Wednesday, August 28, 2013

ಕೃಷ್ಣಾಷ್ಟಮಿಯಂದು ರಾಮ ಕೃಷ್ಣರನ್ನು ನೆನೆದು ..........
ಇಂದು ಕೃಷ್ಣ ಜನ್ಮಾಷ್ಟಮಿ. ವಿಶ್ವಾದ್ಯಂತ ಇರುವ ಹಿಂದೂಗಳು ಇಂದು ಕೃಷ್ಣನ ಪೂಜೆ ಮಾಡುತ್ತಿದ್ದಾರೆ. ಭಜನೆ ಸಂಕೀರ್ತನೆಗಳು ನಡೆಯುತ್ತಿವೆ. ಕೃಷ್ಣನ ಹೆಸರಿನಲ್ಲಿ ಬಗೆ ಬಗೆಯ ತಿಂಡಿಗಳನ್ನು ಮಾಡಿ ಸಂತೋಷಪಡುತ್ತಿದ್ದಾರೆ. ಇಂತಹ ಆಚರಣೆಗಳು ಸಾಮುದಾಯಿಕ ಭಾವನೆಯನ್ನು ನೀಡುವುದರಿಂದ ಇವೆಲ್ಲ ನಮಗೆ ಬೇಕು. ಆದರೆ ಕೃಷ್ಣ ದೇವರಾಗಿ ನಮ್ಮೆಲ್ಲರ ಪೂಜೆಗೆ ಪಾತ್ರನಾಗಿರುವುದರಿಂದ ನಮಗೆ ಬೇರೆ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.
ಇದು ದೇವರಾಗುವ ಅಥª ದೇವರನ್ನಾಗಿ ಮಾಡುವುದರಿಂದ ಉಂಟಾಗುವ ಸಮಸ್ಯೆ. ನಾವು ದೇವರನ್ನು ಪೂಜೆ ಮಾಡಲು ಪ್ರಾರಂಭ ಮಾಡಿದ ತಕ್ಷಣ ಅವನನ್ನು ಅರ್ಥ ಮಾಡಿಕೊಳ್ಳುವುದನ್ನು ನಿಲ್ಲಿಸಿಬಿಡುತ್ತೇವೆ. ಆತನನ್ನು ಗುಡಿ ಗೋಪುರಗಳಲ್ಲಿ ಬಂಧಿಸಿಟ್ಟುಬಿಡುತ್ತೇವೆ. ಮಂಗಳಾರತಿ ಮಾಡಿ ಕೃತಾರ್ಥರಾಗಿಬಿಡುತ್ತೇವೆ. ಅಲ್ಲಿಗೆ ಎಲ್ಲವೂ ಮುಗಿದು ಹೋಯಿತು.
ಭಾರತೀಯ ಪರಂಪರೆಯಲ್ಲಿ ಮತ್ತು ಪುರಾಣ ಇಲಿಹಾಸಗಳಲ್ಲಿ ಬರುವ ಎರಡು ಅದ್ಭುತ ಪಾತ್ರಗಳೆಂದರೆ ರಾಮ ಮತ್ತು ಕೃಷ್ಣ. ರಾಮನ ಬದುಕು ಮತ್ತು ನಂಬಿಕೆ ತುಂಬಾ ಸರಳವಾದುದು. ಆದರೆ ಅವನಂತೆ ಬದುಕುವುದು ಕಷ್ಟ. ಕೃಷ್ಣ ವ್ಯಕ್ತಿತ್ವ ತುಂಬಾ ಸಂಕೀರ್ಣವಾದುದು. ಹೀಗಾಗಿ ಕೃಷ್ಣನಾಗುವುದು ಸಾಧ್ಯವೇ  ಇಲ್ಲ. ರಾಮಕೃಷ್ಣನಂತವರು ವಿಶ್ವದ ಬೇರೆ ಯಾವುದೇ ದೇಶದ ಪುರಾಣ ಮತ್ತು ಇತಿಹಾಸದಲಿ ಕಾಣ ಸಿಗುವುದಿಲ್ಲ. ಇತಿಹಾಸ ಎಂಬ ಶಬ್ದವನ್ನು ನಾನು ಉದ್ದೇಶಪೂರ್ವಕವಾಗಿ ಬಳಸಿದ್ದೇನೆ. ಬಹುತೇಕ ಪುರಾಣಗಳ ಮೂಲಧ್ರವ್ಯ ಇತಿಹಾಸವೇ. ಐತಿಹಾಸಿಕ ಪುರುಷರು ಕಾಲಕ್ರಮೇಣ ಪುರಾಣಕ್ಕೆ ಬೇಕಾದ ಬುನಾದಿಯನ್ನು ಒದಗಿಸುತ್ತಾರೆ. ಐತಿಹಾಸಿಕ ಪುರುಷರ ಅಸ್ತಿ ಪಂಜರಕ್ಕೆ ಪುರಾಣದ ಮಾಂಸ ಖಂಡಗಳು ತುಂಬಿಕೊಳ್ಳುತ್ತವೆ. ಇತಿಹಾಸದಲ್ಲಿ ಕಪ್ಪು ಬಿಳುಪು ಮಾತ್ರ ಇದ್ದರೆ ಪುರಾಣ ಬಣ್ಣಗಳನ್ನು ಒಳಗೊಂಡಿರುತ್ತದೆ
ರಾಮ ಮತ್ತು ಕೃಷ್ಣ ಇಬ್ಬರೂ ಐತಿಹಾಸಿಕ ಪುರುಷರು ಎಂಬ ಬಗ್ಗೆ ಯಾವ ಅನುಮಾನವೂ ಬೇಡ. ಅವರಿಬ್ಬರೂ ಈ ದೇಶದ ಮಣ್ಣಿನಲ್ಲಿ ಓಡಾಡಿದವರು. ತಮ್ಮ ವ್ಯಕ್ತಿತ್ವದ ಮೂಲಕ ಐದು ಸಾವಿರ ವರ್ಷಗಳ ನಂತರವೂ ಜೀವಂತವಾU ಇರುವವರು. ಆದರೆ ಇವರ ಐತಿಹಾಸಿಕ ವ್ಯಕ್ತಿತ್ಬಕ್ಕೂ ಪುರಾಣದ ರಂಜಕತೆ ಮತ್ತು ದೈವತ್ವಕ್ಕೂ ತುಂಬಾ ವ್ಯತ್ಯಾಸವಿದೆ. ಆದರೆ ಅವರು ಈಗ ನಮಗೆ ನೆನಪಿನಲ್ಲಿ ಉಳಿದಿರುವುದು ಪುರಾಣದ ಮಹಾ ಪುರುಷರಾಗಿ. ಕೇವಲ ಐತಿಹಾಸಿಕ ವ್ಯಕ್ತಿಗಳಾಗಿ ಅಲ್ಲ. ಕೇವಲ ಐತಿಹಾಸಿಕ ವ್ಯಕ್ತಿಗಳಾಗಿ ಮಾತ್ರ ಅವರು ಉಳಿದಿದ್ದರೆ ಇನ್ನೊಬ್ಬ ರಾಜಕುವರ ನಂತೆಯೂ ಮಹಾರಾಜಂತೆಯೂ ಪಠ್ಯ ಪುಸ್ತಕದ ಭಾಗವಾಗಿ ಮಾತ್ರ ಅವರು ಉಳಿದು ಬಿಡುತ್ತಿದ್ದರು.
ನಾವು ಕೃಷ್ಣನನ್ನು ಪೂಜೆ ಮಾಡಿ ಸುಮ್ಮನಾಗಿ ಬಿಡುವುದಿದ್ದರೆ ನಮಗೆ ಪುರಾಣ ಮಾತ್ರ ಸಾಕು, ಆದರೆ ಕೇವಲ ಪೂಜೆ ಮಾಡಿ ಸುಮ್ಮನಾಗಿ ಬಿಟ್ಟರೆ ಈ ಮಹಾಪುರುಷರ ಸ್ಪರ್ಷ ನಮಗಾಗುವುದಿಲ್ಲ. ನಾವು ಇವರನ್ನು ನಮ್ಮೊಳಗೆ ಅಹ್ವಾನಿಸಿಕೊಳ್ಳುವುದಿದ್ದರೆ ನಾವು ಅವರನ್ನು ಅರ್ಥ ಮಾಡಿಕೊಳ್ಳಬೇಕು. ಹೀಗೆ ಅರ್ಥ ಮಾಡಿಕೊಳ್ಳುವುದಕ್ಕೆ ಪೂಜೆ ಮಾತ್ರ ಸಾಲದು. ಪುರಾಣ ಮತ್ತು ಇತಿಹಾಸದ ಮೂಲಕ ಮಾತ್ರ ಅವರನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯ.
ರಾಮ ಕೃಷ್ಣರನ್ನು ಪೂಜಿಸುವ ಬಹುತೇಕರು ಅವರನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸುವುದೇ ಇಲ್ಲ. ರಾಮ ಕೃಷ್ಣರ ಕಥೆಯನ್ನು ಕೇಳಿ ಸುಮ್ಮನಾಗಿ ಬಿಡುತ್ತಾರೆ. ಆದರೆ ನಾವು ರಾಮ ಕೃಷ್ಣರನ್ನು ಅರ್ಥ ಮಾಡಿಕೊಂಡು ನಾವೇ ಅವರಾಗಲು ಯತ್ನ ನಡೆಸುವುದೇ ಅತ್ಯುತ್ತಮ ಅಧ್ಯಾತ್ಮಿಕತೆ. ಆದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಅವರಾಗುವುದು ಬೇಕಾಗಿಲ್ಲ. ಯಾಕೆಂದರೆ ಪೂಜೆ ಮಾಡುವುದು ತುಂಬಾ ಸುಲಭ. ಅವರಂತಾಗುವುದು ಕಷ್ಟ. ಕಷ್ಟ ಪಡುವುದು ಯಾರಿಗೂ ಬೇಕಾಗಿಲ್ಲ.
ರಾಮ ಪ್ರತಿಪಾದಿಸುವ ಜೀವನ ಮೌಲ್ಯಗಳನ್ನು ಅಳವಡಿಸುವುದಕ್ಕಿಂತ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದು ಅದಕ್ಕೆ ಇಟ್ಟಂಗಿಗಳನ್ನು ಹೊರುವುದು ಹೆಚ್ಚು ಸುಲಭ. ಅದು ಹಲವು ರೀತಿಯ ಲಾಭವನ್ನು ಕೊಡುತ್ತದೆ.  ರಾಮನಂತೆ ಬದುಕಿದರೆ ಕಾಡಿಗೆ  ಹೋಗಬೇಕಾಬಹುದು. ಒಂದೇ ಹೆಂಡತಿಯ ಜೊತೆ ಜೀವನ ಪೂರ್ತಿ ಬದುಕಬೇಕಾಗಬಹುದು. ಹಾಗೆ ಪಿತ್ರವಾಕ್ಯ ಪರಿಪಾಲನೆ ಮಾಡಿ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾಗಬಹುದು, ಹೀಗೆ ಯೋಚನೆ ಮಾಡುವ ಭಕ್ತರು ಆಂತರಿಕವಾಗಿ ರಾಮ ಪ್ರತಿಪಾದಿಸಿದ ಮೌಲ್ಯಗಳು ಇವತ್ತು ಪ್ರಸ್ತುತವಲ್ಲ ಎಂದುಕೊಂಡಿರುತ್ತಾರೆ. ಹೀಗಾಗಿ ರಾಮ ನಾಮದ ಜಪ ಮಾಡಿ ಕೈತೊಳೆದುಕೊಂಡು ಬಿಡುತ್ತಾರೆ. ಆದರೆ ರಾಮ ಇಂದಿಗೂ ಪ್ರಸ್ತುತ. ಆತ ನಮಗೆಲ್ಲ ಬೇಕು.
ರಾಮ ಮತ್ತು ಕೃಷ್ಣರನ್ನು ಹೋಲಿಸಿದಾಗ ಇವರಿಬ್ಬರ ವ್ಯಕ್ತಿತ್ವದಲ್ಲಿ ಇರುವ ಅಗಾಧ ಪ್ರಮಾಣದ ವ್ಯತ್ಯಾಸ ಗೋಚರಿಸುತ್ತದೆ. ರಾಮ ಗಂಭೀರ ವ್ಯಕ್ತಿತ್ವದವ. ಆತ ಎಂದಾದರೂ ನಕ್ಕಿರಬಹುದೇ ಎಂಬ ಪ್ರಶ್ನೆಗೆ ಉತ್ತರ ಸಿಗದು. ಆತ ಮೌಲ್ಯಗಳಿಗಾಗಿ ಬದುಕಿದವನು. ಯಾವುದು ಸರಿ ಯಾವುದು ತಪ್ಪು ಎಂಬ ವಿಚಾರದಲ್ಲಿ ಅವನಿಗೆ ಸ್ಪಷ್ಟತೆ ಇತ್ತು. ಆತನಿಗೆ ಸ್ತ್ರಿಯರ ಬಗ್ಗೆ ಇದ್ದುದು ಮಾತ್ರ ಭಾವ ಮಾತ್ರ. ಪ್ರೇಮ ಎನ್ನುವುದು ಅವನಿಗೆ ಅಪರಿಚಿತ. ರಾಜ್ಯಾಡಳಿತದಲ್ಲೂ ಆತ ಪ್ರಜಾಪಾಲಕ. ತಾಯಿಗಾಗಿ ರಾಜ್ಯ ತ್ಯಾಗ ಮಾಡಿz. ಪ್ರಜೆಯೊಬ್ಬ ಮಾಡಿದ ಟೀಕೆಯಿಂದ ಪತಿಯನ್ನು ಕಾಡಿಗಟ್ಟಿದ. ಆತ ಸೀತೆಯನ್ನು ಮದುವೆಯಾಗಿದ್ದೂ ಒಂದು ರೀತಿಯಲ್ಲಿ ಗುರುವಿನ ಆದೇಶದ ಅನುಸಾರವಾಗಿ.  ವಿಶ್ವಾಮಿತ್ರರು ಆತನನ್ನು ಮಿಥಿಲೆಗೆ ಕರೆದುಕೊಂಡು ಹೋದ್ದರಿಂದ ಶಿವ ಧನಸ್ಸನ್ನು ಮುರಿದ. ಮದುವೆಯಾದ. ಹಾಗೆ ಸುಗ್ರೀವನಿಗಾಗಿ ಮರೆಯಲ್ಲಿ ನಿಂತು ವಾಲಿ ವಧೆ ಮಾಡಿದ. ಇಲ್ಲಿ ಯಾವ ಪ್ರಕರಣದಲ್ಲಿಯೂ ಆತ ತನಗಾಗಿ ಏನನ್ನೂ ಮಾಡಲಿಲ್ಲ. ಅತ ಮಾಡಿದ್ದೆಲ್ಲ ಬೇರೆಯವರಿಗಾಗಿ.
ರಾವಣನ ವಧೆಯನ್ನು ಆತ ಸೀತೆಗಾಗಿ ಮಾಡಿದ ಎಂದು ಹೇಳುವುದು ಕಷ್ಟ. ಅದು ಕೇವಲ ನೆಪ ಮಾತ್ರ ಆಗಿತ್ತು. ಅಂದಿನ ಆರ್ಯಾವರ್ತದಲ್ಲಿ ಕ್ಶತ್ರಿಯರ ಪ್ರಾಬಲ್ಯವನ್ನು ಉಳಿಸುವುದಕ್ಕಾಗಿ ಆತ ರಾವಣನ ವಧೆ ಮಾಡಲೇ ಬೇಕಿತ್ತು. ವೈದಿಕ ಪರಂಪರೆಯಲ್ಲಿ ಯಜ್ನ ಯಾಗ ಮಾಡುತ್ತಿದ್ದ ಋಷಿಗಳ ರಕ್ಷಣೆ ಮಾಡುವುದು ಕ್ಶತ್ರಿಯ ರಾಜರ ಪರಮ ಕರ್ತವ್ಯವಾಗಿತ್ತು. ಅದಕ್ಕಾಗಿ ರಾಕ್ಷಸರನ್ನು ಆತ ವಧಿಸಲೇ ಬೇಕಾಗಿತ್ತು.
ಕೃಷ್ಣ ರಾಮನಂತಲ್ಲ.  ಬದುಕಿದ್ದಷ್ಟು ಕಾಲ ಈ ದೇಶದಲ್ಲಿ ನಡೆದ ಎಲ್ಲ ಬೆಳವಣಿಗಳೆ ಹಿಂದೆÉ ಕೃಷ್ಣನಿದ್ದ. ಆದರೆ ಆತ ಎಲ್ಲವನ್ನು ತನ್ನ ಚಾಣಕ್ಷತನದ ಮೂಲಕವೇ ಮಾಡಿ ಮುಗಿಸಿದ ರಾಜ ನೀತಜ್ನ. ಆತ ತನ್ನ ಕೈಯಲ್ಲಿ ಅಸ್ತ್ರವನ್ನು ಹಿಡಿಯದೇ ಎಂತೆಂತಹ ಪ್ರಚಂಡರನ್ನು ಮಿಗಿಸಿಬಿಟ್ಟ. ಸೋದರ ಮಾವ ಕಂಸನನ್ನು ಮುಗಿಸುವುದರೊಂದಿಗೆ ಪ್ರಾರಂಭವಾಗುವ ಕೃಷ್ಣನ ಶತ್ರು ಸಂಹಾರ ಕುರುಕ್ಷೇತ್ರ ಯುದ್ಧದೊಂದಿಗೆ ಮುಕ್ತಾಯವಾಗುತ್ತದೆ.
ಕೃಷ್ಣನ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಅವನ ವ್ಯಕ್ತಿತ್ವದಲ್ಲಿ ಇರುವ ಸಂಕೀರ್ಣತೆ ರಾಮನ ವ್ಯಕ್ತಿತ್ವದಲ್ಲಿ ಇಲ್ಲ. ರಾಮ ಎಲ್ಲ ಸಿದ್ಧಾಂತಿಗಳ ಹಾಗೆ ತುಂಬಾ ನೀರಸ. ಆದರೆ ಕೃಷ್ಣನ ಬದುಕೇ ನವರಸ. ಆತನ ಬದುಕಿನ ಮೊದಲ ಭಾಗದಲ್ಲಿ  ನವಿಲುಗರಿ ಮತ್ತು ಕೊಳಲು ಸದಾ ಅವನ ಜೊತೆ ಇರುತ್ತಿದ್ದವು. ಕಿರೀಟದ ಮೇಲೆ ನವಿಲುಗರಿ ಇಟ್ಟುಕೊಂಡ ಆತ ಪ್ರೀತಿಗೆ ಹೊಸ ವ್ಯಾಖ್ಯೆಯನ್ನೆ ಬರೆದು ಬಿಟ್ಟ. ಅವನ ಕೈಯಲ್ಲಿನ ಕೊಳಲು ಅವನ ಕೈಯಲ್ಲಿ ಇರುವುದೇ ಪರಮ ಭಾಗ್ಯ ಎನ್ನುವಂತಾಯಿತು. ಯಮುನಾ ನದಿಯ ತೀರದಲ್ಲಿ ಆತ ಕೊಳಲು ನುಡಿಸುತ್ತಿದ್ದರೆ ಆ ರಾಗ ಚುಂಬಕ ಶಕ್ತಿಯಾಗಿ ಎಲ್ಲರನ್ನೂ ಆಕರ್ಷಿಸಿಬಿಡುತ್ತಿತ್ತು. ಗೋಪಿಕೆಯರೆಲ್ಲ ಮೈಮರೆತ್ ರಾಗ ಸುಧೆಯಲ್ಲಿ ಕಳೆದು ಹೋಗುತ್ತಿದ್ದರು ಕೃಷ್ಣ ಕೊಳಲು ಭಾರಿಸುತ್ತ ನಗುತ್ತಿದ್ದ. ಗೋಪಿಕೆಯರು ನರ್ತಿಸುತ್ತಿದ್ದರು. ಅವನ ತುಟಿಯಂಚಿನಲ್ಲಿ ಸಣ್ಣ ನಗು. ಅದು ಎಂದೂ ಮಾಸದ ನಗು.
ಕೃಷ್ಣ ಮಾನವ ಇತಿಹಾಸದಲ್ಲಿ ಪ್ರೀತಿಯ ಮೊದಲು ಸಾಲುಗಳನ್ನು ಬರೆದವನು. ಪ್ರೀತಿಯ ಮೊದಲ ಪಾಠ ಹೇಳಿದವನು. ಅವನ ಪ್ರೀತಿ ನಿಷ್ಕಲ್ಮಷ. ಅಲ್ಲಿ ಕಾಮದ ವಾಂಛೆಯಿಲ್ಲ. ಅದೊಂದು ಅನುಭೂತಿ. ಆತ ಸಾವಿರಾರು ಗೋಪಿಕೆಯರಿಗೆ ತನ್ಮಯತೆಯನ್ನು ಕಲಿಸಿದ. ಪ್ರೀತಿಸುವುದ್ ಹೇಗೆ ಎಂಬುದನ್ನು ಹೇಳಿಕೊಟ್ಟ.
ಪ್ರೀತಿಯನ್ನು ತನ್ನ ಎದೆಯಲ್ಲಿ ಇಟ್ಟುಕೊಂಡು ಸಾಕಿದ ಕೃಷ್ಣ ರಾಜಕಾರಣದಲ್ಲಿ ತನ್ನನ್ನು ತೊಡಗಿಸಿಕೊಂಡ ಮೇಲೆ ಸಂಪೂರ್ಣವಾಗಿ ಬದಲಾದ. ಆತನ ಹೃದಯದಲ್ಲಿದ್ದ ಪ್ರೀತಿಯ ಸೇಲೆ ವರತೆಯಾಗಿ ಹೊರಕ್ಕೆ ಬರಲಿಲ್ಲ. ಆದರೆ ಆಗ ಪ್ರೀತಿಯ ವ್ಯಾಖ್ಯೆಯನ್ನು ಆತನೇ ಬದಲಿಸಿದ. ಗೋಕುಲ ಕೃಷ್ಣ ರಾಜಕಾರಣಿಯಾದ. ಹಾಗಿ ಆತ ಮತ್ತೆ ಎಂದೂ ಕೊಳಲು ನುಡಿಸಲಿಲ್ಲ. ಕೊಳಲನ್ನು ಯಮುನಾ ನದಿಯ ದಡದಲ್ಲೇ ಬಿಟ್ಟು ಬಂದ. ಅವನ ಕೊಳಲು ಅನಾಥವಾಯಿತು. ಆ ಕೊಳಲಿನಲ್ಲಿ ಮತ್ತೆ ನಾದ ಹೊರಡಲೇ ಇಲ್ಲ. ಆದರೆ ಗೋಪಿಕೆಯರ ಮನಸ್ಸಿನಲ್ಲಿ ಆತ ಬಿತ್ತಿದ್ದ ಪ್ರೀತಿಯ ಬೀಜ ವಿರಹವಾಯಿತು. ಕೃಷ್ಣ ಮತ್ತು ಗೋಪಿಕೆಯರ ನಡುವಿನ ಸಂಬಂಧ ಸಾಮಾನ್ಯ ಸಂಬಂಧವಾಗಿರಲಿಲ್ಲ. ರಾಜಕಾರಣಿ ಕಷ್ಣನನ್ನು ನೋಡಲು ಗೋಪಿಯರು ಎಂದೂ ರಾಜಧಾನಿಗೆ ಬರಲಿಲ್ಲ. ಅವರ ಪ್ರೀತಿ ಆರಾಧನೆಯಾಯಿತು. ಪ್ರತಿ ದಿನ ಯಮುನಾ ನದಿಯ ದಂಡೆಗೆ ಬರುತ್ತಿದ್ದ ಗೋಪಿಕೆಯರು ಅನಾಥವಾಗಿದ್ದ ಕೊಳಲನ್ನು ಮುಟ್ಟಿ ಸಂತೋಷಪಡುತ್ತಿದ್ದರು. ಅದರಿಂದ ರಾಗ ಬರುತ್ತಿದೆ ಎಂಬ ಭಾವನೆ ಅವರಿಗೆ ಅನ್ನಿಸುತ್ತಿತ್ತು, ತಕ್ಷಣ ಅವರಿಗೆ ಅಲ್ಲಿ ಕೃಷ್ಣ ಇದ್ದ ಭಾವ ಬರುತ್ತಿತ್ತು. ಮುದುಡಿದ ಮನಸ್ಸು ಹಾರಾಡತೊಡಗುತ್ತಿತ್ತು. ಅವರಿಗೆ ಆ ಕೊಳಲಿನಲ್ಲೇ ಕೃಷ್ಣ ಕಾಣುತ್ತಿದ್ದ.
ಪ್ರೀತಿ ಅರಾಧನೆಯಾಗುವ ಅದ್ಭುತ. ಎಲ್ಲರ ಪ್ರೀತಿಯೂ ಆರಾಧನೆಯಾಗುವುದಿಲ್ಲ. ಆರಾಧಿಸುವುದಕ್ಕೂ ವಿಭಿನ್ನವಾದ ಮನಸ್ಥಿತಿ ಬೇಕು. ಆರಾಧನೆಯಲ್ಲಿ ನಾನು ಎಂಬುದು ಮರೆಯಾಗಬೇಕು. ನಾನು ಎಂಬುದು ಮರೆಯಾಗದಿದ್ದರೆ ಆರಾಧನೆ ಸಾಧ್ಯವಿಲ್ಲ. ಹಾಗೆ ಅಲ್ಲಿರುವುದು ಸಮರ್ಪಣಾ ಭಾವ. ಅಹಂ ಸಮರ್ಪಣೆಗೆ ಯಾವಾಗಲೊ ವಿರೋಧವನ್ನು ವ್ಯಕ್ತಪಡಿಸುತ್ತದೆ. ಪ್ರೀತಿಯಲ್ಲಿರುವ ಅಹಂ ಪ್ರೀತಿ ಇನ್ನೊಂದು ಹಂತಕ್ಕೆ ಏರುವುದಕ್ಕೆ ತಡೆಯನ್ನು ಉಂಟು ಮಾಡುತ್ತದೆ. ಪ್ರೀತಿ ಕೇವಲ ಕಾಮವಾಗಿಬಿಡುತ್ತದೆ. ಆದರೆ ಕಾಮ ಪ್ರೀತಿ ಅಲ್ಲವೇ ಅಲ್ಲ.
ಕೋಪಿಕೆಯರಿಗೆ ಕೃಷ್ಣನ ಬಗ್ಗೆ ಇದ್ದುದು ಕಾಮವಲ್ಲ. ವಾಂಛ್ಯೆಯಲ್ಲ. ಹೀಗಾಗಿ ಅವರಿಗೆ ಕೃಷ್ಣನನ್ನು ಆರಾಧಿಸುವುದು ಸಾಧ್ಯವಾಯಿತು, ಕೃಷ್ಣ ಎದುರಿಗೆ ಇಲ್ಲದಿದ್ದರೂ ಅವನ ಇರುವನ್ನು ಅನೂಭವಿಸಲು  ಸಾಧ್ಯವಾಗುತ್ತಿತ್ತು . 
ಬೀಸುವ ಗಾಳಿಯಲ್ಲಿ, ಹರಿಯುವ ಯಮುನಾ ನದಿಯ ಅಲೆಗಳಲ್ಲಿ ಅಲ್ಲಿದ್ದ ಕೊಳಲಿನಲ್ಲಿ ಕಷ್ಣ ಗೋಪಿಕೆಯರನ್ನು ತಲುಪುತ್ತಿದ್ದ . ಹೀಗೆ ಕೃಷ್ಣನನ್ನು ಆರಾಧಿಸುತ್ತಿದ್ದ ಗೋಪಿಕೆಯರಲ್ಲಿ ರಾಧೆಯ ಸ್ಥಾನವೇ ಬೇರೆ. ಕೃಷ್ಣನಿಗಿಂತ ಸ್ವಲ್ಪ ದೊಡ್ಡವಳಾದ ರಾಧೆಗೆ ಆಗಲೇ ಮದುವೆಯಾಗಿತ್ತು. ಆದರೆ ಆಕೆ ಕೃಷ್ಣನನ್ನು ಆರಾಧಿಸುತ್ತಿದ್ದಳು. ಆಕೆಗೆ ಕೃಷ್ಣನೇ ಸರ್ವಸ್ವ. ಆತನ ಕೊಳಲಿನ ನಾದಕ್ಕೆ ಆಕೆ ಹಾರುವ ಹಕ್ಕಿಯಾಗುತ್ತಿದ್ದಳು. ಬೆಳದಿಂಗಳ ರಾತ್ರಿಯಲ್ಲಿ ಯಮುನಾ ನದಿಯ ದಂಡೆಯಲ್ಲಿ ಕೃಷ್ಣನನ್ನು ತನ್ನೊಳಗೆ ತುಂಬಿಕೊಳ್ಳುತ್ತ ಅವಳೇ ಕೃಷ್ಣನಾಗುತ್ತಿದ್ದಳು. ಆದರೆ ಕೃಷ್ಣ ಮತ್ತು ರಾಧೆಯರ ನಡುವಿನ ಸಂಬಂಧ ಎಲ್ಲವನ್ನೂ ಮೀರಿದ ಸಂಬಂಧವಾಗಿತ್ತು. ಅದು ಯಾವುದೇ ವ್ಯಾಖ್ಯೆಗೆ ಸಿಗುವಂತಹುದಾಗಿರಲಿಲ್ಲ.
ಕೃಷ್ಣನ ಪ್ರೀತಿ ರಾಜಕಾರಣಕ್ಕೆ ಬಂದ ಮೇಲೆ ಬದಲಾದ ಪರಿ ಕೂಡ ಬೇರೆಯದು. ಅವನ ಗೋಪಿಕೆಯರ ಮೇಲಿನ ಪ್ರೀತಿ ಪಾಂಡವರ ಮೇಲಿನ ಪ್ರೀತಿಯಾಗಿ ಬದಲಾಯಿತು. ಅರ್ಜುನ ಆತನ ಸಖನಾದ. ಕುಂತಿಯ ಮೇಲೆ ಕಷ್ಣನಿಗಿದ್ದ ಪ್ರೀತಿ ತಾಯಿಯ ಮೇಲೆ ಮಗ ಇಡುವ ಪ್ರೀತಿಯಾಗಿತ್ತು. ದ್ರೌಪದಿಯ ಬಗ್ಗೆಯೂ ಅವನಿಗೆ ವಿಶೇಷ ಗೌರವಾದರಗಳಿದ್ದವು. ಆದರೆ ಕೃಷ್ಣ ದ್ರೌಪದಿ ಮತ್ತು ಕುಂತಿಯ ಎದುರು ಮಾತ್ರ ಮೌನಿಯಾಗುತ್ತಿದ್ದ. ಅವನ ಎಂದಿನ ನಗೆ ಮುಖದ ಮೇಲೆ ಇರುತ್ತಿರಲಿಲ್ಲ. ಅವರ ಮಾತುಗಳನ್ನು ಕೇಳಿಸಿಕೊಳ್ಳುವುದೇ ಅವನಿಗೆ ಖುಷಿ
ಕೃಷ್ಣ ದ್ರೌಪದಿಗೆ ಕೊಡುತ್ತಿದ್ದ ಗೌರವ ಯಾವ ರೀತಿಯದಾಗಿತ್ತೆಂದರೆ ಆತ ಆಕೆಯ ಎದುರು ಏನೂ ಅಲ್ಲದವನಂತೆ ಇರುತ್ತಿದ್ದ. ಆತ ಆಕೆಗೆ ಸ್ಪಂದಿಸುತ್ತಿದ್ದ ರೀತಿ, ಅವಳ ಕೆರೆಗೆ ಓಗೊಡುತ್ತಿದ್ದ ರೀತಿಯೂ ಅನನ್ಯವೇ.
ತನ್ನ ಹೆಂಡಿರಲ್ಲಿ ರುಕ್ಮಿಣಿಯ ಜೊತೆಗೆ  ಗೌರವಸ್ಥ ಸದ್ ಗ್ರಹಸ್ತನ ಹಾಗೆ ಇರುತ್ತಿದ್ದ ಕಷ್ಣ ಸತ್ಯಭಾಮೆಯ ಜೊತೆಗೆ ಕಿಲಾಡಿ. ಉಳಿದ ಹೆಂಡಿರ ಜೊತೆಗೂ ಆತ ಬೇರೆಯ ವ್ಯಕ್ತಿಯ ಹಾಗೆ ಕಾಣುತ್ತಿದ್ದ. ಆದರೆ ತನ್ನ ಹೆಂಡಿರ ಜೊತೆಗೂ ಆತ ಗೋಪಿಕೆಯರ ಜೊತೆ ಇದ್ದಂತಹ ವ್ಯಾಖ್ಯಾನಕ್ಕೆ ಸಿಗದ ಭಾವವನ್ನು ಹೊಂದಿರುತ್ತಿರಲಿಲ್ಲ

 ಕಷ್ಣನ ಬಗ್ಗೆ ಹೇಳುವುದು ಇನ್ನೂ ತುಂಬಾ ಇದೆ. ಇವತ್ತಿಗೆ ಇಷ್ಟೇ ಸಾಕು,
No comments: