Wednesday, November 24, 2010

ಜಾತಿ ರಾಜಕಾರಣವನ್ನು ತಿರಸ್ಕರಿಸಿದ ಬಿಹಾರದ ಜನತೆ: ಜಾತಿ ರಾಜಕಾರಣವನ್ನು ಪುರಸ್ಕರಿಸಿದ ಬಿಜೆಪಿ !

ಇಂದು ದೇಶದ ರಾಜಕಾರಣದಲ್ಲಿ ಎರಡು ಮಹತ್ತರ ಘಟನೆಗಳು ನಡೆದವು. ಒಂದು ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ. ಮತ್ತೊಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೊರಕಿದ ಜೀವದಾನ. ಬಿಹಾರದಲ್ಲಿ ಲಾಲೂ ಪ್ರಸಾದ್ ನೆಲ ಕಚ್ಚಿದ್ದಾರೆ. ನಿತೀಶ್ ಕುಮಾರ ನಿರೀಕ್ಷೆ ಮೀರಿದ ಜಯಗಳಿಸಿದ್ದಾರೆ. ಈ ಎರಡೂ ಘಟನೆಗಳೂ ಹಲವು ದೃಷ್ಟಿಯಿಂದ ಮಹತ್ವದ್ದಾಗಿವೆ. ಹಾಗೆ ಭಾರತೀಯ ರಾಜಕಾರಣ ಸಾಗುತ್ತಿರುವ ದಾರಿಯ ಬಗ್ಗೆಯೂ ಸುಳಿವು ನೀಡುತ್ತವೆ.
ಬಿಹಾರ ಒಂದು ಕಾಲದಲ್ಲಿ ಜಂಗಲ್ ರಾಜ್ ಆಗಿತ್ತು. ಮಗದ ಸಾಮ್ರಾಜ್ಯದ ವೈಭವನ್ನು ಕಂಡು ಬಿಹಾರ, ಜಯಪ್ರಕಾಶ್ ನಾರಾಯಣ ಅವರ ಕ್ರಾಂತಿಯ ನೆಲ ಕೂಡ. ಹಾಗೆ ಕರ್ಪೂರಿ ಠಾಕೂರ್ ಎಂಬ ಸಮಾಜವಾದಿ ನಾಯಕನ ರಾಜ್ಯ. ಅವರ ಶಿಷ್ಯರು ಮೆರದಾಡಿದ ನೆಲ. ಇಲ್ಲಿ ಲಾಲೂ ನಾಟಕವಾಡಿದರು. ಜಾತಿ ರಾಜಕಾರಣದ ಬೀಜ ಭಿತ್ತಿ ಫಲವನ್ನು ಉಂಡರು. ಹಸುವಿನ ಹಾಲು ಕರೆದರು. ಹಸುವಿನ ಮೇವನ್ನು ತಾವೇ ತಿಂದರು. ತಮ್ಮ ನಂತರ ಮನೆಯಲ್ಲಿ ಹಾಲು ಕರೆಯುತ್ತ ಅಡಿಗೆ ಮಾಡಿಕೊಂಡಿದ್ದ ಹೆಂಡತಿ ರಾಬ್ಡಿ ದೇವಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಕಳೆದ ಚುನಾವಣೆಯಲ್ಲಿ ತಮ್ಮ ಮಗನನ್ನು ಅಖಾಡಕ್ಕೆ ಇಳಿಸಿದರು. ಹಾಗೆ ಯಾದವ, ದಲಿತ ಮಸ್ಲಿಂ ಮತ ಬ್ಯಾಂಕಿನ ಮೇಲೆ ಕಣ್ಣಿಟ್ಟು ರಾಜಕೀಯ ಮಾಡುತ್ತಿದ್ದ ಅವರು ಈಗತಾನೆ ಮುಗಿದ ಚುನಾವಣೆಯಲ್ಲಿ ಮೇಲ್ಜಾತಿಯ ಮತಗಳನ್ನು ಪಡೆಯುವುದಕ್ಕೆ ಯತ್ನ ನಡೆಸಿದರು. ಆದರೆ ಅಷ್ಟರಲ್ಲಿ ಬಿಹಾರದ ಮತದಾರರು ಬದಲಾಗಿದ್ದರು. ಇದು ಲಾಲೂ ಪ್ರಸಾದ್ ಯಾದವ್ ಅವರ ಗಮನಕ್ಕೆ ಬಂದಂತಿರಲಿಲ್ಲ. ಬಂದರೂ ಏನು ಮಾಡುವ ಸ್ಥಿತಿಯಲ್ಲಿ ಅವರು ಇರಲಿಲ್ಲ.
ಕಳೆದ ಐದು ವರ್ಷಗಳ ಆಡಳಿತ ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರಿಗಳಿಗೆ ಸ್ವಾಭಿಮಾನದ ಪಾಠ ಹೇಳಿದ್ದರು. ಎಲ್ಲೆಡೆಗೂ ಅಭಿವೃದ್ಧಿಗೆ ಅಡಿಗಲ್ಲು ಹಾಕಿದರು. ರಾಜಕಾರಣದ ಭಾಗವಾಗಿದ್ದ ಕ್ರಿಮಿನಲ್ಸ್ ಗಳನ್ನು ಹಿಡಿದು ಜೈಲಿಗೆ ಅಟ್ಟಿದರು. ಬಿಹಾರದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಮಾನ್ಯ ಜನ ಯಾರ ಹೆದರಿಕೆಯೂ ಇಲ್ಲದೇ ಓಡಾಡುವಂತೆ ಮಾಡಿದರು. ಹೆಂಗಸರಂತೂ ಸಮಾಧಾನ ನಿಟ್ಟುಸಿರು ಬಿಟ್ಟರು. ಬಿಹಾರವನ್ನು ಅವರು ಬದಲಿಸಿಬಿಟ್ಟಿದ್ದರು. ಇದರಿಂದಾಗಿ ಲಾಲೂ ಅವರ ನಾಟಕ ನೋಡಿದವರು ಈ ಬಾರಿ ಅದೇ ನಾಟಕವನ್ನು ನೋಡಿ ನಕ್ಕರು. ಒಬ್ಬ ಸಮಾಜವಾದಿ ನಾಯಕ ತಮ್ಮ ಜನರಿಂದಲೇ ಅಪಹಾಸ್ಯದ ವಸ್ತುವಾಗಿ ಬಿಟ್ಟಿದ್ದರು. ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವುದನ್ನು ಜನ ಬಿಟ್ಟುಬಿಟ್ಟರು.
ಈ ಚುನಾವಣೆಯ ಮತ್ತೊಂದು ಮಹತ್ವದ ಅಂಶ ಎಂದರೆ ಯಾದವರ ಭದ್ರ ಕೋಟೆಯನ್ನು ನಿತೀಶ್ ಕುಮಾರ ಪ್ರವೇಶಿಸಿದ್ದು.ಹಾಗೆ ಪಕ್ಕದಲ್ಲಿ ಬಿಜೆಪಿ ಎಂಬ ಮುಸ್ಲಿಂ ವಿರೋಧಿ ಪಕ್ಷವನ್ನು ಇಟ್ಟುಕೊಂಡೂ ಪ್ರತಿಶತ ೨೦ ರಷ್ಟು ಮುಸ್ಲಿಂ ಮತಗಳನ್ನು ಮೈತ್ರಿ ಕೂಟಕ್ಕೆ ದೊರಕಿಸಿಕೊಟ್ಟರು.
ಬಿಹಾರದಲ್ಲಿ ಜಾತಿ ಆಧಾರಿತ ರಾಜಕಾರಣಕ್ಕೆ ಮಂಗಳ ಹಾಡಿದವರು ನಿತೀಶ್ ಕುಮಾರ್. ಎಲ್ಲ ಕಾಲದಲ್ಲಿಯೂ ಜಾತಿ ರಾಜಕಾರಣ ಫಲ ನೀಡುವುದಿಲ್ಲ. ಅಂತಿಮವಾಗಿ ಜನರಿಗೆ ಸಹ್ಯವಾಗುವ ಬದುಕು ಮತ್ತು ರಾಜಕಾರಣ ಬೇಕು, ಈ ದೇಶದ ಜನ ಜಾತಿವಾದಿಗಳಲ್ಲ. ಆದರೆ ಅವರನ್ನು ತಮ್ಮ ಲಾಭಕ್ಕಾಗಿ ಜಾತಿವಾದಿಗಳನ್ನಾಗಿ ಮಾಡಿದವರು ರಾಜಕಾರಣಿಗಳು. ಈ ಬೆಳವಣಿಗೆ ಸಂತಸ ನೀಡುವಂತಹುದು.
ಬಿಹಾರದ ಈ ಫಲಿತಾಂಶ ಬಿಜೆಪಿಗೆ ಸಂತಸ ನೀಡಿದ್ದರೆ ಅದು ತುಂಬಾ ಸಹಜ, ಎನ್ ಡಿ ಏ ಗೆ ಇದೊಂದು ಅದ್ಭುತ ವಿಜಯವೇ. ಜೊತೆಗೆ ರಾಷ್ಟ್ರದ ರಾಜಕಾರಣಕ್ಕೆ ದಿಕ್ಸೂಚಿ ಕೂಡ. ಆದರೆ ಇವತ್ತಿನ ಬೆಳವಣಿಗೆ ಇಷ್ಟಕ್ಕೆ ಸೀಮಿತವಾಗಿಲ್ಲ. ಒಂದೆಡೆ ಜಾತಿ ರಾಜಕಾರಣವನ್ನು ತಿರಸ್ಕರಿಸಿದ ಸಂತಸ ಬಿಜೆಪಿಗಾದರೆ ಇನ್ನೊಂದೆಡೆ ಜಾತಿ ರಾಜಕಾರಣಕ್ಕೆ ಮಣೆ ಹಾಕುವ ಕೆಲಸವನ್ನೂ ಈ ಪಕ್ಷ ಮಾಡಿತು. ಬಿಹಾರದಲ್ಲಿ ಅಲ್ಲಿನ ಜನ ಜಾತಿ ರಾಜಕಾರಣವನ್ನು ತಿರಸ್ಕರಿಸಿದ ದಿನವೇ ಕರ್ನಾಟಕದಲ್ಲಿ ಜಾತಿ ರಾಜಕಾರಣಕ್ಕೆಮಣೆ ಹಾಕಿದ್ದು ಬಿಜೆಪಿ. ಲಿಂಗಾಯಿತರಿಗೆ ಬೇಸರವಾಗುತ್ತದೆ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಯಡೀಯೂರಪ್ಪ ಅವರನ್ನು ಮುಂದುವರಿಸುವ ತೀರ್ಮಾನವನ್ನು ಪಕ್ಷ ಕೈಗೊಂಡಿತು.
ಇದೆಲ್ಲ ನಡೆದ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿದ ಹೇಳಿಕೆ ಗಮನಾರ್ಹ.
"ಬಿಹಾರದಲ್ಲಿ ಅಭೂತಫೂರ್ವ ವಿಜಯ ಸಾಧಿಸಿದ ನಿತೀಶ್ ಕುಮಾರ್ ಅವರನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಪಕ್ಷ ಬಿಹಾರದಲ್ಲಿ ಬೆಳೆಯ ಬೇಕಾಗಿದೆ. ಅದನ್ನು ಬೆಳೆಸುತ್ತೇವೆ. ಆದರೆ ಕರ್ನಾಟಕದಲ್ಲಿ ಭ್ರಷ್ಟತೆಯ ಆರೋಪ ಹೊತ್ತಿರುವ ಮುಖ್ಯಮಂತ್ರಿಯನ್ನು ಬಿಜೆಪಿ ಮುಂದುವರಿಸುವ ತೀರ್ಮಾನವನ್ನು ಕೈಗೊಂಡಿದೆ. ನಾವು ಇಂತಹ ಆರೋಪ ಬಂದ ತಕ್ಷಣ ಮುಖ್ಯಮಂತ್ರಿಗಳನ್ನು ಬದಲಿಸಿದ್ದೇವೆ. ಇದೇ ನಮ್ಮ ಪಕ್ಷ ಮತ್ತು ಬಿಜೆಪಿಯ ನಡುವೆ ಇರುವ ವ್ಯತ್ಯಾಸ. " ಇದು ಸೋನಿಯಾ ಹೇಳಿದ ಮಾತು.
ಸೋನಿಯಾ ಪಕ್ವ ರಾಜಕಾರಣಿಯಾಗುತ್ತಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರವನ್ನು ತೊಡೆದು ಹಾಕಬೇಕು ಎಂಬ ಮನಸ್ಸು ಅವರಿಗಿದೆ ಎಂದು ಅನ್ನಿಸುತ್ತದೆ. ಅದು ಸಾಧ್ಯವೆ ಎಂಬುದು ಬೇರೆ ಮಾತು. ಎಲ್ಲಿಂದಲೋ ಬಂದು ಇಲ್ಲಿ ತಮ್ಮ ಬದುಕನ್ನು ಕಟ್ತಿಕೊಂಡ ಅವರನ್ನ್ ನೋಡಿದಾಗ ಅವರು ಅಪ್ರಮಾಣಿಕರು ಎಂದು ಅನ್ನಿಸುವುದಿಲ್ಲ > ಆದರೆ ಈ ದೇಶದ ಸಂಸ್ಕೃತಿಯನ್ನು ಗುತ್ತಿಗೆಗೆ ತೆಗೆದುಕೊಂಡಂತೆ ಮಾತನಾಡುವ ಬಿಜೆಪಿಯನ್ನು ನೋಡಿದಾಗ ಹಾಗೆ ಅನ್ನಿಸುವುದಿಲ್ಲ. ಆ ಪಕ್ಷದ ಹೈಕಮಾಂಡ್ ಎಲ್ಲ ರೀತಿಯ ಒತ್ತಡ ಮತ್ತು ಬ್ಲಾಕ್ ಮೇಲೆ ಒತ್ತಡಕ್ಕೆ ಮಣಿಯುತ್ತಿದೆ. ಭೂ ಸ್ವಾಹಾ ಪ್ರಕರಣದಲ್ಲಿ ನಿರತರಾದ ತಮ್ಮ ಮುಖ್ಯಮಂತ್ರಿಯನ್ನು ಕೆಳಗಿಳಿಸುವ ಶಕ್ತಿ ಕೂಡ ಬಿಜೆಪಿ ಹೈಕಮಾಂಡ್ ಗೆ ಇಲ್ಲ. ಪಕ್ಷದ ಮುಖ್ಯಮಂತ್ರಿ ಎಲ್ಲ ಸೂಚನೆಯನ್ನು ಉಲ್ಲಂಘಿಸಿ ಭೂಗತರಾದರೂ ಅವರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳುವ ಶಕ್ತಿ ಕೂಡ ಬಿಜೆಪಿ ಹೈಕಮಾಂಡಿಗೆ ಇಲ್ಲ.
ಇವತ್ತಿನ ಬೆಳವಣಿಗೆಯನ್ನು ಗಮನಿಸಿ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸುವ ತೀರ್ಮಾನವನ್ನು ಪ್ರಕಟಿಸುವುದಕ್ಕೆ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಹೆದರಿಕೆ. ಹೀಗಾಗಿ ಅವರು ಲಿಖಿತ ಹೇಳಿಕೆಯನ್ನು ನೀಡುತ್ತಾರೆ. ಪಕ್ಷದ ಎಲ್ಲ ಹಿರಿಯ ನಾಯಕರೂ ಕರ್ನಾಟಕದ ಬೆಳವಣಿಗೆಯ ಬಗ್ಗೆ ಮಾತನಾಡದೇ ತಪ್ಪಿಸಿಕೊಳ್ಳುತ್ತಾರೆ. ತಮ್ಮ ನಿರ್ಣಯವನ್ನು ಪ್ರಕಟಿಸುವ ನೈತಿಕ ಶಕ್ತಿ ಕೂಡ ಅವರಿಗೆ ಇಲ್ಲ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸರ್ವಾಧಿಕಾರಿಯಂತೆ ವರ್ತಿಸುತ್ತದೆ. ಹೀಗಾಗಿ ಆ ಪಕ್ಷದಲ್ಲಿ ಜನತಾಂತ್ರಿಕ ಮೌಲ್ಯಗಳಿಗೆ ಬೆಲೆ ಇಲ್ಲ. ಒಬ್ಬ ಮುಖ್ಯಮಂತ್ರಿ ಅಧಿಕಾರದಿಂದ ಇಳಿಯಬೇಕು ಎಂದು ಹೈಕಮಾಂಡ್ ನಿರ್ಧರಿಸಿದರೆ ದೂಸರಾ ಮಾತಿಲ್ಲದೇ ಎಲ್ಲರೂ ಒಪ್ಪಿಕೊಳ್ಳಬೇಕು.ಆದರೆ ಬಿಜೆಪಿಯಲ್ಲಿ ಕರ್ನಾಟಕದ ಯಡಿಯೂರಪ್ಪ, ಗುಜರಾತಿನ ನರೇಂದ್ರ ಮೋದಿ, ಮಧ್ಯ ಪ್ರದೇಶದ ಶಿವರಾಜ್ ಚವಾಣ್ ಯಾರು ಬೇಕಾದರೂ ಹೈಕಮಾಂಡ್ ಅನ್ನು ಬೆದರಿಸಬಹುದು. ಬ್ಲಾಕ್ ಮೇಲ್ ಮಾಡಬಹುದು. ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು.
ಈ ಎರಡು ರೀತಿಯ ಹೈಕಮಾಂದ್ ನಿಂದ ದೇಶದಲ್ಲಿ ಜನತಂತ್ರ ಉಳಿಯುವುದಿಲ್ಲ. ಜನತಾಂತ್ರಿಕ ಮೌಲ್ಯಗಳು ಉಳಿಯುವುದಿಲ್ಲ. ಆದರೆ ದುರ್ದವ ಎಂದರೆ ನಮ್ಮಲ್ಲಿರುವ ರಾಜಕೀಯ ಪಕ್ಷಗಳ ಮಾದರಿಗಳು ಇವು.

3 comments:

ವಿ.ರಾ.ಹೆ. said...

ಈ ಹೈಕಮಾಂಡ್ ಸಂಸ್ಕೃತಿ ಸರಿಯಿಲ್ಲ. ರಾಜ್ಯಗಳ ರಾಜಕೀಯ ಅವರವರ ಕೈಯಲ್ಲೇ ಇದ್ದರೆ ಒಳ್ಳೆಯದು. ಆದ್ದರಿಂದ ಅಲ್ಲಿ ಗಡಕರಿ ಹೆದರಿಕೊಂಡರು, ಸೋನಿಯಾಗಾಂಧಿ ಬೇಸರಿಸಿಕೊಂಡರು ಅನ್ನುವುದು ಒಂದು ರೀತಿ ಒಳ್ಳೆಯ ಬೆಳವಣಿಗೆ ಅನ್ನಬಹುದು. ಸುಮ್ಮನೇ ಎಲ್ಲದಕ್ಕೂ ದಿಲ್ಲಿಯೆಡೆಗೆ ಮುಖಮಾಡಿ ನಿಲ್ಲುವುದಕ್ಕಿಂತ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ರಾಜಕೀಯ ಮತ್ತು ಪ್ರಾದೇಶಿಕ ನಾಯಕತ್ವಗಳ ಕಡೆಗೆ ಒತ್ತುಕೊಡುವುದು ಒಳ್ಳೆಯದು.

Thambli said...

preetiya shashidhar
vastu nishta leekhana.vastavakke sariyagi spandisiddeera.
idee vyavasteye brashtagondiruvaga
paryaya vannu srushtisuvudu heege
yembudee nammeduriruva savalu
Allave ?
subraya mattihalli

www.kumararaitha.com said...

ಬಿಹಾರದಲ್ಲಿ ಇವತ್ತು ಆಗಿರುವುದು 1983 ಮತ್ತು 1985ರಲ್ಲಿ ಕರ್ನಾಟಕದಲ್ಲಿ ಆದ ರಾಜಕೀಯ ಸ್ಥಿತ್ಯಂತರ ನೆನಪಿಸುತ್ತದೆ. ಕರ್ನಾಟಕ ರಾಜಕಾರಣದಲ್ಲಿ ಆ ಪರ್ವ ಮುಗಿಯಿತೇ? ಉತ್ತರ ಹೇಳುವುದು ಕಷ್ಟ. ಶಕ್ತಿ ರಾಜಕಾರಣ; ಜಾತಿ ಶಕ್ತಿಕೇಂದ್ರದ ಸುತ್ತ ಗಿರಕಿ ಹೊಡೆಯುತ್ತಿದೆ. ಲಜ್ಜೆ ತೊರೆದ ಮಠಾಧೀಶರು ಬೀದಿಗೆ ಇಳಿದಿದ್ದಾರೆ. 'ನಮವ ಭ್ರಷ್ಟನಾದರೆ ನಿಮವ ಭ್ರಷ್ಟನಲ್ಲವೇ' ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಡ್ಯೂರಪ್ಪ ಥರದ ರಾಜಕಾರಣಿಗಳಿಗೂ ಇದೇ ಬೇಕಾಗಿದೆ. ಇವೆಲ್ಲ ಒಟ್ಟು ಮತಕೇಂದ್ರಿತ ರಾಜಕೀಯದ ಪೋಷಕಾಂಶಗಳು. ಮುಂದೆ ಇದು ನಿವಾರಣೆ ಆಗಬಹುದೇ ಎನ್ನುವುದಕ್ಕೆ ನಿತೀಶ್ ಕುಮಾರ್ ಅಂಥ ಒಬ್ಬ ರಾಜಕಾರಣಿಯೂ ಕರ್ನಾಟಕದಲ್ಲಿ ಕಾಣುತ್ತಿಲ್ಲ. ಇದು ಆತಂಕಕಾರಿ ಸಂಗತಿ. ರಾಜಕಾರಣದಲ್ಲಿ ಜಾತಿಬೇರು ಆಳವಾಗಿ ಇಳಿದಷ್ಟೂ-ಸುಭದ್ರವಾದಷ್ಟೂ ಅದರ ಫಲ ನೆನದರೆ ದಿಗ್ಬ್ರಮೆ......

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...