Sunday, June 10, 2012

ನನ್ನೂರಿನ ಮಳೆ ಮತ್ತು ನನ್ನ ಬಣ್ಣದ ಕೊಡೆ.

ಜೂನ್ ತಿಂಗಳ ಮೊದಲ ವಾರ. ಆಕಾಶದಲ್ಲಿ ಮೋಡಗಳು  ಎಲ್ಲಿಂದಲೋ ಬಂದು ಇನ್ನೆಲ್ಲಿಗೋ ಹೋಗಲು ಪ್ರಾರಂಭಿಸುತ್ತಿದ್ದವು. ಅಷ್ಟರಲ್ಲಿ ಮಳೆಗಾಲವನ್ನು ಎದುರಿಸಲು ಎಲ್ಲ ಸಿದ್ಧತೆಯೂ ಆಗುತ್ತಿತ್ತು. ಮನೆಗೆ ಹೊಸ ಸೋಗೆಯನ್ನು ಹಾಕಿ ಮುಗಿದಿರುತ್ತಿತ್ತು. ಗದ್ದೆ ನೆಟ್ಟಿಯ ಕೆಲಸವೂ ನಡೆಯುತ್ತಿತ್ತು. ಇನ್ನೊಂದೆಡೆ ಕೊನೆಗೆ ಔಷಧ ಹೊಡೆಯಬೇಕು, ಇಲ್ಲದಿದ್ದರೆ ಕೊಳೆ ರೋಗ ಬಂದು ಅಡಿಕೆಯೆಲ್ಲ ಉದುರಿ ಹೋಗುವುದು ಗ್ಯಾರಂಟಿ.
ಹಿರಿಯರು ಹೀಗೆ ಮಳೆಯನ್ನು ಎದುರಿಸಲು ಸಿದ್ಧರಾಗುತ್ತಿದ್ದರೆ, ಹುಡುಗರಿಗೆ ಅಂತಹ ಕೆಲಸವೇನಿಲ್ಲ. ಆಗ ತಾನೆ ಶಾಲೆ ಪ್ರಾರಂಭವಾಗಿ ಇನ್ನು ಪಾಠ ಪ್ರವಚನಗಳಿಗೆ ರಂಗು ಬಂದಿರುತ್ತಿರಲಿಲ್ಲ.  ಶಾಲೆಯ ಕಟ್ಟಡದ ಮೇಲಿನ ಒಡೆದ ಹಂಚುಗಳನ್ನು ಬದಲಿಸುವ ಕೆಲಸನ್ನು ಮಾಸ್ತರು ನಮಗೆ ಹಚ್ಚುತ್ತಿದ್ದರು. ನಾವು ಕಟ್ಟಡವನ್ನು ಏರಿ ಒಡೆದು ಹೋದ ಹಂಚುಗಳನ್ನು ತೆಗೆದು ಹೊಸ ಹಂಚುಗಳನ್ನು ಹಾಕುತ್ತಿದ್ದವು. ಇನ್ನೊಂದೆಡೆ ಹೊಸ ವರ್ಷಕ್ಕಾಗಿ ಬರಲಿರುವ ಮಳೆಗಾಲವನ್ನು ಎದುರಿಸುವುದಕ್ಕಾಗಿ ನಮಗೆ ಮನೆಯಲ್ಲಿ ಹೊಸ ಕಂಬಳಿ ತರುತ್ತಿದ್ದರು. ಈ ಕಂಬಳಿಯ ಕೊಪ್ಪೆಗೆ ಮಧ್ಯದಲ್ಲಿ ಪ್ಲಾಸ್ಟಿಕ್ ಹಾಕಿ ನೀರು ಒಳಗೆ ಬರದಂತೆ ನಾವೆಲ್ಲ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು.
ಮನೆಯಲ್ಲಿ ಅಮ್ಮ ಅಮ್ಮಮ್ಮ  ಅತ್ತೆಯರು ಮಳೆಗಾಲವನ್ನು ಎದುರಿಸುವ ಸಿದ್ಧತೆಯಲ್ಲಿ ತೊಡಗುತ್ತಿದ್ದರು. ಮಳೆಗಾಲದಲ್ಲಿ ಸುಟ್ಟು ತಿನ್ನುವುದಕ್ಕಾಗಿ ಹಪ್ಪಳ ಸಂಡಿಗೆಯ ರಾಶಿ ಸಿದ್ಧವಾಗಿ ಅಟ್ಟವನ್ನು ಸೇರಿರುತ್ತಿತ್ತು. ಹಾಗೆ ಗೇರು ಭೀಜ, ಹಲಸಿನ ಬೀಜದ ಮೂಟೆಯೂ ಅಟ್ಟದ ಮೇಲೆ ವಿರಾಜಮಾನವಾಗಿರುತ್ತಿತ್ತು.
ಶಾಲೆಗೆ ಹೋಗುತ್ತಿದ್ದ ನಾವು ಗದ್ದ ಮತ್ತು ತೋಟಕ್ಕೆ  ಊಟ ಮತ್ತು ತಿಂಡಿಯನ್ನು ಕೊಟ್ಟು ಬರುವ ಕೆಲಸವನ್ನು ಮಾಡಲೇಬೇಕಾಗಿತ್ತು. ಅದು ನಮ್ಮ ದಿನಚರಿಯ ಭಾಗ. ಬೀಳುತ್ತಿರುವ ಮಳೆಯಲ್ಲೇ ತಿಂಡಿ ಮತ್ತು ಊಟದ ಗಂಟನ್ನು ನೆನೆಯದಂತೆ ಹಿಡಿದುಕೊಂಡು ಎರಡು ಕಿಮೀ ದೂರ ನಡೆದು ಕೊಟ್ಟು ಬಂದ ಮೇಲೆ ಮನೆಯ ಜವಾಬ್ದಾರಿ ಮುಗಿದಂತೆ. ನಂತರ ಪಾಟಿ ಚೀಲವನ್ನು ಹಿಡಿದು ಶಾಲೆಗೆ ಓಡುತ್ತಿದ್ದೆವು.
ಜೂನ್ ಮೊದಲವಾದ ಆಕಾಶದಲ್ಲಿ ಮೋಡಗಳ ನರ್ತನ ಪ್ರಾರಂಭವಾಗುತ್ತಿದ್ದಂತೆ ಇನ್ನು ಒಂದೆರಡು ದಿನಗಳಲ್ಲಿ ಮಳೆ ಹಿಡೀತು ಎಂದು ಅಜ್ಜ ಹೇಳುವುದು ಮಾಮೂಲು. ಅದರಂತೆ ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಹಿಡಿದು ಬಿಡುತ್ತಿತ್ತು. ನಾವು ತಲೆಯ ಮೇಲೆ ಕಂಬಳಿ ಕೊಪ್ಪೆಯನ್ನು ಹಾಕಿಕೊಂಡು ಶಾಲೆಗೆ ಹೊರಟರೆ ಅಜ್ಜ, ತೋಟಕ್ಕೆ ಹೊರಟು ಬಿಡುತ್ತಿದ್ದ. ತೋಟದ ಎರಡು ಬದಿಗಳಲ್ಲಿ  ಕುಸಿದು ಬೀಳುತ್ತಿದ್ದ ಧರೆಯ ಮಣ್ಣನ್ನು ಹೊಳೆಯ ನೀರಿನಲ್ಲಿ ಕಡಡುವುದು ಅವನ ಕಾಯಕ. ಹಾಗೆ ಧರೆಯನ್ನೇ ಕದಡು ಉಂಟಾದ ಜಾಗದಲ್ಲಿ ಮಳೆಗಾಲ ಮುಗಿದ ಮೇಲೆ ಅಡಿಕೆ ಸಸಿಗಳನ್ನು ಅಜ್ಜ ನೆಡುತ್ತಿದ್ದ. ಹೀಗೆ ಪ್ರತಿ ವರ್ಷ ಮಳೆಗಾಲ ಮುಗಿಯುವ ಹೊತ್ತಿಗೆ ತೋಟ ವಿಸ್ತಾರವಾಗುತ್ತಿತ್ತು.
ಜೂನ್ ತಿಂಗಳಿನಲ್ಲಿ ಮನೆಯ ಬರುವ ಹೊಸ ಅತಿಥಿಯಂತೆ ಮುಜುಗರದಿಂದ ಬರುತ್ತಿತ್ತು. ಆರಿದ್ರ ಮಳೆ ಬರುವ ಹೊತ್ತಿಗೆ ಅದರ ರೂಪವೇ ಬದಲಾಗಿ ಬಿಡುತ್ತಿತ್ತು. ಮನೆ ಬಂದ ಹಳೆಯ ಅತಿಥಿಯಂತೆ, ಯಾವ ಮುಜುಗರವೂ ಇಲ್ಲದೇ ಝಾಡಿಸಲು ಪ್ರಾರಂಬಿಸಿ ಬಿಡುತ್ತಿತ್ತು.  ಇಂತಹ ಮಳೆಯಲ್ಲೂ ಅಜ್ಜ ಧರೆ ಕರಡುವುದನ್ನು ನಿಲ್ಲಿಸುತ್ತಿರಲಿಲ್ಲ. ಆತ ನಾವು ಶಾಲೆಯಿಂದ ತಿರುಗಿ ಬಂದ ಮೇಲೂ ಆತ ಬರದಿದ್ದರೆ ನಾವು ಆತನನ್ನು ಹುಡುಕಿಕೊಂಡು ಬರಲು ತೋಟದತ್ತ ಹೋಗುತ್ತಿದ್ದೆವು. ಅಜ್ಜನನ್ನು ಹುಡೂಕಲು ನಮ್ಮನ್ನು ಕಳುಹಿಸುತ್ತಿದ್ದ ಅಮ್ಮಮ್ಮ ಅದಕ್ಕಾಗಿ ಬೇರೆ ಬೇರೆ ರೀತಿಯ ಆಮಿಷವನ್ನು ಒಡ್ಡಬೇಕಾಗುತ್ತಿತ್ತು. ಅಜ್ಜನ ಕೆಟ್ಟ ಬಾಯಿಗೆ ಹೆದರುತ್ತಿದ್ದ ನಾನು  ಈ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಕೊನೆಯ ತನಕ ಯತ್ನ ನಡೆಸುತ್ತಿದ್ದೆ. ಆದರೆ ಯಾವುದೇ ರೀತಿಯ ಯತ್ನವೂ ಫಲಿಸದಿದ್ದಾಗಿ ಮಳೆಯಲ್ಲಿ ಬ್ಯಾಟರಿ ಹಿಡಿದು ಅಜ್ಜನನ್ನು ಹುಡುಕಿಕೊಂಡು ಬರಲು ತೋಟಕ್ಕೆ ನಡೆಯುತ್ತಿದ್ದೆ.
ಆಕಾಶವೇ ಕಳಚಿ ಬೀಳುವ ಹಾಗೆ ಸುರಿಯುತ್ತಿದ್ದ ಮಳೆಯಲ್ಲಿ, ಸಂಜೆಯ ಕತ್ತಲೆಯಲ್ಲಿ ಧರೆ ಕರಡುತ್ತಿದ್ದ ಅಜ್ಜ ನನ್ನನ್ನು ನೋಡುತ್ತಿದ್ದ ಹಾಗೆ ಬೈಯಲು ಪ್ರಾರಂಭಿಸುತ್ತಿದ್ದ.
ಮಳೆ ನೀರಲ್ಲಿ ಕೊಚ್ಚಿಕಂಡು ಹೊದ್ನೋ ಇಲ್ಲವೋ ನೋಡದಕ್ಕೆ ಬಂದ್ಯಾ ಎಂದು ಸ್ವಾಗತ ಕೋರುತ್ತಿದ್ದ. ನಿಮಗೆ ಯಾಕೆ ಸಂಸಾರ ಬೇಕು ? ಜವಾಬ್ದಾರಿನೇ ಇಲ್ಲ ಎಂದು ತನ್ನ ಸಹಸ್ರನಾಮವನ್ನು ಮುಂದುವರಿಸುತ್ತಿದ್ದ. ಆತ ಇಷ್ಟೆಲ್ಲ ಬೈದರೂ ಆತನ ಬಗ್ಗೆ ನನಗೆ ಪಾಪ ಅನ್ನಿಸುತ್ತಿತ್ತು. ಕಂಪನೆಯ ಮಣ್ಣು ನೀರಿನಲ್ಲಿ ಪೂರ್ಣ ಒದ್ದೆಯಾಗಿರುತ್ತಿದ್ದ ಅಜ್ಜನನ್ನು ಗುರುತಿಸುವುದೇ ಸಾಧ್ಯವಾಗುತ್ತಿರಲಿಲ್ಲ. ಆತನ ಈ ವಿಚಿತ್ರನ್ ರೂಪವನ್ನು ನೋಡುತ್ತಲೇ ನಾವು ಮನೆಗೆ ಹಿಂತಿರುಗುತ್ತಿದ್ದೆವು.
ನಮ್ಮ ಕೋಲಸಿರ್ಸಿ ಶಾಲೆಗೆ ಬರುತ್ತಿದ್ದ ಎಲ್ಲ ಹುಡುಗರೂ ಕಂಬಳಿ ಕೊಪ್ಪೆಯನ್ನು ಹಾಕಿಕೊಂಡೇ ಬರುತ್ತಿದ್ದರು. ಬಡವರ ಮಕ್ಕಳಿಗೆ ಕೊಡೆ ಅಪರಿಚಿತ. ಜೊತೆಗೆ ಭಾರಿ ಮಳೆಗೆ ಕಂಬಳಿ ಹೆಚ್ಚು ಸುರಕ್ಷಿತ. ಆದರೆ ಆಗಲೇ ನಾಗರಿಕ ನಾಗುತ್ತಿದ್ದ ನಾನು ನನಗೆ ಕೊಡೆಯನ್ನು ಕೊಡಿಸಲೇ ಬೇಕು ಎಂದು ಗಂಟ್ಉ ಬೀಳುತ್ತಿದ್ದೆ. ಆದರೆ ಅಪ್ಪ ಇದಕ್ಕೆ ಸೊಪ್ಪು ಹಾಕಿರಲಿಲ್ಲ.ಕೊನೆಗೆ ಕೊಡೆ ಕೊಡಿಸದಿದ್ದರೆ ನಾನು ಶಾಲೆಗೆ ಹೋಗುವುದೇ ಇಲ್ಲ ಎಂದು ಹಠ ಹಿಡಿದೆ. ಕೊನೆಗೆ ಅಮ್ಮಮ್ಮನ ಮಧ್ಯಸ್ಥಿಕೆಯಲ್ಲಿ ಅಪ್ಪ ಕೊಡೆ ಕೊಡಿಸಲು ಒಪ್ಪಿಕೊಂಡ. ಮರುದಿನವೇ ಸಿದ್ದಾಪುರದಿಂಡ ಕೆಂಪನೆಯ ಬಣ್ಣದ ಕೊಡೆಯನ್ನು ತಂಡು ಕೊಟ್ಟ.
ಕೊಡೆ ಬಂದ ಮೇಲೆ ನನ್ನ ಗೈರತ್ತೆ ಬದಲಾಗಿ ಹೋಗಿತ್ತು. ಸುಮಾರು 300 ಹುಡುಗರಿದ್ದ ಆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಡೆ ಹಿಡಿದುಕೊಂಡು ಬಂದ ಮೊದಲ ವಿದ್ಯಾರ್ಥಿ ನಾನಾಗಿದ್ದೆ. ಮಾಸ್ತರು ಮತ್ತು ಅಕ್ಕೋರನ್ನು ಬಿಟ್ಟರೆ ಶಾಲೆಗೆ ಕೊಡೆ ತಂದ ಮೊದಲ ವಿದ್ಯಾರ್ಥಿ ನಾನಾಗಿದ್ದೆ.
ಮೊದಲ ದಿನ ಕೊಡೆ ಹಿಡಿದು ಶಾಲೆಗೆ ಹೋದ ದಿನ ಭಾರಿ ಮಳೆ ಬೀಳುತ್ತಿತ್ತು. ಜೊತೆಗೆ ಗಾಳಿ.  ಮನೆಯಿಂದ ನಾಲ್ಕು ಕಿಮೀ ದೂರವಿದ್ದ ಶಾಲೆಗೆ ತಲುಪುವಷ್ಟರಲ್ಲಿ ನಾನು ಸಂಪೂರ್ಣವಾಗಿ ತೊಯ್ದು ಹೋಗಿದ್ದೆ. ಆದರೆ ಕೊಡೆ ಹಿಡಿದು ಬಂದ ಸಂತೋಷದಲ್ಲಿ ಮಳೆಯಲ್ಲಿ ತೊಯ್ದಿದ್ದನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಅವತ್ತಿನ ಮಟ್ಟಿಗಂತೂ ನನ್ನ ಕೆಂಪನೆಯ ಕೊಡೆ ಆಕರ್ಷಣೆಯ ಕೇಂದ್ರವಾಗಿತ್ತು. ಸವಿತಾ ಮತ್ತು ಸುಮಿತ್ರಾ ಅಕ್ಕೋರು ನನ್ನ ಬಳಿ ಬಂದು ಕೊಡೆಯನ್ನು ಮುಟ್ಟಿ ಮುಟ್ಟಿ ನೋಡಿದರು. ಅದರ ಬಣ್ಣ ಆಕ್ರತಿ ಎಲ್ಲವನ್ನೂ ಮೆಚ್ಚಿಕೊಂಡರು. ಜೊತೆಗೆ ಸಿದ್ದಾಪುರದ;ಲ್ಲಿ  ಯಾವ ಅಂಗಡಿಯಲ್ಲಿ ಈ ರೀತಿಯ ಕೊಡೆ ಸಿಗುತ್ತದೆ ಅದರ ಬೆಲೆ  ಎಷ್ತು ಎಂದೆಲ್ಲ ವಿಚಾರಿಸಿಕೊಂಡರು.
ರೀಸಸ್ ಹೊತ್ತಿನಲ್ಲಿ  ಹೊರಕ್ಕೆ ಬಂದ ಹುಡುಗರಿಗೆ ನನ್ನ ಕೊಡೆ ಆಕರ್ಷಣೆಯ ಕೇಂದ್ರವಾಯಿತು. ಬಹಳಷ್ಟು ಹುಡೂಗರು, ಭಾರಿ ಮಳೆಗೆ ಈ ಕೊಡೆ ಉಪಯೋಗ ಇಲ್ಲ ಎಂದು ತೀರ್ಪಿತ್ತರು. ಕಂಬಳಿ ಕೊಡುವ ಬೆಚ್ಚನೆಯ ಸುಖವನ್ನು ಕೊಡೆ ಕೊಡುವುದಿಲ್ಲ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿತ್ತು. ಇಂತಹ ಅಭಿಪ್ರಾಯ್ಗಗಳು ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರರಲಿಲ್ಲ. ನನ್ನ ಸಹಪಾಠಿಗಳಿಗೆ ನನ್ನ ಮೇಲೆ ಈರ್ಷೆ, ಮತ್ಸರ/ ಹೀಗಾಗಿ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂಬ ತೀರ್ಮಾನಕ್ಕೆ ನಾನು ಬಂದಿದ್ದೆ.
ಮಧ್ಯಾಹದ ಹೊತ್ತಿಗೆ ಮಳೆ ಜೋರಾಯಿತು. ಶಾಲೆಯ ಎದುರಿಗಿದ್ದ ಗದ್ದೆ ಬೈಲು ಕೆರೆಯ ಹಾಗೆ ಕಾಣುತ್ತಿತ್ತು. ಸಾಧಾರಣವಾಗಿ ದೊಡ್ಡ ಮಳೆ ಬಂದರೆ ಅವತ್ತು ಶಾಲೆಗೆ ರಜಾ ಕೊಡುವುದು ಸಾಮಾನ್ಯವಾಗಿತ್ತು. ಮಳೆಗಾಲದಲ್ಲಿ ವಾರದಲ್ಲಿ ಎರಡು ಮೂರು ದಿನ ಮಳೆಯ ಕಾರಣದಿಂದ ನಾವು ರಜೆಯ ಮಜಾ ಅನುಭವಿಸುತ್ತಿದ್ದೆವು. ನಮ್ಮ ಕೋಲಸಿರ್ಸಿ  ಶಾಲೆಯಿಂದ ಬಳಗುಳಿಯ ನಮ್ಮ ಮನೆಗೆ ಸುಮಾರು 3 ಕಿಮೀ ದೂರ. ಶಾಲೆಯ ಎದುರಿಗಿನ ದೊಡ್ದ ಗದ್ದೆ ಬೈಲು ದಾಟಿ ಮೋಟು ಕಾನು ಹಾದು ನಡೆಯಬೇಕು. ಗದ್ದೆ ಬೈಲಿನ ನಡುವೆ ಇದ್ದ ಎರಡು ಹೊಳೆಗಳು ತುಂಬಿ ಸಂಕ ನೀರಿನಲ್ಲಿ ಮುಳುಗಿ ಹೋಗುತ್ತಿತ್ತು. ಆಗೆಲ್ಲ ಸಂಕ ಎಲ್ಲಿದೆ ಎಂದು ಗೊತ್ತಾಗದೇ ದೊಡ್ದವರು ಬರುವುದಕ್ಕಾಗಿ ನಾವು ಅಲ್ಲಿಯೇ ಕಾದು ನಿಲ್ಲುತ್ತಿದ್ದೆವು. ಹಾದಿಯಲ್ಲಿ ಬರುವ ದೊಡ್ದವರು ಕೈ ಹಿಡಿದೋ ಎತ್ತಿಕೊಂಡೋ ನಮ್ಮನ್ನು ಹೊಳೆ ದಾಟಿಸುತ್ತಿದ್ದರು. ಹೊಳೆ ದಾಟಿ ಮೊಟು ಕಾನಿನ ದಾರಿಯಲ್ಲಿ ಸಾಗುವುದು ಮಜವೋ ಮಜ.
ಅವತ್ತು ಶಾಲೆ ಬಿಟ್ಟ ಮೇಲೆ ಖುಷಿಯಿಂದ ನಾನು ಮನೆಗೆ ಹೊರಟೆ. ಜೊತೆಗೆ ಸಹಪಾಠಿಯಾಗಿದ್ದ ಪಕ್ಕದ ಮನೆ ಭಾಲಚಂದ್ರ.. ಆತನಿಗೂ ನನ್ನ ಕೊಡೆಯ ಬಗ್ಗೆ ಸ್ವಲ್ಪ ಬೇಸರವಿದ್ದಂತಿತ್ತು. ಯಾಕೆಂದರೆ ಅವನಿಗಿಲ್ಲದ ಕೊಡೆ ನನ್ನ ಬಳಿ ಇತ್ತು.  ನಾನುಅ ನನ್ನ ಬಣ್ಣದ ಕೊಡೆಯನ್ನು ಹಿಡಿದು ಗತ್ತಿನಲ್ಲಿ ಮನೆಗೆ ಹೊರಟೆ. ಕೋಲಸಿರ್ಸಿಯ ಹಿರಿಯೊಬ್ಬರು ನಮ್ಮ ಜೊತೆಗೆ ಬಂದು ಸಣ್ಣ ಹೆಗಡೆರನ್ನು ಹಳ್ಳ ದಾಟಿಸಿ ಬಿಟ್ಟರು. ಹುಷಾರಿಂದ ಮನೆಗೆ ಹೋಗಿ ಹೆಗ್ಡೆರೇ ಎಂದು ಬುದ್ದಿ ಮಾತು ಹೇಳಿ ಅವರು ಹಿಂತಿರುಗಿದರು.ಅಷ್ಟರಲ್ಲಿ  ಮಳೆ ಗಾಳಿ ಇನ್ನಷ್ಟು ಜೋರಾಯಿತು.  ಅಕ್ಕ ಪಕ್ಕ ಇದ್ದರು ಆ ಮಳೆಯಲ್ಲಿ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣುತ್ತಿರಲಿಲ್ಲ. ಜೊತೆಗೆ ಎಂತಹ ಗಾಳಿ ಬೀಸುತ್ತಿತ್ತೆಂದರೆ ನನಗೆ ಕೊಡೆ ಹಿಡಿಯುವುದು ಸಾಧ್ಯವೇ ಇಲ್ಲ ಎಂದು ಅನ್ನಿಸತೊಡಗಿತ್ತು. ನಾನು ಹರ ಸಾಹಸ ಮಾಡಿ ಕೊಡೆ ಹಿಡಿದುಕೊಳ್ಳಲು ಯತ್ನ ನಡೆಸುತ್ತಿದ್ದೆ.  ಬಾಲಚಂದ್ರ ಮಾತ್ರ ಕಂಬಳಿ ಕೊಪ್ಪೆಯ ಒಳಗೆ ಬೆಚ್ಚಗಿದ್ದ. ಅವನ ಮುಖವನ್ನು ಬಿಟ್ಟರೆ ಬೇರೆ ಎಲ್ಲಿಗೂ ನೀರು ತಾಗುತ್ತಿರಲಿಲ್ಲ.
ನಾವು ಗದ್ದೆ ಬೈಲನ್ನು ದಾಟಿ ಮೋಟು ಕಾನಿನ ಸಮೀಪ ಬಂದೆವು. ಅಲ್ಲಿ ನೀರು ಹರಿದು ಕಾಲು ಜಾರುತ್ತಿತ್ತು. ಮರ ಗಿಡಗಳು ಗಾಳಿಗೆ ಅತ್ತಿಂದಿತ್ತ ಒಲಾಡುತ್ತಿದ್ದವು.  ಪ್ರಕೃತಿ ಸೆಟೆದು ನಿಂತಿತ್ತು.  ಒಮ್ಮೆಲೆ ಗಾಳಿ ಜೋರಾಗಿ ಬೀಸಿ ನನ್ನ ಕೈಯಲ್ಲಿದ್ದ ಕೊಡೆಯನ್ನು ಹಾರಿಸಿಕೊಂಡು ಹೋಯಿತು.  ನನ್ನ ಕೆಂಪು ಬಣ್ಣದ ಕೊಡೆ ಅಕಾಶದಲ್ಲಿ ಹಾರುತ್ತ  ದೊಡ್ಡ ನೇರಲೆ ಮರದ ತುದಿಗೆ ಹೋಗಿ ವಿರಾಜ ಮಾನವಾಯಿತು. ಆ ಮರ ಎಷ್ತು ದೊಡ್ದದೆಂದರೆ ಅದನ್ನು ಹತ್ತುವ ಮಾತಿರಲಿ ತಲೆ ಎತ್ತಿ ನೋಡುವುದು ಕಷ್ಟವಾಗಿತ್ತು.
ನಾನು ಅಳತೊಡಗಿದೆ. ಮಳೆಯಲ್ಲಿ ನೆನಯುತ್ತಿರುವುದಕ್ಕಿಂತ ನನ್ನ ಬಣ್ಣದ ಕೊಡೆ ಕೈತಪ್ಪಿ ಹೋದ ದುಃಖ ನನನ್ನು ಹೆಚ್ಚಾಗಿ ಕಾಡುತ್ತಿತ್ತು.  ಸುರಿಯುತ್ತಿರುವ ಮಳೆಯಲ್ಲಿ ಅಸಹಾಯಕನಾದ ನಾನು ಅಳುತ್ತಲೇ ಮನೆಗೆ ಬಂದೆ. ಅಮ್ಮಮ್ಮ ತನ್ನ ಸೀರೆಯ ಸೆರಗಿನಲ್ಲಿ ತಲೆ ಒರೆಸಿದಳು. ಬಿಸಿಯಾಗಿ ಖಷಾಯ ಮಾಡಿಕೊಟ್ಟಳು. ಕೊಡೆ ಕಳೆದಿದ್ದನ್ನ ಅಪ್ಪಂಗೆ ಹೇಳಡಾ ಅವ ಬೈತಾ ಎಂದು ಬುದ್ದಿ ಮಾತು ಹೇಳಿದಳು. ಆದರೂ ನಾನು ಅಳುತ್ತಲೇ ಮೆತ್ತಿಗೆ ಹೋಗಿ ಚಾದರ ಹೊದ್ದು ಮಲಗಿದೆ. ಆ ರಾತ್ರಿ ಕನಸಿನಲ್ಲಿ ಬಣ್ಣದ ಕೊಡೆ ಬಂದು ನನ್ನ ಜೊತೆ ಮಾತನಾಡಿತು. ಮರುದಿನ ನಾನು ಜ್ವರ ಬಂದು ಮಲಗಿದೆ. ನಾಲ್ಕು ದಿನ ಶಾಲೆಗೆ ಹೋಗಲಿಲ್ಲ.

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...