Saturday, November 27, 2010

ನಾವೇನು ದೇವಲೋಕದಿಂದ ಬಂದವರಲ್ಲ.....!

ನನಗೆ ಮೂರು ಚಕ್ರಗಳಿವೆಯಂತೆ. ತ್ರಿ ಚಕ್ರೇ ಲೋಕ ಸಂಚಾರಿ ಎನ್ನುವುದು ನಂಬಿಕೆ. ಇದನ್ನು ನನ್ನ ಅಮ್ಮ ಮತ್ತು ಮನೆಯ ಪುರೋಹಿತರು ನಾನು ಹೈಸ್ಕೂಲಿಗೆ ಹೋಗುವಾಗಲೇ ಹೇಳಿದ್ದರು. ಈ ಮಾತನ್ನು ನಾನು ಅಗಲೇ ಸಾಬೀತು ಪಡಿಸಿದ್ದೆ. ಹೈಸ್ಕೂಲಿನಲ್ಲಿ ಒಂಬತ್ತನೆ ತರಗತಿಯಲ್ಲಿ ಓದುತ್ತಿರುವಾಗಲೇ ಮನೆಯಿಂದ ಓಡಿ ಹೋಗಿದ್ದೆ. ನಾಲ್ಕು ದಿನ ಬೆಂಗಳೂರಿಗೆ ಓಡಿ ಬಂದವ ಹಾಗೆ ಮನೆಗೆ ಹಿಂತಿರುಗಿದ್ದೆ. ಆಗ ಮನೆಯವರು ಹೇಳಿದ್ದು ಈತ ಕಾಲಿಗೆ ಚಕ್ರ ಕಟ್ಟಿಕೊಂದವನಂತೆ ಓಡಾಡ್ತಾನೆ. ಏನು ಮಾಡುವುದಕ್ಕೆ ಸಾಧ್ಯವಿಲ್ಲ.
ಮೂರು ಚಕ್ರಗಳು ಇರುವುದರಿಂದ ಹಾಗೆ ಓಡಾಡುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಲೋಕ ಸುತ್ತುವುದೆಂದರೆ ನನಗೆ ತುಂಬಾ ಇಷ್ಟ. ಈಗಂತೂ ಯಾರಾದರೂ ಕರೆದರೆ ನಾನು ಹೊರಡುವುದಕ್ಕೆ ರೆಡಿಯಾಗಿ ಬಿಡುತ್ತೇನೆ. ಅದಕ್ಕೆ ಈ ಬೆಂಗಳೂರು ನನ್ನನ್ನು ಹೆದರಿಸುತ್ತಿರುವುದು ಕಾರಣ ಇರಬಹುದು. ಜೊತೆಗೆ ಬೇರೆ ಬೇರೆ ಕಡೆ ಹೋಗುವುದರಿಂದ ಹೊಸ ಜನರ ಪರಚಯವಾಗುತ್ತದೆ. ಹಾಗೆ ಅವರೆಲ್ಲರ ಹತ್ತಿರ ಮಾತನಾಡುವಾಗ ನಮಗೆ ಗೊತ್ತಿಲ್ಲದ ಹಲವರಾರು ವಿಷಯಗಳು ತಿಳಿಯುತ್ತವೆ.
ನಾನು ಈ ವಾರ ಸುಳ್ಯಕ್ಕೆ ಹೋಗಿದ್ದೆ. ಹಾಗೆ ನೋಡಿದರೆ ಈ ಊರು ನನಗೆ ಹೊಸತಲ್ಲ. ಪ್ರಭಾಕರ ಶಿಶಿಲ, ಪುರುಷೋತ್ತಮ ಬಿಳಿಮಲೆ, ಸುಬ್ರಾಯ ಚೊಕ್ಕಾಡಿ ಮೊದಲಾದ ಕನ್ನಡದ ಬರಹಗಾರರನ್ನು ನಾನು ಭೇಟಿ ಮಾಡಿದ್ದು ಇಲ್ಲಿಯೇ. ಅದೂ ಸುಮಾರು ೨೩ ವರ್ಷಗಳ ಹಿಂದೆ. ಇದಾದ ಮೇಲೆ ಸುಳ್ಯಕ್ಕೆ ಹಲವಾರು ಬಾರಿ ಹೋಗಿದ್ದೇನೆ. ಆದರೆ ಅಲಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು ಇದೇ ಮೊದಲು.
ಸುಳ್ಯ ಹಬ್ಬದ ಮಾಧ್ಯಮ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಅಹ್ವಾನ ಬಂದಾಗ ಸಂತೋಷದಿಂದಲೇ ಒಪ್ಪಿಕೊಂಡೆ. ಸುಳ್ಯ ಹಬ್ಬದ ಹಿಂದಿನ ರೂವಾರಿ ಡಾ. ಶಿವಾನಂದ. ವೈದ್ಯರಾದರೂ ಅವರು ವೈದ್ಯ ವೃತ್ತಿಯನ್ನು ಮಾಡದೇ ಪತ್ರಿಕೋದ್ಯಮಕ್ಕೆ ಬಂದರು. ಸುದ್ದಿ ಬಿಡುಗಡೆ ಎಂಬ ಪತ್ರಿಕಯನ್ನು ಪ್ರಾರಂಭಿಸಿದರು. ಈ ವಾರ ಪತ್ರಿಕೆಗೆ ಈಗ ೨೫ ವರ್ಷ ! ಇದಕ್ಕಾಗಿಯೇ ಅವರು ಸುಳ್ಯ ಹಬ್ಬವನ್ನು ಆಯೋಜಿಸಿದ್ದರು.
ಗ್ರಾಮಾಂತರ ಪ್ರದೇಶದಿಂದ ಪ್ರಕಟಗೊಳ್ಳುವ ಹಲವಾರು ಪತ್ರಿಕೆಗಳನ್ನು ನಾನು ಮನೆಗೆ ತರಿಸಿಕೊಳ್ಳುತ್ತೇನೆ. ಅವುಗಳಲ್ಲಿ ಸುದ್ದಿ ಬಿಡುಗಡೆ ಕೂಡ ಒಂದು. ನನಗೆ ಈ ಪತ್ರಿಕೆ ಇಷ್ಟವಾಗುವುದಕ್ಕೆ ಹಲವಾರು ಕಾರಣಗಳಿವೆ. ಇದು ವಾರ ಪತ್ರಿಕೆಯಾದರೂ ಟಾಬಲೈಡ್ ಗುಣವನ್ನು ಹೊಂದಿಲ್ಲ. ಇದು ದಿನ ನಿತ್ಯದ ಸುದ್ದಿಗಳನ್ನು ನೀಡುವ ವಾರ ಪತ್ರಿಕೆ. ಹಾಗಂತ ಕೇವಲ ವರದಿಗಳನ್ನು ಮಾತ್ರ ನೀಡುವುದಕ್ಕೆ ಪತ್ರಿಕೆ ಸೀಮಿತವಾಗಿಲ್ಲ. ಈ ತಾಲೂಕಿನ ಜನರ ಪರವಾಗಿ ಹಲವಾರು ಬಾರಿ ಹೋರಾಟ ಮಾಡಿದೆ. ಡಾ. ಶಿವಾನಂದ ಅವರೂ ರಸ್ತೆಗೆ ಇಳಿದು ಹೋರಾಟ ಮಾಡಿದ ಹಲವಾರು ಉದಾಹರಣೆಗಳಿವೆ. ಸೋಮವಾರ ಈ ಪತ್ರಿಕೆಬರುವುದನ್ನು ಎರಡು ಮೂರು ತಾಲೂಕಿನ ಜನ ಕಾಯುತ್ತಾರೆ. ರಾಜ್ಯ ಮಟ್ಟದ ದಿನ ಪತ್ರಿಕೆಗಳಲ್ಲಿ ಸುದ್ದಿ ಬಂದರೂ ತಮ್ಮ ಪ್ರೀತಿಯ ಸುದ್ದಿಯಲ್ಲಿ ಅವರಿಗೆ ಸುದ್ದಿ ಬರಲೇ ಬೇಕು. ಹಾಗೆ ಸುಳ್ಯ, ಬೇಳ್ತಂಗಡಿ ಮತ್ತು ಪುತ್ತೂರು ತಾಲೂಕಿನಲ್ಲಿ ಯಾರ ಮನೆಯಲ್ಲಿ ಮಗು ಹುಟ್ಟಲಿ, ಮದುವೆಯಾಗಲಿ< ಯಾರದರೂ ಇಹಲೋಕ ಯಾತ್ರೆಯನ್ನು ಮುಗಿಸಲಿ ಅದರ ಜಾಹಿರಾತು ಸುದ್ದಿಯಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆ ಈ ಮೂರು ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಪ್ರತ್ಯೇಕ ಎಡಿಶನ್ ಗಳನ್ನು ಡಾ. ಶಿವಾನಂದ ಪ್ರಕಟಿಸುತ್ತಾರೆ. ಒಂದು ವಾರ ಪತ್ರಿಕೆ ಬೇರೆ ಬೇರೆ ಪ್ರದೇಶಕ್ಕೆ ಬೇರೆ ಬೇರೆ ಎಡಿಶನ್ ಪ್ರಕಟಿಸುವುದು ಬೇರೆಲ್ಲೂ ಇರಲಿಕ್ಕಿಲ್ಲ.
ಅವರು ಯಾವಾಗಲೂ ಹೊಸದರ ಬಗ್ಗೆ ಆಲೋಚಿಸುತ್ತಿರುತ್ತಾರೆ. ಈಗ ಕೆಲವು ವರ್ಷಗಳ ಹಿಂದೆ ಬೆಂಗಳೂರಿನಿಂದ ಸುದ್ದಿಯ ಆವೃತ್ತಿಯನ್ನು ತರಲು ಅವರು ಯತ್ನ ನಡೆಸಿದ್ದರು. ಹಾಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಸುದ್ದಿ ಸೆಂಟರುಗಳು. ಇವು ಒಂದು ರೀತಿಯಲ್ಲಿ ಮಾಹಿತಿ ಕೇಂದ್ರಗಳು. ಅಲ್ಲಿ ಎಲ್ಲ ರೀತಿಯ ಮಾಹಿತಿಗಳೂ ದೊರಕುತ್ತವೆ.
ಡಾ, ಶಿವಾನಂದ ಅವರ ರಾಜಕೀಯ ನಂಬಿಕೆಗಳೇನೇ ಇರಲಿ, ಅವರು ಸುದ್ದಿಯನ್ನು ಈ ಪ್ರದೇಶದಲ್ಲಿ ಒಂದು ಶಕ್ತಿಯನ್ನಾಗಿ ರೂಪಿಸಿ ಬಿಟ್ಟಿದ್ದಾರೆ. ಹಾಗೆ, ಪ್ರತಿ ಹಳ್ಳಿಯ ಜನ ಕೂಡ ಪತ್ರಿಕೆಯಲ್ಲಿ ಸಹಭಾಗಿಗಳಾಗುವಂತೆ ನೋಡಿಕೊಂಡಿದ್ದಾರೆ.
ಸುಳ್ಯ ಹಬ್ಬ ನಡೆದಿದ್ದು ಎರಡು ದಿನ. ಈ ಎರಡು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಧಕರನ್ನು ಸನ್ಮಾನಿಸಲಾಯಿತು. ಎಲ್ಲ ಪಕ್ಷಗಳ ರಾಜಕಾರಣಿಗಳು ಬಂದು ಹಬ್ಬದಲ್ಲಿ ಪಾಲ್ಗೊಂಡರು.
ಮಾದ್ಯಮಗೋಷ್ಠಿಯಲ್ಲಿ ನಾನು ಮಾತನಾಡಿದ ಮೇಲೆ ನಡೆದಿದ್ದು ಸಂವಾದ ಕಾರ್ಯಕ್ರಮ. ಪತ್ರಿಕೋದ್ಯಮ ಭ್ರಷ್ಟಾಚಾರ ಮೊದಲಾದ ವಿಚಾರಗಳ ಬಗ್ಗೆ ಹಲವಾರು ಪ್ರಶ್ನೆಗಳು. ಈ ಸಂವಾದ ನಡೆದಿದ್ದು ಸುಮಾರು ಎರಡು ಗಂಟೆ. ಆಗ ಅಲ್ಲಿ ತೂರಿ ಬಂದ ಪ್ರಶ್ನೆಗಳು ಇಲ್ಲಿನ ಜನರ ಆಲೋಚನಾ ಕ್ರಮವನ್ನೇ ಸ್ಪಷ್ಟಪಡಿಸುವಂತಿತ್ತು. ಜೊತೆಗೆ ನನಗೆ ಅನ್ನಿಸಿದ್ದು ಪತ್ರಿಕೆಗಳು ಸೇಕ್ರೆಡ್ ಕೌ ಎಂಬ ನಂಬಿಕೆ ಜನರಿಂದ ಮಾಯವಾಗುತ್ತಿದೆ ಎಂಬುದು.
ನಾವು ಬೆಂಗಳೂರಿನಲ್ಲಿ ಕುಳಿತು ಏನು ಮಾಡುತ್ತೇನೆ ಎಂಬುದು ಬೇರೆ ಬೇರೆ ರೂಪಗಳಲ್ಲಿ ಗ್ರಾಮಾಂತರ ಪ್ರದೇಶವನ್ನು ತಲುಪುತ್ತಿದೆ. ಈ ಸಂಪಾದಕರಿಗೆ ಆಡಳಿತ ವರ್ಗ ನೋಟೀಸು ನೀಡಿದೆಯಂತೆ, ಈ ಸಂಪಾದಕರಿಗೆ ಕುಮಾರಸ್ವಾಮಿ ಇಷ್ಟು ಹಣ ನೀಡಿದರಂತೆ ಹೀಗೆ ಎಲ್ಲವನ್ನು ತಾವು ನೋಡಿದಂತೆ ಜನ ಮಾತನಾಡುತ್ತ್ತಾರೆ. ಯಾವ ಯಾವ ಪತ್ರಿಕೆಗಳಲ್ಲಿ ಎಷ್ಟು ಸಂಬಳ ನೀಡುತ್ತಾರೆ, ಇಷ್ಟು ಸಂಬಳ ಪಡೆಯುವವರು ಎಷ್ಟು ಆಸ್ತಿ ಮಾಡಿದ್ದಾರೆ ಎಂಬ ಬಗ್ಗೆಯೂ ಸಾರ್ವಜನಿಕರು ಮಾತನಾಡುತ್ತಾರೆ. ನಾವು ರಾಜಧಾನಿಯಲ್ಲಿ ಕುಳಿತವರು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ಹಾಗೇ ಏನೇನನ್ನೋ ಮಾಡುತ್ತಿರುತ್ತೇವೆ. ನಾವು ಮಾಡುತ್ತಿರುವುದು ಯಾರಿಗೂ ತಿಳಿಯುವುದಿಲ್ಲ ಎಂದುಕೊಂಡಿರುತ್ತೇವೆ. ಆದರೆ ಅದು ಯಾವ ಮಾಯೆಯೋ ಎಲ್ಲವೂ ಗ್ರಾಮಾಂತರ ಪ್ರದೇಶದವರೆಗೆ ತಲುಬಿಟ್ಟಿರುತ್ತದೆ. ಅವರು ನಾವು ಮಾತನಾಡುವಾಗ ಮನಸ್ಸಿನಲ್ಲೇ ನಗುತ್ತಿರುತ್ತಾರೆ.
ಈ ಸಂವಾದ ನಂತರ ನನಗೆ ಅನ್ನಿಸಿದ್ದು ನಾವು ಅಹಂಕಾರದಿಂದ ಮಾತನಾಡುತ್ತ ನಮ್ಮ ಎದುರಿಗೆ ಕುಳಿತವರನ್ನು ಜಾಡಿಸುತ್ತಿದ್ದರೆ ನಮ್ಮ ಬಗ್ಗೆ ಅರಿತವರು ತಮ್ಮ ಮನಸ್ಸಿನಲ್ಲೇ ಲೇವಡಿ ಮಾಡುತ್ತಿರುತ್ತಾರೆ.
ಅಲ್ಲಿಯೂ ಅಷ್ಟೇ. ಪತ್ರಿಕೋದ್ಯಮಿಗಳಲ್ಲಿ ಹೆಚ್ಚುತ್ತ್ರಿರುವ ಅಕ್ಷರ ಅಹಂಕಾರ, ಭ್ರಷ್ಟತೆಯ ಬಗ್ಗೆ ಹಲವರು ಪ್ರಶ್ನೆಗಳನ್ನು ಕೇಳಿದರು. ಆಗ ನಾನು ಹೇಳಿದೆ.
ನಾವು ಪತ್ರಿಕೋದ್ಯಮಿಗಳೆಂದರೆ, ದೇವ ಲೋಕದಿಂದ ನೇರವಾಗಿ ಇಳಿದು ಬಂದವರಲ್ಲ. ನಾವೂ ಈ ಸಮಾಜದ ಭಾಗ. ನಾವು ಈ ಸಮಾಜದ ಒಳಗೆ ಇದ್ದೂ ಸಾಕ್ಷಿ ಪ್ರಜ್ನೆಯಾಗಿ ಕೆಲಸ ಮಾಡುತ್ತಿರುತ್ತೇವೆ. ಓಳಗೆ ಇದ್ದು ಹೊರಗಿನವರಾಗಿ ನೋಡುವುದಿದೆಯಲ್ಲ, ಅದಕ್ಕೆ ಸಂತನ ಮನಸ್ಸು ಬೇಕು. ಹೋರಾಟಗಾರನ ಕೆಚ್ಚೆದೆ ಬೇಕು, ಸತ್ಯ ನಿಷ್ಟೆ ಬೇಕು, ಪ್ರಾಮಾಣಿಕತೆ ಬೇಕು. ಇದೆಲ್ಲ ಇದ್ದೂ ನಮಗೆ ನಾವು ಹೆದರುತ್ತಿರಬೇಕು. ನಮ್ಮನ್ನೇ ನಾವು ಲೇವಡಿ ಮಾಡಿಕೊಳ್ಳುವ ಮನಸ್ಥಿತಿ ಬೇಕು. ಒಳಗೆ ಇದ್ದೂ ಹೊರಗಿನವರಾಗುವುದು ಸಣ್ನ ಕೆಲಸ ಅಲ್ಲ. ನಾವು ಒಳಗೆ ಇದ್ದೂ ಒಳಗಿನವರಾಗುವ ಅಪಾಯವೇ ಹೆಚ್ಚು. ಹೀಗಾಗಿಯೇ ನಾವು ರಾಜಕೀಯ ವರದಿ ಮಾಡುವವರು ರಾಜಕಾರಣಿಗಳಾಗಿ ಬಿಡುತ್ತೇವೆ. ಯಾರ ಯಾರ ಪರವಾಗಿ ಕೆಲಸ ಮಾಡಲು ಪ್ರಾರಂಭಿಸಿಬಿಡುತ್ತೇವೆ.
ಇಷ್ಟಕ್ಕೆ ನಾವು ಹತಾಶರಾಗಬೇಕಾಗಿಲ್ಲ. ಇವೆಲ್ಲವುದರ ಜೊತೆಗೆ ಪತ್ರಿಕೋದ್ಯಮ ಇಂದಿಗೂ ಜನರ ನಂಬಿಕೆಯನ್ನು ಉಳಿಸಿಕೊಂಡಿದೆ. ಭ್ರಷ್ಟರಾಗದ ಪ್ರಾಮಾಣಿಕ ಪತ್ರಿಕೋದ್ಯಮಿಗಳು ನಮ್ಮ ನಡುವೆ ಇದ್ದಾರೆ. ಇದರಿಂದಾಗಿಯೇ ಪತ್ರಿಕೋದ್ಯಮ ನಮ್ಮಲ್ಲಿ ಹೊಸ ಸಮಾಜದ ಕನಸನ್ನು ಮೂಡಿಸುತ್ತಲೇ ಇದೆ.
ಹೀಗೆ ಇನ್ನೂ ಕೆಲವು ಮಾತುಗಳನ್ನು ನಾನು ಹೇಳಿದೆ. ಅಲ್ಲಿದ್ದವರು ಚೆಪ್ಪಾಳೆ ತಟ್ಟೀದರು.

Wednesday, November 24, 2010

ಜಾತಿ ರಾಜಕಾರಣವನ್ನು ತಿರಸ್ಕರಿಸಿದ ಬಿಹಾರದ ಜನತೆ: ಜಾತಿ ರಾಜಕಾರಣವನ್ನು ಪುರಸ್ಕರಿಸಿದ ಬಿಜೆಪಿ !

ಇಂದು ದೇಶದ ರಾಜಕಾರಣದಲ್ಲಿ ಎರಡು ಮಹತ್ತರ ಘಟನೆಗಳು ನಡೆದವು. ಒಂದು ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ. ಮತ್ತೊಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೊರಕಿದ ಜೀವದಾನ. ಬಿಹಾರದಲ್ಲಿ ಲಾಲೂ ಪ್ರಸಾದ್ ನೆಲ ಕಚ್ಚಿದ್ದಾರೆ. ನಿತೀಶ್ ಕುಮಾರ ನಿರೀಕ್ಷೆ ಮೀರಿದ ಜಯಗಳಿಸಿದ್ದಾರೆ. ಈ ಎರಡೂ ಘಟನೆಗಳೂ ಹಲವು ದೃಷ್ಟಿಯಿಂದ ಮಹತ್ವದ್ದಾಗಿವೆ. ಹಾಗೆ ಭಾರತೀಯ ರಾಜಕಾರಣ ಸಾಗುತ್ತಿರುವ ದಾರಿಯ ಬಗ್ಗೆಯೂ ಸುಳಿವು ನೀಡುತ್ತವೆ.
ಬಿಹಾರ ಒಂದು ಕಾಲದಲ್ಲಿ ಜಂಗಲ್ ರಾಜ್ ಆಗಿತ್ತು. ಮಗದ ಸಾಮ್ರಾಜ್ಯದ ವೈಭವನ್ನು ಕಂಡು ಬಿಹಾರ, ಜಯಪ್ರಕಾಶ್ ನಾರಾಯಣ ಅವರ ಕ್ರಾಂತಿಯ ನೆಲ ಕೂಡ. ಹಾಗೆ ಕರ್ಪೂರಿ ಠಾಕೂರ್ ಎಂಬ ಸಮಾಜವಾದಿ ನಾಯಕನ ರಾಜ್ಯ. ಅವರ ಶಿಷ್ಯರು ಮೆರದಾಡಿದ ನೆಲ. ಇಲ್ಲಿ ಲಾಲೂ ನಾಟಕವಾಡಿದರು. ಜಾತಿ ರಾಜಕಾರಣದ ಬೀಜ ಭಿತ್ತಿ ಫಲವನ್ನು ಉಂಡರು. ಹಸುವಿನ ಹಾಲು ಕರೆದರು. ಹಸುವಿನ ಮೇವನ್ನು ತಾವೇ ತಿಂದರು. ತಮ್ಮ ನಂತರ ಮನೆಯಲ್ಲಿ ಹಾಲು ಕರೆಯುತ್ತ ಅಡಿಗೆ ಮಾಡಿಕೊಂಡಿದ್ದ ಹೆಂಡತಿ ರಾಬ್ಡಿ ದೇವಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಕಳೆದ ಚುನಾವಣೆಯಲ್ಲಿ ತಮ್ಮ ಮಗನನ್ನು ಅಖಾಡಕ್ಕೆ ಇಳಿಸಿದರು. ಹಾಗೆ ಯಾದವ, ದಲಿತ ಮಸ್ಲಿಂ ಮತ ಬ್ಯಾಂಕಿನ ಮೇಲೆ ಕಣ್ಣಿಟ್ಟು ರಾಜಕೀಯ ಮಾಡುತ್ತಿದ್ದ ಅವರು ಈಗತಾನೆ ಮುಗಿದ ಚುನಾವಣೆಯಲ್ಲಿ ಮೇಲ್ಜಾತಿಯ ಮತಗಳನ್ನು ಪಡೆಯುವುದಕ್ಕೆ ಯತ್ನ ನಡೆಸಿದರು. ಆದರೆ ಅಷ್ಟರಲ್ಲಿ ಬಿಹಾರದ ಮತದಾರರು ಬದಲಾಗಿದ್ದರು. ಇದು ಲಾಲೂ ಪ್ರಸಾದ್ ಯಾದವ್ ಅವರ ಗಮನಕ್ಕೆ ಬಂದಂತಿರಲಿಲ್ಲ. ಬಂದರೂ ಏನು ಮಾಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ.
ಕಳೆದ ಐದು ವರ್ಷಗಳ ಆಡಳಿತ ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರಿಗಳಿಗೆ ಸ್ವಾಭಿಮಾನದ ಪಾಠ ಹೇಳಿದ್ದರು. ಎಲ್ಲೆಡೆಗೂ ಅಭಿವೃದ್ಧಿಗೆ ಅಡಿಗಲ್ಲು ಹಾಕಿದರು. ರಾಜಕಾರಣದ ಭಾಗವಾಗಿದ್ದ ಕ್ರಿಮಿನಲ್ಸ್ ಗಳನ್ನು ಹಿಡಿದು ಜೈಲಿಗೆ ಅಟ್ಟಿದರು. ಬಿಹಾರದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಮಾನ್ಯ ಜನ ಯಾರ ಹೆದರಿಕೆಯೂ ಇಲ್ಲದೇ ಓಡಾಡುವಂತೆ ಮಾಡಿದರು. ಹೆಂಗಸರಂತೂ ಸಮಾಧಾನ ನಿಟ್ಟುಸಿರು ಬಿಟ್ಟರು. ಬಿಹಾರವನ್ನು ಅವರು ಬದಲಿಸಿಬಿಟ್ಟಿದ್ದರು. ಇದರಿಂದಾಗಿ ಲಾಲೂ ಅವರ ನಾಟಕ ನೋಡಿದವರು ಈ ಬಾರಿ ಅದೇ ನಾಟಕವನ್ನು ನೋಡಿ ನಕ್ಕರು. ಒಬ್ಬ ಸಮಾಜವಾದಿ ನಾಯಕ ತಮ್ಮ ಜನರಿಂದಲೇ ಅಪಹಾಸ್ಯದ ವಸ್ತುವಾಗಿ ಬಿಟ್ಟಿದ್ದರು. ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನು ಜನ ಬಿಟ್ಟುಬಿಟ್ಟರು.
ಈ ಚುನಾವಣೆಯ ಮತ್ತೊಂದು ಮಹತ್ವದ ಅಂಶ ಎಂದರೆ ಯಾದವರ ಭದ್ರ ಕೋಟೆಯನ್ನು ನಿತೀಶ್ ಕುಮಾರ ಪ್ರವೇಶಿಸಿದ್ದು.ಹಾಗೆ ಪಕ್ಕದಲ್ಲಿ ಬಿಜೆಪಿ ಎಂಬ ಮುಸ್ಲಿಂ ವಿರೋಧಿ ಪಕ್ಷವನ್ನು ಇಟ್ಟುಕೊಂಡೂ ಪ್ರತಿಶತ ೨೦ ರಷ್ಟು ಮುಸ್ಲಿಂ ಮತಗಳನ್ನು ಮೈತ್ರಿ ಕೂಟಕ್ಕೆ ದೊರಕಿಸಿಕೊಟ್ಟರು.
ಬಿಹಾರದಲ್ಲಿ ಜಾತಿ ಆಧಾರಿತ ರಾಜಕಾರಣಕ್ಕೆ ಮಂಗಳ ಹಾಡಿದವರು ನಿತೀಶ್ ಕುಮಾರ್. ಎಲ್ಲ ಕಾಲದಲ್ಲಿಯೂ ಜಾತಿ ರಾಜಕಾರಣ ಫಲ ನೀಡುವುದಿಲ್ಲ. ಅಂತಿಮವಾಗಿ ಜನರಿಗೆ ಸಹ್ಯವಾಗುವ ಬದುಕು ಮತ್ತು ರಾಜಕಾರಣ ಬೇಕು, ಈ ದೇಶದ ಜನ ಜಾತಿವಾದಿಗಳಲ್ಲ. ಆದರೆ ಅವರನ್ನು ತಮ್ಮ ಲಾಭಕ್ಕಾಗಿ ಜಾತಿವಾದಿಗಳನ್ನಾಗಿ ಮಾಡಿದವರು ರಾಜಕಾರಣಿಗಳು. ಈ ಬೆಳವಣಿಗೆ ಸಂತಸ ನೀಡುವಂತಹುದು.
ಬಿಹಾರದ ಈ ಫಲಿತಾಂಶ ಬಿಜೆಪಿಗೆ ಸಂತಸ ನೀಡಿದ್ದರೆ ಅದು ತುಂಬಾ ಸಹಜ, ಎನ್ ಡಿ ಏ ಗೆ ಇದೊಂದು ಅದ್ಭುತ ವಿಜಯವೇ. ಜೊತೆಗೆ ರಾಷ್ಟ್ರದ ರಾಜಕಾರಣಕ್ಕೆ ದಿಕ್ಸೂಚಿ ಕೂಡ. ಆದರೆ ಇವತ್ತಿನ ಬೆಳವಣಿಗೆ ಇಷ್ಟಕ್ಕೆ ಸೀಮಿತವಾಗಿಲ್ಲ. ಒಂದೆಡೆ ಜಾತಿ ರಾಜಕಾರಣವನ್ನು ತಿರಸ್ಕರಿಸಿದ ಸಂತಸ ಬಿಜೆಪಿಗಾದರೆ ಇನ್ನೊಂದೆಡೆ ಜಾತಿ ರಾಜಕಾರಣಕ್ಕೆ ಮಣೆ ಹಾಕುವ ಕೆಲಸವನ್ನೂ ಈ ಪಕ್ಷ ಮಾಡಿತು. ಬಿಹಾರದಲ್ಲಿ ಅಲ್ಲಿನ ಜನ ಜಾತಿ ರಾಜಕಾರಣವನ್ನು ತಿರಸ್ಕರಿಸಿದ ದಿನವೇ ಕರ್ನಾಟಕದಲ್ಲಿ ಜಾತಿ ರಾಜಕಾರಣಕ್ಕೆಮಣೆ ಹಾಕಿದ್ದು ಬಿಜೆಪಿ. ಲಿಂಗಾಯಿತರಿಗೆ ಬೇಸರವಾಗುತ್ತದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಯಡೀಯೂರಪ್ಪ ಅವರನ್ನು ಮುಂದುವರಿಸುವ ತೀರ್ಮಾನವನ್ನು ಪಕ್ಷ ಕೈಗೊಂಡಿತು.
ಇದೆಲ್ಲ ನಡೆದ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿದ ಹೇಳಿಕೆ ಗಮನಾರ್ಹ.
"ಬಿಹಾರದಲ್ಲಿ ಅಭೂತಫೂರ್ವ ವಿಜಯ ಸಾಧಿಸಿದ ನಿತೀಶ್ ಕುಮಾರ್ ಅವರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಪಕ್ಷ ಬಿಹಾರದಲ್ಲಿ ಬೆಳೆಯ ಬೇಕಾಗಿದೆ. ಅದನ್ನು ಬೆಳೆಸುತ್ತೇವೆ. ಆದರೆ ಕರ್ನಾಟಕದಲ್ಲಿ ಭ್ರಷ್ಟತೆಯ ಆರೋಪ ಹೊತ್ತಿರುವ ಮುಖ್ಯಮಂತ್ರಿಯನ್ನು ಬಿಜೆಪಿ ಮುಂದುವರಿಸುವ ತೀರ್ಮಾನವನ್ನು ಕೈಗೊಂಡಿದೆ. ನಾವು ಇಂತಹ ಆರೋಪ ಬಂದ ತಕ್ಷಣ ಮುಖ್ಯಮಂತ್ರಿಗಳನ್ನು ಬದಲಿಸಿದ್ದೇವೆ. ಇದೇ ನಮ್ಮ ಪಕ್ಷ ಮತ್ತು ಬಿಜೆಪಿಯ ನಡುವೆ ಇರುವ ವ್ಯತ್ಯಾಸ. " ಇದು ಸೋನಿಯಾ ಹೇಳಿದ ಮಾತು.
ಸೋನಿಯಾ ಪಕ್ವ ರಾಜಕಾರಣಿಯಾಗುತ್ತಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರವನ್ನು ತೊಡೆದು ಹಾಕಬೇಕು ಎಂಬ ಮನಸ್ಸು ಅವರಿಗಿದೆ ಎಂದು ಅನ್ನಿಸುತ್ತದೆ. ಅದು ಸಾಧ್ಯವೆ ಎಂಬುದು ಬೇರೆ ಮಾತು. ಎಲ್ಲಿಂದಲೋ ಬಂದು ಇಲ್ಲಿ ತಮ್ಮ ಬದುಕನ್ನು ಕಟ್ತಿಕೊಂಡ ಅವರನ್ನ್ ನೋಡಿದಾಗ ಅವರು ಅಪ್ರಮಾಣಿಕರು ಎಂದು ಅನ್ನಿಸುವುದಿಲ್ಲ > ಆದರೆ ಈ ದೇಶದ ಸಂಸ್ಕೃತಿಯನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಮಾತನಾಡುವ ಬಿಜೆಪಿಯನ್ನು ನೋಡಿದಾಗ ಹಾಗೆ ಅನ್ನಿಸುವುದಿಲ್ಲ. ಆ ಪಕ್ಷದ ಹೈಕಮಾಂಡ್ ಎಲ್ಲ ರೀತಿಯ ಒತ್ತಡ ಮತ್ತು ಬ್ಲಾಕ್ ಮೇಲೆ ಒತ್ತಡಕ್ಕೆ ಮಣಿಯುತ್ತಿದೆ. ಭೂ ಸ್ವಾಹಾ ಪ್ರಕರಣದಲ್ಲಿ ನಿರತರಾದ ತಮ್ಮ ಮುಖ್ಯಮಂತ್ರಿಯನ್ನು ಕೆಳಗಿಳಿಸುವ ಶಕ್ತಿ ಕೂಡ ಬಿಜೆಪಿ ಹೈಕಮಾಂಡ್ ಗೆ ಇಲ್ಲ. ಪಕ್ಷದ ಮುಖ್ಯಮಂತ್ರಿ ಎಲ್ಲ ಸೂಚನೆಯನ್ನು ಉಲ್ಲಂಘಿಸಿ ಭೂಗತರಾದರೂ ಅವರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳುವ ಶಕ್ತಿ ಕೂಡ ಬಿಜೆಪಿ ಹೈಕಮಾಂಡಿಗೆ ಇಲ್ಲ.
ಇವತ್ತಿನ ಬೆಳವಣಿಗೆಯನ್ನು ಗಮನಿಸಿ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವ ತೀರ್ಮಾನವನ್ನು ಪ್ರಕಟಿಸುವುದಕ್ಕೆ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಹೆದರಿಕೆ. ಹೀಗಾಗಿ ಅವರು ಲಿಖಿತ ಹೇಳಿಕೆಯನ್ನು ನೀಡುತ್ತಾರೆ. ಪಕ್ಷದ ಎಲ್ಲ ಹಿರಿಯ ನಾಯಕರೂ ಕರ್ನಾಟಕದ ಬೆಳವಣಿಗೆಯ ಬಗ್ಗೆ ಮಾತನಾಡದೇ ತಪ್ಪಿಸಿಕೊಳ್ಳುತ್ತಾರೆ. ತಮ್ಮ ನಿರ್ಣಯವನ್ನು ಪ್ರಕಟಿಸುವ ನೈತಿಕ ಶಕ್ತಿ ಕೂಡ ಅವರಿಗೆ ಇಲ್ಲ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸರ್ವಾಧಿಕಾರಿಯಂತೆ ವರ್ತಿಸುತ್ತದೆ. ಹೀಗಾಗಿ ಆ ಪಕ್ಷದಲ್ಲಿ ಜನತಾಂತ್ರಿಕ ಮೌಲ್ಯಗಳಿಗೆ ಬೆಲೆ ಇಲ್ಲ. ಒಬ್ಬ ಮುಖ್ಯಮಂತ್ರಿ ಅಧಿಕಾರದಿಂದ ಇಳಿಯಬೇಕು ಎಂದು ಹೈಕಮಾಂಡ್ ನಿರ್ಧರಿಸಿದರೆ ದೂಸರಾ ಮಾತಿಲ್ಲದೇ ಎಲ್ಲರೂ ಒಪ್ಪಿಕೊಳ್ಳಬೇಕು.ಆದರೆ ಬಿಜೆಪಿಯಲ್ಲಿ ಕರ್ನಾಟಕದ ಯಡಿಯೂರಪ್ಪ, ಗುಜರಾತಿನ ನರೇಂದ್ರ ಮೋದಿ, ಮಧ್ಯ ಪ್ರದೇಶದ ಶಿವರಾಜ್ ಚವಾಣ್ ಯಾರು ಬೇಕಾದರೂ ಹೈಕಮಾಂಡ್ ಅನ್ನು ಬೆದರಿಸಬಹುದು. ಬ್ಲಾಕ್ ಮೇಲ್ ಮಾಡಬಹುದು. ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು.
ಈ ಎರಡು ರೀತಿಯ ಹೈಕಮಾಂದ್ ನಿಂದ ದೇಶದಲ್ಲಿ ಜನತಂತ್ರ ಉಳಿಯುವುದಿಲ್ಲ. ಜನತಾಂತ್ರಿಕ ಮೌಲ್ಯಗಳು ಉಳಿಯುವುದಿಲ್ಲ. ಆದರೆ ದುರ್ದವ ಎಂದರೆ ನಮ್ಮಲ್ಲಿರುವ ರಾಜಕೀಯ ಪಕ್ಷಗಳ ಮಾದರಿಗಳು ಇವು.

Tuesday, November 23, 2010

ಸ್ವಾಮಿಗಳೇ ಎಲ್ಲ ಬಿಟ್ಟು ಬನ್ನಿ, ಪೆಗ್ ಹಾಕಿ ಚರ್ಚೆ ಮಾಡೋಣ...!

ಭಾರತೀಯರ ಬದುಕಿನಲ್ಲಿ ಧರ್ಮ ಎನ್ನುವುದು ಬದುಕುವ ವಿಧಾನ. ಧರ್ಮ ಎನ್ನುವ ಶಬ್ದದ ಮೂಲಧಾತು ದೃ. ದೃ ಎಂದರೆ ಬದುಕನ್ನು ಎತ್ತರಿಸು ಎಂದರ್ಥ. ಬದುಕನ್ನು ಯಾವುದು ಎತ್ತರಿಸುತ್ತದೆಯೋ ಅದೇ ಧರ್ಮ. ಆದರೆ ಈ ಬದುಕನ್ನು ಎತ್ತರಿಸುವುದು ಆಯಾ ಕಾಲಕ್ಕೆ ಬೇರೆ ಬೇರೆಯಾಗಿದೆ. ಆದರೆ ನಮ್ಮ ಬದುಕನ್ನು ಎತ್ತರಿಸುವುದು ಯಾವುದು ? ಅಂತಹ ಸಾರ್ವಕಾಲಿಕ ನಂಬಿಕೆ ಎನ್ನುವುದು ಇದೆಯೆ ? ಸಾರ್ವಕಾಲಿಕ ಬದುಕುವ ವಿಧಾನ ಇದೆಯೆ ?
ನೋಡಿ. ಎಲ್ಲ ಕಾಲದಲ್ಲಿಯೂ ಎಲ್ಲರೂ ಒಪ್ಪಬೇಕಾದ ಕೆಲವು ನಂಬಿಕೆಗಳಿವೆ, ಬದುಕುವ ವಿಧಾನವಿದೆ ನಾವು ನಮ್ಮ ಬದುಕಿನಲ್ಲಿ ಬೇರೆಯವರಿಗೆ ಮೋಸ ಮಾಡಬಾರದು, ಸಮಾಜಕ್ಕೆ ಒಳ್ಳೆಯದಾಗುವಂತೆ ಬದುಕಬೇಕು, ಬೇರೆಯವರಿಗೆ ಧ್ರೋಹವೆಸಗಬಾರದು, ಎಂಬುದು ಎಲ್ಲರೂ ಒಪ್ಪಬೇಕಾದ ಸಾರ್ವಕಾಲಿಕ ನಂಬಿಕೆಯೇ. ಹಾಗೆ ರಾಜ ಧರ್ಮ, ಗ್ರಹಸ್ಥಧರ್ಮ, ಸನ್ಯಾಸಿಗಳ ಧರ್ಮ ಇತ್ಯಾದಿ. ಈ ಸಮಾಜದಲ್ಲಿ ಬೇರೆ ಬೇರೆ ಸ್ಥರಗಳಲ್ಲಿ ಕೆಲಸ ಮಾಡುವವರು ತಮ್ಮ ತಮ್ಮ ಧರ್ಮದ ಪಾಲನೆ ಮಾಡಬೇಕಾಗುತ್ತದೆ. ಆಗಲೇ ಧರ್ಮ ಎಂಬ ಶಬ್ದಕ್ಕೆ ಬೆಲೆ. ಸಮಾಜ ಕೂಡ ಬದುಕುವುದಕ್ಕೆ ಯೋಗ್ಯವಾಗುತ್ತದೆ. ಇಂಥಹ ಸಾರ್ವಕಾಲಿಕ ಧರ್ಮ ಚ್ಯುತಿಯಾಗದಂತೆ ನೋಡಿಕೊಳ್ಳುವುದು ಧರ್ಮ ಪೀಠಗಳ ಕೆಲಸ.
ಈ ಮಾತುಗಳನ್ನು ನಾನು ಹೇಳುವುದಕ್ಕೆ ಮೂಲ ಕಾರಣ, ಕಳೆದ ಎರಡು ದಿನಗಳಿಂದ ಕೆಲವು ಮಠಾಧೀಶರು ರಸ್ತೆಗೆ ಇಳಿದಿದ್ದು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಬಾರದು ಎಂದು ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದು. ಹಾಗೆ ಬಿಜೆಪಿ ವರಿಷ್ಟರನ್ನು ಸಂಪರ್ಕಿಸಿ ಯಡಿಯೂರಪ್ಪ ಅವರ ಪರವಾಗಿ ವಕಾಲತ್ತು ಒಹಿಸಿದ್ದು. ಇದಕ್ಕೆಲ್ಲ ಈ ಮಠಾಧೀಶರು ಕೊಡುತ್ತಿರುವ ಕಾರಣ ಯಡಿಯೂರಪ್ಪ ಅವರ ಸರ್ಕಾರ ಲೋಕ ಕಲ್ಯಾಣ ಮಾಡುತ್ತಿದೆ, ಅವರು ಮಾಡಿದ ಅಪರಾಧ ದೊಡ್ಡದಲ್ಲ !
ಈಗ ಯಡಿಯೂರಪ್ಪ ಅವರ ಮೇಲೆ ಬಂದ ಭೂಹಗರಣಗಳ ಆರೋಪ ಸಣ್ಣದಲ್ಲ. ಕನಿಷ್ಠ ೧೦ ಪ್ರಕರಣಗಳಿವೆ.ಇವುಗಳಲ್ಲಿ ಬಹುತೇಕ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳು ಬಹಿರಂಗವಾಗಿವೆ. ಮೇಲ್ನೋಟಕ್ಕೆ ಯಡಿಯೂರಪ್ಪಾಪರಾಧಿ ಎಂಬುದು ಸಾಬೀತಾಗಿದೆ. ಸ್ವಜನ ಪಕ್ಷಪಾತದ ಆರೋಪವನ್ನು ಮುಖ್ಯಮಂತ್ರಿಗಳು ಒಪ್ಪಿಕೊಂಡು ಭೂಮಿಯನ್ನು ಹಿಂತಿರುಗಿಸಿದ್ದಾರೆ. ಯಡಿಯೂರಪ್ಪ ಅವರು ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡರೂ ಈ ಮಠಾದೀಶರು ಅದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರ ಮೇಲೆ ತನಿಖೆಯಾಗಿ ಅವರು ತಪ್ಪಿತಸ್ಥರಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಈ ಮಠಾಧೀಶರು ಹೇಳುತ್ತಾರೆ. ಸಾಧಾರಣವಾಗಿ ಯಾವ ವ್ಯಕ್ತಿಯ ಮೇಲೆ ಆರೋಪ ಬರಲಿ ಆತ ತನಿಖೆ ಮುಗಿಯುವ ವರೆಗೆ ಅಧಿಕಾರದಿಂದ ದೂರವಿರಬೇಕು ಎಂಬುದು ನ್ಯಾಯ ಸಮ್ಮತ. ಆರೋಪ ಒಳಗಾದ ವ್ಯಕ್ತಿ ಅಧಿಕಾರದಲ್ಲಿ ಇದ್ದರೆ ಆತ ದಾಖಲಗಳನ್ನು ನಾಶ ಪಡಿಸುವ ಸಾಧ್ಯತೆ ಇದ್ದೇ ಇರುತ್ತದೆ. ಜೊತೆಗೆ ಆರೋಪ ಮಾಡಿದವರ ಮೇಲೆ ಅಧಿಕಾರದ ಬಲ ಪ್ರಯೋಗವಾಗುವ ಸಾಧ್ಯತೆ ಇರುತ್ತದೆ. ಆಗ ನ್ಯಾಯ ಸಮ್ಮತ ವಿಚಾರಣೆ ನಡೆಯುವುದು ಸಾಧ್ಯವಿಲ್ಲ.
ಇದೆಲ್ಲ ನಮ್ಮ ಸ್ವಾಮೀಜಿಗಳಿಗೆ ಗೊತ್ತಿಲ್ಲವೆ ? ಗೊತ್ತಿದೆ, ಆದರೆ ತಮ್ಮ ಸಮಾಜಕ್ಕೆ ಸೇರಿದ ಮುಖ್ಯಮಂತ್ರಿ ಎಂಬುದೇ ಅವರ ಈ ನಿಲುಮೆಗೆ ಕಾರಣ.
ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿ ಎಂದು ನಾವೆಲ್ಲ ನಂಬಿದ್ದೆವು. ಕರ್ನಾಟಕದ ಲಿಂಗಾಯಿತರಿಗೆ ಮಾತ್ರ ಅವರು ಮುಖ್ಯಮಂತ್ರಿಯಲ್ಲ. ಆದರೆ ಯಡಿಯೂರಪ್ಪ ಅವರ ಪರವಾಗಿ ಧರಣಿ ಸತ್ಯಾಗ್ರಹ ನಡೆಸಿದ ಮಠಾಧೀಶರು ನಮ್ಮೆಲ್ಲರ, ಕರ್ನಾಟಕದ ಐದು ಕೋಟಿ ಕನ್ನಡಿಗರ ಮುಖ್ಯಮಂತ್ರಿಯನ್ನು ಬರೇ ಲಿಂಗಾಯಿತರ ಮುಖ್ಯಮಂತ್ರಿಯನ್ನಾಗಿ ಮಾಡಿಬಿಟ್ಟರು. ಕರ್ನಾಟಕದಲ್ಲಿ ೧೧ ನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ ವಿಶ್ವ ಮಾನ್ಯ ಬಸವಣ್ಣವರನ್ನು ಲಿಂಗಾಯಿತರಿಗೆ ಸೀಮಿತಗೊಳಿಸಿದವರಿಗೆ ಇದು ದೊಡ್ದ ವಿಚಾರ ಆಗಿರಲಿಕ್ಕಿಲ್ಲ. ಆದರೆ ಕರ್ನಾಟಕದ ಪ್ರಜ್ನಾವಂತರು ಇದನ್ನೆಲ್ಲ ವಿರೋಧಿಸಲೇ ಬೇಕು. ಯಾವುದೇ ಒಬ್ಬ ಮುಖ್ಯಮಂತ್ರಿ ಒಂದು ಜಾತಿಯನ್ನು ಪ್ರತಿನಿಧಿಸುವುದು ಜನತಂತ್ರ ವ್ಯವಸ್ಥೆಯಲ್ಲಿ ಅಪಾಯಕಾರಿ. ಇಂಥಹ ಅಪಾಯಕ್ಕೆ ಕರ್ನಾಟಕವನ್ನು ಒಡ್ದುತ್ತಿರುವುವರು ಮಠಾಧೀಶರು.
ಇದೆಲ್ಲ ಇವರಿಗೆ ಬೇಕಾಗಿತ್ತೆ ?
ಉಡುಪಿಯ ವಿಶ್ವೇಶ ತೀರ್ಥ ಸ್ವಾಮೀಜಿ ಯಡಿಯೂರಪ್ಪ ಅವರ ಪರವಾಗಿ ವಕಾಲತ್ತು ಒಹಿಸುತ್ತಾರೆ. ಅಡ್ವಾಣಿ, ಗಡ್ಕರಿ ಅವರಿಗೆ ಫೋನ್ ಮಾಡಿ ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪ ಅವರನ್ನು ಮುಂದುವರಿಸಿ ಎನ್ನುತ್ತಾರೆ. ನೂರರ ಗಡಿ ದಾಟಿರುವ ಸಿದ್ದಗಂಗಾ ಸ್ವಾಮೀಜಿ ಯಡಿಯೂರಪ್ಪ ಅವರ ಸರ್ಕಾರ ಅತ್ಯುತ್ತಮ ಸರ್ಕಾರ ಎಂದು ಸರ್ಟಿಫಿಕೇಟ್ ನೀಡುತ್ತಾರೆ. ದಯಾನಂದ ಸ್ವಾಮಿಯವರಂತಹ ಸಣ್ಣ ಪುಟ್ಟ ಸ್ವಾಮಿಗಳು ಪುರ ಭವನದ ಎದುರು ಸುಡು ಬಿಸಿಲಿನಲ್ಲಿ ಧರಣಿ ಕುಳಿತುಕೊಳ್ಳುತ್ತಾರೆ. ಟೀವಿ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡ ಕೊಳದ ಮಠದ ಶಾಂತವೀರ ಸ್ವಾಮಿಜಿ ಮಠಾಧೀಶರನ್ನು ಎಮ್ ಎಲ್ ಸಿ ಮಾಡಿದರೆ ಸಮಾಜದ ಎಲ್ಲ ಸಮಸ್ಯೆಗಳು ಬಗೆ ಹರಿಯುತ್ತವೆ ಎಂದು ಅಪ್ಪಣೆ ಕೊಡುತ್ತಾರೆ ! ಇವರಿಗೆಲ್ಲ ಇಂಥಹ ಉಮೇದಿ ಬರಲು ಏನು ಕಾರಣ ? ಯಡಿಯೂರಪ್ಪ ಇವರ ಕಾಲಿಗೆ ಬೀಳುತ್ತಾರೆ ಎಂಬುದೇ ? ಅಥವಾ ಸಾರ್ವಜನಿಕ ಹಣವನ್ನು ಮಠಗಳಿಗೆ ಬೇಕಾಬಿಟ್ಟಿ ಹಂಚುತ್ತಾರೆ ಎಂಬುದೇ ?
ಮಠಾಧೀಶರಿಗೆ ಅವರದೇ ಆದ ಕರ್ತವ್ಯಗಳಿವೆ. ಭ್ರಾಹ್ಮಣ ಮಠಾಧೀಶರು ಲೌಕಿಕದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಲಿಂಗಾಯಿತ ಮಠಾಧೀಶರು ಸಾಮಾಜಿಕ ಕ್ರಾಂತಿಯ ಬಗ್ಗೆ ಚಿಂತನೆ ಮಾಡಬೇಕು.ಸಮಾಜದಲ್ಲಿ ಧರ್ಮ ಭ್ರಷ್ತವಾಗದಂತೆ ನೋಡಿಕೊಳ್ಳಬೇಕು. ತಮ್ಮ ತಮ್ಮ ಶಿಷ್ಯರಿಗೆ ಧರ್ಮ ಮಾರ್ಗದಲ್ಲಿ ನಡೆಯುವಂತೆ ಉಪದೇಶ ಮಾಡಬೇಕು. ಪರ ಸ್ಥ್ರೀಯರನ್ನು ಕಣ್ಣೆತ್ತಿ ನೋಡದಂತೆ ಬುದ್ದಿ ಮಾತು ಹೇಳಬೇಕು.ಹಣ ಹೊಡೆಯದಂತೆ ನ್ಯಾಯವಾಗಿ ನಡೆದುಕೊಳ್ಳುವಂತೆ ಉಪದೇಶ ಮಾಡುವ ಹೊಣೆಗಾರಿಕೆ ಈ ಮಠಾಧೀಶರಿಗೆ ಇದೆ. ಅದನ್ನು ಬಿಟ್ಟ ಬಹಿರಂಗವಾಗಿ ರಾಜಕೀಯ ಮಾಡಲು ಪ್ರಾರಂಭಿಸಿದರೆ ವೃತ್ತಿ ನಿರತ ರಾಜಕಾರಣಿಗಳಿಗೆ ಏನು ಕೆಲಸ ?
ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವನ್ನು ವಿರೋಧಿಸುವುದು ಮಠಾಧೀಶರ ಕರ್ತವ್ಯ. ಈ ಮಠಾಧೀಶರು ತಮ್ಮ ಶಿಷ್ಯರು ಹಾದಿ ತಪ್ಪಿದರೆ ಮಾತನಾಡುವುದಿಲ್ಲ. ರೇಣುಕಾಚಾರ್ಯ ಬಹಿರಂಗವಾಗಿ ಕಿಸ್ ನೀಡಿದ್ದು ಈ ಸ್ವಾಮಿಗಳಿಗೆ ಕಾಣುವಿದಿಲ್ಲ. ಯಡಿಯೂರಪ್ಪ ಗ್ರಹಸ್ಥರಾಗಿದ್ದವರು ಗ್ರಹಸ್ಥಶ್ರಮ ಧರ್ಮವನ್ನು ಉಲ್ಲಂಘಿಸಿದ್ದು ಇವರಿಗೆ ಮಹತ್ವದ್ದಾಗುವುದಿಲ್ಲ. ಇದು ಅವರಿಗೆ ಕಾಣಬೇಕಾಗಿತ್ತು. ಯಾಕೆಂದರೆ ಅದೇ ಅವರ ಪೋರ್ಟ್ ಫೋಲಿಯೋ. ಆದರೆ ತಮ್ಮ ಖಾತೆಯ ನಿರ್ವಹಣೆ ಮಾಡಬೇಕಾದವರು ಬೇರೆ ಖಾತೆಗಳಿಗೆ ಕೈ ಹಾಕತೊಡಗಿದ್ದಾರೆ.
ಕೆಲವೊಮ್ಮೆ ಈ ಮಠಾಧೀಶರನ್ನು ನೋಡಿದರೆ ಸಹಾನುಭೂತಿ ಉಂಟಾಗುತ್ತದೆ. ಅವರು ಏನನ್ನೂ ಬಹಿರಂಗವಾಗಿ ಮಾಡುವಂತಿಲ್ಲ. ಎಲ್ಲವನ್ನೂ ಕದ್ದು ಮುಚ್ಚಿ ಮಾಡಬೇಕು. ಹೊರಗಡೆಯ ಇಮೇಜ್ ಅನ್ನೂ ಉಳಿಸುಕೊಳ್ಳಬೇಕು, ಆಸೆಯನ್ನು ತೀರಿಸಿಕೊಳ್ಳಬೇಕು. ಜೊತೆಗೆ ವೇಷಭೂಷಣ. ಮಳೆಯಾಗಲಿ ಬಿಸಿಲಾಗಲಿ, ವೇಷ ಭೂಷಣವನ್ನು ಬದಲಿಸುವಂತಿಲ್ಲ. ಸಂಸ್ಕೃತ ಶ್ಲೋಕ ಮತ್ತು ವಚನಗಳನ್ನು ಬಾಯಿ ಪಾಠ ಮಾಡಿಕೊಂಡಿರಬೇಕು,. ಜನರ ಎದುರು ಭಾಷಣ ಮಾಡುವಾಗ ಬಾಯಿ ಪಾಠ ಮಾಡಿದ್ದನ್ನು ತಪ್ಪಿಲ್ಲದೇ ಹೇಳಬೇಕು. ಇದೆಲ್ಲ ಕಷ್ಟದ ಕೆಲಸವೇ...!
ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಭ್ರಷ್ಟರಾಗಿದ್ದು ಮಾತ್ರವಲ್ಲ, ಪತ್ರಿಕೋದ್ಯಮಿಗಳನ್ನು ಭ್ರಷ್ಟರನ್ನಾಗಿ ಮಾಡಿದರು. ಅಧಿಕಾರಶಾಹಿಯನ್ನು ಭ್ರಷ್ಟರನ್ನಾಗಿಸಿದರು. ಎಲ್ಲೆಡೆ ಲಂಚ ಪ್ರಪಂಚವನ್ನು ಸೃಷ್ಟಿಸಿದರು. ಈಗ ಮಠಾದೀಶರನ್ನು ಭ್ರಷ್ಟ್ರನ್ನಾಗಿ ಮಾಡಿ ಕೈತೊಳೆದುಕೊಂಡರು. ಕೊನೆಗೆ ಎಲ್ಲರೂ ಭ್ರಷ್ಟರೆ, ಅದರಂತೆ ನಾನೂ ಭ್ರಷ್ಟನಾಗಿರಬಹುದು ಎಂದು ಹೇಳಿಕೊಂಡು ಓಡಾಡತೊಡಗಿದರು. ಇದಾದ ಮೇಲೆ ಕೊನೆಯದಾಗಿ ಬಿಜೆಪಿಯ ವರಿಷ್ಠರನ್ನು ಭ್ರಷ್ಟರನ್ನಾಗಿ ಮಾಡಲು ಹೊರಟಿದ್ದಾರೆ. ಅಡ್ವಾಣಿಯಂಥವರ ಕೈ ಬಾಯಿಯನ್ನು ಮುಚ್ಚಿಸಲು ಯತ್ನ ನಡೆಸುತ್ತಿದ್ದಾರೆ.
ಇಂಥವರು ನಮಗೆ ಬೇಕೆ ?
ಧರ್ಮದ ಹೆಸರಿನಲ್ಲಿ ಜಾತಿ ಮತ್ತು ಪಕ್ಷ ರಾಜಕಾರಣ ಮಾಡುತ್ತಿರುವ ಮಠಾದೀಶರು ಈ ಬಗ್ಗೆ ಯೋಚಿಸಬೇಕು. ದೇಶದ ಸಾಮಾನ್ಯ ಜನರೇ ಮಠಾಧೀಶರಿಗೆ ಧರ್ಮ ಮತ್ತು ನೀತಿಬೋಧನೆ ಮಾಡಬೇಕಾದ ಸ್ಥಿತಿಯನ್ನು ನಿರ್ಮಿಸಬಾರದು.
ಕೊನೆಯ ಮಾತು: ಸ್ವಾಮಿಗಳೇ, ನಿಮಗೆ ರಾಜಕೀಯ ಮಾಡಬೇಕೆಂದಿದ್ದರೆ, ಕಾವಿಯನ್ನು ಕಳಚಿ ಬನ್ನಿ. ಮಠವನ್ನು ತೊರೆದು ಬನ್ನಿ. ರಾಜಕೀಯ ಅಖಾಡಕ್ಕೆ ನೇರವಾಗಿ ಇಳಿದು ಬಿಡಿ. ಸ್ವಾಮೀಜಿಯಾದವರು ಬರೀ ಸ್ವಾಮಿಯಾಗಿ (ಕುಮಾರಸ್ವಾಮಿಯಂತೆ, ಪುಟ್ಟಸ್ವಾಮಿಯಂತೆ !) ನಾವು ನೀವು ಒಂದು ಪೆಗ್ ಹಾಕಿ ಯಡೀಯೂರಪ್ಪ ಇರಬೇಕೆ ಇರಬಾರದೆ ಎಂಬ ಬಗ್ಗೆ ಚರ್ಚೆ ಮಾಡೋಣ. ಓಕೆ ನಾ ?

Friday, November 19, 2010

ಹೋಗಿ ಬನ್ನಿ ಯಡಿಯೂರಪ್ಪ... !

ಕರ್ನಾಟಕದ ರಾಜಕಾರಣದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ, ಹೊಲಸು ಎಂದು ಹೇಳಿ ಬಿಡಬಹುದು. ಇದು ಕೇವಲ ಹೊಲಸು ಮಾತ್ರವಲ್ಲ ರಾಜಕಾರಣ ಕೊಳೆತು ನಾರುತ್ತಿದೆ. ಅಧಿಕಾರದಲ್ಲಿ ಇರುವವರು ಎಷ್ಟು ನೀಚರಾಗಬಹುದು ಎಂಬುದನ್ನು ಇವತ್ತಿನ ರಾಜಕಾರಣ ಬಯಲು ಮಾಡಿದೆ. ಒಬ್ಬ ರಾಜಕಾರಣಿಗೆ ಕನಿಷ್ಟ ನೈತಿಕತೆ ಇರದಿದ್ದರೆ ಆಗುವ ಅನಾಹುತ.
ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡುತ್ತಿರುವುದನ್ನು ಗಮನಿಸಿದರೆ ಹೇಸಿಗೆಯಾಗುತ್ತದೆ. ಹೇಗಾದರೂ ಮಾಡಿ ನನ್ನನ್ನು ಅಧಿಕಾರದಲ್ಲಿ ಉಳಿಸಿ ಎಂದು ಅವರು ಕಂಡ ಕಂಡವರನ್ನೆಲ್ಲ ಗೋಗರೆಯುತ್ತಿದ್ದಾರೆ. ನಾನು ತಪ್ಪು ಮಾಡಿದ್ದೇನೆ, ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಶಿಕ್ಷಕರ ಮುಂದೆ ನಿಂತು ಗೋಗರೆಯುವ ಶಾಲಾ ಬಾಲಕನಂತೆ ಅವರು ಕಾಣುತ್ತಾರೆ. ಅವರೀಗ ಪಕ್ಷದ ಹೈಕಮಾಂದ್ ಮುಂದೆ ಕೈಯೊಡ್ಡಿ ಚಡಿ ಏಟು ನೀಡಿ ಎಂದು ಮನವಿ ಮಾಡುತ್ತಿದ್ದಾರೆ.
ಒಬ್ಬ ವ್ಯಕ್ತಿ ನೈತಿಕವಾಗಿ ಅಧಃಪತನಿಕ್ಕೆ ಇಳಿದರೆ ಆಗುವುದು ಹೀಗೆ. ತಮ್ಮ ಕುಟುಂಬದ ಸದಸ್ಯರಿಗೆಲ್ಲ ಭೂ ದಾನ ಮಾಡಿ ಅದು ತಪ್ಪಲ್ಲ ಎಂದು ಸಮರ್ಥಿಸಿಕೊಳ್ಳುತ್ತಿರುವ ಅವರ ಮುಖ ನೋಡುವುದಕ್ಕೂ ಭೇಸರವಾಗುತ್ತದೆ. ಗ್ರಾಮಾಂತರ ಪ್ರದೇಶದಿಂದ ಬಂದು, ಹೋರಾಟದ ಮೂಲಕವೇ ಅಧಿಕಾರ ಹಿಡಿದ ನಾಯಕನೊಬ್ಬನ ದುರಂತ ಇದು. ಇದನ್ನು ನೋಡಿದಾಗ ಅವರಿಗೆ ಬೈಯುವುದಕ್ಕೂ ಮನಸ್ಸಾಗುವುದಿಲ್ಲ.
ಯಡಿಯೂರಪ್ಪ ತಪ್ಪಿದ್ದೆಲ್ಲಿ ಎಂದು ಹುಡುಕಲು ಹೋರಟರೆ, ಅವರು ತಪ್ಪದಿರುವುದೆಲ್ಲಿ ಎಂದು ಹುಡುಕುವುದೇ ಸುಲಭ ಎಂದು ಅನ್ನಿಸಿಬಿಡುತ್ತದೆ. ಯಾಕೆಂದರೆ ಅವರ ತಪ್ಪು ಒಂದೆರಡಲ್ಲ, ಮಹಾಭಾರತದ ಕೃಷ್ಟ ಶಿಶುಪಾಲನ ನೂರು ತಪ್ಪಿಗಾಗಿ ಕಾಯುತ್ತಿದ್ದನಂತೆ. ಇಲ್ಲಿ ನಮ್ಮ ಯಡಿಯೂರಪ್ಪ ಸಾವಿರಾರು ತಪ್ಪುಗಳನ್ನು ಮಾಡಿ, ಇವೆಲ್ಲ ಏನು ಅಲ್ಲ ಎಂದು ಮುಖ ಎತ್ತಿಕೊಂಡು ಓಡಾಡುತ್ತಿರುವುದೇ ಒಂದು ಸೋಜಿಗ.
ಯಡಿಯೂರಪ್ಪ ಅವರ ವ್ಯಕ್ತಿತ್ವದಲ್ಲಿ ಇರುವ ದೋಷವೇ ಇದಕ್ಕೆಲ್ಲ ಕಾರಣ. ಅವರಿಗೆ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಒಂದು ಪ್ರಮುಖ ವಿಚಾರ ಎಂದು ಅನ್ನಿಸುವುದೇ ಇಲ್ಲ. ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕ ನಡವಳಿಕೆಯ ಮಹತ್ವ ಅವರನ್ನು ತಟ್ಟುವುದಿಲ್ಲ. ಯಾಕೆಂದರೆ ಶಿಕಾರಿಪುರದಿಂದ ರಾಜಕಾರಣ ಮಾಡುತ್ತ ಬಂದ ಅವರು ವಿಧಾನಸೌಧದ ಮೆಟ್ಟಿಲು ಏರುವ ಹೊತ್ತಿಗೆ ಆರ್ಥಿಕವಾಗಿ ಸಬಲರಾಗಿ ಬಿಟ್ಟಿದ್ದರು. ಪ್ರತಿ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದಾಗಲೇ ಶಿವಮೊಗ್ಗ ಮತ್ತು ಶಿಕಾರಿಪುರದಲ್ಲಿ ಅವರ ಆಸ್ತಿ ಹಿಗ್ಗುತ್ತಲೇ ಇತ್ತು. ಅದು ಮುಖ್ಯಮಂತ್ರಿಯಾದ ಮೇಲೆ ಇನ್ನಷ್ಟು ಹೆಚ್ಚಿತು. ಅವರಿಗೆ ಇದೆಲ್ಲ ತಪ್ಪು ಎಂದು ಎಂದೂ ಅನ್ನಿಸಲೇ ಇಲ್ಲ. ತಮ್ಮ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ವಿರುದ್ಧ ಮಾತನಾಡುವವರೆಲ್ಲ ತಮ್ಮ ಷಡ್ಯಂತ್ರ ನಡೆಸುವವರು ಎಂದು ಭಾವಿಸತೊಡಗಿದರು. ಈಗಲೂ ಅಷ್ಟೇ.
ತಾವು ರಾಜ್ಯದ ಅಧಿಕಾರ ಹಿಡಿಯಲು ತಾವು ರೈತ ಪರವಾಗಿ ನಡೆಸಿದ ಹೋರಾಟವೇ ಕಾರಣ ಎಂಬುದನ್ನು ಅವರು ಮರೆತು ಬಿಟ್ಟರು. ಹಣ ಮತ್ತು ಜಾತಿ ಬೆಂಬಲ ತಮ್ಮನ್ನು ಸಾಯುವವರೆಗೆ ಅಧಿಕಾರದಲ್ಲಿ ಇಡುತ್ತವೆ ಎಂಬ ಭ್ರಮೆಗೆ ಒಳಗಾದರು. ಇದಕ್ಕಾಗಿ ತಮ್ಮ ಜಾತಿಯ ಸ್ವಾಮಿಗಳಿಗೆ ಕಂಡ ಕಂಡಲ್ಲಿ ಕಾಲಿಗೆ ಬೀಳತೊಡಗಿದರು. ಮಠಗಳಿಗೆ ಸಾರ್ವಜನಿಕ ಹಣವನ್ನು ನೀಡಿ ಅವರ ಆಶೀರ್ವಾದ ಪಡೆಯತೊಡಗಿದರು. ಇದೆಲ್ಲ ತಪ್ಪು ಎಂದು ಯಾವೊಬ್ಬ ಸ್ವಾಮಿಯೂ ಅವರಿಗೆ ಹೇಳಲಿಲ್ಲ. ಇನ್ನೊಂದೆಡೆ ಹಣ ಮತ್ತು ಆಸ್ತಿ ಸಂಗ್ರಹದಲ್ಲಿ ತೊಡಗಿದರು. ತಾವು ಇನ್ನೂ ಹಲವು ವರ್ಷಗಳ ಕಾಲ ಅಧಿಕಾರ ನಡೆಸುವ ಕನಸು ಕಾಣತೊಡಗಿದರು.
ತಮ್ಮ ವೈಯಕ್ತಿಕ ಬದುಕಿನ ಸಮಸ್ಯೆಗಳನ್ನು, ತಮ್ಮ ವಿವಾಹೇತರ ಸಂಬಂಧದ ಸಮಸ್ಯೆಯನ್ನು ಅವರು ಮುಚ್ಚಿಟ್ಟುಕೊಳ್ಲಬೇಕಾಗಿತ್ತು ತಮ್ಮ ಕುಟುಂಬದಿಂದ ಮಕ್ಕಳಿಂದ ಪ್ರತಿರೋಧ ಉಂಟಾಗಬಾರದು ಎಂದು ಮಕ್ಕಳಿಗೆ ಆಸ್ತಿ ಮಾಡಿಕೊಳ್ಳಲಿ ರೆಡ್ ಕಾರ್ಪೆಟ್ ಹಾಸಿದರು. ಯಾವುದೇ ರಾಜಕೀಯ ಸಾಮಾಜಿಕ ಬದುಕಿನ ಗಂಧ ಗಾಳಿ ಇಲ್ಲದ ಇಬ್ಬರು ಪುತ್ರ ರತ್ನರು ಭೂ ಸ್ವಾಹಾ ಯಜ್ನವನ್ನು ನಡೆಸತೊಡಗಿದರು. ತಮ್ಮ ವೈಯಕ್ತಿಕ ದೌರ್ಬಲ್ಯವನ್ನು ಮುಚ್ಚಿಟ್ಟುಕೊಳ್ಳುವುದಕ್ಕಾಗಿ ಇದನ್ನೆಲ್ಲ ನೋಡಿದರೆ ನೋಡದಂತೆ ಯಡಿಯೂರಪ್ಪ ಕಣ್ನು ಮುಚ್ಚಿ ಕುಳಿತರು. ಹಣ ಮತ್ತು ಅಧಿಕಾರ ಯಡೀಯೂರಪ್ಪನವರ ಒಳಗೆ ಇದ್ದ ಹೋರಾಟಗಾರನನ್ನು ಆಗಲೇ ಹತ್ಯೆ ಮಾಡಿಯಾಗಿತ್ತು. ಅಧಿಕಾರ ಅಮಲಾಗಿ ಅವರ ವ್ಯಕ್ತಿತ್ವವನ್ನು ಆಗಲೇ ಆವರಿಸಿಕೊಂಡು ಬಿಟ್ಟಿತ್ತು.
ಈಗ ಪಕ್ಷದ ವರಿಷ್ಟರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನಿಡುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿ ಆಗಿದೆ. ಆದರೆ ಅವರು ಅಧಿಕಾರ ಬಿಡುವುದಿಲ್ಲ ಎಂದು ಹಠ ಮಾಡತೊಡಗಿದ್ದಾರೆ. ಪಕ್ಷದ ವರಿಷ್ಟರಿಗೆ ಷರತ್ತುಗಳನ್ನು ವಿಧಿಸತೊಡಗಿದ್ದಾರೆ. ಹಾಗೆ ನಾನು ಮುಖ್ಯಮಂತ್ರಿಯಾಗಿರಬೇಕು, ರಾಜ್ಯದ ಅಭಿವೃದ್ಧಿ ಮಾಡಬೇಕು ಎಂದು ಅಳುತ್ತಾರೆ. ಅವರ ಈ ಹತಾಶ ಹೇಳಿಕೆಗಳನ್ನು ಗಮನಿಸಿದಾಗ ಈ ದುರಂತ ನಾಯಕ ತಲುಪಿರುವ ಸ್ಥಿತಿಯ ಬಗ್ಗೆ ಬೇಸರವಾಗುತ್ತದೆ. ಅವರು ಮೊದಲ ಬಾರಿ ಮಾಧ್ಯಮದ ಎದುರು ಅತ್ತಾಗ ಇದು ಭಾವೋದ್ವೇಗದ ಪರಮಾವಧಿ ಎಂದು ಅನ್ನಿಸಿತ್ತು. ಆದರೆ ಈಗ ಅವರಿಗೆ ಅಳುವುದೇ ಚಟವಾಗಿ ಬಿಟ್ಟಿದೆ. ಏನೇ ಆದರೂ ಅವರು ಅಳುವುದನ್ನು ನೋಡಿದರೆ ಅವರಿಗೆ ಯಾವುದೋ ರೀತಿಯ ಸಮಸ್ಯೆ ಇರಬೇಕು ಎಂದು ಅನ್ನಿಸುತ್ತದೆ.
ಯಡಿಯೂರಪ್ಪ ಹುಂಬ. ಆದರೆ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಬದ್ಧತೆಯನ್ನು ಪ್ರಶ್ನಿಸುವುದು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆಯಾಗಿತ್ತು. ಆದರೆ ನನ್ನ ನಂಬಿಕೆ ಸುಳ್ಳು ಎಂದು ಈಗ ಅನ್ನಿಸತೊಡಗಿದೆ. ಅವರಿಗೆ ರಾಜ್ಯದ ಅಭಿವೃದ್ಧಿ ಎಂದರೆ ತಮ್ಮ ಮತ್ತು ತಮ್ಮ ಕುಟುಂಬದ ಅಭಿವೃದ್ಧಿ ಮಾತ್ರ.
ರಾಜಕಾರಣದವನ್ನು ಅರ್ಥಮಾಡಿಕೊಳ್ಳದವರು, ನೈತಿಕ ಮತ್ತು ಸಾಮಾಜಿಕ ಬದ್ಧತೆ ಇಲ್ಲದವರು ಅಧಿಕಾರದ ಗದ್ದುಗೆ ಹಿಡಿಯುವುದರ ಸಮಸ್ಯೆ ಇದು. ಒಬ್ಬ ರಾಜಕಾರಣಿ, ಒಬ್ಬ ಮುಖ್ಯಮಂತ್ರಿ ಹಾಗೂ ಸಚಿವರು ಎಂದರೆ ಅವರು ಸಮಾಜದ ದರ್ಮದರ್ಶಿಗಳು. ಅವರು ಸಾರ್ವಜನಿಕ ಹಣವನ್ನು ಜತನದಿಂದ ಕಾಪಾಡಬೇಕಾಗುತ್ತದೆ. ಅವರಿಗೆಲ್ಲ ಉತ್ತರದಾಯಿತ್ವ ಎನ್ನುವುದು ಇರುತ್ತದೆ. ಇವರು ನಿರ್ವಹಣೆ ಮಾಡುವುದು ಸಾರ್ವಜನಿಕರ ಹಣವನ್ನು. ಈ ಅರಿವು ಪ್ರತಿಯೊಬ್ಬ ರಾಜಕಾರಣಿಗೂ ಇರಬೇಕು. ಇದನ್ನು ಅರ್ಥ ಮಾಡಿಕೊಳ್ಳದವರು ರಾಜಕಾರಣಿಯಾಗುವುದಕ್ಕೆ ಅರ್ಹರಲ್ಲ.
ಯಡಿಯೂರಪ್ಪ ಇದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಅವರಿಗೆ ರಾಜಕೀಯ ಬದುಕಿನಲ್ಲಿ ಇರಬೇಕಾದ ಪ್ರಾಮಾಣಿಕತೆ ಇರಲಿಲ. ಅವರು ಪ್ರಾಮಾಣಿಕತೆ ಮತ್ತು ಮೌಲಿಕ ರಾಜಕಾರಣವನ್ನು ನಂಬುವುದಕ್ಕೆ ಬದಲಾಗಿ ಕಾವಿ ಧರಿಸಿದ ಸ್ವಾಮಿಗಳನ್ನು ನಂಬಿದರು. ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರೆ ದೇವರು ತನ್ನ ಕೈ ಬಿಡುವುದಿಲ್ಲ ಎಂದು ನಂಬಿದರು. ಹಣೆಯ ಮೇಲೆ ಕುಂಕುಮದ ಬಟ್ಟು ಇಟ್ಟುಕೊಂಡರೆ, ತಮ್ಮ ಹಣೆ ಬರೆಹ ಚೆನ್ನಾಗಿರುತ್ತದೆ ಎಂದುಕೊಂಡರು. ಆದರೆ ಆ ದೇವರು ಎನ್ನುವವನಿದ್ದರೆ ಆತ ಕೇವಲ ಯಡಿಯೂರಪ್ಪ, ರಾಘವೇಂದ್ರ, ವಿಜೇಂದ್ರ, ಶೋಭಾ ಕರಂದ್ಲಾಜೆ ಎಂಬ ಅವನ ಆಪ್ತ ವರ್ಗದ ರಕ್ಷಣೆಗಾಗಿ ಇದ್ದವನಲ್ಲ. ಅವನು ಈ ಸಮಾಜದಲ್ಲಿ ಇರುವ ಎಲ್ಲರನ್ನೂ ರಕ್ಷಿಸುವಂತಾದರೆ ಮಾತ್ರ ಆತ ದೇವರಾಗಿ ಉಳಿಯುತ್ತಾನೆ. ಆತ ಯಡಿಯೂರಪ್ಪ ಅವರ ಬಾಡಿ ಗಾರ್ಡ್ ಆಗಿ ಮಾತ್ರ ಉಳಿಯಲು ಸಾಧ್ಯವಿಲ್ಲ.
ಈಗ ಯಡಿಯೂರಪ್ಪ ಅವರಿಗೆ ನಾವೆಲ್ಲ ಸೇರಿ ಬೀಳ್ಕೊಡುಗೆ ನೀಡಬೇಕಾಗಿದೆ. ಅವರನ್ನು ಬೀಳ್ಕೊಡುವಾಗ ಕೆಲವೊಂದು ಒಳ್ಳೆಯ ಮಾತುಗಳನ್ನು ಹೇಳಬೇಕು. ಭಾರತೀಯ ಜನತಾ ಪಾರ್ಟಿಗೆ ಮಾಸ್ ಬೇಸ್ ನೀಡಿದವರು ಅವರು. ರೈತರನ್ನು ಸಂಘಟಿಸಿ ಅವರನ್ನು ಪಕ್ಷದ ತೆಕ್ಕೆಗೆ ಎಳೆದು ತಂದವರು ಅವರು.
ಆದರೆ ರಾಜಕಾರಣದಲ್ಲಿ ಇಷ್ಟೇ ಸಾಕಾಗುವುದಿಲ್ಲ ಮಾಡಿದ ಒಳ್ಳೆಯ ಕೆಲಸಗಳು ಕೊನೆಯವರೆಗೂ ಕೈ ಹಿಡಿಯುವುದಿಲ್ಲ. ಇದು ಅವರಿಗೆ ಅರ್ಥವಾಗಲಿ.
ಹೋಗಿ ಬನ್ನಿ ಯಡಿಯೂರಪ್ಪ.

Thursday, November 18, 2010

ನಾನು ನನ್ನ ಜಿಲ್ಲೆಗೆ ಹೋಗಿದ್ದೆ.......

ಕಳೆದ ಎರಡು ಮೂರು ದಿನಗಳ ಕಾಲ ಉತ್ತರ ಕನ್ನಡಜಿಲ್ಲೆಯಲ್ಲಿದ್ದೆ. ಅದು ನನ್ನ ಜಿಲ್ಲೆ. ನಾನು ಹುಟ್ಟಿ ಬೆಳೆದ ಜಿಲ್ಲೆ. ಅಲ್ಲಿನ ಕಾಡು, ನದಿಗಳು ಗುಡ್ಡ ಬೆಟ್ಟಗಳು ಎಲ್ಲವೂ ನನ್ನವು ಎಂದು ಅನ್ನಿಸುತ್ತದೆ. ಬೆಂಗಳೂರು ಎಂಬ ಮಾಯಾನಗರಿ ನನ್ನನ್ನು ತಲ್ಲಣಗೊಳಿಸಿದಾಗ ಅಲ್ಲಿಗೆ ಓಡಿ ಹೋಗಬೇಕು ಎಂದು ಅನ್ನಿಸುತ್ತದೆ. ಇಷ್ಟು ವರ್ಷಗಳ ನಂತರವೂ ಬೆಂಗಳೂರು ನನ್ನದು ಎಂದು ಅನ್ನಿಸಿಲ್ಲ. ಹಾಗೆ ಊರು ಬಿಟ್ಟು ಮೂರು ದಶಕಗಳು ಕಳೆದರೂ ಉತ್ತರ ಕನ್ನಡ ಪರಕೀಯವಾಗಿಲ್ಲ.
ಈ ಬಾರಿ ನಾನು ಹೋಗಿದ್ದು ಪತ್ರಕರ್ತ ಗಂಗಾಧರ್ ಕೊಳಗಿಯ ಪುಸ್ತಕ ಬಿಡುಗಡೆಗಾಗಿ. ಆತ ಈಗ ಸಿದ್ಧಾಪುರದಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರನಾಗಿದ್ದಾನೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಆತನ ವಿಶೇಷ ಲೇಖನಗಳ ಸಂಗ್ರಹ ಸಮಯದ ನಿಜ ವನ್ನು ಹೊರತಂದಿದ್ದಾನೆ. ಅದನ್ನು ನಾನೇ ಬಿಡುಗಡೆ ಮಾದಬೇಕು ಎನ್ನುವುದು ಅವನ ಒತ್ತಾಸೆಯಾಗಿತ್ತು. ಹೀಗಾಗಿ ನಾನು ಉತ್ತರ ಕನ್ನಡಕ್ಕೆ ಹೋಗಿದ್ದು. ಆತನಿಗೆ ನನ್ನ ಮೇಲೆ ಎಷ್ಟು ಪ್ರೀತಿ ಎಂದರೆ ನನ್ನನ್ನು ಆತ ಪತ್ರಿಕೋದ್ಯಮದ ಗುರು ಎಂದು ಕರೆಯುತ್ತಾನೆ. ಆದರೆ ಗುರು ಪರಂಪರೆಯಲ್ಲಿ ಅಷ್ಟಾಗಿ ನಂಬಿಕೆ ನನ್ನಲ್ಲಿ ಇಲ್ಲದಿರುವುದರಿಂದ ಗುರು ಎಂದು ತಕ್ಷಣ ಏನೇನೋ ನೆನಪಾಗುತ್ತದೆ. ರಾಜಕಾರಣಿಗಳ ಭಟ್ಟಂಗಿಗಳಾದ ಗುರುಗಳು, ಕಾವಿಯ ಅಡಿಯಲ್ಲಿ ಕಾಮವನ್ನು ಸಲಹುವ ಗುರುಗಳು. ಆಧ್ಯಾತ್ಮವನ್ನು ಬಿಟ್ಟು ಆತ್ಮವನ್ನು ಮಾರಾಟಕ್ಕೆ ಇಟ್ಟುಕೊಂಡವರು ಎಲ್ಲರೂ ಕಣ್ಣ ಮುಂದೆ ಬರುತ್ತಾರೆ. ಆದರೆ ಯಾರೋ ಪ್ರೀತಿಯಿಂದ ನನ್ನ ಗುರುಗಳು ಎಂದು ಕರೆದರೆ ಅವರ ಮನಸ್ಸನ್ನು ನೋಯಿಸಲು ಮನಸ್ಸಾಗುವುದಿಲ್ಲ. ಹೀಗಾಗಿ ಗುರು ಪಟ್ಟವನ್ನು ಮೌನವಾಗಿ ಒಪ್ಪಿಕೊಳ್ಳಬೇಕಾಗುತ್ತದೆ.
ಅಲ್ಲಿ ನಡೆದಿದ್ದು ರಾಜ್ಯ ಮಟ್ಟದ ಪೌರಾಣಿಕ ನಾಟಕೋತ್ಸವ. ಈ ನಾಟಕೋತ್ಸವದಲ್ಲಿಯೇ ಗಂಗಾಧರನ ಪುಸ್ತಕ ಬಿಡುಗಡೆಯಾಗಿದ್ದು. ನನ್ನ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಶ್ರೀನಿವಾಸ್ ಜಿ ಕಪ್ಪಣ್ಣ. ಅಲ್ಲಿ ನಾನು ಏನು ಮಾತನಾಡಿದೆ ಎಂಬುದು ಅಷ್ಟು ಮುಖ್ಯವಲ್ಲ. ಇವತ್ತಿನ ಪತ್ರಿಕೋದ್ಯಮದ ಬಗ್ಗೆ, ಎಲ್ಲೆಡೆ ಭ್ರಷ್ಟತೆ ಆವರಿಸಿರುವ ಬಗ್ಗೆ ನಾನು ಕೆಲವು ಮಾತುಗಳನ್ನು ಹೇಳಿದೆ. ಆದರೆ ಅಲ್ಲಿ ನಾನು ಸಣ್ಣಿಂದ ನೋಡಿದ ಹಲವರು ಪ್ರೇಕ್ಷಕರಲ್ಲಿ ಕಾಣುತ್ತಿದ್ದರು. ಅಲ್ಲಿ ನನ್ನ ಅಪ್ಪ, ಅಮ್ಮ,ತಮ್ಮ, ನನ್ನ ಜೊತೆ ಓದಿದವರು, ಹಿರಿಯರು, ಸ್ಥಳೀಯ ಪತ್ರಕರ್ತರು ಎಲ್ಲರೂ ಇದ್ದರು. ಅವರೆಲ್ಲರನ್ನು ನೋದುವಾಗ ಅವರಲ್ಲಿ ನನ್ನ ಬಗ್ಗೆ ಇದ್ದ ಪ್ರೀತಿಯ ಬಗ್ಗೆ ಹೆಮ್ಮೆ ಅನ್ನಿಸುತ್ತಿತ್ತು.
ಕಾರ್ಯಕ್ರಮ ನಡೆದ ಶಂಕರ ಮಠದ ಧರ್ಮಾಧಿಕಾರಿ ವಿಜಯ್ ಹೆಗಡೆ ತಮ್ಮದೇ ಕಾರ್ಯಕ್ರಮ ಎನ್ನುವಂತೆ ನೋಡಿಕೊಂಡಿದ್ದರು. ವಿಜಯ ಹೆಗಡೆ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕುಟುಂಬದ ಸದಸ್ಯರು. ಅವರೆಂದೂ ರಾಜಕೀಯದ ಬೆನ್ನು ಬಿದ್ದವರಲ್ಲ. ಚಿಕ್ಕಪ್ಪ ರಾಮಕೃಷ್ಣ ಹೆಗಡೆಯವರ ಹೆಸರು ಹೇಳಿಕೊಂಡು ಬದುಕಲು ಯತ್ನ ನಡೆಸಿದವರಲ್ಲ. ಇಂದು ಸಿದ್ಧಾಪುರದ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವಾದ ಶಂಕರ ಮಠವನ್ನು ಕಟ್ಟಿ ಬೆಳೆಸಿದವರು ಅವರು.
ಅವರ ಜೊತೆ ನಾನು ಕಳೆದ ಒಂದೆರಡು ತಾಸು ಓಷೋ, ರವಿಶಂಕರ್, ಸ್ವಾಮಿ ರಾಮದೇವ್ ಹೀಗೆ, ಆಧ್ಯಾತ್ಮ, ಯೋಗದ ಬಗ್ಗೆ ಮಾತನಾಡಿದೆವು. ಸಿದ್ಧಾಪುರಕ್ಕೆ ಹೋಗುವುದಕ್ಕೂ ಮೊದಲು ನನ್ನ ಮನಸ್ಸಿನಲ್ಲಿದ್ದುದು ಉತ್ತರ ಕನ್ನಡ ಜಿಲ್ಲೆಗೆ ಏನಾದರೂ ಮಾಡಬೇಕು ಎಂಬ ಹಪಹಪಿಕೆ. ಈ ನನ್ನ ಜಿಲ್ಲೆ ನಮ್ಮ ಆಧುನಿಕ ಪರಿಭಾಷೆಯಲ್ಲಿ ಹೇಳುವಂತೆ ಅಭಿವೃದ್ಧಿಯಾಗಿಲ್ಲ. ಐಟಿ ಬಿಟಿ ಕಂಪೆನಿಗಳು, ನೈಟ್ ಕ್ಲಬ್ ಗಳು ಪಿಜ್ಜಾ ಭರ್ಗರ್ ಧಾಳಿ ಮಾಡಿಲ್ಲ. ಇಲ್ಲಿನ ಜನ ತಮಗೆ ದೊರಕಿದ್ದಕ್ಕೆ ಸಂತೋಷ ಪಡುತ್ತ ಬದುಕುವವರು. ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಜನರಂತೆ ಸಾಹಿಸಿಗರೂ ಅಲ್ಲ. ಆದರೆ ಇಲ್ಲಿ ಈಗಲೂ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶಗಳಿವೆ. ಪ್ರವಾಸೋದ್ಯಮ ಒಂದು ಕೈಗಾರಿಕೆಯಾಗಿ ಬೆಳೆದರೆ ಇಲ್ಲಿನ ಆರ್ಥಿಕತೆಯ ರೂಪವೇ ಬದಲಾಗಿ ಬಿಡುತ್ತದೆ. ಪಕ್ಕದ ಗೋವಾಕ್ಕೆ ಬರುವ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುವಂತಾದರೆ ಸಾಕು ಇಲ್ಲಿನ ಚಿತ್ರವೇ ಬದಲಾಗಿ ಹೋಗುತ್ತದೆ.
ನಾನು ಈ ಬಗ್ಗೆ ಸಿರ್ಸಿಯಲ್ಲಿ ಕೆಲವು ಸ್ನೇಹಿತರ ಜೊತೆ ಚರ್ಚೆ ನಡೆಸಿದೆ. ಬೆಂಗಳೂರಿನಲ್ಲಿ ಹಲವು ವರ್ಷ ಮಣ್ಣು ಹೊತ್ತು ಈಗ ಊರಿಗೆ ಹಿಂತಿರುಗಿರುವ ಶಶಿಧರ್ ಭಟ್ ಕೂಡ ಅವರಲ್ಲಿ ಒಬ್ಬರು. ಸುನಿಲ್ ಕುಮಾರ್ ದೇಸಾಯಿ ಅವರ ಜೊತೆ ಹಲವು ವರ್ಷಗಳ ಕಾಲ ಮಣ್ನು ಹೊತ್ತ ಅವರು ನನ್ನ ಹೆಸರನ್ನು ಇಟ್ಟುಕೊಂಡು ನನ್ನನ್ನೇ ಫಝೀತಿಗೆ ಸಿಕ್ಕಿಸಿದವರು. ಅವರು ಮಠ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಾಗೇ ಮಠ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಹೆಸರು ನನ್ನ ಹೆಸರು ಒಂದೇ ಆದ್ದರಿಂದ ಬೆಂಗಳೂರಿನಿಂದ ಹೊರಗೆ ಹೋದಾಗ ಹಲವರು ನಾನೇ ಅವರೆಂದು ಮಾತನಾಡಿಸಿದ ಹಲವು ಉದಾಹರಣೆಗಳೂ ಉಂಟು.
ಈ ಶಶಿಧರ್ ಭಟ್ ಊರಿನಲ್ಲಿ ಅಜ್ಜಿ ಮನೆ ಎಂಬ ಹೋಮ್ ಸ್ಟೇ ನಡೆಸುತ್ತಿದ್ದಾರೆ. ಹಾಗೆ ಸಚಿವ ವಿಶ್ವೇಶ್ವರ ಹೆಗಡೆ ಅವರ ಹತ್ತಿರದ ಸಂಬಂಧಿ ಸುಹಾಸ್ ಹೆಗಡೆ ಕೂಡ ಹೊಂ ಸ್ಟೇ ನಡೆಸುತ್ತಿದ್ದಾರೆ. ನಾವು ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದೆವು.ಶಶಿಧರ್ ಭಟ್ಟರ ಮನೆಯ ಹಿಂದೆ ಸೂರ್ಯಾಸ್ಥದ ಗುಡ್ಡದ ಮೇಲೆ ಕುಳಿತು ಮಾತನಾಡಿದೆವು. ಆಗ ನಮ್ಮ ಮನಸ್ಸಿನಲ್ಲಿ ಬಂದ ಆಲೋಚನೆಗಳು ಹಲವು. ಅದನ್ನೆಲ್ಲ ಕಾರ್ಯ ರೂಪಕ್ಕೆ ಇಳಿಸಬೇಕಾಗಿದೆ. ಅದಕ್ಕಾಗಿ ಕಾರ್ಯ ಯೋಜನೆಯನ್ನು ರೂಪಿಸಬೇಕಾಗಿದೆ, ನಾನು ಕಾರ್ಯ ಯೋಜನೆಯನ್ನು ರೂಪಿಸಿ ಕೋದುವುದಾಗಿ ಅವರಿಗೆ ಹೇಳಿದ್ದೇನೆ. ಇನ್ನೊಂದೆರಡು ದಿನಗಳಲ್ಲಿ ನಾನು ಈ ಕೆಲಸ ಮಾಡಬೇಕಾಗಿದೆ.
ನನ್ನ ಉತ್ತರ ಕನ್ನಡ ಜಿಲ್ಲೆ ಮೊದಲಿನಂತಿಲ್ಲ. ಕಾಡು ಕಡಿಮೆಯಾಗಿದೆ. ಮಳೆ ಮನಸ್ಸಿಗೆ ಬಂದಾಗ ಬರುತ್ತದೆ. ಅಡಿಕೆ ಬೆಲೆಯನ್ನು ನಂಬಿಕೊಳ್ಳುವಂತಿಲ್ಲ. ಆದರೂ ಇಲ್ಲಿನ ಜನ ಯಕ್ಷಗಾನ, ತಾಳ ಮದ್ದಲೆ, ಸಂಗೀತ ಕಚೇರಿಗಳ ನಡುವೆ ಸಂತೃಪ್ತರಾಗಿಯೇ ಬದುಕುತ್ತಿದ್ದಾರೆ. ಇದೇ ಪರಿಸರ, ಇದೇ ಯಕ್ಷಗಾನ, ಸಂಗೀತ ಕಚೇರಿಗಳು ನನ್ನಂಥವನನ್ನು ಬೆಳೆಸಿವೆ. ನಾನು ಅಲ್ಲಿ ಹೇಳಿದೆ;
ನಗೆ ಇಂದು ಸ್ವಲ್ಪ ಮಾತನಾಡಲು ಬರೆಯಲು ಬರುತ್ತಿದ್ದರೆ, ಟೀವಿಯಲ್ಲಿ ಕಾರ್ಯಕ್ರಮ ನಡೆಸಲು, ಧಾರಾವಾಹಿಗಳನ್ನು ನಿರ್ಮಿಸಲು ಸಾಧ್ಯವಾಗಿದ್ದರೆ ಅದಕ್ಕೆ ಕಾರಣ ನನ್ನ ಜಿಲ್ಲೆ ಮತ್ತು ಅಲ್ಲಿನ ಪರಿಸರ. ಕಾಡಿನ ಮಧ್ಯೆ ಇದ್ದರೂ ಮಾತನಾಡಲು ಕಲಿಸಿದ್ದೇ ಈ ಜಿಲ್ಲೆ. ನಾನು ಈ ಜಿಲ್ಲೆಗೆ ಇಲ್ಲಿನ ಪರಿಸರಕ್ಕೆ ಇಲ್ಲಿನ ಜನರಿಗೆ ಹೇಗೆ ತಾನೇ ಕೃತಜ್ನತೆ ಸಲ್ಲಿಸಲು ಸಾಧ್ಯ ?

Sunday, November 14, 2010

ಮಾಧ್ಯಮಗಳು ಮತ್ತು ಚೆಡ್ಡಿ ಪುರಾಣ.....!

ಕಳೆದ ವಾರ ನಡೆಯಬಾರದ ಘಟನೆಯೊಂದು ನಡೆದು ಹೋಯಿತು. ಖ್ಯಾತ ನಟಿ ರಾಖಿ ಸಾವಂತ್ ನಡೆಸಿಕೊಡುವ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ. ಆತನನ್ನು ಆಕೆ ಕರೆದಿದ್ದು ನಪುಂಸಕ ಎಂದು. ಈ ಮಾತು ಅವನ ಮೇಲೆ ಎಂತಹ ಪರಿಣಾಮ ಬೀರಿತೆಂದರೆ ಆತ ಆತ್ಮಹತ್ಯೆಗೆ ಮುಂದಾಗಿ ಬಿಟ್ಟ. ಆದರೆ ಈ ಸಾವು ಯಾರನ್ನೂ ಕಾಡಲಿಲ್ಲ. ಚಾನಲ್ಲಿನವರು ಹೇಳಿಕೆಯೊಂದನ್ನು ನೀಡಿ ಕೈತೊಳೆದುಕೊಂಡರು. ರಾಖಿ ಸಾವಂತ್ ಹಿಂದಿನ ರೀತಿಯಲ್ಲೇ ತನ್ನ ಕಾರ್ಯಕ್ರಮವನ್ನು ಮುಂದುವರಿಸಿದಳು.
ನಾನು ಸಂಪೂರ್ಣವಾಗಿ ರಾಖಿ ಸಾವಂತ್ ಅವರ ಕಾರ್ಯಕ್ರಮವನ್ನು ನೋಡಲಿಲ್ಲ. ಆದರೆ ಆತ ಆಕೆಯ ಜೊತೆ ಮಾತನಾಡುತ್ತಿರುವ ಕೆಲವು ಭಾಗಗಳನ್ನು ಮಾತ್ರ ನೋಡಿದೆ. ಆಗ ನನಗೆ ಅನ್ನಿಸಿದ್ದು ಈ ವ್ಯಕ್ತಿ ತುಂಬಾ ಎಮೋಷನಲ್ ಎಂದು. ರಾಖಿ ತನ್ನ ಇನ್ಸಾಫ್ ನಲ್ಲಿ ಇದನ್ನು ಗಮನಿಸಲಿಲ್ಲ. ತನ್ನ ಮುಂದೆ ಕುಳಿತವರನ್ನು ಝಾಡಿಸುವುದು ತನ್ನ ಕರ್ತವ್ಯ ಎಂಬಂತೆ ಅವನ ಮೇಲೆ ಧಾಳಿ ನಡೆಸುತ್ತಿದ್ದಳು. ಆತ ನಪುಂಸಕ ಎಂಬುದು ರಾಖಿಗೆ ಹೇಗೆ ಗೊತ್ತಾಯಿತು ? ಆಕೆ ಆತನ ಪುರುಷತ್ವವನ್ನು ಪರೀಕ್ಷೆ ಮಾಡಿದ್ದಳೆ ? ಅಥವಾ ಆತನ ಹೆಂದತಿ ತನ್ನ ಗುಂಡ ನಪುಂಸಕ ಎಂದು ಹೇಳಿದ್ದಳೆ ? ಒಂದೊಮ್ಮೆ ಡೈವೋರ್ಸ್ ಗೆ ಮುಂದಾದ ಹೆಂಡತಿ ಇಂತಹ ಆರೋಪ ಮಾಡಿದ್ದರೂ ಜವಾಬ್ದಾರಿಯುತ ಚಾನಲ್ಲಿನ ನಿರೂಪಕರು ಅದನ್ನು ನಂಬುವುದು ಸಾಧ್ಯವೆ ? ನಂಬಿದರೂ ಬಹಿರಂಗವಾಗಿ ಹೇಳುವುದು ಎಷ್ಟು ಸರಿ ?
ರಾಖಿಯಲ್ಲಿ ಒಬ್ಬ ಕಾರ್ಯಕ್ರಮ ನಿರೂಪಕನಿಗೆ ಬೇಕಾದ ಸೂಕ್ಷ್ಮತೆಯ ಕೊರತೆ ಎದ್ದು ಕಾಣುತ್ತಿತ್ತು.
ಕಾರ್ಯಕ್ರಮವನ್ನು ನಿರೂಪಿಸುವವರಿಗೆ ಎದುರಿಗೆ ಕುಳಿತವರ ಮನಸ್ಸನ್ನು ಓದುವ ಸೂಕ್ಷ್ಮತೆ ಇರಬೇಕಾಗುತ್ತದೆ. ಮನುಷ್ಯ ಎಲ್ಲವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಾಗುವುದಿಲ್ಲ. ಶಬ್ದಗಳಿಗೆ ಮೀರಿದ್ದನ್ನು ಆತ ತನ್ನ ಬಾಡಿ ಲ್ಯಾಂಗ್ವೇಜ್ ನಲ್ಲಿ ಹೇಳುತ್ತಿರುತ್ತಾನೆ. ಇದನ್ನು ನಿರೂಪಕ ಗೃಹಿಸಬೇಕು. ಪ್ರಾಮಾಣಿಕತೆ, ಸತ್ಯ ಎಲ್ಲವೂ ಶಬ್ದಗಳಲ್ಲಿ ಹಿಡಿದಿಡುವುದು ಸುಲಭವಲ್ಲ. ಯಾಕೆಂದರೆ ಶಬ್ದಗಳು ಕೆಲವೊಮ್ಮೆ ಮುಖವಾಡ ಧರಿಸುತ್ತಿರುತ್ತವೆ.ಆದರೆ ಆತನ ಆಂಗಿಕ ಚಲನೆ ಸತ್ಯವನ್ನು ಹೊರಹಾಕುತ್ತಲೇ ಇರುತ್ತದೆ. ಇದನ್ನು ಒಬ್ಬ ನಿರೂಪಕ ಗೃಹಿಸಬೇಕು.
ರಾಖಿಗೆ ಈ ಕಾರ್ಯಕ್ರಮ ಕೂಡ ಯಾವುದೋ ಚಲನಚಿತ್ರದ ನಟನೆ. ಆಕೆ ಸಿನೆಮಾಗಳಲ್ಲಿ ನಟಿಸುವಂತೆ ಇಲ್ಲಿಯೂ ನಟಿಸುತ್ತಾಳೆ. ಆದರೆ ಇವಳ ಎದುರು ಕುಳಿತವರು ತಮ್ಮ ಬದುಕನ್ನು, ಅಲ್ಲಿನ ಒಳಗುಟ್ಟುಗಳನ್ನು ಬಿಚ್ಚಿಡುತ್ತಿರುತ್ತಾರೆ. ಒಂದೆಡೆ ನಟನೆ ಇನ್ನೊಂದೆಡೆ ತೆರೆದುಕೊಳ್ಳುವ ಸತ್ಯ.
ಸಮಸ್ಯೆ ಪ್ರಾರಂಭವಾಗುವುದು ಇಲ್ಲೇ.
ಈ ಸಾವಿನ ಬಗ್ಗೆ ಯೋಚಿಸುತ್ತಲೇ ರಾಖಿ ಸಾವಂತ್ ಳ ಇನ್ನೊಂದು ಎಪಿಸೋಡ್ ನೋಡಿದೆ. ಈ ಎಪಿಸೋಡಿನಲ್ಲಿ ಜಗಳವಾಡುವ ಗಂಡ ಹೆಂದತಿ ಬಂದು ಕುಳಿತಿದ್ದರು. ಅವರ ಸಂಬಂಧ ಡೈವೋರ್ಸ್ ವರೆಗೆ ಬಂದು ನಿಂತಿತ್ತು. ಆಕೆ ತನ್ನ ಗಂಡನ ಚೆಡ್ದಿಯ ವಿಚಾರವನ್ನು ಪ್ರಸ್ತಾಪಿಸಿದಳು. ನಂತರ ಆತನ ಓಳ ಉಡುಪು ಹರಿದಿದೆಯೇ ಅಥವಾ ಇಲ್ಲವೆ ಎಂಬ ಬಗ್ಗೆ ಅಲ್ಲಿ ಬಹಳ ಹೊತ್ತು ಚರ್ಚೆ ನಡೆಯಿತು. ಇದನ್ನು ನೋಡಿ ತಲೆ ಚಿಟ್ತು ಹಿಡಿದು ಕನ್ನಡ ಚಾನಲ್ ಗಳತ್ತ ತಿರುಗಿದೆ. ಅಲ್ಲಿನ ಒಂದು ಕಾರ್ಯಕ್ರಮದಲ್ಲಿ ಕಾಡಿಗೆ ಹೋದ ಪೇಟೆ ಮಂದಿ ಕಷ್ಟಕ್ಕೆ ಸಿಲುಕಿಕೊಂಡಿದ್ದರು. ಅವರ ಬಟ್ಟೆಯೆಲ್ಲ ಒದ್ದೆಯಾಗಿತ್ತು. ಕಾರ್ಯಕ್ರಮದ ನಿರೂಪಕರುಹೊಸ ಬಟ್ಟೆ ಕೊಡಲು ಸಿದ್ಧರಿರಲಿಲ್ಲ. ಆಗ ಅವರು ಪ್ರಸ್ತಾಪಿಸಿದ್ದು ಚಡ್ಡಿಯ ಸಮಸ್ಯೆಯನ್ನೇ ! ತಮ್ಮ ಚಡ್ದಿಯೆಲ್ಲ ಒದ್ದೆಯಾಗಿ ಒಳಗೆ ತುರಿಕೆಯಾಗುತ್ತಿದೆ ಎಂದು ಅವರು ಅಲವತ್ತುಗೊಳ್ಳುತ್ತಿದ್ದರು. ಹುಡುಗಿಯೊಬ್ಬಳು ತನಗೆ ತುರಿಸಿಕೊಳ್ಳುವುದೇ ಕೆಲಸವಾಗಿದೆ ಎಂದರು. ಇನ್ನೊಬ್ಬ ಹುಡುಗ ತನ್ನ ಬಳಿ ಹಿಚ್ ಗಾರ್ಡ್ ಇಲ್ಲದೆ ತೊಂದರೆಯಾಗಿದೆ ಎಂದು ವಿವರಿಸತೊಡಗಿದ. ಒಟ್ಟಿನಲ್ಲಿ ಕನ್ನಡ ಚಾನಲ್ಲಿನಲ್ಲೂ ಇದೇ ಚಡ್ಡಿಯ ಸಮಸ್ಯೆ ! ನಮ್ಮ ಗುಪ್ತಾಂಗಗಳಲ್ಲಿ ಸಂರಕ್ಷಿಸುವ ಚೆಡ್ದಿ ಒಳಕ್ಕೆ ಇರುವಂತಹುದು. ಹೊರಕ್ಕೆ ಕಾಣುವಂತಹುದಲ್ಲ. ಹಾಗೆ ಚಡ್ಡಿಯ ಆಸ್ಥಿತ್ವ ಇರುವುದು ಗುಪ್ತವಾಗಿ ಇರುವುದರಿಂದಲೇ,ಅದಕ್ಕೆ ಬಹಿರಂಗ ಅಸ್ಥಿತ್ವ ಇಲ್ಲ. ಚೆಡ್ದಿಯನ್ನು ಮುಚ್ಚಲು ಏನಾದರೂ ಬೇಕು. ಆಗಲೇ ಚಡ್ದಿಗೂ ಬೆಲೆ, ಚೆಡ್ಡಿಯನ್ನು ಹಾಕಿಕೊಂಡವರಿಗೂ ಬೆಲೆ. ಆದರೆ ನಮ್ಮ ಚಾನಲ್ ಗಳು ಚೆಡ್ಡಿಯನ್ನು ಪ್ರದರ್ಶನಕ್ಕೆ ಇಡುತ್ತಿವೆ !
ಒಂದು ಸಾವು ನಮ್ಮನ್ನೆಲ್ಲ ತಲ್ಲಣಗೊಳಿಸುವುದಿಲ್ಲ. ಸಾವಿಗಿಂತ ಚಡ್ದಿ ಒದ್ದೆಯಾಗಿ ಉಂಟಾಗುವ ತುರಿಕೆ ನಮಗೆ ಮುಖ್ಯವಾಗುತ್ತಿದೆ. ತುರಿಕೆಯಿಂದ ಉಪಶಮನಕ್ಕಾಗಿ ನಾವು ಹಿಚ್ ಗಾರ್ಡ್ ಹುಡುಕಾಟ ನಡೆಸುತ್ತೇವೆ. ಹಾಗೆ ಚಾನಲ್ಲುಗಳೂ ಸಾವಿನಿಂದ ತಲ್ಲಣಗೊಳ್ಳುವುದಿಲ್ಲ. ಅವರಿಗೆ ಟಿಆರ್ ಪಿ ಎಂಬ ತುರಿಕೆಗಾಗಿ ಇಂತಹ ಕಾರ್ಯಕ್ರಮಗಳ ಹಿಚ್ ಗಾರ್ಡ್ ಬೇಕು.
ಕರ್ನಾಟಕದಲ್ಲಿ ಹಲವಾರು ರೈತರು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಂದು ಆತ್ಮಹತ್ಯೆ ಅಲ್ಲಲ್ಲಿ ಸುದ್ದಿಯಾದರೂ ಕಥೆ ಹುಟ್ಟಿಕೊಳ್ಳುವುದು ಬೇರೆ ಬೇರೆ ಆಯಾಮ ಪಡೆಯುವುದು, ಆತ್ಮಹತ್ಯೆ ನಡೆದ ಮೇಲೆ. ಒಂದು ಸಾವು ಬೀರುವ ಪರಿಣಾಮ ಅಂಥಹುದು. ಸಾವಿನ ನಂತರದ ಕಥೆಯಿದೆಯಲ್ಲ, ಅದರ ಬಗ್ಗೆ ಯಾವ ವಾಹಿನಿಯೂ ತಲೆ ಕೆಡೆಸಿಕೊಳ್ಳುತ್ತಿಲ್ಲ.
ಒಂದು ಸಾವು ನಾಗರಿಕ ಮನುಷ್ಯನನ್ನು ತಲ್ಲಣಗೊಳಿಸದಿದ್ದರೆ, ಅದು ಅಪಾಯಕಾರಿ. ಹಾಗೆ ಸಮೂಹ ಮಾಧ್ಯಮಗಳೂ ಸಹ. ಒಬ್ಬ ವ್ಯಕ್ತಿಗಿಂತ ಒಂದು ವಾಹಿನಿಗೆ ಹೆಚ್ಚಿನ ಸೂಕ್ಷ್ಮತೆ ಬೇಕಾಗುತ್ತದೆ. ಯಾಕೆಂದರೆ ಒಬ್ಬ ವ್ಯಕ್ತಿ ಸೂಕ್ಶ್ಮತೆ ಕಳೆದುಕೊಂಡರೆ ಉಂಟಾಗುವ ಅಪಾಯಕ್ಕಿಂತ ಸಾವಿರ ಪಟ್ಟು ಅಪಾಯ ಮಾಧ್ಯಮ ಸೂಕ್ಷ್ಮತೆ ಕಳೆದುಕೊಂಡರೆ ಉಂಟಾಗುತ್ತದೆ.

ಪತ್ರಿಕೋದ್ಯಮ ಮತ್ತು ರಾಜಕಾರಣ.......

ನಾನು ಇತ್ತೀಚೆಗೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೆ. ಮೊದಲನೆಯದು ಸಂಯುಕ್ತ ಕರ್ನಾಟಕದಲ್ಲಿ ನಡೆದ ತರಬೇತಿ ಕಾರ್ಯಕ್ರಮ. ಅಲ್ಲಿ ವರದಿಗಾರಿಕೆಯ ಬಗ್ಗೆ ಭಾಷಣ ಮಾಡಲು ಆಹ್ವಾನ ಬಂದಾಗ ನನ್ನಲ್ಲಿ ಮೂಡಿದ್ದು ಧನ್ಯತಾ ಭಾವ. ನಾನು ನನ್ನ ಪತ್ರಿಕೋದ್ಯಮವನ್ನು ಪ್ರಾರಂಭಿಸಿದ್ದು ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ. ಆ ಪತ್ರಿಕೆ ನನಗೆ ಪತ್ರಿಕೋದ್ಯಮದ ಆ ಆ ಇ ಕಲಿಸಿದ ಪತ್ರಿಕೆ. ಜೊತೆಗೆ ಸಂಯುಕ್ತ ಕರ್ನಾಟಕ ಪತ್ರಿಕೆ ಇತಿಹಾಸವೂ ಕೂಡ ಹಾಗೆ.
ಆದರೆ ಅಲ್ಲಿ ಹೋದಾಗ ಏನು ಮಾತನಾಡುವುದು ? ಇವತ್ತಿನ ಪತ್ರಿಕೋದ್ಯಮದ ಬಗ್ಗೆ ಮಾತನಾಡೋಣವೆ ? ಪತ್ರಕರ್ತರ ಬಗ್ಗೆ ಮಾತನಾಡೋಣವೆ ? ಎಂಬ ಗೊಂದಲ. ನಾನು ಹೇಳಿದೆ;
ಪತ್ರಿಕೋದ್ಯಮ ಎನ್ನುವುದರ ಬಗ್ಗೆಯೇ ನನ್ನ ಆಕ್ಷೇಪವಿದೆ. ನಾನು ಇದನ್ನು ಪತ್ರಿಕಾ ವ್ಯವಸಾಯ ಎಂದು ಕರೆಯುತ್ತೇನೆ. ಭಾರತೀಯ ಪತ್ರಿಕಾವೃತ್ತಿ ಉದ್ಯಮ ವಾಗುವ ಉದ್ದೇಶದಿಂದ ಹುಟ್ಟಿದ್ದಲ್ಲ. ಉದ್ಯಮ ಎಂದರೆ ಲಾಭ ನಷ್ಟದ ಮೇಲೆ ನಡೆಯುವಂತಹುದು. ಹೇಗಾದರೂ ಲಾಭ ಗಳಿಸುವುದು ಉದ್ಯಮದ ಗುಣದರ್ಮ. ಆದರೆ ನಮ್ಮಲ್ಲಿ ಪತ್ರಿಕೋದ್ಯಮಕ್ಕೆ ಒಂದು ಪಾವಿತ್ರ್ಯತೆ ಇದೆ. ಸ್ವಾತಂತ್ರ್ಯಪೂರ್ವದಲ್ಲಿ ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡುವುದು ಪತ್ರಿಕಾ ವ್ಯವಸಾಯದ ಉದ್ದೇಶವಾಗಿತ್ತು. ನಂತರ ಕೆಲವು ವರ್ಷಗಳ ಕಾಲ ಸ್ವಾತಂತ್ರ್ಯದ ನೆನಪಿನಲ್ಲಿ ಕಾಲ ಕಳೆದ ಪತ್ರಿಕೋದ್ಯಮ ನಂತರದ ದಿನಗಳಲ್ಲಿ ಕಾಂಗ್ರೆಸ್ ವಿರೋಧಿ ಭೂಮಿಕೆಯನ್ನು ನಿರ್ವಹಿಸಿತು. ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದಾಗ ನಿಜವಾದ ಪ್ರತಿ ಪಕ್ಷವಾಗಿ, ಪೋರ್ಥ್ ಎಸ್ಟೇಟ್ ಆಗಿ ಕಾರ್ಯನಿರ್ವಹಿಸಿತು. ಕರ್ನಾಟಕದಲ್ಲಂತೂ ೮೦ ದಶಕದಲ್ಲಿ ಮೂರು ಜನಪರ ಚಳವಳಿಗಳಿಗೆ ಬೆನ್ನೆಲುಬಾಗಿ ನಿಂತಿದ್ದು ಮಾಧ್ಯಮಗಳು. ಆದರೆ ೯೦ ರ ದಶಕದಲ್ಲಿ ಪತ್ರಿಕೋದ್ಯಮ ಬದಲಾಯಿತು. ಹಾಗೆ ಪತ್ರಿಕೋದ್ಯಮಿಗಳು ಬದಲಾದರು.
ಪತ್ರಿಕೋದ್ಯಮದಿಂದ ಈ ಸಮಾಜದಲ್ಲಿ ಇಲ್ಲದಿರುವುದನ್ನು ನಿರೀಕ್ಷಿಸಲಾಗದು. ಅದೂ ಸಹ ಈ ಸಮಾಜದ ಒಂದು ಭಾಗವೇ. ಆದರೆ ಸಮಾಜದ ಭಾಗವಾಗಿಯೂ ಸಮಾಜದ ಹೊರಗೆ ನಿಂತು ನೋಡುವ ಮನಸ್ಥಿತಿ ಪತ್ರಿಕೋದ್ಯಮಕ್ಕೆ ಇರಬೇಕು ಒಂದು ರೀತಿಯಲ್ಲಿ ಪತ್ರಿಕೋದ್ಯಮ ಸಮಾಜದ ಸಾಕ್ಷಿ ಪ್ರಜ್ನೆಯಾಗಿ ಕೆಲಸ ಮಾಡಬೇಕು. ಆದರೆ ಇಂದು ಪತ್ರಿಕೋದ್ಯಮ ಈ ಕಾರ್ಯವನ್ನು ನಿರ್ವಹಿಸುತ್ತಿಲ್ಲ.
ನಾನು ಇನ್ನೊಂದು ಮಾತನ್ನು ಹೇಳಿದೆ. ಲೋಕಾಯುಕ್ತದಂತಹ ಸಂಸ್ಥೆಗಳು ಎಲ್ಲ ಪತ್ರಿಕೋದ್ಯಮಿಗಳ ಮತ್ತು ಪತ್ರಿಕಾ ಸಂಪಾದಕರ ಆಸ್ತಿಯ ಬಗ್ಗೆ ತನಿಖೆ ನಡೆಸಬೇಕು.
ಈ ಮಾತು ಏಷ್ಟು ಜನರಿಗೆ ಇಷ್ಟವಾಯಿತೋ ಗೊತ್ತಿಲ್ಲ. ಆದರೆ ಅಂತಹ ಒಂದು ವ್ಯವಸ್ಥೆ ಬೇಕು ಎಂದು ಹೇಳುವವನು ನಾನು. ಬೇರೆಯವರ ಭ್ರಷ್ಟತೆಯ ಬಗ್ಗೆ ಬರೆಯುವ ನಾನು ಭ್ರಷ್ಟರಾಗಕೂಡದು. ನಾವು ಭ್ರಷ್ಟರಾದರೆ ಬೇರೆಯವರ ಭ್ರಷ್ಟತೆಯ ಬಗ್ಗೆ ಬರೆಯುವ ನೈತಿಕ ಹಕ್ಕು ನಮಗೆ ಬರಲಾರದು. ಆದರೆ ಇಂದು ಒಬ್ಬ ಪತ್ರಿಕೋದ್ಯಮಿ ಮತ್ತು ರಾಜಕಾರಣಿಗಳ ನಡುವಿನ ವ್ಯತ್ಯಾಸ ನನಗೆ ಕಾಣುತ್ತಿಲ್ಲ. ಬಹಳಷ್ಟು ಪತ್ರಿಕೋದ್ಯಮಿಗಳು ರಾಜಕಾರಣಿಗಳಾಗಿದ್ದಾರೆ. ರಾಜಕಾರಣಿಗಳು ಪತ್ರಿಕೋದ್ಯಮಿಗಳಾಗಿದ್ದಾರೆ. ರಾಜಕಾರಣಿಗಳ ಪರವಾಗಿ ಮಧ್ಯಸ್ಥಿಕೆ ನಡೆಸುವ ಪತ್ರಿಕೋದ್ಯಮಿಗಳು ನಮ್ಮ ನಡುವೆ ಇದ್ದಾರೆ. ರಾಜಕಾರಣಿಗಳಿಗೆ ಭಾಷಣ ಮಾಡಲು ಕಲಿಸಿದ್ದೇನೆ ಎಂದು ಹೇಳಿಕೊಳ್ಳುವ ಪತ್ರಿಕಾ ಮಹಾಶಯರು ಕಾಣಸಿಗುತ್ತಾರೆ.
ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಆರೋಗ್ಯಪೂರ್ಣವಾಗಿರಲು ಪತ್ರಿಕೆಗಳು ನಿಷ್ಪಕ್ಷಪಾತ ಮತ್ತು ನಿಷ್ಠುರವಾದ ನಿಲುಮೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಸತ್ಯವನ್ನು ಹೇಳುವ ಎದೆಗಾರಿಕೆಯನ್ನು ಪ್ರದರ್ಶಿಸಬೇಕಾಗುತ್ತದೆ. ಸುಳ್ಳನ್ನು ಸತ್ಯ ಎಂದು ಹೇಳುವ ಎದೆಗಾರಿಕೆ ಅಲ್ಲ.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾದಾಗ ಸ್ನೇಹಿತರೊಬ್ಬರು ಹೇಳಿದರು. ಇದು ಪತ್ರಕರ್ತರಿಗೆ ಬಿಜೆಪಿ ಸರ್ಕಾರ ನೀಡಿದ ಬೆಂಬಲ ಬೆಲೆ. ಈ ಮಾತು ಸುಳ್ಳಾಗಲಿ ಎಂದು ನಾನು ಆಶಿಸುತ್ತೇನೆ. ಆದರೆ ನಾವು ಆಶಿಸಿದ್ದೆಲ್ಲ ಸುಳ್ಳಾಗುವುದಿಲ್ಲ. ಜೊತೆಗೆ ಬೆಂಬಲ ಬೆಲೆ ಪಡೆದವರ ನಡುವೆ ಕುಳಿತುಕೊಳ್ಳುವ ಪ್ರಾಮಾಣಿಕ ಪತ್ರಕರ್ತರೂ ಮುಸುಕಾಗುತ್ತಾರೆ.
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಟೀವಿ ವಾಹಿನಿಗಳಲ್ಲಿ ಪತ್ರಕರ್ತರ ಅಥವಾ ತೆರೆಯ ಮೇಲೆ ಬರುವವರಲ್ಲಿ ಅಹಂಕಾರ ಹೆಚ್ಚುತ್ತಿದೆ. ಇದು ಮಾಧ್ಯಮದ ಅಹಂಕಾರ. ಅಕ್ಷರ ಅಹಂಕಾರ. ನಮ್ಮ ಮುಂದೆ ಕುಳಿತವನು ಯಕಶ್ಚಿತ ವ್ಯಕ್ತಿ ಮತ್ತು ಅವನಿಗೆ ಬುದ್ದಿ ಹೇಳುವುದಕ್ಲಾಗಿಯೇ ನಾನು ಈ ಭರತ ಭೂಮಿಯಲ್ಲಿ ಜನ್ಮವೆತ್ತಿ ಈ ಟೀವಿ ಸ್ಟುಡೀಯೋದಲ್ಲಿ ಬಂದು ಕುಳಿತಿದ್ದೇನೆ ಎಂಬ ವರ್ತನೆ.
ಯಾವನು ಇನ್ನೊಬ್ಬನ ಮಾತನ್ನು ಕೇಳಿಸಿಕೊಳ್ಳಲಾರನೋ ಅವನು ಸರ್ವಾಧಿಕಾರಿಯಾಗಿರುತ್ತಾನೆ. ಪತ್ರಿಕೋದ್ಯಮಿ ಸರ್ವಾಧಿಕಾರಿಯಲ್ಲ. ಆತ ಜನರ ಪ್ರತಿನಿಧಿಯಾಗಿರುತ್ತಾನೆ. ಸಮಾಜದ ಸಾಕ್ಷಿ ಪ್ರಜ್ನೆಯಾಗಿರುತ್ತಾನೆ. ಸತ್ಯವನ್ನು ಹೇಳುವ ಪ್ರವಾದಿಯಾಗಿರುತ್ತಾನೆ. ದೊಡ್ಡ ಗಂಟಲಿನಲ್ಲಿ ಕೂಗುವವರು, ಬೇರೆಯವರನ್ನು ಹೀಗಳಿಯುತ್ತ ಚರ್ಚೆ ನಡೆಸುವವರು ಉತ್ತಮ ಪತ್ರಿಕೋದ್ಯಮಿಯಾಗಲಾರರು. ಇಂತವರು ಒಳಗೆ ಠೊಳ್ಳಾಗಿರುತ್ತಾರೆ. ತಮ್ಮ ಠೊಳ್ಳುತನವನ್ನು ಮುಚ್ಚಿಕೊಳ್ಳುವುದಕ್ಕಾಗಿ ಹೊರಗೆ ಇಂಥಹ ಮುಖವಾಡ ಧರಿಸುತ್ತಿರುತ್ತಾರೆ. ಉಪದೇಶಗಳ ಮೂಲಕ ತಮ್ಮ ಭ್ರಷ್ಟತೆಯನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿರುತ್ತಾರೆ.
ಇವೆಲ್ಲ ನಾನು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ನಾನು ಆಡಿದ ಮಾತುಗಳು. ಈ ಮಾತುಗಳನ್ನು ಹೇಳುವಾಗ ನನ್ನಲ್ಲಿ ವಿಷಾಧ ಭಾವವೇನೂ ಇರಲಿಲ್ಲ. ಒಂದು ಸಮಾಜ ತನಗೆ ಬೇಕಾದ್ದನ್ನು ಪಡೆದುಕೊಳ್ಳುತ್ತದೆ. ಗಟ್ಟಿಯಾದದ್ದು ಉಳಿಯುತ್ತದೆ. ಪೊಳ್ಳಾಗಿದ್ದು ಉದುರಿ ಹೋಗುತ್ತದೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...