Monday, August 13, 2012

ಗಾಂಧಿ, ಹಜಾರೆ ಮತ್ತು ತಲೆಯ ಮೇಲಿನ ಟೋಪಿ......!

ಮೋಹನ ದಾಸ್ ಕರಮಚಂದ್ ಗಾಂಧಿ. ಈ ಹೆಸರು ಈಗ ಅಷ್ಟು ಪ್ರಚಾರದಲ್ಲಿ ಇರುವ ಹೆಸರಲ್ಲ. ಇಂದಿನ ಯುವ ಜನಾಂಗಕ್ಕೆ ಗಾಂಧಿ ಎಂಬ ಹೆಸರು ಅಂಥ ಪ್ರಭಾವ ಬೀರುತ್ತದೆ ಎಂಬ ಭ್ರಮೆ ಕೂಡ ನನಗಿಲ್ಲ. ನಾನು ಚಾನಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅಕ್ಟೋಬರ್ 2 ರಂದು ಎಲ್ಲ ಕಾಲೇಜುಗಳಿಗೆ ನಮ್ಮ ಹುಡುಗರನ್ನು ಕಳುಹಿಸಿ ಗಾಂಧಿ ನಿಮಗೆ ಗೊತ್ತಾ ಎಂದು ಪ್ರಶ್ನೆ ಕೇಳುವಂತೆ ಸೂಚಿಸಿದ್ದೆ. ನಮ್ಮ ಹುಡುಗರು ಸಂದರ್ಶಿಸಿದ ಪ್ರತಿ ಶತ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋನಿಯಾ ಗಾಂಧಿಯಿಂದ ಪೂಜಾ ಗಾಂಧಿಯವರೆಗೆ ತಮಗೆ ಗೊತ್ತಿದ್ದ ಎಲ್ಕ ಡುಪ್ಲಿಕೇಟ್ ಗಾಂಧಿಗಳ ಹೆಸರು ಹೇಳಿದ್ದರು ! ಆದರೆ ಮೋಹನದಾಸ್ ಕರಮಚಂದ್ ಗಾಂಧಿಯ ಹೆಸರು ಹೇಳಿದವರು ಕೆಲವೇ ಕೆಲವರು. ಇದರಿಂದ ನನಗೆ ಆಗ ಆಶ್ಚರ್ಯವಾಗಿರಲಿಲ್ಲ. ಮನಸ್ಸಿನ ಮೂಲೆಯಲ್ಲಿ ಸಣ್ಣ ನೋವು, ವೇದನೆ ಉಂಟಾಗಿತ್ತು.
ಈಗ ನಾನು ಮತ್ತೆ ಅದ್ಸೇ ಹಳೆಯ ಪ್ರಶ್ನೆಯನ್ನು ಮತ್ತೆ ಕೇಳುವ ಸಾಹಸ ಮಾಡುವುದಿಲ್ಲ. ಯಾಕೆಂದರೆ ಮಹಾತ್ಮಾ ಗಾಂಧಿ ರಸ್ತೆ ಎನ್ನುವುದೇ ಎಂ.ಜಿ. ರಸ್ತೆಯಾದ ಕಾಲ ಇದು. ಇದನ್ನು ನಾನು ಮರೆಯುವಿಕೆ ಮತ್ತು ಬದಲಾವಣೆಯ  ಪರಿ ಎಂದು ಭಾವಿಸುತ್ತೇನೆ.
ಇದು ಒಂದು ರೀತಿಯ ವಿಸ್ಮೃತಿ. ಎಲ್ಲ ಕಾಲಘಟ್ಟದಲ್ಲಿಯೂ ಸ್ದಮಾಜ ಇಂತಹ ವಿಸ್ಮೃತಿಗೆ ಒಳಗಾಗುತ್ತದೆ. ಇತಿಹಾಸ ಎನ್ನುವುದು ಕಾಲಕ್ಕೆ ಸಂಬಂಧಿಸಿರುವುದರಿಂದ ಅದು ಪ್ರತಿ ಕ್ಷಣದಲ್ಲೂ ಸೃಷ್ಟಿಯಾಗುತ್ತಲೇ ಇರುತ್ತದೆ, ಇತಿಹಾಸದ ಸಮಾಧಿಯ ಮೇಲೆ ಹೊಸ ಇತಿಹಾಸ ಸೃಷ್ಟಿಯಾಗುತ್ತದೆ. ಹಾಗೆ ಇತಿಹಾಸ ನಮಗೆ ಪಾಠ ಹೇಳುತ್ತ ವರ್ತಮಾನವನ್ನು ಹೆಚ್ಚು ಅರ್ಥಪೂರ್ಣವಾಗಿ ಮಾಡಲು ಶ್ರಮಿಸುತ್ತಿರುತ್ತದೆ. ಹಾಗೆ ಇತಿಹಾಸ ಹೊಸ ಅಂಗಿ ಧರಿಸಿ ವರ್ತಮಾನದಲ್ಲಿ ಪ್ರಕಟವಾಗುವ ರೀತಿ ಕೂಡ ಕುತೂಹಲಕರ. ಇತಿಹಾಸವನ್ನು ನಾವು ಬಾಷೆಯ ಮೂಲಕ ಅರ್ಥ ಮಾಡಿಕೊಳ್ಳಲು ಯತ್ನಿಸಿದರೂ ಅಕ್ಷರಗಳನ್ನು ಮೀರಿದ ಸಂಕೇತಗಳು ಅದರೊಳಗೆ ಅವಿತಿರುತ್ತವೆ. ಇತಿಹಾಸ ನಮಗೆ ಸಂಪೂರ್ಣವಾಗಿ ಅರ್ಥವಾಗುವುದು ಈ ಸಂಕೇತಗಳ ಒಗಟನ್ನು ಬಿಡಿಸಲು ನಮಗೆ ಸಾಧ್ಯವಾದಾಗ ಮಾತ್ರ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ ಇತಿಹಾಸ ಎನ್ನುವುದು ಯಾರೋ ದಾಖಲೆ ಮಾಡಿದ ಘಟನೆಗಳ ಅಕ್ಷರ ರೂಪ ಮಾತ್ರ ಆಗಿರುವುದಿಲ್ಲ. ಈ ಅಕ್ಷರಗಳು ಒಂದಾಗಿ ಹೊರಬಂದ ಶಬ್ದ ಮತ್ತು ಶಬ್ದದೊಳಗೆ ಇರುವ ಸಂಕೇತಗಳು ಬಹಳ ಮುಖ್ಯ.
ನನಗೆ ಮಹಾತ್ಮಾ ಗಾಂಧಿ ಗೊತ್ತಾಗುವುದಕ್ಕೆ ಮೊದಲು ಗಾಂಧಿ ಟೋಪಿ ಗೊತ್ತಿತ್ತು. ನನ್ನ ಅಪ್ಪ ಮತ್ತು ಅಜ್ಜ ಎಲ್ಲಿಗೆ ಹೋಗುವುದಿದ್ದರೂ ತಲೆಯ ಮೇಲೆ ಗಾಂಧಿ ಟೋಪಿ ಇಲ್ಲದೇ ಹೋಗುತ್ತಿರಲಿಲ್ಲ. ಮನೆಯಲ್ಲಿ ಅವರು ಇರುವಾಗ ಟೋಪಿ ಮನೆಯ ಒಳಗಿನ ಗಿಳಿ ಗೂಟದ ಮೇಲೆ ನೇತಾಡುತ್ತಿತ್ತು. ಹೀಗಾಗಿ ಗಿಳಿ ಗೂಟದ ಮೇಲೆ ಟೋಪಿ ಇದ್ದರೆ ಅಪ್ಪ ಅಜ್ಜ ಮನೆಯಲ್ಲಿ ಇದ್ದಾರೆ ಎಂಬುದು ನಮಗೆ ಸ್ಪಷ್ತವಾಗುತ್ತಿತ್ತು.  ಅಜ್ಜ ಮತ್ತು ಅಪ್ಪನ ಟೋಪಿಗೆ ನಮ್ಮ ಮನೆಯಲ್ಲಿ ಗಾಂಧಿ ಟೋಪಿ ಎಂದು ಕರೆಯುತ್ತಿರಲಿಲ್ಲ. ಅದು ಬರೀ ಟೋಪಿ. ಇದಕ್ಕೆ ಬಹು ಮುಖ್ಯ ಕಾರಣ ಸ್ವಾತಂತ್ಯ್ರ ಹೋರಾಟಗಾರನಾಗಿದ್ದ ನನ್ನ ಅಜ್ಜನಿಗೆ ಗಾಂಧಿಯ ಬಗ್ಗೆ ಕೆಲವು ಭಿನ್ನಾಭಿಪ್ರಾಯಗಳಿದ್ದವು. ಆತ ಗಾಂದ್ಘಿಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿರಲಿಲ್ಲ. ಮಹಾನ ಜಗಳ ಗಂಟನಾಗಿದ್ದ ಅಜ್ಜನಿಗೆ ಸುಭಾಷಚಂದ್ರ ಭೋಸ್ ಎಂದರೆ ಇಷ್ತವಾಗಿತ್ತು. ಜೊತೆಗೆ ಸ್ವಾತಂತ್ರ್ಯ ಹೋರಾಟದ ಸಂಪೂರ್ಣ ಕ್ರೆಡಿಟ್  ಅನ್ನು ಸಂಪೂರ್ಣವಾಗಿ ಗಾಂಧೀಜಿಗೆ ಕೊಡಲು ನನ್ನ ಅಜ್ಜ ಸಿದ್ದನಿರಲಿಲ್ಲ.  ನನ್ನ ಅಪ್ಪ ಮತ್ತು ಅಜ್ಜ ನಾವೆಲ್ಲ ದೊಡ್ಡವರಾಗುವ ಹೊತ್ತಿಗೆ ಟೊಪಿ ಹಾಕುವುದನ್ನು ನಿಲ್ಲಿಸಿದ್ದರು. ಆದರೆ ಖಾದಿಯನ್ನು ಮಾತ್ರ ಅವರು ಸಾಯುವವರೆಗೂ ಬಿಡಲಿಲ್ಲ.
ನನಗೆ ಅನ್ನಿಸುವ ಹಾಗೆ ಟೊಪಿ ಹಾಕುವುದು ಬೇರೆ ಬೇರೆ ಅರ್ಥಗಳನ್ನು ಪಡೆದು ಬಿಟ್ಟಿತ್ತು. ಯಾರಿಗಾದರೂ ಮೋಸ ಮಾಡಿದರೆ ಆತ ಟೊಪಿ ಹಾಕಿದ ಎಂಬ ನಾಣ್ನುಡಿ ಪ್ರಚಲಿತಕ್ಕೆ ಬಂದಿದ್ದರಿಂದ ಅವರು ಟೋಪಿ ಹಾಕುವುದನ್ನು ನಿಲ್ಲಿಸಿರಬಹುದು ಎಂದು ನನಗೆ ಈಗ ಅನ್ನಿಸುತ್ತದೆ.
ಅಪ್ಪ ಯಾವಾಗಲೂ ಖಾದಿ ಹಾಕುತ್ತಿದ್ದವ ಅದು ಗರಿ ಗರಿಯಾಗಿ ಇರುವಂತೆ ನೋಡಿಕೊಳ್ಲುತ್ತಿದ್ದ, ಅದಕ್ಕೆ ಅಮ್ಮ ಗಂಜಿ ಹಾಕಿ ತೊಳದ ಮೇಲೆ ದೋಬಿಯ ಹತ್ತಿರ ಇಸ್ತ್ರಿ ಹಾಕಿಸಿಯೇ ಧರಿಸುತ್ತಿದ್ದ. ಹೀಗೆ ಬಟ್ಟೆಯನ್ನು ಇಸ್ತ್ರಿಗೆ ಕೊಡುವಾಗ ಟೋಪಿಯನ್ನು ಜೊತೆಗೆ ಕಳುಹಿಸುತ್ತಿದ್ದ. ಇಸ್ತ್ರಿ ಮಾಡಿಸಿ ತಂದ ಟೊಪಿಅಯನ್ನು ಆತ ವಿಶೇಷ ಸಂದರ್ಭಗಳಲ್ಲಿ ಮಾತ್ರ ಧರಿಸತೊಡಗಿದ. ಅಷ್ಟರಲ್ಲಿ ಟೋಪಿ ಮರೆಯಾಗತೊಡಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದವರು ಕಾಂಗ್ರೆಸ್ ಆಡಳಿತವನ್ನು ನೋಡೀ ಬೇಸತ್ತು ಖಾದಿಯನ್ನು ಟೋಪಿಯನ್ನು ಧ್ವೇಷಿಸಲು ಪ್ರಾರಂಭಿಸಿದ್ದರು.
ನಾನು ಬೆಂಗಳೂರಿಗೆ ಬಂದು ಪತ್ರಿಕೋದ್ಯಮಿ ಆದ ಮೇಲೆ ಊರಿಗೆ ಹೋಗುವುದು ಕಡಿಮೆಯಾಯಿತು. ಅಪರೂಪಕ್ಕೆ ಊರಿಗೆ ಹೋದರೂ ಅಪ್ಪ ಟೋಪಿ ಧರಿಸಿದ್ದನ್ನು ಮತ್ತೆ ನೋಡಲಿಲ್ಲ. ಆದರೆ ಅಜ್ಜ ಮಾತ್ರ ಸಾಯುವವರೆಗೂ ಟೋಪಿ ಧರಿಸುವುದನ್ನು ಬಿಟ್ಟರಲಿಲ್ಲ.
ನನ್ನ ವಿಚಾರಕ್ಕೆ ಬರುವುದಾದರೆ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ವದ ದಿನದಂದು ಮಾತ್ರ ಟೋಪಿ ಧರಿಸುತ್ತಿದ್ದೆ. ಕೊನೆಗೆ ಅಪ್ಪ ಅಜ್ಜನ ಜೊತೆ ಜಗಳವಾಡಲು ಶುರು ಮಾಡಿದ ಮೇಲೆ ಟೋಪಿಯನ್ನು ವಿರೋಧಿಸತೊಡಗಿದೆ. ಯಾಕೆಂದರೆ ಟೋಪಿ ಎನ್ನುವುದು ಅಪ್ಪ ಮತ್ತು ಅಜ್ಜನನ್ನು ಸಂಕೇತಸುತ್ತಿತ್ತು. ನನಗೆ ಈ ಟೋಪಿ ಯಾವ ರೀತಿ ಕಾಡಲು ತೊಡಗಿತ್ತೆಂದರೆ, ಹೊರಗೆ ಯಾರಾದರೂ ಟೋಪಿ ಧರಿಸಿದವರು ಕಂಡರೆ ಅಪ್ಪ ಅಜ್ಜನನ್ನು ನೋಡ್ಫಿದಂತೆ ಭಾಸವಾಗುತ್ತಿತ್ತು.
ಅಪ್ಪ ಅಜ್ಜನ ನಡುವಿನ ಇನ್ನೊಂದು ವ್ಯತ್ಯಾಸ ಎಂದರೆ ಅಜ್ಜ ಎಂದೂ ಖಾದಿ ಬಟ್ಟೆಗೆ ಇಸ್ತ್ರಿ ಹಾಕಿಸುತ್ತಿರಲಿಲ್ಲ, ಅವನ ತಲೆಯ ಮೇಲಿನ ಟೋಪಿ ಕೂಡ ಇಸ್ತ್ರಿ ಇಲ್ಲದೇ ತಲೆಯ ಬೋಡಿಗೆ ಅಂಟಿಕೊಂಡು ಬಿಡುತ್ತಿತ್ತು. ಹಾಗೆ ಟೋಪಿಯ ಮುಂಭಾಗ ಕಣ್ಣ ಮೇಲಿನ ಹುಬ್ಬಿನವರೆಗೆ ಬಂದು ಮಗುಚಿ ಮಲಗಿ ಬಿಡುತ್ತಿತ್ತು. ಕೆಲವಮ್ಮೊ ಅದು ಕಣ್ಣುಗಳ ಮೇಲೆ ಬಂದು ಅದನ್ನು ಮುಚ್ಚಿದಂತೆ ಕಂಡು ಅಜ್ಜ ಬೇರೆಯವರನ್ನು ಹೇಗೆ ನೋಡುತ್ತಾನೆ ಎಂಬ ಪ್ರಶ್ನೆ ನನಗೆ ಕಾಡುತ್ತಿತ್ತು.
ಅಪ್ಪ ಮಾತ್ರ ಇಸ್ತ್ರಿ ಇಲ್ಲದೇ ಟೋಪಿಯನ್ನಾಗಲೀ, ಬಟ್ಟೆಯನ್ನಾಗಲಿ ಧರಿಸುತ್ತಿರಲಿಲ್ಲ. ಅಪ್ಪ ದಿ ಹಿಂದೂ ಪತ್ರಿಕೆಯನ್ನು ಖಾದಿ ಬಟ್ಟೆಯಷ್ಟೇ ಅಗಾಧವಾಗಿ ಪ್ರೀತಿಸುತ್ತಿದ್ದರೆ ಅಜ್ಜ ಸಂಯುಕ್ತ ಕರ್ನಾಟಕ ಪತ್ರಿಕೆಯನ್ನು ಓದುತ್ತಿದ್ದ. ನನ್ನ ಅಜ್ಜ ನೋಡುವುದಕ್ಕೆ ಸ್ವಲ್ಪ ಮಟ್ಟಿಗೆ ಅಣ್ಣಾ ಹಜಾರೆಯಂತೆ ಕಾಣುತ್ತಿದ್ದ. ಆದರೆ ಅಣ್ಣ ಹಜಾರೆಗೆ ಇರುವ ಮುಗ್ದತೆ ನನ್ನ ಅಜ್ಜನಿಗೆ ಇರಲಿಲ್ಲ. ಆತ ಗಡಸು ಎಂದರೆ ಗಡಸು. ಜೊತೆಗೆ ಮಹಾನ್ ಜಗಳ ಗಂಟ. ಆತನಿಗೆ ಜಗಳವಾಡಲು ಯಾರಾದರೂ ಬೇಕಿತ್ತು. ಯಾರೂ ಸಿಗದಿದ್ದರೆ ಮನೆಯವರ ಜೊತೆಗೆ ಜಗಳಕ್ಕೆ ಇಳಿದು ಬಿಡುತ್ತಿದ್ದ. ಅಷ್ಟರಲ್ಲಿ ಇಂದಿರಾ ಗಾಂಧಿಯ ಕಟ್ಟಾ ಅಭಿಮಾನಿಗಿದ್ದ ಅಜ್ಜ ತುರ್ತು ಪರಿಸ್ಥಿಯನ್ನು ಸಮರ್ಥಿಸುವ ಹಂತಕ್ಕೆ ತಲುಪಿ ಬಿಟ್ಟಿದ್ದ. ಬಂಡಾಯ ಮತ್ತು ಸಮಾಜವಾದಿ ಚಳವಳಿಯ ಪ್ರಭಾವಕ್ಕೆ ಒಳಗಾಗಿದ್ದ ನಾನು ಇಂದಿರಾ ಗಾಂಧಿಯವರನ್ನು ಟೀಕಿಸಲು ಪ್ರಾರಂಬಿಸಿದ್ದೆ. ಹಲವು ಬಾರಿ ಇಂದಿರಾ ಗಾಂಧಿಯವರನ್ನು ಬೈಯುವ ನನ್ನನ್ನು ಹೊಡ್ಫೆಯಲು ಅಟ್ಟಿಸಿಕೊಂಡು ಬಂದಿದ್ದು ಇದೆ. ನಾನು ಅಜ್ಜನ ಹೊಡೆತವನ್ನು ತಪ್ಪಿಸಿಕೊಳ್ಳಲು ಮನೆಯಿಂದಲೇ ಓಡೀ ಹೋಗುತ್ತಿದ್ದೆ.
ಹೀಗೆ ಟೋಪಿಯ ಜೊತೆ ಇಂತಹ ಸಂಬಂಧ ಹೊಂದಿರುವ ನನಗೆ ಅಣ್ಣಾ ಹಜಾರೆಯ ಚಳವಳಿ ಪ್ರಾರಂಭವಾದ ಮೇಲೆ ಮತ್ತೆ ಟೋಪಿ ಕಾಡತೊಡಗಿತು. ಅಣ್ಣಾ ಹಜಾರೆಯ ಜೊತೆ ಉಪವಾಸ ಕುಳಿತ ನಮ್ಮ ಹುಡೂಗ ಹುಡುಗಿಯರ ತಲೆಯ ಮೇಲೆ ಟೋಪಿ ಕಂಡಾಗ ಇವರಿಗೆ ಟೊಪಿ ಎನ್ನುವುದು ಏನು ಎಂಭ ಪ್ರಶ್ನೆ ಕಾಡತೊಡಗಿತು. ಆಗ ನಾನು ನನ್ನ ಸ್ನೇಹಿತರಿಗೆ ಹೇಳಿದೆ ಟೋಪಿ ಹಾಕಿದವರೆಲ್ಲ ಮಹಾತ್ಮಾ ಗಾಂಧಿ ಆಗುವುದಿಲ್ಲ !
ಗಾಂಧಿ ಟೋಪಿಗೂ ಅಣ್ಣಾ ಹಜಾರೆ ಟೋಪಿಗೂ ವ್ಯತ್ಯಾಸವಿದೆ. ಹಾಗೆ ಅಣ್ಣಾ ಹಜಾರೆ ಮೋಹನದಾಸ್ ಕರಮಚಂದ್ ಗಾಂಧಿ ಅಲ್ಲ. ಗಾಂಧೀಜಿ ಸತ್ಯದ ಅನ್ವೇಷಕ. ಅವರ ಬದುಕು ಸತ್ಯದ ಅನ್ವೇಷಣೆಗಾಗಿ ನಡೆಸಿದ ಸುದೀರ್ಘ ಪಯಣ. ಗಾಂಧೀಜಿ ಸತ್ಯವನ್ನು ಹುಡುಕುತ್ತಲೇ ಮುಂದಕ್ಕೆ ನಡೆಯುತ್ತಿದ್ದರು. ತಮ್ಮ ತಪುಗಳನ್ನು ಒಪ್ಪಿಕೊಳ್ಳುವದರ ಜೊತೆಗೆ  ತಾವು ನಂಬಿದ್ದನ್ನು ಪ್ರಬಲವಾಗಿ ಪ್ರತಿಪಾದಿಸುವ ದೃಡತೆ ಅವರಲ್ಲಿ ಇತ್ತು. ಸತ್ಯ ಮತ್ತು ಅಹಿಂಸೆಯನ್ನು ಅವರು ನಂಬಿದ್ದರು. ಬಹಳಷ್ಟು ಜನರು ಈಗ ಗಾಂಧಿಯವರನ್ನು ವಿರೋಧಿಸುತ್ತಿರಬಹುದು. ಆದರೆ ಆ ಕಾಲಘಟ್ಟದಲ್ಲಿ ನಿಂತು ಗಾಂಧಿಜಿಯವರನ್ನು ನೋಡಬೇಕೆ ಹೊರತೂ ಈ ಕಾಲಘಟ್ಟದಲ್ಲಿ ನಿಂತು ಅಲ್ಲ.
ದಕ್ಷಿಣ ಅಫ್ರಿಕಾದಿಂದ ಭಾರತಕ್ಕೆ ಹಿಂತಿರುಗಿದೆ ಗಾಂಧಿ ಈ ದೇಶವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿದರು. ಹರಿಜನ ಮತ್ತು ಯಂಗ್ ಇಂಡಿಯಾ ಪತ್ರಿಕೆಗಳಲ್ಲಿ ಅವರು ಬರೆಯುತ್ತಿದ್ದ ಲೇಖನಗಳು ದೇಶವನ್ನು ಅರ್ಥಮಾಡಿಕೊಳ್ಲಲು ಅವರು ನಡೆಸುತ್ತಿದ್ದ ಯತ್ನದ ಪ್ರತಿರೂಪಗಳಾಗಿದ್ದವು. ಜೊತೆಗೆ ಅವರು ತಮ್ಮ ಜೊತೆ ತಾವೇ ನಡೆಸುತ್ತಿದ್ದ ಅಂತರಂಗದ ಸಂವಾದವೂ ಆಗಿತ್ತು.
ಅಂದಿನ ಸಂದರ್ಭದಲ್ಲಿ ಈ ದೇಶ ಎದುರಿಸುತ್ತಿದ್ದ ಸಮಸ್ಯೆಗಳಿಗೆ ಗಾಂಧೀಜಿಯವರ ಅವರದೇ ಆದ ಪರಿಹಾರಗಳಿದ್ದವು.
ಆದರೆ ಅಣ್ಣಾ ಹಜಾರೆ ಅವರು ಭಾರತವನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನನಗೆ ನನ್ನದೇ ಆದ ಅನುಮಾನಗಳಿವೆ. ಗಾಂಧಿ ಬದುಕ್ಲಿದ್ದ ಕಾಲದಲ್ಲಿ ಅವರು ಸಮಾಜಕ್ಕೆ  ಮುಖಾಮುಖಿಯಾಗಿ ಸಂವಾದ ನಡೆಸುತ್ತಿದ್ದಂತೆ, ಅಣ್ಣಾ ಹಜಾರೆ ಇವತ್ತೀನ ಸಮಾಜದ ಜೊತೆ ಮುಖಾಮುಖಿಯಾಗಿ ಸಂವಾದ ನಡೆಸುತ್ತಿದ್ದಾರೆಯೇ ? ಇಲ್ಲ.. ಅವರು ಭಾರತವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಷ್ಟು ಮುಗ್ದರು. ಹೀಗಾಗಿ ತಮ್ಮ ಜೊತೆ ಇರುವವರ ಪ್ರಭಾವಕ್ಕೆ ಅವರು ಬಹುಬೇಗ ಒಳಗಾಗಿ ಬಿಡುತ್ತಾರೆ. ಗಾಂಧಿ ಹಾಗಿರಲಿಲ್ಲ. ಅವರು ಯಾರ ಪ್ರಭಾವಕ್ಕು ಒಳಗಾಗುತ್ತಿರಲಿಲ್ಲ. ಹೀಗಾಗಿ ಅವರು ಬೇರೆಯವರನ್ನು ತಮ್ಮ ಪ್ರಭಾವಳಿಯ ಓಳಗೆ ಸೇಳೆದುಕೊಂಡು ಬಿಡುತ್ತಿದ್ದರು. ಅಂತಹ ಶಕ್ತಿ ಅಣ್ಣಾ ಹಜಾರೆ ಅವರಿಗೆ ಇಲ್ಲ.
ಮತ್ತೆ ಗಾಂಧಿ ಟೋಪಿ ನನ್ನನ್ನು ಕಾಡುತ್ತಿದೆ. ಜೊತೆಗೆ ಟೋಪಿಯಲ್ಲಾದ ರೂಪಾಂತರ ನನ್ನನ್ನು ಬೆದರಿಸುತ್ತಿದೆ,

ಕಳೆದ ವರ್ಷ ನನ್ನ ಅಪ್ಪ ತೀರಿಕೊಂಡಾಗ ನಾನು ಊರಿಗೆ ಹೋಗಿ 21 ದಿನ ಊರಿನಲ್ಲೇ ಇದ್ದೆ. ಅಪ್ಪನ ಟೋಪಿಗಾಗಿ ಮನೆಯ ತುಂಬಾ ಹುಡುಕಿದೆ. ಟೋಪಿ ಸಿಗಲಿಲ್ಲ. ಅಪ್ಪ ಇತ್ತೀಚಿನ ವರ್ಷಗಳಲ್ಲಿ ಹೊಸ ಟೋಪಿಯನ್ನು ಖರೀದಿಸಿರಲಿಲ್ಲ. ಆತ ಟೋಪಿ ಹಾಕುವುದನ್ನು ನಿಲ್ಲಿಸಿ ಹಲವಾರು ವರ್ಷಗಳೇ ಕಳೆದು ಹೋಗಿದ್ದವಂತೆ !

Sunday, August 12, 2012

ಮುತ್ತಿನ ನಗರಿಯಲ್ಲಿ ನಾಲ್ಕು ದಿನ.......


ನನಗಾಗ ವಯಸ್ಸು ಆರೆಂಟು ವರ್ಷ ಇರಬಹುದು. ನಮ್ಮ ಮನೆಗೆ ಬಂದಿದ್ದ ಜ್ಯೋತಿಷಿಯೊಬ್ಬರು ನನ್ನ ಹಸ್ತವನ್ನು ನೋಡಿ, ಏನ್ ಮಾರಾಯಾ ನಿನಗೆ ಮೂರು ಚಕ್ರಗಳಿವೆ, ಹೀಗಾಗಿ ನೀನು ತ್ರಿಲೋಕ ಸಂಚಾರಿ ಎಂದು ಹೇಳಿದ್ದರು. ಆಗ ನನಗೆ ಈ ತ್ರಿಲೋಕ ಸಂಚಾರದ ಬಗ್ಗೆ ಹೆಚ್ಚಿಗೆ ತಿಳಿದಿರಲಿಲ್ಲ. ಆದರೆ ಆಗಲೇ ಯಕ್ಷಗಾನ ತಾಳಮದ್ದಳೆಗಳನ್ನು ನೋಡಿ ಪುರಾಣಗಳ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿದ್ದ ನನಗೆ ನೆನಪಾಗಿದ್ದು ತ್ರಿಲೋಕ ಸಂಚಾರಿ ನಾರದ. ನಾರದ ಮಹರ್ಷಿ, ಬೇಕೆಂದಾಗಲೆಲ್ಲೆ ಎಲ್ಲ ಲೋಕಗಳಲ್ಲಿ ಪ್ರತ್ಯಕ್ಷವಾಗುವ ಪರಿ ನನಗೆ ತುಂಬಾ ಇಷ್ಟವಾಗಿದ್ದರಿಂದ ನಾನೂ ಸಹ ನಾರದ ಮಹರ್ಷಿಯಂತೆ ಬೇಕೆಂದಾಗ, ಬೇಕಾದಲ್ಲಿ ಪ್ರತ್ಯಕ್ಷವಾಗುವ ಕನಸನ್ನು ಕಂಡು ಸಂತಸ ಪಟ್ಟಿದ್ದೆ.
ಪ್ರಾಯಶಃ ಊರು ಸುತ್ತುವ ಆಸೆ ಆಗಲೇ ನನ್ನ ಮನಸ್ಸಿನಲ್ಲಿ ಮೊಳಕೆ ಒಡೆದಿರಬೇಕು. ಇದಾದ ಮೇಲೆ ನಾನು ಕಾಲೇಜು ವಿದ್ಯಾಭ್ಯಾಸಕ್ಕೆ ಬೆಳಗಾವಿಗೆ ಹೋದಮೇಲೆ ತ್ರಿಲೋಕ ಸಂಚಾರಿ ಆಗದಿದ್ದರೂ ಸಂಚಾರಿಯಂತೂ ಆಗಿದ್ದೆ. ಬೆಳಗಾವಿಗೆ ಹೋದ ತಕ್ಷಣ ಮನೆಯ ನೆನಪಾಗಿ ಹಾಗೆ ಬಸ್ಸು ಹತ್ತು ಊರಿಗೆ ಹೋಗಿ ಬಿಡುವುದು, ಎರಡು ದಿನ ಕಳೆಯುವಷ್ಟ್ರಲ್ಲಿ ಬೆಳಗಾವಿಯ ಆಕರ್ಷಣೆ ಹೆಚ್ಚಾಗಿ ಮತ್ತೆ ಅಲ್ಲಿಗೆ ಹಿಂತಿರುಗುವುದು ನಡದೇ ಇತ್ತು. ನನ್ನ ಈ ಸಂಚಾರಿಯ ಮನಸ್ಸು ಈ ರೀತಿ ರೂಪಗೊಂಡು ನಾನು ಪತ್ರಿಕೋದ್ಯಮಕ್ಕೆ ಬರುವಷ್ಟರಲಿ ಸ್ಪಷ್ಟ ರೂಪ ಪಡೆದಿತ್ತು. ಹೀಗಾಗಿ ಕೆಲಸ ಇರಲಿ ಇಲ್ಲದಿರಲಿ, ಕೈಯಲ್ಲಿ ಹಣ ಇರಲಿ ಇಲ್ಲದಿರಲಿ ನಾನು ಊರು ಸುತ್ತುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡೆ. ಮದುವೆಯಾಗಿ ಸಂಸಾರಸ್ಥನಾಗುವುದಕ್ಕೆ ಮೊದಲು ಪ್ರತಿ ವರ್ಷ ಕನಿಷ್ಟ ಒಂದು ತಿಂಗಳು ಉತ್ತರ ಭಾರತವನ್ನು ಸುತ್ತಿ ಬರುತ್ತಿದ್ದೆ. ಈ ತಿರುಗಾಟದಲ್ಲಿ ಯಾವ ರೀತಿಯ ಶಿಸ್ತು, ಪ್ಲಾನು ಏನೂ ಇರುತ್ತಿರಲಿಲ್ಲ  ಕೈಯಲ್ಲಿ ದುಡ್ಡು ಹಿಡಿದುಕೊಂಡು ರೈಲು ಹತ್ತಿ ಕುಳಿತುಕೊಳ್ಳುವುದು, ಊರೂರು ಸುತ್ತಿ ದುಡ್ಡು ಮುಗಿದ ಮೇಲೆ ಹಿಂತಿರುಗುವುದು ನನ್ನ ಜಾಯಮಾನವಾಗಿತ್ತು.
ನಾನು ಕೆಲವರ್ಷಗಳ ಕಾಲ ಡಿಫೆನ್ಸ್ ವರದಿಗಾರನಾಗಿಯೂ ಕೆಲಸ ಮಾಡಿದ್ದರಿಂದ, ಟೂ ಸೀಟರ್ ಯುದ್ಧವಿಮಾನದಲ್ಲಿ, ಸಬ್ ಮೆರಿನ್ ನಲ್ಲಿ ಪ್ರಯಾಣ ಮಾಡುವ ಅವಕಾಶವೂ ನನಗೆ ಲಭ್ಯವಾಗಿತ್ತು. ಬಹುತೇಕ ಎಲ್ಲ ರೀತಿಯ ವಿಮಾನ ಹಡಗುಗಳಲ್ಲಿ ಪ್ರಯಾಣ ಮಾಡಿದ್ದರೂ ರೈಲು ಪ್ರಯಾಣ ನನಗೆ ನೀಡುವ ಖುಷಿಯನ್ನು ಬೇರೆ ಯಾವ ರೀತಿಯ ಪ್ರಯಾಣವೂ ಖುಷಿ ನೀಡಿದ್ದಿಲ್ಲ. ರೈಲಿನಲ್ಲಿ ಪ್ರಯಾಣ ಮಾಡುವಾಗ ನಾವು ನೋಡುವುದು ಮಿನಿ ಇಂಡಿಯಾವನ್ನು. ನಮಗೆ ಗೊತ್ತಿ;ಲ್ಲದ ಹಾಗೆ ಈ ಮಿನಿ ಇಂಡಿಯಾ ಎಂಬ ದೊಡ್ಡ ಸಂಸಾರದ ಸದಸ್ಯರಾಗುವ ಪವಾಡ ನಡೆಯುವುದು ರೈಲಿನಲ್ಲಿ. ಸಮಯವಿದ್ದರೆ ರೈಲು ಸಂಚಾರದ ಸಂತೋಷ ಬೇರೆ ಯಾವ ಪ್ರಯಾಣದಲ್ಲೂ ದೊರಕುವುದಿಲ್ಲ.
ನಾನು ಕಳೆದ ವಾರ ಹೈದರಾಬಾದಿಗೆ ಹೊರಟು ನಿಂತಿದ್ದೆ. ನನ್ನ ಸ್ನೇಹಿತಇಓಗ್ರು ವಿಮಾನದಲ್ಲಿ ಹೋಗಿ ಬಂದು ಬಿಡೋಣ ಎಂದರು. ಆದರೆ ನನಗೆ ವಿಮಾನಕ್ಕಿಂತ ರೈಲಿನಲ್ಲಿ ಹೋಗುವುದು ಒಳ್ಳೆಯದು ಎಂದು ಅನ್ನಿಸತೊಡಗಿತ್ತು. ಅದಕ್ಕೆ ಬಹುಮುಖ್ಯ ಕಾರಣ ವಿಮಾನದಲ್ಲಿ ಹೋಗುವ ತುರ್ತು ಕೆಲಸವೇನೂ ನನಗೆ ಇರಲಿಲ್ಲ. ನಾನು ಕೆಲವರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡುವ ಕೆಲಸವಿದ್ದರೂ ರಾತ್ರಿ ರೈಲಿನಲ್ಲಿ ಹೊರಟು ಗಡದ್ ಆಗಿ ನಿದ್ರೆ ಮಾಡಿ ಮರುದಿನ ಪ್ರೆಷ್ ಆಗಿ ಮಾತನಾಡಬಹುದು ಎಂದುಕೊಂಡೆ.
ನಾವು  ಟಿಕೆಟ್  ಬುಕ್ ಮಾಡಿದ್ದು ಕಾಚಿಗುಡಾ ಎಕ್ಸಪ್ರೆಸ್ ರೈಲಿನ ಎಸಿ ಕ್ಲಾಸ್ ನ ಸೀಟನ್ನು. ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿನಿಂದ ಹೊರಡುವ ಈ ರೈಲು ಹೈದರಾಬಾದ್ ತಲುಪುವುದು ಮರುದ್ಸಿನ ಬೆಳಿಗ್ಗೆ 5 ಗಂಟೆ ಮೂವತ್ತು ನಿಮಿಷಕ್ಕೆ. ಕರ್ನಾಟಕ ಮತ್ತು ಆಂದ್ರದ ನಡುವೆ ಅಲ್ಲಿಂದಿಲ್ಲಿಗೆ ಓಡಾಡಿ ಕೊನೆಗೆ ಹೈದರಾಬಾದನ್ನು ತಲುಪುವ ರೈಲು. ವಿಮಾನದಲ್ಲಾದರೆ ಕೇವಲ ಮೂವತ್ತೈದು ನಿಮಿಷದಕ್ಕೆ ಹೈದರಾಬಾದನ್ನು  ಸೇರಿ ಬಿಡಬ್ವಹುದು. ಕಣ್ನು ಮುಚ್ಚಿ ಬಿಡುವುದಕ್ಕೆ ಮೊದಲು ಪ್ರಯಾಣ  ಹೀಗಾಗಿ ಪ್ರವಾಸದ ಸಂತೋಷ ವಿಮಾನದಲ್ಲಿ ಸಿಗುವುದಿಲ್ಲ.
ಇದು ಯಶವಂತಪುರ- ಕಾಚಿಗುಡಾ ನಡುವೆ ಸಂಚರಿಸುವ ರೈಲಾದರೂ ಇದರ ಉಪಯೋಗ ಹೆಚ್ಚಾಗಿ ಆಗುವುದು ಆಂದ್ರದವರಿಗೆ. ಈ ರೈಲಿನ ಬಹುತೇಕ ಸೀಟಿಗಳಿಗೆ ಪುಟಪರ್ತಿ, ಅನಂತಪುರದಿಂದ ರಿಸರ್ವೇಷನ್ ಇದೆ. ಹೀಗಾಗಿ ಬೆಂಗಳೂರಿನಿಂದ ಹೈದರಾಬಾದಿಗೆ ಹೋಗ್ಫುವವರಿಗೆ ರಿಸರ್ವೇಶನ್ ಸಿಗುವುದಿಲ್ಲ. ಗುಂತಕಲ್ ವರೆಗೆ ಖಾಲಿ ಸಾಗುವ ರೈಲು ಬೆಂಗಳೂರಿನ ಪ್ರಯಾಣಕರಿಗೆ ಬರ್ತ್ ನೀಡದೇ ತೆಲುಗರಿಗಾಗಿ ಕಾಯುತ್ತದೆ.  ಹಾಗೆ ಇದು ಯಶವಂತಪುರ ಎಂಬ ಕರ್ನಾಟಕದ ರಾಜಧಾನಿಯ ಒಂದು ಭಾಗದಿಂದ ಹೊರಡುವ ರೈಲಾದರೂ ಇಲ್ಲಿನ ಆಡಳಿತ ಭಾಷೆ ತೆಲುಗು ಮತ್ತು ಹಿಂದಿ ! ನೀರು ಕೊಡುವ ಪೋರನಿಂದ, ಕಾಫಿ ಕೊಡುವ ಹೈದನ ವರೆಗೆ ಯಾರಿಗೂ ಕನ್ನಡ ಬರುವಿದಿಲ್ಲ. ಬಂದರೂ ಅವರು ಕನ್ನಡದಲ್ಲಿ ಮಾತನಾಡುವುದಿಲ್ಲ.
ಒಂದು ಕಾಲದಲ್ಲಿ ದಕ್ಷಿಣ ರಲ್ವೆ ಎಂದರೆ ತಮಿಳು ಬಾಷಿಕರ ನೆಲವೀಡಾಗಿತ್ತು. ಅಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ಇದ್ದುದು ಬಹಳ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಈ ಪರಿಸ್ಥಿತಿ ಬದಲಾಗಿದೆ. ತಮಿಳರು ರಲ್ವೆಯಲಿ ಕೆಲಸ ಮಾಡುವುದನ್ನು ಕಡಿಮೆ ಮಾಡಿ  ಬೇರೆ ಬೇರೆ ಕ್ಷೇತ್ರಗಳತ್ತ ಹೋಗುತ್ತಿದ್ದಾರೆ. ಜೊತೆಗ್ಫೆ ಬಿಹಾರಿಗಳು ಮತ್ತು ಓರಿಸ್ಸಾದವರು ರೈಲ್ವೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಬೆಂಗಾಲಿಗಳಿಗೂ ಉದ್ಯೋಗ ದೊರಕುತ್ತಿದೆ. ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ಎಲ್ಲೆಡೆ ಬಿಹಾರಿಗಳನ್ನು ತುಂಬಿದರೆ, ಮಮತಾ ದಿದಿ ಬೆಂಗಾಲಿಗಳನ್ನು ತುಂಬಿದರು. ಆದರೆ ಅತಿ ಹೆಚ್ಚು ರೈಲ್ವೆ ಸಚಿವರನ್ನು ನೀಡಿದ ಕನ್ನಡ ನಾಡಿನ ಮಕ್ಕಳಿಗೆ ಮಾತ್ರ ಅಲ್ಲಿ ಉದ್ಯೋಗ ಅವಕಾಶ ಇಲ್ಲ !
ನಾವು ಹೈದರಾಬಾದ್ ತಲುಪಿದಾಗ ಅಲ್ಲಿ ಮಳೆರ್ ಇರಲಿಲ್ಲ. ಆಗಾಗ ಕಳ್ಳ ಬೆಕ್ಕಿನಂತೆ ನುಸುಳಿ ಬಂದು ಹಾಗೆ ಕದ್ದು ಮರೆಯಾಗುವ್ದ ಮಳೆ. ಎನೇ ಇರಲಿ ಈ ಹೈದರಾಬಾದ್ ಎಂಬ ಮುತ್ತಿನ ನಗರಿ ಎಂದರೆ ನನಗೆ ಇಷ್ಟ, ಇದು ಬೆಂಗಳೂರಿನಂತೆ ಇಲ್ಲ. ಬೆಂಗಳೂರು ಎಂದರೆ, ತಳಕು ಬಳಕಿನ ಮಾಯಾಂಗನೆ ಆದರೆ, ಹೈದರಾಬಾದ್ ತನ್ನ ಸಂಪ್ರದಾಯಿಕ ಸೌಂದರ್ಯವನ್ನು ಕಳೆದುಕೊಳ್ಳದ ಸುಂದರಿ. ಜೊತೆಗೆ ಬೆಂಗಳೂರಿನಷ್ಟು ದುಬಾರಿಯ ನಗರವೂ ಅದಲ್ಲ. ತೆಲುಗು ಮತ್ತು ಮುಸ್ಲಿಮ್ ಸಂಸ್ಕೃತಿಯ ಹದವಾದ ಮಿಶ್ರಣವನ್ನು ಇಲ್ಲಿ ಕಾಣಬಹುದು.
ನಾನು ನಾಲ್ಕು ದಿನಗಳ ಕಾಲ ಹೈದರಾಬಾದಿನಲ್ಲಿದ್ದೆ. ನಾನು ಉಳಿದುಕೊಂಡಿದ್ದು  ವೈಷ್ಣೋವಿ ಎಂಬ ಹೋಟೆಲ್ಲಿನಲ್ಲಿ. ಈ ಹೊಟೆಲ್ಲು ಒಂದೆರಡು ಸ್ಟಾರಿನ ಹೋಟೆಲ್ಲಾಗಿದ್ದರೂ ಅಂತಹ ದುಬಾರಿಯಲ್ಲ. ಊಟ ತಿಂಡಿ ಎಲ್ಲವೂ ಅತ್ಯುತ್ತಮ.
ತೆಲುಗಿನಲ್ಲ ಒಟ್ಟು 22 ಕ್ಕೂ ಹೆಚ್ಚು ಸುದ್ದಿ ವಾಹಿನಿಗಳಿವೆ. ಅದಕ್ಕಿಂತ ಹೆಚ್ದ್ಚು ಮನರಂಜನಾ ಚಾನಲ್ ಗಳಿವೆ. ತೆಲುಗಿನಲ್ಲಿರುವ ಒಟ್ಟೂ ಟಿವಿ ಚಾನಲ್ ಗಳ ಸಂಖ್ಯೆ 60 ಕ್ಕೂ ಹೆಚ್ಚು. ಬಹುತೇಕ ಚಾನಲ್ ಗಳಿಗೆ ಸಿನೆಮಾನೇ ಆಹಾರ. ತೆಲುಗರ ಸಿನೆಮಾ ಮೋಹ ಕೂಡ ಅಂತಹುದು. ಅವರು ಸಿನೆಮಾವನ್ನೇ ಉಣ್ಣುತ್ತಾರೆ, ಉಸಿರಾಡುತ್ತಾರೆ. ಜೊತೆಗೆ ತೆಲುಗು ಟೀವಿ ವಾಹಿನಿಗಳ ವಾರ್ಷಿಕ ಒಟ್ಟೂ ವಹಿವಾಟು 1000 ಕೋಟಿಗೂ ಹೆಚ್ಚು. ಕನ್ನಡ ವಾಹಿನಿಗಳ ಒಟ್ಟೂ ವಹಿವಾಟು ಇದರ ಅರ್ಧದಷ್ಟು ಮಾತ್ರ !
ನಾನು ಹೈದರಾಬಾದಿನಲ್ಲಿ ಕೆಲವು ಟೀವಿ ವಾಹಿನಗಳ ಕಚೇರಿಗೆ ಭೇಟಿ ನೀಡಿದೆ. ಸ್ನೇಹಿತ ಪತ್ರಿಕೋದ್ಯಮಿಗಳ ಜೊತೆ ಮಾತುಕತೆ ನಡೆಸಿದೆ.
ಹೊಟೆಲ್ ರೂಮಿನಲ್ಲಿ ಕುಳಿತು ತೆಲುಗು ಚಾನಲ್ ಗಳನ್ನು ವಿಕ್ಷಿಸಿದೆ. ಬಹುತೇಕ ಕೆಬಲ್ ಆಫರೆಟರುಗಳು ಎಲ್ಲ ತೆಲುಗು ವಾಹಿನಿಗಳನ್ನು ಪ್ರಮ್ ಬಾಂಡಿನಲ್ಲೇ ನೀಡುತ್ತಾರೆ. ಉಳಿದ ರಾಷ್ಟ್ಷ್ಟ್ರೀಯ ಮತ್ತು ಪ್ರಾದೇಶಿಕ ವಾಹಿನಿಗಳಿಗೆ ಅಲ್ಲಿ ಅವಕಾಶ ಕಡಿವೆ. ಅಲ್ಲಿ ನನಗೆ ನೋಡಲು ಸಿಕ್ಕ ಏಕಮೇವ ಕನ್ನಡ ವಾಹಿನಿ ಎಂದರೆ ಟೀವಿ ನೈನ್ ಮಾತ್ರ. ನನಗೆ ಅಲ್ಲಿ ಬೇರೆ ಯಾವ ಕನ್ನಡ ವಾಹಿನಿಯೂ ನೋಡಲು ಸಿಗಲಿಲ್ಲ. ಹೈದರಾಬಾದಿನಲ್ಲಿ ಸಾಕ್ಷಷ್ತು ಕನ್ನಡಿಗರಿದ್ದರೂ ಪ್ರಮುಖ ಕನ್ನಡ ವಾಹಿನಿಗಳು ಅಲ್ಲಿ ನೋಡಲು ಸಿಗುವುದಿಲ್ಲ. ಇದನ್ನು ಕರ್ನಾಟಕದ ಜೊತೆ ಬೆಂಗಳೂರಿನ್ಜ ಜೊತೆ ಹೋಲಿಸಿ ನೋಡಿ. ಇಲ್ಲಿ ಕನ್ನಡ ವಾಹಿನ್ಗಳನ್ನು ಪ್ರಸಾರ ಮಾಡುವಂತೆ ಕೇಬಲ್ ಆಫರೇಟರುಗಳಿಗೆ ಮನವಿ ಮಾಡಬೇಕು, ಕ್ಯಾರೇಜ್ ಫಿ ನೀಡಬೇಕು. ಆದರೂ ಕನ್ನಡದ ವಾಹಿನಿಗಳು ಪ್ರೈಮ್ ಬ್ಯಾಂಡಿನಲ್ಲಿ ಸಿಗುವುದಿಲ್ಲ. ಬೆಂಗಳೂರಿನಲ್ಲಿ ಈಗಲೂ ನಂಬರ್ ಒನ್ ಸ್ಥಾನದಲ್ಲಿ ಇರುವುದು ತಮಿಳಿನ ಸನ್ ಟೀವಿ..