Monday, December 6, 2010

ನಾನು ನನ್ನ ಗೆಟಪ್ಪು ಮತ್ತು ಇಂದಿನ ಆಧುನಿಕ ಜಗತ್ತು....!

ನಾವೆಲ್ಲ ಡಾ. ರಾಜಕುಮಾರ್, ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ ಹಾಗೂ ಯಕ್ಷಗಾನ ಬಯಲಾಟವನ್ನು ನೋಡಿ ಬೆಳೆದವರು. ನಮಗೆ ಅಂದರೆ ನನ್ನ ತಲೆ ಮಾರಿನವರಿಗೆ ಇವರೇ ಒಂದು ರೀತಿಯಲ್ಲಿ ಆದರ್ಶವಾಗಿದ್ದರು. ರಾಜೇಶ್ ಖನ್ನಾ ನವಿರಾಗಿ ಮಾತನಾಡುವ ರೀತಿ ಹೆಚ್ಚು ಇಷ್ಟವಾಗುತ್ತಿತ್ತು. ಆತನ ಪ್ರೀತಿ ನಿವೇದನೆಯ ವಿಧಾನ ಮನಸ್ಸಿಗೆ ತಟ್ಟುತ್ತಿತ್ತು. ಪ್ರೀತಿ ನಿವೇದನೆ ಮಾಡುವ ರೀತಿ ಇದೇ ಎಂದು ನಾನು ಬಲವಾಗಿ ನಂಬಿದ್ದ ಕಾಲ ಅದು. ಆದರೆ ಹೈಸ್ಕೂಲಿಗೆ ಹೋಗುತ್ತಿದ್ದ ಆ ದಿನಗಳಲ್ಲಿ ನನಗೆ ಆಗತಾನೇ ಮೀಸೆ ಮೂಡುತ್ತಿತ್ತು. ಆಗ ಬಂದಿದ್ದು ವಿಷ್ಣುವರ್ಧನ ಅಭಿನಯದ ನಾಗರಹಾವು. ಈ ಸಿನೆಮಾ ಪ್ರೀತಿಯ ಬಗೆಗಿನ ನನ್ನ ಕಲ್ಪನೆಯನ್ನು ಬದಲಿಸಿಬಿಟ್ಟಿತು. ಹುಡುಗಿಯರನ್ನು ಪ್ರೀತಿ ಮಾಡಲು ರಾಮಚಾರಿಯ ನಡವಳಿಗೆ ಮನಸ್ಥಿತಿ ಬೇಕು ಎಂದು ನನ್ನ ನಂಬಿಕೆಯಲ್ಲಿ ಸ್ವಲ್ಪ ಮಾರ್ಪಾಟು ಮಾಡಿಕೊಂಡೆ. ಎಲ್ಲರ ಜೊತೆ ನಗುನಗುತ್ತ ಮಾತನಾಡುತ್ತಿದ್ದ ನಾನು ನಗುವುದನ್ನು ಸ್ವಲ್ಪ ಕಡಿಮೆ ಮಾಡಿದೆ. ಸಿಟ್ಟು ಸಿಡುಕು ಜಗಳ ಎಲ್ಲವೂ ನನ್ನ ವ್ಯಕ್ತಿತ್ವದಲ್ಲಿ ಸೇರಿಕೊಂಡವು. ಆದರೆ ನನ್ನ ಈ ಬದಲಾದ ವರ್ತನೆಯಿಂದ ಯಾವ ಬದಲಾವಣೆಯೂ ಅಗಲಿಲ್ಲ. ಯಾವ ಹುಡುಗಿಯೂ ಈ ಬದಲಾವಣೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನನಗೆ ಮಾರ್ಗರೇಟ್ ಆಗಲೀ, ಅಲಮೇಲು ಆಗಲೀ ಸಿಗಲಿಲ್ಲ.
ಆಗ ನನಗೆ ಯಾಕೋ ಈ ರಾಮಾಚಾರಿಯ ಗೆಟ್ ಅಪ್ ಪ್ರೀತಿ ಪ್ರೇಮವನ್ನು ಕೊಡುವುದಿಲ್ಲ ಎಂದು ಅನಿಸಲು ಪ್ರಾರಂಭವಾಯಿತು. ಆಗ ಮತ್ತೆ ನಾನು ರಾಜೇಶ್ ಖನ್ನಾನತ್ತ ಹಿಂತಿರುಗಿದೆ. ರಾಜೇಶ್ ಖನ್ನಾ ಹಾಕುತ್ತಿದ್ದ ಕುತ್ತಿಗೆ ಮುಚ್ಚುವ ಶರ್ಟ್ ಹೊಲಿಸಲು ಊರಿನ ಎಲ್ಲ ಟೈಲರ್ಸ್ ಹತ್ತಿರ ಓಡಾಡಿದೆ. ಕೊನೆಗೆ ಒಬ್ಬನನ್ನು ರಾಜೇಶ್ ಖನ್ನಾನ ಹಾಥಿ ಮೇರೆ ಸಾಥಿ ಸಿನೇಮಾಕ್ಕೆ ನನ್ನ ಖರ್ಚಿನಲ್ಲಿ ಕರೆದೊಯ್ದೆ. ಆತ ಸಿನೇಮಾ ನೋಡಿದವ ಅದೇ ರೀತಿಯ ಶರ್ಟ್ ಹೊಲಿದು ಕೊಟ್ಟ. ಆದರೆ ನನ್ನ ಊರಿನ ಜನ ಇದನ್ನು ನೋಡಿ ನಕ್ಕರು. ಊರಿನ ಪರಿಸರಕ್ಕೂ ಈ ರೀತಿಯ ಉಡುಪಿಗೂ ಹೊಂದಾಣಿಕೆ ಆಗುತ್ತಿರಲಿಲ್ಲ. ಅಷ್ಟರಲ್ಲಿ ಹೈಸ್ಕೂಲು ಮುಗಿಸಿ ಕಾಲೇಜಿಗೆ ಬಂದಿದ್ದೆ. ಕಾಲೇಜಿಗೆ ಹೋಗುವಾಗಲೇ ಉಳಿದವರಿಗಿಂತ ಬೇರೆಯಾಗಿರಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೆ. ಹೀಗಾಗಿ ನನ್ನ ಉಡುಪನ್ನು ಖಾದಿಗೆ ಬದಲಾಯಿಸಿ ಬಿಟ್ಟೆ. ಖಾದಿ ನಮ್ಮ ಮನೆಯ ಉಡುಪು. ನನ್ನ ಅಪ್ಪನಾಗಲೀ, ಅಜ್ಜನಾಗಲೀ ಕಾದಿಯನ್ನು ಬಿಟ್ಟು ಬೇರೆ ಉದುಪನ್ನು ಹಾಕುದವರೇ ಅಲ್ಲ. ಜೊತೆಗೆ ನಮ್ಮದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಎಲ್ಲವನ್ನು ಕಳೆದುಕೊಂಡ ಕುಟುಂಬ. ಹತ್ತಾರು ಎಕರೆ ಅಡಿಕೆ ತೋಟವನ್ನು ಕರ ನಿರಾಕರಣ ಚಳವಳಿಯಲ್ಲಿ ಕಳೆದುಕೊಂಡರೂ ಕಾಂಗ್ರೆಸ್ ಮೋಹವನ್ನು ಬಿಡದ ಕುಟುಂಬ. ಸ್ವಾತಂತ್ರ್ಯ ಬಂದ ಮೇಲೂ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುತ್ತ ಬಂದ ಕುಟುಂಬ.
ನಾನು ಖಾದಿ ಪ್ಯಾಂಟು ಮತ್ತು ಶರ್ಟ್ ಧರಿಸಿ ಕಾಲೇಜಿಗೆ ಹೋಗಲು ಪ್ರಾರಂಭಿಸಿದೆ. ಅಷ್ಟರಲ್ಲಿ ಸಮಾಜವಾದಿ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ನನ್ನ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದ್ದವು. ಚಂದ್ರಶೇಖರ್ ಪಾಟೀಲ್, ದೇವಯ್ಯ ಹರವೆ, ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ ಮೊದಲಾದವರ ಸಂಪರ್ಕದಿಂದ ನನ್ನ ಡ್ರೆಸ್ ಕೋಡ್ ಬದಲಿಸಿದೆ. ಖಾದಿಯನ್ನು ಬಿಟ್ಟು ನಾರ್ಮಲ್ ಬಟ್ಟೆಯನ್ನು ಧರಿಸಲು ಪ್ರಾರಂಭಿಸಿದೆ. ಜೊತೆಗೆ ಕಾಂಗ್ರೆಸ್ ವಿರೋಧಿ ಮನಸ್ಥಿತಿಯೂ ಬಲವಾಗತೊಡಗಿತು. ಅಪ್ಪ ಅಜ್ಜನ ಜೊತೆ ಕಾಂಗ್ರೆಸ್ ಪಕ್ಷವನ್ನು ಹಿಯಾಳಿಸಲು ಪ್ರಾರಂಭಿಸಿದೆ. ಇದು ಮನೆಯಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿ ಬಿಟ್ಟಿತು. ಅಜ್ಜ ಕಾಂಗ್ರೆಸ್ ಪಕ್ಷವನ್ನು ಬೈದಾಗಲೆಲ್ಲ ರುದ್ರಾವತಾರ ತಾಳಿ ನನ್ನ ಮೇಲೆ ಏರಿ ಬರುತ್ತಿದ್ದ. ಕೆಲವೊಮ್ಮೆ ನನ್ನ ಕಾಂಗ್ರೆಸ್ ವಿರೋಧಿ ಮಾತುಗಳನ್ನು ಕೇಳಿದಾಗ ಪೆಟ್ಟು ನೀಡುತ್ತಿದ್ದ. ಕಾಂಗ್ರೆಸ್ ಪಕ್ಷ ಮತ್ತು ಶ್ರೀಮತಿ ಇಂದಿರಾ ಗಾಂಧಿಯವರನ್ನು ಟೀಕಿಸಿ ಅಜ್ಜನ ಕೈಯಲ್ಲಿ ಹೊಡೆತ ತಿನ್ನುವುದು ಸಾಮಾನ್ಯವಾಯಿತು.
ಆದರೆ ಒಬ್ಬ ಕ್ರಾಂತಿಕಾರಿಯಾಗಲು ನಾನು ತೀರ್ಮಾನಿಸಿ ಆಗಿತ್ತು. ಹೀಗಾಗಿ ಬಟ್ಟೆ ಧಿರಸಿನ ಬಗ್ಗೆ ಲಕ್ಷ ನೀಡುವುದು ಕಡಿಮೆಯಾಯಿತು.ಕ್ರಾಂತಿ ಮಾಡಲು ಹೊರಟವರು ಪ್ರೀತಿಯ ಬಂಧನದಲ್ಲಿ ಬೀಳ ಬಾರದು ಎಂಬ ತೀರ್ಮಾನಕ್ಕೂ ನಾನು ಬಂದಿದ್ದೆ. ಹೀಗಾಗಿ ಪ್ರೀತಿಯನ್ನು ಬಿಟ್ಟು ಊರಿನಲ್ಲಿ ಚಳವಳಿ ಮಾಡಲು ಮುಂದಾದೆ. ನಾನು ಮೊದಲು ಚಳವಳಿ ಪ್ರಾರಂಭಿಸಿದ್ದು ರಾಮಚಂದ್ರಾ ಪುರದ ಸ್ವಾಮೀಜಿಯ ವಿರುದ್ಧ. ಇದು ಉರಿನಲ್ಲಿ ದೊಡ್ ಗಲಾಟೆಗೆ ಕಾರಣವಾಯಿತು. ಹವ್ಯಕ ಸಮಾಜದಿಂದ ನನಗೆ ಭಹಿಷ್ಕಾರ ಹಾಕಲಾಯಿತು. ಈ ಗಲಾಟೆ ಹೊಡೆದಾಟದ ವರೆಗೆ ಹೋದಾಗ ನಾನು ಊರು ಬಿಡಲು ನಿರ್ಧರಿಸಿದೆ. ಬೆಂಗಳೂರಿಗೆ ಬಂದೆ. ಈ ಕಥೆಯನ್ನು ಇನ್ನೊಮ್ಮೆ ಹೇಳುತ್ತೇನೆ.
ಬೆಂಗಳೂರಿಗೆ ಬಂದ ಮೇಲೆ ಪಾನ ಬೀಡಾಕ್ಕು ಕಾಸಿರಲಿಲ್ಲ. ಹೀಗಾಗಿ ಬಟ್ಟೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಸ್ಥಿತಿ ಇರಲಿಲ್ಲ. ಆಗ ಇದ್ದುದು ಒಂದೆ ಪ್ಯಾಂಟು ಶರ್ಟು. ಜೊತೆಗೆ ಒಂದು ಹಸಿರು ಜುಬ್ಬಾ ಇತ್ತು. ಈ ಜುಬ್ಬಾದ ಮೇಲೆ ನಾನು ಪಾನ್ ಉಗಿದುಕೊಂಡು ದೊಡ್ಡ ಕಲೆಯಾಗಿತ್ತು. ಅದು ಎಷ್ಟು ತೊಳೆದರೂ ಹೋಗುತ್ತಿರಲಿಲ್ಲ. ನಾನು ಉಷಾಳನ್ನು ಪ್ರೀತಿಸುತ್ತಿದ್ದ ಆ ದಿನಗಳಲ್ಲಿ ಅವಳೂ ಈ ಕಲೆಯ ಬಗ್ಗೆ ಕೇಳಿದಾಗ ಇದು ಕಲೆಯಲ್ಲ ಜುಬ್ಬಾದ ಡಿಸೈನ್ ಎಂದು ಹೇಳಿ ನಂಬಿಸಿ ಬಿಟ್ಟಿದ್ದೆ. ಬಹಳಷ್ಟು ನನ್ನ ಸ್ನೇಹಿತರು ನನ್ನ ಜುಬ್ಬಾದ ಮೇಲಾಗಿದ್ದ ಕಲೆಯನ್ನು ಡಿಸೈನ್ ಎಂದೇ ನಂಬಿದ್ದರು. ಆದರೆ ಆ ದಿನಗಳಲ್ಲಿ ಬಟ್ಟೆಯ ಬಗ್ಗೆ ಅಂತಹ ಆಸಕ್ತಿ ಉಳಿದಿರಲಿಲ್ಲ. ಜೊತೆಗೆ ಒಳ್ಳೆಯ ಬಟ್ಟೆ ಹಾಕಿಕೊಂಡರೆ ಹುಡುಗಿಯರು ಆಕರ್ಷಿತರಾಗುತ್ತಾರೆ ಎಂಬುದನ್ನು ನಾನು ನಂಬುತ್ತಿರಲಿಲ್ಲ. ಬಟ್ಟೆಯ ಮೇಲೆ ಆಕರ್ಷಿತರಾಗುವವರು ವ್ಯಕ್ತಿತ್ವದ ಬಗ್ಗೆ ಏನನ್ನೂ ತಿಳಿದುಕೊಂಡಿರುವುದಿಲ್ಲ. ಇದರಿಂದ ಯಾವ ಪ್ರಯೋಜನವೂ ಆಗದು ಎಂದು ನಾನು ನಂಬಿದ್ದೆ.
ಆದರೆ ಬಟ್ಟೆಯ ಮಹತ್ವ ನನಗೆ ತಿಳಿದಿದ್ದು ನಾನು ಜೀ ನ್ಯೂಸ್ ನ ಬೆಂಗಳೂರು ಬ್ಯುರೋದ ಮುಖ್ಯಸ್ಥನಾದ ಮೇಲೆ. ಒಮ್ಮೆ ಜೀ ಟೀವಿಯ ಮುಖ್ಯಸ್ಥ ಸುಭಾಷ್ ಚಂದ್ರ ಅವರ ಜೊತೆ ಮೀಟಿಂಗ್ ವ್ಯವಸ್ಥೆಯಾಗಿತ್ತು. ನಾನು ಸಭೆಗೆ ಹೋದಾಗ ಸುಭಾಷ್ ಚಂದ್ರ ಅವರ ಸೆಕ್ರೇಟರಿ ನನ್ನ ಕಾಲನ್ನು ಮತ್ತೊಮ್ಮೆ ನನ್ನನ್ನು ನೋಡುತ್ತಿದ್ದಳು. ಅವಳು ಯಾಕೆ ಹೀಗೆ ನೋಡುತ್ತಿದ್ದಾಳೆ ಎಂಬುದು ಆಗ ನನಗೆ ತಿಳಿಯಲಿಲ್ಲ. ಸಭೆ ಮುಗಿಸಿ ಹೊರಕ್ಕೆ ಬಂದಾಗ ಆಕೆ ನನ್ನನ್ನು ಕರೆದಳು. ಇನ್ನು ಮೇಲೆ ಚೆರಮೆನ್ ಮೀಟಿಂಗ್ ಗೆ ಬರುವಾಗ ಸೂಟ್ ಧರಿಸಿ ಬರಬೇಕು ಎಂದು ಸೂಚಿಸಿದಳು. ನಾನು ನನ್ನ ಮದುವೆಯಲ್ಲೂ ಸೂಟ್ ಹಾಕಿದವನಲ್ಲ. ಶೂ ಧರಿಸಿದವನಲ್ಲ. ಶೂ ಧರಿಸಿದರೆ ನನಗೆ ಯಾರೋ ನನ್ನ ಕಾಲು ಹಿಡಿದು ಎಳೆದಂತಾಗುತ್ತದೆ. ಆದರೆ ನಗೆ ಬೇರೆ ದಾರಿಯಿರಲಿಲ್ಲ. ಪ್ರಥಮ ಬಾರಿಗೆ ಬ್ಲೇಸರ್ ಮತ್ತು ಶೂ ಖರೀದಿಸಿದೆ. ನಂತರ ಸುವರ್ಣ ಚಾನಲ್ ಸೇರಿದ ಮೇಲೆ ಇನ್ನೂ ಒಂದೆರಡು ಬ್ಲೇಸರ್ ಖರಿದಿಸಿದೆ.
ಆದರೆ ಈಗ ನನ್ನನ್ನು ಬಟ್ಟೆಗಳು ಹೆದರಿಸುತ್ತವೆ. ಮೈಮೇಲೆ ಕೋಟು ಹೇರಿಕೊಂಡರೆ ಸೇಖೆಯಲ್ಲೂ ಶೂ ಧರಿಸಿದರೆ ನಾನು ಹೈರಾಣಾಗಿ ಹೋಗುತ್ತೇನೆ. ಅದು ನನ್ನ ವ್ಯಕ್ತಿತ್ವಕ್ಕೆ ಹೊಂದುವುದಿಲ್ಲ. ಆದರೆ ಇವತ್ತಿನ ಬದುಕು ಇದೆಯಲ್ಲ, ಅದೂ ಸಹ ಮಾರಾಟದ ವಸ್ತುವೇ.ನಾನು ನನ್ನನ್ನು ಮಾರಾಟ ಮಾಡಿಕೊಳ್ಳಲು ಇದನ್ನೆಲ್ಲ ಮಾಡಲೇಬೇಕು. ಅದಿಲ್ಲದಿದ್ದರೆ ಇಂದಿನ ಕಾರ್ಪುರೇಟ್ ಜಗತ್ತು ನಮ್ಮನ್ನು ತಿರಸ್ಕಿರಿಸಿ ಬಿಡುತ್ತದೆ.
ಇತ್ತೀಚಿಗೆ ಕಾರ್ಪುರೇಟ್ ಮೀಟಿಂಗ್ ಗೆ ಹೋಗುವಾಗ ಸುವರ್ಣ ಬಿಟ್ಟ ಮೇಲೆ ಮೂಲೆ ಸೇರಿದ್ದ ಬ್ಲೇಜರ್ ಅನ್ನು ಹೊರಕ್ಕೆ ತೆಗೆದೆ. ಅದನ್ನು ಹಾಕಿಕೊಂಡು ಹೋಗುವಾಗ ನಾನು ಯಾವುದೋ ಸರ್ಕಸ್ಸಿನ ಜೋಕರ್ ಎಂದು ಅನ್ನಿಸುತ್ತಿತ್ತು. ಆಗ ನಾನು ಹೇಳಿಕೊಂಡಿದ್ದು; ಶಶಿಧರ್ ಭಟ್ ನೀನು ಇದೆಯಲ್ಲ, ಬದುಕುವುದನ್ನು ಕಲಿಯುತ್ತಿದೆಯಲ್ಲೋ ಮಹಾರಾಯಾ ...!

8 comments:

http://santasajoy-vasudeva.blogspot.com said...

shashi sir nimma haleya foto upload maadiddiddare channagirtaa ittu... plz maadi sir..

shashidhar Bhat said...

ಜಯಶ್ರೀ
ನಾನು ನನ್ನ ಹಳೆಯ ಫೋಟೋ ಇಟ್ಟಿಲ್ಲ. ನಾನು ಮಗುವಾಗಿದ್ದಾಗಿನ ಫೋಟೋ ಅಪ್ಪ ಅಮ್ಮನ ಬಳಿ ಇದೆ.ಅವರು ನನ್ನ ನೆನಪಾದಾಗ ಅದನ್ನ ನೋಡ್ತಾ ಇರ್ತಾರೆ

ಶಶಿಧರ್ ಭಟ್

ಮಹೇಶ ಭಟ್ಟ said...

ನನಗೂ ಶೂ ಹಾಕುವಾಗ ಎಷ್ಟೋ ಸಾರಿ ಅನ್ನಿಸಿತ್ತು, ಇದಕ್ಕಿಂತ ಜಾಬ್ ಬಿಡುವದೇ ಒಳ್ಳೆಯದು ಎಂದು.

PARAANJAPE K.N. said...

ಬಹಳ ಚೆನ್ನಾಗಿದೆ ನಿಮ್ಮ ಅನುಭವಕಥನ. ಹೌದು ಇ೦ದು ನಾವೆಲ್ಲ ಮಾರಾಟದ ಸರಕುಗಳ೦ತೆ ಆಗಿ ಬಿಟ್ಟಿದ್ದೇವೆ. ಒಬ್ಬ ವ್ಯಕ್ತಿಯ ದಿರಿಸಿಗೆ, ಮಾತಿನ ಮೋಡಿಗೆ, ಬಹುತೇಕ ಜನ ಇ೦ದು ಮರುಳಾಗುತ್ತಾರೆ. ಆತನೊಳಗಿನ ಪ್ರತಿಭೆ, ಆ೦ತರ್ಯದ ಅ೦ತಸ್ಸತ್ವ ವನ್ನು ಅರಿತು ವ್ಯಕ್ತಿಗೆ ಗೌರವ ಕೊಡುವವರನ್ನು ದುರ್ಬೀನು ಹಾಕಿ ಹುಡುಕಬೇಕು. ನನ್ನ ಬ್ಲಾಗಿಗೂ ಬನ್ನಿ ಸ್ವಾಮಿ.

ಮಹಿಪಾಲ್ ರೆಡ್ಡಿ said...

ಸರ್, ತಮ್ಮ ಲೇಖನಗಳು ವಾಸ್ತವತೆಯಿಂದ ಕೂಡಿರುತ್ತವೆ. ಮಾಧ್ಯಮದ ಬಗ್ಗೆ ಇರುವ ಲೇಖನಗಳಂತೂ ನಿಜಕ್ಕೂ ಓದವಿಕೆಗೆ ಹಚ್ಚುತ್ತವೆ. ನಾನು ನನ್ನ ಗೆಟಪ್ಪು ಮತ್ತು ಇಂದಿನ ಆಧುನಿಕ ಜಗತ್ತು ಕುರಿತು ಲೇಖನ ಫೆಂಟಾಸ್ಟಿಕ್.
-ಮಹಿಪಾಲರೆಡ್ಡಿ ಮುನ್ನೂರು, ಗುಲ್ಬರ್ಗ-
ಬೆಂಗಳೂರು.

ಮಹಿಪಾಲ್ ರೆಡ್ಡಿ said...

ಸರ್, ತಮ್ಮ ಲೇಖನಗಳು ಓದುವುದಕ್ಕೆ ಹಚ್ಚುತ್ತವೆ. ಗೆಟಪ್ಪು ಮತ್ತು ಇಂದಿನ ಆಧುನಿಕ ಜಗತ್ತು ಲೇಖನ ಚೆನ್ನಾಗಿದೆ.
-ಮಹಿಪಾಲರೆಡ್ಡಿ ಮುನ್ನೂರು,
ಗುಲ್ಬರ್ಗ್, ಬೆಂಗಳೂರು.

www.kumararaitha.com said...

ಲೇಖನ ಸಖತ್ತಾಗಿದೆ ಸರ್... ಬಂಡಾಯ ನಿಮ್ಮ ಅಂತರ್ಗತ ಗುಣ ಅಂಬೋದು ತಿಳಿಯುತ್ತೆ. ನಿಜಕ್ಕೂ ನೀವು ಯಾವ ಹಿರೋಗಿಂತ ಕಡಿಮೆಯಿಲ್ಲ. ಇದು ಹೊಗಳಿಕೆಯಲ್ಲ ವಾಸ್ತವ

Malathesh Urs Harthikote said...

ಸಾರ್ . ತಮ್ಮ ಬರಹಗಳು ನನ್ನ ಬದುಕಿನಲ್ಲಿ ಸಾಕಷ್ಟು ಬದಲಾವಣೆ ತಂದಿವೆ.ಬರಹಗಳು ಬದುಕಿನ ಪ್ರತಿ ಕ್ಷಣವನ್ನು ನೆನಪಿಸುತ್ತವೆ. ತಮ್ಮ ಒಂದೊಂದು ಅಕ್ಷರದ ಮಾತುಗಳು ನನ್ನ ಅಪ್ಪನ ಮಾತುಗಳನ್ನೆ ನೆನಪಿಸುತ್ತವೆ. ಹೊಸ ಹಾದಿಯ ಯುವ ಪೀಳಿಗೆಗೆ ನೀವು ನಿಜಕ್ಕೂ ದಾರಿ ದೀಪ. ಸಾರ್.

-ಮಾಲತೇಶ್ ಅರಸ್ ಚಿತ್ರದುರ್ಗ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...