Sunday, June 10, 2012

ನನ್ನೂರಿನ ಮಳೆ ಮತ್ತು ನನ್ನ ಬಣ್ಣದ ಕೊಡೆ.

ಜೂನ್ ತಿಂಗಳ ಮೊದಲ ವಾರ. ಆಕಾಶದಲ್ಲಿ ಮೋಡಗಳು  ಎಲ್ಲಿಂದಲೋ ಬಂದು ಇನ್ನೆಲ್ಲಿಗೋ ಹೋಗಲು ಪ್ರಾರಂಭಿಸುತ್ತಿದ್ದವು. ಅಷ್ಟರಲ್ಲಿ ಮಳೆಗಾಲವನ್ನು ಎದುರಿಸಲು ಎಲ್ಲ ಸಿದ್ಧತೆಯೂ ಆಗುತ್ತಿತ್ತು. ಮನೆಗೆ ಹೊಸ ಸೋಗೆಯನ್ನು ಹಾಕಿ ಮುಗಿದಿರುತ್ತಿತ್ತು. ಗದ್ದೆ ನೆಟ್ಟಿಯ ಕೆಲಸವೂ ನಡೆಯುತ್ತಿತ್ತು. ಇನ್ನೊಂದೆಡೆ ಕೊನೆಗೆ ಔಷಧ ಹೊಡೆಯಬೇಕು, ಇಲ್ಲದಿದ್ದರೆ ಕೊಳೆ ರೋಗ ಬಂದು ಅಡಿಕೆಯೆಲ್ಲ ಉದುರಿ ಹೋಗುವುದು ಗ್ಯಾರಂಟಿ.
ಹಿರಿಯರು ಹೀಗೆ ಮಳೆಯನ್ನು ಎದುರಿಸಲು ಸಿದ್ಧರಾಗುತ್ತಿದ್ದರೆ, ಹುಡುಗರಿಗೆ ಅಂತಹ ಕೆಲಸವೇನಿಲ್ಲ. ಆಗ ತಾನೆ ಶಾಲೆ ಪ್ರಾರಂಭವಾಗಿ ಇನ್ನು ಪಾಠ ಪ್ರವಚನಗಳಿಗೆ ರಂಗು ಬಂದಿರುತ್ತಿರಲಿಲ್ಲ.  ಶಾಲೆಯ ಕಟ್ಟಡದ ಮೇಲಿನ ಒಡೆದ ಹಂಚುಗಳನ್ನು ಬದಲಿಸುವ ಕೆಲಸನ್ನು ಮಾಸ್ತರು ನಮಗೆ ಹಚ್ಚುತ್ತಿದ್ದರು. ನಾವು ಕಟ್ಟಡವನ್ನು ಏರಿ ಒಡೆದು ಹೋದ ಹಂಚುಗಳನ್ನು ತೆಗೆದು ಹೊಸ ಹಂಚುಗಳನ್ನು ಹಾಕುತ್ತಿದ್ದವು. ಇನ್ನೊಂದೆಡೆ ಹೊಸ ವರ್ಷಕ್ಕಾಗಿ ಬರಲಿರುವ ಮಳೆಗಾಲವನ್ನು ಎದುರಿಸುವುದಕ್ಕಾಗಿ ನಮಗೆ ಮನೆಯಲ್ಲಿ ಹೊಸ ಕಂಬಳಿ ತರುತ್ತಿದ್ದರು. ಈ ಕಂಬಳಿಯ ಕೊಪ್ಪೆಗೆ ಮಧ್ಯದಲ್ಲಿ ಪ್ಲಾಸ್ಟಿಕ್ ಹಾಕಿ ನೀರು ಒಳಗೆ ಬರದಂತೆ ನಾವೆಲ್ಲ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು.
ಮನೆಯಲ್ಲಿ ಅಮ್ಮ ಅಮ್ಮಮ್ಮ  ಅತ್ತೆಯರು ಮಳೆಗಾಲವನ್ನು ಎದುರಿಸುವ ಸಿದ್ಧತೆಯಲ್ಲಿ ತೊಡಗುತ್ತಿದ್ದರು. ಮಳೆಗಾಲದಲ್ಲಿ ಸುಟ್ಟು ತಿನ್ನುವುದಕ್ಕಾಗಿ ಹಪ್ಪಳ ಸಂಡಿಗೆಯ ರಾಶಿ ಸಿದ್ಧವಾಗಿ ಅಟ್ಟವನ್ನು ಸೇರಿರುತ್ತಿತ್ತು. ಹಾಗೆ ಗೇರು ಭೀಜ, ಹಲಸಿನ ಬೀಜದ ಮೂಟೆಯೂ ಅಟ್ಟದ ಮೇಲೆ ವಿರಾಜಮಾನವಾಗಿರುತ್ತಿತ್ತು.
ಶಾಲೆಗೆ ಹೋಗುತ್ತಿದ್ದ ನಾವು ಗದ್ದ ಮತ್ತು ತೋಟಕ್ಕೆ  ಊಟ ಮತ್ತು ತಿಂಡಿಯನ್ನು ಕೊಟ್ಟು ಬರುವ ಕೆಲಸವನ್ನು ಮಾಡಲೇಬೇಕಾಗಿತ್ತು. ಅದು ನಮ್ಮ ದಿನಚರಿಯ ಭಾಗ. ಬೀಳುತ್ತಿರುವ ಮಳೆಯಲ್ಲೇ ತಿಂಡಿ ಮತ್ತು ಊಟದ ಗಂಟನ್ನು ನೆನೆಯದಂತೆ ಹಿಡಿದುಕೊಂಡು ಎರಡು ಕಿಮೀ ದೂರ ನಡೆದು ಕೊಟ್ಟು ಬಂದ ಮೇಲೆ ಮನೆಯ ಜವಾಬ್ದಾರಿ ಮುಗಿದಂತೆ. ನಂತರ ಪಾಟಿ ಚೀಲವನ್ನು ಹಿಡಿದು ಶಾಲೆಗೆ ಓಡುತ್ತಿದ್ದೆವು.
ಜೂನ್ ಮೊದಲವಾದ ಆಕಾಶದಲ್ಲಿ ಮೋಡಗಳ ನರ್ತನ ಪ್ರಾರಂಭವಾಗುತ್ತಿದ್ದಂತೆ ಇನ್ನು ಒಂದೆರಡು ದಿನಗಳಲ್ಲಿ ಮಳೆ ಹಿಡೀತು ಎಂದು ಅಜ್ಜ ಹೇಳುವುದು ಮಾಮೂಲು. ಅದರಂತೆ ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಹಿಡಿದು ಬಿಡುತ್ತಿತ್ತು. ನಾವು ತಲೆಯ ಮೇಲೆ ಕಂಬಳಿ ಕೊಪ್ಪೆಯನ್ನು ಹಾಕಿಕೊಂಡು ಶಾಲೆಗೆ ಹೊರಟರೆ ಅಜ್ಜ, ತೋಟಕ್ಕೆ ಹೊರಟು ಬಿಡುತ್ತಿದ್ದ. ತೋಟದ ಎರಡು ಬದಿಗಳಲ್ಲಿ  ಕುಸಿದು ಬೀಳುತ್ತಿದ್ದ ಧರೆಯ ಮಣ್ಣನ್ನು ಹೊಳೆಯ ನೀರಿನಲ್ಲಿ ಕಡಡುವುದು ಅವನ ಕಾಯಕ. ಹಾಗೆ ಧರೆಯನ್ನೇ ಕದಡು ಉಂಟಾದ ಜಾಗದಲ್ಲಿ ಮಳೆಗಾಲ ಮುಗಿದ ಮೇಲೆ ಅಡಿಕೆ ಸಸಿಗಳನ್ನು ಅಜ್ಜ ನೆಡುತ್ತಿದ್ದ. ಹೀಗೆ ಪ್ರತಿ ವರ್ಷ ಮಳೆಗಾಲ ಮುಗಿಯುವ ಹೊತ್ತಿಗೆ ತೋಟ ವಿಸ್ತಾರವಾಗುತ್ತಿತ್ತು.
ಜೂನ್ ತಿಂಗಳಿನಲ್ಲಿ ಮನೆಯ ಬರುವ ಹೊಸ ಅತಿಥಿಯಂತೆ ಮುಜುಗರದಿಂದ ಬರುತ್ತಿತ್ತು. ಆರಿದ್ರ ಮಳೆ ಬರುವ ಹೊತ್ತಿಗೆ ಅದರ ರೂಪವೇ ಬದಲಾಗಿ ಬಿಡುತ್ತಿತ್ತು. ಮನೆ ಬಂದ ಹಳೆಯ ಅತಿಥಿಯಂತೆ, ಯಾವ ಮುಜುಗರವೂ ಇಲ್ಲದೇ ಝಾಡಿಸಲು ಪ್ರಾರಂಬಿಸಿ ಬಿಡುತ್ತಿತ್ತು.  ಇಂತಹ ಮಳೆಯಲ್ಲೂ ಅಜ್ಜ ಧರೆ ಕರಡುವುದನ್ನು ನಿಲ್ಲಿಸುತ್ತಿರಲಿಲ್ಲ. ಆತ ನಾವು ಶಾಲೆಯಿಂದ ತಿರುಗಿ ಬಂದ ಮೇಲೂ ಆತ ಬರದಿದ್ದರೆ ನಾವು ಆತನನ್ನು ಹುಡುಕಿಕೊಂಡು ಬರಲು ತೋಟದತ್ತ ಹೋಗುತ್ತಿದ್ದೆವು. ಅಜ್ಜನನ್ನು ಹುಡೂಕಲು ನಮ್ಮನ್ನು ಕಳುಹಿಸುತ್ತಿದ್ದ ಅಮ್ಮಮ್ಮ ಅದಕ್ಕಾಗಿ ಬೇರೆ ಬೇರೆ ರೀತಿಯ ಆಮಿಷವನ್ನು ಒಡ್ಡಬೇಕಾಗುತ್ತಿತ್ತು. ಅಜ್ಜನ ಕೆಟ್ಟ ಬಾಯಿಗೆ ಹೆದರುತ್ತಿದ್ದ ನಾನು  ಈ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಕೊನೆಯ ತನಕ ಯತ್ನ ನಡೆಸುತ್ತಿದ್ದೆ. ಆದರೆ ಯಾವುದೇ ರೀತಿಯ ಯತ್ನವೂ ಫಲಿಸದಿದ್ದಾಗಿ ಮಳೆಯಲ್ಲಿ ಬ್ಯಾಟರಿ ಹಿಡಿದು ಅಜ್ಜನನ್ನು ಹುಡುಕಿಕೊಂಡು ಬರಲು ತೋಟಕ್ಕೆ ನಡೆಯುತ್ತಿದ್ದೆ.
ಆಕಾಶವೇ ಕಳಚಿ ಬೀಳುವ ಹಾಗೆ ಸುರಿಯುತ್ತಿದ್ದ ಮಳೆಯಲ್ಲಿ, ಸಂಜೆಯ ಕತ್ತಲೆಯಲ್ಲಿ ಧರೆ ಕರಡುತ್ತಿದ್ದ ಅಜ್ಜ ನನ್ನನ್ನು ನೋಡುತ್ತಿದ್ದ ಹಾಗೆ ಬೈಯಲು ಪ್ರಾರಂಭಿಸುತ್ತಿದ್ದ.
ಮಳೆ ನೀರಲ್ಲಿ ಕೊಚ್ಚಿಕಂಡು ಹೊದ್ನೋ ಇಲ್ಲವೋ ನೋಡದಕ್ಕೆ ಬಂದ್ಯಾ ಎಂದು ಸ್ವಾಗತ ಕೋರುತ್ತಿದ್ದ. ನಿಮಗೆ ಯಾಕೆ ಸಂಸಾರ ಬೇಕು ? ಜವಾಬ್ದಾರಿನೇ ಇಲ್ಲ ಎಂದು ತನ್ನ ಸಹಸ್ರನಾಮವನ್ನು ಮುಂದುವರಿಸುತ್ತಿದ್ದ. ಆತ ಇಷ್ಟೆಲ್ಲ ಬೈದರೂ ಆತನ ಬಗ್ಗೆ ನನಗೆ ಪಾಪ ಅನ್ನಿಸುತ್ತಿತ್ತು. ಕಂಪನೆಯ ಮಣ್ಣು ನೀರಿನಲ್ಲಿ ಪೂರ್ಣ ಒದ್ದೆಯಾಗಿರುತ್ತಿದ್ದ ಅಜ್ಜನನ್ನು ಗುರುತಿಸುವುದೇ ಸಾಧ್ಯವಾಗುತ್ತಿರಲಿಲ್ಲ. ಆತನ ಈ ವಿಚಿತ್ರನ್ ರೂಪವನ್ನು ನೋಡುತ್ತಲೇ ನಾವು ಮನೆಗೆ ಹಿಂತಿರುಗುತ್ತಿದ್ದೆವು.
ನಮ್ಮ ಕೋಲಸಿರ್ಸಿ ಶಾಲೆಗೆ ಬರುತ್ತಿದ್ದ ಎಲ್ಲ ಹುಡುಗರೂ ಕಂಬಳಿ ಕೊಪ್ಪೆಯನ್ನು ಹಾಕಿಕೊಂಡೇ ಬರುತ್ತಿದ್ದರು. ಬಡವರ ಮಕ್ಕಳಿಗೆ ಕೊಡೆ ಅಪರಿಚಿತ. ಜೊತೆಗೆ ಭಾರಿ ಮಳೆಗೆ ಕಂಬಳಿ ಹೆಚ್ಚು ಸುರಕ್ಷಿತ. ಆದರೆ ಆಗಲೇ ನಾಗರಿಕ ನಾಗುತ್ತಿದ್ದ ನಾನು ನನಗೆ ಕೊಡೆಯನ್ನು ಕೊಡಿಸಲೇ ಬೇಕು ಎಂದು ಗಂಟ್ಉ ಬೀಳುತ್ತಿದ್ದೆ. ಆದರೆ ಅಪ್ಪ ಇದಕ್ಕೆ ಸೊಪ್ಪು ಹಾಕಿರಲಿಲ್ಲ.ಕೊನೆಗೆ ಕೊಡೆ ಕೊಡಿಸದಿದ್ದರೆ ನಾನು ಶಾಲೆಗೆ ಹೋಗುವುದೇ ಇಲ್ಲ ಎಂದು ಹಠ ಹಿಡಿದೆ. ಕೊನೆಗೆ ಅಮ್ಮಮ್ಮನ ಮಧ್ಯಸ್ಥಿಕೆಯಲ್ಲಿ ಅಪ್ಪ ಕೊಡೆ ಕೊಡಿಸಲು ಒಪ್ಪಿಕೊಂಡ. ಮರುದಿನವೇ ಸಿದ್ದಾಪುರದಿಂಡ ಕೆಂಪನೆಯ ಬಣ್ಣದ ಕೊಡೆಯನ್ನು ತಂಡು ಕೊಟ್ಟ.
ಕೊಡೆ ಬಂದ ಮೇಲೆ ನನ್ನ ಗೈರತ್ತೆ ಬದಲಾಗಿ ಹೋಗಿತ್ತು. ಸುಮಾರು 300 ಹುಡುಗರಿದ್ದ ಆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಡೆ ಹಿಡಿದುಕೊಂಡು ಬಂದ ಮೊದಲ ವಿದ್ಯಾರ್ಥಿ ನಾನಾಗಿದ್ದೆ. ಮಾಸ್ತರು ಮತ್ತು ಅಕ್ಕೋರನ್ನು ಬಿಟ್ಟರೆ ಶಾಲೆಗೆ ಕೊಡೆ ತಂದ ಮೊದಲ ವಿದ್ಯಾರ್ಥಿ ನಾನಾಗಿದ್ದೆ.
ಮೊದಲ ದಿನ ಕೊಡೆ ಹಿಡಿದು ಶಾಲೆಗೆ ಹೋದ ದಿನ ಭಾರಿ ಮಳೆ ಬೀಳುತ್ತಿತ್ತು. ಜೊತೆಗೆ ಗಾಳಿ.  ಮನೆಯಿಂದ ನಾಲ್ಕು ಕಿಮೀ ದೂರವಿದ್ದ ಶಾಲೆಗೆ ತಲುಪುವಷ್ಟರಲ್ಲಿ ನಾನು ಸಂಪೂರ್ಣವಾಗಿ ತೊಯ್ದು ಹೋಗಿದ್ದೆ. ಆದರೆ ಕೊಡೆ ಹಿಡಿದು ಬಂದ ಸಂತೋಷದಲ್ಲಿ ಮಳೆಯಲ್ಲಿ ತೊಯ್ದಿದ್ದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅವತ್ತಿನ ಮಟ್ಟಿಗಂತೂ ನನ್ನ ಕೆಂಪನೆಯ ಕೊಡೆ ಆಕರ್ಷಣೆಯ ಕೇಂದ್ರವಾಗಿತ್ತು. ಸವಿತಾ ಮತ್ತು ಸುಮಿತ್ರಾ ಅಕ್ಕೋರು ನನ್ನ ಬಳಿ ಬಂದು ಕೊಡೆಯನ್ನು ಮುಟ್ಟಿ ಮುಟ್ಟಿ ನೋಡಿದರು. ಅದರ ಬಣ್ಣ ಆಕ್ರತಿ ಎಲ್ಲವನ್ನೂ ಮೆಚ್ಚಿಕೊಂಡರು. ಜೊತೆಗೆ ಸಿದ್ದಾಪುರದ;ಲ್ಲಿ  ಯಾವ ಅಂಗಡಿಯಲ್ಲಿ ಈ ರೀತಿಯ ಕೊಡೆ ಸಿಗುತ್ತದೆ ಅದರ ಬೆಲೆ  ಎಷ್ತು ಎಂದೆಲ್ಲ ವಿಚಾರಿಸಿಕೊಂಡರು.
ರೀಸಸ್ ಹೊತ್ತಿನಲ್ಲಿ  ಹೊರಕ್ಕೆ ಬಂದ ಹುಡುಗರಿಗೆ ನನ್ನ ಕೊಡೆ ಆಕರ್ಷಣೆಯ ಕೇಂದ್ರವಾಯಿತು. ಬಹಳಷ್ಟು ಹುಡೂಗರು, ಭಾರಿ ಮಳೆಗೆ ಈ ಕೊಡೆ ಉಪಯೋಗ ಇಲ್ಲ ಎಂದು ತೀರ್ಪಿತ್ತರು. ಕಂಬಳಿ ಕೊಡುವ ಬೆಚ್ಚನೆಯ ಸುಖವನ್ನು ಕೊಡೆ ಕೊಡುವುದಿಲ್ಲ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿತ್ತು. ಇಂತಹ ಅಭಿಪ್ರಾಯ್ಗಗಳು ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರರಲಿಲ್ಲ. ನನ್ನ ಸಹಪಾಠಿಗಳಿಗೆ ನನ್ನ ಮೇಲೆ ಈರ್ಷೆ, ಮತ್ಸರ/ ಹೀಗಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂಬ ತೀರ್ಮಾನಕ್ಕೆ ನಾನು ಬಂದಿದ್ದೆ.
ಮಧ್ಯಾಹದ ಹೊತ್ತಿಗೆ ಮಳೆ ಜೋರಾಯಿತು. ಶಾಲೆಯ ಎದುರಿಗಿದ್ದ ಗದ್ದೆ ಬೈಲು ಕೆರೆಯ ಹಾಗೆ ಕಾಣುತ್ತಿತ್ತು. ಸಾಧಾರಣವಾಗಿ ದೊಡ್ಡ ಮಳೆ ಬಂದರೆ ಅವತ್ತು ಶಾಲೆಗೆ ರಜಾ ಕೊಡುವುದು ಸಾಮಾನ್ಯವಾಗಿತ್ತು. ಮಳೆಗಾಲದಲ್ಲಿ ವಾರದಲ್ಲಿ ಎರಡು ಮೂರು ದಿನ ಮಳೆಯ ಕಾರಣದಿಂದ ನಾವು ರಜೆಯ ಮಜಾ ಅನುಭವಿಸುತ್ತಿದ್ದೆವು. ನಮ್ಮ ಕೋಲಸಿರ್ಸಿ  ಶಾಲೆಯಿಂದ ಬಳಗುಳಿಯ ನಮ್ಮ ಮನೆಗೆ ಸುಮಾರು 3 ಕಿಮೀ ದೂರ. ಶಾಲೆಯ ಎದುರಿಗಿನ ದೊಡ್ದ ಗದ್ದೆ ಬೈಲು ದಾಟಿ ಮೋಟು ಕಾನು ಹಾದು ನಡೆಯಬೇಕು. ಗದ್ದೆ ಬೈಲಿನ ನಡುವೆ ಇದ್ದ ಎರಡು ಹೊಳೆಗಳು ತುಂಬಿ ಸಂಕ ನೀರಿನಲ್ಲಿ ಮುಳುಗಿ ಹೋಗುತ್ತಿತ್ತು. ಆಗೆಲ್ಲ ಸಂಕ ಎಲ್ಲಿದೆ ಎಂದು ಗೊತ್ತಾಗದೇ ದೊಡ್ದವರು ಬರುವುದಕ್ಕಾಗಿ ನಾವು ಅಲ್ಲಿಯೇ ಕಾದು ನಿಲ್ಲುತ್ತಿದ್ದೆವು. ಹಾದಿಯಲ್ಲಿ ಬರುವ ದೊಡ್ದವರು ಕೈ ಹಿಡಿದೋ ಎತ್ತಿಕೊಂಡೋ ನಮ್ಮನ್ನು ಹೊಳೆ ದಾಟಿಸುತ್ತಿದ್ದರು. ಹೊಳೆ ದಾಟಿ ಮೊಟು ಕಾನಿನ ದಾರಿಯಲ್ಲಿ ಸಾಗುವುದು ಮಜವೋ ಮಜ.
ಅವತ್ತು ಶಾಲೆ ಬಿಟ್ಟ ಮೇಲೆ ಖುಷಿಯಿಂದ ನಾನು ಮನೆಗೆ ಹೊರಟೆ. ಜೊತೆಗೆ ಸಹಪಾಠಿಯಾಗಿದ್ದ ಪಕ್ಕದ ಮನೆ ಭಾಲಚಂದ್ರ.. ಆತನಿಗೂ ನನ್ನ ಕೊಡೆಯ ಬಗ್ಗೆ ಸ್ವಲ್ಪ ಬೇಸರವಿದ್ದಂತಿತ್ತು. ಯಾಕೆಂದರೆ ಅವನಿಗಿಲ್ಲದ ಕೊಡೆ ನನ್ನ ಬಳಿ ಇತ್ತು.  ನಾನುಅ ನನ್ನ ಬಣ್ಣದ ಕೊಡೆಯನ್ನು ಹಿಡಿದು ಗತ್ತಿನಲ್ಲಿ ಮನೆಗೆ ಹೊರಟೆ. ಕೋಲಸಿರ್ಸಿಯ ಹಿರಿಯೊಬ್ಬರು ನಮ್ಮ ಜೊತೆಗೆ ಬಂದು ಸಣ್ಣ ಹೆಗಡೆರನ್ನು ಹಳ್ಳ ದಾಟಿಸಿ ಬಿಟ್ಟರು. ಹುಷಾರಿಂದ ಮನೆಗೆ ಹೋಗಿ ಹೆಗ್ಡೆರೇ ಎಂದು ಬುದ್ದಿ ಮಾತು ಹೇಳಿ ಅವರು ಹಿಂತಿರುಗಿದರು.ಅಷ್ಟರಲ್ಲಿ  ಮಳೆ ಗಾಳಿ ಇನ್ನಷ್ಟು ಜೋರಾಯಿತು.  ಅಕ್ಕ ಪಕ್ಕ ಇದ್ದರು ಆ ಮಳೆಯಲ್ಲಿ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುತ್ತಿರಲಿಲ್ಲ. ಜೊತೆಗೆ ಎಂತಹ ಗಾಳಿ ಬೀಸುತ್ತಿತ್ತೆಂದರೆ ನನಗೆ ಕೊಡೆ ಹಿಡಿಯುವುದು ಸಾಧ್ಯವೇ ಇಲ್ಲ ಎಂದು ಅನ್ನಿಸತೊಡಗಿತ್ತು. ನಾನು ಹರ ಸಾಹಸ ಮಾಡಿ ಕೊಡೆ ಹಿಡಿದುಕೊಳ್ಳಲು ಯತ್ನ ನಡೆಸುತ್ತಿದ್ದೆ.  ಬಾಲಚಂದ್ರ ಮಾತ್ರ ಕಂಬಳಿ ಕೊಪ್ಪೆಯ ಒಳಗೆ ಬೆಚ್ಚಗಿದ್ದ. ಅವನ ಮುಖವನ್ನು ಬಿಟ್ಟರೆ ಬೇರೆ ಎಲ್ಲಿಗೂ ನೀರು ತಾಗುತ್ತಿರಲಿಲ್ಲ.
ನಾವು ಗದ್ದೆ ಬೈಲನ್ನು ದಾಟಿ ಮೋಟು ಕಾನಿನ ಸಮೀಪ ಬಂದೆವು. ಅಲ್ಲಿ ನೀರು ಹರಿದು ಕಾಲು ಜಾರುತ್ತಿತ್ತು. ಮರ ಗಿಡಗಳು ಗಾಳಿಗೆ ಅತ್ತಿಂದಿತ್ತ ಒಲಾಡುತ್ತಿದ್ದವು.  ಪ್ರಕೃತಿ ಸೆಟೆದು ನಿಂತಿತ್ತು.  ಒಮ್ಮೆಲೆ ಗಾಳಿ ಜೋರಾಗಿ ಬೀಸಿ ನನ್ನ ಕೈಯಲ್ಲಿದ್ದ ಕೊಡೆಯನ್ನು ಹಾರಿಸಿಕೊಂಡು ಹೋಯಿತು.  ನನ್ನ ಕೆಂಪು ಬಣ್ಣದ ಕೊಡೆ ಅಕಾಶದಲ್ಲಿ ಹಾರುತ್ತ  ದೊಡ್ಡ ನೇರಲೆ ಮರದ ತುದಿಗೆ ಹೋಗಿ ವಿರಾಜ ಮಾನವಾಯಿತು. ಆ ಮರ ಎಷ್ತು ದೊಡ್ದದೆಂದರೆ ಅದನ್ನು ಹತ್ತುವ ಮಾತಿರಲಿ ತಲೆ ಎತ್ತಿ ನೋಡುವುದು ಕಷ್ಟವಾಗಿತ್ತು.
ನಾನು ಅಳತೊಡಗಿದೆ. ಮಳೆಯಲ್ಲಿ ನೆನಯುತ್ತಿರುವುದಕ್ಕಿಂತ ನನ್ನ ಬಣ್ಣದ ಕೊಡೆ ಕೈತಪ್ಪಿ ಹೋದ ದುಃಖ ನನನ್ನು ಹೆಚ್ಚಾಗಿ ಕಾಡುತ್ತಿತ್ತು.  ಸುರಿಯುತ್ತಿರುವ ಮಳೆಯಲ್ಲಿ ಅಸಹಾಯಕನಾದ ನಾನು ಅಳುತ್ತಲೇ ಮನೆಗೆ ಬಂದೆ. ಅಮ್ಮಮ್ಮ ತನ್ನ ಸೀರೆಯ ಸೆರಗಿನಲ್ಲಿ ತಲೆ ಒರೆಸಿದಳು. ಬಿಸಿಯಾಗಿ ಖಷಾಯ ಮಾಡಿಕೊಟ್ಟಳು. ಕೊಡೆ ಕಳೆದಿದ್ದನ್ನ ಅಪ್ಪಂಗೆ ಹೇಳಡಾ ಅವ ಬೈತಾ ಎಂದು ಬುದ್ದಿ ಮಾತು ಹೇಳಿದಳು. ಆದರೂ ನಾನು ಅಳುತ್ತಲೇ ಮೆತ್ತಿಗೆ ಹೋಗಿ ಚಾದರ ಹೊದ್ದು ಮಲಗಿದೆ. ಆ ರಾತ್ರಿ ಕನಸಿನಲ್ಲಿ ಬಣ್ಣದ ಕೊಡೆ ಬಂದು ನನ್ನ ಜೊತೆ ಮಾತನಾಡಿತು. ಮರುದಿನ ನಾನು ಜ್ವರ ಬಂದು ಮಲಗಿದೆ. ನಾಲ್ಕು ದಿನ ಶಾಲೆಗೆ ಹೋಗಲಿಲ್ಲ.

Friday, June 8, 2012

ನಿತ್ಯಾನಂದ ಪ್ರಕರಣ; ನಮಗೆ ಮಠಾಧಿಪತಿಗಳು ಯಾಕೆ ಬೇಕು ?

ನಾನು ಈ ಲೇಖನವನ್ನು ಪ್ರಾರಂಭಿಸುವುದಕ್ಕೆ ಮೊದಲು ಒಂದು ಅಂಶವನ್ನು ಸ್ಪಷ್ಟ ಪಡಿಸುತ್ತೇನೆ. ನನಗೆ ದೇವ ಮಾನವರ ಬಗ್ಗೆಯಾಗಲೀ, ಈ ಮಠಾಧಿಪತಿಗಳ ಬಗ್ಗೆಯಾಗಲಿ ಅಂತಹ ಗೌರವ ಇಲ್ಲ. ಧರ್ಮದ ಹೆಸರಿನಲ್ಲಿ ಸಿಂಹಾಸನದ ಮೇಲೆ ವಿರಾಜಮಾನರಾಗುವ, ತಲೆಯ ಮೇಲೆ ಕಿರೀಟ ಇಟ್ಟು ಕೊಳ್ಳುವ ಸ್ವಾಮಿಗಳು ನನಗೆ ವಿಧೂಷಕರಂತೆ ಕಾಣುತ್ತಾರೆ. ಹಾಗೆ ನನಗೆ ಗೌರವ ನೀಡಬೇಕು ಎಂದು ಅನ್ನಿಸಿದ   ಯಾವುದೇ ಸ್ವಾಮೀಜಿ ಇನ್ನೂ ದೊರಕಿಲ್ಲ. ಜೊತೆಗೆ ನಾನು ಹುಟ್ಟಿದ ಜಾತಿಯ ಮಠ ಈಗ ೨೫ ವರ್ಷಗಳ ಹಿಂದೆ ನನ್ನನ್ನು ಜಾತಿಯಿಂದ ಹೊರಗೆ ಹಾಕಿದ್ದರಿಂದ ಅವರ ಹಂಗು ನನಗೆ ಇಲ್ಲ. ನನಗೆ ಮೊದಲಿನಿಂದಲೂ ಈ ಸ್ವಾಮೀಜಿಗಳ ಬಗ್ಗೆ ಸಣ್ಣ ಅನುಮಾನ. ಇವರೆಲ್ಲ ನಮ್ಮ ಹಾಗೆ ಹುಲು ಮಾನವರೇ ಆಗಿರುವುದರಿಂದ ನಮಗೆ ಇರುವ ಎಲ್ಲ ರೀತಿಯ ರಾಗ ಧ್ವೇಷಗಳೂ ಅವರಿಗೂ ಇವೆ. ಆದ್ದರಿಂದ ಅವರನ್ನು ನಮಗಿಂತ ಮೇಲು ಎಂದು ಒಪ್ಪಲು ನಾನು ಸಿದ್ಧನಿಲ್ಲ.
ಸ್ವಾಮೀಜಿಗಳ ಜೊತೆಗಿನ ಈ ಸಣ್ಣ ಭಿನ್ನಾಭಿಪ್ರಾಯಕ್ಕೆ ಇರುವ ಕಾರಣಗಳು ಸರಳವಾದವುಗಳು. ಮನುಷ್ಯನ ಬದುಕಿನ ಸತ್ಯವನ್ನು ಹುಡುಕಲು ಹೊರಟವರಿಗೆ ಅರಮನೆಯಂತಹ ಮಠದ ಅಗತ್ಯ ಇಲ್ಲ.ಅಡ್ಡಪಲ್ಲಕ್ಕಿ ಬೇಕಾಗಿಲ್ಲ. ಸಮಾಜದಲ್ಲಿ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಬೋಧಿಸುವವರು ರಾಜಕಾರಣಿಗಳ ಏಜೆಂಟರಂತೆ ವರ್ತಿಸಕೂಡದು  ಆದರೆ ಆಗಿಹೋದ ಕೆಲವು ಆಧ್ಯಾತ್ಮಿಕ ವಾದಿಗಳು ನನ್ನ ಮೇಲೆ ಪರಿಣಾಮ  ಬೀರಿದ್ದಾರೆ. ಜಿದ್ದು ಕೃಷ್ಣಮೂರ್ತಿ ಮತ್ತು ಓಷೋ ಚಿಂತನೆಗಳು ನನ್ನ ಮೇಲೆ ಪರಿಣಾಮ ಬೀರಿವೆ. ಹಾಗೆ ಧ್ಯಾನ ನಮ್ಮ ಮನಸ್ಸನ್ನು ನಿಯಂತ್ರಣಕ್ಕೆ ತರುತ್ತದೆ ಎಂಬುರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ಯಾಕೆಂದರೆ ಇವತ್ತಿಗೂ ನಾನು ದಿನದಲ್ಲಿ ಕನಿಷ್ಟ ಅರ್ಧ ಗಂಟೆ ಧ್ಯಾನ ಮಾಡುತ್ತೇನೆ
ಭಾರತೀಯ ಆಧ್ಯಾತ್ಮಿಕ ಜಗತ್ತಿನಲ್ಲಿ  ಸಾಧನೆ ಮಾಡಿದ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಕೃಷ್ಣ ಪರಮಹಂಸ, ವಿವೇಕಾನಂದ ಅವರ ಚಿಂತನೆಗಳ ಪರಿಚಯವನ್ನು ನಾನು ಮಾಡಿಕೊಂಡಿದ್ದೇನೆ. ಇವಷ್ಟು ಪೂರ್ವ ಪೀಠಿಕೆ ಸಾಕು ಎಂದು ಅನ್ನಿಸುತ್ತದೆ. ಈಗ ನಾನು ಪ್ರಸ್ತಾಪಿಸಲು ಹೊರಟಿರುವ ವಿಚಾರಕ್ಕೆ ಪ್ರೇರಣೆಯಾಗಿರುವುದು ನಿತ್ಯಾನಂದ ಸ್ವಾಮೀಜಿ ಅವರ ಪ್ರಕರಣ.
ನಿತ್ಯಾನಂದ ಸ್ವಾಮೀಜಿಯವರ ಬಗ್ಗೆ ಹೇಳುವುದಾದರೆ ಅವರು ರವಿಶಂಕರ್ ಸ್ವಾಮಿ ಅವರಂತೆ ವಿದೇಶಿ ಭಕ್ತರನ್ನು ಆಕರ್ಷಿಸಿ ಅವರಿಂಿ ಹಣ ಸಂಗ್ರಹಿಸಿ ಸಾಮ್ರಾಜ್ಯ ಕಟ್ಟಲು ಹೊರಟವರು. ಈ ವಿಚಾರದಲ್ಲಿ ರವಿಶಂಕರ್ ಸ್ವಾಮೀಜಿಗೆ ತೀವ್ರ ಪೈಪೋಟಿಯನ್ನು ನೀಡುತ್ತಿರುವವರು ನಿತ್ಯಾನಂದ ಸ್ವಾಮೀಜಿ. ಅವರು ಬಿಡದಿ ಬಳಿ ಸ್ಥಾಪಿಸಿದ ಆಶ್ರಮ ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯುವ ಬಹುತೇಕ ವಿದೇಶಿಯರು ಬಿಡದಿ ಆಶ್ರಮಕ್ಕೆ ಭೇಟಿ ನೀಡತ್ತಾರೆ.
ಯೋಗ ಮತ್ತು ಧ್ಯಾನಕ್ಕೆ ವಿದೇಶಗಳಲ್ಲಿ ಭಾರಿ ಬೇಡಿಕೆ ಬಂದ ತಕ್ಷಣ ಅದನ್ನು ಮಾರಾಟ ಮಾಡುವ ನೂರಾರು ಬಾಬಾಗಳು ಹುಟ್ಟಿಕೊಂಡರು. ಸಂವಹನ ಶಕ್ತಿ ಹೊಂದಿದವರು ಯಶಸ್ವಿಯೂ ಆದರು. ಇದು ಸ್ವಲ್ಪ ಮಟ್ಟಿಗೆ ದೇಶಿ ಸ್ವಾಮಿಗಳ ವಿರೋಧಕ್ಕೆ ಕಾರಣವಾಯಿತು. ಜಾತಿಯತೆಯನ್ನು ರಕ್ಷಿಸಿಕೊಂಡು ಬರುತ್ತಿದ್ದ ಈ ಸಾವಿರಾರು ಮಠಾಧಿಪತಿಗಳನ್ನು ವಿದೇಶದಿಂದ ಹರಿದು ಬರುತ್ತಿರುವ ಹಣ ಕಂಗಾಲಾಗಿ ಮಾಡಿತು. ಇದೆಲ್ಲ ಉತ್ತುಂಗಕ್ಕೆ ತಲುಪಿದ್ದು ಆಚಾರ್ಯ ರಜನೀಶ್ ವಿದೇಶಗಳಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಾಗ. ಆಚಾರ್ಯ ರಜನೀಶ್ ಅಥವಾ ಓಷೋ ಯೋಗ ಧ್ಯಾನ ಮತ್ತು ಸೆಕ್ಸ್ ಅನ್ನು ಮಿಳಿತಗೊಳಿಸಿದರು. ಜೊತೆಗೆ ಅದ್ಬುತ ವಾಗ್ಮಿಯೂ ಚಿಂತಕರೂ ಆಗಿದ್ದ ಓಷೋ ಸೆಕ್ಸ್ ಅನ್ನು ಸೆಲಿಬ್ರೇಷನ್ ಎಂದು ಕರೆಯುವ ಮೂಲಕ ಸಂಚಲನವನ್ನು ಉಂಟು ಮಾಡಿ ಬಿಟ್ಟಿದ್ದರು. ಇದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಸಂಪ್ರದಾಯವಾದಿ ಮಠಾಧಿಪತಿಗಳಿಗೆ ಇರಲಿಲ್ಲ. ಆಗ ಈ ಜನ ಎತ್ತಿದ್ದು ನೈತಿಕತೆಯ ಪ್ರಶ್ನೆ. ಒಷೋ ಸೆಕ್ಸ್ ಮೂಲಕವೇ ಆಧ್ಯಾತ್ಮಿಕ ದಾರಿಯನ್ನು ಹುಡುಕುವ ವ್ಯಕ್ತಿಯಾಗಿದ್ದರು. ಆದರೆ ಕೊನೆಗೆ ಅವರು ದೇಶವನ್ನೇ  ತೊರೆದು ಹೋಗಬೇಕಾಯಿತು. ಆದರೆ ರಜನೀಶ್ ಮಹೇಶ್ ಯೋಗಿಯಂಥವರು ಭಾರತೀಯ ಆಧ್ಯಾತ್ಮಕ ಜಗತ್ತನ್ನು ಬೇರೆ ಬೇರೆ ರೀತಿಯಲ್ಲಿ ವಿದೇಶದಲ್ಲಿ ಮಾರಾಟ ಮಾಡಿ ಬಿಟ್ಟಿದ್ದರು. ಭಾರತೀಯ ಆಧ್ಯಾತ್ಮಿಕತೆಗೆ ಬಹು ದೊಡ್ಡ ಮಾರುಕಟ್ಟೆ ಆಗಲೇ ದೊರಕಿ ಬಿಟ್ಟಿತ್ತು.
ಈ ಮಾರುಕಟ್ಟೆಯನ್ನು ಯಶಸ್ವಿಯಾಗಿ ಬಳಸಿಕೊಂಡವರು ಮೂರು ಸಲ ಶ್ರೀ ಎಂಬುದನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಂಡಿರುವ ರವಿಶಂಕರ್ ಸ್ವಾಮೀಜಿ. ಅವರು ಯೋಗವನ್ನು ಹಿಡಿದುಕೊಂಡರೂ ಸೆಕ್ಸ್ ಅನ್ನು ಮುಟ್ಟಲು ಹೋಗಲಿಲ್ಲ. ಅವರಿಗೆ ಸಂಪ್ರದಾಯವಾದಿ ಮಠಾಧಿಪತಿಗಳ ವಿರೋಧವನ್ನು ಎದುರಿಸುವ ಶಕ್ತಿ ಇರಲಿಲ್ಲ. ಜೊತೆಗೆ ಓಷೋ ಅವರಂತೆ ಆಧ್ಯಾತ್ಮಿಕ ಚಿಂತಕರೂ ಆಗಿಲ್ಲದ, ಒಳನೋಟಗಳೂ ಇಲ್ಲದ ರವಿಶಂಕರ್ ಅವರಿಗೆ ತಮ್ಮ ದೌರ್ಬಲ್ಯದ ಅರಿವು ಇತ್ತು. ಆದರೆ ನಿತ್ಯಾನಂದ ಸ್ವಾಮೀಜಿ ಹಾಗಿರಲಿಲ್ಲ. ಅವರು ರವಿಶಂಕ್ರ್ ಗುರೂಜಿ ಬಿಟ್ಟಿದ್ದ ಸೆಕ್ಸ್ ಅನ್ನು ಆಧ್ಯಾತ್ಮಿಕ ಸಾಧನೆಯ ದಾರಿಯಾಗಿ ಬಳಸಿಕೊಳ್ಳಲು ಮುಂದಾದರು. ಹೀಗಾಗಿ ವಿದೇಶಗಳಲ್ಲಿ ಅವರ ಪ್ರಭಾವ ಹೆಚ್ಚತೊಡಗಿತು. ವಿದೇಶಿ ಹಣ ನಿತ್ಯಾನಂದ ಸ್ವಾಮಿಗಳತ್ತ ಹರಿದು ಬರತೊಡಗಿತು. ಜೊತೆಗೆ ಹಿಂದುಳಿದ ವರ್ಗಕ್ಕೆ ಸೇರಿದ ನಿತ್ಯಾನಂದ ಈ ರೀತಿಯ ಜನಪ್ರಿಯತೆ ಪಡೆದಿದ್ದು ಮೇಲ್ಜಾತಿಯ ಮಠಾಧಿಪತಿಗಳ ಕೆಂಗಣ್ಣಿಗೆ ಗುರಿಯಾದದ್ದು ನಿಜ.
ಈ ನಡುವೆ ಬಿಡದಿ ಬಳಿಯ ನಿತ್ಯಾನಂದ ಆಶ್ರಮದ ಭೂಮಿಯ ಮೇಲೆ ಕಣ್ಣಿಟ್ಟಿದ್ದ ನೆಲ ಗಳ್ಳರು ಭೂಗತ ಲೋಕದ ದೊರೆಗಳು ಅಖಾಡಕ್ಕೆ ಇಳಿದರು. ಕೆಲವು ರಾಜಕಾರಣಿಗಳು ಇದಕ್ಕೆ ಕೈಜೋಡಿಸಿದರು. ನಿತ್ಯಾನಂದ ಆಶ್ರಮದ ಭೂಮಿಯ ಮೇಲೆ ಕಣ್ಣಿದೆ ಎಂದು ಭಹಿರಂಗವಾಗಿ ಹೇಳುವ  ಸ್ಠಿತಿಯಲ್ಲಿ ಅವರು ಇರಲಿಲ. ಹೀಗಾಗಿ ನೈತಿಕತೆ ಮತ್ತು ಭಾಷಾ ವಿವಾದವನ್ನು ಎಳೆದು ತಂದರು. ಯಾವತ್ತೂ ನೈತಿಕತೆ ಮತ್ತು ಭಾಷೆಯಂತಹ ಭಾವನಾತ್ಮಕ ವಿಚಾರಗಳು ಬಹುಬೇಗ ಜನರನ್ನು ತಲುಪುತ್ತವೆ. ಹಾಗೆ ಇವುಗಳು ಅಮಲು ಹುಟ್ಟಿಸುವಂತಹುಗಳು. ಅಮಲು ಹುಟ್ಟಿಸುವಂತಹುಗಳ ಮೂಲ ಗುಣ ದರ್ಮ ಎಂದರೆ ಅದು ಸತ್ಯದ ಮೇಲೆ ತಾತ್ಮಾಲಿಕ ಮರೆವಿನ ಪರದೆಯನ್ನು ಬಿಟ್ಟು ಬಿಡುತ್ತದೆ. ನಿತ್ಯಾನಂದ ಸ್ವಾಮೀಜಿಯನ್ನು ಬೇರೆ ಬೇರೆ ಕಾರಣಕ್ಕಾಗಿ ವಿರೋಧಿಸುವವರು ಮೊದಲು ಎತ್ತಿರುವ ನೈತಿಕತೆಯ ಪ್ರಶ್ನೆಯನ್ನೇ ತೆಗೆದುಕೊಳ್ಳಿ. ಆಶ್ರಮದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಬೊಬ್ಬೆ ಹಾಕುತ್ತಿರುವ ಅವರು ಅಲ್ಲಿ ನಡೆಯುತ್ತಿರುವ ಅನೈತಿಕ ಚಟವಟಿಕೆ ಯಾವುದು ಎಂದು ಹೇಳುವುದಿಲ್ಲ.  ನಿತ್ಯಾನಂದ ಸ್ವಾಮೀಜಿ ಮುಕ್ತ ಲೈಂಗಿಕತೆಯ ವಿರೋಧಿ ಅಲ್ಲದಿದ್ದರೆ ಅಲ್ಲಿ ಅದೇ ನಡೆಯುತ್ತಿದ್ದರೆ ಅದನ್ನು ಸಾಬೀತು ಮಾಡಬೇಕಾದ ಹೊಣೆಗಾರಿಕೆ ಆರೋಪ ಮಾಡಿದವರ ಮೇಲೆ ಇರುತ್ತದೆ.
ಜೊತೆಗೆ  ಯಾವುದು ನೈತಿಕ ಯಾವುದು ಅನೈತಿಕ ? ಈ ಬಗ್ಗೆ ಮೊದಲು ಸ್ಪಷ್ಟತೆ ಬೇಕು. ಇನ್ನು ನಿತ್ಯಾನಂದ ಸ್ವಾಮೀಜಿ ಅಮೇರಿಕದ ಹೆಂಗಸೊಬ್ಬಳನ್ನು ಬಳಸಿಕೊಂಡ ಎಂಬ ಆರೋಪ. ಬಳಸಿಕೊಳ್ಳುವುದು   ಎಂದರೇನು ? ಅತ್ಯಾಚಾರ ಎನ್ನುವುದು ಐದು ವರ್ಷಗಳ ಕಾಲ ನಡೆದರೆ ಅದು ಅತ್ಯಾಚಾರ ಹೇಗಾಗುತ್ತದೆ ? ಅದು ಇಬ್ಬರ ಒಪ್ಪಿಗೆಯ ಮೇಲೆ ನಡೆದಿರಬಹುದಾದ ಸಾಮಾನ್ಯ ಕ್ರಿಯೆ ಆಗಿರಬಹುದಲ್ಲವೆ ?
ಈ ರಾಜ್ಯದ  ಮಠಗಳ ಇತಿಹಾಸವನ್ನು ಗಮನಿಸಿದರೆ, ಲೈಂಗಿಕ ಆರೋಪವನ್ನು ಹೊತ್ತ ಹಲವಾರು ಸ್ವಾಮೀಜಿಗಳು ಆಗಿ ಹೋಗಿದ್ದಾರೆ. ಇಂತಹ ಲೈಂಗಿಕ ಪ್ರಕರಣಗಳ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆ ನಡೆದಿದ್ದು ಇದೆ. ನನಗೆ ಗೊತ್ತಿರುವ ಪ್ರಕರಣವೊಂದರಲ್ಲಿ ಸ್ವಾಮೀಜಿ ಒಬ್ಬರು ಭಕ್ತರೊಬ್ಬರು ಕೊಟ್ಟ ಬಂಗಾರದ ಸರವೊಂದನ್ನು ಭಕ್ತರ ಹೆಂಡತಿಗೆ ಕೊಟ್ಟು ಬಿಟ್ಟಿದ್ದರು. ಭಕ್ತರ ಹೆಂದತಿಗೂ ಸ್ವಾಮೀಜಿಗೂ ಇರುವ ಸಂಬಂಧ ಬಹಿರಂಗಗೊಂಡಿತ್ತು. ಇನ್ನೊಂದು ಪ್ರಕರಣದಲ್ಲಿ ಮಠ ಬಿಟ್ತು ಹೊರಟ  ಸ್ವಾಮೀಜಿ ಒಬ್ಬರಿಗೆ ಅವರು ಗುರುವಾಗಿದ್ದ ದೊಡ್ಡ ಸ್ವಾಮೀಜಿ ಮಠವನ್ನು ಬಿಡದಂತೆ ಬೇಕಾದರೆ ಗಂಡ ಸತ್ತ ಹೆಂಗಸೊಬ್ಬಳನ್ನು ಇಟ್ಟುಕೊಳ್ಳುವಂತೆಯೂ ಸೂಚಿಸಿದ್ದರು !  ಇನ್ನೊಬ್ಬ ದೊಡ್ದ ಸ್ವಾಮೀಜಿ  ಚಿತ್ರ ನಟಿಯೊಬ್ಬರ ತಂದೆ ಎಂಬ ಗುಸು ಗುಸು ಇದೆ.
ಈ ಸ್ವಾಮಿಗಳು ಇಂದು ಸಮಾಜದಲ್ಲಿ ಗೌರವದ ಸ್ಥಾನ ಹೊಂದಿದ್ದಾರೆ. ಅವರ ಬಗ್ಗೆ ಏಕ ವಚನದಲ್ಲಿ ಮಾತನಾಡುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಮಾಧ್ಯಮಗಳ ಕಚೇರಿಗೂ ಬಂದು ಪಾದ ಪೂಜೆ ಮಾಡಿಸಿಕೊಳ್ಳುವಷ್ಟ್ಉ ಪ್ರಭಾವಿಗಳು ಅವರು. ಆದರೆ ನಿತ್ಯಾನಂದ ಅವರ ಬಗ್ಗೆ ಹಾಗಲ್ಲ. ಅವರು ಇನ್ನು ಕೇವಲ ಆಪಾದಿತರಾದರೂ ಅವರನ್ನು  ಏಕ ವಚನದಲ್ಲಿ ಬೈಯ ಬಹುದು. ಲೇವಡಿ ಮಾಡಬಹುದು. ಯಾಕೆಂದರೆ ಅವರನ್ನು ಬೆಂಬಲಿಸುವ ಪ್ರಬಲ ಜಾತಿ ಅವರ ಹಿಂದೆ ಇಲ್ಲ.
ನಿತ್ಯಾನಂದ ಬೇರೆ ಸ್ವಾಮಿಗಳು ಮಾಡದಿರುವ ತಪ್ಪನ್ನು ಮಾಡಿಲ್ಲ. ಬೇರೆ ಸ್ವಾಮೀಜಿಗಳಂತೆ ಅವರೂ ಬದುಕಿದ್ದಾರೆ. ಹಾಗಿದ್ದರೆ ಅವರನ್ನು ಗುರಿಯಾಗಿಸಿಕೊಂಡು ಯಾಕೆ ಅವರ ಹಿಂದೆ ಬೀಳಲಾಗುತ್ತಿದೆ ಎಂಬುದು ಬಹು ಮುಖ್ಯ ಪ್ರಶ್ನೆ.
ನಿತ್ಯಾನಂದ ಸ್ವಾಮೀಜಿ ಕೆಲವು ವಿಚಾರಗಳಲ್ಲಿ ಬೇರೆ ಸ್ವಾಮಿಗಳಿಗಿಂತ ಭಿನ್ನವಾಗಿದ್ದಾರೆ. ಅವರ ಆಶ್ರಮದಲ್ಲಿ ಫಂಕ್ತಿ ಬೇಧ ಇಲ್ಲ. ಜಾತಿಯತೆ ಇಲ್ಲ. ತಮ್ಮ ಜಾತಿಯ ರಾಜಕಾರಣಿ ಜೈಲಿಗೆ ಹೋದ ಎಂಬ ಕಾರಣಕ್ಕಾಗಿ ಅವರು ಜೈಲಿಗೆ ಹೋಗಿ ಸಾಂತ್ವನ ಹೇಳಿಲ್ಲ.  ಸ್ವಜಾತಿಯ ರಕ್ಷಣೆಗಾಗಿ ಬೀದಿಗೆ ಇಳಿದು ಪ್ರತಿಭಟನೆ ಮಾಡಿಲ್ಲ. ಈ ವಿಚಾರಗಳು ನಮ್ಮ  ಕಣ್ಣಿಗೆ ಕಾಣುತ್ತಿಲ್ಲ.
ಬಹುತೇಕ ಸ್ವಾಮೀಜಿಗಳು ಒಂದೇ ತಕ್ಕಡಿಯಲ್ಲಿ ತೂಗುವಂಥವರು. ಇವರ ನಡುವೆ ಯಾವ ವ್ಯತ್ಯಾಸವೂ ಇಲ್ಲ.
ಇನ್ನು ಇವರೆಲ್ಲ ಎತ್ತಿರುವ ನೈತಿಕತೆಯ ಪ್ರಶ್ನೆ ಎಂಬುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ನೈತಿಕತೆ ಎನ್ನುವುದು ಆಯಾ ಕಾಲಕ್ಕೆ ಬದ್ಧವಾದ ಬದುಕುವ ರೀತಿ. ಇಲ್ಲಿ ವೈಯಕ್ತಿಕತೆಗಿಂತ ಸಾಮಾಜಿಕ ನಿಲುವುಗಳು ಬಹಳ ಮುಖ್ಯ. ಲೈಂಗಿಕತೆಯ ಕಟ್ಟುಪಾಡುಗಳು ಸಮಾಜದಿಂದ ಸಮಾಜಕ್ಕೆ ಬದಲಾಗುವಂತೆ ಕಾಲದಿಂದ ಕಾಲಕ್ಕೆ ಬದಲಾಗುತ್ತವೆ. ಆದ್ದರಿಂದ ಸಾವಿರಾರು ವರ್ಷಗಳ ಹಿಂದಿನ ನೈತಿಕತೆ ಇವತ್ತಿನ ಜರೂರತ್ತು ಆಗಿರಬೇಕಿಲ್ಲ. ಅದು ಬದಲಾಗಿರಬಹುದು, ಬದಲಾಗುತ್ತಿರುತ್ತದೆ.
ಇದನ್ನು ಸರಳವಾಗಿ ಹೇಳುವುದಾದರೆ ಇಬ್ಬರು ಪರಸ್ಪರ ಒಪ್ಪಿಗೆಯ ಮೇಲೆ ನಡೆಸುವ ಲೈಂಗಿಕ ಕ್ರಿಯೆ ಅದು ಖಾಸಗಿಯಾಗಿದ್ದರೆ ಅದನ್ನು ಸಾಮಾಜಿಕವಾಗಿ ಪ್ರಶ್ನಿಸುವುದು ಸರಿಯಲ್ಲ.  ನಿತ್ಯಾನಂದ ಸ್ವಾಮೀಜಿ ಯಾರ ಜೊತೆ ಎನನ್ನೂ ನಡೆಸಿದರೋ ಬಿಟ್ಟರೂ ಅದನ್ನು ಒಂದು ಮಿತಿಯನ್ನು ಮೀರಿ ಚರ್ಚಿಸಬೇಕಾದ ವಿಚಾರ ಎಂದೂ ನನಗೆ ಅನ್ನಿಸುತ್ತಿಲ್ಲ.
ನನಗೆ ಅನ್ನಿಸುವ ಹಾಗೆ ನಮಗೆಲ್ಲ ಧರ್ಮ ಬೇಕಾಗಿಲ್ಲ, ಧಾರ್ಮಿಕತೆ ಬೇಕಾಗಿದೆ. ಈ ಧಾರ್ಮಿಕತೆ ಇಡೀ ಮಾನವ ಜನಾಂಗದ ಒಳಿತಿನ ಧರ್ಮ ಆಗಿರಬೇಕು.
ಹಾಗೆ ಸೋಗಿನ ಧಾರ್ಮಿಕ ಮುಖಂಡರು ಮತ್ತು ಮಠಾಧಿಪತಿಗಳ ನಮಗೆ ಬೇಕಾಗಿಲ್ಲ. ಸಮಾಜದಲ್ಲಿ ಮಠಾಧಿಪತಿಗಳನ್ನು ಇಟ್ಟುಕೊಂಡು ಅವರ ಅಧರ್ಮವನ್ನು ನೋಡುವ ಕರ್ಮ ನಮಗೆ ಯಾಕೆ ?

Tuesday, June 5, 2012

ಬಿಜೆಪಿ ಸ್ವರೂಪ ಬದಲಾವಣೆ; ಇತ್ತ ಹಳೆ ಸೀರೆಯೂ ಇಲ್ಲ, ಅತ್ತ ಹೊಸ ಸೀರೆಯೂ ಇಲ್ಲ !

ಒಂದು ಸರ್ಕಾರದ ಐದು ವರ್ಷಗಳ ಆಡಳಿತಾವಧಿಯಲ್ಲಿ ಮೊದಲ ನಾಲ್ಕು ವರ್ಷಗಳನ್ನು ನಿರ್ಣಾಯಕ ವರ್ಷಗಳು ಎಂದೇ ಹೇಳಬೇಕಾಗುತ್ತದೆ. ಹಲವು ರೀತಿಯ ಭರವಸೆಗಳನ್ನು ನೀಡಿ ಅಧಿಕಾರದ ಗದ್ದುಗೆ ಏರಿದ ಪಕ್ಷದ ಸತ್ವ ಪರೀಕ್ಷೆ ಈ ಅವಧಿಯಲ್ಲೇ ನಡೆದು ಹೋಗುತ್ತದೆ. ಕೊನೆಯ ಒಂದು ವರ್ಷ ಚುನಾವಣೆಗೆ ಸಿದ್ಧವಾಗಬೇಕಾದ ಸಮಯವಾಗಿರುವುದರಿಂದ ಅದು ಸರ್ಕಾರದ ವಿಶ್ವಾಸಾರ್ಹತೆಯನ್ನು ಅಭಿವೃದ್ಧಿಪರ ನಿಲುವನ್ನು ಸಾಬೀತು ಪಡಿಸುವ ಅವಧಿ ಅಲ್ಲ. ಜೊತೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಮಾಡಲಾಗದ್ದನ್ನು ಒಂದು ವರ್ಷದ ಅವಧಿಯಲ್ಲಿ ಮಾಡಬಹುದು ಎಂಬುದನ್ನು ನಂಬಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಸಾಧನೆ ಮತ್ತು ವೈಫಲ್ಯವನ್ನು ಚರ್ಚಿಸಲು ಇದು ಸಕಾಲ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ  ನಡೆದ ಘಟನಾವಳಿಗಳನ್ನು ಒಮ್ಮೆ ನೆನಪು ಮಾಡಿಕೊಂಡರೆ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರಯಾವುದು ? ಆ ಚಿತ್ರದಲ್ಲಿ ಕಾಣುವ ಬಣ್ನಗಳು ಯಾವವು ?ಈ ಚಿತ್ರವನ್ನು ಬಿಡಿಸಿದವರು ತೆರೆದಿಟ್ಟ ಸತ್ಯ ಯಾವುದು ? ಒಟ್ಟ್ಇನಲ್ಲಿ ಇದು ಸಫಲ ಯತ್ನವೇ ಅಥವಾ ವಿಫಲತೆಯ ಇತಿಹಾಸವೆ ?
ಒಂದು ಸರ್ಕಾರ ಎಂದ  ತಕ್ಷಣ  ಅದರ ಹಿಂದೆ ಪಕ್ಷದ ನೆರಳು ಇದ್ದೇ ಇರುತ್ತವೆ. ನಮ್ಮ ಜನತಂತ್ರ ವ್ಯವಸ್ಥೆಯಲ್ಲಿ ಪಕ್ಷ ರಹಿತವಾದ ಸರ್ಕಾರಕ್ಕೆ ಅಸ್ಥಿತ್ವ ಇಲ್ಲ. ಹೀಗಾಗಿ ರಾಜ್ಯ ಸರ್ಕಾರದ ಬಗ್ಗೆ ಮಾತನಾಡುವಾಗ ಬಿಜೆಪಿ ಸರ್ಕಾರ ಎಂದೇ ನಾವು  ಹೇಳಬೇಕಾಗುತ್ತದೆ. ಜೊತೆಗೆ ಸರ್ಕಾರದ ಆಗುಹೋಗುಗಳ ನೇರವಾದ ಪರಿಣಾಮ ಜನರ ಮೇಲೆ ಆಗುತ್ತದೆ ಎಂಬುದು ನಿಜವಾದರೂ ಇದರ ಪರಿಣಾಮ ಪಕ್ಷದ ಮೇಲೆ ಆಗುವುದನ್ನು ನಿರಾಕರಿಸಲಾಗದು. ಹಾಗಿದ್ದರೆ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತೀಯ ಜನತಾ ಪಕ್ಷದ ಮೇಲೆ ಆದ ಪರಿಣಾಮ ಯಾವುದು ಮತ್ತು  ಯಾವ ರೀತಿಯದು ?
ಭಾರತದಲ್ಲಿ ನಿಜವಾದ ಅರ್ಥದಲ್ಲಿ ಪಕ್ಷ ಎಂಬುದು ಇಲ್ಲ. ಇಲ್ಲಿರುವುದು ರಾಜಕೀಯ ನಾಯಕರ ಗುಂಪುಗಳು. ಕಾಂಗ್ರೆಸ್ ಒಂದು ಚಳವಳಿಯಾಗಿ ನಂತರ ಪಕ್ಷವಾದರೂ ಅದನ್ನು ಒಂದು ಪಕ್ಷ ಎಂದು ಪರಿಗಣಿಸುವುದು ಸಾಧ್ಯವಿಲ್ಲ.  ಯಾಕೆಂದರೆ ಒಂದು ಪಕ್ಷಕ್ಕೆ ಸ್ಪಷ್ಟವಾದ ಸೈದ್ಧಾಂತಿಕ ತಳಹದಿ, ನೈತಿಕ ಬದ್ಧತೆ ಮತ್ತು ಪ್ರಾಮಾಣಿಕತೆ ಬೇಕಾಗುತ್ತದೆ. ಕೆಳ ಹಂತದಿಂದ ಜನತಾಂತ್ರಿಕ ಮೌಲ್ಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ ಇರಬೇಕು. ಸ್ಥಳೀಯ ನಾಯಕತ್ವ ಬೆಳೆಯಲು ಅನುವು ಮಾಡಿಕೊಡುವ ವಾತಾವರಣ ಇರಬೇಕು. ಚುನಾವಣೆ ಬಂದಾಗ ಗೆಲ್ಲುವುದೊಂದೇ ಪಕ್ಷದ ಗುಣಧರ್ಮ ಅಲ್ಲ. ಹಾಗಾದರೆ ಪಕ್ಷ ಆಂತರಿಕವಾಗಿ ಕ್ಶಯಿಸತೊಡಗುತ್ತದೆ.
ಕಾಂಗ್ರೆಸ್ ಪಕ್ಷಕ್ಕಿಂತ ಭಾರತೀಯ ಜನತಾ ಪಕ್ಶಕ್ಕೆ ಇಂತಹ ಪಕ್ಷದ  ಗುಣಗಳಿದ್ದವು. ಬಿಜೆಪಿಯ ಸಿದ್ಧಾಂತವನ್ನು ಒಪ್ಪದವರೂಅದಕ್ಕೊಂದ್ಉ ಸಿದ್ಧ್ಹಾಂತವಿದೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಆ ಪಕ್ಷದ ಬಲ ಪಂಥೀಯನಿಲುವುಗಳನ್ನು ಎಲ್ಲರೂ ಒಪ್ಪಿಕೊಳ್ಳುವುದು ಸಾಧ್ಯವಿಲ್ಲದವರೂ ಅ ಪಕ್ಷ ನಿಲುವುರಹಿತವಾಗಿದೆ ಎಂದು ಹೇಳುವಂತಿರಲಿಲ್ಲ.
ಹಾಗೆ ವಾಜಪೇಯಿ ಮತ್ತು ಆಡ್ವಾಣಿಯವರ ನಿಲುವನ್ನು ಒಪ್ಪದವರೂ ಅವರ ಬಗ್ಗೆ ವೈಯಕ್ತಿಕ ಗೌರವವನ್ನು ಉಳಿಸಿಕೊಂಡು ಬರುವಂತಹ ನಾಯಕತ್ವದ ಗುಣ ಅವರಿಗಿತ್ತು. ಹಾಗೆ ಕರ್ನಾಟಕದಲ್ಲಿ ಸಹ, ಬಿಜೆಪಿಯ ನಾಯಕರ ಪಕ್ಷದ ಮತ್ತು ಸೈದ್ಧಾಂತಿಕ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ.
ರಾಜ್ಯದಲ್ಲಿ ಬಿಜೆಪಿ  ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಆದ ಮೊದಲ ಪರಿಣಾಮ ಎಂದರೆ ಅದರ ಸ್ವರೂಪದಲ್ಲಾದ ಮೂಲಭೂತ ಬದಲಾವಣೆ. ಅಧಿಕಾರವನ್ನು ಭದ್ರ ಪಡಿಸಿಕೊಳ್ಳು ಭರದಲ್ಲಿ ಕಂದ ಕಂಡವರಿಗೆಲ್ಲ ಪಕ್ಷ  ಬಾಗಿಲು ತೆರೆಯಿತು. ಪಕ್ಶ ಬದಲಿಸುವುದನ್ನೇ ರಾಜಕಾರಣ ಎಂದು ನಂಬಿರುವ ಹಲವರು ಬಿಜೆಪಿ ಸೇರಿದರು.; ಅಧಿಕಾರದ ಗದ್ದುಗೆ ಹಿಡಿದು ವಿಜ್ರಂಭಿಸತೊಡಗಿದರು.ಬಿಜೆಪಿ ಸರ್ಕಾರದ ಬುಡ ಗಟ್ಟಿಯಾಯಿತು ಎಂದು ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಬೀಗುತ್ತಿರುವಾಗಲೇ ಬಿಜೆಪಿ  ಒಂದು ರಾಜಕೀಯ ಪಕ್ಷವಾಗಿ  ದುರ್ಬಲವಾಗತೊಡಗಿತ್ತು. ಅಧಿಕಾರ ರಾಜಕಾರಣದಲ್ಲಿ ಬಿಜೆಪಿ ಎಂಬ ಪಾರ್ಟಿ ವಿಥ್ ಡಿಫರೆನ್ಸ್  ಕಳೆದು ಹೋಗತೊಡಗಿದ್ದು ಪಕ್ಷದ ನಾಯಕತ್ವದ ಅರಿವಿಗೆ ಬರಲೇ ಇಲ್ಲ.
ಭಾರತೀಯ ಜನತಾ ಪಾರ್ಟಿ ಮೊದಲಿನಿಂದಲೂ ಪ್ರತಿಪಾದಿಸುತ್ತ ಬಂದ ತತ್ವ ಮತ್ತು ಮೌಲ್ಯಗಳನ್ನು  ಪಕ್ಷದ ಸರ್ಕಾರವೇ ಗಾಳಿಗೆ ತೂರುತ್ತಲೇ ಬಂತು. ಬಿಜೆಪಿ  ನಂಬಿಕೊಂಡು ಬಂದ ವ್ಯಕ್ತಿಗತ ನೈತಿಕತೆಯನ್ನು  ಸಚಿವ ರೇಣುಕಾಚಾರ್ಯ ಗಾಳಿಗೆ ತೂರಿದರು.  ಕೆಲವು ಸಚಿವರು ಸದನದಲ್ಲೇ ನೀಲಿ ಚಿತ್ರ ವೀಕ್ಷಣೆ ಮಾಡಿದರು. ಭ್ರಷ್ಟತೆಯ ಪಿಡುಗು ಮೂಲವ್ಯಾಧಿಯಂತೆ ಕಾಡತೊಡಗಿತು. ಪಕ್ಷದಲ್ಲಿ ಆದ ಈ ಬದಲಾವಣೆ ಅಥವಾ ಪಕ್ಷ ಧರಿಸತೊಡಗಿದ ಹೊಸ ಸ್ವರೂಪದ ಬಗ್ಗೆ ಯಾವ ರೀತಿಯ ಪ್ರತಿರೋಧವೂ ವ್ಯಕ್ತವಾಗಲಿಲ್ಲ.  ಅಂದರೆ ಬಿಜೆಪಿಯ ನಾಯಕತ್ವಕ್ಕೆ ಪಕ್ಷದ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆ  ಅನಿವಾರ್ಯ ಎಂದು ಅನ್ನಿಸುತ್ತಿರಬೇಕು.  ಇಲ್ಲದಿದ್ದರೆ  ನೈತಿಕ ಬದ್ಧತೆ  ಮತ್ತು  ಸೈದ್ಧಾಂತಿಕ  ನಿಲುವುಗಳ ಬಗ್ಗೆ ಪಕ್ಷ ರಾಜೀ ಮಾಡಿಕೊ:ಳ್ಳುವುದು ಸಾಧ್ಯವೇ ಇರಲಿಲ್ಲ.
ಬಿಜೆಪಿಯಲ್ಲಿ  ಆದ ಆಗುತ್ತಿ ರುವ ಬದಲಾವಣೆಗೆ ಬೇರೆ ಬೇರೆ ರೀತಿಯ ಆಯಾಮಗಳೂ ಇವೆ.  ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದ್ಏಶ ದೊಡ್ದದು ಎಂಬ ಬಿಜೆಪಿಯ ಸಿದ್ಧಾಂತವೂ ಈಗ ಉಳಿದಂಅತೆ ಕಾಣುತ್ತಿಲ್ಲ. ಕರ್ನಾಟಕದಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಪಕ್ಷಕ್ಕಿಂತ ದೊಡ್ಡದಾಗಿ ಬೆಳೆದವರು  ಯಡಿಯೂರಪ್ಪ. ಅವರು ಹೀಗೆ ಬೆಳೆಅಯುವಾಗ ಸುಮ್ಮನಿದ್ದ ನಾಯಕತ್ವಕ್ಕೆ ಈಗ ಯಡಿಯೂರಪ್ಪನವರೇ ನುಂಗಲಾರದ ತುತ್ತಾಗಿದ್ದಾರೆ. ಅವರನ್ನು ಇಟ್ಟು ಕೊಳ್ಳಲೂ ಆಗದೇ ಕಳಿಹಿಸಿಕೊಡಲೂ ಸಾಧ್ಯವಾಗದ ಅಸಹಾಯಕ ಸ್ಥಿತಿಗೆ ಬಿಜೆಪಿ ತಲುಪಿ ಬಿಟ್ಟಿದೆ. ಈಗ ಯಡೀಯೂರಪ್ಪ ಪಕ್ಷದಲ್ಲಿ ಇದ್ದರೂಸಮಸ್ಯೆ. ಪಕ್ಷ ಬಿಟ್ಟರೂ ಸಮಸ್ಯ.
ಯಡಿಯೂರಪ್ಪನವರಿಗೆ ಭಸ್ಮಾಸುರ ಹಸ್ತವನ್ನು ನೀಡಿದ್ದೇ ಬಿಜೆಪಿ ನಾಯಕತ್ವ.ಪಕ್ಷದ ಸ್ವರೂಪಕ್ಕೆ ಕೊಡಲಿ ಪೆಟ್ಟು ಬೀಳುವಂತಾ ಬೆಳವಣಿಗೆ ಆಗುತ್ತಿದ್ದರೂ ಅದನ್ನು ನೋಡಿಕೊಂಡು ಸುಮ್ಮನೆ ಕುಳಿತವರು ಬಿಜೆಪಿ ವರಿಷ್ಠರು. ಹೀಗಾಗಿ ಈ ಹಸ್ತ ತನ್ನ ತಲೆಯ ಮೇಲೆ ಬಂದರೂ ಏನು ಮಾಡಲಾಗದ ಹಂತವನ್ನು ಬಿಜೆಪಿ ತಲುಪಿ ಬಿಟ್ಟಿದೆ.
ಸೈದ್ಧಾಂತಿಕ ರಾಜಕಾರಣದಿಂದ ಅಧಿಕಾರ ರಾಜಕಾರಣಕ್ಕೆ ಸರಿಯುತ್ತಿರುವ ಬಿಜೆಪಿ, ವಿಚಿತ್ರ ತೊಳಲಾಟದಲ್ಲಿದೆ. ಅಧಿಕಾರ ರಾಜಕಾರಣದ ಪಟ್ಟುಗಳು ಪಕ್ಷಕ್ಕೆ ಕರಗತವಾಗಿಲ್ಲ.  ಹೀಗಾಗಿ ಯಡಿಯೂರಪ್ಪನಂತವರು ಎಡವುತ್ತಾರೆ. ಸರ್ಕಾರವನ್ನು ಉಳಿಸಿಕೊಳ್ಳುವ ಭರದಲ್ಲಿ  ಭ್ರಷ್ಟಾಚಾರದ ಕೂಪದಲ್ಲಿ ಕಳೆದು ಹೋಗುವ  ಸ್ಥಿತಿ ನಿರ್ಮಾಣವಾಗುತ್ತದೆ. ಅಧಿಕಾರ ರಾಜಕಾರಣದಲ್ಲಿ ಸೈದ್ಧಾಂತಿಕ ರಾಜಕಾರಣ ಎಷ್ಟರ ಮಟ್ಟಿಗೆ ಇರಬೇಕು  ಇವೆರಡರ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುಫುದು ಹೇಗೆ ಎಂಬದು ತಿಳಿಯದೇ ಪಕ್ಷ  ಗೊಂದಲಕ್ಕೆ ಸಿಕಲುಕಿಕೊಳ್ಳುತ್ತದೆ.
ಕಳೆದು ನಾಲ್ಕು ವರ್ಷಗಳಲ್ಲಿ ಬಿಜೆಪಿ ಎಂಬ ಪಕ್ಷದಲ್ಲಿ ಆದ ಆಗುತ್ತಿರುವ ಬದಲಾವಣೆಗಳು ಈ ಪಕ್ಷಕ್ಕೆ  ಮತ್ತೆ ಅಧಿಕಾರವನ್ನು ನೀಡುತ್ತದೆ ಎಂದು ಹೇಳುವುದು ಕಷ್ಟ, ಗಂಡ ತರುವ ಹೊಸ ಸೀರೆಗಾಗಿ ಹಳೆಯ ಸೀರೆಯನ್ನು ಸುಟ್ಟುಕೊಂಡ ಗೃಹಿಣಿಯ ದುರಂತ ಸ್ಥಿತಿಗೆ ಬಿಜೆಪಿ ಬಂದು ನಿಂತಿದೆ. ಅತ್ತ ಹೊಸ ಸೀರೆಯೂ ಇಲ್ಲ. ಇತ್ತ ಹಳೆಯ ಸೀರೆಯೂ ಇಲ್ಲ. ಎಲ್ಲರ ಎದುರು ನಗ್ನವಾಗುವ   ದುರಂತ ಬಿಜೆಪಿಯದು.