Monday, September 2, 2013

ಸೋನಿಯಾ ರೋಗಕ್ಕೆ ವಿದೇಶಿ ಮದ್ದು; ರಾಜಕೀಯಕ್ಕೆ ನವ ಧಾರ್ಮಿಕತೆ ಬೇಕು

ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಮತ್ತೆ ಆರೋಗ್ಯ ಕೈ ಕೊಟ್ಟಿದೆ. ಅವರು ತಮ್ಮ ಆರೋಗ್ಯ ತಪಾಸಣೆಗೆ ವಿದೇಶಕ್ಕೆ ಹಾರಿದ್ದಾರೆ, ಅವರಿಗೆ ಆರೋಗ್ಯ ಕೈಕೊಟ್ಟಿದ್ದು ಇದೇ ಮೊದಲಲ್ಲ. ಈ ಮೊದಲು ಆರೋಗ್ಯ ವ್ಯತ್ಯಾಸವಾದಾಗಲೂ ಅವರು ಚಿಕಿತ್ಸೆಗೆ ವಿದೇಶದ ವಿಮಾನ ಹತ್ತಿದ್ದರು. ಆರೋಗ್ಯ ಸರಿಯಾದ ಮೇಲೆ ಭಾರತಕ್ಕೆ ಹಿಂತಿರುಗಿದ್ದರು. ಆದರೆ ಅವರ ಆರೋಗ್ಯಕ್ಕೆ ಏನಾಗಿತ್ತು ? ಅವರಿಗೆ ಆಗಿದ್ದೇನು ಎಂಬುದನ್ನು ಆಗಲೂ ಬಹಿರಂಗಪಡಿಸಿರಲಿಲ್ಲ. ಈಗಲೂ ಅವರಿಗೆ ಆಗಿರುವುದೇನು ಎಂಬ ಬಗ್ಗೆ ಯಾವುದೇ ವಿವರಗಳೂ ಲಭ್ಯವಿಲ್ಲ. ಏನೇ ಇರಲಿ ಅವರ ಆರೋಗ್ಯ ಸುಧಾರಿಸಲಿ, ಅವರು ಆರೋಗ್ಯವಂತರಾಗಿ ದೇಶಕ್ಕೆ ಹಿಂತಿರುಗಲಿ.
ಕಾಂಗ್ರೆಸ್ ಪಕ್ಷಕ್ಕೆ ೧೦೦ ಕ್ಕಿಂತ ಹೆಚ್ಚು  ವಯಸ್ಸಾಗಿದೆ. ಇಂತಹ ಪಕ್ಷದ ಅಧ್ಯಕ್ಷರಿಗೆ ಆರೋಗ್ಯ ಕೆಟ್ಟಿರುವುದು ಆತಂಕದ ವಿಷಯವೇ. ಆದರೆ ಅವರಿಗೆ ಉಂಟಾಗಿರುವ ಆರೋಗ್ಯ ಸಮಸ್ಯೆಯನ್ನು ಬಗೆಹರಿಸುವ ಶಕ್ತಿ ಈ ದೇಶದ ಆರೋಗ್ಯ ವ್ಯವಸ್ಥೆಗೆ ಇಲ್ಲವೆ ? ಇಲ್ಲಿನ ವೈದ್ಯರಿಗೆ ಗುಣಪಡಿಸಲು ಆಗದಂತಹ ಸಮಸ್ಯೆ ಅವರಿಗಾಗಿದೆಯೆ ? ಗೊತ್ತಿಲ್ಲ. ಆದರೆ ಇಲ್ಲಿರುವ ಬಹುಮುಖ್ಯ ಪ್ರಶ್ನೆ ಎಂದರೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗೆ ಚಿಕಿತ್ಸೆ ನೀದಲು ಸಾಧ್ಯವಾಗದಂತಹ ಆರೋಗ್ಯ ವ್ಯವಸ್ಥೆ ನಮ್ಮದಾದರೆ ? ಇಲ್ಲಿನ ಸಾಮಾನ್ಯ ಮನುಷ್ಯನ ಗತಿ ಏನು ? ಇದಕ್ಕೆ ಕಾಂಗ್ರೆಸ್ ಪಕ್ಷದ ಹೊಣೆಗಾರಿಕೆ ಉತ್ತರದಾಯಿತ್ವ ಇಲ್ಲವೆ ?
ಈ ದೇಶದ ನೂರಕ್ಕೆ ೯೦ ರಷ್ಟು ಜನರಿಗೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವ ಶಕ್ತಿ ಇಲ್ಲ. ಅವರು ತಮ್ಮ ಅನಾರೋಗ್ಯಕ್ಕೆ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ದಾದಿಯರ ಸಹಾಯ ಪಡೆಯಬೇಕು, ಇಲ್ಲವೇ ಯಾವುದೋ ನಾಟಿ ವೈದ್ಯರ ಮೊರೆ ಹೋಗಬೇಕು. ಇನ್ನೂ ರೋಗ ಉಲ್ಬಣಗೊಂಡರೆ ಮನೆ ಮಠ ಮಾರಿ ಜಿಲ್ಲಾ ಆಸ್ಪತ್ರೆಗೋ, ಖಾಸಗಿ ಆಸ್ಪತ್ರೆಗೋ ಹೋಗಬೇಕು,. ಇಲ್ಲಿಯೋ ಅವರ ಜೀವ ಸುರಕ್ಷಿತ ಎನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ. ಸಾಮಾನ್ಯ ಜನರಿಗೆ ಇಲ್ಲದ ವಿಶೇಷ ಸೌಲಭ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಇದೆ. ಅವರಿಗೆ ಜ್ವರ ಬಂದರೂ ಚಿಕಿತ್ಸೆಗೆ ಅಮೇರಿಕೆಗೆ ಹೋಗಬಹುದು.
ಇಂಥಹ ದೇಶದ ಅತಿ ಹಳೆಯ ಪಕ್ಷವಾದ ಕಾಂಗ್ರೆಸ್ ಅಧ್ಯಕ್ಷರು ಹಾಗಿದ್ದರೆ ಈ ದೇಶದ ಆರೋಗ್ಯ ವ್ಯವಸ್ಥೆ ಯನ್ನು ನಂಬುವುದಿಲ್ಲ ಎಂದಾದರೆ ಅದಕ್ಕಿಂತ ದೊಡ್ಡ ದುರಂತ ಬೇರೆ ಇಲ್ಲ. ಯಾಕೆಂದರೆ ಈ ದೇಶದಲ್ಲಿ ಏನೇ ಆಗಿರಲಿ, ಅದು ಋಣಾತ್ಮಕವಾಗಿರಲಿ, ಧನಾತ್ಮಕವಾಗಿರಲಿ ಅದರ ಸಂಪೂರ್ಣ ಹೊಣೆ ಕಾಂಗ್ರೆಸ್ ಪಕ್ಷದ್ದೇ. ನೆಹರೂ ಕುಟುಂಬದ್ದೇ. ಯಾಕೆಂದರೆ ಈ ದೇಶವನ್ನು ಬಹುಕಾಲ ಅಳಿದ್ದು, ಆಳುತ್ತಿರುವುದು ಕಾಂಗ್ರೆಸ್ ಪಕ್ಷವೇ. ಇಂದೂ ಸಹ ಆ ಪಕ್ಷ ನೆಹರೂ ಕುಟುಂಬದ ಗುಲಾಮ. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದ ಆತ್ಮ ಮತ್ತು ಜೀವವೇ ನೆಹರೂ ಕುಟುಂಬ   ಈ ಕುಟುಂಬದ ಇಂದಿನ ಯಜಮಾನರಿಗೆ ಈ ದೇಶದ ಆರೋಗ್ಯ ವ್ಯವಸ್ಥೆಯ ಬಗ್ಗೆ ನಂಬಿ ಕೆ ಇಲ್ಲ. ಇಲ್ಲಿ ಚಿಕಿತ್ಸೆ ಪಡೆದುಕೊಂಡರೆ ಗುಣವಾಗುತ್ತದೆ ಎಂಬ ನಂಬಿಕೆ ಇಲ್ಲ !
ಇದು ಮನೆಯ ಯಜಮಾನನಿಗೆ ತನ್ನ ಕುಟುಂಬದ ಸಮಸ್ಯರ ಮೇಲೆ ನಂಬಿಕೆ ಇಲ್ಲದ ಸ್ಥಿತಿ.
ಭಾರತದ ವೈದ್ಯಕೀಯ ವ್ಯವಸ್ಥೆಯನ್ನು ಸಾರಾಸಗಟಾಗಿ ತೆಗೆದುಹಾಕುವಂತಿಲ್ಲ. ಇಲ್ಲಿ ಹಣವಿದ್ದ ರೆ ವಿಶ್ವದ ಅತ್ತುಮ ಚಿಕಿತ್ಸೆ ಇಲ್ಲಿ ದೊರೆಯುತ್ತದೆ.  ಹೀಗಾಗಿಯೇ ಇತ್ತೀಚಿನ ವರ್ಷಗಳಲ್ಲಿ ಏಷ್ಯಾದ ಮತ್ತು ಆಫ್ರಿಕಾದ ರೋಗಿಗಳು ಭಾರತದತ್ತ ಮುಖಮಾಡುತ್ತಿದ್ದಾರೆ. ಅವರಿಗೆ ಆಮೇರಿಕಾ ಮತ್ತು ಇಂಗ್ಲಂಡಿನಲ್ಲಿ ದೊರಕುವ ಚಿಕಿತ್ಸೆಯೇ ಇಲ್ಲಿ ಕಡಿಮೆ ವೆಚ್ಚದಲ್ಲಿ ದೊರಕುತ್ತಿದೆ. ಭಾರತೀಯರಿಗೆ ಇಲ್ಲಿನ ಹೈಟೆಕ್ ಆಸ್ಪತ್ರೆ ದುಬಾರಿಯನ್ನಿಸಿದರೂ ಅಮೇರಿಕ ಇರೋಪಿಗೆ ಹೋಲಿಸಿದರೆ ಇಲ್ಲಿನ ಚಿಕಿತ್ಸಾ ವೆಚ್ಚ ಕಡಿಮೆಯೇ.
ಇತ್ತೀಚೆಗೆ ಪಾಕಿಸ್ಥಾನದ ರೋಗಿಗಳೂ ಭಾರತಕ್ಕೆ ಬಂದು ನಾರಾಯಣ ಹೃದಯಾಲಯದಂತಹ ವಿಶ್ವ ದರ್ಜೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಉದಾಹರಣೆ ಇದೆ. ಅಂದರೆ ಭಾರತದ ವಿರೋಧವನ್ನು ತಮ್ಮ ಮನಸ್ಸಿನ ಭಾಗವಾಗಿ ಮಾಡಿಕೊಂಡುವರೇ ಹೆಚ್ಚಿರುವ ಪಾಕಿಸ್ಥಾನಿಗಳು ಈ ದೇಶದ ಆರೋಗ್ಯ ವ್ಯವಸ್ಥೆಯನ್ನು, ಇಲ್ಲಿನ ವೈದ್ಯರನ್ನು ನಂಬುತ್ತಾರೆ. ಆದರೆ ನಮ್ಮ ದೇಶದ ಸೋಸೆಗೆ ಆ ನಂಬಿಕೆ ಇಲ್ಲ.
ಸೋನಿಯಾ ಗಾಂಧಿ ಅವರ ಭಾರತ ಪ್ರೇಮವನ್ನು ನಾನು ಪ್ರಶ್ನಿಸುವುದಿಲ್ಲ. ಅವರು ಎಲ್ಲಿಂದಲೂ ಬಂದು ಈ ದೇಶವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ದೇಶವನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ. ಗಂಡ ರಾಜೀವ  ಗಾಂಧಿ ಹತ್ಯೆಯಾದರೂ ಎದೆಗುಂದದೇ ಪಕ್ಷದ ಜವಾಬ್ದಾರಿಯನ್ನು ಹೊತ್ತು ಆ ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ಹಾಗೆ ತನ್ನ ಮಗ ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂದು ಪಣತೊಟ್ಟಿದ್ದಾರೆ. ಬೆನ್ನೆಲುಬು ಇಲ್ಲದೇ ನೆಹರೂ ಕುಟುಂಬದ ಗುಲಾಮರೇ ಆಗಿರುವ ಕಾಂಗ್ರೆಸ್ ಹಿರಿಯ ನಾಯಕರೂ ರಾಹುಲ್ ಪಟ್ಟಾಭಿಷೇಕ್ಕೆ ಗರಿ ಗರಿಯಾದ ನೆಹರೂ ಶರ್ಟ್ ತೊಟ್ಟು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆಇಷ್ಟು ವರ್ಷಗಳ ನಂತರವೂ ಸೋನಿಯಾ ಈ ದೇಶದ ಆರೋಗ್ಯ ವ್ಯವಸ್ಥೆಯ್ನ್ನು ನಂಬುತ್ತಿಲ್ಲ. ಅವರ ರೋಗಕ್ಕೆ ವಿದೇಶಿ ಚಿಕಿತ್ಸೆಯೇ ಬೇಕು. ದೇಶದ ಎಲ್ಲ ರೀತಿಯ ಸಮಸ್ಯೆಗಳಿಗೂ ವಿದೇಶಿ ಮಾಧರಿಯೇ ಪರಿಹಾರ ಎಂಬ ನಂಬಿಕೆ
ಕಾಂಗ್ರೆಸ್ ಪಕ್ಷ ಸೋನಿಯಾ ಗಾಂಧಿ ಅವರಿಗೆ ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯುವಂತದ್ದು ಏನಾಗಿದೆ ಎಂಬುದನ್ನು ಹೇಳಬೇಕಿತ್ತು. ಹಾಗೇ ಬಹಿರಂಗವಾಗಿ ಹೇಳುವುದು ಆ ಪಕ್ಷದ ಕರ್ತವ್ಯವೂ ಆಗಿತ್ತು. ಆದರೆ ಅವರ ಆರೋಗ್ಯದ ಸಮಸ್ಯೆಯನ್ನು ಪಕ್ಷ ಗುಟ್ಟಾಗಿ ಇಟ್ಟಿದೆ. ಒಂದೊಮ್ಮೆ ವಿದೇಶದಲ್ಲಿ ಚಿಕಿತ್ಸೆ ಪಡೆಯದೇ ಬೇರೆ ದಾರಿಯೇ ಇಲ್ಲದಿದ್ದರೆ ಆಗ ಅದನ್ನು ಒಪ್ಪಿಕೊಳ್ಳಬಹುದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಲ್ಲವೂ ಗುಟ್ಟು.
ಸೋನಿಯಾ ಗಾಂಧಿ ಅವರೂ ಸಹ ತಮ್ಮ ಆರೋಗ್ಯಕ್ಕೆ ಈ ದೇಶದಲ್ಲೇ ಚಿಕಿತ್ಸೆ ಪಡೆಯಬಹುದಿತ್ತು. ಈ ದೇಶದ ಸಾಮಾನ್ಯ ನಾಗರಿಕನೊಬ್ಬನಿಗೆ ದೊರಕದ ಸೌಲಭ್ಯ ನನಗೂ ಬೇಡ ಎಂದು ಅವರು ಹೇಳಬಹುದಿತ್ತು. ಈ ದೇಶದ ಸೊಸೆಯಾಗಿ ಬಂದ ನಾನು ಇಲ್ಲಿಯೇ ಬದುಕುತ್ತೇನೆ, ಇಲ್ಲಿಯೇ ಸಾಯುತ್ತೇನೆ ಎಂದು ಹೇಳುವ ಮೂಲಕ ದೇಶದ ಜನರ ಹೃದಯವನ್ನು ಗೆಲ್ಲಬಹುದಿತ್ತು. ಪ್ರಧಾನಿ ಹುದ್ದೆಯಲ್ಲಿ ತಾವು ಕುಳಿತುಕೊಳ್ಳದೇ ಮನಮೋಹನ್ ಸಿಂಗ್ ಅವರನ್ನು ಕೂಡ್ರಿಸಿ ತ್ಯಾಗ ಜೀವಿಯಾದ ಅವರಿಗೆ ಇದೊಂದು ದೊಡ್ಡ ವಿಚಾರವಾಗಿರಲಿಲ್ಲ. ಆದರೆ ಸೋನಿಯಾ ಗಾಂಧಿ ಇಂತಹ ಅವಕಾಶವನ್ನು ಕಳೆದುಕೊಂಡರು.
ಈ ರೀತಿ ಹೇಳಲು ಎರಡರೂ ನೀತಿಯ ಮನಸ್ಥಿತಿ ಬೇಕಾಗುತ್ತದೆ. ಮೊದಲನೇಯದಾಗಿ ನಿಜವಾದ ದೇಶಪ್ರೇಮ ಮತ್ತು ಉತ್ತರದಾಯಿತ್ವ.  ನಾನು ಈ ದೇಶದ ಸಾಮಾನ್ಯ ನಾಗರಿಕಳು. ಕಾಂಗ್ರೆಸ್ ಅಧ್ಯಕ್ಶರಾಗಿದ್ದು ಕಾಕತಾಳೀಯ. ಈ ಹುದ್ದೆಗೆ ಬಂದ ಮೇಲೆ ಹುದ್ದೆಯ ಘನತೆ ಗಾಂಭೀರ್ಯವನ್ನು ಕಾಪಾಡುವುದು ನನ್ನ ಕರ್ತವ್ಯ. ಹೀಗಾಗಿ ದೇಶದ ಸಾಮಾನ್ಯ ನಾಗರಿಕರಿಗೆ ದೊರಕದಿರುವುದು ನನಗೆ ಬೇಡ ಎಂಬ ದೃಢ ನಿರ್ಧಾರದ ಮನಸ್ಸು. ಇಂತಹ ಮನಸ್ಸು ದೇಶ ಮತ್ತು ಸಾಮಾನ್ಯ ಜನರ ಮೇಲಿನ ಪ್ರೀತಿಯಿಂದ ಬರುತ್ತದೆ. ಗಾಂಧೀಜಿಯಂತವರಿಗೆ ಇಂತಹ ಮನಸ್ಸು ದೃಢ ನಿರ್ಧಾರ ಇತ್ತು. ಯಾಕೆಂದರೆ ಅವರ ದೇಶ ಪ್ರೇಮ ಸಾಮಾನ್ಯ ಜನರ ಮೇಲಿನ್ ಪ್ರೀತಿಯಿಂದಲೇ ಬಂದಿದ್ದು.
ಇಂಥಹ ಜನ ಪ್ರಧಾನಿಯಾಗಲೀ ಇನ್ಯಾವುದೇ ಹುದ್ದೆಗೆ ಹೋಗಲಿ ಅದು ತಮ್ಮ ಮತ್ತು ತಮ್ಮ ಕುಟುಂಬದ ಜನ್ಮ ಸಿದ್ಧ ಹಕ್ಕು ಎಂದು ಅಂದುಕೊಳ್ಳುವುದಿಲ್ಲ. ಅವರು ತಾವೊಬ್ಬ ಟ್ರಸ್ಟಿ ಎಂದು ಮಾತ್ರ ಅಂದುಕೊಳ್ಳುತ್ತಾರೆ.
ಸೋನಿಯಾ ಗಾಂಧಿ ಅವರ ಹೆಸರಿನ ಜೊತೆ ಗಾಂಧಿ ಎಂಬ ಸರ್ ನೇಮ್ ಇದ್ದರೂ ಅವರು ಮೋಹನ್ ದಾಸ್ ಕರಮ ಚಂದ್ ಗಾಂಧಿ ಅಲ್ಲ. ಅವರಿಗೆ ಇವರಿಗೆ ಹೋಲಿಕೆ ಮಾಡಲು ಸಾಧ್ಯವೂ ಇಲ್ಲ. ಜೊತೆಗೆ ಮಹಾತ್ಮಾ ಗಾಂಧಿ ಅವರು ಇದ್ದ ಕಾಲದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗೂ ಈಗಿನ ಸ್ಥಿತಿಗೂ ತುಂಬಾ ವ್ಯತ್ಯಾಸ ಇದೆ. ಈಗಿನ ಕಾಂಗ್ರೆಸ್ ಪಕ್ಶಕ್ಕೆ ಹಳೆಯ ಗಾಂಧಿ ಅಲ್ಲ, ಈಗಿನ ಡಿಫರೆಂಟ್ ಗಾಂಧಿಗಳೇ ಬೇಕು ಎಂಬುದು ಸತ್ಯ. ಇವರೆಲ್ಲ ಜಗತೀಕರಣದ ಇಂದಿನ ಸೃಷ್ಟಿಕರ್ತರಾದ ಗಾಂಧಿಗಳು. ಗ್ರಾಮ ಸ್ವರಾಜ್ಯ ಸ್ವದೇಶಿ ಚಳವಳಿಯ ಮಾತನಾಡಿದ ಗಾಂಧಿ ಅಲ್ಲ.
ಇಂಥಹ ನಿರ್ಧಾರ ಕೈಗೊಳ್ಳಲು ಬೇಕಾದ ಇನ್ನೊಂದು ರೀತಿಯ ಮನಸ್ಥಿತಿ ಎಂದರೆ ರಾಜಕೀಯ ಲಾಭವನ್ನೇ ಗಣನೆಗೆ ತೆಗೆದುಕೊಂಡೂ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವುದು. ಸೋನಿಯಾ ಗಾಂಧಿ ಅವರು ಎರಡನೇಯ ಮನಸ್ಥಿಯಂತೆ, ನಾನು ಇಲ್ಲಿಯೇ ಚಿಕಿತ್ಸೆ ಪಡೆಯುತ್ತೇನೆ ಎಂದು ಘೋಷಿಸಿದ್ದರೆ ದೇಶದ ಜನ ಅವರ ದೇಶ ಪ್ರೇಮಕ್ಕೆ  ಹೌದು ಹೌದು ಎಂದು ತಲೆ ತೂಗುತ್ತಿದ್ದರು. ಇದು ಅವರ ಮಗನನ್ನು ಪ್ರಧಾನಿಯನ್ನಾಗಿ ಮಾಡುವ ಯತ್ನಕ್ಕೆ ಸಹಾಯವನ್ನು ಒದಗಿಸುತ್ತಿತ್ತು. ಆದರೆ ಸೋನಿಯಾ ಹಾಗೆ ಮಾಡಲಿಲ್ಲ. ಅವರು ತಮ್ಮ  ರೋಗಕ್ಕೆ ವಿದೇಶಿ ಮದ್ದು ಪಡೆಯುವ ದೃಡ ನಿರ್ಧಾರ ಮಾಡಿದ್ದರು. ನಮ್ಮೆಲ್ಲರಂತೆ ಅವರಲ್ಲಿಯೂ ಇರಬಹುದಾದ ಬದುಕುವ ಆಸೆ ಮತ್ತು ಜೀವ ಭಯಕ್ಕೆ ವಿದೇಶದ ಪರಿಹಾರವನ್ನೇ ಆಯ್ಕೆ ಮಾಡಿಕೊಂಡರು. ಹೀಗಾಗಿ ಅವರು ಮಹಾನ್ ದೇಶಪ್ರೇಮಿಯೂ ಅಗಲಿಲ್ಲ, ಇತ್ತ ಚಾಣಾಕ್ಷ ರಾಜಕಾರಣಿಯೂ ಆಗಲಿಲ್ಲ. ತಮ್ಮ ಎದುರಿಗೆ ಇದ್ದ ಅದ್ಬುತ ಅವಕಾಶವನ್ನು ಅವರು ಕಳೆದುಕೊಂಡರು.
ಯಾರೇ ಆಗಲಿ ಒಂದು ದೇಶವನ್ನುಆರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಭಾರತ ಎಂದರೇನು ಎಂದು ಕೇಳಿದರೆ ಏನು ಹೇಳುತ್ತೀರಿ ? ರಾಜ್ಯಗಳ ಲೆಕ್ಕವನ್ನು ಹೇಳುತ್ತೀರಾ ? ಎಲ್ಲೆಲ್ಲಿ ಗಡಿ ಇದೆ ಎಂದು ಹೇಳಿತ್ತೀರಾ ? ಹಾಗೆ ಹೇಳಿದರೆ ದೇಶವನ್ನು ಹೇಳಿದಂತಾಯಿತೆ ? ದೇಶ ಎನ್ನುವುದು ಕೇವಲ ಬೌಗೋಲಿಕ ವಿವರಗಳಲ್ಲ. ಹಾಗೆ ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂದ ದೇಶವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಜೊತೆಗೆ ಒಂದು ದೇಶಕ್ಕೆ ಒಂದು ಮನಸ್ಸು ಎಂಬುದು ಇರುತ್ತದೆ. ಈ ಮನಸ್ಸು ಸಾವಿರಾರು ವರ್ಷಗಳ ಇತಿಹಾಸ, ಪರಂಪರೆ, ನಂಬಿಕೆ, ಧರ್ಮ ಆಚಾರ ಮೊದಲಾದ ಅಂಶಗಳ ಆಧಾರದ ಮೇಲೆ ರೂಪಗೊಂಡಿರುತ್ತದೆ. ಭಾರತೀಯ ಮನಸ್ಸು ಎಂದರೆ ಅಲ್ಲಿ ಶಂಕರಾಚಾರ್ಯ, ಮಧ್ವಾಚಾರ್ಯ ರಾಮಾನುಜಾಚಾರ್ಯ, ಮಹಾವೀರ ಗೌತಮ ಬುದ್ಧ, ಸೂಪಿ ಸಂತರು, ಬಸವಣ್ಣ ಕಬೀರ ಎಲ್ಲರೂ ಇದ್ದಾರೆ. ಇವರೆಲ್ಲ ದೇಹವನ್ನಲ್ಲ ನಮ್ಮ ಮನಸ್ಸುಗಳನ್ನು ರೂಪಿಸಿದ್ದಾರೆ. ಬುದ್ದಿಗಿಂತ ಹೃದಯವಂತಿಕೆ ಮತ್ತು ಹೃದಯದ ಮೂಲಕವೇ ವಿಚಾರ ಮಾಡುವ ಪರಂಪರೆಯೊಂದನ್ನು ಬೆಳೆಸಿದ್ದಾರೆ. ಭಾರತೀಯ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ಇದನ್ನೆಲ್ಲ ಅರ್ಥ ಮಾಡಿಕೊಳ್ಳುವುದೇ ಆಗಿದೆ.
ಆದರೆ ವಿದೇಶಿ ಮನಸ್ಸುಗಳು ಇಂತಹ ವಾತಾವರಣದಲ್ಲಿ ರೂಪಗೊಂಡಿಲ್ಲ. ಬಹುಮಟ್ಟಿಗೆ ಅದು ವೈಜ್ನಾನಿಕ ಮನಸ್ಥಿತಿ ಅವರದು. ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ

ತಂದು ನಿಲ್ಲಿಸುವುದು ವಿದೇಶಿ ಜಾಯಮಾನ. ಅಲ್ಲಿ ಹೃದಯಕ್ಕೆ ಯಾವ ಕೆಲಸವೂ ಇರುವುದಿಲ್ಲ.
ನಮ್ಮ ಇವತ್ತಿನ ರಾಜಕಾರಣಿಗಳ ಬಹುಮುಖ್ಯ ಸಮಸ್ಯೆ ಎಂದರೆ ಅವರಿಗೆ ಧರ್ಮ ಎನ್ನುವುದು ಕೇವಲ ಮತ ಪಡೆಯುವ ಒಂದು ಆಯುಧ ಮಾತ್ರ. ಕೆಲವರು ಹಿಂದೂ ಧರ್ಮದ ಶ್ರೇಷ್ಥತೆಯ ಬಗ್ಗೆ ಮಾತನಾಡುತ್ತ ಮತ ಪಡೆಯುವವರಾದರೆ, ಇನ್ನೂ ಕೆಲವರು ಜಾತ್ಯತೀತ ತತ್ವದ ಬಗ್ಗೆ ಮಾತನಾಡುತ್ತ ಮತ ಪಡೆಯುವವರು. ಇವರಿಗೆ ಧರ್ಮ ಮತ್ತು ಧಾರ್ಮಿಕತೆಯ ನಡುವಿನ ವ್ಯತ್ಯಾಸವಾಗಲೀ, ವಿಭಿನ್ನವಾದ ಆಧ್ಯಾತ್ಮಿಕತೆ ಅರಿವಾಗಲಿ ಇಲ್ಲ. ರಾಜಕಾರಣಕ್ಕೂ ಧರ್ಮಕ್ಕೂ ಸಂಬಂಧ ಇಲ್ಲದಿದ್ದರೂ ಧಾರ್ಮಿಕತೆ ಇಲ್ಲದ ರಾಜಕಾರಣಕ್ಕೆ ಅಸ್ಥಿತ್ವ ಇಲ್ಲ. ರಾಜಕಾರಣಕ್ಕೆ ಒಂದು ಧಾರ್ಮಿಕತೆ ಬೇಕು. ಅದು ಇಂದಿನ ಆಧುನಿಕ ಬದುಕಿಗೆ ಸಹ್ಯವಾಗುವ, ಆಧುನಿಕ ಮನಸ್ಸುಗಳೂ ಒಪ್ಪಿಕೊಳ್ಳುವ ನವ ಧಾರ್ಮಿಕತೆ. ಇಲ್ಲಿ ವೈಜ್ಜಾನಿಕ ಮನೋಭಾವನೆಯ ಜೊತೆ ಹೃದಯ ಮತ್ತು ಮನಸ್ಸುಗಳು ಒಂದಾಗುವ ಧಾರ್ಮಿಕತೆ. ಇಂತಹ ಧಾರ್ಮಿಕತೆ ದೇಶದ ಇತಿಹಾಸ ಮತ್ತು ಪರಂಪರೆಯನ್ನು ಬಿಟ್ಟು ರೂಪಗೊಳ್ಳುವುದು ಸಾಧ್ಯವಿಲ್ಲ.
ಭಾರತೀಯತೆ ಅಂದರೆ ಅದೇ. ಅಲ್ಲಿ ಕೇವಲ ಬುದ್ದಿಯಲ್ಲ. ಹೃದಯವೂ ಮಾತನಾಡುತ್ತದೆ. ಕೆಲವೊಮ್ಮೆ ಬುದ್ದಿಗಿಂತ ಮನಸ್ಸೇ ಮುಖ್ಯವಾಗುತ್ತದೆ.
ಇದನ್ನು ನಮ್ಮ ರಾಜಕೀಯ ಮತ್ತು ರಾಜಕೀಯ ನಾಯಕರು ಅರಿಯದಿದ್ದರೆ ನಮಗೆ ಉಳಿಗಾಲ ಇಲ್ಲ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...