Sunday, January 29, 2012

ನಾನೂ ಮನೆ ಬಿಟ್ಟು ಓಡಿ ಬಂದಿದ್ದೆ....!





ನನಗೆ ಒಂದು ಕಾಲದಲ್ಲಿ ತಿರುಗುವ ಹುಚ್ಚು ಹಿಡಿದಿತ್ತು. ಈ ಹುಚ್ಚಿನಿಂದಾಗಿ ನಾನು ಭಾರತದ ಉದ್ದಗಲಕ್ಕೆ ಒಡಾಡಿದ್ದೇನೆ. ಹಣ ಖಾಲಿಯಾದ ಮೇಲೆ ಈ ತಿರುಗಾಟದಿಂದ ನಾನು ಹಿಂದಕ್ಕೆ ಬರುತ್ತಿದ್ದುದು ಮಾಮೂಲು. ನಾನು ಈ ತಿರುಗಾಟಕ್ಕೆ ಮುನ್ನುಡಿ ಬರೆದಿದ್ದು ನಾನು ಹೈಸ್ಕೂಲಿಗೆ ಹೋಗುತ್ತಿದ್ದಾಗ. ಆಗ ನನಗೆ ವಿಪಿರೀತ ನಾಟಕದ ಹುಚ್ಚು. ಒಬ್ಬ ಮಹಾನ್ ನಟನಾಗಬೇಕು ಎಂಬುದು ನನ್ನ ಬದುಕಿನ ಗುರಿಯಾಗಿತ್ತು. ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ನಾನು ನನ್ನ ನಟನಾ ಸಾಮರ್ಥ್ಯದಿಂದ ಹಲವು ಭಾರಿ ಪ್ರಶಸ್ತಿ ಪಾರಿತೋಷಕವನ್ನು ಪಡೆದಿದ್ದೂ ಉಂಟು.
ನಟನೆ ಮತ್ತು ಸಿನೆಮಾ ನನ್ನನ್ನು ಸೆಳೆದಿದ್ದ ಆ ದಿನಗಳಲ್ಲಿ ಬೆಂಗಳೂರಿಗೆ ಹೋಗಿ ನಟನಾಗಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದು. ಅದೊಂದು ದಿನ. ಬಹುಶಃ ೧೯೭೪ ಇಸವಿ ದಿಸೆಂಬರ್ ತಿಂಗಳು ಇರಬೇಕು. ಅಂದು ಮನೆಯಲ್ಲಿ ಹಸ್ಕೂಲ್ ನ ಫೀ ಕಟ್ಟಲೆಂದು ಅಪ್ಪ ಕೊಟ್ಟ ಹದಿನೆಂಟು ರೂಪಾಯಿ ನನ್ನ ಕಿಸೆಯಲ್ಲಿ ಇತ್ತು. ನನಗೆ ಆ ಹದಿನೆಂಟು ರೂಪಾಯಿ ಭಾರಿ ಮೊತ್ತವಾಗಿ ಕಂಡಿತ್ತು. ಈ ಹಣವನ್ನು ತೆಗೆದುಕೊಂಡು ಬೆಂಗಳೂರು ಬಸ್ ಹತ್ತುವ ತೀರ್ಮಾನ ತೆಗೆದುಕೊಂಡೆ. ಹೈಸ್ಕೂಲಿಗೆ ಬಂದವನು ಹತ್ತು ಗಂಟೆಯ ಸಿರ್ಸಿ ಬೆಂಗಳೂರು ಬಸ್ ಹತ್ತಿ ಬಿಟ್ಟೆ. ಆ ಕೆಂಪು ಡಬ್ಬಿ ಬಸ್ಸಿನಲ್ಲಿ ಆಗ ಬೆಂಗಳೂರಿಗೆ ೧೧ ರೂಪಾಯಿ ಚಾರ್ಜ್. ಬಸ್ ಹತ್ತಿ ಟಿಕೆಟ್ ತೆಗೆದುಕೊಂಡ ಮೇಲೆ ನನ್ನ ಕೈಯಲ್ಲಿ ಉಳಿದಿದ್ದು ೭ ರೂಪಾಯಿಗಳು. ಉತ್ತರ ಕನ್ನಡ ಮತ್ತು ಹುಬ್ಬಳ್ಳಿಯನ್ನು ಬಿಟ್ಟು ಬೇರೆ ಊರುಗಳನ್ನೇ ಆ ದಿನಗಳಲ್ಲಿ ನಾನು ನೋಡಿರಲಿಲ್ಲ. ಹುಬ್ಬಳ್ಳಿಗೆ ಹೋಗಿದ್ದು ನನ್ನ ಅಪ್ಪನಿಗೆ ಕೀಡ್ನಿ ಅಪರೇಷನ್ ಆಗಿದ್ದರಿಂದ ಅಮ್ಮನ ಜೊತೆಗೆ ಹೋಗಿದ್ದು. ಒಂದು ವಾರ ಆಸ್ಪತ್ರೆಯಲ್ಲಿ ಇದ್ದು ಬಂದಿದ್ದು ಬಿಟ್ಟರೆ ಹುಬ್ಬಳ್ಳಿಯನ್ನು ಸರಿಯಾಗಿ ನೋದಿರಲಿಲ್ಲ.
ಇನ್ನು ನಾನು ನೋಡಿದ್ದ ಊರುಗಳೆಂದರೆ ಸಿರ್ಸಿ, ಸಾಗರ, ಜೋಗ್ ಫಾಲ್ಸ್ ಮಾತ್ರ.
ನಮ್ಮೂರಿನ ಕಾಡು, ನದಿ ಬೆಟ್ಟ ಗುಡ್ಡಗಳು, ಹೆಚ್ಚೆಂದರೆ ಅಕ್ಕ ಪಕ್ಕದ ಗ್ರಾಮಗಳನ್ನು ಮಾತ್ರ ನೋಡಿದ್ದ ನಾನು ಆಗ ನಟನಾಗುವುದಕ್ಕಾಗಿ ಬೆಂಗಳೂರು ಕನಸುಕಂಡು ಅದನ್ನು ಸಾಕಾರಗೊಳಿಸಲು ಯಾರಿಗೂ ಹೇಳದೇ ಬೆಂಗಳೂರು ಬಸ್ ಹತ್ತಿಬಿಟ್ಟಿದ್ದೆ !
ಬಸ್ ಸಿದ್ದಾಪುರದಿಂದ ಸಾಗರದ ಮಾರ್ಗವಾಗಿ ಶಿವಮೊಗ್ಗ ತಲುಪವಷ್ಟರಲ್ಲಿ ನಾನು ಮಹಾನ್ ನಟನಾದಂತೆ ಕನಸು ಕಾಣತೊಡಗಿದ್ದೆ. ಆಗಲೇ ರಾಜಕುಮಾರ್, ಉದಯಕುಮಾರ್ ಅವರ ಸಾಲಿನಲ್ಲಿ ನಾನು ಬಂದು ನಿಂತಂತೆ ನನಗೆ ಅನ್ನಿಸಿಬಿಟ್ಟಿತ್ತು. ರಾಜಕುಮಾರ್ ಮತ್ತು ಉದಯಕುಮಾರ್ ಅವರ ಬಹುತೇಕ ಸಿನೆಮಾಗಳನ್ನು ಕದ್ದು ನೋಡಿದ್ದ ನಾನು ಅವರ ಮ್ಯಾನರಿಸಂ ಗಳನ್ನು ಅನುಕರಿಸಲು ಪ್ರಾರಂಭಿಸಿ ಹಲವು ಕಾಲವಾಗಿತ್ತು. ಜೊತೆಗೆ ನನ್ನನ್ನು ಅತಿಯಾಗಿ ಕಾಡಿದ ಹಿಂದಿ ಚಿತ್ರ ನಟ ಎಂದರೆ ರಾಜೇಶ್ ಖನ್ನಾ. ರಾಜೇಶ್ ಖನ್ನಾ ಆ ದಿನಗಳಲ್ಲಿ ತನ್ನ ಹಲವು ಚಿತ್ರಗಳಲ್ಲಿ ಕುತ್ತಿಗೆ ಮುಚ್ಚುವ ಶರ್ಟ್ ಧರಿಸುತ್ತಿದ್ದ. ನಾನು ಅದೇ ರೀತಿಯ ಶರ್ಟ್ ಹಾಕಬೇಕೆಂದು ನನ್ನೂರಿನ ಟೇಲರ್ ಭಟ್ಟಿಯನ್ನು ರಾಜೇಶ್ ಖನ್ನಾನ ಹಾಥಿ ಮೇರೆ ಸಾಥಿ ಸಿನೆಮಾಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದೆ. ಆತ ನನ್ನ ಖರ್ಚಿನಲ್ಲಿ ಸಿನೆಮಾ ನೋಡಿ ಬಿಡಿ ಇದೇ ರೀತಿಯ ಶರ್ಟ್ ಹೊಲಿದುಕೊಡ್ತೀನಿ ಅಂತ ಭರವಸೆಯನ್ನು ನೀಡಿ ಬಿಟ್ಟಿದ್ದ. ನಾನೇ ಹಂಡ ಬಂಡದ ಬಟ್ಟೆಯನ್ನು ಖರೀದಿ ಮಾಡಿ ಕೊಟ್ಟು ಶರ್ಟಿಗಾಗಿ ಕಾದು ಕುಳಿತೆ. ಒಂದು ವಾರದ ನಂತರ ಶರ್ಟ್ ಸಿಕ್ಕಾಗ ಸ್ವರ್ಗ ಮೂರೇ ಗೇಣು. ಆದರೆ ಆತ ಕುತ್ತಿಗೆಯನ್ನು ಮುಚ್ಚಬೇಕಾದ ಬಟ್ಟೆಯ ಭಾಗವನ್ನು ಸ್ವಲ್ಪ್ ಜಾಸ್ತಿ ಇಟ್ಟು ಬಿಟ್ಟಿದ್ದ. ಹೀಗಾಗಿ ಅದು ಗಡ್ಡದ ವರೆಗೆ ಬಂದು ನಿಂತು ಬಿಡುತ್ತಿತ್ತು. ಜೊತೆಗೆ ಕುತ್ತಿಗೆಯ ಎಡ ಭಾಗದಲ್ಲಿ ಇರಿಸಿದ್ದ ಬಟನ್ ಗಳು ಅಗಾಗ ಕುತ್ತಿಗೆಯನ್ನು ಕಚ್ಚುತ್ತ ಕಿರಿ ಕಿರಿಯನ್ನು ಉಂಟು ಮಾಡುತ್ತಿದ್ದವು. ಈ ಬಗ್ಗೆ ಅವನಿಗೆ ಹೇಳಿದಾಗ ಇದು ರಾಜೇಶ್ ಖನ್ನಾನ ಶರ್ಟಿನ ತದ್ರೂಪ ಎಂದು ಹೇಳಿ ನನ್ನ ಬಾಯಿ ಮುಚ್ಚಿಸಿದ್ದ. ನಾನೂ ಸಹ ಇದನ್ನು ದೊಡ್ದ ವಿಚಾರ ಮಾಡಲು ಬಯಸದೇ ಶರ್ಟನ್ನು ಪ್ರೀತಿಯಿಂದ ತೊಟ್ಟುಕೊಂಡು ಓಡಾಡ ತೊಡಗಿದೆ. ಊರಿನ ಜನರೆಲ್ಲ ನನ್ನನ್ನು ಉತ್ತರ ಕನ್ನಡ ರಾಜೇಶ್ ಖನ್ನಾ ಎಂದು ಕರೆದು ನನ್ನನ್ನು ಪುಳಕಿತರನ್ನಾಗಿ ಮಾಡುತ್ತಿದ್ದರು. ಆದರೆ ಹಿಂದಿನಿಂದ ಭಟ್ಟರ ಮಗಂದು ಜಾಸ್ತಿಯಾಯ್ತು ಎಂದು ಹೇಳಿಕೊಂಡು ಓಡಾಡುತ್ತಿದ್ದರು.
ಇಂತಹ ಇತಿಹಾಸದ ನಾನು ನಟನಾಗಬೇಕು ಎಂದು ಬೆಂಗಳೂರಿಗೆ ಹೊರಟು ಬಿಟ್ಟಿದ್ದೆ, ಆ ಕೆಂಪು ಡಬ್ಬಿ ಬಸ್ಸು ಕಂಡ ಕಂಡಲ್ಲಿ ನಿಲ್ಲುತ್ತ ಬೆಂಗಳೂರಿಗೆ ಬಂದು ತಲುಪಿದಾಗ ರಾತ್ರಿ ಹತ್ತು ಗಂಟೆ ದಾಟಿ ಹೋಗಿತ್ತು. ಇಡೀ ನಗರ ವಿದ್ಯುತ್ ದೀಪದಿಂದ ಶೃಂಗರಿಸಿಕೊಂಡು ನಿಂತಿತ್ತು. ಹೈಸ್ಕೂಲಿನ ಬಿಳಿ ಅಂಗಿ ಖಾಕಿ ಚೆಡ್ದಿ ಹಾಕಿಕೊಂಡು ಬಸ್ ನಿಲ್ದಾಣದಲ್ಲಿ ಇಳಿದ ನನಗೆ ಮುಂದೇನು ಎಂಬುದು ಗೊತ್ತಿರಲಿಲ್ಲ. ಆದರೆ ಹೊರ ಊರಿಗೆ ಹೋದಾಗ ಹೊಟೇಲ್ಲಿನಲ್ಲಿ ಉಳಿದುಕೊಳ್ಳಬೇಕು ಎಂದು ನಾನು ನಂಬಿಕೊಂಡಿದ್ದೆ. ಆದರೆ ಕೈಯಲ್ಲಿ ಯಾವ ಬ್ಯಾಗು ಇಲ್ಲದೇ ರಸ್ತೆ ಬದಿಯ ಪ್ಯಾದೆಯಂತೆ ಇರುವ ನನಗೆ ರೂಮು ಕೊಡುವವರು ಯಾರು ? ಜೊತೆಗೆ ಕೈಯಲ್ಲಿ ಏಳು ರೂಪಾಯಿ ಇಟ್ಟುಕೊಂಡವ ಬಾದಿಗೆ ರೂಮು ಪಡೆಯುವುದು ಸಾಧ್ಯವೆ ? ಈ ಪ್ರಶ್ನೆಗಳು ನನ್ನನ್ನು ಕಾಡಲೇ ಇಲ್ಲ. ನಾನು ಮೆಜೆಸ್ಟಿಕ್ ನ ಹಲವು ಹೋಟೇಲ್ ಗಳನ್ನು ಸುತ್ತಿದೆ. ರೂಮು ಬೇಕಿತ್ತು ಎಂದು ಹೇಳಿದಾಗ ಅವರೆಲ್ಲ ನನ್ನನ್ನು ನೋಡಿ ನಕ್ಕು ರೂಮಿಲ್ಲ ಎಂದು ಹಿಂದಕ್ಕೆ ಕಳುಹಿಸಿದರು. ಹೀಗೆ ಸುತ್ತುತ್ತಾ ಬಳೇ ಪೆಟೆಯ ಹೋಟೆಲ್ ಒಂದರ ಬಳಿ ನಿಂತೆ. ಯಥಾ ಪ್ರಕಾರ ಅದೇ ಪ್ರಶ್ನೆ: ರೂಮು ಇದೆಯಾ ?
ಅಲ್ಲಿದ್ದ ವ್ಯಕ್ತಿಯೊಬ್ಬ ನನ್ನನ್ನು ನೋಡಿ ಹೇಳಿದ. ನೋಡು ಅಲ್ಲಿ ರೈಲ್ವೆ ಸೇಷನ್ ಇದೆ. ನಿನ್ನಂತವರಿಗೆ ಅದೇ ಹೋಟೆಲ್. ಅಲ್ಲಿ ಹೋಗು ಮಲಗು.
ನನಗೆ ಬೇರೆ ದಾರಿ ಇರಲಿಲ್ಲ. ಕಣ್ಣು ಎಳೆಯುತ್ತಿತ್ತು. ಸರಿ ಎಂದು ರೈಲ್ವೆ ಸ್ಟೆಷನ್ ಗೆ ಬಂದು ಮಲಗಿದೆ. ಬೆಳಿಗ್ಗೆ ಎದ್ದಾಗ ನನ್ನ ಎದುರು ಬೆಂಗಳೂರು ತೆರೆದು ನಿಂತಿತ್ತು. ಆದರೆ ನನ್ನ ಕಿಸೆಯಲ್ಲಿ ಇದ್ದುದು ಕೇವಲ ೭ ರೂಪಾಯಿಗಳು ಮಾತ್ರ. ಈ ಏಳು ರೂಪಾಯಿ ಮೂಲ ಬಂಡವಾಳದೊಂದಿಗೆ ನಾನು ನಟನಾಗಲು ಹೊರಟಿದ್ದೆ.
ರೈಲ್ವೆ ಸ್ಟೇಷನನ್ನಿನ ಪಕ್ಕದ ತಳ್ಳು ಗಾಡಿಯಲ್ಲಿ ೮೦ ಪೈಸೆ ನೀಡಿ ಎರಡು ಇಡ್ಲಿ ತಿಂದಾಗ ಹೊಟ್ಟೆ ತುಂಬಿ ಸಂತೃಪ್ತಿಯ ಭಾವ. ಅಲ್ಲಿಯವರೆಗೆ ಮನೆಯಲ್ಲಿ ಸುದಿಷ್ಟ ತಿಂಡಿ ಭೋಜನ ಮಾಡುತ್ತಲೇ ಬೆಳೆದ ನನಗೆ ಪ್ರಥಮ ಬಾರಿ ಹಸಿವು ಎಂದರೇನು ಎಂಬುದು ತಿಳಿದಿತ್ತು. ಜೊತೆಗೆ ಹಸಿವನ್ನು ತುಂಬಿಸಿಕೊಳ್ಳಲು ಪಡಬೇಕಾದ ಕಷ್ಟ ಏನು ಎಂಬುದು ಅರ್ಥವಾಗಿತ್ತು. ಆದರೂ ನಟನಾಗಬೇಕು ಎಂಬ ನನ್ನ ಕನಸು ಸತ್ತಿರಲಿಲ್ಲ.
ರೈಲ್ವೆ ಸ್ಟೇಷನ್ನಿನ ಪಕ್ಕದಲ್ಲಿ ತಿಂಡಿ ತಿಂದವನು ಸಿನೆಮಾ ಸೇರುವುದಕ್ಕೆ ಮೊದಲು ಯಾವುದಾದರೂ ನಾಟಕ ಕಂಪೆನಿ ಸೇರಿದರೆ ಒಳ್ಳೆಯದು ಎಂಬ ಭಾವನೆ ಬಂತು. ನಟನೆಯಲ್ಲಿ ತರಬೇತಿ ಪಡೆದ ಮೇಲೆ ಚಿತ್ರರಂಗ ಕೈಬೀಸಿ ಕರೆಯುತ್ತಿದೆ ಎಂದು ಯೋಚಿಸುತ್ತಿದ್ದವನಿಗೆ ಪಕ್ಕದಲ್ಲೇ ಕಂಡಿದ್ದು ಮಾಸ್ಟರ್ ಹಿರಣ್ಣಯ್ಯ ಅವರ ನಾಟಕ ಮಂಡಳಿಯ ಬೋರ್ಡು. ಆಗ ಅಲ್ಲಿ ಸುಭಾಷನಗರ ಸಿಟಿ ಬಸ್ ನಿಲ್ದಾಣ ಇರಲಿಲ್ಲ. ಸಿಟಿ ಬಸ್ ಗಳೆಲ್ಲ ಅಲ್ಲಿದ್ದ ಮೈದಾನದಂತೆ ಕಾಣುತ್ತಿದ್ದ ಕೆರೆಯ ಸುತ್ತಲೂ ರಸ್ತೆಯ ಪಕ್ಕದಲ್ಲಿ ಬಸ್ ಗಳನ್ನ ನಿಲ್ಲಿಸುತ್ತಿದ್ದರು. ಈ ಮೈದಾನದಲ್ಲಿ ಟೆಂಟ್ ಹಾಕಿದ್ದು ಹಿರಣ್ಣಯ್ಯ ಮಿತ್ರ ಮಂಡಳಿ.
ಸರಿ ಎಂದು ಹಿರಣ್ಣಯ್ಯ ಮಿತ್ರ ಮಂಡಳಿಯ ಟೆಂಟ್ ಪ್ರವೇಶಿಸಿದೆ. ಅಲ್ಲಿ ಮಾಸ್ಟರ್ ಹಿರಣ್ಣಯ್ಯ ಇರಲಿಲ್ಲ. ಅಲ್ಲಿದ್ದ ಹಿರಿಯರೊಬ್ಬರನ್ನು ಕಂಡು ನಾನು ನಟನಾಗಬೇಕು ಎಂದೆ.
ಅವರು ನನ್ನನ್ನು ಕಾಲಿನಿಂದ ತಲೆಯ ವರೆಗೆ ನೋಡಿ ಮನೆ ಬಿಟ್ಟು ಓಡಿ ಬಂದಿದ್ದೀಯಾ ? ಎಂದು ಪ್ರಶ್ನಿಸಿದರು. ಹೌದು ಎಂದು ತಲೆ ಆಡಿಸಿದೆ.
ಮೊದಲು ಮನೆಗೆ ಹಿಂತಿರುಗಿ ಹೋಗು. ನಿನ್ನ ವಿದ್ಯಾಭ್ಯಾಸವನ್ನು ಮುಗಿಸು. ನಂತರ ನಟನಾಗು ಎಂದು ಬುದ್ದಿ ಮಾತು ಹೇಳಿದರು. ಹಾಗೆ ತಿಂಡಿ ತಿಂದಿದ್ದೀಯಾ ತಾನೆ ಎಂದು ವಿಚಾರಿಸಿಕೊಂಡರು. ಮತ್ತೆ ಅವರು ಶಿಕ್ಷಣದ ಮಹತ್ವವನ್ನು ವಿವರಿಸಿದರು. ಅವರ ಮಾತುಗಳನ್ನು ಕೇಳಿದ ಮೇಲೆ ಯಾಕೋ ನಟನಾಗಬೇಕು ಎಂಬ ನನ್ನ ಆಸೆ ಒಳಗೆ ಸಾಯತೊಡಗಿತು.
ಅವರ ಹೆಸರನ್ನು ಕೇಳದೆ ಹಾಗೆ ತಲೆ ತಗ್ಗಿಸಿ ಅಲ್ಲಿಂದ ಹೊರಟೆ. ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ಊರಿಗೆ ಹಿಂತಿರುಗಿ ಹೋಗಲು ಏನೋ ಮುಜುಗರ. ಹಾಗೆ ಇಲ್ಲಿ ಬದುಕುವುದು ಹೇಗೆ ಎಂಬುದು ಗೊತ್ತಿಲ್ಲ. ಕೈಯಲ್ಲಿ ಇದ್ದುದು ೫ ರೂಪಾಯಿ,
ಅಲ್ಲಿಂದ ಹೊರಟು ಮತ್ತೆ ಬಳೆ ಪೇಟೆಯ ರಾತ್ರಿ ನೋಡಿದ್ದ ಹೋಟೇಲ್ಲಿನ ಎದುರು ಬಂದು ನಿಂತಿದ್ದೆ. ಇಲ್ಲಿಯೇ ಕೆಲಸ ಕೇಳಬೇಕು ಎಂದುಕೊಂಡು ಮೆನೇಜರ್ ಎದುರು ನಿಂತಿ ಕೇಳಿದ್ದು ಏನಾದರೂ ಕೆಲಸ ಇದೆಯಾ ? ಅಂತ.
ಆತ ನನ್ನ ಮುಖವನ್ನು ಒಮ್ಮೆ ದಿಟ್ಟಿಸಿದ. ಅವನದು ಅದೇ ಹಳೆಯ ಪ್ರಶ್ನೆ: ಮನೆ ಬಿಟ್ಟಿ ಓಡಿ ಬಂದೀದಿಯಾ ?
ನೋಡು ನೀನು ಯಾವುದೋ ಒಳ್ಳೆ ಕುಟುಂಬದಿಂದ ಬಂದಂತೆ ಕಾಣ್ತೀಯಾ ? ಸುಮ್ಮನೆ ಮನೆಗೆ ಹಿಂತಿರುಗಿ ಹೋಗು. ಹೊಟೆಲ್ ಕೆಲಸ ನಿನ್ನಂತವರಿಗಲ್ಲ ಎಂಭ ಬುದ್ದಿ ಮಾತನ್ನು ಆತ ಹೇಳಿದ. ಅವನ ಮಾತನ್ನು ಕೇಳಿಸಿಕೊಂಡು ಅಲ್ಲಿಂದ ಹೊರಟೆ.
ನೇರವಾಗಿ ಶಾಂತಲಾ ಸಿಲ್ಕ್ ಹೌಸ್ ನ ಪಕ್ಕದಲ್ಲಿದ್ದ ಸಣ್ನ ಪಾರ್ಕ್ ಗೆ ಬಂದು ಆಕಾಶ ನೋಡುತ್ತ ಮಲಗಿದೆ. ಸಾಧಾರಣವಾಗಿ ಮೊದಲಿನಿಂದಲೂ ನನಗೆ ನಿದ್ರೆಯ ಸಮಸ್ಯೆಯೇ ಇಲ್ಲ. ಎಲ್ಲಿ ಬೇಕಾದರೂ ಮಲಗಿ ನಿದ್ರೆ ಮಾಡುವವನು ನಾನು. ಅಲ್ಲಿಯೂ ಹಾಗೆ ಆಯ್ತು. ಮಲಗಿದ ತಕ್ಷಣ ಗಾಢ ನಿದ್ರೆಗೆ ಜಾರಿ ಬಿಟ್ಟೆ.
ಕಣ್ಣು ಬಿಟ್ಟು ನೋಡಿದಾಗ ರಾತ್ರಿ ೮ ಗಂಟೆ ದಾಟಿತ್ತು. ಹೊಟ್ಟೆ ಚುರು ಚುರು ಅನ್ನುತ್ತಿತ್ತು. ಏನಾದರೂ ತಿನ್ನಬೇಕು ಎಂದು ಅನ್ನಿಸಿದರೂ ಕೈಯಲ್ಲಿರುವ ಹಣ ಖರ್ಚಾಗುತ್ತದೆ ಎಂಬ ಭಯ.
ಅಲ್ಲಿಂದ ಮತ್ತೆ ರೈಲ್ವೆ ಸ್ಟೇಷನ್ನಿಗೆ ತಿರುಗಿ ಬಂದೆ. ಅಲ್ಲಿರುವ ಚಿತ್ರ ವಿಚಿತ್ರ ಜನರನ್ನು ನೋಡುತ್ತ ಬೇಂಚಿನ ಮೇಲೆ ಹಾಗೆ ಕುಳಿತೆ. ಹಸಿವನ್ನು ಹೋಗಲಾಡಿಸಲು ಹೊಟ್ಟೆ ತುಂಬಾ ನೀರು ಕುಡಿದೆ.
ರೈಲು ಬರುತ್ತಿತ್ತು ಹೋಗುತ್ತಿತ್ತು. ಜನ ಎಲ್ಲಿಗೂ ಹೋಗಿ ಬರುವ ತರಾತುರಿಯಲ್ಲಿದ್ದರು. ಬಂದು ಹೋಗುವವರ ಮುಖಗಳನ್ನು ನೋಡುತ್ತ ಹಾಗೆ ಕುಳಿತಿದ್ದೆ. ರಾತ್ರಿ ಹನ್ನೆರಡು ಗಂಟೆಯ ಹೊತ್ತಿಗೆ ರೈಲ್ವೆ ನಿಲ್ದಾಣದಲ್ಲಿ ಜನ ಜಂಗುಳಿ ಕಡಿಮೆಯಾಗಿತ್ತು. ರೈಲ್ವೆ ನಿಲ್ದಾಣದ ಮೂಲೆಯೊಂದರಲ್ಲಿ ಹಾಗೆ ಮಲಗಿ ನಿದ್ರೆ ಮಾಡಿದೆ. ಅಲ್ಲಿ ನಿದ್ರೆ ಮಾಡುತ್ತ ಮಲಗಿದ್ದ ಹತ್ತಾರು ಅನಾಥರ ನಡುವೆ ನಾನು ಒಬ್ಬನಾಗಿದ್ದೆ. ಆ ಗದ್ದಲದ ನಡುವೆಯೇ ನನಗೆ ಯಾವಾಗ ನಿದ್ರೆ ಬಂತೋ ತಿಳಿಯಲಿಲ್ಲ.

1 comment:

Badarinath Palavalli said...

ನಿಮಗೆ ನಾಟಕಗಳನ್ನು ಹೊಗಳುವ ಅಭ್ಯಾಸವಿದೆ ಅಂದುಕೊಂಡಿದ್ದೆ ಆದರೆ ಸ್ವತಃ ನೀವೂ ಒಬ್ಬ ನಟ ಎಂಬುದು ಈಗಷ್ಟೇ ಅರಿವಾಯಿತು ಸಾರ್!

ನೀವು ಮಾಧ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ ನಂತರ ಯಾವತ್ತಾದರೂ ಮಾ|| ಹಿರಣ್ಣಯ್ಯ ಸಿಕ್ಕಿದ್ದರೇ ಸಾರ್? ಅವರಿಗೆ ಬಾಲ್ಯದಲ್ಲಿ ನೀವು ಊರು ಬಿಟ್ಟು ಓಡಿ ಬಂದು ಅವರ ಕಂಪನಿಯಲ್ಲಿ ಅವರಿಲ್ಲ ಹೊತ್ತಲ್ಲಿ ಕೆಲಸ ಕೇಳಿದ್ದು ಹೇಳಿದ್ದೀರ ಸಾರ್? ಆಗ ಅವರ ಪ್ರತಿಕ್ರಿಯೆ ಏನು ಬರ ಬಹುದೋ ಅಲ್ಲವೇ!

ಒಂದು ಸುದೀರ್ಘ ಲೇಖದ ಮುನ್ನುಡಿಯಂತಿದೆ ಈ ಬರಹ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...