Wednesday, November 23, 2011

ಮತ್ತೆ ಮತ್ತೆ ಲಂಕೇಶ್ ನೆನಪಾಗುತ್ತಿದ್ದಾರೆ......!

ಯಾಕೋ ಗೊತ್ತಿಲ್ಲ. ಬಳ್ಳಾರಿಯಲ್ಲಿರುವ ನನ್ನ ಯುವ ಸ್ನೇಹಿತ ಆದಿತ್ಯ ಭಾರದ್ವಾಜ್ ಕಳುಹಿಸಿದ ಒಂದು ಎಸ್ ಎಮ್ ಎಸ್ ನನ್ನನ್ನು ಕಾಡುತ್ತಿದೆ. ಅವರು ಕಳುಹಿಸಿದ ಎಸ್ ಎಮ್ ಎಸ್ ನ ಸಾರ ಇಷ್ಟೇ. ನನಗೆ ಈಗ ಲಂಕೇಶ್ ನೆನಪಾಗುತ್ತಾರೆ.. ಅವರು ಕಳುಹಿಸಿದ ಈ ಎಸ್ ಎಂ ಎಸ್ ಓದಿದ ಮೇಲೆ ನನಗೂ ಲಂಕೇಶ್ ಕಾಡತೊಡಗಿದ್ದಾರೆ. ಪ್ರಾಯಶ: ಲಂಕೇಶ್ ಪತ್ರಿಕೆಯ ಎರಡನೆಯ ಸಂಚಿಕೆ ಹೊರ ಬಂದ ವಾರ ಅದು. ನಾನು ಕೈಯಲ್ಲಿ ಒಂದು ಲೇಖನವನ್ನು ಹಿಡಿದುಕೊಂಡು ಬಸವನಗುಡಿಯಲ್ಲಿರುವ ಅವರ ಕಚೇರಿಗೆ ಹೋದೆ. ಲಂಕೇಶ್ ತುಂಬಾ ಪ್ರೀತಿಯಿಂದ ಒಳಗೆ ಕರೆದು ಮಾತನಾಡಿದರು. ನಾನು ಬರೆದು ತಂದಿದ್ದ ಲೇಖನವನ್ನು ಸ್ವಲ್ಪ ಅಳುಕಿನಿಂದಲೇ ಅವರಿಗೆ ನೀಡಿದೆ. ಅದು ರಾಮಚಂದ್ರಾಪುರದ ಅಂದಿನ ಸ್ವಾಮಿ ರಾಘವೇಂದ್ರ ಭಾರತಿ ಸ್ವಾಮಿಗಳಿಗೆ ಸಂಬಂಧಿಸಿದ್ದಾಗಿತ್ತು. ಆ ದಿನಗಳಲ್ಲಿ ಬಂಡಾಯ ಸಂಘಟನೆಯಲ್ಲಿ ಇದ್ದ ನಾನು ಈ ಸ್ವಾಮಿಯ ವಿರುದ್ಧ ಊರಿನಲ್ಲಿ ಹೋರಾಟವನ್ನು ಸಂಘಟಿಸಿದ್ದೆ. ಇದಕ್ಕೆ ಪ್ರತಿಯಾಗಿ ಅವರು ನನ್ನನ್ನು ಹೈವ್ಯಕ ಭ್ರಾಹ್ಮಣರ ಜಾತಿಯಿಂದ ನನ್ನನ್ನು ಹೊರ ಹಾಕಿದ್ದರು. ಯಾವ ಹವ್ಯಕರೂ ನನಗೆ ಅನ್ನ ನೀರು ಕೊಡಬಾರದು ಎಂದು ಫರ್ಮಾನು ಹೊರಡಿಸಿದ್ದರು.ಅವರ ಮೇಲೆ ಒಂದು ಲೇಖನ ಬರೆದುಕೊಂಡು ಬಂದಿದ್ದ ನಾನು ಲಂಕೇಶ್ ಪತ್ರಿಕೆಯ ಕಚೇರಿಯ ಬಾಗಿಲು ಬಡಿದಿದ್ದೆ. ಲಂಕೇಶ್ ನನ್ನ ಲೇಖನವನ್ನು ಓದಿದರು. ಲೇಖನ ಚೆನ್ನಗಿದೆ. ಆದರೆ ನಿಮಗೆ ಕನ್ನಡ ಕಲಿಸಿದ ಮಹಾತ್ಮ ಯಾರು ಎಂದು ಪ್ರಶ್ನಿಸಿದರು. ನೋಡಯ್ಯ ಲೇಖನ ಬರೆಯುವುದಕ್ಕಿಂತ ಮೊದಲು ಕನ್ನಡದ ವ್ಯಾಕರಣವನ್ನು ಕಲಿತಿರಬೇಕು ಎಂದರು ಲಂಕೇಶ್. ನನಗೆ ಅವಮಾನವಾಗಿತ್ತು. ಕೋಪ ಬಂದಿತ್ತು. ನಾನು ತಿರುಗಿ ಮಾತನಾಡದೇ ಅಲ್ಲಿಂದ ಹೊರಟು ಬಿಟ್ಟೆ. ಮುಂದಿನ ವಾರ ಲಂಕೇಶ್ ಪತ್ರಿಕೆಯಲ್ಲಿ ನನ್ನ ಲೇಖನ ಪ್ರಕಟವಾಗಿತ್ತು. ಜೊತೆಗೆ ೧೫೦ ರೂಪಾಯಿ ಸಂಭಾವನೆ.! ಇದಾದ ಮೇಲೆ ಲಂಕೇಶ್ ಜೊತೆ ನನ್ನ ಸಂಪರ್ಕ ಬೆಳೆಯಿತು. ಹಾಗೆ ಊರಿನಿಂದ ಬೆಂಗಳೂರಿಗೆ ಬಂದ ನಾನು ಬೇರೆ ಬೇರೆ ಪತ್ರಿಕೆಗಳಲ್ಲಿ ಕೆಲಸ ಮಾಡತೊಡಗಿದೆ. ಮೊದಲು ಕೆಲಸಕ್ಕೆ ಸೇರಿದ್ದ್ಉ ಸಂಯುಕ್ತ ಕರ್ನಾಟಕ ಪತ್ರಿಕೆಗೆ. ಅಲ್ಲಿ ಆಗ ನನಗೆ ಸಿಗುತ್ತಿದ್ದುದು ತಿಂಗಳಿಗೆ ೮೦ ರೂಪಾಯಿ ಸಂಬಳ. ಆಗಲೇ ನಾನು ಲಂಕೇಶ್ ಪತ್ರಿಕೆಯ ಕಾಯಂ ಓದುಗನಾಗಿದ್ದೆ. ಲಂಕೇಶ್ ಪತ್ರಿಕೆ ನನಗೆ ಓದುವುದನ್ನು ಕಲಿಸಿತ್ತು. ಒಳನೋಟವನ್ನು ನೀಡಿತ್ತು. ಈಗಲೂ ಆಗಾಗ ನಾನು ಲಂಕೇಶ್ ಅವರ ಟೀಕೆ ಟಿಪ್ಪಣಿಯನ್ನು ಓದುವುದುಂಟು. ಆಗೆಲ್ಲ ಒಂದು ವಸ್ತು ಮತ್ತು ವಿಚಾರವನ್ನ ಅವರು ಗ್ರಹಿಸುತ್ತಿದ್ದ ರೀತಿ ಅಚ್ಚರಿಯನ್ನು ಉಂಟು ಮಾಡುತ್ತದೆ. ಇವತ್ತಿಗೂ ಕೂಡ ಅವರ ಬಹಳಷ್ಟು ಬರಹಗಳು ಪ್ರಸ್ತುತ ಅನ್ನಿಸುತ್ತದೆ. ಲಂಕೇಶ್ ಅವರ ಅತಿ ದೊಡ್ಡ ಗುಣವೆಂದರೆ, ಯಾವುದೇ ರೀತಿಯ ಕ್ರೈಸಿಸ್ ನಲ್ಲಿ- ಅದು ರಾಜಕೀಯ ಬಿಕ್ಕಟ್ಟಿರಬಹುದು, ಸಾಮಾಜಿಕ ಬಿಕ್ಕಟ್ಟು ಇರಬಹುದು, ಅವರು ತೆಗೆದುಕೊಳ್ಳುತ್ತಿದ್ದ ಜನಪರ ನಿಲುವು. ಅವರ ನಿಲುವಿನಲ್ಲಿ ಕೆಲವೊಮ್ಮೆ ತಪ್ಪುಗಳು ಇದ್ದರೂ ಅವು ಉದ್ದೇಶಪೂರ್ವಕ ತಪ್ಪುಗಳಾಗಿರಲಿಲ್ಲ. ಅವರ ಬದ್ಧತೆ ಮತ್ತು ಸಾಮಾಜಿಕ ಕಳಕಳಿಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಲಂಕೇಶ್ ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮಿಯಾಗಿದ್ದರು. ಲಂಕೇಶ್ ಅವರಿಗೆ ೬೦ ತುಂಬಿದ ಸಂದರ್ಭದಲ್ಲಿ ಮೈಸೂರಿನಲ್ಲಿ ಮೂರು ದಿನಗಳ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಘಟಾನುಘಟಿಗಳಿದ್ದ ಆ ಕಾರ್ಯಕ್ರಮದಲ್ಲಿ ಲಂಕೇಶ್ ಪತ್ರಿಕೆ ಮತ್ತು ಕನ್ನಡ ಪತ್ರಿಕೋದ್ಯಮ ಎಂಬ ವಿಚಾರದ ಬಗ್ಗೆ ಭಾಷಣ ಮಾಡುವ ಅವಕಾಶ ನನಗೆ ಲಭ್ಯವಾಗಿತ್ತು. ಲಂಕೇಶ್ ನಾನೇ ಆ ವಿಚಾರದ ಮೇಲೆ ಉಪನ್ಯಾಸ ನೀಡಬೇಕು ಎಂದು ಸೂಚಿಸಿದ್ದರು. ಅಂದಿನ ನನ್ನ ಭಾಷಣವನ್ನು ಅವರು ಮೆಚ್ಚಿಕೊಂಡಿದ್ದರು. ಇದಾದ ಮೇಲೆ ನಾನು ಅವರನ್ನು ನೋಡಿದ್ದು ಅವರು ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಾಗ. ನನ್ನ ಸ್ಣೇಹಿತರಾದ ಭರತಾದ್ರಿ ಮತ್ತು ಪತ್ರಕರ್ತ ಮಹದೇವ್ ಪ್ರಕಾಶ್ ಮೇಷ್ಟ್ರು ನಿಮ್ಮನ್ನು ನೋಡಬೇಕಂತೆ ಎಂದು ಹೇಳಿದಾಗ ಮರುದಿನವೇ ನಾನು ಆಸ್ಪತ್ರೆಗೆ ಹೋದೆ. ಲಂಕೇಶ್ ಹಾಸಿಗೆಯ ಮೇಲೆ ಮಲಗಿದ್ದರು. ಅವರ ಹೊಟ್ಟೆ ಗುಡಾಣದಂತೆ ಕಾಣುತ್ತಿತ್ತು. ಬಾರಯ್ಯ ಎಂದವರೆ ನನ್ನ ಜೊತೆಗೆ ಮಾತನಾಡತೊಡಗಿದರು. ನಾನು ಸತ್ತು ಹೋಗ್ತೀನೇನೋ ಗೊತ್ತಿಲ್ಲ..ಆದರೆ ನಾನು ಸಾವಿಗೆ ಹೆದರುವುದಿಲ್ಲ ಎಂದರು ಲಂಕೇಶ್. ನನ್ನ ಪತ್ರಿಕೆ ಹೇಗಿದೆಯಯ್ಯ ಎಂದೂ ಪ್ರಶ್ನಿಸಿದರು. ಸಾರ್, ಒಬ್ಬ ಮನುಷ್ಯನಂತೆ ಪತ್ರಿಕೆಗೂ ಒಂದು ಆಯಸ್ಸು ಅಂತ ಇರುತ್ತದೆ. ಲಂಕೇಶ್ ಪತ್ರಿಕೆ ಎಷ್ಟು ಎತ್ತರಕ್ಕೆ ಏರಬಹುದಿತ್ತೋ ಅಷ್ಟು ಎತ್ತರಕ್ಕೆ ಏರಿ ಆಗಿದೆ. ಇನ್ನು ಏನಿದ್ದರೂ ಅದು ಕೆಳಕ್ಕೆ ಬರಲೇಬೇಕು. ಮೇಲೆ ಹೋದವರೂ ಕೆಳಕ್ಕೆ ಬೀಳುವಂತೆ ಪತ್ರಿಕೆ ಕೂಡ. ನೀವು ದಯವಿಟ್ಟು ತಪ್ಪು ತಿಳಿಯಬಾರದು. ನೀವು ಬೈದರೇ ಎಲ್ಲರೂ ಕೇಳುತ್ತಾರೆ. ನೀವು ಕ್ಷಮಿಸಿ ಎಂದು ಲೇಖನವನ್ನು ಪ್ರಾರಂಭಿಸಿದರೆ ಅದು ನೀವು ಬರೆಯುವ ವಿಧಾನ ಅದು ನಮಗೆಲ್ಲ ಖುಷಿ ನೀಡುತ್ತದೆ. ಆದರೆ ನಿಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುವರೆಲ್ಲ ಬೈಯುವುದೇ ಪತ್ರಿಕೋದ್ಯಮ ಎಂದುಕೊಂಡರೆ ಅದು ಅಪಾಯ. ಜೊತೆಗೆ ಸಣ್ನ ಪುಟ್ಟ ಹುಡುಗರು ನಿಮ್ಮದೇ ದಾಟಿಯಲ್ಲಿ ಬೈಯಲು ಪ್ರಾರಂಭಿಸಿದರೆ ಯಾರೂ ಕೇಳುವುದಿಲ್ಲ. ಬೈಯುವವನಿಗೂ ಒಂದು ಯೋಗ್ಯತೆ ಬೇಕಾಗುತ್ತದೆ ಎಂದೇ ನಾನು. ಲಂಕೇಶ್ ಎಲ್ಲವನ್ನೂ ಕೇಳಿಸಿಕೊಂಡರು. ಹಾಗೆ ಮಧ್ಯಾನ್ಹದವರೆಗೆ ಹತ್ತಿರಕ್ಕೆ ಕೂಡ್ರಿಸಿಕೊಂಡು ಮಾತನಾಡಿದರು. ನಮ್ಮಂಥಹ ಲಕ್ಶಾಂತರ ಜನರನ್ನು ಮಾನಸಿಕವಾಗಿ ಬೆಳೆಸಿದ ಲಂಕೇಶ್ ಹಾಗೆ ಹಾಸಿಗೆಯ ಮೇಲೆ ಮಲಗಿದ್ದನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಅಗ ನಾನು ಕನ್ನಡ ಪ್ರಭದಲ್ಲಿ ಬರೆಯುತ್ತಿದ್ದ ರಾಜಕೀಯ ವರದಿಗಳನ್ನು ಮೆಚ್ಚಿಕೊಂಡಿದ್ದ ಅವರು ಪತ್ರಿಕೋದ್ಯಮಿಗೆ ನ್ಯಾಯ ನಿಷ್ಠುರತೆ ಬೇಕು ಅದು ನಿನಗೆ ಇದೆ ಎಂದು ನನ್ನ ಬೆನ್ನು ತಟ್ಟಿದ್ದನ್ನು ನಾನು ಹೇಗೆ ತಾನೆ ಮರೆಯಲಿ ? ಈಗ ಪ್ರತಿದಿನ ಪತ್ರಿಕೆ ಓದುವಾಗ ಲಂಕೇಶ್ ನೆನಪಾಗುತ್ತಾರೆ. ಅವರ ಜೊತೆ ಬೇರೆ ಸಂಪಾದಕರನ್ನು ಪತ್ರಿಕೋದ್ಯಮಿಗಳನ್ನು ಹೋಲಿಸಲು ಯತ್ನಿಸುತ್ತೇನೆ. ಮನಸ್ಸಿಗೆ ಬೇಸರವಾಗುತ್ತದೆ. ಕೆಲವೊಮ್ಮೆ ಈ ಪತ್ರಿಕೋದ್ಯಮವೇ ಬೇಡ ಎಂದು ಅನ್ನಿಸುತ್ತದೆ. ಅದರೆ ಬದುಕಲು ಬೇರೆ ದಾರಿ ಯಾವುದು ಎಂದು ತಿಳಿಯದೇ ಸುಮ್ಮನಾಗುತ್ತೇನೆ. ಇಂದಿನ ಪತ್ರಿಕೋದ್ಯಮವನ್ನು ನೋಡಿ ನಾನು ಸಿನಿಕನಾಗಲಾರೆ. ಎಲ್ಲವೂ ಎಲ್ಲರೂ ಕೆಟ್ಟವರು ಎಂದು ಹೇಳಲಾರೆ. ಆದರೆ ಪತ್ರಿಕೋದ್ಯಮ ಸಾಗುತ್ತಿರುವ ದಾರಿ ಬೇಸರವನ್ನು ಉಂಟು ಮಾಡುತ್ತದೆ. ಆಗೆಲ್ಲ ಲಂಕೇಶ್ ನೆನಪಾಗಿ ಹೊಸ ಹುಮ್ಮಸು ಮೂಡುತ್ತದೆ. ಇದೆಲ್ಲ ಬದಲಾಗುತ್ತದೆ ಎಂದು ಅನ್ನಿಸುತ್ತದೆ.

3 comments:

Badarinath Palavalli said...

ಮೇಸ್ಟ್ರು ಹಲವು ಪತ್ರಕರ್ತರನ್ನು ರೂಪಿಸಿದ, ಟ್ಯಾಬುಲಾಯ್ಡ ಪತ್ರಿಕೋಧ್ಯಮಕ್ಕೆ ಘನತೆ ತಂದುಕೊಟ್ಟ ವ್ಯಕ್ತಿ ಮತ್ತು ಕಲಿಕಾ ಸಂಸ್ಥೆ.

ವೃತ್ತಿ ನಿಷ್ಠ ಪತ್ರಿಕೋದ್ಯಮವೂ ವ್ಯಕ್ತಿ ನಿಷ್ಠವಾದರೆ, ಓದುಗ ಪ್ರಭು ಯಾರನ್ನು ನಂಬಬೇಕು ಸಾರ್? ನಿಮ್ಮ ಲಂಕೇಶರ ನೆನಪು ಸಾಂದರ್ಭಿಕ ಸಾರ್.

ಲಂಕೇಶರು ಪತ್ರಿಕೆಯ ಹೂರಣ, ವಿನ್ಯಾಸ ಮತ್ತು ನಿಲುವು ಹೇಗಿರಬೇಕೆಂದು ತೋರಿಸಿಕೊಟ್ಟವರು.

ಸ್ಥಾಪಿತ ಭ್ರಷ್ಟ ಪಕ್ಷ ಮತ್ತು ಚುನಾವಣೆ ವ್ಯವಸ್ಥೆ ವಿರುದ್ಧ ತಾವೇ ಷಕ್ಷವನ್ನು ಹುಟ್ಟು ಹಾಕಿದರು.

ಚಾಮರಾಜ ಪೇಟೆಯಲ್ಲೋ ಬಸವನಗುಡಿಯಲ್ಲೋ ಅಡಿಗರ ಜೊತೆ ನಿಂತು ಚುನಾವಣಾ ಭಾಷಣ ಮಾಡಿಬಂದು ಮಧ್ಯಾಹ್ನ ರೇಸ್ ಕೋರ್ಸಿನಲ್ಲಿ ಬೆಂಗಳೂರು ರೇಸ್ ಪುಸ್ತಕದ ಜೊತೆ ಕಾಣಿಸಿಕೊಂಡು ನಮ್ಮನು ಅಚ್ಚರಿಗೆ ಕೆಡವುತ್ತಿದ್ದರು!

ಒಳ್ಳೆಯ ಲೇಖನ ಕೊಟ್ಟು ಲಂಕೇಶರನ್ನು ನೆನಪು ಮಾಡಿಕೊಟ್ಟಿರಿ. ಧನ್ಯವಾದಗಳು.

Badarinath Palavalli said...

ಮೇಸ್ಟ್ರು ಹಲವು ಪತ್ರಕರ್ತರನ್ನು ರೂಪಿಸಿದ, ಟ್ಯಾಬುಲಾಯ್ಡ ಪತ್ರಿಕೋಧ್ಯಮಕ್ಕೆ ಘನತೆ
ತಂದುಕೊಟ್ಟ ವ್ಯಕ್ತಿ ಮತ್ತು ಕಲಿಕಾ ಸಂಸ್ಥೆ.

ವೃತ್ತಿ ನಿಷ್ಠ ಪತ್ರಿಕೋದ್ಯಮವೂ ವ್ಯಕ್ತಿ
ನಿಷ್ಠವಾದರೆ, ಓದುಗ ಪ್ರಭು ಯಾರನ್ನು ನಂಬಬೇಕು ಸಾರ್?

ನಿಮ್ಮ ಲಂಕೇಶರ ನೆನಪು ಸಾಂದರ್ಭಿಕ ಸಾರ್. ಲಂಕೇಶರು ಪತ್ರಿಕೆಯ ಹೂರಣ, ವಿನ್ಯಾಸ ಮತ್ತು ನಿಲುವು ಹೇಗಿರಬೇಕೆಂದು ತೋರಿಸಿಕೊಟ್ಟವರು.

ಸ್ಥಾಪಿತ ಭ್ರಷ್ಟ ಪಕ್ಷ ಮತ್ತು ಚುನಾವಣೆ
ವ್ಯವಸ್ಥೆ ವಿರುದ್ಧ ತಾವೇ ಷಕ್ಷವನ್ನು ಹುಟ್ಟು ಹಾಕಿದರು.

ಚಾಮರಾಜ ಪೇಟೆಯಲ್ಲೋ ಬಸವನಗುಡಿಯಲ್ಲೋ ಅಡಿಗರ
ಜೊತೆ ನಿಂತು ಚುನಾವಣಾ ಭಾಷಣ
ಮಾಡಿಬಂದು ಮಧ್ಯಾಹ್ನ ರೇಸ್ ಕೋರ್ಸಿನಲ್ಲಿ ಬೆಂಗಳೂರು ರೇಸ್ ಪುಸ್ತಕದ ಜೊತೆ ಕಾಣಿಸಿಕೊಂಡು ನಮ್ಮನು ಅಚ್ಚರಿಗೆ ಕೆಡವುತ್ತಿದ್ದರು!

ಒಳ್ಳೆಯ ಲೇಖನ ಕೊಟ್ಟು ಲಂಕೇಶರನ್ನು ನೆನಪು ಮಾಡಿಕೊಟ್ಟಿರಿ.
ಧನ್ಯವಾದಗಳು.

V.R.BHAT said...

ರಾಘವೇಂದ್ರ ಭಾರತೀ ಸ್ವಾಮಿಗಳ ವಿಷಯದಲ್ಲಿ ನೀವು ತಿಳಿದುಕೊಂಡಿದ್ದು ಅಪ್ರಸ್ತುತ. ಈ ವಿಷಯದಲ್ಲಿ ನಾನು ನಿಮ್ಮ ವಿರೋಧಿಯೇ! ಅಂದಿನ ಆ ಕಾಲಘಟ್ಟದಲ್ಲಿ ರಾಜಾಶ್ರಯ ತಪ್ಪಿಹೋದ ಮಠಗಳಿಗೆ ಯಾವ ಅನುದಾನವಾಗಲೀ, ಅನುಪಾನವಾಗಲೀ ಇರಲಿಲ್ಲ. ಶ್ರೀಮಂತರು, ಉಳ್ಳವರು ಮಠಕ್ಕೆ ಕಿಂಚಿತ್ ಕಾಣಿಕೆ ಕೊಡಲೂ ಹಿಂದೆಮುಂದೆ ನೋಡುತ್ತಿರುವಾಗ ಮಠದ ಕಟ್ಟಡಗಳು ಹರಿದುಬಿದ್ದು ಹೀನಾಯ ಸ್ಥಿತಿಯನ್ನು ಅನುಭವಿಸಿದ ದಾಖಲೆಗಳು ಮಠದಲ್ಲಿವೆ. ಒಪ್ಪೊತ್ತಿನ ಭಿಕ್ಷಕ್ಕೆ ಆಸ್ರೆಯಿಲ್ಲದ ಹನಿಯುವ ಮಳೆಗೆ ಸೋರುವ ಹಳೆಯ ಕಟ್ಟಡದಲ್ಲಿ ಧಾರ್ಮಿಕ ಪೂಜೆ-ಕೈಂಕರ್ಯಗಳನ್ನು ನಡೆಸುವುದು ಸ್ವಾಮಿಯಾದವರಿಗೆ ಸವಾಲಾಗಿತ್ತು,ದುಸ್ತರವಾಗಿತ್ತು. ಅಂತಹ ಕಠಿಣ ದಿನಗಳಲ್ಲೂ ಎದೆಗುಂದದೆ ನೇರವಾಗಿ ಯಾರಲ್ಲೂ ಕೈಯೊಡ್ಡದೇ ಮಠ ನಡೆಸುವುದು ರಾಜಸನ್ಯಾಸಿಯಾಗಿ ಅವರ ಕರ್ತವ್ಯವಾಗಿತ್ತು; ಅವರದನ್ನು ಮಾಡಿದರು. ಇಂದಿನ ಸ್ವಾಮಿಗಳಂತೇ ತೀರಾ ಜನಾನುರಾಗಿಯಾಗಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇನೆ, ಆದರೆ ನಿಗ್ರಹಾನುಗ್ರಹ ತಪಸ್ಸಿದ್ಧಿಯನ್ನು ಅವರು ಹೊಂದಿದ್ದರು. ಇದಮಿತ್ಠಂ ಎಂದು ಅಧಿಕಾರಯುತವಾಗಿ ಯಾವುದೇ ವಿಷಯದ ಮೇಲೂ ಮಾತನಾಡಬಲ್ಲ ಜ್ಞಾನವಿತ್ತು; ಷಟ್ ಶಾಸ್ತ್ರಗಳಲ್ಲಿ, ತರ್ಕ-ನ್ಯಾಯ-ಮೀಮಾಂಸೆಗಳಲ್ಲಿ ಪರಿಣತಿಯಿತ್ತು. ಅವರ ಗತಕಾಲದ ಯಾವುದೋ ಇಸ್ವಿ ಯಾವುದೋ ದಿನದ ಯಾವುದೋ ಸಮಯದಲ್ಲಿ ಏನೋ ಕೆಲಸ ಮಾಡಿದ್ದನ್ನು ಕರಾರುವಾಕ್ಕಾಗಿ ಹೇಳಬಲ್ಲ ಅದ್ಭುತ ನೆನಪಿನ ಆಗರ ಅವರ ಮೆದುಳು! ಅವರ ಮನಸ್ಸಿಗೆ ಬೇಸರ ಉಂಟುಮಾಡಿದ ಹಲವರು ತಂತಾನೇ ನಿತ್ರಾಣರಾದ, ಸಾವನ್ನಪ್ಪಿದ ಘಟನೆಗಳನ್ನು ಹಲವರು ನೋಡಿದ್ದಾರೆ; ಹಾಗೊಮ್ಮೆ ಅಂತಹ ಸುದ್ದಿ ಅವರಿಗೆ ತಲ್ಪಿದ್ದರೆ " ಪಾಪ ಹಾಗಾಗಬಾರದಿತ್ತು " ಎನ್ನುವ ಅಂತಃಕರಣವೂ ಇತ್ತು. ಅವರೆಂದೂ ನೇರವಾಗಿ ಯಾರನ್ನೂ ಶಪಿಸಲಿಲ್ಲ. ತೀರ್ಥಹಳ್ಳಿಯಲ್ಲಿ ಮಠದ ಶಾಖೆಯನ್ನು ಆರಂಭಿಸಿದಾಗ ಆರ್ಥಿಕ ಸ್ವಾವಲಂಬನೆಗೆ ’ಹುಲಿಮಂಡೆ’ಯಲ್ಲಿ ಜಮೀನು ಮಾಡಿಸಿದರು. ಮಾನಪ್ಪ ಗೌಡರು ಆ ಜಮೀನಿನ ಒಳಭಾಗದಲ್ಲಿ ಹಾಯ್ದುಹೋಗುವಂತೇ ರಸ್ತೆಯೊಂದನ್ನು ಮಾಡಿಸಲು ಮುಂದಾದಾಗ ಇವರದನ್ನು ನಿರಾಕರಿಸಿದರು. ಸ್ವಾಮಿಗಳ ಕಾರಿಗೆ ಅಡ್ಡಲಾಗಿ ನಿಂತು ಕೆಳಗಿಳಿಸಿದ್ದರಿಂದ ಬೇಸರಗೊಂಡ ಸ್ವಾಮಿಗಳು ಕೆಕ್ಕಾರು ರಘೂತ್ತಮ ಮಠಕ್ಕೆ ತೆರಳಿ ನಿರಾಹಾರಿಗಳಾಗಿ ಧ್ಯಾನಾಸಕ್ತರಾದರು. ಮರಳಿ ವಾರದಲ್ಲಿ ತೀರ್ಥಹಳ್ಳಿಗೆ ಬರುವಷ್ಟರಲ್ಲಿ ತುಂಗಾನದಿಯಲ್ಲಿ ದೋಣಿ ಮುಳುಗಿ ಮಾನಪ್ಪಗೌಡರು ಮರಣಿಸಿದ ಸುದ್ದಿ ತಿಳಿದು ಬಂದಿದ್ದನ್ನು ಅಲ್ಲಿನವರು ಈಗಲೂ ಹೇಳುತ್ತಾರೆ. ಹಲವು ಹಗಲು ವೇಷದ ಸನ್ಯಾಸಿಗಳಂತೇ ಬರಿದೇ ಕಾಷಾಯ ವಸ್ತ್ರವನ್ನು ಧರಿಸಿ ಬೂಟಾಟಿಕೆ ನಡೆಸಿದ ವ್ಯಕ್ತಿ ಅವರಲ್ಲ. ನಿಮ್ಮ ಆ ಲೇಖನ ಖಂಡಿತಾ ತಪ್ಪು. ಅದಕ್ಕೆ ನಾನು ವಿರುದ್ಧವೇ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...