Tuesday, December 24, 2013

ವಿದ್ರೋಹ

ಇದು ನಾನು ಬರೆಯುತ್ತಿರುವ ಕಾದಂಬರಿ. ಇದರ ಮೊದಲ ಭಾಗವನ್ನು ನಿಮಗಾಗಿ ನೀಡುತ್ತಿದ್ದೇನೆ. ಓದಿ ಅಭಿಪ್ರಾಯ ತಿಳಿಸಿದರೆ ಸಂತೋಷ- ಶಶಿಧರ್ ಭಟ್

ಭಾಗ ೧

ಆಗ ತಾನೆ ಸಂಜೆಯಾಗಿ ಕೆಲಹೊತ್ತಾಗಿತ್ತು. ಎಲ್ಲ ಜಂಜಡಗಳಿಂದ ತಪ್ಪಿಸಿಕೊಂಡು ನಾಯಕರು ಇಲ್ಲಿ ಬಂದು ಕುಳಿತಿದ್ದರು.  ಇಲ್ಲಿ ಅಂದರೆ ನಗರದಿಂದ ಇಪ್ಪತ್ತು ಕಿಮೀ ದೂರದಲ್ಲಿರುವ ರೆಸಾರ್ಟ್ ನಲ್ಲಿ.  ಇಲ್ಲಿ ಕುಳಿತರು ಅವರ ಮನಸ್ಸು ಅಲ್ಲಿಯೇ ಇತ್ತು. ಆಗಲೇ ಶುರುವಾದ ಭಿನ್ನಮತ ಅವರನ್ನು ಕಂಗೆಡಿಸಿತ್ತು.  ತಾವು ನಂಬಿದವರು, ತಮ್ಮಿಂದಲೇ ಬೆಳೆದವರು ಹೀಗೆ ಬೆನ್ನಿಗೆ ಚೂರಿ ಹಾಕುತ್ತಾರೆ ಎಂದು ಅವರು ಅಂದುಕೊಂಡಿರಲಿಲ್ಲ. ಆದರೆ ಅಧಿಕಾರ ಎಂದರೆ ಹಾಗೆ ತಾನೆ…?
ಏ ತಮ್ಮಾ ಬಾರೋ ಇಲ್ಲಿ….. ತಮ್ಮ ಸಹಾಯಕನನ್ನು ಹತ್ತಿರಕ್ಕೆ ಕರೆದರು. ನಾನು ಇಲ್ಲಿಗೆ ಬಂದಿದ್ದು ಯಾರಿಗೂ ಗೊತ್ತಿಲ್ಲ ತಾನೆ ?
ಪಕ್ಕದಲ್ಲಿ ಕೈ ಕಟ್ಟಿ ಕುಳಿತ ಅವರ ಸಹಾಯಕ ಇಲ್ಲ ಎಂದು ತಲೆ ಆಡಿಸಿದ. ಮತ್ತೆ ಮ್ಯಾಡಮ್ ಅವರಿಗೆ ಗೊತ್ತು ಅಂತಾ ಕಾಣುತ್ತೆ ಅಂದ. ಅವರು ಅವನತ್ತ ಸುಮ್ಮನೆ ನೋಡಿದರು. ಅವನ ತುಟಿಯಂಚಿನಲ್ಲಿ ಸಣ್ಣ ನಗೆ ಇದ್ದಂತೆ ಅನಿಸ್ತು. ಈ ನನಮಗ ವ್ಯಂಗವಾಗಿ ಮೇಡಮ್ ಅಂತ ಅಂದನಾ ? ಅನ್ನದೇ ಏನ್ ಮಾಡ್ತಾನೆ. ಸೂಳೇ ಮಗ ನನ್ ಜೊತೆಗಿದ್ದು ಕೊಬ್ಬಿದಾನೆ. ಬೈಯೋಣ ಎಂದು ಅನ್ನಿಸಿದರೂ ಬೈಯಲು ಮನಸ್ಸಾಗಲಿಲ್ಲ.  ಈ ಸಂದರ್ಭದಲ್ಲಿ ಅವನಿಗೆ ಬೈಯುವುದು ಅಷ್ಟು ಸೂಕ್ತ ಅಲ್ಲ ಎಂದುಕೊಂಡರು.
ಅಲ್ಲಿ ಮಳೆ ಬರ್ತಾ ಇತ್ತು.  ರೂಮಿನ ಹೊರಗೆ ಮಳೆಯ ನೀರು ಬೀಳುವುದನ್ನು ಅವರು ನೋಡುತ್ತ ಕುಳಿತರು. ಅವರು ಹುಟ್ಟಿ ಬೆಳೆದ ಊರು ಮಲೆನಾಡು ಜಿಲ್ಲೆಗೆ ಸೇರಿದರೂ ಅಲ್ಲಿ ಮಳೆ ಬರುವುದು ಕಡಿಮೆ. ವರ್ಷಕ್ಕೆ ಹತ್ತಾರು ಇಂಚು ಮಳೆ ಬಂದರೆ ಅದೇ ಹೆಚ್ಚು. ಆದರೆ ಜಿಲ್ಲಾ ಕೇಂದ್ರದಲ್ಲಿ ಹಾಗಲ್ಲ. ಅಲ್ಲಿ ಮಳೆ ಬಂದರೆ ಆರು ತಿಂಗಳು ನಿಲ್ತಾ ಇರಲಿಲ್ಲ. ಅವರು ಮೊದಲ ಬಾರಿ ಎಮ್ ಎಲ್ ಎ ಆದ ಮೇಲೆ ಜಿಲ್ಲಾ ಕೆಂದ್ರಕ್ಕೆ ತಮ್ಮ ವಾಸ್ತವ್ಯವನ್ನು ಬದಲಿಸಿ ಬಿಟ್ಟಿದ್ದರು. ಹಾಗೆ ಜಿಲ್ಲಾ ಕೇಂದ್ರಕ್ಕೆ ಬಂದ ಮೇಲೆ ಮಳೆ ನೋಡುವುದು ಸಾಮಾನ್ಯವಾಯಿತು.
ಹೊರಗೆ ಕಾರು ಬಂದು ನಿಂತ ಸದ್ದು. ಹೌದು ಆಕೆಯೇ ಬಂದಿರಬೇಕು. ಅವಳು ಹಾಗೆ. ಒಂದು ಕ್ಷಣವೂ ನನ್ನ ಬಿಟ್ಟು ಇರಲಾರಳು.  ನನ್ನ ಬಗ್ಗೆ ಅವಳಿಗಿರುವ ಕಾಳಜಿ ಅಂತಹುದು. ಕಳೆದ ಹತ್ತು ವರ್ಷಗಳಿಂದ ಎಂತೆಂತೆಹ ಕಷ್ಟವನ್ನು ಅವಳು ಎದುರಿಸಿದಳಲ್ಲ… ನನ್ನ ಜೊತೆಗಿನ ಸಂಬಂಧದ ಬಗ್ಗೆ ಎಲ್ಲರೂ ಮಾತನಾಡಿದರೂ ಆಕೆ ತಲೆ ಕೆಡಿಸಿಕೊಳ್ಳಲಿಲ್ಲ. ಸಂಪುಟ ಸಹೋದ್ಯೋಗಿಗಳು ಕುಹಕದ ಮಾತನಾದಿದರೂ ಎಲ್ಲವನ್ನು ನಿರ್ಲಕ್ಷಿಸಿದಳು. ನನಗೆ ಸಮಾಜ ನಿಂಧನೆಯ ಭಯ ಬಂದಾಗಲೂ ಹತ್ತಿರಕ್ಕೆ ಬಂದು ತಲೆ ಸವರಿ, ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡ ಪುಟ್ಟಾ ಎಂದು ಬಿಟ್ಟಳಲ್ಲ. 
ನೋಡು ಜಗತ್ತು ಮಾತನಾಡುತ್ತದೆ. ಆನ ಮಾತನಾಡುತ್ತಾರೆ. ನಾವು ಈ ಜನರಿಗಾಗಿ ಬದುಕೊದು ಸಾಧ್ಯಾನಾ ? ನಾವು ಬದುಕೊದು ನಮಗಾಗಿ ಅಲ್ಲವಾ ? ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡ, ಎಲ್ಲಿ ಒಂದು ಮುತ್ತು ಕೊಡು ಎಂದು ಲೊಚ ಲೊಚನೆ ಮುತ್ತು ಕೊಟ್ಟೇ ಬಿಟ್ಟಳಲ್ಲ..
ಸಹಾಯಕ ಹಾಗೆ ಒಳಗೆ ಬಂದ
ಸಾರ್ ಡಾಕ್ಟರ್ ಬಂದಿದಾರೆ, ಒಳಗೆ ಕಳಿಸಲಾ ?
ಕಳಿಸು ಎಂಬಂತೆ ಆತನತ್ತ ನೋಡಿದರು.
ಈ ಡಾಕ್ಟರ್ ಒಳ್ಳೆ ಮನುಷ್ಯ. ನಮ್ಮವನೇ. ಆತ ಎಂ ಬಿ ಬಿಎಸ್ ಅಲ್ಲ. ಹೊಮೊಯೋಪಥಿ. ಆದರೆ ಔಷಧ ಮಾತ್ರ ಪವರ್ ಫುಲ್. ಆತ ಕೊಟ್ಟ ಅಔಷಧ ಎಂದು ವಿಫಲವಾಗಲೇ ಇಲ್ಲ.  ನೊಡಿದರೆ ಸಣ್ಣ ಸಕ್ಕರೆ ಉಂಡೆಯಂತಹ ಔಷಧ ಕೊಡ್ತಾನೆ. ಅದು ಹೊಟ್ಟೆಗೆ ಹೋದ ತಕ್ಷಣ ಕೆಲಸ ಮಾಡೊದಕ್ಕೆ ಪ್ರಾರಂಭ ಮಾಡುತ್ತೆ. ಮುಂಡೆದು ಎಲ್ಲಿ ಕಲಿತನೋ.  ಆತನ ಪುಷ್ಟಿ ವರ್ಧಕ ಔಷಧಗಳು ಎಷ್ಟೇ ವಯಸ್ಸಾಗಲಿ ಅವರ ಮೇಲೆ ಕೆಲಸ ಮಾಡುತ್ತೆ. ಮುದುಕನೂ ಯೌವನದ ಹುಮ್ಮಸಿನಿಂದ ಕುಪ್ಪಳಿಸ್ತಾನೆ. 
ಡಾಕ್ಟರ್ ಒಳಗೆ ಬಂದರು. ಕೈ ಮುಗಿದು ನಿಂತರು.
ಸಾರ್ ಹೇಗಿದ್ದೀರಿ ? ನಿಮ್ಮ ಆರೋಗ್ಯ ಹೇಗಿದೆ ಅಂತ ನೋಡಿಕೊಂಡು ಹೋಗೊಣ ಅಂತಾ ಬಂದೆ. ಎಂದವರೆ ಹತ್ತಿರ ಬಂದು ಎದೆ ಕೈ ಕಾಲು ಮೊದಲಾದ ಸರ್ವಾಂಗವನ್ನು ಮುಟ್ಟಿ ನೊಡಿದರು.  ಯು ಆರ್ ಅಲ್ ರೈಟ್ ಎಂದವರೆ ತಮ್ಮ ಬಾಯಿಯನ್ನು ಕಿವಿಯ ಹತ್ತಿರ ತಂದು ರಾತ್ರಿ ಸಮಸ್ಯೆ ಇಲ್ಲ ತಾನೆ ಎಂದು ಕಿಸಕ್ಕನೆ ನಕ್ಕರು.
ನಿಮ್ಮನ್ ಕೇಳಿದರೆ ಏನ್ ಗೊತ್ತಾಗುತ್ತೆ… ಮೇಡ್ಮ್ ಕೇಳಬೇಕು ಅಂತ ಇನ್ನೊಮ್ಮೆ ಅನಗತ್ಯವಾಗಿ ನಕ್ಕರು. ನೊಡಿ ಆ ಸಕ್ಕರೆ ಕಾಳಿನಂತಹ ಗುಳಿಗೆಯನ್ನ ಹಾಗೆ ಮುಂದುವರಿಸಿ. ಇನ್ನೊಂದು ಸಣ್ಣ ಬಾಟಲಿಯಲ್ಲಿ ಇದೆಯಲ್ಲ, ಅದನ್ನ ಮಾತ್ರ ಯಾವಾಗ ಬೇಕೋ ಆವಾಗ ಉಪಯೋಗಿಸಿ.  ನಿಗಧಿತ ಡೊಸಿಗಿಂತ ಜಾಸ್ತಿ ತಗೋಬೇಡಿ.  ಜಾಸ್ತಿ ತಗಂಡರೆ ನಿಮಗೆ ಕಷ್ಟ ಅಂತ ಇನ್ನೊಮ್ಮೆ ನಕ್ಕರು. 
ನಾಯಕರಿಗೆ ಅವರ ಈ ನಗುವಿನ ಬಗ್ಗೆ ಅನುಮಾನ.  ಲೈಂಗಿಕ ಶಕ್ತಿ ವರ್ಧಕ ಔಷಧ ತೆಗೆದುಕೊಳ್ಳುವ ವಿಚಾರವನ್ನು ಈ ಡಾಕ್ಟರು ಎಲ್ಲ ಕಡೆ ಪ್ರಚಾರ ಮಾಡಬಹುದೇ ಎನ್ನುವ ಅನುಮಾನ ಅವರಿಗೆ ಮೂಡಿತು. ಮಾಡಿದರೆ ಮಾಡಿಕೊಳ್ಳಲಿ 65 ವರ್ಷ ದಾಟಿದ ಮೇಲೆ ಯಾರೇ ಆಗಲೀ ಔಷಧ ತೆಗೆದುಕೊಳ್ಳದೇ ಚಟುವಟಿಕೆ ನಡೆಸೋದು ಸಾಧ್ಯ ಇಲ್ಲ. ಜೊತೆಗೆ ಪಾಪ ನಂಬಿ ಬಂದ ಆಕೆಯನ್ನ ಖುಶಿಯಲ್ಲಿ ಇಡಲು ಇದನ್ನೆಲ್ಲ ಮಾಡಲೇಬೇಕು.  ಜಗತ್ತು ಏನು ಹೇಳುತ್ತೆ ಅನ್ನೋದಕ್ಕಿಂತ ನಾವು ಹೇಗಿದ್ದೀವಿ ಅನ್ನೋದು ಮುಖ್ಯ ಅಂತ ಅನ್ನಿಸಿ ಸಮಾಧಾನವಾಯ್ತು.
ಡಾಕ್ಟರ್ ಅನ್ನು ಕಳುಹಿಸಿ ಕೊಟ್ಟ ನಾಯಕರು ಮತ್ತೆ ಹೊರಗೆ ನೋಡಿದರು. ಮಳೆ ನಿಂತಿರಲಿಲ್ಲ. ಆಕೆ ಇನ್ನು ಬಂದಿಲ್ಲ ಅಂತ ಅಸಹನೆ ಮೂಡಿದರೂ ತನ್ನ ವಿರುದ್ಧ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಯನ್ನು ನಿಯಂತ್ರಿಸಲು ಆಕೆ ನಡೆಸುತ್ತಿರುವ ಯತ್ನ ನೆನಪಾಗಿ ಸಮಾಧಾನ ಅನ್ನಿಸಿತು. ಆಕೆ ತೋರಿಸಿದಷ್ಟು ಆಸಕ್ತಿಯನ್ನ ಸ್ವಂತ ಮಕ್ಕಳು ತೋರಿಸಿದ್ದರೆ ಈ ಸ್ಥಿತಿ ಬರ್ತಾ ಇರಲಿಲ್ಲ. ಆದರೆ ಈ ಮಕ್ಕಳೋ ಅದು ಇದು ವ್ಯವಹಾರ ಮಾಡಿ ಕಾಸು ಮಡುವುದನ್ನು ಕಲಿತರೇ ಹೊರತೂ ರಾಜಕೀಯ ಕಲಿಯಲಿಲ್ಲ. 
ಏ ಬಾರೋ ಇಲ್ಲಿ ಎಂದು ಸಹಾಯಕನನ್ನು ಕರೆದರು. ಮೇಡಮ್ ಬಂದ್ರೆನೋ ಅಂತಾ ಪ್ರಶ್ನಿಸಿದರು. ಆಕೆ ಬಂದಿಲ್ಲ ಎಂಬುದು ಅವರಿಗೆ ಗೊತ್ತಿದ್ದರೂ ಬಂದ್ರಾ ಅಂತ ಕೇಳಿ ಸಮಾಧಾನ ಪಟ್ಟುಕೊಳ್ಳಲು ಯತ್ನಿಸಿದರು. ಇಲ್ಲಿ ಬಂದಿಲ್ಲ ಬಂದ ತಕ್ಷಣ ಒಳಕ್ಕೆ ಕಳಿಸ್ತೀನಿ ಅಂತಾ ಹೇಳಿದ ಸಹಾಯಕ ಹೊರಕ್ಕೆ ಹೋಗಿ ಬಾಗಿಲು ಎಳೆದುಕೊಂಡ.  
ಹೊರಗೆ ಮಳೆ ನಿಂತಿರಲಿಲ್ಲ. ಯಾರಿಗೂ ಹೇಳದೇ ಸೆಕ್ಯುರಿಟಿಯನ್ನು ಬಿಟ್ಟು ಕದ್ದು ಇಲ್ಲಿಗೆ ಒಡಿ ಬಂದಿದ್ದ ನಾಯಕರು ಜೊತೆಗೆ ಆಪ್ತ ಸಹಾಯಕ ಮಾತ್ರ ಬಂದಿದ್ದ. ಇಲ್ಲಿ ಬಂದರೆ ಇಲ್ಲಿನ ಏಕಾಂತದಲ್ಲಿ ಎಲ್ಲವನ್ನೂ ಮರೆಯಬಹುದು ಎಂದು ಅವರು ಅಂದುಕೊಂಡಿದ್ದರು. ಆದರೆ ಮರೆಯಲು ಸಾಧ್ಯವಾಗ್ತಾ ಇಲ್ಲ. ಎಲ್ಲವೂ ನೆನಪಾಗ್ತಾ ಇದೆ. ನಾನು ಬೆಳೆಸಿದವರೆ ಧ್ರೋಹ ಮಾಡಲು ಸಜ್ಜಾಗಿದ್ದಾರೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಸರ್ಕಾರ ಉರುಳ ಬಹುದು. ಗೂಟದ ಕಾರು ಹೋಗಬಹುದು.  ಎನ್ನೊಬ್ಬ ಮುಖ್ಯಮಂತ್ರಿ ಆಗಬಹುದು.
ನಾಯಕರು ಕಿಡಿಕಿಯತ್ತ ಮತ್ತೊಮ್ಮೆ ನೋಡಿದರು. ಎಲ್ಲ ಕಳ್ಳ ಸೂಳೆ ಮಕ್ಕಳು ಅಂತ ದೊಡ್ದದಾಗಿ ಕೂಗಿದರು.. 
ಏನ್ ಸಾರ್ ಕರೆದ್ರಾ ಅಂತ ಆಪ್ತ ಸಹಯಕ ಒಳಗೆ ಬಂದ.
ಏ ಬೋಳಿ ಮಗನೇ ನಿನ್ ಯಾರ್ ಕರೆದ್ರು. ಕರದಾಗ್ ಬಾರೋ ಮಗನೆ ಎಂದು ಬೈದು, ಕಿಡಕಿಯತ್ತ ಉಗಿದರು. ಯಾಕೋ ಈ ಎಕಾಂತ ಅಸಹನೀಯ ಅಂತಾ ಅನ್ನಿಸತೊಡಗಿತು. ಕೆಲವೊಮ್ಮೆ ಏಕಾಂತ ಬೇಕು ಅಂತ ಅನ್ನಿಸುತ್ತೆ. ಏಕಾಂತದಲ್ಲಿ ಇದ್ದರೆ, ಜನರ ನಡುವೆ ಓಡಬೇಕು ಅಂತಾ ಅನ್ನಿಸುತ್ತೆ. ಆನರ ನಡುವೆ ಇದ್ದಾಗ ಕೆಟ್ಟ ಮಾತು ಬಾಯಿಯಿಂದ ಬಂದು ಬಿಡುತ್ತೆ. ಸೂ ಮಗ ಬೋ ಮಗ ಅಂದ್ರೆ ಫಾಲೋವರ್ಸ್ ದೂರ ಆಗ್ತಾರೆ..ಇನ್ನು ಮುಂದೆ ಕೆಟ್ಟದಾಗಿ ಬೈಯ್ಬಾರದು ಅಂತ ಸಂಕಲ್ಪ ಮಾಡಿದರು ಒಂದೆರಡು ದಿನಗಳಲ್ಲಿ ಅದೂ ಮರೆತು ಹೋಗಿ ಸಂಸ್ಕೃತ ಶಬ್ದಗಳು ಪುಂಖಾನುಪುಂಖವಾಗಿ ಬರಲು ಪ್ರಾರಂಭವಾಗುತ್ತೆ.
ಇನ್ನು ಮುಂದೆ ಯಾರನ್ನೂ ಬೈಯ್ಬಾರದು. ಮುಖದಲ್ಲಿ ಸಣ್ಣ ನಗುವನ್ನು ಫಿಕ್ಸ್ಡ್ ಡಿಪೆÇಸಿಟ್ ನಂತೆ ಇಟ್ಟುಕೊಂಡಿರಬೇಕು. ಸಿಟ್ಟು ಮಾಡಿಕೊಳ್ಳಲೇ ಬಾರದು ಎಂಬ  ತೀರ್ಮಾನಕ್ಕೆ ನಾಯಕರು ಬಂದರು.  ಆಪ್ತ ಸಹಾಯಕನನ್ನು ಹತ್ತಿರಕ್ಕೆ ಕರೆದು ಆತನ ಬೆನ್ನನ್ನು ಸವಾಕಶವಾಗಿ ಸವರಿದರು. ಬೈದಿದ್ದಕ್ಕೆ ಬೇಸರ ಮಾಡ್ಕಂದ್ಯೆನೋ ಅಂತ ವಿಚಾರಿಸಿದರು. ಸಾಹೇಬರ ವರ್ತನೆ ಬದಲಾಗಿದ್ದನ್ನು ಕಂಡ ಸಹಾಯಕ ಇಲ್ಲಾ ಸಾರ್, ನೀವು ನನ್ನ ತಂದೆ ಇದ್ದಂಗೆ. ನೀವು ಬೈದೇ ಇನ್ಯಾರು ನನ್ನ ಬೈ ಬೇಕು ಸಾರ್ ಅಂದ.
ನೀವೇ ನನ್ನ ತಂದೆ ಅಂತ ಆತ ಹೇಳಿದ ಮಾತು ಕೇಳಿ ಮನಸ್ಸಿನಲ್ಲಿ ಏನೋ ಕಸಿವಿಸಿ.  ಇವನ ಅಪ್ಪ ಕೂಡ ನನ್ನ ಜೊತೆಗೆ ಕೆಲಸ ಮಾಡಿದವ. ರಾಜಕೀಯದಲ್ಲಿ ಪ್ರವರ್ಧನ ಮಾನಕ್ಕೆ ಬರೆದ ಆ ದಿನಗಳಲ್ಲಿ ಹಗಲು ಇರುಳೆನ್ನದೇ ಜೊತೆಗೆ ದುಡಿದವ ಆತ. ಎಲ್ಲ ವ್ಯವಹಾರಗಳಲ್ಲೂ ಆತ ಎತ್ತಿದ ಕೈ. ಕಣ್ಣು ಸನ್ನೆ ಮಾಡಿದರೆ ಸಾಕು ಅವನಿಗೆ ಎಲ್ಲ ಅರ್ಥವಾಗ್ತಾ ಇತ್ತು. ಯಾಕೋ ಬೇಸರವಗಿದೆ ಕಣಯ್ಯ ಅಂದ್ರೆ ಸಾಕು, ಆತ ಯಾರನ್ನೋ ವ್ಯವಸ್ಥೆ ಮಾಡಿ ಬಿಡುತ್ತಿದ್ದ.  ಮನಸ್ಸಿಗೆ ಸಮಾಧಾನ ತೃಪ್ತಿ ಆದ ಮೇಲೆ ಯಾರಿಗೂ ಗೊತ್ತಾಗದ ಹಾಗೆ ಕರೆ ತಂದವರನ್ನು ಹಾಗೆ ಕಳುಸಿ ಬಿಡುತ್ತಿದ್ದ. ಈ ಗುಟ್ಟು ಎಲ್ಲಿಯೂ ಹೊರಕ್ಕೆ ಬರದಂತೆ ನೋಡಿಕೊಂಡ.
ಅವನ ಸ್ವಾಮಿ ನಿಷ್ಟೆ ಎಷ್ಟಿತ್ತೆಂದರೆ ನನಗಾಗಿ ತನ್ನ ಜೀವನವನ್ನೇ ಇಡಿ ಯಾಗಿ ಸವೆಸಿದ ಆತ.  ಮಗನಲ್ಲೂ ಅವನಪ್ಪನ ಗುಣ ಇದೆ ಎಂದು ಅವರಿಗೆ ಖಾತ್ರಿಯಾಗಿದೆ. ಕೋಟ್ಯಾಂತರ ರೂಪಾಯಿ ತರುವ ಕೊಡುವ ಕೆಲಸದಲ್ಲಿ ಎಂದೂ ಅಪ್ರಾಮಾಣಿಕವಾಗಿ ನಡೆದುಕೊಂಡವನಲ್ಲ. ನಿಯತ್ತಿನ ಸೂಳೇ ಮಗ. ಹೇಳಿದ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡ್ತಾನೆ.  ಎಲ್ಲಿಯೂ ತುಟಿ ಪಿಟಕ್ ಅನ್ನಲ್ಲ. 
ಸಾರ್ ಮೇಡಂ ಬಂದ್ರು ಅಂದವ ಬಾಗಿಲು ತೆರೆಯಲು ನಡೆದ. 
ಆವಳು ಬಂದೇ ಬಿಟ್ಟಳು. ತಿಳಿ ನೀಲಿ ಬಣ್ಣದ ಸೀರೆ ಅದಕ್ಕೆ ಸರಿಯಾದ ರವಿಕೆ ತೊಟ್ಟ ಆಕೆ, ಇವತ್ತು ಎಂದಿಗಿಂತ ದೊಡ್ಡ ಹಣೆಯ ಬೊಟ್ಟಿ ಇಟ್ಟಿದ್ದಳು. ಯಾಕೋ ಅವಳ ಹಣೆಯ ಮೇಲಿನ ಬೊಟ್ಟು ಅಗತ್ಯಕ್ಕಿಂತ ದೊಡ್ಡದಾಯಿತು ಅಂತ ನಾಯಕರಿಗೆ ಅನ್ನಿಸತೊಡಗಿತು.  ಜೊತೆಗೆ ಕಮ್ಯುನಿಸ್ಟ ಮತ್ತು ಫೆಮಿನಿಸ್ಟ್ ಹೆಂಗಸರು ಈ ರೀತಿ ಹಣೆಗೆ ಬೊಟ್ಟು ಇಡುವುದನ್ನು ಅವರು ನೋಡಿದ್ದರು.  ಈಕೆ ಫೇಮಿನಿಸ್ಟ್ ಅಂತಾಗಲೀ ಕಮ್ಯುನಿಸ್ಟ್ ಅಂತಾಗಲೀ ನಂಬಲು ಅವರ ಮನಸ್ಸು ಒಪ್ತಾ ಇಲ್ಲ.  
ಹೆಣ್ಣು ಅಂದ್ರೆ ಪ್ರಕೃತಿ. ಆಕೆ ಹಾಗೆ ಇರಬೇಕು.  ಒಪ್ಪಿಸಿಕೊಳ್ಳುವ ಹೆಣ್ಣು ಪಡೆದುಕೊಳ್ಳುವ ಶಕ್ತಿಯನ್ನ  ಹೊಂದಿರ್ತಾಳೆ. ಪಡೆದುಕೊಳ್ಳುವುದಕ್ಕಗಿಯೇ ಬಂದವಳಿಗೆ ಏನೂ ಸಿಗೋದಿಲ್ಲ. ಆದ್ರೆ ಈ ದೊಡ್ಡ ಬೊಟ್ಟಿನ ಹೆಂಗಸರು ತಾವೇ ಗಂದಸರು ಅಂತಾ ವರ್ತಿಸ್ತಾರೆ.  ಅವರಲ್ಲಿ ಒಪ್ಪಿಸಿಕೊಳ್ಳುವ ಮನಸ್ಥಿತಿನೇ ಇರೋದಿಲ್ಲ.  ಒಂಥರಾ ಹೆಣ್ಣ ತನ ಇಲ್ಲದಿರೋ ಹೆಂಗಸರು. ಅವರಿಂದ ಯಾವ ಪ್ರಯೋಜನಾನೂ ಇಲ್ಲ ಎಂದುಕೊಂಡರು ನಯಕರು.
ಮೇಡಮ್ ಹತ್ತಿರಕ್ಕೆ ಬಂದು ಮುಖದ ಮೇಲೆ ಮುತ್ತು ಕೊಟ್ಟು ಯಾಕೋ ಪುಟ್ಟಾ ಸುಸ್ತಾದಂತೆ ಕಾಣ್ತಿದಿಯಾ ಎಂದಳು. ಹಾಗೆ ನಾಯಕರ ತೊಡೆಯ ಮೇಲೆ ಕುಳಿತು ಕಚಗುಳಿ ಇಡತೊಡಗಿದಳು. ನಾಯಕರಿಗೆ ಯಾಕೋ ಅವಳ ಹಣೆಯ ಮೇಲಿನ ದೊಡ್ಡ ಬೊಟ್ಟು ಭೂತಕಾರವಾಗಿ ಕಾಣತೊಡಗಿತು. ಅವರು ಆಕೆಯ ಹಣೆಯನ್ನು ಹಣೆಯ ಮೇಲಿನ ಬೊಟ್ಟನ್ನು ನಿಟ್ಟಿಸಿ ನೋಡತೊಡಗಿದರು. ಅದು ಊರಿನ ಮಂತ್ರವಾದಿಗಳ ಅಂಜನದ ಬೊಟ್ಟಿನಂತೆ, ಅದರೊಳಗೆ ಇಡೀ ಕರ್ನಾಟಕ, ಪ್ರತಿ ಪಕ್ಷದ ನಾಯಕರು ಅವರು ಮಾಡುತ್ತಿರುವ ಅರೋಪಗಳು,  ಸ್ವಪಕ್ಷದವರೇ ನಡೆಸುತ್ತಿರುವ ಪಿತೂರಿ ಷಡ್ಯಂತ್ರಗಳು ಕಾಣಿಸತೊಡಗಿದವು.  ಒಂದೊಂದೆ ಆಕೃತಿಗಳು ಸ್ಪಷ್ಟವಾಗುತ್ತ, ಅವಳ ಕುಂಕುಮದ ಹಣೆಯ ಬೊಟ್ಟಿನಿಂದ ಹೊರಕ್ಕೆ ಜಿಗಿದು ನರ್ತಿಸುತ್ತಿರುವಂತೆ ಕಂಡು ನಾಯಕರು ಸಂಪೂರ್ಣವಾಗಿ ಬೆವರಿ ಹೋದರು. ಹಾಗೆ ಆಕೆಯನ್ನು ತೊಡೆಯಿಂದ ಪಕ್ಕಕ್ಕೆ ತಳ್ಳಿ, ಅಲ್ಲಿಯೇ ಟೀಪಾಯ್ ಮೇಲಿದ್ದ ಮಗ್ಗಿನಿಂದ ನೀರನ್ನು ಗಟ ಗಟನೇ ಕುಡಿದರು. ಉಳಿದ ನೀರನ್ನು ತಲೆಯ ಮೇಲೆ ಚಲ್ಲಿಕೊಂಡು ತಾವೇ ತಲೆಯನ್ನು ತಟ್ಟಿಕೊಳ್ಳತೊಡಗಿದರು. 
ಎಲ್ಲ ಕಳ್ಳ ಸೂಳೇ ಮಕ್ಕಳು. ಷಡ್ಯಂತ್ರ ರೂಪುಸ್ತಾರೆ, ಏನ್ ಬೇಕದರೂ ಮಾಡಲಿ ನಾನು ಕೈ ಚೆಲ್ಲಿ ಕೂಡ್ರ ಮಗ ಅಲ್ಲ.. ಇವರಿಗೆ ಒಂದು ಗತಿ ಕಾಣಸ್ತೀನಿ ಎಂದವರೇ ಪಕ್ಕದಲ್ಲಿನ ಗೋಡೆಗೆ ಹೋಗಿ ತಲೆ ಚಚ್ಚಿಕೊಳ್ಳತೊಡಗಿದರು. ನಾಯಕರ ಈ ಅವತಾರವನ್ನು ಕಂದು ಬೆದರಿದ ಮೇಡಮ್ ಶ್ರೀನಿನಾಸ, ಶ್ರೀನಿವಾಸ ಓಡಿ ಬಾರೋ ಇವರು ತಲೆ ಒಡಕ್‍ಂಡ್ ಸತ್ತೇ ಹೋಗ್ತಾರೆ ಎಂದು ಕೂಗತೊಡಗಿದರು.
ಇದಕ್ಕೆ ಕಾದಿದ್ದವನಂತೆ ಅಪ್ತ ಸಹಾಯಕ ಶ್ರೀನಿವಾಸ ಹೆದರ್ ಬೇಡಿ ಮೇಡಮ್ ಎಂದು ಅವರಿಗೆ ಸಮಾಧಾನ ಹೇಳಿ ಬನ್ನಿ ಸಾರ್ ಎಂದು ನಾಯಕರನ್ನು ಕರೆದುಕೊಂಡು ಬಂದು ಮಂಚದ ಮೇಲೆ ಕೂಡ್ರಿಸಿದ. ಸಾರ್ ಸ್ವಲ್ಪ ಔಷಧ ತಗಳ್ಳಿ ಎಲ್ಲ ಸರಿ ಹೋಗುತ್ತೆ ಎಂದು ಒಂದು ಗ್ಲಾಸಿಗೆ ವಿಸ್ಕಿಯನ್ನು ಬಗ್ಗಿಸಿ ಅದಕ್ಕೆ ಅರ್ಧದಷ್ಟು ನೀರನ್ನು ಬೆರಸಿ ನೀಡಿದ.
ನಾಯಕರು ಶಿವ ಶಿವ ಕಾಪಾಡು ತಂದೆ ಎಂದು ವಿಸ್ಕಿಯನ್ನು  ಇಳಿಸತೊಡಗಿದರು.

ನಾಯಕರಿಗೆ ಆಇದು ರೌಂಡ್ ವಿಸ್ಕಿ ಇಳಿಸಿದರೂ ನಿದ್ರೆ ಹತ್ತಿರವೂ ಸುಳಿಯಲಿಲ್ಲ.  ಪಕ್ಕದಲ್ಲಿ ಇದ್ದವಳು ತನ್ನ ಮಂಗಾಟವನ್ನೂ ಮುಂದುವರಿಸಿದರೂ ಯಾಕೋ ಅವಳು ಬೇಕು ಎಂದು ಅನ್ನಿಸಲಿಲ್ಲ.  ಅವಳ ಹಣೆಯ ಮೇಲಿನ ಕುಂಕುಮ ಯಾಕೋ ತನ್ನನ್ನು ಹೆದರಿಸುತ್ತಿರುವಂತೆ,  ಆ ಕುಂಕುಮದಿಂದ ಹೊರಕ್ಕೆ ಬರುವ ಚಿತ್ರ ವಿಚಿತ್ರ ಚಿತ್ರಗಳು ತನ್ನನ್ನೇ ಬಲಿ ತೆಗೆದುಕೊಳ್ಳುವಂತೆ ಅವರಿಗೆ ಅನ್ನಿಸತೊಡಗಿತು. 
ಯಾಕೋ ಈ ರಾಜಕಾರಣ ಎನ್ನುವುದು ಒಂದು ಚಕ್ರವ್ಯೂಹವಾಗಿ ತನ್ನನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂದು ಅನ್ನಿಸದೇ ಇರಲಿಲ್ಲ.  ತಾವು ರಾಜಕಾರಣಕ್ಕೆ ಬಂದ ದಿನಗಳು ನಾಯಕರ ಚಿತ್ತ ಬಿತ್ತಿಯಲ್ಲಿ ಮೂಡತೊಡಗಿತು. 
 ಮಲೆನಾಡ ಜಿಲ್ಲೆಯ ಆ ತಾಲೂಕು ಕೇಂದ್ರದಲ್ಲಿ ತಾವು ರೈತ ಚಳವಳಿಯನ್ನು ಕಟ್ಟಿದ್ದು ಆಗ ಅಲ್ಲಿನ ಜನ ತಮ್ಮನ್ನು ಪ್ರೀತಿಸಿದ ರೀತಿ, ಎಲ್ಲವೂ ನೆನಪಾಯಿತು. ಆಗ ಇದ್ದುದು ಆ ತಾಲೂಕಾ ಕೇಂದ್ರದ ಬಡಾವಣೆಯೊಂದರ ಸಣ್ಣ ಮನೆಯೊಂದರಲ್ಲಿ. ಆ ಮನೆಯಿಂದ ಒಬ್ಬ ಒಳಕ್ಕೆ ಬಂದರೆ ಇಬ್ಬರು ಹೊರಕ್ಕೆ ಹೋಗಬೇಕಾದ ಸ್ಥಿತಿ.  ಆಗಲೂ ಬೆಳಗಿನಿಂದಲೂ ಮನೆಯಲ್ಲಿ ಜನವೋ ಜನ. ಬಂದವರು ಮನೆಯ ಹೊರಗೆ ನಿಂತಿದ್ದರೂ ಸರಸ್ವತಿ ಅವರಿಗೆಲ್ಲ ಒಂದು ಕಫ್ ಕಾಫಿ ಕೊಡುವುದನ್ನು ಮರೆಯುತ್ತಿರಲಿಲ್ಲ.  ಅಂತಹ ಆದರಾತಿಥ್ಯ ಆಕೆಯದು. ಮನೆಗೆ ಬಂದವರ ಕಷ್ಟ ಸುಖ ವಿಚಾರಿಸಿ ಅವರಿಗೆ ತನ್ನ ಕೈಲಾದ ಸಹಾಯ ಮಾಡುವುದನ್ನು ಅವಳು ಮರೆಯುತ್ತಿರಲಿಲ್ಲ. ಆಕೆಯ ತವರು ಮನೆಯವರು ಸ್ವಲ್ಪ ಮಟ್ಟಿನ ಸ್ಥಿತಿವಂತರಾಗಿದ್ದರಿಂದ ಎಷ್ಟೋ ಸಲ ನನಗೆ ಗೊತ್ತಾಗದಂತೆ ಅಲ್ಲಿಂದಲೇ ಹಣ ತಂದು ಸಂಸಾರ ನಡೆಸ್ತಾ ಇದ್ದಳು. ಆದರೆ ಒಂದು ದಿನವೂ ಮನೆಯಲ್ಲಿ ಸಾಮಾನು ತರುವುದಕ್ಕೂ ಹಣ ಇಲ್ಲ ಎಂದು ಹೇಳಿದವಳಲ್ಲ. ಆಗಲೇ ನಡೆದಿದ್ದು ಪುರ ಸಭೆಯ ಚುನಾವಣೆ. ಆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಹಣ ತರುವುದಕ್ಕಾಗಿ ಗುತ್ತಿಗೆದಾರ ನಾಗಪ್ಪನ ಮನೆಗೆ ಹೋಗಿದ್ದು.. ಆತ ತಿರುಗಿ ಮಾತನಾಡದೇ 10 ಲಕ್ಷ ರೂಪಾಯಿಯನ್ನು ನೀಡಿಯೇ ಬಿಟ್ಟ. ಆ ಹಣದನ್ನು ಮನೆಗೆ ತಂದಾಗ ತನ್ನನ್ನು ಅಪರಿಚತನಂತೆ ಮೊದಲ ಬಾರಿಗೆ ನೋಡಿದಳಲ್ಲ ಸರಸ್ವತಿ. ಇದೆಲ್ಲ ಬೇಕಿತ್ತ ಅಂತ ಒಂದು ಸಲ ಕೇಳಿದವಳು ಮತ್ತೆ ಮಾತನಾಡಲಿಲ್ಲ. ಈ ಹಣದಲ್ಲಿ ಸ್ವಲ್ಪ ಹಣವನ್ನು ಬೇರೆ ತೆಗೆದಿಟ್ಟಿ ಮನೆಯ ಕರ್ಚಿಗೆ ಬಳಸು ಎಂದಾಗ  ಮುಖಕ್ಕೆ ಹೊಡದಂತೆ ಮಾತನಾಡಿ ಬಿಟ್ಟಳಲ್ಲ/
ಈ ಅನ್ಯಾಯದ ಹಣವನ್ನು ನಾನು ಮನೆಯ ಕರ್ಚಿಗೆ ಬಳಸೋದಿಲ್ಲ/ ಹಾಗೇನಾದರೂ ಮಾಡಿದರೆ ಮಕ್ಕಳು ನರಕಕ್ಕೆ ಹೋಗ್ತವೆ. ಆನ್ಮ ಜನ್ಮಾಂತರದಲ್ಲೂ  ಈ ಪಾಪ ಹೋಗೋದಿಲ್ಲ. ಎಂದು ಖಡಕ್ ಆಗಿ ಹೇಳಿದವಳು ಕೊಟ್ಟ ಹಣ ತೆಗೆದುಕೊಳ್ಳಲಿಲ್ಲ. ಆವತ್ತೆ ಅನ್ನಿಸುತ್ತೆ. ಮೊದಲ ಬಾರಿ ಅವಳ ಮೇಲೆ ಕೈ ಮಾಡಿದ್ದು. ಕೆನ್ನೆಯ ಮೇಲೆ ಐದು ಬೆರಳು ಮೂಡಿದರೂ ಆಕೆ ತುಟಿ ಪಿಟಕ್ ಅನ್ನಲಿಲ್ಲ. 
ಯಾಕೋ ಇವತ್ತು ಈ ಸರಿ ರಾತ್ರಿಯಲ್ಲಿ ಅವಳು ನೆನಪಗ್ತಾಳೆ. ಅವಳು ಹೇಳಿದ ಮಾತನ್ನು ಕೇಳಿದರೆ ಇವತ್ತು ಈ ಸ್ಥಿತಿಗೆ ಸಿಕ್ತಾ ಇರಲಿಲ್ಲ. ಆದರೆ ಬದುಕಿನಲ್ಲಿನ ಮಹತ್ವಾಕಾಂಕ್ಷೆ ಹೀಗೆಲ್ಲ ಮಾಡಿಸುತ್ತೆ. ರಾಜಕಾರಣದಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಬೇಕು ಎಂದುಕೊಂಡವನಿಗೆ ಇದೆಲ್ಲ ಅಂತಹ ಮುಖ್ಯ ಅಂತ ಅನ್ನಿಸಲೇ ಇಲ್ಲ.  ಹ್
ಆಗಲೇ ಬೆಳಗು ಆಗ್ತಾ ಇತ್ತು. ನಾಯಕರು ತನ್ನ ಪಕ್ಕ ಮಲಗಿದವಳನ್ನು ನೋಡಿದರು. ಯಾಕೋ ಅವಳು ಅಸಹ್ಯ ಅನ್ನಿಸತೊಡಗಿತು. ಇವಳ ಜೊತೆಗೆ ನಾನು ಸಂಬಂಧ ಇಟ್ಟುಕೊಂಡಿದ್ದು ಅನ್ನಿಸಿ ಬೇಸರವಾಯಿತು. ಇವಳ ಸಲುವಾಗಿ ನಾನು ಎಷ್ಟೆಲ್ಲ ಮಾಡಿದೆ. ರಾಜಕೀಯವಾಗಿ ಸ್ಥಾನ ಮಾನ ನೀಡಿದ್ದಾಯಿತು.  ಅಧಿಕಾರ ಅಂತಸ್ತು ಎಲ್ಲವೂ ಬಂತು. ಆದರೂ ಈಕೆಯ ವರ್ತನೆಯಲ್ಲಿ ಬದಲಾವಣೆ ಆಗಲಿಲ್ಲ. ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಅಲ್ಲಿಂದ ರಾಜಧಾನಿಗೆ ಬಂದರೂ ಒಂಚೂರು ಬದಲಾವಣೆ ಇಲ್ಲ.  ಯಾವಾಗ ಬೇಕಾದರೂ ಸೀರೆ ಸೆರಗು ಸರಿಸಲು ರೆಡಿ ಎಂಬಂತೆ ವರ್ತಿಸ್ತಾಳೆ. ಇದೆಲ್ಲ ಹೋಗಲಿ ಎಂದು ಕೊಂಡರೆ ಸಂಪುಟ ಸಹೋದ್ಯೋಗಿಗಳ ಜೊತೆ ಅಧಿಕಾರಿಗಳ ಜೊತೆ ನನ್ನ ಮತ್ತು ಅಕೆಯ ಸಂಬಂಧವನ್ನು ಸೂಕ್ಷ್ನವಾಗಿ ಹೇಳ್ತಾ ಅಧಿಕಾರ ಚಲಯಿಸ್ತಾಳೆ. ಅವಳು ಒಂಚೂರು ಮುಜುಗರ್ ಆಗೋದಿಲ್ಲ. 
ಹಡಬೆ ಮುಂಡೆ ಎಂದು ಬೈದುಕೊಂಡ ನಾಯಕರು, ಎನೋ ತೀರ್ಮಾನಿಸಿದಂತೆ ಹಾಸಿಗೆಯಿಂದ ಎದ್ದು ಬಾಥ್ ರೂಮಿನತ್ತ ನಡೆದರು. ಮಲ ವಿಸರ್ಜನೆ ಸರಾಗವಾಗಿ ಆಗಲಿಲ್ಲ. ಊ ಊ ಅಂತ ಉಸಿರಿದರೆ, ಮಲ ಹೊರಕ್ಕೆ ಬರುವುದಕ್ಕೆ ಬದಲಾಗಿ ಬಾಂಬ್ ಸಿಡಿಸಿದಂತ ಶಬ್ದ ಹೊರಕ್ಕೆ ಬರುತ್ತದೆ. ನಿಮಗೆ ಮಲ ಬದ್ಧತೆ ಇದೆ ಹೆಚ್ಚು ಕುಡಿದರೆ ಮಲ ಸಾಫ ಆಗೋದಿಲ್ಲ ಅಂತ ಡಾಕ್ಟರು ಹಲವು ಬಾರಿ ಹೇಳಿ ಆಗಿದೆ. ಆದರೆ ಸೂಳೆ ಮಗಂದು  ರಾತ್ರಿ ಆದರೆ ನಾಲ್ಕು ಪೆಗ್ ಇಳಿಸದ ಹೊರರು ನಿದ್ರೆ ಬರೋದಿಲ್ಲ.  ಜಗತ್ತಿನಲ್ಲಿ ಈಗ ಯಾವ ರೀತಿಯ ಬದ್ಧತೆ ಇಲ್ಲದಿದ್ದರೂ ಈ ಮಲ ಬದ್ಧತೆ ಮಾತ್ರ ಇದೆ ಅನ್ನಿಸಿ ನಾಯಕರಿಗೆ ಈ ಸ್ಥಿತಿಯಲ್ಲೂ ಸಣ್ಣಗೆ ನಗು ಬಂತು.
ಎಷ್ಟೇ ಪ್ರಯತ್ನ ಪಟ್ಟರೂ ನಾಯಕರಿಗೆ ಮಲ ಸಾಫ್ ಆಗಲಿಲ್ಲ. ಸರಿ ಅಂತಾ ಹಾಗೆಯೇ ಎದ್ದು ಬಂದು ಬಟ್ಟೆ ಧರಿಸಿ ಹೊರದೋದಕ್ಕೆ ಸಿದ್ಧವಗ ತೊಡಗಿದರು.  ಇನ್ನೂ ಹಾಸಿಗೆಯಲ್ಲಿ ಹೊದ್ದು ಮಲಗಿದವಳನ್ನು ಎಬ್ಬಿಸಲು ಮನಸ್ಸಾಗಲಿಲ್ಲ. ಆಕೆಯನ್ನು ಎಬ್ಬಿಸಲು ಮುಂದಾದರೆ ಮತ್ತೆ ಜೊತೆಗೆ ಬರುವ ಹಠ ಹಿಡಿಯಬಹುದು ಅನ್ನಿಸಿ ಆಕೆಯನ್ನು ಎಬ್ಬಿಸದಿರುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದ ನಾಯಕರು ಅಲ್ಲಿಂದ ಹೊರಟೇ ಬಿಟ್ಟರು.
ಆಗ ಬೆಳಿಗಿನ ಜಾವ ಐದು ಗಂಟೆ ದಾಟಿ ಹೋಗಿತು.  ರಾಜಧಾನಿ ಮೈ  ಕೊಡವಿ ಎದ್ದು ಕುಳಿತು ಎಷ್ಟೋ ಹೊತ್ತಾಗಿತ್ತು. ನಾಯಕರು  ಚುಮು ಚುಮುಗುಡುವ ಬೆಳಗಿನಲ್ಲಿ  ರೇಸಾರ್ಟ್ ನಿಂದ ತಮ್ಮ ಅಧಿಕೃತ ನಿವಾಸದತ್ತ ಹೊರಟಿದ್ದರು. ರಾಜಧಾನಿಯ ರಸ್ತೆಗಳು ಆಗಲೇ ವಾಹನ ಸಂಚಾರದಿಂದ ಮೈದುಂಬಿಕೊಳ್ಳತೊಡಗಿತ್ತು. 
ತಾವು ಅಧಿಕಾರಕ್ಕೆ ಬಂದ ಮೇಲೆ ಈ ರಸ್ತೆ ಸಂಚಾರವನ್ನು ಸುಗಮಗೊಳಿಸುವುದಕ್ಕಾಗಿ ಕೈಗೊಂಡ ಯೋಜನೆಗಳು ಅವರಿಗೆ ನೆನಪಾಯಿತು. ಕನಿಷ್ಠ 18 ಮೇಲ್ಸೇತುವೆಗಳ ನಿರ್ಮಾಣ ಮಾಡಿದ್ದು, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿದ್ದು.. ಒಂದೇ ಎರಡೇ.. ಆದರೆ ನನ್ನ ಈ ಆಭಿವೃದ್ಧಿ ಯೋಜನೆಗಳಿಗೆ ಸಿಗಬೇಕಾದ ಪ್ರಚಾರ ಸಿಗಲಿಲ್ಲ.  ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸುದ್ದಿ ಮಾಧ್ಯಮಗಳು ನೀಡಿದ ಪ್ರಚಾರವನ್ನು ಕೆಲಸಕ್ಕೆ ನೀಡಲೇ ಇಲ್ಲ.  ಗ್ಲೋಬಲ್ ಟೆಂಡರ್ ಕರೆದು ಕಾಮಗಾರಿಯನ್ನು ನೀಡಬೇಕಾಗಿತ್ತು ಎಂದು ಪ್ರತಿ ಪಕ್ಷಗಳು ಬೊಬ್ಬೇ ಹೊಡೆದವಲ್ಲ… ಕೆಲವು ನಿರುದ್ಯೋಗಿಗಳು ಉಪವಾಸ ಸತ್ಯಾಗ್ರಹ ನಡೆಸಿ, ಎಲ್ಲ ಭ್ರಷ್ಟಾಚಾರದ ಪ್ರಕರಣಗಳನ್ನು ಸಿ ಬಿ ಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದವು.. ಆದರೆ ಈ ದೇಶದಲ್ಲಿ ಭ್ರಷ್ಟನಲ್ಲದವರು ಯಾರು ? ನಾನೊಬ್ಬನೇ ಇದನ್ನೆಲ್ಲ ಮಾಡಿದ್ದಾ ? ಬೇರೆಯವರು ಮಾಡಿಯೇ ಇಲ್ಲವಾ ಎಂಬ ಪ್ರಶ್ನೆ ಮನಸ್ಸಿನಲ್ಲಿ ಬಂದು ನಾವೆಲ್ಲ ಒಂದೇ ಅನ್ನಿಸಿ ಸಮಾಧಾನ ಪಟ್ಟುಕೊಂಡರು.
ನಾಯಕರು ಅಧಿಕೃತ ನಿವಾಸವನ್ನು ತಲುಪವಷ್ಟರಲ್ಲಿ ಬೆಳಿಗ್ಗೆ ಆರು ಗಂಟೆ. ಮನೆಯ ಎದುರಿಗಿರುವ ಸೆಕ್ಯುರಿಟಿ ಗಾರ್ಡ್ ಗಳು ಪೆÇಲೀಸರು ಬದಲಗಿದ್ದರು. ನೈಟ್ ದ್ಯೂಟಿ ಮುಗಿಸಿದವರು ತಮ್ಮ ಸಮವಸ್ತ್ರಗಳನ್ನು ಕಳಚಿ ಮನೆಗೆ ಹೋಗಲು ಸಿದ್ಧರಾಗುತ್ತಿದ್ದರು. ಇವರನ್ನು ನೋಡಿದಾಗ ತಮ್ಮ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಅವರಿಗೆ ಅನ್ನಿಸಿತು.  ಯಾವ ಸಂದರ್ಭದಲ್ಲಿ ಯಾರು ಎಲ್ಲಿ ನುಸುಳಿ ಏನು ಮಾಡುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಅನ್ನಿಸಿ ಒಂದು ಕ್ಷಣ ಭಯ ಅವರನ್ನು ಆವರಿಸಿತು. 
ಮನೆಯ ಖಾಸಗಿ ಸಿಬ್ಬಂದಿಗಳು ಹೊಸ ದಿನವನ್ನು ಸ್ವಾಗತಿಸಲು ಸಿದ್ಧರಾಗುತ್ತಿದ್ದರು.  ಅವರ ಮುಖಗಳಲ್ಲಿ ಯಾವ ಭಾವನೆ ಇದೆ ಎಂದು ಗುರುತಿಸಲು ಯತ್ನಿಸಿದ ನಾಯಕರು ಒಬ್ಬೊಬ್ಬರ ಮುಖಗಳನ್ನು ದಿಟ್ಟಿಸಿ ನೋಡಿ. ಆ ಮುಖಗಳಲ್ಲಿ ಅನಿಶ್ಚಿತತೆಯಾಗಲಿ ಭಯವಾಗಲಿ ಕಾಣುತ್ತದೆಯೆ ಎಂದು ಓದಿ ನೋಡಲು ಮುಂದಾದರು. ಆದರೆ ಅವರಲ್ಲಿ ಯಾವ ಬದಲಾವಣೆಯೂ ಕಾಣಲಿಲ್ಲ. ಬದುಕಿನ ಮತ್ತೊಂದು ದಿನವನ್ನು ಅವರು ಸ್ವಾಗತಿಸುತ್ತಿದ್ದಾರ್ ಎಂದು ಅನ್ನಿಸಿತು.
ಅಷ್ಟರಲ್ಲಿ ಬೆಳಗಿನ ಜನತಾ ದರ್ಶನಕ್ಕೆ ಬರುವವರು ಬರತೊಡಗಿದ್ದರು.  ಬದುಕಿನ ಎಲ್ಲ ದುಃಖ ದುಮ್ಮಾನಗಳನ್ನು ಹೊತ್ತು ತಂದವರು. ಕೈಯಲ್ಲಿ ಒಂದು ಅರ್ಜಿ. ಇಲ್ಲಿ ಬಂದರೆ ಏನಾದರೂ ಆಗುತ್ತದೆ ಎಂಬ ನಂಬಿಕೆ. ಅವರಲ್ಲಿ ವಿಕಲಾಂಗರಿದ್ದರು. ವಿಧವೆಯರಿದ್ದರು ದಿನಗೂಲಿ ಕಾರ್ಮಿಕರಿದರು. ಆಟೋ ಚಾಲಕರಿದ್ದರು ಹೊಟೆಲ್ ಕಾರ್ಮಿಕರಿದ್ದರು.  ಆದರೆ ಅವರನ್ನು ನೋಡುವ ಮನಸ್ಥಿತಿಯಲ್ಲಿ ನಾಯಕರಿರಲಿಲ್ಲ.
ಆಪ್ತ  ಸಹಾಯಕ ಶ್ರೀನಿವಾಸ್ ಸಿದ್ಧನಾಗಿ ಬಂದಿದ್ದ. ಕೈಯಲ್ಲಿ ನೋಟು ಬುಕ್ ಹಿಡಿದುಕೊಂಡು ಏನು ಹೆಳಿದರೂ ಅದನ್ನು ಬರೆದುಕೊಳ್ಳಲು ಸಿದ್ಧವಾಗಿರುವ ಚಿತ್ರಗುಪ್ತ. ಈತ ಪ್ರತಿ ದಿನ ಹಲವರ ಸಾವನ್ನು, ಇನ್ನು ಕೆಲವರ ಬದುಕನ್ನು ಅವರ ಭವಿಷ್ಯವನ್ನು ಬರೆದು ಬಿಡುತ್ತಾನೆ. ತಮ್ಮ ಮನಸ್ಸಿನಲ್ಲಿ ಇರುವುದು ಮಾತಿನ ರೂಪ ಪಡೆಯುತ್ತಿದ್ದಂತೆ ಅದನ್ನು ವಾಸ್ತವಕ್ಕೆ ಇಳಿಸಿ ಬಿಡುತ್ತಾನೆ. 
ಶ್ರೀನಿವಾಸ, ಇವತ್ತಿನ ಜನತ ದರ್ಶನ ಕ್ಯಾನ್ಸಲ್ ಮಾಡು. ಮತ್ತೆ ಪಕ್ಷದ ಅಧ್ಯಕ್ಷರು ಮಂತ್ರಿಗಳು ಬಂದರೆ ಅವರ ಜೊತೆ ಮೀಟೀಂಗ್ ಫಿಕ್ಸ್ ಮಾಡು ಎಂದರು ನಾಯಕರು.
ಸಾರ್, ಈಗ ಜನತಾ ದರ್ಶನ ಕ್ಯಾನ್ಸಲ್ ಮಾಡೋದು ಸರಿಯಲ್ಲ್ ಎಂದು ಹೇಳಬೇಕು ಎಂದುಕೊಂಡರೂ ಬೇಡ ಎಂದು ಶ್ರೀನಿವಾಸ ಸುಮ್ಮನಾದ. ಸರಿ ಸಾರ್ ಎಂದು ಹೇಳಿದವ ಹೊರಕ್ಕೆ ಹೆಜ್ಜೆ ಹಾಕಿದ. ನಾಯಕರು ಪಕ್ಷದ ಅಧ್ಯಕ್ಷರು ಮತ್ತು ಸಚಿವರು ಬಂದಾಗ ಅವರ ಬಳಿ ಏನು ಹೇಳಬೇಕು ಎಂದು ಯೋಚಿಸತೊಡಗಿದರು. ಈ ಪಕ್ಷದ ಅಧ್ಯಕ್ಷ ನಾರಾಯಣಪ್ಪ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾನೆ. ಅವನಿಗೆ ನಾನು ಈ ಸ್ಥಾನದಿಂದ ನಿರ್ಗಮಿಸುವುದು ಬೇಕು. ಆದರೆ ಎದುರುಗಡೆ ಮಾತ್ರ, ನೀವೆ ನಮ್ಮ ನಾಯಕರು, ನೀವು ಬೇರೆ ಅಲ್ಲ, ಪಕ್ಷ ಬೇರೆ ಅಲ್ಲ ಎಂದು ಪೂಸಿ ಹೊಡೆಯುತ್ತಾನೆ. ಹೊರಗೆ ಹೋದ ತಕ್ಷಣ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ತೊಡೆದು ಹಾಕಲು ಪಕ್ಷ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿಕೆ ನೀಡುತ್ತಾನೆ. ಚಾಂಡಾಲ ನನ್ ಮಗ. ಅವನನ್ನು ಪಕ್ಷದ ಅಧ್ಯಕ್ಶನನ್ನಾಗಿ ಮಾಡುವಾಗ ವಿರೋಧ ವ್ಯಕ್ತ ಪಡಿಸಬೇಕಾಗಿತ್ತು.  ನನ್ನ ಕಟ್ಟಾ ಬೆಂಬಲಿಗರಲ್ಲಿ ಒಬ್ಬರು ಅಧ್ಯಕ್ಷರಾಗಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಅಂದು ಅನ್ನಿಸಿತು. 
ಸಾರ್ ಪಕ್ಷದ ಅಧ್ಯಕ್ಷರು ಬಂದಿದ್ದಾರೆ, À  ಎಂದು ಹೇಳಿದ ಶ್ರೀನಿವಾಸ ಹೇಳಿದ.
ಅವರನ್ನು ಒಳಗೆ ಕಳುಹಿಸು ಎಂದು ಹೇಳಿದ ನಾಯಕರು ಅವರ ಜೊತೆ ಹೇಗೆ ಮಾತನಾಡಬೇಕು ಎಂದು ಯೋಚಿಸತೊಡಗಿದರು. ಈ ಅಧ್ಯಕ್ಷ ರಾಜಕೀಯವಾಗಿ ಬೆಳೆದಿದ್ದು ನನ್ನ ಸಹಾಯದಿಂದ. ಈಗ ದೊಡ್ಡ ನಾಯಕನಂತೆ ಫೆÇೀಸು ನೀಡ್ತಾನೆ. ಕಳ್ಳ ನನ್ನ ಮಗ ಎಂದುಕೊಂಡ ನಾಯಕರು ಇವತ್ತು ಯಾವ ಕಾರಣಕ್ಕೂ ಯಾರ ಮೇಲೂ ಸಿಟ್ಟು ಮಾಡಿಕೊಳ್ಳಬಾರದು ಎಂಬ ಗಟ್ಟಿ ತೀರ್ಮಾನಕ್ಕೆ ಬಂದರು.
ನಮಸ್ಕಾರ ಸಾರ್ ಎನ್ನುತ್ತಲೇ ಒಳಕ್ಕೆ ಬಂದ ಅಧ್ಯಕ್ಷರು ಅಕ್ಕ ಪಕ್ಕ ನೋಡಿ ಯಾರೂ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಂಡು ನಾಯಕರ ಕಾಲು ಮುಟ್ಟಿ ನಮಸ್ಕರಿಸಿದರು.
ನೀವು ನನ್ನ ಗುರುಗಳು. ನಮ್ಮ ಪಕ್ಷದ ನಾಯಕರು. ನಮ್ಮೆಲ್ಲರ ನಾಯಕರು. ನಿಮ್ಮ ಆಶೀರ್ವಾದ ನಮಗೆ ಸದಾ ಬೇಕು ಎಂದು ಪೂರ್ವ ಪೀಥಿಕೆ ಹಾಕಿದರು.
ಈ ಮಾತನ್ನು ಕೇಳಿದ ನಾಯಕರಿಗೆ ಒಳಗೊಳಗೆ ಸಿಟ್ಟು ಬಂತು. ಈ ಮಗನಿಗೆ ಝಾಡಿಸಿ ಒದೆಯಬೇಕು ಎಂದು ಒಮ್ಮೆ ಅನ್ನಿಸಿದರೂ ತಾವು ತಮ್ಮ ತಾಳ್ಮೆ ಕಳೆದುಕೊಳ್ಳಬಾರದು ಎಂದುಕೊಂಡರು. ಆದರೆ ಯಾರಾದರೂ ಕಾಲಿಗೆ ಬಿದ್ದರೆ ಮನಸ್ಸು ಕರಗಿ ನೀರಾಗಿ ಬಿಡುತ್ತದೆ ಸಿಟ್ಟಿ ಕಳ್ಳ ಬೆಕ್ಕಿನಂತೆ ಮಾಯವಾಗಿ ಬಿಡುತ್ತದೆ. ನನ್ ದೌರ್ಬಲ್ಯ ಈತನಿಗೆ ಗೊತ್ತು. ಹೀಗಾಗಿ ಬಂದ ತಕ್ಷಣ ಕಾಲಿಗೆ ಬಿದ್ದು ಬಿಡುತ್ತಾನೆ. ಅದೂ ಖಾಸಗಿಯಾಗಿ ಒಬ್ಬನೆ ಇರುವಾಗ ಕಾಲಿಗೆ ಬೀಳುವ ಈ ಅಧ್ಯಕ್ಷ ಎಲ್ಲರೂ ಇರುವಾಗ ಗತ್ತಿನಿಂದ ಮಾತಾಡ್ತಾನೆ. ಈ ಬಾರಿ ಹೇಗಾದರೂ ಮಾಡಿ ಇವನಿಗೆ ಚಳ್ಳೆ ಹಣ್ಣು ತಿನ್ನಿಸಲೇಬೇಕು ಎಂದು ನಾಯಕರು ತಮ್ಮೊಳಗೆ ಹೇಳಿಕೊಂಡರು.
ತಮ್ಮ ದಧೂತಿ ದೇಹವನ್ನು ಸೋಫಾದ ಮೇಲೆ ನವಿರಾಗಿ ಪ್ರತಿಷ್ಠಾಪನೆ ಮಾಡಿ ದೀರ್ಘವಾಗು ಉಸೆರೆಳೆದುಕೊಂಡ ಅಧ್ಯಕ್ಷರು ಮಾತನಾಡಲು ಪ್ರಾರಂಭಿಸಿದರು.
ಸಾರ್ ಪಕ್ಷ ಮತ್ತು ಸರ್ಕಾರದ ಇಮೇಜ್ ಹೆಚ್ಚಿಸಬೇಕು . ಎಲ್ಲಾ ಕಡೆ ಪಕ್ಷದ ಕಾರ್ಯಕರ್ತರಂತೂ ಮೈ ಮೇಲೆ ಬರ್ತಾರೆ. ನಮ್ಮ ಸಕ್ರಾರ ಅಧಿಕಾರಕ್ಕೆ ಬಂದ ಮೇಲೆ ಏನೋ ಆಗುತ್ತೆ ಅಂದುಕೊಂಡ ಕಾರ್ಯಕರ್ತರಿಗೆ ಈಗ ಭ್ರಮ ನಿರಸನ ಅಗ್ತಾ ಇದೆ. ನಾವು ಅವರನ್ನೆಲ್ಲ ಸಮಾಧಾನ ಪಡಿಸ್ತಾನೇ ಇದೀನಿ. ಆದರೆ ಮಾತು ಕೇಳೋಲ್ಲ ಸಾರ್. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಈ ಪಕ್ಶ್‍ಃಅದಲ್ಲಿ ಬೆಲೆ ಇಲ್ಲದಂತಾಗಿದೆ ಅಂತ ದೂರ್ತಾರೆ ಸಾರ್ ಎಂದರು ಅಧ್ಯಕ್ಷರು. ಹಾಗೆ ತಮ್ಮ ದೊಡ್ಡದಾದ ಮೂಗಿನ ಒಂದು ಹೊಳ್ಳೆಯೊಳಗೆ ಕೈ ಬೆರಳು ಹಾಕಿ ಅದನ್ನು ಗರ ಗರನೇ ತಿರುಗಿಸಿದರು. 
ಒಮ್ಮೆ ಆಕ್ಷಿ ಎಂದು ಸೀನಿ ಸಾರ್ ಈಗ ಈ ಸಮಸ್ಯೆಯನ್ನು ಬಗೆ ಹರಿಸಬೇಕು ಅಂತ ನಮಗೆ ಮಾರ್ಗದರ್ಶನ ಮಾಡಬೇಕು. ಪಕ್ಷವನ್ನ ಸರ್ಕಾರವನ್ನು ಉಳಿಸುವ ಹೊಣೆ ನಿಮ್ಮದು ಎಂದರು. ಈ ಮಾತಿಗೆ ನಾಯಕರ ಏನು ಪ್ರತಿಕ್ರಿಯೆ ನೀಡಬಹುದು ಎಂದು ಕಾಯತೊಡಗಿದರು.
ನಾಯಕರಿಗೆ ಇವರ ಮಾತಿನ ಹಿಂದಿನ ಮರ್ಮ ಅರ್ಥವಾಗದೇ ಇರಲಿಲ್ಲ.  ತನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಂತೆ ಈತ ಸೂಚಿಸುತ್ತಿದ್ದಾನೆ. ನಿನ್ನೆ ತಾನೆ ಹೈಕಮಾಂಡ್ ಜೊತೆ ಮಾತನಾಡಿ ಬಂದಿರುವ ಈತ ಅವರ ಸೂಚನೆಯನ್ನು ಪಡೆದು ಬಂದಿರಬಹುದು ಎಂದು ಅವರಿಗೆ ಅನ್ನಿಸಿತು.
ನೋಡು ಆಧ್ಯಕ್ಷರೆ, ಪಕ್ಷದ ಇಮೇಜ್ ಇಮೇಜ್ ಅಂತಾ ಮಾತಾದ್ತೀರಲ್ಲ, ಇಮೇಜ್ ಗೆ ಏನಾಗಿದೆ ? ಪ್ರತಿ ಪಕ್ಷದವರಿಗೆ ಬೇರೆ ಕೆಲಸ ಇಲ್ಲ . ಅವರು ನಮ್ಮ ಸರ್ಕಾರದ ಮಾನವನ್ನು ತೆಗೆಯಲು ತುದಿಗಾಲ ಮೇಲೆ ನಿಂತಿರ್ತಾರೆ. ಅವರು ಈ ಸರ್ಕಾರ ಸರಿ ಅಲ್ಲ ಅಂತಾ ಅಪಪ್ರಚಾರ ಮಾಡ್ತಾರೆ. ಆದ್ರೆ ನೀವು ? ನಮ್ಮ ಪಕ್ಷದ ಅಧ್ಯಕ್ಷರು. ನೀವೇ ಹೀಗೆ ಮಾತನಾಡಿದರೆ ಹ್ಯಾಗೆ..? ಎಂದರು ನಾಯಕರು. 
ಹಾಗಲ್ಲ, ಸಾರ್, ದಯವಿಟ್ಟು ತಪ್ಪು ತಿಳಿಯಬೇಡಿ. ನಿಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ. ನಿಮ್ಮ ಮಕ್ಕಳ ಮೇಲೆ ಬಂದಿದೆ. ನಿಮ್ಮ ಆಪ್ತ ಸಚಿವರ ಮೇಲೆ ಬಂದಿದೆ.  ತನಿಖಾ ಸಂಸ್ಥೆಗಳು ತನಿಖೆ ನಡೆಸ್ತೀವೆ. ಹೀಗಿರುವಾಗ ನಾನು ನೀವು ಸುಮ್ಮನೆ ಇರೋದಕ್ಕೆ ಸಾಧ್ಯನಾ ? ಯೋಚನೆ ಮಾಡಿ. ಸರ್ಕಾರದ ಇಮೇಜ್ ಹೆಚ್ಚಿಸೋದಕ್ಕೆ ಏನಾದರೂ ಮಾಡಲೇಬೇಕು ಅಲ್ಪರಾ ? ಹಾಗೆ ಪಕ್ಷದ ವರಿಷ್ಠರೂ ಸಹ ಇದೇ ಅಭಿಪ್ರಾಯ ಹೊಂದಿದ್ದಾರೆ.  ನನಗೆ ನಿಮ್ಮ ಜೊತೆ ಮಾತನಾಡುವಂತೆ ಹೇಳಿದ್ದಾರೆ ಎಂದು ಹೇಳಿದ ಅಧ್ಯಕ್ಶರು ನಾಯಕರ ಮುಖವನ್ನೇ ನೋಡತೊಡಗಿದರು.

ಯಾರ್ರಿ, ಹೈಕಮಾಂಡ್. ಈ ರಾಜ್ಯದಲ್ಲಿ ಪಕ್ಷ ಕಟ್ಟಿದವನು ನಾನು. ಎಲ್ಲಿತ್ತರಿ ನಿಮ್ಮ ಪಕ್ಷ ? ಹಳ್ಳಿ ಹಳ್ಳಿ ತಿರುಗಿ ಈ ಪಕ್ಷ ಕಟ್ಟಿದವನು ನಾನು. ಪಕ್ಷವನ್ನು ಬೆಳೆಸಿದವನು ನಾನು. ಅಧಿಕಾರಕ್ಕೆ ತಂದವನು ನಾನು. ಆಗ ಹೈಕಮಾಂಡ್ ಎಲ್ಲಿತ್ತು ? ಪಕ್ಷದ ಇಮೇಜು ಅಂತಾ ಮಾತನಾಡ್ತಾ ನನ್ನನ್ನ ಇಳಿಸೋದಕ್ಕೆ ನೋಡ್ತಿದಿರಾ ? ನಾನು ಅಧಿಕಾರ ಬಿಟ್ಟು ಕೊಡಲ್ಲ ಎನ್ ಮಾಡ್ತೀರಿ ? ನನಗೆ ಶಾಸಕರ ಬೆಂಬಲ ಇದೆ. ನೀವು ನನ್ನ ನಾಯಕತ್ವದ ಬದಲಾವಣೆಗೆ ಮುಂದಾದರೆ ಪಕ್ಷವನ್ನೇ ಹೈಜಾಕ್ ಮಾಡ್ತೀನಿ ಎಂದು ಹೇಳಿದ ನಾಯಕರು ಉಗ್ರ ರೂಪ ತಾಳಿದರು..

(ಮುಂದುವರಿಯುವುದು )

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...