Sunday, December 4, 2011

ರಾಬಿನ್ ಹುಡ್ ರಾಜಕಾರಣ ಮತ್ತು ಹೊಸ ಸಮಾಜವಾದ !

ಹಲವು ದಿನಗಳ ನಂತರ ಬಳ್ಳಾರಿ ಶಾಂತವಾಗಿದೆ. ಶ್ರೀರಾಮುಲು ಎಂಬ ಹಿಂದುಳಿದ ವರ್ಗಗಳ ನಾಯಕ, ಜೈಲು ಪಾಲಾಗಿರುವ ಜನಾರ್ಧನ ರೆಡ್ದಿ ಅವರ ಅಪ್ತ, ಜಯಶಾಲಿಯಾಗಿದ್ದಾರೆ. ಅವರು ಬಳ್ಳಾರಿಯ ರಸ್ತೆಗಳಲ್ಲಿ ವಾಹನದ ಮೇಲೆ ಕುಳಿತು ಕೈಬೀಸಿಯಾಗಿದೆ. ಅವರ ಪಕ್ಕದಲ್ಲಿ ಅವರ ಅಳಿಯ ಕಂಪ್ಲಿ ಶಾಸಕ, ಸುರೇಶ ಬಾಬು ಮತ್ತು ಇನ್ನೊಂದು ಬದಿಯಲ್ಲಿ ಸೋಮಶೇಖರ ರೆಡ್ದಿ. ರೆಡ್ದಿ ಸಹೋದರಲ್ಲಿ ಒಬ್ಬರಾದ ಕರುಣಾಕರ ರೆಡ್ಡಿ ವಿಜಯದ ಮೆರವಣಿಗೆಯಲ್ಲೂ ಕಾಣಿಸಿಕೊಂಡಿಲ್ಲ. ಈ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಕಡಪದಲ್ಲಿರುವ ತಮ್ಮ ಹೆಂಡತಿಯ ಮನೆಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಏನೇ ಇರಲಿ ಕರುಣಾಕರ ರೆಡ್ಡಿ ಒಂದು ರೀತಿಯಲ್ಲಿ ಭೂಗತರಾಗಿದ್ದಾರೆ. ಅಂದರೆ ರೆಡ್ಡಿ ಸಹೋದರರ ನಡುವೆಯೂ ಭಿನ್ನಮತ ಇದೆ.ಇಲ್ಲದಿದ್ದರೆ ವಿಜಯದ ಮೆರವಣಿಗೆಯಲ್ಲಾದರೂ ಕರುಣಾಕರ ರೆಡ್ಡಿ ಕಾಣಿಸಿಕೊಳ್ಳಬೇಕಾಗಿತ್ತು. ರೆಡ್ಡಿಗಳ ಆಪ್ತರ ಪ್ರಕಾರ ಕಡಪದಲ್ಲಿಯೇ ಕರುಣಾಕರ ರೆಡ್ಡಿ ಮನೆಯೊಂದನ್ನು ಕಟ್ಟಿಸಿದ್ದಾರಂತೆ. ಅವರು ಅಲ್ಲಿಯೇ ಕಾಯಂ ಆಗಿ ಇರುತ್ತಾರೆಯೆ ಕರ್ನಾಟಕಕ್ಕೆ ಬರುತ್ತಾರೆಯೆ ಗೊತ್ತಿಲ್ಲ. ಈ ಜಯ ಕುಸಿಯುತ್ತಿದ್ದ ರೆಡ್ಡಿ ಸಾಮ್ರಾಜ್ಯಕ್ಕೆ ಒಂದು ಸಣ್ಣ ಆಸರೆ ಎಂಬುದು ನಿಜ. ಈ ಚುನಾವಣೆಯಲ್ಲಿ ರಾಮುಲು ಸೋತಿದ್ದರೆ, ಸಾಮ್ರಾಜ್ಯದ ಪತನ ನಿಚ್ಚಳವಾಗುತ್ತಿತ್ತು. ಕರ್ನಾಟಕದ ರಾಜಕೀಯದ ಒಂದು ಅಧ್ಯಾಯ ಮುಗಿಯುತ್ತಿತ್ತು. ಆದರೆ ಹಾಗಾಗಲಿಲ್ಲ. ವಿಜಯದ ಮೆರವಣಿಗೆಯ ಸಂದರ್ಭದಲ್ಲಿ ರಾಮುಲು ಹೇಳಿದ ಒಂದು ಮಾತು: ನಾನು ಹಿಂದುಳಿದ ವರ್ಗದಿಂದ ಬಂದವನು ಎಂಬ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಯಿತು ! ಈ ಮಾತು ಅವರ ಮುಂದಿನ ರಾಜಕೀಯ ನಡೆಯ ಮುನ್ಸೂಚಿ ಎಂದೇ ನನಗೆ ಅನ್ನಿಸುತ್ತದೆ. ಅವರು ಹಿಂದುಳಿದ ವರ್ಗಗಳ ರಾಜಕಾರಣಕ್ಕೆ ನಿಶ್ಚಯಿಸಿ ಆಗಿದೆ. ಅವರು ಹೊಸ ಪಕ್ಷ ಅಹಿಂದದಂತೆ, ಹಿಂದುಳಿದ ವರ್ಗ ಮತ್ತು ಮುಸ್ಲೀಮ್ ಅವರ ಬೆಂಬಲದ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟ. ಈ ಕಾರಣದಿಂದಲೇ ವಿಜಯಘೋಷ ಆಗುತ್ತಿರುವಂತೆ ದೇವಾಲಯಕ್ಕೆ ಹೋಗಿ ಬಂದ ರಾಮುಲು ಮಸೀದಿ ಚರ್ಚಗಳಿಗೂ ಹೋಗಿ ಬಂದಿದ್ದಾರೆ. ತಲೆಯ ಮೇಲೆ ಮುಸ್ಲೀಮ್ ಟೋಪಿಯನ್ನು ಹಾಕಿಕೊಂಡಿದ್ದಾರೆ. ಇದೆಲ್ಲ ಅವರ ಮುಂದಿನ ಹೆಜ್ಜೆಯ ಮುನ್ಸೂಚನೆ.ಈ ಝಾಆಟೀ ರಾಜಕಾರಣ ಅವರನ್ನು ಎಲ್ಲಿಗೆ ಒಯ್ಯಬಹುದು ? ಅವರು ಕರ್ನಟಕದಲ್ಲಿ ಪ್ರಬಲ ಶಕ್ತಿಯಗಿ ಉಳಿಯಬಹುದೆ ? ಹೇಳುವುದು ಕಷ್ಟ. ಯಾಕೆಂದರೆ ಅಹಿಂದ ಸಂಘಟನೆಯ ನೇತೃತ್ವ ಒಹಿಸಿ ಹೋರಾಡಿದ ಸಿದ್ದರಾಮಯ್ಯ ಅವರೇ ಈ ಯತ್ನದಲ್ಲಿ ಸಫಲರಾಗಲಿಲ್ಲ. ಹೀಗಿರುವಾಗ ರೆಡ್ಡಿಗಳನ್ನು ಹಿಂದಕ್ಕೆ ಇಟ್ಟುಕೊಂಡು ಹೊರಟಿರುವ ಶ್ರೀರಾಮುಲು ಗೆಲ್ಲುತ್ತಾರೆ ಎಂದು ಹೇಳಲಾಗದು. ಆದರೆ ರೆಡ್ದಿ ಸಹೋದರರಿಗೆ ಈ ನಡೆ ಅನಿವಾರ್ಯ. ಅವರಿಗೆ ಬೇರೆ ದಾರಿಯಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅವರು ಹೋಗುವಂತಿಲ್ಲ. ಜೆಡಿಎಸ್ ಸೇರಿದರೆ ಇರುವ ಮರ್ಯಾದೆಯೂ ಹೋಗುತ್ತದೆ. ಬಿಜೆಪಿಯಲ್ಲಿ ಇರುವ ಸ್ಥಿತಿ ಇಲ್ಲ. ಉಳಿದ ದಾರಿ ಹೊಸ ಪಕ್ಷ ಕಟ್ಟುವುದು ಮಾತ್ರ. ರಾಜಕಾರಣದಲ್ಲಿ ನಾಯಕನೊಬ್ಬನ ಅನಿವಾರ್ಯತೆ ಹೊಸ ಪಕ್ಷದ ಹುಟ್ಟಿಗೆ ಕಾರಣವಾಗಬಹುದಾದರೂ ಆ ಪಕ್ಷದ ಯಶಸ್ಸಿಗೆ ಅಷ್ಟೇ ಸಾಲದು. ಕರ್ನಾಟಕದ ಇತಿಹಾಸವನ್ನೇ ನೋಡಿ. ವಿಅಯಕ್ತಿಕ ಕಾರಣಗಳಿಂದಾಗಿ ಪ್ರಾದೇಶಿಕ ಪಕ್ಷವನ್ನು ಹುಟ್ಟು ಹಾಕಿದ ದೇವರಾಜ ಅರಸು. ಆರ್. ಗುಂಡೂರಾವ್, ಬಂಗಾರಪ್ಪ ಎಲ್ಲರೂ ನೆಲ ಕಚ್ಚಿದರು. ಅವರ ಕಿಸೆ ಬರಿದಾದಾಗ ಮತ್ತೆ ಮಾತ್ರ ಪಕ್ಷಕ್ಕೆ ಮರಳಿದರು, ಇಲ್ಲವೇ ನಾಮಾವಶೇಷವಾದರು. ಇತಿಹಾಸ ಹೀಗಿರುವಾಗ ಶ್ರೀರಾಮುಲು ಮತ್ತು ಅವರ ಬಳಗಕ್ಕೆ ಇತಿಹಾಸವನ್ನು ಬದಲಿಸುವ ಹೊಸ ಇತಿಹಾಸವನ್ನು ಬರೆಯುವ ಶಕ್ತಿ ಇದೆಯೆ ? ಈಗಿನ ಪರಿಸ್ಥಿತಿ ನೋಡಿದರೆ ಈ ಸಾಧ್ಯತೆ ತುಂಬಾ ಕಡಿಮೆ ಎಂದೇ ಅನ್ನಿಸುತ್ತದೆ. ಶ್ರೀರಾಮುಲು ಮಂತ್ರಿಯಾಗಿ ಕೆಲಸ ಮಾಡಿದರೂ ಅವರೆಂದೂ ರಾಜ್ಯ ನಾಯಕರಾಗಿ ಪರಿಗಣಿತರಾದವರಲ್ಲ. ಜೊತೆಗೆ ರಾಜ್ಯ ನಾಯಕರಾಗಿ ಹೊರಹೊಮ್ಮುವ ನಾಯಕತ್ವದ ಗುಣ ಅವರಲ್ಲಿ ಕಾಣುವುದಿಲ್ಲ.ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಮಾತ್ರ ಅವರ ಪ್ರಭಾವ ಸೀಮಿತ. ಇದು ರಾಜಕೀಯ ಪಕ್ಷವೊಂದನ್ನು ಹುಟ್ಟು ಹಾಕಲು ಸಾಲದು. ಶ್ರೀರಾಮುಲು ಹೃದಯವಂತ ಎಂದು ಹೇಳುವವರಿದ್ದಾರೆ. ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದಕ್ಕೆ ಸಣ್ನ ಉದಾಹರಣೆಯೊಂದು ಇಲ್ಲಿದೆ. ಒಂದು ದಿನ ಒಬ್ಬ ಹೆಂಗಸು ರಾಮುಲು ಮನೆಗೆ ಬಂದಳು. ಅವಳ ಮಗನಿಗೆ ಮೂತ್ರಪಿಂಡದ ಸಮಸ್ಯೆ. ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ವ್ಯವಸ್ಥೆ ಕೆಟ್ತು ಹೋಗಿತ್ತು. ಮಗನಿಗೆ ಡಯಾಲಿಸಿಸ್ ಮಾಡಿಸುವ ಅನಿವಾರ್ಯತೆ ಆ ಹೆಂಗಸಿಗೆ. ಶ್ರೀರಾಮುಲು ಅವರನ್ನು ನೋಡಿ ಆಕೆ ಕೇಳಿಕೊಂಡಿದ್ದು ಇಷ್ಟೇ. ದಯವಿಟ್ಟು ಡಯಾಲಿಸಿಸ್ ಸರಿಪಡಿಸಿ.ನನ್ನ ಮಗನಿಗೆ ಡಯಾಲಿಸಿಸ್ ಮಾಡಿಸಬೇಕಾಗಿದೆ. ಇದಕ್ಕೆ ರಾಮುಲು ಪ್ರತಿಕ್ರಿಯೆ ಏನು ಗೊತ್ತೆ ? ಈ ವ್ಯವಸ್ಥೆ ಯಾವಾಗ ಸರಿಯಾಗುತ್ತದೇಯೋ ಗೊತ್ತಿಲ್ಲ. ಒಂದು ಕೆಲಸ ಮಾಡಿ ಬೆಂಗಳೂರಿಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಂಡು ಬನ್ನಿ ಎಂದು ಹೇಳಿದ ಅವರು ೩೦,೦೦೦ ರೂಪಾಯಿಗಳನ್ನು ಕಿಸೆಯಿಂದ ತೆಗೆದುಕೊಟ್ಟರಂತೆ ! ಇದು ಶ್ರೀರಾಮುಲು ಅವರ ಬಳ್ಳಾರಿ ರಾಜಕಾರಣದ ಪರಿ. ಅವರು ವ್ಯಕ್ತಿಗತವಾಗಿ ಸಾವಿರಾರು ಜನರಿಗೆ ಸಹಾಯ ಮಾಡಿದ್ದಾರೆ. ಮದುವೆಗೆ, ಮುಂಜಿಗೆ, ಅಂತ್ಯಕ್ರಿಯೆಗೆ ಹೀಗೆ ಎಲ್ಲದಕ್ಕೂ ವ್ಯಕ್ತಿಗತವಾಗಿ ಸಹಾಯ ಮಾಡಿದ್ದಾರೆ. ವೈಯಕ್ತಿಕ ಸಹಾಯ ಪಡೆದವರು ಅವರೆನ್ನು ಎಂದೂ ಮರೆಯುವುದಿಲ್ಲ.ಇದೇ ರಾಮುಲು ರಾಬಿನ್ ಉಡ್ ಮಾಧರಿ. ಇಂಗ್ಲೇಂಡಿನ ಜನಪದ ನಾಯಕನಾಗಿದ್ದವನು ರಾಬಿನ್ ಹುಡ್. ಆತ ಒಂದು ರೀತಿಯಲ್ಲಿ ಸಾಮಾನ್ಯ ಕಳ್ಳ. ಆದರೆ ಆತ ಸುಲಿದಿದ್ದನ್ನು ಬಡವರಿಗೆ ಹಂಚುತ್ತಿದ್ದ. ಪ್ರಭೂತ್ವದ ವಿರುದ್ಧ ಭೂಗತನಾಗಿದ್ದುಕೊಂಡೇ ಹೋರಾಟ ಮಾಡುತ್ತಿದ್ದ. ಇದೇ ರಾಬಿನ್ ಹುಡ್ ಮಾಧರಿ. ಈ ಮಾಧರಿಯನ್ನು ಅನುಸರಿಸುತ್ತಿರುವ ರಾಮುಲು ಅವರಿಗೆ ಯಶಸ್ಸ ದಕ್ಕಿದೆ.ಆದರೆ ಒಬ್ಬ ರಾಜ್ಯ ಮಟ್ಟದ ನಾಯಕ ಈ ರಾಬಿನ್ ಉಡ್ ರಾಜಕಾರಣವನ್ನು ಎಷ್ಟು ದಿನ ಮಾಡಬಹುದು ? ರಾಜಕಾರಣ ಎನ್ನುವುದು ವೈಯಕ್ತಿಕ ನೆಲೆಯಲ್ಲಿ ನಡೆಯುವಂತಹುದೆ ಅಥವಾ ಅದಕ್ಕೆ ಸಾಮುದಾಯಿಕ ನೆಲೆಗಟ್ಟು ಬೇಕೆ ? ಈ ಪ್ರಶ್ನೆ ಪ್ರಸಕ್ತ ಸಂದರ್ಭದಲ್ಲಿ ತುಂಬಾ ಮುಖ್ಯ. ರಾಜಕಾರಣಿಗಳಿಗೆ ಸಾಮುದಾಯಿಕ ಹೊಣೆಗಾರಿಕೆ ಇದೆ. ಅವರು ಸಮಾಜಕ್ಕೆ ಸೇರಿದವರೇ ಹೊರತು ಯಾವುದೇ ವ್ಯಕ್ತಿಗಳಿಗಲ್ಲ. ಸಮುದಾಯದ ಒಳಿತಿಗೆ ಕೆಲಸ ಮಾಡಬೇಕಾದ್ದು ಅವರ ಜವಬ್ದಾರಿ. ಆದರೆ ನಮ್ಮ ರಾಜಕಾರಣದಲ್ಲಿ ವೈಯಕ್ತಿಕ ಸಹಾಯ ಮಾಡಿದವರೇ ಸತತವಾಗಿ ಆರಿಸಿ ಬರುತ್ತಿದ್ದಾರೆಯೇ ಹೊರತೂ ಸಮಾಜಕ್ಕಾಗಿ ಕೆಲಸ ಮಾಡಿದವರಲ್ಲ. ಅಂದರೆ ರಾಜಕಾರಣ ಸಾಮುದಾಯಿಕ ನೆಲೆಗಟ್ಟಿನಿಂದ ವೈಯಕ್ತಿಕ ನೆಲೆಗಟ್ಟಿಗೆ ಬಂದು ನಿಂತಿದೆ. ವಯಕ್ತಿಕ ನೆಲೆಗಟ್ಟಿನ ರಾಜಕಾರಣದಲ್ಲಿ ಸಮುದಾಯ ಮುಖ್ಯವಾಗುವುದಿಲ್ಲ. ಅಲ್ಲಿ ನಡೆಯುವುದೆಲ್ಲ ವ್ಯಕ್ತಿ ಕೇಂದ್ರಿತವಾಗಿಯೇ. ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನೇ ತೆಗೆದುಕೊಳ್ಳಿ. ಅವರು ಮಠ ಮಾನ್ಯಗಳು ಸೇರಿದಂತೆ ಎಲ್ಲರಿಗೂ ಹಣ ಹಂಚಿದ್ದಾರೆ. ಅವರಿಂದ ಲಾಭ ಪಡೆದವರು ಅವರೆನ್ನು ಎಂದೂ ಮರೆಯುವುದಿಲ್ಲ. ಅಂದರೆ ದುಡ್ಡಿನ ಸಹಾಯ ಮಾಡುವ ಯಡಿಯೂರಪ್ಪ ಮತ್ತು ಅವರಿಂದ ಸಹಾಯ ಪಡೆದ ವ್ಯಕ್ತಿಗಳ ನಡುವಿನ ವೈಯಕ್ತಿಕ ಸಂಬಂಧ ಇದು. ಆದರೆ ರಾಜಕಾರಣ ಎನ್ನುವುದು ಹಾಗಲ್ಲ. ಅದು ಸಾಮುದಾಯಿಕ ನೆಲೆಗಟ್ಟಿನ ಮೇಲೆ ನಿಂತಿರಬೇಕು. ರಾಜಕಾರಣಿಗೆ ಉತ್ತರದಾಯಿತ್ವ ಇರಬೇಕು. ಈ ಉತ್ತರದಾಯಿತ್ವ ವಯಕ್ತಿಕ ನೆಲೆಗಟ್ಟಿನ ಮೇಲೆ ನಿಂತಿರುವುದಿಲ್ಲ. ಇದು ನಿಂತಿರುವುದು ಸಾಮುದಾಯಿಕ ನೆಲೆಗಟ್ಟಿನ ಮೇಲೆ. ಅಂದರೆ ರಾಜಕಾರಣಿಗಳು ಹಾಗೂ ಅಧಿಕಾರಸ್ತರು ಉತ್ತರ ನೀಡಬೇಕಾದ್ದು ಸಮಾಜಕ್ಕೆ ಹೊರತೂ ಯಾವುದೇ ವ್ಯಕ್ತಿಗಳಿಗಲ್ಲ. ಇಡೀ ಸಮಾಜದ ಕಲ್ಪನೆ ಇಂದು ಹೊರಟು ಹೋಗಿದೆ. ಯಡಿಯೂರಪ್ಪ ಸಮಾಜ ಎಂದ ತಕ್ಷಣ ಲಿಂಗಾಯಿತರು ನೆನಪಾಗುತ್ತಾರೆ. ಕುಮಾರಸ್ವಾಮಿ ದೇವೇಗೌಡರಿಗೆ ಸಮಾಜ ಎಂದರೆ ಒಕ್ಕಲಿಗರು. ರಾಮುಲು ಈಗ ವಾಲ್ಮೀಕಿ ಸಮಾಜದ ಬಗ್ಗೆ ಮಾತನಾಡತೊಡಗಿದ್ದಾರೆ. ಇದು ಇವರೆಲ್ಲ ಸಮಾಜವಿಜ್ನಾನ ಮತ್ತು ಸಮಾಜವಾದ. ಈ ಹೊಸ ಸಮಾಜ ವಿಜ್ನಾನ ಇಂದಿನ ರಾಜಕಾರಣವನ್ನು ನಿರ್ದೇಶಿಸುತ್ತಿದೆ. ಇಂಥಹ ಸಮಾಜ ವಿಜ್ನಾನದ ಹರಿಕಾರರು ಎಲ್ಲಿ ತಪ್ಪುತ್ತಾರೆಂದರೆ, ತಮ್ಮ ಸಮಾಜವೊಂದೇ ಗೆಲುವನ್ನು ತಂದುಕೊಡುತ್ತದೆ ಎಂದು ನಂಬಿಕೆಯ ಮೂಲಕ. ಶ್ರೀರಾಮುಲು ಈಗ ಹೊಸ ಪಕ್ಷ ಕಟ್ಟುವ ಸಂದರ್ಭದಲ್ಲಿ ಇದೇ ಸಮಾಜವಾದವನ್ನು ಮುಡಿಗೇರಿಸಿಕೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ. ಹಾಗೆ ಯಡಿಯೂರಪ್ಪ ಮಾಡಿದ ತಪ್ಪನ್ನೇ ಅವರು ಮಾಡುವ ಲಕ್ಷಣ ಕಂಡು ಬರುತ್ತಿದೆ. ಬಳ್ಳಾರಿಯಲ್ಲಿ ಲಿಂಗಾಯಿತರು ಯಡಿಯೂರಪ್ಪ ಅವರ ಅಭ್ಯರ್ಥಿಯನ್ನು ಗೆಲ್ಲಿಸಲಿಲ್ಲ ಎಂಬುದು ರಾಮುಲು ಅವರಿಗೆ ಅರ್ಥವಾದಂತೆ ಕಂಡುಬರುತ್ತಿಲ್ಲ. ಇತಿಹಾಸದಿಂದ ಪಾಠ ಕಲಿಯದವನು ಏನನ್ನೂ ಮಾಡಲಾರ. ಯಶಸ್ವಿ ನಾಯಕನೂ ಆಗಲಾರ.

2 comments:

Arun Shimoga said...

Neevu heliddu sathya. Ondu vichaaravannu Yeddyurappa artha maadikondaro illavo thiliyalilla. Avaru matha-maanyagalu seridanthe anekarige hana needidaru. Avarinda hana padedavare avaru jailige hodaaga hiyalisi bardaru mattu praamaanikathe bagge bhashana kottaru. Yeddyurappa ade hanavannu badavarige hanchiddiddare swalpa kaalavaadaroo snathosha paduttiddaru mattu jeevana poorthi krithajnaraagiruttiddaru.

Badarinath Palavalli said...

ಪ್ರಸಕ್ತ ರಾಜಕಾರಣಕ್ಕೆ ಕನ್ನಡಿ ಹಿಡಿದಂತಿದೆ ನಿಮ್ಮ ಈ ಲೇಖನ. ಜಾತಿ ರಾಜಕಾರಣದಿಂದ ಹೊಲಸೆದ್ದಿರುವ ಚುನಾವಣೆ ವ್ಯವಸ್ಥೆಗೆ ಮೊದಲು ಮೇಜರ್ ಸರ್ಜರಿ ಆಗಬೇಕಿದೆ ಸಾರ್!

ರಾಮುಲು ಗೆಲುವು ನಿಸ್ಸಂಕೋಚವಾಗಿ ರಾಷ್ಟ್ರೀಯ ಪಕ್ಷಗಳಿಗೆ ತೀವ್ರ ಮಖಭಂಗ ತರಿಸಿದ್ದರೆ, ಅವು ಇನ್ನಾದರೂ ನಿಜವಾದ ಜನ ಸೇವೆಗೆ ಮುಖ ಮಾಡಬೇಕಿವೆ.

ನನ್ನ ಬ್ಲಾಗಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...