Wednesday, November 30, 2011

ನನ್ನೂರಿನ ಸಾಹಿತ್ಯ ಸಮ್ಮೇಳನ; ಸಾಹಿತ್ಯ ದಿಂದ ಬದುಕೇ ಅಥವಾ ಬದುಕಿನಿಂದ ಸಾಹಿತ್ಯವೇ ?

ಬೇಡ್ಕಣಿ ಎಂಬ ಆ ಪುಟ್ಟ ಊರು ಇರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಸುಮಾರು ೬ ಕಿಮೀ ದೂರದಲ್ಲಿ. ಅಲ್ಲಿ ಒಂದು ಕಾಲದಲ್ಲಿ ಕೋಟೆಯಿತ್ತು. ಆ ಕುರುಹುಗಳು ಈಗಲೂ ಇವೆ. ಕೋಟೆ ಆಂಜನೇಯ ಈಗಲೂ ಅಲ್ಲಿ ಕುಳಿತಿದ್ದಾನೆ. ಬೇಡ್ಕಣಿಯಿಂದ ಎರಡು ಕಿಮೀ ದೂರದಲ್ಲಿ ಇರುವುದು ಭುವನಗಿರಿ. ಕನ್ನಡಿಗರ ನಾಡ ದೈವ ಭುವನೇಶ್ವರಿ ಇಲ್ಲಿಯ ಗುಡ್ಡದ ಮೇಲಿದ್ದಾಳೆ. ಪ್ರಾಯಶಃ ಕರ್ನಾಟಕದಲ್ಲಿ ಇಂತಹ ಇನ್ನೊಂದು ಭುವನೇಶ್ವರಿ ದೇವಾಲಯ ಇಲ್ಲ. ಇಲ್ಲಿಂದ ಇನ್ನು ಕೆಲವೇ ಕೀಮೀ ದೂರದಲ್ಲಿ ಬಿಳಗಿ ಇದೆ. ಈ ಬಿಳಗಿ ಸಂಸ್ಥಾನದ ಕುರುಹುಗಳಾಗಿ ಜೈನ ಬಸದಿ, ಗೋಲ್ ಬಾವಿಯೂ ಇದೆ. ಈಗ ಗೋಲ ಬಾವಿ ಶಿತಿಲಗೊಂಡಿದೆ. ಈ ಬೇಡ್ಕಣಿ ಈಗ ಪ್ರಸಿದ್ಧಿ ಹೊಂದುವುದಕ್ಕೆ ಇನ್ನೊಂದು ಕಾರಣ ಇಲ್ಲಿರುವ ಶನಿ ದೇವಾಲಯ. ಈ ಶನಿ ತುಂಬಾ ಫವರ್ ಫುಲ್ ಎಂದು ಉತ್ತರ ಕನ್ನಡದ ಜನ ನಂಬಿದ್ದಾರೆ. ವಾರದ ಕೇಲವು ದಿನಗಳಲ್ಲಿ ಇಲ್ಲಿಗೆ ನೂರಾರು ಭಕ್ತಾದಿಗಳು ಬಂದು ಶನಿ ದೇವರ ಪೂಜೆ ಮಾಡಿಸಿ ಸಮಾಧಾನದಿಂದ ಹಿಂತಿರುಗುತ್ತಾರೆ. ಶನಿದೇವರಿಂದಾಗಿ ಊರಿಗೆ ಇನ್ನಷ್ಟು ಜನಪ್ರಿಯತೆ ಬಂದಿದೆ. ಇದೇ ಊರಿನಲ್ಲಿ ನಡೆದಿದ್ದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ. ಇಲ್ಲಿ ಸಮ್ಮೇಳನ ಯಶಸ್ವಿಯಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಸ್ವತಃ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೋಹಿದಾಸ್ ನಾಯಕರಿಗೆ ಇಂತಹ ಅನುಮಾನವಿತ್ತು. ಬೆಳಿಗ್ಗೆ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ನೋಡಿದಾಗ ನನಗೆ ಮನಸ್ಸು ತುಂಬಿ ಬರುವುದಕ್ಕೆ ಕಾರಣಗಳಿದ್ದವು. ಅಧ್ಯಕ್ಷರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಹೆಂಗಸರು ರೈತ ಕುಟುಂಬಕ್ಕೆ ಸೇರಿದವರು. ತಮ್ಮ ಬದುಕನ್ನು ನಿರ್ವಹಿಸಲು ಇಡೀ ದಿನ ತೋಟ ಗದ್ದೆಗಳಲ್ಲಿ ದುಡಿಯುವವರು. ಅವರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅಧ್ಯಕ್ಷರ ಪೂರ್ಣ ಕುಂಭ ಸ್ವಾಗತಕ್ಕೆ ಸಿದ್ಧರಾಗಿದ್ದರು. ದುಡಿಯುವ ಕೈಗಳು ಹೀಗೆ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದನ್ನು ನಾನು ನೋಡಿದ್ದು ಕಡಿಮೆ. ಸಾಧಾರಣವಾಗಿ ಮೇಲ್ವರ್ಗದ ಜನ ಇಂಥಹ ಮೆರವಣಿಗೆಯಲ್ಲಿ ಸಾಗುವುದು ಸಾಮನ್ಯ. ಆದರೆ ಇಲ್ಲಿನ ಪರಿಸ್ಥಿತಿಯೇ ಬೇರೆಯಾಗಿತ್ತು. ಅಲ್ಲಿ ನೋಡಿದಾಗ ಇದು ಸಾಹಿತ್ಯ ಸಮ್ಮೇಳನವೇ ಅಥವಾ ರೈತ ಸಮ್ಮೇಳನವೇ ಎನ್ನುವ ಹಾಗೆ. ಎಲ್ಲರ ಮನೆಗಳ ಮುಂದೆ ರಂಗೋಲಿ ಹಾಕಲಾಗಿತ್ತು.. ಗುಡಿಸಿ ಸಾರಿಸಿ ಮಾವಿನ ತೋರಣ ಕಟ್ಟಲಾಗಿತ್ತು. ಸಮ್ಮೇಳನವನ್ನು ಉದ್ಘಾಟಿಸಿದವರು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ. ನನ್ನ ಕೆಲಸ ಸಮಾರೋಪ ಭಾಷಣ ಮಾಡುವುದಾಗಿತ್ತು. ಆದರೆ ಉದ್ಘಾಟನಾ ಸಮಾರಂಭದಲ್ಲಿ ನನ್ನನ್ನು ವೇದಿಕೆಗೆ ಕ್ ಕರೆದು ಪುಸ್ತಕ ಬಿಡುಗಡೆಯ ಕೆಲಸವನ್ನು ಒಹಿಸಲಾಯಿತು. ನಾನು ತುಂಬಾ ಸಂತೋಷದಿಂದ ಹತ್ತು ಪುಸ್ತಕಗಳ ಬಿಡುಗಡೆ ಮಾಡಿದೆ. ಹಾಗೆ ಭಾಷಣ ಮಾಡುವಂತೆ ಸೂಚಿಸಿದರೂ ಸಂಜೆ ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡುವುದಾಗಿ ಹೇಳಿದೆ. ನನಗೆ ಅಲ್ಲಿ ಭಾಷಣ ಮಾಡುವುದಕ್ಕಿಂತ ಅವರ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ಅನ್ನಿಸಿತ್ತು. ಹಾಗೆ ಅಲ್ಲಿ ನಡೆಯುವ ಚರ್ಚೆ ಮತ್ತು ಸಂವಾದವನ್ನು ಕೇಳುವುದು ಭಾಷಣ ಮಾಡುವುದಕ್ಕಿಂತ ಮುಖ್ಯವಾಗಿತ್ತು. ನನಗೆ ನನ್ನ ಜಿಲ್ಲೆಯ ಬಗ್ಗೆ ಹೆಮ್ಮೆ ಮತ್ತು ಗೌರವ ಇರುವುದಕ್ಕೆ ಹಲವು ಕಾರಣಗಳಿಗಾಗಿ. ಇಲ್ಲಿನ ಸಾಮಾನ್ಯ ಮನುಷ್ಯ ಕೂಡ ಸಾಹಿತ್ಯದ ಬಗ್ಗೆ ಮಾತನಾಡಬಲ್ಲ. ಹೊಸ ಕೃತಿಗಳನ್ನು ವಿಮರ್ಷೆ ಮಾಡಬಲ್ಲ. ಹಾಗೆ ಒಂದು ರಸ್ತೆಯಲ್ಲಿ ಹೋದರೆ ನಿಮಗೆ ಹಲವು ಕವಿಗಳು ಎದುರಾಗುತ್ತಾರೆ.ಕಾವ್ಯದ ಬಗ್ಗೆ ಮಾತನಾಡುತ್ತಾರೆ. ಅವರ ಸಾಹಿತ್ಯ ಪ್ರೀತಿ ದೊಡ್ದದು. ನಾನು ೮೦ ದಶಕದಲ್ಲಿ ನಾವೆಲ್ಲ ಸೇರಿ ವ್ಯವಸ್ಥೆ ಮಾಡಿದ್ದ ಜಿಲ್ಲಾ ಬಂಡಾಯ ಸಾಹಿತ್ಯ ಸಮ್ಮೇಳನದ ನೆನಪು ಮಾಡಿಕೊಂಡು ನನ್ನ ಮಾತು ಪ್ರಾರಂಭಿಸಿದೆ. ಆ ಸಮ್ಮೇಳನದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ನಮ್ಮೂರಿನ ಆಗಿನ ಬಿಡಿಓ ಮುನಿವೆಂಕಟಪ್ಪ ಅವರನ್ನು ನೆನಪು ಮಾಡಿಕೊಂಡೆ. ಅವರು ಆಗಲೇ ಹಲವಾರು ಕವನಗಳನ್ನು ಬರೆದಿದ್ದರು. ಅದನ್ನು ಪ್ರಕಟಿಸುವ ಇರಾದೆ ಅವರದಾಗಿತ್ತು. ಹೀಗಾಗಿ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ದೇವನೂರು ಮಹಾದೇವ, ದೇವಯ್ಯ ಹರವೆ, ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ ಅವರಿಗೆ ಮುನಿವೆಂಕಟಪ್ಪ ತೋರಿಸಿದರು. ಅವರೆಲ್ಲ ಕವನ ಸಂಕಲನವನ್ನು ಹೊರ ತರುವಂತೆ ಸಲಹೆ ನೀಡಿದರು. ಆದರೆ ನನಗೆ ಕೆಲವು ಅನುಮಾನಗಳಿದ್ದವು. ಅವರ ಕವನಗಳು ಹೇಳಿಕೆಗಳಂತೆ ಇದ್ದವು. ಹಾಗೆ ಇಂದಿರಾ ಗಾಂಧಿ ಅವರನ್ನು ಕಟುವಾಗಿ ಟೀಕಿಸಿದ ಕವನವೂ ಇತ್ತು. ಇಂತಹ ಕವನವನ್ನು ಒಳಗೊಂಡ ಕವನ ಸಂಕಲನ ಹೊರಕ್ಕೆ ಬಂದರೆ, ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂಬ ಆತಂಕ ನನ್ನದಗಿತ್ತು. ಕೋಲಾರದಲ್ಲಿ ಜೀತದಾಳಾಗಿ ನಂತರ ಸರ್ಕಾರಿ ಕೆಲಸಕ್ಕೆ ಸೇರಿದ್ದ ಅವರು ಕೆಲಸ ಕಳೆದುಕೊಳ್ಳುವುದು ನನಗೆ ಬೇಕಾಗಿರಲಿಲ್ಲ. ಆದರೆ ಎಲ್ಲ ಬಂಡಾಯ ಸಾಹಿತಿಗಳು ಕವನ ಸಂಕಲನನ್ನು ತರುವಂತೆ ಸಲಹೆ ನೀಡಿದರು. ಸಿದ್ದಾಪುರದಲ್ಲಿ ಈ ಬಂಡಾಯ ಸಾಹಿತ್ಯ ಸಮ್ಮೇಳನ ನಡೆದ ಕೆಲವೇ ತಿಂಗಳುಗಳಲ್ಲಿ ಮುನಿವೆಂಕಟಪ್ಪನವರ ಬೆಂಕಿಯ ನಡುವೆ ಎಂಬ ಕವನ ಸಂಕಲನ ಹೊರಕ್ಕೆ ಬಂತು. ಹಾಗೆ ಅಂದಿನ ಗುಂಡೂರಾವ್ ಸರ್ಕಾರ ಮುನಿವೆಂಕಟಪ್ಪ ನವರನ್ನು ಅಮಾನತು ಮಾಡಿತು. ಸುಮಾರು ಒಂದೂವರೆ ವರ್ಷಗಳ ಕಾಲ ಅಮಾನತು ರದ್ದುಪಡಿಸಲು ಮುನಿವೆಂಕಟಪ್ಪ ಯತ್ನ ನಡೆಸಿದರೂ ಸಫಲರಾಗಲಿಲ್ಲ. ನಂತರ ಜನತಾ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲಂಕೇಶರು ಈ ವಿಚಾರವನ್ನು ನಝೀರ್ ಸಾಬರ ಗಮನಕ್ಕೆ ತಂದರು. ಮುನಿವೆಂಕಟಪ್ಪ ನವರ ಅಮಾನತು ರದ್ದಾಯಿತು. ನಾನು ಇದನ್ನೆಲ್ಲ ಸಮ್ಮೇಳನದಲ್ಲಿ ನೆನಪು ಮಾಡಿಕೊಂಡೆ. ಸಾಹಿತ್ಯ ಮುಖ್ಯವೇ ಅಥವಾ ಬದುಕೆ ? ಸಾಹಿತ್ಯ ಬದುಕಿನ ಮೇಲೆ ಪ್ರಭಾವ ಬೀರುತ್ತದೆಯೆ ಅಥವ ಬದಕಿನ ದಾಖಲೇಯೆ ಸಾಹಿತ್ಯವೆ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು ನಾನು ನನ್ನ ಮಾತನ್ನು ಮುಂದುವರಿಸಿದೆ. ನಮಗೆಲ್ಲ ನಮ್ಮ ಒಳಗಿನ ಜಗತ್ತೊಂದು ಇರುತ್ತದೆ. ಹಾಗೆ ಹೊರಗಿನ ಜಗತ್ತು. ಒಳಗಿನ ಜಗತ್ತನ್ನು ನಾವು ಕಟ್ಟಿಕೊಳ್ಳುವ ರೀತಿಯೇ ಅದ್ಭುತ. ಹೊರ ಜಗತ್ತಿನಿಂದ ಪ್ರೇರಿತವಾಗುವ ಈ ನಮ್ಮೋಳಗಿನ ಜಗತ್ತು ಹಲವು ರೀತಿಯ ದ್ವಂದ್ವಗಳನ್ನು ಹೊಂದಿರುತ್ತವೆ. ಹಾಗೆ ಅಲ್ಲಿ ಕನಸುಗಳು ಇರುತ್ತವೆ. ಆದರೆ ಈ ಒಳ ಜಗತ್ತು ಸಂಪೂರ್ಣವಾಗಿ ಸತ್ಯವಲ್ಲ. ಅದು ನೆನಪು, ಅನುಭವ ಕನಸುಗಳನ್ನು ಎರಕ ಹೊಯ್ದು ಸಿದ್ಧಪಡಿಸಿದ್ದು. ಒಬ್ಬ ಸಾಹಿತಿ ತನ್ನ ಈ ಒಳ ಜಗತ್ತನ್ನು ಹೊರ ಹಾಕುತ್ತಿರುತ್ತಾನೆ. ಆದರೆ ಇಲ್ಲಿನ ಕೌತುಕ ಎಂದರೆ ನಮ್ಮೆಲ್ಲರ ಒಳ ಜಗತ್ತು ಯಾವ ರೀತಿ ಇದೆ ಎಂಬುದು ನಮ್ಮ ಹೊರ ಜಗತ್ತಿನ ಗ್ರಹಿಕೆಯ ಮೇಲೆ ಅವಲಂಬಿತವಾಗಿದೆ. ನಮ್ಮ ಗ್ರಹಿಕೆಯಲ್ಲಿ ದೋಷವಿದ್ದರೆ ನಮ್ಮ ಒಳ ಜಗತ್ತು ಸುಂದರವಾಗಿರುವುದಿಲ್ಲ ಎಂದು ನಾನು ಹೇಳಿದೆ. ಇವತ್ತಿನ ಸಾಹಿತ್ಯ ಲೋಕ ಯಾವುದೋ ರೀತಿಯ ವಿಸ್ಮ್ರುತಿಗೆ ಒಳಗಾಗಿದೆ ಎಂದು ನನಗೆ ಅನ್ನಿಸುತ್ತದೆ. ಯಾಕೆಂದರೆ ಸಾಹಿತಿಗಳು ಸದಾ ವರ್ತಮಾನದ ಜೊತೆ ಮುಖಾಮುಖಿಯಾಗಬೇಕು. ವರ್ತಮಾನದ ಜೊತೆ ಜಗಳವಾಡಬೇಕು. ವರ್ತಮಾನದ ಸತ್ಯಗಳನ್ನು ಗ್ರಹಿಸಲು ಯತ್ನಿಸಬೇಕು. ಆದರೆ ಇವತ್ತಿನ ಸಂದರ್ಭದಲ್ಲಿ ಸಾಹಿತ್ಯ ಲೋಕ ವರ್ತಮಾನದ ಜೊತೆ ಮಾತುಕತೆ ನಡೆಸುತ್ತಿಲ್ಲ. ಜಾಗತೀಕರಣದ ನಂತರ ನಮ್ಮ ಗ್ರಾಮೀಣ ಪ್ರದೇಶ ಹೆಚ್ಚು ಅತಂತ್ರವಾಗಿರುವುದರ ಬಗ್ಗೆ ಸಾಹಿತಿಗಳು ಮಾತನಾಡುತ್ತಿಲ್ಲ. ರೈತರು ಭೂಮಿ ಕಳೆದುಕೊಂಡು ಅತಂತ್ರರಾಗುವುದು ನಮ್ಮ ಸಾಹಿತಿಗಳಿಗೆ ಕಥಾ ವಸ್ತುವಾಗುತ್ತಿಲ್ಲ. ಭ್ರಷ್ಟಾಚಾರದ ಬಗ್ಗೆ ಸಾಹಿತ್ಯ ಲೋಕ ಗಾಢ ಮೌನವನ್ನು ಹೊಂದಿರುವುದು ಸಂಶಯಕ್ಕೆ ಕಾರಣವಾಗಿದೆ. ಈಗ ಉತ್ತರ ಕನ್ನಡ ಜಿಲ್ಲೆಯನ್ನೇ ತೆಗೆದುಕೊಳ್ಳಿ. ಇಲ್ಲಿ ಮದುವೆಗೆ ಬಂದ ಹುಡುಗರಿಗೆ ಹುಡುಗಿಯರು ಸಿಗುತ್ತಿಲ್ಲ. ಬೆಂಗಳೂರಿನಲ್ಲಿ ಚಹಾ ಅಂಗಡಿ ಇಟ್ಟುಕೊಂಡರೂ ಸರಿ ಅವರನ್ನು ಮದುವೆಯಾಗಲು ಒಪ್ಪುವ ಹುಡುಗಿಯರು ಕೃಷಿ ಮಾಡಿಕೊಂಡಿರುವ ಹುಡುಗನನ್ನು ಮದುವೆಯಾಗುತ್ತಿಲ್ಲ. ಹೀಗಾಗಿ ೪೦ ದಾಟಿದರೂ ಮದುವೆಯಾಗದ ಹುಡುಗರು ಇಲ್ಲಿದ್ದಾರೆ. ಇದಕ್ಕೆ ಯಾಕೆ ಸಾಹಿತ್ಯ ಲೋಕ ಸ್ಪಂದಿಸುತ್ತಿಲ್ಲ. ಇದು ಒಂದು ಕಥೆಗೆ ಯಾಕೆ ವಸ್ತುವಾಗುತ್ತಿಲ್ಲ ? ಗ್ರಹಿಕೆ ಮತ್ತು ಸಂವಹನದ ಬಗ್ಗೆಯೂ ನಾನು ಮಾತನಾಡಿದೆ. ನನ್ನ ಭಾಷಣ ಮುಗಿಯುವ ಹೊತ್ತಿಗೆ ರಾತ್ರಿಯಾಗಿತ್ತು. ಎಲ್ಲರೂ ಭಾಷಣ ಚೆನ್ನಾಗಿತ್ತು ಎಂದರು. ನಾನು ನಮ್ಮ ಜಿಲ್ಲೆಯ ಸಂಸ್ಕೃತಿಯನ್ನು ಉಳಿಸಲು ಏನಾದರೂ ಮಾಡಬೇಕು ಎಂದು ಹೇಳಿದೆ. ಇಲ್ಲಿ ಪ್ರವಾಸೋಧ್ಯಮ ಅಭೀವೃದ್ಧಿಯಾಗಲು ಯೋಜನೆಗಳು ಬರಬೇಕು. ಈ ಬಗ್ಗೆ ಏನಾದರೂ ಮಾಡೋಣ ಎಂದು ಅವರಿಗೆ ಹೇಳಿ ರಾತ್ರಿಯ ಬೆಂಗಳೂರು ಬಸ್ ಹತ್ತಿದೆ. ಸಿದ್ದ್ದ್ಧಧ ಪಡಿ

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...