Monday, January 30, 2012

ನಾನೂ ಮನೆ ಬಿಟ್ಟು ಓಡಿ ಬಂದಿದ್ದೆ....! - ಭಾಗ ೨ಬೆಳಿಗ್ಗೆ ನಾಲ್ಕು ಗಂಟೆಗೆ ಮೈಕೊಡವಿ ಎದ್ದು ಕುಳಿತುಕೊಳ್ಳುವ ಬೆಂಗಳೂರು ರೈಲ್ವೆ ನಿಲ್ದಾಣ. ಬದುಕಿನ ಗಾಡಿ ಓಡಿಸುವುದಕ್ಕಾಗಿ ಏನೆಲ್ಲಾ ಮಾಡುವವರು.
೯ನೆಯ ತರಗತಿಯ ಲೋಕ ಜ್ನಾನವಿಲ್ಲದ ನಾನು ಎಲ್ಲವನ್ನೂ ನೋಡುತ್ತಿದ್ದೆ. ಆಗಲೇ ನನಗೆ ಅನ್ನಿಸಿದ್ದು ಬದುಕು ಎನ್ನವುದು ಈ ರೈಲ್ವೆ ಸ್ಟೇಷನ್ನಿನಂತೆ. ಇಲ್ಲಿ ಬಂದವರಿಗೆ ಯಾರು ಪರಿಚಿತರು ? ಯಾರು ಅಪರಿಚತರು ? ಪರಿಚಿತರು ಇದ್ದಕ್ಕಿದ್ದ ಹಾಗೆ ಅಪರಿಚಿತರಾಗುತ್ತಾರೆ. ಅಪರಿಚತರು ಪರಿಚಿತರಾಗುತ್ತಾರೆ.
ಈಗಲೂ ನಾನು ಆಗಾಗ ಹೇಳುವ ಒಂದು ಮಾತಿಗೆ ಬೆಂಗಳೂರಿನ ರೈಲ್ವೆ ನಿಲ್ದಾಣವೇ ಸ್ಪೂರ್ತಿ ಎಂದು ಈಗ ನನಗೆ ಅನ್ನಿಸುತ್ತದೆ. ಅದೆಂದರೆ ನಾವು ಸಹ ಒಂದು ರೈಲು. ನಾವು ಹೋಗುತ್ತಲೇ ಇರುತ್ತೇವೆ. ನಮ್ಮ ರೈಲಿಗೆ ಯಾರ್ಯಾರೋ ಬಂದು ಹತ್ತುತ್ತಾರೆ. ತಮ್ಮ ನಿಲ್ದಾಣ ಬಂದ ತಕ್ಷಣ ಇಳಿದು ಹೋಗುತ್ತಾರೆ. ಅದ್ದರಿಂದ ಬಂದು ಇಳಿದು ಹೋಗುವವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ನಮ್ಮ ರೈಲು ಹತ್ತುವ ಎಲ್ಲ ಜನ ಒಂದೇ ರೀತಿ ಇರುವುದಿಲ್ಲ. ಕೆಲವರು ರೈಲನ್ನೇ ತಮ್ಮ ಮನೆ ಎಂದು ತಿಳಿದುಕೊಂಡರೆ ಕೆಲವರು ಹೊಲಸು ಮಾಡುವುದಕ್ಕಾಗಿಯೇ ಬಂದವರಂತೆ ವರ್ತಿಸುತ್ತಾರೆ. ಇವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಕ್ಕೆ ರೈಲಿಗೆ ವ್ಯವಧಾನವಿಲ್ಲ..!
ನಾನು ಮನೆ ಬಿಟ್ಟು ಬಂದ ಮೂರನೆಯ ದಿನ ಅದು. ಹಲವು ರೀತಿಯ ಕನಸುಗಳನ್ನು ಹೊತ್ತು ಬಂದ ನನಗೆ, ಇಲ್ಲಿಗೆ ಬರುವುದಕ್ಕೆ ಮೊದಲು ಬೆಂಗಳುರು ಕನಸುಗಳನ್ನು ಸಾಕಾರಗೊಳಿಸುವ ಮಹಾನ್ ನಗರವಾಗಿ ಕಂಡಿತ್ತು. ಆದರೆ ಇಲ್ಲಿನ ಎರಡು ದಿನಗಳ ಅನುಭವ ಬೆಂಗಳೂರು ಕನಸುಗಳನ್ನು ನೀರು ಹಾಕಿ ಪೋಷಿಸಲಾರದು. ಇದು ಕನಸುಗಳನ್ನು ಕೊಲ್ಲುವ ಕಟುಕ ನಗರ ಎಂದು ಅನ್ನಿಸತೊಡಗಿತು.
ನನ್ನ ಊರು, ಊರಿನ ಜನ, ಮೈದುಂಬಿ ಹರಿಯುವ ನದಿ ಗುಡ್ಡ ಬೆಟ್ಟ ಎಲ್ಲ ನೆನಪಗಿ ಗೊತ್ತಿಲ್ಲದಂತೆ ಕಣ್ಣೀರು ಹರಿಯ ತೊಡಗಿತ್ತು.
ನಾವೆಲ್ಲ ಗುಡ್ದ ಬೆಟ್ಟಗಳಲ್ಲಿ ಓಡಾಡಿ ತಿನ್ನುತ್ತಿದ್ದ ಕವಳಿ ಹಣ್ಣು, ಬಿಕ್ಕೆ ಹಣ್ಣು, ಹಿಡಿಯುತ್ತಿದ್ಸ ಜೇನು ಹೀಗೆ ಒಂದೊಂದೆ ನೆನಪು ಮುಂದೆ ಬಂದು ನರ್ತಿಸತೊಡಗಿದಾಗ ಊರಿಗೆ ತಿರುಗಿ ಹೋಗುವ ಬಯಕೆ ಹೆಚ್ಚಾಗತೊಡಗಿತು. ಈ ನಗರ ಬದುಕು ನನ್ನದಲ್ಲ. ಇಲ್ಲಿ ನಾನು ಬದುಕಲಾರೆ. ಇಲ್ಲಿ ಹೋರಾಟ ಮಾಡಲಾರೆ ಎಂದು ಒಳ ಮನಸ್ಸು ಹೇಳತೊಡಗಿದಾಗ ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ನಡೆದೆ.
ಆದರೆ ಊರಿಗೆ ತಿರುಗಿ ಹೋಗುವುದಕ್ಕೆ ನನ್ನ ಬಳಿ ಹಣ ಇಲ್ಲ. ಬಸ್ ಚಾರ್ಜ್ ಗೆ ಬೇಕಾದಷ್ಟು ಹಣ ದುಡಿಯೋಣ ಎಂದುಕೊಂಡರೆ ಯಾರೂ ಕೆಲಸ ನೀಡುವುದಿಲ್ಲ.
ನನ್ನ ಕಿಸೆಯನ್ನು ಮುಟ್ಟಿ ನೋಡಿಕೊಂಡೆ. ಅಲ್ಲಿ ಮೂರು ರೂಪಾಯಿ ೭೫ ಪೈಸೆ ಹಣ ಉಳಿದಿತ್ತು. ಈ ಹಣದಲ್ಲಿ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಹೋಗುವುದು ನಂತರ ಮುಂದೇನು ಎಂದು ತೀರ್ಮಾನಿಸುವುದು ಎಂದುಕೊಂಡವ ಶಿವಮೊಗ್ಗಗೆ ಹೊರಟ ಬಸ್ ಹತ್ತಿದೆ. ಮೂರು ರೂಪಾಯಿ ಹಣವನ್ನು ಕಂಡಕ್ಟರ್ ಕೈಗೆ ನೀಡಿ ಟಿಕೆಟ್ ನೀಡುವಂತೆ ಕೇಳಿಕೊಂಡೆ. ಆತ ನನ್ನ ಮುಖವನ್ನು ನೋಡಿ ಗುಬ್ಬಿಗಾ ? ಎಂದು ಪ್ರಶ್ನಿಸಿದ. ಹೌದು ಎಂದೆ. ಗುಬ್ಬಿ ಎನ್ನುವ ಊರು ಎಲ್ಲಿದೆ ಎಂಬುದು ನನಗೆ ತಿಳಿಯದಿದ್ದರೂ ಅದು ಬೆಂಗಳೂರು ಶಿವಮೊಗ್ಗ ನಡುವೆ ಎಲ್ಲಿಯೋ ಇದೆ ಎಂಬುದರಲ್ಲಿ ನನಗೆ ಯಾವ ಅನುಮಾನವೂ ಇರಲಿಲ್ಲ. ಜೊತೆಗೆ ಗುಬ್ಬಿಯಿಂದ ಶಿವಮೊಗ್ಗೆಗೆ ಎಷ್ಟು ದೂರ ಎಂಬುದು ನನಗೆ ತಿಳಿದಿರಲಿಲ್ಲ.
ಅದು ಬೆಳಗಿನ ಕೆಂಪು ಡಬ್ಬಿ ಬಸ್ಸು. ಅದನ್ನು ಶಾಲಾ ಬಸ್ ಅಂತಾನೂ ಕರೀತಿದ್ದರು. ಅದು ಸಮವಸ್ತ್ರ ಧರಿಸಿ ನಿಂತ ಶಾಲಾ ಮಕ್ಕಳು ಕಂಡ ತಕ್ಷಣ ನಿಂತು ಬಿಡುತ್ತಿತ್ತು. ಅವರನ್ನು ಹತ್ತಿಸಿಕೊಂಡು ಓಲಾಡುತ್ತ, ತೇಲಾಡುತ್ತ ಮುಂದುವರಿಯುತ್ತಿತ್ತು. ನಾನು ಅ ಮಕ್ಕಳನ್ನು ನೋಡುತ್ತಿದ್ದ ಹಾಗೆ ಮನಸ್ಸಿನಲ್ಲಿ ಒಂದು ರೀತಿಯ ತಳಮಳ. ನಾನೂ ಸಹ ಅವರಂತೆ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಹೋಗುವವನಾಗಿದ್ದೆ. ಆದರೆ ನಾನು ಹೈಸ್ಕೂಲಿಗೆ ಹೋಗುವಾಗ ಒಬ್ಬಂಟಿ. ನನ್ನ ಜೊತೆಗೆ ಹೈಸ್ಕೂಲಿಗೆ ಬರುವವರು ಯಾರೂ ಇರಲಿಲ್ಲ.
ಬೆಳಿಗ್ಗೆ ಎಂಟು ಕಾಲಿಗೆ ಮನೆಯಿಂದ ಹೊರಟರೆ ಸುಮಾರು ಒಂದು ತಾಸಿನ ದಾರಿ. ಮನೆಯ ಎದುರಿನ ಅಡಿಕೆ ತೋಟವನ್ನು ದಾಟಿ ಎದುರಿನ ದೊಡ್ಡ ಗುಡ್ದವನ್ನು ಹತ್ತಿ ಹೋಗಬೇಕು. ಗುಡ್ಡ ಎಂದರೆ ಅದು ಬೃಹದಾಕಾರದ ಗುಡ್ಡ. ಆ ಗುಡ್ದವನ್ನು ಹತ್ತುವುದೆಂದರೆ ಹಿಮಾಲಯವನ್ನು ಏರಿದಂತೆ. ದಾರಿಯ ಮಧ್ಯದಲ್ಲಿ ಕಾಣುತ್ತಿದ್ದ ನವಿಲಿನ ಹಿಂಡು. ಅಲ್ಲಲ್ಲಿ ಓಡುತ್ತ ಮರೆಯಾಗುವ ನರಿಗಳು. ಎಲ್ಲಿಂದಲೂ ಕೇಳಿ ಬರುತ್ತಿದ್ದ ಬೇರೆ ಬೇರೆ ಪ್ರಾಣಿಗಳ ಕೂಗು. ಅದೆಲ್ಲ ಎಷ್ಟು ಅಪ್ಯಾಯಮಾನ ಎನ್ನಿಸುತ್ತಿತ್ತೆಂದರೆ ಕೆಲವೊಮ್ಮೆ ನಾನು ಯಾವುದೋ ಮರವೊಂದನ್ನು ಏರಿ ಅಲ್ಲಿಯೇ ಕುಳಿತು ಬಿಡುತ್ತಿದ್ದೆ. ಹಾಗೆ ಕೆಲವೊಮ್ಮೆ ಕಾಡಿನ ಮಧ್ಯೆ ಇರುವ ಯಾವುದೇ ಮರವೊಂದರ ಬುಡದಲ್ಲಿ ಮಲಗಿ ನಿದ್ರೆ ಮಾಡಿ ಬಿಡುತ್ತಿದ್ದೆ. ಸಂಜೆಯಾಗುವ ಹೊತ್ತಿಗೆ ಎಚ್ಚರಗೊಂಡು ಹಾಗೆ ಮನೆಗೆ ಹಿಂತಿರುಗಿ ಬಿಡುತ್ತಿದ್ದೆ.
ಆ ಕೆಂಪು ಡಬ್ಬಿ ಬಸ್ಸಿನಲ್ಲಿ ಹೋಗುತ್ತಿದ್ದಾಗ ಇದೆಲ್ಲ ನೆನಪಾಗುತ್ತಿತ್ತು. ಹಾಗೆ ಬೆಂಗಳೂರು ಎಂಬ ಕಾಂಕ್ರಿಟ್ ಕಾಡಿಗೆ ಬಂದ ಮೇಲೆ ನಮ್ಮ ಊರು, ನಮ್ಮ ಕಾಡು ಎಷ್ಟು ಚಂದ ಎಂಬುದು ಗೊತ್ತಾಗಿತ್ತು. ನಗರ ಎನ್ನುವುದು ಅಡಗೋಲಜ್ಜಿ ಕಥೆಯ ಬ್ರಹ್ಮರಾಕ್ಷಸ ಎಂದು ಅನ್ನಿಸತೊಡಗಿದ್ದು.
ಬಸ್ಸಿನ ಕಿಡಕಿಯ ಬಳಿ ಕುಳೀತು ಹೊರಗೆ ನೋಡುತ್ತಿದ್ದ ನನಗೆ ದಾರಿಯಲ್ಲಿ ಎಲ್ಲೂ ಗುಡ್ಡ ಬೆಟ್ತಗಳೇ ಇಲ್ಲ, ಕಾಡು ಇಲ್ಲ ಎಂದು ಆಶ್ಚರ್ಯವಾಗುತ್ತಿತ್ತು. ಎಲ್ಲಿ ನೋಡಿದರೂ ಬಯಲು. ದೂರದಲ್ಲಿ ಕಾಣುವ ಮನೆಗಳು ಅಲ್ಲಿ ಊರೊಂದಿದೆ ಎಂಬುದನ್ನು ಸಾರಿ ಹೇಳುತ್ತಿದ್ದವು.
ಬೆಳಿಗ್ಲೆ ೯ ಗಂಟೆ ೪೫ ನಿಮಿಷಕ್ಕೆ ಬಸ್ಸು ಗುಬ್ಬಿಗೆ ಬಂದು ನಿಂತಿತು. ಕಂಡಕ್ಟರ್ ಗುಬ್ಬಿ ಗುಬ್ಬಿ ಎಂದು ಕೂಗಿ ಹೇಳುತ್ತ ನನ್ನತ್ತಲೇ ನೋಡುತ್ತಿದ್ದಾನೆ ಎಂದು ಅನ್ನಿಸಿ ಬಸ್ ನಿಂದ ಕೆಳಕ್ಕೆ ಇಳಿದೆ. ಇಳಿಯುತ್ತಿದ್ದಂತೆ ನನಗೆ ಗೊತ್ತಾದ ಅಂಶ ಎಂದರೆ ಗುಬ್ಬಿ ಎನ್ನುವುದು ತುಮಕೂರು ನಗರದ ಸಮೀಪ ಇರುವ ಒಂದು ಸಣ್ಣ ಪಟ್ಟಣ ಎಂಬುದು. ಅಂದರೆ ಶಿವಮೊಗ್ಗ ಬಸ್ಸ್ ಹತ್ತಿ ನಾನು ಬಂದಿದ್ದರೂ ತುಂಬಾ ದೂರವೇನೂ ಬಂದಿರಲಿಲ್ಲ. ಇನ್ನು ನಾನು ಸಾಗಬೇಕಾದ ದಾರಿ ತುಂಬಾ ದೂರವಿದೆ ಎಂದು ಅನ್ನಿಸಿ ಹೋಗುವುದು ಹೇಗೆ ಎಂಬುದೇ ಅರ್ಥವಾಗಲಿಲ್ಲ. ಆದರೆ ಆ ಸ್ಥಿತಿಯಲ್ಲೂ ನಾನು ಎದೆ ಗುಂದಿರಲಿಲ್ಲ.
ಆ ರಾಜ್ಯ ಹೆದ್ಧಾರಿಯಲ್ಲಿ ಶಿವಮೊಗ್ಗ ದಿಕ್ಕಿನ ಕಡೆಗೆ ಹಾಗೆ ನಡೆದು ಹೊರಟೆ. ದಿನಾಲು ಹತ್ತಾರು ಕಿಮೀ ನಡೆದ ಅಬ್ಯಾಸವಿದ್ದ ನನಗೆ ನಡೆಯುವುದು ಕಷ್ಟ ಎಂದೂ ಅನ್ನಿಸಲಿಲ್ಲ.
ನಮ್ಮ ಮನೆಯಿಂದ ಸಿದ್ದಾಪುರ ಪೇಟೆಯಲ್ಲಿರುವ ಸಿದ್ದಿವಿನಾಯಕ ಹೈಸ್ಕೂಲಿಗೆ ನಾನು ಹೋಗುತ್ತಿದ್ದುದು. ಸಿದ್ದಾಪುರಕ್ಕೆ ಕಾಲು ದಾರಿಯಲ್ಲಿ ಹೋದರೆ ಸುಮಾರು ೬ ಕಿಮೀ ದೂರ. ಅಂದರೆ ಹಸ್ಕೂಲಿಗೆ ಹೋಗಿ ಬರುವುದೆಂದರೆ ಸುಮಾರು ೧೨ ಕಿ ಮೀ ನಡಿಗೆ. ಚೆನ್ನಮಾವ್, ಅವರಗುಪ್ಪ ಊರುಗಳನ್ನು ದಾಟಿ, ಎರಡು ಗದ್ದೆ ಬೈಲು ಹಾದು ಹೋಗಬೇಕು. ಪ್ರತಿದಿನದ ಈ ನಡುಗೆಯಿಂದ ಕಾಲಿನಲ್ಲಿ ನಡೆಯುವ ಶಕ್ತಿ ಇತು. ಎಷ್ಟು ದೂರ ನಡೆದರೂ ಆಯಾಸವಾಗುತ್ತಿರಲಿಲ್ಲ.
ಹೀಗಾಗಿ ಗುಬ್ಬಿಯಿಂದ ನಾನು ಶಿವಮೊಗ್ಗ ರಸ್ತೆಯಲ್ಲಿ ನಡೆದು ಹೊರಟೆ. ಹಿಂದಿನ ದಿನ ರಾತ್ರಿಯಿಂದ ಹೊಟ್ಟೆಗೆ ಏನೂ ಬಿದ್ದಿರಲಿಲ್ಲ. ಹೀಗಾಗಿ ಹೊಟ್ಟೆಯ ಒಳಗೆ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ಆದರೂ ನಾನು ನಡೆಯುತ್ತಿದ್ದೆ. ಸುಮಾರು ಹತ್ತು ಹದಿನೈದು ಕಿಮೀ ನಡೆದಿರಬೇಕು. ಪಕ್ಕದಲ್ಲಿ ಒಂದು ತೆಂಗಿನ ತೋಟ. ಅದರ ಸ್ವಾಗತ ಕಮಾನಿನ ಎದುರು ಧಣಿವಾರಿಸಿಕೊಳ್ಳಲು ಕುಳಿತ. ಆ ತೋಟದಲ್ಲಿ ಏಳೇನೀರು ತೆಗೆಯುತ್ತಿದ್ದನ್ನು ಹಾಗೆ ನೋಡುತ್ತ ಕುಳಿತೆ. ಒಳಗೆ ತೋಟದಲ್ಲಿ ಇದ್ದವರು ಸುಸ್ತಾಗಿ ಕುಳಿತ ನನ್ನನ್ನು ನೋಡಿದರು. ಅವರಿಗೆ ಏನು ಅನ್ನಿಸಿತೋ ಏನೋ. ಅಜ್ಜನೊಬ್ಬ ಎರಡು ಏಳೇ ನೀರು ಹಿಡಿದುಕೊಂಡು ಗೇಟಿನ ಬಳಿ ಬಂದ. ನನ್ನನ್ನು ಏನು ಕೇಳದೇ ಒಂದು ಏಳೆ ನೀರು ಒಡೆದು ನೀಡಿದ. ನಾನು ಮರು ಮಾತನಾಡದೇ ಅವನ ಕೊಟ್ಟ ಏಳೆನೀರು ಕುಡಿದೆ. ಆತ ತಕ್ಷಣ ಇನ್ನೊಂದು ಏಳೇನೀರು ಒಡೆದು ಕೊಟ್ಟ. ಅದನ್ನೂ ಕುಡಿದೆ. ಹೋದ ಜೀವ ತಿರುಗಿ ಬಂದಂತಾಯಿತು.
ಎಷ್ಟು ಎಂದು ಕೇಳುತ್ತ, ನನ್ನ ಖಾಲಿ ಜೇಬನ್ನು ತಡವಿದೆ.
ಆತ ಇಲ್ಲ, ಇದನ್ನು ಹಣಕ್ಕಾಗಿ ನೀಡಲಿಲ್ಲ. ನೀನು ಸುಸ್ತಾಗಿದ್ದೆ. ಇದು ನನ್ನದಲ್ಲ ದೇವರು ಕೊಟಿದ್ದು. ನಿನಗೆ ಕೊಟ್ಟೆ ಎಂದು ಹೇಳಿದವನೇ ತಿರುಗಿಯೂ ನೋಡದೇ ಅಲ್ಲಿಂದ ಮತ್ತೆ ತೋಟದೊಳಗೆ ನಡೆದ.
ನನಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ.
ಮತ್ತೆ ದೇಹದಲ್ಲಿ ಶಕ್ತಿ ತುಂಬಿಕೊಂಡಿತ್ತು. ಇನ್ನೂ ನೂರಾರು ಕಿಮೀ ನಡೆಯಬಲ್ಲೆ ಎಂಬ ಧೈರ್ಯ ಕೂಡ ಬಂದಿತ್ತು. ನಾನು ನನ್ನ ಈ ಪಯಣವನ್ನು ಮುಂದುವರಿಸಿದೆ.
ನಾನು ನಡೆಯುತ್ತಲೇ ಇದ್ದೆ. ಸಮಯ ಎಷ್ಟು ಎಂದು ಗೊತ್ತಾಗುವಂತಿರಲಿಲ್ಲ. ನನ್ನ ಬಳಿ ವಾಚ್ ಕೂಡ ಇರಲಿಲ್ಲ. ಸೂರ್ಯ ನೆತ್ತಿಯಿಂದ ಕೆಳಕ್ಕೆ ಇಳಿಯುವ ಹೊತ್ತಿಗೆ ಮತ್ತೆ ಸುಸ್ತಾಗಿತ್ತು. ಮತ್ತೆ ದಣಿವಾರಿಸಿಕೊಳ್ಳಲು ಮರದ ಕೆಳಗೆ ಕುಳಿತೆ. ಸಂಜೆಯ ಕತ್ತಲು ಸಾವಕಾಶವಾಗಿ ಎಲ್ಲೆಡೆಗೆ ಆವರಿಸಿಕೊಳ್ಳುತ್ತಿತ್ತು. ರಸ್ತೆ ಆ ಕತ್ತಲೆಯಲ್ಲಿ ಹೆಣದ ಹಾಗೆ ಮಲಗಿತ್ತು. ಅಕ್ಕ ಪಕ್ಕದ ಮರಗಳು ಕಪ್ಪನೆಯ ಆಕೃತಿಗಳಾಗಿ ಕಾಣುತ್ತಿದ್ದವು.
ನಾನು ಮತ್ತೆ ಎದ್ದು ನಡೆಯತೊಡಗಿದೆ. ಸುಮಾರು ಅರ್ಧ ಗಂಟೆ ನಡೆದಿರಬೇಕು. ಸೈಕಲ್ಲಿನ ಮೇಲೆ ವ್ಯಕ್ತಿಯೊಬ್ಬ ಬರುವುದು ಕಾಣಿಸಿತು. ಸುಮ್ಮನೆ ಅವನತ್ತ ನೋಡಿ ಕೈ ಅಡ್ದ ಮಾಡಿದೆ. ಆತ ನನ್ನತ್ತ ನೋಡಿ ಎಲ್ಲಿಗೆ ಅಂದ. ನಾನು ಶಿವಮೊಗ್ಗ ಎಂದು ಉತ್ತರಿಸಿದೆ.
ಆತ ಬೇರೆ ಏನೂ ಕೇಳಲಿಲ್ಲ. ನಾನು ಅರಸಿಕೆರೆಗೆ ಹೋಗುತ್ತಿದ್ದೇನೆ. ಅಲ್ಲ್ಲಿಯ ವರೆಗೆ ನಿನ್ನನ್ನು ಬಿಡುತ್ತೇನೆ. ಅಲ್ಲಿಂದ ಯಾವುದಾದರೂ ಲಾರಿಯನ್ನು ಹಿಡಿದುಕೊಂಡು ಶಿವಮೊಗ್ಗೆಗೆ ಹೋಗು ಎಂದ. ನಾನು ಸರಿ ಎಂದು ಅವನ ಸೈಕಲ್ಲಿನ ಹಿಂದೆ ಕುಳಿತೆ. ಆತ ಸೈಕಲ್ ತುಳಿಯುತ್ತ ಮಾತನಾಡತೊಡಗಿದ.
ಆತ ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದವನು. ಅರಸೀಕೆರೆಯಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುವವನು. ಪಕ್ಕದ ಹಳ್ಳಿಗೆ ಸಾಲ ವಸೂಲಿಗೆ ಹೋದವನು ಈಗ ಅರಸೀಕೆರೆಗೆ ಹಿಂತಿರುಗುತ್ತಿದ್ದಾನೆ. ಇಷ್ಟೇ ಅವನ ಮಾತಿನ ತಾತ್ಪರ್ಯ.
ನನ್ನ ಬಗ್ಗೆ ಆತ ಕೇಳಿದ. ನಾನು ನನ್ನ ಊರು ಯಾವುದು ಎಂದು ಹೇಳಿದೆ. ಆದರೆ ಬೆಂಗಳೂರಿಗೆ ಬಂದಿದ್ದು ಕೆಲಸವೊಂದರ ಸಂದರ್ಶನಕ್ಕೆ. ಆದರೆ ನನ್ನ ಪಿಕ್ ಪಾಕೇಟ್ ಅಯ್ತು ಎಂದು ಸುಳ್ಳನ್ನು ಸೃಷ್ಟಿಸಿ ಹೇಳಿದೆ. ಆತ ನನ್ನ ಮಾತನ್ನು ನಂಬಿದನೋ ಬಿಟ್ಟನೋ. ಬೇರೆ ಮಾತು ಆಡಲಿಲ್ಲ.
ನಾವು ಅರಸಿಕೆರೆ ತಲುಪಿದಾಗ ರಾತ್ರಿ ೧೦ ಗಂಟೆ ಆಗಿತ್ತು. ಆತ ಬಸ್ ನಿಲ್ದಾಣದ ಬಳಿ ನನ್ನನ್ನು ಬಿಟ್ಟು ರಾತ್ರಿ ಇಲ್ಲೇ ಮಲಗು. ಬೆಳಿಗ್ಗೆ ಶಿವಮೊಗ್ಗೆಗೆ ಹೋಗುವ ಲಾರಿಗಳು ಸಿಗ್ತವೆ. ಲಾರಿ ಹತ್ತಿ ಶಿವಮೊಗ್ಗೆಗೆ ಹೋಗು ಎಂದು ಸಲಹೆ ನೀಡಿ ಹೊರಟು ಹೋದ.
ನಾನು ಆ ರಾತ್ರಿ ಅರಸೀಕೆರೆಯ ಬಸ್ ನಿಲ್ದಾಣದಲ್ಲಿ ಕಳೆಯಲು ನಿರ್ಧರಿಸಿದೆ. ಹಾಗೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಹಾಕಿದ ಬೇಂಚಿನ ಮೇಲೆ ಮಲಗಿದೆ. ಹೊಟ್ಟೆ ಖಾಲಿಯಾಗಿ ಚುರುಕ್ ಅನ್ನುತ್ತಿದ್ದರೂ ನಡೆದ ಆಯಾಸದಿಂದಾಗಿ ಕಣ್ಣು ಏಳೆಯುತ್ತಿತ್ತು. ನಾನು ಹಾಕಿಕೊಂಡಿದ್ದ ಚಪ್ಪಲಿಯನ್ನು ತೆಗೆದು ಬೆಂಚಿನ ಕೆಳಗಿಟ್ಟು ಅಲ್ಲಿಯೇ ಮಲಗಿ ನಿದ್ರೆ ಮಾಡಿದೆ.
ನಾನು ಕಣ್ಣು ಬಿಟ್ಟಾಗ ಅರಸೀಕೆರೆಯ ಬಸ್ ನಿಲ್ದಾಣದಲ್ಲಿ ಜನರ ಓಡಾಟ ಪ್ರಾರಂಭವಾಗಿತ್ತು. ಎದ್ದು ಸಾರ್ವಜನಿಕ ನಲ್ಲಿಯಲ್ಲಿ ನೀರು ಕುಡಿದೆ. ಮುಖ ತೊಳೆದುಕೊಂಡೆ. ತಕ್ಷಣ ಚಪ್ಪಲಿಯ ನೆನಪಾಯಿತು. ಆ ಕಲ್ಲು ಬೆಂಚಿನ ಕೆಳಗೆ ನೋಡಿದರೆ ನನ್ನ ಚಪ್ಪಲಿ ಇರಲಿಲ್ಲ. ಅದನ್ನು ಯಾರು ಕದ್ದೊಯ್ದಿದ್ದರು. ನನ್ನ ಚಪ್ಪಲಿ ಕಳ್ಳತನವಾಗಿದೆ ಎಂದು ಯಾರನ್ನು ಕೇಳಲಿ ? ಜೊತೆಗೆ ಚಪ್ಪಲಿ ಇಲ್ಲದೇ ಟಾರು ರಸ್ತೆಯಲ್ಲಿ ನಡೆಯುವುದು ಹೇಗೆ ?
ಆದರೂ ನಾನು ನಡೆಯಲೇಬೇಕಿತ್ತು. ಬರೀ ಕಾಲಿನಲ್ಲಿ ಶಿವಮೊಗ್ಗ ರಸ್ತೆಯಲ್ಲಿ ನಡೆಯತೊಡಗಿದೆ. ಹಸಿವೆಯಾಗಿ ಹೊಟ್ಟೆ ತೊಳಸಿದಂತಾಗುತ್ತಿತ್ತು. ಕಾಲು ಸುಡುತ್ತಿತ್ತು. ಆದರೂ ನಡೆಯದೇ ನನಗೆ ಬೇರೆ ದಾರಿ ಇರಲಿಲ್ಲ.

No comments: