Saturday, November 27, 2010

ನಾವೇನು ದೇವಲೋಕದಿಂದ ಬಂದವರಲ್ಲ.....!

ನನಗೆ ಮೂರು ಚಕ್ರಗಳಿವೆಯಂತೆ. ತ್ರಿ ಚಕ್ರೇ ಲೋಕ ಸಂಚಾರಿ ಎನ್ನುವುದು ನಂಬಿಕೆ. ಇದನ್ನು ನನ್ನ ಅಮ್ಮ ಮತ್ತು ಮನೆಯ ಪುರೋಹಿತರು ನಾನು ಹೈಸ್ಕೂಲಿಗೆ ಹೋಗುವಾಗಲೇ ಹೇಳಿದ್ದರು. ಈ ಮಾತನ್ನು ನಾನು ಅಗಲೇ ಸಾಬೀತು ಪಡಿಸಿದ್ದೆ. ಹೈಸ್ಕೂಲಿನಲ್ಲಿ ಒಂಬತ್ತನೆ ತರಗತಿಯಲ್ಲಿ ಓದುತ್ತಿರುವಾಗಲೇ ಮನೆಯಿಂದ ಓಡಿ ಹೋಗಿದ್ದೆ. ನಾಲ್ಕು ದಿನ ಬೆಂಗಳೂರಿಗೆ ಓಡಿ ಬಂದವ ಹಾಗೆ ಮನೆಗೆ ಹಿಂತಿರುಗಿದ್ದೆ. ಆಗ ಮನೆಯವರು ಹೇಳಿದ್ದು ಈತ ಕಾಲಿಗೆ ಚಕ್ರ ಕಟ್ಟಿಕೊಂದವನಂತೆ ಓಡಾಡ್ತಾನೆ. ಏನು ಮಾಡುವುದಕ್ಕೆ ಸಾಧ್ಯವಿಲ್ಲ.
ಮೂರು ಚಕ್ರಗಳು ಇರುವುದರಿಂದ ಹಾಗೆ ಓಡಾಡುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಲೋಕ ಸುತ್ತುವುದೆಂದರೆ ನನಗೆ ತುಂಬಾ ಇಷ್ಟ. ಈಗಂತೂ ಯಾರಾದರೂ ಕರೆದರೆ ನಾನು ಹೊರಡುವುದಕ್ಕೆ ರೆಡಿಯಾಗಿ ಬಿಡುತ್ತೇನೆ. ಅದಕ್ಕೆ ಈ ಬೆಂಗಳೂರು ನನ್ನನ್ನು ಹೆದರಿಸುತ್ತಿರುವುದು ಕಾರಣ ಇರಬಹುದು. ಜೊತೆಗೆ ಬೇರೆ ಬೇರೆ ಕಡೆ ಹೋಗುವುದರಿಂದ ಹೊಸ ಜನರ ಪರಚಯವಾಗುತ್ತದೆ. ಹಾಗೆ ಅವರೆಲ್ಲರ ಹತ್ತಿರ ಮಾತನಾಡುವಾಗ ನಮಗೆ ಗೊತ್ತಿಲ್ಲದ ಹಲವರಾರು ವಿಷಯಗಳು ತಿಳಿಯುತ್ತವೆ.
ನಾನು ಈ ವಾರ ಸುಳ್ಯಕ್ಕೆ ಹೋಗಿದ್ದೆ. ಹಾಗೆ ನೋಡಿದರೆ ಈ ಊರು ನನಗೆ ಹೊಸತಲ್ಲ. ಪ್ರಭಾಕರ ಶಿಶಿಲ, ಪುರುಷೋತ್ತಮ ಬಿಳಿಮಲೆ, ಸುಬ್ರಾಯ ಚೊಕ್ಕಾಡಿ ಮೊದಲಾದ ಕನ್ನಡದ ಬರಹಗಾರರನ್ನು ನಾನು ಭೇಟಿ ಮಾಡಿದ್ದು ಇಲ್ಲಿಯೇ. ಅದೂ ಸುಮಾರು ೨೩ ವರ್ಷಗಳ ಹಿಂದೆ. ಇದಾದ ಮೇಲೆ ಸುಳ್ಯಕ್ಕೆ ಹಲವಾರು ಬಾರಿ ಹೋಗಿದ್ದೇನೆ. ಆದರೆ ಅಲಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದು ಇದೇ ಮೊದಲು.
ಸುಳ್ಯ ಹಬ್ಬದ ಮಾಧ್ಯಮ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಅಹ್ವಾನ ಬಂದಾಗ ಸಂತೋಷದಿಂದಲೇ ಒಪ್ಪಿಕೊಂಡೆ. ಸುಳ್ಯ ಹಬ್ಬದ ಹಿಂದಿನ ರೂವಾರಿ ಡಾ. ಶಿವಾನಂದ. ವೈದ್ಯರಾದರೂ ಅವರು ವೈದ್ಯ ವೃತ್ತಿಯನ್ನು ಮಾಡದೇ ಪತ್ರಿಕೋದ್ಯಮಕ್ಕೆ ಬಂದರು. ಸುದ್ದಿ ಬಿಡುಗಡೆ ಎಂಬ ಪತ್ರಿಕಯನ್ನು ಪ್ರಾರಂಭಿಸಿದರು. ಈ ವಾರ ಪತ್ರಿಕೆಗೆ ಈಗ ೨೫ ವರ್ಷ ! ಇದಕ್ಕಾಗಿಯೇ ಅವರು ಸುಳ್ಯ ಹಬ್ಬವನ್ನು ಆಯೋಜಿಸಿದ್ದರು.
ಗ್ರಾಮಾಂತರ ಪ್ರದೇಶದಿಂದ ಪ್ರಕಟಗೊಳ್ಳುವ ಹಲವಾರು ಪತ್ರಿಕೆಗಳನ್ನು ನಾನು ಮನೆಗೆ ತರಿಸಿಕೊಳ್ಳುತ್ತೇನೆ. ಅವುಗಳಲ್ಲಿ ಸುದ್ದಿ ಬಿಡುಗಡೆ ಕೂಡ ಒಂದು. ನನಗೆ ಈ ಪತ್ರಿಕೆ ಇಷ್ಟವಾಗುವುದಕ್ಕೆ ಹಲವಾರು ಕಾರಣಗಳಿವೆ. ಇದು ವಾರ ಪತ್ರಿಕೆಯಾದರೂ ಟಾಬಲೈಡ್ ಗುಣವನ್ನು ಹೊಂದಿಲ್ಲ. ಇದು ದಿನ ನಿತ್ಯದ ಸುದ್ದಿಗಳನ್ನು ನೀಡುವ ವಾರ ಪತ್ರಿಕೆ. ಹಾಗಂತ ಕೇವಲ ವರದಿಗಳನ್ನು ಮಾತ್ರ ನೀಡುವುದಕ್ಕೆ ಪತ್ರಿಕೆ ಸೀಮಿತವಾಗಿಲ್ಲ. ಈ ತಾಲೂಕಿನ ಜನರ ಪರವಾಗಿ ಹಲವಾರು ಬಾರಿ ಹೋರಾಟ ಮಾಡಿದೆ. ಡಾ. ಶಿವಾನಂದ ಅವರೂ ರಸ್ತೆಗೆ ಇಳಿದು ಹೋರಾಟ ಮಾಡಿದ ಹಲವಾರು ಉದಾಹರಣೆಗಳಿವೆ. ಸೋಮವಾರ ಈ ಪತ್ರಿಕೆಬರುವುದನ್ನು ಎರಡು ಮೂರು ತಾಲೂಕಿನ ಜನ ಕಾಯುತ್ತಾರೆ. ರಾಜ್ಯ ಮಟ್ಟದ ದಿನ ಪತ್ರಿಕೆಗಳಲ್ಲಿ ಸುದ್ದಿ ಬಂದರೂ ತಮ್ಮ ಪ್ರೀತಿಯ ಸುದ್ದಿಯಲ್ಲಿ ಅವರಿಗೆ ಸುದ್ದಿ ಬರಲೇ ಬೇಕು. ಹಾಗೆ ಸುಳ್ಯ, ಬೇಳ್ತಂಗಡಿ ಮತ್ತು ಪುತ್ತೂರು ತಾಲೂಕಿನಲ್ಲಿ ಯಾರ ಮನೆಯಲ್ಲಿ ಮಗು ಹುಟ್ಟಲಿ, ಮದುವೆಯಾಗಲಿ< ಯಾರದರೂ ಇಹಲೋಕ ಯಾತ್ರೆಯನ್ನು ಮುಗಿಸಲಿ ಅದರ ಜಾಹಿರಾತು ಸುದ್ದಿಯಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆ ಈ ಮೂರು ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಪ್ರತ್ಯೇಕ ಎಡಿಶನ್ ಗಳನ್ನು ಡಾ. ಶಿವಾನಂದ ಪ್ರಕಟಿಸುತ್ತಾರೆ. ಒಂದು ವಾರ ಪತ್ರಿಕೆ ಬೇರೆ ಬೇರೆ ಪ್ರದೇಶಕ್ಕೆ ಬೇರೆ ಬೇರೆ ಎಡಿಶನ್ ಪ್ರಕಟಿಸುವುದು ಬೇರೆಲ್ಲೂ ಇರಲಿಕ್ಕಿಲ್ಲ.
ಅವರು ಯಾವಾಗಲೂ ಹೊಸದರ ಬಗ್ಗೆ ಆಲೋಚಿಸುತ್ತಿರುತ್ತಾರೆ. ಈಗ ಕೆಲವು ವರ್ಷಗಳ ಹಿಂದೆ ಬೆಂಗಳೂರಿನಿಂದ ಸುದ್ದಿಯ ಆವೃತ್ತಿಯನ್ನು ತರಲು ಅವರು ಯತ್ನ ನಡೆಸಿದ್ದರು. ಹಾಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಸುದ್ದಿ ಸೆಂಟರುಗಳು. ಇವು ಒಂದು ರೀತಿಯಲ್ಲಿ ಮಾಹಿತಿ ಕೇಂದ್ರಗಳು. ಅಲ್ಲಿ ಎಲ್ಲ ರೀತಿಯ ಮಾಹಿತಿಗಳೂ ದೊರಕುತ್ತವೆ.
ಡಾ, ಶಿವಾನಂದ ಅವರ ರಾಜಕೀಯ ನಂಬಿಕೆಗಳೇನೇ ಇರಲಿ, ಅವರು ಸುದ್ದಿಯನ್ನು ಈ ಪ್ರದೇಶದಲ್ಲಿ ಒಂದು ಶಕ್ತಿಯನ್ನಾಗಿ ರೂಪಿಸಿ ಬಿಟ್ಟಿದ್ದಾರೆ. ಹಾಗೆ, ಪ್ರತಿ ಹಳ್ಳಿಯ ಜನ ಕೂಡ ಪತ್ರಿಕೆಯಲ್ಲಿ ಸಹಭಾಗಿಗಳಾಗುವಂತೆ ನೋಡಿಕೊಂಡಿದ್ದಾರೆ.
ಸುಳ್ಯ ಹಬ್ಬ ನಡೆದಿದ್ದು ಎರಡು ದಿನ. ಈ ಎರಡು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಧಕರನ್ನು ಸನ್ಮಾನಿಸಲಾಯಿತು. ಎಲ್ಲ ಪಕ್ಷಗಳ ರಾಜಕಾರಣಿಗಳು ಬಂದು ಹಬ್ಬದಲ್ಲಿ ಪಾಲ್ಗೊಂಡರು.
ಮಾದ್ಯಮಗೋಷ್ಠಿಯಲ್ಲಿ ನಾನು ಮಾತನಾಡಿದ ಮೇಲೆ ನಡೆದಿದ್ದು ಸಂವಾದ ಕಾರ್ಯಕ್ರಮ. ಪತ್ರಿಕೋದ್ಯಮ ಭ್ರಷ್ಟಾಚಾರ ಮೊದಲಾದ ವಿಚಾರಗಳ ಬಗ್ಗೆ ಹಲವಾರು ಪ್ರಶ್ನೆಗಳು. ಈ ಸಂವಾದ ನಡೆದಿದ್ದು ಸುಮಾರು ಎರಡು ಗಂಟೆ. ಆಗ ಅಲ್ಲಿ ತೂರಿ ಬಂದ ಪ್ರಶ್ನೆಗಳು ಇಲ್ಲಿನ ಜನರ ಆಲೋಚನಾ ಕ್ರಮವನ್ನೇ ಸ್ಪಷ್ಟಪಡಿಸುವಂತಿತ್ತು. ಜೊತೆಗೆ ನನಗೆ ಅನ್ನಿಸಿದ್ದು ಪತ್ರಿಕೆಗಳು ಸೇಕ್ರೆಡ್ ಕೌ ಎಂಬ ನಂಬಿಕೆ ಜನರಿಂದ ಮಾಯವಾಗುತ್ತಿದೆ ಎಂಬುದು.
ನಾವು ಬೆಂಗಳೂರಿನಲ್ಲಿ ಕುಳಿತು ಏನು ಮಾಡುತ್ತೇನೆ ಎಂಬುದು ಬೇರೆ ಬೇರೆ ರೂಪಗಳಲ್ಲಿ ಗ್ರಾಮಾಂತರ ಪ್ರದೇಶವನ್ನು ತಲುಪುತ್ತಿದೆ. ಈ ಸಂಪಾದಕರಿಗೆ ಆಡಳಿತ ವರ್ಗ ನೋಟೀಸು ನೀಡಿದೆಯಂತೆ, ಈ ಸಂಪಾದಕರಿಗೆ ಕುಮಾರಸ್ವಾಮಿ ಇಷ್ಟು ಹಣ ನೀಡಿದರಂತೆ ಹೀಗೆ ಎಲ್ಲವನ್ನು ತಾವು ನೋಡಿದಂತೆ ಜನ ಮಾತನಾಡುತ್ತ್ತಾರೆ. ಯಾವ ಯಾವ ಪತ್ರಿಕೆಗಳಲ್ಲಿ ಎಷ್ಟು ಸಂಬಳ ನೀಡುತ್ತಾರೆ, ಇಷ್ಟು ಸಂಬಳ ಪಡೆಯುವವರು ಎಷ್ಟು ಆಸ್ತಿ ಮಾಡಿದ್ದಾರೆ ಎಂಬ ಬಗ್ಗೆಯೂ ಸಾರ್ವಜನಿಕರು ಮಾತನಾಡುತ್ತಾರೆ. ನಾವು ರಾಜಧಾನಿಯಲ್ಲಿ ಕುಳಿತವರು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ ಹಾಗೇ ಏನೇನನ್ನೋ ಮಾಡುತ್ತಿರುತ್ತೇವೆ. ನಾವು ಮಾಡುತ್ತಿರುವುದು ಯಾರಿಗೂ ತಿಳಿಯುವುದಿಲ್ಲ ಎಂದುಕೊಂಡಿರುತ್ತೇವೆ. ಆದರೆ ಅದು ಯಾವ ಮಾಯೆಯೋ ಎಲ್ಲವೂ ಗ್ರಾಮಾಂತರ ಪ್ರದೇಶದವರೆಗೆ ತಲುಬಿಟ್ಟಿರುತ್ತದೆ. ಅವರು ನಾವು ಮಾತನಾಡುವಾಗ ಮನಸ್ಸಿನಲ್ಲೇ ನಗುತ್ತಿರುತ್ತಾರೆ.
ಈ ಸಂವಾದ ನಂತರ ನನಗೆ ಅನ್ನಿಸಿದ್ದು ನಾವು ಅಹಂಕಾರದಿಂದ ಮಾತನಾಡುತ್ತ ನಮ್ಮ ಎದುರಿಗೆ ಕುಳಿತವರನ್ನು ಜಾಡಿಸುತ್ತಿದ್ದರೆ ನಮ್ಮ ಬಗ್ಗೆ ಅರಿತವರು ತಮ್ಮ ಮನಸ್ಸಿನಲ್ಲೇ ಲೇವಡಿ ಮಾಡುತ್ತಿರುತ್ತಾರೆ.
ಅಲ್ಲಿಯೂ ಅಷ್ಟೇ. ಪತ್ರಿಕೋದ್ಯಮಿಗಳಲ್ಲಿ ಹೆಚ್ಚುತ್ತ್ರಿರುವ ಅಕ್ಷರ ಅಹಂಕಾರ, ಭ್ರಷ್ಟತೆಯ ಬಗ್ಗೆ ಹಲವರು ಪ್ರಶ್ನೆಗಳನ್ನು ಕೇಳಿದರು. ಆಗ ನಾನು ಹೇಳಿದೆ.
ನಾವು ಪತ್ರಿಕೋದ್ಯಮಿಗಳೆಂದರೆ, ದೇವ ಲೋಕದಿಂದ ನೇರವಾಗಿ ಇಳಿದು ಬಂದವರಲ್ಲ. ನಾವೂ ಈ ಸಮಾಜದ ಭಾಗ. ನಾವು ಈ ಸಮಾಜದ ಒಳಗೆ ಇದ್ದೂ ಸಾಕ್ಷಿ ಪ್ರಜ್ನೆಯಾಗಿ ಕೆಲಸ ಮಾಡುತ್ತಿರುತ್ತೇವೆ. ಓಳಗೆ ಇದ್ದು ಹೊರಗಿನವರಾಗಿ ನೋಡುವುದಿದೆಯಲ್ಲ, ಅದಕ್ಕೆ ಸಂತನ ಮನಸ್ಸು ಬೇಕು. ಹೋರಾಟಗಾರನ ಕೆಚ್ಚೆದೆ ಬೇಕು, ಸತ್ಯ ನಿಷ್ಟೆ ಬೇಕು, ಪ್ರಾಮಾಣಿಕತೆ ಬೇಕು. ಇದೆಲ್ಲ ಇದ್ದೂ ನಮಗೆ ನಾವು ಹೆದರುತ್ತಿರಬೇಕು. ನಮ್ಮನ್ನೇ ನಾವು ಲೇವಡಿ ಮಾಡಿಕೊಳ್ಳುವ ಮನಸ್ಥಿತಿ ಬೇಕು. ಒಳಗೆ ಇದ್ದೂ ಹೊರಗಿನವರಾಗುವುದು ಸಣ್ನ ಕೆಲಸ ಅಲ್ಲ. ನಾವು ಒಳಗೆ ಇದ್ದೂ ಒಳಗಿನವರಾಗುವ ಅಪಾಯವೇ ಹೆಚ್ಚು. ಹೀಗಾಗಿಯೇ ನಾವು ರಾಜಕೀಯ ವರದಿ ಮಾಡುವವರು ರಾಜಕಾರಣಿಗಳಾಗಿ ಬಿಡುತ್ತೇವೆ. ಯಾರ ಯಾರ ಪರವಾಗಿ ಕೆಲಸ ಮಾಡಲು ಪ್ರಾರಂಭಿಸಿಬಿಡುತ್ತೇವೆ.
ಇಷ್ಟಕ್ಕೆ ನಾವು ಹತಾಶರಾಗಬೇಕಾಗಿಲ್ಲ. ಇವೆಲ್ಲವುದರ ಜೊತೆಗೆ ಪತ್ರಿಕೋದ್ಯಮ ಇಂದಿಗೂ ಜನರ ನಂಬಿಕೆಯನ್ನು ಉಳಿಸಿಕೊಂಡಿದೆ. ಭ್ರಷ್ಟರಾಗದ ಪ್ರಾಮಾಣಿಕ ಪತ್ರಿಕೋದ್ಯಮಿಗಳು ನಮ್ಮ ನಡುವೆ ಇದ್ದಾರೆ. ಇದರಿಂದಾಗಿಯೇ ಪತ್ರಿಕೋದ್ಯಮ ನಮ್ಮಲ್ಲಿ ಹೊಸ ಸಮಾಜದ ಕನಸನ್ನು ಮೂಡಿಸುತ್ತಲೇ ಇದೆ.
ಹೀಗೆ ಇನ್ನೂ ಕೆಲವು ಮಾತುಗಳನ್ನು ನಾನು ಹೇಳಿದೆ. ಅಲ್ಲಿದ್ದವರು ಚೆಪ್ಪಾಳೆ ತಟ್ಟೀದರು.

5 comments:

ಪುಚ್ಚಪ್ಪಾಡಿ said...

ನಿಜ ಸರ್. ಇನ್ನಾದರೂ ಜಾಗೃತವಾಗಬಹುದಾ?.

ಪುಚ್ಚಪ್ಪಾಡಿ said...

ನಿಜ ಸರ್. ಇನ್ನಾದರೂ ಜಾಗೃತವಾಗಬಹುದಾ?.

ವಿ.ಆರ್.ಭಟ್ said...

ಸ್ವಾಮೀ ಭಟ್ಟರೇ, ಮಾಧ್ಯಮದ ಹಳ್ಳಹಿಡಿದದಾರಿ ಎಲ್ಲರಿಗೂ ಅರ್ಥವಾಗಿಹೋದ ಅಂತರಂಗ! ರೋಲ್ ಕಾಲ್ ಮಾಡಿ ಬೆಳೆದ ಅನೇಕ ವಾರಪತ್ರಿಕೆಗಳೂ ಮಾಧ್ಯಮವಾಹಿನಿಗಳೂ ಇದ್ದಾವೆಯೆಂಬುದು ರುಜುವಾತಾದ ಸತ್ಯ. ಮಾಧ್ಯಮದ ಮಂದಿ ಮನುಷ್ಯರೇ ಆದಮೇಲೆ ಸಾಧುಸಂತರ ದಿಕ್ಕನ್ನೇ ತಪ್ಪಿಸುವ ಸಮಾಜದ ಹಲವು ಮುಖಗಳಿಗೆ, ರಾಜಕಾರಣಿಗಳಿಗೆ ಇವರೂ ಹೊರತಲ್ಲವಷ್ಟೇ? ಸಾವಿರದ ನೋಟಿನ ಕಂತೆಗಳನ್ನು ದೂರದಲ್ಲಿ ಹಿಡಿದು [ಸೇಕ್ರೆಡ್ ಕೌ ಗೆ ಹುಲ್ಲುತೋರಿಸಿದಾಗ ಅದು ಬೆನ್ನತ್ತಿ ಹೋಗುವಂತೇ]ಯಾವಮಾಯದಲ್ಲೋ ಎಲ್ಲೋ ಕರೆದು ವ್ಯವಹಾರ ಕುದುರಿಸುತ್ತಾರೆ! ಮಂತ್ರಿಯ ಮಗನೊಬ್ಬ ಕುಡಿದು ಗಲಾಟೆಮಾಡಿದ ವರದಿ ಒಮ್ಮೆ ಲೂಮ್ ಲೈನ್ ನಲ್ಲಿ ಬಂದರೆ ಸಾಕು, ಆ ವಾಹಿನಿಗೆ ಕಾಲ್ ಬರುತ್ತದೆ-" ನಿಮನ್ನು ಕಾಣಬೇಕಾಗಿದೆ ಅರ್ಜೆಂಟಾಗಿ ನಮ್ಮ ಸೆಕ್ರೆಟರಿ ನಿಮ್ಮಲ್ಲಿಗೆ ಬಂದುಹೋಗುತ್ತಾರೆ " ಅಲ್ಲಿಗೆ ಸುದ್ದಿಯನ್ನು ನೋಡುತ್ತಿರುವ ಮಹಾಶಯ ಮುಂದಿನ ವಿಸ್ತಾರದ ಸುದ್ದಿಯನ್ನು ನಿರೀಕ್ಷಿಸಿ ಕುಳಿತು ಬಿಸಿಲುಗುದುರೆಯ ಬೆನ್ನೇರುತ್ತಾನೆ! ಆ ವರದಿಗೆ ಅಲ್ಲಿಗೇ ಇತಿಶ್ರೀ ! ಇಂತಹ ಸಾವಿರಾರು ಘಟನೆಗಳು ನಡೆಯುತ್ತಿರುವ ಸಾಕ್ಷಿ ದಿನಂಪ್ರತಿ ನೋಡಸಿಗುವಾಗ ಯಾವ ಮನಸ್ಸಿನಿಂದ ಪತ್ರಿಕೆಯವರು, ಮಾಧ್ಯಮದವರು ಕೆಲಸಮಾಡಬೇಕು ಎಂಬುದನ್ನು ತಾವೇ ಊಹಿಸಿ. ಮೊನ್ನೆ ನನ್ನ ಗುರು ಶತಾವಧಾನೀ ಶ್ರೀ ಆರ್.ಗಣೇಶ್ ಅವರಿಗೆ ಯಾರೋ ’ಗುರೂಜಿ’ ಎಂದಾಗ ಅವರು ಹೇಳಿದ್ದು " ನೀವು ಬೇರೇ ಯಾವುದೇ ಅತ್ಯಂತ ಕೆಟ್ಟಶಬ್ದದಲ್ಲಿ ಸಂಬೋಧಿಸಿ ಆದರೆ ಗುರೂಜಿ ಅಂತ ಮಾತ್ರ ಕರೆಯಬೇಡಿ, ಅದಕ್ಕಿರುವ ಸ್ಥಾನ ಹೊರಟುಹೋಗಿದೆ, ಒಂದೊಮ್ಮೆ ನೀವು ಕರೆದಾಗ ನಾನು ಒಪ್ಪಿದರೆ ನನಗೂ ಅವರಿಗೂ ವ್ಯತ್ಯಾಸ ಇರುವುದಿಲ್ಲ " ಎಂಬುದಾಗಿ. ಇದೂ ಕೂಡ ಎಷ್ಟು ಸತ್ಯದ ಮಾತುನೋಡಿ! ತಮ್ಮನ್ನು ಸಧ್ಯದಲ್ಲೇ ಭೇಟಿಮಾಡಲು ಬಯಸಿದ್ದೇನೆ. ಸಹಜವಾಗಿ, ಬರುತ್ತೇನೆ, ನಮಸ್ಕಾರ

ಮಹಿಪಾಲ್ ರೆಡ್ಡಿ said...

-ಮಹಿಪಾಲರೆಡ್ಡಿ ಮುನ್ನೂರು, ಗುಲ್ಬರ್ಗ,

ಮಹಿಪಾಲ್ ರೆಡ್ಡಿ said...

ಸರ್,
ಪತ್ರಿಕೋದ್ಯಮದ ಬಗ್ಗೆ ತಾವು ಬರೆದ ಲೇಖನ ಸಾಂದರ್ಭಿಕ. ಮೀಡಿಯಾದಲ್ಲಿ ಇಂಥವರೂ ಇರ್ತಾರ ಅನ್ನವುದಕ್ಕೆ ಇದೊಂದು ನಿದರ್ಶನ.
-ಮಹಿಪಾಲರೆಡ್ಡಿ ಮುನ್ನೂರು, ಗುಲ್ಬರ್ಗ.
9535998659