Saturday, December 15, 2012

ಮೋದಿಯ ನಾಡಿನಲ್ಲಿ ಎರಡು ದಿನ- ಕಂಡಿದ್ದು ಕೇಳಿದ್ದು....ಗುಜರಾತ್ ಕುರುಕ್ಷೇತ್ರ !
ನಾನು ಬೆಂಗಳೂರಿನಿಂದ ಹೊರಟು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿದಾಗ ಮಧ್ಯಾನ್ಹ ಒಂದು ಗಂಟೆ.  ನಮ್ಮ ಮಂಗಳೂರನ್ನೋ, ಕರಾವಳಿಯ ಇನ್ಯಾವ್ಯುದೋ ಪಟ್ಟಣವನ್ನು ನೆನಪಿಸುವಷ್ಟು ಉರಿ ಬಿಸಿಲು. ಆಗಲೇ ಮುಂಬೈನ ಕರ್ನಾಟಕ ಸಂಘದ ಗೆಳಯರಿಗೆ ಹೇಳಿ ಒಂದು ಇನ್ನೊವಾ ಕಾರನ್ನು ಗೊತ್ತು ಪಡಿಸಿಕೊಂಡಿದ್ದೆ. ಕಾರಿನ ಚಾಲಕ ನನ್ನ ಹೆಸರಿನ ನೇಮ್ ಪ್ಲೇಟ್ ಹಿಡಿದು ವಿಮಾನ ನಿಲ್ದಾಣದ ಹೊರಗೆ ನಿಂತಿದ್ದ.
ನಾನು ಪ್ರವಾಸ ಹೊರಟಿದ್ದು ಗುಜರಾತಿಗೆ. ಸೂರತ್ ನಗರವನ್ನು ಸಂಜೆಯ ಒಳಗೆ ತಲುಪುವುದು ನನ್ನ ಗುರಿಯಾಗಿತ್ತು. ಮುಂಬೈನಿಂದ ಅಹಮದಾಬಾದ್ ಗೆ ಸುಮಾರು ೫೦೦ ಕಿಮೀ ದೂರ. ಈ ದಾರಿಯನ್ನು ರಸ್ತೆಯ ಮೂಲಕ ಕ್ರಮಿಸಿದರೆ ಗುಜರಾತಿನ ಬಹುಭಾಗವನ್ನು ನೋಡಬಹುದು, ಅಲ್ಲಿನ ಸಾಮಾನ್ಯರ ಜೊತೆ ಮಾತನಾಡಬಹುದು ಎಂದು ನಾನು ಅಂದುಕೊಂಡಿದ್ದೆ. ನನಗೆ ಗುಜರಾಥ್ ಹೆಚ್ಚು ಕುತೂಹಲ ಹುಟ್ಟಿಸಿದ ರಾಜ್ಯ. ಶ್ರೀಕೃಷ್ಣ ದ್ವಾರಕೆ, ಮಹಾತ್ಮಾ ಗಾಂಧಿಜಿಯ ಸಾಬರಮತಿ, ಹತ್ತು ವರ್ಷಗಳಿಂದ ಈ ರಾಜ್ಯವನ್ನು ಆಳುತ್ತಿರುವ ನರೇಂದ್ರ ಮೋದಿ ಎಲ್ಲರೂ ನನ್ನ ಕುತೂಹಲಕ್ಕೆ ಕಾರಣರಾದವರೇ.
ನನ್ನ ಕಾರಿನ ಚಾಲಕನ ಹೆಸರು ಅಮ್ಜದ್. ಆತ ಮುಂಬೈ ಅಹಮದಾಬಾದ್ ರಸ್ತೆಯಲ್ಲಿ ಹಲವು ಬಾರಿ ಕಾರು ಓಡಿಸಿದವನು. ಅವನಿಗೆ ಈ ರಸ್ತೆ ಎಂದರೆ ನೀರು ಕುಡಿದಷ್ಟು ಸಲೀಸು. ಜೊತೆಗೆ ಆತ ಗುಜರಾತ್ ಮೂಲದವನು. ಹೊಟ್ಟೆ ಪಾಡಿಗಾಗಿ ಮುಂಬೈಗೆ ಬಂದು ಇಲ್ಲಿ ಕಾರು ಓಡಿಸಿ ಜೀವನ ಸಾಗಿಸುತ್ತಿದ್ದ.
ಮೋದಿ ಹೈವೇ...

ಮುಂಬೈ ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿ ದೇಶದ ಅತ್ಯುತ್ತಮ ಹೆದ್ದಾರಿಗಳಲ್ಲಿ ಒಂದು. ಈ ರಸ್ತೆ ವಿಶಾಲವಾಗಿರುವುದರ ಜೊತೆಗೆ ಎಲ್ಲೂ ಸಹ ಸ್ಪೇಡ್ ಬ್ರೇಕರ್ಸ್ ಅಥವಾ ಹಂಪ್ಸ್ ಇಲ್ಲವೇ ಇಲ್ಲ. ಕಣ್ಣು ಮುಚ್ಚಿಕೊಂಡು ಕಾರನ್ನು ಒಡಿಸುವಷ್ಟು ರಸ್ತೆ ಉತ್ತಮವಾಗಿದೆ.
ಅಮ್ಜದ್ ನನ್ನು ನಾನು ಮೊದಲು ಕೇಳಿದ್ದು ನರೇಂದ್ರ ಮೋದಿಯ ಬಗ್ಗೆ. ನನ್ನ ಪ್ರಶ್ನೆಗೆ ಅವನು ನೀಡಿದ ಉತ್ತರ ಅಚ್ಚಾ ಸಾಬ್ ಎಂದು. ಮುಂದೆ ಆತ ಮಾತನಾಡುವುದಕ್ಕೆ ಸಿದ್ಧನಿರಲಿಲ್ಲ. ಮಹಾರಾಷ್ಟ್ರ ಗಡಿಯನ್ನು ದಾಟಿ ಗುಜರಾತ್ ಅನ್ನು ಪ್ರವೇಶಿಸುತ್ತಿದ್ದಂತೆ ಬದಲಾವಣೆ ಬರೀ ಕಣ್ಣಿಗೆ ಕಾಣತೊಡಗಿತು. ಅಭಿವೃದ್ಧಿ ಅಲ್ಲಿ ನಡೆಯುತ್ತಿದೆ ಎಂದು ಹೇಳುವುದಕ್ಕೆ ಬೇರೆ ಯಾವುದೇ ಸಾಕ್ಷ್ಯ ಬೇಕಾಗಿರಲಿಲ್ಲ.
ನರೇಂದ್ರ ಮೋದಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ತಂದು ನಿಲ್ಲಿಸಿದ್ದರು. ಆದರೆ ಅದು ಎಂತಹ ಅಭಿವೃದ್ಧಿ ? ಈ ಅಭಿವೃದ್ಧಿಯ ವ್ಯಾಪ್ತಿ ಏನು ? ಅಭಿವೃದ್ಧಿಗೂ ಸಾಮಾಜಿಕ ಬದುಕಿಗೂ ಇರುವ ಸಂಬಂಧ ಎಂತಹುದು ?
ಪಶ್ಚಿಮ ರಾಜ್ಯವಾಗಿರುವ ಗುಜರಾತ್ ೧೬೦೦ ಕಿಮೀ ಸಮುದ್ರ ಕಿನಾರೆಯನ್ನು ಹೊಂದಿದೆ. ಒಂದೆಡೆ ಮಹಾರಾಷ್ತ್ರ, ಇನ್ನೊಂದೆಡೆ ಮಧ್ಯಪ್ರದೇಶ, ಮತ್ತೊಂದೆಡೆ ರಾಜಸ್ಥಾನ ಗಡಿ ರಾಜ್ಯಗಳು. ಗುಜರಾತಿನ ಇನ್ನೊಂದು ವಿಶೇಷ ಎಂದರೆ ಪಾಕಿಸ್ಥಾನದ ಸಿಂದ್ ಪ್ರಾಂತ ಗುಜರಾತಿಗೆ ತಾಗಿಕೊಂಡಿದೆ. ಪಾಕಿಸ್ಥಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾ ಗುಜರಾತಿ ಮುಸ್ಲಿಂ ಕುಟುಂಬಕ್ಕೆ ಸೇರಿದವರು. ಹಿಂದೂ ನದಿ ನಾಗರೀಕತೆಯ ಅವಶೇಷಗಳು ಇಲ್ಲಿ ದೊರಕಿವೆ.
ಗುಜರಾತ್ ಗೆ ಅಭಿವೃದ್ಧಿ ಹೊಸದಲ್ಲ. ನರೇಂದ್ರ ಮೋದಿ ಬಂದ ಮೇಲೆ ಇಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಯಿತು ಎಂಬುದು ಅಪ್ಪಟ ಸುಳ್ಳು. ಗುಪ್ತರು ರಾಷ್ಟ್ರಕೂಟರು ಈ ರಾಜ್ಯವನ್ನು ಆಳುತ್ತಿದ್ದ ಕಾಲದಲ್ಲೇ ಈ ಪ್ರದೇಶ ಅಭಿವೃದ್ಧಿಯನ್ನು ಕಂಡಿತ್ತು. ಮೊದಲಿನಿಂದಲೂ ಅಹಮದಾಬಾದ್, ಸೂರತ್, ಭಾವನಗರ್, ವಡೋದರಾ, ಜಾಮನಗರ್,ಕೈಗಾರಿಕಾ ಕೇಂದ್ರಗಳಾಗಿ ಅಭಿವೃದ್ಧಿ ಹೊಂದುತ್ತಲೇ ಬಂದಿವೆ. ಜೊತೆಗೆ ಗುಜರಾತ್ ಎಂದೂ ವಿದ್ಯುತ್ ಕೊರತೆಯನ್ನು ಹೊಂದಿಲ್ಲ. ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ರಾಜ್ಯ ಗುಜರಾತ್.

ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಗುಜರಾತ್ ಕರಾವಳಿಯಲ್ಲಿ ೪೧ ಕ್ಕಿಂತ ಹೆಚ್ಚು ಬಂದರುಗಳಿವೆ. ನರ್ಮದಾ, ಸಾಬರಮತಿ, ಮಹಿ ಮತ್ತು ತಾಪಿ ಎಂಬ ದೊಡ್ಡ ನದಿಗಳು ಹಾಗೂ ೩೫ ಕ್ಕೂ ಹೆಚ್ಚು ಸಣ್ನ ನದಿಗಳು ಈ ರಾಜ್ಯದ ನೆಲವನ್ನು ತಂಪಾಗಿರಿಸಿವೆ. ಇಂತಹ ಗುಜರಾತಿನಲ್ಲಿ ನರೇಂದ್ರ ಮೋದಿ ಮಾಡಿದ್ದೇನು ಎಂದು ನಾನು ಯೋಚಿಸುತ್ತಿದ್ದೆ. ಆತ ಇಲ್ಲಿನ ಜನರಿಗೆ ಮಾಡಿದ್ದು ಮೋಡಿಯೇ ಅಥವಾ ಮೋಸವೆ ?
ಆಗಲೇ ಸಂಜೆಯಾಗಿತ್ತು. ರಸ್ತೆ ಪಕ್ಕದ ಹೊಟೇಲ್ ಬಳಿ ಕಾರು ನಿಲ್ಲಿಸಿದ ಅಮ್ಜದ್ ಸಾರ್ ಚಾಯ್ ಪೀಯೆಂಗೆ ಅಂದ. ಸರಿ ಎಂದು ನಾನು ಕಾರಿನಿಂದ ಇಳಿದೆ. ನನಗೆ ಕೆಲವು ಮುಸ್ಲಿಂ ರ ಜೊತೆ ಮಾತನಾಡುವ ಆಸಕ್ತಿ ಇತ್ತು. ಅವರು ನರೇಂದ್ರ ಮೋದಿಯನ್ನು ನೋಡುವ ರೀತಿ ಯಾವುದು ಎಂಬುದು ನನ್ನ ಕುತೂಹಲ. ಜೊತೆಗೆ ಗುಜರಾತಿನ ಜಾತಿ ಸಮೀಕರಣ ಕೂಡ.
ಈ ರಾಜ್ಯದ ಜನಸಂಖ್ಯೆಯಲ್ಲಿ ಪ್ರತಿಶತ ೮೯ ರಷ್ಟು ಜನ ಹಿಂದೂಗಳು. ಮುಸ್ಲಿಂ ಜನಸಂಖ್ಯೆ ಪ್ರತಿಶತ ೯. ಉಳಿದಂತೆ ಮಹಾರಾಷ್ಟ್ರ ಮತ್ತು ರಾಜಸ್ಥಾನವನ್ನು ಹೊರತು ಪಡಿಸಿದರೆ ಅತಿ ಹೆಚ್ಚು ಜೈನರು ಇರುವುದು ಗುಜರಾತಿನಲ್ಲಿ.  ಹಿಂದೂಗಳಲ್ಲಿ ಪಟೇಲರ ಪ್ರಾಬಲ್ಯ ಮೊದಲಿನಿಂದಲೂ ಇದ್ದುದು ನಿಜ. ದೇಶದ ಮೊದಲ ಉಪ ಪ್ರಧಾನಿ, ಗೃಹ ಸಚಿವ ಸರ್ಧಾರ್ ವಲ್ಲಭ್ ಭಾಯ್ ಪಟೇಲ್ ಗುಜರಾತಿನ ಸೌರಾಷ್ಟ್ರ ಪ್ರದೇಶಕ್ಕೆ ಸೇರಿದವರು. ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸಿ ಬಿಜೆಪಿಯಿಂದ ಮುಖ್ಯಮಂತ್ರಿಯಾದ ಕೇಶು ಭಾಯ್ ಪಟೇಲ್ ಕೂಡ ಸೌರಾಷ್ಟ್ರ ಪ್ರದೇಶಕ್ಕೆ ಸೇರಿದವರು.
ಇಲ್ಲಿನ ವ್ಯಾಪಾರಿ ಸಮುದಾಯವನ್ನು ಬನಿಯಾಗಳು ಎಂದು ಕರೆಯುತ್ತಾರೆ. ಪಟೇಲರು ಭೂಮಾಲೀಕರು. ಅವರಿಗೆ ಇಂದಿಗೂ ಸಮಾಜದಲ್ಲಿ ಅತ್ಯುನ್ನತವಾದ ಸ್ಥಾನ. ಆದರೆ ಗುಜರಾತಿನಲ್ಲಿ ಸಿಗುವ ಪಟೇಲರೆಲ್ಲ ನಿಜವಾದ ಪಟೇಲರಲ್ಲ. ಸಮಾಜದಲ್ಲಿ ಗೌರವ ಸಂಪಾದಿಸುವ ಸಲುವಾಗಿ ಪಟೇಲರಾಗಿ ಬದಲಾದ ಕೆಳ ಜಾತಿಯ ಜನ ಕೂಡ ಇದ್ದಾರೆ. ಮೇಲ್ಜಾತಿಯ ವೈದಿಕ ಪರಂಪರೆ ಮತ್ತು ಜೈನ ಸಂಪ್ರದಾಯಗಳು ಇಲ್ಲಿ ಪ್ರಬಲವಾಗಿ ಬೇರೂರಿವೆ.
ಗುಜರಾತಿನ ಬಹುದೂಡ್ಡ ದೇವರೆಂದರೆ ಆತ ಶ್ರೀನಾಥ್ ಜಿ. ಅಂದರೆ ಶ್ರೀಕೃಷ್ಣ.
ರಸ್ತೆಯ ಪಕ್ಕದ ಚಹಾ ದುಖಾನಿನಲ್ಲಿ ಕುಳಿತಾಗ ಅಲ್ಲಿದ್ದ ಕೆಲವರ ಜೊತೆ ಮಾತನಾಡಿದಾಗ ಅನ್ನಿಸಿದ್ದು, ಇಲ್ಲಿನ ಮುಸ್ಲಿಂ ವಿರೋಧಕ್ಕೆ ಸುದೀರ್ಘ ಪರಂಪರೆ ಇದೆ ಎನ್ನುವುದು. ಆದರೆ ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಹಿಂದೂ ಸಂಘರ್ಷ ಚುನಾವಣೆಯ ಮುಖ್ಯ ವಿಷಯವಾಗುವ ಸಂಭವ ಕಡಿಮೆ. ಇಲ್ಲಿನ ಬಹುತೇಕ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳು ಮಹತ್ವದ ಪಾತ್ರವನ್ನು ಒಹಿಸುತ್ತ ಬಂದಿವೆ. ೧೯೬೦ ರಲ್ಲಿ ಗುಜರಾತ್ ರಾಜ್ಯ ರಚನೆಯಾದ ಮೇಲೆ ೮೦ ರ ದಶಕದವರೆಗೂ ಪ್ರತಿಶತ ೪೦ ರಷ್ಟಿರುವ ಹಿಂದುಳಿದ ವರ್ಗದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದರು. ೯೦ ರ ದಶಕದ ಹೊತ್ತಿಗೆ ಸ್ಥಿತಿ ಬದಲಾಯಿತು. ವೈದಿಕ ಮನಸ್ಥಿತಿಯೇ ಪ್ರಬಲವಾಗಿರುವ ಈ ರಾಜ್ಯದ ಹಿಂದುಳಿದ ವರ್ಗಗಳು ಹಿಂದುತ್ವದ ಮೋಹಕ್ಕೆ ಒಳಗಾದರು. ಬಿಜೆಪಿ ಅಧಿಕಾರದ ಗದ್ದುಗೆ ಏರುವಂತಾಯಿತು. ನರೇಂದ್ರ ಮೋದಿ ಮುಖ್ಯಮಂತ್ರಿಯಾದ ಮೇಲೆ ಹಿಂದುಳಿದ ವರ್ಗಗಳ ಮೇಲೆ ನಿಯಂತ್ರಣ ಸಾಧಿಸಿದರು. ಮೋದಿ ಹಿಂದುಳಿದ ಘಾಂಚಿ ಎಂಬ ಜಾತಿಗೆ ಸೇರಿದವರು. ಈ ಜಾತಿಯ ಜನ ಕರ್ನಾಟಕದ ಗಾಣಿಗ ಸಮುದಾಯಕ್ಕೆ ಸಮಾನವಾದ ಜಾತಿ. ಇವರು ಎಣ್ಣೆ ತೆಗೆಯುವವರು.
ಆದರೆ ಹಿಂದುಳಿದ ವರ್ಗದವರಿಗೂ ನರೇಂದ್ರ ಮೋದಿಯವರ ಬಗ್ಗೆ ಕೆಲವೊಂದು ಆಕ್ಷೇಪಗಳಿವೆ. ಅವರೆಂದೂ ತಾವು ಹಿಂದುಳಿದ ವರ್ಗದಿಂದ ಬಂದವರು ಎಂಬುದನ್ನು ತಮ್ಮ ಕಾರ್ಯ ವಿಧಾನದಲ್ಲಿ ತೋರಿಸಿಕೊಟ್ಟಿಲ್ಲ. ಈಗಲೂ ಪ್ರಬಲವಾಗಿರುವ ರಜಪೂತರು ಮತ್ತು ಪಟೇಲರ ಕಪಿಮುಷ್ಟಿಯಲ್ಲಿ ನರೇಂದ್ರ ಮೋದಿ ಇದ್ದಾರೆ. ಅವರ ಅಭಿವೃದ್ಧಿ ಈ ಜನಸಮುದಾಯಗಳನ್ನು ಬಿಟ್ಟರೆ ಕೆಳ ಹಂತದ ಜನರನ್ನು ತಲುಪಿಲ್ಲ ಎಂಬುದು ಹಿಂದುಳಿದ ವರ್ಗಗಳಲ್ಲಿ ಕೇಳಿ ಬರುತ್ತಿರುವ ಮಾತು. ಜೊತೆಗೆ ಹಿಂದುಳಿದ ವರ್ಗಗಳ ಸಂಘಟನೆಗಳು ಈಗ ಪ್ರಬಲವಾಗುತ್ತಿದ್ದು ಅವುಗಳು ಮೋದಿಯವರನ್ನು ಪ್ರಬಲವಾಗಿ ವಿರೋಧಿಸುತ್ತಿವೆ.
ಗುಜರಾತಿನ ೧೮೨ ಒಟ್ಟೂ ಸ್ಥಾನಗಳಲ್ಲಿ ಸುಮಾರು ೭೦ ಸ್ಥಾನಗಳಲ್ಲಿ ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕ. ಹಾಗೆ ೩೫ ಸ್ಥಾನಗಳಲ್ಲಿ ಮುಸ್ಲಿಂ ರು, ೨೬ ಸ್ಥಾನಗಳಲ್ಲಿ ಆದಿವಾಸಿಗಳು ಮತ್ತು ೧೩ ಸ್ಥಾನಗಳಲ್ಲಿ ದಲಿತರು ನಿರ್ಣಾಯಕ ಪಾತ್ರ ಒಹಿಸುತ್ತಾರೆ. ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲೂ ರಾಜ್ಯದ ಅಧಿಕಾರವನ್ನು ಹಿಡಿಯುವವರು ಎಂಬುದನ್ನು ತೀರ್ಮಾನಿಸುವವರು ಹಿಂದುಳಿದ ವರ್ಗದವರೇ.
ಗಾಂಧಿ ನಾಡಿನಲ್ಲಿ ಅವರ ನೆನಪೇ ಇಲ್ಲ...!

ಗಾಂಧಿಯ ನಾಡು ಗುಜರಾತ್. ಇಲ್ಲಿ ಈಗಲೂ ಮದ್ಯಪಾನ ನಿಷೇಧ. ಇಲ್ಲಿ ಒಂದೇ ಒಂದು ಮದ್ಯದ ಅಂಗಡಿ ಸಿಗುವುದಿಲ್ಲ. ಆದರೆ ಮದ್ಯ ಸಿಗುವುದಿಲ್ಲ ಎಂದುಕೊಂಡರೆ ಅದು ನಿಜವಲ್ಲ. ನಾವು ಕುಳಿತಿದ್ದ ಚಹಾ ದುಖಾನಿನ ಮಾಲೀಕನನ್ನು ಇಲ್ಲಿ ಗುಂಡು ಸಿಗುವುದಿಲ್ಲವೆ ಎಂದು ಪ್ರಶ್ನಿಸಿದೆ. ಆತ ಯಾವುದು ಬೇಕು ? ಹಣ ಕೊಡಿ ಎಂದ ! ಅಂದರೆ ಬಹಿರಂಗವಾಗಿ ನಡೆಯದಿದ್ದುದು ಇಲ್ಲಿ ಗುಪ್ತವಾಗಿ ನಡೆಯುತ್ತದೆ ಅಷ್ಟೇ.
ನರೇಂದ್ರ ಮೋದಿಯವರ ಆಡಳಿತ ಹೇಗಿದೆ ಎಂಬ ಪ್ರಶ್ನೆಗೆ ಅವನ ಉತ್ತರ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತುಂಬಾ ಅಭಿವೃದ್ಧಿಯಾಗುತ್ತಿದೆ ಎಂಬುದು. ಯಾವ ಅಭಿವೃದ್ಧಿ ? ಯಾವ ರೀತಿಯ ಅಭಿವೃದ್ಧಿ ಎಂಬ ಪ್ರಶ್ನೆಗೆ ಅವರ ಬಳೀ ಸ್ಪಷ್ಟ ಉತ್ತರವಿಲ್ಲ.
ನರೇಂದ್ರ ಮೋದಿ ಒಬ್ಬ ಅತ್ಯುತ್ತಮ ಸೇಲ್ಸ್ ಮನ್. ಅವರಿಗೆ ಯಾವ ವಸ್ತುವನ್ನು ಯಾವಾಗ ಹೇಗೆ ಮಾರಟ ಮಾಡಬೇಕು ಎಂಬುದು ಗೊತ್ತು. ಹಿಂದುತ್ವವನ್ನು ಮಾರಾಟ ಮಾಡಲು ಕೋಮು ಗಲಭೆಯನ್ನು ಮಾರಾಟ ಮಾಡಿದ ಅವರು ಈಗ ಅದೇ ವಸ್ತುವನ್ನು ಮತ್ತೆ ಮಾರಾಟ ಮಾಡುತ್ತಿಲ್ಲ.ಯಾಕೆಂದರೆ ಆ ವಸ್ತುವನ್ನು ಈಗ ಖರೀದಿಸುವವರಿಲ್ಲ ಎಂಬುದು ಅವರಿಗೆ ಗೊತ್ತು. ಕಳಪೆ ವಸ್ತುಗಳನ್ನು ಮಾರಾಟ ಮಾಡುವವರೇ ಹಾಗೆ. ಅವರು ಒಮ್ಮೆ ಮಾರಾಟ ಮಾಡಿದ ವಸ್ತುವನ್ನು ಮತ್ತೆ ಮಾರಾಟಕ್ಕೆ ಇಡುವುದಿಲ್ಲ.
ಮೋದಿಯವರ ಅಭಿವೃದ್ಧಿಯ ಕಲ್ಪನೆಯಲ್ಲಿ ಇಲ್ಲಿಯೇ ಹುಟ್ಟಿದ ಮಹತ್ಮಾ ಗಾಂಧಿಯವರ ಆರ್ಥಿಕ ನೀತಿಗೆ ಅವಕಾಶವಿಲ್ಲ.
ಅವರಿ ಹಿಂದುತ್ವದ ರಾಜಕಾರಣ ಎಲ್ಲ ಕೆಳ ವರ್ಗದ ಜಾತಿ ಸಮುದಾಯಗಳನ್ನು ಬಿಜೆಪಿಯ ತೆಕ್ಕೆಗೆ ತಂದಿದ್ದು ನಿಜ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಿಂದುಳಿದ ವರ್ಗದ ಜನರಿಗೆ ಈಗ ವಾಸ್ತವದ ಅರಿವಾಗುತ್ತಿದೆ. ಹಾಗೆ ಮೇಲ್ವರ್ಗದ ಪಟೇಲ್ ಸಮುದಾಯ ಕೇಶು ಬಾಯ್ ಪಟೇಲ್ ಅವರ ಹಿಂದೆ ನಿಂತಿರುವುದರಿಂದ ಮೋದಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ನಾವು ರಾತ್ರಿ ೯ ಗಂಟೆ ಹೊತ್ತಿಗೆ ಸೂರತ್ ನಗರವನ್ನು ತಲುಪಿದೆವು. ಸೂರತ್ ಮೊದಲಿನಿಂದಲೂ ಕೈಗಾರಿಕೆಗಳ ನಗರ. ನೇಕಾರಿಕೆ ಇಲ್ಲಿ ಪ್ರದಾನ. ಹಾಗೆ ಜೈನ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಈ ನಗರದಲ್ಲಿ ರಾತ್ರಿ ೯ ಗಂಟೆಯ ಹೊತ್ತಿಗೆ ಎಲ್ಲ ಹೋಟೆಲ್ ಗಳು ಮುಚ್ಚಿರುತ್ತವೆ. ನಾನು ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು ತ್ರಿತಾರಾ ಹೋಟೆಲ್ ಒಂದರಲ್ಲಿ. ಆ ಹೋಟೆಲ್ ಲಾಬಿಯಲ್ಲಿ ನಿಂತಾಗ ನನ್ನ ಸ್ನೇಹಿತರ ಜೊತೆ ನಾನು ಕನ್ನಡಡದಲ್ಲಿ ಮಾತನಾಡುತ್ತಿದ್ದೆ. ರೆಸೇಪ್ಶನ್ ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ನನ್ನ ಚಾಲಕನ ಬಳಿ ಕೇಳಿದ.
ಇವರು ಮುಸಲ್ಮಾನರೆ ? ಅವರು ಮಾತನಾಡುತ್ತಿರುವ ಭಾಷೆ ಯಾವುದು ? ಅವರು ಮುಸ್ಲೀಮ್ ರಾಗಿದ್ದರೆ ಅವರಿಗೆ ಈ ಹೋಟೆಲ್ಲಿನಲ್ಲಿ ರೂಮು ನೀಡುವುದಿಲ್ಲ.
ನನಗೆ ಆಘಾತವಾಗಿತ್ತು. ನಾನು ನೋಡಲು ಮುಸಲ್ಮಾನಂತೆ ಕಾಣುತ್ತಿದೆ. ಜೊತೆಗೆ ಸ್ವಲ್ಪ ಗಡ್ದವನ್ನು ಬಿಟ್ಟು ಟ್ರಿಮ್ ಮಾಡಿದ್ದೆ. ಹೀಗಾಗಿ ಆತ ನಾನು ಮುಸ್ಲಿಮ್ ಧರ್ಮಕ್ಕೆ ಸೇರಿದವನು ಎಂದು ಆತ ಅಂದುಕೊಂಡಿದ್ದ. ನಾನು ಅವನ ಜೊತೆ ಜಗಳವಾಡಿದೆ. ಕೋಮಿನ ಕಾರಣಕ್ಕಾಗಿ ರುಂಉ ನೀಡದಿರುವುದು ಸರಿಯಲ್ಲ ಎಂದು ವಾದಿಸಿದೆ. ಕೊನೆಗೆ ನನ್ನ ಹೆಅಸು ಕೇಳಿದ ಮೇಲೆ ಆತ ನನಗೆ ರೂಮು ನೀಡಲು ಒಪ್ಪಿದ.
ಆದರೆ ನರೇಂದ್ರ ಮೋದಿಯವರ ಗುಜರಾತಿನ ಸತ್ಯ ದರ್ಶನ ನನಗಾಗಿತ್ತು.. ಗಾಂಧಿಜಿಯವರ ಗುಜರಾತ್ ಸಂಪೂರ್ಣ ವಾಗಿ ಬದಲಾಗಿತ್ತು. ಇದನ್ನು ನನಗೆ ಸಹಿಸಿಕೊಳ್ಳುವುದು ಕಷ್ಟವಾಗಿತ್ತು. ಅಮ್ಜದ್ ಇದೆಲ್ಲ ನನಗೆ ಗೊತ್ತು ಎನ್ನುವಂತೆ ಸಣ್ಣಕ್ಕೆ ನಕ್ಕಿದ್ದು ನನ್ನ ಮನಸ್ಸಿನಲ್ಲಿ ಹಾಗೆ ಉಳಿದಿತ್ತು.
ಮರು ದಿನ ನಾನು ಅಹಮದಾಬಾದಿಗೆ ಭೇಟಿ ನೀಡಿದೆ. ಹಾಗೆ ಗುಜರಾತಿನ ಇನ್ನೂ ಕೆಲವು ಪ್ರದೇಶಗಳಿಗೆ ಬೇಟಿ ನೀಡಿದೆ.
ಅಲ್ಲಿ ನರೇಂದ್ರ ಮೋದಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಜಾತಿ ಲೆಕ್ಕಾಚಾರಗಳು ನಡೆಯುತ್ತಿದ್ದವು. ಆದರೆ ಮುಸ್ಲಿಮ್ ಎನ್ನುವ ಕಾರಣಕ್ಕಾಗಿ ಹೋಟೆಲ್ಲಿನಲ್ಲಿ ರೂಮು ನೀದುವುದಿಲ್ಲ ಎಂಬುದೇ ನನ್ನ ಮನಸ್ಸಿನಲ್ಲಿ ಕಾಡುತ್ತಿತ್ತು. ಇಂಥಹ ರಾಜ್ಯಕ್ಕೆ ದಿಕ್ಕಾರವಿರಲಿ ಎಂದು ನನ್ನ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಲೇ ನಾನು ಗುಜರಾತಿನಲ್ಲಿ ಅಸಹಾಯಕನಂತೆ ನಿಂತು ಬಿಟ್ಟೆ.

9 comments:

RAJARAM KADOOR said...
This comment has been removed by the author.
RAJARAM KADOOR said...

ಸರ್ ನೀವು ಗುಜರಾತಿಗೆ ಅಲ್ಲೇನಿದೆ ಅಥವಾ ಅಲ್ಲೇನಾಗಿದೆ ಅಂತ ತಿಳಿಯಲು ಹೋದ್ರ ಅಥವಾ ನಿಮಗೆ ಬೇಕಾದ ಅಥವಾ ತಿಳಿದ ವಿಚಾರಗಳನ್ನ ಹುಡುಕಿಕೊಂಡು ಹೋದ್ರ........ಅಮ್ಜದ್ ನ ಹುಸಿನಗೆ ನಿಮಗೆ ಸತ್ಯ ದರ್ಶನ ಮಾಡಿಸಿದ್ದು,ಮಧ್ಯ ನಿಷೆದವಿದ್ದರು ನಿಮಗಲ್ಲಿ ಗುಂಡು ಸಿಕ್ಕಿದ್ದು ........... ಇದಕ್ಕಿಂತ ಉತ್ತಮ ವಿಷಯ ವಿಚಾರಗಳು ನಿಮಗೆ ನೋಡಲು, ಕಾಣಲು ಸಿಗಲಿಲ್ವ,

RK Divakara said...

ಆದರೂ ಅಥವಾ ಅದಕ್ಕಾಗಿಯೇ ಮೋದಿ ಗೆದ್ದಾರು. ಮೋದಿ ಗೆದ್ದರೆ ಹರ್ಷಿಸುವ ಸ್ಥಿತಿಯಲ್ಲೇನೂ ಬಿಜೆಪಿ ಇಲ್ಲ. ಸೋತರೆ, ಸಂತೋಷಪಡುವುದಕ್ಕೆ ಕಾಂಗ್ರಸಿಗೂ ಏನೂ ಇಲ್ಲ!

monica moni said...

ನಿಮ್ಮ ಲೇಖನದಲ್ಲಿ ಗುಜರಾತ್ ಚುನಾವಣೆ ಮಾಹಿತಿಕ್ಕಿಂತ, ನೀವು ಗುಜರಾತ್ಗೆ ಹೋದ ವಿಷಯದ ಬಗ್ಗೆನೇ ಹೆಚ್ಚು ಒತ್ತು ಕೊಟ್ಟಿದ್ದೀರಿ...

monica moni said...

ನಿಮ್ಮ ಲೇಖನದಲ್ಲಿ ಗುಜರಾತ್ ಚುನಾವಣೆಯ ಮಾಹಿತಿಕ್ಕಿಂತ, ನೀವು ಗುಜರಾತ್ಗೆ ಹೋದ ವಿಷಯದ ಬಗ್ಗೆನೇ ಹೆಚ್ಚು ಒತ್ತು ಕೊಟ್ಟಿದ್ದೀರಿ...

monica moni said...

ನಿಮ್ಮ ಲೇಖನದಲ್ಲಿ ಗುಜರಾತ್ ಚುನಾವಣೆಯ ಮಾಹಿತಿಕ್ಕಿಂತ, ನೀವು ಗುಜರಾತ್ಗೆ ಹೋದ ವಿಷಯದ ಬಗ್ಗೆನೇ ಹೆಚ್ಚು ಒತ್ತು ಕೊಟ್ಟಿದ್ದೀರಿ...

ವಿ.ರಾ.ಹೆ. said...

ಅದ್ಯಾವುದೋ ಹೊಟೆಲ್ ನಲ್ಲಿ ರೂಮು ಕೊಡಲು ಹಿಂದೆಮುಂದೆ ನೋಡಿದರು ಅಂತ ಇಡೀ ರಾಜ್ಯಕ್ಕೆ ಧಿಕ್ಕಾರ ಹೇಳುವ ನಿಮ್ಮ ಪೂರ್ವಗ್ರಹ ಮನಸ್ಸು ಅಲ್ಲಿನ ಹುಳುಕುಗಳನ್ನು ಮಾತ್ರ ಹುಡುಕಲು ಹೋದಂತಿದೆ !

ವಿಜಯ್ ಜೋಶಿ said...

ಮಾನ್ಯ ಶಶಿಧರ ಭಟ್ ಅವರೆ,

ನಾನು ಕಾಲೇಜು ಓದು ಮುಗಿಸುವವರೆಗೆ ನನಗೆ ನನ್ನ ಜಾತಿ ಯಾವುದು ಎಂಬುದನ್ನು ಹೇಳಿಕೊಳ್ಳುವ ಅಗತ್ಯವೇ ಎದುರಾಗಲಿಲ್ಲ. ನನ್ನ ಹೆಸರಿನ ಜೊತೆಗೇ ನನ್ನ ಅಡ್ಡಹೆಸರಿದೆ, ಅದು ನಿರ್ದಿಷ್ಟ ಜಾತಿಯೊಂದನ್ನು ಸೂಚಿಸುವುದೂ ಹೌದು. ನಾನು ಕಾಲೇಜಿನ ಓದು ಮುಗಿಸಿ ಹಳೆ ಮೈಸೂರು ಪ್ರಾಂತ್ಯಕ್ಕೆ (ಬೆಂಗಳೂರಿಗೆ) ಬಂದೆ. ಈ ಭಾಗದಲ್ಲಿ ಸುತ್ತಾಟ ಮಾಡುವ ಸಂದರ್ಭದಲ್ಲಿ ನನಗೆ ಮುಜುಗರ ಆಗುವ ಕೆಲವು ಪ್ರಸಂಗಗಳು ಎದುರಾಗಿವೆ. ನನ್ನ ಪೂರ್ಣ ಹೆಸರು ಕೇಳಿದ ತಕ್ಷಣ ಕೆಲವರು, 'ಓ ಸಂಸ್ಕೃತದವರೋ?' ಎಂದು ಕುಹಕವಾಡಿದ್ದಾರೆ. ಇನ್ನು ಕೆಲವರು 'ಜುಟ್ಟು - ಜನಿವಾರದ ಮನುಷ್ಯ' ಎಂದು ವ್ಯಂಗ್ಯದ ಮಾತುಗಳನ್ನು ಆಡಿದ್ದಾರೆ. ಅಂತರ್ಜಾಲದ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ನನಗೆ, 'ನಿಮ್ಮ ಹೆಸರು ನೋಡಿದರೆ, ಜಾತಿ ವ್ಯವಸ್ಥೆ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದು ಗೊತ್ತಾಗುತ್ತದೆ' ಎಂದು ತೀರ್ಪು ನೀಡಿದವರು ಇದ್ದಾರೆ. ಒಂದು ಮಾತು ಸ್ಪಷ್ಟ, ಇಂಥ ಮಾತುಗಳನ್ನು ಆಡಿದವರು ಕೆಲವೇ ಕೆಲವು ಜನ. ನನ್ನ ಅನುಭವದ ಆಧಾರದಲ್ಲಿ ಹೇಳುವುದಾದರೆ ಶೇಕಡ ೯೯ರಷ್ಟು ಮಂದಿ, ಅಂಥವರಲ್ಲ.
ನನಗೆ ಸಂಸ್ಕೃತ ಭಾಷೆ ತಿಳಿದಿಲ್ಲ, ಜುಟ್ಟು ಬಿಡಬೇಕಾದ ಅಗತ್ಯವಿಲ್ಲ. ಹಾಗೆಯೇ, ಜನಿವಾರ ಎಂಬುದು ಧರಿಸಲೇಬೇಕಾದ ವಸ್ತು ಎಂದು ಅನಿಸಿಲ್ಲ. ಆದರೂ ನನ್ನ ಜಾತಿಯ ಕಾರಣ ಚೂರು-ಪಾರು ಹೇಳಿಸಿಕೊಳ್ಳಬೇಕಾಧ ಪರಿಸ್ಥಿತಿ ಎದುರಾಗಿದೆ. ತೀರಾ ವೈಯಕ್ತಿಕವಾದ ಈ ವಿಷಯ ಪ್ರಸ್ತಾಪಿಸಿದ್ದಕ್ಕೆ ಕಾರಣಗಳಿವೆ. ನಿಮ್ಮ ಬ್ಲಾಗ್‌ನಲ್ಲಿ 'ಮೋದಿ'ಯ ಗುಜರಾತ್‌ ಬಗ್ಗೆ ಬರೆದ ಲೇಖನದ ಕೊನೆಯಲ್ಲಿ ಒಂದೆರಡು ವಾಕ್ಯ ಬರೆದಿದ್ದೀರಿ: "ಆದರೆ ಮುಸ್ಲಿಮ್ ಎನ್ನುವ ಕಾರಣಕ್ಕಾಗಿ ಹೋಟೆಲ್ಲಿನಲ್ಲಿ ರೂಮು ನೀದುವುದಿಲ್ಲ ಎಂಬುದೇ ನನ್ನ ಮನಸ್ಸಿನಲ್ಲಿ ಕಾಡುತ್ತಿತ್ತು. ಇಂಥಹ ರಾಜ್ಯಕ್ಕೆ ದಿಕ್ಕಾರವಿರಲಿ ಎಂದು ನನ್ನ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಲೇ ನಾನು ಗುಜರಾತಿನಲ್ಲಿ ಅಸಹಾಯಕನಂತೆ ನಿಂತು ಬಿಟ್ಟೆ."
ಈ ವಾಕ್ಯದ ಬಗ್ಗೆ ನನಗೆ ತಕರಾರಿದೆ, ಗುಜರಾತ್‌ ಎಂದರೆ ಇಷ್ಟು ಮಾತ್ರವೇ ಆಗಿದೆಯಾ ಭಟ್ರೆ? ಜಾತಿ ಮತ್ತು ಧರ್ಮದ ನೆಲೆಯಲ್ಲಿ ಹುಟ್ಟುಕೊಳ್ಳುವ ಪೂರ್ವಾಗ್ರಹಗಳು ಎಲ್ಲ ರಾಜ್ಯಗಳಲ್ಲೂ ಇದೆಯಲ್ಲವಾ? ನಿರ್ದಿಷ್ಟ ಜಾತಿಯೊಂದರ ಬಗ್ಗೆ ನಮ್ಮ ರಾಜ್ಯದ ಕೆಲವರು ಒಂದೆರಡು ಕುಹಕದ ಅಥವಾ ದ್ವೇಷದ ಮಾತು ಆಡಿದರು ಎಂದ ಮಾತ್ರಕ್ಕೆ, ಇಡೀ ರಾಜ್ಯಕ್ಕೆ ಧಿಕ್ಕಾರ ಹೇಳುವುದು ಉಚಿತವೇ? ಅದೇ ರೀತಿ, ಯಾರೋ ಒಬ್ಬ ಹೋಟೆಲ್‌ ಮಾಲೀಕ ಮುಸ್ಲಿಮರ ಬಗ್ಗೆ ಲಘುವಾಗಿ ಮಾತನಾಡಿದ ಎಂಬ ಕಾರಣಕ್ಕೆ ಇಡೀ ಗುಜರಾತ್‌ಗೆ ಧಿಕ್ಕಾರ ಹೇಳಬೇಕಾದ ಅನಿವಾರ್ಯತೆ ಇದೆಯಾ? ನಿಮ್ಮ ಲೇಖನ ಓದಿದ ನಂತರ ನನ್ನನ್ನು ಕಾಡಿದ ಪ್ರಶ್ನೆಗಳು ಇವು,

ನಮಸ್ಕಾರ,
ವಿಜಯ್ ಜೋಷಿ.

raju said...

ಶಶಿಧರ ಭಟ್ಟರ "ಕುಮ್ರಿ"ಯಲ್ಲಿ ಅವರ ಅನುಭವದ ವಾಸ್ತವಾಂಶದ ಲೇಖನವನ್ನು ಓದಿದಾಗ : ನನಗನ್ನಿಸಿದ್ದು ನಮ್ಮ ತಟ್ಟೆಯಲ್ಲಿ ಆನೆ ಸತ್ತು ಬಿದ್ದು ನಾರುತ್ತಿದೆ, ಪಕ್ಕದವರ ತಟ್ಟೆಯಲ್ಲಿ ನೊಣ ಬಿದ್ದಿದೆ ಅಂತ ತೋರಿಸುವ ಹಾಗೆ ಆಗಿದೆ. ಶಶಿಧರ್ ಭಟ್ಟರೇ, ನಾನು ಗುಜರಾತ್ ನೋಡಿಲ್ಲ. ನಿಮ್ಮಂತಹ ಪತ್ರಕರ್ತರು ಪತ್ರಿಕೆಯಲ್ಲಿ ನ್ಯೂಸ್ ಚಾನೆಲ್ ನಲ್ಲಿ ಹೇಳಿದ್ದನ್ನೇ ಓದಿ, ಕೇಳಿ ತಿಳಿದುಕೊಂಡಿದ್ದೇನೆ. ಗುಜರಾತ್ ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ನರೇಂದ್ರ ಮೋದಿಯವರು ಯಾವುದೇ ಪ್ರಬಲ ಜಾತಿಯ ಬೆಂಬಲವಿರಲಿಲ್ಲ. ಹಿಂದೆ ಗುಜರಾತ್ ನಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದವರೂ ಅಲ್ಲ ಆಗಿದ್ದು, ಆ ವ್ಯಕ್ತಿ ಹೆಸರು ಭಾರತ ದಿಂದ ಹೊರಗೆ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಸುದ್ಧಿ ಮಾಡುತ್ತವೆ ಎಂದರೆ ಅವರ ಕಾರ್ಯ ವೈಖರಿಯಲ್ಲಿ ಎಲ್ಲೋ ಬದಲಾವಣೆ ಕಾಣಸಿಗಬಹುದು. ಸತತವಾಗಿ ಎರಡು ಬಾರಿ ಆಡಳಿತ ಚುಕ್ಕಾಣಿ ಹಿಡಿದು, ಮೂರನೇ ಬಾರಿಗೂ ವಿಜಯಧ್ವಜ ಹಿಡಿದು ಮುನ್ನುಗ್ಗುತ್ತಿದ್ದಾರೆ ಎಂದರೆ ಆ ವ್ಯಕ್ತಿಯ ವ್ಯಕ್ತಿತ್ವವನ್ನು ಆಡಳಿತವನ್ನು ಮೆಚ್ಚಿಕೊಳ್ಳಬೇಕಾದವರು ಗುಜರಾತಿಗಳು. * ಶಶಿಧರ ಭಟ್ಟರೇ, ನೀವು ಹಿರಿಯ ಪತ್ರಕರ್ತರು, ಹಲವಾರು ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದವರು. ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಅರಾಜಕತೆಯ ಬಗ್ಗೆ ಯಾವತ್ತಾದರೂ ಚಿಂತಿಸಿದ್ದಿರಾ? ಶ್ರೀ ಕುಮಾರಸ್ವಾಮಿಯವರು ಶಾಸಕರಾಗಿ 20 ತಿಂಗಳಿಗೆ ಮುಖ್ಯಮಂತ್ರಿಯಾಗುವ ಕನಸಿಗೆ ಒಂದು ಸರ್ಕಾರವನ್ನೇ ಅತಂತ್ರಗೊಳಿಸಿದರು, 20 ತಿಂಗಳ ನಂತರ ಅಧಿಕಾರ ಬಿಟ್ಟು ಕೊಡುವ ಆಡಿದ ನಾಟಕ ಜಗಜಾಹೀರು. ನಂತರದ್ದು ರೆಸಾರ್ಟ್ ನಾಟಕಗಳು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ತನ್ನ ಬೆಳೆಸಿದ ಪಕ್ಷದಲ್ಲಿ ಹೊಟ್ಟೆ ತುಂಬ ಉಂಡು, ಉಂಡ ತಟ್ಟೆಯಲ್ಲೇ ".ಹೇ......." ನನಗೆ ಅನ್ಯಾಯ ಆಗಿದೆ. ರಾಜ್ಯಾಧ್ಯಕ್ಷ ಪಟ್ಟ ಕೊಡಲಿಲ್ಲ. ಮುಖ್ಯಮಂತ್ರಿ ಪಟ್ಟ ಕೊಡಲಿಲ್ಲ ಅಂತ ಹೊಸ ಪಕ್ಷವನ್ನು ಕಟ್ಟಿದ್ದಾರೆ (ಬರೋಬ್ಬರಿ 7 ಕೋಟಿ 15 ಲಕ್ಷ ಖರ್ಚು ಮಾಡಿ ಸಮಾವೇಶ ಮಾಡಿ ಮುಗಿಸಿದ್ದಾರೆ) (ಈ ಹಣ ಹೊಸ ಪಕ್ಷಕ್ಕೆ ಹೇಗೆ ಬಂತೋ ಅದು ನಿಗೂಢ) ಯಡಿಯೂರಪ್ಪನವರ ಸ್ವಾರ್ಥ ರಾಜಕಾರಣಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ಬಲಿ ತೆಗೆದುಕೊಂಡಿದ್ದಾರೆ /ಕೊಳ್ಳುತ್ತಿದ್ದಾರೆ. ನಮ್ ರಾಜ್ಯದಲ್ಲಿ ಭ್ರಷ್ಟಾಚಾರ ಪ್ರತಿ ಇಲಾಖೆಗಳಲ್ಲೂ ತಾಂಡವವಾಡುತ್ತಿದೆ. ನಿಮ್ಮನ್ನು ಸೇರಿಕೊಂಡು ಹಿರಿಯ ಎಲ್ಲಾ ಪತ್ರಕರ್ತರು ವಾಹಿನಿಗಳು "ಭ್ರಷ್ಟಾಚಾರ"" ತಡೆಯುವ ಮಾರ್ಗಗಳ ಬಗ್ಗೆ ಬರೆದು ತಿಳಿಸಿದರೆ ಯಾರೊಬ್ಬರಿಗೂ ಕಾಳಜಿ ಇಲ್ಲ. ರಾಜಕಾರಣಿಗಳು ಅವರೊಂದು ಬಗೆಯ ನಾಟಕ ಮಾಡಿಕೊಂಡು ಹೊಟ್ಟೆತುಂಬಿಸಿಕೊಳ್ಳುತ್ತಿದ್ದರೆ. ಪತ್ರಿಕೋದ್ಯಮವೂ ಸಹ ಮತ್ತೊಂದು ಹಾದಿಯಲ್ಲಿ ಹೊಟ್ಟೆತುಂಬಿಸಿಕೊಳ್ಳುವ ಹಾದಿಯಲ್ಲಿ ಹೊರಟಂತಿದೆ. ಇಷ್ಟೆಲ್ಲಾ ಸಮಸ್ಯೆಗಳು ನಮ್ಮ ರಾಜ್ಯದಲ್ಲಿ ಇದ್ದರೂ ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡದೇ ದೂರದ ರಾಜ್ಯದ ಬಗ್ಗೆ ಟೀಕಿಸುವುದು ಎಷ್ಟರಮಟ್ಟಿಗೆ ಸರಿ ಅಲ್ಲವೇ? ಮೋದಿಯ ಆಡಳಿತ ಗುಜರಾತಿಗಳಿಗೆ ಇಷ್ಟವಾಗಿದ್ದರೆ ಮತ ನೀಡಿ ಗೆಲ್ಲಿಸುತ್ತಾರೆ, ಇಷ್ಟವಿಲ್ಲದಿದ್ದರೆ ಮನೆಗೆ ಕಳುಹಿಸುತ್ತಾರೆ. " ಶಶಿಧರ ಭಟ್ರೇ, ಈಗಲೂ ಕಾಲ ಮಿಂಚಿಲ್ಲ. ನೀವು ಹಿರಿಯ ಪತ್ರಕರ್ತರು ಬನ್ನಿ, ಸಮಾನ ಮನಸ್ಕರನ್ನು, ಯುವಕರನ್ನು ಸೇರಿಸಿ ಜಾಗೃತಿ ಮೂಡಿಸಿ, ನಮ್ಮ ರಾಜ್ಯದಲ್ಲಿ ಹೊಸ ರಾಜಕೀಯ ಕ್ರಾಂತಿಗೆ ಮುನ್ನುಡಿ ಬರೆಯಿರಿ. " ಆಗುತ್ತಾ ....???