Monday, June 27, 2016

ಇತಿಹಾಸ ಪ್ರಜ್ನೆ ಇಲ್ಲದವರು ಇತಿಹಾಸ ಸೃಷ್ಟಿಸಲಾರರು, ವರ್ತಮಾನವನ್ನು ಮುನ್ನಡೆಸಲಾರರು...!

ಕಳೆದ ಎರಡು ದಿನಗಳಿಂದ ಅದೇ ಸುದ್ದಿ. ಸುದ್ದಿ ವಾಹಿನಿಗಳಲ್ಲಿ ನೇರ ಪ್ರಸಾರ. ನನ್ನ ಕೆಲವು ಸ್ನೇಹಿತರು ನನ್ನನ್ನು ಕೇಳಿದರು. ಇದು ಜಾಸ್ತಿ ಆಗಿಲ್ಲವಾ ? ಮಾಜಿ ರಾಜರ ಮನೆಯಲ್ಲಿ ಮದುವೆ ನಡೆದರೆ ಅದು ಅಂತಾ ಮಹತ್ವದ ಸುದ್ದಿಯಾ ? ನಿಮಗೆ ಬೇರೆ ಸುದ್ದಿ ಇಲ್ಲವಾ ?
ನಾನು ಅವರ ಪ್ರಶೆಗೆ ಉತ್ತರ ನೀಡಲಿಲ್ಲ.
ಸಾಮಾಜಿಕ ಜಾಲ ತಾಣಗಳಲ್ಲೂ ಈ ಬಗ್ಗೆ ಚರ್ಚೆವ್ ನಡೆಯುತ್ತಿದೆ. ಮಾಧ್ಯಮಗಳ ಬಗ್ಗೆ ಸದಾ ಟೀಕಿಸುವವರು ಈ ಬಗ್ಗೆಯೂ ಟೀಕೆ ಮಾಡುತ್ತಿದ್ದಾರೆ. ಎಲೆಕ್ಟಾನಿಕ ಮಾಧ್ಯಮಗಳನ್ನು ಟೀಕಿಸುತ್ತಿದ್ದಾರೆ. ಜನತಂತ್ರ ವ್ಯವಸ್ಥೆಯಲ್ಲಿ ಏನಿದು ಹುಚ್ಚಾಟ ಎಂದೂ ಕೇಳುತ್ತಿದ್ದಾರೆ..
ಇದೆಲ್ಲ ಸರಿ. ನಮ್ಮ ಸಂಸದೀಯ ವ್ಯವಸ್ಥೆಗೆ ಇಂಗ್ಲಂಡಿನ ಸಂಸದೀಯ ವ್ಯವಸ್ಥೆಯೇ ಆಧಾರ. ಇಂಗ್ಲಂಡಿನಲ್ಲಿ ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್ ಕಾಮನ್ಸ್ ಇರುವಂತೆ ನಮ್ಮಲ್ಲಿ ರಾಜ್ಯ ಸಭೆ ಮತ್ತು ಲೋಕಸಭೆಗಳಿವೆ..ನಮ್ಮದು ಅಮೇರಿಕದಂತೆ ಅಧ್ಯಕ್ಷೀಯ ಮಾಧರಿಯ ಪ್ರಜಾ ಸತ್ತೆಯಲ್ಲ.. ನಮಗೇನಿದ್ದರೂ ಇಂಗ್ಲಂಡ್ ಮಾಧರಿ.. ಇಂಗ್ಲಂಡಿನಲ್ಲಿ ರಾಣಿ ಇದ್ದಾಳೆ. ರಾಜಮನೆತನ ಇದೆ. ಈ ರಾಜಮನೆತನದ ಆಗುಹೋಗುಗಳ ಬಗ್ಗೆ ವರದಿ ಮಾಡುವ ಟಾಬ್ಲಾಯಡ್ ಗಳಿವೆ. ಇವತ್ತು ರಾಣಿ ಏನು ಮಾಡಿದಳು ? ರಾಜಮನೆತನದವರು ಎಲ್ಲಿಗೆ ಶಾಪಿಂಗ್ ಗೆ ಹೋದರು ? ಅರಮನೆಯಲ್ಲಿನ ಪ್ರೇಮ ಪ್ರಕರಣಗಳು... ಹೀಗೆ ಪ್ರತಿ ಸಂಚಿಕೆಯಲ್ಲೂ ಇಂತಹ ಸುದ್ದಿಗಳಿರುತ್ತವೆ.. ಇಂಗ್ಲೀಷರಿಗೆ ತಮ್ಮ ರಾಜ ಮನೆತನದ ಬಗ್ಗೆ ಅಪಾರ ಗೌರವ.  ತಮ್ಮ ಇತಿಹಾಸವನ್ನು ನೆನಪು ಮಾದಿಕೊಳ್ಳುವುದಕ್ಕಾಗಿ ಅಲ್ಲಿ ರಾಜಮನೆತನ ಇದೆ. ರಾಣಿ ಇದ್ದಾರೆ..
ಕಳೆದ ೧೫ ದಿನಗಳ ಹಿಂದೆ ಬ್ರಿಟನ್ ರಾಣಿಯ ತೊಂಬತ್ತನೆಯ ಹುಟ್ಟು ಹಬ್ಬದ ಆಚರಣೆ ನಡೆಯಿತು. ಇಂಗ್ಲಂಡಿನ ಎಲ್ಲ ವಾಹಿನಿಗಳು ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಿದವು.. ರಾಣಿ ಕುರಿತ ಹಲವಾರು ಸಾಕ್ಷ್ಯ ಚಿತ್ರಗಳು ಪ್ರಸಾರವಾದವು. ಇಂಗ್ಲಂಡನ್ನು ಸೂರ್ಯ ಮುಳುಗದ ಸಾಮ್ರಾಜ್ಯವನ್ನಾಗಿ ಮಾಡಿದ ಕೀರ್ತಿ ಈ ರಾಜಮನೆತನದ್ದು. ಇಡೀ ವಿಶ್ವವನ್ನೇ ಆಳುವಂತೆ ಮಾಡಿದ್ದು ಇವರೇ. ಹೀಗಾಗಿ ರಾಜಸತ್ತೆ ಹೋಗಿ ಪ್ರಜಾ ಪ್ರಭುತ್ವ ಬಂದರೂ ರಾಣಿ ಮತ್ತು ರಾಜಮನೆತನ ಇದೆ. ಬಂಕಿಂಗ್ ಹಾಮ್ ಪ್ಯಾಲೇಸ್ ಇದೆ..
ಬ್ರಿಟೀಷರು ತಮ್ಮ ಇತಿಹಾಸವನ್ನು ಮರೆಯುವುದಿಲ್ಲ. ಇತಿಹಾಸ ವರ್ತಮಾನದಲ್ಲಿ ಬದುಕುವುದಕ್ಕೆ ದಾರಿದೀಪ. ಹಾಗೆ ಇತಿಹಾಸವನ್ನು ನೆನಪು ಮಾಡಿಕೊಂಡು ಹೆಜ್ಜು ಗುರುತು ಮೂಡಿಸಿ ಹೋದವರಿಗೆ ಕೃತಜ್ನತೆ ಸಲ್ಲಿಸುವ ಸೌಜನ್ಯವನ್ನು ಅವರು ತೋರುತ್ತಾರೆ.
ಈಗ ನಮ್ಮ ಕರ್ನಾಟಕಕ್ಕೆ ಬರೋಣ. ಇಲ್ಲಿನ ರಾಜಮನೆತನದ ಬಗ್ಗೆ ಮಾತನಾಡೋಣ. ಮೈಸೂರು ಅರಸು ಉಳಿದೆಲ್ಲ ಅರಸರಂತೆ ಇರಲಿಲ್ಲ. ಅವರು ಜನಾನುರಾಗಿಗಳಾಗಿದ್ದರು.. ತಮ್ಮ ರಾಜ್ಯದ ಅಭಿವೃದ್ಧಿಗಾಗಿ ಅವರು ಪಣ ತೊಟ್ಟಿದ್ದರು.  ಕಳೆದ ಶತಮಾನದಲ್ಲೇ ಮೀಸಲಾತಿಯನ್ನು ಜಾರಿಗೆ ತಂದವರು ಅವರು. ಕನ್ನಂಬಾಡಿ ಅಣೆಕಟ್ಟು ಕಟ್ಟಿದವರು ಒಡೆಯರು. ವಿದ್ಯುತ್ ಉತ್ಪಾದನಾ ಘಟಕ ಪ್ರಾರಂಭಿಸಿದವರು. ಅರಸರ ಜನಪರ ಕಾರ್ಯಕ್ರಮಗಳ ಪಟ್ಟಿ ಹೀಗೆ ಮುಂದುವರಿಯುತ್ತದೆ.. ಒಟ್ಟಾರೆಯಾಗಿ  ಮೈಸೂರು ರಾಜ್ಯವನ್ನು ಮಾಧರಿ ರಾಜ್ಯವನ್ನಾಗಿ ರೂಪಿಸಿದ ಖ್ಯಾತಿ ಮೈಸೂರು ಅರಸರಿಗೆ ಸಲ್ಲುತ್ತದೆ.. ನೀವು ಕರ್ನಾಟಕದ ಉಳಿದ ಭಾಗಗಳ ಜೊತೆ ಹಳೆ ಮೈಸೂರು ಪ್ರದೇಶವನ್ನು ಹೋಲಿಕೆ ಮಾಡಿದರೆ ಮೈಸೂರು ಅರಸರು ಹೇಗೆ ಆಡಳಿತ ಮಾಡಿದರು ಎಂಬುದು ನಮಗೆ ಅರ್ಥವಾಗುತ್ತದೆ.
ಸ್ವಾತಂತ್ರ್ಯ ಬಂದ ಮೇಲೆ ಪರಿಸ್ಥಿತಿ ಬದಲಾಯಿತು. ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸುವುದಕ್ಕಾಗಿ ಸ್ವಂತ ಬಂಗಾರವನ್ನೇ ಅಡವಿಟ್ಟಿದ್ದ ರಾಜ ಮನೆತನ ಮೊದಲಿನಂತೆ ಉಳಿಯಲಿಲ್ಲ. ಜಮಚಾಮರಾಜೇಂದ್ರ ಓಡೆಯರ್ ಬದುಕಿದ್ದಶ್ಟು ಕಾಲ ಇದ್ದ ಪರಿಸ್ಥಿತಿ ಆವರು ಕಾಲವಾದ ಮೇಲೆ ಉಳಿಯಲಿಲ್ಲ. ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಬೇರೆ ಬೇರೆ ಉದ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.. ಆದರೆ ಅವರು ಯಾವುದರಲ್ಲೂ ಯಶಸ್ವಿಯಾಗಲಿಲ್ಲ. ಜಯಚಾಮರಾಜೇಂದ್ರ ಒಡೆಯರ್ ಈ ಮಗ ಉದ್ಧಾರವಾಗೋಲ್ಲ ಎಂದು ಹೇಳಿದ್ದು ಶಾಪದಂತೆ ಶ್ರೀಕಂಠದತ್ತರನ್ನು ಕಾಡತೊಡಗಿತು.
ಪ್ರಾಯಶ: ೧೯೬೯ ರಲ್ಲಿ ರಾಜ ಧನ ರದ್ಧತಿಯೊಂದಗೆ ಈ ದೇಶದ ರಾಜ ಮಹಾರಾಜರ ವೈಭವದ ದಿನಗಳು ಮರೆಯಾದವು. ಹಳೆಯ ವೈಭವವನ್ನು ಮರೆಯಲಾಗದೇ ಹೊಸ ಬದುಕನ್ನು ಒಪ್ಪಿಕೊಳ್ಳರಾದೇ ರಾಜರೆಲ್ಲ ಅತಂತ್ರ ಸ್ಥಿತಿಯಲ್ಲಿ ಬದುಕಲಾರಂಭಿಸಿದರು.. ತಮ್ಮ ದಿನಗಳು ಮರೆಯಾಗಿವೆ ಎಂದು ಅವರೆಲ್ಲ ಅರ್ಥ ಮಾಡಿಕೊಳ್ಳಲು ಹಲವು ವರ್ಷಗಳೆ ಹಿಡಿದವು. ರಾಜಸ್ಥಾನ ಮಧ್ಯಪ್ರದೇಶ ಮೊದಲಾದ ಉತ್ತರ ಭಾಗದ ಅರಸು ಮನೆತನ ಚುನಾವಣಾ ರಾಜಕೀಯಕ್ಕೆ ಇಳಿದವು. ಅಧಿಕಾರವನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡವು. ಆದರೆ ಶ್ರೀಕಂಥ ದತ್ತ ಒಡೆಯರ್ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದರೂ ಅವರು ಯಶಸ್ವಿ ರಾಜಕಾರಣಿ ಅನ್ನಿಸಲೇ ಇಲ್ಲ. ರಾಜ ಮನೆತನದ ಬಗ್ಗೆ ಮೈಸೂರು ಪ್ರಾಂತದ ಜನರಿಗಿರುವ ಪ್ರೀತಿ ಮತ್ತು ಗೌರವವನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗಲೇ ಇಲ್ಲ. ಜನತಂತ್ರ ವ್ಯವಸ್ಥೆಯನ್ನು ತಿರುಳನ್ನು ಅರಿಯದೇ ರಾಜ ರಂತೆ ಬದುಕಲು ಯತ್ನಿಸಿ ಅವರು ಸೋತರು..
ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದಲಾಗಲೇ ಬೆಂಗಳೂರು ಅರಮನೆಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಲು ಮುಂದಾಯಿತು. ಈ ಪ್ರಕರಣ ಈಗಲೂ ಸಎರ್ವೋಚ್ಚ ನ್ಯಾಯಾಲಯದ ಮುಂದಿದೆ. ಮೈಸೂರು ಅರಮನೆಯ ಒಂದು ಭಾಗವನ್ನು ರಾಜ ಮನೆತನಕ್ಕೆ ಬಿಟ್ಟು ಉಳಿದಿದ್ದು ಸರ್ಕಾರದ ನಿಯಂತ್ರಣಕ್ಕೆ ಬಂತು. ಮೈಸೂರು ದಸರಾ ಮೊದಲ ವೈಭವನ್ನು ಕಳೆದುಕೊಂಡು ಸರ್ಕಾರಿ ಕಾರ್ಯಕ್ರಮವಾಗಿ ಬದಲಾಯಿತು. ಅಲ್ಲಿ ಇತಿಹಾಸವನ್ನು ನೆನಪಿಸುವ ಕೆಲಸಕ್ಕೆ ಒತ್ತು ಸಿಗದೇ ಆ ಭಾಗದ ರಾಜಕಾರಣಿಗಳು ಮಿಂಚಲು ಅಧಿಕಾರ ಚಲಾಯಿಸಲು ಅವಕಾಶವಾಯಿತು ಅಷ್ಟೇ.
ಈಗ ಶ್ರೀಕಂಥ ದತ್ತ ನರಸಿಂಹ ರಾಜ ಒಡೆಯರ್ ಇಲ್ಲ. ಅವರ ಪತ್ನಿ ಪ್ರಮೋದಾ ದೇವಿ ಯದುವೀರರನ್ನು ದತ್ತು ತೆಗೆದುಕೊಂಡಿದ್ದಾರೆ. ಅವರನ್ನೇ ರಾಜರನ್ನಾಗಿ ಮಾಡಿದ್ದಾರೆ. ಆದರೆ ಎಲ್ಲವೂ ಬದಲಾಗಿದೆ. ಕಾಲದ ಗುಣವೇ ಹಾಗೆ ಅದು ಎಲ್ಲವನ್ನೂ ಬದಲಿಸುತ್ತದೆ. ಈ ಬದುಕಿನಲ್ಲಿ ಬದಲಾವಣೆಯೊಂದೇ ಶಾಶ್ವತ ಎಂಬ ನಾಣ್ಣುಡಿಯನ್ನು ಇದು ಸಾಭೀತು ಪಡಿಸಿದೆ. ಆದೆ ಇದೆಲ್ಲ ನಮ್ಮ ಮುಂದೆ ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟಿದೆ. ಅದು ಇತಿಹಾಸ ಪ್ರಜ್ನೆಗೆ ಸಂಬಂಧಿಸಿದ್ದು. ಕಾಲನ ತೆಕ್ಕೆಯಲ್ಲಿ ಕರಗಿ ಹೋದವರನ್ನು ನೆನಪು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ್ದು.
ನಮ್ಮ ನಾಡಿನ ಇತಿಹಾಸವನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದು ಬೇಡವೆ ? ತಲುಪಿಸುವುದಿದ್ದರೆ ಹೇಗೆ ? ನಾವು ಎಲ್ಲಕ್ಕೂ ಬ್ರೀಟೀಷ್ ಮಾಧರಿಯನ್ನು ಅನುಸರಿಸುವವರು ಈ ವಿಚಾರದಲ್ಲಿ ಮಾತ್ರ ಯಾಕೆ ಅವರನ್ನು ಅನುಸರಿಸುತ್ತಿಲ್ಲ ? ಮೈಸೂರನ್ನು ಹಳೆ ವೈಭವನ್ನು ನೆನಪಿಸುವ ಒಂದು ಪ್ರವಾಸಿ ಕೇಂದ್ರವನ್ನಾಗಿ ಬದಲಾಯಿಸಲು ನಾವು ಯತ್ನ ನಡೆಸಿಲ್ಲ ಯಾಕೆ ? ನಮ್ಮಲ್ಲಿ ಐತಿಹಾಸಿಕ ಪ್ರಜ್ನೆ ಇಲ್ಲದಿರುವುದು ಇದಕ್ಕೆ ಕಾರಣವೆ ?
ಈಗ ಮೈಸೂರನ್ನು ಕೈಗಾರಿಕಾ ಮತ್ತು ಐಟಿ ಬಿಟಿ ಕೇಂದ್ರವನ್ನಾಗಿ ಮಾಡಲು ನಾವು ಮುಂದಾಗಿದ್ದೇವೆ. ಹಲವಾರು ಅಂತಾರಾಷ್ಟಿಯ ಕಂಪೆನಿಗಳು ಈಗಾಗಲೇ ಮೈಸೂರಿನಲ್ಲಿ ತಮ್ಮ ಶಾಖೆಗಳನ್ನು ಪ್ರಾರಂಭಿಸಿವೆ..ಇನ್ನು ಹಲವಾರು ಕಂಪೆನಿಗಳು ಮೈಸೂರಿಗೆ ಬರಲಿವೆ. ಈ ಕೈಗಾರೀಕರಣ ಮೈಸೂರನ್ನು ಹೇಗೆ ಬದಲಿಸುತ್ತದೆ ಎಂಬುದು ಒಂದು ಪ್ರಶ್ನೆಯಾದರೆ ಮೈಸೂರು ಕೈಗಾರಿಕರಣ ಇಲ್ಲದೇ ಇರುವುದು ಸಾಧ್ಯವಿಲ್ಲವೇ ಎನ್ನುವುದು ಇನ್ನೊಂದು ಪ್ರಶ್ನೆ. ಈ ಪ್ರಶ್ನೆಗಳನ್ನು ಕೇಳಿಕೊಳ್ಳುವಾಗಲೂ ನಮ್ಮ ಮುಂದೆ ಬರುವುದು ಅದೇ ಐತಿಹಾಸಿಕ ಪ್ರಜ್ನೆಯ ಪ್ರಶ್ನೆ..
ಮೈಸೂರನ್ನು ನಾವು ಹೇಗೆ ನೋಡಲು ಬಯಸುತ್ತೇವೆ ಎಂಬ ಪ್ರಶ್ನೆಗೆ ಸರ್ಕಾರಕ್ಕೆ ಸ್ಪಷ್ಟತೆ ಬೇಕು. ಇದನ್ನು ದೇಶದ ಪ್ರಮುಖ ಪ್ರವಾಸಿ ಕೇಂದ್ರವನ್ನು ಇನ್ನೂ ಅಭಿವೃದ್ಧಿಪಡಿಸಬೇಕು ಎಂದು ಅನ್ನಿಸಿದರೆ ಅದನ್ನು ಅನುಷ್ಠಾನಗೊಳಿಸಲು ಕಾರ್ಯಸೂಚಿ ಬೇಕು..ಮೈಸೂರನ್ನು ಶೋಕೇಸ್ ಮಾಡುವುದು ಹೇಗೆ ಎನ್ನುವ ಬಗ್ಗೆ ಚರ್ಚಿಸಬೇಕು. ಯಾವುದೇ ಪ್ರವಾಸಿಗ ಮೈಸೂರಿಗೆ ಬರುವುದಿದ್ದರೆ ಯಾಕೆ ಬರುತ್ತಾನೆ ? ಹೀಗೆ ಬರುವ ಪ್ರವಾಸಿಗರಿಗೆ ನಾವು ಮೈಸೂರನ್ನು ತಿಳಿಸಿಕೊಡುವುದು ಹೇಗೆ ಎಂಬುದು ಮುಖ್ಯ ಪ್ರಶ್ನೆಯಾಗುತ್ತದೆ. ಹಾಗೇಯೇ ಇಲ್ಲಿ ಬರುವ ನಮ್ಮ ರಾಜ್ಯದ ಪ್ರವಾಸಿಗರು, ದೇಶದ ಪ್ರವಾಸಿಗರು ಮತ್ತು ಹೊರದೇಶದ ಪ್ರವಾಸಿಗರನ್ನು ಆಕರ್ಷಿಸಲು ಏನು ಮಾಡಬೇಕು ಎಂಬ ಬಗ್ಗೆ ಯೋಜನಾ ಬದ್ಧ ಕಾರ್ಯಸೂಚಿ ಬೇಕು. ಇದೆಲ್ಲ ನಿಂತಿರುವುದು ಮೈಸೂರನ್ನು ನಾವು ಏನು ಮಾಡಬೇಕು ಎಂಬು ಮೂಲಭೂತ ಪ್ರಶ್ನೆಗೆ ಉತ್ತರ ಕಂಡುಕೊಂಡಾಗ ಮಾತ್ರ.
ನಾನು ಮೊದಲು ಹೇಳಿದ ಹಾಗೆ ಮೈಸೂರು ಅರಸರನ್ನು ನಾವು ಮೆರವಣಿಗೆ ಮಾಡಬೇಕಾಗಿಲ್ಲ. ಅವರಿಗೆ ರಾಜಧನ ನೀಡಬೇಕಾಗಿಲ್ಲ. ಆದರೆ ಮೈಸೂರಿಗೆ ಬಂದರೆ ಅಲ್ಲಿನ ಭವ್ಯ ಇತಿಹಾಸ ನಮಗೆ ತಿಳಿಯಬೇಕು. ಅಲ್ಲಿನ ಪರಂಪರೆಯ ಅರಿವಾಗಬೇಕು. ಮೈಸೂರು ಅರಸರು ಏನು ಮಾಡಿದರು ಎಂಬುದನ್ನು ಪ್ರವಾಸಿಗರಿಗೆ ತಿಳಿಸುವಂತಾಗಬೇಕು.. ಮತ್ತೆ ನಾನು ಇಂಗ್ಲಂಡಿನ ಉದಾಹರಣೆಯನ್ನೇ ನೀಡುತ್ತೇನೆ. ಅಲ್ಲಿ ಶೇಕ್ಸಫಿಯರ್ ನಾಟಕ ಪ್ರದರ್ಶನ ಪ್ರತಿ ದಿನ ನಡೆಯುವ ರಂಗ ಮಂದಿರಗಳಿವೆ. ಬ್ರಿಟೀಶ್ಅರು ಸಾಹಿತ್ಯ ಮತ್ತು ಸಂಸ್ಕೃತಿಗೆ ಕೊಡುತ್ತಿರುವ ಗೌರವದ ಸಂಕೇತ ಅದು. ನಾವು ಸಹ ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿ ಪರಿವರ್ತಿಸಬಹುದು. ಅಲ್ಲಿ ನಮ್ಮ ಮೈಸೂರು ಅರಸರ ಜನಪರವಾದ ಕೆಲಸವನ್ನು ತೋರಿಸುವ ನಾಟಕ, ನೃತ್ಯ ಪ್ರದರ್ಶನ ಪ್ರತಿ ದಿನ ನಡೆಯುವಂತೆ ವ್ಯವಸ್ಥೆ ಮಾಡಬಹುದು. ಹಾಗೆ ಮೈಸೂರು ಅರಸರ ಅಭಿವೃದ್ಧಿ ಕೆಲಸಗಳ ಬಗ್ಗೆ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಬಹುದು. ಕರ್ನಾಟಕದ ಇತಿಹಾಸವನ್ನು ತಿಳಿಸುವ ಪ್ರದರ್ಶನದ ವ್ಯವಸ್ಥೆ ಮಾಡಬಹುದು.ಯಾವುದೇ ಪ್ರವಾಸಿಗ ಮೈಸೂರಿಗೆ ಬಂದರೆ ಕರ್ನಾಟಕದ ಇತಿಹಾಸ ಪರಂಪರೆ, ಸಾಹಿತ್ಯ ಎಲ್ಲವೂ ತಿಳಿಯುವಂತೆ ಮಾಡಬಹುದು. ಆಗ ಮೈಸೂರು ನಿಜವಾದ ಅರ್ಥದಲ್ಲಿ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗುತ್ತದೆ. ಐಟಿ ಬಿಟಿ ಕಂಪೆನಿಗಳನ್ನು ಪ್ರಾರಂಬಿಸುವುದಕ್ಕಿಂತ ಇದು ಹೆಚ್ಚು ಮಹತ್ವದ್ದು ಎಂದು ನಾನು ನಂಬಿದ್ದೇನೆ. ಆದರೆ ಅಧಿಕಾರಸ್ಥರಿಗೆ ಈ ಮಾತುಗಳು ಅರ್ಥವಾಗುವುದು ಕಷ್ಟ.
ಈಗ ಈ ಲೇಖನದ ಪ್ರಾರಂಭಿದಲ್ಲಿ ಎತ್ತಿದ ಪ್ರಶ್ನೆಗಳು. ಕನ್ನಡದ ಸುದ್ದಿ ವಾಹಿನಿಗಳು ಮಹಾರಾಜರ ಕುಟುಂಬದ ಮದುವೆಯ ನೇರ ಪ್ರಸಾರ ಸರಿಯೇ ಎಂಬುದು. ಜನ ತಂತ್ರವಾದಿಗಳ ಈ ಪ್ರಶ್ನೆಗೆ ಉತ್ತರ ನೀಡುವುದು ಕಷ್ಟವಲ್ಲ. ಕರ್ನಾಟಕದ ಜನರಿಗೆ ಈಗಲೂ ಮೈಸೂರು ಅರಸರ ಬಗ್ಗೆ ಗೌರವಾದರಗಳಿವೆ. ಹಳೆ ಮೈಸೂರು ಪ್ರದೇಶದಲ್ಲಿ ಈಗಲೂ ಸಾಮಾನ್ಯ ಜನರ ಮನೆಗಳಲ್ಲಿ ಮೈಸೂರು ಅರಸರ ಫೋಟೋಗಳನ್ನು ಇಟ್ಟು ಪೂಜಿಸಲಾಗುತ್ತದೆ.  ಮೈಸೂರು ಅರಸರು ಎಂದರೆ ಆವರಿಗೆ ಈಗಲೂ ಅರಸರೇ.  ಇಂಥ ಸಾಮಾನ್ಯ ಜನರಿಗೆ ಮೈಸೂರು ಅರಸು ಮನೆತನದ ಮದುವೆ ಹೇಗಿರುತ್ತದೆ ಎಂಬ ಕುತೂಹಲ ಇರುವುದು ಸಹಜ. ಅವರ ಈ ಕೂತೂಹಲವನ್ನು ತಣಿಸುವ ಕೆಲಸವನ್ನು ವಾಹಿನಿಗಳು ಮಾಡಿವೆ. ಮಾಡುತ್ತಿವೆ. ಆದ್ದರಿಂದ ಇದನ್ನೆಲ್ಲ ವೈಚಾರಿಕ ದೃಷ್ಟಿಯಿಂದ ನೋಡುವುದು ಸಾಧ್ಯವಿಲ್ಲ. ಜನತಂತ್ರ ವ್ಯವಸ್ಚ್ಥೆಯಲ್ಲಿ ರಾಜರಿಗೆ ಸ್ಥಾನ ಇಲ್ಲ. ಹಾಗಂತ ರಾಜ ಸತ್ತೆಯ ಇತಿಹಾಸವನ್ನು ನಾವು ತಿರಸ್ಕರಿಸುವುದು ಸಾಧ್ಯವಿಲ್ಲ. ರಾಜಸತ್ತೆಯಲ್ಲಿ ಒಳ್ಳೆಯ ಕೆಲಸ ಆಗಿದ್ದರೆ ಅದನ್ನು ನಾವು ನೆನಪು ಮಾಡಿಕೊಳ್ಳಬೇಕು. ರಾಜರೆಲ್ಲ ಅಯೋಗ್ಯರು ಎಂಬ ತೀರ್ಮಾನಕ್ಕೆ ಬರುವುದು ಮೂರ್ಖತನ..

ಒಟ್ಟಾರೆಯಾಗಿ ಇತಿಹಾಸವನ್ನು ತಿರಸ್ಕರಿಸುವವನು ವರ್ತಮಾನವನ್ನು ಅರ್ಥ ಮಾಡಿಕೊಳ್ಳಲಾರ, ಜೊತೆಗೆ ಇತಿಹಾಸವನ್ನು ಇತಿಹಾಸವಾಗಿ ನೋಡುವ ಮನಸ್ಥಿತಿಯೂ ಬೇಕು.

 

1 comment:

Priyanka N said...

Very sensible articulation sir. We live in a world where a critic of everything is portrayed as a rationalist. Carrying the legacy of our dazzling history to next generation makes a lot of sense. We hope there'll be an attempt from the govt to execute such ideologies into practice.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...