Monday, December 5, 2011

ಕಾಲು ಮುಟ್ಟುವವರು ಮತ್ತು ಮುಟ್ಟಿಸಿಕೊಳ್ಳುವವರು........!

ಮಾಜಿ ಮುಖ್ಯಮಂತ್ರಿ ಜೆ. ಎಚ್. ಪಟೇಲ್,ಒಮ್ಮೆ ಹೇಳಿದ ಮಾತು ಕಾಲು ಮುಟ್ಟಿ ನಮಸ್ಕರಿಸುವುದಕ್ಕೂ, ಕೈ ಮುಗಿಯುವುದಕ್ಕೂ ಹೆಚ್ಚಿನ ವ್ಯತ್ಯಾಸ ಇಲ್ಲ. ಕಾಲು ಕೈ ಎರಡು ನಮ್ಮ ಅಂಗಗಳೇ.. ಈ ಮಾತನ್ನು ಅವರು ಹೇಳಿದ್ದು, ಅವರು ಸ್ವಾಮಿಯೊಬ್ಬರ ಕಾಲು ಮುಟ್ಟಿ ನಮಸ್ಕರಿಸಿ ವಿವಾದಕ್ಕೆ ಒಳಗಾದಾಗ. ಜೆ.ಎಚ್. ಪಟೇಲ್ ಬುದ್ದಿವಂತ ರಾಜಕಾರಣಿ ಅವರು ತಮ್ಮ ಎಲ್ಲ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳಬಲ್ಲವರಾಗಿದ್ದರು. ಕೆಲವೊಮ್ಮೆ ಅವರ ಮಾತನ್ನು ಕೇಳಿ ನಕ್ಕು ಸುಮ್ಮನಾಗಿಬಿಡಬಹುದಾಗಿತ್ತು. ಯಾಕೆಂದರೆ ಅವರ ಮಾತಿನ ವೈಖರಿಯೇ ಹಾಗಿತ್ತು. ಜೆ.ಎಚ್. ಪಟೇಲರು ಅಂದು ಹೇಳಿದ ಮಾತನ್ನು ಇಂದು ನೆನಪಿಸಿಕೊಳ್ಳುವುದಕ್ಕೆ ಕಾರಣವಿದೆ. ನಿನ್ನೆ ವಿಧಾನಸಭೆಯಲ್ಲಿ ನಡೆದ ಘಟನೆಯೊಂದರಿಂದ ನನಗೆ ಜೆ.ಎಚ್. ಪಟೇಲರ ಈ ಮಾತು ನೆನಪಾಯಿತು. ಬಿ.ಎಸ್. ಯಡಿಯೂರಪ್ಪನವರು ಮಾಜಿಯಾದ ಮೇಲೆ ನಿನ್ನೆ ಮೊದಲ ಬಾರಿ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಕುಳಿತಿದ್ದ ಅವರ ಕಾಲನ್ನು ಮುಟ್ಟಿ ನಮಸ್ಕರಿಸಿದವರು ಹಲವರು. ಅವರಲ್ಲಿ ಪ್ರಮುಖರೆಂದರೆ ವಿಧೂಷಕನಂತೆ ಸದಾ ವರ್ತಿಸುವ ಅಬ್ಕಾರಿ ಸಚಿವ ರೇಣುಕಾಚಾರ್ಯ. ಕಾಲು ಮುಟ್ಟುವುದಕ್ಕೂ ಸೈ, ಕೈ ಎತ್ತುವುದಕ್ಕೂ ಸೈ ಎಂಬಂತಿರುವ ರೇಣುಕಾಚಾರ್ಯ ಅವರ ಈ ವರ್ತನೆಯನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಈ ಘಟನೆ ವಿಧಾನಸಭೆಯಲ್ಲಿ ನಡೆದಿದ್ದರಿಂದ ಈ ಬಗ್ಗೆ ಮಾತನಾಡಲೇಬೇಕಾಗಿದೆ. ನಮ್ಮ ಜನಪ್ರತಿನಿಧಿಗಳ ಅಲ್ಲಿನ ನಡವಳಿಕೆ ಕೇವಲ ವೈಯಕ್ತಿಕ ನಡವಳಿಕೆಯಾಗಿ ಉಳಿಯುವುದಿಲ್ಲ. ಅದಕ್ಕೆ ಸಾರ್ವಜನಿಕ ಆಯಾಮ ಕೂಡ ಇದೆ. ಯಾಕೆಂದರೆ ಅದು ವಿಧಾನಸಭೆ. ವಿಧಾನಸಭೆಗೆ ಪಾವಿತ್ರ್ಯತೆ ಇದೆ. ಅಲ್ಲಿನ ನಡವಳಿಕೆಗೆ ಸಂಬಂಧಿಸಿದಂತೆ ಜನತೆಗೆ ಜನಪ್ರತಿನಿಧಿಗಳು ಉತ್ತರ ನೀಡಲೇಬೇಕು.ನಾವು ಆ ಬಗ್ಗೆ ಮಾತನಾಡಲೇಬೇಕು. ವಿಧಾನಸಭೆ ರಾಜಕಾರಣಿಗಳ ಮಾವನ ಮನೆ ಅಲ್ಲ. ಅವರ ಡ್ರಾಯಿಂಗ್ ರೂಮೋ ಬೆಡ್ ರುಮೋ ಅಲ್ಲ. ನಮ್ಮ ಪರವಾಗಿ ವಿಧಾನಸಭೆಗೆ ಹೋಗಿ ಶಾಸನ ರಚನೆ ಮಾಡಬೇಕಾದ ಈ ಜನ ಕೋಡಂಗಿಗಳಂತೆ ವರ್ತಿಸಕೂಡದು. ಹಾಗೆ ಮಾಡಿದರೆ ಅದು ಜನರಿಗೆ ಮಾಡುವ ಅವಮಾನ. ಇನ್ನು ಕಾಲಿಗೆ ಬೀಳುವ ವಿಚಾರಕ್ಕೆ ಬರೋಣ. ಕಾಲಿಗೆ ಬೀಳುವುದೆಂದರೆ ಅದು ಸಂಪೂರ್ಣ ಶರಣಾಗತಿ. ಭಾರತೀಯ ಪರಂಪರೆಯಲ್ಲಿ ದೇವರಿಗೆ, ಸಂತರಿಗೆ, ಹಿರಿಯರಿಗೆ ಕಾಲಿಗೆ ಬೀಳುವ ಪರಂಪರೆಯಿದೆ. ಇದು ನಾನು ನಿನಗೆ ಶರಣಾಗಿದ್ದೇನೆ ಎನ್ನುವುದು ಯಾರು ಕಾಲಿಗೆ ಬೀಳುತ್ತಾರೆಯೋ ಅವರಿಗೆ ತೋರಿಸುವ ಗೌರವ ಕೂಡ. ಆದರೆ ಕಾಲಿಗೆ ಬೀಳುವವನಿಗೆ, ಕಾಲಿಗೆ ಬೀಳುವವರ ಇದಕ್ಕೆ ಅರ್ಹರೆ ಎಂಬ ಅರಿವು ಇರಬೇಕು ಇಂತಹ ಅರಿವು ಇಲ್ಲದ ಕಾಲಿಗೆ ಬೀಳುವುದು ಮೂರ್ಖತನ. ಇಂದಿನ ಬದುಕಿನಲ್ಲಿ ಕಾಲಿಗೆ ಬೀಳುವುದು ಸಾಮಾನ್ಯವಾಗಿದೆ. ಜೊತೆಗೆ ಕಾಲಿಗೆ ಬೀಳುವವರು ಗೌರವದಿಂದ ಕಾಲಿಗೆ ಬೀಳುತ್ತಿದ್ದಾರೆಯೇ ಅಥವಾ ಕಾಲನ್ನು ಎಲ್ಲಿ ಹಿಡಿದು ಎಳೆಯಬೇಕು ಎಂದು ಸರಿಯಾಗಿ ನೋಡುವುದಕ್ಕಾಗಿ ಕಾಲಿಗೆ ಬೀಳುತ್ತಾರೆಯೇ ಎಂಬುದು ಅನುಮಾನ. ಕಾಲಿಗೆ ಬೀಳುವುದು ಹೇಗೆ ಸರ್ವವ್ಯಾಪಿಯಾಗಿದೆ ನೋಡಿ. ಯಾವುದೋ ನಾಯಕ ನಟ ಎದುರಿಗೆ ಕಂಡರೆ, ಯುವ ಕಲಾವಿದರು ಅವನ ಕಾಲಿಗೆ ಬೀಳುತ್ತಾರೆ. ಮಠ ಮಾನ್ಯಗಳ ಅಧಿಪತಿಗಳು ಸ್ವಾಮಿಗಳು ಕಂಡರೆ ಸಾಕು ಎಲ್ಲರೂ ಬಗ್ಗಿ ಕಾಲು ಮುಟ್ಟುತ್ತಾರೆ. ಪತ್ರಕರ್ತರೂ ಸಹ ಅಲ್ಲಲ್ಲಿ ಯಾರ ಯಾರದೋ ಕಾಲಿಗೆ ಬಿದ್ದ ವರದಿಗಳು ಬರುತ್ತವೆ. ಹೀಗೆ ಪಾದ ಮುಟ್ಟುವುದು ದೊಡ್ಡ ಪಿಡುಗಾಗಿದೆ. ಪಾದ ಮುಟ್ಟುವವರಿಗೆ ಇರಬೇಕಾದ ಕನಿಷ್ಟ ಜ್ನಾನ ಎಂದರೆ ಈ ಪಾದ ಮುಟ್ಟಿಸಿಕೊಳ್ಳುವುದಕ್ಕೆ ಅರ್ಹವಾಗಿದೆಯೆ ಎಂಬುದನ್ನು ತಿಳಿದುಕೊಳ್ಳಬೇಕಾದದ್ದು. ಅದರೆ ಈ ಪಾದ ಮುಟ್ಟುವವರು ಮತ್ತು ಮುಟ್ಟಿಸಿಕೊಳ್ಳುವವರನ್ನು ನೋಡಿದಾಗ ಭಯ ಉಂಟಾಗುತ್ತದೆ. ಹಾಗೆ ಮುಟ್ಟಿಸಿಕೊಳ್ಳುವ ಪಾದಗಳು ಎಲ್ಲೆಲ್ಲಿ ನಡೆದಾಡಿ ಬಂದಿವೆಯೋ ಎಂಬ ಪ್ರಶ್ನೆಯೂ ಮೂಡುತ್ತವೆ. ಸ್ವಾಮಿಗಳ ಪಾದಗಳು ಈಗ ಪವಿತ್ರವಾಗಿ ಉಳಿದಿಲ್ಲ. ಈ ಪಾದಗಳು ಕಂಡ ಕಂಡಲ್ಲಿ ಸುತ್ತಾಡಿ ಕಾಲಿಗೆ ಮುಟ್ಟ ಬಾರದನ್ನು ಮುಟ್ಟಿಸಿಕೊಂಡು ಬರುತ್ತಿವೆ. ಹಾಗೆ ರಾಜಕಾರಣಿಗಳ ಪಾದಗಳು. ಇತ್ತೀಚಿನ ದಿನಗಳಲ್ಲಂತೂ ರಾಜಕಾರಣಿಗಳ ಪಾದಗಳು ಪರಪ್ಪನ ಅಗ್ರಹಾರದಲ್ಲಿ ಸುತ್ತುವುದು ಹೆಚ್ಚಾಗಿವೆ. ಹಾಗೆ ಹೊಲಸು ಇರುವಲ್ಲಿ ಸುತ್ತುವ ಪಾದಗಳು ಇವೆ. ಪತ್ರಕರ್ತರು ಮುಟ್ಟುವ ಪಾದಗಳೂ ಪವಿತ್ರವಾಗಿಲ್ಲ . ಬಹುತೇಕ ಪಾದಗಳು ಅಂಟು ರೋಗಗಳನ್ನು ಪಸರಿಸುತ್ತಿವೆ.ಇಂಥಹ ಕಾಲುಗಳನ್ನು ಮುಟ್ಟುವುದು ತರವೆ ? ಪಾದವನ್ನು ಮುಟ್ಟುವ ಕೈಗಳ ವಿಚಾರಕ್ಕೆ ಬಂದರೆ ಈ ಕೈಗಳಿಗೂ ಏನೇನೋ ಮೆತ್ತಿಕೊಂಡಿದೆ. ಎಲ್ಲೆಲ್ಲೋ ಹರಿದಾಡಿ ಮಲೀನವಾದ ಕೈಗಳು. ಈ ಕೈಗಳಿಗೆ ಪಾದದ ಹೊಲಸು ಮೆತ್ತಿಕೊಂಡರೆ ? ಅವರು ಉಣ್ಣುವ ಅನ್ನ ಕೂಡ ವಿಷವಾಗುವುದಿಲ್ಲವೆ ? ಈಗ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡೆ ಸ್ನಾನದ ಬಗ್ಗೆ ಚರ್ಚೆ ಪ್ರತಿಭಟನೆ ನಡೆಯುತ್ತಿದೆ. ಇದರ ಪರವಾಗಿ ಇರುವವರು, ವಿರೋಧ ವ್ಯಕ್ತಪಡಿಸುವವರು ಟೀವಿಯ ಮುಂದೆ ಬಂದು ಹೇಳಿಕೆಗಳ ಸುರಿಮಳೆ ಗೈಯುತ್ತಿದ್ದಾರೆ. ಬ್ರಾಹ್ಮಣರ ಎಂಜಿಲೆಲೆಯ ಮೇಲೆ ಉರುಳುವುದಕ್ಕೂ, ಈ ಕೊಳಕು ಪಾದಗಳನ್ನು ಮುಟ್ಟುವ ಮಲೀನ ಕೈಗಳಿಗೂ ಇರುವ ಸಂಬಂಧ ಎಂತಹುದು ಎಂಬ ಕುತೂಹಲ ನನಗಿದೆ. ಜೊತೆಗೆ ಈ ಬಗ್ಗೆ ವೈಚಾರಿಕರು ಮತ್ತು ಹೋರಾಟಗಾರರು ಏನು ಹೇಳಬಹುದು ಎಂಬ ಕುತೂಹಲ ಕೂಡ ನನಗಿದೆ. ಹಾಗೆ ಎಂಜಿಲು ಎಲೆಯ ಮೇಲೆ ಉರುಳಿದರೆ ರೋಗಗಳು ಮರೆಯಾಗುತ್ತವೆ ಎಂದು ಹೇಳಿದ ಮಹಾತ್ಮರಾದ ಉನ್ನತ ಶಿಕ್ಷಣ ಸಚಿವ ಡಾ. ವಿ. ಎಸ್. ಆಚಾರ್ಯ ಏನು ಹೇಳಬಹುದು ಎಂದು ಕೇಳುವುದಕ್ಕೆ ನಾನು ಕಾತುರನಾಗಿದ್ದೇನೆ. ಅದರೆ ಸ್ವತ ವೈದ್ಯರಾದ ಆಚಾರ್ಯರು ಮಡೆ ಸ್ನಾನದ ವಿವಾದದ ನಂತರ ರೋಗಗ್ರಸ್ತರಾಗಿದ್ದಾರೆ ಎಂದು ಕೇಳಿದ್ದಾನೆ. ಹೀಗಾಗಿ ಅವರ ಪತಿಕ್ರಿಯೆಗಾಗಿ ನಾನು ಇನ್ನಷ್ಟು ಕಾಲ ಕಾಯಬೇಕಾಗಬಹುದು. ನಾನು ಇದುವರೆಗೆ ಯಾರ ಕಾಲಿಗೂ ಬಿದ್ದಿಲ್ಲ. ಯಾರ ಪಾದವನ್ನು ಮುಟ್ಟಿಲ್ಲ. ಸ್ವಾಮಿಗಳು ಅನಿರೀಕ್ಷಿತವಾಗಿ ಸಿಕ್ಕಾಗ ಅವರಿಗೆ ಕೈ ುಗಿದಿದ್ದು ಉಂಟು. ಆದರೆ ಅವರನ್ನು ಮುಟ್ಟಿಸಿಕೊಂಡಿಲ್ಲ. ಹಾಗೆ ನಾನು ಚಾನಲ್ ಗಳಲ್ಲಿ ಕೆಲಸ ಮಾಡುವಾಗಲೂ ಯಾರೇ ಬಂದರೂ ಅವರು ಪಾದವನ್ನು ಸ್ಪರ್ಷಿಸುವ ಪಾಪ ಮಾಡಿಲ್. ಹೀಗಾಗಿ ಈ ಬಗ್ಗೆ ಮಾತನಾಡುವ ನೈತಿಕ ಶಕ್ತಿ ನನಗಿದೆ ಎಂದುಕೊಂಡಿದ್ದೇನೆ ಕೊನೆಯದಾಗಿ ನನಗೆ ಯಡಿಯೂರಪ್ಪನವರ ಬಗ್ಗೆ ನನಗೆ ಕನಿಕರವಿದೆ. ಅವರ ಕಾಲು ಮುಟ್ಟಿದವರು ಕಾಲಿನ ಯಾವ ಭಾಗವನ್ನು ಹಿಡಿದು ಎಳೆಯಬೇಕು ಎಂಬ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಂಡಿರುತ್ತಾರೆ ಎಂಬ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ.

1 comment:

naveenkumar said...

ನಮ್ಮ ರಾಜಕಾರಣಿಗಳು ಈ ಡೋಂಗಿತನವನ್ನು ಯಾವತ್ತು ಬಿಡುತ್ತಾರೋ ಗೊತ್ತಿಲ್ಲ, ನೀವು ಹೇಳಿದಂತೆ ಈ ಹಿಂದೆ ಯಡ್ಡಿ ಕಾಲಿಗೆ ಬಿದ್ದು ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಅನೇಕರು ಈಗಾಗಲೆ ಕಾಲೇಳದು ಬೀಳಿಸಿಯಾಗಿದೆ. ಇನ್ನು ಮುಂದೆ ಸದಾನಂದಗೌಡರ ಸರದಿ ಎನಿಸುತ್ತದೆ. ಇದಿಷ್ಟೆ ಅಲ್ಲ ಯಾವುದೆ ಸಮುದಾಯದವರ ಸಮಾರಂಭಕ್ಕೆ ಹೋದರೆ ಅವರಂತೆ ನಾಟಕವಾಡುವುದು. ಉದಾಹರಣೆ ಮುಸ್ಲಿಂ ಸಮುದಾಯದ ಇಪ್ತಿಯಾರ್ ಕೂಟಗಳಿಗೆ ಭಾಗವಹಿಸುವ ದೇವೆಗೌಡ ಮತ್ತು ಅವರ ಮಕ್ಕಳು ನಾವು ದಿನವು ನಮಾಜು ಮಾಡುತ್ತೇವೆ ಎಂಬತೆ ಟೋಪಿಹಾಕೊಂಡು ನಮಾಜಿಗೆ ಕುಳಿತು ಬಿಡುತ್ತಾರೆ. ಎಲ್ಲೇ ಹೋದರು ನಮ್ಮ ತನವನ್ನು ಕಳೆದುಕೊಳ್ಳಬಾರದು ಎಂಬುದು ನನ್ನ ಅಭಿಮತ ಸರ್........... ಧನ್ಯವಾದ ನಾವು ಯಾರ ಕಾಲಿಗು ಬೀಳಬಾರದೆಂಬುದನ್ನು ನೆನಪಿಸಿದಕ್ಕೆ ................ನವೀನ್ ಕುಮಾರ್