Friday, December 7, 2012

ನಿಮ್ಮಂಥ ದೊಡ್ದವರಿಗೆ ನನ್ನಂತಹ ಸಾಮಾನ್ಯನ ಮೇಲೆ ಯಾಕೆ ಅಸಹನೆ ?


ಮನುಷ್ಯರ ಮನಸ್ಸು ಕೆಲಸ ಮಾಡುವ ರೀತಿ ಕೆಲವೊಮ್ಮೆ ಭಯವನ್ನು ಹುಟ್ಟಿಸುತ್ತದೆ. ಕೆಲವೊಮ್ಮೆ ಬೇಸರವಾಗುತ್ತದೆ. ಕೆಲವೊಮ್ಮೆ ಕೋಪವನ್ನು ಉಂಟು ಮಾಡುತ್ತದೆ. ಸುಮಾರು ೨೦ ವರ್ಷಗಳ ಹಿಂದೆ ನಾನು ಹಿಮಾಲಯದಲ್ಲಿ ಭೇಟಿ ಮಾಡಿದ ಸ್ವಾಮೀಜಿ ಒಬ್ಬರು ನೀನು ಎಂದರೆ ನಿನ್ನ ಮನಸ್ಸು ಮತ್ತು ಆಲೋಚನೆ ಬೇರೆ ಏನೂ ಅಲ್ಲ ಎಂದು ಹೇಳಿದ ಮಾತು ನನಗೆ ಆಗಾಗ ನೆನಪಾಗುತ್ತದೆ. ಈ ಮನಷ್ಯನೆಂಬ ಕ್ಷುದ್ರ ಜೀವಿಯ ಮನಸ್ಸು ಅಸಹ್ಯ ಹುಟ್ಟಿಸುತ್ತದೆ.
ಈ ಪೂರ್ವಭಾವಿ ಪೀಠಿಕೆ ನೀಡುವುದಕ್ಕೆ ಬಹುಮುಖ್ಯ ಕಾರಣ ನನ್ನ ಕೆಲವು ಸಹೋದ್ಯೋಗಿಗಳು ನೆನಪಾಗಿದ್ದು. ನಾನು ಪತ್ರಿಕೋದ್ಯಮಕ್ಕೆ ಬಂದು ೨೫ ವರ್ಷಗಳು ಕಳೆದು ಹೋಗಿವೆ. ಇಲ್ಲಿಗೆ ಬಂದ ಮೇಲೆ ಹಲವು ರೀತಿಯ ಜನರನ್ನು ಭೇಟಿ ಮಾಡಿದ್ದೇನೆ. ಹಲವಾರು ಸಹೋದ್ಯೋಗಿಗಳ ಜೊತೆ ಕೆಲಸ ಮಾಡಿದ್ದೇನೆ. ಕೆಲವೇ ಕೆಲವರು ಸ್ನೇಹಿತರಾಗಿದ್ದಾರೆ. ಹಲವರ ಜೊತೆ ವೈಚಾರಿಕ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ. ಆದರೆ ಯಾರ ಬಗ್ಗೆಯೋ ವೈಯಕ್ತಿಕ ದ್ವೇಷ ಸಾಧನೆ ಮಾಡುವುದು ನನ್ನ ಜಾಯಮಾನವಲ್ಲ. ಮನುಷ್ಯ ಗುಣ ಮತ್ತು ದೌರ್ಬಲ್ಯಗಳ ಒಂದು ಮೊತ್ತ ಎಂದು ನಂಬಿದವನು ನಾನು. ಹಾಗೆ ಗುಣಗ್ರಾಹಿಯಾಗಿ ಬದುಕಲು ಯತ್ನ ನಡೆಸಿದವನು ನಾನು. ಆದರೆ ಕೆಲವೊಂದು ವಿಚಾರಗಳ ಬಗ್ಗೆ  ಎಂದೂ  ಹೊಂದಾಣಿಕೆ  ಮಾಡಿಕೊಂಡವನಲ್ಲ.  ಎಂದೂ ಹೊಂದಾಣಿಕೆ ಮಾಡಿಕೊಳ್ಳುವವನು ಅಲ್ಲ.
ನನ್ನ ಸಹೋದ್ಯೋಗಿಗಳಾಗಿದ್ದವರಲ್ಲಿ  ರವಿ ಬೆಳಗೆರೆ, ವಿಶ್ವೇಶ್ವರ ಭಟ್, ಎಚ್. ಆರ್. ರಂಗನಾಥ್ ಎಲ್ಲರೂ ಇದ್ದಾರೆ. ಇವರಲ್ಲಿ ಎಲ್ಲರ ಬಗ್ಗೆಯೂ ನನಗೆ ನನ್ನದೇ ಆದ ಆಭಿಪ್ರಾಯವಿದೆ. ಆದರೆ  ವೈಯಕ್ತಿಕ ಧ್ವೇಷವಿಲ್ಲ. ಅವರಲ್ಲಿರುವ ಒಳ್ಳೆಯ ಗುಣಗಳ ಬಗ್ಗೆ ನನಗೆ ಪ್ರೀತಿ ಮತ್ತು ಗೌರವಗಳಿವೆ.
ರವಿ ಬೆಳಗೆರೆ ಮತ್ತು ವಿಶ್ವೇಶ್ವರ ಭಟ್ ಆತ್ಮೀಯರಾಗಿದ್ದ ದಿನಗಳಲ್ಲಾಗಲೀ, ಜಗಳ ಮಾಡುತ್ತಿರುವ ಇಂದಿನ ದಿನಗಳಲ್ಲಾಗಲಿ ಆ ಬಗ್ಗೆ ಬಹಿರಂಗವಾಗಿ ನಾನು ಮಾತನಾಡಿದವನಲ್ಲ. ಒಬ್ಬರು ಇನ್ನೊಬ್ಬರ ಮೇಲೆ ಕೆಸರು ಎರಚುತ್ತಿರುವಾಗ ನನಗೆ ಬೇಸರವಾಗಿದ್ದುಂಟು. ರವಿಯ ಬಗ್ಗೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿದ್ದಾಗಲೂ ನಾನು ಕೆಲಸ ಮಾಡುತ್ತಿದ್ದ ವಾಹಿನಿಯೊಂದರಲ್ಲಿ ಅವನನ್ನು ಕರೆದು ಕಾರ್ಯಕ್ರಮ ಮಾಡಿಸಿದವನು ನಾನು. ಅವನಿಗೂ ನನ್ನ ಮೇಲೆ ಗೌರವವಿದೆ. ಅವನೆಂದೂ ನನ್ನ ಬಗ್ಗೆ ಸಣ್ಣದಾಗಿ ಮಾತನಾಡಿಲ್ಲ.
ಇನ್ನು ರಂಗನಾಥ್. ಆತ ಮತ್ತು ನಾನು ಹಲವು ವರ್ಷ ಜೊತೆಯಾಗಿ ಇದ್ದವರು. ಜೊತೆಯಾಗಿ ಕೆಲಸ ಮಾಡಿದವರು. ಕೆಲವೊಮ್ಮೆ ಸಿಟ್ಟು ಮಾಡಿಕೊಂಡಿದ್ದೇವೆ. ಮಾತನಾಡದೇ ಕಾಲ ಕಳೇದಿದ್ದೇವೆ. ಆದರೆ ವಾರದಲ್ಲಿ ನಾಲ್ಕಾರು ಬಾರಿಯಾದರೂ ಅವನ ಬಗ್ಗೆ ನಾವು ಮನೆಯಲ್ಲಿ ಮಾತನಾಡುತ್ತೇವೆ. ಈತ ನಮ್ಮ ಸ್ನೇಹಿತ ಎಂಬ ಭಾವ ಎಂದೂ ಹೋಗುವುದಿಲ್ಲ. ಆತನೂ ಅಷ್ಟೇ. ತಾನು ಹೊಸದೊಂದು ಚಾನಲ್ ಮಾಡಿದಾಗ ಪ್ರೀತಿಯಿಂದ ಕರೆದ. ನಾನು ಹೋಗಿ ಬಂದೆ.
ರಂಗನಾಥ್ ಕನ್ನಡ ಪ್ರಭ ಸಂಪಾದಕನಾಗಿದ್ದಾಗ ಸುವರ್ಣದಲ್ಲಿ ರಾಜಕೀಯ ಚರ್ಚೆಗೆ ಕರೆದು ವಿಸ್ಯುವಲ್ ಮೀಡಿಯಾ ಪ್ರವೇಶಕ್ಕೆ ಕಾರಣನಾದವನು ನಾನು. ಈ ಬಗ್ಗೆ ನನಗೆ ಸಂತೋಷವಿದೆ. ಆತ ಪತ್ರಿಕೋದ್ಯಮಿಯಾಗಿ ಮಾಡಿರುವ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ.  ರಂಗನಾಥ್ ಮತ್ತು ರವಿಯ ಜೊತೆ ಯಾವಾಗಲಾದರೂ ಒಮ್ಮೆ ದೂರವಾಣಿಯಲ್ಲಿ ಮಾತನಾಡಿ ಯೋಗಕ್ಷೇಮ ವಿಚಾರಿಸಿಕೊಳ್ಳುವುದಿದೆ.
ನಾಡಿನ ಖ್ಯಾತ ಪತ್ರಕರ್ತರಾದ ವಿಶ್ವೇಶ್ವರ ಭಟ್ ರು ನನ್ನ ಜಿಲ್ಲೆಯವರು. ನಾನು ಮತ್ತು ಅವರು ಕನ್ನಡ ಪ್ರಭದಲ್ಲಿ ಜೊತೆಯಾಗಿ ಕೆಲಸ ಮಾಡಿದವರು. ಅವರು ನನಗೆ ರಂಗನಾಥ್ ಮತ್ತು ರವಿಯಷ್ಟು ಆತ್ಮೀಯರಲ್ಲದಿದ್ದರೂ ಅವರ ಜೊತೆ ನಾನೆಂದೂ ಜಗಳವನ್ನು ಆಡಿಲ್ಲ. ನಾನು ವರದಿಗಾರನಾಗಿ ಕೆಲಸ ಮಾಡುತ್ತಿದ್ದಾಗ ಅವರು ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಏಷ್ಯನ್ ಸ್ಕೂಲ್ ಆಫ್ ಜರ್ನಲಿಸಂ ನಲ್ಲಿ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಆದರೆ ಕನ್ನಡ ಪ್ರಭ ಸಂಪಾದಕರಾದ ವೈ ಎನ್ ಕೆ ಅವರಿಗೆ ಹತ್ತಿರದವರಾದ್ದರಿಂದ ಅವರನ್ನು ಭೇಟಿ ಮಾಡಲು ಬಂದಾಗ ನಾನು ಅವರೊಂದಿಗೆ ಕೆಲವೊಮ್ಮೆ ಮಾತನಾಡಿದ್ದು ಉಂಟು.
ನನ್ನ ಮೇಲೇಕೆ ಅಸಹನೆ ಭಟ್ಟರೆ ?
ನಾನು ಸುವರ್ಣ ನ್ಯೂಸ್ ಸೇರಿದ ಮೇಲೆ ಅವರಿಂದ ವಾಕ್ ದಿ ಟಾಕ್ ಕಾರ್ಯಕ್ರಮ ಮಾಡಿಸಿದೆವು. ನಮ್ಮ ಆಡಳಿತ ಮಂಡಳಿಗೆ ಅವರಿಂದ ಕಾರ್ಯಕ್ರಮ ಮಾಡಿಸಬೇಕು ಅನ್ನಿಸಿದಾಗ ನಾನೇನೂ ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಲಿಲ್ಲ. ಈ ಕಾರ್ಯಕ್ರಮದ ಸಂಬಂಧ ಅವರು ಕಚೇರಿಗೆ ಬಂದಾಗ ನಾನು ಅವರನ್ನು ಭೇಟಿ ಮಾಡಿತ್ತಿದ್ದುದು ಉಂಟು. ಆದರೆ ಆ ಕಾರ್ಯಕ್ರಮಕ್ಕೆ ನಿರೀಕ್ಷಿತ ಜನಪ್ರಿಯತೆ ಬರದಿದ್ದರಿಂದ ಅದನ್ನು ನಿಲ್ಲಿಸಬೇಕಾಯಿತು. ಇದಾದ ಮೇಲೆ ನಾನೆಂದೂ ಅವರನ್ನೂ ಭೇಟಿ ಮಾಡಲಿಲ್ಲ.
ಆದರೆ ಅವರು ಹಲವಾರು ವಿಚಾರಗಳಲ್ಲಿ ವಿವಾದಕ್ಕೆ ಒಳಗಾದಾಗ ಆ ಬಗ್ಗೆ ಸಹೋದ್ಯೋಗಿಗಳ ಜೊತೆ ನಾನು ಬೇಸರದಿಂದಲೇ ಮಾತನಾಡಿದ್ದಿದೆ. ಅದು ಗಣಿ ಹಗರಣಕ್ಕೆ ಸಂಬಂಧಿಸಿರಬಹುದು, ಲಾಯರ್ ಜೊತೆಗಿನ ಗುದ್ದಾಟವಿರಬಹುದು, ಹಾಯ್ ಬೆಂಗಳೂರಿನಲ್ಲಿ ಬಂದ ವರದಿಯಲ್ಲಿನ ವಿಷಯಕ್ಕೆ ಸಂಬಂಧಿಸಿರಬಹುದು ಆಗೆಲ್ಲ ಖಾಸಗಿಯಾಗಿ ನಾನು ಬೇಸರದಿಂದ ಮಾತನಾಡಿದ್ದಿದ್ದೆ.
ಹಾಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹೋದಾಗ ಕೆಲವರು ವಿಶ್ವೇಶ್ವರ ಭಟ್ಟರ ಬಗ್ಗೆ ಬೇಸರದಿಂದ ಮಾತನಾಡಿದಾಗ ಆ ಜಿಲ್ಲೆಯವನೇ ಆದ ನಾನು ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದೇನೆ. ಇದನ್ನು ಬಿಟ್ಟರೆ ನಾನು ಅವರ ಬಗ್ಗೆ ಎಂದೂ ಎಲ್ಲಿಯೂ ಮಾತನಾಡಿಲ್ಲ. ಯಾಕೆಂದರೆ ನಾನು ಸ್ಟಾರ್ ಪತ್ರಕರ್ತನಲ್ಲ. ಇಡೀ ರಾಜ್ಯದ ರಾಜಕೀಯವನ್ನು ಸಾಮಾಜಿಕ ಬದುಕನ್ನು ಬದಲಿಸುವ ಶಕ್ತಿವಂತನೂ ಅಲ್ಲ. ನಾನು ಹತ್ತರಲ್ಲಿ ಒಬ್ಬ.
ಈ ವಿಚಾರಗಳನ್ನು ನಾನು ಪ್ರಸ್ತಾಪಿಸುವುದಕ್ಕೆ ಕಾರಣ ನನಗೆ ಬಂದ ದೂರವಾಣಿ ಕರೆ. ಕಳೆದ ವಾರ ನಾನು ಮಂಗಳೂರಿನಿಂದ ಹಿಂತಿರುಗಿ ಬಂದ ಮೇಲೆ ಸ್ನೇಹಿತರೊಬ್ಬರು ನನಗೆ ಕರೆ ಮಾಡಿ ಕನ್ನಡ ಪ್ರಭದಲ್ಲಿ ಬಾಣ ಭಟ್ ನಿಮ್ಮ ಬಗ್ಗೆ ಬರೆದಿದ್ದಾರೆ ಎಂದರು. ನಾನು ತಲೆ ಕೆಡಿಸಿಕೊಳ್ಳಲಿಲ್ಲ. ನಾನು ಕಳೆದ ಕೆಲವು ವರ್ಷಗಳಿಂದ ಕನ್ನಡ ಪ್ರಭ ಪತ್ರಿಕೆಯನ್ನು ಮನೆಗೆ ತರಿಸಿಕೊಳ್ಳದೇ ಇರುವುದರಿಂದ ಆ ಬಗ್ಗೆ ನನಗೆ ಗೊತ್ತಾಗಲಿಲ್ಲ. ಇಂದು ಬೆಳಿಗ್ಗೆ ಮತ್ತೆ ಇನ್ನೊಂದು ದೂರವಾಣಿ ಕರೆ. ಅವರೂ ಸಹ ಇಂದಿನ ಕನ್ನಡ ಪ್ರಭ ನೋಡಿ ಎಂದರು. ತಕ್ಷಣ ಅಂಗಡಿಗೆ ಹೋಗಿ ಪತ್ರಿಕೆಯನ್ನು ತಂದು ನೋಡಿದೆ. ಅಲ್ಲಿ ಬಾಣ ಭಟ್ಟನ ಪ್ರಶ್ನೋತ್ತರ ಹೀಗಿತ್ತು.
ಪ್ರಶ್ನೆ; ತುಟಿ ಕೆಂಪಗಿರುವವರೆಲ್ಲೆ ಲಿಪ್ ಸ್ಟಿಕ್ ಹಚ್ಚಿಕೊಳ್ಳುತ್ತಾರೆಯೆ ?
ಉತ್ತರ; ಪೊಕಳೆ ಶಶಿಧರ ಭಟ್ ಎಲೆಅಡಿಕೆ ಮೆತ್ತಿಕೊಂಡಿರುತ್ತಾನೆ.
ಇಲ್ಲಿ ಪ್ರಶ್ನೆ ಮತ್ತು ಉತ್ತರದ ನಡುವೆ ನನಗೆ ಯಾವ ಸಂಬಂಧವೂ ಕಾಣುತ್ತಿಲ್ಲ. ಅಸಹನೆ ಮತ್ತು ಧ್ವೇಷ ಮಾತ್ರ ಇಲ್ಲಿ ತಾಂಡವವಾಡುತ್ತಿದೆ. ಇನ್ನು ನಾನು ಎಲೆ ಅಡಿಕೆ ಹಾಕಿಕೊಳ್ಳುತ್ತೇನೆ ಎಂಬುದು ನಿಜ. ಅದು ನನ್ನ ಜಿಲ್ಲೆಯ ಬಹುತೇಕ ಜನರೂ ಹಾಕಿಕೊಳ್ಳುತ್ತಾರೆ. ವಿಶ್ವೇಶ್ವರ ಭಟ್ ರ ಅಪ್ಪ ಅಮ್ಮ ಕೂಡ ಎಲೆ ಅಡಿಕೆ ಹಾಕಿಕೊಳ್ಳುತ್ತಿರಬಹುದು. ಈಗಲೂ ಅವರ ನೂರಾರು ಸಂಬಂಧಿಕರು ಎಲೆ ಅಡಿಕೆ ಹಾಕಿಕೊಳ್ಳುತ್ತಾರೆ ಎಂದು ನಾನು ಎದೇ ತಟ್ಟಿ ಹೇಳಬಲ್ಲೆ.ಹಾಗಂತ ತಮ್ಮ ಜಿಲ್ಲೆಯ ಸ್ನೇಹಿತರನ್ನು ಜನರನ್ನು ಅವರು ದ್ವೇಷಿಸುತ್ತಾರೆಯೆ ?  ಜೊತೆಗೆ ನಾನು ಎಲೆ ಅಡಿಕೆ ಹಾಕಿಕೊಂಡರೂ ಇನ್ನೂ ಯಾರಿಗೂ ಉಗಿದಿಲ್ಲ. ಕೆಲವೊಮ್ಮೆ ಉಗಿಯಬೇಕು  ಎಂದು ಅನ್ನಿಸಿದರೂ ಹಾಗೆ ಮಾಡಿಲ್ಲ. ನಾನು ಕೆಲವೊಮ್ಮೆ ಹೇಳುವುದಿದೆ. ಎಲೆ ಅಡಿಕೆ ನನ್ನ ಜಿಲ್ಲೆಯನ್ನು ನನ್ನ ಜನರನ್ನು ನನ್ನ ತೋಟವನ್ನು ಕಾಡನ್ನು ಜಲಪಾತವನ್ನು ನೆನಪು ಮಾಡುತ್ತದೆ. ನನ್ನೂರಿನ ನೆನಪನ್ನು ಮರೆತು ನನಗೆ ಜೀವಿಸಲು ಸಾಧ್ಯವಿಲ್ಲ.  ಪ್ರತಿ ಕ್ಷಣದಲ್ಲಿ ನನ್ನನ್ನು ನನ್ನ ನೆಲ ಮತ್ತು ಜನರ  ನೆನಪು ಮಾಡುವುದು ಎಲೆ ಅಡಿಕೆಯೇ. ಇಲ್ಲಿದಿದ್ದರೆ ಯಾರ್ಯಾರೋ ನೆನಪಾಗಿ ಮನಸಿಗೆ ಬೇಸರವಾಗುತ್ತದೆ.
ನಾನು ಏನನ್ನಾದರೂ ಬಿಟ್ಟೇನು, ಎಲೆ ಅಡಿಕೆ ಬಿಡುವಿದಿಲ್ಲ. ಜೊತೆಗೆ ಎಲೆ ಅಡಿಕೆ ಕೋಟಿನ ಹಾಗೆ ಸೂಟಿನ ಹಾಗೆ ಎಲ್ಲಿಂದಲೋ ಬಂದಿದ್ದಲ್ಲ.ವಿದೇಶಗಳಲ್ಲಿ ಸುತ್ತುವವರಿಗೆ ವಿದೇಶಿ ಇಂಗ್ಲೀಷ್ ಕನಸು ಕಾಣುವವರಿಗೆ ಇದೆಲ್ಲ ಬೇಡದಿರಬಹುದು.ಆದರೆ ನನ್ನಂಥಹ ಪಾಮರರಿಗೆ ಸಾಮಾನ್ಯರಿಗೆ ಇದೆಲ್ಲ ಬೇಕು. ಅದು ಬೇರೆ ಯಾವ ಅನುಕರಣೆಯೂ ಅಲ್ಲ. ಅದು ನಮ್ಮ ನೆಲದ್ದು ನಮ್ಮದು.
ಇನ್ನು ಪೊಕಳೆ ಎಂಬ ವಿಶೇಷಣ. ಪೊಕಳೆ ಎಂದು ಸುಳ್ಳು ಹೇಳುವವನು ಎಂಬ ಅರ್ಥವಿದೆ. ಅದಕ್ಕೆ ಬುರುಡೆ ಎಂದು ಹೇಳಬಹುದು. ನಾನು ಎಲ್ಲಿ ಸುಳ್ಳು ಹೇಳಿದ್ದೇನೆ ಎಂಬುದು, ನಾನು ಎಲ್ಲಿ ಬುರುಡೆ ಬಿಡುತ್ತೇನೆ ಎಂಬುದು ನನಗೆ ತಿಳಿಯದು. ಹಾಗೆ ಸುಳ್ಳು ಹೇಳುವವರಿಗೆ ತಾವು ಸುಳ್ಳು ಹೇಳುತ್ತಿದ್ದೇವೆ ಎಂದು ತಿಳಿಯುವುದಿಲ್ಲ. ಜೊತೆಗೆ ಮುಕ್ತವಾಗಿ ಇರುವವರು ಕೆಲವೊಮ್ಮೆ ಒಂದರೆಡು ಹೆಚ್ಚಿಗೆ ಮಾತನಾಡುತ್ತಾರೆ. ಅದರಲ್ಲಿ ಉತ್ಪ್ರೇಕ್ಶೆ ಇರಬಹುದು. ನನ್ನ ಮಾತಿನಲ್ಲೂ ಉತ್ಪ್ರೇಕ್ಶೆ ಇದ್ದರೂ ಇರಬಹುದು. ಜೊತೆಗೆ ಅಪಾಯಕಾರಿಯಲ್ಲದ ಸುಳ್ಳು ಒಳ್ಳೆಯದೇ.
ನಾನು ಉದ್ದೇಶಪೂರ್ವಕವಾಗಿ ಸುಳ್ಳು ಹೇಳುವುದಿಲ್ಲ ಎಂದು ಮಾತ್ರ ಹೇಳಬಲ್ಲೆ.
ಕನ್ನಡ ಪ್ರಭದಲ್ಲಿ ಬಂದ ಪ್ರಶ್ನೋತ್ತರವನ್ನು ನೋಡಿದಾಗ ವಿಶ್ವೇಶ್ವರ ಭಟ್ಟರಿಗೆ ನನ್ನ ಮೇಲೆ ಕೋಪ ಮತ್ತು ಅಸಹನೆ ಇದೆ ಎಂಬುದು ಸ್ಪಷ್ಟ. ಅದು ಯಾಕೆ ಎಂಬುದು ನನಗೆ ನಿಜವಾಗಿ ತಿಳಿಯದು. ಪ್ರೀತಿ ಮತ್ತು ಕೋಪಕ್ಕೆ ಸಕಾರಣಗಳಿರಬೇಕು. ಸಕಾರಣಗಳಿಲ್ಲದ ಪ್ರೀತಿ ಮತ್ತು ಧ್ವೇಷ ಎರಡು ಅಪಾಯಕಾರಿಯೆ. ಇಂತಹ ಅಪಾಯಕಾರಿಯಾದ ಧ್ವೇಷ ಯಾತಕ್ಕೆ ಎಂಬುದು ನನಗೆ ತಿಳಿದರೆ ಒಳ್ಳೆಯದು. ಆದರೆ ಅವರು ಪೊಕಳೆ ಎಂಬ ಶಬ್ದವನ್ನು ಬಳಸಿರುವುದನ್ನು ಗಮನಿಸಿದರೆ ನಾನು ಎಲ್ಲೋ ಹೇಳಿದ ಯಾವುದೋ ಮಾತಿನಿಂದ ಅವರಿಗೆ ಸಿಟ್ಟು ಬಂದಿದೆ ಎಂಬುದು ಸ್ಪಷ್ಟ. ಅದು ಯಾವುದು ಎಂಬುದನ್ನು ಅವರು ಹೇಳಿದರೆ ಆ ಬಗ್ಗೆ ನಾವು ಚರ್ಚೆ ಮಾಡಬಹುದು. ನಾನು ಪೊಕಳೆ ಭಟ್ಟನಾದರೂ ಓಡಿ ಹೋಗುವ ಭಟ್ಟನಲ್ಲ. ಹೊಂದಾಣಿಕೆ ಮಾಡಿಕೊಳ್ಳುವ ಭಟ್ಟನಲ್ಲ. ಗುಂಪು ಕಟ್ಟುವ, ಯೋಧರ ಪಡೆ ಕಟ್ಟುವ ಭಟ್ಟನಲ್ಲ. ನಾನು ಒಬ್ಬಂಟಿಯಾಗಿ ಮಾತನಾಡಬಲ್ಲೆ. ನನ್ನನ್ನು ನಾನು ಸಮರ್ಥಿಸಿಕೊಳ್ಳಬಲ್ಲೆ.  ಆರೋಗ್ಯಪೂರ್ಣ ಚರ್ಚೆಯಲ್ಲಿ ನನಗೆ ನಂಬಿಕೆ ಇದೆ. ಯಾಕೆಂದರೆ ನಾನು ಮೂಲಭೂತವಾಗಿ ಜನತಂತ್ರವಾದಿ.

15 comments:

nisheetha said...

ಅಧ್ಭುತ! ಉತ್ತರ ಸರಿಯಾಗಿದೆ.

nisheetha said...

ಅಧ್ಭುತ! ಉತ್ತರ ಸರಿಯಾಗಿದೆ.

nisheetha said...

ಅಧ್ಭುತ! ಉತ್ತರ ಸರಿಯಾಗಿದೆ

nisheetha said...

adbhuta! uttara sariyagide

'ಮಂಜುನಾಥ್ ಕುಣಿಗಲ್' said...

ಆತ್ಮ ಶುದ್ಧಿಯಿಂದ ಹೊರಟ ಮಾತುಗಳು ನಿಮ್ಮವು. ನೇರ ಮತ್ತು ಸ್ಪಷ್ಟ..

Revanth said...

Sir bidi bhatru ittichege taavu obba dodda vyakti andukondiddare adke inta chikkatana

manju2cool said...

yale adike ok.. but gani dhoolu.. !!!

manju2cool said...

yale adike ok.. but gani dhoolu.. !!!

Prof.B.Harishchandra Bhat said...

Kelavaru thamma melina focus bereyavara mele thirugisalikkaagi vishayaanthara maadthaare. Adakke udaaseenave maddu. Baana Bhatta emba hesarige apachaara maaduva V.Bhattaru thammannu thaavu samarthisikollalaagade ee reethi Aarthanaada maadthiddaare! Avaru balasuvanthe ekavachanada udhaafe maathugalu avara kusamskrithi !

r

Bilimale said...

I also stopped reading Kannada Prabha. Just ignore Shahsi

sanchaari nirantara... said...

ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ?

ISHWARA BHAT said...

ನಮಸ್ತೆ, ಬಹಳ ಚೆನ್ನಾಗಿ ಬರೆದಿದ್ದೀರ. ನಿಮ್ಮ ನಿಲುವು ಹೀಗೇ ಮುಂದುವರೆಯಲಿ. ಅವರೊಂದಿಗೆ ಚರ್ಚೆಯೂ ಆರೋಗ್ಯಕರವಲ್ಲವೇನೋ>?

Vinayak Bhat said...

ಅಡಕೆ ಮರದ ಕೆಳಗೆ ಹುಟ್ಟಿ ಕವಳ ಹಾಕದ ಪುಣ್ಯಾತ್ಮ ಊಟ ಮಾಡಿ ಬಾಯಿ ಮುಕ್ಕಳಿಸಲಿಲ್ಲವಂತೆ!!!
ಹಿಂಗಿದ್ದು ಇದು!

raghupatil said...

I really fail to understand, what Mr.V.Bhat think himself?. Your areca nut stained lips and down to earth approach, which made you dear to us the viewers. As Mr.Bilimale suggested "Just ignore him". He does not deserve blog post.

ದಯಾನಂದ said...

Bhattare neevu janatantravadi aadare avro tantravadi. tale kedisikollabedi. neevu neeve. avaru avare. ok.