Thursday, June 30, 2016

ನಾನು ಪತ್ರಿಕೋದ್ಯಮ ಆಗದಿದ್ದರೆ ದೊಡ್ದ ಗೂಂಡಾ ಆಗುತ್ತಿದ್ದೆ....!

ಯಾವ ಮೋಹನ ಮುರಳಿ ಕರೆಯಿತೋ ಗೊತ್ತಿಲ್ಲ.  ಪತ್ರಿಕೋದ್ಯಮ ನನ್ನನ್ನು ಕರೆಯಿತು. ನನ್ನನ್ನು ಅಪ್ಪಿಕೊಂಡಿತು. ನನಗೆ ಬದುಕು ನೀಡಿತು. ಅನ್ನ ನೀಡಿತು. ನನ್ನ ಬದುಕು ಹಾಗೆ ನಡೆದುಕೊಂಡು ಬಂತು.
ಈ ಸುದೀರ್ಘ ಪತ್ರಿಕೋದ್ಯಮದ ದಾರಿಯಲ್ಲಿ ನನಗೆ ದಕ್ಕಿದ್ದೆಷ್ಟು ನನಗೆ ಗೊತ್ತಿಲ್ಲ. ಆದರೆ ನನ್ನ ಯೋಗ್ಯತೆಗೆ ಮೀರಿ ಎಲ್ಲವನ್ನು ಕೊಟ್ಟ ಪತ್ರಿಕೋದ್ಯಮ ಎಂತಹ ಕರುಣಾಮಯಿ ?
ಮಲೇನಾಡಿನ ಮೂಲೆಯ ಹಳ್ಳಿಯೊಂದರಿಂದ ಬಂದ ನನಗೆ ಪತ್ರಿಕೋದ್ಯಮದ ಬಾಗಿಲು ಹಾಗೆ ತೆರೆದು ಬಿಟ್ಟಿತಲ್ಲ ? ನನ್ನನ್ನು ಸಲಹಿ ಸಾಕಿತಲ್ಲ ? ಪತ್ರಿಕಾ ದಿನಾಚರಣೆಯ ಇಂದಿನ ಸಂದರ್ಭದಲ್ಲಿ ಇದೆಲ್ಲ ನೆನಪಾಗುತ್ತಿದೆ. ಹಾಗೆ ನನ್ನ ಚೆಂಬರಿನಲ್ಲಿ ಕುಳಿತು ಹಳೆಯದನ್ನೆಲ್ಲ ಮೆಲಕು ಹಾಕುತ್ತೇನೆ. ಆಗ ನನ್ನಲ್ಲಿ ಮೂಡುವುದು ಧನ್ಯತಾ ಭಾವ.
ಅದು ಎಂಬತ್ತರ ದಶಕ. ಕಾಲೇಜಿನಲ್ಲಿ ನಾನೊಬ್ಬ ಉಡಾಳ. ತರಲೆ, ಜಗಳ ಗಂಟ. ಆಗ ನನ್ನ ಮೇಲೆ ಪ್ರಭಾವ ಬೀರಿದ್ದು ವಿಷ್ಣುವರ್ಧನ ಅಭಿನಯದ ನಾಗರಹಾವು ಸಿನಿಮಾ. ನಾನೇ ರಾಮಚಾರಿ ಎಂದುಕೊಂಡು ಮುಖಗಂಟಿಕ್ಕಿಕೊಂಡು, ಹುಡುಗರ ಪಡೆ ಕಟ್ಟಿಕೊಂಡು ಓಡಾಡುತ್ತಿದ್ದ ದಿನಗಳು. ಕಾಲೇಜಿನಲ್ಲಿ ಯಾವುದೇ ಗಲಾಟೆಯಾದರೂ ಅದಕ್ಕೆ ನಾನೇ ಕಾರಣ ಎಂದು ಎಲ್ಲರೂ ತೀರ್ಮಾನಕ್ಕೆ ಬರುತ್ತಿದ್ದ ಸಂದರ್ಭ ಅದು.
ನಾನು ಯೋಚಿಸುತ್ತೇನೆ. ನನ್ನ ತರಲೆಯಿಂದ ಅದೆಷ್ಟು ಹುಡುಗಿಯರು ನೋವನ್ನು ಅನುಭವಿಸಿದರು ? ಹೆಣ್ಣು ಹೆತ್ತವರು ಕಾಲೇಜಿಗೂ ಬಂದು ಗಲಾಟೆ ಮಾಡಿದರು. ನನ್ನ ಅಪ್ಪನವರೆಗೆ ದೂರು ಒಯ್ದರು. ಆದರೂ ನಾನು ಮಾತ್ರ ಬದಲಾಗಲೇ ಇಲ್ಲ. ಸೈಕಲ್ ಚೈನ್ ಗೆ ಮರದ ಹಿಡಿಕೆ ಹಾಕಿ ಅದನ್ನು ಬೆಲ್ಟ್ ಜಾಗದಲ್ಲಿ ಕಟ್ಟಿಕೊಂಡು ಹೊರಗೆ ಬರುತ್ತಿದ್ದ ನನ್ನನ್ನು ನೋಡಿದವರು ಹಿಡಿ ಶಾಪ ಹಾಕುತ್ತಿದ್ದರಲ್ಲ ?
ನನ್ನಪ್ಪ ತಾಲೂಕಿನಲ್ಲೇ ಗೌರವಾನ್ವಿತ ವ್ಯಕ್ತಿ; ಅವರ ಮೇಲಿನ ಗೌರವದಿಂದ ಜನ ನನ್ನ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳುತ್ತಿದ್ದರು. ಆದರೆ ನಾನು ಮಾತ್ರ ಬದಲಾಗಲೇ ಇಲ್ಲ. ನನ್ನ ಹರಿದ ಖಾದಿ ಪ್ಯಾಂಟನ್ನು ನೋಡಿ ನಕ್ಕ ನನ್ನ ಸಹಪಾಠಿ ಹುಡುಗಿಗೆ ನಾನು ಕಾಡಿದ ಬಗೆ, ಅಬ್ಬಬ್ಬಾ....
ಆಕೆ ಈಗ ಎಲ್ಲಿದ್ದಾಳೋ ? ನನ್ನ ಬಗ್ಗೆ ಏನು ಅಂದುಕೊಂಡಿದ್ದಾಳೋ ಗೊತ್ತಿಲ್ಲ. ಆಗ ನಾನು ಮಾತ್ರ ಅವರ ಪಾಲಿಗೆ ಟೆರರ್..!
ಆಕೆ ಸ್ವಲ್ಪ ಗತ್ತಿನ ಹುಡುಗಿ. ನೋಡದಕ್ಕೆ ಸುಂದರವಾಗಿಯೂ ಇದ್ದಳು. ಅದೊಂದು ದಿನ ನಾನು ನನ್ನ ಸ್ನೇಹಿತರ ಜೊತೆಗೆ ಕಾಲೇಜಿನಿಂದ ಬರುವಾಗ ನನ್ನ ಹರಿದು ಪ್ಯಾಂಟು ನೋಡಿ ನಕ್ಕಳಲ್ಲ ? ಆಗಲೇ ನನ್ನ  ಪಿತ್ತ ನೆತ್ತಿಗೆ ಏರಿತು. ಮರುದಿನವೇ ಆಕೆಗೆ ಒಂದು ಪತ್ರ ಬರೆದೆ..ನಾನು ಗೌರವಾನ್ವಿತ ಕುಟುಂಬದಿಂದ ಬಂದವನು. ನನಗೂ ಅಕ್ಕ ತಂಗಿಯರಿದ್ದಾರೆ. ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲೆ. ಆದರೆ ಮಾಡುವುದಿಲ್ಲ, ಇದು ಪತ್ರದ ಮುಖ್ಯಾಂಶ. ಹಾಗೆ ನೋಡಿದರೆ ನನಗೆ ಅಕ್ಕ ತಂಗಿಯರಿಲ್ಲ. ಆದರೂ ಪತ್ರಕ್ಕೆ ವಜನ್ನು ಬರಲಿ ಎಂದು ಅಕ್ಕ ತಂಗಿಯರಿದ್ದಾರೆ ಎಂದು ಬರೆದಿದ್ದೆ. ಇದನ್ನು ಆಕೆ ಪ್ರಾಂಶುಪಾಲರಿಗೆ ನೀಡಿದಳು. ಆಗ ಕಾಲೇಜಿನ ಪ್ರಾಂಶುಪಾಲರಾಗಿದ್ದವರು ಬಿ,ಎಚ್. ಶ್ರೀಧರ್. ಅವರು ನನ್ನನ್ನು ತಮ್ಮ ಚಂಬರಿಗೆ ಕರೆಸಿದರು.. ಏನಯ್ಯ ಹುಡುಗಿಯರಿಗೆ ಪತ್ರ ಬರೆಯುತ್ತೀಯ ಎಂದು ತರಾಟೆಗೆ ತೆಗೆದುಕೊಂಡರು. ನಾನು ಅವರಿಗೆ ಹೇಳಿದೆ. ನಾನು ತಪ್ಪು ಬರೆದಿದ್ದರೆ ನಿಮ್ಮ ಚೆಪ್ಪಲಿಯಿಂದ ನನಗೆ ಹೊಡೀರಿ.
ಅವರು ಪತ್ರ ಓದಿದರು. ನನಗೂ ಅಕ್ಕ ತಂಗಿಯರಿದ್ದಾರೆ ಎಂಬ ಮಾತು ಅವರ ಮನಸ್ಸಿಗೆ ನಾಟಿತು. ನಾನು ಯೋಗ್ಯ ವಿದ್ಯಾರ್ಥಿ ಎಂಬ ತೀರ್ಮಾನಕ್ಕೆ ಬಂದ ಅವರು ಯಾವುದೇ ಕ್ರಮ ತೆಗೆದುಕೊಳ್ಳದೇ ನನ್ನನ್ನು ಕಳುಹಿಸಿ ಕೊಟ್ಟರು. ಆಗಲೇ ಅಕ್ಕ ತಂಗಿಯರು ಇರುವುದು ಎಂತಹ ರಕ್ಷಣ ನೀಡುತ್ತದೆ ಎಂದು ಜ್ನಾನೋದಯ ಆದದ್ದು..ನನಗೂ ಅಕ್ಕ ತಂಗಿಯರು ಇರಬೇಕಿತ್ತು ಎಂದು ಅನ್ನಿಸಿದ್ದು. ಆದರೆ ನನ್ನಪ್ಪ ಎಬ್ಬರು ಮಕ್ಕಳು ಸಾಕು ಎಂದು ಸುಮ್ಮನಾಗಿ ಬಿಟ್ಟ. ಈಗ ನನಗೆ ಒಬ್ಬ ತಮ್ಮನಿದ್ದಾನೆ. ಅವನು ಸಾದಾ ಸರಳ ಮನುಷ್ಯ. ಆತ ಪತ್ರಿಕೋದ್ಯಮಿ ಆಗಿದ್ದರೂ ನನ್ನಂತೆ ತರಲೆ ಅಲ್ಲ.ಒಳ್ಳೆ ಮನುಷ್ಯ..
ಇದಾದ ಮೇಲೆ ನನ್ನಪ್ಪ ಸೇರಿದಂತೆ ಎಲ್ಲರೂ ಸೇರಿ ನನ್ನನ್ನು ಬೇರೆ ಊರಿಗೆ ಕಳುಹಿಸುವ ಒಮ್ಮತದ ನಿರ್ಧಾರಕ್ಕೆ ಬಂದರು. ಯಾಕೆಂದರೆ ನಾನು ಊರಲ್ಲಿದ್ದರೆ ಊರಿಗೆ ಅಪಾಯ ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ನನ್ನನ್ನು ಬೆಳಗಾವಿಯ ಗೋಗಟೆ ಕಾಲೇಜಿಗೆ ಸಾಗು ಹಾಕಿದರು. ತಾಲೂಕಿನ ಜನ ಪೀಡೆ ತೊಲಗಿತು ಎಂದು ಸಮಾಧಾನದ ನಿಟ್ಟುಸಿರು ಬಿಟ್ಟರು. ಹೆಣ್ಣು ಹೆತ್ತವರು ತಮ್ಮ ಮಕ್ಕಳು ಸೇಪ್ ಎಂದುಕೊಂಡರು.
ಬೆಳಗಾವಿಯಲ್ಲಿ ನನ್ನ ವಿದ್ಯಾಭ್ಯಾಸ ಮುಗಿಸಿ ಊರಿಗೆ ಮರುಳಿ ಕೃಷಿ ಮಾಡಿಕೊಂಡು ಬದುಕಬೇಕು ಎಂದುಕೊಂಡವನು ನಾನು. ಆದರೆ ಪತ್ರಿಕೋದ್ಯಮ ನನ್ನನ್ನು ಕರೆದು ಅಪ್ಪಿಕೊಳ್ಳಲು ಸಿದ್ಧವಾಗಿತ್ತು. ಊರಿಗೆ ಬಂದವನು ಸ್ಥಳೀಯ ಪತ್ರಿಕೆಗಳಲ್ಲಿ ಬರೆಯಲು ಪ್ರಾರಂಭಿಸಿದೆ. ಅಲ್ಲಿಯೂ ಶುರುವಾಯಿತು ನೋಡಿ ಗಲಾಟೆ. ನಮ್ಮ ತಾಲೂಕಿನಲ್ಲಿದ್ದ ಪೆಡ್ಡಿ ಸೊಸೈಟಿಯ್ ಅವ್ಯವಹಾರದ ಬಗ್ಗೆ ಲೇಖನ ಬರೆದೆ. ಅದು ಪ್ರಕಟವಾದ ತಕ್ಷಣ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಯಿತು. ನ್ಯಾಯಾಲಯಕ್ಕೆ ಓಡಾಟ. ಎಲ್ಲರೂ ನನ್ನನ್ನು ತಮ್ಮ ಕಡು ವೈರಿಯಂತೆ ನೋಡತೊಡಗಿದರು. ನನ್ನನ್ನು ಊರಿನಿಂದ ಓಡಿಸಿದರೆ ಮಾತ್ರ ಊರು ಉಳಿಯುತ್ತದೆ ಎಂದುಕೊಂಡರು.
ಈ ನಡುವೆ ರಾಮಚಂದ್ರಾ ಮಠದ ಸ್ವಾಮೀಜಿಯ ವಿರುದ್ಧ ಲೇಖನ ಬರೆದೆ. ಅವರು ಈಗಿನ ರಾಘವೇಶ್ವರರ ಹಿಂದಿನ ಗುರುಗಳು. ಹವ್ಯಕರಿಂದ ಅವರು ಹಣ ಸಂಗ್ರಹಿಸಿ ಕಲ್ಯಾಣ ಮಂಟಪ ಕಟ್ಟುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ನಾನು ಇದನ್ನು ವಿರೋಧಿಸಿ ಅವರು ಕಲ್ಯಾಣ ಮಂಟಪ ಕಟ್ಟುವುದಿಲ್ಲ. ಹಾಗೆ ಕಟ್ಟಿದ ದಿನ ಊರ ಪೇಟೆಯಲ್ಲಿ ನಗ್ನನಾಗಿ ಸಂಚರಿಸುತ್ತೇನೆ ಎಂದು ಸವಾಲು ಹಾಕಿದೆ. ಇದಕ್ಕೆ ಪ್ರತಿಯಾಗಿ ಮಠ ನನ್ನನ್ನು ಜಾತಿಯಿಂದ ಹೊರಕ್ಕೆ ಹಾಕಿತು..ಹವ್ಯಕರು ನನ್ನ ವಿರುದ್ಧ ಯುದ್ಧ ಸಾರಿದರು. ನನಗೆ ಹೊಡೆಯುವ ಯೋಜನೆ ಕೂಡ ಮಠದಿಂದ ಸಿದ್ಧವಾಯಿತು. ಅವರು ನನಗೆ ಹೊಡೆಯುವುದಕ್ಕೆ ಮೊದಲು ನನ್ನ ಹುಡುಗರನ್ನು ಕಟ್ಟಿಕೊಂಡು ಮಠದ ಶಿಷ್ಯರ ಮೇಲೆ ಹಲ್ಲೆ ಮಾಡಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ನನ್ನಮ್ಮ ನನ್ನನ್ನು ಬೆಂಗಳೂರಿಗೆ ಕಳುಹಿಸುವ ನಿರ್ಧಾರ ಮಾಡಿದಳು. ಅಮ್ಮನೇ ಊರು ಬಿಡು ಎಂದ ಮೇಲೆ ನನಗೆ ಬೇರೆ ದಾರಿ ಉಳಿಯಲಿಲ್ಲ. ಕೈಯಲ್ಲಿ ೫೦ ರೂಪಾಯಿ ಹಿಡಿದುಕೊಂಡು ಬೆಂಗಳೂರು ಬಸ್ಸು ಹತ್ತಿದೆ.
ಆದರೆ ಈಗಲೂ ರಾಮಚಂದ್ರಾ ಪುರದ ಮಠದ ಕಲ್ಯಾಣ ಮಂಟಪ ಸಿದ್ದವಾಗಿಲ್ಲ. ನಾನು ನಗ್ನನಾಗಿ ಪೇಟೆಯಲ್ಲಿ ಓಡಾಡುವ ಆಸೆ ಈಡೇರಲೇ ಇಲ್ಲ.
ಬೆಂಗಳೂರಿಗೆ ಬಂದ ಮೇಲೆ ಬೆಂಗಳೂರು ಆಕಾಶವಾಣಿ ಸೇರಿದೆ. ಅಲ್ಲಿ ಕ್ಯಾಸುವಲ್ ವರ್ಕರ್ ಆಗಿ ಪ್ರದೇಶ ಸಮಾಚಾರ ಓದುವ ಮೂಲಕ ಪತ್ರಿಕೋದ್ಯಮದ ಬದುಕು ಪ್ರಾರಂಬವಾಯಿತು. ನಂತರ ಸಂಯುಕ್ತ ಕರ್ನಾಟಕ ಸೇರಿದೆ. ಮುಂಜಾನೆ ಪತ್ರಿಕೆ ಉಪ ಮುಖ್ಯ ವರದಿಗಾರನಾಗಿ ಕೆಲಸ ಮಾಡಿದೆ. ಸುದ್ದಿ ಸಂಗಾತಿ ಮನ್ವಂತರ, ನಾವು ನೀವು ಮೊದಲಾದ ನಿಯತ ಕಾಲಿಕಗಳಲ್ಲಿ ದುಡಿದೆ. ಮರಾಠಿ ಸಕಾಳ್ ಪತ್ರಿಕೆಯ ಕಾಲಮಿಸ್ಟ್ ಆದೆ. ಕನ್ನಡ ಪ್ರಭ ಸೇರಿ ಅದರ ಮುಖ್ಯ ವರದಿಗಾರನಾದೆ. ೨೦೦೦ ಇಸ್ವಿಯಿಂದ ದೃಶ್ಯ ಮಾಧ್ಯಮಕ್ಕೆ ಬಂದೆ. ಈ ನಡುವೆ ಬೆಂಗಳೂರು ದೂರದರ್ಶನ ಕೇಂದ್ರದದಲ್ಲಿ ಕರೆಂಟ್ ಅಫೇರ್ಸ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟೆ. ನನಗೆ ಎಂದೂ ಕೆಲಸ ಇಲ್ಲ ಎಂಬ ಸ್ಥಿತಿ ಬರಲೇ ಇಲ್ಲ. ಯಾರ್ಯಾರೋ ಕರೆದರು ಕೆಲಸ ಕೊಟ್ಟರು. ನಾನು ಬೇಡ ಅನ್ನಿಸಿದಾಗ ಕೆಲಸ ಬಿಟ್ಟೆ. ಸುಮ್ಮನೆ ಮಲಗಿದೆ. ಹಾಡು ಕೇಳಿದೆ, ಸಿನಿಮಾ ನೋಡಿದೆ. ಪುಸ್ತಕಗಳನ್ನು ಓದಿದೆ. ಗುಂಡು ಹಾಕಿದೆ. ವಾರಗಟ್ಟಲೆ ನಿದ್ರೆ ಮಾಡಿದೆ.
ಕಾವೇರಿ, ಸುವರ್ಣ ಜಿ ನ್ಯೂಸ್, ಸಮಯ, ಕಸ್ತೂರಿ ಮೊದಲಾದ ವಾಹಿನಿಗಳಲ್ಲಿ ಕೆಲಸ ಮಾಡಿದೆ. ಈಗ ಹೊಸ ವಾಹಿನಿಯೊಂದನ್ನು ಕಟ್ಟಲು ಹೊರಟಿದ್ದೇನೆ.
ನನ್ನ ಈ ಪಯಣವನ್ನು ನೋಡಿದ ಹಲವರು ಹಲವು ರೀತಿ ವಿಮರ್ಶೆ ಮಾಡುತ್ತಾರೆ. ದೃಶ್ಯ ಮಾಧ್ಯಮದಲ್ಲಿ ನೀನು ಯಶಸ್ವಿಯಾಗಿಲ್ಲ ಎಂದು ಹೇಳುವವರು ಇದ್ದಾರೆ. ನಾನು ಆಗೆಲ್ಲ ನಕ್ಕು ಬಿಡುತ್ತೇನೆ. ನಾನು ಯಶಸ್ವಿ ಹೌದೋ ಅಲ್ಲವೋ ಅನ್ನುವುದನ್ನು ಇತಿಹಾಸಕ್ಕೆ ಬಿಟ್ಟಿ ಬಿಡುತ್ತೇನೆ. ಆದರೆ ಈಗ ಯಾರನ್ನು ನೀವು ಯಶಸ್ವಿ ಎಂದು ಪರಿಗಣಿಸುತ್ತೀರೋ ನಾನು ಅವರಂತೆ ಇಲ್ಲ ಎಂಬುದು ನಿಜ. ಆ ರೀತಿಯ ಯಶಸ್ಸು ನನಗೆ ಬೇಕಾಗಿಲ್ಲ. ಯಾಕೆಂದರೆ ನಾನು ಎಲ್ಲರಂತೆ ಇಲ್ಲ. ನಾನು ನಾನೇ...!
ನಾನೊಬ್ಬನೇ ಮೌನವಾಗಿ ಕುಳಿತು ಆಲೋಚಿಸುವಾಗ ನನ್ನಲ್ಲಿ ಮೂಡುವುದು ಕೃತಜ್ನಾತಾ ಭಾವ. ಯಾವುದೇ ಕಾಡಿನ ನಡುವೆ ಹುಟ್ಟಿ ಕನ್ನಡ ಮಾಧ್ಯಮದಲ್ಲಿ ಓದಿದವ ನಾನು. ಒಂದು ರೀತಿಯ ಕಾಡು ಮನುಷ್ಯ. ಫೋನು, ರೈಲು ಎಲ್ಲವನ್ನೂ ನೋಡಿದ್ದು ಬೆಳಗಾವಿಗೆ ಹೋದ ಮೇಲೆ. ಮಹಾನ್ ಮುಜುಗರದ ವ್ಯಕ್ತಿಯೂ ಆಗಿರುವ ನಾನು ಕಾಡು, ನದಿ ಗುಡ್ಡ ಬೆಟ್ಟಗಳ ನಡುವೆ ಬೆಳದವನು. ಆದರೆ ಪತ್ರಿಕೋದ್ಯಮ ನನ್ನನ್ನು ಪ್ರೀತಿಯಿಂದ ಅಪ್ಪಿಕೊಂಡು ಎಲ್ಲವನ್ನೂ ನೀಡಿತಲ್ಲ. ಅದಿಲ್ಲದಿದ್ದರೆ ನಾನೊಬ್ಬ ಗುಂಡಾ ಆಗುತ್ತಿದ್ದೆನಲ್ಲ...
ನಾನು ಪತ್ರಿಕೋದ್ಯಮಕ್ಕೆ ಕೃತಜ್ನನಾಗಿದ್ದೇನೆ. ಅದು ಫಲಾಪೇಕ್ಷೆ ಇಲ್ಲದೇ ಎಲ್ಲವನ್ನೂ ನನಗೆ ನೀಡಿದ್ದಕ್ಕಾಗಿ. ನನ್ನೆಲ್ಲ ತಪ್ಪುಗಳನ್ನು ಕ್ಷಮಿಸಿ ತಾಯಿಯಂತೆ ಪೊರೆದಿದ್ದಕ್ಕಾಗಿ..


2 comments:

ravi said...

ವಾರೆವ್ವಾ...ಅತ್ಯುತ್ತಮ ಅನುಭವದ ಬರಹ.

Mavalli Satya said...

ನಿಜಕ್ಕೂ ನಿಮ್ಮ ಭಯಾಗ್ರಫಿ ರೋಮಾಂಚಕ. ಆದದ್ದೆಲ್ಲಾ ಒಳಿತೇ ಆಯಿತು. ಭಟ್ಟರೇ ನಿಮ್ಮ ಬಾಲ್ಯ ಯವ್ವನದ ಭಯಭೀತ ದಿನಗಳು ನಿಮ್ಮ ಜೀವನ ರೂಪಿಸುವಲ್ಲಿ ವಿಶೇಷ ಕೊಡುಗೆ ನೀಡಿವೆ ಎಂದುನನ್ನ ಅನಿಸಿಕೆ. ಶುಭವಾಗಲಿ.