Thursday, March 13, 2008

ವೈಚಾರಿಕತೆ ಮತ್ತು ಭಾವ ಅಭಿವ್ಯಕ್ತಿ.

ನಿನಗೆ ಭಾವನೆಗಳೇ ಇಲ್ಲ !

ಈ ಮಾತನ್ನು ನಾನು ಹಲವು ಬಾರಿ ಕೇಳಿದ್ದೇನೆ। ಹಾಗೆ ನೀವು ಸಹ ಹಲವು ಸಂದರ್ಭಗಳಲ್ಲಿ ಇಂತಹ ಮಾತುಗಳನ್ನು ಕೇಳಿರಬಹುದು। ಬೇರೆಯವರಿಗೆ ಈ ಮಾತನ್ನು ಹೇಳಿರಲೂಬಹುದು। ಹಾಗಿದ್ದರೆ, ಭಾವನೆ ಎಂದರೆ ಏನು ? ಅದು ನಾವು ಇನ್ನೊಬ್ಬರಿಗೆ ನೀಡುವ ಪ್ರತಿಕ್ರಿಯೆಯೆ ? ಅಥವಾ ಬೇರೆಯವರು ಬಯಸುವ ಪ್ರತಿಕ್ರಿಯೆಯೆ ? ಭಾವನೆ ಇಲ್ಲ ಎಂದು ಹೇಳುವವರು, ಯಾರಿಗೆ ಈ ಮಾತನ್ನು ಹೇಳುತ್ತಾರೋ ಅವರಿಂದ ಎಂತಹ ಪ್ರತಿಕ್ರಿಯೆಯನ್ನು ಬಯಸುತ್ತಾರೆ ?ಈ ಪ್ರಶ್ನೆಯನ್ನು ಒಂದು ಉದಾಹರಣೆಯ ಮೂಲಕ ನೋಡಲು ಯತ್ನಿಸೋಣ। ನಾವು ನಮ್ಮ ಕ್ರಿಯೆ ಮತ್ತು ಮಾತುಗಳೆಗೆ ಬೇರೆಯವರಿಂದ ಪ್ರತಿಕ್ರಿಯೆಯನ್ನು ಬಯುಸುತ್ತೇವೆ। ಜೊತೆಗೆ ಈ ಪ್ರತಿಕ್ರಿಯೆ ತನ್ನ ಮಾತಿಗೆ ಕೃತಿಗೆ ಪೂರಕವಾಗಿರಬೇಕು ಎಂಬ ಆಶಯವನ್ನು ಹೊಂದಿರುತ್ತೇವೆ। ಯಾವಾಗ ಪ್ರತಿಕ್ರಿಯೆಯೇ ಇರುವುದಿಲ್ಲವೋ ಆಗ ನಮಗೆ ಆಘಾತವಾಗುತ್ತದೆ। ಈ ಆಘಾತವಾಗುವುದು ಬೇರೊಬ್ಬರು ಪ್ರತಿಕ್ರಿಯೆ ನೀಡಿಲ್ಲ ಎಂಬುದಕ್ಕಾಗಿ ಅಲ್ಲ, ನಮ್ಮ ಪ್ರತಿಕ್ರಿಯೆಯ ನಿರೀಕ್ಷೆ ಹುಸಿಯಾಯಿತಲ್ಲ ಎಂಬುದೇ ಈ ಆಘಾತಕ್ಕೆ ಕಾರಣ।

ಒಂದು ಮಗು ಪ್ರತಿಕ್ರಿಯೆಯಾಗಿ ಹಠ ಮಾಡುತ್ತದೆ, ರಂಪ ಮಾಡುತ್ತದೆ। ಈ ಮೂಲಕ ತನ್ನ ತಾಯಿ ಅಥವಾ ತಂದೆಯ ಲಕ್ಶ್ಯವನ್ನು ತನ್ನತ್ತ ಸೆಳೆಯುತ್ತದೆ। ಅಳುತ್ತಿರುವ ಮಗುವಿಗೆ ಅಳಬೇಡ, ಮರಿ ನಿನಗೆ ಚಾಕಲೇಟ್ ಕೊದ್ತೀನಿ ಎಂದು ಹೇಳಿದ ತಕ್ಷಣ ಮಗು ಅಳುವುದನ್ನು ನಿಲ್ಲಿಸುತ್ತದೆ। ಚಾಕಲೇಟು ಕೊಡುವುದು ಮುಂದಿನ ಮಾತು। ಆದರೆ ನಿನಗೆ ಚಾಕಲೇಟ್ ಕೊಡ್ತೀನಿ ಎಂದು ನೀಡುವ ಭರವಸೆ ಮಗುವಿಗೆ ಸಾಕು। ಇಂಥಹ ಒಂದು ಭರವಸೆಗಾಗಿ ಮಗು ಮಾತ್ರವಲ್ಲ, ಎಲ್ಲರೂ ಕಾಯುತ್ತಿರುತ್ತಾರೆ। ಹಾಗಿದ್ದರೆ ಭರವಸೆ ಅನ್ನುವುದಿದೆಯಲ್ಲ, ಅದು ಎಲ್ಲರೂ ಬೇರೆಯವರಿಂದ ಬಯಸುವಂತಹುದು। ತಮಾಷೆ ಎಂದರೆ, ಬೇರೆಯವರಿಂದ ಭರವಸೆಯನ್ನು ಬಯಸುವ ನಮಗೆ ಬರವಸೆ ನೀಡುವುದು ಗೊತ್ತಿರುವುದಿಲ್ಲ। ಹಠ ಮಾಡುವ ಮಗುವಿಗೆ ಸಾಂತ್ವನ ಹೇಳುವ, ಆ ಮಗುವಿನಲ್ಲಿ ಭರವಸೆ ಹುಟ್ಟಿಸುವುದಕ್ಕೆ ಬದಲಾಗಿ ಮಗುವನ್ನು ಗದರಿಸಿ ಬಾಯಿಮುಚ್ಚಿಸಲು ನಾವೆಲ್ಲ ಯತ್ನ ನಡೆಸುತ್ತೇವೆ।

ನನಗೆ ಈಗಲೂ ನೆನಪಿದೆ। ನಾನು ಸಣ್ಣವನಿದ್ದಾಗ ಗಲಾಟೆ ಮಾಡಿದಾಗ ಅಪ್ಪನಿಂದ ಬಡಿತ ತಿಂದಾಗ, ನನ್ನ ಅಜ್ಜಿ ನನ್ನನ್ನು ಬಾಚಿ ತಬ್ಬಿಕೊಂಡು ತನ್ನ ಸೀರೆಯ ಸೆರಗಿನಡಿಯಲ್ಲಿ ನನ್ನನ್ನು ಬಚ್ಚಿಟ್ತುಕೊಳ್ಳುತ್ತಿದ್ದಳು। ಆಗೆಲ್ಲ ಅಪ್ಪ ಹೊಡೆದ ನೋವು ಮರೆಯಾಗಿ ಒಂದು ರೀತಿಯ ರಕ್ಷಣೆಯ ಭಾವ ನನ್ನಲ್ಲಿ ಮೂಡಿ ಬಿಡುತ್ತಿತ್ತು। ಸ್ವಲ್ಪ ಸಮಯದಿಂದ ಅಜ್ಜಿಯ ಸೆರಗಿನಡಿಯಿಂದ ಹೊರಕ್ಕೆ ಬಂದು ಆಡಲು ಅಂಗಳಕ್ಕೆ ನಾನು ಒಡಿಬಿಡುತ್ತಿದ್ದೆ। ಹೀಗೆ ಬಾಲ್ಯದಲ್ಲಿ ನಾವು ಪಡೆಯುವ ಇಂಥಹ ಭರವಸೆ ಮತ್ತು ರಕ್ಷಣೆಯ ಅಭಯ ಹಸ್ತ ದೊಡ್ಡವರಾದ ಮೇಲೆ ಕಡಿಮೆಯಾಗುತ್ತದೆ। ಆಗ ನಾವು ಬೇರೆ ಬೇರೆಯವರಿಂದ ಇಂಥಹ ಭರವಸೆಯನ್ನು ಪಡೆಯಲು ಮುಂದಾಗುತ್ತೇವೆ। ನಮ್ಮ ಸಂಪರ್ಕಕ್ಕೆ ಬರುವ, ನಮಗೆ ಆತ್ಮೀಯರಾದವರಿಂದ ಈಂತಹ ಭರವಸೆಗಾಗಿ, ಭರವಸೆಯ ಭಾವನೆಗಾಗಿ ನಾವು ಕಾಯುತ್ತಿರುತ್ತೇವೆ। ಹಾಗಿದ್ದರೆ ಈ ಭಾವನೆ ಎಂದರೇನು ? ಅದು ನಾವು ಬಹಿರಂಗವಾಗಿ ಹೇಳುವ ಮಾತೇ ?ಮಾತೇ ಭಾವನೆ ಅಲ್ಲ। ಮಾತು ಭಾವನೆಯನ್ನು ಸಂವಹನ ಮಾಡುವ ಒಂದು ವಾಹಕ ಮಾತ್ರ। ಈ ವಾಹಕಕ್ಕೆ ಸ್ವಂತ ಅಸ್ಥಿತ್ವ ಇಲ್ಲ। ಮಾತಿನಲ್ಲಿ ನಾವು ಏನನ್ನು ತುಂಬುತ್ತೇವೆ ಎಂಬುದರ ಮೇಲೆ ಆ ಮಾತಿನ ಜೀವಂತಿಕೆ ತೀರ್ಮಾನವಾಗುತ್ತದೆ। ಅಂದರೆ ಭಾವನೆ ಇಲ್ಲದ ಮಾತು ಏನೂ ಅಲ್ಲ। ಮಾತಿಗೆ ಭಾವನೆ ಬೇಕು। ಭಾವನೆಯನ್ನು ಸಂವಹನ ಮಾಡಲು ಮಾತು ಬೇಕು। ಈಗ ಮತ್ತೆ ಭಾವನೆ ಹೇಗೆ ಉದ್ಭವಿಸುತ್ತದೆ ? ಎಂಬುದನ್ನು ನೋಡೋಣ।ನಾವು ಬೇರೆಯವರ ಮಾತು ಕೇಳಿದ ತಕ್ಷಣ ಅದು ಕಿವಿಯ ಮೂಲಕ ಮೆದುಳಿಗೆ ತಲುಪುತ್ತದೆ। ಮೆದುಳು ಈ ಮಾತಿಗೆ ಪ್ರತಿಕ್ರಿಯೆ ಹೇಗೆ ನೀಡಬೇಕು ಎಂದು ನಿರ್ಧರಿಸುತ್ತದೆ। ಈ ಪ್ರತಿಕ್ರಿಯೆಯಲ್ಲಿ ವೈಚಾರಿಕತೆ ಮಹತ್ವವನ್ನು ಪಡೆಯಬಹುದು, ಇಲ್ಲವೇ ಭಾವನಾತ್ಮಕತೆ ಹೆಚ್ಚಿನ ಮಹತ್ವವನ್ನು ಪಡೆಯಬಹುದು। ಯಾವಾಗಲೂ ಈ ಪ್ರತಿಕ್ರಿಯೆ ತಕ್ಷಣ ಬಂದರೆ, ಅಲ್ಲಿ ಭಾವನಾತ್ಮಕತೆ ಹೆಚ್ಚಿನ ಮಹತ್ವಪಡೆಯುತ್ತದೆ। ಮೆದುಳು ಈ ಬಗ್ಗೆ ವಿಚಾರ ಮಾಡಲು ಪ್ರಾರಂಭಿಸಿದರೆ ಆಗ ಅಲ್ಲಿ ವೈಚಾರಿಕತೆಯದೇ ಪ್ರಾಧಾನ್ಯ। ಆದರೆ ಭಾವನೆ ಎನ್ನುವುದಿದೆಯಲ್ಲ, ಅದು ಕಾರ್ಯ ಕಾರಣ ಸಂಬಂಧವನ್ನು ವಿಶ್ಲೇಷಿಸುವುದಿಲ್ಲ। ಅದು ಇನಸ್ಟೆಂಟ್ ಆಗಿ ಬರುವಂತಹುದು। ಬಹುಮಟ್ಟಿಗೆ ವಿಚಾರ ಬಹುತೇಕ ಸಂದರ್ಭದಲ್ಲಿ ನಮ್ಮನ್ನು ದಾರಿ ತಪ್ಪಿಸುತ್ತದೆ। ಯಾಕೆಂದರೆ ವಿಚಾರ ಹುಟ್ಟುವುದು ನಮ್ಮ ಭೂತಕಾಲದ ನೆನಪುಗಳ ಮೇಲೆ। ನಮ್ಮ ಮೆದುಳಿನಲ್ಲಿ ಶೇಖರಣೆಯಾದ ವಿಷಯಗಳನ್ನು ವರ್ತಮಾನದ ಮಾತು ವರ್ತನೆಯ ಜೊತೆ ತುಲನೆ ಮಾಡಿ ಒಂದು ನಿರ್ಧಾರಕ್ಕೆ ಬರುವಂತೆ ಮಾಡುವುದು ವಿಚಾರ, ಚಿಂತನೆ। ಕೆಲವೊಮ್ಮೆ ನಾನು ವಿಚಾರ ಮಾಡುವುದನ್ನೇ ವಿರೋಧಿಸುತ್ತೇನೆ। ಯಾಕೆಂದರೆ ವಿಚಾರವೇ ನಮ್ಮನ್ನು ಹಾದಿ ತಪ್ಪಿಸುತ್ತದೆ। ಪ್ರೆಶ್ ಆಗಿ ನೋಡುವುದಕ್ಕೆ ಅವಕಾಶ ನೀಡುವುದಿಲ್ಲ। ಆದರೆ ವಿಚಾರ ಮಾಡದೇ ಇರುವುದಕ್ಕೂ ನಮಗೆ ಸಾಧ್ಯವಾಗುವುದಿಲ್ಲ। ನಮಗೆ ವಿಚಾರವಂತರು ಎಂದು ಹೇಳಿಸಿಕೊಳ್ಳುವ ಚಟ।

ಈಗ ಮತ್ತೆ ಮೂಲ ವಿಷಯಕ್ಕೆ ಬರುತ್ತೇನೆ। ಅದು ಭಾವನೆಗಳೇ ಇಲ್ಲ ಎಂಬ ಹೇಳಿಕೆಯ ಬಗ್ಗೆ। ಭಾವನೆಯನ್ನು ವ್ಯಕ್ತಪಡಿಸದೇ ಇರುವುದು ಭಾವನೆಗಳೇ ಇಲ್ಲ ಎಂಬುದಲ್ಲ। ಭಾವನೆಗಳನ್ನು ವ್ಯಕ್ತಪಡಿಸಿದರೆ ಇದೇ ಎಂದೂ ಅಲ್ಲ। ಆದರೆ ಮೂಲಭೂತವಾಗಿ ಮುಜುಗರದ ಮನುಷ್ಯನಾದ ನಾನು ಭಾವನೆಗಳನ್ನು ವ್ಯಕ್ತಪಡಿಸುವುದು ಕಡಿಮೆ। ಜೊತೆಗೆ ನಾನು ಹೇಳುವ ಮಾತುಗಳು, ವ್ಯಕ್ತಪಡಿಸುವ ಅಭಿಪ್ರಾಯಗಳು ಬೇರೆಯವರ ಬೇಸರಕ್ಕೆ ಕಾರಣವಾಗಬಾರದು ಎಂಬುದು ಭಾವನೆಗಳು ಇಲ್ಲದಂತೆ ಇರುವುದಕ್ಕೆ ಕಾರಣವಾಗಿರಬಹುದು.









1 comment:

ಆಲಾಪಿನಿ said...

aadaroo bharavase nambike kaledukollabaaradallave? haagaadaag sambandhakke bele ellirutte?

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...