Sunday, November 20, 2011

ನನ್ನ ಶಾಲೆ ಮತ್ತು ಮೋಟು ಕಾನಿನ ಭೂತ...!

ನಾನು ಓದಿದ ಶಾಲೆಗೆ ನೂರು ವರ್ಷ !
ಈ ಶಾಲೆ ಇರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಸುಮಾರು ನಾಲ್ಕು ಕಿಮೀ ದೂರದಲ್ಲಿ. ಸಿದ್ಧಾಪುರದಿಂದ ಸಿರ್ಸಿ ಮಾರ್ಗದಲ್ಲಿ ಬಂದು ಹಾರ್ಸಿಕಟ್ಟಾಗೆ ಹೋಗುವ ದಾರಿಯಲ್ಲಿ ತಿರುಗಿಕೊಂಡರೆ ಸಿಗುತ್ತದೆ, ಕೋಲಸಿರ್ಸಿ. ಆದರೆ ಆ ಊರನ್ನು ಕೋಲಸಿರ್ಸಿ ಎಂದು ಸಂಬೋಧಿಸುವುದು ತುಂಬಾ ಕಡಿಮೆ. ಜನರ ಬಾಯಲ್ಲಿ ಇದು ಕೋಲ್ಸೆ. ಈ ಊರಿಗೆ ಕೋಲಸಿರ್ಸಿ ಎಂಬ ಹೆಸರು ಯಾಕೆ ಬಂತು ಎಂಬುದು ಯಾರಿಗೂ ತಿಳಿಯದು. ಬಹುಶಃ ಸಿರ್ಸಿ ಸಿದ್ದಾಪುರದ ದಾರಿಯಲ್ಲಿ ಈ ಹೆಸರು ಬಂದರೂ ಬಂದಿರಬಹುದು.
ನಾನು ಆ ಶಾಲೆಗೆ ಹೋಗುವಾಗ ನಡೆದುಕೊಂಡೇ ಹೋಗಬೇಕಗಿತ್ತು. ಸುಮಾರು ಮೂರು ಕಿಮೀ ಕಾಡಿನ ದಾರಿ. ಆ ಕಾಡಿನ ದಾರಿಯಲ್ಲಿ ನನ್ನ ಜೊತೆಗೆ ಶಾಲೆಗೆ ಬರುತ್ತಿದ್ದ ನನ್ನ ಚಿಕ್ಕಪ್ಪ ಬಾಲಚಂದ್ರ ಹಾಗೂ ನಾನು ಹಲವು ಸಲ ಹುಲಿಯನ್ನು ನೋಡಿದ್ದುಂಟು. ಮಲಗಿರುವ ಹುಲಿಯನ್ನು ಕಲ್ಲು ಹೊಡೆದು ಎಬ್ಬಿಸುವ ಬಗ್ಗೆ ಮಾತನಾಡಿದ್ದು ಉಂಟು. ಆದರೆ ಅಲ್ಲಿ ಇಂದು ಹುಲಿಯೂ ಇಲ್ಲ, ಆಗಿನ ಕಾಡು ಇಲ್ಲ.
ಅದರ ಜೊತೆಗೆ ಅರ್ಧ ದಾರಿಯಲ್ಲಿ ಇದ್ದ ಮೋಟ ಕಾನಿನ ಭೂತ..
ಈ ಭೂತ ಸ್ಥಾನದ ಹಿಂದೆ ಸ್ಮಶಾನವಿತ್ತು. ಹೀಗಾಗಿ ಈ ಭೂತಕ್ಕೆ ಭಯಾನಕತೆ ಕೂಡ ಬಂದಿತ್ತು. ಈ ದಾರಿಯಲ್ಲಿ ಸಾಗುವವರು ಭೂತನಿಗೆ ಭಯ ಭಕ್ತಿಯಿಂದ ಕೈಮುಗಿದು ಸಾಗುತ್ತಿದ್ದರು. ಹಾಗೆ ಅಮಾವಾಸ್ಯೆಯೆಂದು ಹಲವರು ಅಲ್ಲಿ ಕುರಿ ಕೊಯ್ಯುತ್ತಿದ್ದರು. ಕೊಯ್ದ ಕುರಿಯ ರಕ್ತವನ್ನು ಭೂತದ ಕಲ್ಲಿಗೆ ಅಭಿಷೇಕ ಮಾಡುತ್ತಿದ್ದರು. ಇದರಿಂದ ಕೆಲವು ದಿನಗಳ ಕಾಲ ಭೂತನ ಕಲ್ಲು ರಕ್ತದಿಂದಾಗಿ ಕೆಂಪಗೆ ಕಾಣುತ್ತಿತ್ತು. ಮೋಟಕಾನಿನ ಈ ಭೂತ ತುಂಬಾ ಶಕ್ತಿವಂತ ಎಂದು ನನ್ನ ಅಜ್ಜ ಆಗಾಗ ಹೇಳುತ್ತಿದ್ದುದುಂಟು. ಆದರೆ ನಮ್ಮ ಮನೆಯವರು ಈ ಭೂತನಿಗೆ ನಡೆದುಕೊಳ್ಳುತ್ತಿರಲಿಲ್ಲ. ಹಾಗೆ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಇರುವ ಹವ್ಯಕರಿಗೂ ಈ ಭೂತನಿಗೂ ಅಂತಹ ಸಂಬಂಧ ಇರಲಿಲ್ಲ. ಕೋಳಿ ಕೊಯ್ಯುವುದನ್ನು ನೋಡಬಾರದು ಎಂದು ಅಮ್ಮ ಶಾಲೆಗೆ ಹೋಗುವಾಗ ಹೇಳಿ ಕಳಿಸುತ್ತಿದ್ದರು. ಆದರೆ ಭಯದಿಂದ ತಲೆ ಬಗ್ಗಿಸಿ ಆ ಬೂತನ ಸ್ಥಾನವನ್ನು ದಾಟಿ ಹೋಗಬೇಕು ಎಂದುಕೊಂಡರೂ ಆ ಸ್ಥಳಕ್ಕೆ ಬಂದ ತಕ್ಷಣ ಕಣ್ನು ಮೇಲೆ ಹೋಗುತ್ತಿತ್ತು. ಆಗೆಲ್ಲ ಕೋಳಿ ಕೊಯ್ದ ಮೇಲೆ ಅದರ ತಲೆ ಚಡಪಡಿಸುವುದು ಕಾಣುತ್ತಿತ್ತು. ಹಾಗೆ ಸ್ವಲ್ಪ ಹೊತ್ತು ಮೇಲಕ್ಕೆ ಹಾರಿದ ಕೋಳಿಯ ದೇಹ ನಂತರ ನಿಸ್ತೇಜವಾಗುತ್ತಿತ್ತು.
ನಮ್ಮ ಕೋಲ್ಸೆ ಶಾಲೆಯ ಪಕ್ಕದಲ್ಲಿ ಒಂದು ಅರಳಿ ಮರವಿತ್ತು. ಆ ಮರ ಈಗ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಆರಿದ್ರಾ ಮಳೆಯ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿದ್ದುದು ಅದ್ರೆ ಮಳೆ ಹಬ್ಬ. ನಡು ಮಳೆಗಾಲದಲ್ಲಿ ನಡೆಯುವ ಈ ಹಬ್ಬದಲ್ಲಿ ಒಂದೇ ದಿನ ನೂರಾರು ಕುರಿಗಳನ್ನು ಬಲಿ ಕೊಡಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ನಾವು ಶಾಲೆಗೆ ಹೋಗುತ್ತಿರಲಿಲ್ಲ. ಕಡಿದ ಕುರಿಯನ್ನು ನೋಡಬಾರದು ಎಂಬ ಕಾರಣಕ್ಕೆ ನಮ್ಮ ಶಾಲೆಯ ಮೇಸ್ತ್ರು ನಮಗೆ ರಜೆ ಕೊಟ್ಟು ಬಿಡುತ್ತಿದ್ದರು. ನೂರಾರು ಕುರಿ ಕೋಳಿಯ ರಕ್ತಾಭಿಷೇಕಕ್ಕೆ ಸಾಕ್ಷಿಯಾಗಿರುತ್ತಿದ್ದ ಈ ಮರ ಉಳಿದ ದಿನಗಳಲ್ಲಿ ಎಲ್ಲ ಮರಗಳಂತೆ ಇರುತ್ತಿತ್ತು. ನಮ್ಮ ಶಾಲೆಯಲ್ಲಿ ಅಗ ಶೌಚಾಲಯ ಇರದಿದ್ದರಿಂದ ನಾವು ಶಾಲೆ ಮಕ್ಕಳು ಮೂತ್ರ ವಿಸರ್ಜೆನೆಗೆ ಈ ಸ್ಥಳವನ್ನು ಬಳಸುತ್ತಿದ್ದೆವು. ಆ ಮರದ ಮರೆಯಲ್ಲಿ ನಿಂತರೆ ಯಾರೂ ಕಾಣುತ್ತಿರಲಿಲ್ಲ. ಅಲ್ಲಿ ಮೂತ್ರ ವಿಸರ್ಜನೆಗೆ ಉಚ್ಚೆ ಕುಣಿಗಳನ್ನು ನಾವು ನಿರ್ಮಿಸುತ್ತಿದ್ದೆವು.
ನಮ್ಮದು ಏಳನೆಯ ತರಗತಿಯವರೆಗಿನ ಶಾಲೆ. ಅಲ್ಲಿ ಬರುವ ಮಕ್ಕಳಲ್ಲಿ ಬಹುತೇಕರು ಈಡಿಗರು ಮತ್ತು ಹಿಂದುಳಿದ ವರ್ಗದವರ ಮಕ್ಕಳು. ಇವರನ್ನು ಬಿಟ್ಟರೆ ಹತ್ತಾರು ಲಿಂಗಾಯಿತರ ಮಕ್ಕಳು. ನಾವು ಎರಡು ಮೂರು ಮಕ್ಕಳು ಮಾತ್ರ ಹವ್ಯಕರು.
ಮಳೆಗಾಲ ಬಂದರೆ ಶಾಲೆ ಸೋರುತ್ತಿತ್ತು. ಹೀಗಾಗಿ ಮಳೆಗಾಲಕ್ಕೆ ಮೊದಲು ನಾವು ಶಾಲೆಯ ಮೇಲೆ ಏರಿ ಒಡೆದ ಹೆಂಚುಗಳನ್ನು ತೆಗೆದು ಹೊಸ ಹೆಂಚು ಹಾಕುತ್ತಿದ್ದೆವು. ಹಾಗೆ ಶಾಲೆಯ ಎದರು ಎಲ್ಲ ರೀತಿಯ ತರಕಾರಿಗಳನ್ನು ನಾವು ಬೆಳೆಸಿದ್ದೆವು. ಎಲ್ಲೂ ಬೆಳೆಯದಂತೆ ಬೆಳೆದ ಆ ತರಕಾರಿ ಎಲ್ಲಿಗೆ ಹೋಗುತ್ತದೆ ಎಂಬುದು ಮಾತ್ರ ನಮಗೆ ತಿಳಿಯುತ್ತಿರಲಿಲ್ಲ. ಶಾಲೆಯಲ್ಲಿರುವ ಎಲ್ಲ ಟೀಚರುಗಳ ಮನೆಗೆ ಇದೇ ತರಕಾರಿ ಹೋಗುತ್ತದೆ ಎಂಬ ಮಾತು ಕೇಳಿ ಬಂದಿದ್ದವು. ಆದರೆ ಈ ಮಾತಿಗೆ ನಮ್ಮ ಬಳಿ ಯಾವ ಪುರಾವೆಯೂ ಇರಲಿಲ್ಲ.
ನಮ್ಮ ಶಾಲೆಯಲ್ಲಿ ಇದ್ದ ಟೀಚರುಗಳಲ್ಲಿ ಎಂಟು ಜನ ಮಿಸ್ ಗಳು. ನಾವು ಅವರನ್ನು ಅಕ್ಕೋರೆ ಎಂದು ಸಂಬೊಂಧಿಸುತ್ತಿದ್ದೆವು. ಇವರಲ್ಲಿ ಸುಮಿತ್ರಾ ಅಕ್ಕೋರಿಗೆ ನನ್ನ ಬಗ್ಗೆ ತುಂಬಾ ಪ್ರೀತಿ. ನಾನು ಅವರಿಗೆ ನಮ್ಮ ಮನೆಯಲ್ಲಿ ಬೆಳೆಯುತ್ತಿದ್ದ ದೊಡ್ದ ದೊಡ್ದ ಡೇರೆ ಹೂವುಗಳನ್ನು ಕೊಡುತ್ತಿದ್ದೆ. ಅವರು ಅದನ್ನು ಮುಡಿದುಕೊಂಡು ಶಶಿ ತಂದು ಕೊಟ್ಟಿದ್ದು ಎಂದು ಹೆಮ್ಮೆಯಿಂದ ಹೇಳುತ್ತಿದ್ದರು.
ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದ ನಾನು ಎಲ್ಲರಿಗಿಂತ ಸಣ್ಣಗಿದ್ದೆ. ಕುಳ್ಳ ಬೇರೆ. ಕೆಂಪಗಿನ ಒಂದು ಮುದ್ದೆಯ ಹಾಗಿದ್ದ ನನ್ನನ್ನು ಕಂಡರೆ ಎಲ್ಲ ಶಿಕ್ಷರಿಗೂ ಪ್ರೀತಿ. ಅದೊಂದು ದಿನ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ತಲೆ ತಿರುಗಿ ಬಿದ್ದು ಬಿಟ್ಟೆ. ಪಟಗಾರ್ ಮಾಸ್ತರು ಮತ್ತು ಸುಮಿತ್ರಾ ಅಕ್ಕೋರು ನನ್ನನ್ನು ಕಳುಹಿಸಿ ಕೊಡಲು ನನ್ನ ಜೊತೆಗೆ ನಮ್ಮ ಮನೆಗೆ ಬಂದರು. ಕಾಡಿನ ಹಾದಿಯಲ್ಲಿ ಸುಮಾರು ಅರ್ಧ ಗಂಟೆ ನಡೆದು ಮನೆಗೆ ಬಂದ ಮೇಲೆ ನಾನು ತಲೆ ತಿರುಗಿ ಬಿದ್ದಿದ್ದನ್ನು ಹೇಳಿದ ಮಾಸ್ತರು ನಾನು ತುಂಬಾ ವೀಕ್ ಇರುವುದರಿಂದ ಹೀಗಾಗಿದೆ ಎಂದು ಹೇಳಿ ಅವನು ಒಂದೆರದು ದಿನ ರಜಾ ತೆಗೆದುಕೊಳ್ಳಲಿ ಎಂದು ಸ್ಯಾಂಕ್ಷನ್ ಮಾಡಿಯೇ ಬಿಟ್ಟರು.
ಅಮ್ಮ ಅವತ್ತೆ ಮಾಡಿದ್ದ ತೊಡೆದೆಳ್ಳವು ಅನ್ನು ಪ್ರೀತಿಯಿಂದ ನಮ್ಮ ಮಾಸ್ತರು ಮತ್ತು ಅಕ್ಕೋರಿಗೆ ಕೊಟ್ಟರು. ಮಲೇನಾಡಿನಲ್ಲಿ ಕಬ್ಬಿನ ಹಾಲಿನಿಂದ ಮಾಡುವ ಈ ತೊಡೆದೆಳ್ಳವು ಕರಾವಳಿಯವರಾದ ಅವರಿಗೆ ಅಪರಿಚಿತವಾಗಿತ್ತು. ದೊಡ್ಡ ಮಡಿಕೆಯನ್ನು ಮಗಚಿ ಒಲೆಯ ಮೇಲಿಟ್ಟು ಅದರ ಮೇಲೆ ದೂಸೆಯಂತೆ ಹಾಕುವ ವಿಶಿಷ್ಟವಾದದ್ದು ತೊಡೆದೆಳ್ಳವು. ಅದನ್ನು ಬಾಯಿಯಲ್ಲಿ ಇಟ್ಟ ಕೆಲವೇ ಸೆಕೆಂಡುಗಳಲ್ಲಿ ಅದು ಕರಗಿ ಹೋಗುತ್ತದೆ. ಇದು ಯಾವ ರೀತಿಯ ತಿಂಡಿ ಎಂಬುದು ಪಟಗಾರ್ ಮಾಸ್ತರಿಗೆ ಅರ್ಥವಾಗಲಿಲ್ಲ. ಆದರೆ ಅವರಿಗೆ ಅದರ ಮೋಹ ಮಾತ್ರ ಹೋಗಲಿಲ್ಲ. ಅಮ್ಮ ಅವರಿಗಾಗಿ ನಾಲ್ಕಾರು ತೊಡೆದೆಳ್ಲವುಗಳನ್ನು ಪ್ರೀತಿಯಿಂದ ಕಟ್ಟಿ ಕೊಟ್ಟಳು.
ಇದಾದ ಮೇಲೆ ಕಂಡಾಗಲೆಲ್ಲ ನಿಮ್ಮ ಮನೆಯ ತೊಡೆದೆಳ್ಳವು ಅದ್ಭುತ ಅತ್ಯದ್ಭುತ ಎಂದು ಅವರು ಹೇಳುತ್ತಿದ್ದರು. ಜೊತೆಗೆ ಇದೇ ಕಾರಣಕ್ಕೆ ಅವರ ದೃಷ್ಟಿಯಲ್ಲಿ ನನ್ನ ಗೌರವವೂ ಹೆಚಾಯಿತು. ಆದರೆ ನಾನು ಇಡೀ ಘಟನೆಯನ್ನು ಅರ್ಥ ಮಾಡಿಕೊಂಡಿದ್ದೇ ಬೇರೆ ರೀತಿಯಲ್ಲಿ. ನಾನು ತಲೆ ತಿರುಗಿ ಬಿದ್ದರೆ ನನಗೆ ರಜೆ ನೀಡುತ್ತಾರೆ ಎಂಬ ಸತ್ಯದ ದರ್ಶನ ನನಗಾಗಿತ್ತು. ಹೀಗಾಗಿ ವಾರಕ್ಕೆ ಒಮ್ಮೆ ಪ್ರಾರ್ಥನೆಯ ವೇಳೆಯಲ್ಲಿ ತಲೆ ತಿರುಗಿ ಬಿದ್ದು ಬಿಡುತ್ತಿದ್ದೆ. ಇದು ನಾಟಕವೋ ಅಥವಾ ನಿಜವೂ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದ ಪಟಗಾರ್ ಮಾಸ್ತರು ನನ್ನನ್ನು ಮನೆಗೆ ಕಳುಹಿಸಿಕೊಡಲು ಸಿದ್ಧವಾಗುತ್ತಿದ್ದರು. ನಮ್ಮ ಮನೆಗೆ ಬಂದು ವಿಶೇಷ ತಿಂಡಿಗಳನ್ನು ತಿಂದು ಅವರು ಶಾಲೆಗೆ ಹಿಂತಿರುಗುತ್ತಿದ್ದರು. ನಾನು ರಜಾದ ಸುಖವನ್ನು ಅನುಭವಿಸುತ್ತಿದ್ದೆ. ಕಾಡುಮೇಡುಗಳಲ್ಲಿ ಅಲೆದು ರಜಾವನ್ನು ಸಾರ್ಥಕವನ್ನಾಗಿ ಮಾಡಿಕೊಳ್ಳುತ್ತಿದ್ದೆ. ಮಳೆಗಾಲದಲ್ಲಿ ಬಹಳಷ್ಟು ದಿನ ಶಾಲೆಯೇ ನಡೆಯುತ್ತಿರಲಿಲ್ಲ. ದೊಡ್ಡ ಮಳೆ ಬಂದರೆ ನೀರು ಒಳಗೆ ಬರುತ್ತಿದ್ದರಿಂದ ಶಾಲೆಗೆ ರಜಾ ಘೋಷಿಸಲಾಗುತ್ತಿತ್ತು. ಹಾಗೆ ನಮ್ಮ ಮನೆ ಮತ್ತು ಶಾಲೆಯ ನಡುವೆ ಕಾಡಿನ ಜೊತೆಗೆ ಸಣ್ಣ ಸಣ್ನ ಹಳ್ಳಗಳೂ ಇದ್ದವು. ಈ ಹಳ್ಳಗಳು ತುಂಬಿದರೆ ಅದಕ್ಕೆ ದಾಟಲು ಹಾಕಿದ ಸಂಕ ಕೊಚ್ಚಿ ಹೋಗುತ್ತಿತ್ತು. ಹೀಗಾಗಿ ನಾವು ಹಳ್ಳದ ಬಳಿ ಬಂದು ಸಂಕ ಇಲ್ಲ ಎಂದು ಮನೆಗೆ ಹೋಗಿ ಬಿಡುತ್ತಿದ್ದವು.
ಈ ಶಾಲೆಯಲ್ಲಿನ ನನ್ನ ಆನುಭವದ ಭುತ್ತಿ ದೊಡ್ದದು. ಅದನ್ನು ಇನ್ನೊಮ್ಮೆ ಹೇಳುತ್ತೇನೆ. ನಾನು ಮೊದಲು ಹೇಳಿದ ಮೋಟು ಕಾನಿನ ಭೂತ ಮತ್ತು ನನಗೂ ಇರುವ ಸಂಬಂಧದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಲೇ ಬೇಕು.
ನನ್ನಲ್ಲಿ ಭಯ ಹುಟ್ಟಿಸಿದ್ದ ಈ ಭೂತ ನನಗೆ ತೀವ್ರವಾಗಿ ಕಾಡುತ್ತಿದ್ದುದು ಪರೀಕ್ಷೆ ಬಂದಾಗ ಮಾತ್ರ. ಆಗ ಮಾತ್ರ ಭೂತನ ಎದುರು ನಿಂತು ನಾನು ಪರೀಕ್ಷೆಯಲ್ಲಿ ಪಾಸಾದರೆ ೫೦ ತೆಂಗಿನ ಕಾಯಿ ಒಡೆಸುತ್ತೇನೆ ಎಂದು ಹೇಳುತ್ತಿದ್ದೆ. ಪರೀಕ್ಷೆಯಲ್ಲಿ ಪಾಸಾದ ಮೇಲೆ ನನಗೆ ಈ ಭೂತನ ಬಗ್ಗೆ ಗೌರವ ಉಳಿಯುತ್ತಿರಲಿಲ್ಲ. ಹೀಗಾಗಿ ಭೂತಪ್ಪನಿಗೆ ತೆಂಗಿನ ಕಾಯಿಯೂ ಸಿಗುತ್ತಿರಲಿಲ್ಲ. ಎಳು ವರ್ಷ ಕೋಲ್ಸೆ ಶಾಲೆಗೆ ಹೋದವ, ಪ್ರತಿ ವರ್ಷ ೫೦ ತೆಂಗಿನ ಕಾಯಿ ಹರಿಕೆ ಹೇಳಿಕೊಂಡಿದ್ದೇನೆ. ಒಂದೇ ಒಂದು ತೆಂಗಿನ ಕಾಯಿ ಹರಿಕೆಯನ್ನು ತೀರಿಸಿಲ್ಲ. ಆದರೆ ಮೋಟುಕಾನಿನ ಭೂತ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ, ನನ್ನನ್ನು ಸಲಹುತ್ತಲೇ ಇದ್ದಾನೆ.
ಕಳೆದ ಶನಿವಾರ ಊರಿನವರೆಲ್ಲ ಸೇರಿ ಈ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನನ್ನನ್ನು ಕರೆಯಲು ಬೆಂಗಳೂರಿಗೆ ಬಂದು ಮಾತನಾಡಿ ಹೋಗಿದ್ದರು. ನಾನು ನನ್ನ ಶಾಲೆಯ ಶತಮನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಲಬೇಕು ಎಂದುಕೊಂಡಿದ್ದೆ. ಆದರೆ ಊರಿಗೆ ಹೋದರೂ ಶಾಲೆಗೆ ಃಓಗಲು ಆಗಲಿಲ್ಲ. ಯಾಕೆಂದರೆ ಅನಿರೀಕ್ಷಿತವಾಗಿ ನನ್ನ ಅಪ್ಪ ತೀರಿಕೊಂಡಿದ್ದ.
ಹೀಗಿದ್ದರೂ ಊರಿನ ಹಿರಿಯಲು ಶಾಲು ಸ್ಮರಣ ಫಲಕ ಹಿಡಿಕೊಂಡು ನನ್ನ ಮನೆಗೆ ಬಂದು ಸತ್ಕಾರ ಮಾಡಿದರು. ಈ ಶಾಲೆಯಲ್ಲಿ ಕಲಿತ ನೀನು ದೊಡ್ಡ ಮನುಷ್ಯನಗಿದ್ದೀಯಾ ಎಂದು ಪ್ರೀತಿಯ ಮಾತನಾಡಿದರು. ಅಪ್ಪನನ್ನು ಕಳೆದುಕೊಂಡ ಆ ಸಂದರ್ಭದಲ್ಲೂ ನನಗೆ ಮನಸ್ಸಿನಲ್ಲಿ ಮೂಡಿದ್ದು ಕೃತಜ್ನತೆ. ನೆನಪಾಗಿದ್ದು ಅದೇ ನನ್ನ ಶಾಲಾ ದಿನಗಳು.

3 comments:

Badarinath Palavalli said...

ನಮ್ಮ ಬಾಲ್ಯದ ನೆನಪುಗಳನ್ನು ಕೆದಕಿಕೊಟ್ಟ ಒಳ್ಳೆಯ ಬರಹ ಇದು. ಸಿದ್ದಾಪುರದ ಪರಿಸರದ ಬಗ್ಗೆ ನೀವು ಇನ್ನೊಮ್ಮೆ ಚಿತ್ರಗಳ ಸಮೇತ ನಮಗಾಗಿ ಬರೆಯಿರಿ ಸಾರ್.

ಕಾಲಾಂತರದಲ್ಲಿ ಕಾಡಿನ ಅವನತಿ ಮತ್ತು ವನ್ಯ ಮೃಗಗಳ ನಾಶವು ಮಾನವನ ಅತಿರೇಕದ ಸಂಕೇತ. ಹುಲಿಗಳನ್ನು ಕಲ್ಲು ಹೊಡೆದು ಎಬ್ಬಿಸುವ ಧೈರ್ಯವಿದ್ದ ಆ ಬಾಲ್ಯವೇ ಚೆನ್ನ.

ಭೂತಸ್ಥಾನದ ವಿವರಣೆಯು ಸಾದೃಷ್ಯವಾಗಿ ಮೂಡಿ ಬಂದಿದೆ ಸಾರ್. ಇಂತಹ ಆಚರಣೆಗಳು ಆ ಭಾಗದಲ್ಲಿ ಈಗಲೂ ಚಾಲ್ತಿಯಲ್ಲಿ ಇರಬಹುದು. ನಿಮ್ಮ ಭಾನಾಮತಿಯಲ್ಲಿ ಇದೂ ಚಿತ್ರೀಕರಣಗೊಂಡಿತ್ತೇ?

ತೊಡೆದೆಳ್ಳವು ಖಾದ್ಯ ಪರಿಚಯವಾಯಿತು.

ಸುಶ್ರುತ ದೊಡ್ಡೇರಿ said...

ಕಾಡಿನ ದಾರಿ, ಸೋರುವ ಶಾಲೆ, ಮಳೆಗೆ ಕೊಚ್ಚಿ ಹೋಗೋ ಸಂಕ, ಭೂತದ ಕಟ್ಟೆ, ರಜೆ ಕೊಟ್ಟು ಪ್ರೀತಿಪಾತ್ರರಾಗ್ತಿದ್ದ ಟೀಚರುಗಳು, ಇಷ್ಟಗಲ ತೆಳ್ಳವು... ಎಲ್ಲಾ ಕಣ್ಮುಂದೆ ಬಂದವು. ತುಂಬಾ ಚನಾಗ್ ಬರ್ದಿದೀರಿ. :-)

Manjunatha Kollegala said...

ಎಷ್ಟು ಸೊಗಸಾದ ಆಪ್ತವಾದ ಬರಹ! ಓದಿ ತುಂಬಾ ಖುಶಿಯಾಯಿತು.