Saturday, December 17, 2011

ಸಾಹಿತಿಗಳು ಭಟ್ಟಂಗಿ ಗಳಲ್ಲ.........ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ್, ಸಾಹಿತಿಗಳಿಂದ ಬೈಸಿಕೊಳ್ಳುವುದಕ್ಕಾಗಿ ನಾವು ಅವರಿಗೆ ಹಣ ನೀಡಬೇಕೆ ಎಂಬ ಪ್ರಶ್ನೆಯನ್ನು ನಾಡಿನ ಜನರ ಮುಂದೆ ಇಟ್ಟಿದ್ದಾರೆ. ಈ ಪ್ರಶ್ನೆಗೆ ಹಲವರು ದಿನಪತ್ರಿಕೆಗಳ ವಾಚಕರ ವಾಣಿಯಲ್ಲಿ ಉತ್ತರವನ್ನು ಕೊಟ್ಟಿದ್ದಾರೆ. ಆದರೆ ಮಾಧ್ಯಮದಲ್ಲಿ ಈ ಬಗ್ಗೆ ಯಾವ ಪ್ರಮಾಣದಲ್ಲಿ ಚರ್ಚೆ ಆಗಬೇಕಿತ್ತೋ ಆ ಪ್ರಮಾಣದಲ್ಲಿ ಆಗಿಲ್ಲ. ಇದಕ್ಕೆ ಸಚಿವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂಬುದು ಕಾರಣವಿರಬಹುದು ಅಥವಾ ಎಲ್ಲವನ್ನು ಮೌನವಾಗಿ ಸ್ವೀಕರಿಸುವ ನಮ್ಮ ಮನಸ್ಥಿತಿಯೂ ಕಾರಣವಿರಬಹುದು. ಈ ಕಾರಣಗಳೇನೇ ಇರಲಿ, ಸಚಿವರ ಈ ಹೇಳಿಕೆಯನ್ನು ನಾವೆಲ್ಲ ಗಂಭೀರವಗಿ ತೆಗೆದುಕೊಳ್ಳಬೇಕಾಗಿದೆ.
ಈ ವಿಚಾರವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಕ್ಕೆ ಕಾರಣಗಳು ಹಲವು. ಮೊದಲನೇಯದಾಗಿ ಗೋವಿಂದ ಕಾರಜೋಳ್ ಅವರು ವ್ಯಯಕ್ತಿಕವಾಗಿ ಈ ಹೇಳಿಕೆ ನೀಡಿಲ್ಲ. ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಈ ಮಾತು ಹೇಳಿದ್ದಾರೆ. ಹೀಗಾಗಿ ಇದನ್ನು ಸಚಿವರ ಆಲೋಚನೆ ಎಂದು ತೆಗೆದುಕೊಳ್ಳದೇ ಈ ಸರ್ಕಾರದ ಆಲೋಚನೆ ಎಂದು ಸ್ವೀಕರಿಸಿ ಪ್ರತಿಕ್ರಿಯೆ ನೀಡಬೇಕಾಗಿದೆ. ಇನ್ನು ಸಚಿವರ ಮನಸ್ಥಿತಿ. ಅವರು ಸರ್ಕಾರದ ಹಣ ತಮ್ಮ ಹಣ ಎಂದುಕೊಂಡಿರುವಂತಿದೆ. ಇದಕ್ಕಿಂತ ಮುಖ್ಯವಾಗಿ ಅವರ ಮಾತಿನಲ್ಲಿ ಅಧಿಕಾರದ ಅಹಂಕಾರ ಕಣ್ನಿಗೆ ರಾಚುವಂತಿದೆ. ಜೊತೆಗೆ ಸಚಿವರಿಗೆ ಸಾಹಿತ್ಯ ಮತ್ತು ಸಂಸ್ಕೃತಿ ಎಂದರೇನು ಎಂಬ ಪ್ರಾಥಮಿಕ ಜ್ನಾನ ಕೂಡ ಇದ್ದಂತಿಲ್ಲ. ಹಾಗೆ ಸಾಹಿತ್ಯ ಸಮ್ಮೇಳನಕ್ಕೆ ಹಣ ಖರ್ಚು ಮಾಡುವುದರ ಮೂಲಕ ಸಾಹಿತಿಗಳಿಗೆ ಸರ್ಕಾರ ಸಹಾಯ ಮಾಡುತ್ತಿದೆ, ಹೀಗಾಗಿ ಸಾಹಿತ್ಯ ವಲಯ ಸರ್ಕಾರದ ಭಟ್ಟಂಗಿಯಂತೆ ಕೆಲಸ ಮಾಡಬೇಕು ಎಂಬ ತಮ್ಮ ಇರಾದೆಯನ್ನು ಅವರು ಈ ಮಾತುಗಳಲ್ಲಿ ವ್ಯಕ್ತಪಡಿಸಿದ್ದಾರೆ. ಇದೊಂದು ಜನತಂತ್ರ ವಿರೋಧಿ ಮನಸ್ಥಿತಿಯಾದ್ದರಿಂದ ಈ ಬಗ್ಗೆ ಚರ್ಚೆ ಮಾಡಬೇಕಾದ್ದು ಅತ್ಯಗತ್ಯ.
ಜನತಂತ್ರ ವ್ಯವಸ್ಥೆಯಲ್ಲಿ ಯಾವುದೇ ಒಬ್ಬ ಸಚಿವರು ಆಡುವ ಮಾತು ಸರ್ಕಾರದ ಮಾತೇ ಆಗಿರುವುದರಿಂದ, ಮುಖ್ಯಮಂತ್ರಿ ಸದಾನಂದಗೌಡರಾಗಲೀ ಅಥವಾ ಸರ್ಕಾರದ ಪರವಾಗಿ ಯಾರೇ ಆಗಲೀ ಕೆಲವೊಂದು ಸ್ಪಷ್ಟೀಕರಣವನ್ನು ನೀಡಬೇಕು. ಸರ್ಕಾರದಿಂದ ಬೇಕಾಗಿರುವ ವಿವರಣೆಯ ಪಟ್ಟಿಯನ್ನು ನಾನು ಹೀಗೆ ಮಾಡುತ್ತೇನೆ.
೧. ಗೋವಿಂದ ಕಾರಜೋಳ್ ಅವರ ಹೇಳಿಕೆಯಂತೆ, ಸಾಹಿತ್ಯ ಸಮ್ನೇಳನಗಳಿಗೆ ಹಣ ವೆಚ್ಚ ಮಾಡುವುದು ವ್ಯರ್ಥ ಎಂಬುದು ಸರ್ಕಾರದ ಅಭಿಪ್ರಾಯವೆ ? ಅಥವಾ ಅದು ಸಚಿವರ ವೈಯಕ್ತಿಕ ಅಭಿಪ್ರಾಯವೆ ?
೨. ಸಾಹಿತ್ಯ ಸಮ್ಮೇಳನಳಗಳಲ್ಲಿ ಪಾಲ್ಗೊಳ್ಳುವ ಎಲ್ಲರೂ ಸರ್ಕಾರದ ಭಟ್ಟಂಗಿಗಳಾಗಿ ವಾಲಗ ಊದಬೇಕು ಎಂದು ಈ ಸರ್ಕಾರ ಬಯಸುತ್ತಿದೆಯೆ ?
೩.ಸಾಹಿತಿಗಳು ಸಾಹಿತ್ಯ ಸಮ್ಮೇಳನಗಳಲ್ಲಿ ಹೀಗೆ ಮಾತನಾಡಬೇಕು ಎಂದು ಫರ್ಮಾನು ಹೊರಡಿಸುವ ಇರಾದೆ ಈ ಸರ್ಕಾರಕ್ಕೆ ಇದೆಯೆ ?
೪. ಈ ಮಾತಿನ ಹಿನ್ನೆಲೆಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನದ ಬಗ್ಗೆ ಈ ಸರ್ಕಾರದ ನಿಲುಮೆ ಏನು ?
೫.ಎಲ್ಲ ಸರ್ಕಾರಗಳಿಗೂ ಸಾಂಸ್ಕೃತಿಕ ನೀತಿ ಎನ್ನುವುದು ಇರಬೇಕು. ಈ ಸರ್ಕಾರಕ್ಕೆ ಇಂಥಹ ನೀತಿ ಇದೆಯೆ ? ಒಂದೊಮ್ಮೆ ಇದ್ದರೆ ಆ ನೀತಿಯಲ್ಲಿ ಈ ವಿಚಾರವೂ ಪ್ರಸ್ತಾಪವಾಗಿದೆಯೆ ?
೬. ಸಚಿವರಿಗೆ ಇಂತಹ ಆಲೋಚನೆ ಬರುವುದಕ್ಕೆ ಕಾರಣಗಳೇನು ? ಗಂಗಾವತಿ ಸಮ್ಮೇಳದ ಬೇಸರ ಅವರಿಗಿದೆಯೆ ?
ಸಚಿವ ಕಾರಜೋಳರ ಹೇಳಿಕೆಯಿಂದ ನನ್ನ ಮನ್ನಸ್ಸಿನಲ್ಲಿ ಮೂಡಿದ ಪ್ರಶ್ನೆಗಳು ಇವು. ಯಾಕೆಂದರೆ ಗೋವಿಂದ ಕಾರಜೋಳರು ಹಿರಿಯ ರಾಜಕಾರಣಿ. ಯಾರೋ ಅನುಭವ ಇಲ್ಲದ ಸಚಿವರು ಇಂತಹ ಮಾತುಗಳನ್ನು ಆಡಿದ್ದರೆ, ಏನೂ ಗೊತ್ತಿಲ್ಲದೇ ಮಾತು ಬಾಯಿಯಿಂದ ಹೊರಕ್ಕೆ ಬಂದಿದೆ ಎಂದು ಸುಮ್ಮನಾಗಬಹುದಿತ್ತು. ಆದರ ಬಾಯಿ ಬಡುಕರಲ್ಲದ ಕಾರಜೋಳರು ತುಂಬಾ ಗಂಭೀರವಾಗಿಯೇ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ನಾವು ನಂಬಬೇಕಾಗಿದೆ. ಹಾಗೆ ಅವರ ಮಾತಿನಲ್ಲಿ ಒಟ್ಟಾರೆಯಾಗಿ ಸಾಹಿತ್ಯ ಲೋಕದ ಬಗ್ಗೆ ಒಂದು ರೀತಿಯ ಅಸಹನೆ ಇದ್ದಂತೆ ಕಾಣುತ್ತದೆ. ಈ ಅಸಹನೆಗೆ ಬಹು ಮುಖ್ಯವಾದ ಕಾರಣ ಅವರ ರಾಜಕೀಯ ಮನಸ್ಥಿತಿ. ಅವರಿಗೆ ಒಬ್ಬ ಪಕ್ಷದ ಕಾರ್ಯಕರ್ತನಿಗೂ ಒಬ್ಬ ಸಾಹಿತಿಗೂ ಇರುವ ವ್ಯತ್ಯಾಸ ತಿಳಿದಂತಿಲ್ಲ. ಒಬ್ಬ ಗುತ್ತಿಗೆದಾರನಿಗೂ ಸಾಹತ್ಯ ಲೋಕದ ಕ್ರಿಯಾಶೀಲ ವ್ಯಕ್ತಿಗೂ ಇರುವ ಅಂತರ ಅರಿವಿಗೆ ಬಂದಂತಿಲ್ಲ. ಸರ್ಕಾರದ ಎಲ್ಲ ಕೆಲಸಗಳಲ್ಲೂ ಕಮೀಶನ್ ವ್ಯವಹಾರ ಇರುವಂತೆ ಸಾಹಿತ್ರ್ಯ ಲೋಕದ ಜೊತೆಗೆ ರಾಜಕೀಯ ವ್ಯವಹಾರವನ್ನು ಅವರು ನಿರೀಕ್ಷಿಸಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಹಣ ನೀಡುವುದರಿಂದ, ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳನ್ನು ಟೀಕಿಸಬಾರದು ಎಂಬುದು ಅವರ ಇರಾದೆ.
ಇದನ್ನೇ ಅಪಾಯಕಾರಿ ಮನಸ್ಥಿತಿ ಎಂದು ಕರೆಯುತ್ತಿರುವುದು. ಸರ್ಕಾರಕ್ಕೆ ಸಾಂಸ್ಕೃತಿಕ ಅಯಾಮ ಇಲ್ಲದಿದ್ದರೆ, ಸಾಹಿತ್ಯ ಸಂಸ್ಕೃತಿ ಗೊತ್ತಿಲ್ಲದಿದ್ದರೆ ಇಂತಹ ಅಪಾಯಗಳನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಎದುರಿಸಬೇಕಾಗುತ್ತದೆ. ಈ ಅರಿವು ರಾಜಕಾರಣಿಗಳಿಗೂ ಇರಬೇಕು, ಸಾಹಿತ್ಯ ಲೋಕಕ್ಕೂ ಇರಬೇಕು. ಆದರೆ ಇವತ್ತಿನ ರಾಜಕಾರಣಕ್ಕೆ ಸಾಂಸ್ಕೃತಿಕ ಮುಖ ಇಲ್ಲ. ಹಾಗೆ ಸಾಹಿತ್ಯ ಲೋಕ ರಾಜಕಾರಣವನ್ನು ಎಲ್ಲಿಯವರೆಗೆ ಬಿಟ್ಟುಕೊಳ್ಳಬೇಕು ಎಂಬುದು ಮುಖ್ಯ. ಸಾಹಿತ್ಯ ಲೋಕದ ಬೆಡ್ ರೂಮ್ ವರೆಗೆ ರಾಜಕಾರಣಿಗಳು ಬರುವಂತಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಈಗ ರಾಜಕಾರಣಿಗಳು ಸಾಹಿತ್ಯ ಲೋಕದ ಮಲಗುವ ಕೊಠಡಿಯನ್ನು ಪ್ರವೇಶಿಸಿ ಆಗಿದೆ. ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಮಾಡುವ ನೆಪದಲ್ಲಿ, ಸರ್ಕಾರ ಹಣ ಕೊಡುವ ನೆಪದಲ್ಲಿ ಸಾಹಿತ್ಯ ಲೋಕದ ಮಲಗುವ ಕೊಠಡಿಯಲ್ಲಿ ಕಾರಜೋಳ್ ಅವರಂತಹ ರಾಜಕಾರಣಿಗಳ ಕಿತಾಪತಿ ಪ್ರಾರಂಭವಾಗಿದೆ. ಇದೆಲ್ಲ ರಾಜಸತ್ತೆಯ ಮೂಲಭೂತ ಗುಣಧರ್ಮ ಎಂಬುದನ್ನು ನಾವು ಅರಿಯಬೇಕು. ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ರಾಜಾಶ್ರಯ ಪಡೆದ ತಕ್ಷಣ ಅವರ ಸ್ವಾತಂತ್ರ್ಯ ಹರಣವಾಗುತ್ತದೆ. ಇದಾದ ನಂತರ ಬರುವುದೇ ಭಟ್ಟಂಗಿ ಸಾಹಿತ್ಯ.
ಎಲ್ಲ ಕಾಲಘಟ್ತಗಳಲ್ಲೂ ಇಂತಹ ಭಟ್ಟಂಗಿ ಸಾಹಿತಿಗಳಿದ್ದಾರೆ. ಭಟ್ಟಂಗಿ ಸಾಹಿತ್ಯವೂ ಬಂದಿದೆ. ಆದರೆ ಇಡೀ ಕನ್ನಡ ಸಾರಸ್ವತ ಲೋಕವನ್ನು ಪ್ರತಿನಿಧಿಸುವ ಸಾಹಿತ್ಯ ಪರಿಷತ್ತು ತನ್ನ ಅಂಗಳದಲ್ಲಿ ರಾಜಕಾರಣಿಗಳನ್ನು ಬಿಟ್ಟುಕೊಂಡು ಅವರ ಭಟ್ಟಂಗಿಯಾಗುತ್ತಿರುವುದು ಮಾತ್ರ ಇತ್ತೀಚಿನ ವರ್ಷಗಳಲ್ಲಿ.
ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರದ ಹಣ ಪಡೆಯುವ ಕಾರಣದಿಂದ ಎಲ್ಲ ಸಾಹಿತ್ಯ ಸಮ್ಮೇಳನಗಳ ಸ್ವಾಗತ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಸ್ಥಳೀಯ ಶಾಸಕರಿಗೆ ನೀಡುವುದರೊಂದಿಗೆ, ಸಾಹಿತ್ಯ ಮತ್ತು ರಾಜಕಾರಣದ ಅಪವಿತ್ರ ಮೈತ್ರಿ ಪ್ರಾರಂಭವಾಗುತ್ತದೆ.ನಂತರ ಎಲ್ಲ ವಿಚಾರಗಳನ್ನು ಮೂಗು ತೂರಿಸುವ ರಾಜಕಾರಣಿಗಳು ಸಾಹಿತ್ಯ ಸಮ್ಮೇಳನಗಳನ್ನು ರಾಜಕೀಯ ಜಾತ್ರೆಯನ್ನಾಗಿ ಮಾರ್ಪಡಿಸಿಬಿಡುತ್ತಾರೆ. ಕೊನೆಗೆ ಸಮ್ಮೇಳನದಲ್ಲಿ ಯಾರದರೂ ವಿಭಿನ್ನ ಧ್ವನಿಯನ್ನು ಹೊರಡಿಸಿದರೆ ನಾವು ನಿಮಗೆ ಹಣ ಕೊಟ್ಟಿದ್ದೀವಿ, ಮುಚ್ಚಕಂಡು ಕುಳಿತುಕೊಳ್ಳಿ ಎಂದು ಹೇಳುವವರೆಗೂ ಇದು ತಲುಪಿಬಿಡುತ್ತದೆ. ಇಂತಹ ಸಂಬರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೆಲವೊಂದು ನಿಷ್ಠುರವಾದ ಹೆಜ್ಜೆಗಳನ್ನು ಇಡಲೇಬೇಕು. ಮೊದಲನೆಯದಾಗಿ ಸಾಹಿತ್ಯ ಸಮ್ಮೇಳನಗಳಿಗೆ ಹಣ ನೀಡುವುದು ಸರ್ಕಾರದ ಕರ್ತವ್ಯ ಎಂಬುದನ್ನು ಗಟ್ಟಿ ಧ್ವನಿಯಲ್ಲಿ ಹೇಳಬೇಕು. ನೀವು ಹಣ ನೀಡಿದ ಕಾರಣಕ್ಕೆ ಸಾಹಿತ್ಯ ಪರಿಷತ್ತು ನಿಮ್ಮ ಅಡಿಯಾಳು ಅಗುವುದಿಲ್ಲ, ಅದು ಕನ್ನಡ ನಾಡಿನ ಆರು ಕೋಟಿ ಜನರನ್ನು ಪ್ರತಿನಿಧಿಸುವ ಸಂಸ್ಥೆ ಎಂಬುದನ್ನು ಸರ್ಕಾರಕ್ಕೆ ತಿಳಿಸಬೇಕು. ನೀವು ನೀಡುವ ಹಣ ಈ ನಾಡಿನ ಜನರ ಹಣ. ಅದು ನಿಮ್ಮ ಜೇಬಿನಿಂದ ಕೊಡುತ್ತಿರುವ ಹಣವಲ್ಲ ಎಂಬುದನ್ನು ತಿಳಿಸಿಕೊಡಬೇಕು.
ಹಾಗೆ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳನ್ನು, ಮಠಾಧಿಪತಿಗಳನ್ನು ವೇದಿಕೆಗೆ ಕರೆದು ಮೆರೆಸುವುದನ್ನು ನಿಲ್ಲಿಸಬೇಕು. ರಾಜಕಾರಣಿಗಳು ಮತ್ತು ಮಠಾಧಿಪತಿಗಳಿಗೆ ಸಾಹಿತ್ಯಾಸಕ್ತಿ ಇದ್ದರೆ ಅವರು ವೇದಿಕೆಯ ಕೆಳಭಾಗದಲ್ಲಿ ಅಹ್ವಾನಿತರ ಜೊತೆಗೆ ಕುಳಿತುಕೊಳ್ಳಲಿ, ವೇದಿಕೆಯ ಮೇಲೆ ಅಲ್ಲ.
ಇಂತಹ ಮಹತ್ತದ ತೀರ್ಮಾನಗಳನ್ನು ಕೈಗೊಳ್ಳುವ ಶಕ್ತಿ ಸಾಹಿತ್ಯ ಪರಿಷತ್ತಿಗೆ ಇದೇ ಎಂಬ ನಂಬಿಕೆ ನನಗಿಲ್ಲ. ಯಾಕೆಂದರೆ ಇವತ್ತಿನ್ನ ಬಹುತೇಕ ಸಾಹಿತಿಗಳೂ ರಾಜಾಶ್ರಯ ಬೇಡುವವರೇ. ಭಟ್ಟಂಗಿತನದ ಖುಷಿಯನ್ನು ಅನುಭವಿಸಿದವರೇ. ಇಂತವರಿಂದ ಬಹುದೊಡ್ದ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ಕಷ್ಟ.
ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ರಾಜಕಾರಣಿಗಳು ಬುದ್ದಿವಾದ ಹೇಳುವುದು ನಿಲ್ಲಬೇಕು. ಇಂತಹ ಪರಿಸ್ಥಿತಿ ಬರದಂತೆ ನೋಡಿಕೊಳ್ಳುವ ಜವಾದ್ಬಾರಿ ಸಾಹಿತಿಗಳ ಮೇಲೂ ಇದೆ.

1 comment:

ಚಿನ್ಮಯ ಭಟ್ said...

ಮೊಟ್ಟ ಮೊದಲನೇಯದಾಗಿ ನಾನು ಕಾರಜೋಳರಿಗೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ.. ಈ ಒಂದು ವಿಷಯವನ್ನು ಬಹುಶಃ ಚರ್ಚೆಗೆ ತಂದು ಪುಣ್ಯ ಕಟ್ಟಿಕೊಂಡವರೂ ಅವರೇ!!
ನನಗೆ ಒಬ್ಬ ವಿಧ್ಯಾರ್ಥಿಯಾಗಿ ಅನಿಸುತ್ತಿರುವುದು ಇಷ್ಟು..
೧) ಸಾಹಿತ್ಯ ಸಮ್ಮೇಳನದ ಬಗ್ಗೆ ಅಧಿಕಾರಿ+ರಾಜಕಾರಣಿಗಳಿಗೆ ಇರುವ ಆಸಕ್ತಿ ಏಷ್ಟು?? ಏನೋ ಮಾಡಬೇಕು.. ಮಾಡದಿದ್ದರೆ ಸುಮ್ಮನೆ ಯಾರ್ಯಾರೋ ಬೊಬ್ಬೆ ಹೊಡೆಯುತ್ತಾರೆ, ಮಾಧ್ಯಮದವರು ಝಾಡಿಸುತ್ತಾರೆ ಅದಕ್ಕೆ ಏನೋ ಮಾಡ ಬೇಕು.

೨)ಇನ್ನು ಸಂಘಟಕರು..ಅವರಲ್ಲಿ ನಿಜವಾಗಿ ಕನ್ನಡಕ್ಕಾಗಿ ದುಡಿಯುವವರು ಎಷ್ಟು ಜನರೋ,ಕನ್ನಡದ ಹೆಸರಿನಲ್ಲಿ ಸಿಗುವ ಹಣಕ್ಕಾಗಿ ಕೋಲಾಡಿಸುವವರು ಅದಿನ್ನು ಎಷ್ಟು ಜನರೋ??

೩)ಪರಿಷತ್ತಿನ ಮುಖ್ಯಸ್ಥರುಗಳಿಗೆ ಅದಿನ್ನು ಎನೇನು ಗೊಂದಲವೋ?? ಅತ್ತ ಸರ್ಕಾರವನ್ನು ಅಲಕ್ಷಿಸುವಂತಿಲ್ಲ,ಇತ್ತ ತಲೆ ಮೇಲೂ ಕೂರಿಸುವಂತಿಲ್ಲ... ಸಾಹಿತಿಗಳ ರಾಜಕಾರಣವನ್ನು ಸುಧಾರಿಸಬೇಕೋ ಅಥವಾ ರಾಜಕಾರಣಿಗಳ ಆ ಸಾಹಿತ್ಯವನ್ನು ಸಹಿಸಬೇಕೋ ದೇವರೇ ಬಲ್ಲ...

೪)ಸಾಮಾನ್ಯ ಜನರಿಗೆ ಸಮ್ಮೇಳನದಲ್ಲಿ ಊಟ ಸಿಗುತ್ತದೆ ಎಂದು ಖುಷಿ, ಇನ್ನು ಹಲವರಿಗೆ ಅಗ್ಗದಲ್ಲಿ ಪುಸ್ತಕ ಕೊಂಡುಕೊಳ್ಳುವ ಧಾವಂತ..ಕೆಲ ನಮ್ಮಂತ ಪೋರರಿಗೆ ಅವರಿವರನ್ನು ನೋಡುವ, ರಾತ್ರಿ ಡಾನ್ಸು ನೋಡುವ ಕುತೂಹಲ...ಇನ್ನು ಇರುವ ಕೆಲವೇ ಕೆಲವು ಗೋಷ್ಟಿಗಳಲ್ಲಷ್ಟೇ ನೈಜ ಸಮಸ್ಯೆಗಳ ಚರ್ಚೆಯಾದರೂ ಅದು ಷರಾ ಬರೆದಿಡುವುದಕ್ಕೇ ಸೀಮಿತ...

೫) ಕೊಟ್ಟ ಕೊನೆಯಲ್ಲಿ ಮತ್ತೆ ಅದೇ ಹಾಡು ," ಕಳೆದ ಬಾರಿಯ ನಿರ್ಣಯಗಳೊಂದಿಗೆ ಈ ಬಾರಿ ೫ ಹೆಚ್ಚಿನ ನಿರ್ಣಯ ಕೈಗೊಳ್ಳಲಾಗಿದೆ" ... ಅದಕ್ಕೆ ಸರಕಾರದಿಂದ ಪರಿಶೀಲನೆಯ ಭರವಸೆ ವೇದಿಕೆಯ ಮೇಲಿದ್ದ ಸಚಿವರಿಂದ!!


ಅಲ್ಲಿಗೆ ಇತಿಶ್ರೀ... ಬರುವ ವರುಷದ ವರೆಗೆ ನಿರಾಳ ಅಧಿಕಾರಿ,ಆಡಳಿತ ವರ್ಗ, ನಿದ್ರೆ ಮಾಡುವ ನಾವುಗಳು...

ಅದಕ್ಕೇ ಹೇಳಿದ್ದು ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ಮೇಲೂ ಏನಾದರೂ ಚರ್ಚೆ ಆಗುತ್ತಿದೆ ಎಂದರೆ ಅದು ಕಾರಜೋಳರ ಪ್ರಭಾವವೇ.....

ಧನ್ಯವಾದಗಳೊಂದಿಗೆ,
ಸಮ್ರದ್ಧ ಭಾರತದ ಸಿಹಿ ಕನಸ ಹೊತ್ತು,
ನಿಮ್ಮನೆ ಹುಡುಗ,
ಚಿನ್ಮಯ ಭಟ್
http://chinmaysbhat.blogspot.com/