Tuesday, May 30, 2017

ನಾನು ಯೋಗ್ಯ ವ್ಯಕ್ತಿ ಅಲ್ಲದಿರಬಹುದು...



ಆಧ್ಯಾತ್ಮದ ಅತಿ  ಮಹತ್ವದ ಪ್ರಶ್ನೆ ಎಂದರೆ ನಾನು ಯಾರು ಎಂಬುದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಎಲ್ಲ ಸಾಧು ಸಂತರು ಪ್ರಯತ್ನ ಮಾಡಿದ್ದಾರೆ. ತಮಗೆ ದೊರಕಿದ ಉತ್ತರವನ್ನು ಪ್ರತಿಪಾದಿಸಿದ್ದಾರೆ. ಶಂಕರಾಚಾರ್ಯರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯತ್ನಿಸಿ ಕಂಡುಕೊಂಡ ಉತ್ತರ ಎಂದರೆ ಅಹಂ ಬ್ರಹ್ಮಾಸ್ಮಿ. ನಾನೇ ಭ್ರಹ್ಮ ಎಂಬ ಈ ಉತ್ತರ ಬದುಕಿನಲ್ಲಿ ಎಲ್ಲವನ್ನು ಎದುರಿಸಿ ವಿಜಯಿಯಾಗುವುದಕ್ಕೆ ಶಕ್ತಿ ನೀಡುತ್ತದೆ ಎಂಬುದು ನಿಜ.
ನನಗೆ ನಾನು ಯಾರು ಎಂಬ ಪ್ರಶ್ನೆ ಹೆಚ್ಚು ಕಾಡಿಲ್ಲ. ಆದರೆ ನಾನು ಎಂಥವನು ಎಂಬ ಪ್ರಶ್ನೆ ನನ್ನನ್ನು ಕಾಡಿತ್ತಲೇ ಇರುತ್ತದೆ. ಈ ಪ್ರಶ್ನೆಗೆ ನನಗೆ ಉತ್ತರ ದೊರಕಿಲ್ಲ. ಪ್ರಾಯಶಃ ಉತ್ತರ ದೊರಕುವುದೂ ಇಲ್ಲ. ಈ ಪ್ರಶ್ನೆಗೆ ಉತ್ತರ ಹುಡುಕುವಾಗ ನಾನು ಅಷ್ಟು ಕೆಟ್ಟವನು ಆಗಿರಲಿಕ್ಕಿಲ್ಲ ಎಂದು ಅನ್ನಿಸುತ್ತದೆ. ಆದರೆ ನಾನು ಕೆಟ್ಟವನು ಇದ್ದರೂ ಇರಬಹುದು ಎಂದು ಅನ್ನಿಸಿದಾಗ ನಾನು ಕಂಡುಕೊಂಡ ಉತ್ತರದ ಬಗ್ಗೆಯೇ ಅನುಮಾನ ಪ್ರಾರಂಭವಾಗುತ್ತದೆ.
ಬಾಲ್ಯದಲ್ಲಿ ನಾನುಉಡಾಳ ನಾಗಿದ್ದೆ ಎಂದು ಅಮ್ಮ ಈಗಲೂ ನೆನಪಿಸಿಕೊಳ್ಳುತ್ತಾಳೆ. ನನ್ನ ಮನೆಯವರು ನಾನು ಯೋಗ್ಯನಲ್ಲ ಎಂದು ಮೊದಲೇ ತೀರ್ಮಾನಿಸಿದ್ದರು. ಶಾಲೆ ಕಾಲೇಜಿಗೆ ಹೋಗುವಾಗ ನಾನು ಅಂತಹ ಒಳ್ಳೆಯ ಹೆಸರು ಪಡೆಯಲಿಲ್ಲ. ಓದುವುದಕ್ಕಿಂತ ಬೇರೆ ಚಟುವಟಿಕೆಯಲ್ಲಿ ತೊಡಗಿ ಕೊಂಡಿದ್ದೇ ಹೆಚ್ಚು. ಹೀಗಾಗಿ ನಾನು ಅಪ್ಪ ಅಮ್ಮನಿಗೆ ಯೋಗ್ಯ ಮಗನಾಗಲೇ ಇಲ್ಲ. ಆದರೆ ನಾನು ಈ ವೃತ್ತಿಗೆ ಬಂದ ಮೇಲೆ ಅಪ್ಪ ಅಮ್ಮ  ನಾನು ಯೋಗ್ಯನಾಗಿದ್ದೇನೆ ಎಂದು ಸಂತೋಷಪಟ್ಟರು. ನನಗೆ ಆಗ ಆಗಿದ್ದು ಸಮಾಧಾನ. ಆದರೆ ನಾನು ಯೋಗ್ಯ ವ್ಯಕ್ತಿಯೇ ಎಂಬ ಪ್ರಶ್ನೆ ಹಾಗೇ ಉಳಿಯಿತು.
ನಾನು ಯೋಗ್ಯನಲ್ಲ, ನಂಬಿಕೆಗೆ ಅರ್ಹನಲ್ಲ ಎಂದು ನನಗೆ ಹಲವು ಬಾರಿ ಅನ್ನಿಸಿದ್ದಿದೆ. ಇದಕ್ಕೆ ಪೂರಕವಾಗಿ ನಾನು ಯೋಗ್ಯ ವ್ಯಕಿಯಲ್ಲ ಎಂದು ಹಲವರು ನನಗೆ ಹೇಳಿದ್ದಿದೆ, ಆಗ ನಾನು ಯೋಜನೆ ಮಾಡುವುದು ಅದೇ ಪ್ರಶ್ನೆಯ ಬಗ್ಗೆ. ನಾನು ಯೋಗ್ಯ ವ್ಯಕ್ತಿ ಹೌದೋ ಅಲ್ಲವೋ ಎನ್ನುವ ಬಗ್ಗೆ.
ಕಾಲೇಜಿ ದಿನಗಳಲ್ಲಿ ಒಬ್ಬಿಬ್ಬರು ಹುಡುಗಿಯರ ಜೊತೆ ನನ್ನ ಜಗಳ ಇತ್ತು. ಆ ಜಗಳಕ್ಕೆ ಕಾರಣ ಏನು ಎಂಬುದು ನನಗೆ ನೆನಪಿಲ್ಲ. ಆದರೆ ಜಗಳ ಇದ್ದವರ ಜೊತೆಗೂ ನಾನು ತಪ್ಪಿ ನಡೆದುಕೊಳ್ಳಲಿಲ್ಲ. ಜಗಳವಾಡಿದೆ. ಹಾಗೆ ಎದ್ದು ಬಂದೆ. ನಾನು ಬೆಳಗಾವಿ ಕಾಲೇಜಿಗೆ ಹೋಗುವಾಗ ನನ್ನ ಆತ್ಮೀಯ ಸ್ನೇಹಿತೆ ಒಬ್ಬಳಿದ್ದಳು. ಆಕೆ ನನ್ನನ್ನು ತಿದ್ದಿ ತೀಡಿದವಳು. ನನಗೆ ಇಂಗ್ಲೀಷ್ ಮಾತನಾಡುವುದನ್ನು ಕಲಿಸಿದವಳು. ಆಕೆ ತುಂಬಾ ಶ್ರೀಮಂತ ಹುಡುಗಿಯಾದ್ದರಿಂದ ಅವಳನ್ನು ಪ್ರೀತಿಸಲು ನಾನು ಹೆದರಿದೆ. ಆಕೆ ಪ್ರೀತಿಯ ಮಾತನಾಡಿದಾಗ ನಾನು ಮೌನವಾದೆ. ಅವಳು ದೂರದ ಮುಂಬೈಗೆ ಹೋದಳು. ಮತ್ತೆ ತಿರುಗಿ ಬಂದಳು ಪ್ರೀತಿಯ ಮಾತನಾಡಿದಳು. ಹಲವು ವರ್ಷಗಳ ನಂತರ ಬಂದ ಆಕೆಯ ಬಗ್ಗೆ ನನಗಿದ್ದ ಭಯ ಮತ್ತು ನನ್ನ ಬಗ್ಗೆ ಇದ್ದ ಕೀಳರಿಮೆಯಿಂದ ನಾನು ಪ್ರೀತಿಯ ಮಾತನಾಡಲಿಲ್ಲ. ಪ್ರಾಯಶಃ ಆಕೆಯೂ ನಾನು ಯೋಗ್ಯನಲ್ಲ ಎಂದುಕೊಂಡಿರಬೇಕು.
ನಾನು ಪ್ರೀತಿಸಿ ಮದುವೆಯಾದ ಮೇಲೆ ಒಳ್ಳೆಯ ಸದ್ ಗ್ರಹಸ್ಥನಾಗಬೇಕು ಎಂದು ಪ್ರಯತ್ನಿಸಿದ್ದು ಉಂಟು. ಆದರೆ ಎಲ್ಲರೂ ಬಯಸುವ ರೀತಿಯ ಗಂಡ, ತಂದೆ ಆಗಲಿಲ್ಲ. ನನ್ನ ವೃತ್ತಿಯ ಬಗ್ಗೆ ಅಪಾರ ನಿಷ್ಠೆ ಹೊಂದಿದ್ದ  ನಾನು ಕೌಟುಂಬಿಕ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂದು ಅನ್ನಿಸುತ್ತದೆ. ಹೀಗಾಗಿ ನನ್ನ ಹೆಂಡತಿ ಮಕ್ಕಳೂ ಸಹ ನಾನು ಯೋಗ್ಯನಲ್ಲ ಎಂದು ಅಂದುಕೊಂಡಿರುವುದು ಸಹಜ. ಯಾಕೆಂದರೆ ಬೇರೆಯವರು ಇಷ್ಟ ಪಡುವ ಹಾಗೆ ಬದುಕುವುದು ನನಗೆ ತಿಳಿಯದು. ಬೇರೆಯವರು ಇಷ್ಠಪಡುವ ಹಾಗೆ ಬದುಕುವುದು ಹೇಗೆ ಎಂಬುದು ನನಗೆ ತಿಳಿಯದು. ಹೀಗಾಗಿ ನಾನು ಮಹಾನ್ ಸ್ವಾರ್ಥಿ ಎಂದು ಹೇಳುವವರು ಇದ್ದಾರೆ. ಆದರೆ ನನ್ನ ಸ್ವಾರ್ಥ ಯಾವುದು ಎಂಬುದು ನನಗೆ ಅರ್ಥವಾಗುವುದಿಲ್ಲ. ಹೀಗಾಗಿ ನಾನು ಯೋಗ್ಯನಲ್ಲದಿರಬಹುದು.. ಜೆಂಟಲ್ ಮೆನ್ ಅಲ್ಲದಿರುಬಹುದು ಎಂಬ ಅನುಮಾನ ನನಗೆ ಇದ್ದೇ ಇದೆ.
ಬಹಳ ವರ್ಷಗಳ ಹಿಂದೆ ಜ್ಯೋತಿಷಿಯೊಬ್ಬರು ನನಗೆ ಒಂದು ಮಾತು ಹೇಳಿದ್ದರು. ನಿಮ್ಮ ಸಾಧನೆಗೆ ಮತ್ತು ಅವನತಿಗೆ ಮಹಿಳೆಯರೇ ಕಾರಣ ಎಂಬುದು ಅವರ ಮಾತಾಗಿತ್ತು. ನಾನು ಅವರಿಗೆ ಬೈದು ನನ್ನ ಸಾಧನೆ ಅಥವಾ ಅವನತಿಗೆ ನಾನೇ ಕಾರಣ ಎಂದು ನಕ್ಕಿದ್ದೆ. ಈಗಲೂ ಅದೇ ಮಾತನ್ನು ನಾನು ನಂಬಿದ್ದೇನೆ. ಆದರೆ ಬಹಳ ಸಂದರ್ಭದಲ್ಲಿ ನಾನು ಹಲವಾರು ವಿವಾದಗಳಿಗೆ ಮಹಿಳೆಯರಿಂದಲೇ ಸಿಲುಕಿಕೊಂಡಿದ್ದೇನೆ ಎಂಬುದು ನನಗೆ ಗೊತ್ತು.
ನಾನು ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಹೋದ್ಯೋಗಿಯೊಬ್ಬರು ನನ್ನ ಮೇಲೆ ಆರೋಪವೊಂದನ್ನು ಮಾಡಿದ್ದರು. ಅದೆಂದರೆ ಅವರು ನನ್ನನ್ನು ಮನೆಗೆ ಕರೆದಾಗ ನಾನು ಅವರ ಜೊತೆ ಅಸಭ್ಯವಾಗಿ ನದೆದುಕೊಂಡೆ ಎಂಬುದು ನನ್ನ ಮೇಲಿನ ಆರೋಪವಾಗಿತ್ತು. ಈ ಆರೋಪವನ್ನು ಅವರು ನನ್ನ ಮೇಲೆ ಮಾಡಿದಾಗ ಸಂಪಾದಕರಾದ ವೈ ಎನ್ ಕೆ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈ ಘಟನೆ ನಡೆದು ಹಲವು ತಿಂಗಳುಗಳ ನಂತರ ನನ್ನ ಸಹೋದ್ಯೋಗಿ ಡಿ. ಉಮಾಪತಿ ಹೇಳಿದಾಗ ರಾತ್ರಿ ರಾಜಾಜಿನಗರ ಎಂಟ್ರನ್ಸ್ ಬಳಿ ಕುಳಿತು ಅತ್ತಿದ್ದೆ. ಅವರು ನನಗೆ ಸಮಾಧಾನ ಮಾಡಿದ್ದರು. ನಾನು ಮನುಷ್ಯ, ನನಗೆ ಮನುಷ್ಯನಿಗೆ ಇರುವ ಎಲ್ಲ ಬಗೆಯ ಆಸೆ ಆಕಾಂಕ್ಶೆಗಳಿವೆ. ಆದರೆ ಯಾವುದೇ ಮಹಿಳೆಯ ಜೊತೆಗೆ ನಾನು ಅಸಭ್ಯವಾಗಿ ವರ್ತಿಸಲಾರೆ ಎಂದು ಹೇಳಿದ್ದೆ. ಆದರೆ  ನಾನು ಮಾಡದ ತಪ್ಪು ನನ್ನ ಬದುಕಿನ ಕಪ್ಪು ಚುಕ್ಕೆಯಾಗಿ ಉಳಿಯಿತು. ನಾನು ಈ ಬಗ್ಗೆ ಯಾವುದೇ ವಿವರ ನೀಡಿದರೂ ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಆಗ ನಾನು ಒಬ್ಬಂಟಿಯಾಗಿ ಅತ್ತು ಸುಮ್ಮನಾಗುತ್ತಿದ್ದೆ.
ಇದಾದ ಮೇಲೆ ನನ್ನ ವೃತ್ತಿಯಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ನನಗೆ ಪುರುಷರಿಗಿಂತ ಮಹಿಳೆಯರು ಹೆಚ್ಚು ಸೇಪ್ ಅನ್ನಿಸುತ್ತದೆ. ಹೀಗಾಗಿ ನನ್ನ ಸಂಪರ್ಕಕ್ಕೆ ಬರುವ ಮಹಿಳೆಯರಲ್ಲಿ ನನ್ನ ಅಮ್ಮನನ್ನು ಸಂಗಾತಿಯನ್ನ, ಪ್ರೇಮಿಯನ್ನ ಎನೇನನ್ನೋ ಹುಡುಕುತ್ತಿರುತ್ತೇನೆ. ಇಂಥಹ ಸಂದರ್ಭದಲ್ಲಿ ಅವರಿಗೆ ಮಾತನಾಡುವ ಬೈಯುವ ಸಲಹೆ ನೀಡುವ ಸ್ಪೇಸ್ ನೀಡುತ್ತೇನೆ. ಅದು ನನ್ನ ಸ್ವಭಾವ,
ನಾನು ಜೀ ನ್ಯೂಸ್ ಬೆಂಗಳೂರು ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡುವಾಗಲೂ ನಡೆದಿದ್ದು ಇದೇ ರೀತಿಯ ಘಟನೆ. ನನ್ನ ಸಹೋದ್ಯೋಗಿಯಾಗಿದ್ದ ಹೆಣ್ನು ಮಗಳು ನನ್ನ ವಿರುದ್ಧ ದೂರೊಂದರನ್ನು ನೀಡಿದ್ದರು. ನಾನು ಜೀ ನ್ಯೂಸ್ ನಲ್ಲಿ ಕೆಲಸ ಕೊಡುವುದಾಗಿ ಭರವಸೆ ನೀಡಿ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತೇನೆ ಎಂಬುದು ಅವರ ಆರೋಪವಾಗಿತ್ತು. ಈ ಆರೋಪ ಬಂದ ಮೇಲೆ ಆಕೆಯನ್ನು ಕರೆದು ಕೇಳಿದ್ದೆ. ಯಾಕೆ ನನ್ನ ಮೇಲೆ ಈ ಆರೋಪ ಮಾಡಿದೆ ಅಂತ. ಆಕೆ ನನ್ನ ಎದುರು ಕಣ್ಣೀರು ಹಾಕಿದ್ದರು.
ನಾನು ತುಂಬಾ ಸರಳವಾಗಿ ಬದುಕುವುದಕ್ಕೆ ಇಷ್ಟ ಪಡುವ ವ್ಯಕ್ತಿ. ನಾನು ಮುಖವಾಡ ಧರಿಸಲಾರೆ. ಸುಳ್ಲು  ಹೇಳಲಾರೆ. ನನಗೆ ಸರಿ ಅನ್ನಿಸುವ ಹಾಗೆ ಬದುಕುತ್ತೇನೆ. ಆದರೆ  ಬೇರೆಯವರಿಗೆ ಮೋಸ ಮಾಡುವುದು ಸುಳ್ಳು ಹೇಳುವುದು ನನಗೆ ಸಾಧ್ಯವಿಲ್ಲ. ಯಾರೋ ನನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದರೆ ನನ್ನನ್ನು ಪ್ರೀತಿಸಬೇಡಿ ಧ್ವೇಷಿಸಿ ಎಂದು ಹೇಳಲಾರೆ. ಹಾಗೆ ಹೇಳಿದವರಿಗೆ ನಾನು ಕೃತಜ್ನತೆ ಸಲ್ಲಿಸುತ್ತೇನೆ. ಒಮ್ಮೆ ಹೀಗೆ ಅಯಿತು. ಸ್ನೇಹಿತೆಯೊಬ್ಬಳು ಉಮ್ಮಾ ಎಂದು ಮೇಸೇಜ್ ಮಾಡಿದ್ದಳು. ನನಗೆ ಉಮ್ಮಾ ಎಂದರೇನು ಎಂಬುದೇ ಆಗ್ ಗೊತ್ತಿರಲಿಲ್ಲ. ಈಗಳು ವಾಟ್ಸ್ ಅಪ್ ನ ಬಹುತೇಕ ಸಿಂಬಾಲ್ಗಳು ನನಗೆ ತಿಳಿಯುವುದಿಲ್ಲ. ಉಮ್ಮಾ ಮೇಸೇಜ್ . ನೋಡಿದ ನನ್ನ ಮಗಳು ಆಯ್ಯೋ ಆಪ್ಪನ ಕಥೆ ನೋಡು ಎಂದು ಮನೆಯಲ್ಲಿ ಎನೌನ್ಸ್ ಮಾಡಿದಳು, ಅದು ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿತ್ತು. ಯಾರೋ ಉಮ್ಮಾ ಎಂದು ಮೇಸೇಜ್ ಮಾಡಿದರೆ ಉಮ್ಮ ಅನ್ನಬಾರದೆ ಎಂಬ ಪ್ರಶ್ನೆಗೆ ನನಗೆ ಉತ್ತರ ದೊರಕಲಿಲ್ಲ. ಮಗಳಿಗೆ ಈ ಮಾತನ್ನು ಮಗಳಿಗೆ ಹೇಳುವುದು ಹೇಗೆ ಎಂಬುದು ತಿಳಿಯದು. ಆದರೆ ಮಗಳು ಅವತ್ತಿನಿಂದ ಅಪ್ಪ ಯೋಗ್ಯನಲ್ಲ ಎಂದುಕೊಂಡಿರಬಹುದು.
ಕೆಲವರು ಉಮ್ಮಾ ಎಂದು ಮೇಸೇಜ್ ಮಾಡುತ್ತಾರೆ. ಕೆಲವರು ಪಪ್ಪಿ ಕೊಡು ಎಂದು ಕೇಳುತ್ತಾರೆ. ಆಗ ಕೆಲವೊಮ್ಮೆ ನಾನು ಪಪ್ಪಿ ಎಲ್ಲಿ ಕೊಡಲಿ ಎಂದು ಜೋಕ್ ಮಾಡಿದ್ದಿದೆ. ಸುಮ್ಮನೆ ಹೇಳಿದ್ದಿದೆ. ಆದರೆ ನಾನು ಹೀಗೆ ಪ್ರತಿಕ್ರಿಯೆ ನೀಡುವುದು ಅವರ ಎಮೋಷನ್ ಜೊತೆ ಆಟವಾಡಿದಂತೆ ಅಲ್ಲವೆ ? ಈ ಪ್ರಶ್ನೆಯನ್ನು ಕೆಲವರು ಕೇಳುವುದು ಉಂಟು. ಆಗ ನಾನು ಈ ಬಗ್ಗೆ ಯೋಚಿಸುತ್ತೇನೆ. ಯಾವುದೇ ಸಂಬಂಧವನ್ನು ನಾನು ಬಳಸಿಕೊಂಡಿಲ್ಲ. ಲೈಟ್ ಆಗಿ ಜೋಕ್ ಮಾಡಿದ್ದೇನೆ. ಎಂಜಾಯ್ ಮಾಡಿದ್ದೇನೆ. ಇದಕ್ಕೆ ಕಾರಣ ನನ್ನ ಬದುಕಿನ ಭಾಗವಾಗಿರುವ ಜೀವನ ಪ್ರೀತಿ. ನಾನು ಮನುಷ್ಯರನ್ನು  ಪ್ರೀತಿಸುತ್ತೇನೆ. ಯಾರನ್ನೂ ಧ್ವೇಷಿಸಲಾರೆ. ಕೆಲವರನ್ನು ಹೆಚ್ಚು ಪ್ರೀತಿಸುತ್ತೇನೆ. ಇದೇ ಸಮಸ್ಯೆಯಾಗಿ ನಾನು ಯೋಗ್ಯ ವ್ಯಕ್ತಿ ಅಲ್ಲ ಎಂದಾಗ ಮತ್ತೆ ಅದೇ ಪ್ರಶ್ನೆ ಕಾಡುತ್ತದೆ. ನಾನು ಯೋಗ್ಯ ವ್ಯಕ್ತಿ ಅಲ್ಲವಾ ?
ಯಾಕೋ ಇವತ್ತು ಇದೆಲ್ಲ ನೆನಪಾಯಿತು. ನನ್ನ ಬಗ್ಗೆ ಜನ ಏನು ಮಾತನಾಡುತ್ತಾರೆ ಎಂಬ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನಮಗೆ ತುಂಬಾ ಆಪ್ತರಾದವರು ನೀನು ಯೋಗ್ಯನಲ್ಲ ಎಂದರೆ ಬೇಸರವಾಗುತ್ತದೆ. ಯಾವುದು ಯೋಗ್ಯ ಯಾವುದು ಯೋಗ್ಯವಲ್ಲ ಎಂಬ ಉತ್ತರ ಗೊತ್ತಿಲ್ಲದ ಪ್ರಶ್ನೆ ಎದುರಾಗುತ್ತದೆ.
ನಾನು ನನ್ನ ಬದುಕಿನಲ್ಲಿ ಇದುವರೆಗೆ ಸಾಗಿ ಬಂದ ದಾರಿಯನ್ನು ಹಿಂತಿರುಗಿ ನೋಡುತ್ತೇನೆ. ನಾನು ತಪ್ಪು ಮಾಡಿಲ್ಲ ಎಂದು ಸಮಾಧಾನವಾಗುತ್ತದೆ. ಯಾರಾದರೂ ನನ್ನ ತಪ್ಪು  ತೋರಿಸಿಕೊಟ್ಟರೆ ಅದನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿದ್ದೇನೆ. ಕೊನೆಗೆ ಹೇಳಬೇಕು ಅನ್ನಿಸುತ್ತದೆ. ನಾನು ಯೋಗ್ಯನಲ್ಲ ಎಂಬ ಹೇಳಿಕೆ ನಿಜವಿದ್ದರೂ ಇರಬಹುದು.

Saturday, April 29, 2017


ನದಿ ಮತ್ತು ಪ್ರೀತಿ

ನಾನು ಪ್ರೀತಿಸುತ್ತೇನೆ, ನನ್ನ ಉಸಿರನ ಕೊನೆಯವರೆಗೂ.
ನನ್ನಪ್ಪ ಪ್ರೀತಿಸಿದ, ನನ್ನಮ್ಮ ಪ್ರೀತಿಸಿದಳು, ನಾನು ಹುಟ್ಟಿ ಬಂದೆ.

ನಾನು ಮಗು. ನಕ್ಕೆ. ಬಂದವರು ಪ್ರೀತಿಸಿದರು. ಗಲ್ಲ ಸವರಿದರು.
ಅವರೆಲ್ಲ ಪ್ರೀತಿಸಿದರು. ಲೊಚ ಲೊಚ ಮುತ್ತುಕೊಟ್ಟರು. ನಾನು ನಕ್ಕೆ.
ಈಗ ನಾನು ಮುತ್ತು ಕೊಡುತ್ತೇನೆ ಅವರೆಲ್ಲ ನಗುತ್ತಾರೆ.

ಮನೆಯ ಮುಂದೆ  ನದಿ ಹರಿಯುತ್ತಿತ್ತು. ನೀರು ನಗುತ್ತ ಮುಂದೆ ಸಾಗುತ್ತಿತ್ತು.
ಮನೆಯ ಮುಂದಿನ ಹೊಂಡ ತಿಳಿ ನೀರು. ತೀಳಿ ನೀರಿನ ಒಳಗೆ ಹರಿದಾಡುವ ಮೀನುಗಳು.
ಮೀನುಗಳು ನಗುತ್ತಿದ್ದವು. ಮೀನುಗಳೂ ಪ್ರೀತಿಸುತ್ತಿದ್ದವು. ನಾಕು ನಕ್ಕೆ. ಪ್ರೀತಿಸತೊಡಗಿದೆ.

ಮನೆಯ ಸುತ್ತಲೂ ಕಾಡು. ಕಾಡಿನ ಮರದ ಮರೆಯಲ್ಲಿ ಕುಳಿತು ಕದ್ದು ನೋಡುವ ಗಿಳಿವಿಂಡು.
ಕೊಕ್ಕಿನಲ್ಲಿ ಕೊಕ್ಕಿಟ್ಟು ರಕ್ಕೆ ಬಿಚ್ಚುವ ಪ್ರೀತಿ. ಹಾರುವ ತವಕ. ಅಲ್ಲಿಯೂ ಇತ್ತು ಪ್ರೀತಿ ಸಂಭ್ರಮ.
ಮಟ್ಟಿಯ ಸಂದಿನಿಂದ ಹಾರಿ ಬರುವ ಮೊಲಗಳು. ರೇಷ್ಮೇಯಂತಹ ಮೈ. ಬಿಳಿ ಬಣ್ನ.
ಹಾರಿ ನೆಗೆವ ಪರಿ. ಅಕ್ಕ ಪಕ್ಕ ನಿಂತು ನೋಡುವ ಚಂಚಲತೆ. ಅಲ್ಲಿಯೂ ಇತ್ತಲ್ಲ ಪ್ರೀತಿ ಪ್ರೇಮ.
ನಾನು ನೋಡಿದೆ. ಎಲ್ಲೆಡೆಯೂ ಇರುವುದು ಪ್ರೀತಿ.. ನಾನು ಪ್ರೀತಿಸತೊಡಗಿದೆ.

ಆಕೆ ಹಾಗೆ ಬಂದಳು, ನಿಂತಳು..ಹರಿಯತೊಡಗಿದಳು ನದಿಯ ಹಾಗೆ.
ನಾನು ನದಿಯಾದೆ. ಪ್ರೀತಿಸತೊಡಗಿದೆ. ನದಿಯ ಜೊತೆ ಹರಿಯತೊಡಗಿದೆ.
ಮುಂದೆ ಅಣೆಕಟ್ಟು. ನದಿಯು ಹರಿಯುವುದನ್ನು ನಿಲ್ಲಿಸಿತ್ತು. ಆದರೂ
ಅಣೆಕಟ್ಟಿನ ತಡೆಗೋಡೆಗೆ ಒದೆಯುತ್ತಿತ್ತು ನದಿ. ದಾರಿ ಬಿಡುವಂತೆ ಕೇಳುತ್ತಿತ್ತು.
ದಾರಿ ಬಿಡಲಿಲ್ಲ ತಡೆಗೊಡೆ. ನದಿ ಆಗಲೂ ನಿಲ್ಲಿಸಲಿಲ್ಲ. ಪ್ರೀತಿಸುತ್ತಲೇ ಇತ್ತು.
ನಾನು ಪ್ರೀತಿಸತೊಡಗಿದೆ.
ನದಿ ಕಾಣಲಿಲ್ಲ. ಅಲ್ಲಿತ್ತು ನದಿ ಹರಿದ ಗುರುತುಗಳು. ಒಣಗಿತ್ತು ನೆಲ.
ನದಿ ದಂಡೆ ಕಳೆದುಕೊಂಡಿತ್ತು, ನದಿಯ ಸ್ಪರ್ಷ. ದಂಡೆ ನೋಡುತ್ತಿತ್ತು ಅನಾಥವಾಗಿ.
ಅಳುವ ದಂಡೆಯ ನೋಡಿ, ಮರ ಗಿಡಗಳು ಅಳುತ್ತಿದ್ದವು. .
ಮರಗಿಡಗಳ ಮೇಲಿದ್ದ ಪ್ರಾಣಿ ಪಕ್ಷಿಗಳು ನರಳುತ್ತಿದ್ದವು. ಮೊಲಗಳು ಕುಣಿದು ಕುಪ್ಪಳಿಸುತ್ತಿರಲಿಲ್ಲ.
ಎಲ್ಲೆಡೆಗೂ ನೀರವ ಮೌನ.
ನಾನು ಪ್ರೀತಿಸುವುದನ್ನು ನಿಲ್ಲಿಸಿದೆ. ಪ್ರೀತಿ ಇಲ್ಲದ ಮೇಲೆ ನಗುವುದಾದರೂ ಹೇಗೆ ?
ಆದರೂ ಆಸೆಯಿತ್ತು. ಆಸೆಯ ಹಿಂದೆ ಭರವಸೆ ಇತ್ತು. ಭರವಸೆ ಹಿಂದೆ ಕನಸಿತ್ತು.
ಕನಸು ಬದುಕಿಸಿತ್ತು. ಆಗಲೇ ಎಲ್ಲೆಡೆಗೂ ಕತ್ತಲೆ..ಕತ್ತಲೆಯ ಹಿಂದೆ ಬೆಳಕು ಅಡಗಿ ಕುಳಿತಿತ್ತು.
ನದಿ ಹರಿಯುವುದಕ್ಕೆ ಕಾಯುತ್ತಿತ್ತು. ನಾನು ಕಾಯುತ್ತಿದ್ದೆ. 

Friday, April 14, 2017

ನಂಜನಗೂಡು ಗುಂಡ್ಲುಪೇಟೆ; ಮಳೆ ನಿಂತ ಮೇಲೆ ಮರದ ಕೆಳಗೆ ನಿಂತು....

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಈ ಎರಡು ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಸೋಲು ಅನುಭವಿಸಿದೆ. ಜೆ ಡಿ ಎಸ್ ಮೂಲೆಯಲ್ಲಿ ನಿಂತು ನಗುತ್ತಿದೆ. ಈಗ ಮಳೆ ನಿಂತ ಮೇಲಿನ ಪರಿಸ್ಥಿತಿ. ಅಲ್ಲಲ್ಲಿ ಹನಿ ಬೀಳುತ್ತಿದೆ. ಕಳೆದ ಒಂದು ತಿಂಗಳುಗಳಿಂದ ಇದ್ದ ಪ್ರಚಾರದ ಭರಾಟೆ, ಆರೋಪ ಪ್ರತ್ಯಾರೋಪ, ಎಲ್ಲವೂ ಕುಗಿದು ಈಗ ಆತ್ಮ ವಿಮರ್ಶೆಯ ಕಾಲ.
ಎಲ್ಲ ರಾಜಕೀಯ ಪಕ್ಷಗಳೂ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಮತದಾರರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಅದಕ್ಕಾಗಿ ಮೊದಲು ಆತ್ಮಕ್ಕಾಗಿ ಹುಡುಕಾಟ ನಡೆಯಬೇಕು. ಈ ನಡುವೆ ಇನ್ನೊಂದು ಧ್ವನಿಯನ್ನು ನಾವು ಗಮನಿಸಬೇಕಾಗಿದೆ. ಅದು ಯಾವ ಪಕ್ಷವನ್ನೂ ಬೆಂಬಲಿಸಿದ ಮತದಾರರ ಧ್ವನಿ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ. ಯಾವ ಪಕ್ಷವನ್ನೂ ಬೆಂಬಲಿಸಿಲ್ಲ. ಅವರು ನೋಟಾವನ್ನು ಒತ್ತಿದ್ದಾರೆ. ಮತದಾನ ಕೇಂದ್ರಗಳಿಗೆ ಬಂದು ಇಂದಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಸಾತ್ವಿಕ ಪ್ರತಿಭಟನೆ ಎಂದು ನಾನು ನಂಬಿದ್ದೇನೆ. ಈ ಧ್ವನಿ ತುಂಬಾ   ಸಣ್ಣದು ಎನ್ನಿಸಬಹುದು. ಆದರೆ ಇದು ಸಣ್ಣ  ಧ್ವನಿ ಅಲ್ಲ. ಒಂದೊಮ್ಮೆ ಸಣ್ಣ  ಧ್ವನಿ   ಇದ್ದರೂ ಅದು ಬೆಂಕಿಯ ಕಿಡಿ ಇದ್ದಂತೆ. ಒಂದು ಸಣ್ಣ

  ಕಿಡಿ ಎಲ್ಲವನ್ನೂ ಧ್ವಂಸಗೊಳಿಸುವ ಶಕ್ತಿಯನ್ನ್ನು ಹೊಂದಿರುವಂತೆ ಈ ಧ್ವನಿಗೂ ಅಂತಹ ಶಕ್ತಿ ಇದೆ. ಆ ಶಕ್ತಿ ಮತ್ತು ಬೆಂಕಿಯ ಕಿಡಿ ಕಾಣಿಸಿಕೊಂಡಿದ್ದು ಗುಂಡ್ಲುಪೇಟೆ ಮತ್ತು ನಂಜಗೂಡು ಎಂಬ ಸಾಮಾನ್ಯ ಹಳ್ಳಿಗಾಡಿನ ಪ್ರದೇಶಗಳಿಂದ. ಭಾರತದ ಇತಿಹಾಸದಲ್ಲಿ ಇಂಥಹ ಕಿಡಿ ಮಹಾ ಅಗ್ನಿಯಾದ ಹಲವು ಉದಾಹರಣೆಗಳಿವೆ. ಈ ದೇಶದಲ್ಲಿ ಅಂತಹ ಇತಿಹಾಸವವಿದೆ. ಹೀಗಾಗಿ ಇದು ಒಂದು ಎಚ್ಚರಿಕೆಯ ಗಂಟೆ ಎಂದೇ ನಾನು ನಂಬಿದ್ದೇನೆ.
ಸುಮಾರು ಒಂದು ಸಾವಿರದಷ್ಟು ಮತದಾರರು ಯಾಕೆ ಯಾರಿಗೂ ಬೆಂಬಲ ನೀಡದಿರುವ ತೀರ್ಮಾನವನ್ನು ಕೈಗೊಂಡರು ? ಇದಕ್ಕೆ ಅವರಿಗೆ ಇರಬಹುದಾದದ ಕಾರಣಗಳು ಯಾವವು ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸ್ವಲ್ಪ ಹಿಂದಕ್ಕೆ ಹೋಗಬೇಕು. ರಾಜ್ಯದ ಹಿರಿಯ ನಾಯಕರಲ್ಲಿ ಒಬ್ಬರಾದ ಶ್ರೀನಿವಾಸ್ ಪ್ರಸಾದ, ತಮ್ಮನ್ನು ಸಚಿವ ಸಂಪುಟದಿಂದ ಕೈ ಬಿಟ್ಟ ತಕ್ಷಣ ರಿಬೆಲ್ ಆದರು. ತಮ್ಮ ಸ್ವಾಭಿಮಾನದ ಪ್ರಶ್ನೆಯನ್ನು ಎತ್ತಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮುಗಿಸುವ ಮಾತನಾಡಿದರು. ಆಗಲೇ ಅವರು ಬಿ ಜೆಪಿಯೊಡನೆ ಸಂಪರ್ಕ ಬೆಳೆಸಿ ಆ ಪಕ್ಷಕ್ಕೆ ಸೇರಲು ವೇದಿಕೆಯನ್ನು ಸಿದ್ಧಪಡಿಸಿಕೊಂಡಿದ್ದು ಆಗಿತ್ತು. ಶ್ರೀನಿವಾಸ್ ಪ್ರಸಾದ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ ತಕ್ಷಣ ಬಿಜೆಪಿಯ ನಾಯಕರು ಅವರ ಮನೆಯ ಕದ ತಟ್ಟುವುದಕ್ಕೆ ಪ್ರಾರಂಭಿಸಿದ್ದರು. ಹಳೆ ಮೈಸೂರು ಪ್ರಾಂತದಲ್ಲಿ ಅಂತಹ ಬಲವನ್ನು ಹೊಂದದ ಬಿಜೆಪಿಗೆ ಇದೊಂದು ಅದ್ಭುತ ಅವಕಾಶವಾಗಿ ಕಂಡಿತು. ಆಗಲೇ ಕೆಲವು ವಯೋವೃದ್ಧ ಕಾಂಗ್ರೆಸ್ ರಾಜಕಾರಣಿಗಳು ತಮ್ಮ ಕೊನೆಯ ಕಾಲದಲ್ಲಿ ಬಿಜೆಪಿಯಲ್ಲಿ ನೆಲೆ ಕಂಡುಕೊಳ್ಳಲು ಮಾತುಕತೆ ನಡೆಸುತ್ತಿದ್ದರು. ಅವರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎನ್. ಕೃಷ್ಣ ಕೂಡ ಒಬ್ಬರಾಗಿದ್ದರು. ಇಂತಹ ಸ್ಥಿತಿಯಲ್ಲಿ ಮುಂದಿನ ಮುಖ್ಯಮಂತ್ರಿ ನಾನೇ ಎಂದು ನಂಬಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪ ದಕ್ಷಿಣ ಕರ್ನಾಟಕದಲ್ಲಿ ನೆಲೆ ಊರಲು ಈ ಅವಕಾಶವನ್ನು ಬಳಸಿಕೊಳ್ಳಲು ಮುಂದಾದರು. ಅವರ ಲೆಕ್ಕಾಚಾರ ತುಂಬಾ ಸರಳವಾಗಿತ್ತು. ತಮ್ಮ ಬೆಂಬಲಕ್ಕಿರುವ ಲಿಂಗಾಯತರು ಮತ್ತು ಶ್ರೀನಿವಾಸ್ ಪ್ರಸಾದ್ ಅವರ ಹಿಂದಿರುವ ದಲಿತರು ಮತ್ತು ಎಸ್. ಎಮ್. ಕೃಷ್ಣ ಅವರನ್ನು ಬೆಂಬಲಿಸುವ ಒಕ್ಕಲಿಗರು ಒಂದಾದರೆ ಸಾಕು ಹಳೇ ಮೈಸೂರು ಪ್ರದೇಶದಲ್ಲಿ ಕೇಸರಿ ಬಾವುಟ ಹಾರಿಸಬಹುದು ಎಂದು ಅವರು ಅಂದುಕೊಂಡಿದ್ದರು. ಇದು ಮೇಲ್ನೋಟಕ್ಕೆ ಎಲ್ಲರೂ ಒಪ್ಪಬಹುದಾದ ರಾಜಕೀಯ ಲೆಕ್ಕಾಚಾರವಾಗಿತ್ತು. ಆದರೆ ರಾಜಕಾರಣ ಎಂದೂ ಈ ರೀತಿಯ ಲೆಕ್ಕಾಚಾರದಂತೆ ನಡೆಯುವುದಿಲ್ಲ.
ಅಷ್ಟರಲ್ಲಿ ಇನ್ನೊಂದು ಬೆಳವಣಿಗೆ ಆಗಿತ್ತು. ಗುಂಡ್ಲುಪೇಟೆಯನ್ನು ಪ್ರತಿನಿಧಿಸುತ್ತಿದ್ದ ಸಚಿವ ಮಹದೇವ್ ಪ್ರಸಾದ್ ಅಕಾಲಿಕ ಮರಣಕ್ಕೆ ತುತ್ತಾಗಿದ್ದರು. ಅದೂ ಸಹ ಲಿಂಗಾಯತ ಪ್ರಾಭಲ್ಯವಿರುವ ಕ್ಷೇತ್ರ. ಅಲ್ಲಿಯೂ ಲಿಂಗಾಯತ ಮತದಾರರದೇ ಪ್ರಾಭಲ್ಯ. ಈ ಎರಡೂ ಕ್ಷೇತ್ರಗಳ ಚುನಾವಣೆ ಘೋಷಣೆಯಾದಾಗ ಯಡೀಯೂರಪ್ಪ ಈ ಹೊಸ ಜಾತಿ ಸಮೀಕರಣ ತಮಗೆ ವರದಾನವಾಗುತ್ತದೆ ಎಂದೇ ನಂಬಿದ್ದರು. ಮೇಲ್ನೋಟಕ್ಕೆ ಇದು ಸರಿ ಎಂದೂ ಅನ್ನಿಸುತ್ತಿತ್ತು. ಯಡಿಯೂರಪ್ಪ ಇನ್ನು ಒಂದು ವರ್ಷದಲ್ಲಿ ಮುಖ್ಯಮಂತ್ರಿಯಾಗುವ ಕನಸಿನೊಂದಿಗೆ ಚುನಾವಣಾ ಅಖಾಡಾಕ್ಕೆ ಇಳಿದುಬಿಟ್ಟರು. ಆದರೆ ಈ ದೇಶದ ಮತದಾರನ ಮೇಲೆ ಜಾತಿಯನ್ನು ಹೊರತುಪಡಿಸಿ ಬೇರೆ  ವಿಷಯಗಳೂ ಪ್ರಭಾವ ಬೀರುತ್ತವೆ ಎಂಬ ಅಂಶವನ್ನ್ನು ಬಿಜೆಪಿ ರಾಜ್ಯಾಧ್ಯಕ್ಷರು ಮರೆತು ಬಿಟ್ಟಿದ್ದರು.
ಇಂತಹ ಸ್ಥಿತಿಯಲ್ಲಿ ಕಾಂಗ್ರೆಸ್ ಮುಂದೆ ಅದಕ್ಕೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಬಹುದೊಡ್ದ ಸವಾಲಿತ್ತು. ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಪಕ್ಷದ ಕ್ಷೇತ್ರಗಳು. ಇಲ್ಲಿ ಎಂದೂ ಬಿಜೆಪಿ ಆರಿಸಿ ಬಂದಿರಲಿಲ್ಲ. ಗಣನೀಯ ಪ್ರಮಾಣದ ಮತವನ್ನು ಆ ಪಕ್ಷಪಡೆದಿರಲಿಲ್ಲ. ಹೀಗಿರುವಾಗ ಯಡಿಯೂರಪ್ಪ ಅವರ ಜಾತಿ ಸಮೀಕರಣ ವರ್ಕ್ ಔಟ್ ಆದರೆ ? ಕಾಂಗ್ರೆಸ್ ಪಕ್ಷ ಇದನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಜೊತೆಗೆ ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರಕ್ಕೆ ತಾಗಿಕೊಂಡಿರುವ ಕ್ಷೇತ್ರಗಳು. ಇಲ್ಲಿ ಸೋತರೆ ಪಕ್ಷದ ಒಳಗೆ ಇರುವ ಸಿದ್ಧರಾಮಯ್ಯ ವಿರೋಧಿಗಳು ಇನ್ನಷ್ಟು ಪ್ರಬಲರಾಗುತ್ತಿದ್ದರು. ಹಾಗೆ ಕೆಲವು ಲಿಂಗಾಯತ ಶಾಸಕರು ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರುವ ಸಾಧ್ಯತೆಗಳೂ ಇದ್ದವು. ಸ್ವಲ್ಪ ಎಚ್ಚರ ತಪ್ಪಿದರೆ ಸರ್ಕಾರವನ್ನೇ ಕಳೆದುಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿರಲಿಲ್ಲ. ಸಿದ್ದರಾಮಯ್ಯ ಬಹುದೊಡ್ದ ರಾಜಕೀಯ ಸವಾಲನ್ನು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಚುನಾವಣೆಯ ದಿನ ಪ್ರಕಟವಾಗುತ್ತಿದ್ದಂತೆ ಎರಡೂ ಪಕ್ಷಗಳೂ ಚುನಾವಣೆ ಅಖಾಡಾಕ್ಕೆ ಧುಮುಕಿದವು. ಬಿಜೆಪಿ ಮೊದಲ ದಿನದಿಂದಲೂ ತಾನು ಎರಡೂ ಕ್ಷೇತ್ರಗಳಲ್ಲಿ ವಿಜಯಿಯಾದ ಕನಸು ಕಾಣಲು ಪ್ರಾರಂಭಿಸಿತ್ತು. ಯಡೀಯೂರಪ್ಪ, ಶೋಭಾ ಕರಂದ್ಲಾಜೆ, ವಿ. ಸೋಮಣ್ನ, ರೇಣುಕಾಚಾರ್ಯ ಪ್ರಚಾರದ  ಜವಾಬ್ದಾರಿಯನ್ನು ಹೊತ್ತುಕೊಂಡು ಕ್ಷೇತ್ರ ಪರ್ಯಟನ ಪ್ರಾರಂಭಿಸಿಬಿಟ್ಟರು. ಅವರು ಪ್ರಚಾರದ ವೈಖರಿ ಹೇಗಿತ್ತೆಂದರೆ, ಬಿಜೆಪಿ ಜಯಿಸುವುದು ಗ್ಯಾರಂಟಿ ಎಂದು ಅಂದುಕೊಳ್ಳುವಂತಾಗಿತ್ತು.
ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ಚರ್ಚಿಸಿದರು. ಬಿಜೆಪಿಯನ್ನು ಎದುರಿಸಲು ರಣ ತಂತ್ರ ರೂಪಿತವಾಯಿತು. ಸಚಿವರಾದ ಡಾ. ಮಹದೇವಪ್ಪ, ಎಮ್.ಬಿ. ಪಾಟೀಲ್, ಡಿ.ಕೆ.,ಶಿವಕುಮಾರ್, ಮೇಲುಸ್ತುವಾರಿ ಒಹಿಸಿದರು. ಪ್ರತಿಯೊಬ್ಬ ಸಚಿವರಿಗೆ ಹೋಬಳೀವಾರು ಹೊಣೆಗಾರಿಕೆ ಒಹಿಸಲಾಯಿತು. ಜೊತೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪದಾಧಿಕಾರಿಗಳು, ಕಾರ್ಯಕರ್ತರು ಪ್ರಚಾರದ ಹೊಣೆ ಹೊತ್ತರು. ಚುನಾವಣಾ ಕಾರ್ಯತಂತ್ರದ ಬಗ್ಗೆ ಪ್ರತಿ ದಿನ ಚರ್ಚಿಸಿ ಅದಕ್ಕೆ ಅಂತಿಮ ರೂಪಕೊಡಲಾಯಿತು. ದಿನದಿಂದ ದಿನಕ್ಕೆ ಚುನಾವಣ ಆಖಾಡ ರಂಗೇರತೊಡಗಿತು..ದಿನಕಳಿಯುತ್ತಿದ್ದಂತೆ ಈ ಚುನಾವಣೆ ಯಡೀಯೂರಪ್ಪ ಮತ್ತು ಸಿದ್ದರಾಮಯ್ಯನವರ ನಡುವಿನ ಪ್ರತಿಷ್ಟೆಯ ಪ್ರಶ್ನೆಯಾಗಿ ಬದಲಾಯಿತು. ಪಕ್ಷ ನೇಪಥ್ಯಕ್ಕೆ ಸರಿಯತೊಡಗಿತು. ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಿದ ಶ್ರೀನಿವಾಸ್ ಪ್ರಸಾದ್ ಇದನ್ನು ವೈಯಕ್ತಿಕ ಯುದ್ಧವನ್ನಾಗಿ ಮಾರ್ಪಡಿಸಿಬಿಟ್ಟರು. ಇದಕ್ಕೆ ಬಿಜೆಪಿ ನಾಯಕರು ಬೆಂಬಲ ನೀಡಿದರು. ಅತ್ಮಾಭಿಮಾನ ಮತ್ತು ಸ್ವಾಭಿಮಾನದ ಪ್ರಶ್ನೆಯನ್ನು ಎತ್ತಿದ ಶ್ರೀನಿವಾಸ್ ಪ್ರಸಾದ್ ಇದಕ್ಕೆ ತಾತ್ವಿಕ ಕಾರಣಗಳನ್ನು ನೀಡಲು ಸಾಧ್ಯವಾಗಲಿಲ್ಲ. ಇದು ಅವರ ವೈಯಕ್ತಿಕ ಸ್ವಾಭಿಮಾನದ ಪ್ರಶ್ನೆಯಾಗಿತ್ತೇ ಹೊರತೂ ದಲಿತರ ಸ್ವಾಭಿಮಾನದ ಪ್ರಶ್ನೆಯಾಗಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ದಲಿತರ ಸ್ವಾಭಿಮಾನದ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಳ್ಳದ ಶ್ರೀನಿವಾಸ ಪ್ರಸಾದ ತಮ್ಮ ಸ್ವಾಭಿಮಾನದ ಪ್ರಶ್ನೆಯನ್ನು ದಲಿತ ಸ್ವಾಭಿಮಾನದ ಪ್ರಶ್ನೆಯನ್ನಾಗಿ ಮಾರ್ಪಡಿಸಲು ಯತ್ನ ನಡೆಸುತ್ತಿದ್ದರು. ಆದರೆ ದಲಿತರ ಮುಂದೆ ಕೆಲವು ಸರಳವಾದ ಪ್ರಶ್ನೆಗಳಿದ್ದವು. ಶ್ರೀನಿವಾಸ್ ಪ್ರಸಾದ್ ಪ್ರಮುಖ ದಲಿತ ನಾಯಕರು ಎಂಬುದು ನಿಜ. ಆದರೆ ಅವರು ಎತ್ತಿದ ಪ್ರಶ್ನೆಗಳಿಗೆ ತಾತ್ವಿಕ ನೆಲೆಗಟ್ಟೇ ಇರಲಿಲ್ಲ. ಜೊತೆಗೆ ಅವರ್ಉ ಪ್ರತಿನಿಧಿಸುತ್ತಿರುವ ಪಕ್ಷ ಲಿಂಗಾಯತ ಪಕ್ಷ ಎಂದೇ ಪ್ರತಿಬಿಂಬಿತವಾಗಿರುವ ಬಿಜೆಪಿ. ಜಿಲ್ಲೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರೆಲ್ಲ ಇದೇ ಸಮುದಾಯಕ್ಕೆ ಸೇರಿದವರು. ಇಲ್ಲಿರುವ ಜಾತಿ ಸಂಘರ್ಷ ಕೂಡ ದಲಿತರು ಮತ್ತು ಲಿಂಗಾಯತರ ನಡುವಿನ ಜಾತಿ ಸಂಘರ್ಷವೇ. ಹೀಗಾಗಿ ಈ ಎರಡು ಸಮುದಾಯಗಳ ನಡುವಿನ ಸಾಮಾಜಿಕ ಮತ್ತು ರಾಜಕೀಯ ಸಂಘರ್ಷ ಅಷ್ಟು ಬೇಗ ಬಗೆಹರಿಯುವಂಥಹದ್ದಾಗಿರಲಿಲ್ಲ., ಅವರ ನಡುವೆ  ಇರುವ ಕಂದಕ ಶ್ರೀನಿವಾಸ್ ಪ್ರಸಾದ್ ಸಲುವಾಗಿ ಮರೆಯಾಗುವುದು ಸಾಧ್ಯವೆ ? ಆದರೆ ಶ್ರೀನಿವಾಸ್ ಪ್ರಸಾದ್ ಮತ್ತು ಯಡಿಯೂರಪ್ಪ ಇಬ್ಬರೂ ತಮ್ಮ ತಮ್ಮ ಜಾತಿ ತಮ್ಮನ್ನು ಕೈಬಿಡುವುದಿಲ್ಲ ಎಂದು ಬಲವಾಗಿ ನಂಬಿದ್ದರು.
ಯಡಿಯೂರಪ್ಪ ಲಿಂಗಾಯತರ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿದರು. ನಾನೇ ಅಭ್ಯರ್ಥಿ ಎಂದುಕೊಳ್ಳಿ ಎಂದು ಮನವಿ ಮಾಡಿದರು. ಇಲ್ಲಿ ನಮ್ಮ ಅಭ್ಯರ್ಥಿ ಸೋತರೆ ನಾನು ಮುಂದಿನ ಮುಖ್ಯಮಂತ್ರಿಯಾಗುವುದಿಲ್ಲ. ನಮ್ಮ ಸಮುದಾಯದಲ್ಲಿ ಮುಖ್ಯಮಂತ್ರಿಯಾಗುವ ಇನ್ನೊಬ್ಬ ಅಭ್ಯರ್ಥಿ ಇಲ್ಲ ಎಂದು ಜಾತಿ ಭಾವನೆಯನ್ನು ಜಾಗೃತಗೊಳಿಸಲು ಯತ್ನಿಸಿದರು. ಯುದ್ಧ ಇನ್ನಷ್ಟು ಕಾವು ಪಡೆದುಕೊಂಡಿತು. ಎರಡೂ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಟೆಯ ವಿಷಯವನ್ನಾಗಿ ತೆಗೆದುಕೊಂಡಿದ್ದರಿಂದ ಹಣ ಕ್ಷೇತ್ರದಲ್ಲಿ ಹರಿಯತೊಡಗಿತು. ಇತ್ತೀಚಿನ ವರ್ಷಗಳಲ್ಲಿ ಕಾಣದಷ್ಟು ಪ್ರಮಾಣದಲ್ಲಿ ಕಾಂಚಾಣಾ ಕುಣಿಯತೊಡಗಿತು. ಜಾತಿ ವಿಜೃಂಬಿಸತೊಡಗಿತು. ಈ ವಿಚಾರಗಳಲ್ಲಿ ಎರಡೂ ಪಕ್ಷಗಳಲ್ಲಿ ಪ್ರಬಲ ಪೈಪೋಟಿ ಇತ್ತು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಎರಡೂ ಪಕ್ಷದವರು ಹಣ ಹಂಚುವಾಗ ಸಿಕ್ಕಿ ಬಿದ್ದರು. ಆದರೆ ಇದು ಎಲ್ಲರಿಗೂ ಗೊತ್ತಿದ್ದ ಸತ್ಯವಾದ್ದರಿಂದ ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ.
ಪ್ರಚಾರದ ಸಂದರ್ಭದಲ್ಲಿ ವೈಯಕ್ತಿಕ ತೇಜೋವಧೆಯ ಪ್ರಸಂಗಗಳೂ ನಡೆದವು. ಶ್ರೀನಿವಾಸ್ ಪ್ರಸಾದ ತಮ್ಮ ಸೌಜನ್ಯದ ನಡವಳಿಕೆಯನ್ನು ಕೈ ಬಿಟ್ಟು ಮುಖ್ಯಮಂತ್ರಿಗಳನ್ನು ನಾಶಪಡಿಸುವ ಮಾತನಾಡಿದರು. ಬಿಜೆಪಿ ಸಂಸದ ಪ್ರತಾಪ ಸಿಂಹ ಇತ್ತೀಚಿಗೆ ತನ್ನ ಪತಿಯನ್ನು ಕಳೆದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದರು. ಅವರಿಗೆ ಅಧಿಕಾರ ದಾಹ ಎಂದರು. ಇದು ಕ್ಷೇತ್ರದ ಜನರಲ್ಲಿ ಬೇಸರವನ್ನು ಉಂಟೂ ಮಾಡಿತು. ಚುನಾವಣಾ ಪ್ರಚಾರ ಇಷ್ಟು ಕೆಳ ಮಟ್ಟಕ್ಕೆ ಇಳಿಯುತ್ತದೆ ಎಂದು ಸಾಮಾನ್ಯ ಮತದಾರ ಅಂದುಕೊಂಡಿರಲಿಲ್ಲ. ಈ ರೀತಿ ಹೀನ ಮಾತುಗಳನ್ನು ಆಡುವವರ ಬಗ್ಗೆ ಜನರಿಗೆ ತಿರಸ್ಕಾರ ಮೂಡತೊಡಗಿತು. ಜನ ಆಗಲೇ ಒಂದು ತೀರ್ಮಾನಕ್ಕೆ ಬಂದಂತಿತ್ತು. ಸಾಮಾನ್ಯ ಮತದಾರರು ರಾಜಕೀಯ ಪಕ್ಷಗಳು ನೀಡುವ ಹಣ ಬೇಡ ಎನ್ನಲಿಲ್ಲ.  ಎರಡು ಪಕ್ಷಗಳ ನಾಯಕರಿಂದ ಹಣ ಪಡೆದು ತಮಗೆ ಸೂಕ್ತ ಎನ್ನಿಸಿದ ಅಭ್ಯರ್ಥಿಗೆ ಮತ ಚಲಾಯಿಸಿದರು. ಒಂದು ಮತಕ್ಕೆ ಒಂದು ಪಕ್ಷ ಎರಡರೀಂದ ನಾಲ್ಕು ಸಾವಿರ ರುಫಾಯಿ ನೀಡಿದರೆ ಇನ್ನೊಂದು ಪಕ್ಷ ಕೂಡ ಇಷ್ಟೇ ಹಣ ನೀಡಿತು. ಹೀಗಾಗಿ ಒಂದು ಮತಕ್ಕೆ ಅಲ್ಲಿ ಸಿಕ್ಕ ಮೌಲ್ಯ ಸುಮಾರು ಎಂಟು ಸಾವಿರ ರೂಪಾಯಿಗಳು !
ನಾನು ಈ ಎರಡೂ ಕ್ಷೇತ್ರಗಳ ಮತದಾರರನ್ನು ಅಭಿನಂದಿಸುತ್ತೇನೆ. ಅವರು ಹಣ ಪಡೆಯುವುದಕ್ಕೆ ನಿರಾಕರಿಸಲಿಲ್ಲ. ಎರಡೂ ಪಕ್ಷಗಳಿಂದ ಹಣ ಪಡೆದು ತಮಗೆ ಸರಿ ಎನಿಸಿದ ಪಕ್ಷಕ್ಕೆ ಮತಹಾಕಿದರು. ಈ ಮೂಲಕ ಹಣ ಪಡೆದೂ ಹಣ ತಮ್ಮ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಸಾಬೀತುಪಡಿಸಿದರು. ಹಾಗೆ ಜಾತಿ ಕೂಡ ತಮ್ಮ ಮತದಾನದ ಮೇಲೆ ಪ್ರಭಾವ ಬೀರಲಾರದು ಎಂದು ತೋರಿಸಿಕೊಟ್ಟರು. ಒಂದೊಮ್ಮೆ ಜಾತಿಯೇ ಮುಖ್ಯ ಎಂದು ಈ ಮತದಾರರು ಅಂದುಕೊಂಡಿದ್ದರೆ ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲ ಬೇಕಾಗಿತ್ತು. ಲಿಂಗಾಯತರು ಯಡೀಯೂರಪ್ಪ ಅವರ ಕಾರಣದಿಂದ ದಲಿತರು ಶ್ರೀನಿವಾಸ್ ಪ್ರಸಾದ್ ಕಾರಣದಿಂದ ಬಿಜೆಪಿಯನ್ನು ಬೆಂಬಲಿಸಬೇಕಾಗಿತ್ತು. ಆದರೆ ಇಲ್ಲಿನ ಮತದಾರರು ಹಾಗೆ ಮಾಡಲಿಲ್ಲ.
ಕೊನೆಯದಾಗಿ ಮತ್ತೆ ನೋಟಾ ಪ್ರಿಯರತ್ತ  ಬಂದರೆ ಇವರು ಮಾತ್ರ ಜನತಂತ್ರ ಮೌಲ್ಯಗಳ ಬಗ್ಗೆ ಅಪಾರ ಗೌರವ ಹೊಂದಿದವರು ಎಂದು ನನಗೆ ಅನ್ನಿಸುತ್ತದೆ. ಇವರಿಗೆ ಸಿಟ್ಟಿದೆ. ಈ ವ್ಯವಸ್ಥೆ ಯಾವ ಹಂತಕ್ಕೆ ಬಂದಿದ್ದೆ ಎನ್ನುವ ಬಗ್ಗೆ ನೋವಿದೆ. ಜೊತೆಗೆ ಅವರಲ್ಲಿ ಒಂದು ರೀತಿಯ ಪ್ರತಿಭಟನೆಯ ಜ್ವಾಲೆಯೂ ಇದೆ. ಈ ಪ್ರತಿಭಟನೆ ಬೇರೆ ಬೇರೆ ರೂಪಪಡೆಯಬೇಕು. ಆಗ ಮಾತ್ರ ನಮ್ಮ ವ್ಯವಸ್ಥೆ ಸುಧಾರಿಸುತ್ತದೆ. ಜನತಂತ್ರ ವ್ಯವಸ್ಥೆ ಅರ್ಥಪೂರ್ಣವಾಗುತ್ತದೆ.  ಆ ದಿಸೆಯಲ್ಲಿ ಇದೊಂದು ಸಣ್ನ ಹೆಜ್ಜೆ. ಒಂದು ಪುಟ್ಟ ಕಿಡಿ. ಇದು ಯಾವಾಗ ಬೆಂಕಿಯಾಗುತ್ತದೆ ಎಂಬುದನ್ನು ಒಬ್ಬ ದೇಶದ ನಾಗರಿಕನಾಗಿ ಪತ್ರಕರ್ತನಾಗಿ ನಾನು ಕಾಯುತ್ತಿದ್ದೇನೆ.

Sunday, February 12, 2017

ವಾಲೆಂಟೈನ್ ಮುನ್ನಾ ದಿನ ಪ್ರೀತಿ ಪ್ರೇಮವನ್ನು ನೆನೆದು.....!

ಮತ್ತೊಂದು ವಾಲೆಂಟೈನ್ ಡೆ ಬಂದಿದೆ. ಇದು ವಿಶ್ವ ಪ್ರೇಮಿಗಳ ದಿನ. ಈ ಬಗ್ಗೆ ವಿರೋಧವನ್ನು ವ್ಯಕ್ತಪಡಿಸುವವರೂ ಇದ್ದಾರೆ.ಪ್ರೇಮಿಗಳಿಗೂ ಒಂದು ದಿನ ಬೇಕಾ ಎಂದು ಪ್ರಶ್ನಿಸುವವರೂ ಇದ್ದಾರೆ. ವಾಲೆಂಟೈನ್ ಡೇ ವಿರೋಧಿಸಿ ಕೆಲವರು ರಸ್ತೆಗೆ ಇಳಿದಿದ್ದಾರೆ. ಪ್ರೇಮಿಗಳ ಮೇಲೆ ಹಲ್ಲೆಯೂ ನಡೆದಿದೆ. ಸಮಸ್ಯೆ ಎಂದರೆ ಇವರಲ್ಲಿ  ಯಾರಿಗೂ ಪ್ರೇಮ ಪ್ರೀತಿ ಎಂದರೇನು ಎಂಬುದು ಗೊತ್ತಿಲ್ಲ. ಹಾಗೆಂದ ಮಾತ್ರಕ್ಕೆ ನನಗೆ ಪ್ರೇಮಿ ಮತ್ತು ಪ್ರೀತಿ ಗೊತ್ತಿದೆ ಎಂದು ಹೇಳಲಾರೆ. ಯಾಕೆಂದರೆ ಗೊತ್ತಿದೆ ಎಂದ ತಕ್ಷಣ ತಿಳಿದುಕೊಳ್ಳುವ ಎಲ್ಲ ದಾರಿಗಳೂ ಮುಚ್ಚುತ್ತವೆ. ನಾನು ಪ್ರೇಮ ಮತ್ತು ಪ್ರೀತಿಯ ದಾರಿಯನ್ನು ಮುಚ್ಚಲಾರೆ.ಹೀಗಾಗಿ ನನಗೆ  ಪ್ರೀತಿ ಮತ್ತು ಪ್ರೇಮ ಗೊತ್ತಿದೆ ಎಂದುಕೊಳ್ಳುವುದಿಲ್ಲ.ಪ್ರೀತಿಯ ಗೊತ್ತು ಗುರಿ
ಇಲ್ಲದ ದಾರಿಯಲ್ಲಿ ನಾನೊಬ್ಬ ದಾರಿಹೋಕ,ಪಯಣಿಗ. ಈ  ಪಯಣ ಸಾಗುತ್ತಲೇ ಇರಬೇಕು.ಆಗ ಮಾತ್ರ ಪ್ರೀತಿ ಜೀವಂತವಾಗಿರುತ್ತದೆ.ಪ್ರೀತಿ ಪ್ರೇಮಗೊತ್ತಿದೆ ಎಂದ ತಕ್ಷಣ ಸಾಗುವ ದಾರಿ ಮುಚ್ಚಿಕೊಳ್ಳುತ್ತದೆ.ಪ್ರೀತಿ ಆ ಘಳಿಗೆಯಲ್ಲಿ ಸತ್ತು ಹೋಗುತ್ತದೆ.
ನಾನು ಯಾರು ಯಾರನ್ನು ಪ್ರೀತಿಸಿದೆ,ಪ್ರೇಮಿಸಿದೆ ?ಈ ಪ್ರಶ್ನೆಗಳಿಗೆ ಉತ್ತರ ಕೊಡುವುದು ಕಷ್ಟ.ಹಾಗೆ ನೋಡಿದರೆ ಇದು ಪ್ರಶ್ನೆಯೇ ಅಲ್ಲ. ನನ್ನನ್ನುಯಾರು ಯಾರು ಪ್ರೀತಿಸಿದರು ? ಯಾಕಾಗಿ ಪ್ರೀತಿಸಿದರು ಎಂಬುದು ಸರಿಯಾದ ಪ್ರಶ್ನೆ..ಏನೇ ಇರಲಿ ಪ್ರಶ್ನೆಗಳು ಇರುವುದು ಉತ್ತರ ಕಂಡುಕೊಳ್ಳುವುದಕ್ಕಾಗಿ... ನಮ್ಮನ್ನು  ನಾವು ತಿಳಿದುಕೊಳ್ಳುವುದಕ್ಕಾಗಿ.
ನಾನು ಮೊದಲು ಪ್ರೀತಿಸಿದ್ದು ಯಾರನ್ನು ಎಂದು  ಕೇಳಿಕೊಂಡರೂ ಉತ್ತರ ದೊರುಕುವುದಿಲ್ಲ.ಯಾಕೆಂದರೆ ನಾನು ಮೊದಲು ಯಾರನ್ನು ಇಷ್ಟ ಪಟ್ಟಿದ್ದೆನೋ ಅದು ಕೇವಲ ಇಷ್ಟವಾಗಿತ್ತೋ ಅಥವಾ ಪ್ರೀತಿಯಾಗಿತ್ತೋ ಎಂಬುದು ನನಗಿನ್ನೂ ತಿಳಿದಿಲ್ಲ.ಆದರೆ ನನ್ನ ಕಾಲೇಜು ದಿನಗಳಲ್ಲಿ  ಹಲವರ ಹಿಂದೆ ನಾನು ಸುತ್ತಿದ್ದು ನಿಜ.ಆದರೆ ಅವರಲ್ಲಿ  ಯಾರಿಗೂ ನಾನು ಪ್ರೀತಿಸುತ್ತೇನೆ ಎಂದು ಕೊನೆಯವರೆಗೂ ಹೇಳಿಯೇ ಇರಲಿಲ್ಲ.  ಆದರೆ ನಾನು ಇಷ್ಟಪಟ್ಟಿದ್ದ ಈ ಹುಡುಗಿಯರಲ್ಲಿ ಯಾರಿಗಾದರೂ ಮದುವೆಯಾದರೆ ಮಾತ್ರ  ನನ್ನ  ಹೃದಯದ ಮೂಲೆಯಲ್ಲಿ  ಸೆಳೆತ ಕಾಣಿಸಿಕೊಳ್ಳುತ್ತಿತ್ತು.  ಅವರಿಗೆ ಮದುವೆಯಾದಾಗ  ನನ್ನ ಒಳಗಿನ ಅನಾಥ ಭಾವ ಇನ್ನಷ್ಟು ಗಟ್ಟಿಯಾಗುತ್ತಿತ್ತು..  ಇದೆಲ್ಲ ಎಂತಹ ತಮಾಷೆ ಅನ್ನಿಸುತ್ತದೆ ನೋಡಿ. ನನ್ನ ಸಹಪಾಠಿಯಾಗಿದ್ದ  ಹುಡೂಗಿಯೊಬ್ಬಳು ತನ್ನ ಮದುವೆ ಆಮಂತ್ರಣ ಕೊಡಲು ಬಂದಾಗ ಒಂದು ಮಾತು ಹೇಳಿದ್ದಳು
" ನೀನು ಎಂಥಹ ಮುಗ್ಧ ಗೊತ್ತಾ ? ನಿನಗೆ ಹೆಣ್ನಿನ ಮನಸ್ಸು ಅರ್ಥವಾಗುವುದಿಲ್ಲ. ಪ್ರೀತಿ  ನಿವೇದನೆಯ ಸೂಕ್ಶ್ಮತೆಗಳು  ನಿನ್ನ  ಅರಿವಿಗೆ ಬರುವುದೇ ಇಲ್ಲ. ನಿನಗೆ ಅದು ಗೊತ್ತಾಗಿದ್ದರೆ ನಾನು  ಹೀಗೆ ಮದುವೆಯ ಆಮಂತ್ರಣವನ್ನು  ನಿನಗೆ ಕೊಡುವ ಪ್ರಮೇಯ ಬರುತ್ತಿರಲಿಲ್ಲ. ನಾವಿಬ್ಬರೂ ಸೇರಿ ಮದುವೆ  ಆಮಂತ್ರಣವನ್ನು ಹಂಚುತ್ತಿದ್ದೆವು. "
ಆ ಹುಡುಗಿ ಈ ಮಾತುಗಳನ್ನು ಹೇಳುವಾಗ ನನಗೆ ಸಂತೋಷವಾಗಿತ್ತೆ ?  ಆಥವಾ ನಾನೊಬ್ಬ ದಡ್ದ ಅಂತಾ ಅವಳು ಹೇಳುತ್ತಿದ್ದಾಳೆ ಎಂದು ಬೇಸರವಾಗಿತ್ತೆ ? ಈಗಲೂ ಈ ಪ್ರಶ್ನೆ ನನ್ನ ಮನಸ್ಸಿನಲ್ಲಿ ಹಾಗೆ ಕಾಡುತ್ತಿದೆ..
ನಾನು ಬೆಳಗಾವಿಯಲ್ಲಿ ಓದುವಾಗ ನನ್ನಪಕ್ಕದಲ್ಲಿ  ಕುಳಿತುಕೊಳ್ಳುತ್ತಿದ್ದ ಹುಡುಗಿ ಸುನಿತಾ ಘಾಟಗೆ ಅಂತಾ. ಆಕೆ  ಶ್ರೀಮಂತ ಮನೆತನದ ಹುಡುಗಿ. ಓದಿನಲ್ಲಿ ತುಂಬಾ  ಚುರುಕು. ಜೊತೆಗೆ ತುಂಬಾ ಸುಂದರಿ.. ಆಕೆ ನನಗೆ ಸ್ವಲ್ಪ ಮಟ್ಟಿಗೆ  ಇಂಗ್ಲೀಷ್ ಮಾತನಾಡುವುದನ್ನು ಕಲಿಸಿದಳು.. ಇಂಗ್ಲೀಷ್ ಸಿನಿಮಾಗಳನ್ನು ತೋರಿಸಿದಳು.. ಬೀರ್ ಕುಡಿಯುವದನ್ನು ಕಲಿಸಿದಳು. ಮನೆಗೆ ಕರೆದುಕೊಂಡು ಹೋಗಿ ಮರಾಠಿಗಳ ಊಟದ  ರುಚಿಯ ಪರಿಚಯ ಮಾಡಿಕೊಟ್ಟಳು... ಗೂಂಡಾನಂತಿದ್ದ ನನ್ನನ್ನು  ಸನ್ನಡತೆಯ ಹುಡುಗನನ್ನಾಗಿ ಮಾಡಿದಳು. ನನ್ನನ್ನು  ಸರಿ ದಾರಿಗೆ ತರಲು ಯತ್ನಿಸಿ ವಿಫಲರಾದ ನನ್ನ ಅಪ್ಪ ಅಮ್ಮ  ಬೇರೆ ದಾರಿ  ಕಾಣದೇ  ಊರು ಬಿಡಿಸಿ  ಬೆಳಗಾವಿಗೆ ಸಾಗು ಹಾಕಿದ್ದರು.. ಅಪ್ಪ ಅಮ್ಮ ಮಾಡಲಾಗದಿದ್ದುದನ್ನು  ಈ  ಹುಡುಗಿ  ಕೆಲವೇ ತಿಂಗಳಿನಲ್ಲಿ  ಮಾಡಿ ಬಿಟ್ಟಿದ್ದಳು.. ಆಗಲೇ ಹೆಣ್ಣು ಜೀವದ ಒಳಗೆ ಇರುವ ಈ ಪವಾಡ ಸದೃಶ ಶಕ್ತಿಯ ಮೊದಲ ಅರಿವು ನನಗಾಗಿತ್ತು.
ಆದರೆ ಎಂದೂ ನಾವು ಪ್ರೀತಿಯ ಬಗ್ಗೆ ಮಾತನಾಡಲಿಲ್ಲ.  ಐ ಲವ್ ಯು ಎಂದು ಹೇಳಿಕೊಳ್ಳಲಿಲ್ಲ. ಕೈ ಕೈ ಹಿಡಿದುಕೊಂಡು ಸುತ್ತುವಾಗಲೂ ಬೇರೆ ಭಾವ ಬರಲೇ ಇಲ್ಲ.  ನಾನು ನನ್ನ ಅಮ್ಮನನ್ನು ಆಕೆಯಲ್ಲಿ ಕಾಣುತ್ತಿದ್ದೆನೆ ? ನಿಜವಿರಬಹುದು.
ನಾನು ನನ್ನ ಓದಿ  ಮುಗಿಸಿ ಬೆಂಗಳೂರಿಗೆ ಬಂದೆ. ಯಾವ ಯಾವುದೋ ಕೆಲಸ ಮಾಡುತ್ತ ಬೆಂಗಳೂರಿನ ರಸ್ತೆಗಳಲ್ಲಿ ಅಲೆದಾಡುತ್ತಿದ್ದೆ. ನನ್ನ  ಪ್ರೀತಿ ಪ್ರೇಮದ  ಹುಡುಕಾಟ ಮುಂದುವರಿದಿತ್ತು.. ಆದರೆ ಯಾವ ಪ್ರೇಮ ಪ್ರಕರಣದಲ್ಲೂ ನಾನು ಜಯಶಾಲಿಯಾಗಿರಲಿಲ್ಲ... ಹುಡುಗಿಯರೆಲ್ಲ  ನನ್ನನ್ನು ರಿಜೆಕ್ಟ್ ಮಾಡುವುದು ಸಾಮಾನ್ಯವಾಗಿತ್ತು. ಆಗೆಲ್ಲ ಮಲ್ಲೇಶ್ವರಂ ನ  ನನ್ನ ರೂಮಿನಲ್ಲಿ ಕುಳಿತು ಸ್ನಾನ ಮಾಡದೇ ರಂ ಕುಡಿಯುತ್ತ ದೇವದಾಸನ ಪೋಜು ನೀಡುತ್ತ ಬದುಕು ಸಾಗಿಸುತ್ತಿದ್ದೆ .ನನ್ನ ಜೊತೆಗೆ ಇರುತ್ತಿದ್ದ ಎಲ್. ಸಿ,ನಾಗರಾಜ್,ಆಗಾಗ ಬರುತ್ತಿದ್ದ ವೇಣು ಎಲ್ಲರೂ ಒಂದಲ್ಲ ಒಂದು ಪ್ರೇಮ  ಪ್ರಕರಣದಲ್ಲಿ ಸಿಲುಕಿ  ಯಶಸ್ವಿಯಾಗದೇ ದೇವದಾಸರಂತೆ  ಜೀವನ ಸಾಗಿಸುತ್ತಿದ್ದರು..
ಇಂತಹ ದಿನಗಳಲ್ಲಿ ಮತ್ತೆ ನನ್ನ ಪ್ರೇಮ ಪ್ರಕರಣಗಳು ಪ್ರಾರಂಭವಾದವು.ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಹುಡುಗಿಯನ್ನು  ಪ್ರೇಮಿಸಿ ಮದುವೆಯ ಹಂತಕ್ಕೆ ಬಂದು ನಿಂತಿದ್ದೆ. ಈ  ಪ್ರೇಮ ವಿಫಲವಾಗುವುದಿಲ್ಲ ಎಂಬ ಅಧಮ್ಯ ವಿಶ್ವಾಸವೂ ನನ್ನಲ್ಲಿತ್ತು. ಆಗ ನಡೆದಿದ್ದು ಸಿನಿಮೀಯ ಘಟನೆ.ಕೆಲವೊಮ್ಮೆ ಬದುಕು ಸಿನಿಮಾಕ್ಕಿಂತ ರೋಚಕವಾಗಿರುತ್ತದೆ.
ಅದೊಂದು ದಿನ ಸೌಥ್ ಎಂಡ ಸರ್ಕಲ್ ಬಳಿ ಇರುವ  ನಮ್ಮ ಕಚೇರಿಯಲ್ಲಿದ್ದೆ.  ಅದು ಮನ್ವಂತರ ಎಂಬ ವಾರಪತ್ರಿಕೆಯ ಕಚೇರಿ. ನಾನು ಆ ಪತ್ರಿಕೆಯ ಮುಖ್ಯ ವರದಿಗಾರ.. ನಾನು ಪ್ರೇಮಿಸುತ್ತಿದ್ದವಳು ಅದೇ ಕಚೇರಿಯಲ್ಲಿ ಉಪ ಸಂಪಾದಕಿ. ಅವಳು ನನ್ನ ಪ್ರೇಮಭಿಕ್ಷೆಯನ್ನು ಸ್ವೀಕರಿಸಿದ್ದಳು.ನನಗೆ ನನ್ನ ಬದುಕಿನಲ್ಲಿ ಕೊನೆಗೂ ಒಬ್ಬ ಹುಡೂಗಿ ಸಿಕ್ಕಳಲ್ಲ ಎಂದು ಸಮಾಧಾನ. ಅಂದು ನನ್ನ ಕಚೇರಿಗೆ ಬಂದಿಳಿದವಳು  ಅದೇ ಸುನಿತಾ ಘಾಟಗೆ. ಹಾಗೆ ಬಂದವಳು ನೇರವಾಗಿ ನನ್ನ ಬಳಿಗೆ ಬಂದು ನನ್ನ ಬೆನ್ನ ಮೇಲೆ ಬಡ ಬಡನೇ ಗುದ್ದಿದಳು.ತಲೆಗೆ ಬಡಿದಳು. ಎಲ್ಲಿ ಹಾಳಾಗಿ ಹೋಗಿದ್ದೆ ಎಂದು ಬೈದಳು. ತಲೆಯ ಕೂದಲು ಹಿಡಿದು ಎಳೆದಳು..ನಾನು ವಿಚಿತ್ರ ಪರಿಸ್ಥಿಯಲ್ಲಿ ಸಿಲುಕಿಕೊಂಡಿದ್ದೆ.ನನ್ನ ಪಕ್ಕದಲ್ಲಿ  ನಾನು ಪ್ರೇಮಿಸಿ  ಮದುವೆಯಾಗಲಿರುವ ಹುಡುಗಿ  ಕುಳಿತಿದ್ದಳು.ಆಕೆ ತಪ್ಪು ತಿಳಿದುಕೊಂಡು ಈ  ಪ್ರೇಮವೂ ವಿಫಲವಾದರೆ ಎಂಬ ಆತಂಕ ನನ್ನದು.. ನಾನುಮುಜುಗರದಿಂದ ಆಕೆಯನ್ನು ನೋಡುತ್ತಿದ್ದೆ.
ತಕ್ಷಣ ಹೊರಡು ಎಂದಳು ಸುನಿತಾ.ಎಲ್ಲಿಗೆ ಎಂದು ಕೇಳಬೇಡ ಎಂದು ಫರ್ಮಾನು ಹೊರಡಿಸಿದಳು. ನಾನು ನನ್ನ ಪಕ್ಕದಲ್ಲಿ ಕುಳಿತಿದ್ದ ನಾನು ಪ್ರೇಮಿಸುತ್ತಿದ್ದವಳ ಕಡೆ ನೋಡಿದೆ.ಅವಳ ಮುಖ ಎಂದಿನಂತೆ ಇತ್ತು. ನಾನು ಸುನಿತಾ ಜೊತೆ  ಹೊರಟೆ.
ಅವಳ ಮನೆಗೆ ಸೇರಿದ ಕಂಪನಿಯ ಗೆಸ್ಟ್ ಹೌಸ್ ಇಂದಿರಾ ನಗರದಲ್ಲಿತ್ತು. ಆಕೆ ತನ್ನ ವಿದೇಶಿ ಕಾರಿನಲ್ಲಿ ನನ್ನನ್ನು ಕೂಡ್ರಿಸಿಕೊಂಡು ಆ ಗೆಸ್ಟ್ ಹೌಸ್ ಗೆ ಹೋಗುವಂತೆ ಡ್ರೈವರ್ ಗೆ ಸೂಚಿಸಿದಳು.ಆಕೆ  ಕಾರಿನಲ್ಲಿ ಮಾತನಾಡುತ್ತಲೇ ಇದ್ದಳು. ಶಶಿ ನೀನು ಎಷ್ಟುಒಳ್ಳೆಯವನು ಗೊತ್ತಾ ?ನಿನಗೆ ಗೊತ್ತಿಲ್ಲ ಯಾಕೆಂದರೆ ನೀನು ಕಾಡು ಪಾಪ.. ಕಾಡಿನಿಂದ ಬಂದವನು.ಆದರೆಈ ಕಾಡು ಪ್ರಾಣಿ ನನಗೆ ಇಷ್ಟ ಎಂದು ತಾನೇ ನಕ್ಕಳು.ನಾನು ನಗಲಿಲ್ಲ.ನನಗೆ  ನನ್ನ ಆಗಿನ ಪ್ರೇಮವನ್ನು ಉಳಿಸಿಕೊಳ್ಳಬೇಕಾಗಿತ್ತು.  ಈಕೆ ಬಂದು ಕೊನೆಗೂ ಕೈ ಹತ್ತಿದ ಈ ಪ್ರೇಮವನ್ನು ನಾಶಪಡಿಸುತ್ತಾಳೆ ಎಂದು ನನಗೆ ಅನ್ನಿಸತೊಡಗಿತ್ತು.
ನಾವು ಅವರ ಗೆಸ್ಟ್ ಹೌಸ್ ಗೆ ಬಂದೆವು. ಅಲ್ಲಿ ನಮಗಾಗಿ ಊಟ ಸಿದ್ದವಾಗಿತ್ತು.. ಆಕೆ ತನ್ನ ಕಥೆ ಹೇಳಿದಳು. ತಾನು  ಮುಂಬೈಗೆ ಹೋಗಿ ಸಿ ಏ ಮಾಡಿದ್ದು, ನಂತರ ಕುಟುಂಬದ ಉದ್ಯಮವನ್ನು ತಾನೇ ನೋಡಿಕೊಳ್ಳುತ್ತಿದ್ದುದು, ತಾನೀಗ ಕಂಪೆನಿಯ ಎಂ ಡಿ ಅಗಿರೋದು ಹೀಗೆ ಆಕೆಯ ಮಾತು ಮುಂದುವರಿದಿತ್ತು. ಊಟ ಮುಗಿಯುವ ಹೊತ್ತಿಗೆ ಆಕೆ ಮೂಲ ವಿಷಯಕ್ಕೆ ಬಂದಳು.

ಶಶಿ ನಾವು ಮದುವೆಯಾಗೋಣ ಕಣೋ.. ನಾನು ನಿನ್ನ ತುಂಬಾ ಪ್ರೀತಿಸ್ತೀನಿ. ನಾನು ಮದುವೆಯಾಗುವುದಿದ್ದರೆ ನಿನ್ನನ್ನು ಮಾತ್ರ..ನೀನು ಒಂದು ದಿನ ಪತ್ರಿಕೆ  ಪ್ರಾರಂಭಿಸು. ನಾನು ಅದರ ಪ್ರಕಾಶಕಿ.ಎಷ್ಟು ಲಕ್ಶ್ಯ ಬೇಕಾದರೂ ಖರ್ಚಾಗಲಿ.ನನಗೆತೊಂದರೆ ಇಲ್ಲ ಅಂದಳು.
ನನಗೆ  ಶಾಕ್ ಆಗಿತ್ತು.ನಾವೆಂದೂ ಪ್ರೀತಿ ಪ್ರೇಮದ  ಬಗ್ಗೆ ಮಾತನಾಡಿರಲಿಲ್ಲ. ಆಕೆ ನನ್ನನ್ನು ಪ್ರೀತಿಸುತ್ತಾಳೆ  ಎಂದು ಎಂದೂ ಕನಸು ಮನಸಿನಲ್ಲೂ ಎಣಿಸಿರಲಿಲ್ಲ...ನಾನು ಆಕೆಗೆ ಹೇಳಿದೆ
ಸಾರಿ, ನನ್ನ ಕಚೇರಿಯಲ್ಲಿ ನನ್ನ ಪಕ್ಕದಲ್ಲಿ  ಕುಳಿತ ಹುಡುಗಿಯನ್ನು ನೋಡಿದ್ದೀಯಲ್ಲ. ಅವಳನ್ನು ನಾನು ಪ್ರೀತಿಸುತ್ತಿದ್ದೇನೆ. ಆಕೆಗೆ ಮಾತು ಕೊಟ್ಟಿದ್ದೇನೆ..
ಆಕೆ ಒಮ್ಮೆಲೆ ಮಾತು ನಿಲ್ಲಿಸಿದಳು.. ಬಾ ನಿನ್ನನ್ನು  ನಿನ್ನ ಆಫಿಸಿನ ಬಳಿ ಬಿಡುತ್ತೇನೆ ಎಂದವಳು ನನ್ನ ಉತ್ತರಕ್ಕೂ ಕಾಯಲಿಲ್ಲ. ಕಾರಿನ ಬಳಿ ನಡೆದಳು.ಡ್ರೈವರ್ ನನ್ನು ಬಿಟ್ಟು ಅವಳೇ ಡ್ರೈವ್ ಮಾಡತೊಡಗಿದಳು.ನಮ್ಮ ನಡುವೆ ಮಾತು ಇರಲೇ ಇಲ್ಲ.ಕೇವಲ ಮೌನ.ಆ ಮೌನ ಅಸಹನೀಯವಾಗಿತ್ತು.. ನಮ್ಮ ಕಚೇರಿಯನ್ನು ತಲುಪಿದವಳು ನೇರವಾಗಿ ಒಳಗೆ ಬಂದಳು.. ನಾನು ಪ್ರೀತಿಸುತ್ತಿದ್ದವಳ ಬಳಿ ಬಂದು  ನೀನು ಅದೃಷ್ಟವಂತೆ. ಇಂತಹ ಹುಡುಗನ್ನು ಪಡೆದುಕೊಳ್ಳಲು ಪುಣ್ಯ ಮಾಡಿರಬೇಕು.. ನನ್ನ ಶಶಿಯನ್ನು ಚೆನ್ನಾಗಿ ನೋಡಿಕೋ..ಆತ ತುಂಬಾ ಸೂಕ್ಷ್ನ. ಆತನ ಮನಸ್ಸು ನೋಯಿಸಬೇಡ,, ಎಂದಳು.. ಹಾಗೆ ಹೊರಕ್ಕೆ ಬಂದು ಕಾರಿನಲ್ಲಿ ಮರೆಯಾದಳು..
ನಾನು ಮಾತು ಬಾರದೇ ನಿಂತಿದ್ದೆ...
ನಂತರದ ದಿನಗಳಲ್ಲಿ ಆಕೆಯನ್ನು ಹುಡುಕುವುದಕ್ಕೆ ನಾನು ಪ್ರಯತ್ನಿಸಿದೆ.. ಗೆಸ್ಟ್ ಹೌಸ್ ಗೆ ಹೋಗಿ ಕೇಳಿದರೂ ಯಾವುದೇ ವಿವರ ದೊರಕಲಿಲ್ಲ.  ಬೆಳಗಾವಿಯ ಅವರ ಮನೆಗೆ ಒಮ್ಮೆ ಹೋದರೂ ಆ ಮನೆಗೆ ಬೀಗ ಹಾಕಿತ್ತು..ಇದಾದ ಮೇಲೆ ಹಲವಾರು ಬಾರಿ ಆಕೆಯನ್ನು ಹುಡುಕುವುದಕ್ಕೆ ಪ್ರಯತ್ನಿಸಿದ್ದೇನೆ.. ಈಗಲೂ ಪ್ರಯತ್ನಿಸುತ್ತಿದ್ದೇನೆ.
ನನಗೆ ಈಗಲೂ ಅನ್ನಿಸುತ್ತದೆ..ನನಗೆ  ಆಗಲೂ ಪ್ರೀತಿ ಅರ್ಥವಾಗಿರಲಿಲ್ಲ.ಈಗಲೂ ಅರ್ಥವಾಗಿಲ್ಲ.  ಆದರೆ ನಾನು ಈಗಲೂ ಪ್ರೀತಿಯ ದಾರಿಯಲ್ಲಿರುವ ದಾರಿ ಹೋಕನೆ .ನನ್ನ ಹುಡುಕಾಟ ಮುಂದುವರಿದಿದೆ. ಮುಂದುವರಿಯುತ್ತದೆ.. ಆದರೆ ಈಗ ನನಗೆ  ಅನ್ನಿಸುತ್ತದೆ.ಪ್ರೀತಿ ಪ್ರೇಮ ಯಾರಿಗೂ ಅರ್ಥವಾಗಬಾರದು.ಅರ್ಥವಾದರೆ ಪ್ರೀತಿ ಸಾಯುತ್ತದೆ,  ಅರ್ಥವಾಗದೇ ಅರ್ಥಕ್ಕಾಗಿ ಹುಡುಕುವುದೇ ಅದ್ಭುತವಾದದ್ದು..
ಹೀಗೆ ಹುಡುಕುವಾಗಲೇ ಪ್ರೀತಿ ನಮ್ಮಲ್ಲಿ ಸ್ಥಾಯಿ ಯಾಗುತ್ತದೆ.ನಾವೇ ಪ್ರೀತಿಯಾಗುತ್ತೇವೆ..ಆಗ ಹೊರಗಿನ ಪ್ರೀತಿಯ ಹುಡುಕಾಟ ನಿಂತು ಒಳಗೆ ಇರುವ ಪ್ರೀತಿ ಸ್ಪೋಟವಾಗುತ್ತದೆ.ಅದೇ ಬದುಕಿನ ಅದ್ಭುತ ಕ್ಷಣ..


Saturday, January 28, 2017

ನೀ ಮತ್ತೆ ಬಂದೆಯಲ್ಲ ಮಾರಾಯ...!

ನೀ ಮತ್ತೆ ಬಂದೆಯಲ್ಲ ಮಾರಾಯ...!


ನೀ ಮತ್ತೆ ಪ್ರತ್ಯಕ್ಷನಾಗಿ ಬಿಟ್ಟೆಯಲ್ಲ ಮಾರಾಯಾ,,,
ಹಾಗೆ ನೋಡಿದರೆ ನೀ ಬಂದೇ ಬರುತ್ತೀಯಾ ಎಂಬುದು ನನಗೆ ಗೊತ್ತಿತ್ತು.
ಯಾಕೆಂದರೆ ನೀ ಭಕ್ತ ಪರಾಧೀನ. ಭಕ್ತರ ಕೈಗೊಂಬೆ.
ಬಾ ಎಂದರೆ ಬರುತ್ತೀಯಾ, ಹೋಗು ಎಂದರೆ ಹೋಗುತ್ತೀಯಾ ?
ಇದೆಲ್ಲ ಏನು ಮಾರಾಯಾ ?

ನೀ ದೇವರು, ನಿನ್ನನ್ನ ಕಾಯುವವರು ಯಾರು ?
ನೀ ಸರ್ವಾಂತರ್ಯಾಮಿ, ನೀ ಎಲ್ಲೆಡೆಗೂ ಇದ್ದೀಯಾ.
ಈ ವಿಶ್ವವೇ ನಿನ್ನ ಮನೆಯಾದರೆ, ನಿನಗೆ ಭಕ್ತರು ಕಟ್ಟುವ ಮನೆಯಾದರೂ ಯಾಕೆ ಬೇಕು..?
ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು ನನ್ನ ಮನೆ ಎಂದು ನಿನಗೆ ಅನ್ನಿಸಲೇ ಇಲ್ಲವಾ ?

ನೀನು ಅಪ್ಪ ಹೇಳಿದ್ದಕ್ಕೆ ಕಾಡಿಗೆ ಹೋದೆ.
ಯಾರೋ ಹೇಳಿದರೆಂದು ಹೆಂಡತಿಯನ್ನೆ ಬೆಂಕಿಗೆ ಹಾಕಿದೆ.
ಇದು ಕೊಲೆಯೇ ಆತ್ಮಹತ್ಯೆ ನೀ ಯೋಚಿಸಲೇ ಇಲ್ಲ.
 ನೀನಗೆ ಕೇಳಲಿಲ್ಲವೆ, ಆ ಹೆಣ್ಣಿನ ಧ್ವನಿ ?
ಅದು ಸೀತೆಯ ಅರ್ತನಾದವೆ ? ಶೂರ್ಪನಖಿಯ
ವಿರಹ ಗಾನವೆ ? ಲಕ್ಷ್ನಣನ ಒಂಟಿತನ ಪಿಸು ಧ್ವನಿಯೆ ?
ಅದು ಅಯೋಧ್ಯೆಯ ನೂರಾರು ಹೆಣ್ನು ಮಕ್ಕಳ
ಬಿಡುಗಡೆಯ ಕೂಗೆ ?
ಒಮ್ಮೆ ಕೇಳಿಸಿ ಕೋ ಆ ನೊಂದ ಬೆಂದ ಆತ್ಮಗಳ ಧ್ವನಿಯನ್ನು.

ನಿನ್ನ ಕೈಗಳು ರಕ್ತ ಸಿಕ್ತವಾಗಿವೆ.
ನೀ ಬಂದಲ್ಲಿ ಹೋದಲ್ಲಿ ರಕ್ತ ಹರಿದಿದೆ.
ರಕ್ತ ಹರಿಸಿ, ರಾಜ್ಯವನ್ನು ಕಟ್ಟಿದೆ. ಯಾರು ಯಾರನ್ನೋ ಮೆಟ್ಟಿದೆ.
ಇನ್ಯಾರದೋ ಬೆನ್ನು ತಟ್ಟಿದೆ. ಈಗ ಪ್ರತ್ಯಕ್ಷನಾದೆಯಲ್ಲ ನೀನು ?
ಈಗಲಾದರೂ ಸುಮ್ಮನಿರಲು ಏನು ಕೊಡಬೇಕು ಹೇಳು ?

ಬಂದಿದ್ದೀಯಲ್ಲ ಇರಲಿ ಬಿಡು. ನಿನ್ನ, ನಾಶವಾದ ದೇಶವನ್ನಾದರೂ ನೋಡು.
ಇಲ್ಲಿ ಮನಸ್ಸುಗಳು ಸತ್ತಿವೆ. ಆತ್ಮಗಳು ನಾಶವಾಗಿವೆ.
ಮಸೀದಿಗಳ ಅಡಿಯಲ್ಲಿ ದೇವಾಲಯಗಳ ಅವಶೇಷಗಳು.
ದೇವಾಲಯಗಳ ಅಡಿಯಲ್ಲಿ ಜೈನ ಬಸದಿಗಳು. ಬುದ್ಧ ಸ್ತೂಪಗಳು.
ಇದೆಲ್ಲವನ್ನು ಒಮ್ಮೆ ನೋಡಿ ಬಿಡು.

ನಿನ್ನ ಭಕ್ತರಿಗೆ ಬುದ್ದಿ ಮಾತು ಹೇಳಿ ಬಿಡು.
ಭಕ್ತ ಪರಾಧೀನನಾಗ ಬೇಡ ನೀನು.
ಸ್ವಂತ ವ್ಯಕ್ತಿತ್ವ ಇಲ್ಲದನು ಹೇಗೆ ಆದಾನು ದೇವರು..?

Friday, January 27, 2017

ನಾನು ಯಾರು ಗೊತ್ತೆ ? ವಿಶ್ವರೂಪಿ ನಾನು !

ಇವತ್ತಿನ ಸಂದರ್ಭದಲ್ಲಿ ಮನುಷ್ಯ ಎದುರಿಸುತ್ತಿರುವ ಸಮಸ್ಯೆಗಳು ಯಾವವು ? ಊಟ ವಸತಿ ಆತನ ಸಮಸ್ಯೆಯೆ ? ಶಾಂತಿ ಮತ್ತು ಸಮೃದ್ಧಿಯ ಬದುಕು ಆತನ ಸಮಸ್ಯೆಯೆ ?  ನಿಜ ಇವೆಲ್ಲ ಆತನ ಸಮಸ್ಯೆಗಳು.  ಆದರೆ ಇವಿಷ್ಟೇ ಅಲ್ಲ. ನಾನು ನೋಡಿದ ಹಾಗೆ ಸಮಸ್ಯೆ ಇಲ್ಲದ ಮನುಷ್ಯ ಇಲ್ಲವೇ ಇಲ್ಲ. ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ಸಮಸ್ಯೆಗಳು. ಒಟ್ಟಿನಲ್ಲಿ ಶಾಂತಿಯುತ ಬದುಕು ಆತನಿಗೆ ಮರೀಚಿಕೆ. ನನ್ನ ಬದುಕಿನಲ್ಲಿ ಇದುವರೆಗೆ ಸಂಪರ್ಕಕ್ಕೆ ಬಂದ ಯಾರೂ ಸಹ ನನಗೆ ಸಮಸ್ಯೆ ಇಲ್ಲ, ನನ್ನ ಬದುಕು ಸುಂದರವಾಗಿದೆ ಎಂದು ಹೇಳಿದವರು ಯಾರೂ ಇಲ್ಲ. ಎಲ್ಲರೂ ಒಂದಲ್ಲ ಒಂದು ಸಮಸ್ಯೆಯ ನಡುವೆಯೇ ಬದುಕುತ್ತಿರುತ್ತಾರೆ. ಆದರೆ ಸಮಸ್ಯೆಗಳ ನಡುವೆ ಬದುಕುತ್ತಿರುವವರು ಬೇರೆಯವರಿಗೆ ಸಮಸ್ಯೆಯಾಗುವುದು ಮಾತ್ರ ತಪ್ಪುವುದಿಲ್ಲ.
ವೇದಾಂತದಲ್ಲಿ ಬಹುಮುಖ್ಯ ಪ್ರಶ್ನೆ ಎಂದರೆ ನಾನು ಯಾರು ಎಂಬುದೇ. ನಾನು ಯಾರು ಎಂಬ ಪ್ರಶ್ನೆಗಳಿಗೆ  ಬೇರೆ ಬೇರೆ ವೇದಾಂತಿಗಳು ಬೇರೆ ಬೇರೆ ಉತ್ತರ ನೀಡಿದ್ದಾರೆ.  ಆದರೆ ಇಂದಿನ ಸಾಮಾನ್ಯ ಮನುಷ್ಯನಿಗೆ ಈ ಪ್ರಶ್ನೆ ಕೇಳಿದರೆ, ಆತ ತನ್ನ ಹೆಸರನ್ನು ಹೆಳಬಹುದು. ತನ್ನ ಕುಲ ಗೋತ್ರವನ್ನು ಹೇಳಿ ತನ್ನನ್ನು ಪರಿಚಯ ಮಾಡಿಕೊಡಲು ಯತ್ನ ನಡೆಸಬಹುದು. ಹೆಸರು ಮತ್ತು ಕುಲ ಗೋತ್ರಗಳು ನಾನು ಯಾರು ಎಂಬ ಪ್ರಶ್ನೆಗೆ ಸಮಾಜ ಎನೆಂದು ಗುರುತಿಸುತ್ತದೆ ಎಂಬುದೇ ಉತ್ತರ ವಾಗಿರುತ್ತದೆ. ಆದರೆ ಸಮಾಜವನ್ನು ಪ್ರತ್ಯೇಕಿಸಿ ನಮಗೆ ನಾವೇ ಈ ಪ್ರಶ್ನೆ ಕೇಳಿಕೊಂಡರೆ ಉತ್ತರ ಪಡೆಯುವುದು ಅಷ್ಟು ಸುಲಭವಲ್ಲ. ಸಮಾಜ ನಮ್ಮನ್ನು ಗುರುತಿಸುವಿಕೆಯಲ್ಲೂ ಏಕರೂಪತೆ ಇಲ್ಲ. ಅದು ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆಯಾಗಿರುತ್ತದೆ. ಆಯಾ ವ್ಯಕ್ತಿಗಳು ಇನ್ನೊಬ್ಬ ವ್ಯಕ್ತಿಯನ್ನು ಗುರುತಿಸುವಾಗ ಕೇವಲ ಅವರ ಕುಲ ಮತ್ತು ಗೋತ್ರಗಳಿಗೆ ಮಾತ್ರ ಸಿಮಿತವಾಗಿರುವುದಿಲ್ಲ. ಇದನ್ನೂ ಮೀರಿ ತಾವು ಗೃಹಿಸಿದ ವ್ಯಕ್ತಿ ವಿಶೇಷಗಳನ್ನು ಅದಕ್ಕೆ ಸೇರಿಸಿ ಬಿಡುತ್ತಾರೆ. ಉದಾಹರಣೆಗೆ ನನ್ನನ್ನು ಕೇವಲ ಶಶಿಧರ್ ಭಟ್ಟ ಎಂಬ ಹೆಸರಿಗೋ ನಾನು ಹೊಂದಿರುವ ಹುದ್ದೆಗೂ ಸೀಮಿತವಾಗಿ ಗುರುತಿಸುವುದಿಲ್ಲ. ನನ್ನ ಹೆಸರಿನ ಜೊತೆಗೆ ಅವರು ನನ್ನನ್ನು ಹೇಗೆ ಗೃಹಿಸಿದ್ದಾರೆ ಎಂಬುದನ್ನು ಅದಕ್ಕೆ ಸೇರಿಸುತ್ತಾರೆ. ಹೀಗಾಗಿ ಇಂದು ಅರ್ಥದಲ್ಲಿ ಒಬ್ಬ ವ್ಯಕ್ತಿ ವಿಶ್ವರೂಪಿ. ಆತನಿಗೆ ಒಂದೆ ರೂಪ ಗುಣವಿಲ್ಲ. ಆತನಿಗೆ ಪರಿಚಯವಿರುವ, ಆತನ ಪರಿಚಯ ಇಲ್ಲದಿದ್ದರೆ ಅವನನ್ನು ಹುದ್ದೆ ಮತ್ತು ಹೆಸರಿನ ಮೂಲಕ ತಿಳಿದುಕೊಂಡವರೂ ಒಂದು ಪುನರ್ ಸೃಷ್ಟಿ ಮಾಡಿಬಿಡುತ್ತಾರೆ. ಹೀಗಾಗಿ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಹಲವು ರೂಪಗಳನ್ನು, ಅವತಾರಗಳನ್ನು ಹೊಂದಿದ ವ್ಯಕ್ತಿಯಾಗಿ ಬಿಡುತ್ತಾನೆ. ನಾನು ಹಾಗೆ ಒಂದು ರೀತಿಯಲ್ಲಿ ವಿಶ್ವರೂಪಿ.
ನನಗೂ ಒಂದು ದಿನ ನಾನು ಯಾರು ಎಂಬ ಪ್ರಶ್ನೆ ಕಾಡತೊಡಗಿತು. ನಾನು ಈ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಂಡೆ. ಆದರೆ ಈ ಪ್ರಶ್ನೆಗೆ ಉತ್ತರ ಸರಳವಾಗಿ ದೊರಕಲಿಲ್ಲ. ನನ್ನನ್ನೇ ಈ ಪ್ರಶ್ನೆಯನ್ನು ಕೇಳಿಕೊಂಡಾಗ ನನಗೆ ದೊರಕಿದ ಉತ್ತರ ನಾನು ಎಂಬುದೇ ಇಲ್ಲ ಎಂಬ ಉತ್ತರವಾಗಿತ್ತು. ಹೀಗಾಗಿ ಸಮಾಜ ನನ್ನನ್ನು ಹೇಗೆ ಗುರುತಿಸುತ್ತದೆ ಎಂಬುದರ ಮೇಲೆ ಈ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಬೇಕು ಎಂದು ನನಗೆ ಅನ್ನಿಸತೊಡಗಿತು. ಹೀಗಾಗಿ ನನ್ನನ್ನು ಬಲ್ಲವರು, ನನ್ನನ್ನು ಹತ್ತಿರದಿಂದ ನೋಡಿದವರು ನನ್ನನ್ನು ಏನೆಂದು ಗುರುತಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಪ್ರಾರಂಭಿಸಿದೆ. ಮೊದಲು ನನ್ನ ಅಮ್ಮ ಮತ್ತು ಸಹೋದರ ನನ್ನ ಬಗ್ಗೆ ಏನೆಂದುಕೊಂಡಿದ್ದಾರೆ ಮತ್ತು ಅವರು ನನ್ನನ್ನು ಹೇಗೆ ಗೃಹಿಸುತ್ತಾರೆ ಎಂಬ ಪ್ರಶ್ನೆಗೆ ಮೊದಲು ಉತ್ತರ ಕಂದುಕೊಳ್ಳಲು ಯತ್ನ ನಡೆಸಿದೆ. ಈ ಪ್ರಶ್ನೆಗೆ  ತುಂಬಾ ಸರಳವಾದ ಉತ್ತರ ದೊರಕಿತು. ನನ್ನ ಅಮ್ಮನ ಪ್ರಕಾರ ನನ್ನಂಥ ಮಗ ಬೇರೆ ಯಾರೂ ಇಲ್ಲ. ನಾನು ಮಹಾನ್ ಸಾಧಕ. ಕಷ್ಟದಿಂದ ಮೇಲೆ ಬಂದವನು. ಒಳ್ಳೆಯ ಗುಣಗಳ ಗಣಿ. ನನ್ನ ತಮ್ಮನ ಅಭಿಪ್ರಾಯ ಇದಕ್ಕಿಂತ ಬೇರೆ ಇರಲಿಲ್ಲ. ಈ ಬಗ್ಗೆ ನನಗೆ ನಗು ಬಂತು. ನಾನು ಅಮ್ಮ ತಮ್ಮ ಅಂದುಕೊಂಡಷ್ಟು ಒಳ್ಳೆಯವನಲ್ಲ...!
ಇನ್ನು ನನ್ನ ಕುಟುಂಬದವರು ನನ್ನ ಬಗ್ಗೆ ಏನು ಅಂದುಕೊಂಡಿರಬಹುದು ? ಅವರ ಪ್ರಕಾರ ನನ್ನ ರೂಪ ಯಾವುದು ?  ವಯಸ್ಸಿಗೆ ಬಂದ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮತ್ತು ಗೌರವವಿದ್ದರೂ ಜಗತ್ತಿನಲ್ಲಿ ಅತಿ ದಡ್ಡರೆಂದರೆ ನನ್ನ ಅಪ್ಪ ಅಮ್ಮ ಎಂದು ಅನ್ನಿಸುತ್ತಿರುತ್ತದೆ. ಈ ಭಾವನೆಗೆ ಕಾರಣ ಜನರೇಷನ್ ಗ್ಯಾಪ್.. ಮಹಾನ್ ಬೇಜವಾಬ್ದಾರಿ, ಕುಟುಂಬದ ಬಗ್ಗೆ ಪ್ರೀತಿ ಗೌರವ ಇಲ್ಲದವನು. ವೈಯಕ್ತಿಕ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳದವನು. ನನ್ನ ಬದುಕು ಸೆಟಲ್ ಆಗಲು ಕೆಲಸ ಮಾಡದವನು.. ಹೀಗೆ ಆರೋಪ ಪಟ್ಟಿ ದೊಡ್ದದಾಗುತ್ತದೆ. ಈ ಗೃಹಿಕೆಯಲ್ಲಿ ಸ್ವಲ್ಪ ಸತ್ಯವೂ ಮಿಥ್ಯೆಯೂ ಎರಡು ಸೇರಿಕೊಂಡಿದೆ ಎಂದು ನನಗೆ ಅನ್ನಿಸ್ತು. ಅವರು ಅಂದುಕೊಂಡಷ್ಟು ನಾನು ಕೆಟ್ಟವನಿರಲಿಕ್ಕಿಲ್ಲ, ಮತ್ತು ಬೇಜವಾಬ್ದಾರಿಯ ಮನುಷ್ಯ ಆಗಿರಲಿಕ್ಕಲ್ಲ ಎಂದುಕೊಂಡೆ.
ಇನ್ನು ನನಗಿರುವ ಸ್ನೇಹಿತೆಯರು ಸ್ನೇಹಿತರು ಎನೆಂದುಕೊಂಡಿರಬಹುದು. ಅವರ ಪ್ರಕಾರ ನನ್ನ ರೂಪ ಯಾವುದು ? ನಾನು ಯೋಗ್ಯನೆ ಅಯೋಗ್ಯನೆ ಎಂಬ ಪ್ರಶ್ನೆ. ನನಗೆ ಸ್ನೇಹಿತರ ಸಂಖ್ಯ ಕಡಿಮೆ. ಆದರೆ ಸ್ನೇಹಿತಿಯರಿದ್ದಾರೆ.. ನನಗೆ ಯಾವೊದೋ ಒಬ್ಬ ಕಳ್ಲ ಜ್ಯೋತಿಷಿ ಯಾವಾಗಲೋ ಹೇಳಿದ ಮಾತು ನೆನಪಾಗುತ್ತದೆ. ಜ್ಯೋತಿಷಿ ಕಳ್ಳನಾದರೂ ಆತ ಹೇಳಿದ ಮಾತು ನಿಜವೇನೋ ಎಂದು ಹಲವು ಬಾರಿ ಅಂದುಕೊಂಡಿದ್ದಿದೆ. ಆತ ಹೇಳಿದ್ದ; ನಿಮ್ಮ ಉನ್ನತಿಗೆ ಮತ್ತು ನಾಶಕ್ಕೆ ಹೆಣ್ಣೇ ಕಾರಣವಾಗುತ್ತಾಳೆ...! ನನ್ನ ಹಲವಾರು ಸ್ನೇಹಿತೆಯರು ನನ್ನನ್ನು ಪ್ರೀತಿಯಿಂದ ನೋಡಿಕೊಂಡಾಗ ಕೆಲವರು ಇಲ್ಲ ಸಲ್ಲದ ಆರೋಪ ಮಾಡಿದಾಗ  ಈ ಮಾತು ನನಗೆ ನೆನಪಾಗುತ್ತದೆ. ಆದರೆ ಗಂಡಸರಿಗಿಂತ ಹೆಂಗಸರ ಜೊತೆ ಹೆಚ್ಚು ಸೇಫ್ ಎಂದುಕೊಳ್ಳುವ ನಾನು ನನ್ನ ಉನ್ನತಿ ಹೆಣ್ಣಿನಿಂದಲೇ ಎಂಬುದನ್ನು ಯಾವುದೇ ಮುಜುಗರವಿಲ್ಲದೇ ಒಪ್ಪಿಕೊಳ್ಳುತ್ತೇನೆ. ಆದರೆ ನಾಶ ಎಂಬುದನ್ನು ನಾನು ಒಪ್ಪುವುದಿಲ್ಲ. ಆದರೆ ಹಲವು ಸ್ನೇಹಿತೆಯರಿಂದ ನಾನು ತೊಂದರೆ ಅನುಭವಿಸಿದ್ದು ಮಾತ್ರ ನಿಜ. ನನಗೆ ಅನ್ನಿಸುವ ಹಾಗೆ ನನ್ನ ಸ್ನೇಹಿತೆಯರು ನನ್ನನ್ನು ವಿಭಿನ್ನವಾಗಿ ಗೃಹಿಸಿದ್ದಾರೆ. ಕೆಲವರ ಪ್ರಕಾರ ನಾನು ಸಾಧು ಮತ್ತು ಬೋಳೇ ಶಂಕರ. ನನಗೆ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎಂಬುದೇ ತಿಳಿಯುವುದಿಲ್ಲ. ಎಲ್ಲರನ್ನು ನಂಬಿ ಮೋಸ ಹೋಗುತ್ತೇನೆ. ಇನ್ನೂ ಕೆಲವರ ಪ್ರಕಾರ ನಾನು ಶ್ರೀ ಕೃಷ್ಣ, ಶ್ರೀ ರಾಮಚಂದ್ರ ಅಲ್ಲ. ಗೋಪಿಕಾ ಸ್ತ್ರೀಯರ ನಡುವೆ ಇರುವುದಕ್ಕೆ ಇಷ್ಟ ಪಡುತ್ತೇನೆ. ಈ ಮಾತು ಸಂಪೂರ್ಣ ಸುಳ್ಳಲ್ಲ.
ಆದರೆ ಸ್ನೇಹಿತೆಯರಾಗಲೀ, ನನ್ನನ್ನು ಬಲ್ಲ ಮಹಿಳೆಯರಾಗಲೀ ನನ್ನನ್ನು ಕಳ್ಳ ಸುಳ್ಳ, ಮೋಸಗಾರ ಎಂಬುದನ್ನು ಹೇಳುವುದಿಲ್ಲ. ನಾನು ವ್ಯಾಮೋಹಿಯಾದರೂ ಮೋಸಗಾರ ಎಂದು ಹೇಳುವುದಿಲ್ಲ.
ನನ್ನ ಜೊತೆಗೆ ಕೆಲಸ ಮಾಡಿದವರು ನನ್ನನ್ನು ಹೇಗೆ ಗುರುತಿಸುತ್ತಾರೆ ? ಈ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ನಾನು ತೀವ್ರ ಯತ್ನ ನಡೆಸಿದೆ. ಇದು ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದರೆ ಮಾಧ್ಯಮದಲ್ಲಿ ಕೆಲಸ ಮಾಡುವವರು ಎಲ್ಲವನ್ನು ಕರಗತ ಮಾಡಿಕೊಂಡಿರುತ್ತಾರೆ. ಆದರೆ ಅವರು ಆಗಾಗ ನನ್ನ ಎದುರಿಗೆ ಆಡುವ ಮಾತುಗಳು, ನನ್ನ ಬಗ್ಗೆ ಬೇರೆಯವರ ಜೊತೆ ಆಡುವ ಮಾತುಗಳನ್ನೆಲ್ಲ ಸೇರಿಸಿ ಅವರು ನನ್ನ ಬಗ್ಗೆ ಏನೆಂದುಕೊಳ್ಳುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಯತ್ನ ನಡೆಸಿದೆ. ನನ್ನ ಜೊತೆಗೆ ಬಹಳ ವರ್ಷ ಕೆಲಸ ಮಾಡಿದ ವ್ಯಕ್ತಿಯೊಬ್ಬನನ್ನು ಈ ಬಗ್ಗೆ ಕೇಳಿದೆ. ಆತ ಹೇಳಿದ್ದು ನನಗೆ ನಗು ಭರಿಸಿತು. ಆತ ಒಬ್ಬರ ಹೆಸರು ಹೇಳಿದ. ನಿಮಗೆ ಅವರಿಗೆ ಸಂಬಂಧವಿದೆಯಂತೆ ಎಂದು ಯಾವುದು ಗುಟ್ಟು ಹೇಳುವಂತೆ ಹೇಳಿದ. ಎಲ್ಲರೂ ಹಾಗೆ ಮಾತನಾಡಿಕೊಳ್ಳುತ್ತಾರೆ ಅಂದ. ನನಗೆ ನಗು ಬಂತು. ಹೌದಾ ? ನಿಮ್ಮ ಜೊತೆ ನನಗೆ ಸಂಬಂಧವಿಲ್ಲವಾ ಎಂದು ಕೇಳಿದೆ. ಆತ ತಡಬಡಾಯಿಸಿದ. ಹಾಗಲ್ಲ ಸಾರ್ ಅವರನ್ನು ನೀವು ದೂರವಿಡುವುದು ಒಳ್ಳೆಯದು ಎಂಬ ಬಿಟ್ಟಿ ಸಲಹೆಯನ್ನು ನೀಡಿದ. ನನಗೆ ಯಾರ ಜೊತೆಗೋ ಸಂಬಂಧವಿದ್ದರೆ ನಿಮಗೇನಾದರೂ ಸಮಸ್ಯೆಯಾಗುತ್ತದೆಯೆ ಎಂದು ಪ್ರಶ್ನಿಸಿದೆ. ಆತ ಉತ್ತರ ನೀಡಲಿಲ್ಲ. ಹಾಗೆ ನನ್ನ ಜೊತೆಗೆ ಕೆಲಸ ಮಾಡಿ ಈಗ ಬೇರೆಡೆ ಇರುವವರು ನನ್ನ ಬಗ್ಗೆ ಏನು ಅಂದುಕೊಂಡಿರಬಹುದು ಎಂಬ ಕುತೂಹಲವನ್ನು ನಾನು ತಣಿಸಿಕೊಳ್ಳಬೇಕಾಗಿತ್ತು. ಹೀಗಾಗಿ ಕೆಲವು ಸ್ನೇಹಿತೆಯರನ್ನು ಈ ಬಗ್ಗೆ ವಿಚಾರಿಸಿದೆ. ಮಾಧ್ಯಮದಲ್ಲಿ ಇರುವವರಲ್ಲಿ ಬಹಳಷ್ಟು ಜನರಿಗೆ ನನ್ನ ಬಗ್ಗೆ ಸದಾಭಿಪ್ರಾಯ ಇರಲಿಲ್ಲ. ಕೆಲವರಿಗೆ ವೃತ್ತಿ ಮಾತ್ಸರ್ಯವಿತ್ತು. ಇನ್ನು ಕೆಲವರಿಗೆ ನನ್ನ ಬಗ್ಗೆ ಕೆಲವರು ಆಡುವ ಒಳ್ಳೆಯ ಮಾತುಗಳು ಈರ್ಷ್ಯೆಯನ್ನು ಉಂಟು ಮಾಡಿತ್ತು. ಇನ್ನು ಕೆಲವರಿಗೆ ನಾನು ಭಹಿರಂಗವಾಗಿ ಆಡುವ ಮಾತುಗಳು, ಮಾಡುವ ಟೀಕೆಯಿಂದ ಸಿಟ್ಟು ಬಂದಿತ್ತು. ಇವರೆಲ್ಲ ನನ್ನನ್ನು ವ್ಯಯಕ್ತಿಕ ಕಾರಣಗಳಿಗಾಗಿ ಟೀಕಿಸುತ್ತಿರುವುದು ಧ್ವೇಷಿಸುತ್ತಿರುವುದನ್ನು ಗಮನಕ್ಕೆ ಬಂತು. ಇವರೂ ಸಹ ನನ್ನ  ವೈಯಕ್ತಿಕ ನಡುವಳಿಗಳನ್ನು ಟೀಕಿಸಿ ತಮ್ಮ ಕೋಪವನ್ನು ತೀರಿಸಿಕೊಳ್ಳುತ್ತಿದ್ದರು. ಇವರಿಗೂ ನಾನು ಯಾರೂ ಇಷ್ಟ ಪಡದ ವ್ಯಕ್ತಿ ನಾನು. ಇವರ ಗೃಹಿಕೆಯೂ ಸಂಪೂರ್ಣ ಸತ್ಯವಲ್ಲ. ನಾನು ಎಲ್ಲರೂ ಸಾಮೂಹಿಕವಾಗಿ ತಿರಸ್ಕರಿಸಬೇಕಾದ ವ್ಯಕ್ತಿ ಅಲ್ಲ ಅಂದುಕೊಂಡೆ. ಆದರೆ ಅದೂ ಸಹ ಅವರ ಗೃಹಿಕೆಯ ನನ್ನ ರೂಪವಾಗಿತ್ತು.
ಇನ್ನು ಸಾಮಾಜಿಕ ಜಾಲ ತಾಣಗಳಲ್ಲಿ ನನ್ನು ಟೀಕಿಸುವ ಬೈಯುವವರ ಸಂಖ್ಯೆ ದೊಡ್ದದಿದೆ. ಅದಕ್ಕೆ ಬಹುಮುಖ್ಯ ಕಾರಣ ನಾನು ಬಲಪಂಥೀಯರನ್ನು ಕೋಮುವಾದಿಗಳನ್ನು ಸತತವಾಗಿ ಟೀಕಿಸುತ್ತಿರುವುದು ಕಾರಣ. ಇತ್ತೀಚೆಗೆ ನನ್ನ ಪ್ರೈಂ ಟೈ ನ್ಯೂಸ್ ನಲ್ಲಿ ಬಿಜೆಪಿ ನಾಯಕ ಡಾ. ವಾಮನಾಚಾರ್ಯ ಪಾಕಿಸ್ಥಾನಕ್ಕೆ ಹೋಗಿ ಎಂದು ನನಗೆ ಫರ್ಮಾನು ಹೊರಡಿಸಿಬಿಟ್ಟಿದ್ದರು. ನಾನು ಒಂದು ಕಾಲದಲ್ಲಿ ಎಡಪಂಥೀಯ ವಿಚಾರ ಧಾರೆಯನ್ನು ಒಪ್ಪಿಕೊಂಡಿದ್ದರೂ ಈಗ ಎಡಪಂಥೀಯನಲ್ಲ. ನಾನು ಬಲಪಂಥೀಯ ವಿರೋಧಿ. ಕೋಮುವಾದ, ಜಾತಿಯತೆಯ ವಿರೋಧಿ. ಹೀಗಾಗಿ ಈ ಜನರ ಪಾಲಿಗೆ ನಾನು ದೊಡ್ದ ವಿಲನ್. ದೇಶ ಧ್ರೋಹಿ. ಹಿಂದೂ ವಿರೋಧಿ. ಇದೂ ಕೂಡ ಅವರ ಗ್ರಹಿಕೆ.
ಇದನ್ನೆಲ್ಲ ನೋಡಿದ ಮೇಲೂ ನಾನು ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕಲೇ ಇಲ್ಲ. ನಾನು ಇವರೆಲ್ಲ ಹೇಳಿದಂತೆ ಇರುವ ವ್ಯಕ್ತಿಯಾಗಿರಬಹುದು, ಆಗದೆಯೂ ಇರಬಹುದು. ಇವರೆಲ್ಲ ನನ್ನನ್ನು ಗ್ರಹಿಸಿದ್ದರಲ್ಲಿ ಕೆಲವು ಅಂಶಗಳು ಸೇರಿ ಇನ್ನೊಂದು ವ್ಯಕ್ತಿತ್ವ ನಾನಾಗಿರಬಹುದು. ಇದಕ್ಕೆ ಹೀಗೆ ಎಂದು ಉತ್ತರ ನೀಡುವುದು ಕಷ್ಟ. ಆದರೆ ನನಗೆ ಒಂದು ವಿಷಯದಲ್ಲಿ ಸಂ ತೋಷವಿದೆ. ಅದೆಂದರೆ ನನ್ನ ವಿಶ್ವರೂಪ; ನಾನು ವಿಶ್ವರೂಪಿ.
ಈ ಲೇಖನವನ್ನು ಓದಿದವರು ನನಗೆ ಇನ್ನೂ ಕೆಲವು ರೂಪಗಳನ್ನು ಕೊಡಬಹುದು, ಮಾತನಾಡಬಹುದು. ತಮ್ಮ ಈ ಹಿಂದಿನ ಗೃಹಿಕೆ ಸರಿಯಾದುದು ಎಂಬುದು ಈ ಲೇಖನದಿಂದ ಸಾಬೀತಾಗಿದೆ ಎಂದು ಸಂತೋಷಪಡಬಹುದು. ಹಾಗೆ ತಮ್ಮ ಗೃಹಿಕೆಯನ್ನು ಬದಲಿಸಿಕೊಳ್ಳಬಹುದು. ಆದರೆ ನನಗೆ ಒಂದು ರೂಪವಿಲ್ಲ, ನಾನು ಬಹುರೂಪಿ ಎಂಬುದು ಸಾಬೀತಾಗುತ್ತದೆ. ಇದಾದ ಮೇಲೂ ನನಗಿರುವ ಕುತೂಹಲ ಕಡಿಮೆಯಾಗಿಲ್ಲ. ಇವರೆಲ್ಲ ನನ್ನನ್ನು ಗೃಹಿಸಿರುವ ಬಗ್ಗೆ ನನಗೆ ಅನುಮಾನ ಹಾಗೆಯೇ ಮುಂದುವರಿದಿದೆ.ನಾನು ಇವರೆಲ್ಲ ಅಂದುಕೊಂಡಷ್ಟು ಕೆಟ್ಟವನಲ್ಲದಿರಬಹುದು ಎಂದು ನನಗೆ ಅನ್ನಿಸುತ್ತದೆ,  ಹಾಗೆ ತುಂಬಾ ಒಳ್ಳೆಯವನೂ ಅಲ್ಲ ಎಂದು ಆಗಾಗ ಅನ್ನಿಸುವುದಿದೆ. ಏನೇ ಅನ್ನಿಸಲಿ, ನಾನು ಬದುಕನ್ನು ಪ್ರೀತಿಸುತ್ತೇನೆ. ಮನುಷ್ಯರನ್ನು ಪ್ರೀತಿಸುತ್ತೇನೆ. ಬದುಕಿನ ಬಗ್ಗೆ ಪ್ರೀತಿಯ ಬಗ್ಗೆ ನಾನು ವ್ಯಾಮೋಹಿ.. ಹೀಗಾಗಿ ಪ್ರತಿದಿನ ನನಗೆ ಹೊಸದು. ಅದೇ ನನ್ನನ್ನು ಜೀವಂತವಾಗಿ ಇರಿಸಿದೆ. ನನ್ನ ಅಮ್ಮ, ನನ್ನನ್ನು ಪ್ರೀತಿಸಿದ ಗೆಳತಿಯರು, ನನ್ನ ಬೆನ್ನು ತಟ್ಟಿದ ಸ್ನೇಹಿತೆಯರು, ನನ್ನನು ಬದುಕಿಸಿದ್ದಾರೆ. ಬದುಕಿಸುತ್ತಿದ್ದಾರೆ. ಆದ್ದರಿಂದ ನಾನು ಯಾರು ಎಂಬ ಪ್ರಶ್ನೆಗೆ ಕೊನೆಯದಾಗಿ ಕಂಡುಕೊಂಡ ಉತ್ತರ ನಾನು ಎಂದರೆ ಪ್ರೀತಿ, ಧ್ವೇಷವಲ್ಲ.

Friday, January 6, 2017

ಅವಳು


ಕೆಂಪು ರವಿಕೆಯ ಒಳಗೆ ಬಚ್ಚಿಟ್ಟುಕೊಂಡವಳು
ಅತ್ತಾಗ, ರಚ್ಚೆ ಹಿಡಿದಾಗ ಬಚ್ಚಿಟ್ಟಿಕೊಂಡಿದ್ದನ್ನು ಬಿಚ್ಚಿಟ್ಟು ಕೊಟ್ಟವಳು
ಪುಟ್ಟ ಕೆನ್ನೆಯ ಸವರಿ, ಲೊಚ ಲೊಚನೆ ಮುತ್ತುಕೊಟ್ಟವಳು.
ಹಠ ಹಿಡಿದು ಬಿದ್ದು ಹೊರಳಿದಾಗ ಮತ್ತೆ ಬಿಗಿದಪ್ಪಿಕೊಂಡವಳು
ಆಗ ನಾನಲ್ಲಿ ಹುಡುಕಿದ್ದಾದರೂ ಏನನ್ನು ?

ರಸ್ತೆ ಅಂಚಿನಲ್ಲಿ ಕದ್ದು ನಿಂತು ನೋಡುವಾಗ ಹಾಗೆ ತಲೆ ತಗ್ಗಿಸಿ ನಡೆದವಳು
ಅರ್ಧ ತಿಂದ ಮಾವಿನ ಕಾಯಿ, ಪೇರಲೆ ಹಣ್ಣು ಪಡೆದು
ಕೆಂಪು ಲಂಗದ ಒಳಗೆ ಬಚ್ಚಿಟ್ಟುಕೊಂಡವಳು
ಮುಖದ ಹತ್ತಿರ ಮುಖ ಒಯ್ದಾಗ ನಾಚಿ ನೀರಾದವಳು.
ಅದೊಂದು ದಿನ ಯಾರದೂ ಕೈ ಹಿಡಿದು ಹೋರಟು ಬಿಟ್ಟವಳು
ಆಗ ನಾನಲ್ಲಿ ಹುಡುಕಿದ್ದಾದರೂ ಏನನ್ನು ?

ಹಾಗೆ ಅಚಾನಕ್ ಆಗಿ ಬಂದು ಹುಡುಕುತ್ತಿರುವದನ್ನು
ಕೊಡುವಂತೆ ಮುಂದೆ ಬಂದು ನಿಂತವಳು.
ಕೈ ಬೆರಳುಗಳ ನಡುವೆ ಬೆರಳು ಸಿಕ್ಕಿಸಿ
ಮುಂದೆ ನಡೆಯಲು ಹೆಜ್ಜೆ ಇಟ್ಟವಳು.
ದಾರಿ ಸವೆಸುವಾಗ, ಹಾಗೆ ಕಾಣದಾದವಳು
ಆಗ ನಾನಲ್ಲಿ ಹುಡುಕಿದ್ದಾದರೂ ಏನನ್ನು ?

ಅರ್ಧ ಸವೆಸಿದ ಹಾದಿ. ಬಾನ ತುಂಬಾ ಕಾರ್ಮೋಡ.
ಅಲ್ಲಲ್ಲಿ ಸುಳಿ ಮಿಂಚು ಕಣ್ಣು ಮುಚ್ಚುವ ಬೆಳಕು.
ದಾರಿ ತುಂಬಾ ಕತ್ತಲೆಯಲ್ಲೂ ಕಾಣುವ ನೆರಳುಗಳು.
ಅದ್ಯಾವ ಪ್ರತಿಮೆ ? ಅದ್ಯಾವ ದಿವ್ಯ ಪ್ರಭೆ ?
ನೆರಳುಗಳ ಹಿಂದೆ ನಿಂತಿರುವ ದಿವ್ಯಾತ್ಮ ಯಾವುದು ?
ಆಗಲ್ಲಿ ನಾನು ಹುಡುಕುತ್ತಿರುವುದಾದರೂ ಏನನ್ನು ?

ಅವಳು ಅವಳೇ ಇರಬೇಕು.ಇಲ್ಲ ಇವಳು ಅವಳಾಗಿರಬೇಕು.
ಇವಳು ಅವಳಾಗುವುದೆಂದರೆ, ಅವಳು ಇವಳಾಗುವುದೇ ಅಲ್ಲವೆ ?
ಇವಳು ಅವಳಾಗುವ, ಅವಳು ಇವಳಾಗುವ ನಡುವೆ.
ನಾನು ಹುಡುಕುತ್ತಿರುವುದಾದರೂ ಯಾರನ್ನು 

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...