Thursday, December 8, 2011

ಇವರಿಗೆ ಸಂವಿಧಾನ ಎಂಬುದಿದೆ ಎಂಬುದು ಗೊತ್ತಿದೆಯೇ...

ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಇನ್ನೊಂದು ಯುದ್ಧ ಪ್ರಾರಂಭವಾಗಿದೆ. ಇದು ರಾಜ್ಯಪಲರಿಗೆ ಛೀಮಾರಿ ಹಾಕಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ್ಯ ಈಶ್ವರಪ್ಪ ಸದನದಲ್ಲೇ ಒತ್ತಾಯಿಸಿದ್ದಾರೆ. ರಾಷ್ಟ್ರಪತಿಗಳ ಬಳಿಗೆ ನಿಯೋಗ ಒಯ್ಯಬೇಕು ಎಂದು ರಾಜ್ಯ ಬಿಜೆಪಿ ನಿರ್ಧರಿಸಿದೆ. ಇದೆಲ್ಲ ಸರಿ, ಹಲವು ರಾಜ್ಯಗಳಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಗಲಾಟೆ ನಡೆದ ಉದಾಹರಣೆ ಇದೆ. ಹಾಗೆ ರಾಜ್ಯಪಾಲರನ್ನು ಬದಲಿಸಬೇಕು ಎಂಬ ಒತ್ತಾಯ ಕೂಡ ಹೊಸದಲ್ಲ.
ಆದರೆ ಇಲ್ಲಿ ಬಹುಮುಖ್ಯವಾದ ಪ್ರಶ್ನೆ ಎಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧ ಮತ್ತು ರಾಜಯಪಾಲರ ನೇಮಕ ಮತ್ತು ನಡುವಳಿಕೆಗೆ ಸಂಬಂಧಿಸಿದ್ದು. ಈ ಬಗ್ಗೆ ಈಗಾಗಲೇ ಸರ್ಕರಿಯಾ ಕಮಿಶನ್ ನೀಡಿದ ವರದಿ ಸರ್ಕಾರದ ಮುಂದಿದೆ. ಈ ಆಯೋಗವನ್ನು ೧೦೮೩ರಲ್ಲಿ ನೇಮಿಸಲಾಗಿತ್ತು. ಇದು ೧೯೮೮ರಲ್ಲಿ ವರದಿಯನ್ನು ನೀಡಿತು. ಈ ವರದಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಬಂಧ ಹೇಗಿರಬೇಕು ಎನ್ನುವ ಬಗ್ಗೆ ಶಿಫಾರಸು ಮಾಡಿದೆ. ಆದರೆ ಷಿಫಾರಸುಗಳ ಅನುಷ್ಠಾನ ಮಾತ್ರ ಆಗಿಲ್ಲ.
ಕೇಂದ್ರ ಸರ್ಕಾರ ರಾಜ್ಯಗಳಿಗೆ ಸಂಬಂಧಿಸಿದಂತೆ ದೊಡ್ಡಣ್ಣನ ಮನೋವೃತ್ತಿಯನ್ನು ತ್ಯಜಿಸುವುದು ಒಕ್ಕೂಟ ವ್ಯವಸ್ಥೆಯ ಹಿತದೃಷ್ಟಿಯಿಂದ ಅತ್ಯಗತ್ಯ. ಆದರೆ ಬಹುತೇಕ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ರಾಜಭವನದ ಮೂಲಕ ಪಕ್ಷ ರಾಜಕೀಯವನ್ನು ಮಾಡುತ್ತಿರುವುದಕ್ಕೆ ಹಲವು ಉದಾಹರಣೆಗಳಿವೆ. ಶ್ರೀಮತಿ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿ ಅವರ ಕಾಲದಲ್ಲಿ ರಾಜಭವನ ಕಾಂಗ್ರೆಸ್ ಪಕ್ಷದ ಕಚೇರಿಗಳಂತೆ ವರ್ತಿಸುತ್ತಿದ್ದವು. ರಾಜ್ಯ ಸರ್ಕಾರವನ್ನು ಬೇಕೆಂದಾಗ ಕಿತ್ತೊಗೆಯುವ ಪ್ರವೃತ್ತಿ ಕಂಡು ಬರುತ್ತಿತ್ತು. ಇದಕ್ಕೆಲ್ಲ ಸ್ವಲ್ಪ ಮಟ್ತಿಗೆ ತಡೆ ಹಾಕಿದ್ದು ಸರ್ವೋಚ್ಚ ನ್ಯಾಯಾಲಯ. ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಯಾವುದೇ ಮುಖ್ಯಮಂತ್ರಿಯ ಬಲ ಪರೀಕ್ಷೆ ಆಗಬೇಕಾದ್ದು ವಿಧಾನಸಭೆಯಲ್ಲಿಯೇ ಹೊರತೂ ರಾಜಭವನದಲ್ಲಿ ಅಲ್ಲ ಎಂಬ ಸರ್ವೋಚ್ಚ ನ್ಯಾಯಾಲಯದ ಸ್ಪಷ್ಟೋಕ್ತಿ ಐತಿಹಾಸಿಕ, ಇದಾದ ಮೇಲೆ ರಾಜಭವನದ ದುರ್ಬಳಕೆ ಕಡಿಮೆಯಾಗಿದೆ. ಆದರೆ ಸಂಪೂರ್ಣವಾಗಿ ನಿಂತಿಲ್ಲ.
ನಮ್ಮ ಸಂವಿಧಾನದ ಪ್ರಕಾರ ರಾಜ್ಯಪಾಲರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ. ಅವರು ಆಯಾ ರಾಜ್ಯಗಳ ಸರ್ಕಾರದ ಮೇಲೆ ನಿಗಾ ಇಟ್ಟಿರುತ್ತಾರೆ. ಸಂವಿಧಾನಿಕವಾಗಿ ರಾಜ್ಯ ಸರ್ಕಾರ ನಡೆಯುವುದೇ ರಾಜ್ಯಪಾಲರ ಆದೇಶಗಳ ಮೂಲಕ. ಆದರೂ ಇಲ್ಲಿಯೂ ವಿಧಾನಮಂಡಲಕ್ಕೆ ಅತ್ಯುಚ್ಛ ಸ್ಥಾನವಿದೆ. ವಿಧಾನಮಂಡಲ ಪರಮ. ಆದರೆ ಈ ಶಾಸನಸಭೆಗೆ ಅಧೀನವಾಗಿರುವ ಸರ್ಕಾರ, ರಾಜ್ಯಪಾಲರ ಸರ್ಕಾರ. ಅವರು ನೇಮಿಸಿದ ಸರ್ಕಾರ. ಮುಖ್ಯಮಂತ್ರಿ ಹಾಗೂ ಇತರ ಮಂತ್ರಿಗಳನ್ನು ನೇಮಿಸುವವರು ರಾಜ್ಯಪಾಲರು. ಯಾವುದೇ ರಾಜ್ಯಪಾಲರು ಅಸಂವಿಧಾನಕವಾಗಿ ನಡೆದುಕೊಂಡರೆ ರಾಷ್ಟ್ರಪತಿಗಳಿಗೆ ದೂರು ನೀಡುವ, ಅವರನ್ನು ವಾಪಸ್ಸು ಕರೆಸಿಕೊಳ್ಳುವಂತೆ ಒತ್ತಾಯಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ. ಆದರೆ ಈ ಎಲ್ಲ ಸಂದರ್ಭಗಳಲ್ಲೂ ಒಂದು ಮಿತಿಯನ್ನು ಮೀರಿ ವರ್ತಿಸುವಂತಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ರಾಜಭವನ ಹಲವಾರು ವಿವಾದಗಳಿಗೆ ಕಾರಣವಾಗಿದೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಮ್ಮ ಮಿತಿಯನ್ನು ಮೀರಿ ವರ್ತಿಸುತ್ತಿರುವ ಅನುಮಾನ ಬರುತ್ತಿದೆ. ಹಾಗೆ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರು ಈ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಪಾಲರಿಗೆ ಸಂವಿಧಾನ ನೀಡಿದ ಸ್ಥಾನ ಮಾನಗಳು ಏನು ಎಂಬುದನ್ನು ಅರಿಯದೇ ವರ್ತಿಸುತ್ತಿದ್ದಾರೆ. ಹಂಸರಾಜ್ ಭಾರದ್ವಾಜ್ ಎಂಬ ಈ ರಾಜ್ಯಪಾಲರು ಮೂಲಭೂತವಾಗಿ ರಾಜಕಾರಣಿ. ಅವರಲ್ಲಿ ಹಿಂಸಾ ವಿನೋದವಿದೆ. ಅವರು ಹಿಂಸಿಸಿಯೇ ಸಂತೋಷಪಡಬಲ್ಲರು. ಆದರೆ ಅವರ ಕಾನೂನು ಜ್ನಾನವನ್ನು ಪ್ರಶ್ನಿಸುವಂತಿಲ್ಲ. ಅವರಿಗೆ ಸಂವಿಧಾನವೂ ಗೊತ್ತಿದೆ. ಹಾಗಾಗಿ ಅವರ ವರ್ತನೆಯನ್ನು ಸಂವಿಧಾನ ವಿರೋಧಿ ಎಂದಾಗಲೀ, ಅವರು ನಡವಳಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಹಿತಾಸಕ್ತಿಯನ್ನು ಕಾಪಾಡುವ ದುರುದ್ದೇಶ ಇದೆ ಎಂದಾಗಲೀ ಸಾಬೀತು ಪಡಿಸುವುದು ಸಾಧ್ಯವಿಲ್ಲ. ಆದರೆ ಕೆಲವು ಸಂದರ್ಭಗಳಲ್ಲ ತಮ್ಮ ಮಿತಿಯನ್ನು ಮೀರಿ ಸಾರ್ವಜನಿಕ ಹೇಳಿಕೆಯನ್ನು ನೀಡಿ ಗೊಂದಲವನ್ನು ಅವರು ಉಂಟು ಮಾಡಿದ್ದು ನಿಜ. ಆದರೆ ಒಬ್ಬ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಲು ಇಷ್ಟೆ ಸಾಕಾಗುವುದಿಲ್ಲ.
ಇದ ರಾಜ್ಯ ಬಿಜೆಪಿ ನಾಯಕರಿಗೆ ಅರ್ಥವಾಗಿತ್ತು. ಆದರೆ ಅವರಿಗೆ ಅರ್ಥವಾಗುವಂತಿಲ್ಲ. ಇದಕ್ಕೆ ಸ್ಪಷ್ಟವಾದ ಉದಾಹರಣೆ ಎಂದರೆ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗಳು.
ರಾಜ್ಯಪಾಲರನ್ನು ಸದನಕ್ಕೆ ಕರೆಸಿ ಅವರಿಗೆ ಛೀಮಾರಿ ಹಾಕಬೇಕು ಎಂಬುದು ಈಶ್ವರಪ್ಪ ಅವರ ಇತ್ತೀಚಿನ ಹೇಳಿಕೆ. ಅವರು ಈ ಹೇಳಿಕೆ ನೀಡಿದ್ದು ವಿಧಾನಸಭೆಯಲ್ಲಿ. ಈ ವಿಧಾನಸಭೆ ರಚನೆಯಾಗಿದ್ದು ರಾಜ್ಯಪಾಲರ ಆದೇಶದ ಮೂಲಕ. ಜೊತೆಗೆ ವರ್ಷದ ಮೊದಲ ಅಧಿವೇಶನದ ಮೊದಲ ದಿನ ರಾಜ್ಯಪಾಲರು ಸದನಕ್ಕೆ ಬಂದು ಭಾಷಣ ಮಾಡುತ್ತಾರೆ. ನನ್ನ ಸರ್ಕಾರ ಎಂದು ಹೇಳುತ್ತಾರೆ. ನನ್ನ ಸರ್ಕಾರ ಮುಂದೇನು ಮಾಡುತ್ತಾರೆ ಎಂಬುದನ್ನು ವಿವರಿಸುತ್ತಾರೆ. ಇದು ಈಶ್ವರಪ್ಪ ಅವರಿಗೆ ತಿಳಿದಿಲ್ಲವೆ ? ಹೊಸ ವರ್ಷದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ಬಂದು ಸದನದಲ್ಲಿ ಮಾತನಾಡುವಾಗ ಸರ್ಕಾರ ಮತ್ತು ಬಿಜೆಪಿ ನಾಯಕರು ಏನು ಮಾಡುತ್ತಾರೆ ? ಅವರಿಗೆ ಛೀಮಾರಿ ಹಾಕಬೇಕು ಎಂದು ಹೇಳಿದವರು ಅವರು ಬಂದಾಗ ಎದ್ದು ನಿಂತು ಗೌರವ ಸಲ್ಲಿಸುತ್ತಾರೆಯೆ ಅಥವಾ ಆಡಳಿತ ಪಕ್ಷವೇ ಸಭಾತ್ಯಾಗ ಮಾಡುತ್ತದೆಯೆ ?
ಈಶ್ವರಪ್ಪ ಅವರ ಈ ಹೇಳಿಕೆ ಸಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಕಾಣುತ್ತಿದೆ. ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವಿನ ಭಿನ್ನಾಭಿಪ್ರಾಯಗಳು ಬಗೆ ಹರಿಯಬೇಕಾದ್ದು ಕೇಂದ್ರ ಮಟ್ಟದಲ್ಲಿ. ರಾಷ್ಟ್ರಪತಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು ಇದು ತಾರ್ಕಿಕ ಅಂತ್ಯವನ್ನು ಕಾಣುತ್ತದೆ. ಅದನ್ನು ಅತಿ ಕೀಳು ಮಟ್ಟದಲ್ಲಿ ವಿಧಾನಸಭೆಯಲ್ಲಿ ಚರ್ಚೆ ಮಾಡಿದರೆ ಸಮಸ್ಯೆ ಬಗೆಹರಿಯುವಿದಿಲ್ಲ. ಇದು ಈಶ್ವರಪ್ಪ ಅವರಿಗೆ ಅರ್ಥವಾಗಬೇಕಿತ್ತು. ಪಾಪ ಅವರ ತಲೆಗೆ ಇದು ಹೋಗದಿದ್ದರೆ ಬಿಜೆಪಿಯ ಹಿರಿಯ ನಾಯಕರು ಅವರಿಗೆ ಈ ಬಗ್ಗೆ ತಿಳುವಳಿಕೆ ನೀದಬೇಕಾಗಿತ್ತು.
ಈಗ ರಾಜ್ಯಪಾಲರ ವಿರುದ್ಧ ಬಿಜೆಪಿ ನಾಯಕರ ದೂರುಗಳೇನು ಎಂಬ ವಿಷಯಕ್ಕೆ ಬರೋಣ.

ಬಿಜೆಪಿ ನಾಯಕರಿಗೆ ಸಿಟ್ಟು ಬಂದಿರುವುದಕ್ಕೆ ಮೊದಲ ಕಾರಣ ರಾಜ್ಯಪಾಲರು ಯಡಿಯೂರಪ್ಪ ಅವರ ಸರ್ಕಾರವನ್ನು ವಜಾ ಮಾಡುವಂತೆ ಕೇಂದ್ರಕ್ಕೆ ಶೀಫಾರಸು ಮಾಡಿದ್ದು. ಇದನ್ನು ತಪ್ಪು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಹೀಗೆ ಶಿಫಾರಸು ಮಾಡುವ ಅಧಿಕಾರವನ್ನು ಅವರಿಗೆ ಸಂವಿಧಾನವೇ ನೀಡಿದೆ.
ಇನ್ನು ಯಡೀಯೂರಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಸಿರಾಜುದಿನ್ ಪಾಷಾ ಅವರಿಗೆ ಅನುಮತಿ ನೀಡಿದ ವಿಚಾರ. ಇದು ಸಹ ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಚಾರ. ಇಲ್ಲಿಯೂ ಸಂವಿಧಾನಕ್ಕೆ ವಿರುದ್ದವಾಗಿ ರಾಜ್ಯಪಾಲರು ನಡೆದುಕೊಂಡಿಲ್ಲ.
ಗೋಹತ್ಯೆ ನಿಷೇಧ ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟ ಕ್ರಮದ ಬಗ್ಗೆಯೂ ರಾಜ್ಯಪಾಲರನ್ನು ಪ್ರಶ್ನಿಸಿವುದು ಸಾಧ್ಯವಿಲ್ಲ. ಯಾವುದೇ ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುವ ಅಧಿಕಾರ ಅವರಿಗಿದೆ. ಹೀಗಾಗಿ ಈ ಮೇಲಿನ ಯಾವ ವಿಚಾರದಲ್ಲಿಯೂ ರಾಜ್ಯಪಾಲರು ದುರುದ್ದೇಶದಿಂದ ನಿಯಮಬಾಹಿರವಾಗಿ, ಸಂವಿಧಾನಕ್ಕೆ ವಿರುದ್ಧವಾಗಿ ಮಾಡಿದ್ದಾರೆ ಎಂದು ಹೇಳುವುದು ಸಾಧ್ಯವಿಲ್ಲ ಯಾಕೆಂದರೆ ರಾಜ್ಯಪಾಪರ ಈ ಎಲ್ಲ ಕ್ರಮಗಳೂ ಅವರ ಮಿತಿಯ ಒಳಗೆ ಕೈಗೊಂಡ ಕ್ರಮಗಳೇ ಆಗಿೆ.
ಆದರೆ ಇದೆಲ್ಲ ಬಿಜೆಪಿಗೆ ಮತ್ತು ಸರ್ಕಾರಕ್ಕೆ ಮುಜುಗರವನ್ನು ಉಂಟೂ ಮಾಡುವ ಕ್ರಮಗಳೇ ಆಗಿವೆ. ಇದನ್ನು ಸರ್ಕಾರ ನಡೆಸುವವರು ಜೀರ್ಣಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಆದರೆ ರಾಜ್ಯಪಾಲರ ಕ್ರಮ ಅಪಥ್ಯವಾಗಿದೆ ಎಂಬ ಒಂದೇ ಕಾರಣಕ್ಕೆ ಅವರಿಗೆ ಛೀಮಾರಿ ಹಾಕುವ ಮಾತನಾಡುವುದು ಸರಿಯಲ್ಲ. ರಾಜ್ಯಪಾಲರು ಸರ್ಕಾರಕ್ಕೆ ಮುಜುಗರವಾಗುವಂತೆ ಹಲವು ಬಾರಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರೆ ಅದನ್ನು ಯಾರು ಬೇಕಾದರೂ ಒಪ್ಪಬಹುದು. ಆದರೆ ಇಂತಹ ವಾತಾವರಣ ಉಂಟಾಗದಂತೆ ತಡೆಯಲು ಬಿಜೆಪಿ ಸರ್ಕಾರ ಯತ್ನಿಸಬೇಕಿತ್ತು. ಸಂವಿಧಾನದ ಪ್ರಕಾರ ರಾಜ್ಯಪಾಲರು ಸರ್ಕಾರದ ಮುಖ್ಯಸ್ಥರಾದ್ದರಿಂದ ಅವರಿಗೆ ಕೋಡಬೇಕಾದ ಗೌರವವನ್ನು ಇವರು ನೀಡಬೇಕಾಗಿತ್ತು. ಆದರ ಇಲ್ಲಿ ಆದದ್ದೇನು ? ರಾಜ್ಯ ಪಾಲರು ಹೇಳಿಕಳಿಸಿದರೂ ಹಿಂದಿನ ಮುಖ್ಯಮಂತ್ರಿ ಅವರನ್ನು ನೋಡುತ್ತಿರಲಿಲ್ಲ. ಅವರ ಬಾಲಂಗೋಚಿಗಳು ರಾಜ್ಯಪಾಲರನ್ನು ಟೀಕಿಸುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದವು. ರೇಣುಕಾಚಾರ್ಯ, ರೇವಣ್ಣನಂತಹ ಮರಿ ಪುಡಾರಿಗಳು ಮಾರುಕಟ್ಟೆಯಲ್ಲಿ ರಾಜ್ಯಪಾಲರನ್ನು ಮನಸ್ಸಿಗೆ ಬಂದಂತೆ ಟೀಕಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸರ್ಕಾರ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳುವ ಮೊದಲು ಅಥವಾ ಅನಂತರ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯಸ್ಥರಿಗೆ ತಿಳಿಸುವ ಪರಿಪಾಠ ಕೂಡ ಇದೆ. ಇದನ್ನು ಸಹ ಇವರು ಪಾಲಿಸಲಿಲ್ಲ. ಇದೆಲ್ ಹಂಸರಾಜ್ ಭರದ್ವಾಜ್ ಅವರನ್ನು ಕೆರಳಿಸುವುದಕ್ಕೆ ಕಾರಣಗಳಾಗಿರಬಹುದು.
ಏನೇ ಇರಲಿ, ಈಶ್ವರಪ್ಪ ಅವರು ರಾಜ್ಯಪಾಲರನ್ನು ಟೀಕಿಸುತ್ತಿರುವ ರೀತಿ ಯಾರಿಗೂ ಗೌರವ ತರುವಂತಹುದಲ್ಲ. ಅವರು ಮೊದಲು ಸಂವಿಧಾನವನ್ನು ಓದುವ ಕೃಪೆ ಮಾಡಬೇಕು. ಅವರ ಪಕ್ಷದ ನಾಯಕರು ಅವರಿಗೆ ಈ ಬಗ್ಗೆ ತಿಳುವಳಿಕೆ ನೀಡಬೇಕು.

ಈ ನಡುವೆ ಮತ್ತೆ ಸರ್ಕಾರಿಯಾ ಆಯೋಗದ ಶಿಫಾರಸುಗಳ ವಿಚಾರಕ್ಕೆ ಬರುತ್ತೇನೆ. ಜನತಂತ್ರ ವ್ಯವಸ್ಥೆಯಲ್ಲಿ ಅಧಿಕಾರದ ವಿಕೇಂದ್ರೀಕರಣ ಮತ್ತು ಜನರ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾದವುಗಳು. ಇದನ್ನೇ ಸರ್ಕಾರಿಯಾ ಅಯೋಗ ಪ್ರಸ್ತಾಪಿಸಿದೆ. ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ರಾಜ್ಯಗಳಿಗೆ ಹಂಚುವ ಕೆಲಸ ಮಾಡಬೇಕು. ರಾಯ್ ಸರ್ಕಾರಗಳು ಜಿಲ್ಲಾ ಪಂಚಾಯಿತ್ ವ್ಯವಸ್ಥೆಗೆ ಹೆಚ್ಚಿನ ಅಧಿಕಾರವನ್ನು ನೀದಬೇಕು. ಹಾಗೆ ಕೆಳಹಂತದಿಂದ ಎಲ್ಲರೂ ತಮ್ಮ ಆಡಳಿತವನ್ನು ತಾವೇ ನಿರ್ವಹಿಸುವ ವ್ಯವಸ್ಥೆಯಾಗಬೇಕು.
ಅಮೇರಿಕ ಕೂಡ ಒಂದು ಒಕ್ಕೂಟ ವ್ಯವಸ್ಥೆ. ಅಲ್ಲಿ ವಿದೇಶಾಂಗ, ರಕ್ಷಣೆಯಂತಹ ಪ್ರಮುಖ ವಿಚಾರವನ್ನು ಹೊರತು ಪದಿಸಿದರೆ ಉಳಿದೆಲ್ಲವೂ ಅಲ್ಲಿನ ರಾಜ್ಯಗಳ ಅಧಿಕಾರ ವ್ಯಾಪ್ತಿಗೆ ಬರುತ್ತವೆ. ಎಲ್ಲದರಲ್ಲಿಯೂ ಅಮೇರಿಕವನ್ನು ಅನಿಸರಿಸುವ ನಾವು ಈ ವಿಚಾರದಲ್ಲಿ ಮಾತ್ರ ಅಧಿಕಾರವನ್ನು ನಮ್ಮ ನಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಳ್ಳುವುದಕ್ಕೆ ಬಯಸುತ್ತೇವೆ. ಏನೇ ಇರಲಿ ಎಲ್ಲರೂ ಮೊದಲು ಸಂವಿಧಾನವನ್ನು ಓದಬೇಕು. ಈಶ್ವರಪ್ಪ, ರೇಣುಕಾಾರ್ಯ ಮೊದಲಾದ ಹೀಸ್ ಮಾಸ್ಟರ್ ವೈಸ್ ಗಳು ಮೊದಲು ಸಂವಿಧಾನವನ್ನು ಓದಲಿ. ಆ ಸರ್ವಶಕ್ತನಾದ ಭಗವಂತನು ಅವರಿಗೆ ಆ ಬುದ್ದಿಯನ್ನು ನೀಡಲಿ.

No comments: