Friday, September 20, 2013

ಇತಿಹಾಸ ಪುರಾಣವಾಗುವ ಬಗೆ; ಐತಿಹಾಸಿಕ ವ್ಯಕ್ತಿಗಳಿಗೆ ಅತಿಮಾನುಷ ಶಕ್ತಿ......

ಇತ್ತೀಚಿನ ದಿನಗಳಲ್ಲಿ ಇತಿಹಾಸ ನನಗೆ  ಹೆಚ್ಚು ಆಕರ್ಷಕ ಅನ್ನಿಸುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ಒಂದು ದೇಶವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದೇ ಇತಿಹಾಸ, ಆದರೆ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಹೇಗೆ ? ಒಂದು ದೇಶದ ಇತಿಹಾಸ ಅಂದರೆ ಅದು ಒಂದು ದೇಶದ ಜನ ಜೀವನವನ್ನು ಸಂಸ್ಕೃತಿಯನ್ನು ಬೌಗೋಲಿಕ ವ್ಯಾಪ್ತಿಯನ್ನು, ಹಾಗೂ ಅವರು ಹೇಗೆ ಯೋಚಿಸುತ್ತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಆಗಿದೆ, ಹೀಗಾಗಿ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದೇ ಬಹುದೊಡ್ದ ಸವಾಲಾಗಿದೆ.
ಭಾರತದಂತಹ ಬಹು ಸಂಸ್ಕೃತಿಯ ನಾಡಿನಲ್ಲಿ ನೈಜ ಮತ್ತು ವಸ್ತು ನಿಷ್ಠ ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಪೂರಕ ಸಾಮಗ್ರಿಗಳಿಲ್ಲ. ರಾಮಾಯಣ ಮತ್ತು ಮಹಾಭಾರತದಂತಹ ಮಹಾ ಕಾವ್ಯಗಳು ಒಂದು ಕಾಲ ಘಟ್ಟದ ರಾಜ ಮಹಾರಾಜರ ಕಥೆಗಳನ್ನು ಮಾತ್ರ  ಹೇಳುತ್ತವೆ. ಜೊತೆಗೆ ಮನುಷ್ಯ ಸಂಬಂಧಗಳು, ಅವರು ನಂಬಿದ್ದ ಜೀವನ ಮೌಲ್ಯಗಳ ಬಗ್ಗೆ ಮಾತನಾಡುತ್ತವೆ. ಆದರೆ ಇವು ಯಾವವೂ ಕೂಡ ವೈಚಾರಿಕ ಸಂಘರ್ಷಕ್ಕೆ ಎಡೆ ಮಾಡಿಕೊಡುವುದಿಲ್ಲ. ಜೊತೆಗೆ ಸತ್ಯ ಎಂದುಕೊಂಡಿದ್ದನ್ನು ಪ್ರಶ್ನಿಸುತ್ತ ಮುಖಾಮುಖಿಯಾಗುವುದಿಲ್ಲ.
ನಾವೆಲ್ಲ ಮಹಾಭಾರತ  ರಾಮಾಯಣದಂತಹ ಗ್ರಂಥಗಳನ್ನು ಓದಿ ಬೆಳೆದಿದ್ದೇವೆ. ಈ ಮಹಾ ಕಾವ್ಯಗಳು ನಮ್ಮಂತಹವರ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಮಹತ್ತರ ಪಾತ್ರವನ್ನು ಒಹಿಸಿವೆ. ಆದರೆ ರಾಮಾಯಣದಲ್ಲಿ ಅಥವಾ ಮಹಾ ಭಾರತದಲ್ಲಿ ಬರುವ ಪಾತ್ರಗಳು ನಮ್ಮ ಜೊತೆ ಯಾಕೆ ಮುಖಾಮುಖಿಯಾಗುವುದಿಲ್ಲ ? ನಮ್ಮಲ್ಲಿ ಹುಟ್ಟುವ ಪ್ರಶ್ನೆಗಳನ್ನು ಯಾಕೆ ಕೇಳಲು ಸಾಧ್ಯವಾಗುತ್ತಿಲ್ಲ ?
ಇದುಕ್ಕೆ ಬಹುಮುಖ್ಯವಾದ ಕಾರಣ ಈ ಮಹಾನ್ ಕಾವ್ಯಗಳಿಗೆ ಧರ್ಮದ ಲೇಪ ಇರುವುದೇ ಆಗಿದೆ. ರಾಮ ಮತ್ತು ಕೃಷ್ಣ ದೇವರಾಗಿದ್ದರಿಂದ ಅವರ ನಡವಳಿಕೆಯನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ನಮ್ಮ ಪರಂಪರೆ ನೀಡಿಲ್ಲ. ಹೀಗಾಗಿ ರಾಮ ಮರೆಯಲ್ಲಿ ನಿಂತು ವಾಲಿಯನ್ನು ವಧಿಸಿ ನಮ್ಮಂತೆ ಸಾಮಾನ್ಯ ಮನುಷ್ಯನಂತೆ ವರ್ತಿಸಿದರೂ ಅವನ ವರ್ತನೆಗೆ ದೈವತ್ವದ ಆರೋಪ ಮಾಡಿ ಕ್ಷಮಿಸಿ ಬಿಡುತ್ತೇವೆ. ರಾಮ ಎಂಬ ಒಬ್ಬ ರಾಜನ ಹೆಂಡತಿಯನ್ನು ರಾವಣ ಎಂಬ ಇನ್ನೊಬ್ಬ ರಾಜ ಹೊತ್ತೊಯ್ಸ ಘಟನೆಯನ್ನ್ಯು ಒಂದು ರಾಜ್ಯದ ಸಮಸ್ಯೆಯನ್ನಾಗಿ ಪರಿಗಣಿಸಿಬಿಡುತ್ತೇವೆ. ರಾಮ ದೇವರಾದ್ದರಿಂದ ಆತ ಮರೆಯಲ್ಲಿ ನಿಂತು ವಾಲಿಯನ್ನು ಕೊಂದಿದ್ದು ಸರಿ. ಆತ ಮನುಷ್ಯನಾಗಿದ್ದರೆ ಆತ ತಪ್ಪಿತಸ್ಥ. ದೈವತ್ವ
ಆದರೆ ರಾಮ ಇದ್ದ ಕಾಲದಲ್ಲಿ ಸಾಮಾನ್ಯ ಜನ ಹೇಗಿದ್ದರು ? ರಾಮ ಸೀತೆಯನ್ನು ಕಳೆದಕೊಂಡ ಘಟನೆಯನ್ನು ಸಾಮಾನ್ಯ್ ಪ್ರಜೆಯೊಬ್ಬ ಸ್ವೀಕರಿಸಿದ ಬಗೆ ಯಾವುದು ಎಂಬ ವಾಲ್ಮೀಕಿ ರಾಮಾಯಣದಲ್ಲಿ ಹೆಚ್ಚಿನ ವಿವರಗಳು ದೊರಕುವುದಿಲ್ಲ. ಹಾಗೆ ಅಂದಿನ ಸಮಾಜದ ಸಂರಚನೆ ಹೇಗಿತ್ತು ? ಈ ಬಗ್ಗೆ ಹೆಚ್ಚಿನ ವಿವರಗಳು ದೊರಕುವುದಿಲ್ಲ.
ಅಂದರೆ ನಾವು ಮಹಾ ಕಾವ್ಯ ಎಂದು ಪರಿಗಣಿಸಿದ ರಾಮಾಯಣ ಮತ್ತು ಮಹಾಭಾರತದಲ್ಲಿ ಸಾಮಾನ್ಯ ಜನರ ಬದುಕಿನ ಬಗ್ಗೆ ಏನೂ ಇಲ್ಲ. ಈ ಎರಡೂ ಮಹಾ ಕಾವ್ಯಗಳು ಸಾಮಾನ್ಯ ಜನರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗೂ ಅವರ ಆಲೋಚನೆಗೆ ವೇದಿಕೆಯಾಗಿಲ್ಲ.
ರಾಮಾಯಣಕ್ಕಿಂತ ಮಹಾ ಭಾರತ ಹೆಚ್ಚು ಪರಿಣಾಮಕಾರಿ. ರಾಮಾಯಣ ಅಂದಿನ ಕಾಲಕ್ಕೆ ಮಾತ್ರವಲ್ಲದೇ ಇಂದಿನ ಕಾಲಕ್ಕೂ ಸಲ್ಲುವ ಕೆಲವು ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸುವುದಕ್ಕೆ ಸೀಮಿತವಾಗಿದೆ. ಮಹಾಭಾರತ ಹಾಗಲ್ಲ, ಅದರ ಕ್ಯಾನವಾಸ್ ತುಂಬಾ ದೊಡ್ದದು. ಅದು ಯುದ್ಧದ ಬಗ್ಗೆಯೂ ಮಾತನಾಡುತ್ತದೆ, ಬದುಕಿನ ಬಗ್ಗೆಯೂ ಮಾತನಾಡುತ್ತದೆ. ಹಾಗೆ ರಾಮಾಯಣದ ರಾಮನಂತೆ, ಕೃಷ್ಣ ನೂರಕ್ಕೆ ನೂರರಷ್ಟು ಎಲ್ಲ ಕ್ರಿಯೆಗಳಿಂದಲೂ ದೈವತ್ವದ ಆರೋಪದಿಂದಾಗಿ ಬಚಾವಾಗುವ ದೈವ ನಾಯಕನಲ್ಲ. ಆತ ದೈವತ್ವವನ್ನು ಮೀರಿ ಮನುಷ್ಯನಂತೆ ಹಲವು ಬಾರಿ ವರ್ತಿಸಿ ಟೀಕೆಗೆ ಒಳಗಾಗುತ್ತಾನೆ. ಆತನ ಬಾಲ್ಯದ ಕಳ್ಳತನಕ್ಕೆ, ನಂತರದ ವ್ಯಾಮೋಹಕ್ಕೆ, ಸಾವಿರಾರು ಜನರನ್ನು ಸಾವಿನ ಕೂಪಕ್ಕೆ ತಳ್ಳುವ ಯುದ್ಧಕ್ಕೆ ಆತನ ದೈವತ್ವ ಸಂಪೂರ್ಣ ರಕ್ಶಣೆಯನ್ನು ನೀಡುವುದಿಲ್ಲ. ಹೀಗಾಗಿ ರಾಮನಿಗಿಂತ ಕೃಷ್ಣ ಹೆಚ್ಚು ಹತ್ತಿರದವನಾಗಿ ಕಾಣುತ್ತಾನೆ.
ಈ ಎರಡೂ ಮಹಾಕಾವ್ಯಗಳು ದೈವತ್ವವನ್ನು ಮೀರಿದ್ದರೆ ಅವುಗಳು ನಮ್ಮನ್ನು ಇನ್ನೂ ಹೆಚ್ಚು ವಿಸ್ತೃತವಾದ ಚಿಂತನೆಗಳಿಗೆ ಹಚ್ಚುತ್ತಿದ್ದವು. ಇದನ್ನು ಮೀರಿ ನೋಡುವುದಾದರೆ ರಾಮಾಯಣದ ರಾವಣ ರಾಮಾಯಣದಲ್ಲಿ ಪ್ರತಿಬಿಂಬಿತವಾಗಿದ್ದಕ್ಕಿಂತ ಭಿನ್ನವಾಗಿ ನಮಗೆ ಕಾಣುತ್ತಾನೆ. ಆತನ ಮನಸ್ಸಿನಲ್ಲಿ ತುಂಬಿದ ಪ್ರತಿಕಾರ ಆತನನ್ನು ಇನ್ನೊಬ್ಬರ ಹೆಂಡತಿಯನ್ನು ಎಳೆತರುವುದಕ್ಕೆ ಪ್ರೇರೇಪಿಸಿದ್ದನ್ನು ಬಿಟ್ಟರೆ ಆತ ಜನ ವಿರೋಧಿಯಾದ ಬಗ್ಗೆ ಬೇರೆ ಯಾವ ಸಮರ್ಥನೆಯೂ ದೊರುಕುವುದಿಲ್ಲ. ಜೊತೆಗೆ ರಾಮಾಯಣ ರಾಮ ಮತ್ತು ರಾವಣರ ನಡುವಿನ ವೈಯಕ್ತಿಕ ಧ್ವೇಷದ ಕಥೆಯೇ ಹೊರತೂ ಅದು ಜನ ಸಮುಧಾಯವನ್ನು ಒಳಗೊಂಡ ಕಥಾನಕವಾಗಿ ಬೆಳೆಯುವುದಿಲ್ಲ. ಮಹಾಭಾರತಕ್ಕಿಂತ ರಾಮಾಯಣ ಹಳೆಯದಾಗಿರುವುದು ಇದಕ್ಕೆ ಒಂದು ಕಾರಣವಾದರೆ ಇದನ್ನು ಬರೆದ ವಾಲ್ಮೀಕಿಯೇ ರಾಮನ ಭಕ್ತನಂತೆ ವರ್ತಿಸಿದ್ದು ಕಾರಣವಿರಬಹುದು. ಆತ ರಾಮಾಯಣವನ್ನು ನೋಡಿದ್ದು ರಾಮ ಕಥಾನಕವನ್ನಾಗಿ ಮಾತ್ರ. ಇದು ವಾಲ್ಮೀಕಿ ಮಿತಿ. . ಆತನ ಬದುಕಿನ ಅನುಭವ ವ್ಯಾಸನಿಗಿಂತ ವಿಸ್ತ್ರುತವಾಗಿದ್ದರೂ ಆತ ವಾಲ್ಮೀಕಿಯಾಗ ಬದಲಾಗುವಾಗಲೇ ರಾಮ ಭಕ್ತನಾಗಿಯೂ ಬದಲಾಗ. ಹೀಗಾಗಿ ಕವಿಯಾಗಿ ಎಂದು ಅನ್ನಿಸುತ್ತದೆ. ಹೀಗಾಗಿ ಈ ಮಹಾ ಕಾವ್ಯದಲ್ಲಿ ಆತನೂ ಒಂದು ಪಾತ್ರವಾಗಿ ಸೀತೆಯನ್ನು ತನ್ನ ಆಶ್ರಮದಲ್ಲಿ ಸಲುಹಿ, ಆಕೆಯ ಹೆರಿಗೆ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತಾನೆ. ಮತ್ತೆ ರಾಮ ಸೀತೆ ಒಂದಾಗುವಂತೆ ನೋಡಿಕೊಳ್ಳುತ್ತಾನೆ. ಆದರೆ ತಾನು ವರಿಸಿ ಮದುವೆಯಾದ ಸೀತೆಯನ್ನು ಕಾಡಿಗೆ ಆಟ್ಟಿದ್ದು ತಪ್ಪು ಎಂದು ರಾಮನಿಗೆ ಹೇಳದೇ ತನ್ನ ರಾಮ ಭಕ್ತಿಯನ್ನು ವಾಲ್ಮೀಕಿ ಪ್ರದರ್ಶಿಸುತ್ತಾನೆ. ಜೊತೆಗೆ ಇಡೀ ರಾಮಾಯಣದಲ್ಲಿ ರಾಮ ಅಗಸನೊಬ್ಬನ ಮಾತು ಕೇಳಿ ಹೆಂಡತಿಯನ್ನು ಕಾಡಿಗಟ್ಟಿದ ಎಂದು ಹೇಳುವ ಮೂಲಕ ಜನ ಸಾಮಾನ್ಯರ ಧ್ವನಿ ಪ್ರಕಟವಾಗುವ ಏಕ ಮೇವ ಘಟನೆಯೂ ಇದಾಗುತ್ತದೆ. ಇದನ್ನು ಬಿಟ್ಟರೆ ಇಡೀ ರಾಮಾಯಣದಲ್ಲಿ ಎಲ್ಲೂ ಜನಸಾಮಾನ್ಯರು ಪಾತ್ರವಾಗುವುದೇ ಇಲ್ಲ. ಉಳಿದಂತೆ ರಾಮ ಕಾಡಿಗೆ ಹೋಗುವಾಗ ಸಾಮೋಹೊಕವಾಗಿ ಅಳುವ ಪ್ರಜೆಗಳು ರಾಮ ತಿರುಗಿ ಬಂದಾಗ ಸಂತೋಷದಿಂದ ನಲಿಯುವುದಕ್ಕೆ ಮಾತ್ರ ಸೀಮಿತವಾಗುತ್ತಾರೆ.\
ನಾನು ಈ ಮಾತುಗಳನ್ನು ಹೇಳುವಾಗ ಒಂದು ವಿಷಯವನ್ನು ಸ್ಪಷ್ತಪಡಿಸಲೇ ಬೇಕು. ಅದು ರಾಮಾಯಣ ಮತ್ತು ಮಹಾಭಾರತವನ್ನು ನೋಡುವ ಬಗೆ. ಅದನ್ನು ಅರ್ಥ ಮಾಡಿಕೊಳ್ಳುವ ರೀತಿ. ಇದೊಂದು ಹಿಂದೂಗಳ ಪವಿತ್ರ ಗ್ರಂಥ ಎಂದುಕೊಂಡು ಪ್ರಾರಂಭಿಸಿದರೆ ಆಗ ಅರ್ಥಮಾಡಿಕೊಳ್ಳುವ ಉಳಿದೆಲ್ಲ ಬಾಗಿಲುಗಳು ಮುಚ್ಚುತ್ತವೆ. ಇದೊಂದು ಮಹಾ  ಕಾವ್ಯ ಎಂದು ಕೊಂಡರೆ ಆಗ ವಿಮರ್ಷೆಯ ಎಲ್ಲ ಮಾನದಂಡಗಳನ್ನು ಅನುಸರಿಸಿ ಈ ಗ್ರಂಥವನ್ನು ನೋಡಬೇಕಾಗುತ್ತದೆ. ಆದರೆ ಬಹುತೇಕ ಭಾರತೀಯರು ಇದನ್ನು ಪುರಾಣ ಎಂದು ಸ್ವೀಕರಿಸಿ ರಾಮನನ್ನು ದೇವರು ಎಂದು ಸ್ವೀಕರಿಸಿಯಾಗಿದೆ. ಹೀಗಾಗಿ ರಾಮಯಣವನ್ನು ವಿಭಿನ್ನ ದೃಷ್ಟಿಯಲ್ಲಿ

ನೋಡಲು ಅವರು ಒಪ್ಪುವುದಿಲ್ಲ.
ನಾನು ಇಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಇತಿಹಾಸ ಎಂದು ಸ್ವೀಕರಿಸಿ ಮಾತನಾಡುತ್ತಿದ್ದ್ಡೇನೆ. ಹೀಗಾಗಿ ಒಂದು ಇತಿಹಾಸವನ್ನು ಹೇಗೆ ನೋಡಬೇಕೋ ಹಾಗೆ ನೋಡಲು ಯತ್ನ ನಡೆಸಿದ್ದೇನೆ. ರಾಮ ಮತ್ತು ರಾವಣ ಇಲ್ಲಿದ್ದರು ಮತ್ತು ಅವರ ನಡುವೆ ಯುದ್ಧ ನಡೆದಿತ್ತು ಎಂಬುದನ್ನು ಒಪ್ಪಿಕೊಂಡು ಮಾತನಾಡುವುದಾದರೆ ಮಹಾಕಾವ್ಯದಲ್ಲಿ ಇರುವ ಭಕ್ತಿ ನಂಬಿಕೆ ಮತ್ತು ಭಕ್ತನೊಬ್ಬ ತನ್ನ ದೇವರ ಬಗ್ಗೆ ಬರೆದುದೆಲ್ಲ ಇತಿಹಾಸವಾಗುವುದಿಲ್ಲ. ಅದು ಕಾವ್ಯವನ್ನು ಬರೆದವನ ಅಭಿಪ್ರಾಯ ನಂಬಿಕೆ ಕೂದ ಎಂಬ ಎಚ್ಚರಿಕೆ ನಮಗೆಲ್ಲ ಇರಬೇಕು. ಆಗ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯ.
ಮಹಾಭಾರತ ರಾಮಾಯಣಕ್ಕಿಂತ ಹೆಚ್ದಿ ಇತಿಹಾಸಕ್ಕೆ ಹತ್ತಿರವಾಗಿದೆ ಎಂದು ನನಗೆ ಅನ್ನಿಸಿದೆ. ಅದು ಇತಿಹಾಸದ ಮೇಲೆ ಕಟ್ಟಿದ ಮಹಾ ಕಾವ್ಯ. ಹಾಗಂತ ಮಹಾಭಾರತದಲ್ಲಿ ಬಂದಿದ್ದೆಲ್ಲ ನೂರಕ್ಕೆ ನೂರರಷ್ಟು ಸತ್ಯ ಎಂದು ನಾವು ಅಂದುಕೊಳ್ಳಬೇಕಾಗಿಲ್ಲ. ಈಗ ಈ ಮೊದಲು ಪ್ರಸ್ತಾಪಿಸಿದ ಇತಿಹಾಸದ ವಿಚಾರಕ್ಕೆ ನಾನು ಬರುತ್ತೇನೆ. ಭಾರತೀಯ ಇತಿಹಾಸ ಹೀಗೆ ಇತ್ತು ಹೇಳುವ ಸ್ಪಷ್ಟ ಮತ್ತು ನಿಖರ ಮಾಹಿತಿಗಳು ಈಗಲೂ ಲಭ್ಯವಿಲ್ಲ. ಈ ಬಗ್ಗೆ ಸತತ ಸಂಶೋಧನೆ ಕೂಡ ನಡೆದಿಲ್ಲ. ಗುಪ್ತರ ಕಾಲದಿಂದ ಮೈಸೂರು ಸಂಸ್ಥಾನದ ವರೆಗೆ ಇತಿಹಾಸ ಏಕ ಮುಖವಾಗಿದೆ. ನಮ್ಮ ಇತಿಹಾಸಕಾರಲ್ಲಿ    ಎರಡು ಬಗೆಯ ಜನರಿದ್ದಾರೆ. ಕೆಲವರು ನಮ್ಮ ಇತಿಹಾಸವನ್ನು ವೈಭವೀಕರಿಸಿ ಹೇಳುವಂಥವರು. ಇನ್ನೊಂದು ಬಗೆಯ ಇತಿಹಾಸಕಾರರು ಎಡ ಪಂಥೀಯ ಮತ್ತು ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾದ ಭಾರತೀಯ ಇತಿಹಾಸಕಾರರು.
   ಇವರಲ್ಲಿ ರೋಮಿಲಾ ಥಾಪರ್ ಅಂಥವರು ಪ್ರಮುಖರು.   ಇವರು ಎಂಥವರೆಂದರೆ ಅವರಿಗೆ ಶಂಕರಾಚಾರ್ಯ, ಮಧ್ವಚಾರ್ಯರಂಥವರ ವಿಚಾರಧಾರೆಯ ಮೇಲು ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಯ ಪ್ರಭಾವ ಕಾಣುತ್ತದೆ. ಭಾರತಕ್ಕೆ ಈ ಎರಡು ಧರ್ಮಗಳು ಬಂದಿದ್ದು ಯಾವಾಗ, ಹಿಂದೂ ಧರ್ಮ ಯಾವಾಗಿನಿಂದ ಇದೆ ಎಂಬ ಸಾಮಾನ್ಯ ಜ್ನಾನವೂ ಇಲ್ಲದಂತೆ ಈ ಇತಿಹಾಸಕಾರರು ವರ್ತಿಸುತ್ತಿದ್ದಾರೆ. ಇವರಿಗೆ ಇತಿಹಾಸವನ್ನು ಇತಿಹಾಸವನ್ನಾಗಿ ನೋಡುವುದು ಬೇಕಾಗಿಲ್ಲ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಸಂಪೂರ್ಣ ನಿರಾಕರಣೆಯೇ ಇವರ ಮೂಲ ಉದ್ದೇಶ.
ಇನ್ನು ಭಾರತದಲ್ಲಿ ಇರುವುದೆಲ್ಲ ಅದ್ಭುತವಾದುದು ಎಂದು ಹೊರಡುವ ಬಲ ಪಂಥೀಯ ಇತಿಹಾಸಕಾರರು. ಇವರಿಗೂ ಈ ದೇಶದ ಸಾಮಾಜಿಕ ಸಂರಚನೆ ಇಲ್ಲಿರುವ ವೈರುಧ್ಯಗಳು ಮುಖ್ಯವಲ್ಲ. ಇವೂ ಸಹ ಎಲ್ಲವನ್ನೂ ವೈಭವಿಕರಿಸುವ ಮೂರ್ತಿ ಪೂಜಕರು. ಇತಿಹಾಸ ಯಾವುದೇ ಪಂಥದ ಮೇಲೆ ನಿಂತಿರುವುದಲ್ಲ. ಅದು ಕಳೆದುಹೋದ ಸತ್ಯವನ್ನು ಅನಾವರಣಗೊಳಿಸುವ ಕಾಯಕ. ಇಲ್ಲಿ ಬಣ್ಣದ ಕನ್ನಡಕವನ್ನು ಹಾಕಿಕೊಂಡು ನೋಡುವುದು ಸರಿಯಲ್ಲ.
ಇತ್ತೀಚಿನ ಕೆಲವು ಸಂಶೋಧನೆಗಳು ನಮ್ಮ ಇತಿಹಾಸಕಾರರ ಹಳೆಯ ನಂಬಿಕೆಗಳು ಸುಳ್ಲು ಎಂದು ಸಾಬೀತುಪಡಿಸಿವೆ. ಭಾರತದಲ್ಲಿ ಸರಸ್ವತಿ ನದಿ ಇತ್ತು ಎಂಬುದು ಸಾಟ್ ಲೈಟ್ ತಂತ್ರಜ್ನಾನ ಸಾಬೀತುಪಡಿಸಿದೆ. ಎಂದೋ ಬತ್ತಿ ಹೋದ ಈ ನದಿಯ ದಂಡೆಯ ಮೇಲೆ ನೂರಕ್ಕು ಹೆಚ್ಚು ನಾಗರೀಕತೆಗಳು ಇದ್ದವು. ಈ ನಾಗರೀಕತೆಗಳು ಹರಪ್ಪಾ ಮತ್ತು ಮಹಂಜೋದಾರ್ ನಾಗರೀಕತೆಗಿಂತ ಹಿಂದಿನವು. ಹೀಗಾಗಿ ಹರಪ್ಪ ಮತ್ತು ಮಹಂಜೋದಾರ್ ನಾಗರಿಕತೆಯೇ ಅತಿ ಪುರಾತನವಾದ ನಾಗರಿಕತೆ ಎಂಬ ಇತಿಹಾಸಕಾರರ ಪ್ರತಿಪಾದನೆಯನ್ನು  ಅಲ್ಲಗಳೆದಂತಾಗಿದೆ. ಹಾಗೆ ಆರ್ಯರು ಹೊರಗಿನಿಂದ ಭಾರತಕ್ಕೆ ಬಂದವರು ಎಂಬ ವಾದವೂ ಈ ಹೊಸ ಸಂಶೋಧನೆ ಸುಳ್ಳಾಗಿಸಿದೆ. ಯಾಕೆಂದರೆ ಸರಸ್ವನಿ ನದಿಯ ಮೇಲಿನ ನಾಗರೀಕತೆ ಸುಮಾರು ಕ್ರಿಸ್ತಪೂರ್ವ ೧೦,೦೦೦ ವರ್ಷಗಳಷ್ಟು ಹಿಂದಿನವು ಎಂಬುದನ್ನು ಸ್ಪಷ್ಟಪಡಿಸಿದೆ. ಹಾಗೆ ಡಾ. ಎಸ್ ಆರ್ ರಾವ ನೇತೃತ್ವದಲ್ಲಿ ಧ್ವಾರಕೆಯನ್ನು ಸಮುದ್ರದಾಳದಲ್ಲಿ ಪತ್ತೆ ಮಾಡಿದ್ದು ಮತ್ತೊಂದು ಐತಿಹಾಸಿಕ ಸಾಧನೆ. ಈ ಧ್ವಾರಕೆ ಎಂಬ ನಗರ ಕ್ರಿಸ್ತಪೂರ್ವ ೧೨,೦೦೦ ದಿಂದ ೩೦ ಸಾವಿರ ವರ್ಷಗಳ ಹಿಂದೆ ಎಂಬುದು ಸ್ಪಷ್ಟವಾಗಿದೆ. ಇದು ಭಾರತೀಯ ಇತಿಹಾಸವನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ದದ್ದು ಮಾತ್ರವಲ್ಲ,  ಭಾರತೀಯ ಇತಿಹಾಸದಲ್ಲಿ ಇರುವ ಮಿಥ್ಯೆಯನ್ನು ಬಯಲು ಮಾಡಿದೆ.
ಧ್ವಾರಕೆಯನ್ನು ಪತ್ತೆ ಮಾಡಿದ್ದು ಮಹಾ ಭಾರತ ಕೇವಲ ಕಾವ್ಯವಲ್ಲ ಅದು ಇತಿಹಾಸ ಎಂಬುದನ್ನು ಸಾಭೀತುಪಡಿಸುವುದರ ಜೊತೆಗೆ ಕೃಷ್ಣ ಐತಿಹಾಸಿಕ ವ್ಯಕ್ತಿ ಎಂಬ ಪುಳಕ ನಮಗೆ ಉಂಟಾಗುವಂತೆ ಮಾಡಿದೆ. ಈ ಪುಳಕವನ್ನು ಅನುಭವಿಸುವಾಗಲೇ ಈಗ ನಮ್ಮ ನಡುವೆ ಹಿಮಾಲಯದಂತೆ ಬೆಳೆದ ಕೃಷ್ಣನಿಗೂ ಐತಿಹಾಸಿಕ ಕೃಷ್ಣನಿಗೂ ವ್ಯತ್ಯಾಸ ಇದ್ದಿರಬಹುದು ಎಂಬ ಎಚ್ಚರ ಕೂಡ ನಮಗೆ ಇರಲೇಬೇಕು. ಯಾಕೆಂದರೆ ವ್ಯಕ್ತಿಯೊಬ್ಬ ಕಾಲ  ಕ್ರ‍ಮದಲ್ಲಿ ಸಂಪೂರ್ಣ ದೇವರಾಗಿ ಬೆಳೆದರೆ ಅವನ ಐತಿಹಾಸಿಕ ವ್ಯಕ್ತಿತ್ವ ಸಂಪೂರ್ಣವಾಗಿ ಬದಲಾಗಿರುತ್ತದೆ. ಇತಿಹಾಸ ಎನ್ನುವುದು ವಾಸ್ತವವಾದರೆ ಇತಿಹಾಸ ಪುರಾಣವಾದರೆ ಅದು ಮಾನವಾತೀತವಾದ ಗುಣಧರ್ಮವನ್ನು ಅಳವಡಿಸಿಕೊಂಡು ಬಿಡುತ್ತದೆ. ಹಾಗೆ ಪುರಾಣವಾಗಿ ಬದಲಾದ ಇತಿಹಾಸದಲ್ಲಿ ಬರುವ ವ್ಯಕ್ತಿಗಳು ಅತಿ ಮಾನುಷವಾದ ಶಕ್ತಿಯನ್ನು ಪಡೆದುಕೊಂಡೂ ಬಿಡುತ್ತಾರೆ. ಒಮ್ಮೆ ಹೀಗೆ ಬದಲಾದ ವೈಕ್ತಿಗಳು ಐತಿಹಾಸಿಕ ವ್ಯಕ್ತಿಗಳಾದರೂ ಅವರಿಗೆ ದೈವತ್ವದಿಂದಾಗಿ ದೊರಕಿದ ಅತಿಮಾನುಷ ಶಕ್ತಿ ಅವರನ್ನು ಕಾಲಾತೀತರನಾಗಿ ಮಾಡುಬಿಡುತ್ತದೆ. ಇನ್ನೊಂದು ಮಹತ್ವದ ವಿಷಯವನ್ನು ನಾವು ಮರೆಯುವಂತಿಲ್ಲ. ಇತಿಹಾಸ ಎಲ್ಲ ಕಾಲದಲ್ಲಿ ಸಂತೋಷವನ್ನು ನೀಡುತ್ತದೆ ಎಂದು ಹೇಳಲಾಗುವುದಿಲ್ಲ. ಐತಿಹಾಸಿಕ ವ್ಯಕ್ತಿಗಳು ನಮಗೆ ಇಷ್ಟವಾಗದೇ ಇರಬಹುದು. ಆದರೆ ಅತಿಮಾನುಷ ಶಕ್ತಿಯನ್ನು ಪಡದು ದೈವತ್ವಕ್ಕೆ ಏರಿದ ಐತಿಹಾಸಿಕ ಪಾತ್ರಗಳು ನಮ್ಮ ವಿಶ್ಲೇಷಣೆಯ ಪರಿದಿಯಿಂದ ಹೊರಕ್ಕೆ ಹೋಗಿಬಿಡುತ್ತಾರೆ. ಆದ್ದರಿಂದಲೇ ಪುರಾಣ ನೀಡುವ ಸಂತೋಷವನ್ನು ಇತಿಹಾಸ ನೀಡುವುದಿಲ್ಲ.
ರಾಮಕೃಷ್ಣರು ಹೀಗೆ ಐತಿಹಾಸಿಕ ಪಾತ್ರವಾಗಿದ್ದವರು ಪುರಾಣದ ಪಾತ್ರವಾದವರು. ನಮ್ಮ ವಿಮರ್ಷೆಯ ಪರಿದಿಯಿಂದ ಆಚೆ ಹೋದವರು. ಆದ್ದರಿಂದ ಅವರನ್ನು ಐತಿಹಾಸಿಕ ವ್ಯಕ್ತಿಗಳಾಗಿ ವಿಮರ್ಷಿಸಲು ಪ್ರಾರಂಭಿಸಿದರೆ ಪುರಾಣದ ರಾಮ ಕೃಷ್ಣರು ಎದುರಾಗಿ ಸಮಸ್ಯೆ ಪ್ರಾರಂಭವಾಗುತ್ತದೆ. ಹಾಗೆ ಮಹಾಭಾರತ ಮತ್ತು ರಾಮಾಯಣವನ್ನು ಕಾವ್ಯವನ್ನಾಗಿ ನೋಡಬೇಕೆ ಅಥವಾ ಪುರಾಣವಾಗಿ ನೋಡಬೇಕೇ ಎಂಬುದು. ಪುರಾಣದಲ್ಲಿ ಸಿಗುವ ಪಾತ್ರಗಳೇ ಬೇರೆ, ಪುರಾಣಕ್ಕೆ ಮೂಲವಾದ ಇತಿಹಾಸದ ಪಾತ್ರಗಳೇ ಬೇರೆ. ಇದನ್ನು ಸ್ಪಷ್ಜವಾಗಿ ಅರ್ಥಮಾಡಿಕೊಂಡರೆ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.No comments: