Tuesday, May 30, 2017

ನಾನು ಯೋಗ್ಯ ವ್ಯಕ್ತಿ ಅಲ್ಲದಿರಬಹುದು...



ಆಧ್ಯಾತ್ಮದ ಅತಿ  ಮಹತ್ವದ ಪ್ರಶ್ನೆ ಎಂದರೆ ನಾನು ಯಾರು ಎಂಬುದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಎಲ್ಲ ಸಾಧು ಸಂತರು ಪ್ರಯತ್ನ ಮಾಡಿದ್ದಾರೆ. ತಮಗೆ ದೊರಕಿದ ಉತ್ತರವನ್ನು ಪ್ರತಿಪಾದಿಸಿದ್ದಾರೆ. ಶಂಕರಾಚಾರ್ಯರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯತ್ನಿಸಿ ಕಂಡುಕೊಂಡ ಉತ್ತರ ಎಂದರೆ ಅಹಂ ಬ್ರಹ್ಮಾಸ್ಮಿ. ನಾನೇ ಭ್ರಹ್ಮ ಎಂಬ ಈ ಉತ್ತರ ಬದುಕಿನಲ್ಲಿ ಎಲ್ಲವನ್ನು ಎದುರಿಸಿ ವಿಜಯಿಯಾಗುವುದಕ್ಕೆ ಶಕ್ತಿ ನೀಡುತ್ತದೆ ಎಂಬುದು ನಿಜ.
ನನಗೆ ನಾನು ಯಾರು ಎಂಬ ಪ್ರಶ್ನೆ ಹೆಚ್ಚು ಕಾಡಿಲ್ಲ. ಆದರೆ ನಾನು ಎಂಥವನು ಎಂಬ ಪ್ರಶ್ನೆ ನನ್ನನ್ನು ಕಾಡಿತ್ತಲೇ ಇರುತ್ತದೆ. ಈ ಪ್ರಶ್ನೆಗೆ ನನಗೆ ಉತ್ತರ ದೊರಕಿಲ್ಲ. ಪ್ರಾಯಶಃ ಉತ್ತರ ದೊರಕುವುದೂ ಇಲ್ಲ. ಈ ಪ್ರಶ್ನೆಗೆ ಉತ್ತರ ಹುಡುಕುವಾಗ ನಾನು ಅಷ್ಟು ಕೆಟ್ಟವನು ಆಗಿರಲಿಕ್ಕಿಲ್ಲ ಎಂದು ಅನ್ನಿಸುತ್ತದೆ. ಆದರೆ ನಾನು ಕೆಟ್ಟವನು ಇದ್ದರೂ ಇರಬಹುದು ಎಂದು ಅನ್ನಿಸಿದಾಗ ನಾನು ಕಂಡುಕೊಂಡ ಉತ್ತರದ ಬಗ್ಗೆಯೇ ಅನುಮಾನ ಪ್ರಾರಂಭವಾಗುತ್ತದೆ.
ಬಾಲ್ಯದಲ್ಲಿ ನಾನುಉಡಾಳ ನಾಗಿದ್ದೆ ಎಂದು ಅಮ್ಮ ಈಗಲೂ ನೆನಪಿಸಿಕೊಳ್ಳುತ್ತಾಳೆ. ನನ್ನ ಮನೆಯವರು ನಾನು ಯೋಗ್ಯನಲ್ಲ ಎಂದು ಮೊದಲೇ ತೀರ್ಮಾನಿಸಿದ್ದರು. ಶಾಲೆ ಕಾಲೇಜಿಗೆ ಹೋಗುವಾಗ ನಾನು ಅಂತಹ ಒಳ್ಳೆಯ ಹೆಸರು ಪಡೆಯಲಿಲ್ಲ. ಓದುವುದಕ್ಕಿಂತ ಬೇರೆ ಚಟುವಟಿಕೆಯಲ್ಲಿ ತೊಡಗಿ ಕೊಂಡಿದ್ದೇ ಹೆಚ್ಚು. ಹೀಗಾಗಿ ನಾನು ಅಪ್ಪ ಅಮ್ಮನಿಗೆ ಯೋಗ್ಯ ಮಗನಾಗಲೇ ಇಲ್ಲ. ಆದರೆ ನಾನು ಈ ವೃತ್ತಿಗೆ ಬಂದ ಮೇಲೆ ಅಪ್ಪ ಅಮ್ಮ  ನಾನು ಯೋಗ್ಯನಾಗಿದ್ದೇನೆ ಎಂದು ಸಂತೋಷಪಟ್ಟರು. ನನಗೆ ಆಗ ಆಗಿದ್ದು ಸಮಾಧಾನ. ಆದರೆ ನಾನು ಯೋಗ್ಯ ವ್ಯಕ್ತಿಯೇ ಎಂಬ ಪ್ರಶ್ನೆ ಹಾಗೇ ಉಳಿಯಿತು.
ನಾನು ಯೋಗ್ಯನಲ್ಲ, ನಂಬಿಕೆಗೆ ಅರ್ಹನಲ್ಲ ಎಂದು ನನಗೆ ಹಲವು ಬಾರಿ ಅನ್ನಿಸಿದ್ದಿದೆ. ಇದಕ್ಕೆ ಪೂರಕವಾಗಿ ನಾನು ಯೋಗ್ಯ ವ್ಯಕಿಯಲ್ಲ ಎಂದು ಹಲವರು ನನಗೆ ಹೇಳಿದ್ದಿದೆ, ಆಗ ನಾನು ಯೋಜನೆ ಮಾಡುವುದು ಅದೇ ಪ್ರಶ್ನೆಯ ಬಗ್ಗೆ. ನಾನು ಯೋಗ್ಯ ವ್ಯಕ್ತಿ ಹೌದೋ ಅಲ್ಲವೋ ಎನ್ನುವ ಬಗ್ಗೆ.
ಕಾಲೇಜಿ ದಿನಗಳಲ್ಲಿ ಒಬ್ಬಿಬ್ಬರು ಹುಡುಗಿಯರ ಜೊತೆ ನನ್ನ ಜಗಳ ಇತ್ತು. ಆ ಜಗಳಕ್ಕೆ ಕಾರಣ ಏನು ಎಂಬುದು ನನಗೆ ನೆನಪಿಲ್ಲ. ಆದರೆ ಜಗಳ ಇದ್ದವರ ಜೊತೆಗೂ ನಾನು ತಪ್ಪಿ ನಡೆದುಕೊಳ್ಳಲಿಲ್ಲ. ಜಗಳವಾಡಿದೆ. ಹಾಗೆ ಎದ್ದು ಬಂದೆ. ನಾನು ಬೆಳಗಾವಿ ಕಾಲೇಜಿಗೆ ಹೋಗುವಾಗ ನನ್ನ ಆತ್ಮೀಯ ಸ್ನೇಹಿತೆ ಒಬ್ಬಳಿದ್ದಳು. ಆಕೆ ನನ್ನನ್ನು ತಿದ್ದಿ ತೀಡಿದವಳು. ನನಗೆ ಇಂಗ್ಲೀಷ್ ಮಾತನಾಡುವುದನ್ನು ಕಲಿಸಿದವಳು. ಆಕೆ ತುಂಬಾ ಶ್ರೀಮಂತ ಹುಡುಗಿಯಾದ್ದರಿಂದ ಅವಳನ್ನು ಪ್ರೀತಿಸಲು ನಾನು ಹೆದರಿದೆ. ಆಕೆ ಪ್ರೀತಿಯ ಮಾತನಾಡಿದಾಗ ನಾನು ಮೌನವಾದೆ. ಅವಳು ದೂರದ ಮುಂಬೈಗೆ ಹೋದಳು. ಮತ್ತೆ ತಿರುಗಿ ಬಂದಳು ಪ್ರೀತಿಯ ಮಾತನಾಡಿದಳು. ಹಲವು ವರ್ಷಗಳ ನಂತರ ಬಂದ ಆಕೆಯ ಬಗ್ಗೆ ನನಗಿದ್ದ ಭಯ ಮತ್ತು ನನ್ನ ಬಗ್ಗೆ ಇದ್ದ ಕೀಳರಿಮೆಯಿಂದ ನಾನು ಪ್ರೀತಿಯ ಮಾತನಾಡಲಿಲ್ಲ. ಪ್ರಾಯಶಃ ಆಕೆಯೂ ನಾನು ಯೋಗ್ಯನಲ್ಲ ಎಂದುಕೊಂಡಿರಬೇಕು.
ನಾನು ಪ್ರೀತಿಸಿ ಮದುವೆಯಾದ ಮೇಲೆ ಒಳ್ಳೆಯ ಸದ್ ಗ್ರಹಸ್ಥನಾಗಬೇಕು ಎಂದು ಪ್ರಯತ್ನಿಸಿದ್ದು ಉಂಟು. ಆದರೆ ಎಲ್ಲರೂ ಬಯಸುವ ರೀತಿಯ ಗಂಡ, ತಂದೆ ಆಗಲಿಲ್ಲ. ನನ್ನ ವೃತ್ತಿಯ ಬಗ್ಗೆ ಅಪಾರ ನಿಷ್ಠೆ ಹೊಂದಿದ್ದ  ನಾನು ಕೌಟುಂಬಿಕ ಹೊಣೆಗಾರಿಕೆಯನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂದು ಅನ್ನಿಸುತ್ತದೆ. ಹೀಗಾಗಿ ನನ್ನ ಹೆಂಡತಿ ಮಕ್ಕಳೂ ಸಹ ನಾನು ಯೋಗ್ಯನಲ್ಲ ಎಂದು ಅಂದುಕೊಂಡಿರುವುದು ಸಹಜ. ಯಾಕೆಂದರೆ ಬೇರೆಯವರು ಇಷ್ಟ ಪಡುವ ಹಾಗೆ ಬದುಕುವುದು ನನಗೆ ತಿಳಿಯದು. ಬೇರೆಯವರು ಇಷ್ಠಪಡುವ ಹಾಗೆ ಬದುಕುವುದು ಹೇಗೆ ಎಂಬುದು ನನಗೆ ತಿಳಿಯದು. ಹೀಗಾಗಿ ನಾನು ಮಹಾನ್ ಸ್ವಾರ್ಥಿ ಎಂದು ಹೇಳುವವರು ಇದ್ದಾರೆ. ಆದರೆ ನನ್ನ ಸ್ವಾರ್ಥ ಯಾವುದು ಎಂಬುದು ನನಗೆ ಅರ್ಥವಾಗುವುದಿಲ್ಲ. ಹೀಗಾಗಿ ನಾನು ಯೋಗ್ಯನಲ್ಲದಿರಬಹುದು.. ಜೆಂಟಲ್ ಮೆನ್ ಅಲ್ಲದಿರುಬಹುದು ಎಂಬ ಅನುಮಾನ ನನಗೆ ಇದ್ದೇ ಇದೆ.
ಬಹಳ ವರ್ಷಗಳ ಹಿಂದೆ ಜ್ಯೋತಿಷಿಯೊಬ್ಬರು ನನಗೆ ಒಂದು ಮಾತು ಹೇಳಿದ್ದರು. ನಿಮ್ಮ ಸಾಧನೆಗೆ ಮತ್ತು ಅವನತಿಗೆ ಮಹಿಳೆಯರೇ ಕಾರಣ ಎಂಬುದು ಅವರ ಮಾತಾಗಿತ್ತು. ನಾನು ಅವರಿಗೆ ಬೈದು ನನ್ನ ಸಾಧನೆ ಅಥವಾ ಅವನತಿಗೆ ನಾನೇ ಕಾರಣ ಎಂದು ನಕ್ಕಿದ್ದೆ. ಈಗಲೂ ಅದೇ ಮಾತನ್ನು ನಾನು ನಂಬಿದ್ದೇನೆ. ಆದರೆ ಬಹಳ ಸಂದರ್ಭದಲ್ಲಿ ನಾನು ಹಲವಾರು ವಿವಾದಗಳಿಗೆ ಮಹಿಳೆಯರಿಂದಲೇ ಸಿಲುಕಿಕೊಂಡಿದ್ದೇನೆ ಎಂಬುದು ನನಗೆ ಗೊತ್ತು.
ನಾನು ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಸಹೋದ್ಯೋಗಿಯೊಬ್ಬರು ನನ್ನ ಮೇಲೆ ಆರೋಪವೊಂದನ್ನು ಮಾಡಿದ್ದರು. ಅದೆಂದರೆ ಅವರು ನನ್ನನ್ನು ಮನೆಗೆ ಕರೆದಾಗ ನಾನು ಅವರ ಜೊತೆ ಅಸಭ್ಯವಾಗಿ ನದೆದುಕೊಂಡೆ ಎಂಬುದು ನನ್ನ ಮೇಲಿನ ಆರೋಪವಾಗಿತ್ತು. ಈ ಆರೋಪವನ್ನು ಅವರು ನನ್ನ ಮೇಲೆ ಮಾಡಿದಾಗ ಸಂಪಾದಕರಾದ ವೈ ಎನ್ ಕೆ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈ ಘಟನೆ ನಡೆದು ಹಲವು ತಿಂಗಳುಗಳ ನಂತರ ನನ್ನ ಸಹೋದ್ಯೋಗಿ ಡಿ. ಉಮಾಪತಿ ಹೇಳಿದಾಗ ರಾತ್ರಿ ರಾಜಾಜಿನಗರ ಎಂಟ್ರನ್ಸ್ ಬಳಿ ಕುಳಿತು ಅತ್ತಿದ್ದೆ. ಅವರು ನನಗೆ ಸಮಾಧಾನ ಮಾಡಿದ್ದರು. ನಾನು ಮನುಷ್ಯ, ನನಗೆ ಮನುಷ್ಯನಿಗೆ ಇರುವ ಎಲ್ಲ ಬಗೆಯ ಆಸೆ ಆಕಾಂಕ್ಶೆಗಳಿವೆ. ಆದರೆ ಯಾವುದೇ ಮಹಿಳೆಯ ಜೊತೆಗೆ ನಾನು ಅಸಭ್ಯವಾಗಿ ವರ್ತಿಸಲಾರೆ ಎಂದು ಹೇಳಿದ್ದೆ. ಆದರೆ  ನಾನು ಮಾಡದ ತಪ್ಪು ನನ್ನ ಬದುಕಿನ ಕಪ್ಪು ಚುಕ್ಕೆಯಾಗಿ ಉಳಿಯಿತು. ನಾನು ಈ ಬಗ್ಗೆ ಯಾವುದೇ ವಿವರ ನೀಡಿದರೂ ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಆಗ ನಾನು ಒಬ್ಬಂಟಿಯಾಗಿ ಅತ್ತು ಸುಮ್ಮನಾಗುತ್ತಿದ್ದೆ.
ಇದಾದ ಮೇಲೆ ನನ್ನ ವೃತ್ತಿಯಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ನನಗೆ ಪುರುಷರಿಗಿಂತ ಮಹಿಳೆಯರು ಹೆಚ್ಚು ಸೇಪ್ ಅನ್ನಿಸುತ್ತದೆ. ಹೀಗಾಗಿ ನನ್ನ ಸಂಪರ್ಕಕ್ಕೆ ಬರುವ ಮಹಿಳೆಯರಲ್ಲಿ ನನ್ನ ಅಮ್ಮನನ್ನು ಸಂಗಾತಿಯನ್ನ, ಪ್ರೇಮಿಯನ್ನ ಎನೇನನ್ನೋ ಹುಡುಕುತ್ತಿರುತ್ತೇನೆ. ಇಂಥಹ ಸಂದರ್ಭದಲ್ಲಿ ಅವರಿಗೆ ಮಾತನಾಡುವ ಬೈಯುವ ಸಲಹೆ ನೀಡುವ ಸ್ಪೇಸ್ ನೀಡುತ್ತೇನೆ. ಅದು ನನ್ನ ಸ್ವಭಾವ,
ನಾನು ಜೀ ನ್ಯೂಸ್ ಬೆಂಗಳೂರು ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡುವಾಗಲೂ ನಡೆದಿದ್ದು ಇದೇ ರೀತಿಯ ಘಟನೆ. ನನ್ನ ಸಹೋದ್ಯೋಗಿಯಾಗಿದ್ದ ಹೆಣ್ನು ಮಗಳು ನನ್ನ ವಿರುದ್ಧ ದೂರೊಂದರನ್ನು ನೀಡಿದ್ದರು. ನಾನು ಜೀ ನ್ಯೂಸ್ ನಲ್ಲಿ ಕೆಲಸ ಕೊಡುವುದಾಗಿ ಭರವಸೆ ನೀಡಿ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತೇನೆ ಎಂಬುದು ಅವರ ಆರೋಪವಾಗಿತ್ತು. ಈ ಆರೋಪ ಬಂದ ಮೇಲೆ ಆಕೆಯನ್ನು ಕರೆದು ಕೇಳಿದ್ದೆ. ಯಾಕೆ ನನ್ನ ಮೇಲೆ ಈ ಆರೋಪ ಮಾಡಿದೆ ಅಂತ. ಆಕೆ ನನ್ನ ಎದುರು ಕಣ್ಣೀರು ಹಾಕಿದ್ದರು.
ನಾನು ತುಂಬಾ ಸರಳವಾಗಿ ಬದುಕುವುದಕ್ಕೆ ಇಷ್ಟ ಪಡುವ ವ್ಯಕ್ತಿ. ನಾನು ಮುಖವಾಡ ಧರಿಸಲಾರೆ. ಸುಳ್ಲು  ಹೇಳಲಾರೆ. ನನಗೆ ಸರಿ ಅನ್ನಿಸುವ ಹಾಗೆ ಬದುಕುತ್ತೇನೆ. ಆದರೆ  ಬೇರೆಯವರಿಗೆ ಮೋಸ ಮಾಡುವುದು ಸುಳ್ಳು ಹೇಳುವುದು ನನಗೆ ಸಾಧ್ಯವಿಲ್ಲ. ಯಾರೋ ನನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿದರೆ ನನ್ನನ್ನು ಪ್ರೀತಿಸಬೇಡಿ ಧ್ವೇಷಿಸಿ ಎಂದು ಹೇಳಲಾರೆ. ಹಾಗೆ ಹೇಳಿದವರಿಗೆ ನಾನು ಕೃತಜ್ನತೆ ಸಲ್ಲಿಸುತ್ತೇನೆ. ಒಮ್ಮೆ ಹೀಗೆ ಅಯಿತು. ಸ್ನೇಹಿತೆಯೊಬ್ಬಳು ಉಮ್ಮಾ ಎಂದು ಮೇಸೇಜ್ ಮಾಡಿದ್ದಳು. ನನಗೆ ಉಮ್ಮಾ ಎಂದರೇನು ಎಂಬುದೇ ಆಗ್ ಗೊತ್ತಿರಲಿಲ್ಲ. ಈಗಳು ವಾಟ್ಸ್ ಅಪ್ ನ ಬಹುತೇಕ ಸಿಂಬಾಲ್ಗಳು ನನಗೆ ತಿಳಿಯುವುದಿಲ್ಲ. ಉಮ್ಮಾ ಮೇಸೇಜ್ . ನೋಡಿದ ನನ್ನ ಮಗಳು ಆಯ್ಯೋ ಆಪ್ಪನ ಕಥೆ ನೋಡು ಎಂದು ಮನೆಯಲ್ಲಿ ಎನೌನ್ಸ್ ಮಾಡಿದಳು, ಅದು ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿತ್ತು. ಯಾರೋ ಉಮ್ಮಾ ಎಂದು ಮೇಸೇಜ್ ಮಾಡಿದರೆ ಉಮ್ಮ ಅನ್ನಬಾರದೆ ಎಂಬ ಪ್ರಶ್ನೆಗೆ ನನಗೆ ಉತ್ತರ ದೊರಕಲಿಲ್ಲ. ಮಗಳಿಗೆ ಈ ಮಾತನ್ನು ಮಗಳಿಗೆ ಹೇಳುವುದು ಹೇಗೆ ಎಂಬುದು ತಿಳಿಯದು. ಆದರೆ ಮಗಳು ಅವತ್ತಿನಿಂದ ಅಪ್ಪ ಯೋಗ್ಯನಲ್ಲ ಎಂದುಕೊಂಡಿರಬಹುದು.
ಕೆಲವರು ಉಮ್ಮಾ ಎಂದು ಮೇಸೇಜ್ ಮಾಡುತ್ತಾರೆ. ಕೆಲವರು ಪಪ್ಪಿ ಕೊಡು ಎಂದು ಕೇಳುತ್ತಾರೆ. ಆಗ ಕೆಲವೊಮ್ಮೆ ನಾನು ಪಪ್ಪಿ ಎಲ್ಲಿ ಕೊಡಲಿ ಎಂದು ಜೋಕ್ ಮಾಡಿದ್ದಿದೆ. ಸುಮ್ಮನೆ ಹೇಳಿದ್ದಿದೆ. ಆದರೆ ನಾನು ಹೀಗೆ ಪ್ರತಿಕ್ರಿಯೆ ನೀಡುವುದು ಅವರ ಎಮೋಷನ್ ಜೊತೆ ಆಟವಾಡಿದಂತೆ ಅಲ್ಲವೆ ? ಈ ಪ್ರಶ್ನೆಯನ್ನು ಕೆಲವರು ಕೇಳುವುದು ಉಂಟು. ಆಗ ನಾನು ಈ ಬಗ್ಗೆ ಯೋಚಿಸುತ್ತೇನೆ. ಯಾವುದೇ ಸಂಬಂಧವನ್ನು ನಾನು ಬಳಸಿಕೊಂಡಿಲ್ಲ. ಲೈಟ್ ಆಗಿ ಜೋಕ್ ಮಾಡಿದ್ದೇನೆ. ಎಂಜಾಯ್ ಮಾಡಿದ್ದೇನೆ. ಇದಕ್ಕೆ ಕಾರಣ ನನ್ನ ಬದುಕಿನ ಭಾಗವಾಗಿರುವ ಜೀವನ ಪ್ರೀತಿ. ನಾನು ಮನುಷ್ಯರನ್ನು  ಪ್ರೀತಿಸುತ್ತೇನೆ. ಯಾರನ್ನೂ ಧ್ವೇಷಿಸಲಾರೆ. ಕೆಲವರನ್ನು ಹೆಚ್ಚು ಪ್ರೀತಿಸುತ್ತೇನೆ. ಇದೇ ಸಮಸ್ಯೆಯಾಗಿ ನಾನು ಯೋಗ್ಯ ವ್ಯಕ್ತಿ ಅಲ್ಲ ಎಂದಾಗ ಮತ್ತೆ ಅದೇ ಪ್ರಶ್ನೆ ಕಾಡುತ್ತದೆ. ನಾನು ಯೋಗ್ಯ ವ್ಯಕ್ತಿ ಅಲ್ಲವಾ ?
ಯಾಕೋ ಇವತ್ತು ಇದೆಲ್ಲ ನೆನಪಾಯಿತು. ನನ್ನ ಬಗ್ಗೆ ಜನ ಏನು ಮಾತನಾಡುತ್ತಾರೆ ಎಂಬ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನಮಗೆ ತುಂಬಾ ಆಪ್ತರಾದವರು ನೀನು ಯೋಗ್ಯನಲ್ಲ ಎಂದರೆ ಬೇಸರವಾಗುತ್ತದೆ. ಯಾವುದು ಯೋಗ್ಯ ಯಾವುದು ಯೋಗ್ಯವಲ್ಲ ಎಂಬ ಉತ್ತರ ಗೊತ್ತಿಲ್ಲದ ಪ್ರಶ್ನೆ ಎದುರಾಗುತ್ತದೆ.
ನಾನು ನನ್ನ ಬದುಕಿನಲ್ಲಿ ಇದುವರೆಗೆ ಸಾಗಿ ಬಂದ ದಾರಿಯನ್ನು ಹಿಂತಿರುಗಿ ನೋಡುತ್ತೇನೆ. ನಾನು ತಪ್ಪು ಮಾಡಿಲ್ಲ ಎಂದು ಸಮಾಧಾನವಾಗುತ್ತದೆ. ಯಾರಾದರೂ ನನ್ನ ತಪ್ಪು  ತೋರಿಸಿಕೊಟ್ಟರೆ ಅದನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿದ್ದೇನೆ. ಕೊನೆಗೆ ಹೇಳಬೇಕು ಅನ್ನಿಸುತ್ತದೆ. ನಾನು ಯೋಗ್ಯನಲ್ಲ ಎಂಬ ಹೇಳಿಕೆ ನಿಜವಿದ್ದರೂ ಇರಬಹುದು.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...