Sunday, February 12, 2012

ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?

ಪ್ರೀತಿಯ ಹೆದ್ದಾರಿಯಲ್ಲಿ ಮೈಲುಗಲ್ಲುಗಳಿಲ್ಲ.
ಅದು ಗುರಿಯಿಲ್ಲದ ಮುಗಿಯದ ದಾರಿ.
ಅಲ್ಲಿ ಸಾಗಲು ಬೇಕಿಲ್ಲ. ಬಸ್ಸು ಕಾರು, ಯಾರದೋ ಕಾರುಬಾರು
ಅಲ್ಲಿ ನಡುಗೆಯೇ ಪ್ರಧಾನ, ಅಲ್ಲಿಲ್ಲ ಹಂಗಿನರಮನೆಯ ವಾರಸುದಾರರು.
ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?

ಕಾಣುತ್ತಿದೆ, ಹೆದ್ದಾರಿಯಲ್ಲಿ ನೂರೆಂಟು ಹೆಜ್ಜೆ ಗುರುತುಗಳು.
ಅಲ್ಲಲ್ಲಿ, ಅಸ್ಥಿಪಂಜರದ ಗೂಡುಗಳು, ನೆನಪಿನ ಮಾಡುಗಳು,
ಸಮಾಧಿಯ ಮೇಲಿನ ಗುಲಾಬಿ ಹೂವುಗಳು. ಕೇಳುವ ಪಿಸು ಮಾತುಗಳು.
ಸಲೀಮ್ ಅನಾರ್ಕಲಿಯ ದುರಂತ, ರೋಮಿಯೋ ಜ್ಯುಲಿಯೆಟ್ ಳ ಬಿಸಿಯಪ್ಪುಗೆ,
ಎಲ್ಲವೂ ಇಲ್ಲಿವೆ, ಇದು ಮುಗಿಯದ ಅಂಕ.
ಪ್ರೀತಿ ಎಂದರೆ ಹಾಗೆ ತಾನೆ ? ಅದು ಬರೀ ಪ್ರೀತಿ ತಾನೆ ?

ಯಾರು ಏನು ಹೇಳಿದರೇನು ಪ್ರೀತಿಸುವವರಿಗೆ ?
ಅವರಿಗೆ ಅವರದೇ ದಾರಿ. ಅಪ್ಪ ಅಮ್ಮನೇ ಅವರಿಗೆ ವ್ಯಾಪಾರಿ.
ಪ್ರೀತಿಸುವ ಹೃದಯಕ್ಕೆ ಮಾತು ಅರ್ಥವಾಗುವುದಿಲ್ಲ, ತರ್ಕ ಬೇಕಿಲ್ಲ.
ಅದು ಮಾತಿಗೆ, ತರ್ಕಕ್ಕೆ ವಾದಕ್ಕೆ ಸಿಗುವ ವಿಚಾರವೂ ಅಲ್ಲ.
ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?

ಪ್ರೀತಿಯ ಹೆದ್ದಾರಿಯಲ್ಲಿ ನೂರೆಂಟು ಕೊರಕಲು, ಹಾದಿ ಮಾತ್ರ ಸವಕಲು
ಆದರೂ ಹೆಜ್ಜೆ ಇಡುವುದು ಕಷ್ಟ, ನೋಡಬೇಕಲ್ಲ ಆತ್ಮಬಲದತ್ತ ?
ಸಮುದ್ರ ಸೆಳೆತಕ್ಕೆ ಅದರ ಎಳೆತಕ್ಕೆ ಯಾರಪ್ಪಣೆ ಬೇಕಿಲ್ಲ.
ಹುಣ್ಣಿಮೆಯ ಚಂದಿರನ ನೋಡಿ ಉಬ್ಬುವ ದಬ್ಬುವ ಸಾಗರಕ್ಕೆ
ಪ್ರೀತಿ ಇರಲೇಬೇಕಲ್ಲ ? ಯಾಕೆಂದರೆ,
ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?

ಹರಿವ ನದಿಗೆ, ನೀಲಿ ಅಕಾಶಕ್ಕೆ, ಬೀಸುವ ಗಾಳಿಗೆ
ಹಕ್ಕಿಗಳ ಚಿಲಿಪಿಲಿಗೆ, ಪ್ರಾಣಿಗಳ ನಲಿವಿಗೆ
ಅಬ್ಬರಿಸುವ ಗುಡುಗಿಗೆ,ರೌದ್ರ ಗಂಭೀರದ ಕಾಡಿಗೆ
ಕಿಚ್ಚು ತುಂಬಿದ ಅಗ್ನಿಗೆ, ಕಲಿಸಿದವರು ಯಾರು ?
ಪ್ರೀತಿ ಎಂದರೆ ಹಾಗೆ, ಬರೀ ಪ್ರೀತಿ ತಾನೆ ?

ವಾಲೆಂಟೈನ್ ಗೆ ಮೇಘಧೂತನ ಸಾಂಗತ್ಯ,
ಅವನ ಹಾಡಿಗೆ ಇವನು ಹಾಕುವನ ತಾಳ.
ಅವನು ನಡೆವಾಗ ಇವನು ನೋಡುವನು
ಇವನು ನಡೆವಾಗ ಅವನು ನೋಡುವನು.
ಅವನು ಇವನು ಇಬ್ಬರೂ ನಡೆದವರೇ ಅಲ್ಲವೇ
ಪ್ರೀತಿಯ ಹೆದ್ದಾರಿಯಲ್ಲಿ ? ಹೀಗಾಗಿ,
ಪ್ರೀತಿ ಎಂದರೆ ಬರೀ ಪ್ರೀತಿ ತಾನೆ ?

ಪ್ರೀತಿ ಹೃದಯದಲ್ಲಿ ಹುಟ್ಟುತ್ತದೆಯಂತೆ. ಮನಸ್ಸಿನಲ್ಲಿ ಬೆಳೆಯುತ್ತದೆಯಂತೆ.
ಕಾಲಿನಲ್ಲಿ ಶಕ್ತಿ ತುಂಬುತ್ತದೆಯಂತೆ, ಯಾರಿಗೆ ಗೊತ್ತು ಪ್ರೀತಿಯ ನೂರೆಂಟು ಪರಿ ?
ದಿನವೂ ಪ್ರೀತಿಸುವವರಿಗೆ ಬೇಕಿಲ್ಲ ಪ್ರೀತಿಗಾಗಿಯೇ ದಿನಚರಿ. ಅವರಿಗೆ ಎಲ್ಲ ದಿನವೂ ಸರಿ.

Sunday, February 5, 2012

ತಮಿಳು, ಮಲೆಯಾಳಿ ತಲೆಗಳ ನಡುವೆ ನಾನೊಬ್ಬನೇ ಸುದ್ದಿ ಮಾಡಿದೆ...!ಡಾ. ರಾಜಕುಮಾರ್, ಏಮ್. ಡಿ. ನಲಪತ್ ಮತ್ತು ನರಹಂತಕ ವೀರಪ್ಪನ್

೨೦೦೦ ಇಸ್ವಿ ಮೇ ತಿಂಗಳು. ಅದೊಂದು ದಿನ ನನಗೊಂದು ದೂರವಾಣಿ ಕರೆ ಬಂತು. ಏಷ್ಯಾನಟ್ ಚಾನಲ್ ನ ಮಾಲಿಕರಾದ ರಾಜು ಮೆನನ್ ಅವರು ನಿಮ್ಮನ್ನು ನೋಡಲು ಬಯಸಿದ್ದಾರೆ ಎಂದು ಆ ದೂರವಾಣಿ ಕರೆಯ ಸಾರಾಂಶ. ಹಾಗೆ ಈ ಕರೆ ಮಾಡಿದವರು ಇನ್ನೊಂದು ಪ್ರಶ್ನೆ ಕೇಳಿದರು.
ನಿಮಗೆ ಟೀವಿ ವಾಹಿನಿಯಲ್ಲಿ ಕೆಲಸ ಮಾಡಲು ಇಷ್ಟ ಇದೆಯೆ ?
ನನಗೆ ತಕ್ಷಣ ಏನು ಉತ್ತರ ನೀಡಬೇಕು ಎಂದು ತಿಳಿಯಲಿಲ್ಲ. ಯಾಕೆಂದರೆ ಆಗ ನಾನು ಕನ್ನಡ ಪ್ರಭ ಪತ್ರಿಕೆಯ ಮುಖ್ಯ ವರದಿಗಾರನಾಗಿದ್ದೆ. ರಾಜಕೀಯ ವರದಿಗಾರಿಕೆಯಲ್ಲಿ ನನಗೆ ಗೌರವದ ಸ್ಥಾನವಿತ್ತು. ಇದನ್ನು ಬಿಟ್ಟು ಟೀವಿಯ ಹಿಂದೆ ಹೋಗಲೇ ಎಂಬುದು ನನ್ನ ಮುಂದಿರುವ ಪ್ರಶ್ನೆಯಾಗಿತ್ತು.
ಆದರೆ ನನ್ನ ಜಾಯಮಾನ ಬೇರೆ ರೀತಿಯದು. ನಾನು ಬದುಕನ್ನು ಬಂದ ಹಾಗೆ ಸ್ವೀಕರಿಸುವವನು. ಯಾವುದಕ್ಕೂ ಹಪಹಪಿಸದೆ, ಸಿಕ್ಕಿದ್ದಕ್ಕೆ ಸಂತೋಷ ಪಡುವುದು ನನ್ನ ಸ್ವಭಾವ. ಆದರೆ ಯಾವುದೇ ಸವಾಲನ್ನು ಎದುರಿಸಲು ನಾನು ಹಿಂದೇಟು ಹಾಕದವನು.
ನಾನು ರಾಜು ಮೆನನ್ ಅವರನ್ನು ಭೇಟಿ ಮಾಡಿದೆ. ಅವರ ಜೊತೆಗೆ ಖ್ಯಾತ ಪತ್ರಕರ್ತ ಎಮ್.ಡಿ. ನಲಪತ್ ಇದ್ದರು.
ನಾವು ಸುಮಾರು ಅರ್ಧ ಗಂಟೆಯ ಕಾಲ ಕರ್ನಾಟಕದ ರಾಜಕಾರಣದ ಬಗ್ಗೆ ಚರ್ಚೆ ಮಾಡಿದೆವು. ಕೊನೆಗೆ ನಲಪತ್ ಹೇಳಿದರು
ನಮ್ಮ ಚಾನಲ್ ಗೆ ಸುದ್ದಿ ವಿಭಾಗದ ಮುಖ್ಯಸ್ಥರಾಗಲು ಇವರೇ ಸೂಕ್ತ ವ್ಯಕ್ತಿ.
ನಲಪತ್ ಈ ಮಾತು ಹೇಳಿದ ನಂತರ ರಾಜು ಮೆನನ್ ನೋಡಿ ನಿಮಗೆ ೩೫ ಸಾವಿರ ಸಂಬಳ. ಹಾಗೆ ಉಳಿದೆ ಬೇರೆ ಬೇರೆ ಸೌಲಬ್ಯಗಳನ್ನು ನೀಡುತ್ತೇವೆ.
ನನಗೆ ಅಲ್ಲಿ ಮಾತನಾಡಲು ಅವಕಾಶವೇ ಇರಲಿಲ್ಲ. ಜೊತೆಗೆ ಆಗ ಕನ್ನಡ ಪ್ರಭದಲ್ಲಿ ನನಗೆ ಬರುತ್ತಿದ್ದ ಸಂಬಳ ೧೬ ಸಾವಿರ ರುಪಾಯಿಗಳು. ತಕ್ಷಣ ನಾನು ಅವರ ಜೊತೆ ಸೇರಲು ಒಪ್ಪಿಕೊಂಡು ಬಿಟ್ಟೆ.
ಇದಾದ ಎರಡು ತಿಂಗಳುಗಳ ನಂತರ ಕನ್ನಡ ಪ್ರಭಕ್ಕೆ ರಾಜೀನಾಮೆ ನೀಡಿದೆ. ಏಷ್ಯಾನೆಟ್ ಮಲೆಯಾಳಿ ಚಾನಲ್ ನ ಬೆಂಗಳೂರು ಬ್ಯುರೋದ ಮುಖ್ಯಸ್ಥನಾಗಿ ಅಧಿಕಾರ ಒಹಿಸಿಕೊಂಡೆ. ಆಗಲೇ ಜೀ ನ್ಯೂಸ್ ಜೊತೆ ಸೇರಿ ಏಷ್ಯಾನಟ್ ಕಾವೇರಿ ಎಂಭ ಕನ್ನಡ ಚಾನಲ್ ಪ್ರಾರಂಭಕ್ಕೆ ಎಲ್ಲ ವ್ಯವಸ್ಥೆಯಾಗಿತ್ತು. ನಾನು ಆ ಚಾನಲ್ ನ ಸುದ್ದಿ ವಿಭಾಗವನ್ನು ನೋಡಿಕೊಳ್ಳಬೇಕಿತ್ತು.
ನಾನು ಮಣಿಪಾಲ್ ಟವರ್ ನಲ್ಲಿದ್ದ ಏಷ್ಯಾನೆಟ್ ಕಚೇರಿಯಲ್ಲಿ ನನ್ನ ಕೆಲಸವನ್ನು ಪ್ರಾರಂಭಿಸಿದೆ. ಆಗಲೇ ಬಂದಿದ್ದ ಅರ್ಜಿಗಳನ್ನು ನೋಡುವುದು, ಅವುಗಳನ್ನು ಏ ಬಿ ಸಿ ಎಂದು ವರ್ಗೀಕರಿಸಿ ಯಾರನ್ನು ಸಂದರ್ಷನಕ್ಕೆ ಕರೆಯಬೇಕು ಎಂಬ ತೀರ್ಮಾನ ಕೈಗೊಳ್ಳುವುದು ಈ ಕೆಲಸ ನಡೆದಿತ್ತು. ಈ ನಡುವೆ ಕಾವೇರಿ ವಾಹಿನಿ ಪ್ರಾರಂಭವಾಯಿತು. ಮನರಂಜನಾ ಕಾರ್ಯಕ್ರಮಗಳಿಗೆ ಒಳ್ಳೆಯ ಪ್ರತಿಕ್ರಿಯೆ ಕೂಡ ಬರುತ್ತಿತ್ತು. ಈ ಸಂದರ್ಭದಲ್ಲಿ ಸುದ್ದಿಯನ್ನು ಪ್ರಾರಂಭಿಸಲು ಕನಿಷ್ಠ ಎರಡು ತಿಂಗಳು ಬೇಕು ಎಂದು ನಾನು ತಿಳಿಸಿದ್ದೆ.
ಆದರೆ ಈ ನಡುವೆ ಒಂದು ಅವಘಡ ಸಂಭವಿಸಿ ಬಿಟ್ಟಿತು. ಕನ್ನಡ ವರನಟ ಡಾ. ರಾಜಕುಮಾರ್ ಅವರನ್ನು ನರಹಂತಕ ವೀರಪ್ಪನ್ ಅಪಹರಿಸಿದ್ದ.
ಈ ಸುದ್ದಿ ನನ್ನ ಕಿವಿಗೆ ಬೀಳುವಷ್ಟರಲ್ಲಿ ನಾನು ಕಚೇರಿಯನ್ನು ತಲುಪಿದ್ದೆ. ಆದರೆ ಆಗಲೇ ನಮ್ಮ ಚಾನಲ್ ನಲ್ಲಿ ಸ್ಕ್ರಾಲಿಂಗ್ ಬರುತ್ತಿತು.
ಸಂಝೆ ಐದಕ್ಕೆ ಡಾ. ರಾಜಕುಮಾರ್ ಅಪಹರಣ ಕುರಿತ ವಿಶೇಷ ಸುದ್ದಿ ಪ್ರಸಾರವಾಗಲಿದೆ !
ನನಗೆ ಶಾಕ್. ಸ್ವಲ್ಪ ಸಮಯದಲ್ಲಿ ವಾಹಿನಿಯ ಸಿ ಇ ಓ ಶ್ಯಾಮಸುಂದರ್ ನನ್ನ ಬಳಿ ಬಂದರು. ನೋಡಿ ಇದು ಚೆನ್ನೈಗೆ ವಿಮಾನದ ಟಿಕೆಟ್. ಅಲ್ಲಿ ನಮ್ಮ ಏಷ್ಯಾನೆಟ್ ಸ್ಟುಡಿಯೋ ಇದೆ. ಅಲ್ಲಿಂದ ಅರ್ಧ ಗಂಟೆ ;ಲೈವ್ ಸುದ್ದಿ ಮಾಡಿ.
ನನಗ್ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಅರ್ಧ ಗಂಟೆ ಲೈವ್ ಸುದ್ದಿ ಮಾಡುವುದು ಅಶ್ಟು ಸುಲಭವಲ್ಲ. ಜೊತೆಗೆ ಆಗ ಇದ್ದವನು ನಾನೊಬ್ಬನೇ. ಒಂದು ಬುಲಿಟೇನ್ ಮಾಡಲು ಹಲವರು ಕೈಜೋಡಿಸಬೇಕಾಗುತ್ತದೆ. ಅದು ಒಬ್ಬರೆ ಮಾಡುವ ಕೆಲಸವಲ್ಲ.
ಈ ಮಾತನ್ನು ಹೇಳಬೇಕು ಎಂದುಕೊಂಡೆ. ಆದರೆ ನನ್ನ ಮಾತನ್ನು ಅವರು ಕೇಳಿಸಿಕೊತ್ತಾರೆ ಎಂಬ ನಂಬಿಕೆ ನನಗಿರಲಿಲ್ಲ.
ಮೈನಾವತಿಯ ಮಗನಾದ ಶ್ಯಾಮ್ ಗೆ ಡಾ. ರಾಜಕುಮಾರ್ ಕುಟುಂಬದ ಜೊತೆ ಹತ್ತಿರದ ಸಂಬಂಧವಿತ್ತು. ಆದ್ದರಿಂದ ಅವರೂ ತೀರ್ವ ಆತಂಕದಲ್ಲಿ ಇದ್ದರು. ಅವರು ನನ್ನ ಪ್ರತಿಕ್ರಿಯೆಗೂ ಕಾಯದೇ ಟಿಕೆಟ್ ನೀಡಿ ಹೊರಟೇ ಬಿಟ್ಟರು. ಜೊತೆಗೆ ನೋಡಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ನಿಮ್ಮ ಹೆಸರಿನ ಫಲಕ ಹಿಡಿದ ಕಾರ್ ಡ್ರೈವರ್ ಕಾಯುತ್ತಿರುತ್ತಾನೆ. ಅವನು ನಿಮ್ಮನ್ನು ಏಷ್ಯಾನೆಟ್ ಸ್ಟುಡಿಯೋಕ್ಕೆ ತಲುಪಿಸುತ್ತಾನೆ ಎಂದು ಮಾಹಿತಿ ನೀಡಿದರು.
ನಾನು ಮಧ್ಯಾನ್ಹ ಹನ್ನೆರಡು ವರೆಯ ಚೆನ್ನೈ ವಿಮಾನ ಏರಿದೆ. ಆದರೆ ನನಗೆ ಡಾ. ರಾಜಕುಮಾರ್ ಅಪಹರಣದ ಯಾವ ಮಾಹಿತಿಯೂ ಸಿಗುವಂತಿರಲಿಲ್ಲ. ಆದರೂ ಅರ್ಧ ಗಂಟೆ ವಿಶೇಷ ನ್ಯೂಸ್ ಬುಲೆಟೀನ್ ಮಾಡುವ ಸವಾಲನ್ನು ನನಗೆ ಗೊತ್ತಿಲ್ಲದಂತೆ ಒಪ್ಪಿಕೊಂಡಿದ್ದೆ. ಆಗಿನ ಸ್ಥಿತಿಯಲ್ಲಿ ಈ ವಿಮಾನವಾದರೂ ಉರುಳಿ ಬೀಳಬಾರದೇ ಎಂದು ಪಹಪಹಿಸುವ ಸ್ಥಿತಿ.
ವಿಮಾನ ಚೈನ್ನೈಗೆ ತಲುಪಿದಾಗ ಮಧ್ಯಾನ್ಹ ೧ ಗಂಟೆ ಹದಿನೈದು ನಿಮಿಷ.
ವಿಮಾನ ನಿಲ್ದಾನದಿಂದ ಹೊರಕ್ಕೆ ಬಂದಾಗ ಶಶಿಧರ್ ಎಂಬ ನಾಮಫಲಕ್ ಹಿಡಿದ ದ್ರೈವರ್ ಕಾಣಿಸಿದ. ನಾನು ಅವನ ಬಳಿ ಹೋಗಿ ಕಾರು ಹತ್ತಿದೆ. ಆ ಮನುಷ್ಯನಿಗೆ ತಮಿಳು ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ನನಗೆ ತಮಿಳಿನಲ್ಲಿ ಗೊತ್ತಾಗುತ್ತಿದ್ದ ಏಕಮೇವ ಶಬ್ದ ಎಂದರೆ ತಮಿಳು ಎಂಬುದು ಮಾತ್ರ ! ಹೀಗಾಗಿ ನಮ್ಮಿಬ್ಬರ ನಡುವೆ ಸಂವಹನಕ್ಕೆ ಸಮಾನ ಭಾಷೆಯೇ ಇರಲಿಲ್ಲ.
ಸುಮಾರು ಅರ್ಧ ಗಂಟೆಯ ಪ್ರಯಾಣದ ನಂತರ ಅತ ನನ್ನನ್ನು ಯಾವುದೋ ಬೃಹತ್ ಕಂಫೆನಿಯ ಮುಂದೆ ತಂದು ನಿಲ್ಲಿಸಿದ. ನಾನು ಏಷ್ಯಾನೆಟ್ ಟೀವಿ ಸ್ಟೂಡಿಯೋ ಏಲ್ಲಿ ಎಂದು ಪ್ರಶ್ನಿಸಿದೆ. ಅವನಿಗೆ ಅರ್ಥವಾಗಲಿಲ್ಲ. ಕೊನೆಗೆ ಹತ್ತಿರವಿದ್ದ ಕೆಲವರು ನಮ್ಮ ಬಳಿ ಬಂದರು. ಅವರಲ್ಲಿ ಇಂಗ್ಲೀಷ್ ಬರುವವರು ನಮ್ಮ ನಡುವೆ ತರ್ಜುಮೆಗಾರರಾಗಿ ನಿಂತರು.
ಆಗ ತಿಳಿದಿದ್ದೆಂದರೆ ಆತ ಎಷ್ಯಾನೆಟ್ ನಿಂದ ಬಂದ ಡ್ರೈವರ್ ಅಗಿರಲಿಲ್ಲ. ಆತ ಬಂದಿದ್ದ್ರು ದೆಹಲಿಯಿಂದ ಬರಬೇಕಾಗಿದ್ದ ಈ ಪ್ರತಿಷ್ಟಿತ ಕಂಪೆನಿಯ ನಿರ್ದೇಶಕ ಶಶಿಧರ್ ಸಿಂಗ್ ಎಂಬವರನ್ನು ಕರೆದುಕೊಂಡು ಬರುವುದಕ್ಕಾಗಿ..!
ಈ ಸತ್ಯ ಪ್ರಾರಂಭವಾಗುತ್ತಿದ್ದಂತೆ ಆತ ಕುಗಾಡುವುದಕ್ಕೆ ಪ್ರಾರಂಭಿಸಿದ. ತಪ್ಪೆಲ್ಲ ನನ್ನದು ಎಂಬಂತೆ ಬೈಯತೊಡಗಿದೆ.
ನಾನು ದೊಡ್ದದಾದ ಧ್ವನಿಯಲ್ಲೇ ಉತ್ತರ ನೀಡಿದೆ. ಇಂಗ್ಲೀಷಿನಲ್ಲಿ ಬೈಯಲು ಶಬ್ದ ಸಿಗದಿದ್ದಾಗ ಕನ್ನಡದಲ್ಲಿ ಎಲ್ಲ ಸಂಸ್ಕೃತ ಶಬ್ದಗಳನ್ನು ಬಲಸಿ ಬೈದು ಸೇಡು ತೀರಿಸಿಕೊಂಡೆ.
ಆಗಲೇ ೨ ಗಂಟೆ ೨೫ ನಿಮಿಷವಾಗಿತ್ತು. ಐದು ಗಂಟೆಗೆ ವಿಶೇಷ ಸುದ್ದಿ ಲೈವ್ ಮಾಡಬೇಕಾಗಿದ್ದ ನಾನು ಗೊತ್ತಿಲ್ಲದ್ದ ಸ್ಥಳದಲ್ಲಿ ಸಿಕ್ಕಿಕೊಂಡಿದ್ದೆ. ಈ ಜಗಳ ಮುಗಿಯುವುದಿಲ್ಲ ಎನ್ನಿಸಿದಾಗ ಮಧ್ಯಸ್ಥಿಕೆ ಒಹಿಸಿದವರು ಒಂದು ಸಲಹೆ ನೀಡಿದರು. ಆ ಸಲಹೆಯ ಪ್ರಕಾರ ಈ ತಮಿಳು ಚಾಲಕನ ನನ್ನನ್ನು ಏಷ್ಯಾನೆಟ್ ವರೆಗೆ ತಲುಪಿಸಬೇಕು. ವಿಮಾನನಿಲ್ದಾಣದಲ್ಲಿ ಇರುವ ಏಷ್ಯಾನೆಟ್ ಚಾಲಕ ಶಶಿಧರ್ ಸಿಂಗ್ ಅವರನ್ನು ಇಲ್ಲಿಗೆ ಕರೆದುಕೊಂಡು ಬರಬೇಕು. ಈ ಸಲಹೆ ನನಗೂ ಒಪ್ಪಿಗೆಯಾಯಿತ್ತು.
ನಾನು ಮುಖ ಉದಿಸಿಕೊಂಡೇ ಈ ತರಲೆ ಡ್ರವರ್ ನ ಕಾರು ಹತ್ತಿದೆ.
ನನ್ನ ದುರ್ದವ ಇಲ್ಲಿಗೆ ಮುಗಿದಿರಲಿಲ್ಲ. ಕಷ್ಟಗಳ ಪರಂಪರೆ ಹಾಗೆಯೇ ಮುಂದುವರಿದಿತ್ತು.
ಏಷ್ಯಾನೆಟ್ ಸ್ಟುದೀಯೋ ಇದ್ದುದು ಚೆನ್ನೈನಿಂದ ೫೦ ಕಿಮೀ ದೂರದಲ್ಲಿ. ಅಲ್ಲಿನ ಬಿಎಸ್ ಎನ್ ಎಲ್ ಕಚೇರಿಯಲ್ಲೇ ಸ್ಟುದೀಯೋ ನಿರ್ಮಿಸಿ ಅಲ್ಲಿಂದ ಲೈವ್ ಕಾರ್ಯಕ್ರಮ ಮತ್ತು ಸುದ್ದಿಯನ್ನು ಅಪ್ ಲಿಂಕ್ ಮಾಡಲಾಗುತ್ತಿತ್ತು. ಅಂದರೆ ಅಲ್ಲಿಗೆ ತಲುಪಲು ಇನ್ನೂ ಮುಕ್ಕಾಲು ಗಂಟೆ ! ಅಯ್ಯೊ ದೇವರೆ....
ಅಂತೂ ನಾನು ಏಷ್ಯಾನೆಟ್ ಸ್ಟುದಿಯೋ ತಲುಪಿದಾಗ ೩ ಗಂಟೆ ೩೦ ನಿಮಿಷ. ೫ ಗಂಟೆಗೆ ಲೈವ್.
ನನಗೆ ಡಾ. ರಾಜಕುಮಾರ್ ಅಪಹರಣದ ಯಾವ ಮಾಹಿತಿಯೂ ಗೊತ್ತಿರಲಿಲ್ಲ ಹೀಗಿರುವಾಗ ಅರ್ಧ ಗಂಟೆ ಸುದ್ದಿ ಲೈವ್ ಮಾಡುವು
ದು ಹೇಗೆ ?
ನಾನು ಸ್ಟುದಿಯೋದ ಒಳಗೆ ಹೋದವನ್ನು ಅಲ್ಲಿದ್ದವರ ಬಳಿ ಡಾ. ರಾಜಕುಮಾರ್ ಅಪಹರಣದ ಎಲ್ಲ ದೃಶ್ಯಾವಳಿಗಳನ್ನು ತೋರಿಸುವಂತೆ ಕೇಳಿದೆ. ಆದರೆ ಅಲ್ಲಿ ಇನ್ನೊಂದು ಸಮಸ್ಯೆ. ಅಲ್ಲಿದ್ದವರು ಮಲೆಯಾಳಿ ಬಿಟ್ಟು ಬೇರೆ ಯಾವ ಭಾಷೆಯನ್ನು ಮಾತನಾ
ಡುತ್ತಿರಲಿಲ್ಲ. ಅವರಿಗೆ ಬರುತ್ತಿದ್ದ ಭಾಷೆ ಎಂದರೆ ಮಲೆಯಾಳಿ ಮತ್ತು ತಮಿಳು.
ದೃಶ್ಯಾವಳಿಗಳು ನೋಡಿ ಅದನ್ನು ಸುಮ್ಮನೆ ಕಟ್ ಮಾಡಿ ಇಡಿಸಿದೆ. ನಂತರ ಬೆಂಗಳೂರಿಗೆ ಸತತವಾಗಿ ಫೊನ್ ಮಾಡಿ ಎಲ್ಲ ವಿವಿರಗಳನ್ನು ಪಡದೆ. ಕಳೆದ ರಾತ್ರೆಯಿಂದ ನಡೆದ ಎಲ್ಲ ಘಟನಾವಳಿಗಳ ಚಿತ್ರ ನನಗೆ ದೊರಕಿತ್ತು. ಆದರೆ ಅಲ್ಲಿ ಪ್ಯಾಕೇಜ್ ಮಾಡುವ ಅವಕಾಶ ಇರಲಿಲ್ಲ.ಅಷ್ಟರಲ್ಲಿ ಸಮಯ ೪ ಗಂಟೆ ೪೫ ನಿಮಿಷ. ಸ್ಟುದಿಯೋ ಸಿದ್ದವಾಗಿತ್ತು. ಕೋಟೋಂದನ್ನು ಸಿಕ್ಕಿಸಿಕೊಂಡು ನಾನು ಒಳಗೆ ಹೆಜ್ಜೆ ಹಾಕಿದೆ. ಹೋಗುವಾಗ ನಾನು ಸುದ್ದಿಯನ್ನು ಹೇಳ್ತಾ ಹೋಗ್ತೀನಿ. ನೀವು ಅದಕ್ಕೆ ಸಂಬಂಧಿಸಿದ ದೃಶ್ಯಾವಳಿಗಳನ್ನು ಪ್ಲೇ ಮಾಡಿ ಎಂದು ಅವರಿಗೆ ಇಂಗ್ಲಿಷ್ ನಲ್ಲಿ ಸೂಚನೆ ನೀಡಿದೆ. ಅವರಿಗೆ ಅರ್ಥವಯಿತೋ ಇಲ್ಲವೋ ಅಂತಾನೂ ನನಗೆ ತಿಳಿಯಲಿಲ್ಲ.
ಲೈವ್ ಪ್ರಾರಂಭವಾಯಿತು,. ರೆಡ್ ಲೈಟ್ ಆನ್ ಆಯಿತು. ಸ್ಟಾರ್ಟ್ ಅಂದ ಅಲ್ಲಿದ್ದ ಮಹಾಶಯ.
ನಾನು ಡಾ. ರಾಜ್ ಅಪಹರಣದ ಇಪ್ಪತ್ನಾಲ್ಕು ಗಂಟೆಗಳ ಕಥೆಯನ್ನು ಹೇಳತೊಡಗಿದೆ,
ಎಲ್ಲವನ್ನೂ ವಿವರಿಸುವಾಗ ಅರ್ಧ ಗಂಟೆ ಕಳೆದಿತ್ತು. ಅದರೊಂದಿಗೆ ಒಬ್ಬನೆ ಅರ್ಧ ಗಂಟೆ ಬುಲಿಟಿನ್ ಮಾಡಿದ ಕೀರ್ತಿಯೂ ನನ್ನದಾಗಿತ್ತು.
ಇದಾದ ಮೇಲೆ ೧೫ ದಿನಗಳ ಕಾಲ ನಾನು ಚೆನ್ನೈನಲ್ಲೇ ಇದ್ದು ಬುಲಿಟಿನ್ ಮಾಡಿದೆ. ಅದು ಇನ್ನೊಂದು ಕಥೆ

.