Friday, July 30, 2010

ಬರವಣಿಗೆ ಎಂದರೆ ಶೋಧನೆ..........

ಕಳೆದ ನಾಲ್ಕು ತಿಂಗಳಿನಿಂದ ನಾನು ಏನನ್ನೂ ಬರೆದಿಲ್ಲ.ನನ್ನಹಲವು ಸ್ನೇಹಿತರು ಫೋನ್ ಮಾಡಿ, ಯಾಕೆ ಬರೆಯುತ್ತಿಲ್ಲ ಎಂದು ಕೇಳುತ್ತಲೇ ಇದ್ದರು. ಆದರೆ ಬರೆಯುವ ಉಮೇದು ನನ್ನಲ್ಲಿ ಇರಲಿಲ್ಲ. ಇದಕ್ಕೆ ಕಾರಣವೇನು ಎಂಬುದು ನನಗೂ ತಿಳಿಯದು. ಕೆಲವೊಮ್ಮೆ ಹಾಗೆ ಆಗುತ್ತದೆ. ಯಾರ ಜೊತೆಗೂ ಮಾತನಾಡಬೇಕು ಎಂದು ಅನ್ನಿಸುವುದಿಲ್ಲ. ಏನನ್ನೂ ಬರೆಯಬೇಕು ಎಂದು ಅನ್ನಿಸುವುದಿಲ್ಲ. ಸುಮ್ಮನೆ ಬದುಕುತ್ತಿರಬೇಕು ಎಂದು ಅನ್ನಿಸುತ್ತದೆ.
ಬರವಣೆಗೆ ಎಂದರೆ ಹಾಗೆ. ಯಾವುದೋ ವಿಚಾರ ಮನಸ್ಸಿನಲ್ಲಿ ಗರ್ಭ ಕಟ್ಟಬೇಕು. ಭ್ರೂಣ ಬೆಳೆಯಬೇಕು. ಸರಿಯಾದ ಸಮಯಕ್ಕೆ ಸುಖ ಪ್ರಸವವಾಗಬೇಕು.
ಆದರೆ ಇದೆಲ್ಲ ಇರಲಿ. ಬರೆಯುವುದು ಎಂದರೆ ತುಂಬಾ ಸಂತೋಷವನ್ನು ನೀದುವಂತಹುದು. ಅದು ನಮ್ಮ ಮನಸ್ಸನ್ನು ತೆರೆದಿಡುವ ಕೆಲಸ. ಅಲ್ಲಿ ಪ್ರಾಮಾಣಿಕತೆ ಬೇಕು. ಮುಕ್ತ ಮನಸ್ಸು ಬೇಕು. ಮನಸ್ಸಿಗೆ ಬಂದಿದ್ದನ್ನು ತರ್ಕ ಮತ್ತು ವೈಚಾರಿಕತೆಯ ಪರಿಶೆಗೆ ಒಡ್ಡಿ ಸತ್ಯ ಅನ್ನಿಸ್ಸಿದ್ದನ್ನು ಹೇಳಬೇಕು. ಹೀಗೆ ಮಾತನಾಡುವುದಕ್ಕೆ ಧೈರ್ಯ, ಎದೆಗಾರಿಕೆ ಬೇಕು.
ಆದರೆ ಬಹಳಷ್ಟು ಜನರಿಗೆ ಬರವಣಿಗೆ ಎಂದರೆ ಅದೊಂದು ಕಸುಬು. ಈ ಕಸುಬನ್ನು ತುಂಬಾ ಚೆನ್ನಾಗಿ ಮಾಡುವವರು ನಮ್ಮ ನಡುವೆ ಇದ್ದಾರೆ. ತಾವು ಬರೆದಿದ್ದನ್ನು ಮಾರಾಟ ಮಾಡುವ, ಮಾರಾಟ ಮಾಡುವುದಕ್ಕಾಗಿಯೇ ಬರೆಯುವವರ ಗುಂಪೇ ಇದೆ. ಕೆಲವರು ಬರೆಯುವುದರಲ್ಲಿ ಫ್ಯಾಕ್ಟರಿ. ಅವರ ಫ್ಯಾಕ್ಟರಿಯಿಂದ ಉತ್ಪನ್ನಗಳು ಬರುತ್ತಲೇ ಇರುತ್ತವೆ. ಇವರು ತಮ್ಮ ಉತ್ಪನ್ನವನ್ನು ಮಾರುಕಟ್ಟೆಯಲ್ಲು ಉತ್ತಮ ಬೇಲೆಗೆ ಮಾರಾಟ ಮಾಡಬಲ್ಲವರು. ಜೊತೆಗೆ ನನ್ನ ಬರವಣಿಗೆ ಓದುಗರಿಗೆ ಮಜಾ ಕೊಡಬೇಕು ಎಂದು ಹೇಳುತ್ತಲೇ ಬರೆಯುವವರೂ ಇದ್ದಾರೆ. ಆದರೆ ಬರವಣಿಗೆಯ ಉದ್ದೇಶ ಮಜಾ ಕೊಡುವುದಲ್ಲ.
ಬರೆಯುವುದು ಒಂದು ರೀತಿಯಲ್ಲಿ ಸತ್ಯದ ಶೋಧನೆಯೇ. ಈ ವಿಚಾರದಲ್ಲಿ ಬೇರೆ ಬೇರೆ ಪ್ರಕಾರಗಳ ಬರವಣಿಗೆಯಲ್ಲಿ ವ್ಯತ್ಯಾಸವಿಲ್ಲ. ವ್ಯತ್ಯಾಸ ಇದ್ದರೆ ಅದರ ಫಾರ್ಮ್ ನಲ್ಲಿ ಮಾತ್ರ. ಒಂದು ಕಥೆ ಕಾಲ್ಪನಿಕವಾದರೂ ಅದು ಏನನ್ನೋ ಶೋಧಿಸುತ್ತಿರುತ್ತದೆ. ಒಬ್ಬ ಪತ್ರಕರ್ತನ ವರದಿ ಕೂಡ ಸತ್ಯಶೋಧನೆ ಅಥವಾ ಸತ್ಯವನ್ನು ಹೇಳುವ ಕೆಲಸವನ್ನು ಮಾಡುತ್ತಿರುತ್ತದೆ. ಒಂದು ಅತ್ಯುತ್ತುಮ ನಾಟಕ, ಸಿನೆಮಾ, ಹೀಗೆ ಎಲ್ಲ ಪ್ರಕಾರದ ಕಲಾ ಮಾರ್ಗಗಳೂ ಇದೇ ಕೆಲಸವನ್ನು ವಿಭಿನ್ನ ರೂಪಗಳಲ್ಲಿ ಮಾಡುತ್ತಿರುತ್ತವೆ.
ತಾವು ನಂಬಿದ್ದನ್ನು ಪ್ರಚಾರ ಮಾಡುವುದು ಉತ್ತಮ ಬರವಣಿಗೆ ಅನ್ನಿಸಲಾರದು. ಆದರೆ ಇಂದು ಶೋಧನೆಯ ಕೆಲಸವನ್ನು ಬರವಣಿಗೆ ಮಾಡುತ್ತಿಲ್ಲ. ಪತ್ರಿಕೋದ್ಯಮ ಕೂಡ ಪ್ರಚಾರ ಮಾಧ್ಯಮವಾಗಿ ಬದಲಾಗಿದೆ. ಹಾಗೆ ನಮ್ಮ ಸಾಹಿತ್ಯ, ಕಥೆ ಕಾದಂಬರಿಗಳೂ ಈಗ ಹೆಚ್ಚು ಹೆಚ್ಚು ಪ್ರಚಾರದ ಕೆಲಸವನ್ನೆ ಮಾಡುತ್ತಿವೆ. ಇತ್ತೀಚಿಗೆ ಬಾರಿ ಚರ್ಚೆಗೆ ಕಾರಣವಾಗಿರುವ ಎಸ್. ಎಲ್. ಬೈರಪ್ಪ ಅವರ ಕವಲು ಕಾದಂಬರಿಯನ್ನೇ ತೆಗೆದುಕೊಳ್ಳಿ. ಈ ಕಾದಂಬರಿ, ಬೈರಪ್ಪನವರು ನಂಬಿದ ಪರಂಪರಾಗತ ನಂಬಿಕೆಗಳ ಪ್ರಚಾರ ಸಾಮಗ್ರಿಯ ಹಾಗೆ ಕಾಣುತ್ತದೆ. ಅದು ಕಾದಂಬರಿ ಎಂದು ಅನ್ನಿಸಿಕೊಳ್ಳುವುದಿಲ್ಲ. ಈ ಮಾತನ್ನು ಹೇಳಿದರೆ, ಭೈರಪ್ಪನವರ ಪರವಾಗಿ ವಕಾಲತ್ತು ಒಹಿಸಿಕೊಳ್ಳುವವರು ಕೋಪಗೊಳ್ಳುತ್ತಾರೆ. ಹಾಗೆ ಭೈರಪ್ಪನವರ ವಿರೋಧಿಗಳು ಅವರನ್ನು ವಿರೋಧಿಸಬೇಕು ಎಂದು ವಿರೋಧಿಸುತ್ತಾರೆ. ಆದರೆ ಇಲ್ಲಿ ಇರುವ ಬಹುಮುಖ್ಯವಾದ ಪ್ರಶ್ನೆ ಎಂದರೆ ಕಾದಂಬರಿ ಎಂದರೇನು ? ಅದರ ಉದ್ದೇಶ ಯಾವುದು ? ಅದರ ಸಾರ್ಥಕತೆ ಇರುವುದು ಎಲ್ಲಿ ?
ಪರಂಪರಾಗತ ಮೌಲ್ಯಗಳು ಮತ್ತು ಆಧುನಿಕ ನಂಬಿಕೆಯ ನಡುವಿನ ಸಂಘರ್ಷದ ಮೂಲಕವೇ ಭೈರಪ್ಪನವರು ಶೋಧಿಸುವ ಕೆಲಸವನ್ನು ಮಾಡಬೇಕಿತ್ತು. ಹಾಗೆ ಅವರ ಕಾದಂಬರಿಯ ಪಾತ್ರಗಳು ತನ್ನಿಂದ ತಾನೇ ಬೆಳೆಯಬೇಕಿತ್ತು. ಆದರೆ ಕವಲಿನಲ್ಲಿ ಎಲ್ಲ ಪಾತ್ರಗಳೂ ಭೈರಪ್ಪನವರ ಅಣತಿಯಂತೆ ವರ್ತಿಸುತ್ತವೆ. ಅದನ್ನು ಮೀರಿದ ಇನ್ನೊಂದು ಸಾಧ್ಯತೆ ಎಲ್ಲಿಯೂ ಕಾಣುವುದಿಲ್ಲ. ಬೇರೆ ಸಾಧ್ಯತೆಗಳತ್ತ ಯಾವುದೇ ಪಾತ್ರಗಳೂ ನೋಡದಂತೆ ಬೈರಪ್ಪನವರು ಎಚ್ಚರಿಕೆ ಒಹಿಸುತ್ತಾರೆ. ಹೀಗೆ ಈ ಕಾದಂಬರಿ, ಕಾದಂಬರಿಕಾರ ವಿಧಿಸಿದ ಮಿತಿಯ ಒಳಗೆ ಪಲ್ಟಿ ಹೊಡೆಯುತ್ತವೆ. ಹೀಗಾಗಿ ಇದು ಸಾಮಾನ್ಯ ಕಾದಂಬರಿಯ ಮಟ್ಟದಲ್ಲೇ ಉಳಿದು ಬಿಡುತ್ತದೆ. ಇದು ಏನನ್ನೂ ಶೋಧಿಸುವುದೇ ಇಲ್ಲ. ಬದಲಾಗಿ ಪೂರ್ವ ನಿರ್ಧಾರಿತ ಹೇಳಿಕೆಗಳು ಕಾದಂಬರಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
ಮನುಷ್ಯನ ಮನಸ್ಸಿಗೆ ಬೇಲಿ ಇಲ್ಲ. ಸಮಾಜ ನಿರ್ಮಿತ ಸಂಬಂಧಗಳಿಗೆ ಮನಸ್ಸು ಹೀಗೆ ವರ್ತಿಸುತ್ತದೆ ಎಂದು ಹೇಳಲಾಗದು. ಮನುಷ್ಯನ ವರ್ತನೆ ಹೀಗೆ ಎಂದು ಹೇಳಲಾಗದು. ಇದು ಯಾಕೆ ಎಂದು ಶೋಧಿಸುವುದು ಇದೆಯಲ್ಲ, ಅದೇ ಬಹಳ ಮುಖ್ಯವಾದುದು. ಯಾವುದೇ ಬರೆಹ ಈ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ ಅದು ಕೇವಲ ಪ್ರಚಾರ ಸಾಮಗ್ರಿಯಾಗುತ್ತದೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...