Sunday, July 27, 2008

ಒಂದು ಸ್ಪೋಟ ಮತ್ತು ಒಂದು ಸಾವು....!

ಗಂಡನನ್ನು ಕರೆದುಕೊಂಡು ಆಸ್ಪತ್ರೆಗೆ ಹೊರಟವಳು. ಬಸ್ ನಿಲ್ದಾಣದಲ್ಲಿ ನಿಂತವಳು ಅಲ್ಲಿಯೇ ಹೆಣವಾಗಿ ಹೋದಳು. ಬಹಳ ಹೊತ್ತು ಅವಳ ಹೆಣವನ್ನು ಕೇಳುವವರೂ ಇರಲಿಲ್ಲ. ಇದು ನಗರದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಅಸು ನೀಗಿದ ಮಧ್ಯಮ ವರ್ಗದ ಹೆಣ್ಣು ಮಗಳ ದುರಂತ ಕಥೆ. ಪ್ರಾಯಶಃ ಆಕೆ ತನ್ನ ಸಾವನ್ನು ಅಲ್ಲಿ ನಿರೀಕ್ಷಿಸರಲಿಲ್ಲ. ಬೆಳಿಗ್ಗೆ ಎದ್ದು ಕೆಲಸಕ್ಕೆ ರಜೆ ಹಾಕಿ, ಎದೆ ನೋವು ಬಂದ ಗಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದ ಆಕೆ ದಾರಿಯಲ್ಲೇ ಹೆಣವಾಗಿ ಹೋದಳು.

ಈ ಭಯೋತ್ಪಾದಕತೆಯ ಬಗ್ಗೆ ನಾವು ಮಾತನಾಡೋಣ. ಈ ಬಗ್ಗೆ ಮಾತನಾಡುವಾಗಲೂ ನನ್ನಲ್ಲಿ ಹಿಂಜರಿಕೆ ಇದೆ. ಯಾಕೆಂದರೆ ಮುಸ್ಲಿಂ ಭಯೋತ್ಪಾದಕತೆ ಎಂದ ತಕ್ಷಣ ಬಿಜೆಪಿ ವಾಸನೆ ಹೊಡೆಯಲು ಪ್ರಾರಂಭವಾಗುತ್ತದೆ. ಬಿಜೆಪಿ ರಾಜಕೀಯ ಕಾರಣಕ್ಕಾಗಿ ಇಂತಹ ಮಾತುಗಳನ್ನು ಬಳಸಿಕೊಳ್ಳಲು ಪ್ರಾರಂಭಿಸುತ್ತದೆ. ಬೇರೆ ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದ ತಕ್ಷಣ ಕಾಂಗ್ರೆಸ್ ಪಕ್ಷ ಅಲ್ಲಿ ಗಹಗಹಿಸತೊಡಗುತ್ತದೆ. ಜೆಡಿಎಸ್ ಪಕ್ಕದಲ್ಲಿ ನಿಂತು ನಗುತ್ತದೆ.

ವಿಶ್ವದ ಯಾವುದೇ ಧರ್ಮ ಜೀವವನ್ನು ಕಸಿದುಕೊಳ್ಳುವಂತೆ ಬೋಧಿಸುತ್ತದೆ ಎಂದು ನಾನು ನಂಬಿಲ್ಲ. ಹಾಗೆ ಬೋಧನೆ ಮಾಡುವ ಧರ್ಮವನ್ನು ಧರ್ಮ ಎಂದು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ನನಗೆ ಅನ್ನಿಸುವ ಹಾಗೆ ಯಾವುದೇ ಧರ್ಮದಲ್ಲಿ ಸಮಸ್ಯೆಯಿಲ್ಲ. ಧರ್ಮ ವನ್ನು ವ್ಯಾಖ್ಯಾನಿಸುವವರಲ್ಲಿ, ಇದರ ಆಚರಣೆ ಮಾಡುತ್ತ ಬಂದವರಲ್ಲಿ ಸಮಸ್ಯೆ ಇದೆ. ಈಗ ನಾವು ಮಾತನಾಡಲು ಹೊರಟಿರುವ ಮುಸ್ಲಿಮ್ ಭಯೋತ್ಪಾದಕತೆಯ ವಿಚಾರದಲ್ಲೂ ಅಷ್ಟೇ.

ವಿಶ್ವದ ಮುಸ್ಲಿಮ್ ಸಮುದಾಯ ವಿಚಿತ್ರ ಅಸಹಾಯಕತೆಯಲ್ಲಿದೆ ಎಂಬುದು ನಿಜ. ಕೊಲ್ಲಿ ರಾಷ್ಟ್ರಗಳಲ್ಲಿನ ತೈಲ ರಾಜಕೀಯ , ಆಫ್ರಿಕನ್ ರಾಷ್ಟ್ರಗಳಲ್ಲಿನ ಬಡತನ, ಪಾಕಿಸ್ಥಾನದಂತಹ ಮುಸ್ಲಿಮ್ ರಾಷ್ಟ್ರಗಳಲ್ಲಿನ ರಾಜಕೀಯ ಅಭದ್ರತೆ ಇದಕ್ಕೆ ಕಾರಣವಾಗಿರಬಹುದು. ಆದರೆ ಇದೇ ಭಯೋತ್ಪಾದಕ ಚಟುವಟಿಕೆಯನ್ನು ಸಮರ್ಥಿಸಿಕೊಳ್ಳಲು ಕಾರಣವಾಗಬಾರದು. ಮುಸ್ಲಿಮರಲ್ಲಿ ಇಂತಹ ಸಮಸ್ಯೆ ಇದೆ ಎಂಬ ಕಾರಣಕ್ಕೆ ಅವರು ಭಯೋತ್ಪಾದಕರಾಗುತ್ತಿದ್ದಾರೆ ಎಂಬ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಸಮಸ್ಯೆಯನ್ನು ರಾಜಕೀಯ ಪಕ್ಷಗಳು ನೋಡುವ ರೀತಿ ಭಿನ್ನ. ಹಿಂದೂ ದೇಶದ ಕನಸನ್ನು ಬಿತ್ತುತ್ತಿರುವ ಬೆಜೆಪಿ ಮುಸ್ಲೀಮ್ ರನ್ನೆಲ್ಲ ಭಯೋತ್ಪಾದಕರು ಎಂದು ನೋಡುತ್ತದೆ. ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಉಗ್ರಗಾಮಿ ಮುಸ್ಲಿಮರನ್ನು ಉಗ್ರಗಾಮಿಗಳು ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಅಂದರೆ ಬಿಜೆಪಿಗೆ ಮತಗಳಿಸಲು ಹಿಂದೂ ಸೆಂಟಿಮೆಂಟ್ ಅತ್ಯಗತ್ಯ. ಹಾಗೆ ಕಾಂಗ್ರೆಸ್ ಮತ್ತು ಇತರ ಸೋಕಾಲ್ಡ್ ಜಾತ್ಯಾತೀತ ಪಕ್ಷಗಳಿಗೆ ಮುಸ್ಲಿಮ್ ಒಲೈಕೆ ಬೇಕೆ ಬೇಕು.
ಇದೆಲ್ಲ ಎಂತಹ ಹುಚ್ಚುತನ ನೋಡಿ. ಭಯೋತ್ಪಾದಕ ಚಟುವಟಿಕೆಯನ್ನು ಯಾರೇ ಮಾಡಲಿ, ಅದನ್ನು ಖಂಡಿಸುವುದು ಎಲ್ಲರ ಕರ್ತವ್ಯ. ಆದರೆ ನಮ್ಮ ರಾಜಕಾರಣಿಗಳು ಈ ವಿಚಾರವನ್ನು ನೋಡುವ ರೀತಿಯೇ ಬೇರೆ. ಬಿಜೆಪಿಗೆ ಹಿಂದೂ ಭಯೋತ್ಪಾದಕತೆ, ಅದು ಯಾವುದೇ ರೀತಿಯಲ್ಲಿರಲಿ ಅದು ಭಯೋತ್ಪಾದನೆಯಾಗಿ ಕಾಣುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮ್ ಭಯೋತ್ಪಾದಕತೆಯನ್ನು ಒಪ್ಪಿಕೊಳ್ಳಲು ಹಿಂಜರಿಕೆ.
ರಾಜಕಾರಣಿಗಳು ಪ್ರತಿ ವಿಚಾರವನ್ನೂ ಲಾಭ ಮತ್ತು ನಷ್ಠದ ವ್ಯವಹಾರವನ್ನಾಗಿ ನೋಡುತ್ತಾರೆ. ಅವರಿಗೆ ಒಬ್ಬ ವ್ಯಕ್ತಿ ಎಂದರೆ ಒಂದು ಮತ. ಈ ವ್ಯಕ್ತಿಯ ಮನಸ್ಸು, ಹೃದಯ ಯಾವುದೂ ಮುಖ್ಯವಲ್ಲ. ಹೀಗಾಗಿ ಅವರಿಗೆ ಬದುಕು ಎಂಬುದು ಒಂದು ವ್ಯಾಪಾರವಾಗಿದೆ.
ಮೊನ್ನೆ ನಡೆದ ಬಾಂಬ ಸ್ಪೋಟದಲ್ಲಿ ಸತ್ತಳಲ್ಲ, ಆ ಹೆಂಗಸಿನ ಕುಟುಂಬದ ವಿವರವನ್ನು ಸಂಕ್ರಹಿಸುತ್ತಿದ್ದೆ. ಯಾರೋ ಹೇಳಿದರು, ಅವರ ಕುಟುಂಬ ಸಂಪೂರ್ಣವಾಗಿ ಕೂಲಿ ಮಾಡಿ ಬದುಕುವಂತಹುದು. ಅವರಿಗೆ ಬದುಕಲು ಬೇರೆ ದಾರಿ ಇಲ್ಲ. ಈಗ ಆಕೆ ಅಸು ನೀಗಿದ್ದಾಳೆ. ಅವಳ ಗಂಡನ ಆರೋಗ್ಯ ಸರಿಯಿಲ್ಲ. ಬಹುಶಃ ಇವರಿಗೆ ಜೇಹಾದ್ ಎಂದರೆ ಏನು ಎಂಬುದು ತಿಳಿದಿರಲಿಕ್ಕಿಲ್ಲ. ಹಿಂದೂ ರಾಷ್ಟ್ರದ ಕಲ್ಪನೆ ಅವರಿಗೆ ಇದೆಯೋ ಇಲ್ಲವೋ ತಿಳಿಯದು. ಹಾಗೆ ಯಾವ ರಾಜ್ಯದಲ್ಲಿ ಯಾವುದೇ ಸರ್ಕಾರ ಇರಲಿ, ಅದು ಅವರಿಗೆ ಮುಖ್ಯ ವಾಗಿರಲಿಕ್ಕಿಲ್ಲ. ಯಾಕೆಂದರೆ, ಅವರ ಬದುಕಿಗೆ ಇದ್ಯಾವುದೂ ಸಂಬಂಧ ಇರದ ವಿಚಾರ. ಹಿಂದೂವಾದ, ಮುಸ್ಲೀಮರ ಜೇಹಾದಿ ಎಲ್ಲವೂ ಕೂಡ ಸಾಮಾನ್ಯರಿಗೆ ಅನ್ನ ಕೋಡುವುದಿಲ್ಲ. ಅವರ ಮನಸ್ಸಿನಲ್ಲಿ ಕನಿಷ್ಠ ಕನಸುಗಳನ್ನು ತುಂಬುವುದಿಲ್ಲ. ಆದರೆ ಅವರಿಗೆ ಸಂಬಂಧವಿಲ್ಲದ ವಿಚಾರ ಅವರ ಕುಟುಂಬದ ದುರಂತಕ್ಕೆ ಕಾರಣವಾಯಿತು. ಈ ಕುಟುಂಬದ ಹೆಣ್ಣು ಮಗಳ ಬದುಕನ್ನು ಕಸಿದುಕೊಳ್ಳಲು ಕಾರಣವಾಯಿತು.
ನನಗೆ ಅನ್ನಿಸುತ್ತದೆ, ಇದೇ ಇವತ್ತಿನ ಬದುಕಿನ ಬಹುದೊಡ್ಡ ದ್ವಂದ್ವ. ನಮಗೆ ಸಂಬಂಧವಿಲ್ಲದ ವಿಚಾರಗಳು ನಮ್ಮ ಬದುಕನ್ನು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಇಂತಹ ಸಂಬಂಧವಿಲ್ಲದ ವಿಚಾರಗಳನ್ನು ನಮಗೆ ಜೋಡಿಸುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಾರೆ. ಆಧುನಿಕ ಬದುಕಿನ ಬಹುದೊಡ್ಡ ದುರಂತ ಎಂದರೆ ಇದೇ ಇರಬಹುದೇನೋ. ಇಲ್ಲಿ ನಮ್ಮ ನಮ್ಮ ನಿರ್ಧಾರಗಳನ್ನು ನಾವು ತೆಗೆದುಕೊಳ್ಳುವುದಿಲ್ಲ. ಬೇರೆಯವರು ತೆಗೆದುಕೊಂಡ ತೀರ್ಮಾನಗಳು ನಮ್ಮನ್ನು ನಿಯಂತ್ರಿಸುತ್ತವೆ. ನಮ್ಮನ್ನು ಆಳುತ್ತವೆ. ನಮ್ಮನ್ನು ಸಾವಿನ ಮನೆಗೂ ದೂಡುತ್ತವೆ.
I

Thursday, July 24, 2008

ಬದುಕನ್ನು ನಿರಾಕರಿಸುವುದೇ ಹೋರಾಟ .......!

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಅತಿ ಹೆಚ್ಚು ಚರ್ಚೆಗೆ ವಸ್ತುವಾಗುತ್ತಿರುವವರು ಕಾಮ್ರೇಡ್ ಗಳು. ಇವರಲ್ಲಿ ಸಿಪಿಎಮ್ ನ ಪ್ರಭಾವಿ ನಾಯಕ ಪ್ರಕಾಶ್ ಕಾರಟ್. ಈ ಪ್ರಕಾಶ್ ಕಾರಟ್ ಅವರನ್ನು ನೋಡಿದಾಗ ನೂರಾರು ವರ್ಷಗಳ ಹಿಂದಿನ ಕಮ್ಯುನಿಸ್ಟ್ ನಾಯಕ ಎಂದು ಅನ್ನಿಸುತ್ತದೆ. ಆತನ ಹೆಂಡತಿ ಬೃಂದಾ ಕಾರಟ್. ಅವರು ಸಹ ತಮ್ಮ ಉಗ್ರ ಎಡಪಂಥೀಯ ವಿಚಾರಧಾರೆಯನ್ನು ಆಗಾಗ ಪ್ರದರ್ಶಿಸುತ್ತಲೇ ಇರುತ್ತಾರೆ.

ಈ ದಂಪತಿಗಳು ಹಲವು ಕಾರಣಗಳಿಗಾಗಿ ಬಾರತೀಯ ಸಾರ್ವಜನಿಕ ಬದುಕಿನಲ್ಲಿ ವಿಶಿಷ್ಠರು ಎನ್ನಿಸುತ್ತದೆ. ಗಂಡ ಹೆಂಡತಿ ಇಬ್ಬರೂ ಕಮ್ಯುನಿಸ್ಟರಾಗುವುದು ಒಂದು ಸೋಜಿಗವೇ. ಆದರೆ ಇವರಿಬ್ಬರ ಹೆಸರನ್ನು ಪ್ರಸ್ತಾಪಿಸುತ್ತಿರುವುದು ಬೇರೆ ಕಾರಣಗಳಿಗಾಗಿ. ನನಗಿದ್ದ ಕುತೂಹಲ ಎಂದರೆ ಈ ಇಬ್ಬರು ಕಟ್ಟಾ ಕಮ್ಯುನಿಸ್ಟರ ಮಕ್ಕಳು ಹೇಗಿರಬಹುದು ? ಅವರೂ ಕಮ್ಯುನಿಸ್ಟರಾಗಬಹುದೆ ? ಎಂಬುದು. ಈ ಕಾರಣದಿಂದಾಗಿ ಅಲ್ಲಿ ಇಲ್ಲಿ ತಡಕಾಡಿದಾಗ ನನಗೆ ದೊರಕಿದ ಮಾಹಿತಿ ಎಂದರೆ, ಇವರಿಗೆ ಮಕ್ಕಳಿಲ್ಲ ಎಂಬುದು. ಅಷ್ಟೇ ಅಲ್ಲ, ತಮ್ಮ ಹೋರಾಟಕ್ಕೆ ಧಕ್ಕೆಯಾಗುತ್ತದೆ ಎಂದು ಅವರು ಮಕ್ಕಳು ಬೇಡ ಎಂದು ನಿರ್ಧರಿಸಿದರಂತೆ ! ಇದು ಎಷ್ಟು ನಿಜವೋ ತಿಳಿಯದು. ಆದರೆ ಇದು ನಿಜವಾಗಿದ್ದರೆ ? ತಕ್ಷಣ ನನಗೆ ಅನ್ನಿಸಿದ್ದು ಇದಕ್ಕಿಂತ ಜೀವವಿರೋಧಿ ನಿಲುಮೆ ಮತ್ತೊಂದು ಇರಲು ಸಾಧ್ಯವಿಲ್ಲ. ಯಾಕೆಂದರೆ ಮಗು ಹುಟ್ಟುವುದೇ ಒಂದು ಅಧ್ಬುತ. ಒಂದು ಜೀವಿಯೊಳಗೆ ಇನ್ನೊಂದು ಜೀವಿ, ಜೀವ ತಳೆಯುವ ಪರಿಯೇ ಹಾಗೆ. ಯೋಚಿಸಿ ನೋಡಿ. ಈ ಬದುಕಿನಲ್ಲಿ ಜೀವ ಕುಡಿಯೊಡೆಯುವ ಸಮಯವೇ ಅಂತಹುದು. ಒಂದು ಹೂವು ಅರಳುವುದನ್ನು ನೀವು ನೋಡಿದ್ದೀರಾ ? ಒಂದು ಸಸಿ ಮೊಳಕೆಯೊಡೆಯುವ ಸಂಭ್ರಮ ನಿಮಗೆ ಗೊತ್ತೆ ? ಮಳೆ ಬಂದ ಮರುದಿನ ಭೂಮಿ ಸಂತೃಪ್ತ ಭಾವದಿಂದ ನಳನಳಿಸುವ ಪರಿ ಹೇಗಿರುತ್ತದೆ ಗೊತ್ತೆ ?

ಇವೆಲ್ಲವನ್ನು ಸಂತೃಪ್ತಿಯ ಮಹಾ ಕ್ಷಣಗಳೆಂದು ನಾನು ಕರೆಯುತ್ತೇನೆ. ಒಂದು ಮಗು ಹೊಟ್ಟೆಯೊಳಗೆ ರೂಪತಳೆಯುವುದು ಹಾಗೆ. ನನಗೆ ಬಹಳಷ್ಟು ಸಂದರ್ಭಗಳಲ್ಲಿ ಹುಡುಗಿಯರನ್ನು ನೋಡಿದಾಗ ಈರ್ಷೆಯಾಗುತ್ತದೆ. ಹೆಣ್ಣು ಜೀವಕ್ಕೆ ಇರುವ ಇಂತಹ ಒಂದು ಅನುಭವ ನನಗಿಲ್ಲವಲ್ಲ ಎಂದೂ ಬೇಸರವಾಗುತ್ತದೆ. ಬದುಕಿನ ಒಂದು ಅನುಭವ ದಕ್ಕುತ್ತಿಲ್ಲವಲ್ಲ ಎಂದು ಮನಸ್ಸು ಹಪಹಪಿಸುತ್ತದೆ. ಆಗ ನೆನಪಾಗುವವರರು ಇದೇ ಉಗ್ರ ಕಮ್ಯುನಿಸ್ಟ್ ದಂಪತಿಗಳು.

ಕಮ್ಯುನಿಸಂ ಬಗ್ಗೆ ನನ್ನ ವಿರೋಧವಿಲ್ಲ. ನನ್ನ ಯೌವನದ ದಿನಗಳಲ್ಲಿ ನಾನೂ ಕಮ್ಯುನಿಸ್ಟನೇ. ಸರ್ವ ಸಮಾನತೆಯ ಸಮಾಜದ ಕನಸು ಕಂಡವನೇ. ಈಗಲೂ ಅಂತಹ ಸಮಾಜ ನಿರ್ಮಾಣವಾಗುವುದಿದ್ದರೆ ಅದಕ್ಕೆ ನನ್ನ ಬೆಂಬಲ ಇದ್ದೇ ಇದೆ. ಆದರೆ ನಮ್ಮ ಹೋರಾಟಕ್ಕೆ ತೊಂದರೆಯಾಗುತ್ತದೆ ಎಂದು ಮಕ್ಕಳೇ ಬೇಡ ಎಂದು ಹೇಳಿದ್ದನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಹಾಗೆ ಮಕ್ಕಳಾದರೆ ಹೋರಾಟಕ್ಕೆ ತೊಂದರೆಯಾಗುತ್ತದೆ ಎಂದು ಹೇಳುವವರು ಬದುಕನ್ನೇ ನಿರಾಕರಿಸಿದಂತೆ. ಬದುಕನ್ನು ಹೊರತುಪಡಿಸಿದ ಹೋರಾಟ ಇಲ್ಲ. ಬದುಕನ್ನು ಮೀರಿದ ಹೋರಾಟ ಕೂಡ ಇರುವುದು ಸಾಧ್ಯವಿಲ್ಲ. ಯಾಕೆಂದರೆ, ನಮ್ಮೆಲ್ಲರ ನಂಬಿಕೆ, ಚಿಂತನೆಗಳಿಗಿಂತ ಬದುಕು ದೊಡ್ಡದು. ಯಾರು ಬದಕನ್ನೇ ನಿರಾಕರಿಸುತ್ತಾರೋ ಅವರು ಹೋರಾಟಕ್ಕೆ ಅರ್ಥವಿಲ್ಲ. ಹಾಗೆ ಅವರು ಪ್ರಾಮಾಣಿಕರೂ ಎಂದೂ ಅನ್ನಿಸುವುದಿಲ್ಲ.

ಪ್ರಕಾಶ್ ಕಾರಟ್ ಮತ್ತು ಬೃಂದಾ ಕಾರಟ್ ಅವರ ಬಗ್ಗೆ ನನಗೆ ಪಾಪ ಅನ್ನಿಸುತ್ತದೆ. ಹೋರಾಟದ ಬೃಮೆಯಲ್ಲಿ ಬದುಕನ್ನು ನಿರಾಕರಿಸುವ ಇವರ ಬಗ್ಗೆ ಬೇಸರವಾಗುತ್ತದೆ.

Wednesday, July 23, 2008

ಹೀಗೊಂದು ಕಥೆ, ಅದರೆ ಅಲ್ಲ.............!!

ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಮಾತು. ಆ ದಿನಗಳಲ್ಲಿ ನನಗೆ ಸುತ್ತುವುದೊಂದು ಹವ್ಯಾಸ. ವರ್ಷದಲ್ಲಿ ಒಂದೆರಡು ತಿಂಗಳು ನಾನು ಕರ್ನಾಟಕದಿಂದ ನಾಪತ್ತೆಯಾಗುತ್ತಿದ್ದೆ. ಕೈಯಲ್ಲಿದ್ದ ಹಣ ಮುಗಿದ ಮೇಲೆ ಬೆಂಗಳೂರಿಗೆ ವಾಪಸಾಗುತ್ತಿದ್ದೆ. ಹೀಗೆ ಒಮ್ಮೆ ನಾನು ಹೋಗಿದ್ದು ನೇಪಾಳಕ್ಕೆ. ಉತ್ತರ ಪ್ರದೇಶವನ್ನು ಸುತ್ತಿ ಹಿಮಾಲಯ ಕಣಿವೆಯ ಮೂಲಕ ಕಠ್ಮಂಡೊಕ್ಕೆ ಹೋದವನು ನಾನು. ಹೀಗೆ ಹೋದ ಸಂದರ್ಭಗಳಲ್ಲಿ ಚಿತ್ರ ವಿಚಿತ್ರ ಜನರನ್ನು ಭೇಟಿ ಮಾಡಿ ಮಾತನಾಡುವುದು ನನ್ನ ದಿನಚರಿಯಾಗಿತ್ತು. ನನ್ನ ನೇಪಾಳದ ಭೇಟಿಯ ಸಂದರ್ಭದಲ್ಲೂ ನಾನು ಹುಡುಕುತ್ತ ಹೊರಟಿದ್ದು ಇಂತಹ ಚಿತ್ರ ವಿಚಿತ್ರ ಜನರನ್ನೇ.
ಬಹಳಷ್ಟು ಜನರಿಗೆ ಹಿಮಾಲಯ ಎಂದರೆ ಯಾವ ಭಾವನೆ ಬರುತ್ತದೆಯೋ ಗೊತ್ತಿಲ್ಲ. ಆದರೆ ಹಿಮಾಲಯ ಎಂದರೆ ನಮ್ಮಲ್ಲೆರ ಮನಸ್ಸಿನ ಹಾಗೆ . ಅಲ್ಲಿ ಹೊರಗೆ ಕಾಣುವುದಕ್ಕಿಂತ ಕಾಣದಿರುವುದೇ ಹೆಚ್ಚು. ನಾನು ಕಠ್ಮಂಡೊದಲ್ಲಿ ಒಂದು ವಾರವಿದ್ದೆ. ಅಲ್ಲಿಂದ ನಾನು ಹೊರಟಿದ್ದು ಪೊಕಾರೋ ಎಂಬ ಭಾರತ ಚೀನಾ ಗಡಿಯ ಸಮೀಪ ಇರುವ ಹಳ್ಲಿಯೊಂದಕ್ಕೆ.
ಅದು ಹಳ್ಲಿ ಎಂದರೆ ಅಂತಹ ಹಳ್ಳಿ ಏನೋ ಅಲ್ಲ. ಕೆಲವೇ ಕೆಲವು ಮನೆಗಳು. ಒಂದಿಷ್ಟು ಅಂಗಡಿಗಳು. ಅಷ್ಟೆ. ಆ ಊರಿನ ಹೊರ ವಲಯದಲ್ಲಿ ನಾನು ಭೇಟಿ ಮಾಡಿದ್ದು ಆ ವಿಚಿತ್ರ ವ್ಯಕ್ತಿಯನ್ನ. ಆತ ೯೦ ರ ಗಡಿ ದಾಟಿದವನಂತಿದ್ದ. ಮುಖದ ಮೇಲೆ ಮಾಸದ ನಗೆ. ತಲೆಯ ತುಂಬ ಬಿಳಿಯ ಕೂದಲು. ಬಿಳಿಯ ಬಟ್ಟೆ ಧರಿಸಿದ್ದ ಆತ. ನಾನು ಅವನನ್ನೆ ನೋಡುತ್ತ ನಿಂತಿದ್ದ ಹಾಗೆ ಹಿಂದಿಯಲ್ಲಿ ಆತ ಹೇಳಿದ.
"ಸತ್ಯ ಮತ್ತು ಸುಳ್ಳಿನ ನಡುವೆ ಹೆಚ್ಚಿನ ವ್ಯತ್ಯಾಸ ಇಲ್ಲ. ಸತ್ಯ ಎಂದುಕೊಂಡಿರುವುದೆಲ್ಲ ಸತ್ಯವಲ್ಲ. ಸುಳ್ಳು ಎಂದುಕೊಂಡಿರುವುದು ಸುಳ್ಳಲ್ಲ"
ಈ ಮಾತು ಕೇಳಿದ ನಾನು ನೀವು ಏನನ್ನು ಹೇಳುತ್ತಿದ್ದೀರಿ ಎಂದು ಪ್ರಶ್ನಿಸಿದೆ.
"ವಾಸ್ತವ ಮತ್ತು ಭ್ರಮೆಯ ನಡುವೆ ವ್ಯತ್ಯಾಸ ಇಲ್ಲ. ಎರಡೂ ಒಂದೇ. ನೀವು ವಾಸ್ತವ ಎಂದುಕೊಂದಿದ್ದು ಭ್ರಮೆ. ಭ್ರಮೆ ಎಂದುಕೊಂಡಿದ್ದು ವಾಸ್ತವ."
ಇದ್ಯಾಕೋ ಒಂದಕ್ಕೊಂದು ತಾಳೆಯಾಗದಂತೆ ಈತ ಮಾತನಾಡುತ್ತಿದ್ದಾನೆ ಎಂದು ಅನ್ನಿಸತೊಡಗಿತ್ತು. ಆದರೆ ಅವನ ಮುಖದಲ್ಲಿ ಇರುವ ಆಕರ್ಷಣೆ ಮತ್ತು ಒಂದು ರೀತಿಯ ಸೆಳೆತದಿಂದ ತಪ್ಪಿಸಿಕೊಳ್ಳುವುದು ಕಷ್ಟ ಅನ್ನಿಸತೊಡಗಿತು.
"ಇದು ಹಿಮಾಲಯ ಯಾಕೆ ಗೊತ್ತಾ ? ಇದು ಹಿಮಾಲಯ ಎಂದು ಹಿಂದಿನವರು ಕರೆದಿದ್ದರಿಂದ ನೀವು ಹಿಮಾಲಯ ಎಂದುಕೊಂಡಿದ್ದೀರಿ. ಇದನ್ನು ಬೇರೆ ಹೆಸರಿನಿಂದ ಕರೆದಿದ್ದರೆ, ಅದನ್ನೇ ನೀವು ಕರೆಯುತ್ತಿದ್ದೀರಿ. ಅಂದರೆ ಹಸರೇ ವಸ್ತುವಲ್ಲ. ಹೆಸರು ವಸ್ತುವನ್ನು ಗುರುತಿಸುವ ಸಾಧನ ಮಾತ್ರ. ಆದರೆ ನೀವೆಲ್ಲ ಹೆಸರನ್ನೇ ವಸ್ತು ಎಂದುಕೊಳ್ಳುತ್ತೀರಿ. ಉದಾಹರಣೆಗೆ ನಿಮ್ಮ ಹೆಸರು ಏನು ಹೇಳಿ ?"
ನಾನು ನನ್ನ ಹೆಸರು ಹೇಳಿದೆ.
"ಈಗ ನೀವ್ಉ ಯಾರು ಎಂದು ಪ್ರಶ್ನಿಸಿದರೆ ನಿಮ್ಮ ಹೆಸರನ್ನು ನೀವು ಹೇಳುತ್ತೀರಿ. ಆದರೆ ಅದು ನಿಮ್ಮ ಹೆಸರು ಮಾತ್ರ, ಅದೇ ನೀವಲ್ಲ. ನಿಮ್ಮ ಹೆಸರು ಎಂದು ನೀವು, ಈ ಜಗತ್ತು ನಂಬಿರುವುದರಿಂದ ಒಂದು ಅರ್ಥದಲ್ಲಿ ಅದು ನಿಜ. ಆದರೆ, ನಿಜ್ವಾಗಿ ಹೇಳುವುದಾದರೆ ಹೆಸರು ನೀವಲ್ಲವೇ ಅಲ್ಲ. "
ನಾನು ಯಾವ ಪ್ರಶ್ನೆಯನ್ನು ಕೇಳದೇ ಅವರು ಹೇಳುತ್ತಿದ್ದುದನ್ನೇ ಕೇಳುತ್ತಿದ್ದೆ. ಆದರೆ ಇವರು ಯಾರು ಎಂದು ತಿಳಿದುಕೊಳ್ಳಬೇಕು ಎಂದು ಅನ್ನಿಸುತ್ತಿತ್ತು. ಅವರ ಹೆಸರನ್ನು ಕೇಳಬೇಕು ಎಂದು ಬಾಯಿ ತೆರೆಯಬೇಕು ಎಂದುಕೊಳ್ಳುವಷ್ಟರಲ್ಲಿ ಅವರು ಹೇಳತೊಡಗಿದರು.
"ನನಗೆ ನನ್ನ ಹೆಸರು ಮುಖ್ಯವಲ್ಲ. ಯಾಕೆಂದರೆ ಹೆಸರು ನಾನಲ್ಲ. ಆದರೆ ನಿಮಗೆ ಹೆಸರು ಮುಖ್ಯ. ಯಾಕೆಂದರೆ ಹೆಸರನ್ನ್ಜು ಬಿಟ್ಟು ವ್ಯಕ್ತಿಯನ್ನು ಗುರುತಿಸುವ ಮಟ್ಟಕ್ಕೆ ನೀವು ಏರಿಲ್ಲ. ನಿಮಗೆ ಇರುವ ಕುತೂಹಲ ಇರುವ ಕಾರಣಕ್ಕೆ ಹೇಳುತ್ತೇನೆ. ಸುಕೋಮಲ ಸ್ವಾಮಿ ಅಂತ ನನ್ನ ಹೆಸರು "
ಅವರು ಅಷ್ಟೆ. ಹೆಸರಿಗೆ ತಕ್ಕ ಹಾಗೆ ಸುಕೋಮಲ. ಮಾತಿನಲ್ಲಿ ಅದೆಂತಹದೋ ಸೆಳೆತ. ಅವರು ಹಾಗೆ ಮಾತನಾಡುತ್ತಲೇ ಇದ್ದರು.
"ಇಂದಿಗೆ ಇಷ್ಟೇ ಸಾಕು. ನಾಳೆ ಸಾಧ್ಯವಾದರೆ ಮಾತನಾಡೋಣ "
ಹೀಗೆಂದವರೇ ಸರಸರನೇ ಅಲ್ಲಿಂದ ಹೊರಟರು. ಹಾಗೆ ಬಿಳಿಯ ಹಾಲಿನ ಹಾಗಿದ್ದ ಮೋಡಗಳ ನಡುವೆ ಹೆಜ್ಜೆ ಹಾಕುತ್ತಿದ್ದಂತೆ ಕಂಡು ಬಂತು. ನಾನು ಅವರು ಹೋದ ಮೇಲೆ ಬಹಳಷು ಹೊತ್ತು ಅಲ್ಲಿಯೇ ನಿಂತಿದ್ದೆ. ಕೊನೆಗೆ ಹಾಗೆ ಹೆಜ್ಜೆ ಹಾಕುತ್ತ ಪೊಕಾರೋ ಎಂಬ ಹಳ್ಳಿಯತ್ತ ಬಂದೆ. ಆಗಲೇ ಹೊಟ್ಟೆ ತಾಳ ಹಾಕುತ್ತಿತ್ತು. ತಿನ್ನುವುದಕ್ಕೆ ಏನಾದರೂ ಸಿಗಬಹುದಾ ಎಂದು ಹುಡುಕುತ್ತ ಆ ಹಳ್ಳಿಯ ತಟ್ಟಿ ಬಿಡಾರದಂತಹ ಹೋಟೆಲ್ಲ್ಲಿಗೆ ಬಂದೆ. ಆಗಲೂ ನನ್ನ ತಲೆಯಲ್ಲಿ ಕೊರೆಯುತ್ತಿದ್ದುದು ಸುಕೋಮಲ ಸ್ವಾಮಿ ಹೇಳಿದ ಮಾತುಗಳು. ಈ ಚಳಿಯಲ್ಲಿ ಈ ಮನುಷ್ಯ ಎಲ್ಲಿ ಹೋಗಿರಬಹುದು ಎಂದು ಯೋಚಿಸುತ್ತ ಕುಳಿತ್ತಿದ್ದವನ ಮುಂದೆ ಊಟದ ತಟ್ಟೆ ಬಂತು.
ಊಟವನ್ನು ತಂದಿಟ್ಟ ಹೆಣ್ಣು ಮಗಳನ್ನು ಪ್ರಶ್ನಿಸಿದೆ.
ಸುಕೋಮಲ ಸ್ವಾಮಿ ಎಷ್ಟು ವರ್ಷದಿಂದ ಈ ಪ್ರದೇಶದಲ್ಲಿದ್ದಾರೆ ?
ಆಕೆ ನನ್ನತ್ತ ಪ್ರಶ್ನಾರ್ಥಕವಾಗಿ ನೋಡಿದಳು.
"ಸುಕೋಮಲ ಸ್ವಾಮಿಗಳಾ ? ಅವರು ತೀರಿಹೋಗಿ ಹಲವು ವರ್ಷಗಳೇ ಆಗಿರಬಹುದು. ನನ್ನ ಅಜ್ಜ ಆಗಾಗ ಅವರ ಹೆಸರನ್ನು ಪ್ರಸ್ತಾಪಿಸುತ್ತಿದ್ದ. "
ಆ ಚಳಿಯಲ್ಲಿ ನನ್ನ ಮೈ ಬೆವರತೊಡಗಿತು. ಹಾಗೆ ಸುಕೋಮಲ ಸ್ವಾಮಿಯ ಜೊತೆ ನಾನು ನಡೆಸಿದ ಮಾತುಕತೆ ಕಣ್ನು ಮುಂದೆ ಬಂದಂತಾಗಿ ತಲೆಯನ್ನು ಹಿಡಿದುಕೊಂಡು ಹಾಗೆ ಕುಳಿತುಬಿಟ್ಟೆ.

Tuesday, July 22, 2008

ಗಾಂಧಿ ಮತ್ತು ................

ನಿನ್ನೆ ಲೋಕಸಭೆಯಲ್ಲಿ ನಡೆದ ಘಟನೆ ಜನತಂತ್ರಪ್ರೇಮಿಗಳಿಗೆಲ್ಲ ಆಘಾತವನ್ನು ಉಂಟುಮಾಡಿದ್ದರೆ ಅದು ತುಂಬಾ ಸಹಜ. ನಮ್ಮ ಪ್ರತಿನಿಧಿಗಳು, ಎಲ್ಲರ ಎದುರಿಗೆ ಹಣ ಥೈಲಿಯನ್ನು ಪ್ರದರ್ಶಿಸಿದ್ದು ಭಾರತದ ಪ್ರಜಾಪ್ರಭುತ್ವದ ಇತಿಹಾಸಲ್ಲಿ ಒಂದು ಕಪ್ಪು ಚುಕ್ಕೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇದು ಏಕಾಏಕಿ ನಡೆದ ಘಟನೆಯಲ್ಲ. ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನಡೆದ ಜೆ ಎಮ್ ಎಮ್ ಹಗರಣ ಎಲ್ಲರಿಗೂ ನೆನಪಿದೆ. ಹಾಗೆ ಕರ್ನಾಟಕದಲ್ಲಿ ಇತ್ತೀಚಿಗೆ ನಡೆದ ರಾಜಕೀಯ ವಿದ್ಯಮಾನಗಳು. ಅಂದರೆ ಭಾರತದ ರಾಜಕಾರಣ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ. ಇಂತಹ ಸ್ಥಿತಿಗೆ ಏನು ಕಾರಣ ಯೋಚಿಸಿ ನೋಡಿ. ಸ್ವಾತಂತ್ರ್ಯಾನಂತರದ ಮೊದಲ ಹತ್ತು ವರ್ಷಗಳು ದೇಶ ಸ್ವಾತಂತ್ರ್ಯದ ಖುಶಿಇಯಲ್ಲೇ ಸಂಭ್ರಮದಲ್ಲೇ ಕಳೆದು ಹೋಯಿತು. ಹಾಗೆ ಆಗಿನ ರಾಜಕಾರಣಿಗಳು ಮಹಾತ್ಮಾ ಗಾಂಧಿಯವರ ನೆರಳಿನಲ್ಲಿ ಬೆಳೆದವರೂ ಅವರ ಹೆಸರು ಹೇಳಿ ಮತಪಡೆಯುವವರೂ ಆಗಿದ್ದರಿಂದ ಈಗಿನಷ್ಠು ಕೆಟ್ಟಿರಲಿಲ್ಲ. ೭೦ ರ ದಶಕದಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಯುಗ ಪ್ರಾರಂಭವಾಯಿತು. ಮಹಾತ್ಮಾ ಗಾಂಧಿಯವರ ಹೆಸರು ಇಂದಿರಾಗಾಂಧಿಯವರ ಹೆಸರಿನಡಿಯಲ್ಲಿ ಮರೆಯಾಯಿತು. ವ್ಯಕ್ತಿ ಪೂಜೆಯನ್ನು ಇಷ್ಟಪಡುತ್ತಿದ್ದ ಇಂದಿರಾ ಭಟ್ಟಂಗಿಗಳ ಬಹುಫರಾಕ್ ಅನ್ನು ತುಂಬಾ ಇಷ್ಟಪಡುತ್ತಿದ್ದರು. ಹಾಗೆ ಭಾರತದ ರಾಜಕಾರಣದಿಂದ ಗಾಂಧಿ ಟೋಪಿ ರಾಜಕಾರಣವನ್ನು ಹೊರದಬ್ಬಿದ್ದರು. ಇಂದಿರಾ ಈಸ್ ಇಂಡಿಯಾ ಎಂಬ ಸ್ಥಿತಿಯನ್ನು ನಿರ್ಮಿಸಿಬಿಟ್ಟರು. ಆಗಲೆ ರಾಜಕೀಯ ಮಧ್ಯವರ್ತಿಗಳು, ಧಗಾಕೋರರು, ಬೇರೆ ಬೇರೆ ಹಿತಾಸಕ್ತಿಗಳನ್ನು ರಕ್ಷಿಸುವ ಲಾಬಿಗಳ ಏಜೇಂಟರು ರಾಜಕೀಯದಲ್ಲಿ ಪ್ರಾಧಾನ್ಯತೆ ಪಡೆಯತೊಡಗಿದರು. ಮಾಜಿ ಡಕಾಯಿತರು. ಕಳ್ಳರು ಸುಳ್ಳರು ಶಾಸಕರಾಗಿ ವಿಜೃಂಭಿಸತೊಡಗಿದರು. ತಾತ್ವಿಕತೆ ಇಲ್ಲದ ರಾಜಕಾರಣ ಪ್ರಾಧಾನ್ಯತೆ ಪಡೆಯತೊಡಗಿದ ಮೇಲೆ ಕಾಂಚಾಣ ರಾಜಕೀಯದಲ್ಲಿ ಅತಿ ಮುಖ್ಯವಾಗತೊಡಗಿತು.
ಕರ್ನಾಟಕದಲ್ಲಿ ಕಳೆದ ಚುನಾವಣೆಯ ನಂತರದ ಸ್ಥಿತಿಯನ್ನೇ ನೋಡಿ. ಗಣಿ ದೊರೆಗಳು ಯಡೀಯೂರಪ್ಪ ಸರ್ಕಾರದಲ್ಲಿ ಯಾರು ಯಾರು ಸಚಿವರಾಗಬೇಕು ಎಂದು ನಿರ್ಧರಿಸುವ ಸ್ಥಿತಿ ಬಂತು. ಸ್ವತಃ ಯಡಿಯೂರಪ್ಪನವರೆ, ಮುಖ್ಯಮಂತ್ರಿಯಾದರೂ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಅವರ ಅಣತಿಯಂತೆ ನಡೆಯುವಂತಾಯಿತು. ಪಕ್ಷೇತರ ಶಾಸಕರು, ಸರ್ಕಾರಕ್ಕೆ ಬೆಂಬಲ ನೀಡಿದ್ದು, ಜೆಡಿಎಸ್ ಕಾಂಗ್ರೆಸ್ ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದು ಗಣಿ ದೊರೆಗಳ ಹಣದ ಥೈಲಿಯ ಪ್ರಭಾವದಿಂದ ಎಂದು ಹೇಳುವ ಅಗತ್ಯವಿಲ್ಲ. ರಾಜ್ಯಕ್ಕೆ ಸುಭದ್ರ ಸರ್ಕಾರ ಬರಲಿ ಎಂಬ ಕಾರಣಕ್ಕೆ ಈ ಶಾಸಕರು ಪಕ್ಷಾಂತರ ಮಾಡಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ನಂಬಿದ್ದರೆ ಅವರಂತಹ ಮೂರ್ಖರು ಇನ್ನೊಬ್ಬರು ಇರಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಹುಮತ ಸಾಧಿಸಲು ಕಾರಣವಾದ ಹಣ, ದೆಹಲಿಯಲ್ಲಿ ಡಾ. ಮನಮೋಹನ್ ಸಿಂಗ್ ಸರ್ಕಾರ ಬಹುಮತ ಸಅಬೀತುಪಡಿಸಲು ಕಾರಣವಾಯಿತು. ಕರ್ನಾಟಕದಲ್ಲಿ ಬಿಜೆಪಿ ಹಣದ ಪ್ರಭಾವ ಬೀರಿ ಶಾಸಕರನ್ನು ಸೆಳೆಯುತ್ತಿದೆ ಎಂದು ಆರೋಪ ಮಾಡಿದ್ದು ಕಾಂಗ್ರೆಸ್. ದೆಹಲಿಯಲ್ಲಿ ಡಾ. ಮನಮೋಹನ್ ಸಿಂಗ್ ಸರ್ಕಾರ ಹಣದ ಪ್ರಭಾವ ಬೀರಿ ವಿಶ್ವಾಸ ಮತ ಗೆದ್ದಿದೆ ಎಂದು ಆರೋಪ ಮಾಡಿದ್ದು ಬಿಜೆಪಿ. ಅಂದರೆ ಹಣದ ಪ್ರಭಾವದಿಂದ ರಾಜಕಾರಣವನ್ನು ರಾಢಿಯನ್ನಾಗಿ ಮಾಡಿದ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ವಿಭಿನ್ನ ಸಂದರ್ಭದಲ್ಲಿ ವಿಭಿನ್ನ ರೂಪದ ನಿಲುಮೆಯನ್ನು ಪ್ರಕಟಿಸಿವೆ. ಕರ್ನಾಟಕದಲ್ಲಿ ಹಣದ ಪ್ರಭಾವದ ಮೂಲಕ ಯಡೀಯೂರಪ್ಪ ಸರ್ಕಾರ ಉಳಿದುಕೊಂಡಿದ್ದು ಕಾಂಗ್ರೆಸ್ ಗೆ ಪಥ್ಯವಲ್ಲ. ದೆಹಲಿಯಲ್ಲಿ ಹಣದ ಪ್ರಭಾವದ ಮೂಲಕ ಡಾ. ಮನಮೋಹನ್ ಸಿಂಗ ಸರ್ಕಾರ ಉಳಿದುಕೊಂಡಿದ್ದು ಬಿಜೆಪಿಗೆ ಪಥ್ಯವಾಗುತ್ತಿಲ್ಲ. ಇದು ನಮ್ಮ ರಾಜಕೀಯ ,ರಾಜಕಾರಣಿಗಳು ಯಾವ ಹಂತ ತಲುಪಿದ್ದಾರೆ ಎಂಬುದನ್ನು ತೋರಿಸುತ್ತದೆ. ಯಾವುದೇ ನೈತಿಕತೆ ಇಲ್ಲದ, ಅಧಿಕಾರವೇ ಪರಮ ಎಂದು ನಂಬಿರುವ ಚಾಂಡಾಲ ರಾಜಕಾರಣಿಗಳು ಇಂದು ದೇಶವನ್ನು ಆಳುತ್ತಿದ್ದಾರೆ. ಅವರಿಗೆಲ್ಲ ರಾಜಕಾರಣ ಎಂದರೆ ವ್ಯಾಪಾರ, ದಂಧೆ. ಇಂಥವರು ನಮ್ಮ ನಾಯಕರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಇವರನ್ನೆಲ್ಲ ಹೊರದಬ್ಬಿ ಹೊಸ ರಾಜಕಾರಣದ ಕನಸು ಕಾಣುವುದೊಂದೇ ನಾವು ಈಗ ಮಾಡಬಹುದಾದ ಕೆಲಸ,

Saturday, July 19, 2008

ಸಾಯಿಬಾಬಾ ಕಣ್ಣು ಕಣ್ಣು ಬಿಟ್ಟ....!

ಈ ದೇಶದಲ್ಲಿ ಎಲ್ಲವೂ ಮಾರಾಟದ ವಸ್ತು. ಎಲ್ಲವೂ ಶೋಷಣೆಯ ವಸ್ತು. ಇದರಲ್ಲಿ ದೇವರೂ ಕೂಡ ಹೊರತಾಗಿಲ್ಲ. ದೇವರು ಇದ್ದರೆ ಆತ ಸರ್ವ ವ್ಯಾಪಿ. ಆತ ಯಾವುದೋ ದೇವಸ್ಥಾನಕ್ಕೆ, ಮಸೀದಿಗೆ, ಚರ್ಚಿಗೆ ಸೀಮಿತವಾಗಿ ಇರಲು ಸಾಧ್ಯವಿಲ್ಲ. ಆದರೆ ದೇವರ ಏಜೆಂಟರು, ದೇವರ ಹೆಸರು ಹೇಳಿಹೊಟ್ಟೆ ಹೊರೆದುಕೊಳ್ಳುವವರು, ದೇವರನ್ನೇ ಮಾರಾಟಕ್ಕೆ ಇಟ್ಟುಬಿಡುತ್ತಾರೆ. ಬೆಂಗಳೂರಿನಂತಹ ನಗರದಲ್ಲಿ ಭೂ ಮಾಫಿಯಾಕ್ಕೂ ದೇವರಿಗೂ ಎಲ್ಲಿಲ್ಲದ ಸಂಬಂಧ. ಯಾವುದೇ ಸಾರ್ವಜನಿಕ ಭೂಮಿ ಹೊಡೆಯಬೇಕೆಂದರೆ, ಅಲ್ಲಿ ಮೊದಲು ಮಾಡುವ ಕೆಲಸ ಎಂದರೆ, ದೇವರ ಮೂರ್ತಿಯನ್ನು ತಂದಿಟ್ಟು ಬಿಡುವುದು. ಃಇಗೆ ಈ ನಗರದ ಬಹುತೇಕ ವೃತ್ತಗಳಲ್ಲಿ ದೇವರು ಬಂದು ಕುಳಿತಿದ್ದಾನೆ. ಆತ ಬಿಸಿಲಿಗೆ ಮಳೆಗೆ ತೊಯ್ಯಬಾರದೆಂದು ಭಕ್ತರು ಕಟ್ಟದ ಕಟ್ಟಿದ್ದಾರೆ. ಅಲ್ಲಿ ಪೂಜಾರಿಯೊಬ್ಬ ಬಂದು ಕುಳಿತಿದ್ದಾನೆ. ಇದರೊಂದಿಗೆ ಸರ್ವಶಕ್ತನಾದ ದೇವರು ಆ ರಸ್ತೆಯಲ್ಲಿ ಬರುವ ವಾಹನಗಳ ಮೇಲೆ ಮತ್ತು ಜನರ ಮೇಲೆ ನಿಗ ಇಡುವ ಪೊಲೀಸನಂತಾಗಿದ್ದಾನೆ. ಅವನನ್ನು ಈ ಸ್ಥಿತಿಗೆ ಇಳಿಸಲಾಗಿದೆ.
ಬಿ.ವಿ. ವೈಕುಂಠರಾಜು ಅವರ ಉದ್ಭವ ನಮಗೆಲ್ಲ ಗೊತ್ತು. ಅದು ಸಿನೆಮಾ ಆಗಿಯೂ ಯಶಸ್ವಿಯಾಗಿದೆ. ರಸ್ತೆಯಾಗದಂತೆ ತಡೆಯಲು ದೇವರಮೂರ್ತಿಯನ್ನು ತಂದಿಟ್ಟು ಅದು ಪಡೆದುಕೊಳ್ಳುವ ಬೇರೆ ಬೇರೆ ಆಯಾಮಗಳು ಅಲ್ಲಿ ಬಿಚ್ಚಿಕೊಳ್ಳುತ್ತದೆ. ಈಗ ಭೂಗಳ್ಳರು ಮಾಡುತ್ತಿರುವುದು ಇದೇ ಕೆಲಸವನ್ನೇ. ಇವರ ಕೃತ್ಯದಿಂದಾಗಿ ಎಲ್ಲ ವೃತ್ತಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದೇವರು ಬಂದು ಕುಳಿತಿದ್ದಾನೆ. ಕಳ್ಳರಿಂದ ನಮ್ಮನ್ನು ರಕ್ಷಿಸಬೇಕಾದ ದೇವರು, ಭೂಗಳ್ಳರಿಂದಾಗಿ ವಾಹನಗಳ ಹೊಗೆ ಕುಡಿಯುತ್ತ, ಶಬ್ದ ಮಾಲಿನ್ಯದಿಂದ ಬಳಲುವಂತಾಗಿದೆ.
ನಮಗೆಲ್ಲ ದೇವರು ಬೇಕು. ದೇವರಿಗೆ ನಾವು ಬೇಕೋ ಬೇಡವೋ ತಿಳಿಯದು. ಆದರೆ ನಮಗೆ ಬೇಕಾದ ದೇವರನ್ನು ಸರ್ಕಲ್ ಕಾಯುವುದಕ್ಕೆ ಮಕ್ಕಳು ಆಟವಾಡುವ ವೈದಾನದಲ್ಲಿ ಮಧ್ಯ ಕುಳಿತುಕೊಳ್ಳುವುದಕ್ಕೆ ಬಳಸಬಾರದು. ನಮ್ಮ ಹಲ್ಕಾ ವ್ಯವಹಾರಗಳಿಗೆ ದೇವರನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಇಂತಹ ಸ್ಥಿತಿಯಲ್ಲಿ ಸರ್ಕಾರ ಮತ್ತು ಸ್ಥಳಿಯ ಸಂಸ್ಥೆಗಳ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಸಾರ್ವಜನಿಕ ಸ್ಥಳದಲ್ಲಿ ಬಂದು ಕುಳಿತುಕೊಳ್ಳುವ ದೇವರನ್ನು ಸ್ಥಳಾಂತರಿಸಬೇಕು. ಇದಕ್ಕೆ ಪ್ರಾಯಶಃ ದೇವರೂ ಕೂಡ ವಿರೋಧವನ್ನು ವ್ಯಕ್ತಪಡಿಸಲಾರ.
ಈ ಎಲ್ಲ ವಿಚಾರಗಳನ್ನು ಪ್ರಸ್ತಾಪಿಸುತ್ತಿರುವುದಕ್ಕೆ ಪ್ರಮುಖ ಕಾರಣ, ಬೆಂಗಳೂರಿನ ಮನೆಯೊಂದರಲ್ಲಿ ಸಾಯಿಬಾಬು ಮೂರ್ತಿ ತನ್ನ ಎಡಗಣ್ಣನ್ನು ತೆರೆದುಕುಳಿತಿದ್ದು. ಈ ದೇವರಿಗೆ ಬೇರೆ ಕೆಲಸ ಇಲ್ಲವೆ ? ಎಲ್ಲ ಬಿಟ್ಟು ಬೆಂಗಳೂರಿನ ಯಾವುದೋ ಒಂದು ಮನೆಗೆ ಬಂದು ಕಣ್ಣು ಬಿಡುವ ಅಗತ್ಯವಾದರೂ ಏನಿತ್ತು ? ಆತ ಪವಾಡ ಮಾಡುವುದಿದ್ದರೆ ಬೇರೆ ಯಾವುದೋ ರೀತಿಯಲ್ಲಾದರೂ ಪವಾಡ ಮಾಡಬಹುದಿತ್ತು. ಅದನ್ನು ಬಿಟ್ಟು ಕಣ್ಣು ಬಿಟ್ಟು ಕಣ್ಣು ಹೊಡೆದು ಪವಾಡ ಮಾಡುವ ಅಗತ್ಯ ಇರಲಿಲ್ಲ.
ದೇವರು, ಆದ್ಯಾತ್ಮ ಎಲ್ಲವೂ ತುಂಬಾ ಖಾಸಗಿಯಾದದ್ದು. ಅದು ಪ್ರಕೃತಿ ಮತ್ತು ಮನುಷ್ಯರ ನಡುವಿನ ಖಾಸಗಿ ಮಾತುಕತೆ. ಅದು ಪ್ರೇಮಿಸುವ ಎರಡು ಹೃದಯಗಳ ನಡುವಿನ ಪಿಸು ಮಾತಿನ ಹಾಗೆ. ಇದೆಲ್ಲ ಸಾರ್ವಜನಿಕವಾಗಿ ಮಾಡುವ ಕೆಲಸವಲ್ಲ. ದೇವರು ನಮ್ಮ ನಮ್ಮ ಹೃದಯಗಳಲ್ಲಿ ಇರಲಿ. ಆತ ನಮ್ಮ ಜೊತೆ ಮಾತನಾಡುತ್ತ ನಮ್ಮನ್ನು ಎಚ್ಚರಿಸುತ್ತ ಇರಲಿ. ನಾವು ತಪ್ಪು ಮಾಡಲು ಮುಂದಾದಾಗ ಇದು ಸರಿಯಲ್ಲ ಎಂದು ನಮ್ಮ ನಮ್ಮ ಕಿವಿಗಳಲ್ಲಿ ಹಿತವಚನ ನುಡಿಯಲಿ. ಆಗ ದೇವರ ಘನತೆಯೂ ಹೆಚ್ಚುತ್ತದೆ. ಅದನ್ನು ಬಿಟ್ಟು ಕಳ್ಳ ಕಾಕರ ಜೊತೆ, ಸರ್ಕಲ್ ಗಳಲ್ಲಿ ಬಂದು ಕುಳಿತರೆ, ಯಾರದೋ ಮನೆಯಲ್ಲಿ ಕಣ್ಣು ಮೂಗು, ಇನ್ನು ಏನೇನೂ ಬಿಟ್ಟರೆ, ಅದು ಆತನಿಗೂ ಒಳ್ಳೆಯದಲ್ಲ. ದಯಾಮಯನಾದ ದೇವರಿಗೆ ಇದೆಲ್ಲ ಅರ್ಥವಾಗುತ್ತದೆ ಎಂದು ನಂಬೋಣ.

ಬರೆಯುವುದೆಂದರೆ..........

ಬಹಳ ದಿನಗಳಿಂದ ನಾನು ಏನೂ ಬರೆಯಲಿಲ್ಲ। ಬರೆಯುವುದಕ್ಕೆ ಏನೂ ಇರಲಿಲ್ಲವಾ ? ಗೊತ್ತಿಲ್ಲ। ಕಚೇರಿಯ ಕೆಲಸದ ನಡುವೆ ಬರೆಯುವುದಕ್ಕೆ ಮನಸ್ಸಾಗಲಿಲ್ಲ ಎನ್ನುವುದು ಹೆಚ್ಚು ಸರಿ। ಬರೆಯುವುದು ಎಂದರೆ ಹಾಗೆ। ಮನಸ್ಸಿನ ಯಾವುದೋ ಮೂಲೆಯಲ್ಲಿ ಕುಳಿತ ವಿಚಾರ ಮಗು ಹೊಟ್ಟೆಯಲ್ಲಿ ಬೆಳೆದ ಹಾಗೆ ಬೆಳೆಯಬೇಕು। ಹಾಗೆ ಅದು ಹೊರ ಬರುವುದಕ್ಕೆ ಸಿದ್ಧವಾಗಬೇಕು। ಕೆಲವೊಮ್ಮೆ ನಾನು ಹೇಳುವುದಕ್ಕೆ ಏನು ಇಲ್ಲ ಅನ್ನಿಸಿಬಿಡುತ್ತದೆ। ಆಗ ಹೇಳುವುದರಲ್ಲಿ ಅರ್ಥವಿಲ್ಲ। ಜೊತೆಗೆ ಬರೆಯುವುದು ಇದೆಯಲ್ಲ, ಅದು ಬೇರೆಯವರಿಗಾಗಿ ಹೇಳುವುದು ಎಂದು ನಾನು ಅಂದುಕೊಂಡಿಲ್ಲ । ಬರೆಯುವುದು ಎಂದರೆ ನಮ್ಮೊಡನೆ ನಾವು ಮಾತನಾಡಿಕೊಳ್ಳುವುದು। ನಾವು ಯಾವಾಗ ಬೇರೆಯವರಿಗಾಗಿ ಬರೆಯುತ್ತೇವೆ ಎಂದು ಅಂದುಕೊಳ್ಳುತ್ತೇವೆಯೋ ಆಗ ನಮ್ಮ ಬರವಣಿಗೆ ಪ್ರದರ್ಶನ ಪ್ರಿಯತೆಯಿಂದ ಸಾಯುತ್ತದೆ। ಸತ್ಯ ಎಲ್ಲಿಯೋ ಅಡಗಿ ಕುಳಿತುಕೊಂಡು ಬಿಡುತ್ತದೆ। ಆದರೆ ನಮ್ಮ ಜೊತೆಗೆ ನಾವು ಮಾತನಾಡಿಕೊಳ್ಳುವುದು ಹಾಗಲ್ಲ। ಅಲ್ಲಿ ನಡೆಯುವುದು ಸತ್ಯದ ಜೊತೆಗಿನ ಮುಖಾಮುಖಿ। ಸತ್ಯವನ್ನು ಹುಡುಕುವ ನಿರಂತರ ಯತ್ನ।
ಬಹಳಷ್ಟು ಜನ ತಮಗಾಗಿ ತಾವು ಬರೆಯುವುದಿಲ್ಲ। ಬೇರೆಯವರಿಗಾಗಿ ಬರೆಯುತ್ತಾರೆ। ಬೇರೆಯವರ ಪ್ರಶಂಸೆಗಾಗಿ ಬರೆಯುತ್ತಾರೆ। ನಾನು ಎಷ್ಟು ರುಚಿಕಟ್ಟಾಗಿ ಬರೆದಿದ್ದೀನಿ ಗೊತ್ತಾ ಎಂದು ಕೇಳುವವರನ್ನು ನಾನು ನೋಡಿದ್ದೇನೆ। ಬರೆವಣಿಗೆಯನ್ನು ರಚಿಕಟ್ಟಾಗಿ ಮಾಡಲು ಅದು ಅಡುಗೆಯಾ ? ಅಲ್ಲ। ಇಂತಹ ಮಾತುಗಳು ಬರವಣಿಗೆಯ ಮೂಲ ಉದ್ದೇಶವನ್ನೇ ಪ್ರಶ್ನಿಸುವಂತಹುದು। ಬರವಣಿಗೆಯನ್ನ ಒಂದು ಮಾರಾಟದ ವಸ್ತುವನ್ನಾಗಿ ಮಾಡುವುದನ್ನು ನಾನು ಒಪ್ಪಲಾರೆ। ಆದರೆ ಈಗ ಆಗುತ್ತಿರುವುದು ಅದೇ।
ಬರೆಯುವವನಿಗೆ ಒಂದು ಮನಸ್ಥಿತಿ ಬೇಕು। ಅದು ಧ್ಯಾನಸ್ಥ ಸ್ಥಿತಿ। ಎಲ್ಲವನ್ನು ಮುಕ್ತ ಮನಸ್ಸಿನಿಂದ ನೋಡುವ ಸ್ಥಿತಿ। ಏನೇ ಇರಲಿ ನಾನು ಬರೆಯುತ್ತೇನೆ। ನಾನು ನನ್ನ ಜೊತೆ ಮಾತನಾಡುತ್ತೇನೆ। ನನ್ನ ಜೊತೆಗೆ ನಾನು ಆಡುವ ಮಾತುಗಳು ನಿಮಗೂ ಕೇಳುತ್ತವೆ.

ಪ್ರತಿ ಪಕ್ಷದ ನಾಯಕನ ಆಯ್ಕೆ ಯಾಕಿಲ್ಲ ? ರಾಜ್ಯ ಬಿಜೆಪಿ ಬಿಕ್ಕಟ್ಟಿನಿಂದ ಕಂಗಾಲಾಗಿದೆಯೆ ಹೈಕಮಾಂಡ್ ? ಪಕ್ಷವನ್ನು ಸೋಲಿಸಿದ ಕರ್ನಾಟಕದ ಮೇಲೆಯೇ ಕಡುಕೋಪ ?

ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಿ ಒಂದು ವಾರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೩ ಮತ್ತು ೨೪ ನೆಯ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಆಗಿದೆ. ಈ ಬಗ್ಗೆ ...