ಹಿರಿಯ ರಾಜಕೀಯ ನಾಯಕರೊಬ್ಬರು ಈ ಚುನಾವಣೆಯಲ್ಲಾದ ವೆಚ್ಚದ ಬಗ್ಗೆ ಮಾತನಾಡುತ್ತಿದ್ದರು. ಅವರ ಪ್ರಕಾರ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಯೂಬ್ಬ ವೆಚ್ಚ ಮಾಡಿದ ಹಣ ಸುಮಾರು ೨೦ ಕೋಟಿ ! ಈ ೨೦ ಕೋಟಿ ಹಣ ಎಲ್ಲಿಂದ ಬಂತು ? ಇದೇನು ಬೆವರು ಸುರಿದ ದುಡಿದ ಹಣವಾ ? ಸಾಧ್ಯವೇ ಇಲ್ಲ. ಮೋಸ, ವಂಚನೆ ಇಲ್ಲದೇ ಈ ಇಷ್ಟು ಹಣವನ್ನು ವೆಚ್ಚ ಮಾಡುವುದು ಸಾಧ್ಯವಿಲ್ಲ. ಯಾರೋ ಕೋಟ್ಯಾಧಿಪತಿ ಅಭ್ಯರ್ಥಿ ಪರವಾಗಿ ವೆಚ್ಚ ಮಾಡಿದ ಎಂದುಕೊಳ್ಳೋಣ. ಆತನೇನು ಯಾವುದೇ ಲಾಭವಿಲ್ಲದೇ ಹಣವನ್ನು ವ್ಯಯಿಸುತ್ತಾನಾ ? ಇಲ್ಲ. ರಾಜಕಾರಣಿಗಳ ಪರವಾಗಿ ಹಣ ವೆಚ್ಚ ಮಾಡುವವರಿಗೆ ಇದೊಂದು ಬಂಡವಾಳ ಹೂಡಿಕೆ ಅಷ್ಟೇ. ತಾವು ಫೈನಾನ್ಸ್ ಮಾಡಿದ ಅಭ್ಯರ್ಥಿ ಆರಿಸಿ ಬಂದ ಮೇಲೆ ನೂರು ಪಟ್ಟು ಹಣ ಬಾಚಲು ಅವಕಾಶ ಇರುತ್ತದೇ ಎಂಬ ಕಾರಣಕ್ಕೆ ಅವರು ಹಣ ಹೂಡಿಕೆ ಮಾಡುವುದು ಸ್ಪಷ್ಟ.
ಈ ಬಾರಿ ಆರಿಸಿ ಬಂದ ಅಭ್ಯರ್ಥಿಗಳ ಮುಖವನ್ನು ಒಮ್ಮೇ ನೋಡಿ. ಆಗ ನಿಮಗೆ ಸತ್ಯ ದರ್ಶನವಾಗುತ್ತದೆ. ವಸಂತ ಸ್ನೋಟಿಕರ್ ಮಗ ಆನಂದ ಅಸ್ನೋಟಿಕರ್, ವಿಶ್ವನಾಥ್ ಕತ್ತಿ ಮಗ ಉಮೇಶ್ ಕತ್ತಿ, ಗೋಕಾಕದ ಸಾವುಕಾರ ಜಾರಕೀಹೊಳಿ, ದೇವೇಗೌಡರ ಸೊಸೆ ಅನಿತಾ ಕುಮಾರಸ್ವಾಮಿ, ಸಿದ್ಧರಾಜು ಹೆಂಡತಿ ಕಲ್ಪನಾ ಸಿದ್ಧರಾಜು, ಇವರೆಲ್ಲ ಉಪ ಚುನಾವಣೆಯಲ್ಲಿ ಅಯ್ಕೆಯಾದವರು. ಇವರಲ್ಲಿ ಕೆಲವರಿ ಹಣ ಮಾತ್ರ ಬಂಡವಾಳ. ಇನ್ನೂ ಕೆಲವರಿಗೆ ಹಣದ ಜೊತೆ ಕುಟುಂಬವೇ ಬಂಡವಾಳ.
ಇದನ್ನೆಲ್ಲ ನೋಡಿದರೆ ಭಾರತೀಯ ಜನತಂತ್ರ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ಬರುವುದಿಲ್ಲವಾ ? ಈಗ ಪಕ್ಷಗಳತ್ತ ನೋಡಿ. ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಹರೂ ಕುಟುಂಬದ ಮೇಲೆ ಅವಲಂಬಿತವಾಗಿದೆ. ಈ ಪಕ್ಷದಲ್ಲಿ ಇರುವವರು ಬಾಲಬಡುಕರು, ಭಟ್ಟಂಗಿಗಳು. ಈ ಪಕ್ಷದ ಬಹುತೇಕ ನಾಯಕರಿಗೆ ಸ್ವಂತ ವ್ಯಕ್ತಿತ್ವವೇ ಇಲ್ಲ. ರಾಜ್ಯದ ಬಹುತೇಕ ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಅವರ ಮನೆಯಲ್ಲಿರುವ ಮನುಷ್ಯರ ಅಥವಾ ಸಾಕು ಪ್ರಾಣಿಯ ದರ್ಶನ ಸಿಕ್ಕರೂ ಸಾಕು ಎಂದು ಕಾಯುತ್ತಿರುತ್ತಾರೆ. ಇಡೀ ಪಕ್ಷ ಸೋನಿಯಾ ನಿವಾಸದಲ್ಲಿ ಕಾಲು ಮುರಿದುಕೊಂಡು ಬಿದ್ದಿದೆ.
ಇನ್ನು ಜೆಡಿಎಸ್. ಇದನ್ನು ಪಕ್ಷ ಎನ್ನಬೇಕೋ ಕುಟುಂಬ ಎನ್ನಬೇಕೋ ಅರ್ಥವಾಗುವುದಿಲ್ಲ. ದೇವೇಗೌಡರ ಮಟ್ಟಿಗಂತೂ ಪಕ್ಷ ಬೇರೆ ಅಲ್ಲ ಕುಟುಂಬ ಬೇರೆ ಅಲ್ಲ. ಕುಮಾರಸ್ವಾಮಿ ಅವರಿಗೆ ತಮ್ಮ ಹೆಂಡತಿಯನ್ನು ಚುನಾವಣಾ ಕಣಕ್ಕೆ ಇಳಿಸುವುದು ಒಂದುಸ್ಸ್ಟ್ರಾಟಜಿ ಮಾತ್ರ. ಒಂದು ರಾಜಕೀಯ ಪಕ್ಷ ಒಂದು ಕುಟುಂಬದ ಆಸ್ತಿಯಲ್ಲ ಎಂಬ ಸಾಮಾನ್ಯ ಜ್ನಾನ ಕೂಡ ಅವರಿಗೆ ಇದ್ದಂತಿಲ್ಲ.
ಬಿಜೆಪಿ ಎಂಬ ಪಕ್ಷ. ಇದರ ನಾಯಕರಾದ ಯಡಿಯೂರಪ್ಪ. ತಮ್ಮ ಪಕ್ಷದ ತತ್ವ ಸಿದ್ದಾಂತ ನಂಬಿದವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳುತ್ತಾರೆ, ಆದರೆ, ಚೆನ್ನಿಗಪ್ಪ, ಆನಂದ್ ಅಸ್ಣೋಟಿಕರ್ ಮೊದಲಾದವರನ್ನು ಪಕ್ಷಕ್ಕೆ ತೆಗೆದುಕೊಳ್ಳುವಾಗ ಕನಿಷ್ಠ ನಾಚಿಕೆ ಕೂಡ ಆಗುವುದಿಲ್ಲ. ಇವರೆಲ್ಲ ನಿಮ್ಮ ಪಕ್ಷದ ತತ್ವ ಸಿದ್ದಾಂತವನ್ನು ನಂಬಿದವರಾ ಎಂದು ಪ್ರಶ್ನಿಸಿದರೆ ಪೆಚ್ಚು ನಗೆ ನಗುತ್ತಾರೆ.
ಅಧಿಕಾರ ನಮ್ಮನ್ನು ಎಷ್ಟು ನಿರ್ಲಜ್ಜರನ್ನಾಗಿ, ಮುಖೇಡಿಯನ್ನಾಗಿ ಮಾಡುತ್ತದೆ ನೋಡಿ. ಅಧಿಕಾರ ಪಡೆಯಲು ಈ ಜನ ಏನು ಮಾಡುವುದಕ್ಕೂ ಹೇಸರು. ಇವರ ಬಗ್ಗೆ ಮಾತನಾಡವುದಕ್ಕೂ ಬೇಸರವಾಗುತ್ತದೆ.