಗೆ ತೀರ್ಪು ನೀಡಿ, ಮಾನ ಹರಾಜು ಮಾಡಿ ಮುಗಿದಿದೆ. ಇನ್ನು ಆತ ಮಾಡಿರಲಿ ಮಾಡದೇ ಇರಲಿ, ಮಾಡಿದ್ದೆ ಎಂದು ಸುಮ್ಮನೆ ಶಿವ ನಾಮ ಜಪ ಮಾಡುವುದೊಂದೇ ಈ ಸ್ವಾಮಿಗೆ ಉಳಿದ ಮಾರ್ಗ.

Tuesday, March 2, 2010

ಇವರಿಗೆ ಮನುಷ್ಯರೆಲ್ಲ ಬ್ಯಾಲೆಟ್ ಪೇಪರ್ !

ನಿನ್ನೆ ಶಿವಮೊಗ್ಗ ಮತ್ತು ಹಾಸನ ಹೊತ್ತಿ ಉರಿದವು. ಹಲವು ವಾಹನಗಳು ಬೆಂಕಿಗೆ ಆಹುತಿಯಾದವು. ಧರ್ಮ ಎಂಬ ಅಪೀಮು ಎಲ್ಲೆಡೆಗೆ ತಾಂಡವವಾಡಿತು. ಇದಾದ ಮೇಲೆ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿಯಾಗಲು ನಾವು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರಾವೇಶದ ಘೋಷಣೆ ಮಾಡಿದರು. ಯಥಾ ಪ್ರಕಾರ ಪ್ರತಿ ಪಕ್ಷದ ನಾಯಕರು ಇದಕ್ಕೆಲ್ಲ ಕಾರಣವಾದ ಪತ್ರಿಕೆಗಳ ಮೇಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದವು.


ಹೀಗೆ ಧರ್ಮ ಬೀದಿಗೆ ಬಂದು ಬೀಳಲು ಕಾರಣ ದಿನ ಪತ್ರಿಕೆಯೊಂದರಲ್ಲಿ ಪ್ರಕಟವಾದ ವಿವಾದಾತ್ಮಕ ಲೇಖಕಿ ತಸ್ಲಿಮಾ ಅವರ ಒಂದು ಲೇಖನ. ಈ ಲೇಖನದಲ್ಲಿ ಮುಸ್ಲಿಮ್ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುವಂತಹ ಅಂಶಗಳಿವೆ ಎಂಬುದು. ಈ ಲೇಖನದಲ್ಲಿ ಇದ್ದುದು ಸರಿಯೇ ತಪ್ಪೇ ಎಂಬುದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುವ ಅಧಿಕಾರ ಇಲ್ಲವೆ ? ಧರ್ಮ ಎನ್ನುವುದು ಸಾರ್ವಜನಿಕ ಚರ್ಚೆಗೆ ವಸ್ತುವಾಗಬಾರದೆ ? ಧರ್ಮ ಎನ್ನುವುದು ನಿಂತ ನೀರಾಗಿರಬೇಕೆ ? ಈ ಪ್ರಶ್ನೆಗಳು ತುಂಬಾ ಮುಖ್ಯ ಎಂದು ನಾನು ನಂಬಿದ್ದೇನೆ. ಜೊತೆಗೆ ಧರ್ಮ ಮತ್ತು ಸಾಮಾಜಿಕ ನಡವಳಿಕೆಯ ನಡುವಿನ ಸೂಕ್ಷ್ಮ ಸಂಬಂಧದ ಬಗ್ಗೆಯೂ ಚರ್ಚೆಯಾಗಬೇಕಾಗಿದೆ.


ಎಲ್ಲ ಧರ್ಮಗಳು ಮೂಲಭೂತವಾಗಿ ಮನುಷ್ಯನ ಒಳತನ್ನು ಬಯಸುತ್ತವೆ ಎನ್ನುವುದರಲ್ಲಿ ನನಗೆ ಅನುಮಾನಗಳಿಲ್ಲ. ಧರ್ಮಕ್ಕೆ ಜನ ಮನ್ನಣೆಯನ್ನು ದೊರಕಿಸಿಕೊಡಲು ಸಾಮಾಜಿಕ ನಡುವಳಿಕೆಯ ಬಗ್ಗೆ ಧರ್ಮಗಳು ಮಾತನಾಡತೊಡಗಿದವು. ಈ ಧರ್ಮಗಳು ಹುಟ್ಟಿದ ಸಂದರ್ಭದಲ್ಲಿ ಇದ್ದ ನಂಬಿಕೆಗಳು, ಸಾಮಾಜಿಕ ಪರಿಸ್ಥಿತಿಯ ಆಧಾರದ ಮೇಲೆ ಧರ್ಮ ಸಾಮಾಜಿಕ ನಡುವಳಿಕೆಯ ಬಗ್ಗೆ ಮಾತನಾಡಿತು. ಇದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಮತ್ತು ಸಾಮಾಜಿಕ ನಡವಳಿಕೆಗಳು ಬೆಳೆದವು. ಅಂದಿನ ಸಂದರ್ಭದಲ್ಲಿ ಪ್ರಸ್ತುತವಾಗಿದ್ದ ಇಂತಹ ನಡವಳಿಕೆ ಮತ್ತು ಆಚರಣೆಗಳು ಇಂದು ಪ್ರಸ್ತುತತೆಯನ್ನು ಕಳೆದುಕೊಂಡಿವೆ. ಸಮಸ್ಯೆ ಇರುವುದು ಇಲ್ಲಿಯೆ. ಧರ್ಮವನ್ನು ಧರ್ಮವನ್ನಾಗಿ ನೋಡದೇ ಅಂಧ ಅನುಕರಣೆ ಮಾಡುತ್ತ ಬರುವವರು ಧರ್ಮವನ್ನು ಆಯಾ ಕಾಲ ಘಟ್ಟದ ಸತ್ಯಕ್ಕೆ ಒಡ್ಡಿಕೊಳ್ಳುವುದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ಸಾವಿರಾರು ವರ್ಷಗಳ ಹಿಂದೆ ಬರೆದ ಧರ್ಮ ಗ್ರಂಥಗಳನ್ನೇ ಬಾಯಿ ಪಾಠ ಮಾಡಿಕೊಂಡು ಅದರ ಬಗ್ಗೆ ಮಾತನಾಡುವವರ ವಿರುದ್ಧ ದೈಹಿಕ ಹಲ್ಲೆ ನಡೆಸುವವರೆಗೆ ಮುಂದುವರಿಯುತ್ತಾರೆ. ಇದೇ ಬಹುದೊಡ್ಡ ದುರಂತ.


ಧರ್ಮ ಮತ್ತು ಸಾಮಾಜಿಕ ನಡುವಳಿಕೆ ನಡುವಿನ ಸಂಬಂಧವನ್ನು ಪುನರ್ ವಿಶ್ಲೇಷಿಸಬೇಕಾದ ಅಗತ್ಯ ಇಂದು ಹೆಚ್ಚಾಗಿದೆ. ಧರ್ಮ ಉತ್ತಮ ಬದುಕನ್ನು ಕಟ್ಟಿಕೊಡಲು ಸಹಕಾರಿಯಾಗಿದ್ದರೂ ಅದು ಸಾಮಾಜಿಕ ನಡವಳಿಕೆಯ ಬಗ್ಗೆ ಹೆಚ್ಚು ಮಾತನಾಡಬೇಕಾದ ಅಗತ್ಯ ಇಲ್ಲ. ಧರ್ಮ ಆಧ್ಯಾತ್ಮಿಕತೆಯ ತಳಿಹದಿಯ ಮೇಲೆ ನಿಲ್ಲಬೇಕು. ಬದುಕಿಗೊಂದು ಗಟ್ಟಿಯಾದ ತಳಪಾಯವನ್ನು ನೀಡಬೇಕು. ಇದಕ್ಕೆ ಬದಲಾಗಿ ನೀನು ನಿಜವಾದ ಧಾರ್ಮಿಕನಾಗಿದ್ದರೆ, ಇದೇ ಆಚರಣೆ ಮಾಡಬೇಕು ಎಂದು ಹೇಳುವುದು ಸಮಂಜಸ ಅಲ್ಲ. ಜೊತೆಗೆ ಧಾರ್ಮಿಕ ಲಾಂಛನಗಳನ್ನು ಬಹಿರಂಗವಾಗಿ ಧರಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆಯೂ ಸಂವಾದ, ಚರ್ಚೆ ನಡೆಯುವುದು ಅತ್ಯಗತ್ಯ.


ನನ್ನ ಮುತ್ತಜ್ಜ ಜುಟ್ಟು ಬಿಟ್ಟಿದ್ದನಂತೆ. ನನ್ನ ಅಜ್ಜ ಮತ್ತು ಅಪ್ಪ, ಸ್ವಾತಂತ್ರ್ಯ ಚಳವಳಿಯ ಸಂಪರ್ಕದಿಂದಾಗಿ ಖಾದಿ ಧರಿಸಿದರು. ಜುಟ್ಟು ಬಿಡಲಿಲ್ಲ. ಅವರು ಯಾಕೆ ಜುಟ್ಟು ಬಿಡಲಿಲ್ಲ ಎಂದರೆ, ತಾವು ಇಂತಹ ಜಾತಿಗೆ ಸೇರಿದವರು ಎಂದು ಬಹಿರಂಗವಾಗಿ ಪ್ರದರ್ಶನ ಮಾಡುವುದು ಅವರಿಗೆ ಬೇಕಾಗಿರಲಿಲ್ಲ. ಜೊತೆಗೆ ಬ್ರಾಹ್ಮಣಿಕೆಯ ಸಂಕೇತವಾದ ಜುಟ್ಟು ಅವರ ಸಾಮಾಜಿಕ ಬದುಕಿಗೆ ಅಡ್ಡಿಯನ್ನು ಉಂಟು ಮಾಡುವ ಸಾಧ್ಯತೆ ಇತ್ತು. ಬ್ರಾಹ್ಮಣ್ಯವನ್ನು ವಿರೋಧಿಸುವವರು ಈ ಜುಟ್ಟಿನ ಕಾರಣದಿಂದಾಗಿ ಅವರನ್ನು ಧ್ವೇಷಿಸುವ ಸಾಧ್ಯತೆ ಇತ್ತು. ಇದೆಲ್ಲ ಅವರಿಗೆ ಒಂದು ಚಳವಳಿ ಕಲಿಸಿಕೊಟ್ಟಿತು. ಒಂದು ಕಾಲ ಘಟ್ಟದ ಸಾಮಾಜಿಕ ಚಳವಳಿಗಳು ಆ ಕಾಲದ ಬದುಕಿನ ಪ್ರತಿಕ್ರಿಯೆಯೂ ಆಗಿರುತ್ತದೆ. ಧರ್ಮ ಮತ್ತು ಸಮಾಜ ಮುಖಾಮುಖಿಯಾಗುವುದು ಹೀಗೆಯೇ. ಆದ್ದರಿಂದ ಧರ್ಮ ಮತ್ತು ಸಮಾಜದ ನಡುವಿನ ಇಂತಹ ಮುಖಾಮುಖಿ, ಧರ್ಮಕ್ಕೆ ಹೆಚ್ಚಿನ ಪ್ರಸ್ತುತತೆಯನ್ನು ನೀಡುತ್ತದೆ. ಆದರೆ ಧಾರ್ಮಿಕ ಅಂಧಾಭಿಮಾನಿಗಳು ಇಂತಹ ಮುಖಾಮುಖಿ ನಡೆಯದಂತೆ ತಡೆಯಲು ಯತ್ನಿಸುತ್ತಾರೆ. ಅವರಿಗೆ ಇಂಥಹ ಮುಖಾಮುಖಿಗಳು ಬೇಕಾಗಿಲ್ಲ. ಯಾಕೆಂದರೆ ಸಮಾಜದ ಜೊತೆ ಮುಖಾಮುಖಿಯಾಗಿ ಸಂಘರ್ಷದ ಭಾಗವಾಗುವ ಧರ್ಮ ಹೆಚ್ಚು ಪಕ್ವವಾಗುತ್ತದೆ. ಇಂತಹ ಸಂದರ್ಭದಲ್ಲಿ ಧಾರ್ಮಿಕ ಅಂಧಾಭಿಮಾನಿಗಳ ಮಹತ್ವ ಕಡಿಮೆಯಾಗುತ್ತದೆ. ತಾವು ದೇವರ ಪ್ರತಿನಿಧಿಗಳು ಎಂದು ಕೊಚ್ಚಿಕೊಳ್ಳುವವರಿಗೆ ಅಲ್ಲಿ ಕೆಲಸ ಇರುವುದಿಲ್ಲ. ಯಾಕೆಂದರೆ ಧರ್ಮ ದೇವಾಲಯದಿಂದ ಚರ್ಚು, ಮಸೀದಿಗಳಿಂದ ಹೊರಬಂದು ಆಚರಣೆಯ ಪೊರೆಯನ್ನು ಕಳೆದುಕೊಂಡು ನಿಂತು ಬಿಡುತ್ತದೆ. ಧರ್ಮ ಕೇವಲ ಆಧ್ಯಾತ್ಮಿಕವೂ ಆಗದೇ, ಬದುಕಿನ ಧರ್ಮವೂ ಆಗುತ್ತದೆ. ಇದು ಸಾಧ್ಯವಾಗುವುದು ಧರ್ಮ ಸದಾ ಸಾಮಾಜಿಕ ಸಂಘರ್ಷದ ಭಾಗವಾಗುವುದರಿಂದ ಮಾತ್ರ.


ಧರ್ಮ ಮತ್ತು ಸಮಾಜದ ನಡುವಿನ ಮುಖಾಮುಖಿಗೆ ನಮ್ಮ ವೈಚಾರಿಕರು, ಧಾರ್ಮಿಕ ಅಂಧಾಭಿಮಾನಿಗಳು, ರಾಜಕಾರಣಿಗಳು ಆಡ್ಡಿಯನ್ನು ಉಂಟು ಮಾಡುತ್ತಲೇ ಬಂದಿದ್ದಾರೆ. ನಮ್ಮ ವೈಚಾರಿಕರು ಒಂದು ಧರ್ಮವನ್ನು ಟೀಕೆಗೆ ಒಳಪಡಿಸುತ್ತ ಇನ್ನೊಂದು ಧರ್ಮದಲ್ಲಿ ಇರುವ, ಇಂದಿನ ಬದುಕಿಗೆ ವ್ಯತಿರಿಕ್ತವಾದ ನಡವಳಿಕೆಗಳ ಬಗ್ಗೆ ದಿವ್ಯ ಮೌನವನ್ನು ಒಹಿಸುತ್ತಾರೆ. ಪ್ರಾಮಾಣಿಕತೆ ಇಲ್ಲದ ವೈಚಾರಿಕತೆಗೆ ಬೆಲೆ ಇಲ್ಲ ಎಂಬುದು ಅವರಿಗೆ ಅರ್ಥವಾಗುವುದಿಲ್ಲ. ಧಾರ್ಮಿಕ ಲಾಂಛನದ ಪ್ರದರ್ಶನದ ಬಗ್ಗೆ ಟೀಕಿಸುವಾಗ ಹಣೆಯ ಮೇಲಿನ ವಿಭೂತಿ ಮತ್ತು ಮೀಸೆ ಇಲ್ಲದ ಗಡ್ಡದ ನಡುವೆ ವ್ಯತ್ಯಾಸ ಮಾಡಬಾರದು. ಆದರೆ ನಮ್ಮ ವೈಚಾರಿಕ ಜಗತ್ತಿಗೆ ವಿಭೂತಿಯನ್ನು ಟೀಕಿಸುವುದಕ್ಕೆ ಹೆಚ್ಚು ಇಷ್ಟ.

ಧಾರ್ಮಿಕ ಅಂಧಾಭಿಮಾನಿಗಳು ಬೇರೆಯಾಗಿಲ್ಲ. ಅವರದು ಮೂಲಭೂತವಾಗಿ ಸರ್ವಾಧಿಕಾರಿ ಮನಸ್ಥಿತಿ. ತಾವು ನಂಬಿದ ಧರ್ಮವೇ ದೊಡ್ಡದು ಎಂದು ನಂಬಿಕೊಂಡರೆ ಅದು ಅವರ ಹಣೆ ಬರೆಹ. ಆದರೆ ಇವರು ತಮ್ಮ ನಂಬಿಕೆಯನ್ನು ಬಲಾತ್ಕಾರದ ಮೂಲಕ ಬೇರೆಯವರ ಮೇಲೆ ಹೇರಲು ಹೊರಡುತ್ತಾರೆ. ಇದಕ್ಕೆ ಅವರು ಹಿಂಸಾಚಾರಕ್ಕೂ ಹಿಂಜರಿಯರು. ಈ ವಿಚಾರದಲ್ಲಿ ಎಲ್ಲ ಜಾತಿ ಧರ್ಮಗಳ ಅಂಧಾಭಿಮಾನಿಗಳು ಒಂದೇ.

ಇನ್ನು ನಮ್ಮ ರಾಜಕಾರಣಿಗಳು. ಅವರು ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವ ಕಣ್ಣುಗಳನ್ನೆ ಕಳೆದುಕೊಂಡು ಬಿಟ್ಟಿದ್ದಾರೆ. ಅವರಿಗೆ ಪ್ರತಿ ಮನುಷ್ಯನೂ ನಿರ್ಜೀವವಾದ ಬ್ಯಾಲೆಟ್ ಪೇಪರ್ ! ನಿನ್ನೆಯ ಘಟನೆಯನ್ನೇ ತೆಗೆದುಕೊಳ್ಳಿ. ಇಲ್ಲಿ ಕನ್ನಡದ ದಿನಪತ್ರಿಕೆಯೊಂದು ಬೇರೆ ಭಾಷೆಯಲ್ಲಿ ಬರೆದ ಲೇಖನವನ್ನು ಅನುವಾದ ಮಾಡಿ ಪ್ರಕಟಿಸಿದೆ. ಅದು ಮುಸ್ಲಿಮ್ ಮಹಿಳೆಯೊಬ್ಬಳು ಬರೆದ ಲೇಖನ. ಇದರಲ್ಲಿ ತಪ್ಪೇನಿದೆ ? ಆದರೆ, ನಮ್ಮ ಸಿದ್ದರಾಮಯ್ಯ ಹಾಗೂ ಇತರ ಪ್ರತಿ ಪಕ್ಷಗಳ ನಾಯಕರು ಪತ್ರಿಕೆಯ ಮೇಲೆ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸುತ್ತಾರೆ. ಸರ್ಕಾರ ಪತ್ರಿಕೆಯ ಮೇಲೆ ಕೇಸು ಜಡಿಯುತ್ತದೆ.

ಬಾಂಗ್ಲಾ ದೇಶದ ಈ ಲೇಖಕಿ ಭಾರತಕ್ಕೆ ಬಂದರು. ತಮ್ಮ ಧರ್ಮದಲ್ಲಿನ ಲೋಪಗಳ ಬಗ್ಗೆ ಮಾತನಾಡಿದರು. ಆದರೆ ಪಶ್ಚಿಮ ಬಂಗಾಲದ ಕಮ್ಯುನಿಸ್ಟ್ ಸರ್ಕಾರವೇ ಅವರಿಗೆ ಬೆಂಬಲ ನೀಡಲಿಲ್ಲ. ಧಾರ್ಮಿಕ ಮೂಲಭೂತವಾದಿಗಳು ಅವರ ವಿರುದ್ಧ ತಿರುಗಿ ಬಿದ್ದಾಗ ಈ ಸೆಕ್ಯುಲರ್ ದೇಶದ ಯಾವ ಧರ್ಮ ನಿರಪೇಕ್ಷವಾದಿಯೂ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಯಾಕೆಂದರೆ ಎಲ್ಲರಿಗೂ ಒಂದಿಲ್ಲ ಒಂದು ರೀತಿಯ ಭಯ.

ಈಗ ಧಾರ್ಮಿಕ ಆಚರಣೆಗಳಿಗಿಂತ ಆಧ್ಯಾತ್ಮಿಕ ಮನಸ್ಸು ಬೇಕಾಗಿದೆ. ಅದು ಕೇವಲ ಸಂಕೇತಗಳ ಮೇಲೆ ನಿಲ್ಲುವುದಿಲ್ಲ. ಶಬ್ದಗಳು ಮಂತ್ರಗಳಿಗಿಂತ ಅದರ ಧ್ವನಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ನೀವು ಗಮನಿಸಿರಬಹುದು. ಮುಸ್ಲೀಮರು ಬೆಳಿಗ್ಗೆ ಮತ್ತು ಸಂಜೆ ಮಸೀದಿಗಳಲ್ಲಿ ಹೇಳುವ ಅಲ್ಲಾ ಹೋ ಅಕ್ಬರ್ ಇದೆಯಲ್ಲ ಅದರ ಧ್ವನಿ ನನಗೆ ಯಾವುದೋ ವೇದ ಮಂತ್ರದ ಧ್ವನಿಯ ಹಾಗೆ ಕೇಳುತ್ತದೆ. ಆ ಸ್ವರದ ಏರಿಳಿತ ಒಂದು ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟೀಸುತ್ತದೆ. ಆದ್ದರಿಂದ ಮಾತು ಶಬ್ದಕ್ಕಿಂತ ಸ್ವರ ಮುಖ್ಯ. ಈ ಸ್ವರ ಮತ್ತು ಸ್ವರದ ಏರಿಳಿತ ಸೃಷ್ಟಿಸುವ ವಾತವಾರಣ ಧರ್ಮದಿಂದ ಧರ್ಮಕ್ಕೆ ಬೇರೆಯಾಗಿಲ್ಲ.