Saturday, September 21, 2013

ಪತ್ರಿಕೆ ಓದುವಾಗಲೆಲ್ಲ ನನ್ನಪ್ಪ ಎದುರಿಗೆ ಬಂದು ನಿಲ್ಲುತ್ತಾನೆ......!

ನಾನು ಪತ್ರಿಕೆಗಳನ್ನು ಓದಲು ಪ್ರಾರಂಭಿಸಿದ್ದು ಯಾವಾಗ ಎಂದು ಯೋಚಿಸಿದರೆ ತಕ್ಷಣ ಉತ್ತರ ಹೊಳೆಯುವುದಿಲ್ಲ. ನಾನು ಶಾಲೆಗೆ ಹೋಗಲು ಪ್ರಾರಂಭಿಸಿದಾಗಲೇ ನಮ್ಮ ಮನೆಗೆ ಪ್ರಜಾವಾಣಿ, ದಿ ಹಿಂದೂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳು ಬರುತ್ತಿದ್ದವು.ಅಪ್ಪ ದೊಡ್ಡ ಧ್ವನಿಯನ್ನು ಪತ್ರಿಕೆಗಳ ಪಠಣ ಮಾಡುತ್ತಿದ್ದ.
ನನ್ನ ಅಪ್ಪ ಪತ್ರಿಕೆಗಳನ್ನು ದೊಡ್ದ ಧ್ವನಿಯಲ್ಲಿ ಓದುತ್ತಿದ್ದ ದೃಶ್ಯ ನನ್ನ ಕಣ್ಣ ಮುಂದೆ ಈಗಲೂ ಬರುತ್ತದೆ. ಅಪ್ಪ ಹೀಗೆ ಪತ್ರಿಕೆಯನ್ನು ದೊಡ್ದ ಧ್ವನಿಯಲ್ಲಿ ಓದುವುದು ನನ್ನ ಅಜ್ಜನಿಗೆ ಇಷ್ಟವಾಗುತ್ತಿರಲಿಲ್ಲ.
ಮಾಣಿ ಮನಸಿನಲ್ಲೇ ಪತ್ರಿಕೆ ಓದು ಎಂದು ಅಜ್ಜ ಅಪ್ಪನಿಗೆ ಬೈಯುತ್ತಿದ್ದ. ಆದರೆ ಅಪ್ಪ ದೊಡ್ಡದಾಗಿ ಪತ್ರಿಕೆ ಓದುವುದನ್ನು ನಿಲ್ಲಿಸುತ್ತಿರಲಿಲ್ಲ. ಅವನ ಪ್ರಕಾರ ಇಂಡಿಯಾ ಎಂಬ ಈ ದೇಶದಲ್ಲಿ ಇಂಗ್ಲೀಷ್ ಸರಿಯಾಗಿ ಬರೆಯುವ ಏಕಮೇವ ಇಂಗ್ಲೀಷ್ ಪತ್ರಿಕೆ ಎಂದರೆ ಅದು ದಿ.ಹಿಂದೂ ಮಾತ್ರ. ಉಳಿದ ಆಂಗ್ಲ ದಿನ ಪತ್ರಿಕೆಗಳಿಗೆ ಇಂಗ್ಲೀಷ್ ಬರುವುದಿಲ್ಲ ಎಂದು ಅವನ ನಂಬಿಕೆಯಾಗಿತ್ತು. ನಾಟಕಗಳ ವಿಚಿತ್ರ   ಬಗ್ಗೆ ಸೆಳೆತವಿದ್ದ ಅಪ್ಪ ಶೇಕ್ಸಫಿಯರ್ ನ ಎಲ್ಲ ನಾಟಕಗಳನ್ನು ಮನೆಯಲ್ಲಿ ತಂದಿಟ್ಟಿದ್ದ. ಆದರೆ ಪತ್ರಿಕೆಗಳನ್ನು ದೊಡ್ಡ ಧ್ವನಿಯಲ್ಲಿ ಓದುತ್ತಿದ್ದ ಅಪ್ಪ ಕಾವ್ಯ, ನಾಟಕ ಮತ್ತು ಕಾದಂಬರಿಗಳನ್ನು ಮಾತ್ರ ದೊಡ್ಡ ಧ್ವನಿಯಲ್ಲಿ ಓದುತ್ತಿರಲಿಲ್ಲ.
ಹಿಂದೂ ಪತ್ರಿಕೆಯನ್ನು ಇಡಿ ಜಗತ್ತಿಗೆ ಕೇಳುವಂತೆ ಓದುತ್ತಿದ್ದ ಅಪ್ಪ ನಾನೂ ಆ ಪತ್ರಿಕೆಯನ್ನು ಓದಬೇಕು ಎಂದು ಕಡ್ಡಾಯ ಮಾಡಿ ಬಿಟ್ಟಿದ್ದ. ಆದರೆ ಆ ಪತ್ರಿಕೆಯಲ್ಲಿ ಬರುತ್ತಿದ್ದ ಯಾವುದೇ ವರದಿ ಅಥವಾ ಲೇಖನದ ತಲೆ ಬುಡ ನನಗೆ ಅರ್ಥವಾಗುತ್ತಿರಲಿಲ್ಲ ಆದರೆ ಅಪ್ಪನ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಅದನ್ನು ಓದಲೇ ಬೇಕಾದ ದುರಂತ ಸ್ಥಿತಿ ನನ್ನದಾಗಿತ್ತು. ನನ್ನ ಅಪ್ಪನಿಗೆ ಕನ್ನಡದ ಮೇಲೂ ಪಾಂಡಿತ್ಯವಿತ್ತು. ಹಳೆಗನ್ನಡ ಸಾಹಿತ್ಯವನ್ನು ತನ್ನ ನಾಲಿಗೆಯ ಮೇಲೆ ಇಟ್ಟುಕೊಂಡಿದ್ದ ಆತ ರನ್ನ, ಪಂಪ ಹರಿಹರ, ರಾಘವಾಂಕ, ಜನ್ನ ಪೆÇನ್ನ ಎಲ್ಲರ ಕರೆತಂದು ನಮ್ಮ ಎದುರು ನಿಲ್ಲಿಸಿ ಬಿಡುತ್ತಿದ್ದ. ಹರಿಹರನ ರಗಳೆಯನ್ನು, ದೊಡ್ದ ಧ್ವನಿಯಲ್ಲಿ ಓದುತ್ತಿದ್ದ ಅವನಿಗೆ ರಾಘವಾಂಕನೆಂದರೆ ಅಪಾರ ಪ್ರೀತಿ.  ಕರ್ನಾಟಕ ಭಾರತ ಕಥಾ ಮಂಜರಿಯನ್ನು ತನ್ನ ಬಾಯಲ್ಲೇ ಇಟ್ಟುಕೊಂಡಿದ್ದ ಅವನಿಗೆ ಜೈಮಿನಿ ಭಾರತವನ್ನು ದೊಡ್ದ ದಾಗಿ ಓದುವುದೆಂದರೆ ಖುಷಿ.
ನಾನು ಹೈಸ್ಕೂಲಿಗೆ ಬರುವ ಹೊತ್ತಿಗೆ ಪತ್ರಿಕೆ ಮತ್ತು ಸಾಹಿತ್ಯದ ರುಚಿ ನನಗೆ ಹತ್ತತೊಡಗಿತ್ತು. ಅಪ್ಪ ಮನೆಗೆ ತರುತ್ತಿದ್ದ, ಸುಧಾ, ಕಸ್ತೂರಿ, ಕರ್ಮವೀರ, ಮೊದಲಾದ ನಿಯತಕಾಲಿಕೆಗಳು ನನ್ನನ್ನು ಓದಿನೆಡೆಗೆ ಎಳೆದೊಯ್ದು ಬಿಟ್ಟಿದ್ದವು. ಎಲ್ಲ ಪತ್ರಿಕೆಗಳು ನಮ್ಮ ಮನೆಗೆ ಬರುತ್ತಿದ್ದುದು ರಾತ್ರಿ. ಬೆಳಿಗ್ಗೆ ತಾಲೂಕು ಕೇಂದ್ರವಾದ ಸಿದ್ದಾಪುರಕ್ಕೆ ಹೋಗುತ್ತಿದ್ದ ಅಪ್ಪ, ರಾತ್ರಿ ಮನೆಗೆ ಬರುವಾಗ ಚೀಲದ ತುಂಬಾ ಪತ್ರಿಕೆಗಳನ್ನು ಹೊತ್ತು ತರುತ್ತಿದ್ದ. ಆದರೆ ಅವನ   ಕೈಚೀಲದಲ್ಲಿ      ಇರುತ್ತಿದ್ದ ಪತ್ರಿಕೆಗಳು, ನಿಯತಕಾಲಿಕೆಗಳು ನಮಗೆ ಸಿಗಬೇಕು ಎಂದರೆ ಅದನ್ನೆಲ್ಲ ಅಪ್ಪ ಓದಿ ಮುಗಿಸಬೇಕಾಗಿತ್ತು. ತಾನು ಓದು ಮುಗಿಸುವವರೆಗೆ ಯಾವ ಪತ್ರಿಕೆಯನ್ನು ನಿಯತಕಾಲಿಕೆಯನ್ನು ಆತ ನಮಗೆ ಮುಟ್ಟಲು ಕೊಡುತ್ತಿರಲಿಲ್ಲ.  ಅಪ್ಪ ಪತ್ರಿಕೆಗಳನ್ನು ಓದಿ ಮುಗಿಸಿದ ಮೇಲೆ ನಾನು ಓದಲು ಪ್ರಾರಂಭಿಸುತ್ತಿದ್ದೆ.
ಅಪ್ಪನ ಬಳಿ ದೊಡ್ದದಾದ ಪುಸ್ತಕ ಭಂಡಾರವೇ ಇತ್ತು. ಹೀಗಾಗಿ ಆತ ನಮ್ಮ ಮನೆಗೆ ಶಾರದಾ ನಿಲಯ ಎಂದು ಹೆಸರಿಟ್ಟಿದ್ದ, ಕುವೆಂಪು, ಶಿವರಾಮ ಕಾರಂತ, ಚಿತ್ತಾಲ, ಬೆಂದ್ರೆ, ಕಣವಿ    ಮೊದಲಾದವರ ಗ್ರಂಥಗಳು ಬಿಡುಗಡೆಯಾದ ತಕ್ಷಣ ಶಾರದಾ ನಿಲಯವನ್ನು ಸೇರುತ್ತಿದ್ದವು. ಹೀಗೆ ಬಂದ ಹೊಸ ಪುಸ್ತಕಗಳನ್ನು ಅಪ್ಪ ಓದಿ ಮುಗಿಸಿದ ಮೇಲೆ ನಾನು ಓದಬೇಕಾಗಿತ್ತು.  ಅಪ್ಪ ನನಗೆ ಮೊದಲು    ಓದಲು ಕೊಟ್ಟ ಕಾದಂಬರಿ ಎಂದರೆ ಸಮರ್‍ಸೆಟ್ ಮಾಮ್ ನ ನವ್ ಅಂಡ್ ದೆನ್ ಕಾದಂಬರಿ. ಈ ಕಾದಂಬರಿ ಹೇಗಿದೆ ಎಂದು ಕೇಳಿದ ಅಪ್ಪನಿಗೆ ನನಗೆ ಏನೂ ತಿಳಿಯುತ್ತಿಲ್ಲ ಎಂದು ಉತ್ತರ ಕೊಟ್ಟಿದ್ದೆ. ಇದರಿಂದ ಅಪ್ಪನಿಗೆ ತುಂಬಾ ಸಿಟ್ಟು ಬಂದಿತ್ತು. ಆತನಿಗೆ ಸಿಟ್ಟು ಬಂತೆಂದರೆ ನನಗೆ ಹಿಂದೆ ಮುಂದೆ ನೋಡದೇ ಬಡಿಯುತ್ತಿದ್ದ.
ಅಪ್ಪ ನನಗೆ ಹೀಗೆ ಬಡಿದಾಗಲೆಲ್ಲ ನನ್ನ ರಕ್ಷಣೆಗೆ ಬರುತ್ತಿದ್ದವಳು ನನ್ನ ಅಮ್ಮಮ್ಮ. ಅಮ್ಮಮ್ಮ ಎಂದರೆ ಅಪ್ಪನ ಅಮ್ಮ. ಆಕೆಗೆ ನನ್ನ ಮೇಲೆ ಅಪಾರವಾದ ಪ್ರೀತಿ. ನಾನು ಮಾಡಬಾರದ ಕೆಲಸವನ್ನು ಮಾಡಿ ಅಪ್ಪನಿಂದ ಹೊಡೆತ ತಿಂದಾಗ ಆಕೆ ಆಯ್ಯೋ ಅವನನ್ನು ಕೊಲ್ಲಡಾ ಮಾಣಿ ಎಂದು ಹೇಳಿ ತನ್ನ ಸೀರೆಯ ಸೆರೆಗಿನಡಿ ಆಕೆ ಬಚ್ಚಿಟ್ಟುಕೊಳ್ಳುತ್ತಿದ್ದಳು. ನಂತರ ನಾನು ಅಮ್ಮಮ್ಮನ ಮಡಿಲಲ್ಲಿ ತಲೆ ಇಟ್ಟು ನಿದ್ರೆ ಮಾಡುತ್ತಿದ್ದೆ. ಹೀಗಾಗಿ ಅಮ್ಮಮ್ಮನ ಸೀರೆಯ ಸೆರಗಿನ ವಾಸನೆ ನನ್ನಿಂದ ದೂರವಾಗಲೇ ಇಲ್ಲ. ಆಕೆ ನನ್ನ ಪಾಲಿಗೆ ರಕ್ಷಕಿ. ನನ್ನ ತಪ್ಪುಗಳನ್ನೆಲ್ಲ ಕ್ಶಮಿಸುವ ಕರುಣಾಮಯಿ.
ಅಪ್ಪ ನನ್ನ ಬಡಿಯುವಾಗ ಅಮ್ಮ ನನ್ನತ್ತ ನೋವು ಮತ್ತು ಕರುಣೆಯಿಂದ ನೋಡುತ್ತಿದ್ದಳು. ಅವಳಿಗೆ ಅಪ್ಪನಿಗೆ ವಿರುದ್ಧ ಮಾತನಾಡುವ ದೈರ್ಯ ಇರಲಿಲ್ಲ. ಹಾಗೆ ಹೆಚ್ಚೆಂದರೆ ತನ್ನ ಅತ್ತೆ ಅಂದರೆ ಅಮ್ಮಮ್ಮನ ಬಳಿ ಓಡಿ ಹೋಗಿ ಅತ್ತೆರೆ, ಶಶಿಗೆ ಬಡಿದು ಹಾಕ್ತಾ ಇದ್ದ ಎಂದು ಎಂದು ದೂರು ನೀಡಿ ಅಮ್ಮಮ್ಮ ರಂಗ ಪ್ರವೇಶಿಸುವಂತೆ ಮಾಡುತ್ತಿದ್ದಳು. ಅಮ್ಮಮ್ಮ ನ ಮುಂದೆ ಅಪ್ಪನ ಪೌರುಷ ತಣ್ಣಗಾಗುತ್ತಿತ್ತು. ಆತ ನನಗೆ ಹೊಡೆಯುವುದನ್ನು ನಿಲ್ಲಿಸಿ ಜಾಗ ಖಾಲಿ ಮಾಡುತ್ತಿದ್ದ.
ಅದೊಂದು ದಿನ ಅಪ್ಪ ಪೇಟೆಯಿಂದ ಮನೆಗೆ ಹಿಂತಿರುಗುವ ಹೊತ್ತಿಗೆ ನಾನು ಮನೆಯ ಅಂಗಳದಲ್ಲಿ ನಿಂತಿದ್ದೆ. ಆಗಲೇ ಯಕ್ಷಗಾನದ ಹಾಡುಗಳು ನನ್ನನ್ನು ಸೆಳೆದಿದ್ದವು. ಅಪ್ಪ ಎರಡು ಯಕ್ಷಗಾನವನ್ನು ಬರೆದಿದ್ದ. ನನಗೂ ಯಕ್ಷಗಾನ ಬರೆಯಬೇಕು ಎಂಬ ಆಸೆ. ಹೀಗಾಗಿ ಪ್ರಾಸದ ಬಗ್ಗೆ ಯೋಚಿಸುತ್ತಿದ್ದೆ. ಅಷ್ಟರಲ್ಲಿ ಅಪ್ಪನ ಮುಖ ಕಂಡು ನನ್ನೊಳಗೆ ಇದ್ದ ಕವಿ ಹೃದಯ ಜಾಗ್ರತವಾಗಿ ಯಕ್ಷಗಾನದ ಹಾಡು ಬಂದೇ ಬಿಟ್ಟಿತು.
ತಾಕು ತರಕಿಟ ಬಳಗುಳಿ ವೆಂಕಟ…..
ಬಳಗುಳಿ ನಮ್ಮ ಊರು. ಅಪ್ಪನ ಹೆಸರು ವೆಂಕಟ್ರಮಣ. ನಾನು ಹೇಳಿದ ಈ ಚರಣ ಅಧ್ಬುತವಾಗಿದೆ ಎಂದು ಅಂದುಕೊಳ್ಳುವಾಗಲೇ ಅಪ್ಪ ಜಮದಗ್ನಿಯಾಗಿ ಬಿಟ್ಟಿದ್ದ. ಪಕ್ಕದಲ್ಲಿದ್ದ ಬಾರುಕೋಲನ್ನು ತೆಗೆದುಕೊಂಡು ನನ್ನನ್ನು ಅಟ್ಟಿಸಿಕೊಂಡು ಬಂದ. ನಾನು ಮನೆಯ ಹಿಂದಕ್ಕೆ ಓಡಿದೆ ಮನೆಯ ಹಿಂದೆ ಇರುವ ದೊಡ್ದ ದರೆಯನ್ನು ಹತ್ತಿ ಮರ ಒಂದನ್ನು ಹತ್ತಿ ಕುಳಿತು ಬಿಟ್ಟೆ. ಅಪ್ಪ ಕೆಳಗೆ ಬಾರು ಕೋಲು ಹಿಡಿದು ಕಾದು ನಿಂತೆ ಇದ್ದ. ನನ್ನ ಮತ್ತು ಅಪ್ಪನ ಈ ಜಗಳದಲ್ಲಿ ಅಮ್ಮಮ್ಮ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಾಗ ಸಂಜೆಯಾಗಿತ್ತು. ಸುಮಾರು ನಾಲ್ಕು ಗಂಟೆಗಳ ಕಾಲ ನಾನು ಮರದ ಮೇಲೆ ಕುಳಿತಿದ್ದೆ.
ಇವೆಲ್ಲ ಕಾರಣದಿಂದ ನನಗೆ ಹಲವಾರು ಅನ್ವರ್ಥ ನಾಮಗಳು ಬರತೊಡಗಿದ್ದವು. ಸೂಜಿಮೆಣಸಿನ ಕಾಯಿ ಎಂಬುದು ಇಂತಹ ಹೆಸರುಗಳಲ್ಲಿ ಒಂದು. ಮಲೆನಾಡಿನಲ್ಲಿ ಬೆಳೆಯುವ ಸೂಜಿ ಮೆಣಸಿನ ಕಾಯಿ ನೋಡುವುದಕ್ಕೆ ತುಂಬಾ ಚಿಕ್ಕದು. ಆದರೆ ತುಂಬಾ ಖಾರ. ಬಾಯಿಗಿಟ್ತರೆ ಕಣ್ನಲ್ಲಿ ನೀರು. ನಾನಾಗ ತುಂಬಾ ಸಣ್ನಗೆ ಇದ್ದುದರಿಂದ ಊರ ಜನ ನನಗೆ ಈ ಹೆಸರು ಇಟ್ಟಿದ್ದರು.
ಊರಿನ ಜನರೆಲ್ಲ ನನ್ನನ್ನು ಕರೆಯುತ್ತಿದ್ದ ಇನ್ನೊಂದು ಹೆಸರೆಂದರೆ ಕೆಂಪು ತುಟಿ ಹೆಗಡೇರು. ನನಗೆ ಮೊದಲಿನಿಂದಲೂ ಕೆಂಪು ತುಟಿ ಎಂದು ಅಮ್ಮ ಈಗಲೂ ಹೇಳುವುದುಂಟು, ಈ ಕೆಂಪು ತುಟಿ ನಾನು ತಿನ್ನುವ ಎಲೆ ಎಡಕೆಯಿಂದ ಇನ್ನಷ್ಟು ಕೆಂಪಗಾಗಿ ನನ್ನನ್ನು ಕೆಂಪತುಟಿಯ ಹೆಗಡೆಯವರನ್ನಾಗಿ ಮಾಡಿತ್ತು.
ಹೀಗೆ ನನ್ನ ಬೆನ್ನ ಚರ್ಮವನ್ನು ತನ್ನ ಬಾರು ಕೋಲಿನಿಂದ ಆಗಾಗ ಮುತ್ತಿಕ್ಕುತ್ತಿದ್ದ ಅಪ್ಪ ನಾನು ಕಾಲೇಜು ಪ್ರವೇಶಿಸುತ್ತಿದ್ದಂತೆ ಸಂಪೂರ್ಣವಾಗಿ ಬದಲಾಗಿ ಹೋದ. ಆತ ನನ್ನನ್ನು ಸ್ಣೇಹಿತನಂತೆ ಕಾಣತೊಡಗಿದ. ಒಂದು ವರ್ಷ ಸಿದ್ದಾಪುರದ ಕಾಲೇಜಿನಲ್ಲಿ   ನಾನು   ಇರುವಾಗ ಮಾಡಿಕೊಂಡ ಯಾವುದೇ ಲಫಡಾದಲ್ಲಿ ಆತ ಮಧ್ಯ ಪ್ರವೇಶಿಸಲಿಲ್ಲ. ಹಲವಾರು ಹುಡುಗಿಯರ ತಂದೆ ತಾಯಿಯರು ನನ್ನ ಬಗ್ಗೆ ದೂರು ನೀಡಿದಾಗ ನಾನು ಮಧ್ಯ ಪ್ರವೇಶಿಸುವುದಿಲ್ಲ, ಮಗ ಬೆಳೆದಿದ್ದಾನೆ ಎಂದು ಹೇಳಿ ಸುಮ್ಮನಾದ. ಕಾಲೇಜಿನ ಪ್ರಾಂಶುಪಾಲರೇ ನನ್ನ ಬಗ್ಗೆ ದೂರು ನೀಡಿದಾಗ ಮುಂದಿನ ಓದಿಗಾಗಿ ಬೆಳಗಾವಿಗೆ ಹೋಗಲು ವ್ಯವಸ್ಥೆ ಮಾಡಿದ. ಆದರೆ ಮಗನೆ ನೀನು ಮಾಡಿದ್ದು ತಪ್ಪು ಎಂದು ಒಂದು ದಿನವೂ ಹೇಳಲಿಲ್ಲ.
ನಂತರದ ದಿನಗಳಲ್ಲಿ ನಾನು ಓದು ಮುಗಿಸಿ ಬೆಂಗಳೂರಿಗೆ ಬಂದ ಮೇಲೆ ಅಪ್ಪ ನನ್ನ ಜೊತೆ ರಾಜಕೀಯದ ಬಗ್ಗೆ ಮಾತನಾಡುತ್ತಿದ್ದನೇ ಹೊರತೂ ಬೇರೆ ಯಾವ ವಿಚಾರವನ್ನು ಮಾತನಾಡುತ್ತಿರಲಿಲ್ಲ. ಆತನ ಆರೋಗ್ಯ ಕೆಟ್ತ ಮೇಲೆ ಮಾತು ಕಡಿಮೆಯಾಗಿತ್ತು. ಆತ ನನ್ನನ್ನು ನೋಡುವಾಗ ಪ್ರೀತಿಯಿಂದ ವಿಶ್ವಾಸದಿಂದ ನೋಡುತ್ತಿದ್ದ.  ಅವನ ನೋಟದಲ್ಲಿ  ಸಣ್ಣವನಿರುವಾಗ ಹೊಡೆತ ಕೊಡುತ್ತಿದ್ದ ಬಗ್ಗೆ ಒಂದು ಪಶ್ಚಾತ್ತಾಪದ ಭಾವ ಯಾವಾಗಲೂ ಇರುತ್ತಿತ್ತು. ಅಪ್ಪನಿಗೆ ಕೊನೆಯವರೆಗೆ ನನ್ನ ಮೇಲಿದ್ದ ಬೇಸರವೆಂದರೆ ನನಗೆ ಆಂಗ್ಲ ಭಾಷೆಯ ಮೇಲೆ ಪ್ರಭುತ್ವ ಇಲ್ಲ ಎನ್ನುವುದು. ಸದಾ ಖಾದಿದಾರಿಯಾಗಿರುತ್ತಿದ್ದ ನಿಜವಾದ ಅರ್ಥದಲ್ಲಿ ಗಾಂಧಿವಾದಿ. ಆತ ತೊಡುತ್ತಿದ್ದ ಒಳ ಊಡುಪುಗಳು ಕೂಡ ಖಾದಿ. ನಮ್ಮ ಕುಟುಂಬವೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಎಲ್ಲವನ್ನೂ ಕಳೆದುಕೊಂಡಿತ್ತು. ಆದರೆ ಅಪ್ಪ ಇಂಗ್ಲೀಷರನ್ನು ವಿರೋಧಿಸುತ್ತಿದ್ದವ ಆಂಗ್ಲ ಭಾಷೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ !
ಅಪ್ಪ ಸಂಸ್ಕೃತ ಕಲಿಯಲಿಲ್ಲ. ಪ್ರತಿ ದಿನ ದೇವರ ಪೂಜೆ ಮಾಡಲಿಲ್ಲ.
ಪ್ರತಿ ದಿನ ಬೆಳಿಗ್ಗೆ ಪತ್ರಿಕೆ ಒದುವಾಗ ಅಪ್ಪ ನೆನಪಾಗುತ್ತಾನೆ. ನನ್ನಪ್ಪ ನಿಜವಾಗಿ ದೊಡ್ದವ. ಅವನ ಮುಂದೆ ನಾನು ಏನೂ ಅಲ್ಲ.
ಇಂದು ಭಾನುವಾರ ಪ್ರಜಾವಣಿಯನ್ನು ನೋಡುತ್ತಿದ್ದಾಗ ಮತ್ತೆ ಅಪ್ಪ ಎದುರು ಬಂದು ನಿಂತ. ಆಗಲೇ ನಾನು ಕಂಪ್ಯೂಟರ್ ಆನ್ ಮಾಡಿದೆ.

2 comments:

Unknown said...

Sir naanu patrike odalu shuru maadiddu Khalistan movement jooragiddaga. Aaga nammappa nanage odi heltidru, konege nanage adu havyasavagi illivarege tandu nilliside
vageesh

Anonymous said...

"ಆಂಗ್ಲಭಾಷೆಯ ಬಗೆಗಿನ ಅಭಿಮಾನ" ಈ ಒಂದು ವಿಷಯವನ್ನು ಹೊರತುಪಡಿಸಿ, ತಮ್ಮ ಅಪ್ಪನವರ ಬಗೆಗಿನ ಮಾತುಗಳು, ಪ್ರತಿ ಸಾಲಿನಲ್ಲೂ ನನ್ನ ಅಪ್ಪಯ್ಯನವರನ್ನು ನೆನಪಿಸುತ್ತಿತ್ತು.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...