Monday, September 28, 2015

ಭಗವಾನ್, ಭಗವಾನರ ಬಗ್ಗೆ ಮಾತನಾಡಿ ಸಾಧಿಸಿದ್ದಾದರೂ ಏನು ?

ಕನ್ನಡದ ವಿವಾದಾತ್ಮಕ ಬರೆಹಗಾರ ಕೆ.ಎಸ್. ಬಗವಾನ್ ರಾಮ ಮತ್ತು ಕೃಷ್ಣ ಇಬ್ಬರನ್ನು ಸದ್ಯಕ್ಕಂತೂ ಕೈ ಬಿಡುವ ಸಾಧ್ಯತೆ ಕಾಣುತ್ತಿಲ್ಲ.  ನಿನ್ನೆ ತಾನೆ ಅವರು ರಾಮ ಯಾವುದೊ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಎಂಬ ತಮ್ಮ ಸಂಶೋಧನೆಯನ್ನು ಬಹಿರಂಗಪಡಿಸಿದ್ದಾರೆ.ಇದರ ಅಗತ್ಯ ಇತ್ತಾ ? ಈ ಮಾತುಗಳ ಮೂಲಕ ಅವರು ಸಮಾಜದಲ್ಲಿ ವೈಚಾರಿಕ ಪ್ರಜ್ನೆಯನ್ನು ಬೆಳೆಸುತ್ತಿದ್ದಾರಾ ? ಅಥವಾ ರಾಮ ಕೃಷ್ಣರನ್ನು ನಂಬುವವರು ಒಗ್ಗಟ್ಟಾಗುವ ಮೂಲಕ ಅವರು ಇನ್ನಷ್ಟು ಶಕ್ತಿ ಪಡೆಯುವಂತೆ ಮಾಡುತ್ತಿದ್ದಾರಾ ?
 ಈ ಮಾತುಗಳನ್ನು  ಹೇಳುವಾಗ ನಾನು ಒಂದು ಅಂಶವನ್ನು ಸ್ಪಷ್ಟಪಡಿಸುತ್ತೇನೆ. ನಾನು ಅವರ ಅಭಿಪ್ರಾಯ ಸ್ವಾತಂತ್ರ್ಯದ ಪರವಾಗಿದ್ದೇನೆ. ಅವರಿಗೆ ಈ ಮಾತುಗಳನ್ನು ಹೇಳುವ ಹಕ್ಕಿದೆ. ಹಾಗೆ ಅಭಿಪ್ರಾಯ ಸ್ವಾತಂತ್ರ್ಯ ಕಸಿದುಕೊಳ್ಳುವ ರೀತಿಯಲ್ಲಿ ಬೆದರಿಕೆ ಒಡ್ಡುತ್ತಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಕಾಲದಲ್ಲಿ ಅಭಿಪ್ರಾಯ ಸ್ವಾತಂತ್ರ್ಯದ ಪರವಾಗಿರುವ ಇರುವವರು ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ನಾನು ಬಯಸುತ್ತೇನೆ.
ಅದರೆ ಅವರು ವ್ಯಕ್ತಪಡಿಸಿದ ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳ ಬಗ್ಗೆ ನನ್ನ ತಕರಾರಿದೆ. ಅವರು ಎಲ್ಲಿ ತಪ್ಪಿದ್ದಾರೆ, ತಪ್ಪುತ್ತಿದ್ದಾರೆ ಎಂಬುದನ್ನು ನಾನು ಗಮನಕ್ಕೆ ತರಲು ಬಯಸುತ್ತೇನೆ.
ಭಗವಾನ್ ಅವರ  ಮಾತನ್ನು ನಾನು ಮೌನದಿಂದ ಕೇಳಿಸಿಕೊಂಡು ಬರುತ್ತಿದ್ದೇನೆ. ಅವರ ಮಾತುಗಳನ್ನು ಕೇಳಿಸಿಕೊಳ್ಳುವಾಗ ನನಗೆ ಮೂಡಿದ ಮೂಡುತ್ತಿರುವ ಪ್ರಶ್ನೆಗಳು ಹಲವು. ಆ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಲು ಇಲ್ಲಿ ಯತ್ನಿಸುತ್ತಿದ್ದೇನೆ.. ನನಗೆ ಮೂಡಿದ ಮೊದಲ ಪ್ರಶ್ನೆ ಎಂದರೆ ರಾಮಾಯಣ ಮತ್ತು ಮಹಾಭಾರತವನ್ನು ಭಗವಾನ್ ಅವರು ಕಾವ್ಯವನ್ನಾಗಿ ಸ್ವೀಕರಿಸಿದ್ದಾರೆಯೇ ಅಥವಾ ಇದು ನೈಜ ಘಟನೆ ಎಂದು ನಂಬಿದ್ದಾರೆಯೆ ? ರಾಮಾಯಣ ಮತ್ತು ಮಹಾಭಾರತ ಕಾವ್ಯವಾಗಿದ್ದರೆ, ಅದನ್ನು ಕಾವ್ಯವನ್ನಾಗಿ ಮಾತ್ರ ಆಸ್ವಾಧಿಸಬೇಕು. ಕಾವ್ಯದಲ್ಲಿ ಬರುವ ಪಾತ್ರಗಳನ್ನು ನೈಜ ಪಾತ್ರಗಳನ್ನಾಗಿ ನೋಡದೇ ಕಾವ್ಯದಲ್ಲಿ ಸೃಷ್ಟಿಸಲಾದ ಪಾತ್ರಗಳನ್ನಾಗಿ ನೋಡಬೇಕು. ಕಾವ್ಯ ನೈಜ ಪಾತ್ರದಿಂದ ಪ್ರೇರಣೆ ಪಡೆದಿದ್ದರೂ ಅಲ್ಲಿ ಬರುವ ಪಾತ್ರಗಳನ್ನು ನೈಜ ಪಾತ್ರಗಳನ್ನಾಗಿ ನೋಡುವುದು ಸರಿಯಲ್ಲ ಹಾಗೆ ಮಾಡಿದರೆ ಅದು ಕವಿಗೆ ಅಥವಾ ಕೃತಿಕಾರನಿಗೆ ಮಾಡುವ ಅಪಚಾರವಾಗುತ್ತದೆ.
ಮೊದಲು ರಾಮಾಯಣವನ್ನು ನೋಡೋಣ. ಈ ಕೃತಿಯನ್ನು ಬರೆದವನು ವಾಲ್ಮೀಕಿ. ಆತ ಬರೆದದ್ದು ಯಾವಾಗ ಎನ್ನುವ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ಹೀಗಿದ್ದರೂ ಇದೊಂದು ಸಾವಿರಾರು ವರ್ಷಗಳ ಹಿಂದಿನ ಕೃತಿ ಎಂದು ಹೇಳಲು ಯಾವ ಸಾಕ್ಷ್ಯದ ಅವಶ್ಯಕತೆಯೂ ಇಲ್ಲ. ಸಾವಿರಾರು ವರ್ಷಗಳ ಹಿಂದೆ ರಚಿತವಾದ ಒಂದು ಕೃತಿಯನ್ನು ವಿಮರ್ಶಿಸುವಾಗ ಯಾವ ಮಾನದಂಡವನ್ನು ಬಳಸಬೇಕು ? ಒಂದು ಕೃತಿ ಸಾಮಾಜಿಕ ಮೌಲ್ಯವನ್ನು ಎತ್ತಿ ಹಿಡಿಯುತ್ತಿದೆಯೇ ಇಲ್ಲವೇ ಎಂಬ ನಿರ್ಧಾರಕ್ಕೆ ಬರುವುದು ಹೇಗೆ ? ಇವತ್ತಿನ ಸಾಮಾಜಿಕ ಮೌಲ್ಯಗಳನ್ನು ಪುರಾತಸ ಗ್ರಂಥವೂ ಎತ್ತಿ ಹಿಡಿಯಬೇಕು ಎಂದು ಹೇಳಿದರೆ ಅದು ಸರಿಯೆ ? ಹೀಗಾದರೆ ಅದು ಪಕ್ಷಪಾತಿ ಧೋರಣೆ ಆಗುವುದಿಲ್ಲವೆ ?
ಮೊದಲು ರಾಮಾಯಣವನ್ನು ಕಾವ್ಯ ಎಂದು ನೋಡೋಣ. ಈ ಕಾವ್ಯವನ್ನು ರಚಿಸಿದ ವಾಲ್ಮೀಕಿ ಅಂದಿನ ಸಾಮಾಜಿಕ ಸ್ಥಿತಿ ಗತಿ, ಅಂದಿನ ಮೌಲ್ಯಗಳನ್ನು ಮೂಲವಾಗಿಟ್ಟುಕೊಂಡೇ ಕಾವ್ಯ ರಚಿಸಿರುತ್ತಾನೆ. ಸಾವಿರಾರು ವರ್ಷಗಳ ಹಿಂದಿನ ಸಮಾಜ, ಅಂದಿನ ಸಾಮಾಜಿಕ ಮತ್ತು ರಾಜಕಿಯ ವ್ಯವಸ್ಥೆ ಮಾತ್ರ ಅವನ ಕಾವ್ಯದಲ್ಲಿ ಪ್ರತಿಬಿಂಬಿತವಾಗಲು ಸಾಧ್ಯ. ಹೀಗಾಗಿ ಯಾವುದೇ ಕಾವ್ಯ ಅಥವಾ ಬೇರೆ ಯಾವುದೇ ಕೃತಿಯನ್ನು ವಿಮರ್ಶಿಸುವಾಗ ಆ ಕಾವ್ಯ ರಚಿತವಾದ ಕಾಲ ಮತ್ತು ಸಂದರ್ಭವನ್ನು ಗಣನೆಗೆ ತೆಗೆದುಕೊಳ್ಳಲೇ ಬೇಕು. ರಾಮಾಯಣ ಮತ್ತು ಮಹಾಭಾರತವನ್ನು ವಿಮರ್ಶಿಸುವವರು ಮೊದಲ ಕೃತಿಯ ಕಾಲ ಮತ್ತು ಸಂದರ್ಭವನ್ನು ಗಣನೆಗೆ ತೆಗೆದುಕೊಳ್ಳಲೇ ಬೇಕು. ಉದಾಹರಣೆಗೆ ನಮ್ಮ ಬಹುತೇಕ ಹಳೆಗನ್ನಡ ಸಾಹಿತಿಗಳೂ ರಾಜಾಶ್ರಯ ಪಡೆದು ರಾಜರ ಗುಣಗಾನ ಮಾಡಿದ್ದಾರೆ. ಇವರು ಕಾವ್ಯ ಶಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕೇ ಅಥವಾ ಅವರು ರಾಜರ ಭಟ್ಟಿಂಗಿಗಳಾಗಿದ್ದರು ಎಂಬುದನ್ನೇ ? ಹಾಗೆ ಕಾವ್ಯದ ಕಾಲ ಮತ್ತು ಸಂದರ್ಭವನ್ನು  ಬಿಟ್ಟು ಈವತ್ತಿನ ಕಾಲ ಮತ್ತು ಸಂದರ್ಭವನ್ನು ಗಣನೆಗೆ ತೆಗೆದುಕೊಂಡು ಅದನ್ನೇ ಕೃತಿ ವಿಮರ್ಷೆಯ ಮಾನದಂಡವನ್ನಾಗಿ ತೆಗೆದುಕೊಂಡರೆ ಅದು ತಪ್ಪಾಗುತ್ತದೆ..ಉದಾಹರಣೆಗೆ ರಾಮ ಭಾರತೀಯ ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕಿತ್ತು ಎಂದು ಟೀಕಿಸಿದರೆ ಅದು ಮೂರ್ಖತನವಾಗುತ್ತದೆ. ಈಗ ಭಗವಾನ ಮಾಡುತ್ತಿರುವುದು ಅದೇ ಎಂದು ನನಗೆ ಅನ್ನಿಸುತ್ತದೆ.
ವಾಲ್ಮೀಕಿ ರಾಮಾಯಣ ಬರೆದ ಕಾಲ ಈಗಿನಂತೆ ಇರಲಿಲ್ಲ. ಆಗ  ವರ್ಣಾಶ್ರಮ ಧರ್ಮ ಜಾರಿಯಲ್ಲಿತ್ತು. ಮಹಾರಾಜನಾದವನು ಬ್ರಾಹ್ಮಣರನ್ನು ಅತಿ ಗೌರವದಿಂದ ನೋಡುತ್ತಿದ್ದ. ಅವರ ಸಲಹೆ ಸೂಚನೆಯನ್ನು ಪಡೆಯುತ್ತಿದ್ದ.. ಕ್ಷತ್ರಿಯರು ಬ್ರಾಹ್ಮಣರ ಸಲಹೆಯಂತೆ ನಡೆದುಕೊಳ್ಳುತ್ತಿದ್ದರು. ವೈಶ್ಯರು ವ್ಯಾಪಾರ ಮಾಡುತ್ತಿದ್ದರು. ಶೂದ್ರರ ಸ್ಥಿತಿ ದಯನೀಯವಾಗಿತ್ತು. ಇದು ಇತಿಹಾಸ. ಈ ಇತಿಹಾಸವೇ ವಾಲ್ಮೀಕಿ ರಾಮಾಯಣ ಎಂಬ ಕೃತಿಯಲ್ಲಿ ಕಾಣುತ್ತಿದೆ..ಆದ್ದರಿಂದ ಇತಿಹಾಸವನ್ನು ಇತಿಹಾಸವನ್ನಾಗಿ ಮಾತ್ರ ಸ್ವೀಕರಿಸಬೇಕು.
ಇನ್ನು ವರ್ಣಾಶ್ರಮ ಧರ್ಮ ಮಾನವೀಯತೆಗೆ ದೊಡ್ಡ ಕೊಡಲಿ ಪೆಟ್ಟು ನೀಡಿದೆ ಎಂಬುದು ನಮಗೆ ಅರ್ಥವಾಗಿದೆ. ಆದ್ದರಿಂದ ನಾವು ವರ್ಣಾಶ್ರಮ ಧರ್ಮವನ್ನು ವಿರೋಧಿಸುತ್ತೇವೆ. ಇವತ್ತು ವರ್ಣಾಶ್ರಮದ ಧರ್ಮವನ್ನು ಬೆಂಬಲಿಸಿದರೆ ಅವರು ಮಾನವೀಯತೆಯ ವಿರೋಧಿಗಳು.. ಜಾತಿ, ಕೋಮುವಾದವನ್ನು ಇವತ್ತು ಎಲ್ಲರೂ ವಿರೋಧಿಸಲೇಬೇಕು. ಆದರೆ ರಾಮಾಯಣ ಬರೆದ ಕಾಲದಲ್ಲಿ ಈ ಅರಿವು ಸಮಾಜದಲ್ಲಿ ಇರಲಿಲ್ಲ. ಮಾನವ ಜನಾಂಗ ಇಷ್ಟು ಬೆಳೆದಿರಲಿಲ್ಲ. ಸಮಾಜದಲ್ಲಿ ಬ್ರಾಹ್ಮಣರನ್ನು ಅರಸರು ಪ್ರಶ್ನಿಸುವಂತಿರಲಿಲ್ಲ. ಇದನ್ನು ಅರ್ಥ ಮಾಡಿಕೊಳ್ಳದೇ ರಾಮ ವರ್ಣಾಶ್ರಮದ ಧರ್ಮದ ಪರವಾಗಿದ್ದ ಎಂದು ಟೀಕಿಸಿವುದು ಹುಚ್ಚತನವಲ್ಲವೆ ? ಹಾಗೆ ಕೃತಿಯೊಂದರಲ್ಲಿ ಬರುವ ಪಾತ್ರಗಳನ್ನು ನೈಜ ಪಾತ್ರಗಳೆಂದು ನಂಬುವುದೂ ಸತ್ಯಕ್ಕೆ ಮಾಡುವ ಅಪಚಾರವಲ್ಲವೆ ?
ರಾಮಯಣ ಮತ್ತು ಮಹಾಭಾರತವನ್ನು ವಿಶ್ವದ ಮಹಾ ಗ್ರಂಥಗಳ ಪಟ್ಟಿಗೆ ಸೇರಿಸಲಾಗಿದೆ. ಇದನ್ನು ಭಗವಾನ್ ಅವರು ಒಪ್ಪಿಕೊಳ್ಳದಿರಬಹುದು. ಆದರೆ ವಿಶ್ವದ ಮಹಾ ಗ್ರಂಥಗಳ ಸಾಲಿನಲ್ಲಿ ರಾಮಾಯಣ ಮತ್ತು ಮಹಾಭಾರತ ಇರುವುದು ನಿಜ. ಈಗ ವಿಶ್ವದ ಉಳಿದ ಮಹಾ ಗ್ರಂಥಗಳತ್ತ ಒಮ್ಮೆ ಗಮನಹರಿಸೋಣ.ಕ್ರಿಸ್ತಪೂರ್ವ ೯ ನೆಯ ಶತಮಾನದಲ್ಲಿ ಹೂಮರ್ ಬರೆದ ಈಲಿಯಡ್ ವಿಶ್ವದ ಮಹಾ ಕಾವ್ಯಗಳ ಪಟ್ಟಿಯಲ್ಲಿ  ಮೊದಲ ಸ್ಥಾನದಲ್ಲಿದೆ.. ಇದು ಗ್ರೀಕರ ಕಥೆ. ಹಾಗೆ ಓಡೆಸ್ಸಿ, ಪೆರಡೈಸ್ ಲಾಸ್ಟ್ ಕೂಡ ವಿಶ್ವದ ಮಹಾ ಕಾವ್ಯಗಳ ಪಟ್ಟಿಯಲ್ಲಿ ಬರುತ್ತವೆ. ಈ ಕಾವ್ಯಗಳಲ್ಲಿನ ಪಾತ್ರಗಳು ಆ ಕಾಲದ ಸಾಮಾಜಿಕ ರಾಜಕೀಯ ಬದುಕು, ಆಗಿನ ಮೌಲ್ಯ ನಂಬಿಕೆಯನ್ನು ಆಧಾರವಾಗಿಟ್ಟುಕೊಂಡು ವರ್ತಿಸುತ್ತವೆ.  ಇವುಗಳನ್ನು ವಿಮರ್ಶಿಸುವಾಗ ಇಂದಿನ ಸಾಮಾಜಿಕ ಮತ್ತು ಮೌಲಿಕ ಅಂಶಗಳನ್ನು ಮಾನದಂಡವಾಗಿ ಬಳಸಿ ವಿಮರ್ಶಿಸಿದರೆ ಏನಾಗುತ್ತದೆ ? ಇದು ಭಗವಾನರಿಗೆ ಗೊತ್ತಿಲ್ಲವೆ ?
ವಿಚಾರವಾದಿ ಭಗವಾನರು ರಾಮಾಯಣ ಮತ್ತು ಮಹಾಭಾರತವನ್ನು ಕಾವ್ಯ ಎಂದು ಪರಿಗಣಿಸದೇ ನೈಜ ಘಟನೆ ಎಂದು ಪರಿಗಣಿಸಿದ್ದಾರೆ ಎಂದುಕೊಳ್ಳೋಣ. ಇದೊಂದು ನೈಜ ಘಟನೆ ಎಂದು ಪರಿಗಣಿಸಿದರೆ ನಾವು ಅದನ್ನು ಬೇರೆ ರೀತಿ ನೋಡಬೇಕಾಗುತ್ತದೆ. ರಾಮಾಯಣ ಮತ್ತು ಮಹಾಭಾರತ  ನೈಜ ಘಟನೆ ಎಂದಾದರೆ ಅದು ನಮಗೆ ತಿಳಿದಿದ್ದು ಹೇಗೆ ? ರಾಮಾಯಣ ಬರೆದ ವಾಲ್ಮೀಕಿ ಮತ್ತು ಮಹಾಭಾರತ ಬರೆದ ವ್ಯಾಸರ ಮೂಲಕ., ಅಲ್ಲವೆ ? ಅಂದರೆ ಒಂದು ನೈಜ ಘಟನೆ ನಮಗೆ ತಲುಪಿದ್ದು ಕಾವ್ಯದ ಮೂಲಕವೇ ಹೊರತೂ ನಾವ್ಯಾರು ನೋಡಿದ್ದಲ್ಲ, ಹಾಗೆ ಐತಿಹಾಸಿಕ ದಾಖಲೆ ಕೂಡ ನಮ್ಮ ಬಳಿ ಇಲ್ಲ.  ಅಂದರೆ ಇತಿಹಾಸದ ಘಟನೆಯೊಂದು ಕಾವ್ಯದ ಮೂಲಕ ನಮ್ಮನ್ನು ತಲುಪಿದೆ. ಅದು ಇತಿಹಾಸದ ದಾಖಲೆಯಾಗಿ ನಮ್ಮನ್ನು ತಲುಪಿಲ್ಲ. ಯಾಕೆಂದರೆ ವಾಲ್ಮೀಕಿಯಾಗಲೀ, ವ್ಯಾಸರಾಗಲಿ ಎಡಪಂಥೀಯ ಇತಿಹಾಸಕಾರರೂ ಅಲ್ಲ, ಬಲಪಂಥೀಯ ಇತಿಹಾಸಕಾರರೂ ಅಲ್ಲ. ಒಂದು ಅರ್ಥದಲ್ಲಿ ಅವರಿಬ್ಬರೂ ಕವಿಗಳು..ಜೊತೆಗೆ ಕವಿಗಳ ಹೃದಯ, ಬುದ್ದಿಗಿಂತ  ಹೆಚ್ಚು ಕೆಲಸ ಮಾಡುವುದರಿಂದ ಅವರು ವಿಚಾರವಾದಿಯೂ ಆಗಿರುವುದಿಲ್ಲ. ಜೊತೆಗೆ ಒಬ್ಬ ಕವಿ ಕಾವ್ಯವೊಂದನ್ನು ರಚಿಸುವಾಗ ಅವನದೇ ಆದ ಸ್ವಾತಂತ್ರ್ಯ ಅವನಿಗೆ ಇರುತ್ತದೆ. ಅಲ್ಲಿನ ಪಾತ್ರಗಳೂ ನೈಜ ಪಾತ್ರಗಳು ಆಗಿದ್ದರೂ ಕವಿ ಆ ಪಾತ್ರಗಳಿಗೆ ರಕ್ತ ಮಾಂಸ ಸೇರಿಸುತ್ತಾನೆ. ಜೀವ ತುಂಬುತ್ತಾನೆ. ಜೀವಂತ ಪಾತ್ರದ ಅಸ್ಥಿಪಂಜರ ಮಾತ್ರ ಅಲ್ಲಿರುತ್ತದೆ..ರಾಮಾಯಣ ಮತ್ತು ಮಹಾಭಾರತ ನೈಜ ಘಟನೆಯನ್ನು ಆಧರಿಸಿದ್ದರೂ ಅದು ನೈಜ ಘಟನೆಯ ರನ್ನಿಂಗ್ ಕಾಮೆಂಟರಿ ಆಗಿರಲು ಸಾಧ್ಯವಿಲ್ಲ. ಅಂದರೆ ನಾವು ವಾಲ್ಮೀಕಿ ಮತ್ತು ವ್ಯಾಸರ ಮೂಲಕ ತಿಳಿದುಕೊಂಡ ರಾಮ ಮತ್ತು ಕೃಷ್ಣರ ಕಥೆ ಸಂಪೂರ್ಣವಾಗಿ ಅವರು ವಿವರಿಸಿದಂತೆ ನೂರಕ್ಕೆ ನೂರು ಸತ್ಯವಾಗಿರಲು ಸಾಧ್ಯವಿಲ್ಲ. ಅಲ್ಲಲ್ಲಿ ಪಾತ್ರ ಮತ್ತು ಘಟನೆಗಳನ್ನು ಮೀರಿ ಕವಿ ವಿಜೄಂಬಿಸಿರುವ ಸಾಧ್ಯತೆ ಇದೆ.
ರಾಮಾಯಣ ಮತ್ತು ಮಹಾಭಾರತ ಮಹಾ ಕಾವ್ಯದ ಎಲ್ಲ ಲಕ್ಷಣಗಳನ್ನು ಹೊಂದಿರುವುದರಿಂದ ಬಹುಬೇಗ ಭಾರತೀಯರ ಮನಸ್ಸನ್ನು ಸೆಳೆದವು. ಹೀಗಾಗಿ ರಾಮ ಮತ್ತು ಕೃಷ್ಣರು ದೇವರಾಗುವ ಪ್ರಕ್ರಿಯೆ ಪ್ರಾರಂಭವಾಯಿತು.. ಇದು ಮೂರು ಸಾವಿರ ವರ್ಷಗಳಲ್ಲಿ ಬೇರೆ ಬೇರೆ ರೀತಿ ಭಾರತೀಯರ ಮನಸುಗಳಲ್ಲಿ ಬೆಳೆದು ಮರವಾಯಿತು.
ಭಾರತೀಯರು ದೇವರನ್ನು ಸೃಷ್ಟಿಸುವಲ್ಲಿ ಮಹಾ ನಿಸ್ಸೀಮರು. ಒಬ್ಬ ಸಾಮಾನ್ಯನನ್ನು ದೇವರನ್ನಾಗಿಸುವ ಈ ಪ್ರಕ್ರೀಯೆ ಭಾರತೀಯ ಸಮಾಜಕ್ಕೆ ಮಾತ್ರ ಸೀಮಿತವಾಗಿದೆ ಎಂದು ನಾನು ಹೇಳುವುದಿಲ್ಲ. ಮನುಷ್ಯ ದೇವರನ್ನು ಸೃಷ್ಟಿಸುವ ಬೆಳೆಸುವ ಕೆಲಸ ಮಾನವ ಇತಿಹಾಸದಲ್ಲಿ ನಡೆಯುತ್ತಲೇ ಬಂದಿದೆ. ಆದರೆ ಲಕ್ಷಾಂತರ ದೇವರುಗಳನ್ನು ಹುಟ್ಟಿಸಿರುವ ಭಾರತೀಯರು ಈ ಕೆಲಸದಲ್ಲಿ ನಿಸ್ಸೀಮರು ಎಂಬುದು ಮಾತ್ರ ನಿಜ. ಚಲನ ಚಿತ್ರ ನಟರ ಕಟ್ ಔಟ್ ಹಾಕಿ ಹಾಲಿನ ಅಭಿಷೇಕ ಮಾಡುವ ನಾವು ಅವರಿಗಾಗಿ ದೇವಾಲಯ ಕಟ್ಟಿದ ಉದಾಹರಣೆಗಳು ನಮ್ಮಲ್ಲಿರುವುದು ಈ ಮಾತಿನ ಸತ್ಯಾಸತ್ಯತೆಯನ್ನು ಸಾಬೀತು ಪಡಿಸುತ್ತದೆ..
ರಾಮ ಮತ್ತು ಕೃಷ್ಣರನ್ನು ದೇವರನ್ನಾಗಿಸುವ ಪ್ರಕ್ರಿಯೆ ಯಾವಾಗ ಪ್ರಾರಂಭವಾಯಿತು ಎಂದು ಹೇಳಲು ಸಾಧ್ಯವಿಲ್ಲದಿದ್ದರೂ ಅದು ಸತತವಾಗಿ ನಡೆಯುತ್ತಲೇ ಬಂದ ಪ್ರಕ್ರಿಯೆ. ರಾಮಾಯಣ ಮತ್ತು ಮಹಾಭಾರತ ನಡೆದ ಘಟನೆ ಎಂದು ಪರಿಗಣಿಸಿದರೆ, ಈ ಘಟನೆ ನಡೆದ ನೂರಾರು ವರ್ಷಗಳ ನಂತರ ದೇವರನ್ನಾಗಿಸುವ ಪ್ರಕ್ರಿಯೆ ಪ್ರಾರಂಭವಾಗಿರಬಹುದು.. ಅದು ಹಾಗೆ ಮುಂದುವರಿಯುತ್ತಲೇ ಇಂದಿನ ದೇವರು ಬೃಹತ್ ಆಗಿ ನಮ್ಮೆದುರು ನಿಂತಿರಬಹುದು. ಈ ವಿಶ್ಲೇಷಣೆಯಿಂದ ಅರ್ಥವಾಗುವುದೆಂದರೆ ರಾಮ ಮತ್ತು ಕೃಷ್ಣರ ನೈಜ ಪಾತ್ರಕ್ಕೂ ಅವರನ್ನು ದೇವರನ್ನಾಗಿ ಸ್ವೀಕರಿಸಿದ ಇಂದಿನ ಪಾತ್ರಕ್ಕೂ ತುಂಬಾ ವ್ಯತ್ಯಾಸ ಇರಲೇಬೇಕು. ಅಂದರೆ ರಾಮ ಮತ್ತು ಕೃಷ್ಣರು ನಿಜವಾಗಿ ಬದುಕಿದ್ದವರೇ ಆಗಿದ್ದರೆ ಅವರು ನಾವು ಈಗ ದೇವರಾಗಿ ನಂಬಿರುವಂತೆ ಇದ್ದಿರಲು ಸಾಧ್ಯವೇ ಇಲ್ಲ. ಯಾಕೆಂದರೆ ಇವರಿಬ್ಬರನ್ನೂ ದೇವರನ್ನಾಗಿಸುವ ಪ್ರಕ್ರಿಯೆಯಲ್ಲಿ ಕಾಲ ಒಹಿಸಿದ ಪಾತ್ರ ತುಂಬಾ ಮುಖ್ಯವಾಗಿರುತ್ತದೆ. ಕಾಲ ಪಾತ್ರದ ಗುಣಧರ್ಮವನ್ನು ಬದಲಿಸುತ್ತದೆ. ರಾಮ ಮತ್ತು ಕೃಷ್ಣ ದೇವರಾಗಿ ಜನ ಮನ್ನಿಸುವ ನಡುವಿನ ಕಾಲದಲ್ಲಿ ಇವರಿಬ್ಬರೂ ಸಾಕಷ್ಟು ಬದಲಾದ ಸಾಧ್ಯತೆ ತುಂಬಾ ಇದೆ..ಈ ಬದಲಾವಣೆ ಮೂಲ ರಾಮ ಕೃಷ್ಣರಿಗೂ ಈಗ ಜನ ನಂಬಿರುವ ರಾಮ ಕೃಷ್ಣರಿಗೂ ಅಜಗಜಾಂತರ ವ್ಯತ್ಯಾಸ ಇರಲೇಬೇಕು.
ಈಗಿನ ರಾಮ ಮತ್ತು ಕೃಷ್ಣರ ದೈವಿಕ ಹೊಸ ಮೂರ್ತಿ ಭಾರತೀಯ ಸಮಾಜದಲ್ಲಿ ಸೃಷ್ಟಿಯಾಗಿದೆ. ಈ ಮೂರ್ತಿಗಳಿಗೆ ಜನರಿಂದಾಗಿ ದೈವಿಕ ಶಕ್ತಿ ಬಂದಿದೆ. ಈಗ ದೇವರಾಗಿರುವ ನಂಬಿಕೆಯ ಮೂರ್ತಿಯಾಗಿರುವ ರಾಮ ಕೃಷ್ಣರನ್ನು ಎಂದೂ ಬದುಕಿದ ರಾಮ ಕೃಷ್ಣರಿಗೆ ಹೋಲಿಸಿ ಮಾತನಾಡುವುದೇ ಅಜ್ನಾನ. ಯಾಕೆಂದರೆ ಮೂಲ ಮಹಾಭಾರತ ರಾಮಾಯಣಯದಲ್ಲಿ ಬರುವ ರಾಮ ಮತ್ತು ಕೃಷ್ಣರು ಈಗ ದೇವರಾಗಿರುವ ರಾಮ ಕೃಷ್ಣರ ಮೂಲ ಮಾತ್ರ. ಅವರು ಬೀಜ ಮಾತ್ರ. ಈಗ ಜನಮಾನಸದಲ್ಲಿರುವ ರಾಮ ಕೃಷ್ಣರು ದೇವರನ್ನು ಬಯಸುವ ಭಾರತೀಯರ ನಂಬಿಕೆಯ ಫಲ.. ಹೀಗೆ ದೇವರ ಮೂರ್ತಿಯಾದವರ ಮೂರ್ತಿ ಭಂಜನೆ ಅಂಥ ಸುಲಭವಾದುದಲ್ಲ.
ನನಗೆ ದೇವರನ್ನಾಗಿಸುವ ಪ್ರಕ್ರಿಯೆ ಬಗ್ಗೆ ಹೆಚ್ಚು ಕುತೂಹಲ. ಇದು ಪುರಾಣಗಳಿಂದ ವರ್ತಮಾನದ ವರೆಗೆ ಮುಂದುವರಿದುಕೊಂಡು ಬಂದಿದೆ. ಪ್ರತಿ ಕಾಲದಲ್ಲಿಯೂ ಮನುಷ್ಯರಾಗಿದ್ದವರೇ ದೇವರಾಗಿದ್ದಾರೆ ಎಂದು ವಾದಿಸಲು ಬೇಕಾದಷ್ಟು ಸಾಕ್ಷ್ಯಗಳನ್ನು ನೀಡಬಹುದು. ರಾಮ ಮತ್ತು ಕೃಷ್ಣ ಮನುಷ್ಯರಾಗಿದ್ದವರೇ ಎಂಬ ಬಗ್ಗೆ ಅನುಮಾನಪಡಬೇಕಾಗಿಲ್ಲ. ಹಾಗೆ ಆಧುನಿಕ ಭಾರತದಲ್ಲಿ ಇಂತಹ ಹಲವು ಉದಾಹರಣೆಗಳನ್ನು ನೀಡಬಹುದು. ಬುದ್ಧ, ಬಸವ, ಅಂಬೇಡ್ಕರ್ ಎಲ್ಲ ಈಗ ದೇವರೋ ಮೂರ್ತಿಗಳೋ ಆಗಿಬಿಟ್ಟಿದ್ದಾರೆ. ಒಮ್ಮೆ ಒಬ್ಬ ಮನುಷ್ಯ, ದೇವರೋ ಮೂರ್ತಿಯೋ ಆದ ಮೇಲೆ ಅವರ ಬಗ್ಗೆ ಮಾತನಾಡುವ ಚರ್ಚಿಸುವ, ವಿಶ್ಲೇಷಿಸುವ ಅಧಿಕಾರವನ್ನು ಜನ ಸಾಮಾನ್ಯರಿಂದ ಕಸಿದುಕೊಳ್ಳಲಾಗುತ್ತದೆ. ಹಲವು ದೇವರು ದೇವರ ಪ್ರತಿನಿಧಿಗಳು, ದೇವರಾದ ಮೇಲೆ ಅವರ ಬಗ್ಗೆ ಮಾತನಾಡದಂತೆ ಭಕ್ತರು ಬಾಯಿ ಕಟ್ಟುತ್ತಾರೆ. ಬೆದರಿಕೆ ಒಡ್ಡುತ್ತಾರೆ. ಮೂರ್ತಿ ಭಂಜನೆಯನ್ನು ಮೂರ್ತಿಪೂಜಕರು, ಮೂರ್ತಿಯನ್ನು ಪ್ರತಿಷ್ಠಾಪಿಸಿದವರು ವಿರೋಧಿಸುತ್ತಾರೆ.
ಭಗವಾನ್ ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಅವರು ಯಾವ ರಾಮ ಮತ್ತು ಕೃಷ್ಣನ ಬಗ್ಗೆ ಮಾತನಾಡುತ್ತಿದ್ದಾರೋ ಆತ ಜನ ಈಗ ತಮ್ಮ ಮನಸ್ಸಿನಲ್ಲಿ ಸ್ಥಾಪಿಸಿಕೊಂಡಿರುವ ರಾಮ ಕೃಷ್ಣರಲ್ಲ. ದೇವರಾಗಿ ಬೆಳೆದ ರಾಮಕೃಷ್ಣರಲ್ಲ. ಒಬ್ಬ ಮನುಷ್ಯ ದೇವರಾದ ಮೇಲೆ ಸಮಾಜ ಅವರ ಜೊತೆ ನಿಲ್ಲುತ್ತದೆ. ಮೂರ್ತಿ ಪೂಜಕರು ಬಾಡೀ ಗಾರ್ಡ್ ಅಂತ್ರೆ ಪಕ್ಕ ನಿಂತಿರುತ್ತಾರೆ. ಈಗ ಈ ಸಮಾಜ ದೇವರು ಎಂದು ಪರಿಗಣಿಸಿರುವ ರಾಮಕೃಷ್ಣರ ಪಕ್ಕಇಂತಹ ಬಾಡಿ ಗಾರ್ಡ್ ಗಳಿದ್ದಾರೆ.  ಈ ವ್ಯತ್ಯಾಸ ಭಗವಾನರಿಗೆ ಅರ್ಥವಾದಂತಿಲ್ಲ. ಅವರು ವಾಲ್ಮೀಕಿ ರಾಮಾಯಣದಲ್ಲಿ ಇರುವ ರಾಮ ಮತ್ತು ಜನ ಮಾನಸದಲ್ಲಿ ದೇವರಾಗಿ ಬೆಳೆದು ನಿಂತ ರಾಮನ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡಿಲ್ಲ. ವಾಲ್ಮೀಕಿ ರಾಮನ ಬಗ್ಗೆ ಮಾತನಾಡುತ್ತ ಜನ ಮಾನಸದ ರಾಮನ ತಂಟೆಗೆ ಹೋಗಿದ್ದಾರೆ, ಕಲ್ಲು ಹೊಡೆದಿದ್ದಾರೆ.
ಈ ರೀತಿ ಸೂಕ್ಷ್ಮ ಆಲೋಚನೆ ಚಿಂತನೆ ಇಲ್ಲದೇ, ವ್ಯತ್ಯಾಸ ತಿಳೀಯದೆ ಮಾಡಿದ ತಪ್ಪಿನ ಪರಿಣಾಮ ಏನು ? ಜನ ಮಾನಸದಲ್ಲಿ ದೇವರಾದ ರಾಮನ ತಂಟೆಗೆ ಹೋಗುವ ಮೂಲಕ ಅವರ ಜೇನು ಹುಟ್ಟಿಗೆ ಕಲ್ಲು ಹೊಡೆದಿದ್ದಾರೆ.ಜೇನು ಹುಟ್ಟಿಗೆ ಕಲ್ಲು ಹೊಡೆದು ಜೇನಿನ ಧಾಳಿಗೆ ಒಳಗಾಗಿದ್ದಾರೆ.  ಮೂರ್ತಿ ಭಂಜನೆಗೆ ಮೊದಲು ಮೂರ್ತಿಯ ಶಕ್ತಿ ಮತ್ತು ಪರಿಣಾಮದ ಬಗ್ಗೆಯೂ ಅವರು ಆಲೋಚಿಸಿದಂತಿಲ್ಲ. ಇದರ ಜೊತೆಗೆ ಇನ್ನೊಂದು ಬಹುಮುಖ್ಯ ಪ್ರಶ್ನೆ ಎಂದರೆ ಭಗವಾನ್ ಅವರು ಈ ರೀತಿ ರಾಮ ಮತ್ತು ಕೃಷ್ಣರನ್ನು ಟೀಕಿಸುವುದರಿಂದ ಸಾಧಿಸಿದ್ದೇನು ? ರಾಮ ಕೆಲವು ವರ್ಷಗಳ ನಂತರ ಇಹಲೋಕ ಯಾತ್ರೆ ಮುಗಿಸಿದ ಎಂಬುದು ಸತ್ಯ. ಅದನ್ನು ಬಿಟ್ಟು ಆತ ಹೇಗೆ ಸತ್ತ ಎಂಬುದನ್ನು ಸಂಷೋಧನೆ ಮಾಡಿದ್ದರಿಂದ ಆಗುವ ಲಾಭ ಏನು ?
ಸಾಧಾರಣವಾಗಿ ಮೂರ್ತಿ ಸ್ಥಾಪಿಸುವವರು ಬಹುಸಂಖ್ಯಾತರು. ಅವರ ಬಲ ಹೆಚ್ಚು. ಮೂರ್ತಿ ಭಂಜಕರ ಬಲ ತುಂಬಾ ಕಡಿಮೆ. ಮೂರ್ತಿ ಭಂಜಕರ ಬಗ್ಗೆ ಸಮಾಜದ ಸಹಾನುಭೂತಿ ಕೂಡ ಇರುವುದಿಲ್ಲ . ಮೂರ್ತಿ ಭಂಜನೆಗೆ ಕೆಲವರು ಸಿದ್ಧವಾದರೆ, ಮೂರ್ತಿಯನ್ನು ಕಾಯುವ ಬಹುಸಂಖ್ಯಾತರು ತಮ್ಮ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನೆಲ್ಲ ಮರೆತು ಮೂರ್ತಿ ರಕ್ಷಣೆಗೆ ಒಂದಾಗುತ್ತಾರೆ.. ಹೀಗೆ ಒಂದಾದವರ ಬಲ ಇನ್ನಷ್ಟು ಹೆಚ್ಚುತ್ತದೆ. ಅವರನ್ನು ಸೋಲಿಸುವುದು ಇನ್ನಷ್ಟು ಕಷ್ಟವಾಗುತ್ತದೆ.ಈಗ ವಾಲ್ಮೀಕಿ ರಾಮನಗಿಂತ ಸಾವಿರ ಪಟ್ಟು ಬೆಳೆದು ಜನ ಮಾನಸದಲ್ಲಿ ನಿಂತ ರಾಮಕೃಷ್ಣರು ಮತ್ತು ಅವರ ಕಾವಲು ಕಾಯುತ್ತಿರುವ ಭಕ್ತರು ತುಂಬಾ ಬಲಶಾಲಿಗಳಾಗಿದ್ದಾರೆ, ಈ ಬಲ ಬಂದಿದ್ದೂ ಸಹ ನಂಬಿಕೆಯಿಂದ.
ನಂಬಿಕೆಯ ಶಕ್ತಿ ಅಪನಂಬಿಕೆಗೆ ಇರುವುದಿಲ್ಲ. ಹೀಗಾಗಿ ರಾಮನನನ್ನು ತಮ್ಮ ಮನಸ್ಸಿನಲ್ಲಿ ಪ್ರತಿಷ್ಠಾಪಿಸಿಕೊಂಡವರಿಗೆ ಇರುವ ಶಕ್ತ್ರಿ ನಂಬದ ಭಗವಾನ್ ಅವರಿಗೆ ಇರುವುದು ಕಷ್ಟ.

Saturday, September 19, 2015

ಮಾಧ್ಯಮಕ್ಕೆ ಕೆಲವೇ ಕೆಲವು ರಾಜಕಾರಣಿಗಳು ಇಷ್ಟವಾಗುವುದು ಯಾಕೆ ?

ನಾನು ಪತ್ರಿಕೋದ್ಯಮಕ್ಕೆ ಬಂದಾಗ ಅಗತಾನೆ ದೇವರಾಜ ಅರಸು ಅವರ ಯುಗ ಮುಗಿಯುತ್ತ ಬಂದಿತ್ತು. ಆರ್. ಗುಂದೂರಾವ್ ಮುಖ್ಯಮಂತ್ರಿ. ಕರ್ನಾಟಕದ ರಾಜಕಾರಣದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮಣ್ಣು ಹದವಾಗುತ್ತಿತ್ತು.. ರಾಜ್ಯದಲ್ಲಿ ರೈತ ಚಳವಳಿ, ದಲಿತ ಚಳವಳಿ ಮತ್ತು ಕನ್ನಡ ಚಳವಳಿ ಹೊಸ ಕನಸಿಗೆ ನೀರೆರೆಯುವ ಮಣ್ಣನ್ನು ಹದ ಮಾಡುವ ಕೆಲಸ ಮಾಡುತ್ತಿದ್ದವು. ಆಗ ನಾನು ಪತ್ರಿಕಾ ವ್ಯವಸಾಯವನ್ನು ಪ್ರಾರಂಭಿಸಿದ್ದೆ. ಅದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ. ಆಗಲೇ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯನ್ನು ಸರ್ಕಾರ ನಡೆಸುತ್ತಿತ್ತು. ಅದಕೊಬ್ಬ ಆಡಳಿತಾಧಿಕಾರಿ ಇದ್ದರು. ಪತ್ರಿಕೆಯ ಜಂಟಿ ಸಂಪಾದಕರಾಗಿ ಇದ್ದವರು ಎಸ್. ವಿ. ಜಯಶೀಲರಾವ್. ಆಗಲೇ ಪ್ರಜಾವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಿ ಅವರು ಇಲ್ಲಿಗೆ ಬಂದಿದ್ದರು.
ಆ ದಿನಗಳಲ್ಲಿ ಯಾವ ದಿನ ಪತ್ರಿಕೆಯೂ ಅರಸು ಅವರ ಬೆಂಬಲಕ್ಕೆ ನಿಂತಿರಲಿಲ್ಲ. ಅರಸು ಅವರು ಜಾರಿಗೆ ತಂದ ಊಳೂವವನೇ ನೆಲದೊಡೆಯ ಎಂಬ ಕಾನೂನಾಗಲಿ, ಮಲ ಹೊರುವುದನ್ನು ನಿಷೇಧಿಸಿದ್ದಾಗಲೀ ಮಾಧ್ಯಮಗಳಿಗೆ ಎಷ್ಟು ಮುಖ್ಯವಾಗಬೇಕಿತ್ತೋ ಅಷ್ಟು ಮುಖ್ಯವಾಗಿರಲಿಲ್ಲ. ಬದಲಾಗಿ ಅರಸು ಅವರು ಕರ್ನಾಟಕದ ಭ್ರಷ್ಟ ಮುಖ್ಯಮಂತ್ರಿ ಎಂಬಂತೆ ಮಾಧ್ಯಮಗಳು ಪ್ರತಿಬಿಂಬಿಸುತ್ತಿದ್ದವು.. ವರ್ಗಾವಣೆಯಲ್ಲಿ ಹಣ ಪ್ರಮುಖ ಪಾತ್ರ ಒಹಿಸುವ ಬಗ್ಗೆ, ಅರಸು ಅವರ ಹೆಂಡತಿಯೇ ಈ ವ್ಯವಹಾರ ಮಾಡುವ ಬಗ್ಗೆ ಸಾಕಷ್ಟು ವದಂತಿಗಳು ಸಾಮಾಜಿಕ, ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಹರಡಿದ್ದವು..ಇದಾದ ಮೇಲೆ ಅರಸು ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಸುವುದಕ್ಕೆ ಆಯೋಗದ ನೇಮಕವೂ ಆಯಿತು. ಆಗೆಲ್ಲ ಅರಸು ಕರ್ನಾಟಕ ರಾಜಕಾರಣದ ಒಬ್ಬ ವಿಲನ್ ನಂತೆ ಪ್ರತಿಬಿಂಬಿತರಾಗಿದ್ದರು..
ಇದಕ್ಕೆ ಇರಬಹುದಾದ ಕಾರಣಗಳು ಹಲವು. ಅರಸು ಅವರು ಜಾರಿಗೆ ತಂದ ಹಲವಾರಿ ಕ್ರಾಂತಿಕಾರಿ ಯೋಜನೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ಮೇಲ್ವರ್ಗದ ಹಿಡಿತದಲ್ಲಿದ್ದ ಮಾಧ್ಯಮಕ್ಕೆ ಇರಲಿಲ್ಲ. ಹಾಗೆ ಅಂದಿನ ರಾಜಕಾರಣಕ್ಕೂ ಇರಲಿಲ್ಲ. ಇಂದಿರಾ ಗಾಂಧಿಯವರು ರೋಟಿ ಕಪಡಾ ಅವರ ಮಕಾನ್, ಗರೀಬಿ ಹಟಾವೋ ಯೋಜನೆಯನ್ನು ಜಾರಿಗೆ ತರುವವರೆಗೆ ಕಾಂಗ್ರೆಸ್ ಸಾಮಾಜಿಕ ನ್ಯಾಯ ಮತ್ತು ಸರ್ವರಿಗೂ ಸಮಬಾಳ್ವೆ ಎಂಬ ಕಲ್ಪನೆನ್ನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಕಾಂಗ್ರೆಸ್ಸಿನಲ್ಲಿದ್ದ ಬಹುತೇಕ ನಾಯಕರು ಮೇಲ್ವರ್ಗ ಮತ್ತು ಜಾತಿಗಳಿಂದ ಬಂದವರಾಗಿದ್ದರು. ಗಾಂಧಿಯ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ರಾಜಕೀಯಕ್ಕೆ ಬಂದ ಈ ನಾಯಕರು ಸಾಮಾಜಿಕ ನ್ಯಾಯವನ್ನು ಗಂಭೀರವಾಗಿ ತೆಗೆದುಕೊಂಡವರಾಗಿರಲಿಲ್ಲ. ಸ್ವಾತಂತ್ರ್ಯ ಬಂದ ಸಂಭ್ರಮದಲ್ಲೇ ರಾಜಕೀಯ ಮಾಡುತ್ತಿದ್ದ ಕಾಂಗ್ರೆಸ್ ನ ಈ ಬಹುಸಂಖ್ಯಾತ ಗಣ ನೆಹರೂವಾದಿಗಳಾಗಿದ್ದರು. ಇವರೆಲ್ಲ ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿಯ ಬಗ್ಗೆ ಮಾತನಾಡಬಲ್ಲವರಾಗಿದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಇವರಿಗೆ ಅಂಬೇಡ್ಕರ್ ಪರಿಚಿತರಾಗಿರಲಿಲ್ಲ. ಅಂಬೇಡ್ಕರ್ ರನ್ನು ಅರ್ಥ ಮಾಡಿಕೊಳ್ಳುವುದು ಹಾಗಿರಲಿ, ಅವರಿಗೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸುತ್ತಿರಲಿಲ್ಲ. ೧೯೬೯ ರಲ್ಲಿ ಕಾಂಗ್ರೆಸ್ ಇಬ್ಬಾಗವಾದಾಗ ಈ ಥರದ ನಾಯಕರು ಸಂಸ್ಥಾ ಕಾಂಗ್ರೆಸ್ ನಲ್ಲಿ ಉಳಿದರು. ಕಾಂಗ್ರೆಸ್ ಪಳೆಯುಳಿಕೆಗೆ ತಾವು ವಾರಸುದಾರರು ಎಂಬ ಭ್ರಮೆ ಈ ನಾಯಕರಿಗಿತ್ತು.. ರೆಡ್ಡಿ ಕಾಂಗ್ರೆಸ್ ಹೆಸರಿನಲ್ಲಿ ಒಂದಾಗಿದ್ದ ಈ ಗುಂಪು ಇಂದಿರಾ ಗಾಂಧಿ ಅವರ ಗರೀಭಿ ಹಟಾವೋ ಮತ್ತು ರೋಟಿ ಕಪಡಾ ಮಖಾನ್ ಘೋಷಣೆಯಲ್ಲಿ  ಕೊಚ್ಚಿ ಹೋದರು. ದೇಶದಲ್ಲಿ ಇಂದಿರಾ ಗಾಂಧಿಒ ಹೊಸ ರಾಜಕಾರಣವನ್ನು ಪ್ರಾರಂಭಿಸಿದರು. ಅದು ಕಾಂಗ್ರೆಸ್ ನಿರ್ಲಕ್ಷಿಸಿದ್ದ ಬಡವರು, ದೀನದಲಿತರು, ದುರ್ಬಲ ವರ್ಗದದವರ ಪರವಾದ ರಾಜಕಾರಣವಾಗಿತ್ತು.
ಆದರೆ ಮಾಧ್ಯಮ ರೆಡ್ಡಿ ಕಾಂಗ್ರೆಸ್ ಪರವಾಗಿತ್ತೇ ಹೊರತೂ ಇಂದಿರಾ ಗಾಂಧಿ ಅವರ ಪರವಾಗಿ ಇರಲಿಲ್ಲ. ಇಂದಿರಾ ಗಾಂಧಿ ಅವರ ಜೊತೆಗಿದ್ದ ದೇವರಾಜ್ ಅರಸು ಕರ್ನಾಟಕದಲ್ಲಿ ಹಿಂದುಳಿದ ವರ್ಗದವರ ಪರವಾಗಿ ಅಭೂತಪೂರ್ವ ಕೆಲಸ ಮಾಡಿದರು. ಲಿಂಗಾಯಿತರು, ಒಕ್ಕಲಿಗರು ಮತ್ತು ಬ್ರಾಹ್ಮಣ ರಾಜಕಾರಣಕ್ಕೆ ತೆರೆ ಎಳೆದರು..ಆಗಲೇ ಮಾಧ್ಯಮ ಸಂಪೂರ್ಣವಾಗಿ ಇಂದಿರಾ ಮತ್ತು ಅರಸು ವಿರೋಧಿ ನಿಲುಮೆಯನ್ನು ಇನ್ನಷ್ಟ್ಯು ಪ್ರಖರಗೊಳಿಸಿತು.. ಇಂದಿರಾ ಗಾಂಧಿ ಅವರ ವಿರೋಧಕ್ಕೆ ಆಂತರಿಕವಾಗಿ ಬೇರೆ ಕಾರಣಗಳಿದ್ದರೂ ೧೯೭೫ ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಇಂದಿರಾ ಗಾಂಧಿ ಅವರು ತಮ್ಮ ವಿರೋಧಿಗಳಿಗೆ ತಾತ್ವಿಕ ಆಯುಧವನ್ನು ತಾವೇ ಪ್ರಧಾನ ಮಾಡಿದರು. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆಂದೋಳನ ಪ್ರಾರಂಭವಾಯಿತು..ಆಗ ದೇಶದ  ಪ್ರಜಾಪ್ರಭುತ್ವವನ್ನು ಪ್ರೀತಿಸುವವರೆಲ್ಲ ಈ ಆಂದೋಲನದಲ್ಲಿ ದುಮುಕಿದರು. ಇದರಿಂದ ಇಂದಿರಾ ಗಾಂಧಿ ಅವರ ಬಡವರ ಪರವಾದ ರಾಜಕಾರಣವನ್ನು ವಿರೋಧಿಸುತ್ತಿದ್ದ ಮನಸ್ಸುಗಳಿಗೆ ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೊಸ ಆಯುಧ ಸಿಕ್ಕಿಬಿಟ್ಟಿತು.  ಮಾಧ್ಯಮಗಳೂ ಈ ಆಯುಧವನ್ನೇ ಇಂದಿರಾ ಗಾಂಧಿ ಅವರ ವಿರುದ್ಧ ಬಳಸಿದವು.
ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಶ್ರೀಮತಿ ಇಂದಿರಾ ಗಾಂಧಿ ಕೇವಲ ತಮಗೆ ಮಾತ್ರ ಅನ್ಯಾಯ ಮಾಡಿಕೊಳ್ಳಲಿಲ್ಲ, ಕಾಂಗ್ರೆಸ್ ಗೆ ಮಾತ್ರ ಮರಣ ಶಾಸನ ಬರೆಯಲಿಲ್ಲ, ಬಡವರು ಮತ್ತು ಹಿಂದುಳಿದ ವರ್ಗಗಳ ಪರವಾದ ರಾಜಕಾರಣಕ್ಕೂ ಕೊಡಲಿ ಪೆಟ್ಟು ನೀಡಿದರು. ಬಡವರು ದಲಿತರು ಮತ್ತು ಹಿಂದುಳಿದ ವರ್ಗಗಳ ವಿರೋಧಿಗಳಿಗೆ ಹೊಸ ಅಸ್ತ್ರವನ್ನು ನೀಡಿ ಬಿಟ್ಟರು.
ಆ ಕಾಲದಲ್ಲಿ ಒಟ್ಟಾರೆ ಮಾಧ್ಯಮದ ಮನಸ್ಥಿತಿ, ಕೂಡ ಇಂದಿರಾ ಗಾಂಧಿ ವಿರುದ್ಧದ ಮನಸ್ಥಿತಿಯೇ ಆಗಿತ್ತು. ಆಗ ವಿದ್ಯಾರ್ಥಿಯಾಗಿದ್ದ ನನಗೂ ಇಂದಿರಾ ಗಾಂಧಿ ಅಂದರೆ ಖಳನಾಯಕಿ ಎಂದೇ ಅನ್ನಿಸುತ್ತಿತ್ತು. ಪತ್ರಿಕೆಗಳನ್ನು ಓದಿ ಬೆಳೆದ ನನಗೆ ಪ್ರಾರಂಭದಲ್ಲಿ ಇಂದಿರಾ ಗಾಂಧಿ ಅವರು ಕಾಂಗ್ರೆಸ್ ರಾಜಕಾರಣಕ್ಕೆ ನೀಡಿದ ಬಡವರು ದಲಿತರ ಪರವಾಗಿ ನೀಡಿದ ಹೊಸ ಆಯಾಮ ಗಮನಕ್ಕೆ ಬಂದಿರಲಿಲ್ಲ. ಇಂದಿರಾ ಗಾಂಧಿ ಅಂದರೆ ಪ್ರಜಾಪ್ರಭುತ್ವ ವಿರೋಧಿ ಸರ್ವಾಧಿಕಾರಿ ಎಂದೇ ಅನ್ನಿಸುತ್ತಿತ್ತು.. ಆದರೆ ಕರ್ನಾಟಕದಲ್ಲಿ ದೇವರಾಜ್ ಅರಸು ಅವರು ತೆಗೆದುಕೊಂಡ ಕ್ರಾಂತಿ ಕಾರಿ ತೀರ್ಮಾನಗಳನ್ನು ತಿಳಿದುಕೊಳ್ಳುತ್ತ ಹೋದಹಾಗೆ ನನ್ನ ನಿಲುಮೆ ಬದಲಾಯಿತು.ಜನತಂತ್ರ ಕಗ್ಗೊಲೆ ಮಾಡಿದ ಇಂದಿರಾ ಗಾಂಧಿ ಕಾಂಗ್ರೆಸ್ ರಾಜಕಾರಣವನ್ನು ಇನ್ನೊಂದು ನೆಲೆಗೆ ಕೊಂಡೊಯ್ದರು ಎಂಬುದನ್ನು ನಾನು ಕಂಡುಕೊಂಡೆ. ಇಂದಿರಾ ಗಾಂಧಿ ಮತ್ತು ದೇವರಾಜ್ ಅರಸು ಅವರನ್ನು ಮಾಧ್ಯಮ ವಿರೋಧಿಸುವುದಕ್ಕೆ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕೆ ನಡೆಸುತ್ತಿರುವ ಯತ್ನ ಎಂದು ಕಂಡರೂ ಅದರ ಹಿಂದೆ ಅಡಗಿ ಕುಳಿತಿರುವ ಬೇರೆ ಬೇರೆ ಕಾರಣಗಳು ಅರ್ಥವಾಗತೊಡಗಿತು..ಇಂದಿರಾ ಕಾಂಗ್ರೆಸ್ ಯಾವಾಗ ದೀನ ದಲಿತರ ಬಗ್ಗೆ ಮಾತನಾಡತೊಡಗಿದಂತೆ ಮೇಲ್ಜಾತಿಯ ಜನ ಕಾಂಗ್ರೆಸ್ ನಿಂದ ದೂರ ಸರಿಯತೊಡಗಿದರು. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಇವರೆಲ್ಲ ಐಖ್ಯವಾದದ್ದು ಇತಿಹಾಸ.
ಕರ್ನಾಟಕದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾದವರು ರಾಮಕೃಷ್ಣ ಹೆಗಡೆ. ಆಗ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದವರು ಕ್ರಾಂತಿರಂಗದಿಂದ ಬಂದ ಎಸ್. ಬಂಗಾರಪ್ಪ..ಆದರೆ ಆಗಲೇ ಮಾಧ್ಯಮ ಹೆಗಡೆಯವರ ಪರವಾಗಿತ್ತು. ಹೆಗಡೆ ದೇವೇಗೌಡ ಅವರ ನಡುವೆ ರಾಜಕಿಯ ವೈಷಮ್ಯ ತಾರಕಕ್ಕೆ ಏರಿದಾಗಲೂ ಮಾಧ್ಯಮ ಹೆಗಡೆ ಅವರ ಬೆಂಬಲಕ್ಕೆ ನಿಂತಿತ್ತು.
ಕರ್ನಾಟಕದಲ್ಲಿ ಮಾಧ್ಯಮ ಬೆಂಬಲ ನೀಡಿದ ನಾಯಕರ ಪಟ್ಟಿಯನ್ನು ಮಾಡಬಹುದು.. ರಾಮಕೃಷ್ಣ ಹೆಗಡೆ, ಎಸ್. ಎಮ್. ಕೃಷ್ಣ, ವಿರೇಂದ್ರ ಪಾಟೀಲ್, ಬಿ.ಎಸ್. ಯಡಿಯೂರಪ್ಪ ಹೀಗೆ ಪಟ್ಟಿ ಮಾಡಬಹುದು. ಆದರೆ ಈ ಪಟ್ಟಿಯಲ್ಲಿ ನಿಖರವಾಗಿ ಹೆಸರಿಸಬಹುದಾದ ಇಬ್ಬರು ನಾಯಕರೆಂದರೆ ಹೆಗಡೆ ಮತ್ತು ಎಸ್. ಎಮ್. ಕೃಷ್ಣ ಮಾತ್ರ.. ಮಾಧ್ಯಮ ಇವರಿಬ್ಬರಿಗೆ ಯಾಕೆ ಬೆಂಬಲ ನೀಡುತ್ತ ಬಂತು ? ಈ ಪ್ರಶ್ನೆಯನ್ನು ಕೇವಲ ಜಾತಿ ಆಧಾರದಿಂದ ಮಾತ್ರ ನೋಡುವುದು ಸಾಧ್ಯವಿಲ್ಲ. ಹಾಗೆ ಇವರಿಬ್ಬರು ಕರ್ನಾಟಕ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳು ಎಂಬ ವಾದಕ್ಕೂ ಸಾಕ್ಷ್ಯ ಪುರಾವೆ ಇಲ್ಲ. ಎಸ್. ಎಮ್. ಕೃಷ್ಣ ದೇವೇಗೌಡ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು. ಹೀಗಿದ್ದರೂ ಕೃಷ್ಣ ಅವರನ್ನು ಬೆಂಬಲಿಸಿದ ಮಾಧ್ಯಮ ದೇವೇಗೌಡರನ್ನು ಬೆಂಬಲಿಸಲಿಲ್ಲ.
ಇನ್ನೊಂದೆಡೆ ವೀರಪ್ಪ ಮೊಯ್ಲಿ, ಎಸ್. ಬಂಗಾರಪ್ಪ ಅವರಿಗೆ ಮಾಧ್ಯಮ ಎಂದೂ ಬೆಂಬಲ ನೀಡಲಿಲ್ಲ. ಎಚ್.ಡಿ. ಕುಮಾರಸ್ವಾಮಿ ಮಾಧ್ಯಮದ ಬೆಂಬಲ ಪಡೆಯುವಲ್ಲಿ ಯಶಸ್ವಿಯಾದರು. ಯಡಿಯೂರಪ್ಪ ತಾವೇ ಸೃಷ್ಟಿಸಿಕೊಂಡ ವಿವಾದಗಳಲ್ಲಿ ಸಿಲುಕಿಕೊಂಡು ಜೈಲಿಗೆ ಹೋಗಿ ಬಂದಿದ್ದರಿಂದ ಮಾಧ್ಯಮದ ಬೆಂಬಲ ಅವರಿಗೆ ಸಿಗದಂತಾಯಿತು. ಇನ್ನು ಜಗದೀಶ್ ಶೆಟ್ಟರ್, ಸದಾನಂದ ಗೌಡರಿಗೆ ಮಾಧ್ಯಮದ ಬೆಂಬಲ ಇತ್ತೋ ಇಲ್ಲವೋ ಎಂದು ಅರ್ಥ ಮಾಡಿಕೊಳ್ಳಲು ಕಾಲಾವಕಾಶವೇ ಇರಲಿಲ್ಲ. ಇವರಿಗಿಂತ ಮೊದಲು ಆರ್. ಗುಂಡೂರಾಯರಂತೂ ಮಾಧ್ಯಮಗಳ ಧಾಳಿಗೆ ಸಿಲುಕಿ ನಲುಗಿ ಹೋದರು. ಪತ್ರಕರ್ತರೆಲ್ಲ ಸಮುದ್ರಕ್ಕೆ ಹೋಗಿ ಬೀಳಲಿ ಎಂದು ಅವರು ಶಪಿಸುವಂತೂ ಆಯಿತು.
ಪ್ರಸಕ್ತ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಮಾಧ್ಯಮ ಬೆಂಬಲ ನೀಡುತ್ತಿಲ್ಲ.
ಇದೆನ್ನೆಲ್ಲ ಗಮನಿಸಿದ ಮೇಲೆ  ಮಾಧ್ಯಮಕ್ಕೆ ಯಾರು ಯಾಕೆ ಇಷ್ಟವಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಪಡೆದುಕೊಳ್ಳಲು ಯತ್ನಿಸೋಣ..
ಕರ್ನಾಟಕದ ಸ್ವಾತಂತ್ರೋತ್ಸವದ ರಾಜಕಾರಣದಲ್ಲಿ ಕೇವಲ ಜಾತಿ ಆಧಾರದ ಮೇಲೆ ಮಾಧ್ಯಮ, ನಾಯಕರು ಮತ್ತು ಪಕ್ಷಕ್ಕೆ ಬೆಂಬಲ ನೀಡುತ್ತ ಬಂದಿದೆ ಎಂದು ಹೇಳಲು ಸಾಕ್ಷಾಧಾರಗಳಿಲ್ಲ. ಆದರೆ ಕೆಲವೊಂದು ವಿಶಿಷ್ಠ ಸಂದರ್ಭಗಳಲ್ಲಿ ಜಾತಿ ಕೂಡ ಪ್ರಮುಖ ಪಾತ್ರ ಒಹಿಸಿದರೂ ಅದೊಂದೇ ಕಾರಣವಲ್ಲ. ದೇವರಾಜ ಅರಸು ಅವರನ್ನು  ಮಾಧ್ಯಮ ವಿರೋಧಿಸಿದ್ದಕ್ಕೆ ಮಾಧ್ಯಮದ ಇಂದಿರಾ ವಿರೋಧಿ ಮನಸ್ಥಿತಿ  ಪ್ರಮುಖ ಕಾರಣವಾಗಿತ್ತು. ಮಾಧ್ಯಮದ ಇಂತಹ ಮನಸ್ಥಿತಿಗೆ ಈಗಾಗಲೇ ವಿವರಿಸಿರುವಂತೆ ಇಂದಿರಾ ಗಾಂಧಿ ಅವರ ಜನತಂತ್ರ ವಿರೋಧಿ ನಡವಳಿಕೆಯ ಜೊತೆಗೆ ಅವರು ಹೊಂದಿದ್ದ ಬಡವರ ಮತ್ತು ಹಿಂದುಳಿದ ವರ್ಗಗಳ ಪರವಾದ ನಿಲುಮೆಯೂ ಕಾರಣವಾಗಿತ್ತು ಎಂಬುದನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ.  ಇಂದಿರಾ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷದ ಅಂದಿನ ಬಡವರ ಪರವಾದ ನೀತಿ ನಿಜವಾದ ಬದ್ಧತೆಯಿಂದ ಕೂಡಿತ್ತೇ ಅಥವಾ ಮತ ಬ್ಯಾಂಕ್ ರಾಜಕರಣ ಇದಾಗಿತ್ತೆ ಎಂಬುದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟ.ಆದರೆ ಇಂದಿರಾ ಗಾಂಧಿ ಅವರು ಘೋಷಿಸಿದ ಬಹುತೇಕ ಕಾರ್ಯಕ್ರಮಗಳು ಬಡವರಪರವಾಗಿದ್ದವು. ಇದೇ ಮಾಧ್ಯಮ ಇಂದಿರಾ ಗಾಂಧಿ ಅವರನ್ನು ವಿರೋಧಿಸುವುದಕ್ಕೆ ಕಾರಣವಾಗಿರಬಹುದೆ ? ಇನ್ನು ದೇವರಾಜ್ ಅರಸು. ಅವರು ಕರ್ನಾಟಕದ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮತ್ತು ಸಾಮಾಜಿಕ ಪ್ರಾತಿನಿಧ್ಯ ನೀಡಿದವರು. ಇದೇ ಅರಸು ಅವರನ್ನು ಮಾಧ್ಯಮ ವಿರೋಧಿಸುವುದಕ್ಕೆ ಪ್ರಮುಖ ಕಾರಣ ಇರಬಹುದು.
ಈಗ ಕರ್ನಾಟಕದಲ್ಲಿ ಮಾಧ್ಯಮದ ಬೆಂಬಲ ಪಡೆದವರಲ್ಲಿ ಪ್ರಮುಖರೆಂದರೆ ರಾಮಕೃಷ್ಣ ಹೆಗಡೆ ಮತ್ತು ಎಸ್.ಎಮ್. ಕೃಷ್ಣ. ಇವರಿಬ್ಬರೂ ಕ್ರಮವಾಗಿ ಬ್ರಾಹ್ಮಣ ಮತ್ತು ಒಕ್ಕಲಿಗೆ ಜಾತಿಗೆ ಸೇರಿದ್ದರೂ ಇಬ್ಬರ ನಡುವೆ ಹಲವು ರೀತಿಯ ಸಾಮ್ಯತೆಗಳಿವೆ. ಇವರಿಬ್ಬರು ಕರ್ನಾಟಕದ ಉಳಿದೆಲ್ಲ ರಾಜಕಾರಣಿಗಳಿಗಿಂತ ಹೆಚ್ಚಾಗಿ ತಮ್ಮ ಇಮೇಜ್ ಬಗ್ಗೆ ತಲೆ ಕೆಡಿಸಿಕೊಂಡವರು. ಭ್ರಷ್ಟರಾದರೂ ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳದೇ ನಯ ನಾಜೂಕಿನಿಂದ ರಾಜಕಾರಣ ಮಾಡಿದವರು. ಹೆಗಡೆ  ರೇವಜೀತು, ಬಾಟ್ಲಿಂಗ್ ಮೊದಲಾದ ಹಗರಣಗಳಲ್ಲಿ ಸಿಲುಕಿಕೊಂಡು ತಮ್ಮ ಇಮೇಜಿಗೆ ದಕ್ಕೆ ತಂದುಕೊಂಡರೂ ಕೃಷ್ಣ ಮಾತ್ರ ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳಲಿಲ್ಲ.
ಇದನ್ನೆಲ್ಲ ಗಮನಿಸಿದರೆ ಮಾಧ್ಯಮಕ್ಕೆ ಒಬ್ಬ ರಾಜಕಾರಣಿ ಯಾಕೆ ಇಷ್ಟವಾಗುತ್ತಾನೆ ಎಂಬುದಕ್ಕೆ ಕೆಲವು ಅಂಶಗಳನ್ನು ಪಟ್ಟಿ ಮಾಡಬಹುದು.
೧. ಜಾತಿ.
೨. ವರ್ಗ
೩. ಮಾಧ್ಯಮ ನಿರ್ವಹಣೆ
೪. ಇಮೇಜ್
ಮಾಧ್ಯಮಕ್ಕೆ ಯಾರು ಇಷ್ಟವಾಗುತ್ತಾರೆ ಎಂಬುದಕ್ಕೆ ಜಾತಿ ಪ್ರಮುಖ ಕಾರಣ ಎಂಬುದು ನಿಜ. ಆದರೆ ಇದ್ಏ ಅಂತಿಮ ಅಲ್ಲ. ಜಾತಿಯೊಂದೇ ಅಂತಿಮ ವಾಗಿದ್ದರೆ, ಒಂದೇ ಸಮುದಾಯಕ್ಕೆ ಸೇರಿದ ಎಸ್. ಎಮ್. ಕೃಷ್ಣ ಮತ್ತು ದೇವೇಗೌಡ ಇಬ್ಬರಿಗೂ ಸಮಾನ ಪ್ರಾತಿನಿಧ್ಯ ಮಾಧ್ಯಮದಲ್ಲಿ ದೊರಕಬೇಕಿತ್ತು. ಆದರೆ ಹಾಗಾಗಿಲ್ಲ.  ಜಾತಿಯ ಜೊತೆಗೆ ಅವರು ಯಾವ ವರ್ಗವನ್ನು ಪ್ರತಿನಿಧಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ ಎಂಬುದನ್ನು ನಾವು ಗಮನಿಸಬಹುದು. ಇದಕ್ಕೆ ದೇವರಾಜ್ ಅರಸು ಅವರನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದು. ಅರಸು ಅವರನ್ನು ವಿರೋಧಿಸುವುದಕ್ಕೆ ಅವರ ಜಾತಿ ಕಾರಣವಾಗಿರಲಿಲ್ಲ, ಅವರು ಯಾವ ವರ್ಗವನ್ನು ಪ್ರತಿನಿಧಿಸುತ್ತಿರುವುದು ಕಾರಣವಾಗಿತ್ತು.
ಇನ್ನು ಮಾಧ್ಯಮ ನಿರ್ವಹಣೆ. ಮಾಧ್ಯಮ ನಿರ್ವಹಣೆ ಎಂದರೆ ಅದು ಕೇವಲ ಪೇಡ್ ನ್ಯೂಸ್ ಗೆ ಮಾತ್ರ ಸಂಬಂಧಿಸಿದ್ದಲ್ಲ..ಮಾಧ್ಯಮದ ಜೊತೆ ಒಬ್ಬ ರಾಜಕಾರಣಿ ಯಾವ ರೀತಿಯ ಸಂಬಂಧ ಇಟ್ಟುಕೊಳ್ಳುತ್ತಾನೆ ಎಂಬುದು ಮುಖ್ಯ. ಆತ ಯಾವ ರೀತಿ ಮಾತನಾಡುತ್ತಾನೆ, ಅವನು ಪತ್ರಿಕಾಗೋಷ್ಟಿ ಕರೆದಾಗ ಹೇಗೆ ಹ್ಯಾಂಡಲ್ ಮಾಡುತ್ತಾನೆ, ಅವನ ಹೇಳಿಕೆಯಲ್ಲಿ ಸುದ್ದಿ ಇರುತ್ತದೆಯೇ ಅಥವಾ ಇಲ್ಲವೇ ಎಂಬುದು ಮುಖ್ಯವಾಗುತ್ತದೆ..
ಈ ವಾದದ ನಡುವೆಯೂ ಜಾತಿ ಪ್ರಮುಖ ಪಾತ್ರ ಒಹಿಸುತ್ತದೆ ಎಂಬುದಕ್ಕೆ ನಮ್ಮ ಎದುರು ಉದಾಹರಣೆಗಳಿವೆ. ಇತ್ತೀಚಿಗೆ ಅತ್ಯಾಚಾರ ಆರೋಪಕ್ಕೆ ಸಿಲುಕಿರುವ ರಾಘವೇಶ್ವರ ಸ್ವಾಮಿಯ ಪ್ರಕರಣವನ್ನೇ ತೆಗೆದುಕೊಳ್ಳಬಹುದು. ಅತ್ಯಾಚಾರದ ಎರಡು ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ರಾಘವೇಶ್ವರ ಸ್ವಾಮಿ ಮಾಧ್ಯಮದ ಪಾಲಿಗೆ ಶ್ರೀಗಳು..ಆದರೆ ಅತ್ಯಾಚಾರ  ಆರೋಪ ಎದುರಿಸುತ್ತಿರುವ ನಿತ್ಯಾನಂದ ಸ್ವಾಮಿ, ಕಾಮಿ ಸ್ವಾಮಿ, ರಾಘವೇಶ್ವರ ಸ್ವಾಮಿಯನ್ನು ಕಾಮಿ ಸ್ವಾಮಿ ಎಂದು ಕರೆಯುವ ಧೈರ್ಯ ಯಾಕೆ ಮಾಧ್ಯಮಕ್ಕಿಲ್ಲ ? ಮಾಧ್ಯಮಕ್ಕೆ ಧೈರ್ಯ ಇಲ್ಲವೋ ಆಥವಾ ಈ ಸ್ವಾಮಿಯ ಜಾತಿ ಬಾಂಧವರು ಅವರ ರಕ್ಷಣೆಗೆ ನಿಂತಿದ್ದಾರೆಯೆ ? ಈ ಬಗ್ಗೆ ಅನುಮಾನ ಬೇಡ. ಇದು ಕಾಕತಾಳಿಯವೂ ಅಲ್ಲ. ರಾಜ್ಯದ ಮೂರು ಪ್ರಮುಖ ಪತ್ರಿಕೆಗಳಲ್ಲಿ ರಾಘವೇಶ್ವರ ಸ್ವಾಮಿಯ ಜಾತಿ ಬಾಂಧವರು ಪ್ರಮುಖ ಸ್ಥಾನದಲ್ಲಿದ್ದಾರೆ. ಅವರಿಗೆ ರಾಘವೇಶ್ವರ ಸ್ವಾಮಿ ಕಾಮಿ ಸ್ವಾಮಿಯಲ್ಲ, ಅವರು ಶ್ರೀಗಳು.

ಇದೆಲ್ಲವನ್ನು ಗಮನಿಸಿದ ಮೇಲೆ ರಾಜ್ಯದ ಮಾಧ್ಯದ ಮನಸ್ಸು ಹೇಗೆ ಕೆಲಸ ಮಾಡುತ್ತಿದೆ ಎಂಬ ಬಗ್ಗೆ ಕೆಲವೊಂದು ಸುಳಿವುಗಳು ದೊರಕುತ್ತವೆ. ರಾಜ್ಯದ ಮಾಧ್ಯಮಕ್ಕೆ ಒಬ್ಬ ನಾಯಕ ಯಾವ ವರ್ಗ ಮತ್ತು ಸಮುದಾಯವನ್ನು ಪ್ರತಿನಿಧಿಸುತ್ತಾನೆ ಎಂಬುದು ಮೊದಲ ಆಧ್ಯತೆ. ಈ ಸಮುದಾಯದ ಪ್ರಾತಿನಿಧ್ಯ ಒಳಗಡೆ ಇರುವುದು ಜಾತಿಯೇ. ಇದಾದ ಮೇಲೆ ಮಾಧ್ಯಮ ನಿರ್ವಹಣೆ ಮತ್ತು ಇಮೇಜ್ ಪ್ರಮುಖ ಪಾತ್ರ ಒಹಿಸುತ್ತವೆ..

Sunday, September 13, 2015

ಧರ್ಮ ನಿರಪೇಕ್ಷತೆ ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು..ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ ಉತ್ತರವಿಲ್ಲ. ನಾನು ಹುಡುಗನಿದ್ದಾಗ ನನಗೆ ಈ ಸಮಸ್ಯೆ ಎದುರಾಗಲೂ ಇಲ್ಲ. ಇದನ್ನು ಇನ್ನು ವಿವರಿಸುವುದಕ್ಕೆ ಮೊದಲು ನಾನು ನನ್ನ ಹಿನ್ನೆಲೆಯನ್ನು ತಿಳಿಸಲೇಬೇಕು.
ನನ್ನದು ಕಾಂಗ್ರೆಸ್ ಹೋರಾಟಗಾರರ ಕುಟುಂಬ. ನನ್ನ ಅಪ್ಪ ಮತ್ತು ಅಜ್ಜ ಇಬ್ಬರೂ ಕಟ್ಟಾ ಕಾಂಗ್ರೆಸ್ಸಿಗರು. ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿ ಯರವಾಡ ಜೈಲಿನಲ್ಲಿ ಇದ್ದವರು ನನ್ನ ಅಜ್ಜ.. ಅಪ್ಪ ಸಣ್ಣವ ಹುಡುಗನಾದ್ದರಿಂದ ಅವನು ಜೈಲಿಗೆ ಹೋಗಲಿಲ್ಲ. ಅದಕ್ಕೆ ಬದಲಾಗಿ ಖಾಸಗಿಯಾಗಿ ಇಂಗ್ಲೀಷ್ ಕಲಿತ. ಕನ್ನಡ ಸಾಹಿತ್ಯವನ್ನು ಕರಗತ ಮಾಡಿಕೊಂಡ. ಅವನಿಗೆ ಕಾಂಗ್ರೆಸ್ ಎಂದರೆ ಮುಗಿಯಿತು. ಅದೇ ಪರಮ.. ಕಾಂಗ್ರೆಸ್ ವಿರೋಧಿಗಳನ್ನು ತನ್ನ ಕಡು ವೈರಿಗಳು ಎಂದೇ ಭಾವಿಸುತ್ತಿದ್ದ ಆತ ಕಾಂಗ್ರೆಸ್ ವಿರೋಧಿಗಳ  ಜೊತೆ ಮಾತನ್ನೂ ಆಡುತ್ತಿರಲಿಲ್ಲ. ನನ್ನ ಅಜ್ಜ ಮತ್ತು  ಅಪ್ಪ  ಕಾಂಗ್ರೆಸ್ಸಿಗರಾದರೂ ನೆಹರೂ ಮತ್ತು ಗಾಂಧಿಜಿಯವರ ಬಗ್ಗೆ ವಿರೋಧವಿತ್ತು.. ಗಾಂಧೀಜಿಗಿಂತ, ನೆಹರೂ ಅವರಿಗಿಂತ ಲಾಲ ಬಹಾದ್ದೂರ್ ಶಾಸ್ತ್ರಿ ಎಂದರೆ ಅವರಿಗೆ ಹೆಚ್ಚು ಇಷ್ಟವಾಗುತ್ತಿತ್ತು.
ನಮ್ಮ ಮನೆಯ ಹೆಬ್ಬಾಗಲಿನ ಗೋಡೆಯ ಮೇಲೆ ದೊಡ್ಡ ಗಾತ್ರದ ಫೋಟೋಗಳಿದ್ದವು. ಅಲ್ಲಿ ರಾಮಕೃಷ್ಣ ಪರಮಹಂಸ, ನೆಹರೂ ಇಂದಿರಾ ಗಾಂಧಿ, ಚತ್ರಪತಿ ಶಿವಾಜಿ, ಮೊದಲಾದವರು ಗೋಡೆಯ ಮೇಲೆ ಪ್ರತ್ರಿಷ್ಠಾಪಿಸಿದ್ದರು. ಸುಮಾರು ಇಪ್ಪತ್ತಕ್ಕೂ ಹೆಚ್ಚು ದೊಡ್ಡ ಗಾತ್ರದ ಗ್ಲಾಸ್ ಹಾಇದ ಫೋಟೋಗಳಲ್ಲಿ ಗಾಂಧಿಯ ಫೋಟೋ ಮಾತ್ರ ಇರಲಿಲ್ಲ. ಒಳಗಡೆ ಕಪಾಟಿನಲ್ಲಿ ಸಾವಿರಾರು ಪುಸ್ತಕಗಳು. ನನ್ನ ಅಪ್ಪ ಕನ್ನಡ ಮತ್ತು ಇಂಗ್ಲೀಷ್ ಪುಸ್ತಕಗಳ ಭಂಡಾರವನ್ನೇ ಇಟ್ಟಿದ್ದ. ಪಂಪ, ರನ್ನ, ಹರಿಹರ ರಾಘವಾಂಕ, ಜೆನ್ನ ಪೊನ್ನ ಕಾವ್ಯಗಳದ್ದು ಒಂದು ಸಾಲು. ಹೊಸ ಗನ್ನಡದ ಕುವೆಂಪು ಬೇಂದ್ರೆ, ತೇಜಸ್ವಿ ಶಿವರಾಮ ಕಾರಂತರ ಹೊಸ ಪುಸ್ತಕಗಳು ಬಿಡುಗಡೆಯಾದ ತಕ್ಷಣ ಬಂದು ನಮ್ಮ ಪುಸ್ತಕ ಭಂಡಾರವನ್ನು ಸೇರುತ್ತಿದ್ದವು.  ಶೇಕ್ಸಫೀಯರ್ ನ ನಾಟಕಗಳೂ ಸಮರ್ ಸೆಟ್ ಮಾಮ್ ನ ಕಾದಂಬರಿಗಳು ನಮ್ಮ ಮನೆಯಲ್ಲಿದ್ದವು.. ಅಪ್ಪ ಎಂತಹ ಪುಸ್ತಕ ಪ್ರೇಮಿ ಎಂದರೆ ಮನೆಗೆ ಆತ ಶಾರದಾ ನಿಲಯ ಎಂದು ಹೆಸರಿಟ್ಟಿದ್ದ.
ಈ ಶಾರದಾ ನಿಲಯಕ್ಕೆ  ಹಿಂದೂ ಮತ್ತು ಸಂಯುಕ್ತ ಕರ್ನಾಟಕ ದಿನಪತ್ರಿಕೆ, ಸುದಾ ಮತ್ತು ಕಸ್ತೂರಿ ನಿಯತ ಕಾಲಿಕೆ, ರಾಜಗೋಪಾಲ ಆಚಾರಿ ಯವರ ಸ್ವರಾಜ್ ಪತ್ರಿಕೆ ಬರುತ್ತಿದ್ದವು. ಅಪ್ಪ ಇವೆಲ್ಲವನ್ನೂ ಓದಿ ಮುಗಿಸಿದ ಮೇಲೆ ಮಾತ್ರ ನಮಗೆ ಓದಲು ಕೊಡುತ್ತಿದ್ದ.. ಕಾರಂತರು ಪುವೆಂಪು ಅವರ ಹೊಸ ಕಾದಂಬರಿಗಳನ್ನು ತರುತ್ತಿದ್ದ ಅವುಗಳನ್ನು ತಾನು ಓದಿ ಮುಗಿಸುವುದಕ್ಕೆ ಮೊದಲು ನಮಗೆ ಮುಟ್ಟಲೂ ಕೊಡುತ್ತಿರಲಿಲ್ಲ.
ನಮ್ಮ ಮನೆಯಲ್ಲಿ ದೊಡ್ಡದಾಗಿ ನಡೆಯುತ್ತಿದ್ದುದು ನವರಾತ್ರಿ. ಒಂಬತ್ತು ದಿನಗಳ ಕಾಲ ರಾತ್ರಿ ನಡೆಯುವ ಪೂಜೆ ಮತ್ತು ಊಟ. ಈ ನವರಾತ್ರಿಯ ಒಂಬತ್ತೂ ದಿನ ಮನೆಯಲ್ಲಿ ಜನರೋ ಜನ. ಪ್ರತಿ ದಿನ ನೂರಾರು ಜನ. ಎಲ್ಲರಿಗೂ ಸುಗ್ರಾಸ ಭೋಜನ.. ನಮ್ಮ ಮನೆಯಲ್ಲಿ ಈ ದುರ್ಗಾ ಪೂಜೆಯಂದು ಮೊದಲು ಸಾರಾಯಿ ನೈವೇದ್ಯ ಮಾಡುವ ಸಂಪ್ರದಾಯ ಇತ್ತಂತೆ. ನಾನು ಹುಟ್ಟುವ ಹೊತ್ತಿಗೆ ಈ ಸಂಪ್ರದಾಯ ನಿಂತು ಹೋಗಿತ್ತು.. ಆದರೆ ನನ್ನ ಅಜ್ಜ ಹೇಳುತ್ತಿದ್ದಂತೆ ಸಾರಾಯಿಯನ್ನು ಪರಿಶಿಷ್ಟ ಜನಾಂಗದವರು ತರುತ್ತಿದ್ದರಂತೆ. ಅವರೇ ದೇವರ ಮುಂದೆ ಸಾರಾಯಿಯನ್ನು ಇಟ್ಟು ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರಂತೆ. ಆದರೆ   ದುರ್ದೈವವೋ ಸುದೈವವೋ ನಾನು ಹುಟ್ಟುವ ಹೊತ್ತಿಗೆ, ತಿಳುವಳಿಕೆ ಬರುವ ಹೊತ್ತಿಗೆ ಸಾರಾಯಿ ನೈವೇದ್ಯ ನಿಂತು ಹೋಗಿತ್ತು.
ನವರಾತ್ರಿ ಪೂಜೆಯಲ್ಲಿ ನಮ್ಮ ನೆಂಟರಿಷ್ಠರು ಹೆಚ್ಚಾಗಿ ಫಾಲ್ಗೊಳ್ಳುತ್ತಿದ್ದರೂ ಬೇರೆ ಜಾತಿ ಧರ್ಮದವರೂ ಪಾಲ್ಗೊಳ್ಳುತ್ತಿದ್ದರು. ಎಲ್ಲರೂ ಉದ್ದನೆಯ ದೇವರ ಒಳದ ವರೆಗೆ ಬರುವುದಕ್ಕೂ ಅವಕಾಶವಿತ್ತು. ಅವರೂ ಸಹ ಸಹ ಪಂಕ್ತಿ ಭೋಜನ ಮಾಡುತ್ತಿದ್ದರು. ಒಮ್ಮೊಮ್ಮೆ ಮಾತ್ರ ತಮ್ಮ ಪಂಕ್ತಿಯಲ್ಲಿ ಕುಳಿತ ಅನ್ಯ ಜಾತಿಯವರ ಬಗ್ಗೆ ಬ್ರಾಹ್ಮಣರು ಕೆಂಗಣ್ಣು ಬೀರುವುದನ್ನು ನಾನು ಗಮನಿಸಿದ್ದೆ. ಆದರೆ ಅದನ್ನು ವಿಶ್ಲೇಷಿಸುವ ಶಕ್ತಿ ಆಗ ನನಗೆ ಇರಲಿಲ್ಲ. ಇದನ್ನು ಒಪ್ಪದವರಿಗೂ ನನ್ನ ಅಪ್ಪ ಅಜ್ಜನ ಹತ್ತಿರ ಈ ಬಗ್ಗೆ ಮಾತನಾಡುವ ಧೈರ್ಯ ಇರಲಿಲ್ಲ.
ನವರಾತ್ರಿ ಹೊರತು ಪಡಿಸಿದ ನಮ್ಮ ಮನೆಯಲ್ಲಿ ದೊಡ್ಡ ಹಬ್ಬ ಎಂದರೆ ಗಣೇಶ ಚತುರ್ಥಿ. ಗಣೇಶ ಚತುರ್ಥಿಗೆ ಕೆಲವೇ ದಿನ ಇರುವಾಗ ಚಕ್ಕಲಿ ಕಂಬಳ ನಡುಯುತ್ತಿತ್ತು. ಅಂದು ಮನೆಯವರ ಜೊತೆ ಊರಿನವರು ಬಂದು ಚಕ್ಕಲಿ ಮಾಡಿ ಡಬ್ಬದಲ್ಲಿ ತುಂಬಿಡುತ್ತಿದ್ದರು..ಈ ಕಂಬಳ ಎಂದರೆ ನನಗೆ ತುಂಬಾ ಇಷ್ಟ. ಚಕ್ಕಲಿಗಿಂತ ಅರ್ಧ ಬೇಯಿಸಿದ ಚಕ್ಕುಲಿ ಎಂದರೆ ನನಗೆ ಜೀವ. ಈ ಕಂಬಳಕ್ಕೆ ನನ್ನ ಸ್ನೇಹಿತರು ಮತ್ತು ಸಹಪಾಠಿಗಳನ್ನು ನಾನು ಕರೆಯುತ್ತಿದ್ದೆ. ನನ್ನ ಸ್ನೇಹಿತರೆಲ್ಲ ಈಡಿಗರು. ನಮ್ಮಲ್ಲಿ ಅವರನ್ನು ದೀವರು, ನಾಯ್ಕರು ಎಂದು ಕರೆಯುತ್ತಾರೆ,  ಇವರು ನಮ್ಮ ಮನೆಗೆ ಬಂದು ಕಂಬಳದಲ್ಲಿ ಪಾಲ್ಗೊಂಡು ಚಕ್ಕುಲಿ ತಿಂದು ಹೋಗುತ್ತಿದ್ದರು. ಇವರೆಲ್ಲ ಚಕ್ಕಲಿ ಮಾಡುವ ಅಡುಗೆ ಮನೆಗೆ ಹೋಗಿ ನನ್ನ ಅಮ್ಮನ ಪಕ್ಕ ಕುಳಿತು ಹರಟೆ ಹೊಡೆಯುತ್ತಿದ್ದರು. ಅಮ್ಮ ಅವರ ಸುಖ ದುಃಖ ವಿಚಾರಿಸಿಕೊಳ್ಳುತ್ತಿದ್ದರು. ಅವರಿಗೆ ಚಕ್ಕುಲಿ ನೀಡುವುದರ ಜೊತೆಗೆ ಮನೆಯವರಿಗೂ ಚಕ್ಕುಲಿ ಕಟ್ಟಿ ಕಳುಹಿಸುತ್ತಿದ್ದವಳು ನನ್ನ ಅಮ್ಮ...
ನನ್ನ ಮನೆಯವರಲ್ಲಿ ಯಾರೂ ಚಾರ್ವಾಕರಿರಲಿಲ್ಲ. ಅಪ್ಪ ಮಾತ್ರ ಸ್ವಲ್ಪ ಬೇರೆ. ಆತ ಧರ್ಮ, ಜಾತಿ ಮೊದಲಾದ ವಿಚಾರವನ್ನು ನಂಬುತ್ತಿದ್ದನೇ ಅಥವಾ ಇಲ್ಲವೇ ಎಂಬುದು ನನಗೆ ಕೊನೆಯ ವರೆಗೆ ತಿಳಿಯಲಿಲ್ಲ. ಆತ ತನ್ನ ನಡುವಳಿಕೆಯಲ್ಲಿ ಬ್ರಾಹ್ಮಣನಾಗಿರಲಿಲ್ಲ. ಆತ ಸಂಧ್ಯಾ ವಂದನೆ ಮಾಡಿದ್ದು ನಾನು ನೋಡಿಲ್ಲ. ಅವನದು ಏನಿದ್ದರೂ ರಾಜಕೀಯ ವಿಶ್ಲೇಷಣೆ, ಓದು ಬರೆಹ ಮಾತ್ರ. ಅವನ ಸ್ನೇಹಿತರಲ್ಲಿ ಎಲ್ಲ ಜಾತಿಯ ಜನ ಇದ್ದರು. ಆದರೆ ಸ್ವಜಾತಿಯ ಸ್ನೇಹಿತರು ಅವನಿಗೆ ಇರಲೇ ಇಲ್ಲ.. ವರ್ಷದಲ್ಲಿ ಒಮ್ಮೆ ಬರುವ ಆಲೆ ಮನೆ ಅಂದರೆ ಕಬ್ಬನ್ನು ಬೆಲ್ಲವಾಗಿಸುವ ಕಾಲದಲ್ಲಿ ಅವನ ಸ್ನೇಹಿತರೆಲ್ಲ ಬರುತ್ತಿದ್ದರು. ಜೋನಿ ಬೆಲ್ಲ ತಿಂದು ಸಂತೋಷ ಪಡುತ್ತಿದ್ದರು. ಅಪ್ಪ ಅವರಿಗೆಲ್ಲ ಮನೆಗೆ ತೆಗೆದುಕೊಂಡು ಹೋಗಲು ಕಬ್ಬಿನ ಹೊರೆಯನ್ನೇ ಹೇರಿ ಕಳುಹಿಸುತ್ತಿದ್ದ. ಇದು ಕೆಲವೊಮ್ಮೆ ಅಜ್ಜನಿಗೆ ಭಾರಿ ಸಿಟ್ಟು ಬರುವಂತೆ ಮಾಡುತ್ತಿತ್ತು. ಬೆಳೆದ ಬೆಳೆಯನ್ನೆಲ್ಲ ಹೀಗೆ ಹೇರಿ ಕಳುಹಿಸಿದರೆ ಹೇಗೆ ಎಂದು ಆತ ಕೂಗಾಡುತ್ತಿದ್ದ. ಆದರೆ ಅಪ್ಪ ಮಾತ್ರ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಈ ಅನುಭವದಿಂದಲೇ ಇರಬಹುದು. ನನಗೆ ಮನುಷ್ಯರನ್ನು ಮನುಷ್ಯರನ್ನಾಗಿ ನೋಡುವುದು ಮಾತ್ರ ಸಾಧ್ಯ.. ನನಗೆಂದೂ ನನ್ನ ಜಾತಿಯೂ ಕಾಡಿಲ್ಲ. ಬೇರೆಯವರ ಜಾತಿಯೂ ಮುಖ್ಯ ಎಂದು ಅನ್ನಿಸಲಿಲ್ಲ.
ಈ ಸಂದರ್ಭದಲ್ಲಿ ನಾನು ಇನ್ನೊಂದು ಮಾತನ್ನು ಹೇಳಬೇಕು. ನನ ಮಗ ಎಸ್ ಎಸ್ ಎಲ್ ಸಿ ಓದುತ್ತಿದ್ದ. ಅದೊಂದು ದಿನ ಆತ ನನ್ನ ಬಳಿ ಬಂದು ಕೇಳಿದ. ಆಪ್ಪಾ ನಾವು ಬ್ರಾಹ್ಮಣರಾ ? ನಾನು ಯಾಕೆ ಈ ಪ್ರಶ್ನೆ ಎಂದೆ. ನಿನ್ನ ಅಪ್ಪನ ಹೆಸರಿನ ಮುಂದೆ ಭಟ್ ಎಂದಿದೆ. ಹಾಗಿದ್ದರೆ ನೀನು ಬ್ರಾಹ್ಮಣ. ಆದರೆ ನಿನಗೆ ಹೋಲಿ ಥ್ರೆಡ್ ಇಲ್ಲ ಎಂದು ನನ್ನ ಸ್ನೇಹಿತರು ಹೇಳುತ್ತಿದ್ದಾರೆ ಎಂಬ ನನ್ನ ಮಗ. ನನಗೆ ಶಾಕ್ ಆಯಿತು.. ಜಾತಿಯ ಬಗ್ಗೆ ಏನನ್ನೂ ತಿಳಿಸದೇ ಬೆಳಸಿದ ನನ್ನ ಮಗನಲ್ಲಿ ಜಾತಿಯ ಪ್ರಶ್ನೆಯನ್ನು  ಹುಟ್ಟಿ ಹಾಕಿದ್ದು ನಮ್ಮ ಸುತ್ತಲಿನವರೇ ಎಂದು ನನಗೆ ಅನ್ನಿಸಿತು.
ಜಾತಿ ವಾದ ಮತ್ತು ಕೋಮುವಾದ ಎಲ್ಲರ ಮನಸ್ಸಿನಲ್ಲೀ ಭೂತ ನರ್ತನ ಮಾಡುತ್ತಿರುವ ಈ ಕಾಲ ಘಟ್ಟದಲ್ಲಿ ನಾನು ಇದನ್ನೆಲ್ಲ ನೆನಪು ಮಾಡಿಕೊಳ್ಳುವುದಕ್ಕೆ ಕಾರಣಗಳಿವೆ. ಇಂದು ಜಾತಿ ಮತ್ತು ಕೋಮುವಾದದ ಸಮಸ್ಯೆಯನ್ನು ಹೇಗೆ ಎದುರಿಸಬೇಕು ಎಂಬ ಪ್ರಶ್ನೆಗೆ ಬಹಳ ಮುಖ್ಯವಾಗಿದೆ. ಕೋಮುವಾದ ಮತ್ತು ಜಾತಿ ವಾದದಲ್ಲಿ ನಂಬಿಕೆ ಇಟ್ಟ ಜನ ಒಂದೆಡೆ ನಿಂತಿದ್ದಾರೆ. ಈ ಸಮುದಾಯದಲ್ಲಿ ಇದರಿಂದ ಲಾಭ ಪಡೆಯುತ್ತಿರುವವರು ಮತ್ತು ಪಡೆದವರು ಇದ್ದಾರೆ, ಹಾಗೆ ಶೋಷಣೆಗೆ ಒಳಗಾದವರೂ ಇದ್ದಾರೆ. ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಹಿಂಸಾಚಾರದಲ್ಲಿ ಬಡವರು ಮತ್ತು ಶೋಷಿತ ಜನಾಂಗಕ್ಕೆ ಸೇರಿದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರನ್ನು ನಾನು ದಾರಿ ತಪ್ಪಿದವರು ಮತ್ತು ದಾರಿ ತಪ್ಪಿಸುವವರು ಎಂದು ಎರಡೂ ಭಾಗ ಮಾಡಲು ಇಚ್ಚಿಸುತ್ತೇನೆ. ದಾರಿ ತಪ್ಪಿಸುವವರನ್ನು ತಕ್ಷಣ ಬದಲಾಯಿಸುವುದು ಕಷ್ಟ. ಆದರೆ ದಾರಿ ತಪ್ಪಿದವರನ್ನು ದಾರಿಗೆ ತರುವ ಕೆಲಸ ಮಾಡಬಹುದು. ಆದರೆ ಈ ಕೆಲಸವನ್ನು ಮಾಡುವುದು ಹೇಗೆ ? ಕೋಮುವಾದನ್ನು ವಿರೋಧಿಸುವವರು, ಕೋಮುವಾದಿಗಳ ಜೊತೆ ಸಂವಹನ ನಡೆಸುವ ಆ ಮೂಲಕ ಅವರನ್ನು ಬದಲಾಯಿಸುವ ಅಗತ್ಯ ಇಲ್ಲವೆ ? ಯಾರು ಧರ್ಮ ನಿರಪೇಕ್ಷರಾಗಿರುತ್ತಾಗಿರುತ್ತಾರೋ ಅವರು ತಮ್ಮ ನಡುವೆ ಮಾತುಕತೆ ನಡೆಸಿದರೆ ಸಾಕೆ ?
ಈಗ ಹಾಗೆ ಆಗುತ್ತಿದೆ. ಸಮಾನತೆ, ಸಹಬಾಳ್ವೆ ಬಯಸುವುವರು ತಮ್ಮ ನಡುವೆ ತಾವು ಮಾತನಾಡಿಕೊಳ್ಳುತ್ತಿದ್ದಾರೆ. ಕೋಮುವಾದವನ್ನು ಮಟ್ಟ ಹಾಕುವುದು ಹೇಗೆ ಎಂದು ಚರ್ಚೆ ಮಾಡುತ್ತಿದ್ದಾರೆ.  ಹಾಗೆ ಕೋಮುವಾದಿಗಳು. ಜಾತಿಯ ವಿಶ್ಃಅ ಬೀಜ ಬಿತ್ತುವವರು ತಮ್ಮದೇ ಗುಂಪು ಕಟ್ಟಿಕೊಂಡು ಇನ್ನಷ್ಟು ಜನರ ಮನಸ್ಸುಗಳನ್ನು ಕೆಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಆರೋಗ್ಯಪೂರ್ಣ ಮತ್ತು ಸಮಾನತೆಯ ಸಮಾಜವನ್ನು ಬಯಸುವವರು ತಾವು ಕಟ್ಟಿಕೊಂಡ ಗೋಡೆಯನ್ನು ಒಡೆಯಬೇಕು, ದರಿ ತಪ್ಪಿದವರನ್ನು ದಾರಿಗೆ ತರಲು ಯತ್ನಿಸಬೇಕು. ಈ ಸಮಾಜದಲ್ಲಿ ಸಮಾನತೆ ಮತ್ತು ಸಹಭಾಳ್ವೆಯ ಮಹತ್ವವನ್ನು ತಿಳಿಸಿ ಅವರ ಮನಪರಿವರ್ತನೆಗೆ ಕೆಲಸ ಮಾಡಬೇಕು, ಅದಲ್ಲಿದ್ದರೆ ದಾರಿ ತಪ್ಪಿಸುವವರು ಇನ್ನಷ್ಟು ಜನರನ್ನು ದಾರಿ ತಪ್ಪಿಸುತ್ತಾರೆ. ಅವರನ್ನು ಜಾತಿ ಮತ್ತು ಕೋಮು ಭಾವನೆಯ ವಿಷ ವೃತ್ತದ ಒಳಗೆ ತಳ್ಳುತ್ತಾರೆ. ಇದು ಎಲ್ಲ ಆರೋಗ್ಯಪೂರ್ಣ ಮನಸ್ಸುಗಳು ಒಂದಾಗಿ ಮೊದಲು ಮಾಡಬೇಕಾದ ಕೆಲಸ ಎಂದೂ ನನಗ್ಎ ಅನ್ನಿಸುತ್ತದೆ. ಇದನ್ನೇ ನಾನು ಧರ್ಮ ನಿರಪೇಕ್ಷವಾದಿಗಳ ಮುಂದಿರುವ ಬಹುದೊಡ್ಡ ಸವಾಲು ಎಂದು ಭಾವಿಸುತ್ತೇನೆ.
ದೇಶದಲ್ಲಿ ಕೋಮುವಾದ ಮತ್ತು ಜಾತಿವಾದವನ್ನು ಬಿತ್ತುವ ಹಲವು ಸಂಘಟನೆಗಳಿವೆ. ಈ ಸಂಘಟನೆಗಳು ಶಿಸ್ತಿನ ಹೆಸರಿನಲ್ಲಿ ಪುಟ್ಟ ಪುಟ್ಟ ಮಕ್ಕಳನ್ನು ಸೆಳೆದು ಅವರ ಮನಸ್ಸನ್ನು ಕೆಡಿಸುತ್ತವೆ. ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು ಇಂತಹ ಕೆಲಸದಲ್ಲಿ ನಿರತವಾಗಿವೆ. ಇಂತಹ ಸಂಘಟನೆಗಳನ್ನು ಎದುರಿಸುವ ದಾರಿ ಯಾವುದು ಎಂಬುದು ಬಹುಮುಖ್ಯ. ಇವುಗಳಿಗೆ ಪರ್ಯಾಯವಾಗಿ ರಿಲಜನ್ ಗೆ ಬದಲಾಗಿ ಸಂವಿಧಾನ ಬದ್ದ ನಡವಳಿಕೆಗೆ ಪೂರಕವಾಗುವ ಸಂಘಟನೆಯಮ್ಮು ಕಟ್ಟುವುದಕ್ಕೆ ಮುಂದಾಗಬೇಕು. ಬಾಲ್ಯದಿಂದಲೇ ಸಂವಿಧಾನ ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ಮನದಟ್ಟು ಮಾಡಿಕೊಡುವ ಕೆಲಸ ವಾಗಬೇಕು. ಈ ಕೆಲಸವನ್ನು ಮಾಡಬೇಕಾದವರು ಕೇವಲ ಬೌದ್ಧಿಕ ಮತ್ತು ತಾರ್ಕಿಕ ಜಗತ್ತಿನಲ್ಲಿ ವಿಹರಿಸುತ್ತಿದ್ದರೆ, ತಮ್ಮ ನಡುವೆಯೇ ಮಾತನಾಡುತ್ತ ಕಾಲ ಕಳೆದರೆ, ಜಾತಿ ಮತ್ತು ಕೋಮುಶಕ್ತಿಗಳು ಇನ್ನಷ್ಟು ಬಲಗೊಳ್ಳುತ್ತವೆ. ಯಾವುದೇ ಸಮಸ್ಯೆ ಕೇವಲ ಚರ್ಚೆಯಿಂದ ಬಗೆಹರಿಯುವುದಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಮುಖ ಪುಸ್ತಕದಲ್ಲಿ ಬರೆಯುವುದರಿಂದ ಪರಿಹಾರ ದೊರಕುವುದಿಲ್ಲ.
ಆದರೆ ಇಲ್ಲಿರುವ ಸಮಸ್ಯೆ ಎಂದರೆ ಪ್ರತಿಗಾಮಿ ಶಕ್ತಿಗಳಿಂದ ಬೂಜಿಗಳೆಂದು ಟೀಕೆಗೆ ಒಳಗಾಗಿರುವವರು ತಮ್ಮ ಬೌಧ್ದಿಕ ಕಸರತ್ತಿನಲ್ಲೇ ಕಾಲಕಳಿಯುತ್ತಿರುವುದು. ಇದನ್ನು ಬಿಟ್ಟು ಸಾಮಾನ್ಯ ಮನುಷ್ಯನ ಮನಸ್ಸು ಕೆಲಸ ಮಾಡುವ ರೀತಿ, ಅದರಲ್ಲಿ ತುಂಬಿರುವ ಜಾತಿ ಮತ್ತು ಕೋಮುಭಾವನೆ, ಇದನ್ನು ಬದಲಿಸಲು ಹಾಕಿಕೊಳ್ಳಬೇಕಾದ ದೀರ್ಘ ಕಾಲೀನ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಯೋಚಿಸಬೇಕಾದ ಅಗತ್ಯ ಇದೆ...ಕೋಮು ಮತ್ತು ಜಾತಿಯತೆಯಲ್ಲಿ ತೊಡಗಿರುವವರಲ್ಲಿ ಬಹಳಷ್ಟು ಜನ ಮುಗ್ದರು ಮತ್ತು ದಡ್ದರು. ಅವರಿಗೆ ನಿಜವನ್ನು ತಿಳಿಸಿಕೊಡುವುದು ಇಂದಿನ ಅಗತ್ಯ. ಇವರನ್ನು ದಾರಿ ತಪ್ಪಿಸುವವರು ಮಾತ್ರ ಹೆಚ್ಚು ಅಪಾಯಕಾರಿ. ಅವರನ್ನು ಬದಲಿಸುವುದು ಸಾಧ್ಯವಿಲ್ಲ. ಹೀಗಾಗಿ ದಾರಿತಪ್ಪಿದವರನ್ನು ಸರಿ ದಾರಿಗೆ ತರುವುದು ಮತ್ತು ಹೊಸಬರು ದಾರಿ ತಪ್ಪದಂತೆ ನೋಡಿಕೊಳ್ಳುವುದು ಮುಖ್ಯವಾಗಬೇಕು..
ಆದರೆ ಈಗ ನಮ್ಮೆದುರು ಬೇರೆ ರೀತಿಯ ಸವಾಲುಗಳಿವೆ. ಧರ್ಮ ನಿರಪೇಕ್ಷವಾದಿಗಳು, ಧರ್ಮ ಅಥವಾ ರಿಲಿಜನ್ ನ ಮತ್ತಿನಲ್ಲಿರುವವರ ವಿರುದ್ಧ ಬೌದ್ಧಿಕ ಯುದ್ಧ ಸಾರುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಅವರ ಮನಸ್ಸನ್ನು ಬದಲಿಸುವ ಬಗ್ಗೆ, ಅವರನ್ನು ಧರ್ಮ ನಿರಪೇಕ್ಷವಾದಿಗಳನ್ನಾಗಿ ಪರಿವರ್ತಿಸುವ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಧರ್ಮದ ಅಮಲಿನಲ್ಲಿರುವವರು ಕತ್ತಿ ಝಳಪಿಸತೊಡಗಿದ್ದಾರೆ, ಇಂತಹ ಸಂದರ್ಭದಲ್ಲಿ ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಾದ ಅಂಶ ಎಂದರೆ ರಿಲಿಜನ್ ಗೆ ಇರುವ ಚುಂಬಕ ಶಕ್ತಿ. ಅದು ಮುಗ್ದ ಮತ್ತು ಅಸಹಾಯಕ ಮನಸ್ಸುಗಳನ್ನು ಅತಿ ಸುಲಭವಾಗಿ ಸೆಳೆಯುತ್ತದೆ, ಹಾಗೆ ತನ್ನ ಗರ್ಭದೊಳಗೆ ಬಂಧಿಸಿ ಜೀರ್ಣಿಸಿಕೊಂಡು ಬಿಡುತ್ತದೆ. ರಿಲಿಜನ್ ಗೆ ಇರುವ ಈ ಶಕ್ತಿ ವೈಚಾರಿಕತೆಗೆ ಇಲ್ಲ. ಹೀಗಾಗಿ ಹೀಗೆ ರಿಲಿಜನ್ ಗರ್ಭದೊಳಗೆ ಸೇರಿಕೊಂಡ ಅಸಹಾಯಕ ಮನಸ್ಸುಗಳನ್ನು ಜೀರ್ಣವಾಗುವುದರ ಒಳಗೆ ಹೊರಕ್ಕೆ ಎಳೆದು ತರಬೇಕು.
ಇದು ಕತ್ತಿ ಝಳಪಿಸುವುದರಿಂದ, ಧಾರ್ಮಿಕ ಹಿಂಸೆಗೆ ಪ್ರತಿಯಾಗಿ ವೈಚಾರಿಕ ಹಿಂಸೆ ಮಾಡುವುದರಿಂದ ಬಗೆಹರಿಯುವುದಿಲ್ಲ..
ಧಾರ್ಮಿಕ ಮೂಲಭೂತವಾದಿಗಳ ಕೈಯಿಂದ ಸಿಡಿಯುವ ಮದ್ದು ಗುಂಡುಗಳಿಗೆ ಪ್ರತಿಯಾಗಿ ವೈಚಾರಿಕರೂ ಮದ್ದು ಗುಂಡುಗಳನ್ನು ಸಿಡಿಸುವುದರಿಂದ ಪರಿಹಾರವಾಗುವುದಿಲ್ಲ. ಹಿಂಸೆಗೆ ಎಂದೂ ಹಿಂಸೆ ಉತ್ತರವಲ್ಲ..
ಮನ ಪರಿವರ್ತನೆಯೊಂದೆ ಈ ಎಲ್ಲ ಸಮಸ್ಯೆಗೆ ಪರಿಹಾರ ಎಂದೂ ನನಗೆ ಅನ್ನಿಸುತ್ತದೆ. ಆದರೆ ಅದು ಹೇಗೆ ಎಂದು ಪ್ರಶ್ನಿಸಿದರೆ ನನ್ನ ಬಳಿ ಸರಳವಾದ ಉತ್ತರ ಇಲ್ಲ.

Wednesday, September 9, 2015

ರಾಘವೇಶ್ವರ ಭಾರತಿ ಸ್ವಾಮೀಜಿ, ಹವ್ಯಕರ ತೊಳಲಾಟ ಮತ್ತು ನನಗಾದ ಜ್ನಾನೋದಯ....!


Add caption
ಶಿವಮೊಗ್ಗ ಜಿಲ್ಲೆಯ ರಾಮಚಂದ್ರಾಪುರ ಮಠ ಈಗ ವಿವಾದದಲ್ಲಿದೆ. ಈ ಮಠದ ಈಗಿನ ಮಠಾಧೀಶರಾದ ರಾಘವೇಶ್ವರ ಸ್ವಾಮೀಜಿ ಈ ವಿವಾದದ ಕೇಂದ್ರ ಬಿಂಧು.  ಪ್ರಯಶಃ ರಾಘವೇಶ್ವರ ಸ್ವಾಮೀಜಿಯವರಿಂದಾಗಿ ಈ ಮಠಕ್ಕೆ ಎಂದೂ ದೊರಕದ ಪ್ರಚಾರ ದೊರಕಿತು. ಬ್ರಾಹ್ಮಣರಲ್ಲಿ ಯಾವುದೇ ವಿವಾದಗಳೂ ಇಲ್ಲದೇ ಬದುಕುತ್ತಿದ್ದ ಹವ್ಯಕ ಸಮಾಜಕ್ಕೂ ಕೂಡ ಇಂತಹ ಪ್ರಚಾರವನ್ನು ದೊರಕಿಸಿ ಕೊಟ್ಟ ಕೀರ್ತಿ ಕೂಡ ರಾಘವೇಶ್ವರರಿಗೆ ಸಲ್ಲಬೇಕು.  ಈ ಕಾರಣಗಳಿಂದಾದರೂ ಸ್ವಾಮೀಜಿಗೆ ಹವ್ಯಕರು ಕೃತಜ್ನತೆಗಳು ಸಲ್ಲಲೇಬೇಕು. ಪ್ರತಿ ದಿನ ಮಾಧ್ಯಮಗಳಲ್ಲಿ ಸುದ್ದಿ ಬರುವಂತೆ ಮಾಡುವುದು ಸಾಮಾನ್ಯ ಕೆಲಸವಲ್ಲ. ಇಂತಹ ಅದ್ಭುತ ಕೆಲಸ ಮಾಡಿದವರು ರಾಘವೇಶ್ವರರು.
ನನಗೂ ಈ ಮಠಕ್ಕೂ ಮೊದಲಿನಿಂದಲೂ ಆಗಿ ಬರುವುದಿಲ್ಲ. ನಾನೂ ಈ ಮಠದ ಬಗ್ಗೆ ಮಾತನಾಡುತ್ತಲೇ ಲೇಖನಗಳನ್ನು ಬರೆಯುತ್ತಲೇ ಮಠದಿಂದ ಬಹಿಷ್ಕಾರಕ್ಕೆ ಒಳಗಾದವನು.ನನ್ನನ್ನು ಹವ್ಯಕ ಜಾತಿಯಿಂದ ಹೊರಕ್ಕೆ ಹಾಕಿ ಉಪಕೃತರನ್ನಾಗಿ ಮಾಡಿದವರು ರಾಘವೇಶ್ವರರಲ್ಲ, ಅವರ ಹಿಂದಿನ ಗುರುಗಳಾದ ರಾಘವೇಂದ್ರ ಭಾರತಿ ಸ್ವಾಮಿಗಳು. ಹವ್ಯಕರು ನನಗೆ ಅನ್ನ ನೀರು ಕೊಡಬಾರದು ಎಂದು ಫರ್ಮಾನು ಹೊರಡಿಸಿದ್ದರಿಂದಲೇ ನಾನು ಊರು ಬಿಟ್ಟು ಬರುವಂತಾಯಿತು. ನನ್ನ ಬದುಕನ್ನು ನಾನು ಕಟ್ಟಿಕೊಳ್ಳುವಂತಾಯಿತು. ಇದಕ್ಕಾಗಿ ಹಿರಿಯ ಸ್ವಾಮೀಜಿಯವರಿಗೆ ನಾನು ಸದಾ ಕೃತಜ್ನನಾಗಿದ್ದೇನೆ.
ನನಗೆ ಈ ಸ್ವಾಮಿಗಳು ಯಾವಾಗಲೂ ಸರಿ ಬರುವುದಿಲ್ಲ. ಕಾವಿ ಹಾಕಿದ ಸ್ವಾಮಿಗಳನ್ನು ನೋಡಿದ ತಕ್ಷಣ ನನಗೆ ಅವರು ನಗ್ನರಾಗಿ ಕಾಣುತ್ತಾರೆ. ಅವರು ಕಾವಿಯ ಒಳಗೆ ಅಡಗಿ ಕುಳಿತಿರುವ ಕುರೂಪ ಕಾಣತೊಡಗುತ್ತದೆ. ಕಾವಿ ಧರಿಸಿರುವವರ ಇಂದ್ರಿಯ ನಿಗ್ರಹ ಮಾಡುತ್ತಾರೆಯೇ ಮಾಡುವುದಿದ್ದರೆ ಅದಕ್ಕೆ ಅವರು ಅನುಸರಿಸುವ ಮಾರ್ಗೋಪಾಯಗಳು ಯಾವವು ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ಕಾವಿಯ ಒಳಗೆ ಅವರಿಗೆ ಒಳ ಉಡುಪುಗಳು ಇರುತ್ತವೆಯೆ ಅಥವಾ ಇಲ್ಲವೇ ಎಂಬ ಸಣ್ಣ ಕುತೂಹಲ ಕೂಡ ನನ್ನನ್ನು ಅಗಾಗ ಕಾಡುವುದುಂಟು. ಇದಕ್ಕೆಲ್ಲ ನನ್ನ ಒಳಗಿನ ಸಿನಿಕತನ ಅಪನಂಬಿಕೆ ಎಲ್ಲವೂ ಕಾರಣ ಇರಬಹುದು. ಹೀಗಾಗಿ ಈ ಬಗ್ಗೆ ನಾನು ಸ್ವಾಮೀಜಿಗಳನ್ನು ದೂರುವುದಿಲ್ಲ. ಇರಲಿ, ರಾಮಚಂದ್ರಾಪುರದ ಅಧಿಕಾರ ಸ್ವೀಕರಿಸಿದ ಮೇಲೆ ರಾಘವೇಶ್ವರರು ತಮ್ಮ ದರ್ಶನ ಮಾಡುವಂತೆ ಎರಡು ಮೂರು ಬಾರಿ ಹೇಳಿ ಕಳಿಸಿದ್ದರು. ನಾನು ಹೋಗಲಿಲ್ಲ. ಆದರೆ ನಾನು ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡುವಾಗ್ ಒಮ್ಮೆ ಸಂದರ್ಶನವೊಂದಕ್ಕೆ ಅವರು ಸ್ಟುಡಿಯೋಕ್ಕೆ ಬಂದಿದ್ದರು. ಆಗ ಮತ್ತೆ ಅವರು ತಮ್ಮನ್ನು ನೋಡುವಂತೆ ಮಠಕ್ಕೆ ಬರುವಂತೆ ಮನವಿ ಮಾಡಿದರು. ಹಿಂದಿನ ಸ್ವಾಮೀಜಿ ನನ್ನನ್ನು ಜಾತಿಯಿಂದ ಹೊರಕ್ಕೆ ಹಾಕಿರುವ ಬಗ್ಗೆ ಮಠದ ಪರವಾಗಿ ಕ್ಷಮೆ ಯಾಚಿಸಿ ಹಿಂದಿನ ಸ್ವಾಮೀಜಿ ನನಗೆ ಹಾಕಿದ್ದ ಭಹಿಷ್ಕಾರವನ್ನು ರದ್ದು ಪಡಿಸುವುದಾಗಿ ತಿಳಿಸಿದರು. ನಾನು ಜಾತಿ ವ್ಯವಸ್ಥೆಯನ್ನು ಮಠಗಳನ್ನು ನಂಬದಿರುವುದರಿಂದ ನನಗೆ ಅದರ ಅಗತ್ಯ ಇಲ್ಲ ಎಂದು ಹೇಳಿದೆ. ನನಗೆ ಜಾತಿಯಿಂದ ಹೊರಕ್ಕೆ ಇರುವುದು ತುಂಬಾ ಸಂತೋಷದ ಕೆಲಸ ಆಗಿರುವುದರಿಂದ ಮತ್ತೆ ಜಾತಿಯ ಒಳಗೆ ನನ್ನನ್ನು ಎಳೆದುಕೊಳ್ಳಬೇಡಿ. ನೀವು ಎಳೆದರೂ ನಾನು ಬರುವುದಿಲ್ಲ ಎಂದು ಹೇಳಿದೆ. ಈ ಅಧ್ಯಾಯ ಅಲ್ಲಿಗೆ ಮುಗಿದು ಹೋಯಿತು.
ಅಷ್ಟರಲ್ಲಿ ಹವ್ಯಕ ಪತ್ರಕರ್ತರನ್ನು ಕರೆದು ಅವರ ಜೊತೆ ಸಮಾಲೋಚನೆ ನಡೆಸುವುದನ್ನು ರಾಘವೇಶ್ವರರು ಪ್ರಾರಂಭಿಸಿದ್ದರು.  ಆಗ ನನಗೂ ಆಹ್ವಾನ ಬಂದರೂ ನಾನು ಹೋಗಲಿಲ್ಲ. ಪತ್ರಿಕೋದ್ಯಮದಲ್ಲಿ ಇರುವ ಹಲವಾರು ಭಟ್ಟರ ಹೆಸರನ್ನು ಅವೠ ಪ್ರಸ್ಥಾಪಿಸಿ ಅವರೆಲ್ಲ ಬರುತ್ತಾರೆ ನೀವು ಬನ್ನಿ ಎಂದರೂ ನಾನು ಹೋಗಲಿಲ್ಲ. ಆ ಸಭೆಗಳಿಗೆ ಆಗಾಗ ಹೋಗುತ್ತಿದ್ದ ಭಟ್ಟ ಪತ್ರಕರ್ತರು ಈಗ ಒಳ್ಳೆಯ ಹುದ್ದೆಗಳಲ್ಲಿದ್ದಾರೆ. ಅವರೆಲ್ಲ ತಮ್ಮ ತಮ್ಮ ಪತ್ರಿಕೆಗಳಲ್ಲಿ ರಾಘವೇಶ್ವರ ಪರವಾಗಿ ಸತತ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪ್ರತಿ ದಿನ ಪತ್ರಿಕೆಗಳನ್ನು ನೋಡುವಾಗ ನನಗೆ ಇದೆಲ್ಲ ನೆನಪಾಗುತ್ತದೆ.
ಶ್ರೀ ಮದ್ ಜಗದ್ಗುರು ರಾಘವೇಶ್ವರ ಭಾರತಿ ಸ್ವಾಮಿಗಳ ಮೇಲೆ ಪ್ರೇಮಲತಾ ದಿವಾಕರ್ ಅವರು ಸತತ ಅತ್ಯಾಚಾರದ ಆರೋಪ ಮಾಡಿದ ಸಂದರ್ಭದಲ್ಲಿ ನಾನು ಕಸ್ತೂರಿ ನ್ಯೂಸ್ ಚಾನಲ್ ನಲ್ಲಿ ಕೆಲಸ ಮಾಡುತ್ತಿದ್ದೆ. ಆಗ ನಾನು ಅವಳ ಕಥೆ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಒಂದನ್ನು ಪ್ರಸಾರ ಮಾಡಿದೆ. ಈ ಕಾರ್ಯಕ್ರಮದಲ್ಲಿ ಪ್ರೇಮಲತಾ ದಿವಾಕರ್ ಅವರು ನೀಡಿದ ದೂರುಗಳಿದ್ದವು. ಆದರೆ ಎಲ್ಲಿಯೂ ಸ್ವಾಮಿಯ ಹೆಸರನ್ನು ಹೇಳಿರಲಿಲ್ಲ. ಇದಾದ ಮೇಲೆ ಪ್ರೇಮಲತಾ ದಿವಾಕರ್ ಅವರಿಗೆ ಸಂಬಂಧಿಸಿದ ಇನ್ನೂ ಒಂದೆರಡು ಕಾರ್ಯಕ್ರಮವನ್ನು ನಾನು ಪ್ರಸಾರ ಮಾಡಿದೆ. ಅಷ್ಟರಲ್ಲಿ ಕಸ್ತೂರಿ ವಾಹಿನಿಯ ಮಾಲಿಕರಿಗೂ ನನಗೂ ಭಿನ್ನಾಭಿಪ್ರಾಯ ಉಂಟಾಗಿತ್ತು. ನಾನು ಅಲ್ಲಿ ಕೆಲಸ ಮಾಡುವುದು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಿರುವಾಗಲೇ ನಾನು ಕೆಲಸ ಬಿಡಬೇಕಾದ ವಾತಾವರಣ ಸೃಷ್ಟಿಯಾಯಿತು. ನಾನು ಕೆಲಸ ಬಿಟ್ಟೆ. ಆದರೆ ರಾಘವೇಶ್ವರ ಸ್ವಾಮೀಜಿಯವರ ಶಿಷ್ಯರು ಸುದ್ದಿಯೊಂದನ್ನು ಹರಡಿದರು. ಸ್ವಾಮೀಜಿಗಳ ವಿರೋಧಿಯಾದ ಶಶಿಧರ್ ಭಟ್ ಕೆಲಸ ಬಿಡುವಂತೆ ಮಾಡಿದ್ದು ನಾವೇ.. ನಾವೇ ಕುಮಾರಸ್ವಾಮಿ ಅವರ ಜೊತೆ ಮಾತನಾಡಿ ಕೆಲಸ ಬಿಡುವಂತೆ ಮಾಡಿದೆವು ಅಂತ.. ನಾನು ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಪ್ರೇಮಲತಾ ದಿವಾಕರ್ ಈ ಬಗ್ಗೆ ತುಂಬಾ ಬೇಜಾರು ಮಾಡಿಕೊಂಡಿದ್ದರು. ನನ್ನಿಂದ ನೀವು ಕೆಲಸ ಕಳೆದುಕೊಳ್ಳುವಂತೆ ಆಯಿತು, ನೀವು ನನಗೆ ಬೆಂಬಲ ನೀಡದಿದ್ದರೆ ನಿಮ್ಮ ಕೆಲಸ ಉಳಿಯುತ್ತಿತ್ತು ಎಂದು ಕಣ್ಣೀರು ತುಂಬಿಕೊಂಡರು.
ನಾನು ಆ ಕೆಲಸ ಬಿಟ್ಟ ಮೇಲೆ ನಾನು ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡು ಈಗ ನೂರಾರು ಹುಡುಗ ಹುಡುಗಿಯರನ್ನು ಕಟ್ಟಿಕೊಂಡು ಹೊಸ ಸಾಹಸಕ್ಕೆ ಕೈಹಾಕಿದ್ದೇನೆ. ಒಂದೊಮ್ಮೆ ರಾಘವೇಶ್ವರರೇ ಕಸ್ತೂರಿಯಿಂದ ಬಿಡುವುದಕ್ಕೆ ಕಾರಣರಾಗಿದ್ದರೆ ಅವರಿಗೆ ನನ್ನ ಹೃದಯಪೂರ್ವಕ ಕೃತಜ್ನತೆಗಳು. ಅವರು ಹಾಗೆ ಮಾಡದಿದ್ದರೆ ನಾನು ಹೊಸ ಯೋಜನೆಗೆ ಕೈಹಾಕುತ್ತಿರಲಿಲ್ಲ. ಕುಮಾರಸ್ವಾಮಿ ಮತ್ತು ಅನಿತಕ್ಕನ ಚಾನಲ್ಲಿನಲ್ಲೇ ಕಾಲ ಕಳೆಯುತ್ತಿದ್ದೆ. ಹೀಗಾಗಿ ರಾಘವೇಶ್ವರರು ನನಗೆ ಉಪಕಾರವನ್ನೆ ಮಾಡಿದ್ದಾರೆ. ತಮ್ಮ ಹಿಂದಿನ ಸ್ವಾಮಿಯ ದಾರಿಯಲ್ಲೇ ನಡೆದಿದ್ದಾರೆ. ಈ ಇಬ್ಬರೂ ಸ್ವಾಮಿಗಳಿಗೆ ಆ ರಾಮನೇ ನನಗೆ ಸಹಾಯ ಮಾಡುವ ಬುದ್ದಿಯನ್ನು ಕೊಟ್ಟಿರಬೇಕು. ಹಾಗೆ ನೋಡಿದರೆ ರಾಮನಿಗೂ ನನಗೂ ಅಂತಹ ಒಳ್ಳೆಯ ಸಂಬಂಧ ಇಲ್ಲ. ನಾನು ರಾಮನ ಹಾದಿಯಲ್ಲಿ ನಡೆದವನೂ ಅಲ್ಲ. ಮೆಚ್ಚಿಕೊಂಡವನೂ ಅಲ್ಲ. ನನಗೆ ರಾಮನಿಗಿಂತ ಕೃಷ್ಣ ಹೆಚ್ಚು ಇಷ್ಟ.. ಹೀಗಾಗಿ ರಾಮನಿಗೆ ನನ್ನ ಮೇಲೆ ಸಿಟ್ಟಿ ಇರಬೇಕಿತ್ತು.. ಆದರೆ ರಾಮ ಸ್ವಾಮಿಗಳ ಇಬ್ಬರ ಕೈಯಲ್ಲೂ ನನಗೆ ಸಹಾಯ ಮಾಡಿಸಿ ಬಿಟ್ಟ. ಹೀಗಾಗಿ ರಾಘವೇಂದ್ರ ಭಾರತಿ, ರಾಘವೇಶ್ವರ ಭಾರತಿ ಮತ್ತು ಶ್ರೀರಾಮಚಂದ್ರರಿಗೆ ಹೃದಯಪೂರ್ವಕ ಕೄತಜ್ನತೆಗಳನ್ನು ಸಲ್ಲಿಸಿ ಮುಂದುವರಿಯುತ್ತೇನೆ.
ಈಗ ರಾಘವೇಶ್ವರ ಸ್ವಾಮೀಜಿಗಳಿಂದಾಗಿ ಹವ್ಯಕರು ಎರಡು ಗುಂಪುಗಳಾಗಿ ಒಡೆದು ಹೋಗಿದ್ದಾರೆ. ಕೆಲವರು ಸ್ವಾಮಿಗಳ ಪರವಾಗಿ ಬ್ಯಾಟಿಂಗ್ ಮಾಡಿದರೆ ಇನ್ನೂ ಕೆಲವರು ಸ್ವಾಮಿಗಳ ವಿರುದ್ಧ ಬೌಲಿಂಗ್ ಮಾಡುತ್ತಿದ್ದಾರೆ. ಇದು ಆ ಸಮಾಜದಲ್ಲಿ ತಾತ್ವಿಕ ಪ್ರಶ್ನೆಗಳನ್ನು ಎತ್ತಿದೆ. ಧಾರ್ಮಿಕ ಪ್ರಶ್ನೆಗಳನ್ನು ಎತ್ತಿದೆ. ಹವ್ಯಕರು ಯಕ್ಷಗಾನ ತಾಳ ಮದ್ದಲೆಯ ರೀತಿಯಲ್ಲಿ ಚರ್ಚೆ ಮಾಡತೊಡಗಿದ್ದಾರೆ. ಇದು ಕೂಡ ಆರೋಗ್ಯಪೂರ್ಣ ಬೆಳವಣಿಗೆಯೇ. ಯಾರಿಗೂ ತೊಂದರೆ ಕೊಡದೇ ತಾವೂ ತೊಂದರೆ ಮಾಡಿಕೊಳ್ಳದೆ, ಕೃಷಿ , ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ನಡುವೆ ಬದುಕುತ್ತಿದ್ದ ಹವ್ಯಕರಿಗೆ ಜಗಳವಾಡುವುದೂ ಮರೆತು ಹೋಗುವ ಗಂಡಾಂತರ ಎದುರಾಗಿತ್ತು. ಈ ಸಂದರ್ಭದಲ್ಲಿ ಜಗಳವಾಡುವುದನ್ನು ನೆನಪು ಮಾಡಿಕೊಟ್ಟ ಕೀರ್ತಿ ರಾಘವೇಶ್ವರಿಗೆ ಸಲ್ಲಬೇಕು. ಶಾಂತ ಸ್ವಭಾವದ ಹವ್ಯಕರಿಗೆ ಜಗಳ, ಮುಷ್ಟಿಯುದ್ಧದ ಮಹತ್ವವನ್ನು ಗುರುಗಳು ತಿಳಿಸಿಕೊಡುತ್ತಿದ್ದಾರೆ. ಇದಕ್ಕಾಗಿಯೂ ನಾನು ಅವರಿಗೆ ಕೃತಜ್ನನಾಗಿದ್ದೇನೆ.
ಸಾಧಾರಣವಾಗಿ ಯಕ್ಷಗಾನ ಮತ್ತು ತಾಳಮದ್ದಳೆಗೆ ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನೇ ಬಳಸಲಾಗುತ್ತದೆ.. ಈ ಆಟ ಮತ್ತು ತಾಳಮದ್ದಲೆಯಲ್ಲಿ ಪಾತ್ರ ಮಾಡುವವರು ರಾಮಾಯಣ ಮಹಾಭಾರತವನ್ನೂ ಸಂಪೂರ್ಣವಾಗಿ ಓದಿ ತಿಳಿದುಕೊಂಡಿರುತ್ತಾರೆ.. ಇಡೀ ಆಟದ ಅಂತ್ಯ ಯಾವುದು ಎಂಬುದು ಎಲ್ಲ ಪಾತ್ರಧಾರಿಗಳಿಗೂ ತಿಳಿದಿರುತ್ತದೆ. ಆದರೂ ಪಾತ್ರದ ಮಹತ್ವವನ್ನು ಅರಿತು ಅವರು ವಾದ ಮಾಡುತ್ತಾರೆ.. ಮಹಾಭಾರತ  ದುರ್ಯೋಧನಿನಿಗೆ ತನ್ನ ಅಂತ್ಯ ಗೊತ್ತಿಲ್ಲದೇ ಇರಬಹುದು. ಆದರೆ ಈ ಪಾತ್ರ ಮಾಡಿದವನಿಗೆ ತನ್ನ ಪಾತ್ರದ ಅಂತ್ಯ ಗೊತ್ತಿದ್ದರೂ ಗೊತ್ತಿಲ್ಲದಂತೆ ಮಾತನಾದಬೇಕು. ವಾದ ಮಾಡಬೇಕು. ತರ್ಕವನ್ನು ಮಂಡಿಸಬೇಕು. ರಾಘವೇಶ್ವರ ಸ್ವಾಮೀಜಿಯವರ ಪ್ರಕರಣ ಕೂಡ ನನಗೆ ಯಕ್ಷಗಾನ ತಾಳ ಮದ್ದಲೆಯಂತೆ ಕಾಣುತ್ತಿದ್ದೆ. ಈ ಬೃಹತ್ ಆಟದಲ್ಲಿ ತಾಳ ಮದ್ದಲೆಯಲ್ಲಿ ಪಾತ್ರ ಮಾಡಿದ ಎಲ್ಲರಿಗೂ ಈ ಆಟದ ಅಂತ್ಯ ಮತ್ತು ತಿರುಳು ಗೊತ್ತಿದೆ. ಆದರೆ ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಾಘವೇಶ್ವರ ಸ್ವಾಮೀಜಿಗಳ ಆರೋಪದ ಸತ್ಯ ಏನು ಎಂಬುದನ್ನು ಅರಿಯದಷ್ಟು ಹವ್ಯಕರು ದಡ್ದರಲ್ಲ. ಅವರು ಮಹಾನ್ ಬುದ್ದಿವಂತರು. ಆದರೆ ಅವರಿಗೆ ತಮ್ಮ ಪಾತ್ರವೇನು ಎಂಬುದು ತಿಳಿದಿದೆ. ಹೀಗಾಗಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಾಜಾಸ್ಥಾನದಲ್ಲಿ ಇರುವವರು ರಾಜನ ಬಹುಪರಾಕ್ ಹೇಳಲೇಬೇಕು. ಭಟ್ಟಂಗಿಗಳು ರಾಜರನ್ನು ಹೊಗಳಿ ಆಟ್ಟಕ್ಕೇರಿಸಲೇ ಬೇಕು. ಅದು ಋಣ.. ಹವ್ಯಕರು ಎಂದೂ ಧ್ರೋಹಿಗಳಲ್ಲ. ಅವರು ಯಾರ ಋಣವನ್ನು ಇಟ್ಟುಕೊಳ್ಳಲಾರರು. ಋಣವನ್ನು ಎಲ್ಲರೂ ತಮ್ಮ ತಮ್ಮ ಅಂತಸ್ಥಿಗೆ ತಕ್ಕದಾಗಿ ತೀರಿಸುತ್ತಿದ್ದಾರೆ. ಹೀಗಾಗಿ ಋಣ ಸಂದಾಯ ಮಾಡಿ ಎಲ್ಲಕ್ಕಿಂತ ನಿಷ್ಠೆ ದೊಡ್ಡದು ಎಂದು ತೋರಿಸಿಕೊಡುತ್ತಿರುವ ಹವ್ಯಕ ಬಾಂಧವರಿಗೂ ನನ್ನ ಕೄತಜ್ನತೆಗಳು ಸಲ್ಲುತ್ತವೆ.ಮಾಧ್ಯಮದಲ್ಲಿ ಕೆಲಸ ಮಾಡಿ ಋಣ ಸಂದಾಯ ಮಾಡುವವರನ್ನೂ ನಾನು ಮರೆಯುವುದಿಲ್ಲ. ನಮ್ಮ ವೄತ್ತಿ ನಿಷ್ಠೆಗಿಂತ ಮಠದ ನಿಷ್ಟೆ ದೊಡ್ಡದು, ಅದು ಬದುಕುವುದಕ್ಕೆ ಅನಿವಾರ್ಯ ಎಂಬ ಸತ್ಯ ದರ್ಶನವನ್ನು ಇವರೆಲ್ಲ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಅವರ ಈ ಬದ್ಧತೆಗಾಗಿ ನಾನು ಹವ್ಯಕ ಮಾಧ್ಯಮ ಮಿತ್ರರನ್ನು ಪ್ರೀತಿಯಿಂದ ನೆನೆಯುತ್ತೇನೆ.
ಇಡೀ ಪ್ರಕರಣ ಇನ್ನೊಂದು ಸತ್ಯವನ್ನು ಅನಾವರಣ ಗೊಳಿಸಿದೆ. ಅದೆಂದರೆ ಮಠಾಧಿಪತಿಗಳು ಎನು ಮಾಡಿದರು ಅದನ್ನು ಪ್ರಸಾದ ಎಂದು ಸ್ವೀಕರಿಸಬೇಕು. ಗಂಡ ಹೆಂಡತಿ, ಪ್ರೇಮಿ ಯಾರ ಜೊತೆಗಾದರೂ ಸಂಬಂಧ ಹೊಂದಿದ್ದರೆ ಅದು ಮಾನವ ಸಂಬಂಧ.ಸ್ವಾಮೀಜಿಗಳು, ಧರ್ಮ ಬೋಧಕರ ಜೊತೆ ಸಂಬಂಧ ಹೊಂದಿದ್ದರೆ ಅದು ದೈವಿಕ,, ಭೂಲೋಕದಲ್ಲಿ ಸ್ವಾಮಿಗಳೆ ದೇವರ ಪ್ರೀತಿನಿಧಿಗಳಾಗಿರುವುದರಿಂದ ಅವರ ಜೊತೆ ದೈಹಿಕ ಸಂಬಂಧ ಹೊಂದುವುದು ದೈವಿಕವಾದುದು. ಪವಿತ್ರವಾದುದು. ನಾವು ಮನುಷ್ಯ ಸಂಬಂಧವನ್ನು ಪ್ರಶ್ನಿಸಬಹುದೇ ಹೊರತೂ ದೈವಿಕ ಸಂಬಂಧವನ್ನಲ್ಲ.;..ನಮಗೆ ದೇವರ ಸಾಮಿಪ್ಯ ದೊರಕುವುದು ದೇವ ಪ್ರತಿನಿಧಿಗಳಾಗಿರುವ ಸ್ವಾಮೀಜಿಗಳಿಂದ.. ಮನುಷ್ಯ ಮನುಷ್ಯರ ನಡುವಿನ ಎಲ್ಲ ರೀತಿಯ ಸಂಬಂಧಗಳು ಸಂತೋಷ ನೀಡುತ್ತವೆ. ಹೀಗಿರುವಾಗ ದೇವರ ಪ್ರತಿನಿಧಿಗಳಾಗಿರುವ ಸ್ವಾಮೀಜಿಗಳ ಜೊತೆಗೆ ಇಟ್ಟುಕೊಳ್ಳುವ ಎಲ್ಲ ರೀತಿಯ ಸಂಬಂಧಗಳೂ ಇನ್ನಷ್ಟು ದೈವಿಕ ಸಂತೋಷವನ್ನು ನೀಡುತ್ತವೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ಬುದ್ಧನಿಗೆ ಯಾವುದೋ ಮರದ ಕೆಳಗೆ ಜ್ನಾನೋದಯವಾಯಿತಂತೆ. ಬಸವನಿಗೆ ಇನ್ನೆಲ್ಲೋ ಜ್ನಾನೋದವಾಯಿತು. ಆದರೆ ಹುಲು ಮಾನವನಾದ ನನಗೆ ರಾಘವೇಶ್ವರ ಸ್ವಾಮಿಗಳ ಲೈಂಗಿಕ ಹಗರಣದ ಆರೋಪದಿಂದ ಜ್ನಾನೋದಯವಾಯಿತು. ಮನುಷ್ಯ ಸಂಬಂಧ ಮತ್ತು ದೈವಿಕ ಸಂಬಂಧದ ನಡುವಿನ ವ್ಯತ್ಯಾಸವನ್ನು ತಿಳಿಯುವಂತಾಯಿತು. ಇದಕ್ಕಾಗಿ ರಾಘವೇಶ್ವರ ಸ್ವಾಮಿಗಳು ಅವರ ಶಿಷ್ಯರು ಮತ್ತು ಸಮಸ್ತ ಹವ್ಯಕ ಬಾಂಧವರಿಗೆ ನಾನು ಕೃತಜ್ನನಾಗಿದ್ದೇನೆ...
ಮರೆತಿದ್ದೆ.. ಮಹಿಳಾ ಆಯೋಗದ ಸದಸ್ಯೆಯಾಗಿರುವ ಹವ್ಯಕ ಸಮುದಾಯಕ್ಕೆ ಸೇರಿದ ಸುಮಾ ಹೆಗಡೆಯವರಿಗೂ ನನ್ನ ಕೃತಜ್ನತೆಗಳು ಸಲ್ಲಬೇಕು. ಅವರೂ ಸಹ ಅಪ್ರತ್ಯಕ್ಷವಾಗಿ ನನ್ನ ಜ್ನಾನೋದಯಕ್ಕೆ ಸಹಕಾರಿಯಾಗಿದ್ದಾರೆ. ಹಾಗೆ ಪ್ರಮಿಳಾ ನೇಸರ್ಗಿಯವರನ್ನು ನಾನು ನೆನೆಯುತ್ತೇನೆ..ಹಾಗೂ ಈ ಲೈಂಗಿಕ ಹಗರಣಕ್ಕೂ ನನ್ನ ಕೃತಜ್ನತೆಗಳು ಸಲ್ಲುತ್ತವೆ.

RAJANATH SINGH ON MEDIA#Shashidharbhat#Sudditv#Karnatakapolitics

ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅತಿ ಹೆಚ್ಚಿನ ಮಾಧ್ಯಮ ಸ್ವಾತಂತ್ರ್ಯವನ್ನು ನೀಡಲಾಗಿದೆ.. ಇದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವ...