Sunday, March 4, 2012

ನಾನು ಮಾತನಾಡುವುದಿಲ್ಲ....!





ನಾನು ಮಾತನಾಡಬೇಕಾದ್ದು ಬಹಳವಿದೆ.
ಆದರೆ ಮಾತನಾಡಲಾರೆ. ತುಟಿ ಬಿಚ್ಚಲಾರೆ.
ಎಲ್ಲಿಯೋ ನಿಂತ ಆತ್ಮರಹಿತ ದೇಹಗಳು.
ಮನಸ್ಸು ಕಳೆದುಕೊಂಡ ಆತ್ಮಗಳು. ನಡೆಯುತ್ತಿದೆ ಕಾರ್ಗತ್ತಲ ಪ್ರೇತ ನರ್ತನ.
ನಡುವೆ ನಿಂತು ನೋಡುವವರು ಯಾರು ?

ಕೈ ಮಾತ್ರ ಉದ್ದ ಉದ್ದ, ಅದೇ ಮುಂದೆ.
ಬೀಸಿದರೆ ಸಾಕು, ಹಾರುತ್ತದೆ ಕಲ್ಲು
ಹರಿಯುತ್ತದೆ ರಕ್ತ, ವಿಘ್ನ ಸಂತೋಷಿಗಳಿಗೆ ಸಂತಸ,
ಇವರ ಗಧಾಯುದ್ಧದಲ್ಲಿ ಸೋಲುವವರು ಯಾರು ?
ಗೆಲ್ಲುವವರು ಯಾರು ?
ಹೀಗಾಗಿ ನಾನು ಮಾತನಾಡುವುದಿಲ್ಲ.

ದೇಹದ ಮೇಲಿನ ಗಾಯ, ಮನಸ್ಸಿನಲ್ಲಿ ಮಾಯುವುದಿಲ್ಲ.
ಮನಸ್ಸು ಸತ್ತವರಿಗೆ ಹೃದಯ ಮಿಡಿಯುವುದಿಲ್ಲ.
ನಡೆಯುತ್ತದೆ ಪ್ರತಿಭಟನೆಯ ಮೆರವಣಿಗೆ.
ಕೂಗು, ಘೋಷಣೆ, ದೋಷರೋಪಣೆ,
ಇವರಿಗೆ ಅವರ ಮೇಲೆ ಸಿಟ್ಟು ಅವರಿಗೆ ಇವರ ಮೇಲೆ ಕಡು ಕೋಪ.
ಇಲ್ಲಿ ಸತ್ಯವನ್ನು ಕಂಡವರು ಯಾರು ?
ಹೀಗಾಗಿ ನಾನು ಮಾತನಾಡುವುದಿಲ್ಲ.

ಸತ್ಯ ಎಲ್ಲರಿಗೂ ದಕ್ಕುವುದಿಲ್ಲ. ಸತ್ಯಕ್ಕೆ ಸುಳ್ಳಿನ ಸೌಂದರ್ಯವಿಲ್ಲ.
ನಾನು, ನೀನು, ಅವನು ಇವನು, ಯಾರು ಯಾರಾದರೇನು ?
ನಾನು ಎಂಬುದೇ ಅಹಂಕಾರ, ಅಲ್ಲಿದೇ ಸುಳ್ಳಿನ ಬೀಜ.
ಸುಳ್ಳಿನ ಸೌಧದಲ್ಲಿ ವಿಧಾನ ಎಲ್ಲಿದೆ ? ನಿಧಾನ ಎಲ್ಲಿದೆ ?
ಹೀಗಾಗಿ ನಾನು ಮಾತನಾಡುವುದಿಲ್ಲ.

ಒಬ್ಬರಿಗೆ ಅಕ್ಷರದ ಅಹಂಕಾರ, ಇನ್ನೊಬ್ಬರಿಗೆ ಧಿರುಸಿನ ಧರ್ಪ.
ನಡುವೆ ನಾನು ನಾನೇ, ಆದರೆ ಅವರೇನು ಇವರೇನು ?
ಅವರಿಗೆ ಇವರೇನು ? ಇವರಿಗೆ ಅವರೇನು ?
ಇವರಿಗೆ ಅವರ ಮೇಲಿನ ಸವಾರಿ ಬೇಕು, ಅವರಿಗೆ ಇವರ ಮೇಲೆ
ಕುಳಿತು ಸಾಗಬೇಕು.
ಇವರು ಅವರಾಗುವುದಿಲ್ಲ, ಅವರಿಗೆ ಇವರಾಗುವುದು ಬೇಕಿಲ್ಲ.
ಹೀಗಾಗಿ ನಾನು ಮಾತನಾಡಬೇಕಿಲ್ಲ.

ಕುರುಡನ ಹೆಗಲ ಮೇಲೆ ಕುಳಿತ ಕುರುಡರ ಮೆರವಣಿಗೆ.
ದಾರಿ ಸಾಗುವುದಾದರೂ ಹೇಗೆ ? ದಾರಿ ಕಾಣುವುದಾದರೂ ಹೇಗೆ ?
ನಾನು ಎಂಬ ಅಹಂಕಾರ, ಅವನು ಎಂಬ ತಿರಸ್ಕಾರ
ಮನಸ್ಸು ಸಿದ್ಧಪಡಿಸಿಕೊಂಡವರಿಗೆ ಸತ್ಯದರ್ಶನ ಅಗುವುದಿಲ್ಲ.
ಹೀಗಿದ್ದಾಗ ಮಾತನಾಡಲು ಏನಿದೆ ?
ಹೀಗಾಗಿ ನಾನು ಮಾತನಾಡುವುದಿಲ್ಲ.

ಎಲ್ಲವನು ಕಳಚಿದವನಿಗೆ ಮುಚ್ಚಿಕೊಳ್ಳಲು ಏನೂ ಬೇಕಿಲ್ಲ.
ಎಲ್ಲವನೂ ಮುಚ್ಚಿಕೊಂಡವರ ಒಳಗಿರುವುದೇನು ?
ಕುರೂಪ, ನೋಡಲಾಗದ ರೂಪ, ಅದೇ ಅಲ್ಲವೇನು ?
ಹೀಗಾಗಿ ಮಾತನಾಡಬೇಕಾದ್ದು ಬಹಳವಿದ್ದರೂ
ನಾನು ಮಾತನಾಡುವುದಿಲ್ಲ.

ಗೊಮ್ಮಟನಿಗೆ ಅಂಗಿ ತೊಡಿಸುವುದು ಬೇಕಿಲ್ಲ
ಅಕ್ಕನಿಗೆ ಯಾವ ಹಂಗೂ ಇಲ್ಲ. ಬಿಚ್ಚಿದವರಿಗೆ ಮುಚ್ಚಿಕೊಳ್ಳುವುದೂ ಬೇಕಿಲ್ಲ
ಎಲ್ಲವನೂ ಬಿಚ್ಚಿದಾಗ ನಾನು ಇಲ್ಲ, ನೀನು ಇಲ್ಲ
ನಾನು ನೀನು ಇಲ್ಲದಾಗ ಇರುವುದೇ ಎಲ್ಲ.
ಇದು ಅರ್ಥವಾಗದವರಿಗೆ ನಾನು ಮಾತನಾಡಬೇಕಿಲ್ಲ.
. .

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...