ಇಂದು ಬೆಳಿಗ್ಗೆ ದೂರವಾಣಿಯ ಮೂಲಕ ಮಾತನಾಡಿದ ಪತ್ರಕರ್ತ ಮಿತ್ರರೊಬ್ಬರು ಹೇಳಿದರು;
ನಾವು ಸಹ ಕೋರ್ಟ್ ಬೀಟ್ ಮಾಡಿದ್ದೇವೆ. ಆದರೆ ಎಂದೂ ಸಹ ಗಲಾಟೆಯಾಗಿಲ್ಲ. ಕೆಲವೊಮ್ಮೆ ಸಣ್ಣದಾಗಿ ಬೇಸರವಾದಾಗ ವಕೀಲರ ಸಂಘದ ಅಧ್ಯಕ್ಷರ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದೇವೆ. ಆದರೆ ಇಂದು ಯಾಕೆ ಹೀಗೆ ಆಗುತ್ತಿದೆ ?
ಅವರ ಈ ಪ್ರಶ್ನೆಗೆ ತಕ್ಷಣ ನನಗೆ ಅನ್ನಿಸಿದ್ದು ಹೌದು ಎಂದು ಆಗದಿದ್ದುದು ಇಂದು ಯಾಕೆ ಆಗುತ್ತಿದೆ ?
ನನಗೆ ಅನ್ನಿಸುವ ಹಾಗೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇಡೀ ಸಮಾಜದಲ್ಲಿ ಅದರಲ್ಲೂ ಮುಖ್ಯವಾಗಿ ಪತ್ರಿಕೋದ್ಯಮ ಮತ್ತು ವಕೀಲ ವೃತ್ತಿಯಲ್ಲಿ ಅದ ಆಗುತ್ತಿರುವ ಬದಲಾವಣೆಯನ್ನು ಗಮನಿಸಬೇಕಾಗುತ್ತದೆ. ಅದು ಒಟ್ಟಾರೆಯಾಗಿ ಈ ವೃತ್ತಿಗಳ ಸ್ವರೂಪ ಮತ್ತು ಮೌಲ್ಯ ನಂಬಿಕೆಗಳಲ್ಲಿ ಆದ ಬದಲಾವಣೆ.
ಒಂದು ವೃತ್ತಿ ಅಂದ ತಕ್ಷಣ ಒಂದು ಸಿದ್ಧಾಂತದ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಈ ಸಿದ್ಧಾಂತಕ್ಕೆ ಮೌಲ್ಯದ ತಳಹದಿ ಇರಬೇಕು. ಒಬ್ಬ ವ್ಯಾಪಾರಿ ಕೂಡ ವ್ಯಾಪಾರ ನಡೆಸುವಾಗ ತಾನು ಹೀಗೆ ನಡೆದುಕೊಳ್ಳಬೇಕು ಮತ್ತು ಹೀಗೆ ನಡೆದುಕೊಳ್ಳಬಾರದು ಎಂದು ತನ್ನದೇ ಅದ ಲಕ್ಷ್ಮಣ ರೇಖೆಯನ್ನು ಹಾಕಿ ಕೊಳ್ಳುತ್ತಾನೆ. ಈ ಲಕ್ಷ್ಮಣ ರೇಖೆ ಒಟ್ಟಾರೆಯಾಗಿ ಅವನ ವ್ಯಾಪಾರವನ್ನು ವೃದ್ಧಿಸುವುದರ ಜೊತೆಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಒಳಗೊಂಡಿರುತ್ತದೆ. ಅಂದರೆ ತನ್ನ ವ್ಯಾಪಾರವನ್ನು ಹೆಚ್ಚಿಸಿಕೊಂಡು ಲಾಭ ಮಾಡುವುದರ ಜೊತೆಗೆ ಆತನಿಗೆ ತನ್ನ ಗಿರಾಕಿಗಳಿಗೆ ಹೆಚ್ಚಿನ ಮೋಸವಾಗಕೂಡದು ಎಂಬ ನಂಬಿಕೆ ಕೂಡ ಇರಬೇಕು. ಈ ಎಲ್ಲ ಅಂಶಗಳನ್ನು ಒಳಗೊಂಡ ತನ್ನದೇ ಆದ ವ್ಯಾಪಾರಿ ಧರ್ಮವನ್ನು ಅವನು ರೂಢಿಸಿಕೊಂಡಿರುತ್ತಾನೆ. ಈ ವ್ಯಾಪಾರಿ ಧರ್ಮದಲ್ಲಿ ಲಾಭದ ಜೊತೆ ಸಮಾಜದ ಹಿತದ ಅಂಶ ಕೂಡ ಇರಲೇಬೇಕು. ಅದಿಲ್ಲದಿದ್ದರೆ ವ್ಯಾಪಾರಿಯ ಮನಸ್ಸು ಧ್ರೋಹ ಚಿಂತನೆಯ ಅಂಗಳವಾಗಿ ಬಿಡುತ್ತದೆ. ಅಂದರೆ ವ್ಯಾಪಾರ ಕೂಡ ಬಹುಜನ ಹಿತದ ಸಾಮಾನ್ಯ ತಳಹದಿಯನ್ನು ಹೊಂದಿರಬೇಕು.
ಈಗ ನಾವು ಪತ್ರಿಕೋದ್ಯಮ ಮತ್ತು ವಕೀಲೀ ವೃತ್ತಿಯ ಬಗ್ಗೆ ಮಾತನಾಡೋಣ. ಈ ಎರಡೂ ವೃತ್ತಿಗಳಿಗೆ ಸಮಾಜದಲ್ಲಿ ಅತಿ ಉಚ್ಛವಾದ ಸ್ಥಾನ ಮಾನಗಳಿವೆ. ಸಾಮಾನ್ಯ ಮನುಷ್ಯನೊಬ್ಬ ಪತ್ರಕರ್ತರಿಗೆ ಮತ್ತು ವಕೀಲರಿಗೆ ಹೆಚ್ಚಿನ ಗೌರವವನ್ನು ಕೊಡುತ್ತಾನೆ. ಒಬ್ಬ ವ್ಯಾಪಾರಿಗಿಂತ ವಕೀಲರು ಮತ್ತು ಮಾಧ್ಯಮದವರಿಗೆ ಹೆಚ್ಚಿನ ಗೌರವವಿದೆ.
ನಾವೆಲ್ಲ ನೆನಪಿಸಿಕೊಳ್ಳಲೇ ಬೇಕಾದ ಮಹಾತ್ಮಾ ಗಾಂಧಿ ವಕೀಲರೂ ಆಗಿದ್ದರು. ಪತ್ರಕರ್ತರೂ ಅಗಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ ವಕೀಲೀ ವೃತ್ತಿಯನ್ನು ಮಾಡಿದವರು. ರಾಜ್ಯದ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ ಕಡಿದಾಳ ಮಂಜಪ್ಪ ಮುಖ್ಯಮಂತ್ರಿ ಸ್ಥಾನ ಹೋದ ಮೇಲೆ ಕರೀ ಕೋಟು ಹಾಕಿಕೊಂಡು ವಕೀಲಿ ವೃತ್ತಿಯನ್ನು ಮುಂದುವರಿಸಿದ್ದರು. ಹಲವು ಮಂತ್ರಿಗಳಲ್ಲಿ ಮನೆಗೆ ಕಳುಹಿಸಿದ ಏ. ಕೆ. ಸುಬ್ಬಯ್ಯ ಈಗಲೂ ವಕೀಲೀ ವೃತ್ತಿಯನ್ನು ಮಾಡುತ್ತಾರೆ.
ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಹಲವಾರು ನಾಯಕರು ವಕೀಲಿ ವೃತ್ತಿಯನ್ನು ಮಾಡಿ ನಂತರ ಚಳವಳಿಗೆ ದುಮುಖಿದವರು. ಹಾಗೆ ಸ್ವಾತಂತ್ರ್ಯಾ ನಂತರ ಬಹಳಷ್ಟು ನಾಯಕರು ವಕೀಲರಾಗಿ ನಂತರ ರಾಜಕಾರಣಕ್ಕೆ ಇಳಿದು ಯಶಸ್ವಿಯಾಗಿದ್ದಾರೆ. ಹಾಗೆ ಪತ್ರ ಕರ್ತರಾಗಿಯೂ ಕೆಲಸ ಮಾಡಿದ್ದಾರೆ. ವಕೀಲೀ ವೃತ್ತಿ ಮತ್ತು ಪತ್ರಿಕೋದ್ಯಮ ಎರಡೂ ಸಹ ಸಾಮಾನ್ಯ ಜನರ ಜೊತೆ ನೇರವಗಿ ಸಂವಹನ ಮಾಡುವ ಅವರ ಜೊತೆ ಸದಾ ಮುಖಾಮುಖಿಯಾಗುವ ವೃತ್ತಿಗಳೇ ಅಗಿವೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಎರಡೂ ವೃತ್ತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪತ್ರಕರ್ತರು ಸಾಮಾಜಿಕ ಬದ್ಧತೆಯ ಪ್ರಶ್ನೆಯನ್ನು ಮರೆಯುತ್ತಿದ್ದಾರೆ. ಮಾಧ್ಯಮ ಕೂಡ ವ್ಯಾಪಾರವಗಿ ಮಧ್ಯವರ್ತಿಗಳು ವಿಜೃಂಭಿಸತೊಡಗಿದ್ದಾರೆ. ಹಾಗೆ ವಕೀಲಿ ವೃತ್ತಿ ಕೂಡ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಂಡಿದೆ. ರಾಜಕಾರಣಕ್ಕೆ ಇಳಿಯಬಯಸುವವರು ಯಾವುದೇ ಬದ್ಧತೆ ಇಲ್ಲದೆ ಎಲ್ ಎಲ್ ಬಿ ಮಾಡಿ ಕರಿ ಕೋಟು ಹಾಕಿಕೊಂಡು ಓಡಾಡ ತೊಡಗಿದ್ದಾರೆ. ಬಹಳಷ್ಟು ವಕೀಲರು ಎಂದೂ ನ್ಯಾಯಾಧೀಶರ ಎದುರು ವಾದವನ್ನು ಮಾಡಿದವರಲ್ಲ. ಅವರು ಕೋರ್ಟಿನ ಅಂಗಳದಲ್ಲಿ ಓಡಾಡಿಕೊಂಡು ವ್ಯಾಪಾರಿಯಾಗಿ ಕೆಲಸ ಮಾಡುತ್ತಾರೆ. ರಾಜಕಾರಣಕ್ಕೆ ವಕೀಲಿ ವೃತ್ತಿ ಸೋಪಾನವಾಗಿತ್ತು. ವಕೀಲರಾದವರು ಜನ ಸಾಮಾನ್ಯರ ನೋವುಗಳಿಗೆ ಸ್ಪಂದಿಸುವವರು ಮಾತ್ರವಲ್ಲ, ನ್ಯಾಯವನ್ನು ಕೊಡಿಸುವ ಪವಿತ್ರ ವೃತ್ತಿ. ಆದರೆ ಇಂದು ವಕೀಲಿ ವೃತ್ತಿ ಅಂತಹ ಪಾವಿತ್ರ್ಯವನ್ನು ಉಳಿಸಿಕೊಂಡಿದೆ ಎಂದು ಹೇಳುವುದು ಕಷ್ಟ. ಅದಕ್ಕೆ ಬಹು ಮುಖ್ಯವಾದ ಕಾರಣ ನೈತಿಕತೆಯ ಪ್ರಶ್ನೆ ಈ ವೃತ್ತಿಯಲ್ಲಿ ಮೊದಲಿನಷ್ಟು ಮುಖ್ಯವಾಗದೇ ಇರುವುದು ಎಂದು ಅನ್ನಿಸುತ್ತದೆ.
ಇದೇ ಮಾತನ್ನು ಪತ್ರಿಕೋದ್ಯಮದ ಕುರಿತೂ ಹೇಳಬಹುದು. ಹಾಗೆ ರಾಜಕಾರಣ ಕೂಡ. ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಕಂಡುಕೊಳ್ಳಲು, ಪತ್ರಿಕೋದ್ಯಮ, ವಕೀಲೀ ವೃತ್ತಿ ಮತ್ತು ರಾಜಕಾರಣದ ನಡುವಿನ ಸೂಕ್ಷ್ಮ ಸಂಬಂಧವನ್ನು ಅವಲೋಕಿಸಬೇಕು. ಈ ಮೂರು ವೃತ್ತಿಗಳೂ ಆಂತರಿಕವಾದ ಮತ್ತು ಬಾಹ್ಯವಾದ ಸಂಬಂಧವನ್ನು ಹೊಂದಿವೆ. ಒಂದು ರೀತಿಯಲ್ಲಿ ಅಂತರಿಕ ಅವಲಂಬನೆ ಇವುಗಳ ನಡುವೆ ಇದೆ. ಜೊತೆಗೆ ಒಂದು ವೃತ್ತಿ ಇನ್ನೊಂದು ವೃತ್ತಿಯ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತಲೇ ಇವೆ. ರಾಜಕಾರಣಿಗಳು, ಪತ್ರಿಕೋದ್ಯಮಿಗಳು ಮತ್ತು ವಕೀಲರು ದಿನ ನಿತ್ಯದ ಒಡನಾಡಿಗಳು. ಪತ್ರಿಕೋದ್ಯಮಿ ರಾಜಕಾರಣವನ್ನು ದೂರದಿಂದ ನಿಂತು ನೋಡುವ ಸಾಕ್ಷಿ ಪ್ರಜ್ನೆ. ವಕೀಲ ವೃತ್ತಿಯಲ್ಲಿರುವವರು ರಾಜಕೀಯ ಮಹತ್ವಾಕಾಂಕ್ಷೆಯ ಜೊತೆಗೆ ರಾಜಕಾರಣಿಗಳ ರಕ್ಷಕರಾಗಿ ಕೆಲಸ ಮಾಡುವವರು. ರಾಜಕಾರಣಿಗಳಿಗೆ ತಮ್ಮ ಮಾತುಗಳನ್ನು ಜನರಿಗೆ ತಲುಪಿಸಲು, ತಮ್ಮ ಸತ್ಯ ಮತ್ತು ಸುಳ್ಳುಗಳನ್ನು ಪರಿಣಾಮಕಾರಿಯಾಗಿ ಹೇಳಲು ಮಾಧ್ಯಮ ಬೇಕು. ಹಾಗೆ ಅವರ ಸುಳ್ಳುಗಳನ್ನು ಮರೆಮಾಚಲು ತಮ್ಮ ಕೃತ್ಯವನ್ನು ನ್ಯಾಯಬದ್ಧಗೊಳಿಸಲು ವಕೀಲರು ಬೇಕು. ವಕೀಲರಿಗೆ ತಮ್ಮ ಮೇಲೆ ರಾಜಕಾರಣಿಗಳು ಅವಲಂಬಿಸಿದ್ದಾರೆ ಎಂಬುದು ಅಹಂ ಅನ್ನು ಜಾಗ್ರತಗೊಳಿಸುತ್ತಲೇ ಇರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮ ಕೂಡ ರಾಜಕಾರಣಿಗಳ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ನಿಯಂತ್ರಣಕ್ಕೆ ಒಳಗಾಗಿದೆ. ರಾಜಕಾರಣಿಗಳು ಮಾಧ್ಯಮದ ಮಾಲೀಕರಾಗುತ್ತಿದ್ದಾರೆ. ಈ ಮೂಲಕ ಪತ್ರಿಕೋದ್ಯಮದ ಮೇಲೆ ನಿಯಂತ್ರಣ ಸಾಧಿಸಲು ರಾಜಕಾರಣ ಯತ್ನ ನಡೆಸುತ್ತಿದೆ. ಹಾಗೆ ಪತ್ರಿಕೋದ್ಯಮಿಗಳಲ್ಲಿ ಅಧ್ಯಯನ ಮತ್ತು ನಿಷ್ಟೆಯ ಕೊರತೆ ಎದ್ದು ಕಾಣುತ್ತಿದೆ. ತಾರತಮ್ಯ ಜ್ನಾನ ಕಡಿಮೆಯಾಗುತ್ತಿದೆ. ಜೊತೆಗೆ ಪತ್ರಿಕೋದ್ಯಮಿಯಾದವನು ಪದ್ಮ ಪತ್ರದ ಮೇಲಿನ ಜಲ ಬಿಂಧುವಿನಂತೆ ಯಾವುದಕ್ಕೂ ಅಂಟಿಕೊಳ್ಳದೇ, ಕೆಲಸ ಮಾಡುವ ಸ್ಥಿತಿ ಇಲ್ಲ.
ಇಂತಹ ಸ್ಥಿತಿಯಲ್ಲಿ ಅರಾಜಕತೆ ಉಂಟಾಗುವುದು ತುಂಬಾ ಸಹಜ. ಇಂತಹ ಅರಾಜಕತೆಯಿಂದಲೇ ಕಳೆದ ವಾರ ಕೋರ್ಟ್ ಆವರಣದಲ್ಲಿ ನಡೆದಂತಹ ಅಹಿತಕರ ಘಟನೆಗಳು ನಡೆಯುತ್ತವೆ. ಬದ್ಧತೆ, ಶಿಸ್ತು ಇಲ್ಲದ ವಾತಾವರಣದಲ್ಲಿ ಕಲ್ಲುಗಳು ಹಾರಾಡುತ್ತವೆ. ಕುರ್ಚಿಗಳು ಮೇಲಿನಿಂದ ಪೊಲೀಸರ ತಲೆಯ ಮೇಲೆ ಬೀಳುತ್ತವೆ. ಅಧಿಕಾರಸ್ಥರ ಅಣತಿಯಂತೆ ನಡೆಯುವ ಪೊಲೀಸರು ಷಡ್ಯಂತ್ರಗಳ ರೂಪಗೊಳ್ಳುತ್ತವೆ.ಹಾಗೆ ಮಾಧ್ಯಮ ತನ್ನ ನೈತಿಕತೆಯ ಮೂಲ ಸಿದ್ಧಾಂತವನ್ನು ಮರೆತು ವ್ಯಕ್ತಿಗತ ರಾಜಕಾರಣದ ಅಂಗಳವಾಗುತ್ತದೆ.
ಈಗ ಮತ್ತೆ ಕೋರ್ಟ್ ಆವರಣದಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಮಾತನಾಡೋಣ. ಈ ಘಟನೆಯಲ್ಲಿ ಪಾಲುದಾರರಾದವರು ಹೊರಗಿನಿಂದ ಬಂದವರು ಎಂದು ವಕೀಲರ ಸಂಘದ ಅಧ್ಯಕ್ಷ ಸುಬ್ಬಾ ರೆಡ್ಡಿ ವಾದಿಸುತ್ತಾರೆ. ಹಾಗಿದ್ದರೆ ಅವರನ್ನು ಗುರುತಿಸಿ ಕ್ರಮ ಕೈಗೊಳ್ಳುವ ಕೆಲಸವನ್ನು ವಕೀಲರ ಸಂಘ ಯಾಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಹಾಗೆ ವಕೀಲಿ ವೃತ್ತಿ ಮಾಡುವವರು ಈ ದೇಶದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಂಬಿಕೆಯನ್ನು ಇಟ್ಟುಕೊಂಡಿರಬೇಕು. ನಮಗಾದ ಎಲ್ಲ ಅನ್ಯಾಯಗಳಲ್ಲಿ, ಅದು ಮಾಧ್ಯಮ ಮಾಡಿದೆ ಎಂದು ಹೇಳಲಾದ ಅನ್ಯಾಯವೂ ಸೇರಿದಂತೆ ನ್ಯಾಯವನ್ನು ಒದಗಿಸುವ ಹೊಣೆ ನ್ಯಾಯಾಂಗಕ್ಕೆ ಇದೆ. ಹಾಗೆ ನಮ್ಮ ಅನ್ಯಾಯವನ್ನು ನಾವು ನ್ಯಾಯಾಂಗ ವ್ಯವಸ್ಥೆಯ ಗಮನಕ್ಕೆ ತರಬೇಕು. ಅಲ್ಲಿ ಪರಿಹಾರವನ್ನು ಪಡೆದುಕೊಳ್ಳಬೇಕು. ಆದರೆ ಕೆಲವು ವಕೀಲ ಮಿತ್ರರು ತಮಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎನ್ನುವುದನ್ನು ಹಲವು ಬಾರಿ ಸಾಬೀತು ಪಡಿಸಿದ್ದಾರೆ. ಪೊಲಿಸನೊಬ್ಬ ಲೈಸೆನ್ಸ್ ಇಲ್ಲದೇ ದ್ವಿಚಕ್ರ ವಾಹನ ಓಡಿಸಿದ ಪ್ರಕರಣದಲ್ಲಿ ಒಂದು ದಿನ ಬೆಂಗಳೂರಿನ ಸಾಮಾನ್ಯ ಜನರಿಗೆ ಬದುಕು ನರಕವಾಗುವಂತೆ ಮಾಡಿದವರು ಇದೇ ವಕೀಲರಲ್ಲವೆ ? ಯಾಕೆ ಇಂತಹ ಪ್ರಕರಣಗಳನ್ನು ಅವರು ನ್ಯಾಯಾಸ್ಥಾನದ ಮುಂದೆ ಒಯ್ಯುವುದಿಲ್ಲ ? ಇದಕ್ಕೆ ಬದಲಾಗಿ ರಸ್ತೆಗೆ ಇಳಿಯುವುದು ಯಾಕೆ ? ಇವರಿಗೆ ದೇಶದ ನ್ಯಾಯ ವ್ಯವಸ್ಥೆಯ ಬಗ್ಗೆ ನಂಬಿಕೆ ಇಲ್ಲವೆ ? ಒಂದೊಮ್ಮೆ ವಕೀಲರಿಗೆ ನ್ಯಾಯಾಲಯಗಳ ಮೇಲೆ ನಂಬಿಕೆ ಇಲ್ಲ ಎಂದಾದರೆ ಅದಕ್ಕಿಂತ ದೊಡ್ದ ದುರಂತ ಬೇಕೆ ಇಲ್ಲ. ಒಂದೊಮ್ಮೆ ನ್ಯಾಯಾಲಯಗಳ ಬಗ್ಗೆ ನಂಬಿಕೆ ಇದ್ದೂ ಹೀಗೆ ಮಾಡುತ್ತಾರೆ ಎಂದಾದರೆ ಅವರು ಈ ವೃತ್ತಿಗೆ ಅರ್ಹರಲ್ಲ. ಜೊತೆಗೆ ಅವರು ಜನತಂತ್ರ ವ್ಯವಸ್ಥೆಯ ವಿರೋಧಿಗಳೂ ಆಗುತ್ತಾರೆ. ಈ ಎರಡು ಸಾಧ್ಯತೆಗಳಲ್ಲಿ ಯಾವುದು ಸರಿ ಎಂಬುದನ್ನು ವಕೀಲರ ಸಂಘದ ಅಧ್ಯಕ್ಷರೇ ಹೇಳಬೇಕು.
ಈ ಘಟನೆಯಲ್ಲಿ ತಪ್ಪು ಯಾರದು ಎಂಬುದನ್ನು ನಾನು ಹೇಳುವುದಿಲ್ಲ. ಯಾಕೆಂದರೆ ನನಗೆ ತಪ್ಪು ಯಾರದು ಎಂಬುದು ತಿಳಿದಿಲ್ಲ. ಇಡೀ ಘಟನೆಯನ್ನು ನಾನು ಮಾಧ್ಯಮದ ಮೂಲಕವೇ ತಿಳಿದುಕೊಂಡಿದ್ದೇನೆ. ಹೀಗಾಗಿ ಘಟನೆಗೆ ಇನ್ನೊಂದು ಮುಖವೂ ಇರಬಹುದು ಮತ್ತು ಇರುತ್ತದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದನ್ನು ಗಮನಿಸಿ ಮಾಧ್ಯಮದಿಂದ ಆಗಿರುವ ಆಗುತ್ತಿರುವ ತಪ್ಪುಗಳನ್ನು ಸಮರ್ಥಿಸಿಕೊಳ್ಳಲು ನಾನು ಹೋಗುವುದಿಲ್ಲ. ಅದು ಸರಿಯಾದ ಕ್ರಮ ಕೂಡ ಅಲ್ಲ. ಮಾಧ್ಯಮದವರ ಅತಿಯಾದ ಪ್ರತಿಕ್ರಿಯೆ ರಸ್ತೆಗಿಳಿದು ನಡೆಸುತ್ತಿರುವ ಪ್ರತಿಭಟನೆಯನ್ನು ಸಂಪೂರ್ಣವಗಿ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಮಾಧ್ಯಮ ಕೂಡ ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚು ಹೊಣೆಗಾರಿಕೆಯಿಂದ ವರ್ತಿಸಬೇಕಾಗಿತ್ತು. ಘಟನೆಯನ್ನು ಅತಿ ರಂಜಿತವಾಗಿ ವರದಿ ಮಾಡಿದ ಹಲವು ಉದಾಹರಣೆಗಳೂ ಇದ್ದು ಅದು ಬೇಜವಾಬ್ದಾರಿಯ ವರ್ತನೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಘಟನೆಯಲ್ಲಿ ಪೊಲೀಸನೊಬ್ಬ ಅಸು ನೀಗಿದ ಎಂದು ವರದಿ ಮಾಡಿದ್ದಕ್ಕೆ ಮಾಧ್ಯಮದವರಾದ ನಾವೆಲ್ಲ ಕ್ಶಮೆ ಕೇಳಲೇ ಬೇಕು.
ನಮ್ಮ ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಂಡರೆ ನಾವು ಸಣ್ಣವರಾಗುವುದಿಲ್ಲ. ತಪ್ಪುಗಳನ್ನು ಒಪ್ಪಿಕೊಳ್ಳುವ ಮೂಲಕ ನಾವು ದೊಡ್ಡವರಾಗುತ್ತೇವೆ. ನಮ್ಮ ವೃತ್ತಿಗೆ ಜೊತೆಗೆ ನಮ್ಮ ಬದುಕಿಗೆ ನಾವು ನ್ಯಾಯವನ್ನು ಒದಗಿಸುತ್ತೇವೆ. ಆದರೆ ಅಕ್ಷರ ಅಹಂಕಾರದ ಪತ್ರಕರ್ತರು, ಧಿರಸಿನ ಅಹಂಕಾರ ವಕೀಲರು ತಮ್ಮ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ತಪ್ಪುಗಳನ್ನು ಒಪ್ಪಿಕೊಳ್ಳಲು ಇಬ್ಬರಿಗೂ ಅಹಂ ಅಡ್ಡಿಯಾಗುತ್ತಿದೆ. ಆದರೆ ತಮ್ಮ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳದವರು ಮತ್ತೊಂದು ತಪ್ಪನ್ನು ಮಾಡುತ್ತಾರೆ ಎಂಬುದು ನಿಜ. ಹೀಗೆ ಒಂದು ತಪ್ಪು ಇನ್ನೊಂದು ತಪ್ಪನ್ನು ಸರಿ ಮಾಡುವುದಿಲ್ಲ. ಇದನ್ನು ವಕೀಲರೂ ಅರ್ಥ ಮಾಡಿಕೊಳ್ಳಬೇಕು, ಪತ್ರಕರ್ತರೂ ಅರ್ಥ ಮಾಡಿಕೊಳ್ಳಬೇಕು.
ಇವತ್ತಿನ ಬಹುಮುಖ್ಯವಾದ ಸಮಸ್ಯೆ ಎಂದರೆ ರಾಜಕಾರಣ ನ್ಯಾಯಾಂಗ ಮತ್ತು ಮಾಧ್ಯಮ ರಂಗಗಳ ಅಹಂ. ಯಾರೂ ಸೋಲಲು ಸಿದ್ಧರಿಲ್ಲ. ಈ ಮೂರು ಅಂಗಗಳು ಪರಸ್ಪರ ಮೇಲಾಟ ನಡೆಸುತ್ತಿವೆ. ಮತ್ತು ತಮ್ಮ ತಮ್ಮ ಹಿತಾಸಕ್ತಿಗಾಗಿ ಇನ್ನೊಂದು ಅಂಗವನ್ನು ಬಳಸಿಕೊಂಡು ಷಡ್ಯಂತ್ರ ರೂಪಿಸುತ್ತಿವೆ. ಯಶಸ್ಸು ಹಣ ಮತ್ತು ಅಧಿಕಾರ ಮುಖ್ಯವಾದಾಗ ಮೌಲ್ಯಗಳು ಪಾತಾಳಕ್ಕೆ ಕುಸಿಯುತ್ತವೆ. ಸಾಮಾನ್ಯ ಮನುಷ್ಯ ಇದಕ್ಕೆ ಬಲಿ ಪಶು ಆಗುತ್ತಾನೆ. ಈಗ ಆಗುತ್ತಿರುವುದು ಅದೇ.