Tuesday, June 21, 2016

ಇದೆಲ್ಲ ನಡೆಯಬಾರದಿತ್ತು. ಆದರೂ ನಡೆದುಹೋಗಿದೆ,


ಇದೆಲ್ಲ ನಡೆಯಬಾರದಿತ್ತು. ಆದರೂ ನಡೆದುಹೋಗಿದೆ, ನಡೆಯುತ್ತಿದೆ. ಅಧಿಕಾರ ರಾಜಕಾರಣ ಜನತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿ ಆಗಿದೆ. ನಮ್ಮ ಜನ ಪ್ರತಿನಿಧಿಗಳು ಅಧಿಕಾರ ತಮ್ಮ ಖಾಸಗಿ ಆಸ್ತಿ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ಅಧಿಕಾರ ಕೈತಪ್ಪಿದಾಗ ತಮ್ಮ ಹಿಂಬಾಲಕರನ್ನು ಬಿಟ್ಟು ಸಾರ್ವಜನಿಕ ಆಸ್ತಿಯನ್ನು ನಾಶ ಪಡಿಸುತ್ತಿದ್ದಾರೆ. ಜನರನ್ನು ಭಾವನಾತ್ಮಕವಾಗಿ ಸೆಳೆಯುವುದಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ. ತಮಗೆ ತಮ್ಮ ಜಾತಿಗೆ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳುವ ಮೂಲಕ ತಮ್ಮ ಜಾತಿ ಮತ್ತು ಸಮುದಾಯದ ಜನರನ್ನು ಎತ್ತಿ ಕಟ್ಟಲು ಯತ್ನಿಸುತ್ತಿದ್ದಾರೆ.
ಜನತಂತ್ರ ವ್ಯವಸ್ಥೆಯನ್ನು ನಂಬುವವರು ಈ ವ್ಯವಸ್ಥೆ ದೇಶದಲ್ಲಿ ಬಲವಾಗಿ ಬೇರೂರಬೇಕು ಎಂದುಕೊಂಡವರು ಮೌನವಾಗಿ ಇದನ್ನೆಲ್ಲ ನೋಡುತ್ತಿದ್ದಾರೆ.
ಅಧಿಕಾರ ಯಾರೊಬ್ಬನ ಮನೆ ಆಸ್ತಿ ಅಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಅಧಿಕಾರ ಜನರ ಕೊಡುಗೆ. ಜನ ನೀಡಿದ ತೀರ್ಪಿನಂತೆ ನಡೆದುಕೊಳ್ಳುವುದು ಜನ ಪ್ರತಿನಿಧಿಗಳ ಕರ್ತವ್ಯ.. ಆದರೆ ಜನತಂತ್ರದ ಗಂಧ ಗಾಳಿ ಇಲ್ಲದವರು, ಜನ ಪ್ರತಿನಿಧಿಗಳಾದರೆ ಇದೆಲ್ಲ ನಡೆದು ಬಿಡುತ್ತದೆ.ಕಳೆದ ಮೂರು ನಾಲ್ಕು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವುದು ಇದೇ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳ ನಂತರ ತಮ್ಮ ಸಂಪುಟವನ್ನು ಪುನಾ ರಚನೆ ಮಾಡುವ ನಿರ್ಧಾರ ಕೈಗೊಂಡರು. ೧೪ ಸಚಿವರನ್ನು ಕೈ ಬಿಟ್ಟು ಹೊಸದಾಗಿ ೧೩ ಜನರನ್ನು ಸೇರಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ಇದು ಅವರ ಪರಮಾಧಿಕಾರವಾಗಿತ್ತು.
ಆದರೆ ಸಂಪುಟ ಪುನಾರಚನೆ ಅಂತಹ ಸುಲಭದ ಕೆಲಸವಾಗಿರಲಿಲ್ಲ. ಪಕ್ಷದ ಹಲವು ನಾಯಕರು ಇದಕ್ಕೆ ಅಡ್ಡಗಾಲು ಹಾಕಿದರು. ತಮ್ಮ ತಮ್ಮ ಬೆಂಬಲಿಗರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಯತ್ನ ನಡೆಸಿದರು. ಪಕ್ಷದ ವರಿಷ್ಠರ ಮೇಲೆ ಒತ್ತದ ಹಾಕಿದರು. ಮೂರು ದಿನಗಳ ಕಾಲ ದೆಹಲಿಯಲ್ಲಿ ನಡೆದಿದ್ದು ನಾಟಕವೇ. ಸಂಪುಟದಿಂದ ಬಿಡುವವರು ಮತ್ತೆ ತೆಗೆದುಕೊಳ್ಳುವವರ ಪಟ್ಟಿಯನ್ನು ಮುಖ್ಯಮಂತ್ರಿಗಳು ಒಯ್ದಿದ್ದರು. ಆದರೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಎಲ್ಲರ ಜೊತೆ ಮಾತನಾಡಿ ಒಮ್ಮತದ ಪಟ್ಟಿಯನ್ನು ಸಿದ್ದಪಡಿಸುವಂತೆ ಸೂಚಿಸಿ ಬಿಟ್ಟರು. ಹೀಗಾಗಿ ಮುಖ್ಯಮಂತ್ರಿಗಳು ಲೋಕಸಭೆಯ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ರಾಜ್ಯದ ಉಸ್ತುವಾರಿ ದಿಗ್ವಿಜಯ್ ಸಿಂಗ್ ಮತ್ತು ಕರ್ನಾಟಕದ ಪ್ರದೇಶ 
ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಗೄಹ ಸಚಿವ ಡಾ. ಪರಮೇಶ್ವರ್ ಜೊತೆ ಇನ್ನೊಂದು ಸುತ್ತು ಮಾತುಕತೆ ನಡೆಸಬೇಕಾಯಿತು.
ಆಗ ಆನ್ನಿಸಿದ್ದು ಕಾಂಗ್ರೆಸ್ ತನ್ನ ಮೂಲಬೂತ ಗುಣಧರ್ಮದಿಂದ ಹೊರಕ್ಕೆ ಬಂದಿಲ್ಲ ಎಂಬುದೇ. ಯಾವುದೇ ರಾಜ್ಯ ಮಟ್ಟದ ನಾಯಕರು ಒಂದು ಹಂತವನ್ನು ಮೀರಿ ಬೆಳೆಯದಂತೆ ತಡೆಯುವ ಕಾಂಗ್ರೆಸ್ ವರಿಷ್ಠರು ಅದೇ ದಾರಿಯನ್ನು ಈಗಲೂ ಅನುಸರಿಸುತ್ತಿದ್ದಾರೆ ಎಂದು ಅನ್ನಿಸಿತ್ತು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಎಲ್ಲವೂ ಬದಲಾಗಿತ್ತು.  ಕಾಂಗ್ರೆಸ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಿದ್ದರಾಮಯ್ಯನವರಿಗೆ ಸಂಪುಟ ವಿಸ್ತರಣೆಯ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲು ತೀರ್ಮಾನಿಸಿ ಬಿಟ್ಟಿದ್ದರು. ಕಾಂಗ್ರೆಸ್ ಮಟ್ಟಿಗೆ ಇದು ಮಹತ್ವದ ಬದಲಾವಣೆ ಆಗಿತ್ತು. ಮಗುವನ್ನು ಚಿವುಟಿ ತೊಟ್ಟಿಲು ತೂಗಿವ ಕಾಂಗ್ರೆಸ್ ವರುಷ್ಷರು ಬದಲಾಗಿದ್ದರು. ಪ್ರಾಯಶಃ ಇದು ಅವರಿಗೆ ಅನಿವಾರ್ಯವೂ ಆಗಿತ್ತು. ಯಾಕೆಂದರೆ ಸಿದ್ದರಾಮಯ್ಯ ಬಗ್ಗಿ ನಿಲ್ಲುವ ಮನಸ್ಥಿತಿಯವರಲ್ಲ ಎಂಬ ಅರಿವೂ ಪಕ್ಷದ ವರಿಷ್ಠರಿಗೆ ಇತ್ತು. ದೇಶದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವ ಇನ್ನೊಂದು ರಾಜ್ಯವನ್ನು ಕಳೆದುಕೊಳ್ಳಲು ಪಕ್ಷದ ವರಿಷ್ಠರು ಸಿದ್ದರಿರಲಿಲ್ಲ. ಹೀಗಾಗಿ ಅವರು ಒಂದು ಅರ್ಥದಲ್ಲಿ ಸಿದ್ದರಾಮಯ್ಯನವರಿಗೆ ತಲೆ ಬಾಗಲೇಬೇಕಾಯಿತು. ಸಿದ್ದರಾಮಯ್ಯ ಹಿಡಿದುಕೊಂಡು ಬಂದಿದ್ದ ಪಟ್ಟಿಗೆ ಒಪ್ಪಿಗೆ ನೀಡಲೇಬೇಕಾಯಿತು. ಇಲ್ಲದಿದ್ದರೆ ಮುಖ್ಯಮಂತ್ರಿ ರೆಬಲ್ ಆಗುವ ಅಪಾಯವಿತ್ತು.
ಇದು ಮುಖ್ಯಮಂತ್ರಿಗಳ ಜಯ ಎಂದು ವಿಶ್ಲೇಸಿಸಬಹುದು, ಆದರೆ ಇದಷ್ಟೇ ಅಲ್ಲ. ಕಾಂಗ್ರೆಸ್ ವರಿಷ್ಠರು ಬದಲಾಗಿದ್ದರು ಎಂಬುದು ಬಹಳ ಮುಖ್ಯ. ಪ್ರಾಯಶಃ ಕಾಂಗ್ರೆಸ್ ಹಿರಿಯ ನಾಯಕರು ಇದನ್ನು ನಿರೀಕ್ಷಿಸಿರಲಿಲ್ಲ. ಸಂಪುಟ ಪುನಾ ರಚನೆಯ ಎಳೆದಾಟ ಇನ್ನಷ್ಟು ದಿನ ಮುಂದುವರಿಯುತ್ತದೆ, ಮುಖ್ಯಮಂತ್ರಿಗಳು ಇನ್ನಷ್ಟು ಮೆತ್ತಗಾಗುತ್ತಾರೆ ಎಂದು ಈ ನಾಯಕರು ನಿರೀಕ್ಷಿಸಿದ್ದರು. ಆದರೆ ಹಾಗಾಗಲಿಲ್ಲ. ಮುಖ್ಯಮಂತ್ರಿಗಳು ಪಕ್ಷದ ವರಿಷ್ಟರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಆಶೀರ್ವಾದ ಪಡೆದು ಬೆಂಗಳೂರಿಗೆ ಹಿಂತಿರುಗಿದರು.
ಕಾಂಗ್ರೆಸ್ ಪಕ್ಷದ ಪ್ರಭಾವಿ ಮತ್ತು ಶಕ್ತಿಯುತ ನಾಯಕರಾಗಿ ಬೆಳೆದಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೂ ಬೆಲೆ ಸಿಗಲಿಲ್ಲ. ತಮ್ಮ ಇಬ್ಬರು ಬೆಂಬಲಿಗ ಸಚಿವರಾದ ಖಮರುಲ್ ಇಸ್ಲಾಂ ಮತ್ತು ಬಾಬುರಾವ್ ಚಿಂಚನಸೂರ್ ಅವರನ್ನು ಉಳಿಸಿಕೊಳ್ಳುವುದು ಖರ್ಗೆ ಅವರಿಗೆ ಸಾಧ್ಯವಾಗಲಿಲ್ಲ. ಜೊತೆಗೆ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ ಹೊಸ ರಾಜಕೀಯ ದಾಳವನ್ನು ಮುಖ್ಯಮಂತ್ರಿಗಳು ಉರುಳಿಸಿಬಿಟ್ಟಿದ್ದರು. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಖರ್ಗೆ ಅವರನ್ನು ತಣ್ಣಗೆ ಮಾಡುವ ದಾಳ ಇದಾಗಿತ್ತು. ಖರ್ಗೆ ಅವರ ವಿರುದ್ಧ ಅವರ ಬೆಂಬಲಿಗರನ್ನೇ ಎತ್ತಿ ಕಟ್ಟುವ ದಾಳ.. ಈ ಯೋಜನಾಬದ್ಧ ಕೆಲಸದಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು.. ಖರ್ಗೆ ಕರ್ನಾಟಕದ ರಾಜಕಾರಣದಲ್ಲಿ ಅತಂತ್ರರಾದರು.
ಮಗನನ್ನು ಮಂತ್ರಿ ಮಾಡಬೇಡಿ ಎಂದು ಹೇಳುವ ಸ್ಥಿತಿಯಲ್ಲೂ ಖರ್ಗೆ ಇರಲಿಲ್ಲ. ಬೆಂಬಲಿಗರನ್ನು ಬಿಟ್ಟು ಮಗನನ್ನು ಸಂಪುಟಕ್ಕೆ ತೆಗೆದುಕೊಂಡರೆ ಅದರ ಪರಿಣಾಮ ಆಗುವುದು ತಮ್ಮ ಮೇಲೆ ಎಂಬ ಅರಿವು ಖರ್ಗೆ ಅವರಿಗಿದ್ದರೂ ಅವರು ಅಸಹಾಯಕರಾಗಿ ಬಿಟ್ಟಿದ್ದರು. ಯಾಕೆಂದರೆ ಸೋನಿಯಾ ಮತ್ತು ರಾಹುಲ್ ಗಾಂಧಿ ಪ್ರಿಯಾಂಕ್ ಖರ್ಗೆ ಅವರು ಸಂಪುಟಕ್ಕೆ ಸೇರಲು ಒಪ್ಪಿಗೆ ನೀಡಿಬಿಟ್ಟಿದ್ದರು. ನೆಹರೂ  ಕುಟುಂಬದ ನಿಷ್ಟರಾಗಿರುವ ಖರ್ಗೆ ಈ ತೀರ್ಮಾನವನ್ನು ವಿರೋಧಿಸುವ ಧಾರ್ಷ್ಯವನ್ನು ಪ್ರದರ್ಶಿಸಲಿಲ್ಲ...ಇದರಿಂದಾಗಿ ಖರ್ಗೆ ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಯಿತು.. ಸಂಪುಟದಿಂದ ಹೊರಕ್ಕೆ ಹೋದ ಬಹುತೇಕ ನಾಯಕರು ಖರ್ಗೆ ಅವರನ್ನೇ ಟಾರ್ಗೆಟ್ ಮಾಡಿದರು.. ತಮ್ಮ ಮಗನನ್ನು ಸಚಿವನನ್ನಾಗಿ ಮಾಡುವುದಕ್ಕಾಗಿ ನಮ್ಮನ್ನು ಬಲಿ ಕೊಟ್ಟರು ಎಂದು ದೂರಿದರು... ಸಂಪುಟ ಪುನಾರಚನೆಯಿಂದ ನೊಂದವರೆಲ್ಲರಿಗೆ ಟಾರ್ಗೆಟ್ ಆದವರು ಖರ್ಗೆ..
ಈಗ ಈ ಪುನಾರಚನೆಯ ನಂತರ ಘಟನೆಯನ್ನು ಗಮನಿಸಿ. ಸಚಿವ ಸಂಪುಟದಿಂದ ಹೊರಕ್ಕೆ ಹೋದವರ ಬೆಂಬಲಿಗರು ಪ್ರತಿಭಟನೆ ಮಾಡಿದರು. ಬಸ್ ಗೆ ಬೆಂಕಿ ಹಚ್ಚಿದರು.. ಕಲ್ಲು ತೂರಿದರು. ತಮ್ಮ ಬದುಕೇ ಮುಗಿದು ಹೋಯಿತು ಎಂದು ಅಲವತ್ತುಗೊಂಡರು. ಸಚಿವ ಸ್ಥಾನ ತಮ್ಮ ಜನ್ಮ ಸಿದ್ಧ ಹಕ್ಕು ಎಂಬಂತೆ ವರ್ತಿಸತೊಡಗಿದರು.
ವಯೋವೃದ್ಧ ನಾಯಕ ಕಮರುಲ್ ಇಸ್ಲಾಂ ತಮ್ಮನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವುದು ಕಾಂಗ್ರೆಸ್ ಮುಕ್ತ ಭಾರತದ ಮುನ್ಸೂಚನೆ ಎಂದು ಹೇಳಿದರು. ತಾವೇ ಕಾಂಗ್ರೆಸ್ ಎಂಬಂತೆ ಅವರು ಮಾತನಾಡಿದ್ದು ಹಾಸ್ಯಾಸ್ಪದವಾಗಿ ಕಾಣುತ್ತಿತ್ತು. ಇನ್ನೊಬ್ಬ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ತಮ್ಮ ಮತ್ತು ಮುಖ್ಯಮಂತ್ರಿಗಳ ನಡುವಿನ ಸಂಬಂಧವನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದರು. ಸಿದ್ದರಾಮಯ್ಯ ಅಸಮರ್ಥ ನಾಯಕ ಎಂದು ಅಪ್ಪಣೆ ಕೊಡಿಸಿದರು...
ಖಮರುಲ್ ಇಸ್ಮಾಂ ಅವರಿಗೆ ಮಾತನಾದುವುದು ಕಷ್ಟ.. ನಡೆಯುವಾಗಲೂ ಬೇರೆಯವರ ಹೆಗಲು ಬೇಕು. ವಯೋ ಸಹಜವಾದ ರೋಗಗಳು ಅವರನ್ನು ಆವರಿಸಿವೆ. ಶ್ರೀನಿವಾಸ್ ಪ್ರಸಾದ್ ಅವರಿಗೂ ಆರೋಗ್ಯ ಸರಿಯಿಲ್ಲ.. ಮೂತ್ರಕೋಶದ ಕಸಿ ಮಾಡಿಸಿಕೊಂಡಿದ್ದಾರೆ.. ಅಂಬರೀಷ್ ಅವರ ಆರೋಗ್ಯ ಕೂಡ ಸಂಪೂರ್ಣವಾಗಿ ಸರಿಯಿಲ್ಲ. ಜೊತೆಗೆ ಜವಾಬ್ದಾರಿ ಇಲ್ಲದ ನಾಯಕ ಅವರು. ಶಾಮನೂರು ಶಿವಶಂಕರಪ್ಪ ಅವರು ಎಂಬತ್ತರ ಗಡಿ ದಾಟಿದ್ದಾರೆ. ಆದರೆ ಇವರಲ್ಲಿ ಯಾರೂ ಸಹ ಸಂಪುಟದಿಂದ ಹೊರಕ್ಕೆ ಬರುವುದಕ್ಕೆ ಸಿದ್ದರಿಲ್ಲ.. ಅವರ ಪ್ರಕಾರ ತಮ್ಮ ತಮ್ಮ ಖಾತೆಗಳನ್ನು ಇವರೆಲ್ಲ ತುಂಬಾ ಚೆನ್ನಾಗಿಯೇ ನಿರ್ವಹಿಸಿದ್ದಾರೆ..
ಇವರೆಲ್ಲ ಅಧಿಕಾರ ತಮ್ಮ ಜನ್ಮ ಸಿದ್ಧ ಹ,ಕ್ಕು ಎಂದು ನಂಬಿಕೊಂಡಿರುವಂತಿದೆ.. ತಾವು ಹುಟ್ಟಿರುವುದೇ ಅಧಿಕಾರ ಅನುಭವಿಸುವುದಕ್ಕಾಗಿ ಎಂಬ ಭ್ರಮೆಯಲ್ಲಿ ಇವರೆಲ್ಲ ಇದ್ದಂತಿದೆ. ಹೀಗೆ ಭ್ರಮೆಯಲ್ಲಿ ಬದುಕಲು ಇವರಿಗೆ ಹಕ್ಕಿದೆ. ಆದರೆ ಸಾರ್ವಜನಿಕ ಆಸ್ತಿಯನ್ನು ನಾಶ ಪಡಿಸುವ ಅಧಿಕಾರವನ್ನು ಇವರ ಬೆಂಬಲಿಗರಿಗೆ ನೀಡಿದವರು ಯಾರು ? ಬಸ್ ಗೆ ಬೆಂಕಿ ಹಚ್ಚುವುದು ಅಪರಾಧ ಎಂಬ ಅರಿವು ಇವರಿಗೆ ಬೇಡವೆ ? ತಮ್ಮ ತಮ್ಮ ಬೆಂಬಲಿಗರನ್ನೇ ನಿಯಂತ್ರಣದಲ್ಲಿ ಇಡಲಾರದ ಇವರನ್ನು ನಾಯಕರೆಂದು ಒಪ್ಪಿಕೊಳ್ಳುವುದು ಹೇಗೆ ?
ಶಾಮನೂರು ಶಿವಶಂಕರಪ್ಪ ಅವರ ಮಾತನ್ನು ಕೇಳಿಸಿಕೊಳ್ಳಿ. ನಾನು ಸಚಿವನಾಗಿ ಇನ್ನೊವಾ ಕಾರ್ ನಲ್ಲಿ ಓಡಾಡುತ್ತಿದ್ದೆ. ಇನ್ನು ಮುಂದೆ ನನ್ನ ಬೇಂಜ್ ಕಾರಿನಲ್ಲಿ ಓಡಾಡುತ್ತೇನೆ.. ಇದು ದುರಹಂಕಾರದ ಮಾತಲ್ಲವೆ ? ನಿಮಗೆ ಬೆಂಜ್ ಕಾರಿನಲ್ಲಿ ಓಡಾಡುವಷ್ಟು ಹಣ ಸಂಪತ್ತು ಎಲ್ಲ ಇದೆ ನಿಜ. ಆದರೆ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ ಹೀಗೆ ಮಾತನಾಡುವುದು ಸೌಜನ್ಯವಲ್ಲ ಎಂಬ ತಿಳುವಳಿಕೆ ನಿಮಗೆ ಇರಬೇಕಲ್ಲವೆ ?
ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಜನತಂತ್ರ ವ್ಯವಸ್ಥೆಯ ಬಗ್ಗೆ ಸ್ಪಷ್ಟ ತಿಳುವಳಿಕೆ ಇರಬೇಕು. ಜನ ಪ್ರತಿನಿಧಿಯಾಗಿ ಕೆಲಸ ಮಾಡುವುದು ಜನರ ನಂಬಿಕೆಯ ಮೇಲೆ. ಜನ ನೀಡಿದ ಅಧಿಕಾರ ಅವರಿಗೆ ಮೀಸಲು ಎಂಬ ತಿಳುವಳಿಕೆ ಇರಬೇಕು.. ಒಂದಲ್ಲ ಒಂದು ದಿನ ಅಧಿಕಾರವನ್ನು ಬಿಡಬೇಕಾಗುತ್ತದೆ ಎಂಬುದು ಅವರ ಮನಸ್ಸಿನಲ್ಲಿ ಸದಾ ಜಾಗೃತವಾಗಿರಬೇಕು, ಹಾಗಿದ್ದಾಗ ಮಾತ್ರ ಅಧಿಕಾರ ಬಿಡುವಾಗ ನೋವಾಗುವುದಿಲ್ಲ...ಆದರೆ ಇವರೆಲ್ಲ ಅಧಿಕಾರ ಎನ್ನುವುದು ತಮ್ಮ ಕರ್ತವ್ಯ ಎನ್ನುವುದಕ್ಕೆ ಬದಲಾಗಿ ಇದು ತಮ್ಮ ಹಕ್ಕು ಎಂದುಕೊಂಡಂತಿದೆ. ಇವರ ಬೆಂಬಲಿಗರು ಮತ್ತು ಅಭಿಮಾನಿಗಳೂ ಸಹ ಇದೇ ಮನಸ್ಥಿತಿಯವರು..
ಚಿತ್ರ ನಟ ಅಂಬರೀಷ್ ಅವರನ್ನು ಸಂಪುಟದಿಂದ ಕೈಬಿಟ್ಟ ವಿಚಾರವನ್ನು ನೋಡಿ. ಈ ಬಗ್ಗೆ ಅವರ ಅಭಿಮಾನಿಗಳು ಹುಚ್ಚು ಹುಚ್ಚಾಗಿ ಪ್ರತಿಕ್ರಿಯೆ ನೀಡಿದ್ದನ್ನು ಕ್ಷಮಿಸಿಬಿಡಬಹುದು. ಯಾಕೆಂದರೆ ಅವರೆಲ್ಲ ಅಭಿಮಾನಿಗಳು. ಅಭಿಮಾನ ಎನ್ನುವುದು ನಮ್ಮನ್ನು ವಿವೇಚನಾ ಹೀನರನ್ನಾಗಿ ಮಾಡಿ ಬಿಡುತ್ತದೆ. ಯಾರಿಗೆ ವಿವೇಚನಾ ಶಕ್ತಿ ಇರುತ್ತದೆಯೋ ಅವರು ಅಭಿಮಾನಿಗಳಾಗುವುದು ಸಾಧ್ಯವಿಲ್ಲ...ಆದರೆ ಕನ್ನಡ ಚಿತ್ರರಂಗದ ಪ್ರತಿಕ್ರಿಯೆ ಮಾತ್ರ ಆಶ್ಚರ್ಯವನ್ನು ಉಂಟು ಮಾಡುತ್ತದೆ.
ಅಂಬರೀಷ್ ಅವರನ್ನು ಸಂಪುಟದಿಂದ ಕೈ ಬಿಟ್ಟ ತಕ್ಷಣ ಕನ್ನಡ ಚಿತ್ರರಂಗದ ನಾಯಕರು ಇದು ತಮ್ಮ ವೈಯಕ್ತಿಕ ವಿಚಾರ ಎಂಬಂತೆ ಮಾತನಾಡಲು ಪ್ರಾರಂಭಿಸುತ್ತಾರೆ. ಯಾವುದೇ ಒಂದು ಸರ್ಕಾರದಲ್ಲಿ ಯಾರು ಇರಬೇಕು ಯಾರು ಇರಬಾರದು ಎಂಬುದನ್ನು ಅಧಿಕಾರಕ್ಕೆ ಬಂದ ಪಕ್ಷ ನಿರ್ಧರಿಸುತ್ತದೆ. ಶಾಸಕಾಂಗ ಪಕ್ಷದ ನಾಯಕರು ತಮ್ಮ ಸಂಪುಟದಲ್ಲಿ ಯಾರನ್ನು ಇಟ್ಟುಕೊಳ್ಳಬೇಕು ಎಂದು ನಿರ್ಧರಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕಾರವನ್ನು ಪ್ರಶ್ನಿಸಲು ಇವರು ಯಾರು ?
ಅಂಬರೀಶ್ ಸಚಿವರಾಗಿದ್ದು ಕನ್ನಡ ಚಿತ್ರ ರಂಗದ ಪ್ರತಿನಿಧಿಯಾಗಿ ಅಲ್ಲ. ಅವರೊಬ್ಬ ಸಿನಿಮಾ ನಟ ಕಂ ಕಾಂಗ್ರೆಸ್ ಪಕ್ಷದ ರಾಜಕಾರಣಿ. ಅವರು ಶಾಸಕ ಮತ್ತು ಸಚಿವರಾಗಿದ್ದು ಚಿತ್ರ ನಟ ಎಂದಲ್ಲ. ಅವರು ನಿರ್ವಹಿಸಿದ ವಸತಿ ಖಾತೆ ಕೂಡ ಚಿತ್ರ ರಂಗಕ್ಕೆ ಸಂಬಂಧಿಸಿದ್ದಲ್ಲ...ಹೀಗಿರುವಾಗ ಚಿತ್ರರಂಗಕ್ಕೆ ಏನು ಸಂಬಂಧ ? ಅಂಬರೀಶ್ ಅವರನ್ನು ಸಂಪುಟದಲ್ಲಿ ಮುಂದುವರಿಸದಿದ್ದರೆ ಚಿತ್ರ ರಂಗದ ಬಂದ್ ಮಾಡ್ತೀವಿ ಎಂದು ಹೇಳುತ್ತಿರುವ ಇವರಿಗೆ ಜನ ತಂತ್ರ ವ್ಯವಸ್ಥೆಯ ಬಗ್ಗೆ ತಿಳುವಳಿಕೆ ಇಲ್ಲವೆ...?
ಅಂಬರೀಶ್ ಸಚಿವರಾಗಿ ಮುಂದುವರಿಯಬೇಕೆ ಬೇಡವೇ ಎಂದು ನಿರ್ಧರಿಸುವುದು ಅವರು ಸಚಿವರಾಗಿ ಹೇಗೆ ಕೆಲಸ ಮಾಡಿದ್ದಾರೆ ಎನ್ನುವುದರ ಮೇಲೆ. ಅವರು ಚಿತ್ರರಂಗಕ್ಕೆ ಏನು ಮಾಡಿದ್ದಾರೆ ಎಂಬುದರ ಮೇಲಲ್ಲ. ಅವರು ಚಿತ್ರ ನಟರಾಗಿ ನೂರಾರು ಚಿತ್ರಗಳಲ್ಲಿ ನಟಿಸಿದ್ದು, ಸಾವಿರಾರು ಖಳನಾಯಕರನ್ನು ತೆರೆಯ ಮೇಲೆ ಬಡಿದಿದ್ದು ಅವರು ಸಂಪುಟದಲ್ಲಿ ಮುಂದುವರಿಯುವುದಕ್ಕೆ ಅರ್ಹತೆಯಾಗಲಾರದು. ಅವರು ವಸತಿ ಸಚಿವರಾಗಿ ಹೇಗೆ ಕೆಲಸ ಮಾಡಿದರು ಎಂಬುದು ಮಾತ್ರ ಅವರ ಸಂಪುಟದಲ್ಲಿ ಮುಂದವರಿಯುವುದಕ್ಕೆ ಅಥವಾ ಮುಂದುವರಿಯದಿರುವುದಕ್ಕೆ ಕಾರಣವಾಗಬೇಕು. ಇದೆಲ್ಲ ನಮ್ಮ ಕನ್ನಡ ಚಿತ್ರ ರಂಗದವರಿಗೆ ತಿಳಿದಿರಬೇಕಿತ್ತು. ಪಾಪ ಬಿಡಿ.

ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಂಬರೀಷ್ ತಾವು ಬೇಕಾದಗಲೆಲ್ಲ ಬಿಡುವುದಕ್ಕೆ ಚಪ್ಪಲಿ ಅಲ್ಲ ಅಂದರು. ಅವರು ತಮ್ಮ ಸ್ವಾಭಿಮಾನದ ಪ್ರಶ್ನೆ ಎತ್ತಿದರು. ಇದೆಲ್ಲ ಸರಿ. ಆದರೆ ವಸತಿ ಸಚಿವರಾಗಿ ಮೂರು ವರ್ಷಗಳ ಅವಧಿಯಲ್ಲಿ ಮಾಡಿದ್ದೇನು ಎಂಬುದನ್ನು ಹೇಳಲಿಲ್ಲ. ತಾವು ಅಸಮರ್ಥರಲ್ಲ ಎಂಬುದನ್ನು ಸಾಬೀತು ಪಡಿಸಲು ಯತ್ನಿಸಲಿಲ್ಲ.  ಸಿನಿಮಾ ನಾಯಕನಂತೆ ಡೈಲಾಗ್ ಹೊಡೆದರೆ ಹೊರತೂ ಒಬ್ಬ ರಾಜಕೀಯ ನಾಯಕನಂತೆ ಜನ ಪ್ರತಿನಿಧಿಯಂತೆ ವರ್ತಿಸಲಿಲ್ಲ. ಇದರ ಅರ್ಥ ಒಬ್ಬ ಸಿನಿಮಾ ನಾಯಕನಿಗೂ ರಾಜಕೀಯ ನಾಯಕನಿಗೂ ಇರಬೇಕಾದ ವ್ಯತ್ಯಾಸ ಅವರಿಗೆ ಅರ್ಥವಾಗಲೇ ಇಲ್ಲ. ಒಬ್ಬ ಸಿನಿಮಾ ನಾಯಕ ಜನ ನಾಯಕನಾಗಿ ಬದಲಾಗಲೇ ಇಲ್ಲ.
ಅಂಬರೀಶ್ ಅವರನ್ನು ಸಂಪುಟದಿಂದ ಬಿಟ್ಟ ತಕ್ಷಣ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾರ್ಯಪ್ರವೃತ್ತರಾಗುತ್ತಾರೆ. ಮಾಜಿ ಪ್ರಧಾನಿ ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಅಂಬರೀಶ್ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಾರೆ, ಅವರ್ವಿಗೆ ಸಾಂತ್ವನ ಹೇಳುತ್ತಾರೆ. ಹಾಗೆ ಶ್ರೀನಿವಾಸ್ ಪ್ರಸಾದ್ ಅವರ ಬಗ್ಗೆಯೂ ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ವಿಪರೀತ ಪ್ರೀತಿ ಹುಟ್ಟಿ ಬಿಡುತ್ತದೆ. ಪ್ರಸಾದ್ ಅವರನ್ನು ಭೇಟಿ ಮಾದಿ ಸಾಂತ್ವನ ಹೇಳುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅವರತ್ತ ಗಾಳ ಬೀಸುತ್ತಿರುವುದು ನಿಜ.
ಇಲ್ಲಿ ನಮ್ಮ ಜನತಂತ್ರ ವ್ಯವಸ್ಥೆ ಕುರಿತು ಕೇಳಲೇಬೇಕಾದ ಕೆಲವು ಪ್ರಶ್ನೆಗಳಿವೆ. ಜನತಂತ್ರ ವ್ಯವಸ್ಥೆಯ ಮುಖ್ಯ ಲಕ್ಷಣ ಎಂದರೆ ಅದು ರಾಜಸತ್ತೆಯ ವಿರೋಧ. ಹಾಗೆ ವ್ಯಕ್ತಿ ಪೂಜೆಗೆ ಇಲ್ಲಿ ಅವಕಾಶವಿಲ್ಲ. ಆದರೆ ನಮ್ಮ ಜನತಂತ್ರ ವ್ಯವಸ್ಥೆ ರಾಜಸತ್ತೆಯ ಪಳಯುಳಿಕೆಯಾಗಿಯೇ ಮುಂದುವರಿದಿದೆ. ಇಲ್ಲಿ ನಾಯಕರ ಅಭಿಮಾನಿಗಳಿದ್ದಾರೆ. ನಿಜವಾದ ಜನತಂತ್ರ ಪ್ರೇಮಿಗಳಿಲ್ಲ. ಅಧಿಕಾರ ರಾಜಕಾರಣದ ಎಲ್ಲ ಪಟ್ಟುಗಳನ್ನು ಬಳಸಿಕೊಂಡು ಅಧಿಕಾರವನ್ನು ಸದಾ ಅನುಭವಿಸುವ ಮನಸ್ಥಿತಿಯ ರಾಜಕಾರಣಿಗಳಿದ್ದಾರೆ. ರಾಜನೀತಿಜ್ನರಿಲ್ಲ..
ಜನತಂತ್ರ ವ್ಯವಸ್ಥೆಯ ಯಶಸ್ಸು ರಾಜಕೀಯ ಪಕ್ಷಗಳ ಮೇಲಿದೆ. ಒಂದು ರಾಜಕೀಯ ಪಕ್ಷ ಎಂದರೆ ಅದಕ್ಕೊಂದು ಸಿದ್ದಾಂತ ಇರಬೇಕು ಬದ್ಧತೆ ಇರಬೇಕು. ಒಂದು ರಾಜಕೀಯ ಪಕ್ಷಕ್ಕೂ ಇನ್ನೊಂದು ರಾಜಕೀಯ ಪಕ್ಷಕ್ಕೂ ಸೈದ್ದ್ಧಾಂತಿಕ ವ್ಯತ್ಯಾಸಗಳಿರಬೇಕು. ನೀತಿ ನಿರೂಪಣೆಯಲ್ಲಿ ವ್ಯತ್ಯಾಸ ಇರಬೇಕು. ನಮ್ಮಲ್ಲಿ ನಿಜವಾದ ಅರ್ಥದ ರಾಜಕೀಯ ಪಕ್ಷಗಳಿಲ್ಲ. ಇಲ್ಲಿರುವುದು ಬಾಲಬಡುಕ ರಾಜಕೀಯ ಗುಂಪುಗಳು. ಈ ಗುಂಪುಗಳಲ್ಲಿ ಇರುವ ಜನ ಅಂಗಿಯನ್ನು ಬದಲಿಸುವ ಹಾಗೆ ನಾಯಕರನ್ನು ಪಕ್ಷವನ್ನು ಬದಲಿಸುತ್ತಾರೆ. ಯಾಕೆಂದರೆ ಇವರೆಲ್ಲರ ರಾಜಕಾರಣಕ್ಕೆ ಅಧಿಕಾರವೇ ಗುರಿ. ಸಿದ್ಧಾಂತವಲ್ಲ.

ನನಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಎಲ್ಲ ಪಕ್ಷಗಳು ವ್ಯಕ್ತಿ ಮತ್ತು ಅಧಿಕಾರ ಕೇಂದ್ರಿತ ರಾಜಕಾರಣದಲ್ಲಿ ತೊಡಗಿವೆ. ಹೀಗಾಗಿ ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ, ದೇವೇಗೌಡ, ಯಡಿಯೂರಪ್ಪ ಕಾಣುತ್ತಾರೆ. ಅವರ ನೆರಳಿನ ಹಿಂದೆ ಎಲ್ಲೋ ರಾಜಕೀಯ ಪಕ್ಷಗಳು ಕಳೆದುಹೋಗಿವೆ. ಹೀಗಾಗಿ ಇಲ್ಲಿ ನಿಜವಾದ ಜನತಂತ್ರ ಕನಸು ಮಾತ್ರ....

No comments:

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...