Tuesday, January 17, 2012

ಪತ್ರಿಕೋದ್ಯಮ ವ್ಯಾಪಾರವಲ್ಲ










ಅಮ್ಮನ ಗರ್ಭದಲ್ಲಿ ಹಾಯಾಗಿದ್ದವನು ಹೊರಕ್ಕೆ ಬಂದ ಮೇಲೆ ಮೊದಲು ನೋಡಿದ್ದು ಅಮ್ಮನನ್ನೇ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಅಮ್ಮನನ್ನು ನೋಡಿದ ಮೇಲೆ, ಅಪ್ಪ, ಮತ್ತು ಮನೆಯಲ್ಲಿದ್ದ ಇತರರು ನನ್ನನ್ನು ನೋಡಿರಬೇಕು. ಹಾಗೂ ನಾನು ಅವರನ್ನು ನೋಡಿರಬೇಕು. ಆದರೆ ಅಮ್ಮನನ್ನು ನೋಡಿದ ಮೇಲೆ ನಾನು ನೋಡಿದ್ದು ಪತ್ರಿಕೆಗಳು ಮತ್ತು ಸಾಹಿತ್ಯ ಪುಸ್ತಕಗಳನ್ನು ಎಂಬುದು ಮಾತ್ರ ಸತ್ಯ. ಅಪ್ಪನಿಗಿಂತ ನನ್ನನ್ನು ಹೆಚ್ಚು ಕಾಡಿದ್ದು, ಈಗಲೂ ಕಾಡುತ್ತಿರುವುದು ಪುಸ್ತಕಗಳು ಮತ್ತು ಪತ್ರಿಕೆಗಳು. ಅಪ್ಪನ ಕೈಚೀಲ ಒಂದು ಪುಸ್ತಕ ಭಂಡಾರ. ಅತ ಯಾವುದೇ ಹೊಸ ಪುಸ್ತಕ ಬರಲಿ ಅದನ್ನು ತರುತ್ತಿದ್ದ. ಅವನ ಹೆಗಲ ಮೇಲೆ ವಿರಾಜಮಾನವಾಗಿರುತ್ತಿದ್ದ ಉದ್ದನೆಯ ಕೈಚೀಲದಲ್ಲಿ ಇರುತ್ತಿದ್ದುದು ಇಂಗ್ಲೀಷ್ ಮತ್ತು ಕನ್ನಡ ಪತ್ರಿಕೆಗಳು ಮತ್ತು ಹೊಸ ಪುಸ್ತಕಗಳು. ಆತ ಅವುಗಳನ್ನು ತಾನು ಓದಿ ಮುಗಿಸುವ ಮೊದಲು ಬೇರೆಯವರಿಗೆ ಮುಟ್ಟುವುದಕ್ಕೂ ಕೊಡುತ್ತಿರಲಿಲ್ಲ. ತಾನು ಓದಿದ ಮೇಲೆ ಅವುಗಳನ್ನು ಓದಲು ನನಗೆ ನೀಡುತ್ತಿದ್ದ.

ಬೇರೆ ಯಾವುದೇ ಆಸ್ತಿಯನ್ನು ಮಾಡದ ಅಪ್ಪ ಕನಿಷ್ಠ ೧೦ ಸಾವಿರ ಪುಸ್ತಕಗಳನ್ನು ತಂದು ಮನೆಯಲ್ಲಿ ತುಂಬಿದ್ದ/ ಆಗ ನಮ್ಮ ಮನೆಗೆ ದಿ. ಹಿಂದೂ, ಪ್ರಜಾವಾಣಿ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳು ಬರುತ್ತಿದ್ದವು. ಹೀಗಾಗಿ ಅಂದಿನಿಂದ ಇಂದಿನ ವರೆಗೆ ನಾನು ಬಿಡದ ಸಂಗಾತಿಗಳೆಂದರೆ ಪತ್ರಿಕೆಗಳು ಮತ್ತು ಪುಸ್ತಕಗಳು.

ನಾನು ಈ ಕಾಲಘಟ್ಟದಲ್ಲಿ ನಿಂತು ಪತ್ರಿಕೋದ್ಯಮದ ಬಗ್ಗೆ ಯೋಚಿಸುವಾಗ ನನಗೆ ಸದಾ ಸಂಗಾತಿಯಾಗಿರುವ ಪತ್ರಿಕೆಗಳು ಮತು ಪುಸ್ತಕಗಳು ನೆನಪಾಗುತ್ತದೆ. ಹಾಗೆ ಪತ್ರಿಕೋದ್ಯಮದ ಉದ್ದೇಶ, ಪರಿಣಾಮ, ಮತ್ತು ಸಾಧ್ಯಾಸಾಧ್ಯತೆಗಳ ಬಗ್ಗೆ ಯೋಚಿಸುವಾಗ ಈ ಅಕ್ಷರ ಪ್ರಪಂಚ ನನಗೆ ನೀಡಿದ್ದೇನು ಎಂಬುದನ್ನು ನಾನು ಯೋಚಿಸುತ್ತೇನೆ. ಒಬ್ಬ ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುವಲ್ಲಿ ಅಕ್ಷರ ಪ್ರಪಂಚದ ಕೊಡುಗೆ ತುಂಬಾ ದೊಡ್ದದು ಎಂಬುದು ಅರಿವಾಗಿ ನನ್ನಲ್ಲಿ ಕೃತಜ್ನತಾ ಭಾವ ಮೂಡುತ್ತದೆ.

ನಾನು ಹಿಂತಿರುಗಿ ನಾನು ನಡೆದು ಬಂದ ದಾರಿಯನ್ನು ನೋಡುವಾಗ ನನಗೆ ತಕ್ಷಣ ಅನ್ನಿಸುವುದು ಈ ಪತ್ರಿಕೋದ್ಯಮವೇ ನನಗೆ ಬಂದ ಪಿತ್ರಾರ್ಜಿತ ಆಸ್ತಿ. ನಾನು ಶಾಲೆಗೆ ಹೋಗುವುದಕ್ಕೆ ಮೊದಲು ನನ್ನ ಅಪ್ಪ ಜಿಲ್ಲಾ ಪತ್ರಿಕೆಗಳಿಗೆ ರಾಜಕೀಯ ವಿಶ್ಲೇಷಣೆ ಮತ್ತು ಲೇಖನಗಳನ್ನು ಬರೆಯುತ್ತಿದ್ದ. ಅವನು ಬರೆದ್ ಲೇಖನವೊಂದರ ಶೀರ್ಷಿಕೆ ನನಗೆ ಈಗಲೂ ನೆನಪಿದೆ. ಅದು ಕೆಸರ ಮೇಲೆ ಕಲ್ಲು ತೂರುವುದಿಲ್ಲ ಎಂದಾಗಿತ್ತು. ಅಪ್ಪ ನನಗೆ ಆಗ ಕಲಿಸಿದ್ದೆಂದರೆ ಪತ್ರಿಕೋದ್ಯಮ ಎಂದರೆ ಸತ್ಯದ ಅನ್ವೇಷಣೆ ಎಂಬುದು. ನಾನು ಪತ್ರಿಕಾ ವೃತ್ತಿಯನ್ನು ಒಪ್ಪಿಕೊಂಡ ಮೇಲೆ, ಅಪ್ಪಿಕೊಂಡ ಮೇಲೆ ಅಪ್ಪನ ಈ ಮಾತನ್ನು ಎಂದೂ ಮರೆಯಲಿಲ್ಲ. ಈಗಲೂ ಅಪ್ಪ ಹೇಳಿದ ಸತ್ಯದ ಅನ್ವೇಷಣೆಯೇ ನನ್ನ ಕೆಲಸ ಎಂದು ನಂಬಿದ್ದೇನೆ.

ಪತ್ರಿಕೋದ್ಯಮ ಉಳಿದ ಉದ್ಯಮಗಳಂತೆ ಅಲ್ಲ. ಒಂದು ಅರ್ಥದಲ್ಲಿ ಇದು ಉದ್ಯಮವಾದರೂ, ಇದು ಉದ್ಯಮ ಅಲ್ಲ. ಹೀಗಾಗಿ ಇದು ಪತ್ರಿಕಾವೃತಿ ಮಾತ್ರ. ಅಥವಾ ಇದೊಂದು ಬದ್ಧತೆ ಅಥವ ಸೇವೆ ಎಂದು ಪರಿಗಣಿಸಬೇಕು ಎಂಬುದು ನನ್ನ ಪ್ರಬಲ ನಂಬಿಕೆ. ಯಾಕೆಂದರೆ ಉದ್ಯಮ ಎನ್ನುವುದು ವ್ಯಾಪಾರ ಒಹಿವಾಟು ಅಗಿರುವುದರಿಂದ ಅದರ ಮೂಲ ಉದ್ದೇಶ ಲಾಭವನ್ನು ಗಳಿಸುವುದೇ ಆಗಿದೆ. ಉದ್ಯಮದಲ್ಲಿ ಮನಸ್ಸಿನ ಕೆಲಸ ತುಂಬಾ ಕಡಿಮೆ. ಅದು ಮನಸ್ಸಿನ ಜೊತೆ ಹಾಗೂ ಸಮಾಜದ ಜೊತೆ ನಡೆಸುವ ಸಂವಾದವಲ್ಲ. ಹೇಗೆ ಬದುಕು ವ್ಯಾಪಾರವಲ್ಲವೋ ಪತ್ರಿಕೋದ್ಯಮ ಕೂಡ ವ್ಯಾಪಾರವಲ್ಲ.

ಉದ್ಯಮದಲ್ಲಿ ಲಾಭವೇ ಪರಮ. ಪತ್ರಿಕೋದ್ಯಮದಲ್ಲಿ ಸಾಮಾಜಿಕ ಬದ್ಧತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವ ಎಲ್ಲದಕ್ಕಿಂತ ಮುಖ್ಯ. ಇಲ್ಲಿ ಲಾಭಕ್ಕಾಗಿ ಏನನ್ನಾದರೂ ಮಾಡುವಂತಿಲ್ಲ. ಜೊತೆಗೆ ಪತ್ರಿಕೆಗಳು ವರ್ತಮಾನದ ಜೊತೆ ಸದಾ ಸಂವಹನ ನಡೆಸುತ್ತವೆ. ಭೂತಕಾಲವನ್ನು ನೆನಪು ಮಾಡಿಕೊಡುತ್ತ ವರ್ತಮಾನವನ್ನು ವಿಶ್ಲೇಷಿಸುತ್ತ ಭವಿಷ್ಯದ ಭಾಷ್ಯವನ್ನು ಬರೆಯುವುದು ಪತ್ರಿಕೋದ್ಯಮ. ಇದು ಕಾಲದ ಜೊತೆಗಿನ ಜಂಗಿ ಕುಸ್ತಿ.

ನಾನು ಈ ಮೊದಲು ಹೇಳಿದಂತೆ ಪತ್ರಿಕೋದ್ಯಮದ ಸಂಪೂರ್ಣ ವ್ಯವಹಾರ ಇರುವುದು ಮನಸ್ಸುಗಳ ಜೊತೆ. ಹೀಗಾಗಿ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕಾದ ಪತ್ರಿಕೋದ್ಯಮ ಮನಸ್ಸುಗಳನ್ನು ಒಡೆಯುವ ಕೆಲಸವನ್ನು ಮಾಡಬಹುದು. ಎಲ್ಲರ ಮನಸ್ಸುಗಳ ಒಟ್ಟಾರೆ ಮೊತ್ತವೇ ಪತ್ರಿಕೋದ್ಯಮವಗಿರುವುದರಿಂದ, ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಬೇಕಾದ ಪತ್ರಿಕೋದ್ಯಮದ ಹೊಣೆಗಾರಿಕೆ ತುಂಬಾ ಮುಖ್ಯವಾಗುತ್ತದೆ. ಉದಾಹರಣೆಗೆ ಸ್ವಾತಂತ್ರ್ಯ ಚಳವಳಿ ಮತ್ತು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಿಕೆಗಳನ್ನು ಜನತಾಂತ್ರಿಕ ಮೌಲ್ಯಗಳ ಬಗ್ಗೆ ಮಾತನಾಡುತ್ತ ರಾಜಸತ್ತೆ ಮತ್ತು ಸರ್ವಾಧಿಕಾರವನ್ನು ವಿರೋಧಿಸುತ್ತ ಬಂದವು. ಹೀಗಾಗಿ ನಮ್ಮ ಒಟ್ಟಾರೆ ಸಮಾಜದ ಮನಸ್ಸು ಎಂಬುದಿದ್ದರೆ ಅದು ಸ್ವಾತಂತ್ರ್ಯದ ಪರವಾದ, ಸರ್ವಾಧಿಕಾರವ ವಿರೋಧಿಯಾದ ಮನಸ್ಥಿತಿಯಾಗಿ ರೂಪಗೊಂಡಿತು. ಇತ್ತೀಚೆಹೆ ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರೋಧಿ ಚಳವಳಿ ಯುವ ಜನತೆಯನ್ನು ಮುಟ್ಟಲು ಕಾರಣ ನಮ್ಮ ಮಾಧ್ಯಮಗಳೇ. ಈ ಕಾರಣದಿಂದಲೇ ಇಂದಿಗೂ ಜನ ಪತ್ರಿಕೆಗಳಲ್ಲಿ ಬರುವುದು ಪರಮ ಸತ್ಯ ಎಂದು ನಂಬಿಕೊಂಡಿದ್ದಾರೆ. ಆದ್ದರಿಂದ ಜನರ ನಂಬಿಕೆಯ ಮೇಲೆ ನಿಂತಿರುವ ಪತ್ರಿಕೋದ್ಯಮ ಈ ನಂಬಿಕೆಯನ್ನು ಉಳಿಸಿಕೊಳ್ಳುವದಕ್ಕಾಗಿಯಾದರೂ ಸತ್ಯದ ಹುಡುಕಾಟವನ್ನು ನಡೆಸಲೇ ಬೇಕಾಗಿದೆ.

ಮಾಧ್ಯಮ ಜಗತ್ತಿನ ಮಹಾ ಅದ್ಭುತ ಎಂದರೆ ಅದು ಸಮಾಜದ ಭಾಗವಾಗಿದ್ದುಕೊಂಡೇ ಸಮಾಜದಿಂದ ಹೊರಕ್ಕೆ ನಿಂತು ನೋಡುವ ಶಕ್ತಿಯನ್ನು ಹೊಂದಿರುತ್ತದೆ. ಇಡೂ ಜನ ಸಮುದಾಯದ ಪ್ರಜ್ನೆಯಂತೆ ಅದು ಕೆಲಸ ಮಾಡುತ್ತಿರುತ್ತದೆ. ಅಂದರೆ ಒಂದೇ ಕಾಲದಲ್ಲಿ ವ್ಯವಸ್ಥೆಯ ಭಾಗವಾಗಿದ್ದರೂ ಅದರಿಂದ ಹೊರಕ್ಕೆ ನಿಲ್ಲುವ ಧ್ಯಾನಸ್ಥ ಸ್ಥಿತಿ ಪತ್ರಿಕೋದ್ಯಮದ್ದು. ಇದೇ ಪತ್ರಿಕೋದ್ಯಮಕ್ಕೆ ವಿಶಿಷ್ಠ ಶಕ್ತಿಯನ್ನು ಮಾತ್ರವಲ್ಲ, ಜನ ಸಮುದಾಯದ ಪ್ರಾತಿನಿಧಿಕ ಸ್ಥಾನವನ್ನು ನೀಡಿದೆ ಎಂಬುದು ನನ್ನ ನಂಬಿಕೆ. ಹೀಗಾಗಿ ಜನತಂತ್ರ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕಿಂತ ಭಿನ್ನವಾದ ಮತ್ತು ಗುರುತರವಾದ ಹೊಣೆಗಾರಿಕೆ ಇರುವುದು ಮಾಧ್ಯಮ ರಂಗದ ಮೇಲೆ.

ನಾನು ಹೇಳಿದ ಈ ಮಾತುಗಳಲ್ಲಿ ಹೊಸದೇನೂ ಇಲ್ಲ. ಇವೆಲ್ಲ ಇತಿಹಾಸದ ಪರೀಕ್ಷೆಗೆ ಒಳಗಾಗಿ ಸಾಬೀತಾದ ಅಂಶಗಳೇ ಆಗಿವೆ. ಆದರೆ ಈ ಪೂರ್ವ ಪೀಠಿಕೆಯ ನಂತರವೇ ನಾನು ಇಂದಿನ ಪತ್ರಿಕೋದ್ಯಮವನ್ನು ವಿಶ್ಲೇಷಿಸಬೇಕಾಗಿದೆ. ಈ ನೆನಪುಗಳ ನಂತರವೇ ನಾವು ಮುಂದುವರಿಯಬೇಕಾಗಿದೆ.

ಇಂದು ಮಾಧ್ಯಮ ಜಗತ್ತು ಬದಲಾಗಿದೆ. ಪತ್ರಿಕೋದ್ಯಮ ನಿಜವಾದ ಅರ್ಥದಲ್ಲಿ ಉದ್ಯಮವಾಗಿದೆ. ಉದ್ಯಮಪತಿಗಳು, ಈ ರಂಗವನ್ನು ಆಳತೊಡಗಿದ್ದಾರೆ. ಲಾಭ ಮತ್ತು ವ್ಯಯಕ್ತಿಕ ಹಿತಾಸಕ್ತಿಗಳು ಮುಖ್ಯವಾಗುತ್ತ ಸಾಮಾಜಿಕ ಹೊಣೆಗಾರಿಕೆ ಮತ್ತು ಸಾಮಾಜಿಕೆ ಬದ್ಧತೆ ಎಂಬುದು ಕಡಿಮೆಯಾಗುತ್ತಿದೆ. ಎಲ್ಲರೂ ಮಾಧ್ಯಮ ಅಂಗಡಿಗಳ ಮಾಲೀಕರು ಮತ್ತು ವಾರಸುದಾರರು. ಇವೆರೆಲ್ಲ ಕಾಯುತ್ತಿರುವುದು ಗಿರಾಕಿಗಳಿಗಾಗಿ. ಪಕ್ಷ ಮತ್ತು ಜಾತಿ ರಾಜಕಾರಣ ಮಾಧ್ಯಮ ರಂಗದಲ್ಲಿ ನರ್ತಿಸತೊಡಗಿವೆ. ಪತ್ರಿಕಾ ವೃತ್ತಿಯ ಮೂಲ ಉದ್ದೇಶದ ಬಗ್ಗೆಯೇ ಎಲ್ಲರೂ ಅನುಮಾನದಿಂದ ನೋಡುವಂತಾಗಿದೆ. ಎಲ್ಲವನ್ನೂ ರುಚಿಕಟ್ಟಾಗಿ ನೀಡಬೇಕು ಎಂದು ಪತ್ರಿಕಾ ಸ್ನೇಹಿತರು ಮಾತನಾಡತೊಡಗಿದ್ದಾರೆ.

ಸತ್ಯಕ್ಕಿಂತ ಮಾರಾಟ ಮಾಡುವುದು ಮುಖ್ಯವಾಗಿರುವ ಈ ಸಂದರ್ಭದಲ್ಲಿ ಮಾರುಕಟ್ಟೆ ಸಂಸ್ಕೃತಿ ಮತ್ತು ಮಾರಾಟ ಯೋಜನೆಗಳು ಅನುಷ್ಠಾನಕ್ಕೆ ಬರತೊಡಗಿವೆ. ಅಂದರೆ ಪತ್ರಿಕೆಗಳೂ ಕೂಡ ಒಂದು ಸೋಪಿನಂತೆ, ಕಾಂಡೋಮಿನಂತೆ ಹಲ್ಲು ಉಜ್ಜುವ ಭ್ರಷ್ ನಂತೆ ಮಾರಾಟದ ಸರಕಾಗುತ್ತಿದೆ, ಪತ್ರಿಕಾ ಸಂಸ್ಥೆಗಳಲ್ಲಿ ಸಂಪಾದಕರುಗಳಿಗಿಂತ ಮರುಕಟ್ಟೆ ವಿಭಾಗದ ಮುಖ್ಯಸ್ಥರು ಹೆಚ್ಚಿನ ಮಾನ್ಯತೆ ಪಡೆಯುತ್ತಿದ್ದಾರೆ. ಸಂಪಾದಕರು ಸಂಪಾದಕೀಯವನ್ನು ಬರೆಯುವುದಕ್ಕೆ ಮೊದಲು ಆಡಳಿತ ವರ್ಗದಿಂದ ಡಿಕ್ಟೇಷನ್ ಪಡೆಯುವ ಸ್ಥಿತಿ ನಿರ್ಮಾಣವಗಿದೆ.

ಈ ಬದಲಾವಣೆಗಳು ಪತ್ರಿಕಾ ವೃತ್ತಿಯ ಪಾವಿತ್ರತೆಗೆ ದಕ್ಕೆಯನ್ನು ಉಂಟು ಮಾಡಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇಂಥ ಪರಿಸ್ಥಿತಿಗೆ ಕಾರಣ ಎಂಬ ಪ್ರಶ್ನೆಗೆ ಉತ್ತರ ನೀಡುವುದೂ ಕಷ್ಟ, ಯಾಕೆಂದರೆ ಈ ಪ್ರಶ್ನೆಗೆ ಏಕರೂಪವಾದ ಮತ್ತು ಸರಳವಾದ ಉತ್ತರವಿಲ್ಲ. ಯಾಕೆಂದರೆ ಈ ಸ್ಥಿತಿಗೆ ಪತ್ರಿಕಾ ಜಗತ್ತಿನಲ್ಲಿ ಇರುವವರು ಮಾತ್ರ ಕಾರಣರಲ್ಲ. ಸಮಾಜದಲ್ಲಿ ಆದ ಬದಲಾವಣೆಗಳು, ನಮ್ಮ ಮೌಲ್ಯ ಗ್ರಹಿಕೆಯಲ್ಲಿ ಕಂಡು ಬರುತ್ತಿರುವ ವ್ಯತ್ಯಾಸ, ಬದುಕಿನ ವಿಭಿನ್ನ ಪಲ್ಲಟಗಳು, ಎಲ್ಲವೂ ಈ ಬದಲಾವಣೆಗೆ ತಮ್ಮ ಕೊಡುಗೆಯನ್ನು ನೀಡಿವೆ.

ಈ ಮೌಲ್ಯ ಪಲ್ಲಟವನ್ನು ನಾನು ಮೂರು ವಿಭಾಗಗಳನ್ನಾಗಿ ವಿಂಗಡಿಸುತ್ತೇನೆ. ಮೊದಲನೇಯದಾಗಿ ಬದಲಾದ ಮಾಲೀಕ ವರ್ಗ ಮತ್ತು ಅವರ ಧ್ಯೇಯೋದ್ಧೇಶಗಳು. ಮಾಲಿಕ ವರ್ಗಕ್ಕೆ ಇರುವ ಆಧ್ಯತೆಗಳು ಇಂದಿನ ಉದ್ಯಮ ಜಗತ್ತಿನಿಂದ ಪಡೆದುಕೊಂಡ ಆಧ್ಯತೆಗಳೇ ಆಗಿವೆ. ಜೊತೆಗೆ ಸೇವೆ ಮತ್ತು ಬದ್ಧತೆ ಎಂಬ ಶಬ್ಧಕ್ಕೆ ವ್ಯಾಪಾರೀಕರಣಗೊಂಡ ಮನಸ್ಸುಗಳಲ್ಲಿ ಯಾವ ಸ್ಥಾನವೂ ಇರದಿರುವುದು, ಇಂಥ ವ್ಯಾಪಾರೀಕರಣಗೊಂಡ ಮನಸ್ಸುಗಳೇ ಪತ್ರಿಕೋದ್ಯಮವನ್ನು ಆಳುತ್ತಿರುವುದು ಕೂಡ ಇದಕ್ಕೆ ಕಾರಣ. ಇಂದು ಸರಳೀಕೃತಗೊಂಡ ಪತ್ರಿಕೋದ್ಯಮದ ವ್ಯಾಖ್ಯೆಯಲ್ಲಿ ಹಣ ಮತ್ತು ಪ್ರಭಾವ ಮುಖ್ಯವಾಗುತ್ತಿರುವುದನ್ನು ನಾವು ಗಮನಿಸಬಹುದು.

ಇನ್ನು ಬದ್ಧತೆಯ ಪ್ರಶ್ನೆಯನ್ನು ಮಾಧ್ಯಮ ರಂಗದಲ್ಲಿ ಕೆಲಸ ಮಾಡುವವರ ದೃಷ್ಟಿಕೋನದಿಂದ ನೋಡೋಣ. ಮಾಧ್ಯಮ ರಂಗದಲ್ಲಿ ಕೆಲಸ ಮಾಡುವವರ ಆಧ್ಯತೆಗಳೂ ಬದಲಾಗಿವೆ. ಅವರು ನಂಬಿಕೊಂಡಿರುವ ಮೌಲ್ಯ ಕೂಡ ಒಂದು ರೀತಿಯ ಮೌಲ್ಯ ಪಲ್ಲಟದ ಉದಾಹರಣೆಯೇ..ಅಂದರೆ ಮಾಧ್ಯಮ ರಂಗದಲ್ಲಿ ಕೆಲಸ ಮಾಡುವವರಿಗೂ, ಬದುಕಿನ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಇರಬೇಕಾದ ವ್ಯತ್ಯಾಸ ಕೂಡ ಮರೆಯಾಗುತ್ತಿದೆ ಎಂಬುದು. ಈಗಿನ ಬಹಳಷ್ಟು ವೃತ್ತಿ ಬಾಂಧವರಿಗೆ ಪತ್ರಿಕಾ ಅಥವಾ ಮಾಧ್ಯಮ ವೃತ್ತಿ ಎಂದರೆ ಉಳಿದ ಕ್ಷೇತ್ರಗಳಿಗಿಂತ ಭಿನ್ನವಲ್ಲ. ಎಲ್ಲೋ ದಲ್ಲಾಳಿ ಕೆಲಸ ಮಾಡುವುದಕ್ಕೂ ಮಾಧ್ಯಮದಲ್ಲಿ ಕೆಲಸ ಮಾಡುವುದಕ್ಕೂ ಇರುವ ವ್ಯತ್ಯಾಸವನ್ನು ತಿಳಿಯದವರೂ ಮಾಧ್ಯಮದಲ್ಲಿದ್ದಾರೆ. ಬೀಡಾ ಅಂಗಡಿ ಇಡಬೇಕಾದವರು, ಚಾ ಅಂಗಡಿ ತೆರೆಯಬೇಕಾದವರು, ರಾಜಕೀಯ ಮಧ್ಯವರ್ಥಿಗಳು ಈ ವೃತ್ತಿಗ್ಎ ಬಂದಿರುವುದು ಇನ್ನೊಂದು ದುರಂತ.

ಈ ಮಾತುಗಳನ್ನು ನಾನು ಸಿನಿಕನಗಿ ಹೇಳುತ್ತಿಲ್ಲ. ಆದರೆ ಈ ಕಾಲಘಟ್ಟದಲ್ಲಿ ಮಾಧ್ಯಮ ರಂಗದಲ್ಲಿ ಅದ ಆಗುತ್ತಿರುವ ಬದಲಾವಣೆಯನ್ನು ಗುರುತಿರುವ ಯತ್ನ ಇದು ಎಂದೂ ನಮ್ರವಾಗಿ ಹೇಳಲು ಬಯಸುತ್ತೇನೆ.

ಮೂರನೆಯದಾಗಿ ಓದುಗ ಮಹಾ ಪ್ರಭು. ಸಮಾಜದಲ್ಲಿ ಆದ ಆಗುತ್ತಿರುವ ಮೌಲ್ಯ ಪಲ್ಲಟದ ಶಿಶುಗಳು ಇವರು.

ಜಾಗತೀಕರಣದ ಪ್ರಭಾವದಲ್ಲಿ ಬದುಕುತ್ತಿರುವ ಇವರಿಗೆ ಬದುಕಿನಲ್ಲಿ ಯಾವುದು ಮುಖ್ಯ ಮತ್ತು ಯಾವುದು ಮುಖ್ಯವಲ್ಲ ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯವಿಲ್ಲ.
ಜೊತೆಗೆ ಪ್ರಾಮಾಣಿಕತೆ, ಸಾಮಾಜಿಕ ಬದ್ಧತ್ಎ ಮತ್ತು ಕಾಳಜಿ ಎಂಬಂತಹ ಮೌಲ್ಯಗಳು ಇವರಿಗೆ ಅಪಮೌಲ್ಯಗಳಾಗಿ ಕಾಣುತ್ತಿವೆ. ಅಮೇರಿಕದಿಂದ ಪಿಜ್ಜಾವನ್ನೋ ರಾಕ್, ಡ್ಯಾನ್ಸನ್ನೋ ಪಡೆದು ಆರಾಧಿಸುವ ಈ ಜನ ಸಮುದಾಯ ಬದುಕಿನ ಮೌಲ್ಯ ಕಲ್ಪನೆಯ ಪಲ್ಲಟವನ್ನು ಗುರುತಿಸಿದಂತೆ ಕಾಣುತ್ತಿಲ್ಲ. ಹಣ ಮುಖ್ಯವಾಗುತ್ತ ಮನುಷ್ಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿರುವುದಕ್ಕೇ ಇವರೆ ಜೀವಂತ ಉದಾಹರಣೆಯಾಗುತ್ತಿದ್ದಾರೆ. ಬದುಕಿನಲ್ಲಿ ಹಣವೇ ಮುಖ್ಯ. ಹಣವೊಂದೇ ನಮಗೆ ಶಾಂತಿ ಸಮಾಧಾನವನ್ನು ನೀಡುತ್ತದೆ ಎಂಬ ಹೊಸ ನಂಬಿಕೆಯನ್ನು ಈ ಜಾಗತೀಕರಣ ನಮ್ಮ ಓದುಗ ಸಮುದಾಯದಕ್ಕೆ ಕೊಡುಗೆಯಾಗಿ ನೀಡಿದೆ. ಹಣ ಪಡೆಯುವುದೇ ಮುಖ್ಯವಾದಾಗ ಬದುಕಿನ ಎಲ್ಲ ಮೌಲ್ಯಗಳು ಅರ್ಥವನ್ನು ಕಳೆದುಕೊಳ್ಳುತ್ತವೆ. ಈಗ ಆಗುತ್ತಿರುವುದೂ ಇದೇ ಎಂದು ನನಗೆ ಅನ್ನಿಸುತ್ತದೆ.
ಇದನ್ನೆಲ್ಲ ಗಮನಿಸಿದರೆ ಸಮಸ್ಯೆಯನ್ನು ಹೇಗೆ ಬಗೆಹರಿಸುವುದು ಎಂದು ನನ್ನನ್ನು ಕೇಳಿದರೆ ನನ್ನ ಬಳಿ ಸ್ಪಷ್ಟ ಉತ್ತರ ಇಲ್ಲ. ಆದರೆ ಬದುಕಿನಲ್ಲಿ ಬದಲಾವಣೆಯೊಂದೇ ಶಾಶ್ವತ ಎಂದು ನಂಬಿರುವ ನಾನು ಪತ್ರಿಕೋದ್ಯಮದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಕುತೂಹಲದಿಂದ ಗಮನಿಸುತ್ತಿದ್ದೇನೆ. ಹಾಗೆ ಬದುಕಿನಲ್ಲಿ ಯಾವುದು ಮುಖ್ಯ ಮತ್ತು ಯಾವುದು ಮುಖ್ಯವಲ್ಲ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಳ್ಳುತ್ತಿದ್ದೇನೆ. ಆದರೆ ಉತ್ತರ ಇನ್ನೂ ದೊರಕಿಲ್ಲ.

ಸಿಹಿಗಾಳಿ ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ





























No comments: